ಮಾಂತ್ರಿಕ ಕತೆಗಾರನಿಗೆ ಮರೆವು ಬಂದಾಗ

ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ ಎಪ್ಪತ್ತನೆಯ ವಯಸ್ಸು ತಲುಪಲಿದ್ದಾಗ ಒಂದು ರಾತ್ರಿ ಮಗ ರೋಡ್ರಿಗೊ ಕೇಳಿದ: ‘ಅಪ್ಪಾ, ರಾತ್ರಿ ಲೈಟಾಫ್ ಮಾಡಿದ ಮೇಲೆ ಏನು ಯೋಚಿಸ್ತಾ ಇರ್ತೀಯ?’

‘ಇನ್ನೇನು ಎಲ್ಲ ಕೆಲಸ ಹೆಚ್ಚು ಕಡಿಮೆ ಮುಗೀತಾ ಬಂದಿದೆ ಅನ್ಸುತ್ತೆ’ ಎಂದ ಮಾರ್ಕ್ವೆಜ್ ನಕ್ಕು ಹೇಳಿದ: ‘ಇನ್ನೂ ಟೈಮಿದೆ.  ಆದರೆ…ಒಂದಿನ ಇದ್ದಕ್ಕಿದ್ದಂತೆ ಎದ್ದು ನೋಡ್ತೀನಿ. ವಯಸ್ಸಾಗೇಬಿಟ್ಟಿದೆ. ಹಿಂಗೇ… ಅದು ಹಠಾತ್ತನೆ ಬರುತ್ತೆ. ಯಾವ ಸೂಚನೇನೂ ಕೊಟ್ಟಿರಲ್ಲ. ದಿಗ್ಭ್ರಮೆ ಆಗುತ್ತೆ. ಯಾರೋ ಹೇಳಿದ್ರು- ‘ಲೇಖಕನ ಜೀವನದಲ್ಲಿ ಒಂದು ಕಾಲ ಬರುತ್ತೆ. ಆಗ ಅವನ ಕೈಲಿ ದೊಡ್ಡ ಕಾದಂಬರಿ  ಬರೆಯೋಕಾಗಲ್ಲ. ತಲೇಲಿ ದೊಡ್ಡ ಆರ್ಕಿಟೆಕ್ಚರ್ ಹಿಡಿಯೋ ಶಕ್ತಿ ಇರಲ್ಲ. ಅಪಾಯಕಾರಿ ಸಾಹಸ ಮಾಡಿ ದೊಡ್ಡ ಕಾದಂಬರೀನ ನಿಭಾಯಿಸೋಕಾಗಲ್ಲ’ ಅಂತ. ಈಗ ನನಗೂ ಹಂಗೇ ಅನ್ನಿಸುತ್ತೆ. ಇನ್ನು ಮೇಲೆ ಪುಟ್ಟ ಪುಟ್ಟ ಕೃತಿ ಬರೀಬೌದು, ಅಷ್ಟೇ…’

ಅಪ್ಪನಿಗೆ ಎಂಬತ್ತಾದಾಗ ಮಗ ಮತ್ತೆ ಕೇಳಿದ: ‘ಅಪ್ಪಾ, ಈಗ ಹೆಂಗನ್ಸುತ್ತೆ?

‘ಎಂಬತ್ತರ ನೋಟ ಅಚ್ಚರಿ ಹುಟ್ಟಿಸುತ್ತೆ. ಕೊನೆಗಾಲ ಹತ್ತಿರ ಬರ್ತಾ ಇದೆ.’
‘ಭಯ ಆಗುತ್ತಾ?’
‘ಭಾಳಾ ದುಃಖ ಆಗುತ್ತೆ’ 
ಇದಾದ ಮೇಲೊಂದು ದಿನ ಮಾರ್ಕ್ವೆಜ್ ಹೇಳಿದ್ದ: ‘ನಾನು ಸಾವನ್ನ ಅಷ್ಟೊಂದು ಯಾಕೆ ದ್ವೇಷಿಸ್ತೀನಿ ಗೊತ್ತಾ? ನನ್ನ ಕೈಲಿ ಬರೆಯೋಕೇ ಆಗದೇ ಇರೋ ನನ್ನ ಜೀವನದ ಏಕ ಮಾತ್ರ ಅಂಶ ಅಂದ್ರೆ ಸಾವು; ಅದಕ್ಕೇ ನನಗೆ ಸಾವು ಕಂಡ್ರಾಗಲ್ಲ.’ ಜೊತೆಯಲ್ಲಿದ್ದವರೆಲ್ಲ ಸಾಯಲಾರಂಭಿಸಿದಾಗ, ‘ಹಿಂದೆ ಸಾಯದೇ ಇದ್ದೋರೆಲ್ಲ ಈಗ ಸಾಯ್ತಾ ಇದಾರೆ’ ಎಂದು ಎಲ್ಲರನ್ನೂ ನಗಿಸಿದ್ದ ಮಾರ್ಕ್ವೆಜ್, ಯಾರು ಸತ್ತರೂ ಶವಸಂಸ್ಕಾರಕ್ಕೆ ಹೋಗುತ್ತಿರಲಿಲ್ಲ. ‘ಗೆಳೆಯರನ್ನ ಹೂಳೋದು ನಂಗೆ   ಇಷ್ಟ ಇಲ್ಲ’ ಅನ್ನುತ್ತಿದ್ದ.

ಕೊಲಂಬಿಯಾದ ಮಾರ್ಕ್ವೆಜ್ (1927-2014) ಜಗತ್ತಿನ ಅತಿ ಶ್ರೇಷ್ಠ ಕಾದಂಬರಿಕಾರರಲ್ಲೊಬ್ಬ. ಸಾವಿಗೆ ಮೊದಲೇ ಮರಣದಂಥ ಮರೆವಿನ ಕಾಯಿಲೆ ಅವನನ್ನು ಆವರಿಸತೊಡಗಿತು. ನೆನಪಿನ ಜೊತೆ ಸೆಣಸತೊಡಗಿದ್ದ ಮಹಾಪ್ರತಿಭೆ (ಜೀನಿಯಸ್) ಮಾರ್ಕ್ವೆಜ್‌ಗೆ ಪೂರ್ಣ ಮರೆವು ಆವರಿಸುವ ಎರಡು ವರ್ಷಗಳ ಮೊದಲೇ ಮನಸ್ಸು ದಿಕ್ಕೆಡುತ್ತಿದೆ ಎಂಬುದು ಗೊತ್ತಾಗತೊಡಗಿತ್ತು. ‘ನೆನಪು ಹೋಗ್ತಾ ಇದೆ, ಏನಾರೂ ಮಾಡಿ, ಏನಾರೂ ಮಾಡಿ’ ಎಂದು ಅವರಿವರನ್ನು ಕೇಳುತ್ತಲೇ ಇದ್ದ. 


ದಿಗ್ಭ್ರಮೆಗೊಂಡ ಮಾರ್ಕ್ವೆಜ್, ‘ಅಲ್ರಪ್ಪಾ, ನಾನು ಕೆಲಸ ಮಾಡೋದೇ ನೆನಪಿನಿಂದ. ನೆನಪೇ ನನ್ನ ಸಾಧನ. ನೆನಪೇ ನನ್ನ ಮೂಲದ್ರವ್ಯ. ನೆನಪೇ ಇಲ್ಲದೆ ನನಗೆ ಏನೇನೂ ಮಾಡೋಕಾಗಲ್ಲ, ಹೆಲ್ಪ್ ಮಿ’ ಎನ್ನುತ್ತಲೇ ಇರುವನು. ಒಂದೊಂದು ದಿನ ಒಂದು, ಒಂದೂವರೆ ಗಂಟೆ ಇದನ್ನೇ ಹೇಳುತ್ತಾ ಹೇಳುತ್ತಾ ಸುಮ್ಮನಾಗುವನು. ಆಮೇಲೆ ಒಂಚೂರು ಪ್ರಶಾಂತವಾಗುತ್ತಾ ಹೇಳುವನು: ‘ನೆನಪು ಹೊರಟೋಗ್ತಾ ಇದೆ. ನನ್ನ ಅದೃಷ್ಟ ಅಂದ್ರೆ ನೆನಪಿನ ಶಕ್ತಿ ಹೋಗ್ತಾ ಇದೆ ಅನ್ನೋದೂ ಮರೆತು ಹೋಗ್ತಾ ಇದೆ!’ 


ನೆನಪು ಕಂತತೊಡಗಿದ ಕಾದಂಬರಿಕಾರನ ಎದುರು ಮನೆಯವರು ಅವನು ಬರೆದ ಪುಸ್ತಕಗಳನ್ನು ತಂದಿಡುವರು. ಮಾರ್ಕ್ವೆಜ್ ಇವನ್ನೆಲ್ಲ ಎಲ್ಲೋ ನೋಡಿರುವೆನೆಂಬಂತೆ ಕಣ್ಣರಳಿಸುವನು. ಹಿಂದೆಲ್ಲ, ‘ಯಾವ ಪುಸ್ತಕದಲ್ಲಿ ಏನು ತಪ್ಪಿರುತ್ತೋ, ನಾನು ಬರೆದಿದ್ದನ್ನೆಲ್ಲ ಈಗ ಮತ್ತೆ ಓದಿದರೆ ಎಲ್ಲಿ ನನ್ನ ಕ್ರಿಯೇಟಿವಿಟಿಗೆ ಹೊಡೆತ ಬೀಳುತ್ತೋ’ ಎಂಬ ದಿಗಿಲಿನಲ್ಲಿ ಮಾರ್ಕ್ವೆಜ್ ತನ್ನ ಪುಸ್ತಕಗಳನ್ನು ಮತ್ತೆ ಓದಿದವನಲ್ಲ.  ಈಗ ಅಲ್ಲಲ್ಲಿ ಅವನ್ನು ಓದಲೆತ್ನಿಸಿ, ‘ಅರೆರೆ!  ಇದೆಲ್ಲ ಎಲ್ಲಿಂದ ಬಂತಪ್ಪಾ?’ ಎಂದು ಅಚ್ಚರಿಯಿಂದ ಮಗನನ್ನು ಕೇಳುವನು. ಆ ಪುಸ್ತಕದಲ್ಲಿರುವ ಏನೊಂದೂ ತಿಳಿಯುತ್ತಿಲ್ಲ. ಪುಸ್ತಕ ಮುಚ್ಚಿ, ಹಿಂಬದಿಯ ಕವರ್ ಮೇಲೆ ತನ್ನ ಫೋಟೋ ನೋಡಿ ವಿಸ್ಮಯಗೊಳ್ಳುವನು. ಪುಸ್ತಕ ತೆರೆದು ಓದಲೆತ್ನಿಸುವನು. 


ಮಂಕಾಗಿ ಮುದುಡಿದ್ದ ಮಾರ್ಕ್ವೆಜ್ ಸ್ಪ್ಯಾನಿಶ್ ಸಾಹಿತ್ಯದ ಸುವರ್ಣಯುಗದ ಕವಿತೆಗಳನ್ನು ನೆನಸಿಕೊಂಡು ಹೇಳತೊಡಗುವನು. ಹಲವಾರು ಕವಿತೆಗಳು ಅವನಿಗೆ ಬಾಯಿಪಾಠವಾಗಿದ್ದವು. ಹಿಂದೊಮ್ಮೆ ಅವನು ಗಂಟೆಗಟ್ಟಲೆ ನಡೆಯಲಿದ್ದ ಸ್ಕ್ಯಾನಿಂಗ್ ಭಯದಿಂದ ಪಾರಾಗಲು ನಲವತ್ತೈದು ನಿಮಿಷ ಎಡೆಬಿಡದೆ ನೆನಪಿನಿಂದ ಕವಿತೆಗಳನ್ನು ಹೇಳುತ್ತಲೇ ಇದ್ದ! ಅದನ್ನು ನೆನೆದ ಮನೆಯವರು ಅವನಿಗೆ ಪ್ರಿಯವಾದ ಸಂಗೀತ ಹಾಕುವರು. ಮಾರ್ಕ್ವೆಜ್ ಕಣ್ಣರಳುವುದು. ಹಿಂದೆಲ್ಲ ರೊಮ್ಯಾಂಟಿಕ್ ಹಾಡುಗಳೆಂದರೆ ಅವನಿಗೆ ಪ್ರಾಣ. ‘ಲವ್ ಇನ್ ದಿ ಟೈಮ್ ಆಫ್ ಕಾಲರಾ’ ಕಾದಂಬರಿ ಬರೆಯುತ್ತಿದ್ದಾಗ ಆ ರೊಮ್ಯಾಂಟಿಕ್ ಹಾಡುಗಳನ್ನು ಮತ್ತೆ ಮತ್ತೆ ಕೇಳಿಸಿಕೊಂಡು ಅವುಗಳ ಭಾವುಕತೆ, ಭಾವತೀವ್ರತೆಯ ಉಕ್ಕು, ಅದರ ಪರಿಣಾಮ… ಇವನ್ನೆಲ್ಲ ಸ್ಟಡಿ ಮಾಡುತ್ತಿದ್ದ. ಈಗ ಆ ಸೆಂಟಿಮೆಂಟಲ್ ಹಾಡುಗಳು ಅವನಲ್ಲಿ ಜೀವ ಸೆಲೆ ಉಕ್ಕಿಸಲಾರವು.


ಹಾಗೆಂದು ಅವನಿಗೆ ಎಲ್ಲವೂ ಮರೆತು ಹೋಗಿತ್ತೆಂದು ಹೇಳುವುದು ಕೂಡ ಕಷ್ಟ. ಎಲ್ಲೋ ಆಳದಲ್ಲಿ ಯಾವುದೋ ಪ್ರತಿಧ್ವನಿ ಹುಟ್ಟಿ, ಎದುರಿಗಿದ್ದವರನ್ನು, ‘ಎಲ್ಲಾ ಆರಾಮ?’ ‘ಈಗ ಯಾವೂರಲ್ಲಿದೀರ?’ ‘ಮನೆ ಕಡೆ ಎಲ್ಲ ಚೆನ್ನಾಗಿದಾರ?’ ಎಂದೆಲ್ಲ ಕೇಳುವನು. ಇದಕ್ಕಿಂತ ಮುಖ್ಯವಾದ ಏನನ್ನೋ ಕೇಳಲು ತಡವರಿಸುತ್ತಾ ಶಬ್ದ ಹೊರಡದೆ ಸುಮ್ಮನಾಗುವನು. ಸಣ್ಣಗೆ ಹೊಗೆ ಮೇಲೆದ್ದು ಮರೆಯಾದಂತೆ ಮುಖದ ಮೇಲೆ ಚಣ ವಿಸ್ಮಯ, ಮುಜುಗರ ಮೂಡಿ ಮಾಯವಾಗುವುವು. ತಮಾಷೆಯ, ಕೇಳುಗರನ್ನು ಬಡಿದೆಬ್ಬಿಸುವ, ಪ್ರಚೋದಿಸುವ ಮಾತುಗಾರ ಮಾರ್ಕ್ವೆಜ್ ಈಗ ಪದಗಳಿಗಾಗಿ ತಡಕಾಡುವನು. ಪದಗಳು ಅವನ ಪ್ರಜ್ಞೆಯೊಳಗಿಲ್ಲವಲ್ಲ ಎಂದು ಮನೆಯವರು ಖಿನ್ನರಾಗಿದ್ದಾಗ, ಸಂಜೆ ಹಠಾತ್ತನೆ ಮಾರ್ಕ್ವೆಜ್ ಕೇಳುವನು: ‘ರಾತ್ರಿ ಎಲ್ಲಿಗೆ ಹೋಗೋಣ? ನಗನಗ್ತಾ ಇರೋ ಕಡೆಗೆ ಹೋಗೋಣಾ? ಡ್ಯಾನ್ಸ್ ಮಾಡೋಣಾ? ಆಂ? ಯಾಕೆ? ಯಾಕಾಗಲ್ಲ?’


ಹೆಂಡತಿ ಮರ್ಸಿಡಿಸ್ ರೂಮಿನೊಳಕ್ಕೆ ಅಡಿಯಿಡುವಳು. ಮಾರ್ಕ್ವೆಜ್‌ಗೆ ಅವಳ ಗುರುತು ಹತ್ತುವುದು. ‘ಮೆಶೆ! ಮರ್ಸಿಡಿಸ್! ಅಮ್ಮ! ಹೋಲಿ ಮದರ್!’ ಎನ್ನುವನು. ಒಂದೆರಡು ತಿಂಗಳ ಹಿಂದೆ ಮರ್ಸಿಡಿಸ್ ಒಳ ಬಂದಿದ್ದಾಗ, ಮಾರ್ಕ್ವೆಜ್ ಮಗನನ್ನು ಕೇಳಿದ್ದ: ‘ಇವಳ್ಯಾರಯ್ಯಾ ಅವಳ ಥರಾನೇ ಆಡ್ತಿದಾಳೆ? ಇವಳ್ಯಾಕೆ ಎಲ್ಲಾರ್ಗೂ ಆರ್ಡರ್ ಮಾಡ್ತಿದಾಳೆ? ಇವಳೇ ಮನೇ ನಡೆಸ್ತಿದಾಳಲ್ಲ? ನನಗೂ ಇವಳಿಗೂ ಏನೂ ಸಂಬಂಧ ಇಲ್ವಲ್ಲ?’ 


ಇದಾದ ಕೆಲವೇ ದಿನಗಳಲ್ಲಿ ಮಾರ್ಕ್ವೆಜ್‌ಗೆ ಮರ್ಸಿಸಿಡ್ ನೆನಪು ಹತ್ತುವುದು. ಅವಳು ತನ್ನ ಪರಮಾಪ್ತ ಸಖಿ ಎಂಬುದು ನೆನಪಾಗುವುದು. ಸೆಕ್ರೆಟರಿ, ಅಡುಗೆಯವಳು, ಮನೆಗೆಲಸದವರು ಎಲ್ಲರನ್ನೂ ಗುರುತಿಸುವನು. ಅಯ್ಯೋ, ಏನು ಮಾಡಿದರೂ ಅವರ ಹೆಸರು ಹೊಳೆಯದು. ಅವನ ಇಬ್ಬರು ಮಕ್ಕಳು -ರೋಡ್ರಿಗೊ, ಗೊಂಝಾಲೊ- ಬಂದಾಗ ಕಡುಕುತೂಹಲದಿಂದ ಅವರನ್ನೇ ನೋಡುವನು. ಎಲ್ಲೋ ನೋಡಿದ ನೆನಪು. ಯಾರೂಂತ ಗೊತ್ತಾಗುತ್ತಿಲ್ಲ. ಮಾರ್ಕ್ವೆಜ್ ಮನೆಗೆಲಸದವಳನ್ನು ಕೇಳುವನು: 
‘ಈಗ ಪಕ್ಕದ ರೂಮಿಗೆ ಹೋದ್ರಲ್ಲ, ಯಾರವರು?’ 
‘ನಿಮ್ಮ ಮಕ್ಳು’
‘ನಿಜಾನ? ಅವರಾ? ಫಕ್! ನಾನಂತೂ ನಂಬಲ್ಲ”
ಮಾರ್ಕ್ವೆಜ್ ಸ್ಥಿತಿ ಹೀಗಿದ್ದಾಗ, ರೋಡ್ರಿಗೋಗೆ ಫೋನಿನಲ್ಲಿ ಗೆಳತಿ ಕೇಳಿದಳು:‘ನಿಮ್ಮಪ್ಪ ಹೇಗಿದ್ದಾನೆ?’ 
‘ಅಪ್ಪ ವರ್ತಮಾನದಲ್ಲಿ ಬದುಕುತ್ತಿದ್ದಾನೆ. ಅವನಿಗೆ ಭೂತಕಾಲದ ಹೊರೆಯಿಲ್ಲ. ಭವಿಷ್ಯದ ಬಗ್ಗೆ ನಿರೀಕ್ಷೆಗಳಿಲ್ಲ. ಆದರೆ…ಕತೆ ಹೇಳಲು ಬೇಕಾದ ಮೂಲ ದ್ರವ್ಯವಾದ ಹಿಂದಣ ಅನುಭವವಾಗಲೀ, ಆ ಅನುಭವದ ಆಧಾರದಿಂದ ಮುಂದೇನಾಗುತ್ತದೆ ಅಂತ ಹೇಳುವ ಕೆಲಸವಾಗಲೀ ಇನ್ನು ಮುಂದೆಂದೂ ಅವನ ಜೀವನದಲ್ಲಿ ಇರಲ್ಲ’ ಎಂದ ರೋಡ್ರಿಗೊ.


ಫೊಟೋಗ್ರಾಫರ್ ರೋಡ್ರಿಗೊ ಸಿನಿಮಾಗಳನ್ನೂ ಮಾಡುತ್ತಿದ್ದ. ನೆನಪು ಕೈ ಕೊಡಲಾರಂಭಿಸಿದ್ದ ಕಾಲದಲ್ಲಿ ಮಾರ್ಕ್ವೆಜ್ ಮಗನ ಜೊತೆ ಕೂತು ಅವನ ಸಿನಿಮಾಕ್ಕಾಗಿ ಚಿತ್ರಕತೆ ಬರೆಯಲು ಹೊರಟಿದ್ದ. ಕತೆಯ ಹಂದರ ಕುತೂಹಲಕರವಾಗಿತ್ತು: ವೃತ್ತಿ ಜೀವನದಲ್ಲಿ ಯಶಸ್ವಿಯಾದ ಮಧ್ಯವಯಸ್ಕ ಮಹಿಳೆಗೆ ತನ್ನ ಗಂಡ ಇನ್ಯಾರದೋ ಪ್ರೇಮದಲ್ಲಿ ಸಿಲುಕಿರಬಹುದು ಎಂಬ ಅನುಮಾನ ಶುರುವಾಗುತ್ತದೆ. ಬರಬರುತ್ತಾ ಅದು ನಿಜವೆಂದೂ ಗೊತ್ತಾಗುತ್ತದೆ. ವಿಚಿತ್ರವೆಂದರೆ, ಆ ಹೆಂಗಸು ಕೂಡ ಇವಳ ಥರವೇ ಇದ್ದಾಳೆ. ಇವಳದೇ ರೂಢಿ ರಿವಾಜು, ಇವಳದೇ ಅಭಿರುಚಿ. ಅವಳು ಇರುವ ಮನೆ ಕೂಡ ಇವಳ ಮನೆಯ ಥರವೇ ಇದೆ. ‘ಈ ಎರಡೂ ಪಾತ್ರಗಳನ್ನ ಒಬ್ಬಳೇ ನಟಿ ಮಾಡಬೇಕು’ ಅನ್ನುತ್ತಿದ್ದ ಮಾರ್ಕ್ವೆಜ್.


ಇದೀಗ ಮಾರ್ಕ್ವೆಜ್ ಮಗನ ಜೊತೆ ಕೂತು ಚಿತ್ರಕತೆ ಬೆಳೆಸಲು ಹೊರಟರೆ ನೆನಪು ಕೈ ಕೊಡುತ್ತಿದೆ. ಏನೋ ಹೇಳಲು ಹೊರಡುತ್ತಾನೆ. ತಕ್ಕ ಪದ ಸಿಗುತ್ತಿಲ್ಲ. ಅವನು ಹೇಳುವುದು ಮಗನಿಗೆ ತಿಳಿಯುತ್ತಿಲ್ಲ. ಖಿನ್ನನಾದ ಮಗ ಆ ಪ್ರಯತ್ನವನ್ನೇ ಕೈ ಬಿಡುತ್ತಾನೆ. ಹಿಂದೆಲ್ಲ ಅಪ್ಪ ಅಸಾಧಾರಣ ಧ್ಯಾನದಲ್ಲಿ ಬರೆಯುತ್ತಾ ಕೂತಿರುತ್ತಿದ್ದ ಚಿತ್ರಗಳು ಮಗನ ಕಣ್ಣೆದುರು ಮೂಡುತ್ತವೆ. ‘ಅಬ್ಬ!ಇಷ್ಟು ಫೋಕಸ್ಡ್ ಆಗಿದ್ರೆ ಇವನು ಸಾಧಿಸೋಕಾಗದೇ ಇರೋದು ಏನಾದರೂ ಉಂಟಾ!’ ಎಂದು ಮಗ ಅಪ್ಪನ ಮಹಾಮಗ್ನತೆಯನ್ನು ವಿಸ್ಮಯದಿಂದ, ಹೆಮ್ಮೆಯಿಂದ ನೆನೆಯುವನು. ಅಪ್ಪ ಆಯಾ ದಿನದ ಕಂತು ಬರೆದು ಮಗಿಸಿ ಡೈನಿಂಗ್ ಟೇಬಲ್ಲಿನಲ್ಲಿ ಕೂತು ಅಂದಿನ ಬರವಣಿಗೆಯ ಏಳುಬೀಳನ್ನು ಹೇಳುತ್ತಿದ್ದ ಚಿತ್ರ ನೆನಪಾಗುವುದು. ಸದಾ ಚಡಪಡಿಕೆ, ಚಟುವಟಿಕೆ, ಕ್ರಿಯೇಟಿವಿಟಿಗಳ ಲೋಕಶ್ರೇಷ್ಠ ಕಾದಂಬರಿಗಾರನ ಅದ್ಭುತ ಸೃಜನಶೀಲ ಕಾಲ ಇನ್ನು ಮರಳಿ ಬಾರದ ಹಾಗೆ ಕಳೆದು ಹೋಗಿತ್ತು. ಮಾರ್ಕ್ವೆಜ್‌ಗೆ ಅದ್ಯಾವುದೂ ನೆನಪಿರಲಿಲ್ಲ.


 2014ಕ್ಕೆ ಮಾರ್ಕ್ವೆಜ್‌ಗೆ ಎಂಬತ್ತೇಳು ತುಂಬುವ ಹೊತ್ತಿಗೆ ಪೂರ್ಣ ಮರೆವು ಆವರಿಸಿತ್ತು. ಒಂದಿನ ಜೋರು ನೆಗಡಿಯಾಯಿತು. ಆಸ್ಪತ್ರೆಯ ಹಾಸಿಗೆಯಲ್ಲಿ ಮಲಗಿಸಿದ ತಕ್ಷಣ ಮಾರ್ಕ್ವೆಜ್ ಸಣ್ಣ ದನಿಯಲ್ಲಿ ಗೊಣಗುತ್ತಾನೆ: ‘ಮನೇಗೋಗ್ಬೇಕು.’ ‘ಮನೇಲೇ ಇದೀರಲ್ಲ’ ಎನ್ನುತ್ತಾಳೆ ಮರ್ಸಿಡಿಸ್. ಮಾರ್ಕ್ವೆಜ್ ಸುತ್ತ ನೋಡುತ್ತಾನೆ. ಮನೆಯ ಯಾವ ಕುರುಹೂ ಕಾಣದೆ ಖಿನ್ನನಾಗುತ್ತಾನೆ. ನಡುಗುವ ಬಲಗೈ ಎತ್ತಿ ಇದು ನನ್ನದೇ ಹೌದು ಅಂದುಕೊಳ್ಳುತ್ತಾನೆ. ಅದೇ ಕೈ ಮೆಲ್ಲಗೆ ಕೆಳ ಜಾರಿ ಕಣ್ಣೆವೆಗಳನ್ನು ಮುಚ್ಚುತ್ತದೆ. ಹುಬ್ಬು ಗಂಟಿಕ್ಕಿಕೊಳ್ಳುತ್ತವೆ. ತುಟಿ ಕಚ್ಚಿಕೊಳ್ಳುತ್ತವೆ. ಹಾಸಿಗೆಯಲ್ಲಿ ಉರುಳಿ ಬಿದ್ದಿದ್ದ ಮಾರ್ಕ್ವೆಜ್ ನಡುನಡುವೆ ಮೇಲೇಳುತ್ತಾನೆ.  


ರೌಂಡ್ಸಿಗೆ ಬಂದ ಡಾಕ್ಟರ್, ‘ಹೇಗಿದೀರ?’ ಅಂದರೆ, ಮಾರ್ಕ್ವೆಜ್, ‘ಸ್ಕ್ರೂಡ್!’ ಅನ್ನುತ್ತಾನೆ. ಜೀವನದುದ್ದಕ್ಕೂ ಅವನನ್ನು ಲವಲವಿಕೆಯಲ್ಲಿಟ್ಟಿದ್ದ ಸ್ತ್ರೀಚೈತನ್ಯ ಈಗಲೂ ಅವನಲ್ಲಿ ಮುದ ಉಕ್ಕಿಸುತ್ತವೆ. ಸುತ್ತ ಹೆಂಗಳೆಯರ ದನಿ ಕೇಳಿ ಮಾರ್ಕ್ವೆಜ್ ಕಣ್ಣು ಬಿಡುತ್ತಾನೆ. ಹೆಂಗಳೆಯರೆಲ್ಲ ಅವನತ್ತ ಧಾವಿಸಿ ಅಕ್ಕರೆಯಿಂದ ಮಾತಾಡತೊಡಗುತ್ತಾರೆ. ಮಾರ್ಕ್ವೆಜ್ ಕಣ್ಣು ಫಳಗುಡುತ್ತವೆ.  
 ಶ್ವಾಸಕೋಶದ ಕ್ಯಾನ್ಸರ್ ತಗುಲಿರುವ ಮಾರ್ಕ್ವೆಝ್, ‘ಅಬ್ಬಬ್ಬ ಅಂದರೆ ಇನ್ನು ಕೆಲವು ತಿಂಗಳಷ್ಟೇ ಉಳಿದಾನಷ್ಟೇ, ಇರುವಷ್ಟು ದಿನ ಮನೆಯಲ್ಲೇ ಇರಲು ಬಿಡೋದು ಒಳ್ಳೇದು’ ಎನ್ನುತ್ತಾರೆ ಡಾಕ್ಟರು. ಆಸ್ಪತ್ರೆಯ ಹಾಸಿಗೆ, ರೆಸ್ಪಿರೇಟರ್ ಸಮೇತ ಮಾರ್ಕ್ವೆಜ್ ಮರಳಿ ಮನೆ ಸೇರುತ್ತಾನೆ. ಮಹಾಪ್ರತಿಭೆಯ ಕೊನೆಯ ದಿನಗಳು ಹತ್ತಿರವಾಗುತ್ತಿವೆ. ಇದ್ದಕ್ಕಿದ್ದಂತೆ ಮನೆಯಲ್ಲಿ ಹಕ್ಕಿಯೊಂದು ಸತ್ತು ಬೀಳುತ್ತದೆ. ‘ಇದು ಶುಭಶಕುನವೋ? ಅಪಶಕುನವೋ? ಈ ಹಕ್ಕೀನ ಆಚೆ ಎಸೀಬೇಕೋ? ಹೂಗಿಡಗಳ ಮಧ್ಯೆ ಹೂಳಬೇಕೋ?’ ಎಂಬ ಚರ್ಚೆ ಶುರುವಾಗುತ್ತದೆ. ಲ್ಯಾಟಿನ್ ಅಮೆರಿಕದ ನಂಬಿಕೆ, ಜಾನಪದ, ನಿಗೂಢತೆ, ಮೂಢನಂಬಿಕೆಗಳ ಮಾಂತ್ರಿಕ ವಾಸ್ತವದ ಪರಿಸರವನ್ನು ಸೂರೆ ಹೊಡೆದು ‘ಒನ್ ಹಂಡ್ರಡ್ ಯಿಯರ್ಸ್ ಆಫ್ ಸಾಲಿಟ್ಯೂಡ್’ ಕಾದಂಬರಿ ಬರೆದಿದ್ದ ಮಾರ್ಕ್ವೆಝ್ ಮನೆಯಲ್ಲಿ ಈ ಚರ್ಚೆ ನಡೆದಿದ್ದು ಸಹಜವಾಗಿತ್ತು! ಅವತ್ತು ಮಧ್ಯಾಹ್ನ ಮಾರ್ಕ್ವೆಜ್ ಎದೆಬಡಿತ ನಿಂತುಹೋಯಿತು.


2020ರಲ್ಲಿ ರೋಡ್ರಿಗೊ ಗಾರ್ಸಿಯಾ ‘ಎ ಫೇರ್ ವೆಲ್ ಟು ಗ್ಯಾಬೊ ಅಂಡ್ ಮರ್ಸಿಡಿಸ್: ದ ಪಬ್ಲಿಕ್, ದ ಪ್ರೈವೇಟ್, ದ ಸೀಕ್ರೆಟ್’ ಎಂಬ ಪುಟ್ಟ ಪುಸ್ತಕ ಪ್ರಕಟಿಸಿದ. ಈ ಪುಸ್ತಕದಲ್ಲಿ ಮಾರ್ಕ್ವೆಜ್ ಮರೆವಿನ ವರ್ಷಗಳ ಕತೆ ಓದುತ್ತಾ, ವ್ಯಾಸ ಸೃಷ್ಟಿಸಿದ ಕರ್ಣನ ಮರೆವು, ಕಾಳಿದಾಸನ ದುಶ್ಯಂತನ ಮರೆವು… ಇವೆಲ್ಲ ನೆನಪಾದವು. ಇವು ಕೇವಲ ಪುರಾಣ ಕತೆಗಳಲ್ಲ; ನಮ್ಮ ಪ್ರಾಚೀನ ಮಹಾಪ್ರತಿಭೆಗಳು ಸೃಷ್ಟಿಸಿದ ಮರೆವಿನ ಕಾಯಿಲೆಯ ಅನನ್ಯ ರೂಪಕಗಳು ಎನ್ನಿಸತೊಡಗಿತು. ಎಲ್ಲ ಲೇಖಕ, ಲೇಖಕಿಯರ ಬದುಕಿನ ಕೊನೆಕೊನೆಗೆ ಅಕಸ್ಮಾತ್ ನೆನಪು ಇನ್ನೂ ಉಳಿದಿದ್ದರೂ ಬರೆಯಲಾಗದಂಥ ಗರ ಬಡಿದ ಸ್ಥಿತಿಯ, ಸೃಜನಶೀಲತೆ ಕಂತುವ ಘಟ್ಟದ ದುರಂತ ಕೂಡ ಹೆಚ್ಚುಕಡಿಮೆ ಮಾರ್ಕ್ವೆಜ್ ನ ಕೊನೆಯ ವರ್ಷಗಳ ಮರೆವಿನ ದುರಂತದಂತೆಯೇ ಇರಬಹುದೇನೋ…  
ಅದೇನೇ ಇರಲಿ, ಮಾರ್ಕ್ವೆಜ್ ತೀರಿಕೊಂಡ ದಿನ ಅಪ್ಪನ ಹಲವು ಮಾತುಗಳು ಮಗನ ಕಿವಿಯಲ್ಲಿ ಮೊರೆಯತೊಡಗಿದವು. ಆ ಮಾತುಗಳಲ್ಲಿ ಅಪ್ಪ ಹೇಳಿದ್ದ ಅಪ್ಪಟ ಚಿನ್ನದಂಥ ಮಾತೊಂದನ್ನು   ಕೊನೆವರೆಗೂ ನೆನಪಿಟ್ಟುಕೊಳ್ಳಬೇಕೆಂದು ಮಗನಿಗನ್ನಿಸಿತು: 
‘ತುಂಬ ಚೆನ್ನಾಗಿ ಬರೆದ ಬರವಣಿಗೆಗಿಂತ ಉತ್ತಮವಾದದ್ದು ಯಾವುದೂ ಇಲ್ಲ.’
ಉತ್ತಮ ಬರವಣಿಗೆಯ ಬಗ್ಗೆ, ನಿಜಕ್ಕೂ ಚೆನ್ನಾಗಿ ಬರೆಯುವ ಬಗ್ಗೆ, ಮಾರ್ಕ್ವೆಜ್ ಥರದ ಕಾತರ, ತಹತಹ, ಶ್ರದ್ಧೆ, ಪ್ರೀತಿ, ನಂಬಿಕೆ, ನಿರೀಕ್ಷೆ ಇಲ್ಲದಿದ್ದರೆ ಯಾರೂ ಒಳ್ಳೆಯ ಬರಹಗಾರರಾಗಲಾರರು…

Share on:


Recent Posts

Latest Blogs



Kamakasturibana

YouTube



Comments

6 Comments



| Gangadhara BM

ಕತೆಯಂತೆ ಓದಲು ಸಾಧ್ಯವಿರುವ ನಿಜಬದುಕಿನ ವಾಸ್ತವ. ನೆನಪಿನ ಚೈತನ್ಯದಿಂದ ಅರಳುವ ಸಾಹಿತ್ಯ ಪ್ರತಿಭೆಗೆ ಮರೆವಿನ ರೋಗ ಕಾಡಿದಾಗ ಉಂಟಾಗುವ ತಳಮಳವೆ ಮತ್ತೊಂದು ಕತೆಯಾಗಿ ಮಾರ್ಪಟ್ಟಿದೆ! ಚೆನ್ನಾಗಿದೆ ಸರ್. ಗೆಳೆಯರ ಗುಂಪುಗಳಿಗೆ ಷೇರ್ ಮಾಡಿರುವೆ. ಧನ್ಯವಾದಗಳು. 


| Sangana Gouda

Living to Telling the tale and telling the tales already lived


| Rajappa Dalavayi

ಲೇಖನ ಇಷ್ಟವಾಯಿತು 


| Neelamma.Ishwarappa Holi

Very nice sir


| BANJAGERE JAYAPRAKASH

ಬರಹ ಮಾರ್ಮಿಕವಾಗಿದೆ. ಲೇಖಕ ತನ್ನ ನೆನಪುಗಳ ಬುತ್ತಿ ಇಟ್ಟುಕೊಂಡು ವರ್ತಮಾನದಲ್ಲಿ ಬದುಕುತ್ತಾ ಭವಿಷ್ಯತ್ತನ್ನು ಕಂಡರಿಸುತ್ತಾನೆ. ನೆನಪುಗಳೇ ಮಾಸಿ ಹೋದರೆ…! ಬಹಳ ಒಳ್ಳೆಯ ಲೇಖನ. ಮಾರ್ಕೆಜ್ ನಂಥ ಶ್ರೇಷ್ಠ ಬರಹಗಾರನ ಕಡೆಯ ಕಾಲದ ಚಿತ್ರಣ ಮನಸ್ಸಿನಲ್ಲೊಂದು ವಿಷಾದ ಹುಟ್ಟಿಸುತ್ತದೆ.  

‘ತುಂಬ ಚೆನ್ನಾಗಿ ಬರೆದ ಬರವಣಿಗೆಗಿಂತ ಉತ್ತಮವಾದದ್ದು ಯಾವುದೂ ಇಲ್ಲ… ಬರವಣಿಗೆಯ ಬಗ್ಗೆ, ನಿಜಕ್ಕೂ ಚೆನ್ನಾಗಿ ಬರೆಯುವ ಬಗ್ಗೆ, ಮಾರ್ಕ್ವೆಜ್ ಥರದ ಕಾತರ, ತಹತಹ, ಶ್ರದ್ಧೆ, ಪ್ರೀತಿ, ನಂಬಿಕೆ, ನಿರೀಕ್ಷೆ ಇಲ್ಲದಿದ್ದರೆ ಯಾರೂ ಒಳ್ಳೆಯ ಬರಹಗಾರರಾಗಲಾರರು…’ಈ ಮಾತುಗಳು ಬರಹಗಾರರಿಗೆ ಕೈದೀವಿಗೆಯಾಗಬೇಕು.

 

 


| P R Muralidhar

ಮನ ಮುಟ್ಟಿದ ಲೇಖನ 




Add Comment