ಕೃತಿಯೊಂದು ಪಿಸು ನುಡಿವ ಮೋಹಕ ಪರಿ

ಇದೊಂದು ಓದಿನ ಸಹಜ ಟೆಸ್ಟ್. ಓದುಗರಾಗಿ ನಿಮಗೂ ಆಗಾಗ ಹೀಗಾಗುತ್ತಿರುತ್ತದೋ ಇಲ್ಲವೋ, ಒಮ್ಮೊಮ್ಮೆ ನೀವೇ ಟೆಸ್ಟ್ ಮಾಡಿಕೊಳ್ಳಿ. 

ಇಸವಿ 2019. ಲಂಕೇಶರ ಪ್ರಾತಿನಿಧಿಕ ಬರಹಗಳ ಇಂಗ್ಲಿಷ್ ಅನುವಾದಗಳ ಸಂಕಲನ ‘ಡಾರ್ಕ್ ಅರ್ತ್’ಗೆ ಕತೆ, ಬರಹಗಳನ್ನು ಅಚ್ಚಿಗೆ ಸಿದ್ಧಪಡಿಸುತ್ತಿದ್ದ ಕಾಲದ ಸುಂದರ ಸೃಜನಶೀಲ ಒತ್ತಡದ ಬೆಳಗು! ಬೆಳ್ಳಂಬೆಳಗಿನ ಜಾವ ಸೂಸನ್ ಡೇನಿಯಲ್ ಅನುವಾದಿಸಿದ ಲಂಕೇಶರ ‘ದಾಳಿ’ ಕತೆಯ ಇಂಗ್ಲಿಷ್ ಅನುವಾದ ‘ದ ಇನ್ವೇಶನ್’ ಕತೆಯಲ್ಲಿ ಸಣ್ಣ ಪುಟ್ಟ ಎಡಿಟಿಂಗ್ ಮಾಡುತ್ತಾ ಮತ್ತೆ ಮತ್ತೆ ಕೆಲವು ಪ್ಯಾರಾಗಳನ್ನು ಓದುತ್ತಿದ್ದೆ. ನೋಡನೋಡುತ್ತಲೇ ಗಂಟೆ ಆರೂವರೆ ಆಗತೊಡಗಿತ್ತು. ಓದುತ್ತಾ ಓದುತ್ತಾ… ಇದು ಯಾವ ಕತೆ, ಇದು ಯಾವ ಭಾಷೆಯ ಕತೆ ಎಂಬುದೇ ಮರೆತು ಹೋಗಿ ಕೇವಲ ಕಥಾಲೋಕವೊಂದೇ ನನ್ನೆದುರಿಗಿತ್ತು.

ಕತೆಯ ಬಿಡಿ ವಿವರಗಳು, ಘಟನಾವಳಿಗಳು, ಪಾತ್ರ-ಸನ್ನಿವೇಶಗಳ ಉದ್ವಿಗ್ನತೆ, ಭಯ, ನಿರೀಕ್ಷೆ, ಪ್ರೇಮ, ಕಾಮ, ಬಿಗಿದ ತಂತಿಯಿಂದ ಠಣ್ಣೆಂದು ಚಿಮ್ಮಿದ ಸ್ವರದಂತಿದ್ದ ಗದ್ಯ ಲಯ, ಸೇಡು, ರೋಮಾಂಚನ; ಜಾತಿ, ಧರ್ಮಗಳ ವಿಚಿತ್ರ ಒಳಸತ್ಯಗಳು, ಎಲ್ಲ ಎಲ್ಲೆಗಳನ್ನೂ ಮೀರುವ ಮಾನವ ಚೈತನ್ಯ, ಕತೆಯೇ ಉಸುರುವ ವಿಶಿಷ್ಟ ಸತ್ಯಗಳು, ಚರಿತ್ರೆಯ ಘಟನಾವಳಿಗಳ ಹೊಸ ಅರ್ಥಗಳು, ಸಂಕೇತಗಳು, ಮಾತಿನ ಪರಿಣಾಮ, ಭಾಷೆಯ ತೀವ್ರತೆ... ಇನ್ನೂ ಏನೇನೋ ನನ್ನನ್ನು ಆವರಿಸಿಕೊಳ್ಳತೊಡಗಿದವು. ಇಂಗ್ಲಿಷ್ ಭಾಷೆಯಲ್ಲೂ ಲಂಕೇಶರ ಕನ್ನಡದ ಒಗರು, ಬನಿ, ತಕ್ಷಣ ತಾಕುವ ಗುಣ… ಇವೆಲ್ಲ ಹಾಗೇ ಉಳಿದಿದ್ದವು.

ಅರೆರೆ! ಈ ಕತೆ ನಿಜಕ್ಕೂ ವಿಶಿಷ್ಟ ಕತೆ ಎನ್ನಿಸತೊಡಗಿತು. ಬರಬರುತ್ತಾ ಅದದ್ದು ಮಾತ್ರ ನಿಜಕ್ಕೂ ಸ್ಪಿರಿಚುಯಲ್ ಅನುಭವ! ಆಗ ಏನಾಯಿತೆಂದರೆ… ಇದು ಲಂಕೇಶ್ ಕತೆಯೋ, ತೇಜಸ್ವಿ ಕತೆಯೋ ಯಾವುದೂ ನನ್ನ ಪ್ರಜ್ಞೆಯಲ್ಲೇ ಇರದೆ ಕೇವಲ ಕತೆಯಷ್ಟೇ ನನ್ನ ಜೊತೆ ಮಾತಾಡತೊಡಗಿತು. ಮೂಲದಲ್ಲಿ ಇದೊಂದು ಕನ್ನಡ ಕತೆ ಎಂಬುದು ಕೂಡ ಮರೆತು ಹೋಗಿ ಇಂಗ್ಲಿಷ್ ಕತೆಯಷ್ಟೇ ನನ್ನೊಡನೆ ಮಾತಾಡತೊಡಗಿತು. ತನ್ನ ಅಸಾಮಾನ್ಯ ಗುಣಗಳನ್ನು ನನಗೆ ಮತ್ತೆ ಮನವರಿಕೆ ಮಾಡಿಕೊಡತೊಡಗಿತು. 

ಇದು ಕತೆಯೊಂದು ತನ್ನ ಸೃಷ್ಟಿಕರ್ತನ ಹಂಗು ಕಳೆದುಕೊಂಡು ನಮ್ಮದಾಗುವ ಪರಿ. ಯಾವುದೇ ಬರಹವೊಂದು ತನ್ನ ಮೂಲ ಅಥವಾ ಬರೆದವರ ಹೆಸರು, ಹಿನ್ನೆಲೆ ಯಾವುದರ ಹೊರೆಯೂ ಇಲ್ಲದೆ, ಅದು ನಿಜಕ್ಕೂ ಶ್ರೇಷ್ಠವೆಂದು ನಮ್ಮೊಳಗು ‘ಮೆಚ್ಚಿ ಅಹುದಹುದು’ ಎಂದು ಒಪ್ಪುವಂತೆ ಮಾಡುವ ವಿಸ್ಮಯಕರ ರೀತಿ ಇದು. ಇದೇ ನಿಜವಾದ ವಸ್ತುನಿಷ್ಠ ಆಯ್ಕೆಯತ್ತ ನಮ್ಮನ್ನು ಕರೆದೊಯ್ಯುವ ಅಪ್ರಜ್ಞಾಪೂರ್ವಕ ಹಾದಿ ಎಂದು ಅವತ್ತು ಮತ್ತೆ ಗಾಢವಾಗಿ ಅನ್ನಿಸತೊಡಗಿತು. ಇದು ನಮ್ಮ ಓದು, ಆಯ್ಕೆ, ವಿಮರ್ಶೆಗಳಲ್ಲಿ ಸಾಧ್ಯವಾದಾಗ ಮಾತ್ರ ಎಲ್ಲ ಹಂಗು ಮೀರಿದ ಗ್ರಹಿಕೆ ಮತ್ತು ಆಯ್ಕೆ ಸಾಧ್ಯವಾಗಬಲ್ಲದು.

ಈ ಥರ ನಿಮಗೂ ಆಗುತ್ತಿದ್ದರೆ ಮಾತ್ರ ನೀವು ಮುಕ್ತ ಓದುಗರು ಎಂದರ್ಥ! ಆಗ ನಿಮ್ಮ ಕೈಯಲ್ಲಿರುವ ಕೃತಿಯ ದೋಷಗಳೂ ಹೊಳೆಯಬಹುದು. ಅದು ಕೂಡ ವಸ್ತುನಿಷ್ಠ ಓದಿನ ಭಾಗವೇ. ಲೇಖಕ, ಲೇಖಕಿಯರ ಪ್ರಭಾವಳಿ ಮೀರಿ ಕೃತಿಯ ಗುಣ, ದೋಷಗಳು ಕಾಣುವ ಈ ಬಗೆ ಕೂಡ ಒಂದು ದೃಷ್ಟಿಯಿಂದ ಐಡಿಯಲ್. ಅಲ್ಲಿ ಕಂಡ ಗುಣ, ದೋಷಗಳೆರಡೂ ನಮಗೆ ಗುರುಗಳೇ: ಗುಣ ಕಂಡಾಗ ಈ ಥರ ಬರೆಯಬಹುದು ಎನ್ನುವ ಮಾದರಿ; ದೋಷ ಕಂಡಾಗ, ಈ ಥರ ಬರೆಯಬಾರದೆನ್ನುವ ಎಚ್ಚರಿಕೆ! ಇದಕ್ಕಿಂತ ಸಹಜ ಏಕಲವ್ಯ ಕಲಿಕೆ ಇನ್ಯಾವುದಿದೆ!

ಏನನ್ನು ತಪ್ಪಿಸಿಕೊಂಡರೂ, ಅದೃಷ್ಟವಶಾತ್ ಲೋಕದ ಶ್ರೇಷ್ಠ ಕೃತಿಗಳ ಸಂಗವನ್ನು ಮಾತ್ರ ಎಂದೂ ತಪ್ಪಿಸಿಕೊಳ್ಳದ ನನಗೆ ಈ ಥರದ ಪರವಶತೆಯ, ಕಲಿಕೆಯ ಅನುಭವ ಆಗಾಗ್ಗೆ ಆಗುತ್ತಿರುತ್ತದೆ. ಎಷ್ಟೋ ಸಲ ಪ್ರತಿ ನಿತ್ಯ, ಹಗಲು ರಾತ್ರಿ ಆಗುತ್ತಿರುತ್ತದೆ! ಇದು ಕತೆ, ಥಿಯರಿ, ಕಾವ್ಯ, ತತ್ವಜ್ಞಾನ, ನಾಟಕ ಯಾವ ಪ್ರಕಾರಕ್ಕೆ ಸೇರಿದ ಕೃತಿಗಳಿಂದಲಾದರೂ ಆಗುತ್ತಿರಬಹುದು. ಈ ವಿಷಯದಲ್ಲಿ ಮಾತ್ರ ನಾನು ಭಾಗ್ಯಶಾಲಿ. ಬರೆದವರ ಹೆಸರು, ಪುಸ್ತಕದ ಹೆಸರು ಎಲ್ಲ ಮರೆತು ಹೋದರೂ ಈ ಅನುಭವ ಮಾತ್ರ ನನ್ನಲ್ಲಿ ಉಳಿದು ಬೆರೆತು ಹೋಗಿರುತ್ತದೆ; ಕರೆಯದಿದ್ದರೂ, ಕರುಣಾಳು ಬೆಳಕಿನಂತೆ ಬಂದು ಎಂಥೆಂಥದೋ ಮಬ್ಬಿನಲ್ಲಿ ಕೈ ಹಿಡಿದು ಮುನ್ನಡೆಸುತ್ತಿರುತ್ತದೆ.

ಇದನ್ನೆಲ್ಲ ಈಗ ಬರೆಯಲು ಕಾರಣ- ಶನಿವಾರ (14 ಅಕ್ಟೋಬರ್ 2023) ಮಧ್ಯಾಹ್ನ ಸುಮ್ಮನೆ ಗೆಳೆಯರೊಬ್ಬರ ಸಮಗ್ರ ಕಾವ್ಯ ಸಂಕಲನ ತಿರುವಿ ಹಾಕುತ್ತಾ ಹಾಯ್ದು ಹೋದ ಅನುಭವ. ಎಲ್ಲೆಂದರಲ್ಲಿ ಆರಾಮಾಗಿ ಉರುಳಿಕೊಂಡು, ಅಥವಾ ಗೋಡೆಗೋ ಕುರ್ಚಿಗೋ ವಿರಾಮವಾಗಿ ಒರಗಿಕೊಂಡು, ಓದಲು ಆಗದ ಪುಸ್ತಕಗಳಿಗೆ ಓದಿಸಿಕೊಳ್ಳುವ ಭಾಗ್ಯ ಕಡಿಮೆ ಎಂಬ ಗುಟ್ಟು ಎಲ್ಲರಿಗೂ ಗೊತ್ತಿರಲಿ! ಈ ಕಾಲಕ್ಕೆ ಭಾರೀ ಗಾತ್ರದ್ದೇ ಎನ್ನಬಹುದಾದ 600 ಪುಟಗಳ ಈ ಸಂಕಲನವನ್ನು ಕೂಡ ಉರುಳಿಕೊಂಡು ಸುಮ್ಮನೆ ಎಲ್ಲೆಲ್ಲೋ ಪುಟ ತೆರೆದಂತೆ…ಒಂದಲ್ಲ ಒಂದು ಪ್ರತಿಮೆ, ರೂಪಕ, ಝಲಕ್, ಮಿಂಚು, ಚಿನ್ನಾಟ, ಬೆರಗು, ತತ್ವಜ್ಞಾನ, ಗಾಢ ದರ್ಶನ, ನಿಜ ಮುಗ್ಧತೆ, ಆರೋಗ್ಯ…ಅಥವಾ ಇವೇನೂ ಇಲ್ಲದ ಥಣ್ಣನೆಯ ಬಣ್ಣನೆ… ಏನೆಲ್ಲ ತೇಲಿ ಬರತೊಡಗಿದವು…ಪುಸ್ತಕದ ಗಾತ್ರ ಕೂಡ ಮರೆತು ಹೋಯಿತು. ಯಾವ ವಿವರಣೆಯ ಗೋಜಿಗೂ ಹೋಗದೆ ಅಂಥ ಕೆಲವು ಪ್ರತಿಮೆಗಳನ್ನು ಇಲ್ಲಿ ಸುಮ್ಮನೆ ಸಿಂಪಡಿಸುವೆ:
ಸುಮಾರು ನಲವತ್ತೈದು ವರ್ಷಗಳ ಹಿಂದಿನ ಮೊಟ್ಟ ಮೊದಲ ಪದ್ಯದಲ್ಲೇ ಕಂಡ ಸಾಲು:

ನನ್ನ ಬಾಯಿಗೆ ಹುಳ ಬಿದ್ದ ದಿನದಿಂದ
ಗುಪ್ತರೋಗದ ಬಾಧೆ


ಮುಂದೆ ಎಲ್ಲೆಂದರಲ್ಲಿ ಕಣ್ಣಿಗೆ ಬಿದ್ದ ಹಲವು ಹತ್ತು ಸಾಲು:

ಇವು ರೈತರನ್ನು ಇಡೀ ನುಂಗಬಲ್ಲವು
ಬೇಡರನ್ನೇ ಚಿಗಿಯಬಲ್ಲವು
----
ಎಲ್ಲಿ ಹೋದವು ಕನಸಿನ ಹಕ್ಕಿಗಳು
ಜೀವ ರೆಕ್ಕೆಯ ಬಡಿದು

----
ಏಕಾಂಗಿ ಏಕಾಂಗಿ
ಬರಲವ್ವ ಬೆಳಕು ಸಾಗಿ

----

ನಿನ್ನ ಸಿಟ್ಟಿನ ದೆವ್ವ ಕರಗಲವ್ವ
ಮನೆಮನೆಯ ಕಣ್ಣುಗಳು ಬೆಳಗಲವ್ವ
-----
ಮಿರಾಂಡಳ ಹಾದಿ ತುಂಬಿದವು
ಮಂದಾರ ಹೂವು
-----
ಪುಟ್ಟ ಹಿಡಿಯೊಳಗಿಷ್ಟು ಮರಳು
ತನ್ಮಯದಿ ನಿರ್ಮಿಸಿದ ಮನೆ ಮರುಳು
----
ನಡುಹಗಲ ಧಗೆಯಲ್ಲಿ ಧೂಳು ಮಾರುವವರು
ನಿರ್ಬೀಜ ದಲ್ಲಾಲಿಗಳು, ನೀರು ವ್ಯಾಪಾರಿಗಳು
ತವಕದೂರಿನ ಯೋನಿ ಉಲ್ಲಾಸ ವಿತರಕರು
ಬೆಳೆದ ಭೂಮಿಯಲ್ಲೊಂದು ಪ್ರಳಯದ ಕಸ ನೆಟ್ಟವರು…
----
ಕಿತ್ತ ಕಂಕಣದಲ್ಲಿ, ಮುರಿದ ಬಾಸಿಂಗದಲ್ಲಿ
ಸವೆದ ಮದುವೆಯ ಆಟಕ್ಕೆ        
ಜನ ನೆರೆದ ಜಾತ್ರೆ ಮುಗಿದ ಸಂಜೆಗೇ ಒಬ್ಬಂಟಿ 
ಏಕಾಕಿ…
----
ನೀನು ಬರುವ ದಾರಿಯಲ್ಲಿ ಖಡ್ಗ ಜಾರಿ ಬಿದ್ದಿತೆ
ಕೈಯ ಮುಗಿದು ಎದ್ದಿತೆ, ಮನಸು ಮನಸ ಮಿದ್ದಿತೆ?
----
ಸಂಭ್ರಮಿಸದಿರು ಕಂಡ್ಯ ಮನವೆ 
ಸಂಭ್ರಾಂತಿಯ ಕೂಸು ನಾವು
----
ಕುರಿಯ ಹಿಂಡಿನಲ್ಲಿ ತೋಳ
ಹೊಕ್ಕು ಬಂದ ಕಾಲ ಕಾಳ
ಹಿಡಿದು ತುಡುಕಿತೇ…

ಇಂಥ ಅಥವಾ ಇವಕ್ಕಿಂತ ಸುಂದರವಾದ ಪ್ರತಿಮೆಗಳನ್ನು ಕೊಡುತ್ತಲೇ ಹೋಗಬಹುದು. ಅದಿರಲಿ! ಈ ನುಡಿ ಚಿತ್ರಗಳು ನನ್ನೊಡನೆ ಮಾತಾಡುತ್ತಿರುವಾಗಲೇ ನನ್ನ ಕೈ ನನಗರಿವಿಲ್ಲದೆಯೇ ಮೆಸೇಜ್ ಒತ್ತಿತು: ‘ಸುಮ್ಮನೆ ಯಾವ ಪುಟ ತೆರೆದರೂ  ಒಂದಲ್ಲ ಒಂದು ಕಾಡುವ ಪ್ರತಿಮೆ ಕಾಣುತ್ತಿರುವ ಈ ಪದ್ಯಗಳನ್ನು ಬರೆದ ನೀವು ಅಸಲಿ ಕವಿ… ನಿಮಗೆ ಹ್ಯಾಟ್ಸ್ ಆಫ್!’ 
ಕಳೆದ ಐವತ್ತು ವರ್ಷಗಳಲ್ಲಿ ಇಂಥ ಸಾವಿರಾರು ಪ್ರತಿಮೆಗಳನ್ನು ಆಗಾಗ ಸೃಷ್ಟಿಸುತ್ತಾ ಬಂದಿರುವ ‘ಉರಿಯ ಗಿರಿಯನೇರಿ’ ಸಮಗ್ರ ಕಾವ್ಯಸಂಕಲನದ ಕವಿ ಚಂದ್ರಶೇಖರ ತಾಳ್ಯ ಗಂಭೀರ ಕಾವ್ಯೋದ್ಯೋಗಿ ಹಾಗೂ ಪೂರ್ಣಾವಧಿ ಕವಿಯೆಂಬುದು ಹಲವರಿಗೆ ಗೊತ್ತಿದೆ. ಅದನ್ನು ಬಾಯಿಬಿಟ್ಟು ಹೇಳಲು ಹಲವರಿಗೆ ಸಂಕೋಚ ಇದ್ದಂತಿದೆ! ತಾಳ್ಯ ಅವರನ್ನು ನಾನು ಜೀವನದಲ್ಲಿ ಐದು ಸಲ ಕಂಡಿರಬಹುದು; ಇನ್ನು ಬರೇ ಹತ್ತು ಸಲ ಐದಾರು ನಿಮಿಷ ಫೋನಿನಲ್ಲಿ ಮಾತಾಡಿರಬಹುದು. ಆದರೆ ಇದೀಗ ಅವರ ಕಾವ್ಯ ಮಾತ್ರ ಜೀವಮಾನದ ಗೆಳೆಯನಂತೆ ನನ್ನೊಡನೆ, ನನ್ನ ಸಂವೇದನೆಯೊಡನೆ ಮಾತಾಡತೊಡಗಿತು. ನಮ್ಮಂಥ ಮನುಷ್ಯಮಾತ್ರರಿಗೆ ಆಗಾಗ ಒದಗುವ ಈ ಗಳಿಗೆಯ ನಿರ್ಮಲ ಮನಸ್ಥಿತಿಯ  ಸೌಂದರ್ಯವನ್ನು ಸೂಚಿಸಲು ಆ ಸಾಲುಗಳನ್ನು ಸುಮ್ಮನೆ ಲ್ಯಾಪ್ ಟಾಪಿನ ಮೇಲೆ ಟೈಪ್ ಮಾಡತೊಡಗಿದೆ…ಈ ನಡುವೆ, ಚಂದ್ರಶೇಖರ ತಾಳ್ಯರಿಗೆ ಜಾತ್ಯತೀತ ನೋಟ ಕಲಿಸಿದ ಅವರ ಸಾಕು ತಂದೆ ವಜ್ರಾಚಾರಿಯವರಿಗೆ ಕೃತಿಯ ಅರ್ಪಣೆ ನೋಡಿದೆ. ಮತ್ತೆ ಕವಿತೆಗಳ ಮೇಲೆ ಕಣ್ಣಾಡಿಸಿದೆ. ವಜ್ರಾಚಾರಿಯವರ ಜಾತ್ಯತೀತ ಉಳಿಪೆಟ್ಟು ಎಲ್ಲೆಡೆ ಕಂಡೂ ಕಾಣದಂತೆ ಬಿದ್ದಿರುವುದು ಕೂಡ ಮೆಲ್ಲಗೆ ಅರಿವಿಗೆ ಬರತೊಡಗಿತು.   

ನನ್ನ ಓದಿನ ಇಂಥ ಹತ್ತಾರು ಗಳಿಗೆಗಳು ನೆನಪಾಗುತ್ತವೆ. ಹದಿನೈದು ವರ್ಷಗಳ ಕೆಳಗೆ ಬಂಜಗೆರೆ ಜಯಪ್ರಕಾಶ್ ತಮ್ಮ ಆವರೆಗಿನ ಎಲ್ಲ ಕವನ ಸಂಕಲನಗಳನ್ನು ನನ್ನ ಕೈಗೆ ಕೊಟ್ಟರು. ಆಗ ಬಂಜಗೆರೆಯವರ ಪುಸ್ತಕಗಳನ್ನು ಹೆಚ್ಚು ಗಮನಿಸಿರಲಿಲ್ಲ. ಅವರನ್ನು ಕಂಡಿದ್ದರೂ, ಸರಿಯಾಗಿ ಭೇಟಿ ಮಾಡಿ ಮಾತಾಡಿದ್ದು ಕೂಡ ನೆನಪಿರಲಿಲ್ಲ. ಸರಿ, ಮನೆಗೆ ಬಂದು ಅವರ ಪದ್ಯಗಳನ್ನು ಸುಮ್ಮನೆ ತಿರುವಿ ಹಾಕತೊಡಗಿದರೆ, ಆ ಪ್ರತಿಮೆಗಳೇ ನನ್ನೊಡನೆ ಮಾತಾಡತೊಡಗಿದವು. ಈ ಪದ್ಯಗಳನ್ನು ಬರೆದವನು ಕನ್ನಡದ ಅಪ್ಪಟ ಪೊಲಿಟಿಕಲ್ ಪೊಯೆಟ್ (ಅಸಲಿ ರಾಜಕೀಯ ಕವಿ) ಅನ್ನಿಸತೊಡಗಿತು. ಓದುತ್ತಾ ಓದುತ್ತಾ ಅದು ಮತ್ತೆ ಮತ್ತೆ ಖಾತ್ರಿಯಾಗತೊಡಗಿತು. ಅವರ ಕಾವ್ಯದ ಬಗ್ಗೆ ಒಂದೇ ಸಿಟ್ಟಿಂಗಿನಲ್ಲಿ ಪುಟಗಟ್ಟಲೆ ಬರೆದೆ; ಮುಂದೊಮ್ಮೆ ಅವರ ಎಲ್ಲ ಬಗೆಯ ಪದ್ಯಗಳ ಸಮಗ್ರ ಕಾವ್ಯಕ್ಕೂ ಇನ್ನಷ್ಟು ಮಾತು ಬರೆದೆ. ಆಗ ಕೂಡ ಅವರ ಕಾವ್ಯ ಕುರಿತ ಹಿಂದಿನ ಅಭಿಪ್ರಾಯ ಹಾಗೇ ಇತ್ತು.   

ಎಲಿಯಟ್ ಹೇಳಿದ ಹಳೆಯ ಮಾತೊಂದನ್ನು ಸಾಮಾನ್ಯವಾಗಿ ಎಲ್ಲರೂ ಕೇಳಿರುತ್ತಾರೆ: ‘ಪ್ರಾಮಾಣಿಕ ವಿಮರ್ಶೆ ಮತ್ತು ಸೂಕ್ಷ್ಮ ಮೆಚ್ಚುಗೆ ಕಾವ್ಯದ ಮೇಲೆ ಕೇಂದ್ರೀಕೃತವಾಗಿರಬೇಕೇ ಹೊರತು, ಕವಿಯ ಮೇಲಲ್ಲ.’ ಇಲ್ಲಿ ‘ಕಾವ್ಯ’ ಎಂಬ ಮಾತನ್ನು ಒಟ್ಟಾರೆಯಾಗಿ ‘ಸಾಹಿತ್ಯ’ ಎಂದುಕೊಳ್ಳಿ; ಆಗ ಹೆಚ್ಚಿನ ಪೂರ್ವಗ್ರಹಗಳಿಲ್ಲದ- ಅಥವಾ ಮೊದಲೇ ತೀರ್ಮಾನಿಸಿಕೊಂಡ ಒಳ್ಳೆಯ ಅಥವಾ ಕೆಟ್ಟ ಅಭಿಪ್ರಾಯಗಳೆರಡೂ  ಇಲ್ಲದ- ವಸ್ತುನಿಷ್ಠ ಓದಿನ ಪ್ರಾಥಮಿಕ ಪಾಠಗಳು ಹೊಳೆಯುತ್ತವೆ. ಇಷ್ಟೆಲ್ಲ ಎಲಿಯಟ್ ಪಾಠ ಕೇಳಿದ್ದರೂ ಒಂದು ಪುಸ್ತಕ ಕೈಗೆ ತೆಗೆದುಕೊಂಡಾಗ ಮುಖ ನೋಡಿ ಮಣೆ ಹಾಕುವ ಅಥವಾ ರಗ್ಗೆಳೆದು ಕೆಡಹುವ ಪ್ರವೃತ್ತಿಗಳು ಓದುಗರೊಳಗೊಳಗೇ ಮುಸುಗುಡುತ್ತಿರುತ್ತವೆ. ಪುಸ್ತಕ ಬಿಡುಗಡೆಯ ದೇಶಾವರಿ ವೇದಿಕೆಗಳಲ್ಲಿ ಮೊದಲ ಪ್ರವೃತ್ತಿಯೂ, ಒಂದೇ ಗುಂಪಿನವರು ಸೇರಿಕೊಂಡಾಗ ಎರಡನೇ ಪ್ರವೃತ್ತಿಯೂ ಹೆಚ್ಚು ಕಾಣಿಸುತ್ತದೇನೋ! ‘ಅಯ್ಯೋ! ಇವಳೇನು ಬರೆದಾಳು’, ‘ಥತ್! ಅವನೇನು ಬರೆದಾನು’ ಎಂದು ಮೂಗು ಮುರಿಯುತ್ತಲೇ ಪುಸ್ತಕ ಕೈಗೆತ್ತಿಕೊಳ್ಳುವ ಮೂರನೇ ಪ್ರವೃತ್ತಿಯೂ ಇದೆ; ಪಟ್ಟಿ ಮಾಡಹೊರಟರೆ ಇಂಥ ಹಲ ಬಗೆಯ ಪ್ರವೃತ್ತಿಗಳು ಕಾಣತೊಡಗುತ್ತವೆ. ಆದರೆ ಇವೆಲ್ಲವನ್ನೂ ಮೀರಿ, ಮೇಲೆ ಹೇಳಿದ ಅನುಭವಗಳು ಕೂಡ ಎಲ್ಲರಿಗೂ ಆಗುತ್ತಿರುತ್ತವೆ; ಆಗುತ್ತಿರಲೇಬೇಕಾಗುತ್ತದೆ.  

ಈ ಬರಹದ ಶುರುವಿನಲ್ಲೇ ಹೇಳಿದ ‘ಇದೊಂದು ಟೆಸ್ಟ್’ ಎಂಬ ಮಾತಿಗೆ ಮರಳಿ ಬರುತ್ತೇನೆ. ಮೇಲಿನ ಎರಡು ಪ್ರಸಂಗಗಳಲ್ಲಿ ಹೇಳಿದ ರೀತಿಯ ಓದಿನ ಅನುಭವ ನಮಗೆ ಆಗಾಗ ಆಗುತ್ತಿದ್ದರೆ ಮಾತ್ರ ಸಕಲ ದಿಕ್ಕಿನ ಕೃತಿಗಳು ಅಡೆತಡೆಯಿಲ್ಲದೆ ಬಂದು ನಮ್ಮೊಳಗೆ ಸೇರಿಕೊಳ್ಳುತ್ತವೆ. ಆಗಾಗ್ಗೆ ಈ ಟೆಸ್ಟನ್ನು ನಮಗರಿವಿಲ್ಲದೆಯೇ ನಾವೇ ಮಾಡಿಕೊಳ್ಳುತ್ತಿದ್ದರೆ ಮಾತ್ರ ನಾವು ಸರಿಯಾದ ಓದಿನ ಹಾದಿಯಲ್ಲಿದ್ದೇವೆಂದು ಅರ್ಥ! ಎಲ್ಲ ಲೇಖಕ, ಲೇಖಕಿಯರೂ ಸಾಮಾನ್ಯವಾಗಿ ಸ್ವಕೇಂದ್ರಿತ ವ್ಯಕ್ತಿಗಳೇ. ಆದರೆ ನಾವು ಸದಾ, ಪೂರಾ ಸ್ವಕೇಂದ್ರಿತ ವ್ಯಕ್ತಿಗಳಾಗಿದ್ದರೆ ಇನ್ನೊಂದು ಬಗೆಯ ಸಾಹಿತ್ಯವನ್ನು ಅರಿಯುವುದು ಸ್ವಲ್ಪ ಕಷ್ಟ. ನಾವು ತೀರಾ ಸ್ವಕೇಂದ್ರಿತ ಸಾಹಿತಿಗಳೋ, ಓದುಗರೋ ಅಲ್ಲವೋ ಎಂದು ಪ್ರಾಮಾಣಿಕವಾಗಿ ನೋಡಿಕೊಳ್ಳಲು ಕೂಡ ಇಂಥದೊಂದು ಟೆಸ್ಟ್ ಆಗಾಗ್ಗೆ ನಡೆಯುತ್ತಿರಲಿ! ಆಲ್ ದ ಬೆಸ್ಟ್! 

ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com

Share on:

Comments

0 Comments





Add Comment






Recent Posts

Latest Blogs



Kamakasturibana

YouTube