ಕಾವ್ಯ: ತಲೆಮಾರುಗಳ ಕಳವಳ, ಕಾವಳ, ಕನಸು…

ಯಾವುದೇ ಕಾಲದಲ್ಲಾಗಲೀ, ಎಂಥದೇ ನೆಲದಲ್ಲಾಗಲೀ ಬಿತ್ತಿದ್ದು ಬೆಳೆಯುತ್ತದೆ ಎಂಬ ನಂಬಿಕೆ ಕಳೆದುಕೊಂಡರೆ ನಮ್ಮ ಚಿಂತನೆ, ಬರವಣಿಗೆ ಎಲ್ಲವೂ ವ್ಯರ್ಥ! ಈ ನಂಬಿಕೆ ಬುದ್ಧ, ಮಾರ್ಕ್ಸ್, ಸಿಮೊನ್ ದ ಬುವಾ, ಗಾಂಧಿ, ಲೋಹಿಯಾ, ಅಂಬೇಡ್ಕರ್, ಬಿ.ಕೃಷ್ಣಪ್ಪ, ಎಂ.ಡಿ.ನಂಜುಂಡಸ್ವಾಮಿ, ಕುವೆಂಪು, ಲಂಕೇಶ್ ಥರದವರ ಬರಹ, ಕ್ರಿಯೆಗಳು ನೆನಪಾದಾಗಲೆಲ್ಲ ಗಟ್ಟಿಯಾಗುತ್ತಿರುತ್ತದೆ. ಕಳೆದ ವಾರ ಈ ಅಂಕಣದಲ್ಲಿ ಪ್ರಕಟವಾದ ‘ಕಾವ್ಯ: ಓದುಗರ ಸಾವೋ? ಪ್ರಕಾರದ ಸಾವೋ?’ ಎಂಬ ಆತಂಕಕ್ಕೆ ಸ್ಪಂದಿಸಿದ ವಿಭಿನ್ನ ತಲೆಮಾರುಗಳ ಸಾಂಸ್ಕೃತಿಕ ಕಾಳಜಿ, ಉದ್ಗಾರಗಳು ಈ ನಂಬಿಕೆಗೆ ಇನ್ನಷ್ಟು ಇಂಬು ಕೊಡುವಂತಿವೆ. 

‘ಕಾವ್ಯ: ಓದುಗರ ಸಾವೋ? ಪ್ರಕಾರದ ಸಾವೋ?’ ಬರಹ ಗಮನಿಸದಿದ್ದವರು, ಇವತ್ತಿನ ಬರಹದಲ್ಲಿ ಕೊಟ್ಟಿರುವ ಸ್ಪಂದನಗಳನ್ನು ಓದುವ ಮೊದಲು, ಈ ಲಿಂಕಿನಲ್ಲಿರುವ LINK HERE ಬರಹದ ಮೇಲೆ ಒಮ್ಮೆ ಕಣ್ಣಾಡಿಸಿ ಮುನ್ನಡೆದರೆ, ಈ ಚರ್ಚೆ ಇನ್ನಷ್ಟು ಬೆಳೆಯಬಲ್ಲದು.

ಕಾವ್ಯ ಕುರಿತ ಈ ಬರಹಕ್ಕೆ ಚಿಂತಕ-ವಿಮರ್ಶಕರಾದ ಓ.ಎಲ್.ನಾಗಭೂಷಣಸ್ವಾಮಿ ತಕ್ಷಣ ಬರೆದ ಮಾತು: ‘ಕಾವ್ಯದ ಬಗ್ಗೆ ಕೇಳಿಸಿಕೊಳ್ಳುವವರೂ ಕಾಣದೆ, ನೀವು ಹೆಸರಿಸಿರುವ ನಾನು ಕೂಡಾ ಈಗ ರೆಕ್ಕೆ ಹರಿದ ಕುಂಟು ಕಾಗೆ. ಅಲ್ಲೊಂದು ಇಲ್ಲೊಂದು ಅಗುಳು ಕಂಡು ಕೂಗಿ ಕರೆದರೂ ಓದುಗ ಬಳಗ, ಕಿವುಡು ಕವಿಗಳು ತಮ್ಮ ಅಂಗೈ ಅಗಲದ ಲೋಕದಿಂದ ಅತ್ತಲಿತ್ತ ಅಲುಗಲಾಗದ ಹೆಳವರು‌ ಅನಿಸುತ್ತದೆ. ಈ ಅನಿಸಿಕೆ ತಪ್ಪಾಗಲಿ. ಅಥವಾ ಕಾವ್ಯದ ಸ್ವರೂಪ, ಕಾವ್ಯದಿಂದ ಏನು ಪಡೆಯಬೇಕು ಎಂಬ‌‌ ಅಪೇಕ್ಷೆಗಳು ಬದಲಾದದ್ದನ್ನು ಅರಿಯಲು ಆಗದ, ಕಬ್ಬಿಣ ತೂಗುವ ಎಡೆಯಲ್ಲಿ ಕಾದು ಕುಳಿತ ಮುದಿ ನೊಣಗಳೋ ನಾವು ಅನ್ನುವ ಸಂಶಯ‌ ಕಾಡುವುದು.’ ಇದಾದ ಮೇಲೆ ಓ.ಎಲ್.ಎನ್. ವಿಸ್ತರಿಸಿದ ಮಾತು: ‘ಇದು ಆಯುಧಗಳನ್ನು ಮಾಡಲು ಕಬ್ಬಿಣವನ್ನು ನೆಲದಿಂದ ಬಗೆದು ತೆಗೆದು ತೂಕ ಮಾಡಿ ಮಾರುವ ಕಾಲ. ಕಾವ್ಯದ ಸಿಹಿಯನ್ನು ಹಂಬಲಿಸುವ, ಆದರೆ ದೊರೆಯದ, ಸುಮ್ಮನೆ ಗೊಣಗುತ್ತಾ ಇರುವ ಮುದಿ ನೊಣಗಳೋ ನಾವು ಅಂತ ಕೇಳಿದ್ದು….ಮೆಂಟಿಸೆಂಟಲ್ (!) ಆಗಿ ಬರೆಯುವುದು, ಅರ್ಥವಿರದ ಆಧ್ಯಾತ್ಮ ಅನುಭಾವದಲ್ಲಿ ಅಲೆದಾಡುವುದು, ಪೊಲಿಟಿಕಲಿ ಕರೆಕ್ಟ್ ಆದ ವಿಚಾರವನ್ನು ಹೇಳುವುದು, ಅಥವಾ ಕುಟುಕು ವ್ಯಂಗ್ಯ ಇವೇ ಇದೇ ಅನುಕ್ರಮದಲ್ಲಿ ಕಾವ್ಯವೆಂದು ಮೆರೆಯುತ್ತಿವೆ…ಶಬ್ದ ಸಂಪತ್ತು ಕುಗ್ಗಿದೆ. ಪದಗಳ ಆಯ್ಕೆ, ಜೋಡಣೆ, ಪದಗಳು ಶಬ್ದವಿನ್ಯಾಸ-sound pattern- ಮೂಲಕ ಓದುಗರ ಮನಸಿನಲ್ಲಿ ಅನುಭವ ಲೋಕವನ್ನು ನಿರ್ಮಿಸುವ ಕಲೆಗಾರಿಕೆ ಕಾಣೆಯಾಗಿದೆ. ಚಿಲಿಯ ಪಾಬ್ಲೋ ನೆರೂಡ, ಪೋಲಿಶ್ ಕವಯಿತ್ರಿ ವಿಸ್ಲಾವಾ ಸಿಂಬೋರ್ಷ್ಕಾ, (Maria Wisława Anna Szymborska) ಇಂಥವರ ರಾಜಕೀಯ ಕವಿತೆಗಳ ರುಚಿ ಬಲ್ಲವರಿಗೆ ಈ ಮಾತು ವಿವರಿಸುವ ಅಗತ್ಯವಿಲ್ಲ…ನನ್ನಂಥ ಓದುಗರು ನಾವು ಹೊತ್ತಿರುವ, ಒಪ್ಪಿರುವ ಪೊಯೆಟಿಕ್ಸ್ ಬದಲಾಗಿರುವುದನ್ನು ಅರಿಯಲಾಗದವರಾಗಿದ್ದೇವೆಯೋ....’

ಕನ್ನಡದ ಗಂಭೀರ ಕವಿಗಳ ಸಾಲಿನಲ್ಲಿರುವ ಚಂದ್ರಶೇಖರ ತಾಳ್ಯ, ‘ಕಾವ್ಯ ಸಾಯುವುದುಂಟೆ? ಯಾಕೋ ಭಯ. ನಿಜದ ರಸಾನುಭೂತಿ, ರೂಪಕದ ಸೂಕ್ಷ್ಮತೆ ಗಳಿಲ್ಲದ ಬದುಕೊಂದು ಬದುಕೇ? ಇದೆಲ್ಲ ದಕ್ಕುವುದು ಕಾವ್ಯದ ಮೂಲಕವೇ ಅಲ್ಲವೇ?’ ಎಂದು ದಿಗ್ಭ್ರಮೆಗೊಂಡರೆ, ಕವಿ ಎಂ.ಡಿ. ವಕ್ಕುಂದರಿಗೆ ‘ಇದು ಒಟ್ಟಾರೆ ಕಲೆಯೇ ಎದುರಿಸುತ್ತಿರುವ ಆತಂಕ’ ಎನ್ನಿಸಿದೆ.
ಕಾವ್ಯಗ್ರಹಿಕೆಯ ಅನೇಕ ಮಾದರಿಗಳನ್ನು ತೋರಿಸಿರುವ ‘ಹಾಡೆ ಹಾದಿಯ ತೋರಿತು’ ಕೃತಿಕಾರರಾದ ಎಚ್. ಎಸ್. ರಾಘವೇಂದ್ರರಾವ್ ಬರೆಯುತ್ತಾರೆ: ‘ಅನುಭವ, ಭಾವನೆ ಮತ್ತು ಆಲೋಚನೆಗಳನ್ನೇ ಕವಿತೆಯೆಂದು ತಿಳಿಯುವ ತಪ್ಪು ಕವಿಗಳನ್ನು ಕೊಲ್ಲುತ್ತಿದೆ. ಇದಕ್ಕೆ ಕಾವ್ಯ ಸಂವಹನ ಹಾಗೂ ಕಾವ್ಯ ಶಿಕ್ಷಣಗಳ ಸೋಲು ಕಾರಣ. ಕವಿತೆ ಮಾತ್ರವಲ್ಲ, ಎಲ್ಲಾ ಪ್ರಕಾರಗಳದೂ ಇದೇ ಪಾಡು. ಆದರೂ ಕೆಲವರಾದರೂ ದಿಟವಾಗಿ ಓದುತ್ತಿದ್ದಾರೆ, ಬರೆಯುತ್ತಿದ್ದಾರೆ. ಅವರನ್ನು ಮತ್ತು ಹಳಬರನ್ನು ತಲುಪುವ ಅಗತ್ಯವಿದೆ. ಸಾಮಾಜಿಕ ಎಚ್ಚರ ಮತ್ತು ಕವಿತೆ ಎರಡನ್ನೂ ಹೊಂದಿಯೂ ಕಲಾಮಾಧ್ಯಮದ ಡಿಮ್ಯಾಂಡುಗಳನ್ನು, ಸಾಧ್ಯತೆಗಳನ್ನು ಮರೆಯಬಾರದು.’ 

ಇಂಗ್ಲಿಷ್ ಸಾಹಿತ್ಯದ ಗಂಭೀರ ವಿದ್ಯಾರ್ಥಿ-ಪೊಲೀಸ್ ಅಧಿಕಾರಿಯೊಬ್ಬರು ಬರೆದ ಕಚಗುಳಿಯ ಪ್ರತಿಕ್ರಿಯೆ: ‘ಆಳುವ ಪ್ರಭುಗಳು ಹೇಳುತ್ತಿದ್ದಾರೆ- ಸೆಂಗೋಲಿನ ರಕ್ಷಣೆಯಲ್ಲಿ ನಿಮ್ಮನ್ನು ಹಳೆಯ ಕಟ್ಟಡದಿಂದ ಹೊಸ ಭವನಕ್ಕೆ ಒಯ್ಯುತ್ತಿದ್ದೇವೆ ಎಂದು! ಆಹಾ! ಟಿವಿ ಆ್ಯಂಕರುಗಳ ಶಬ್ದಮಾಲಿನ್ಯದಲ್ಲಿ ಹೊಸ ವ್ಯಾಖ್ಯಾನ ಅರಳುತ್ತಿದೆ! ಆಳುವ ಪ್ರಭುಗಳು ಪಾರ್ಲಿಮೆಂಟಿನಲ್ಲಿ ಕಾವ್ಯ ನುಡಿಯುವ ಕಾಲ ಬರಲಿದೆ! ಕಾಯಿರಿ!’

ಹೊಸ ತಲೆಮಾರಿನ ಕತೆಗಾರ-ವಿಮರ್ಶಕ ಮಹಾಂತೇಶ ಪಾಟೀಲ್: ‘ಸಾಹಿತ್ಯದ ಇತರೆ ಪ್ರಕಾರಗಳಿಗಿಂತ ಕಾವ್ಯರಚನೆ ಮತ್ತು ಓದು ಹೆಚ್ಚು ಸೂಕ್ಷ್ಮತೆ ಹಾಗೂ ಸಂವೇದನಾಶೀಲತೆ ಬಯಸುತ್ತವೆ. ಮನುಷ್ಯರ ಪಂಚೇಂದ್ರಿಯಗಳ ಜಡತೆ, ಕ್ರಿಯಾಶೀಲತೆಯಿಲ್ಲದಿರುವುದು ಸಹ ಸೂಕ್ಷ್ಮತೆಯ ಗೈರಿಗೆ ಕಾರಣ. ಈ ಕಾಲದ ಮಾನವರು ಕಿವಿಯಲ್ಲಿ 'ಇಯರ್ ಬಡ್ಸ್' ಹಾಕಿಕೊಂಡಿರುವುದರಿಂದ ಲೋಕದ ಶಬ್ದ-ನಿಶ್ಶಬ್ದಗಳನ್ನು ಕೇಳಲಾಗುತ್ತಿಲ್ಲ. ಕಣ್ಣುಗಳು ಮೊಬೈಲ್ ಇಲ್ಲವೇ ಲ್ಯಾಪ್ ಟಾಪಿನ ಸ್ಕ್ರೀನಿಗೆ ಅಂಟಿಕೊಂಡಿವೆ. ಅದರಾಚೆಗೇನೂ ನೋಡುತ್ತಿಲ್ಲ. ಟಚ್ ಸ್ಕ್ರೀನ್ ಬಳಸಿ ಬಳಸಿ 'ಟಚ್ ಲೆಸ್' ಆದ ಕೈಗಳಿಗೆ ಸ್ಷರ್ಶದ ಸುಖ ಗೊತ್ತಿಲ್ಲ. ಇಷ್ಟೊಂದು ಯಾಂತ್ರಿಕವೂ, ಜಡವೂ ಆಗಿರುವ ಮನುಷ್ಯರಿಂದ ಸೂಕ್ಷ್ಮ ಪ್ರಜ್ಞೆಯ ಕಾವ್ಯದ ರಚನೆ ಮತ್ತು ಓದು ಸಾಧ್ಯವಾದೀತೆ?...ಜೊತೆಗೆ, ಕಾವ್ಯದ ಓದಿನ ಸೂಕ್ಷ್ಮತೆ ಕಲಿಸುವ ಪ್ರಾಧ್ಯಾಪಕರು, ಕಲಿಯುವ ವಿದ್ಯಾರ್ಥಿಗಳು ಕನ್ನಡ ಅಧ್ಯಯನ ವಿಭಾಗಗಳಲ್ಲಿ ಕಡಿಮೆ. ಎಷ್ಟೋ ಪ್ರಾಧ್ಯಾಪಕರು ಕಾವ್ಯವನ್ನು ಬೋಧಿಸಲು, ವಿಮರ್ಶಿಸಲು ಹಿಂದೇಟು ಹಾಕುತ್ತಾರೆ. ಕಾರಣ- ಕಾವ್ಯದ ಓದಿಗೆ ಬೇಕಾದ ಪೂರ್ವಸಿದ್ಧತೆಯಿಂದ ತಪ್ಪಿಸಿಕೊಳ್ಳಲು… ಒಟ್ಟು ಸಮಾಜದ ಅಸೂಕ್ಷ್ಮತೆ, ರಾಜಕೀಯಕ್ಕೆ ಕಲೆಗಳ ಬಗೆಗೆ ಇರುವ ಅಸಡ್ಡೆ, ಸರಕುಗಳ ಸುಖದಲ್ಲಿ ಲೀನವಾಗಿರುವ ಹರೆಯದ ಮನಸ್ಸುಗಳು ಕಾವ್ಯದ ಅವನತಿಗೆ ಕಾರಣಗಳು. ಆದಿಮ ಕಾಲದ ಮಾನವರು ಮೊದಮೊದಲು ರೂಪಿಸಿಕೊಂಡ ಸಾಹಿತ್ಯ ರೂಪ ಕಾವ್ಯ. ಆಧುನಿಕರು ಕೊಲೆಗೈದ ಸಾಹಿತ್ಯ ಪ್ರಕಾರ ಕಾವ್ಯವೇನೋ.‘ಕಾವ್ಯ ಪ್ರಕಾರದ ಸಾವು, ಮನುಷ್ಯರ ಸಾವು ಕೂಡ.' 

ಒಂದು ಕಾಲಕ್ಕೆ ನನ್ನ ಪಾಠ ಕೇಳಿಸಿಕೊಂಡಿದ್ದ ಜಾಣ ವಿದ್ಯಾರ್ಥಿ- ಸೂಕ್ಷ್ಮ ಕನ್ನಡ ಅಧ್ಯಾಪಕ ವಿಜಯೇಂದ್ರ ಬರೆದ ಮಾತು: 'ಕಳೆದು ಹೋಗಿರುವ, ತಲೆ ಮರೆಸಿಕೊಂಡು ಓಡಾಡುತ್ತಿರುವ, What next? ಎಂಬ ಪ್ರಶ್ನೆಯನ್ನೂ ಹಾಕಿಕೊಳ್ಳದಷ್ಟು ಅಸೂಕ್ಷ್ಮತೆಗೆ ತಳ್ಳಲ್ಪಟ್ಟು ಸಾಹಿತ್ಯಕವಾಗಿ ಮಂಕು ಹಿಡಿದ ನನ್ನಂಥವರನ್ನು ರಿಫ್ರೆಶ್ ಮಾಡುವುದಕ್ಕಾಗಿಯೇ ತಮ್ಮ ಬ್ಲಾಗ್ ಆರಂಭವಾದಂತಿದೆ. ಈ ತಡರಾತ್ರಿಯಲ್ಲಿ (2.30, ನಡುರಾತ್ರಿ) 'ಕಾವ್ಯ: ಓದುಗರ ಸಾವೋ? ಪ್ರಕಾರದ ಸಾವೋ?’  ಲೇಖನ ಓದಿದೆ. ಸಾಹಿತ್ಯದ ರಚನೆ ಮತ್ತು ಸಾಹಿತ್ಯದ ಓದು ಈ ಎರಡೂ ಪ್ರಕ್ರಿಯೆಗಳ ಬಗೆಗೆ ನೈಜ ಕಾಳಜಿ ಇರುವ ಮತ್ತು ಸಾಹಿತ್ಯಕ ಜಗತ್ತಿನ ಬೆಳವಣಿಗೆಗಳನ್ನು ನಿರಂತರ ಗಮನಿಸುವ ಮನಸ್ಸಿನ ತುಡಿತದ ಫಲ ಈ ಲೇಖನ…ಸಾಹಿತ್ಯಕ ಸೂಕ್ಷ್ಮಗಳೇ ಸತ್ತು ಹೋಗುತ್ತಿರುವ, ಮುಕ್ತತೆ ಮತ್ತು ಮುಗ್ಧತೆಗಳು ಅಸಹನೆಯ ಬೇಗೆಯಲ್ಲಿ ಕರಗಿ ಹೋಗುತ್ತಿರುವುದರ ಬಗೆಗೆ ಅತ್ಯಂತ ವಿಷಾದದಿಂದ, ಆತಂಕದಿಂದ ತಾವು ಆಡಿರುವ ಒಂದೊಂದು ಮಾತನ್ನೂ ಮತ್ತೆ ಮತ್ತೆ ಓದಿಕೊಂಡೆ. ಈ ಒಂದೊಂದೂ ಮಾತೂ ನನಗೆಯೇ ಹೇಳಿದಂತಿದೆ ಸರ್…ನಮ್ಮಂಥವರಲ್ಲಿರುವುದು…ಗಾಂಭೀರ್ಯದ ಕೊರತೆ; ಎಲ್ಲಕ್ಕಿಂತ ಮಿಗಿಲಾಗಿ ನಮಗೆ ಬದುಕು ಕೊಟ್ಟ ಸಾಹಿತ್ಯದ ಬಗೆಗಿನ ನಮ್ಮಗಳ ಕೃತಜ್ಞಹೀನತೆ. ಇಂಥ ಆತ್ಮನಿಂದನೆಯಿಂದ ಅಥವಾ ಪಾಪ ನಿವೇದನೆಯಿಂದ ಯಾವುದೇ ಪ್ರಯೋಜನವಿಲ್ಲ, ಕ್ಷಮೆ ಇರಲಿ ಸರ್.’ ಕೆಲ ದಿನಗಳ ನಂತರ ವಿಜಯೇಂದ್ರ ಮತ್ತೆ ಬರೆದರು: ‘ಕಾವ್ಯ: ಓದುಗರ ಸಾವೋ? ಪ್ರಕಾರದ ಸಾವೋ?’ ಎಂಬ ಪ್ರಶ್ನೆ ಕವಿರಾಜಮಾರ್ಗಕಾರನನ್ನೂ ಕಾಡಿದೆ. ಕವಿರಾಜಮಾರ್ಗದ ಪ್ರಥಮ ಪರಿಚ್ಛೇದದಲ್ಲಿ ‘ಪೂರ್ವ ಕಾವ್ಯ ರಚನೆಗಳಂ ತಾಂ ಮೊದಲೊಳ್ ಕಲ್ತಂಗಲ್ಲದೆ ಪದದೊಳ್ ಜಾಣುಂ ಬೆಡಂಗುಮಕ್ಕುಮೆ ಕೃತಿಯೊಳ್?’ ‘ಹಿಂದಣ ಕಾವ್ಯ ರಚನೆಗಳನ್ನು ಕಲಿತವನಿ/ಳಿಗಲ್ಲದೆ, ಇತರರಿಗೆ ಕಾವ್ಯ ರಚನೆಯಲ್ಲಿ ಜಾಣ್ಮೆಯೂ, ಬೆಡಗೂ ಸಾಧ್ಯವೆ?’ ಎಂದು ಪ್ರಶ್ನಿಸುವ ಶ್ರೀವಿಜಯ, ಮುಂದಿನ ಪದ್ಯದಲ್ಲಿ ಕವಿಗೆ ‘ಪ್ರತಿಭೆ, ನೈಜ ಚತುರತೆ, ಶ್ರೇಷ್ಠ ವಿದ್ವಾಂಸರ ಸಂಗ, ಲಾಕ್ಷಣಿಕ-ಶಾಸ್ತ್ರ ಗ್ರಂಥಗಳ ಪರಿಚಯ ಇದ್ದಲ್ಲಿ ಮಾತ್ರ ಭಾಷಾ ಪ್ರೌಢಿಮೆ, ನಿಪುಣತೆ ಸಾಧ್ಯವಾಗುತ್ತದೆ’ ಎನ್ನುತ್ತಾನೆ. ಈ ಮಾತು ಓದುವ ಹವ್ಯಾಸವಿಲ್ಲದ ಲೇಖಕರಿಗೆ ಬೀಸಿದ ಚಾಟಿಯೇಟಿನಂತಿದೆ. ಈ ಹಿನ್ನೆಲೆಯಲ್ಲಿ ‘ಕುರಿತೋದದೆಯುಂ ಕಾವ್ಯಪ್ರಯೋಗ ಪರಿಣತಮತಿಗಳ್’ ಎಂಬ ಕವಿರಾಜಮಾರ್ಗಕಾರನ ಮಾತಿನಲ್ಲಿ [ಇತರರ] ಕಾವ್ಯವನ್ನು [ಅಥವಾ ಒಟ್ಟಾರೆಯಾಗಿ  ಕಾವ್ಯಕೃತಿಗಳನ್ನು] ಓದದ ಕವಿಗಳನ್ನು ಕುರಿತ ವ್ಯಂಗ್ಯವಿದೆಯೇನೋ ಎನ್ನಿಸುತ್ತದೆ.’  

ಕವಯಿತ್ರಿ-ಕ್ರಿಯಾಶೀಲ ಚಿಂತಕಿ ರೂಪ ಹಾಸನ ಅವರಿಗೆ, ‘ಬಹುಶಃ ಕವಿಯ ಪ್ರತಿಭೆ, ಹಾಗೂ ಸಹೃದಯರ ಆಸಕ್ತಿ ಎರಡೂ ಬೇರೆ ಬೇರೆ ಆಧುನಿಕ ತುರ್ತುಗಳಲ್ಲಿ ಕಳೆದು ಹೋಗುತ್ತಿರಬಹುದು!’ ಅನ್ನಿಸಿದೆ. ‘ಮಯೂರ’ ಮಾಸಪತ್ರಿಕೆಯ ಸಂಪಾದಕರಾಗಿದ್ದ ಸಂದೀಪ ನಾಯಕ್ ಬರೆಯುತ್ತಾರೆ: ‘ಕನ್ನಡದಲ್ಲಿ ಕವಿತೆ ಅಂತ ಅಲ್ಲ, ಉತ್ತಮ‌ ಬರವಣಿಗೆಗೆ ಸ್ಪಂದಿಸುವ, ಮಿಡಿಯುವ ಓದುಗರೇ ಕಡಿಮೆಯಾಗುತ್ತಿದ್ದಾರಲ್ಲವೆ? ನೀವು ಹೇಳಿದಂತೆ ಅತ್ಯುತ್ತಮ ಎನಿಸುವಂತಹ ನೂರು ಓದುಗರು ತಯಾರಾದರೂ ಸಾಕು.’ 

ಅಭಿನವ ಸಾಹಿತ್ಯ ಪತ್ರಿಕೆ, ಅಭಿನವ ಪ್ರಕಾಶನ ನಡೆಸುತ್ತಾ, ಹತ್ತಾರು ಹೊಸ ಕವಿ. ಕವಯಿತ್ರಿಯರನ್ನು ಪೊರೆದಿರುವ ರವಿಕುಮಾರ್, ಕವನ ಸಂಕಲನಗಳನ್ನೇ ಹೆಚ್ಚು ಪ್ರಕಟಿಸಿರುವ ಶ್ರೀನಿವಾಸರಾಜು ಮೇಷ್ಟ್ರನ್ನು ನೆನೆದ ತಕ್ಷಣ, ಅಂಥ ನಿಸ್ವಾರ್ಥಿ ಮೇಷ್ಟ್ರುಗಳ ಕೊರತೆಯೂ ಕಾವ್ಯ ಕ್ಷೇತ್ರದ ದಣಿವಿಗೆ ಕಾರಣವೆನ್ನುವುದು ಹೊಳೆಯಿತು. ಯಶಸ್ವಿ ಪ್ರಾದೇಶಿಕ ಪತ್ರಿಕೆಗಳಲ್ಲೊಂದಾದ ‘ಕರಾವಳಿ ಮುಂಜಾವು’ ಪತ್ರಿಕೆಯ ಸಂಪಾದಕ ಗಂಗಾಧರ ಹಿರೇಗುತ್ತಿಯವರಿಗೆ ಕಾವ್ಯದ ಸಮಸ್ಯೆ ಪತ್ರಿಕೆಗಳ ಪುರವಣಿಯ ಸಾವಿನೊಂದಿಗೂ ತಳಕು ಹಾಕಿಕೊಂಡಿದೆ ಎನ್ನಿಸಿದೆ; ‘ಈಗ ನ್ಯೂಸ್ ಪ್ರಿಂಟ್ ಬೆಲೆ ಇಳಿದಿದೆ; ಮತ್ತೆ ಪುರವಣಿ ಶುರು ಮಾಡಿ ಹೆಚ್ಚು ಸಾಹಿತ್ಯ ಪುಟಗಳನ್ನು ಕೊಡುವೆ’ ಎಂದು ಸಜ್ಜಾಗಿರುವ ಹಿರೇಗುತ್ತಿಯವರಿಂದ ದೊಡ್ಡ ದೊಡ್ಡ ಪತ್ರಿಕೆಗಳೂ ಪ್ರೇರಣೆ ಪಡೆಯಲಿ! ಹಾಗೆಯೇ ಧಾರವಾಡದ ಕರ್ನಾಟಕ ಕಾಲೇಜಿನ ಇಂಗ್ಲಿಷ್ ಅಧ್ಯಾಪಕ ಡಾ. ಚನ್ನಬಸಪ್ಪ ಐನಳ್ಳಿಯವರ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಶುರು ಮಾಡಿರುವ ‘ಕ್ರಿಯೇಟೀವ್ ರೆಸ್ಪಾನ್ಸ್: ಸ್ಟೂಡೆಂಟ್ಸ್ ಫೋರಂ’ ಥರದ ವೇದಿಕೆಗಳ ಸಾಹಿತ್ಯ ಪ್ರೀತಿ ಕೂಡ ಇತರ ಕಾಲೇಜುಗಳ ಮಂದಿಗೆ ಮಾದರಿಯಾಗಲಿ.

ಕವಿ ಮಿತ್ರ ವಿಕ್ರಮ ವಿಸಾಜಿಗೆ, ‘ಕಾವ್ಯದ ಓದು ಕಳೆದುಕೊಂಡ ಸಮಾಜ ಒಂದು ಅಸ್ವಸ್ಥ ಸಮಾಜ’ ಎನ್ನಿಸಿದರೆ, ಅವರ ಸಂಶೋಧನಾ ವಿದ್ಯಾರ್ಥಿ, ಕಲ್ಯಾಣ ಕರ್ನಾಟಕದ ಜವಾರಿ ಕತೆಗಾರ ಸಂಗನಗೌಡ ಹಿರೇಗೌಡರಿಗೆ ಹೀಗೆನ್ನಿಸುತ್ತಿದೆ: ‘ಇತ್ತೀಚೆಗೆ ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ಬರಹಗಾರರೇ ಹೆಚ್ಚಾಗಿದ್ದಾರೆ. ಅದೂ ಸ್ವಯಂ ಪ್ರಶಂಸೆ, ಭಿನ್ನ ಆರೋಪವಂತೂ ಹೇಳತೀರದು. ಸಮಕಾಲೀನರನ್ನು ಹೊಟ್ಟೆಕಿಚ್ಚಿಗಾದರೂ ಓದುವವರಿಲ್ಲ. ಅನುಭವದ ಗೋದಾಮಿನಲ್ಲಿ ಬಿದ್ದ ಅಕ್ಷರಗಳನ್ನು ಹದಮಾಡುವ ವ್ಯವಧಾನವೂ ಇಲ್ಲ.’ 

ಇಂಗ್ಲಿಷ್ ಅಧ್ಯಾಪಕ-ಕತೆಗಾರ ಸದಾನಂದ ಆರ್. ಗ್ರಹಿಸಿದಂತೆ, ‘ಕವಿತೆ ಓದುವ ಕಲೆ ಪಿ.ಯು.ಸಿ. ಮಟ್ಟದಲ್ಲೇ ಸತ್ತಂತಿದೆ. ಟೀಚರುಗಳು ದಾರಿ ತೋರಿಸದಿದ್ದರೆ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕತ್ತಲಲ್ಲಿ ತಡವರಿಸುತ್ತಿರುತ್ತಾರೆ. ವಿದ್ಯಾರ್ಥಿ-ವಿದ್ಯಾರ್ಥಿನಿಯರು ಕೊನೇ ಪಕ್ಷ ಸಿನಿಮಾ ಹಾಡುಗಳ ಸಂಗದಿಂದಾದರೂ ಒಂದು ಬಗೆಯ ಕಾವ್ಯದ ಸಂಗದಲ್ಲಿದ್ದಾರೆ; ಟೀಚರುಗಳಲ್ಲಿ ಅದೂ ಇಲ್ಲ! ಸ್ಟೂಡೆಂಟ್ಸ್ ಆರ್ ಅಲೈವ್. ಓನ್ಲಿ ಟೀಚರ್ಸ್ ಆರ್ ಡೆಡ್.’ ಕನ್ನಡ ಅಧ್ಯಾಪಕ-ವಿಮರ್ಶಕ ರಾಮಲಿಂಗಪ್ಪ ಬೇಗೂರರಿಗೆ ‘ಓದುಗರ ಸಾವು   ಕಾವ್ಯದ ಸಾವೇ ಹೌದು. ಕವಿಗಳನ್ನಾದರೂ ಇತರರ ಕವಿತೆಗಳನ್ನು ಓದುವವರನ್ನಾಗಿ ಮಾಡುವುದು ಅಗತ್ಯ’ ಎನ್ನಿಸಿದೆ; ಕನ್ನಡ ಅಧ್ಯಾಪಕ-ಲೇಖಕ ಮೋಹನ್ ಮಿರ್ಲೆಗೆ ‘ಕಾವ್ಯ ಬರೆಯುವ, ಓದುವ ಮತ್ತು ಬೋಧಿಸುವವನಾಗಿ ಕಾವ್ಯ ಕುರಿತ ಈ ಬರಹ ನನ್ನ ಜವಾಬ್ದಾರಿಯನ್ನೂ ಜಾಗೃತಗೊಳಿಸಿದೆ’ ಎಂಬುದರ ಅರಿವಾಗಿದೆ. ಇಂಗ್ಲಿಷ್ ಅಧ್ಯಾಪಕ ಸುನಿಲ್ ಕುಮಾರ್ ಬಿ.ಕೆ. ಪ್ರಕಾರ, ‘ಹಿಂದಿನ ಕವಿತೆಗಳು ಜ್ಞಾನದಿಂದ ಮೂಡಿ, ಜೀವನದ ಸನ್ಮಾರ್ಗ ತೋರಿದರೆ, ಇಂದಿನ ಕವಿತೆಗಳು ಕೇವಲ ತನ್ನ ಅಹಂನ ಸಂತೃಪ್ತಿಗಾಗಿ ಮಾತ್ರ ಸೀಮಿತವಾಗಿ ಹುತ್ತದ ಕುರುಡು ಗೆದ್ದಲಂತೆ ಅಲ್ಲೇ ನಿಲ್ಲುತ್ತವೆ.’  

ಇವೆಲ್ಲ ಸ್ಪಂದನಗಳ ಜೊತೆಗೆ, ಐವತ್ತಕ್ಕೂ ಹೆಚ್ಚು ವರ್ಷಗಳಿಂದಲೂ ಸಾಂಸ್ಕೃತಿಕ ಲೋಕವನ್ನು ಒಡನಾಡಿರುವ ಹಿರಿಯ ಲೇಖಕಿ-ಹೋರಾಟಗಾರ್ತಿ ಡಾ. ವಿಜಯಮ್ಮ ಹಾಗೂ  ಸುಪ್ರಸಿದ್ಧ ಕಾದಂಬರಿಕಾರ-ಚಿತ್ರಕಥಾಲೇಖಕ ಡಾ. ಬಿ.ಎಲ್. ವೇಣು ಅವರ ಬತ್ತದ ಕಾಳಜಿ, ಸ್ಪಂದನ ಕಂಡು ಇನ್ನಷ್ಟು ಹುರುಪುಗೊಂಡೆ. ನನ್ನ ಪ್ರೀತಿಯ ಈ ಹಿರಿಯರ ಉತ್ಸಾಹ ನಾವೆಲ್ಲ ಇನ್ನಷ್ಟು ಗಂಭೀರವಾಗಿ ಸಾಹಿತ್ಯಮುಖಿಗಳಾಗುವಂತೆ ಮಾಡಬಲ್ಲವು: ‘ಹಲವರು ತಾವು ಬರೆದಿದ್ದನ್ನು ತಾವೇ ಓದಿ ಖುಷಿ ಪಡುವವರೇ ವಿನಃ, ಇನ್ನೊಬ್ಬರದನ್ನು ಓದುವ ಸಹನೆ ಯಾರಿಗಿದೆ? ಸಾಲುಗಳ ಕೆಳಗೆ ಸಾಲು, ಪ್ರಾಸಕ್ಕೆ ಪ್ರಾಸ ಜೋಡಿಸಿದರೆ ಅದೇ ಪದ್ಯ ಎಂಬ ಭ್ರಮಾಧೀನರೂ ಇದ್ದಾರೆ’ ಎಂದು ಬಿ.ಎಲ್. ವೇಣು ರೇಗುತ್ತಿದ್ದರು; ಡಾ. ವಿಜಯಮ್ಮ ಹಿಂದೊಮ್ಮೆ ಸುಚಿತ್ರಾದಲ್ಲಿ ನಡೆಸಿದ ಸಾಹಿತ್ಯ ಸಂಜೆಗಳನ್ನು ನೆನೆಯುತ್ತಾ, ‘ಕವಿತೆಯ ಓದು ಶಾಲಾಕಾಲೇಜುಗಳಲ್ಲಿ ಶುರುವಾಗಿ, ಕವಿತೆಯನ್ನು ಅಲ್ಲೇ ಅರ್ಥ ಮಾಡಿಸಬೇಕು. ‘ಕವಿತೆಯ ರಚನೆ ಸುಲಭ, ಕವಿಗೋಷ್ಟಿಗೆ ಕರೆಯುತ್ತಾರೆ, ಗುರುತಿಸುತ್ತಾರೆ’ ಎಂಬ ಹುಂಬ ನಂಬಿಕೆಗಳು ಹೆಚ್ಚಾಗುತ್ತಿವೆ’ ಎಂದು ಬರೆದರು.

ಇದೆಲ್ಲದರ ನಡುವೆ ಒಳ್ಳೆಯ ಹಳ್ಳಿ ಕತೆಗಾರ ಅನಿಲ್ ಗುನ್ನಾಪುರ ಕಾವ್ಯವನ್ನು ಮುಕ್ತವಾಗಿ ಆಸ್ವಾದನೆ ಮಾಡಲು ಹೊರಟಿದ್ದರೆ, ಗೆಳೆಯ, ಚಿತ್ರನಟ ಅಚ್ಯುತ್ ಕುಮಾರ್ ‘ಇವತ್ತಿನಿಂದ ದಿನಕ್ಕೊಂದು ಪದ್ಯ ಓದಲು ಡಿಸೈಡ್ ಮಾಡಿರುವೆ’ ಎಂದು ಶುರು ಮಾಡಿದ್ದರು. ಇದೀಗ ನಿಜಕ್ಕೂ ಒಳ್ಳೆಯ ಆರಂಭ! ಆಗಾಗ್ಗೆ ನಾವು ಓದಲೇಬೇಕಾದ, ಕನ್ನಡದ ಹಾಗೂ ಒಟ್ಟಾರೆ ಜಗತ್ತಿನ ಒಳ್ಳೊಳ್ಳೆಯ ಕವಿತೆಗಳನ್ನು ಆಗಾಗ ಇಲ್ಲಿ ನೆನಪಿಸುತ್ತಾ ಸಾಗೋಣ. ಯಾರ ಹಂಗೂ ಇಲ್ಲದೆ ಎಲ್ಲರೂ ಈ ಕವಿತೆಗಳನ್ನು ತಂತಾವೇ ಅಥವಾ ತಂತಮ್ಮ ವಲಯಗಳಲ್ಲಿ ಓದಿ, ಚರ್ಚಿಸಿ ಕಾವ್ಯದ ಸಂಕೀರ್ಣತೆ, ಗಹನತೆಗಳನ್ನು ಅರಿತರೂ ಸಾಕು; ನಾವು ನಿಂತಲ್ಲಿಂದ ಕೊಂಚವಾದರೂ ಮುಂದಕ್ಕೆ ಚಲಿಸಬಲ್ಲೆವು. ಆಳದಲ್ಲಿ ನಿಜಕ್ಕೂ ಒಳ್ಳೆಯದು, ಉತ್ತಮವಾದುದು ಅನ್ನಿಸಿದ ಕವಿತೆಗಳನ್ನು ನೀವೂ ನನಗೆ ಸೂಚಿಸುತ್ತಿರಿ: (ಇ ಮೇಲ್: natarajhlbub@gmail.com). ಅವನ್ನೂ ಇಲ್ಲಿ ಚರ್ಚೆಗೆ ಬಿಡೋಣ.

ಈಗ ಮೊದಲಿಗೆ, ಓ.ಎಲ್. ನಾಗಭೂಷಣಸ್ವಾಮಿ ಸಂಪಾದಿಸಿದ ‘ನಮ್ಮ ಕನ್ನಡ ಕಾವ್ಯ’ ಎಂಬ ತೊಂಬತ್ತರ ದಶಕದವರೆಗಿನ ಕನ್ನಡದ ಹಲವು ಮುಖ್ಯ ಕವಿತೆಗಳ ಸಂಗ್ರಹ-ವ್ಯಾಖ್ಯಾನಗಳ ಸಂಕಲನ, ಹಾಗೂ ಲಂಕೇಶರ ‘ಅಕ್ಷರ ಹೊಸ ಕಾವ್ಯ’ದಿಂದ ಶುರು ಮಾಡೋಣ. ಮುಂದೆ ಇನ್ನಷ್ಟು ಮುಖ್ಯ ಸಂಕಲನಗಳನ್ನು, ಕವಿತೆಗಳನ್ನು ನೆನೆಯುತ್ತಾ, ಓದುತ್ತಾ ಹೋಗೋಣ. ಕಾವ್ಯ ಓದುವ ಬಗೆಯನ್ನು ಕಲಿಯಲು ಡಿ.ಆರ್. ನಾಗರಾಜರ ‘ಶಕ್ತಿ ಶಾರದೆಯ ಮೇಳ’, ಎಚ್. ಎಸ್. ರಾಘವೇಂದ್ರರಾವ್ ಅವರ ‘ಹಾಡೆ ಹಾದಿಯ ತೋರಿತು’, ಕಿ.ರಂ. ನಾಗರಾಜರ ‘ತೆರೆದ ಪಠ್ಯ’ ಪುಸ್ತಕಗಳಿಂದಲೂ ಶುರು ಮಾಡೋಣ.

ಸಣ್ಣಪುಟ್ಟ ಸ್ವಾರ್ಥ, ಸಿನಿಕತೆಗಳನ್ನು ಚದುರಿಸಿ, ಭಿನ್ನಮತವಿದ್ದಾಗಲೂ ಒಟ್ಟಾಗಿ ಚಿಂತಿಸಿದರೆ, ಹಲ ಬಗೆಯ ಸಾಂಸ್ಕೃತಿಕ ಆತಂಕಗಳಿಗೆ ಒಂದಲ್ಲ ಒಂದು ಬಗೆಯ ಉತ್ತರಗಳು ಸಿಕ್ಕಬಲ್ಲವು. ಈ ವೆಬ್ ಸೈಟಿನ ಉದ್ದೇಶಗಳಲ್ಲಿ ‘ಸರ್ವರೊಳೊಂದೊಂದು ನುಡಿಗಲಿತು’ ಸಾಹಿತ್ಯ ಕಾಳಜಿಯನ್ನು ಉಳಿಸಿಕೊಳ್ಳುವುದು, ಬೆಳೆಸಿಕೊಳ್ಳುವುದು ಹಾಗೂ ಈ ಕಾಲದಲ್ಲಿ ಸೃಷ್ಟಿಯಾಗುವ ‘ಕಲೆಕ್ಟೀವ್ ವಿಸ್ಡಂ’ ರೂಪಿಸಿಕೊಳ್ಳುವುದು, ಹಬ್ಬಿಸುವುದು… ಇವು ಕೂಡ ಸೇರಿವೆಯೆಂಬುದನ್ನು ಮತ್ತೆ ಮತ್ತೆ ನೆನಪಿಸಬೇಕಿಲ್ಲ, ಅಲ್ಲವೆ? 
ಹ್ಯಾಪಿ ಪೊಯೆಟ್ರಿ! ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com

Share on:


Recent Posts

Latest Blogs



Kamakasturibana

YouTube



Comments

0 Comments





Add Comment