ಅರವತ್ತೊಂದು ಲಕ್ಷ ದಾಟಿದ ಆತ್ಮಕತೆ!
by Nataraj Huliyar
ಕಳೆದ ತೊಂಬತ್ತು ವರ್ಷಗಳಿಂದಲೂ ಈ ಆತ್ಮಕತೆ ಪ್ರಕಟವಾಗುತ್ತಲೇ ಇದೆ. ನವಜೀವನ್ ಟ್ರಸ್ಟ್ ಈಚೆಗೆ ಕೊಟ್ಟ ಅಧಿಕೃತ ಅಂಕಿ ಅಂಶ ಇದು: ೨೦೨೫ರ ಅಕ್ಟೋಬರ್ ತಿಂಗಳ ಹೊತ್ತಿಗೆ ಈ ಆತ್ಮಕತೆಯ ೬೧ ಲಕ್ಷ ಪ್ರತಿಗಳು ಭಾರತದ ೧೭ ಭಾಷೆಗಳಲ್ಲಿ ಪ್ರಕಟವಾಗಿ ಮಾರಾಟವಾಗಿದ್ದವು. ಇಂಗ್ಲಿಷ್ ೨೧.೯ ಲಕ್ಷ. ಮಲಯಾಳಂ ೯.೧ ಲಕ್ಷ. ತಮಿಳು ೭.೮ ಲಕ್ಷ. ಹಿಂದಿ ೭.೦೬ ಲಕ್ಷ. ಗುಜರಾತಿ ೭.೦೫ ಲಕ್ಷ.
ದಕ್ಷಿಣ ಭಾರತದಲ್ಲಿ ಹೆಚ್ಚು ಮಾರಾಟವಾಗಿರುವ ಈ ಆತ್ಮಕತೆಯ ಪ್ರಸಾರದ ನಾಗಾಲೋಟದಲ್ಲಿ ಮಲಯಾಳಂ ಮುಂಚೂಣಿಯಲ್ಲಿದೆ. ೧೯೯೯-೨೦೦೦ದ ವರ್ಷದಲ್ಲಿ ಹಾಗೂ ೨೦೦೦-೦೧ರಲ್ಲಿ ತಲಾ ೧ ಲಕ್ಷ ಮಲಯಾಳಂ ಪ್ರತಿಗಳು ಮಾರಾಟವಾದವು. ಇವತ್ತಿಗೂ ಜಗತ್ತಿನ ಬೆಸ್ಟ್ ಸೆಲ್ಲರ್ ಪಟ್ಟಿಯಲ್ಲಿ ಈ ಪುಸ್ತಕಕ್ಕೆ ಕಾಯಂ ಸ್ಥಾನವಿದೆ. ಈ ಪುಸ್ತಕದ ವಿದೇಶಿ ಮಾರಾಟದ ಪ್ರಸಾರದ ಲೆಕ್ಕ ಸಿಕ್ಕಿಲ್ಲ. ಬೇರೆ ಬೇರೆ ಪ್ರಕಾಶನ ಸಂಸ್ಥೆಗಳು ಪ್ರಕಟಿಸಿದ ಆವೃತ್ತಿಗಳ ಮಾರಾಟ ಹಾಗೂ ಈ ಆತ್ಮಕತೆಯ ಸಂಕ್ಷಿಪ್ತ ಆವೃತ್ತಿಯ ಮಾರಾಟದ ಅಂಕಿ ಅಂಶಗಳು ಕೂಡ ಇದರಲ್ಲಿ ಸೇರಿಲ್ಲ.
ಈ ಗುಜರಾತಿ ಪುಸ್ತಕದ ಹೆಸರು: ‘ಸತ್ಯಾ ನ ಪ್ರಯೋಗೊ ಅಥವಾ ಆತ್ಮಕಥಾ’. ಲೇಖಕರು: ಮೋಹನದಾಸ್ ಕರಮಚಂದ ಗಾಂಧಿ.
ಗಾಂಧೀಜಿಯ ಆತ್ಮಕತೆ ೧೯೨೫ನೆಯ ಇಸವಿಯ ನವೆಂಬರ್ ೨೫ರಿಂದ ‘ನವಜೀವನ್’ ಪತ್ರಿಕೆಯಲ್ಲಿ ಪ್ರತಿವಾರ ಪ್ರಕಟವಾಗತೊಡಗಿತು. ‘ಮೈ ಎಕ್ಸ್‌ಪರಿಮೆಂಟ್ ವಿತ್ ಟ್ರೂತ್ ಆರ್ ಸ್ಟೋರಿ ಆಫ್ ಮೈ ಲೈಫ್’ ಎಂಬ ಶೀರ್ಷಿಕೆಯಲ್ಲಿ ಮಹದೇವ ದೇಸಾಯಿ ಪ್ರತಿ ಕಂತನ್ನೂ ಇಂಗ್ಲಿಷಿಗೆ ಅನುವಾದಿಸತೊಡಗಿದರು. ಅದು ‘ಯಂಗ್ ಇಂಡಿಯಾ’ ಪತ್ರಿಕೆಯಲ್ಲಿ ಪ್ರತಿವಾರ ಪ್ರಕಟವಾಗತೊಡಗಿತು. ೧೯೨೫ರಿಂದ ೧೯೨೯ರವರೆಗೆ ಈ ಆತ್ಮಕತೆ ಪ್ರಕಟವಾಯಿತು. ‘ಸತ್ಯದೊಂದಿಗೆ ನನ್ನ ಪ್ರಯೋಗ ಅಥವಾ ನನ್ನ ಜೀವನ ಕತೆ’ಯ ಮೊದಲ ಭಾಗ ೧೯೨೭ರಲ್ಲಿ ಪುಸ್ತಕರೂಪದಲ್ಲಿ ಪ್ರಕಟವಾಯಿತು. ನಂತರ ಎರಡನೆಯ ಭಾಗ ಬಂತು.
‘ಆತ್ಮಕತೆ ಅಥವಾ ನನ್ನ ಸತ್ಯಾನ್ವೇಷಣೆ’ ಎಂದು ಕನ್ನಡದಲ್ಲೂ ಪ್ರಕಟವಾಗಿರುವ ಗಾಂಧೀ ಆತ್ಮಕತೆಯ ಪ್ರಸಾರವನ್ನು ಇನ್ನೆರಡು ಪುಸ್ತಕಗಳ ವ್ಯಾಪಕ ಪ್ರಸಾರಗಳ ಜೊತೆಗೆ ಕೆಲವರು ಹೋಲಿಸಿ ನೋಡಿದ್ದಾರೆ. ದುರುಳ ಸರ್ವಾಧಿಕಾರಿ ಹಿಟ್ಲರನ ‘ಮೈನ್ ಕೆಂಫ್’ (ನನ್ನ ಹೋರಾಟ) ೧೯೩೦-೪೫ರ ನಡುವೆ ಅವನ ನಾಝಿವಾದದ ಫ್ಯಾಸಿಸ್ಟ್ ಅಬ್ಬರದ ಕಾಲದಲ್ಲಿ ಮಿಲಿಯಗಟ್ಟಲೆ ಖರ್ಚಾಗಿತ್ತು. ಅದು ನಾಝಿ ಜನಾಂಗದ ಪರವಾದ ಹುಸಿ ಉನ್ಮಾದ ಹಾಗೂ ಪೂರ್ವಗ್ರಹದ ಫಲವಾಗಿತ್ತು. ಚೀನಾದ ಅಧ್ಯಕ್ಷರಾಗಿದ್ದ ಮಾವೋ ಭಾಷಣ, ಬರಹಗಳ ‘ರೆಡ್ ಬುಕ್’ನ ಕೋಟಿಗಟ್ಟಲೆ ಪುಸ್ತಕಗಳು ಮುದ್ರಣವಾಗಿವೆ. ಮಾವೋ ಪುಸ್ತಕದ ಕ್ರಾಂತಿಕಾರಿ ಮಹತ್ವ ಈ ಪ್ರಸಾರಕ್ಕೆ ಒಂದು ಕಾರಣವಾಗಿತ್ತು. ಚೀನಾ ಕ್ರಾಂತಿಯ ಸಂದರ್ಭದಲ್ಲಿ ಈ ಪುಸ್ತಕವನ್ನು ಕಡ್ಡಾಯವಾಗಿ ಹಂಚಲಾಗಿದ್ದು ಈ ಬೃಹತ್ ಪ್ರಸಾರಕ್ಕೆ ಮತ್ತೊಂದು ಕಾರಣ.
ಆದರೆ ಕಳೆದ ತೊಂಬತ್ತೈದು ವರ್ಷಗಳಲ್ಲಿ ಭಾರತದಲ್ಲಿ ಹಾಗೂ ಭಾರತದಾಚೆಗೆ ಎಲ್ಲ ವರ್ಗದ ಜನರೂ ಕೊಂಡು ಓದಿದ ‘ಸತ್ಯದೊಂದಿಗೆ ನನ್ನ ಪ್ರಯೋಗ’ ಪುಸ್ತಕದ ಅಗ್ಗಳಿಕೆ ಈ ಎರಡೂ ಪುಸ್ತಕಗಳಿಗಿಲ್ಲ. ಒಂದು ಪುಸ್ತಕ ಓದಿದ ನಂತರ ಉಂಟಾಗುವ ಸಾತ್ವಿಕ ಪ್ರಭಾವ ಎಷ್ಟು ಅದ್ಭುತವಾಗಿರುತ್ತದೆ; ನಮ್ಮೊಳಗೆ ಎಂಥ ಒಳಿತಿನ ಭಾವ ಹಬ್ಬುತ್ತದೆ; ಹಾಗೂ ಒಳಿತು ಒಳಿತನ್ನು ಉದ್ದೀಪಿಸಬಲ್ಲದು ಎಂಬುದಕ್ಕೆ ಗಾಂಧೀ ಆತ್ಮಚರಿತ್ರೆ ಸಾಕ್ಷಿಯಂತಿದೆ.
‘ಸತ್ಯದೊಂದಿಗೆ ನನ್ನ ಪ್ರಯೋಗ’ ಎನ್ನುವುದು ಎಲ್ಲ ಬರವಣಿಗೆಯ ಹಾಗೂ ಎಲ್ಲ ಬಗೆಯ ಅಭಿವ್ಯಕ್ತಿಯ ಸವಾಲನ್ನು ಹೇಳುತ್ತದೆ ಎಂದು ಸದಾ ನನಗನ್ನಿಸಿದೆ. ಆಧುನಿಕ ಗುಜರಾತಿ ಗದ್ಯವನ್ನು ರೂಪಿಸಿದ ಮಹತ್ವದ ಲೇಖಕರಾಗಿ ಕೂಡ ಗಾಂಧೀಜಿ ಗುಜರಾತಿ ಸಾಹಿತ್ಯ ಚರಿತ್ರೆಯಲ್ಲಿ ದಾಖಲಾಗಿದ್ದಾರೆ. ಲೇಖಕನೊಬ್ಬ ಅತ್ಯಂತ ಸರಳವಾಗಿ, ಸತ್ಯಕ್ಕೆ ಅತ್ಯಂತ ಹತ್ತಿರವಾಗಿ ತನ್ನ ಬದುಕಿನ ಕತೆ ಹೇಳುವ ಈ ರೀತಿ ಎಲ್ಲ ಕಾಲದಲ್ಲೂ ಬರವಣಿಗೆ ಕಲಿಯಲು ಬಯಸುವವರಿಗೆ ಮಾರ್ಗದರ್ಶಿಯಂತಿದೆ.
ತಮ್ಮ ಕಾವ್ಯ ಬದುಕಿನ ಒಂದು ಘಟ್ಟದಲ್ಲಿ ಸ್ಫೋಟಕ ಹಾಡು, ಕವಿತೆಗಳನ್ನು ಬರೆದ ಸಿದ್ಧಲಿಂಗಯ್ಯ ತಮ್ಮ ನಡುವಯಸ್ಸಿನಲ್ಲಿ ಬೆಂಗಳೂರಿನ ಬಾದಾಮಿ ಹೌಸ್ ಲೈಬ್ರರಿಯಲ್ಲಿ ಕೂತು, ‘ಹರಿಜನ್’ ಪತ್ರಿಕೆಗೆ ಗಾಂಧೀಜಿ ಬರೆದ ಬರಹಗಳನ್ನು ಓದಿದರು. ನಂತರ ಇಡೀ ಸಂಗ್ರಹವನ್ನು ಕೊಂಡು ತಮ್ಮ ಖಾಸಗಿ ಗ್ರಂಥಭಂಡಾರದಲ್ಲಿ ಇಟ್ಟುಕೊಂಡರು. ಸಿದ್ಧಲಿಂಗಯ್ಯ ತಮ್ಮ ಆತ್ಮಚರಿತ್ರೆ ‘ಊರು ಕೇರಿ’ಯ ಮೊದಲ ಭಾಗ ಬರೆದಾಗ, ಕೊನೇ ಪಕ್ಷ ಅದರ ಸರಳ, ನಿರುದ್ವಿಗ್ನ ನಿರೂಪಣೆಯ ಶೈಲಿಯನ್ನು ಗಾಂಧೀಜಿಯ ಆತ್ಮಕತೆಯ ನಿರೂಪಣಾ ಶೈಲಿಯಿಂದಲೂ ಕಲಿತಿರಬಹುದು ಎಂದು ಊಹಿಸುತ್ತೇನೆ. ಗಾಂಧೀ ಲೋಕಕ್ಕೆ ಅತ್ಯಂತ ಒಳಗಿನವರಾಗಿದ್ದ, ಸ್ವಾತಂತ್ರ‍್ಯ ಚಳುವಳಿಯಲ್ಲಿ ಸೆರೆಮನೆವಾಸ ಅನುಭವಿಸಿದ್ದ, ಗೊರೂರು ರಾಮಸ್ವಾಮಿ ಅಯ್ಯಂಗಾರ್ ಈ ಗಾಂಧೀ ಆತ್ಮಕತೆಯನ್ನು ಕನ್ನಡ ಓದುಗಬಳಗಕ್ಕೆ ಆತ್ಮೀಯವಾಗುವಂತೆ ಅನುವಾದಿಸಿದ್ದಾರೆ. ಇದು ಅನುವಾದದ ಒಂದು ಮುಖ್ಯ ಮಾದರಿಯಾಗಿ ಕೂಡ ನಮ್ಮೆದುರಿಗಿದೆ.
ಗಾಂಧೀಜಿಯವರ ಆತ್ಮಕತೆಯ ಬರವಣಿಗೆ ೧೯೨೦ನೆಯ ಇಸವಿಯವರೆಗಿನ ಅವರ ಅನುಭವಗಳವರೆಗೆ ಬಂದು ನಿಂತಿತು. ಅದಕ್ಕೆ ಕಾರಣವನ್ನು ಲೇಖಕರೇ ಕೊಡುತ್ತಾರೆ: ‘ಇನ್ನು ಈ ಅಧ್ಯಾಯಗಳನ್ನು ಮುಗಿಸುವ ಕಾಲ ಬಂದಿದೆ. ಇಲ್ಲಿಂದ ಮುಂದೆ ನನ್ನ ಜೀವನ ಎಷ್ಟು ಬಹಿರಂಗವಾಗಿದೆಯೆಂದರೆ, ಸಾರ್ವಜನಿಕರಿಗೆ ತಿಳಿಯದಿರುವ ಸಂಗತಿ ಏನೇನೂ ಇಲ್ಲ...’
ಇದೇ ಅಧ್ಯಾಯದಲ್ಲಿ ಅವರು ಬರೆಯುವ ಮಾತುಗಳು:
‘ಈವರೆಗಿನ ನನ್ನ ಪ್ರಯೋಗಗಳಿಂದ ದೊರೆತ ನಿರ್ಣಯಗಳನ್ನು ನಾವು ಅಂತಿಮ ತೀರ್ಮಾನಗಳೆಂದು ಪರಿಗಣಿಸಲು ಆಗುವುದಿಲ್ಲ. ಆದುದರಿಂದ ಈ ಕಥೆಯನ್ನು ಇಲ್ಲಿಗೆ ಮುಗಿಸುವುದು ನನ್ನ ಸರಳ ಕರ್ತವ್ಯ. ವಾಸ್ತವವಾಗಿ ನನ್ನ ಲೇಖನಿ ಮುಂದುವರಿಯಲು ಸ್ವಾಭಾವಿಕವಾಗಿಯೇ ಹಿಂಜರಿಯುತ್ತದೆ. ವಾಚಕರಿಂದ ಬೀಳ್ಕೊಳ್ಳುವುದು ನನ್ನ ಮನಸ್ಸಿಗೆ ನೋವಾಗದೇ ಇಲ್ಲ. ನನ್ನ ಪ್ರಯೋಗಗಳಿಗೆ ನಾನು ಹೆಚ್ಚು ಬೆಲೆಯನ್ನು ಕಟ್ಟುತ್ತೇನೆ. ಅವುಗಳನ್ನು ಸತ್ಯಬದ್ಧವಾಗಿ ವರ್ಣಿಸುವಲ್ಲಿ ಯಶಸ್ವಿಯಾಗಿದ್ದೇನೋ ಇಲ್ಲವೋ ನನಗೆ ತಿಳಿಯದು. ಪ್ರಾಮಾಣಿಕವಾದ ನಿರೂಪಣೆಯನ್ನು ಮಾಡಲು ನಾನು ಸರ್ವ ಪ್ರಯತ್ನಗಳನ್ನೂ ಮಾಡಿದ್ದೇನೆಂದು ಮಾತ್ರ ಹೇಳಬಲ್ಲೆ. ಸತ್ಯವು ನನಗೆ ಹೇಗೆ ತೋರಿತೋ ಹಾಗೆ ವಿವರಿಸುವುದು ಹಾಗೂ ನಾನು ಆ ಸತ್ಯವನ್ನು ಕಂಡುಕೊಂಡ ಮಾರ್ಗವನ್ನು ವಿವರಿಸುವುದು ನನ್ನ ನಿರಂತರ ಪ್ರಯತ್ನವಾಗಿದೆ. ಇವನ್ನೆಲ್ಲ ಓದುಗರಿಗೆ ವಿವರಿಸಿ ಹೇಳುವಾಗ ನನಗೆ ವರ್ಣನಾತೀತವಾದ ಮಾನಸಿಕ ಶಾಂತಿ ಸಿಕ್ಕಿದೆ; ಯಾಕೆಂದರೆ ಇದು ಓದುಗರಲ್ಲಿ ಸತ್ಯ, ಅಹಿಂಸೆಗಳಲ್ಲಿ ನಂಬಿಕೆ ಹುಟ್ಟಿಸಬಹುದೆಂಬುದು ನನ್ನ ನೆಚ್ಚಿನ ಆಸೆಯಾಗಿದೆ.’
‘ಸತ್ಯನಿಷ್ಠ ನಿರೂಪಣೆ ಮಾಡುವ ಹಾದಿಯಲ್ಲಿ ಎದುರಾಗುವ ಯಾವ ಕಷ್ಟ ಕೋಟಲೆಗಳನ್ನೂ ನಾನು ಎದುರಿಸದೆ ಬಿಟ್ಟಿಲ್ಲ' ಎಂಬ ಗಾಂಧೀಜಿಯ ಮಾತು ನಿಜವಾದ ಬರವಣಿಗೆಯ ಸವಾಲನ್ನು ಎಲ್ಲ ಲೇಖಕ ಲೇಖಕಿಯರಿಗೂ ನೆನಪಿಸುತ್ತದೆ. ‘ಆತ್ಮಕಥಾ’ ಕುರಿತು ಮುಂದೊಮ್ಮೆ ಗಾಂಧೀಜಿ ಬರೆದ ಮಾತು: ‘ನಾನೆಂದೂ ಆತ್ಮಚರಿತ್ರೆ ಬರೆಯಲಿಲ್ಲ. ಸತ್ಯದೊಂದಿಗೆ ನನ್ನ ಪ್ರಯೋಗ ಕುರಿತ ಲೇಖನಗಳ ಸರಣಿ ಬರೆದೆ; ಅವು ನಂತರ ಪುಸ್ತಕ ರೂಪದಲ್ಲಿ ಪ್ರಕಟವಾದವು. ಇದಾಗಿ ಇಪ್ಪತ್ತಕ್ಕಿಂತ ಹೆಚ್ಚು ವರ್ಷಗಳಾದವು. ಅದಾದ ನಂತರ ನಾನು ಏನು ಮಾಡಿದೆ, ಏನು ಯೋಚಿಸಿದೆ... ಇವೆಲ್ಲವನ್ನೂ ಕಾಲಾನುಕ್ರಮದಲ್ಲಿ ಬರೆದಿಲ್ಲ. ಹಾಗೆ ಬರೆಯುವ ಆಸೆಯೇನೋ ಇದೆ. ಆದರೆ ನನಗೆ ಬಿಡುವೆಲ್ಲಿದೆ?'
ಆತ್ಮಕತೆಯ ಮುಂದಿನ ಭಾಗವನ್ನು ಬರೆಯಬೇಕೆಂದು ಜನ ಕೇಳುತ್ತಲೇ ಇದ್ದರು. ಆಗ ಗಾಂಧೀಜಿ ಬರೆದರು: ‘ಆತ್ಮಕತೆಯನ್ನು ಎಲ್ಲಿಗೆ ನಿಲ್ಲಿಸಿದ್ದೇನೋ ಅಲ್ಲಿಂದ ಮತ್ತೆ ಮುಂದುವರಿಸಬೇಕೆಂದು, ಅಹಿಂಸಾ ತತ್ವವನ್ನು ವಿವರಿಸುವ ಒಂದು ಗ್ರಂಥದ ರಚನೆಗೂ ನಾನು ಶೀಘ್ರದಲ್ಲೇ ಕೈಹಾಕಬೇಕೆಂದು ನನ್ನ ಸ್ನೇಹಿತರೊಬ್ಬರು ಬೇಡಿಕೆಯಿಟ್ಟಿದ್ದಾರೆ. ನಿಜ ಹೇಳಬೇಕೆಂದರೆ ನನ್ನ ಆತ್ಮಕತೆಯನ್ನು ಬರೆಯಬೇಕೆಂದು ತೀರ್ಮಾನಿಸಿ ನಾನು ಬರೆದದ್ದಲ್ಲ. ಬದುಕಿನ ಯಥಾರ್ಥ ಅನುಭವಗಳನ್ನು ಒಂದು ಅಂದಾಜಿನಲ್ಲಿ ನಾನು ದಾಖಲಿಸುತ್ತಾ ಹೋದೆನಷ್ಟೆ. ಪತ್ರಿಕೆಯಲ್ಲಿ ಪ್ರಕಟವಾದ ಈ ಬರಹ ಸರಣಿ, ನಂತರ ಪುಸ್ತಕವಾಗಿ ಪ್ರಕಟವಾಯಿತು. ಆಗಿನಿಂದ ಇಲ್ಲಿಗೆ ಇಪ್ಪತ್ತು ವರ್ಷ ಸಂದಿವೆ. ನಾನು ಚಿಂತಿಸಿದ, ಕ್ರಿಯೆಯಲ್ಲಿ ತೊಡಗಿದ ವಿವರಗಳು ಈ ಅವಧಿಯಲ್ಲಿ ಅಷ್ಟು ವ್ಯವಸ್ಥಿತವಾಗಿ ಬರಹ ರೂಪಕ್ಕಿಳಿದಿಲ್ಲ. ಅವನ್ನು ಕ್ರಮಬದ್ಧವಾಗಿ ದಾಖಲಿಸುವುದು ನನಗೂ ಸಹ ಇಷ್ಟವೇ. ಆದರೆ ಅಷ್ಟು ಪುರಸತ್ತಾದರೂ ಎಲ್ಲಿದೆ? ಆತ್ಮಕತೆಯನ್ನು ಮತ್ತೆ ಮುಂದುವರಿಸಲು ಸಮಯಾವಕಾಶವಂತೂ ಸದ್ಯಕ್ಕೆ ನನ್ನ ಬಳಿ ಇಲ್ಲ. ದೈವಸಂಕಲ್ಪ ಹೇಗಿದೆಯೋ ನೋಡಬೇಕು. ಆದರೆ ಅಹಿಂಸಾ ತತ್ವದ ಕುರಿತು ಗ್ರಂಥವನ್ನು ಬರೆಯುವಷ್ಟು ಖಂಡಿತ ನಾನು ಶಕ್ತನಲ್ಲ. ಪಾಂಡಿತ್ಯಪೂರ್ಣ ಬರವಣಿಗೆ ನನ್ನ ಕೈಲಾಗದು.’ (ಅನುವಾದ: ಶ್ರೀನಿವಾಸರಾಜು ದೊಡ್ಢೇರಿ)
೧೯೨೦ರ ನಂತರದ ಗಾಂಧೀ ಕತೆಯನ್ನು ರಾಜಮೋಹನ ಗಾಂಧಿಯವರ ‘ಮೋಹನದಾಸ್: ಎ ಟ್ರೂ ಸ್ಟೋರಿ’ ಅಥವಾ ಡಿ.ಎಸ್. ನಾಗಭೂಷಣರ ‘ಗಾಂಧೀ ಕಥನ’ ಮುಂತಾದ ಪುಸ್ತಕಗಳಲ್ಲಿ ಹಲವೆಡೆ ಓದಿಕೊಳ್ಳಬಹುದು. ಆದರೆ ‘ಗಾಂಧೀಜಿ ತಮ್ಮ ಆತ್ಮಕತೆಯ ಮೊದಲ ಅಧ್ಯಾಯದಿಂದ ಕೊನೆಯ ಅಧ್ಯಾಯದವರೆಗೂ ಬರೆದ ಸರಳ, ನೇರ ರೀತಿಯಲ್ಲಿ ನಂತರದ ಕತೆಯನ್ನೂ ಬರೆದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು!’ ಎಂಬ ನಿರೀಕ್ಷೆ ಮಾತ್ರ ಹಾಗೇ ಉಳಿದುಬಿಟ್ಟಿದೆ. ೫೦೦ ಪುಟಗಳ ಈ ಪುಸ್ತಕ ಈಗ ಎಲ್ಲೆಡೆ ದೊರೆಯುತ್ತದೆ. ‘ಗಾಂಧಿ ಭವನ, ಕುಮಾರ ಪಾಕ್ ಪೂರ್ವ, ಶೇಷಾದ್ರಿಪುರಂ, ಬೆಂಗಳೂರು ೫೬೦೦೧’ ಇಲ್ಲಿ ನೂರು ರೂಪಾಯಿ ಮುಖ ಬೆಲೆಯ ಇಂಗ್ಲಿಷ್ ಹಾಗೂ ಕನ್ನಡಾನುವಾದದ ಪ್ರತಿಗಳು ಐವತ್ತು ರೂಪಾಯಿಗೆ ದೊರೆಯುತ್ತವೆ. ಸಂಕ್ಷಿಪ್ತ ವಿದ್ಯಾರ್ಥಿ ಆವೃತ್ತಿ ಮೂವತ್ತು ರೂಪಾಯಿಗೆ ದೊರೆಯುತ್ತದೆ.
ಜಗತ್ತಿನ ಈ ಅಪೂರ್ವ ಆತ್ಮಕತೆಯನ್ನು ತಂದೆ ತಾಯಿಗಳು, ಮೇಷ್ಟ್ರು, ಮೇಡಂಗಳು ತಾವೂ ಓದಿ, ಮಕ್ಕಳಿಗೂ ಓದಿಸಿದರೆ ಅವರ ಮನೆ ಮನಗಳೆರಡೂ ಅಪಾರ ಶಾಂತಿ, ಸಮಾಧಾನ ಪಡೆಯಬಲ್ಲವು ಎಂದು ಗ್ಯಾರಂಟಿ ಕೊಡುವೆ. ತಮ್ಮ ಅನುಭವಗಳನ್ನು ಬರೆಯಲು ಬಯಸುವವರಿಗಂತೂ ಇದು ಅತ್ಯಂತ ಉಪಯುಕ್ತ ಮಾದರಿ.
ಕೊನೆ ಟಿಪ್ಪಣಿ:
ಈ ಅಂಕಣ ಬರೆಯುವ ದಿನ ಬೆಳ್ಳಂಬೆಳಗಿಗೇ ಮೊಗಳ್ಳಿ ಗಣೇಶ್ ಕುರಿತ ‘ಮಯೂರ’ದ ಲೇಖನ ಓದಿ ಹಿರಿಯ ಲೇಖಕ ಶೂದ್ರ ಶ್ರೀನಿವಾಸ್,‘ಮೂವಿಂಗ್ ಆಗಿದೆ’ ಅಂದರು. ಮೊನ್ನೆ ಗೆಳೆಯ ಚಂದ್ರಶೇಖರ ಐಜೂರ್ ಕೂಡ ಈ ಬರಹ ಓದಿ ಎಮೋಶನಲ್ ಆಗಿದ್ದರು.
ಈ ಬರಹ ಹಾಗೂ ಮೊಗಳ್ಳಿ ಗಣೇಶರ ಕೊನೆಯ ಕತೆ ‘ಹೊಸಿಲು ದಾಟಿದವರು’ ಎರಡೂ ಡಿಸೆಂಬರ್ ತಿಂಗಳ ‘ಮಯೂರ’ ಮಾಸಪತ್ರಿಕೆಯಲ್ಲಿವೆ. ನೀವೂ ಇವನ್ನು ಓದಿದರೆ ಚೆನ್ನಾಗಿರುತ್ತದೆ. ತಕ್ಷಣ ಓದಿ ಸ್ಪಂದಿಸಿದ ಈ ಗೆಳೆಯರಿಗೂ, ಇವೆರಡನ್ನೂ ಪ್ರಕಟಿಸಿದ 'ಮಯೂರ'ದ ಸಂಪಾದಕರಾದ ಚ.ಹ. ರಘುನಾಥ್ ಅವರಿಗೂ ಲೇಖಕ ಋಣಿ.
Comments
11 Comments
| ಮಂಜುನಾಥ್ ಸಿ ನೆಟ್ಕಲ್
ಗಾಂಧೀಜಿ ಅವರ ಆತ್ಮ ಚರಿತ್ರೆ ಅರವತ್ತೊಂದು ಲಕ್ಷ ಪ್ರತಿಗಳು ಮಾರಾಟವಾಗಿವೆ ಎಂಬ ವಿಚಾರ ನನಗೆ ಅಚ್ಚರಿ ಮೂಡಿಸಿದ್ದು ಅಷ್ಟೊಂದು ಪ್ರತಿಗಳು ಮಾರಾಟವಾಗಿವೆ ಎಂಬ ವಿಚಾರಕ್ಕಲ್ಲ.... ಇನ್ನೂ ಇಷ್ಟೇ ಸಂಖ್ಯೆಯಲ್ಲಿ ಮಾತ್ರವೇ ಎಂಬ ವಿಷಾದ ಭಾವಕ್ಕೆ... ಭಾರತದ ಅಕ್ಷರಸ್ಥರು ಜನಸಂಖ್ಯೆಗೆ ಹೋಲಿಸಿದರೆ ಇದು ಬಹಳ ಕಡಿಮೆ ಅನಿಸಿ ಪಿಚ್ಚೆನಿಸಿತು. ಬಹುಶಃ ಕೋಟಿಗಳ ಲೆಕ್ಕದಲ್ಲಿ ನಾನು ನಿರೀಕ್ಷಿಸಿದ್ದು ಅತಿಯಾಯಿತು ಅನಿಸುತ್ತದೆ.... ನಮ್ಮ ದೇಶದ ಬಹುತೇಕ ತರುಣ್ ಓದುಗರು ಇನ್ನೂ ಓದದೆ ಇರುವುದರಿಂದಲೇ ದೇಶಾದ್ಯಂತ ಅಸತ್ಯ, ಕ್ರೌರ್ಯ ,ಹಿಂಸೆ , ಮತೀಯ ಭಾವನೆಗಳು, ಜಾತಿ ತಾರತಮ್ಯ, ವರ್ಗ ಮತ್ತು ವರ್ಣಭೇದ , ಅಸಮಾನತೆ, ಇವೆಲ್ಲಾ ವಿಜ್ರಂಬಿಸುತ್ತಿವೆ ಅನಿಸಲು ತೊಡಗಿದೆ ಸರ್ ನಮ್ಮ ವಿದ್ಯಾರ್ಥಿಗಳಿಗೆ ಮತ್ತು ತರುಣ ಜನಾಂಗಕ್ಕೆ ಗಾಂಧೀಜಿಯವರ ಆತ್ಮಕಥೆಯ ಪ್ರತಿಗಳು ಹೆಚ್ಚು ಹೆಚ್ಚಾಗಿ ಸಿಗುವಂತಾಗಲಿ.... ಧನ್ಯವಾದಗಳು
| ವಿಜಯಾನಂದ
ಇದು ಉತ್ತಮವಾದ ಲೇಖನ ಸಾರ್. ತಾವು ಹೇಳುವಂತೆ "ಆಧುನಿಕ ಗುಜರಾತಿ ಗದ್ಯವನ್ನು ರೂಪಿಸಿದ ಮಹತ್ವದ ಲೇಖಕರಾಗಿ ಕೂಡ ಗಾಂಧೀಜಿ ಗುಜರಾತಿ ಸಾಹಿತ್ಯ ಚರಿತ್ರೆಯಲ್ಲಿ ದಾಖಲಾಗಿದ್ದಾರೆ" ಎಂಬ ಮಾತು ನಿಜ. ಹಾಗೂ ಗಾಂಧೀಜಿಯವರೆಗೆ ತಮ್ಮ ಗುಜರಾತಿ ಮಾತ್ರುಭಾಷೆ ಬಗ್ಗೆಯ ಗೌರವ ಮತ್ತು ಪ್ರೀತಿಯನ್ನು ಸೂಚಿಸುತ್ತದೆ. ವಂದನೆಗಳು ವಿಜಯಾನಂದ
| ದೊಡ್ಡಿಶೇಖರ್
ಸರ್, ನೀವು ಮಯೂರದಲ್ಲಿ ಮೊಗಳ್ಳಿಯ ಬಗ್ಗೆ ಬರೆದಿರುವ ಬರಹ ತುಂಬಾ ಇಂಪ್ರೆಶಾಗಿದೆ. ಮೊಗಳ್ಳಿಯ ಗೆಳೆತನದ ಮೇಲಿನ ಪ್ರೀತಿ ಹಾಗೂ ಸಾಹಿತ್ಯ ವಿಮರ್ಶಕನ ಎಚ್ಚರ ಬೆಸೆದುಕೊಂಡು ಹುಟ್ಟಿದಂತಹ ಬರಹವಿದು. ಪ್ರೀತಿಯಿಲ್ಲದೆ, ಬರೆಯು ಸಾಧ್ಯವಿರಲಿಲ್ಲ. ಬರಿ ಪ್ರೀತಿಯಿಂದ ಬರೆದಿದ್ದರೆ, ಆ ಬರಹಕ್ಕೆ ಶಕ್ತಿಯಿರುತ್ತಿರಲಿಲ್ಲ. ಪ್ರೀತಿ ಮತ್ತು ವಿಮರ್ಶೆ ಎರಡು ಒಂದೇ ಬರಹದಲ್ಲಿ ಸಂವಾದವಾಗಿದೆ. ಅದಕ್ಕೆ ಈ ಬರಹ ತನ್ನ ಘನತೆಯನ್ನು ಸಾಧಿಸಿದೆ. ಓರಗೆಯ ಗೆಳೆತನದ ಒಡನಾಟ-ಓದಿನ ದೀರ್ಘ ಮಥನವು ಹಿನ್ನೆಲೆಯಲ್ಲಿ ಇದೆಯೆಂಬುದನ್ನು ಮರೆಯುವಂತಹದ್ದಲ್ಲ. ಮೊಗಳ್ಳಿ ಕುರಿತ ಈ ಬರಹದಲ್ಲಿ ಬರಹಗಾರರಿಗೆ ಪಾಠವಿದೆ. ನಿಮ್ಮ ಬರಹ ಖುಷಿ ಕೊಟ್ಟಿದೆ ಸರ್. ಥ್ಯಾಂಕ್ಯು.
| K j suresh
ಓದಿ ಆಗಿದೆ ಸರ್.ಚೆನ್ನಾಗಿದೆ
| kavita
Lovely! I want to read it again
| NM I
Exceptionally good. ಟೀಕೆ ಟಿಪ್ಪಣಿ ನೆನಪಿಸುವ ಬರಹ
| Dr.Prabhakar
Thrilled to learn Gorur Ramswamy Iyengar has translated this into Kannada. Just eager to buy one!
| ಡಾ. ನಿರಂಜನ ಮೂರ್ತಿ ಬಿ ಎಂ
ಓದಿನ ನಂತರ ಉಂಟಾಗುವ ಸಾತ್ವಿಕ ಪ್ರಭಾವದ ಆಧಾರದ ಮೇಲೆ ಹಿಟ್ಲರನ 'ಮೈನ್ ಕೆಂಫ್' ಮತ್ತು ಮಾವೋನ 'ರೆಡ್ ಬುಕ್'ಗಳಿಗಿಂತ ಗಾಂಧೀಜಿಯವರ ಆತ್ಮಕತೆ ಪುಸ್ತಕ ಹೆಚ್ಚಿನ ಅಗ್ಗಳಿಕೆ ಹೊಂದಿರುವುದು ಸತ್ಯವಾದರೂ, ಸದ್ಯ ನೂರಾ ನಲವತ್ತಾರು ಕೋಟಿ ಜನಸಂಖ್ಯೆಯಿರುವ ನಮ್ಮೀ ದೇಶದ ಪಿತಾಮಹರಾದ ಮಹಾತ್ಮನ ಜೀವನ ಕಥಾ ಪುಸ್ತಕದ ಬರೀ ಅರವತ್ತು ಲಕ್ಷ ಪ್ರತಿಗಳು ಮಾರಾಟವಾಗಿರುವುದು, (ಅದೂ ೧೯೨೫ ರಲ್ಲಿ ಕಂತಿನ ರೂಪದಲ್ಲಿ ಪ್ರಾರಂಭವಾಗಿ ೧೯೨೭ರಲ್ಲಿ ಪುಸ್ತಕ ರೂಪದಲ್ಲಿ ಪ್ರಕಟವಾಗಿದ್ದರೂ) ಬೇಸರವೆನಿಸುತ್ತಿದೆ. ಕನಿಷ್ಠ ಅರವತ್ತು ಕೋಟಿ ಪ್ರತಿಗಳಾದರೂ ಮಾರಾಟವಾಗಿರಬೇಕಿತ್ತು. ಇನ್ನೆರಡು ವರ್ಷಗಳಲ್ಲಿ ನೂರು ವರ್ಷ ಪೂರೈಸಲಿದೆ ಈ ಪುಸ್ತಕ. ಗಾಂಧೀಜಿ ಇಡೀ ಜಗದಲ್ಲಿಯೇ ಅತ್ಯಂತ ಅಪರೂಪದ ಮಾನವ. ದೇವಮಾನವನೆಂದರೂ ಸರಿಯೆ. ಅವರ ಆತ್ಮಕತೆಯನ್ನು ಓದುವುದು ಪ್ರತಿಯೊಬ್ಬ ಸಾಕ್ಷರ ಭಾರತೀಯನ ಆದ್ಯ ಕರ್ತವ್ಯವೆಂಬುದು ನನ್ನ ಅನಿಸಿಕೆ. ನಮ್ಮ ದೇಶದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಪದವಿ ಹಂತದಲ್ಲಿ ಈ ಪುಸ್ತಕವನ್ನು ಪಠ್ಯಪುಸ್ತಕವನ್ನಾಗಿಸುವುದು ಸಮಂಜಸವಲ್ಲವೆ? ಆಗಲಾದರೂ ನಾವು ಸಾತ್ವಿಕ ಮನೋಭಾವ ಮತ್ತು ಸನ್ನಡತೆಯ ಮನುಷ್ಯನಿಗೆ ಪ್ರತೀ ಭಾರತೀಯನನ್ನು ಉದಾಹರಣೆಯಾಗಿಸಬಹುದು. ನನ್ನ ಹತ್ತಿರ ಈ ಪುಸ್ತಕದ ಕನ್ನಡ ಮತ್ತು ಇಂಗ್ಲಿಷ್ ಪ್ರತಿಗಳಿದ್ದರೂ, ಕನ್ನಡದ ಪುಸ್ತಕವನ್ನು, ಅಲ್ಲಲ್ಲಿ ಕಣ್ಣಾಡಿಸಿರುವುದನ್ನು ಬಿಟ್ಟರೆ, ಪೂರ್ಣವಾಗಿ ಓದಿಲ್ಲ. ಮೊದಲು ಓದಲು ಪ್ರಾರಂಭಿಸುತ್ತೇನೆ. ಈ ವಾರದ ಹುಳಿಯಾರರ ಈ ಬ್ಲಾಗಾಂಕಣದ ಓದು ತುಂಬಾ ವಿಶೇಷವಾಗಿದೆ, ಸಂತೋಷದಾಯಕವಾಗಿದೆ. ನಮನಗಳು.
| ಗುರು ಜಗಳೂರು
ಸರ್ ಗೊರೂರರು ಕನ್ನಡದಲ್ಲಿ ರೂಪಾಂತರಿಸಿರುವ ಗಾಂಧಿ ಆತ್ಮಕಥೆ ನನ್ನ ಮೇಲೆ ಅತೀ ಪರಿಣಾಮ ಬೀರಿದ ಶ್ರೇಷ್ಠ ಕೃತಿ.ಒಬ್ಬ ಮನುಷ್ಯ ಹೀಗೂ ಜೀವಿಸಬಹುದೇ ಎಂದು ಆಶ್ಚರ್ಯವಾಗುತ್ತದೆ. 10ವರ್ಷಗಳ ಕೆಳಗೆ ಸಾಬರಮತಿ ಬಗೆಗಿನ ಲೇಖನ ನನ್ನನ್ನು ಅಲ್ಲಿಗೆ ಸೆಳೆಯಿತು.ಅಲ್ಲಿನ ಭೇಟಿ ಒಂದು ರೋಮಾಂಚನ.ವಾರ್ಧಗೆ ತೆರಳುವ ಮುಂಚೆನವರೆಗೂ ಗಾಂಧಿ ಅಲ್ಲಿರುತ್ತಾರೆ.ಐತಿಹಾಸಿಕ ದಂಡಿಗೆ ಅಲ್ಲಿಂದಲೇ ತೆರಳಿದ್ದು.ಸಾಬರಮತಿ ಅಹಮದಾಬಾದ್ ನಿಂದ ದೂರ ಎಂದು ತಿಳಿದು ಆಟೋ ಬದಲಿಗೆ ಬಸ್ ಹಿಡಿಯಲು ಹೊರಟೆ.ಅಲ್ಲಿನ ಸ್ಕೂಲ್ ಹುಡುಗರನ್ನು ವಿಚಾರಿಸಲಾಗಿ ಅವರಿಗೆ ಸಾಬರಿಮತಿಯ ಮಾಹಿತಿಯೇ ಇರಲಿಲ್ಲ.ಇದು ಈಗಿನ ಪೀಳಿಗೆಯ ಮನಸ್ಥಿಯ ಸೂಚನೆ ಇರಬಹುದು. ಸಾಬರಮತಿಯಲ್ಲಿ ಗಾಂಧಿಯವರ ಕನ್ನಡದ ಸಹಿ ಇದೆ.ಶಾಸ್ತ್ರಿಯವರ ಹೆಂಡತಿಗೆ(ಅವರ ಇಚ್ಚೆಯಂತೆ) ಕೊಡಬೇಕಾದ ಸಾಲದ ಬದಲಾಗಿ ಎಲ್ಲ ಭಾಷೆಯಲ್ಲಿ ಸಹಿ ಮಾಡಿದ್ದಾರೆ.ಮಹಾತ್ಮನ ಚುಂಬಕ ಶಕ್ತಿಯಿಂದ ಸ್ವಾತಂತ್ರ್ಯ ಗಳಿಸಿಕೊಂಡ ನಾವುಗಳು ಎಲ್ಲ ಮನೆಯ ಮಕ್ಕಳು ಬೆಳೆಸಿದ ತಮ್ಮ ತಂದೆಯನ್ನು ನೀನು ನಮಗೆ ಏನು ಮಾಡಿದ್ದೀಯ ಎಂದು ಕೇಳಿದಂತೆ ಗಾಂಧಿಯನ್ನು ಈಗ ಕೇಳುತ್ತಿದ್ದೇವೆ.
| ಆನಂದ್
ತುಂಬಾ ಚೆನ್ನಾಗಿದೆ
| ಕೆ. ಪಿ. ನಾರಾಯಣಪ್ಪ
ಮಹಾತ್ಮರನ್ನು ದೇಶದ ವಿಭಜಕ ಎಂದು ನಿಂದಿಸುತ್ತಾ ಗೋಡ್ಸೆಯನ್ನು ಆರಾಧಿಸುತ್ತಿರುವ ಇಂದಿನ ದಿನಗಳಲ್ಲಿ ಬಾಪುರ ಆತ್ಮಕಥೆ ಅರವತ್ತೊಂದು ಲಕ್ಷ ಪ್ರತಿಗಳು ಮಾರಾಟವಾಗಿರುವುದು ನನಗೆ ತೃಪ್ತಿ ತಂದಿದೆ. ಹಲವು ಮಂದಿ ಗಾಂಧಿಯನ್ನು ಓದಿಕೊಳ್ಳದೆ, ನಿಂದಿಸುತ್ತಾರೆ. ನನ್ನ ಗೆಳೆಯ ಕಾಲೇಜು ಪ್ರಾಧ್ಯಾಪಕ ಅವರು ನನ್ನೊಂದಿಗೆ ಮಾತನಾಡುತ್ತ 'ನನಗೆ ಗಾಂಧಿ ಬಗ್ಗೆ ಗೌರವವಿಲ್ಲ' ಎಂದರು. ಯಾಕೆ 'ಎಂದರೆ' 'ದೇಶ ವಿಭಜನೆಯ ಬಗ್ಗೆ ಮಹಾ ದೇಶ ಭಕ್ತನಂತೆ ಯಾರೋ ಹೇಳಿದ ಮಾತಿನ ಗಿಳಿಪಾಠ ಒಪ್ಪಿಸಿದರು. ಇದು ದುರಂತ. ಅಡಿಗರ ಮಾತು: ಪಡವಣ ಗಾಳಿ ಬೀಸಿದರೆ ತೂಗುವುದು ಅಟ್ಟೆ..... ಹೀಗೆ ನಮ್ಮ ವಿದ್ಯಾವಂತರು.
Add Comment