ಉತ್ಸಾಹ, ಆತಂಕದ ನಡುವೆ ಓದಿನ ಕಲೆಯ ಧ್ಯಾನ

ಒಂದು ಬರಹ ಯಾರಲ್ಲಿ ಎಂಥ ಪ್ರತಿಧ್ವನಿ ಹೊರಡಿಸುತ್ತದೆ ಎಂಬುದು ನಿಜಕ್ಕೂ ಕುತೂಹಲಕರ. 


ಕಳೆದ ಭಾನುವಾರ ಈ ಅಂಕಣದಲ್ಲಿ ಪ್ರಕಟವಾದ ‘ಮಾಂತ್ರಿಕ ಕತೆಗಾರನಿಗೆ ಮರೆವು ಬಂದಾಗ’ (READ HERE) ಬರಹಕ್ಕೆ ಹಿರಿಯರ ಹಾಗೂ ಕಿರಿಯರ ಪ್ರತಿಕ್ರಿಯೆ ವಿಭಿನ್ನವಾಗಿತ್ತು. ಹಿರಿಯರು ಮಾರ್ಕ್ವೆಜ್ ದುರಂತಕ್ಕೆ ಮಿಡಿದಿದ್ದರೂ, ಅವನ ಸ್ಥಿತಿ ಕಂಡು ಅಧೀರರಾಗಿರಲಿಲ್ಲ; ಆದರೆ ಕೆಲವು ಕಿರಿಯರು ಮಾರ್ಕ್ವೆಜ್ ಸ್ಥಿತಿ ನಮಗೂ ಬಂದರೇನು ಗತಿ ಎಂದು ಈಗಲೇ ಕಂಗಾಲಾಗಿದ್ದರು! ಅವರಲ್ಲಿ ನನ್ನ ಜಾಣ ವಿದ್ಯಾರ್ಥಿ, ವಿದ್ಯಾರ್ಥಿನಿಯರೂ ಇದ್ದರು. ‘ಎಲ್ಲರಿಗೂ ಹಾಗಾಗುವುದಿಲ್ಲ. ಸಣ್ಣ ಪುಟ್ಟ ಮರೆವು ಎಲ್ಲರಿಗೂ ಸಾಮಾನ್ಯ. ಮಾರ್ಕ್ವೆಜ್ ಸ್ಥಿತಿ ಎಲ್ಲೋ ಅಪರೂಪಕ್ಕೆ ಬರುವಂಥದು. ಸಿಗ್ಮಂಡ್ ಫ್ರಾಯ್ಡ್ ಕೂಡ ನಮ್ಮ ಮನಸ್ಸಿನ ಆಳದಲ್ಲಿ ಅಷ್ಟು ಇಷ್ಟ ಪಡದವರ ಅಥವಾ ಉದಾಸೀನ ಮಾಡುವವರ ಹೆಸರುಗಳು ಮರೆತು ಹೋಗುತ್ತವೆ ಎಂದಿದ್ದಾನೆ. ಟೇಕ್ ಇಟ್ ಈಸಿ!’ ಎಂದೆ.


ಈ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಕಂಗಾಲನ್ನು ಕಂಡ ನನಗೆ, ಸಾಹಿತ್ಯ ಹಾಗೂ ಇನ್ನಿತರ ಬರಹಗಳನ್ನು ಓದುವಾಗ ಎಷ್ಟು ಅಂತರವಿರಬೇಕು ಎಂಬುದನ್ನು ನಾನು ಕ್ಲಾಸಿನಲ್ಲಿ ಅವರಿಗೆ ಸರಿಯಾಗಿ ಹೇಳಿಕೊಟ್ಟಿಲ್ಲ ಅನ್ನಿಸಿತು! ಆ ಕುರಿತು ಈ ಬರಹದ ಕೊನೆಯ ಭಾಗದಲ್ಲಿ ಚರ್ಚಿಸುವೆ.


ಮೊದಲಿಗೆ, ಹಿರಿಯರ ಪ್ರತಿಕ್ರಿಯೆ: ಹಿರಿಯ ಅರ್ಥಶಾಸ್ತ್ರಜ್ಞ ಪ್ರೊ. ಬಿಸಲಯ್ಯ ಹೇಳಿದರು: ‘ನನ್ನ ಮೆಮೊರಿ ಪರವಾಗಿಲ್ಲ ಪ್ರೊಫೆಸರ್! ನನಗೀಗ ಎಂಬತ್ತೈದು. ಒಂದೊಂದ್ ಸಲ ಅವರಿವರ ಹೆಸರು ಮರೆತು ಹೋಗುತ್ತೆ. ಅದರ್ವೈಸ್ ಐ ಆ್ಯಮ್ ಓಕೇ!’


ಪ್ರೊ. ಬಿಸಲಯ್ಯ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ಪ್ರೊಫೆಸರ್ ಆಗಿ, ವೈಸ್ ಚಾನ್ಸಲರ್ ಆಗಿದ್ದವರು. ವರ್ಲ್ಡ್ ಬ್ಯಾಂಕಿನಿಂದ ಹಿಡಿದು ಹಲವು ದೊಡ್ಡ ದೊಡ್ಡ ಸಂಸ್ಥೆಗಳಿಗೆ ಕೆಲಸ ಮಾಡಿದವರು. ಈಚಿನ ವರ್ಷಗಳವರೆಗೂ ಬೆಂಗಳೂರಿನ ‘ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್’ನ ಅಕಡೆಮಿಕ್ ಹೆಡ್ ಆಗಿದ್ದವರು. ಬಿಸಲಯ್ಯನವರಿಗಿಂತ ಏಳು ವರ್ಷ ಕಿರಿಯರಾದ, ಪ್ರಸಿದ್ಧ ಕಾದಂಬರಿಕಾರ ಬಿ.ಎಲ್. ವೇಣು ಕೂಡ ‘ಎಲ್ಲೋ ಕೆಲವರ ಹೆಸರು ಮರೆತು ಹೋಗೋದನ್ನ ಬಿಟ್ಟರೆ ನನ್ನ ನೆನಪೂ ಪರವಾಯಿಲ್ಲ’ ಎಂದರು. ಕಳೆದ ವರ್ಷ ‘ದುರ್ಗದ ಬೇಡರ ದಂಗೆ’ ಕಾದಂಬರಿ ಪ್ರಕಟಿಸಿ, ಮೊನ್ನೆ ಸಿನಿಮಾಲೋಕದ ಮೇಲೆ ಪುಸ್ತಕ ಬರೆದು ಮುಗಿಸಿರುವ ವೇಣು, ಸದಾ ಒಂದರಿಂದ ಮತ್ತೊಂದು ಹೊಸ ಪುಸ್ತಕಕ್ಕೆ ಸಿದ್ಧರಾಗುವ ಪರಿ ನಿಜಕ್ಕೂ ಮೋಹಕ! ಬಿಸಲಯ್ಯನವರಿಗಿಂತ ದಶಕಗಳಷ್ಟು ಕಿರಿಯರಾದ, ದಣಿವರಿಯದ ಇಂಗ್ಲಿಷ್ ಪ್ರೊಫೆಸರ್-ವಿಮರ್ಶಕ-ಅನುವಾದಕ ಪ್ರೊ. ಸಿ. ನಾಗಣ್ಣ ‘ಮರೆವು ಶಾಪವಲ್ಲ, ವರ!’ ಎಂದರು.


ಈ ಮೂವರೂ ಸದಾ ಅಕ್ಷರಲೋಕದ ಸಂಗದಲ್ಲಿರುವವರು. ವೇಣು ಬೆಳಗ್ಗೆ ಹನ್ನೊಂದರಿಂದ ಮೂರರವರೆಗೆ ಹಾಗೂ ಸಂಜೆ ಮತ್ತೆ ಕೆಲವು ಗಂಟೆಗಳ ಕಾಲ ಓದು-ಬರಹಗಳ ಸಂಗದಲ್ಲಿರುವವರು. ಬಿಸಲಯ್ಯನವರು ಚರಿತ್ರೆ, ಸಂಸ್ಕೃತಿ, ಕಾದಂಬರಿ ಹೀಗೆ ಹಲಬಗೆಯ ಹೊಸ ಪುಸ್ತಕಗಳನ್ನು ಅಮೆಜಾನ್ ಮೂಲಕ ತರಿಸಿ ಓದುವವರು. ನನ್ನಂಥವರ ಪುಸ್ತಕಗಳನ್ನು ಕೂಡ ಓದಿ ತಮಗನಿಸಿದ್ದನ್ನು ವಿವರವಾಗಿ ಹೇಳಬಲ್ಲವರು. ಒಂದು ವಸ್ತುವಿನ ಮೇಲೆ ಗಂಭೀರವಾಗಿ ಭಾಷಣ ಮಾಡಲು ಸಮಗ್ರವಾಗಿ ಟಿಪ್ಪಣಿಗಳನ್ನು ಬರೆದುಕೊಂಡು ಸಿದ್ಧವಾಗಬಲ್ಲವರು. ಈಗಲೂ ಒಂದು ಪುಸ್ತಕ ರೂಪಿಸಬೇಕೆಂದು ಚಡಪಡಿಸುತ್ತಿರುವವರು. ನಾಗಣ್ಣ ಇವತ್ತಿಗೂ ಓದು, ಬರಹ, ಟೀಚಿಂಗು, ವಿಚಾರ ಸಂಕಿರಣಗಳಲ್ಲಿ ಬಿಜಿಯಾಗಿ ಲವಲವಿಕೆಯಿಂದ ಇರುವವರು.


ಈ ಹಿರಿಯರನ್ನು ಇಲ್ಲಿ ಉಲ್ಲೇಖಿಸಲು ಕಾರಣವಿದೆ: ಮಾರ್ಕ್ವೆಜ್ ಮರೆವಿನ ದುರಂತ ಓದಿ ಅಧೀರರಾಗಿದ್ದ ಕಿರಿಯರಲ್ಲಿ ಈ ಹಿರಿಯರ ಉತ್ಸಾಹದ ಒರತೆ, ಎಡೆಬಿಡದ ಬೌದ್ಧಿಕ ಚಟುವಟಿಕೆಯ ಬದುಕು ಸ್ಫೂರ್ತಿ ತುಂಬಬಲ್ಲದು. ಈಚೆಗೆ ತೀರಿಕೊಂಡ ಝೆಕ್ ಕಾದಂಬರಿಕಾರ ಮಿಲನ್ ಕುಂದೇರ (1 ಏಪ್ರಿಲ್ 1929 - 11 ಜುಲೈ 2023) ತನ್ನ 84ನೆಯ ವಯಸ್ಸಿನಲ್ಲಿ ಪ್ರಕಟಿಸಿದ ‘ಫೆಸ್ಟಿವಲ್ ಆಫ್ ಇನ್ ಸಿಗ್ನಿಫಿಕೆನ್ಸ್’ ಕಾದಂಬರಿಯಲ್ಲಿ ಉಕ್ಕಿ ಚೆಲ್ಲಿರುವ ಜೀವಚೈತನ್ಯ ಹಾಗೂ ಜೀವನದ ಹೊಸ ಹೊಸ ನೋಟಗಳು ನಮ್ಮನ್ನು ಮರುಜೀವಗೊಳಿಸಬಲ್ಲವು. ಅತ್ತ ಮಾರ್ಕ್ವೆಜ್ ಮರೆವು ಮುತ್ತುವ ಮೊದಲು, ಎಪ್ಪತ್ತೈದನೆಯ ವಯಸ್ಸಿನಲ್ಲಿ ಕ್ಯಾನ್ಸರ್ ಎದುರಿಸಿದ್ದ; ಸಾವನ್ನು ಮುಂದೂಡುವವನಂತೆ ತನ್ನ ಆತ್ಮಚರಿತ್ರೆ ‘ಲಿವಿಂಗ್ ಟು ಟೆಲ್ ದ ಟೇಲ್’ನ ಮೊದಲ ಸಂಪುಟವನ್ನು ತಾರುಣ್ಯದ ಘಟ್ಟಕ್ಕೆ ನಿಲ್ಲಿಸಿ ಪ್ರಕಟಿಸಿದ; ಇನ್ನೂ ಎರಡು ಸಂಪುಟ ಬರೆಯುತ್ತೇನೆಂದು ಸಾವಿಗೆ ಸವಾಲ್ ಹಾಕಲು ನೋಡಿದ! 


ಈ ಎಲ್ಲ ಮಾದರಿಗಳಿಂದ ಓದು-ಬರಹಗಳು ನಿತ್ಯ ಚೈತನ್ಯ ಸೃಷ್ಟಿಸುವ ರೀತಿ, ಬರೆವವರ ಜೀವಂತಿಕೆ, ಅವರ ಸ್ಫೂರ್ತಿಲೋಕದ ಅರಿವಾಗಬಲ್ಲದು; ಬರೆಯದವರು ಕೂಡ ಓದುತ್ತಲೇ ಈ ಜೀವಂತಿಕೆ, ಚೈತನ್ಯಗಳನ್ನು ಸೃಷ್ಟಿಸಿಕೊಳ್ಳಬಹುದು. ಓದುವುದೂ ಬರೆಯುವ ಕ್ರಿಯೆಯೇ ಎಂಬುದನ್ನು ಹಲವರು ಅರಿತಿರಲಿಕ್ಕಿಲ್ಲ. ಓದುತ್ತಾ ಓದುತ್ತಾ ನಂನಮ್ಮ ಭಾಷೆಯಲ್ಲಿ ನಮ್ಮೊಳಗೇ ಅದನ್ನು ಬರೆದುಕೊಳ್ಳುತ್ತಿರುತ್ತೇವೆ, ಅಲ್ಲವೆ! ಆದ್ದರಿಂದ ಓದೂ ಬರವಣಿಗೆಯಷ್ಟೇ ಸೃಜನಶೀಲ. ಓದಿನ ಕಿಕ್ ಕೂಡ ನಮ್ಮನ್ನು ಸದಾ ಲವಲವಿಕೆಯಲ್ಲಿಡುತ್ತದೆ.

ಈ ಹಿನ್ನೆಲೆಯಲ್ಲಿ, ನಾವು ಓದುವ ಕೃತಿಗಳನ್ನು ಎಷ್ಟು ದೂರ ನಿಂತು ಓದಬೇಕು ಎಂಬ ಬಗ್ಗೆ ನನ್ನ ಕ್ಲಾಸ್ ರೂಮ್ ಟಿಪ್ಪಣಿಗಳನ್ನು ಕೊಂಚ ತಿದ್ದಿ ಕೊಟ್ಟಿರುವೆ:

ಸೌಂದರ್ಯ ಮೀಮಾಂಸಕ ಎಡ್ವರ್ಡ್ ಬುಲ್ಲೋ 1912ರಲ್ಲಿ ‘Psychical Distance as a Factor in Art and an Aesthetic Principle’ ಎಂಬ ಲೇಖನ ಬರೆದ. ಅದರಲ್ಲಿ ಸಾಹಿತ್ಯ ಕೃತಿಗಳನ್ನು ಓದುವಾಗ ಬೇಕಾದ ‘ಮಾನಸಿಕ ದೂರ’ವನ್ನು ಚರ್ಚಿಸುತ್ತಾ, ‘ಅತಿ ದೂರ’, ‘ಅತಿ ಹತ್ತಿರ’ದ ಸಮಸ್ಯೆಗಳನ್ನೂ ಚರ್ಚಿಸಿದ. ಅವನಿಗಿಂತ ಮೊದಲೇ ಇಮ್ಯಾನ್ಯುಯೆಲ್ ಕಾಂಟ್ ಸಾಹಿತ್ಯ ಕೃತಿಯ ಪೂರ್ಣ ಸೌಂದರ್ಯಾನುಭವ ಆಗಬೇಕೆಂದರೆ, ನಿರ್ಲಿಪ್ತವಾದ ಧ್ಯಾನಶೀಲ ಗ್ರಹಿಕೆ (disinterested contemplation) ಅಗತ್ಯ ಎಂದಿದ್ದ. ಇವೆಲ್ಲ ಇವತ್ತಿಗೂ ಓದುವ ಕಲೆ ಕಲಿಯಲು, ಬರೆಯಲು, ಸಾಹಿತ್ಯವನ್ನು ಗಂಭೀರವಾಗಿ ಟೀಚ್ ಮಾಡಲು, ನಾಟಕ ನಿರ್ದೇಶಿಸಲು ನೆರವಾಗಬಲ್ಲವು. ಎಡ್ವರ್ಡ್ ಬುಲ್ಲೋ ಕೊಡುವ ಉದಾಹರಣೆಯೊಂದನ್ನು ಗಮನಿಸಿ: 
ತನ್ನ ಹೆಂಡತಿಯ ಬಗ್ಗೆ ಅಸೂಯೆ ಪಡುವ ಗಂಡಸೊಬ್ಬ ಶೇಕ್ ಸ್ಪಿಯರನ ‘ಒಥೆಲೊ’ ನಾಟಕದ ಪ್ರದರ್ಶನ ನೋಡಲು ಹೋಗುತ್ತಾನೆಂದಿಟ್ಟುಕೊಳ್ಳಿ. ಅಲ್ಲಿ ಈ ಪ್ರೇಕ್ಷಕ ಪತ್ನಿ ಡೆಸ್ಡಿಮೋನಳ ಬಗ್ಗೆ ಅಸೂಯೆಯಿಂದ ನರಳುವ ಒಥೆಲೋನ ನಡವಳಿಕೆ, ಸ್ವಭಾವಗಳನ್ನು ಪೂರಾ ಮೆಚ್ಚಿದಷ್ಟೂ ಒಥೆಲೋನ ಭಾವನೆಗಳು-ಅನುಭವಗಳು ಈ ಪ್ರೇಕ್ಷಕನ ಭಾವನೆ-ಅನುಭವಗಳಿಗೆ ಹೊಂದಾಣಿಕೆಯಾಗುವಂತೆ ತೋರುತ್ತವೆ! ಆಗ ಅವನು ಒಥೆಲೋನ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ಹೋಗುವುದಿಲ್ಲ; ಬದಲಿಗೆ, ತಾನೂ ಅಂಥದೇ ಸ್ಥಿತಿಯಲ್ಲಿದ್ದೇನೆ ಎಂಬಂತೆ ನೋಡತೊಡಗುತ್ತಾನೆ. ಅಂದರೆ, ಅವನು ನಾಟಕವನ್ನು ನೋಡಲು ಅಗತ್ಯವಾಗಿ ಬೇಕಾಗಿದ್ದ ದೂರ ಅಥವಾ ಅಂತರವನ್ನು ಕಳೆದುಕೊಂಡಿದ್ದಾನೆ. ಇದು ಸ್ಥೂಲವಾಗಿ ಎಡ್ವರ್ಡ್ ಬುಲ್ಲೋ ಗ್ರಹಿಕೆ.


ಮೇಲೆ ಹೇಳಿದ ಪ್ರೇಕ್ಷಕನ ಇನ್ನಿತರ ಸಮಸ್ಯೆಗಳನ್ನೂ ಇವತ್ತು ನೋಡಬಹುದು. ‘ಒಥೆಲೊ’ ನಾಟಕ ಪ್ರದರ್ಶನವನ್ನು ಈ ಥರ ‘ಪರ್ಸನಲ್’ ಆಗಿ ನೋಡುವ ಪ್ರೇಕ್ಷಕನಿಗೆ, ಒಥೆಲೊ ಸರಿಯಾಗಿ ವಿಚಾರಿಸದೆ ಪತ್ನಿ ಡೆಸ್ಡಿಮೋನಳನ್ನು ಅನುಮಾನಿಸುತ್ತಿರುವ ಕ್ರೌರ್ಯ ಅರ್ಥವಾಗುವುದಿಲ್ಲ. ಒಥೆಲೊ ಡೆಸ್ಡಿಮೋನಳಿಗೆ ಕೊಟ್ಟ ಸುಗಂಧಮಯ ಕರವಸ್ತ್ರ ಕ್ಯಾಸಿಯೋ ಬಳಿ ಇದೆಯೆಂದು ಬಣ್ಣ ಕಟ್ಟಿ ಹೇಳುವ ಇಯಾಗೋನ ಧೂರ್ತತನವೂ ಅರ್ಥವಾಗುವುದಿಲ್ಲ; ಒಥೆಲೊ, ಡೆಸ್ಟಿಮೋನರ ದುರಂತವೂ ತಟ್ಟುವುದಿಲ್ಲ. ಪತ್ನಿಯ ಬಗೆಗಿನ ಅಸೂಯೆಯಿಂದ ತಪ್ತವಾದ ಈ ಪ್ರೇಕ್ಷಕನ ಮನಸ್ಸು ಒಥೆಲೊ ಡೆಸ್ಟಿಮೋನಳನ್ನು ಕೊಂದಿದ್ದು ಸರಿ ಎಂದು ತನ್ನನ್ನೇ ತಾನು ನಂಬಿಸಿಕೊಳ್ಳತೊಡಗುತ್ತದೆ! ಅಕಸ್ಮಾತ್ ಒಥೆಲೊ ಪಾತ್ರ ಮಾಡುತ್ತಿರುವ ವ್ಯಕ್ತಿಯೂ ಈ ಪ್ರೇಕ್ಷಕನಂತೆ ಅಸೂಯೆಯ ಮನಸ್ಥಿತಿಯವನೇ ಆಗಿದ್ದರೆ, ಆತ ಇನ್ನೆಷ್ಟು ‘ನೈಜ’ವಾಗಿ, (ಅಂದರೆ ಕ್ರೂರವಾಗಿ!) ನಟಿಸಿ, ರಂಗದ ಮೇಲೆ ಇನ್ನೂ ಏನೇನಾಗಬಹುದೆಂದು ಊಹಿಸಿಕೊಳ್ಳಿ!


ಅದೇನೇ ಇರಲಿ, ಈ ಥರದ ‘ಮಾನಸಿಕ ದೂರ’ದ ಓದು ‘ಮಾಂತ್ರಿಕ ಕತೆಗಾರನಿಗೆ ಮರೆವು ಬಂದಾಗ’ ಲೇಖನಕ್ಕೆ ಪೂರಾ ಅನ್ವಯವಾಗಲಾರದೇನೋ! ಯಾಕೆಂದರೆ ಮತ್ತೊಬ್ಬರ ದಾರುಣ ಅನುಭವವನ್ನು ನಮ್ಮದೆಂಬಂತೆ ಓದಿಕೊಳ್ಳದಿದ್ದರೆ ಆ ಅನುಭವಕ್ಕೆ ಮಿಡಿಯಲಾರೆವು. ಮಾರ್ಕ್ವೆಜ್ ಮರೆವಿನ ಅನುಭವ ಓದಿ, ಕನ್ನಡ ಸ್ತ್ರೀವಾದಕ್ಕೆ ಸುಭದ್ರ ತಳಹದಿ ಹಾಕಿಕೊಟ್ಟ ವಿಜಯಾ ದಬ್ಬೆ ಅಪಘಾತಕ್ಕೀಡಾಗಿ ನೆನಪು ಕಳೆದುಕೊಂಡ ದುರಂತವನ್ನು ನೆನೆದ ರೂಪಾ; ಜಾರ್ಜ್ ಫರ್ನಾಂಡಿಸರ ಕೊನೆಯ ವರ್ಷಗಳನ್ನು ನೆನೆದ ಪ್ರೊ. ಕೆ. ಮರುಳಸಿದ್ಧಪ್ಪ, ಇನ್ನಿತರರು ತಮ್ಮ ಸುತ್ತಮುತ್ತಲಿನವರ ದುರಂತಗಳನ್ನೂ ನೆನೆಯುತ್ತಿದ್ದರು. 


ಇಷ್ಟಾಗಿಯೂ, ಕಳೆದ ವಾರ ಮಾರ್ಕ್ವೆಜ್ ಮರೆವಿನ ದುರಂತ ಓದಿಸಿ ಅಕಸ್ಮಾತ್ ಯಾರನ್ನಾದರೂ ಅಧೀರರಾಗಿಸಿದ್ದರೆ ಕ್ಷಮೆಯಿರಲಿ. ಆದರೆ ಮಾರ್ಕ್ವೆಜ್ ಸ್ಥಿತಿ ಓದಿ ಕೆಲವರಲ್ಲಿ ಹುಟ್ಟಿದ ಭಯ ‘ಅತಿ ಸಮೀಪ’ದ ಓದಿನ ದೋಷದಿಂದಲೂ ಹುಟ್ಟಿದೆ ಎಂದು ಬುಲ್ಲೋ ಚಿಂತನೆ ಎಚ್ಚರಿಸುತ್ತಿರಲಿ; ಓದಲು ಅಗತ್ಯವಾದ ಮಾನಸಿಕ ದೂರದ ಬಗೆಗಿನ ಅವನ ಒಳನೋಟ ನಮ್ಮನ್ನು ಉತ್ತಮ ಓದುಗರನ್ನಾಗಿ ಮಾಡಲಿ. ಹಾಗೆಯೇ, ಹತ್ತಾರು ಲೇಖಕ, ಲೇಖಕಿಯರು ಮೆಚ್ಚಿ, ಥ್ರಿಲ್ಲಾಗಿರುವ ‘ತುಂಬ ಚೆನ್ನಾಗಿ ಬರೆದ ಬರವಣಿಗೆಗಿಂತ ಉತ್ತಮವಾದದ್ದು ಯಾವುದೂ ಇಲ್ಲ’ ಎಂಬ ಮುತ್ತಿನಂಥ ಮಾರ್ಕ್ವೆಜ್ ಮಾತು ಸದಾ ನಮ್ಮೊಳಗಿರಲಿ. 

ಮೊನ್ನೆ ಓದಿದ ಮಾತು

ಈ ಕಾಲದ ಮುಂಚೂಣಿ ಚಿಂತಕ ನೋಮ್ ಚಾಮ್‌ಸ್ಕಿ ಚಿಂತನೆಯನ್ನು ಲೋಕದ ಜನ ಎಷ್ಟೊಂದು ಉಲ್ಲೇಖಿಸುತ್ತಿದ್ದಾರೆಂಬುದು ತಿಳಿದು ಖುಷಿಯಾಯಿತು!


ಈಗ ಜಗತ್ತಿನಲ್ಲಿ ಹೆಚ್ಚು ಉಲ್ಲೇಖವಾಗುವ ಲೇಖಕರು ಹಾಗೂ ಕೃತಿಗಳ ಪಟ್ಟಿಯಲ್ಲಿ ಮಾರ್ಕ್ಸ್, ಲೆನಿನ್, ಶೇಕ್ ಸ್ಪಿಯರ್, ಅರಿಸ್ಟಾಟಲ್, ಬೈಬಲ್, ಪ್ಲೇಟೋ, ಸಿಗ್ಮಂಡ್ ಫ್ರಾಯ್ಡ್ ನಂತರ ಚಾಮ್‌ಸ್ಕಿಗೆ ಎಂಟನೆಯ ಸ್ಥಾನ.

ಈ ಕಾಲದ ಅಂತರರಾಷ್ಟ್ರೀಯ ರಾಜಕಾರಣದ ಕುತಂತ್ರಗಳನ್ನು, ಅದರಲ್ಲೂ ಅಮೆರಿಕದ ಯಜಮಾನೀ ಹಿಡಿತಗಳನ್ನು ಅರಿಯಲು ಚಾಮ್‌ಸ್ಕಿ ಪುಸ್ತಕಗಳು, ಸಂದರ್ಶನಗಳು ಬಹು ಮುಖ್ಯ ರೆಫರೆನ್ಸುಗಳು. 


ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com 
ಬಿಡುವಾದಾಗ ನೋಡಿ, ಶೇರ್ ಮಾಡಿ:  https://www.youtube.com/@NatarajHuliyarYT

Share on:


Recent Posts

Latest Blogs



Kamakasturibana

YouTube



Comments

6 Comments



| Gangadhara BM

ಹೆಚ್ಚು ಹೆಚ್ಚು ಓದು ಬರಹಗಳಿಗೆ ಪ್ರೇರಕವಾಗುತ್ತಿರುವ ತಮ್ಮ ವಾರದ ಬರಹಕ್ಕೆ ಧನ್ಯವಾದಗಳು ಸರ್. ಈ ಕಾಲದ  ದಿನಪತ್ರಿಕೆ, ವಾಟ್ಸಪ್ ಲೋಕ, ಫೇಸ್ಬುಕ್ ಪ್ರಪಂಚಕ್ಕಿಂತ ಭಿನ್ನಚಿಂತನಕ್ರಮಗಳಿಗೆ ಇದು ಕಾರಣವಾಗುತ್ತಿದೆ ಸರ್. ಗೆಳೆಯರಿಗೆಲ್ಲ ಲೇಖನ ಲಿಂಕ್ ಷೇರ್ ಮಾಡುವೆ.


| Rajappa Dalavayi

ಮರೆವು ಬಗೆಗೆ ಪ್ರತಿಕ್ರಿಯೆ ಚನ್ನಾಗಿತ್ತು. ಅವಕ್ಕೆ ನಿಮ್ಮ ಪ್ರತಿಕ್ರಿಯೆ ಚನ್ನಾದ ಲೇಖನವಾಗಿದೆ.

 

ತಯಾರಿ ಕತೆ ಮಾರ್ವೇಲಸ್.


| ಶುಭಾಷ್ ರಾಜಮಾನೆ

ನಿಮ್ಮ ಓದಿನ ಕಲೆಯ ಧ್ಯಾನ ಲೇಖನವನ್ನ ಓದಿದ ಮೇಲೆ ಇದರ ಬಗ್ಗೆ ಮತ್ತಷ್ಟು ಧ್ಯಾನಿಸಬೇಕು ಅಂತ ಅನಿಸ್ತಾ ಇದೆ. ಇದರಲ್ಲಿ ಓದುವರು ಕೂಡ ಬರಹಗಾರರೇ ಆಗಿರುತ್ತಾರೆ. ಅವರು ತಮಗೆ ಬೇಕಾದ ರೀತಿಯಲ್ಲಿ ಆ ಓದನ್ನು ಬರೆದುಕೊಳ್ಳುತ್ತಿರುತ್ತಾರೆ ಅನ್ನೋದು ಇಂಟರೆಸ್ಟಿಂಗ್ ಅನ್ನಿಸ್ತು. ಒಂದು ಅತ್ಯುತ್ತಮ ಬರಹವನ್ನು ಓದಿದಾಗ ಅದು ನಮ್ಮೊಳಗೆ ಅದನ್ನು ಕುರಿತು ಚಿಂತನ ಮಾಡುವ ಹಾಗೆ ಪ್ರೇರೇಪಿಸುತ್ತದೆ. ಷೇಕ್ಸ್ಪಿಯರ್ ನ "ಮರ್ಚೆಂಟ್ ಆಫ್ ವೆನ್ನಿಸ್" ನಾಟಕದಲ್ಲಿ ಶೈಲಾಕ್ ಯಾಕೆ ಆಂಟೋನಿಯೋ ಮೇಲೆ ಅಷ್ಟೊಂದು ದ್ವೇಷ ಕಾರತಾನೆ ಅಂತ ಸೋಜಿಗ ಆಗುತ್ತದೆ. ಬಹಳಷ್ಟು ಜನ ಅದು ಷೇಕ್ಸ್ಪಿಯರ್ ಜನಾಂಗ ದ್ವೇಷಿಯಾಗಿದ್ದ ಅಂತಲೂ ಬರೆದಿದ್ದಾರೆ. ಅದೇ ಶೈಲ ತನ್ನ ಬಗ್ಗೆ ತಾನೇ ಅಸಹ್ಯ ಪಟ್ಕೊಳ್ತಾನೆ, ಪಾಶ್ಚ್ಯಾತಾಪವನ್ನು ಪಡುತ್ತಾನೆ. ಶೇಕ್ಸ್ಪಿಯರ್ ಮನುಷ್ಯನೊಬ್ಬನ ವ್ಯಕ್ತಿತ್ವದಲ್ಲಿರುವ ಸಂಕೀರ್ಣತೆಯನ್ನು ಚಿತ್ರಸಲಿಕ್ಕೆ ಪ್ರಯತ್ನ ಮಾಡಿದ್ದಾನೆ ಅಂತ ಅನ್ಸುತ್ತೆ. ಆದರೂ ನಾವು ಓದಿನ ಮೂಲಕವಾಗಿ ಹೀಗೆ ಏನೆಲ್ಲ ಊಹೆಗಳನ್ನು ಮಾಡ್ಲಿಕ್ಕೆ ಸಾಧ್ಯ ಆಗುತ್ತೆ. ಕೆಲವು ಸಲ ಅವಸರದ ತೀರ್ಮಾನಕ್ಕೆ ಬರ್ತೇವೆ. ಅನೇಕ ಸಲ ನಮ್ಮ ತೀರ್ಮಾನಗಳೇ ಸರಿ ಅಂತ ವಾದ ಕೂಡ ಮಾಡ್ತೇವೆ. ಈ ರೀತಿ ಓದು ಅನ್ನೋದು ನಮ್ಮೊಳಗೆ ಏನೆಲ್ಲಾ ಆಲೋಚಿಸುವ ಹಾಗೆ ಮಾಡುತ್ತೆ ಅನ್ನೋದೇ ಬಹಳ ದೊಡ್ಡ ಸೋಜಿಗದ ಸಂಗತಿ.

 


| ಉದಯಕುಮಾರ ಹಬ್ಬು

ನಮ್ಮ ಸಂಬಂಧಿಕರೊಬ್ಬರಿಗೆ ಅಲ್ಝಮೀರ್ ತೀವ್ರವಾಗಿ ಬಹು ಹಿಂದೆ ನಮ್ಮನ್ನೆಲ್ಲ ಪರಿಚಯಿಸಿ ಮಾತಾಡುತ್ತಿದ್ದ ಅವರು ಈಗ ನಮ್ಮನ್ನು ಗುರುತಿಸಿ ಮಾತಾಡಲು ಸಾಧ್ಯವಾಗುತ್ತಿಲ್ಲ. ಆದರೆ ಇತರೆ ಜನರಿಗೆ ಅವರು ತಮಾಷೆಯ ವಸ್ತುವಾಗಿದ್ದಾರೆ. ಒಬ್ಬ ೮೦ ವರ್ಷದ ಮುದುಕ ಅವರಲ್ಲಿ ತಮಾಷೆ ಮಾಡಲೆಂದೆ ಕೇಳುತ್ತಾನೆ" ಹೇಳು ನಾನು ಯಾರು?" ಅದನ್ನು ಕೇಳಿ ಅವರ ಸೊಸೆ "ಮಾವನನ್ನು ದಯವಿಟ್ಟು ತಮಾಷೆ ಮಾಡಬೇಡಿ." ಎಂದರು. ಆ ಅಲ್ಝಮೀರ್ ವ್ಯಕ್ತಿ ತಿರುಗಿ ಕೇಳಿದ:" ಹೇಳು ‌ನಾನು ಯಾರು?" ಅವರ ಹೆಂಡತಿಯನ್ನಾಗಲಿ ಮನೆಗೆ ಅಪೂರ್ವಕ್ಕೆ ಬಂದ ಸಹೋದರನನ್ನಾಗಲಿ ಅವರು ಗುರುತು ಹಿಡಿಯಲಾರರು. ನನಗನಿಸಿತು:" ಇಂತಹ ಒಂದು ಮನುಷ್ಯನ ಅವಸ್ಥೆ ಕೂಡ ಬದುಕಿನಲ್ಲಿ ಅನಿವಾರ್ಯ ನಿವಾರಣೆ ತರುವುದೆ? ಸಮಾಜ ಈ ಕಾಯಿಲೆಯವರನ್ನು  ನೋಡುವ ದೃಷ್ಟಿಕೋನ ಅನುಕಂಪ ಅಥವಾ ಕರುಣೆಯದ್ದಾಗಿತದೆ ತಮಾಷೆ ಯಾ‌ ಗೇಲಿ ಮಾಡುವ ಪ್ರವೃತ್ತಿಯದ್ದಾಗಿರುತ್ತದೆ‌ 

 


| ಉದಯಕುಮಾರ ಹಬ್ಬು

ಓದಿನ ಕಲೆಯ ಧ್ಯಾನ 

ನನಗೆ ಓದು ಒಂದು ನಿರಂತರ ಪ್ರಕ್ರಿಯೆ ಆಗಿದೆ. ಓದಲು ಪುಸ್ತಕಗಳಿಲ್ಕದ್ದರೆ ನನ್ನ ಬದುಕು ಅರ್ತಹೀನವಾಗುತ್ತಿತ್ತೋ ಏನೋ. ನಾನು ಓದಿದ ಪುಸ್ತಕದ ಕುರಿತು ಟಿಪ್ಪಣಿಯನ್ನು  ಸಾಮಾಜಿಕ ಜಾಲತಾಣವಾದ Face Book ಮತ್ತು  What's up ನಲ್ಲಿ ಪೋಸ್ಟ್ ಮಾಡುತ್ತೇನೆ. ನನಗೆ ತುಂಬ ಇಷ್ಟವಾದ ಪುಸ್ತಕದ ಮೇಲಿನ ಟಿಪ್ಪಣಿ ಸೊಗಸಾಗಗಿರುತ್ತದೆ. ಲೇಖಕರು ಅದನ್ನು ಇಷ್ಟೊಡುತ್ತಾರೆ. ಹೆಮ್ಮೆಯ ವಿಷಯವೇನೆಂದರೆ ನನ್ನ ಟಿಪ್ಪಣಿ ಓದಿ ಕೆಲವರು ಪುಸ್ತಕಗಳನ್ನು ಖರೀದಿಸುತ್ತಾರೆ‌

ಇನ್ನು ಓದುವಾಗ ಡಿಸ್ಟನ್ಸ್ ಮೇಂಟೇನ್ ಮಾಡ್ತಾನೆ ಅಂತ ಅಂದ್ಕೊಂಡಿದ್ದೇನೆ. ಇಲ್ಲದಿದ್ದರೆ ತ ರಾ ಸು ಅವರ  ಚಂದವಳ್ಳಿಯ ತೋಟ" ಅದರಲ್ಲಿನ ಮೌಢ್ಯಕ್ಕಾಗಿ ಯಾವ ಮಾತನ್ನೂ ಬರೆಯುತ್ತಿರಲಿಲ್ಲ. ಸಿನೆಮಾ ಆಗಿ ಹೆಸರು ಗಳಿಸಿದರೂ ಮೌಢ್ಯವೆ ತುಂಬಿರುವ ಕಾದಂಬರಿ ಹೇಗೆ  ಅಷ್ಟೊಂದು ಜನಪ್ರಿಯ ಆಯ್ತು ಎಂಬುದೆ ನನಗೆ ಚಿದಂಬರ ರಹಸ್ಯ.

ಅತಿಯಾದ ಓದು ಬರಜಗಾರನ ಸರ್ಜನಶೀಲತೆಯನ್ನು ಕುಂಠಿತಗೊಳಿಸುತ್ತದೆಯೆ? ನಾನು ಯಾವುದೆ ಕೃತಿಯನ್ನು ಓದುವಾಗ ಯಾವುದೊ ಮಾನದಂಡವನ್ನು ನನ್ನಲ್ಲಿ ಹಾಕಿಕೊಳ್ಳದೆ ಕೃತಿ ಹೇಗಿದೆಯೊ ಹಾಗೆ ವಿಶ್ಲೇಷಣೆ ಮಾಡುತ್ತೇನೆ‌

ಕೃತಿಯನ್ನು ಓದುವಾಗ ಅದರಲ್ಲಿ ಮುಳುಗದೆ ಒಂದಿಷ್ಟು  ವಿವೇಕದ ಮೂಸೆಯಲ್ಲಿಟ್ಟು ಕಾಯಿಸಿ ಮನಸ್ಸನ್ನು  ಜಾಗ್ರತಗೊಳಿಸಿಕೊಂಡು ಓದಬೇಕಲ್ಲವೆ? 


| SUNIL B

ಮರೆತ ಬರಹವ ಮತ್ತೆ ನೆನಪಿಗೆ ಬರುವಂತೆ ಮಾಡಿದ ನಿಮಗಾಗಿ....

 

ಓದು ವಿದ್ವತ್ತು. ಪ್ರತಿಭೆ ಸಂಪತ್ತು. ಓದುವ ಕಲೆ ವ್ಯಕ್ತಿಯ ವಿಷಯಾಸಕ್ತಿ ಮೇಲೆ ನಿರ್ಧರಿತ. ವಿಷಯದ ವಾಸನೆ ಬರವಣಿಗೆಗೆ ಪ್ರೇರಕ. ಕಾವ್ಯ ಹುಟ್ಟಿದ್ದು ಯೌವ್ವನದ ಪೂರ್ವದಲ್ಲಾದರೂ ಒಂದು ಹಂತ ತಲುಪಿದ್ದು ಹರೆಯದೆಣ್ಣಿನ ಮೋಹಕೆ ಸಿಲುಕಿದಾಗ. ಸಮಾಧಾನ ಪಡಿಸಲು ಮಾತು ಸಾಲದಾದಾಗ. ಕಾವ್ಯಲಹರಿ ದೇಹಸಾಮಿಪ್ಯಕ್ಕೆ ಮುಡಿಪಾಯಿತು. ಒಲಿಸಲು ಓಲೈಸುವ ಪರಿಗೆ ನಾಂದಿಯಾಯಿತು.

 

ಬರೆದದ್ದು ಒಂದೇ ಕಥೆ. ಪದವಿಯಲ್ಲಿದ್ದ ಅಂಧ ವಿದ್ಯಾರ್ಥಿ ಪ್ರಸನ್ನ ಕೇಳಿದ ಪ್ರಶ್ನೆ, ' ಹುಡುಗೀರು ಹೇಗಿರುತ್ತಾರೆ ಸಾ... ಸ್ಪರ್ಶಕ್ಕೆ' ಎಂದಾಗ. ಅಧ್ಯಾಪಕ ವೃತ್ತಿಗೆ ಕಾಲಿರಿಸಿದಾಗ ಚಾಂಚಲ್ಯ ಮನಸಿನ ಭಾವಗಳಿಗೆ ಪದ ಒದಗಿಸಲು ನೀಳ್ಗತೆ ಆರಂಭವಾಗಿ ತರಗತಿ ಬದಲಾವಣೆಯಿಂದ ಅರ್ಧಕ್ಕೆ ನಿಂತಿತು. ಒಂದಂಕದ ಎರಡು ನಾಟಕಗಳು ಪೋಷಕರ ಒತ್ತಾಯಕ್ಕೆ ಮಣಿಯದ ವಿದ್ಯಾರ್ಥಿ ಹೆಣ್ಣನ್ನು ಹಸಮಣೆಗೆ ಏರಿಸಲು.

 

ಕಾಲ ಬದಲಾದಂತೆ ಭಾವನೆಗಳು ಅನುಭವದಲೆಗಳ ಮೇಲೆ ಪಕ್ವವಾದಂತೆ ಕವನಗಳ ಒಡನಾಟ ಮಾನಸಿಕ ತೊಳಲಾಟದ ಹೊರಸೂಸುವಿಕೆಗೆ. ವಾಸದ ಮನೆಯ ಕೆಳಮನೆಗೆ ಬಾಡಿಗೆಗೆ ಬಂದ ಕಾಸರಗೋಡಿನ ಆಂಗ್ಲ ಪ್ರಾಧ್ಯಾಪಕರ ಒದ್ದಾಟ, ಗ್ರಾಮೀಣ ವಿದ್ಯಾರ್ಥಿಗಳಿಗೆ ತಲುಪಲು, ಖಲೀಲ್ ಗಿಬ್ರಾನ್ ನ On Children ಪದ್ಯದ ಭಾವಾರ್ಥಕ್ಕೆ ಕಾರಣವಾಯಿತು. ಮುಂದೆ ಪದವಿಯ ಆಂಗ್ಲ ಐಚ್ಚಿಕ ವಿದ್ಯಾರ್ಥಿಗಳು ಪದ್ಯಗಳ ಅರ್ಥ ಕೇಳಿದಾಗ ಭಾವಾನುವಾದ ಆರಂಭವಾಯಿತು.

 

 

ಹಿಡಿತಕ್ಕೆ ಸಿಗದ ಜೀವನ ಕಹಿ ಎನಿಸತೊಡಗಿದಾಗ ಎಲ್ಲಕ್ಕೂ ವಿರಾಮ. ನೀವು ಸಿಕ್ಕಾಗ ಕಾದಂಬರಿ ಕೊಟ್ಟಾಗ ಅನಿಸಿಕೆ ಬರೆಯಲು ಪ್ರೇರಣೆ. ವರುಷಗಳುರುಳಿದನಂತರ ಇತ್ತೀಚಿನ ತಮ್ಮ ಬರಹಗಳು ಮತ್ತೆ ಪದಗಳ ಚಡಪಡಿಕೆಗೆ ಕಾರಣವಾಗಿ ಚುಟುಕಗಳಲ್ಲೇ ನಿಂತಿದ್ದ ಭಾವಲಹರಿ ಬರವಣಿಗೆಯ ಸುಳಿಗೆ ಸಿಕ್ಕಿ ಜಂಗಮವಾಣಿ ಬಿಟ್ಟು ಮತ್ತೆ ಲೇಖನಿ ಹಿಡಿಯುವಂತೆ ಮಾಡಿದ ತಮಗೆ ಧನ್ಯವಾದಗಳು ಸರ್.

 




Add Comment