ಕಾವ್ಯ: ಓದುಗರ ಸಾವೋ? ಪ್ರಕಾರದ ಸಾವೋ?
by Nataraj Huliyar
'ಈ ಫ್ರಾನ್ಸ್ ದೇಶದಲ್ಲಿ ಪಾಲ್ ವ್ಯಾಲರಿ ತೀರಿಕೊಂಡ ಮೇಲೆ ಇಂಟೆಲಿಜೆಂಟ್ ಓದುಗರೇ ಕಾಣುತ್ತಿಲ್ಲವಲ್ಲ!’ ಎಂದು ಹೆರಾಲ್ಡ್ ಬ್ಲೂಮ್ ಉದ್ಗರಿಸುತ್ತಾನೆ. ಹೆರಾಲ್ಡ್ ಬ್ಲೂಮ್ ಅಮೆರಿಕದ ದೊಡ್ಡ ಸಾಹಿತ್ಯ ವಿಮರ್ಶಕ. ಲೋಕದ ದೊಡ್ಡ ದೊಡ್ಡ ಸಾಹಿತ್ಯ ಕೃತಿಗಳು ಹಾಗೂ ಸಾಹಿತ್ಯದ ಆತ್ಮೀಯ ಓದು ಹೊರಡಿಸುವ ಸೂಕ್ಷ್ಮ ಸತ್ಯಗಳ ಬಗ್ಗೆ ಅಚಲ ನಂಬಿಕೆಯಿದ್ದ ‘ಸಾಹಿತ್ಯವಾದಿ’. 2019ರಲ್ಲಿ, ತನ್ನ ತೊಂಬತ್ತನೆಯ ವಯಸ್ಸಿನಲ್ಲಿ ಸಾಯುವ ಕೆಲವು ತಿಂಗಳ ಮುನ್ನ ಕೂಡ ಅಮೆರಿಕದ ಯೇಲ್ ಯೂನಿವರ್ಸಿಟಿಯಲ್ಲಿ ಸಾಹಿತ್ಯ ಪಾಠ ಮಾಡುತ್ತಿದ್ದವನು. ಪಾಲ್ ವ್ಯಾಲರಿ ಫ್ರೆಂಚ್ ಭಾಷೆಯ ವಿಶಿಷ್ಟ ಕವಿ-ವಿಮರ್ಶಕ. ಇಪ್ಪತ್ತನೆಯ ಶತಮಾನದ ಕೊನೆಗೆ, ಪಶ್ಚಿಮದಲ್ಲಿ ಕಾವ್ಯದ ಸೂಕ್ಷ್ಮ ಓದುಗ-ವಿಮರ್ಶಕರು ಕಡಿಮೆಯಾಗುತ್ತಿದ್ದಾರೆ ಎಂದುಕೊಳ್ಳುತ್ತಾ ಹೆರಾಲ್ಡ್ ಬ್ಲೂಮ್ ಬರೆದ ಮಾತು ಇದು.
ಹೆರಾಲ್ಡ್ ಬ್ಲೂಮ್ ಮಾತು ನೆನಪಿಗೆ ಬಂದಾಗಲೆಲ್ಲ, ಪಾಲ್ ವ್ಯಾಲರಿಯ ಜಾಗದಲ್ಲಿ ನಮ್ಮ ‘ಕವಿಗುರು’ ಕಿ.ರಂ. ನಾಗರಾಜರನ್ನು ಇಟ್ಟು ನೋಡುವಂತಾಗುತ್ತದೆ; ‘ಈಚೀಚೆಗಂತೂ ನನ್ನ ಹತ್ತಿರದವರ ಪೈಕಿ ಕಿ.ರಂ. ನಾಗರಾಜ್ (5.12.1943 - 7.8.2010) ಹೋದ ಮೇಲೆ ಕನ್ನಡ ಕಾವ್ಯದ ಇಂಟಲಿಜೆಂಟ್ ಓದುಗರೇ ಕಾಣುತ್ತಿಲ್ಲವಲ್ಲ?’ ಅನ್ನಿಸತೊಡಗುತ್ತದೆ. ಕೊಂಚ ದಂ ಕಟ್ಟಿ ಅತ್ತಿತ್ತ ನೋಡಿದರೆ, ಎಚ್. ಎಸ್. ರಾಘವೇಂದ್ರರಾವ್, ಓ.ಎಲ್. ನಾಗಭೂಷಣಸ್ವಾಮಿ ಥರದ ಕೆಲವು ಹೆಸರುಗಳಷ್ಟೇ ಹೊಳೆಯುತ್ತವೆ. ಅದರಾಚೆಗೆ ಇನ್ನೊಂದು ಹೆಸರು ಹುಡುಕಲು ಭಾರಿ ಸರಕು ಹೊತ್ತ ಗಾಡಿಯ ಎತ್ತುಗಳಂತೆ ನಿಜಕ್ಕೂ ಮುಕ್ಕರಿಯಬೇಕಾಗುತ್ತದೆ!
ಹೀಗೆನ್ನಿಸಲು ಕಾರಣಗಳಿವೆ: ಕವಿತೆಯೊಂದನ್ನು ಓದಲು ಒಂದು ವಿಚಿತ್ರ ಬಗೆಯ ಮುಕ್ತತೆ ನಮ್ಮ ಪ್ರಜ್ಞೆಯಲ್ಲಿರಬೇಕಾಗುತ್ತದೆ. ಎದೆಯೊಳಗೆ ಮುಗ್ಧತೆಯೂ ಇರಬೇಕಾಗುತ್ತದೆ. ತಲೆಯಲ್ಲಿ ಸಾಕಷ್ಟು ಓದಿನ ಸಿದ್ಧತೆಯೂ ಇರಬೇಕಾಗುತ್ತದೆ. ಕಾವ್ಯದ ಬಗ್ಗೆ ಸಂಭ್ರಮ, ಉತ್ಸಾಹ ಎರಡೂ ಇರಬೇಕಾಗುತ್ತದೆ. ಕಾವ್ಯದ ಪ್ರತಿಮೆಗಳೇ ನುಡಿಯುವ ಸತ್ಯಕ್ಕಾಗಿ ಅಕ್ಷರಶಃ ಮೈಯೆಲ್ಲಾ ಕಣ್ಣಾಗಿ, ಕಿವಿಯಾಗಿ ಸಿದ್ಧರಾಗಿರಬೇಕಾಗುತ್ತದೆ. ಕೊನೆಯ ಪಕ್ಷ ಈ ಹಲವು ಗುಣಗಳಲ್ಲಿ ಒಂದೆರಡಾದರೂ ನಮ್ಮಲ್ಲಿರಬೇಕಾಗುತ್ತದೆ. ಬೇಂದ್ರೆಯ ‘ಕಡಲಿಗೆ ಬಂತು ಶ್ರಾವಣ, ಕುಣಿದಾಂಗ ರಾವಣ’ ಎಂಬ ವರ್ಣನೆಯನ್ನು ಸವಿಯಲು ಕಿವಿ, ಕಣ್ಣು, ಒಳಗಣ್ಣು ಎಲ್ಲವೂ ಏಕಕಾಲಕ್ಕೆ ಒಗ್ಗೂಡಬೇಕಾಗುತ್ತದೆ! ಕವಿತೆಯೊಂದು ಕಣ್ಣಿಗೆ ಏನನ್ನು ಹೇಳುತ್ತದೆ, ಕಿವಿಗೆ ಏನನ್ನು ಸೂಚಿಸುತ್ತದೆ ಎಂದು ವ್ಯವಧಾನದಿಂದ, ಹತ್ತಿರದಿಂದ ನೋಡಬೇಕಾಗುತ್ತದೆ. ಕಳೆದ ವಾರ ಇದೇ ಬ್ಲಾಗಿನಲ್ಲಿ ಬರೆದಿದ್ದ ‘ಒಡಿಸ್ಸಿ ಓದಿ ನೀಷೆಗೆ ಹೊಳೆದ ಸತ್ಯ’ ಲೇಖನಕ್ಕೆ ಪ್ರತಿಕ್ರಿಯಿಸುತ್ತಾ ಗೆಳೆಯ ಎನ್.ಎಸ್. ಗುಂಡೂರ್ ನೆನಪಿಸಿದಂತೆ, ‘ತತ್ವಜ್ಞಾನಿ ನೀಷೆ ಒಬ್ಬ philologist ಆಗಿ ಸಾಹಿತ್ಯ ಓದುವ ರೀತಿ’ ಕೂಡ ಕಾವ್ಯದ ಓದಿಗೆ ಬೇಕಾಗುತ್ತದೆ. ಫಿಲಾಲಜಿಸ್ಟ್ ಎಂದರೆ ಭಾಷೆಗಳ ವಂಶವೃಕ್ಷಗಳನ್ನು ಗ್ರಹಿಸಿ ಭಾಷೆಯ ಶಬ್ದಗಳ ಚರಿತ್ರೆಯನ್ನು ಅರಿಯಬಲ್ಲ ಭಾಷಾವಿದ್ವಾಂಸ. ಈ ಬಗೆಯ ಓದಿನಿಂದ ಹುಟ್ಟುವ ಅರ್ಥಗಳು ಕೂಡ ನಮ್ಮ ಕವಿತೆಯ ರೀಡಿಂಗಿನಲ್ಲಿ ಇರಬೇಕಾಗುತ್ತದೆ.
ಇತ್ತಿತ್ತಲಾಗಿ ಕವಿತೆಯ ಈ ಥರದ ಸೂಕ್ಷ್ಮ ಓದುಗಳು ಯಾಕೋ ಅಷ್ಟು ಕಾಣುತ್ತಿಲ್ಲವಲ್ಲ ಎಂದು ನಿರಾಶೆಯಾಗುತ್ತದೆ. ಕಣ್ಣು ಬಿಟ್ಟು ನೋಡಿದರೆ, ಆ ನಿರಾಶೆಯನ್ನು ಚದುರಿಸುವಂತೆ ನಿಜಕ್ಕೂ ಕವಯಿತ್ರಿಯರ, ಕವಿಗಳ ಸಂಖ್ಯೆ ಹೆಚ್ಚಿರುವುದು ಕಾಣುತ್ತದೆ. ಆದರೆ ಈಚೆಗೆ ನನಗೆ ಸಿಕ್ಕ ಅನೇಕ ಕವಿಗಳಲ್ಲಿ ಒಬ್ಬ ಕವಿ ಇನ್ನೊಬ್ಬ ಕವಿಯನ್ನು ಓದಲು ಇರಬೇಕಾದ ಮುಕ್ತತೆ, ಉತ್ಸಾಹ, ಮುಗ್ಧತೆ ಮಾಯವಾದಂತೆ ತೋರುತ್ತದೆ. ಎಲ್ಲ ಪ್ರತಿಕ್ರಿಯೆಗಳನ್ನೂ ಕಂಪ್ಲೇಂಟಿನಿಂದಲೇ ಶುರು ಮಾಡಬೇಕು ಎಂಬ ಸಂಜೆ ಏಳು ಗಂಟೆಯ ‘ಟೀವಿ ಜೀವಿ’ಗಳ ಧೋರಣೆ ನಮ್ಮೊಳಗೂ ಬೆಳೆಯುತ್ತಿದ್ದಂತಿದೆ! ಕವಯಿತ್ರಿಯೊಬ್ಬಳಿಗೆ ಇನ್ನೊಬ್ಬ ಕವಯಿತ್ರಿಯ ಬಗ್ಗೆ ಕುತೂಹಲ ಇರಬೇಕಾದ ಜಾಗದಲ್ಲಿ ಅವಳ ಕವಿತೆ ಓದುವ ಮೊದಲೇ ಅಸಹನೆ, ತಿರಸ್ಕಾರ ತುಂಬಿಕೊಂಡರೆ ಆಕೆಗೆ ಇನ್ನೊಬ್ಬಳ ಕವಿತೆ ದಕ್ಕುವುದೇ ಇಲ್ಲ. ಹಾಗೆಯೇ, ಒಬ್ಬ ಕವಿಗೆ ಮತ್ತೊಬ್ಬ ಒಳ್ಳೆಯ ಕವಿ ಇನ್ನೊಂದು ಪಂಥದವನು ಎಂಬ ಉದಾಸೀನ ಶುರುವಾದ ತಕ್ಷಣ, ಅಂಥ ಕವಿಯಿಂದ ದಕ್ಕುವ ಅನೇಕ ಅರ್ಥಸಾಧ್ಯತೆಗಳು, ಭಾಷಿಕ, ಶಾಬ್ದಿಕ ಆಯಾಮಗಳು ನಮಗೆ ದಕ್ಕದೇ ಹೋಗುತ್ತವೆ. ಬೇಂದ್ರೆ, ಅಡಿಗರ ಜಾತಿಗಳ ಬಗ್ಗೆ ಮೂಗು ಮುರಿದು ಅವರ ಕಾವ್ಯವನ್ನು ಮುಚ್ಚಿಟ್ಟವರು, ಸಿದ್ಧಲಿಂಗಯ್ಯನವರ ಕಾವ್ಯ ಬರೀ ಘೋಷಣೆ ಎಂದು ಬಾಗಿಲು ಮುಚ್ಚಿಕೊಂಡವರು -ಈ ಎರಡೂ ಬಗೆಯ ಓದುಗರೂ ವಿಭಿನ್ನ ಕಾವ್ಯಪ್ರಯೋಗಗಳಿಂದ ಕಲಿಯುವ ಸಾಧ್ಯತೆಗಳಿಂದ ವಂಚಿತರಾಗುತ್ತಿರುತ್ತಾರೆ.
ಅನೇಕ ಸಲ ಕೆಲ ಬಗೆಯ ಸೈದ್ಧಾಂತಿಕ ಅಡೆತಡೆಗಳು; ಒಂದೇ ಥರದ್ದನ್ನು ಒಂದೇ ರೀತಿ ಓದುವ ನಮ್ಮ ಓದಿನಲ್ಲಿರುವ ಏಕತಾನತೆಗಳು; ಜೊತೆಗೆ ಗದ್ಯದ ಬಗೆಗೆ ಅತಿಯಾದ ಒಲವು… ಎಲ್ಲ ಸೇರಿ ಕಾವ್ಯದ ಓದಿಗೆ ಅನೇಕ ಅಡೆತಡೆಗಳು ನಿರ್ಮಾಣವಾದಂತಿವೆ. ಅಥವಾ ಮಾಧ್ಯಮ ಸಂಸ್ಕೃತಿಯಿಂದಾಗಿ ಗದ್ಯವೇ ಈ ಕಾಲದ ಪ್ರಕಾರ ಎಂಬ ಭ್ರಮೆ ಬೆಳೆಯುತ್ತಿರಲೂಬಹುದು. ಅದರಲ್ಲೂ ನಿತ್ಯ ಜನಬಳಕೆಯ ಡಿಜಿಟಲ್ ಸಂಸ್ಕೃತಿಯ ‘ಕಿರುಚು ಗದ್ಯ’, ಅಥವಾ ‘ವಾದ-ವಾಗ್ಯುದ್ಧಗಳ ಗದ್ಯ’ ಇಂಥವೇ ಈ ಕಾಲದ ನಿಜವಾದ ಟ್ರೆಂಡ್ ಎಂದು ಕವಿ, ಕವಯಿತ್ರಿಯರು ಕೂಡ ನಂಬತೊಡಗಿದ್ದಾರೆಯೇ?
ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ‘ಈಚೀಚೆಗೆ ಯಾಕೋ ನನಗೆ ಕಾವ್ಯ ‘ಡೈಯಿಂಗ್ ಫಾರ್ಮ್’ ಅನಿಸತೊಡಗಿದೆ, ಇದಕ್ಕೆ ಏನಾದರೂ ಮಾಡಬೇಕಲ್ಲ? ಸುಮ್ಮನೆ ಒಳ್ಳೆಯ ಕವಿತೆಗಳನ್ನು ಓದುವ, ಶೇರ್ ಮಾಡುವ ಸಂಸ್ಕೃತಿ ಹುಟ್ಟು ಹಾಕಬೇಕಲ್ಲ?’ ಎಂದು ನಿಜವಾದ ಆತಂಕ, ಕಾಳಜಿಯಿಂದ ಒಬ್ಬ ಕವಿಗೂ, ಕವಯಿತ್ರಿಗೂ ಹೇಳಿದೆ; ಅವರಾಗಲೀ, ಉಳಿದ ಒಬ್ಬಿಬ್ಬರು ಒಳ್ಳೆಯ ಕವಿಗಳಾಗಲೀ ಈ ಅಂಶವನ್ನು ಗಂಭೀರವಾಗಿ ತೆಗೆದುಕೊಂಡಂತೆ ಕಾಣಲಿಲ್ಲ! ತಾವು ಶೋಧಿಸುತ್ತಿರುವ ಸಾಹಿತ್ಯ ಪ್ರಕಾರದ ಬಗ್ಗೆ ಈ ಕಾಲದಲ್ಲಿ ಹಬ್ಬುತ್ತಿರುವ ಉದಾಸೀನ ಕುರಿತ ಕಠೋರ ಸತ್ಯವನ್ನು ಕವಿಗಳು ಕೂಡ ಕಣ್ಣಲ್ಲಿ ಕಣ್ಣಿಟ್ಟು ನೋಡಲು ಸಿದ್ಧರಿದ್ದಂತಿರಲಿಲ್ಲ.
ಯಾರು ಓದದಿದ್ದರೂ ಕವಿತೆ ಉಳಿಯುತ್ತದೆ ಎಂಬ ನಂಬಿಕೆ, ಆತ್ಮವಿಶ್ವಾಸ ಹಲವರಿಗೆ ಇರಬಹುದು. ಆದರೆ ಮುಗ್ಧ ನಂಬಿಕೆ, ಹುಂಬ ಆತ್ಮವಿಶ್ವಾಸಗಳನ್ನು ಕೆಲ ಬಗೆಯ ರಾಕ್ಷಸ ವೇಗಕ್ಕೆ ಸಿಲುಕಿದ ಸಂಸ್ಕೃತಿಗಳ ನಿರ್ದಯ ನಾಗಾಲೋಟಗಳು ಲೆಕ್ಕಕ್ಕೇ ತೆಗೆದುಕೊಳ್ಳುತ್ತಿರುವುದಿಲ್ಲ; ಹಲವು ದಶಕಗಳ ಕೆಳಗೆ ಜೀ.ಶಂ. ಪರಮಶಿವಯ್ಯ, ಎಚ್. ಎಲ್. ನಾಗೇಗೌಡ, ಈಚಿನ ಕುರುವ ಬಸವರಾಜ್ ಥರದ ಹತ್ತಾರು ಜನ ವಿದ್ವಾಂಸರು ಜನಪದ ಸಾಹಿತ್ಯವನ್ನು ಕೇವಲ ಪ್ರೀತಿಯಿಂದ ಕಲೆ ಹಾಕದಿದ್ದರೆ ಆ ಅಮೂಲ್ಯ ಲೋಕ ಎಂದೋ ಕಳೆದು ಹೋಗುತ್ತಿತ್ತು! ಹಾಗೆಯೇ ವಚನಗಳ ಓಲೆಕಟ್ಟುಗಳನ್ನು ಪೂಜೆಗಿಟ್ಟಿದ್ದ ಜನಸಾಮಾನ್ಯರು, ಮಠಗಳು, ನಂತರದ ಶೂನ್ಯ ಸಂಪಾದನಕಾರರು ವಚನಗಳನ್ನು ರಕ್ಷಿಸದಿದ್ದರೆ ಆ ಅದ್ಭುತ ಭಂಡಾರ ಕೂಡ ಕಾಲದ ಓಟದಲ್ಲಿ ಕಾಣೆಯಾಗಿರುತ್ತಿತ್ತು. ಇದೆಲ್ಲವನ್ನೂ ಮತ್ತೆ ಎಲ್ಲರಿಗೂ ನೆನಪಿಸುವ ಕಾಲ ಬಂದಂತಿದೆ!
ಈ ಹಿನ್ನೆಲೆಯಲ್ಲಿ ನೋಡಿದಾಗ, ಈ ಕಾಲದಲ್ಲಿ ಕಾವ್ಯದ ಶಕ್ತಿಯನ್ನು ನಂಬಿದವರು ಕೂಡ ಕಾವ್ಯವನ್ನು ಪ್ರೀತಿಯಿಂದ ಓದದೆ, ಗ್ರಹಿಸದೆ, ಅದನ್ನು ಹೊಸಬರಿಗೆ ಸರಿಯಾಗಿ ಹೇಳಿಕೊಡದೆ, ಅಥವಾ ಯಾವ್ಯಾವುದೋ ಪೂರ್ವಗ್ರಹಗಳಿಂದಾಗಿ ಕಾವ್ಯವನ್ನು ನಿರ್ಲಕ್ಷಿಸುತ್ತಿದ್ದಾರೆಯೆ ಎಂಬ ಪ್ರಶ್ನೆ ಎದುರಾಗುತ್ತದೆ. ಅಥವಾ ಕಾವ್ಯ ಧ್ವನಿಸುವ ಸೂಕ್ಷ್ಮ ಸತ್ಯಗಳನ್ನು ಗಮನಿಸುವ ವ್ಯವಧಾನವೇ ಈ ಗದ್ಯ ಯುಗದಲ್ಲಿ ಕಳೆದು ಹೋಗುತ್ತಿದೆಯೆ? ನಮ್ಮ ತಲೆಯೊಳಗಿನ ವಿಚಿತ್ರ ಕಗ್ಗಂಟುಗಳಿಂದಾಗಿ, ಕಾವ್ಯವನ್ನು ಓದದೆ, ಭಾಷೆಯ ಸೂಕ್ಷ್ಮಾತಿಸೂಕ್ಷ್ಮ ಅಭಿವ್ಯಕ್ತಿಯಾದ ಕಾವ್ಯದ ಬಗ್ಗೆ ಪ್ರೀತಿ ಹುಟ್ಟಿಸದೆ ನಾವೇ ಅದನ್ನು ಕೊಲ್ಲುತ್ತಿದ್ದೇವೆಯೆ? ಅಥವಾ ವಚನ ಸಾಹಿತ್ಯದಂತೆ ವಿಶಾಲವಾದ ಸಾಮಾಜಿಕ ಉದ್ದೇಶವನ್ನೂ ರೂಪಕಗಳ ಭಾಷೆಯ ಸಾಧ್ಯತೆಯನ್ನೂ ಆಳವಾಗಿ ಶೋಧಿಸಲಾಗದೆ, ರೂಪಕದ ಸಹಜ ಅಖಾಡವಾದ ಕಾವ್ಯದ ಅವಸಾನ ಶುರುವಾಗಿದೆಯೆ?
1998ರ ಸುಮಾರಿಗೆ, ಮಿಲನ್ ಕುಂದೇರನ ‘ದ ಅನ್ ಬೇರಬಲ್ ಲೈಟ್ನೆಸ್ ಆಫ್ ಬೀಂಗ್’ ಕಾದಂಬರಿಯಲ್ಲಿ ‘ರೂಪಕಗಳ ಜೊತೆ ಹುಡುಗಾಟ ಆಡಬಾರದು’ (‘Metaphors are not to be trifled with’) ಎಂಬ ಮಾತು ಕಂಡಾಗ ಅದರ ಅದ್ಭುತ ಒಳನೋಟಕ್ಕೆ ಬೆರಗಾಗಿದ್ದೆ. ಅದರ ಪ್ರೇರಣೆಯಿಂದ ಕೂಡ ‘ರೂಪಕಗಳ ಸಾವು’ ಎಂಬ ಪದ್ಯ ಬರೆದಾಗ ನನಗಿದ್ದ ಆತಂಕ ರೂಪಕಗಳನ್ನು ಕೊಲ್ಲುವ ಖೂಳ ಸಮಾಜ, ಕೋಮುವಾದಿ ರಾಜಕೀಯ, ಧರ್ಮದ ಮುಖವಾಡ ಹೊತ್ತ ಅಧರ್ಮ ಇವನ್ನೆಲ್ಲ ಕುರಿತಾದದ್ದಾಗಿತ್ತು. ಆಗ ಆ ಪದ್ಯ ಬರೆಯುತ್ತಿದ್ದಾಗ ಹಠಾತ್ತನೆ ಹುಟ್ಟಿದ ಒಂದು ಸಾಲು ಇದು:
ರೂಪಕಗಳೇ ಸತ್ತರೆ ಹುಲು ಮಾನವರೆಲ್ಲಿ ಉಳಿಯುವರು
ಅವರು ವಾಸ್ತವದ ಉರಿ ತಾಕಿ ಹುಳುಗಳಂತೆ ಅಳಿಯುವರು
ಅಳಿಯದೇ ಉಳಿದವರು ಕಟುವಾಸ್ತವದ ಕ್ಲೀಷೆಗಳಲ್ಲಿ ನರಳುವರು.
ನಮ್ಮನ್ನು ನಾವೇ ಉಲ್ಲೇಖಿಸಿಕೊಳ್ಳುವುದು ಅಶ್ಲೀಲ, ನಿಜ! ಆದರೆ, 1992ರಲ್ಲಿ ಅದೃಷ್ಟವಶಾತ್ ಹೊಳೆದ ಒಂದು ತಾತ್ವಿಕ ಒಳನೋಟದಂತಿದ್ದ ಆ ಸಾಲು ಇವತ್ತು ಕಾವ್ಯ ಕುರಿತ ಕಣ್ಣೆದುರಿಗಿನ ಕಟು ವಾಸ್ತವವೇ ಆಗಿಬಿಟ್ಟರೆ, ಆ ವಾಸ್ತವವನ್ನು ನುಂಗಿಕೊಳ್ಳಲು ಕಸಿವಿಸಿಯಾಗುತ್ತದೆ. ಇದನ್ನು ಬದಲಿಸಲು ಏನಾದರೂ ಮಾಡಲೇಬೇಕೆಂದು ಒಂದು ನೂರು ಜನಕ್ಕಾದರೂ ಖಚಿತವಾಗಿ ಅನ್ನಿಸಿದರೆ ಸಾಕು: ಕಾವ್ಯದ ಓದಿಗೆ ಮರು ಜೀವ ತುಂಬಬಹುದು. ಆ ಮೂಲಕ ಕನ್ನಡ ಸಾಹಿತ್ಯಕ ಸಂಸ್ಕೃತಿಗೆ ಕೂಡ! https://natarajhuliyar.com
Comments
0 Comments
Add Comment