ಕಾದಂಬರಿ, ಮ್ಯೂಸಿಯಂ ಮತ್ತು ಮುಗ್ಧತೆ

ಈ ಮೂರು ಕಾದಂಬರಿಗಳನ್ನು ಜಗತ್ತಿನ ಗಂಭೀರ-ಪ್ರಖ್ಯಾತ ಪ್ರೇಮ ಕಾದಂಬರಿಗಳು ಎನ್ನುತ್ತಾರೆ: ಅನ್ನಾಕರೆನಿನಾ (ಟಾಲ್‌ಸ್ಟಾಯ್), ಮೇಡಂ ಬೋವರಿ (ಗುಸ್ತಾವ್ ಫ್ಲೋಬೋ), ಲವ್ ಇನ್ ದ ಟೈಮ್ ಆಫ್ ಕಾಲರಾ, (ಮಾರ್ಕ್ವೆಝ್). ನನ್ನ ಪ್ರಕಾರ, ಈ ಸಾಲಿನಲ್ಲಿ ಹತ್ತೊಂಬತ್ತನೇ ಶತಮಾನದ ಎಮಿಲಿ ಬ್ರಾಂಟೆಯ ಸಂಕೀರ್ಣ ಪ್ರೇಮ ಕಾದಂಬರಿ ‘ವದರಿಂಗ್ ಹೈಟ್ಸ್’ ಕೂಡ ಇರುತ್ತದೆ. 2008ರಲ್ಲಿ ಬಂದ ಒರಾನ್ ಪಾಮುಕ್‌ನ 'ಮ್ಯೂಸಿಯಂ ಆಫ್ ಇನ್ನೊಸೆನ್ಸ್' ಕೂಡ ಈ ಕಾದಂಬರಿಗಳ ಸಾಲಿಗೆ ಸೇರಿಕೊಂಡಿದೆ. 'ಮ್ಯೂಸಿಯಂ ಆಫ್ ಇನ್ನೊಸೆನ್ಸ್' ಇದ್ದಕ್ಕಿದ್ದಂತೆ ನನ್ನನ್ನು ಹಿಡಿದಿದ್ದು 2012ರಲ್ಲಿ! ಅಂಕಣವೊಂದನ್ನು ಬರೆಯಲು ಈ ಕಾದಂಬರಿಯನ್ನು ಮತ್ತೆ ಕೈಗೆತ್ತಿಕೊಂಡರೆ ಹಿಂದೆ ಮಾರ್ಕ್ ಮಾಡಿದ ನೂರಾರು ಸಾಲುಗಳು ಎರಡು ದಿನ-ರಾತ್ರಿ ನನ್ನನ್ನು ಆವರಿಸಿಕೊಂಡವು!  

‘ಮ್ಯೂಸಿಯಂ ಆಫ್ ಇನ್ನೊಸೆನ್ಸ್’ ಕಾದಂಬರಿಯ ನಿರೂಪಕ-ನಾಯಕ ಕೆಮಾಲ್ ತನ್ನ ಪ್ರಿಯತಮೆ ಎಸೆದ ಚಾಕಲೇಟ್ ಕವರ್, ಆಕೆ ಟೀ ಕುಡಿದಿದ್ದ ಕಪ್, ಹ್ಯಾಂಡ್ ಕರ್ಚಿಫ್, ಸೋಡಾ ಬಾಟಲ್, ಪೆನ್ಸಿಲ್… ಹೀಗೆ ಅವಳ ವಸ್ತುಗಳನ್ನು ಎತ್ತಿಕೊಂಡು ಜೇಬಿಗೆ ಇಳಿಬಿಟ್ಟುಕೊಳ್ಳುತ್ತಿರುವಾಗಲೇ ನನಗೆ ಹೊಳೆದುಹೋಯಿತು: ಇದು ನಮ್ಮ ಕಾಲದ ಮಹಾಪ್ರತಿಭಾಶಾಲಿ ಕಾದಂಬರಿಕಾರನೊಬ್ಬ ಕೊಡಲಿರುವ ಕಾದಂಬರಿಯ ಹೊಸ ವ್ಯಾಖ್ಯಾನ! 'ಮ್ಯೂಸಿಯಂ ಆಫ್ ಇನ್ನೊಸೆನ್ಸ್' ಕಾದಂಬರಿ ಓದಿದಾಗಿನಿಂದ ಕಾದಂಬರಿ ಪ್ರಕಾರವೇ ಮುಗ್ಧತೆಯ ಮ್ಯೂಸಿಯಂ ಎಂಬುದು ನನ್ನ ನೆಚ್ಚಿನ ವ್ಯಾಖ್ಯಾನವಾಗಿಬಿಟ್ಟಿತು.

ಕಾಲದ ಓಟದಲ್ಲಿ ಪೂರ್ಣವಾಗಿ ನಾಶವಾಗದ ಮಾನವರ ಮುಗ್ಧತೆಯ ರಕ್ಷಕಿಯಾಗಿ ಕಾದಂಬರಿ ಕೆಲಸ ಮಾಡುತ್ತಿರುತ್ತದೆ. ಮುಗ್ಧತೆಯನ್ನು ರಕ್ಷಿಸಲು ಅತ್ಯಗತ್ಯವಾದ ಸಾವಧಾನ, ವ್ಯವಧಾನಗಳೂ ಕಾದಂಬರಿ ಪ್ರಕಾರದಲ್ಲಿವೆ. ಕಾಲ ದೇಶಗಳ ವ್ಯಾಪ್ತಿ ಎಷ್ಟು ಬೇಕಾದರೂ ಹಿಗ್ಗಬಲ್ಲಷ್ಟು ವಿಸ್ತಾರ ಕಾದಂಬರಿ ಪ್ರಕಾರದಲ್ಲಿದೆ. ಈ ದೃಷ್ಟಿಯಿಂದ ಕೂಡ ಕಾದಂಬರಿಯೇ ಮುಗ್ಧತೆಯ ಕಾಯಂ ಮ್ಯೂಸಿಯಂ!

ಟರ್ಕಿಯ ಇಸ್ತಾನ್‌ಬುಲ್ ನಗರದಲ್ಲಿ ನೆಲೆಸಿರುವ ಒರಾನ್ ಪಾಮುಕ್ ಬರೆದ ‘ಮ್ಯೂಸಿಯಂ ಆಫ್ ಇನ್ನೊಸೆನ್ಸ್’ ಕಾದಂಬರಿಯಲ್ಲಿ ಮೂಡಿದ ಹೊಸ ವ್ಯಾಖ್ಯಾನ ಹುಟ್ಟುವ ಹಲವು ದಶಕಗಳ ಕೆಳಗೆ ಇಂಗ್ಲಿಷ್ ಕಾದಂಬರಿಕಾರ ಡಿ.ಎಚ್. ಲಾರೆನ್ಸ್, ‘ಕಾದಂಬರಿ ಎನ್ನುವುದು ಬದಲಾಗುತ್ತಾ ಹೋಗುವ ಜೀವಂತ ಸಂಬಂಧಗಳ ಕಾಮನಬಿಲ್ಲು’ ಎಂದಿದ್ದ; ಇದು ನನ್ನ ಪ್ರಿಯವಾದ ಕಾದಂಬರಿ ವ್ಯಾಖ್ಯಾನವಾಗಿತ್ತು. ಇನ್ನೂರು ವರ್ಷಗಳ ಕೆಳಗೆ ಪಶ್ಚಿಮದಲ್ಲಿ ಕಾದಂಬರಿ ವಿಕಾಸಗೊಳ್ಳುತ್ತಿದ್ದ ಕಾಲದಲ್ಲಿ ಅದನ್ನು ‘ಪಾಕೆಟ್ ಥಿಯೇಟರ್’ ಎನ್ನುತ್ತಿದ್ದರು. ಕುವೆಂಪು ಇದನ್ನು ಇನ್ನಷ್ಟು ಚಿತ್ರಕಗೊಳಿಸಿ, ‘ಕಾನೂರು ಹೆಗ್ಗಡಿತಿ’ಯ ಮುನ್ನುಡಿಯಲ್ಲಿ ‘ಕಾದಂಬರಿ ಕರತಲ ರಂಗಭೂಮಿ’ ಎಂದರು. ಕುವೆಂಪು ಬಣ್ಣನೆಯಲ್ಲಿರುವ ‘ಕರತಲ’ಕ್ಕೆ ಅಕ್ಕಮಹಾದೇವಿಯ ‘ಕರಸ್ಥಲ’ (‘ಎನ್ನಲ್ಲಿ ಏನುಂಟೆಂದು ಕರಸ್ಥಲವನಿಂಬುಗೊಂಡೆ ಹೇಳಾ ಚೆನ್ನಮಲ್ಲಿಕಾರ್ಜುನಾ) ಕೂಡ ಕನೆಕ್ಟಾಗಿ ಥ್ರಿಲ್ಲಾಗಿತ್ತು!

ಕಾದಂಬರಿ ಕುರಿತ ಹಳೆಯ ವ್ಯಾಖ್ಯಾನಗಳನ್ನೆಲ್ಲ ಹೊಡೆದೋಡಿಸುವಂತೆ ಇಪ್ಪತ್ತೊಂದನೆಯ ಶತಮಾನದಲ್ಲಿ ಪಾಮುಕ್ ಕೊಟ್ಟ ಕಾದಂಬರಿ ವ್ಯಾಖ್ಯಾನ ಈಚಿನ ವರ್ಷಗಳಲ್ಲಿ ನನ್ನಲ್ಲಿ ಉಳಿದುಬಿಟ್ಟಿದೆ. ಸಾರಾಂಶ ಕೊಟ್ಟರೆ ಕಾದಂಬರಿ ಬಡವಾಗುತ್ತದೆ. ಆದರೂ ಅದರ ಪುಟ್ಟ ಹಂದರ ಹೀಗಿದೆ:

ಕಾದಂಬರಿಯ ನಾಯಕ ಕೆಮಾಲ್ ಬೇ, ಸಿಬೆಲ್ ಎಂಬ ಸುಂದರಿಯನ್ನು ಮದುವೆಯಾಗಲಿದ್ದಾಗ ತನ್ನ ಸಂಬಂಧಿ, ಬಡ ಹುಡುಗಿ, ಫುಸುನ್ ಬಗ್ಗೆ ಮೋಹ ಹುಟ್ಟುತ್ತದೆ. ಅಪಾರ್ಟ್‌ಮೆಂಟೊಂದರಲ್ಲಿ ಕೆಮಾಲ್–ಫುಸುನ್ ತೀವ್ರ ಪ್ರೇಮ ಶುರುವಾಗುತ್ತದೆ. ತನ್ನ ನರನಾಡಿಗಳಲ್ಲಿ ಫುಸುನ್ ಆವರಿಸಿರುವಾಗ, ಕೆಮಾಲ್‌ಗೆ ಸಿಬೆಲ್ ಜೊತೆ ಲೈಂಗಿಕ ಸಂಬಂಧ ಅಸಾಧ್ಯವಾಗುತ್ತದೆ. ಮದುವೆಯ ನಿಶ್ಚಿತಾರ್ಥದ ಉಂಗುರ ಮರಳಿಸಿದ ಸಿಬೆಲ್ ಬೇರೊಬ್ಬನನ್ನು ಮದುವೆಯಾಗಲು ಹೊರಟಾಗ ಕೆಮಾಲ್ ನಿರಾಳನಾಗುತ್ತಾನೆ. ಆದರೆ ಕೆಮಾಲ್ ಮತ್ತೆ ಹುಡುಕಿ ಹೊರಟ ಫುಸುನ್ ಊರು ಬಿಟ್ಟು ದೂರದ ನಾಡಿಗೆ ಹೊರಟು ಹೋಗಿದ್ದಾಳೆ.

ಕಾಲಾನಂತರ ಫುಸುನ್ ಮರಳಿ ಬರುತ್ತಾಳೆ. ನಟಿಯಾಗುವ ಅವಳ ಕನಸಿಗೆ ನೀರೆರೆದ ಚಿತ್ರಕಥಾಲೇಖಕನ ಜೊತೆ ಅವಳ ಮದುವೆಯಾಗಿದೆ. ಆದರೇನಂತೆ! ಕೆಮಾಲ್‌ಗೆ ಇನ್ನೇನೂ ಬೇಡ! ಸುಮ್ಮನೆ ಫುಸುನ್ ಸಾನ್ನಿಧ್ಯದಲ್ಲಿದ್ದರೆ ಸಾಕು! ಪಾಪಪ್ರಜ್ಞೆ, ಅವಳನ್ನು ಕಳೆದುಕೊಂಡ ನೋವು ಎರಡೂ ಕೂಡಿ, ಕಾತರ ಹೆಚ್ಚಾಗಿ, ಕೆಮಾಲ್ ತೀವ್ರ ಪ್ರೇಮ ಹುಚ್ಚಾಗಿ ಹಬ್ಬುತ್ತದೆ. ಫುಸುನ್‌ಗೆ ಸಂಬಂಧಿಸಿದ ಎಲ್ಲ ವಸ್ತುಗಳನ್ನೂ ಸಂಗ್ರಹಿಸಲು ಶುರು ಮಾಡುತ್ತಾನೆ. ಇದು ಕೆಮಾಲ್ ಉತ್ಕಟ ಪ್ರೀತಿಯನ್ನು ಕಾಪಾಡಿಕೊಳ್ಳುವ ರೀತಿ; ಅಗಲಿಕೆಯಲ್ಲೂ ಸಖಿಯೊಡನೆ ಬದುಕುವ ಸುಂದರ ರೀತಿ!

ಏಳುನೂರೈವತ್ತು ಪುಟಗಳ ಕಾದಂಬರಿ ಮುಗಿಯಲು ನೂರೈವತ್ತು ಪುಟಗಳಿರುವಾಗ ಫುಸುನ್ ಕಾರ್ ಡ್ರೈವಿಂಗ್ ಕಲಿಯಲು ಹೊರಟ ತಕ್ಷಣ ನನ್ನ ಕತೆಗಾರ ಮನಸ್ಸು ಫುಸುನ್ ತೀರಿಕೊಳ್ಳುತ್ತಾಳೆ ಎಂದು ಬೆಚ್ಚಿತು; ಬೆಚ್ಚಿದ ಮನಸ್ಸು ಕಾದಂಬರಿ ಓದುವುದನ್ನೇ ಮುಂದೂಡಲು ಹವಣಿಸತೊಡಗಿತು. ಬರಬರುತ್ತಾ ಕಾದಂಬರಿಯ ರೊಮ್ಯಾಂಟಿಕ್ ಲೋಕ ಹೇಗೆ ನನ್ನೊಳಗಿನ ರಮ್ಯಲೋಕವನ್ನು ಆಕ್ರಮಿಸಿಕೊಂಡಿತೆಂದರೆ, ಈ ಕಾದಂಬರಿಯನ್ನು ಓದಿ ಮುಗಿಸಲೇಬಾರದು ಅನ್ನಿಸತೊಡಗಿತು. ಕಾದಂಬರಿಯೊಂದನ್ನು ಹೀಗೆ ಓದಿಕೊಂಡರೆ ಮಾತ್ರ ಅದು ಕಾದಂಬರಿಯ ಅನುಭವ ಹೀರಿಕೊಳ್ಳುವ ಪಯಣ; ಇಲ್ಲದಿದ್ದರೆ ಇಡೀ ಪಯಣವೇ ವ್ಯರ್ಥ!

ಕಾದಂಬರಿ ಓದುವ ಹಲವರಿಗೆ ಇಂಥ ಅನುಭವವಾಗಿ, ಅವರು ನೋಡುವ ನೋಟವೇ ಬದಲಾಗಿರಬಹುದು. ಸಾಹಿತ್ಯದ ಮೇಡಂ, ಮೇಷ್ಟ್ರುಗಳಿಗೆ ತಂತಮ್ಮ ಓದಿನಲ್ಲಿ ಈ ಥರದ ಅನುಭವವಾಗಿದ್ದರೆ, ಕ್ಲಾಸ್ ರೂಮಿನ ವಾತಾವರಣವೇ ‘ಛಾರ್ಜ್’ ಆಗತೊಡಗುತ್ತದೆ! ಆಗ ಕೃತಿಯ ಅನುಭವ ಹುಡುಗ, ಹುಡುಗಿಯರಿಗೆ ತೀವ್ರವಾಗಿ ತಲುಪತೊಡಗುತ್ತದೆ; ‘ಅನ್ನಾಕರೆನಿನಾ’, ‘ಲವ್ ಇನ್ ದ ಟೈಮ್ ಆಫ್ ಕಾಲರಾ’ ‘ವದರಿಂಗ್ ಹೈಟ್ಸ್’ ಥರದ ಅನನ್ಯ ಪ್ರೇಮ ಕಾದಂಬರಿಗಳನ್ನು ಟೀಚ್ ಮಾಡುವಾಗ ಆದ ನನ್ನ ಕ್ಲಾಸ್ ರೂಂ ಅನುಭವದಿಂದ ಈ ಮಾತು ಹೇಳುತ್ತಿರುವೆ. ಇಂಥ ಕಾದಂಬರಿಗಳು ನಮ್ಮೊಳಗೆ ಇರುವ, ಮುದುಡಿ ಮಲಗಿರುವ ಮುಗ್ಧಲೋಕವನ್ನು ಮೆಲ್ಲಗೆ ತಟ್ಟಿ ಮೇಲೇಳಿಸುತ್ತವೆ; ನಾವು ಕಾದಂಬರಿಯ ಪಾತ್ರಗಳ ಮುಗ್ಧ ರಮ್ಯಲೋಕದ ಸಹಪಾತ್ರಗಳಾಗುತ್ತೇವೆ. ಕಾದಂಬರಿ ಎಂಬ ಮುಗ್ಧತೆಯ ಮ್ಯೂಸಿಯಂನಲ್ಲಿ ವಿಹರಿಸುವ ದಣಿವಿರದ ಪಯಣಿಗರಾಗುತ್ತೇವೆ; ನಮ್ಮ ಮುಗ್ಧತೆ ಅರಳತೊಡಗುತ್ತದೆ.

ನಾನು ಊಹಿಸಿದ್ದಂತೆಯೇ ‘ಮ್ಯೂಸಿಯಂ ಆಫ್ ಇನ್ನೊಸೆನ್ಸ್’ ಕಾದಂಬರಿಯ ಫುಸುನ್ ಕಾರ್ ಅಪಘಾತದಲ್ಲಿ ತೀರಿಕೊಳ್ಳುತ್ತಾಳೆ. ಚಿರವಿರಹಿ ಕೆಮಾಲ್ ಪ್ರಿಯಸಖಿಯ ನೆನಪಿನ ಮನೆಯನ್ನೇ ಮ್ಯೂಸಿಯಂ ಮಾಡುತ್ತಾನೆ; ಅಲ್ಲಿ ಅವಳ ನೆನಪಿಗೆ ಸಂಬಂಧಿಸಿದ ವಸ್ತುಗಳನ್ನೆಲ್ಲ ಜೋಡಿಸಿಡುತ್ತಾನೆ. ಶಹಜಹಾನ್ ಕಟ್ಟಿದ ತಾಜಮಹಲ್ ಕತೆ ನೆನಪಿಸಿಕೊಳ್ಳಿ: ಕೆಮಾಲ್ ಮಾಡಿದ ಮ್ಯೂಸಿಯಂ ಹಿಂದಿರುವ ತೀವ್ರ ಮೋಹ ಅರ್ಥವಾಗುತ್ತದೆ. ಜೊತೆಗೆ, ಬೇಂದ್ರೆಯ ‘ಮಮತಾಜಳನು ಹುಗಿದು ತಾಜಮಹಲನು ಕಟ್ಟಿ ನಿಜ ದುಃಖ ಮರೆಸಬಹುದೆ?’ ರುದ್ರಗೀತ -ಅದರಲ್ಲೂ ಅಗಲಿದ ಕವಿ, ಗೆಳೆಯ ಎನ್.ಕೆ. ಹನುಮಂತಯ್ಯ ‘ಮದ್ಯ’ರಾತ್ರಿಗಳಲ್ಲಿ ಹಾಡುತ್ತಿದ್ದ ರುದ್ರಗೀತ!- ಗುಂಗಾಗಿ ಕಾಡಿದರೆ, ಈ ಕಾದಂಬರಿಯ ರುದ್ರ-ರಮ್ಯ ದುಃಖ ನಿಮ್ಮ ನರನಾಡಿಗಳಲ್ಲಿ ಹಬ್ಬತೊಡಗುತ್ತದೆ.

ಮುಂದೊಮ್ಮೆ ತನ್ನ ಪ್ರಣಯ–ವಿರಹ-ಯಾತನೆ-ಹುಡುಕಾಟಗಳ ಕಥಾನಕವನ್ನು ಕೆಮಾಲ್ ತನ್ನ ದೂರದ ಸಂಬಂಧಿ, ಕಾದಂಬರಿಕಾರ, ಒರಾನ್ ಪಾಮುಕ್‌ಗೆ ಹೇಳುತ್ತಾನೆ. ಒರಾನ್ ಅದನ್ನು ಕೆಮಾಲ್ ಭಾಷೆ, ಮೂಡುಗಳಲ್ಲೇ ನಿರೂಪಿಸುತ್ತಾನೆ. ಇದೊಂದು ಕಥಾತಂತ್ರ ಎಂದೇ ನನ್ನ ಕಸಬುದಾರ ಊಹೆ! ಕೆಮಾಲ್ ರೂಪಿಸುತ್ತಿರುವ ಮ್ಯೂಸಿಯಂನಲ್ಲಿ ಒರಾನ್ ಕೂಡ ಜೊತೆಯಾಗುತ್ತಾನೆ. ಗತಿಸಿದ ಬದುಕಿನ ಜೀವಂತ ನೆನಪುಗಳ ತಂಗುದಾಣವಾದ ಕಾದಂಬರಿಯೂ, ಗತಕಾಲದ ನೆನಪುಗಳ ಸಂಗ್ರಹವಾದ ಮ್ಯೂಸಿಯಮ್ಮೂ ಒಂದರೊಡನೊಂದು ಬೆರೆಯುತ್ತವೆ! ಎರಡು ಪ್ರಕಾರಗಳ ಈ ಅದ್ಭುತ ಬೆಸುಗೆ ಕಾದಂಬರಿಕಾರನ ಒರಿಜಿನಲ್ ಮಾಸ್ಟರ್ ಸ್ಟ್ರೋಕ್!

‘ಕಾದಂಬರಿ ಯಾವಾಗ ಮುಗಿಯುತ್ತೆ’ ಎನ್ನುತ್ತಾನೆ ಕೆಮಾಲ್. ‘ನಿನ್ನ ಮ್ಯೂಸಿಯಂ ಮುಗಿದ ತಕ್ಷಣ’ ಎನ್ನುತ್ತಾನೆ ಒರಾನ್. ಈ ಪ್ರಶ್ನೋತ್ತರ ಅವರ ನಿತ್ಯದ ಜೋಕ್! ಕಾದಂಬರಿಯ ಕೊನೆಗೆ ಕೆಮಾಲ್ ಬೀದಿ ದೀಪದ ಬೆಳಕಿನಲ್ಲಿ ತನ್ನ ಜೇಬಿನಿಂದ ಫೋಟೋವೊಂದನ್ನು ತೆಗೆದು ತೋರಿಸುತ್ತಾ ಕೇಳುತ್ತಾನೆ: ‘ಲವ್ಲಿಯಾಗಿದಾಳೆ, ಅಲ್ವಾ?’. ಕಥಾನಾಯಕನೂ, ಕಾದಂಬರಿಕಾರನೂ ಫುಸುನ್ ಚಿತ್ರವನ್ನು ಕಣ್ತುಂಬಿಕೊಳ್ಳುತ್ತಾರೆ.

‘ಈ ಫೋಟೋನ ನಿನ್ನ ಮ್ಯೂಸಿಯಂನಲ್ಲಿಡು ಕೆಮಾಲ್ ಬೇ’ ಎನ್ನುತ್ತಾನೆ ಒರಾನ್.

ಈ ಫೋಟೋವನ್ನು ಮಾತ್ರ ಮ್ಯೂಸಿಯಮ್ಮಿನಲ್ಲಿಡದೆ ಜೋಪಾನವಾಗಿ ಜೇಬಿನಲ್ಲಿಟ್ಟುಕೊಳ್ಳುವ ಕೆಮಾಲ್ ಹೇಳುತ್ತಾನೆ: ‘ಒರಾನ್ ಬೇ, ನಿನ್ನ ಪುಸ್ತಕದಲ್ಲಿ ನನ್ನ ಕೊನೆಯ ಮಾತು ಇದೇ ಆಗಿರಬೇಕು: ‘ನಾನು ಅತ್ಯಂತ ಆನಂದದಿಂದ ಜೀವಿಸಿದೆ. ಇದು ಎಲ್ಲರಿಗೂ ತಿಳಿದಿರಲಿ.’

ಪ್ರಿಯಸಖಿಯ ವಸ್ತುಗಳ ಜೊತೆಗೆ ಮನದಲ್ಲೂ, ಮನೆಯಲ್ಲೂ ಬದುಕಿರುವುದೇ ಕೆಮಾಲ್ ಆನಂದದ ಬದುಕಿನ ಗುಟ್ಟು. ಕಾದಂಬರಿಯಲ್ಲಿ ಕೆಮಾಲ್ ಮಾಡಿದ ಮ್ಯೂಸಿಯಂ ಥರದ ಮ್ಯೂಸಿಯಮ್ಮನ್ನೇ 2012ರಲ್ಲಿ ಒರಾನ್ ಪಾಮುಕ್ ಟರ್ಕಿಯ ಇಸ್ತಾನ್‌ಬುಲ್ ನಗರದಲ್ಲಿ ಮಾಡಿದ ಸುದ್ದಿ ಓದಿದೆ: ಕಾದಂಬರಿಯ ಒಡಲನೂಲಿನಿಂದಲೇ ಮೂಡಿದ್ದ ‘ಮುಗ್ಧತೆಯ ಮ್ಯೂಸಿಯಂ’ನಲ್ಲಿ ಮೂಡಿದ್ದ ರೂಪಕಾರ್ಥ ವಾಚ್ಯಾರ್ಥಕ್ಕಿಳಿದಿದೆ ಎನ್ನಿಸಿ, ಪೆಚ್ಚೆನ್ನಿಸಿತು. ‘ಮ್ಯೂಸಿಯಂ ಆಫ್ ಇನ್ನೊಸೆನ್ಸ್’ಗೆ ಇರುವ ವ್ಯಾಪಕಾರ್ಥ ಕುಬ್ಜಗೊಂಡಂತಿತ್ತು!

‘ಮ್ಯೂಸಿಯಂ ಆಫ್ ಇನ್ನೊಸೆನ್ಸ್’ ಕಾದಂಬರಿ ಹಾಗೂ ಮ್ಯೂಸಿಯಂ ಒಂದೇ ದಿನ ಲೋಕಾರ್ಪಣೆಯಾಗಬೇಕೆಂದು ಪಾಮುಕ್ ಆಸೆಯಾಗಿತ್ತು. ಕಾದಂಬರಿಯೇ ಮೊದಲು ಪ್ರಕಟವಾಯಿತು; ಆಮೇಲೆ ಮ್ಯೂಸಿಯಂ. ಈ ಕುರಿತ ಡಾಕ್ಯುಮೆಂಟರಿ ಸಿನಿಮಾ ಕೂಡ ಬಂತು. ಇಂಗ್ಲಿಷ್ ಅಧ್ಯಾಪಕ ಚಾಂದ್ ಬಾಶ ಒರಾನ್ ಪಾಮುಕ್ ಕೃತಿಗಳ ಮೇಲೆ ಸಂಶೋಧನೆ ಮಾಡುವಾಗ ಇಸ್ತಾನ್‌ಬುಲ್‌ಗೂ ಹೋಗಿ, ‘ಮ್ಯೂಸಿಯಂ ಆಫ್ ಇನ್ನೊಸೆನ್ಸ್’ ನೋಡಿಕೊಂಡು ಬಂದು ಫೋಟೋಗಳನ್ನು ಕಳಿಸಿದರು. ನನಗೂ ಎಷ್ಟೋ ಸಲ ಯುರೋಪು-ಏಷ್ಯಾ ಎರಡೂ ಖಂಡಗಳಲ್ಲಿ ಚಾಚಿಕೊಂಡಿರುವ ಇಸ್ತಾನ್‌ಬುಲ್‌ಗೆ ಹೋಗಿ ಪಾಮುಕ್ ಅವರನ್ನು ಕಂಡು, ಮ್ಯೂಸಿಯಂ ಆಫ್ ಇನ್ನೊಸೆನ್ಸ್ ನೋಡಿಕೊಂಡು ಬರಬೇಕು ಅನ್ನಿಸುತ್ತಿರುತ್ತದೆ. ಆದರೆ ಕಾದಂಬರಿ ನನ್ನೊಳಗೆ ನಿರ್ಮಿಸಿರುವ ಮುಗ್ಧತೆಯ ಮ್ಯೂಸಿಯಮ್ಮನ್ನು ಸಾಕಾರದಲ್ಲಿ ನೋಡಲು ಮನಸ್ಸು ಹಿಂಜರಿಯುತ್ತಲೇ ಇದೆ!

‘ಮ್ಯೂಸಿಯಂ ಆಫ್ ಇನ್ನೊಸೆನ್ಸ್’ ಕಾದಂಬರಿಯ ರಮ್ಯಲೋಕದಲ್ಲಿ ಮುಳುಗಿ ತೇಲುತ್ತಿದ್ದ ಕಾಲದಲ್ಲೇ ಗೆಳೆಯರೊಬ್ಬರು ಶಿವಮೊಗ್ಗೆಗೆ ಹನ್ನೆರಡು ಕಿಲೋಮೀಟರ್ ದೂರವಿರುವ ಲಕ್ಕಿನಕೊಪ್ಪ ಸರ್ಕಲ್ ಬಳಿ 'ಒಂದು ಹಿಸ್ಟರಿ ಮ್ಯೂಸಿಯಂ ಇದೆ’ ಎಂದರು. ಮ್ಯೂಸಿಯಂ ಎಂದ ತಕ್ಷಣ ಹುಟ್ಟಿದ ಪುಳಕದಲ್ಲಿ ಅಲ್ಲಿಗೆ ಹೋಗಿ ಅದರ ವಿವರ ಓದುತ್ತಿರುವಂತೆ ಅಚ್ಚರಿಯಾಯಿತು! ಅನೇಕ ಸಲ ಘಟನೆಗಳು, ಸಾಹಿತ್ಯಕೃತಿಗಳ ವಿವರಗಳೆಲ್ಲ ಮರೆತು ಹೋಗಿ, ಅವುಗಳ ಕೇಂದ್ರ ಭಾವವಷ್ಟೇ ನಮ್ಮ ಆಳದಲ್ಲಿ ಉಳಿಯುತ್ತದಲ್ಲವೆ? ಲಕ್ಕಿನಕೊಪ್ಪ ಸರ್ಕಲ್‌ನಲ್ಲಿರುವ ‘ಅಮೂಲ್ಯ ಶೋಧ’ ಮ್ಯೂಸಿಯಂನ ಹಿನ್ನೆಲೆಯಲ್ಲಿರುವ ಕೇಂದ್ರ ಭಾವವಷ್ಟೇ ನನ್ನ ಮನಸ್ಸಿನಲ್ಲಿ ಗಾಢವಾಗಿ ಉಳಿದಿದೆ:

ಹಿಸ್ಟರಿ ಉಪನ್ಯಾಸಕ ಖಂಡೋಬರಾವ್, ಅಗಲಿದ ತಮ್ಮ ಪತ್ನಿ ಯಶೋಧ ಅವರ ನೆನಪಿನಲ್ಲಿ ಒಂದು ಎಕರೆ ಫಾರ್ಮ್ ಹೌಸಿನಲ್ಲಿ, 2007ರಲ್ಲಿ ‘ಅಮೂಲ್ಯ ಶೋಧ’ ಮ್ಯೂಸಿಯಂ ಮಾಡಿದ್ದರು! ಹಿಸ್ಟರಿ ಉಪನ್ಯಾಸಕಿಯಾಗಿದ್ದ ಯಶೋಧ, ‘ತಾಜ್‌ಮಹಲ್ ಪ್ರೇಮದ ಸಂಕೇತ ಮಾತ್ರ ಅಲ್ಲ; ನಿಜವಾದ ಪ್ರೇಮಿಗಳ ಆತ್ಮ’ ಎನ್ನುತ್ತಿದ್ದರಂತೆ. ಒರಾನ್ ಪಾಮುಕ್ ‘ಮ್ಯೂಸಿಯಂ ಆಫ್ ಇನ್ನೊಸೆನ್ಸ್’ ಬರೆದು‍, ಮ್ಯೂಸಿಯಂ ಮಾಡುವ ಮೊದಲೇ ಖಂಡೋಬರಾವ್ ತಮ್ಮ ಹಣ ಹಾಕಿ ಇಲ್ಲೊಂದು ಮುಗ್ಧತೆಯ ಮ್ಯೂಸಿಯಂ ಮಾಡಿದ್ದರು. ರಮ್ಯ, ಕೋಮಲ ಭಾವಗಳು ನಿಜಕ್ಕೂ ಯೂನಿವರ್ಸಲ್. ಎಲ್ಲಿಯ ಇಸ್ತಾನ್‌ಬುಲ್! ಎಲ್ಲಿಯ ಮಲೆನಾಡಿನ ಲಕ್ಕಿನಕೊಪ್ಪ! ಎತ್ತಣಿಂದ ಎತ್ತಣಾದರೂ ನೋಡಿ; ಎಲ್ಲಿಂದ ಎಲ್ಲಿಗಾದರೂ ಹೋಗಿ: ಮಾನವರ ಮುಗ್ಧ ಭಾವಗಳು, ಅದರಲ್ಲೂ ಗಂಡು-ಹೆಣ್ಣಿನ ಸಂಬಂಧದ ಮೂಲ ಮುಗ್ಧ ಭಾವಗಳು… ಎಲ್ಲೆಡೆ ಒಂದೇ ಥರ!

ಕೊನೆ ಟಿಪ್ಪಣಿ

ಈ ಅಂಕಣ ಮುಗಿಸುವ ಹೊತ್ತಿಗೆ ‘ಫ್ರಂಟ್ ಲೈನ್’ ಪತ್ರಿಕೆಯ ಉಪಸಂಪಾದಕರಾದ ವಿಖಾರ್ ಅಹ್ಮದ್ ಸಯೀದ್ ಸ್ವತಃ ಇಸ್ತಾನ್ ಬುಲ್‌ಗೆ ಹೋಗಿ ಬರೆದ ಲೇಖನ ಸಿಕ್ಕಿತು.

ಲೇಖನ ಓದತೊಡಗಿದಂತೆ ಇಸ್ತಾನ್‌ಬುಲ್‌ಗೆ ಹೋಗಿ ಮ್ಯೂಸಿಯಂ ಆಫ್ ಇನ್ನೊಸೆನ್ಸ್ ಕಟ್ಟಡ ಹೊಕ್ಕು, ವಿರಾಮವಾಗಿ ಅಡ್ಡಾಡಿದಂತೆ ಅನ್ನಿಸತೊಡಗಿತು. ವಿಖಾರ್ ಲೇಖನದಲ್ಲಿ ಕಾದಂಬರಿಯ ಒಳ್ಳೆಯ ಸಾರಾಂಶವೂ ಇದೆ. ವಿಖಾರ್ ಖುದ್ದು ಕಂಡ ಮ್ಯೂಸಿಯಂ; ನಾನು ಇದ್ದಲ್ಲೇ ಓದಿ ಸ್ಪರ್ಶಿಸಿದ ಮುಗ್ಥತೆಯ ಮ್ಯೂಸಿಯಂ- ಎರಡನ್ನೂ ಒಟ್ಟಿಗೇ ಓದಿ ನೋಡಿ:  ಒರಾನ್ ಪಾಮುಕ್ ಮ್ಯಾಜಿಕ್ ಹಾಗೂ ಜೀನಿಯಸ್ ನಿಮ್ಮ ಅನುಭವಕ್ಕೆ ಬರಬಲ್ಲವು.

ಬ್ಲಾಗ್ ಫಾಲೋ ಮಾಡಲು ಒಪ್ಪಿ, ಕ್ಲಿಕ್ ಮಾಡಿ; ನೋಟಿಫಿಕೇಶನ್ ಪಡೆಯಿರಿ, ಶೇರ್ ಮಾಡಿ: FOLLOW
ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com 
ಬಿಡುವಾದಾಗ ನೋಡಿ, ಶೇರ್ ಮಾಡಿ: YouTube Channel Link

Share on:


Recent Posts

Latest Blogs



Kamakasturibana

YouTube



Comments

14 Comments



| ಮಂಜುನಾಥ್ ಸಿ ನೆಟ್ಕಲ್

 

\r\n\r\n

ಸಾಹಿತ್ಯದ ಅಧ್ಯಾಪಕನಾದ ನನಗೆ ಇತ್ತೀಚೆಗೆ ಬಹುತೇಕರು ಮುಗ್ಧತೆಯನ್ನು ಕಳೆದುಕೊಂಡು ಬಿಡುತ್ತಿದ್ದಾರಲ್ಲಾ ಅನಿಸುತ್ತಿರುತ್ತದೆ ...ಆದರೆ ಪ್ರತಿ ವರ್ಷ ಒಂದಿಬ್ಬರು ವಿದ್ಯಾರ್ಥಿಗಳಲ್ಲಿ ಕಾಣುವ ಭಾವುಕತೆ ಮತ್ತು ಮುಗ್ದತೆ ನನ್ನ ಅನಿಸಿಕೆಯನ್ನು ಹುಸಿ ಮಾಡುತ್ತದೆ. ನಿಮ್ಮ ಲೇಖನ ಮಾಸುತ್ತಿದ್ದ ನನ್ನ ಭಾವುಕತೆಯನ್ನು ಪುನಶ್ಚೇತನಗೊಳಿಸಿತು ಸರ್ ಧನ್ಯವಾದಗಳು... ನಿಮ್ಮ ಲೇಖನ ಪ್ರೇಮ ಕಾದಂಬರಿಗಳ ಮರು ಓದಿಗೆ ಪ್ರೇರಣೆ ನೀಡಿತು..

\r\n


| Sandeep

ಲೇಖನ ಅದ್ಭುತವಾಗಿದೆ. ಇಲ್ಲೂ ಸಾಹಿತ್ಯ ಕೃತಿಯೊಂದಕ್ಕೆ ಸದಾ ಮಿಡಿಯುವ, ಸ್ಪಂದಿಸುವ ನಿಮ್ಮ ಗುಣ ಕೆಲಸ ಮಾಡಿದೆ. ಅದು ಕೃತಿಯೊಂದರ ಜೀವಂತಿಕೆ, ಕಲಾತ್ಮಕತೆಯ ಧ್ಯಾನ. ಇದಿಲ್ಲದೆ ನಿಮ್ಮ ಬರವಣಿಗೆಯೇ ಇಲ್ಲ. ಬಹುಶಃ ನಿಮ್ಮ ಎಲ್ಲ ಬರವಣಿಗೆಗಳನ್ನು ಅದು ರೂಪಿಸಿದೆ.

\r\n


| A S Prabhakar

ನಿಮ‌್ಮ ಈ‌ ಬರಹವನ್ನು ಓದಿ ಮುಗಿಸಿದ ನಂತರ ನನಗೂ‘ಮ್ಯೂಸಿಯಂ ಆಫ್ ಇನ್ನೊಸೆನ್ಸ್’  ಕಾದಂಬರಿಯನ್ನು ಓದಬೇಕೆನ್ನಿಸುತ್ತಿದೆ.  ಕಾದಂಬರಿಯೊಂದರ ಅಂತ್ಯವನ್ನು ಊಹಿಸಿಕೊಳ್ಳುತ್ತ ಅದರ ಓದನ್ನು ಮುಂದೂಡುತ್ತಾ ಹೋಗುವುದು ಸೂಕ್ಷ್ಮ ಓದುಗನೊಬ್ಬನ ಸಹಜ‌ ತಳಮಳ ಎಂದೆನ್ನಿಸುತ್ತದೆ. ಚೋಮನದುಡಿಯನ್ನು ಓದುವಾಗ ಅದರ ಕೊನೆಯ ಪುಟಗಳನ್ನು ಓದಲಾಗದೆ ತಿಂಗಳುಗಟ್ಟಲೆ ಅದನ್ನು‌ ನಾನು‌ ಮುಚ್ಚಿಟ್ಟಿದ್ದೆ. 

\r\n\r\n

ನೀವು ಹೇಳಿದಂತೆ ಕಾದಂಬರಿ ಎಂಬುದು ಸಮುದಾಯದ ಸ್ಮೃತಿಗಳನ್ನು ಶಾಶ್ವತಗೊಳಿಸುವ ಜೀವಂತ ವಸ್ತುಸಂಗ್ರಹಾಲಯ.

\r\n


| Shoodra Shrinivas

    ನಟರಾಜ್ , ನಿಮ್ಮ ಬರವಣಿಗೆಯ ತೀವ್ರತೆ ಎಷ್ಟೊಂದು ಆಯಾಮಗಳನ್ನು ಪಡೆದಿರುತ್ತೆ. ‌ ಇಂದು ಶನಿವಾರದ ವಾರ್ತಾಭಾರತಿಯಲ್ಲಿ    'ಕಾದಂಬರಿ ಪ್ರಕಾರವೇ ಮುಗ್ಧತೆಯ ಮ್ಯೂಸಿಯಂ ! ' ಲೇಖನ ಓದುತ್ತಿದ್ದರೆ ನಾನು ಓದಿದ ಕಾದಂಬರಿಗಳ ಆಪ್ತ ಚಿತ್ರಣಗಳು ಮುಖಾಮುಖಿ ಯಾಗುತ್ತ ಹೋಯಿತು. 
\r\n ' ಮ್ಯೂಸಿಯಂ ಆಫ್ ಇನ್ನೋಸೆನ್ಸ್ ' ಒರಾನ್ ಪಮುಕ್ ನ ಈ ಕಾದಂಬರಿಯ ನೋಟಗಳನ್ನು ನೀವು ವಿವರಿಸುವ ಆಯಾಮಗಳು ಮೇಲ್ನೋಟಕ್ಕೆ ರೋಮ್ಯಾಂಟಿಕ್ ಅನ್ನಿಸಿದರೂ ಜೀವನ ಪ್ರೀತಿಯ ಗಾಢತೆ ತೆರೆದುಕೊಳ್ಳುವುದೇ  ಅಪೂರ್ವವಾದದ್ದು. ಒಂದು ದೃಷ್ಟಿಯಿಂದ ನನ್ನನ್ನು ನನ್ನೂರಿನಿಂದ ಓಡಿಸಿಕೊಂಡು ರಾತ್ರೋರಾತ್ರಿ 
\r\nಬಂದದ್ದೇ ಕಾದಂಬರಿ ಲೋಕ.
\r\n   ಧನ್ಯವಾದಗಳು ಮಹತ್ವದ ಲೇಖನ ಓದಿಸಿದ್ದಕ್ಕೆ.

\r\n


| ಡಾ. ನಿರಂಜನ ಮೂರ್ತಿ ಬಿ ಎಂ

ಕಾದಂಬರಿಯ ಹರವಿನ ಕ್ಷೇತ್ರವನ್ನು ಮುಗ್ಧತೆಯ ಮ್ಯೂಜಿಯಂ ಆಗಿ ತೋರಿಸುವ ಈ ಲೇಖನ ಹುಳಿಯಾರರ ಅತ್ಯದ್ಭತ ಲೇಖನವೆನಿಸುತ್ತಿದೆ. ಒರಾನ್ ಪಾಮುಕ್ ಅವರ 'ದ ಮ್ಯೂಜಿಯಂ ಆಫ್ ಇನೋಸೆನ್ಸ್' ಕಾದಂಬರಿಯ ಪ್ರೇಮಮಯ ಲೋಕವನ್ನು ತೋರಿಸಿ ಓದುಗನ ಮನವನ್ನು ಆವರಿಸಿಕೊಳ್ಳುವ ಮೂಲಕ ಕಾದಂಬರಿಯ ವಿಶಿಷ್ಟತೆಯನ್ನು ನಿರೂಪಿಸುವ ಪರಿ ತುಂಬಾ ಇಷ್ಟವಾಯಿತು. ಗತಿಸಿದ ಬದುಕಿನ ಜೀವಂತ ನೆನಪುಗಳ ತಂಗುದಾಣ ಕಾದಂಬರಿ ಮತ್ತು ಗತಕಾಲದ ನೆನಪುಗಳ ಸಂಗ್ರಹವಾದ ಮ್ಯೂಜಿಯಂಗಳನ್ನು ಬೆರೆಸಿದ ಕಾದಂಬರಿಕಾರನ ಅದ್ಭುತ ಚಾತುರ್ಯವನ್ನು ಗುರುತಿಸುವುದು; ಕುವೆಂಪು ಅವರ ಕರತಲ ಮತ್ತು  ಕರಸ್ಥಲಗಳನ್ನು ಜೊತೆಯಾಗಿಸಿ ನೋಡುವುದು;  ಮತ್ತು ಇಸ್ತಾನ್ ಬುಲ್ ಮತ್ತು ಲಕ್ಕಿನಕೊಪ್ಪಗಳನ್ನು ಒಟ್ಟಿಗೆ ಸೇರಿಸಿರುವುದೇ ಈ ಲೇಖನದ ಆಚಾರ್ಯ ಬೀಸು  (ಮಾಸ್ಟರ್ ಸ್ಟ್ರೋಕ್)! ಈ ಜಗದ ಅದ್ಭುತ ಪ್ರೇಮ ಕಾದಂಬರಿಗಳನ್ನು ಪುನಃ ನೆನಪಿಸಿಕೊಳ್ಳುವ ಹಾಗೆ ಮಾಡುದ ಲೇಖಕರಿಗೆ ನಮನಗಳು. ಇಂತಹ ಇನ್ನಷ್ಟು ಲೇಖನಗಳು ಮೂಡಿಬರಲಿ.

\r\n


| ಬಂಜಗೆರೆ ಜಯಪ್ರಕಾಶ

ನಾನು ಅನ್ನಾ ಕರೆನಿನಾ ಓದಿದ್ದೇನೆ. ನೀವು ಉಲ್ಲೇಖಿಸಿದ ಉಳಿದ ಕಾದಂಬರಿಗಳನ್ನು ಓದಿಲ್ಲ. ನಾನು ಮುಖ್ಯವಾಗಿ ಕನ್ನಡ ಕಾದಂಬರಿ ಓದುಗ. ಆದರೆ ನೀವು ಹೇಳಿದಂತೆ ಗಾಢವಾಗಿ ತನ್ಮಯಗೊಳಿಸಿದ ಪ್ರೇಮ ಕಾದಂಬರಿ ಯಾಕೋ ನೆನಪಿಗೆ ಬರುತ್ತಿಲ್ಲ. ದೇವದಾಸ್ ಮರೋ ಚರಿತ್ರ ಮತ್ತು ಬಾಂಬೆ ಒಂದು ಮಟ್ಟಿಗೆ ನನ್ನನ್ನು ಹೀಗೆ ಕಲಕಿದ ಪ್ರೇಮ ಕಥಾನಕದ ಸಿನಿಮಾಗಳು. ಅದಕ್ಕೆ ನನ್ನ ಆಗಿನ ವಯಸ್ಸು ಕಾರಣವಿರಬಹುದು. ಬಿಟ್ಟರೆ ಚದುರಂಗರ ಸರ್ವಮಂಗಳಾ ಒಂದಷ್ಟು ಗಾಢವಾಗಿ ಕಾಡಿದ್ದೇನೋ ಹೌದು. ಆದರೆ  ಕಡೆಕಡೆಗೆ ಆದರ್ಶವಾದಿ ಸಮಾಧಾನಗಳನ್ನು ಓದುಗನಿಗೆ ಒದಗಿಸುವುದರೊಂದಿಗೆ ಮುಕ್ತಾಯಗೊಳ್ಳುತ್ತದೆ. ಹಾಗೆ ನೋಡಿದರೆ ಹಂಸಗೀತೆ ಕಾದಂಬರಿಯ ಒಂದು ಎಳೆಯಾಗಿ ಬರುವ ವೆಂಕಟಸುಬ್ಬಯ್ಯ ಮತ್ತು ಚಂದ್ರಸಾನಿಯ ವೃತ್ತಾಂತವೇ ಗಾಢವಾಗಿದೆ ಅನ್ನಿಸಿದ್ದುಂಟು. ಸ್ವತಃ ಕಾದಂಬರಿಕಾರರಾದ ನಿಮ್ಮನ್ನು ಈ ಕಾದಂಬರಿಯ ಓದು ಆವರಿಸಿಕೊಂಡ ಬಗೆ ಮಾತ್ರ ವಿಸ್ಮಯಕಾರಿಯಾಗಿದೆ. ಹಾಗೆ ಓದಿಕೊಂಡಿದ್ದಾಗ ಮಾತ್ರ ಸಾಹಿತ್ಯದ ಉಪನ್ಯಾಸಕರು ಇಡೀ ತರಗತಿಯಲ್ಲಿ ವಿದ್ಯುತ್ ಸಂಚಾರ ಮಾಡಿಸಬಲ್ಲರು ಎಂಬ ನಿಮ್ಮ ಮಾತು ಖಂಡಿತವಾಗಿ ನಿಜ. ಪ್ರೇಮ ಮುಗ್ಧವಾಗಿರುವವರೆಗೆ ತನ್ನ ಔನ್ನತ್ಯ ಕಾಪಾಡಿಕೊಂಡಿರಬಹುದು ಎಂಬುದನ್ನು ಸೂಚಿಸುವುದೇ ಆ ಕಾದಂಬರಿಯ ಸಂದೇಶವಾಗಿರಬಹುದೇ. ಪ್ರೇಮವನ್ನು ತೀರಾ ವೈಚಾರಿಕಗೊಳಿಸಿದಾಗ ಅದು ಗೌರವಾರ್ಹವಾಗಿರುತ್ತದೆ. ಆದರೆ ಪ್ರೇಮದ ಕೋಮಲತೆ ಮತ್ತು ರಮ್ಯತೆ ಎಲ್ಲೋ ಲುಪ್ತವಾಗಿಬಿಡುತ್ತದೆಯೇ ಎಂಬ ಜಿಜ್ಞಾಸೆ ಹುಟ್ಟಿಸಿತು ನಿಮ್ಮ ಲೇಖನ. 'ಐನೋರ್ ಹೊಲದಾಗೆ ಚಾಕ್ರಿ ನಾಡ್ತಾ ಸಂಜಿ ಆಯ್ತಂದ್ರೆ ಚಿಂತೆ ಮಾಡ್ತೀನ್ ಹೆಂಗಿರತೈತೆ ನಂಜಿ ಇಲ್ಬಂದ್ರೆ' ಎಂಬ ರಾಜರತ್ನಂ ಕವಿತೆ ಮಾತ್ರ ಅದರ ತೀವ್ರ ಭಾವುಕತೆಯಿಂದ ಈಗಲೂ ನನ್ನನ್ನು ಕಾಡುವ ಶಕ್ತಿ ಉಳಿಸಿಕೊಂಡಿದೆ. ವಿರಹಾಲಾಪವೇ ಹೆಚ್ಚಿನ ಸಲ ಪ್ರೇಮದ ಮಹತ್ವವನ್ನು ಮನಗಾಣಿಸುತ್ತದೆ ಅನಿಸುತ್ತದೆ. ಮ್ಯೂಸಿಯಂ ಆಫ್ ಇನೊಸೆನ್ಸ್ ಓದುವ ಹಂಬಲ ಹುಟ್ಟಿದೆ ನೀವು ಬರೆದದ್ದು ಓದಿ. ಧನ್ಯವಾದಗಳು.

\r\n


| Dominic

Hats off..Passionate writing 

\r\n


| Chandrashekhara Talya

ನಾನು ಪಾಮುಕ್ ನನ್ನು ಓದಿಕೊಂಡವನಲ್ಲ, ಪ್ರೇಮದ ಭಾಷೆಗೆ ಗಡಿಗಳಿರುವುದಿಲ್ಲವಲ್ಲಾ, ನೀವು ನೀಡಿದ ಪುಟ್ಟ ಸಾರಾಂಶ ಮಾತ್ರದಿಂದಲೇ ಆ ಕಾದಂಬರಿಯ ವಸ್ತು, ಅದರ ನಿರೂಪಣೆಯ ನಾವಿನ್ಯತೆ ಅರಿವಿಗೆ ಬಂತು.
\r\nನಿಜ, ಲೋಕದ ಕಣ್ಣಿಗೆ ಹುಚ್ಚಿನ ಪರಮಾವಧಿಯಂತೆ ಕಾಣುವ ಪ್ರೇಮ ತನ್ನ ತೀವ್ರತೆಯಲ್ಲಿ ಮೆದು ಹೃದಯಗಳನ್ನು ಅಲ್ಲಾಡಿಸಿಬಿಡಬಲ್ಲುದು, ಕಲೆಯ ವ್ಯಾಪ್ತಿಗೆ ಮಾತ್ರ ದಕ್ಕಬಹುದಾದ ಪ್ರೇಮದ ಈ ಅಮರತ್ವ ತನ್ನ ದಾರುಣತೆಯಲ್ಲೇ ನಮಗೆ ಕಾವು ಮುಟ್ಟಿಸಬಲ್ಲದು, ವಿಶ್ವವ್ಯಾಪಿ ಹರಡಿಕೊಂಡ ಪ್ರೇಮದ ಬಹುರೂಪಿ ಅನುಭವ ಆಂತರ್ಯದಲ್ಲಿ ಏಕರೂಪಿಯೇನೋ ಅನಿಸುವುದುಂಟು, ತಾಜಮಹಲ್, ಅನ್ನಾ, ಸಲೀಮ್, ದೇವದಾಸ್, ಅಮೃತಾ ಪ್ರೀತಮ್, ಮುಂತಾದ ಲೋಕದ ಅಮರ ಪ್ರೇಮಿಗಳೆಲ್ಲರ ಗತಿಯೂ ಒಂದೇ ಅಲ್ಲವೇ? ಸಂಕಟದ ನೂಲಿನಿಂದಲೇ ಅವರ ನೋವು, ಗೆಲುವು, ಸೋಲುಗಳನ್ನ ನೆಯ್ದಂತೆ ತೋರುವುದು, ಆದುದರಿಂದಲೇ 'ತಾಜ್ ಮಹಲ್  ಕೇವಲ ಪ್ರೇಮದ ಸಂಕೇತವಲ್ಲ, ನಿಜವಾದ ಪ್ರೇಮಿಗಳ ಆತ್ಮ 'ಎನ್ನುವ ಯಶೋಧ ಮೇಡಂ ಅವರ ಮಾತು ಮನದಲ್ಲಿ ಚಿರವಾಗಿ ಉಳಿದುಬಿಡುತ್ತೆ. ಕಾದಂಬರಿ ಕರಸ್ಥಲ ರಂಗಭೂಮಿಯಲ್ಲವೇ! ಅಲ್ಲಿ ನಡೆಯುವ ಯಾವ ನಾಟಕವೂ ಬರೀ ನಾಟಕವಲ್ಲ, ಹೀಗಿದ್ದಮೇಲೆ ಪ್ರೇಮದ ಆಟ ಕೇವಲ ಆಟವಷ್ಟೇ ಆಗಲಾರದು. ರಕ್ತ ಬಸಿದು ಜೀವ ಪೊರೆಯುವ ತೀವ್ರ ಯಾತನೆ ಅದರ ಆತ್ಮವೇ ಇರಬೇಕು. ಪಾಮುಕ್, ಟಾಲ್ಸ್ಟಾ ಯ್, ಕುವೆಂಪು ಅವರಂಥ ದೊಡ್ಡ ಲೇಖಕರ ಜೀವನ ದರ್ಶನವೇ ಅದರಲ್ಲಿ ಮೈದಳೆದಿರುತ್ತದೆ, ಅದು ಮುಗ್ಧತೆಯ ಅನಾವರಣವೂ ಹೌದು.

\r\n\r\n

 

\r\n


| ಡಾ. ಶಿವಲಿಂಗೇಗೌಡ ಡಿ.

ಲೇಖನ ಅದ್ಭುತವಾಗಿದೆ. ಪಾಮುಕ್ ನ ಮೂಸಿಯಂ ಆಪ್ ಇನ್ನೋಸೆನ್ಸ್ ಕಾದಂಬರಿಯನ್ನು ಓದಲೇಬೇಕು ಎಂಬ ತೀವ್ರತೆಯನ್ನ ಹುಟ್ಟಿಸುತ್ತದೆ. ಜೊತೆಗೆ ಕಾದಂಬರಿಯನ್ನು ಓದುವ ಕ್ರಮವನ್ನು ಹಾಗೂ ತರಗತಿಗಳಲ್ಲಿ ಪಾಠಮಾಡುವ ಕ್ರಮವನ್ನೂ ಜಾಗೃತಗೊಳಿಸುತ್ತದೆ. ಧನ್ಯವಾದಗಳು ಸರ್

\r\n


| Guruprasad

ನೀವು ವಿಶ್ವ ಸಾಹಿತ್ಯದ ಬಗ್ಗೆ ಬರೆಯುವಾಗ ಕನ್ನಡದ ಮೇರು ಲೇಖಕರು ಯಾವಾಗಲೂ ಬರುತ್ತಾರೆ.ಅದು ಬಹಳ ಮುಖ್ಯ. ಕನ್ಲಡಿಗರೂ ಇಂಥ ಅತ್ಯುತ್ತಮ ಕೃತಿಗಳ ಬಗ್ಗೆ ತಿಳಿದುಕೊಳ್ಳಲು ನಿಮ್ಮ ಲೇಖನ ಸಹಾಯಕ. ಮೇಲೆ ಹೆಸರಿಸಿದ ಮಹಾನ್ ಕೃತಿಗಳನ್ನು ಸಮರ್ಥವಾದ ಅನುವಾದರು(,ಮೂಲ ಕೃತಿಯ ಸಾಮಿಪ್ಯ)ಮಾಡಿದಲ್ಲಿ ನಮ್ಮಂಥ ಇಂಗ್ಲಿಷ್ ವೀಕ್ ಇರುವವರು ಕನ್ನಡದಲ್ಲಿ ಅಸ್ವಾದಿಸಬಹದು.ಅನ್ನ ಕರೆನೀನಾ ದೇಜಗೌರ ಅನುವಾದ ಚೆನ್ನಾಗಿಲ್ಲ ಎಂದು ಕೇಳಿದ್ದೇನೆ.

\r\n


| ಗುಂಡಣ್ಣ ಚಿಕ್ಕಮಗಳೂರು

‘ಮ್ಯೂಸಿಯಂ ಆಫ್ ಇನ್ನೊಸೆನ್ಸ್’  ಪುಸ್ತಕದ ಬಗ್ಗೆ ಬರೆದ ನಿಮ್ಮ ಬರಹದ ಆಧಾರದಲ್ಲಿ ಪುಸ್ತಕದ ವಿಷಯವನ್ನು ಅರ್ಥೈಸಿಕೊಳ್ಳುವುದಾದರೆ, ನಮ್ಮ ದೇಶದ  ಜನರ  ಪ್ರೀತಿ, ಪ್ರೇಮ ಮತ್ತು ಯುವಕರ ಭಾವನಾತ್ಮಕ ಪ್ರಣಯ ಸಂಬಂಧಗಳಿಗೆ ಈ ಕಥೆ ತೀರಾ ಹತ್ತಿರದಲ್ಲಿದೆ. ನಾವು ಪ್ರೀತಿಸುವ, ಪ್ರೀತಿಸುತಿದ್ದ ಜನರು ಬಳಸುತಿದ್ದ ವಸ್ತುಗಳನ್ನು ಆ ಭಾವನಾತ್ಮಕ ಪ್ರೀತಿಯ ನೆನಪಿನಲ್ಲೋ, ಪ್ರೀತಿಸುವ, ಪ್ರೀತಿಸುತಿದ್ದ ಜನಗಳ ನೆನಪಿನಲ್ಲೋ ಸಂಗ್ರಹಿಸಿ ಇಟ್ಟುಕೊಳ್ಳಲು ಆ ವ್ಯಕ್ತಿ ಹುಡುಗಿಯೇ ಆಗಿರಬೇಕು ಎಂದಿಲ್ಲ. ಪರಸ್ಪರ ಆಕರ್ಷಣೆಗೆ ಒಳಗಾದ ಯಾರೇ ಇಬ್ಬರು, ಯಾರ ನೆನಪಿನಲ್ಲಿ ಬೇಕಾದರೂ ಸಂಗ್ರಹಿಸಲು ಮನಸ್ಸು ಮಾಡಬಹುದು. ಈ ಕಾರ್ಯದಲ್ಲೂ ಸಹ ಪ್ರೇಮ, ಪ್ರೀತಿ, ಭಾವನಾತ್ಮಕ ತೀರ್ಮಾನ, ಪರಸ್ಪರ ಆಕರ್ಷಣೆ ಹಾಗೂ ಆಸಕ್ತಿ ಬಹಳ ಮುಖ್ಯವಾಗುತ್ತದೆ.

\r\n\r\n

ನನ್ನ ಸಂಪರ್ಕಕ್ಕೆ ಬಂದಿರುವವರಲ್ಲಿ ತಮ್ಮ ತಂದೆ- ತಾಯಿಯರು ಬಳಸುತ್ತಿದ್ದ ವಸ್ತುಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳುವುದು ಅಥವಾ ಆ ವಸ್ತುಗಳನ್ನು ಇವರುಗಳು ಮರು ಬಳಕೆ ಮಾಡುವುದು ಮುಂತಾದ ವ್ಯಕ್ತಿತ್ವದ ಸ್ನೇಹಿತರೂ ಇದ್ದಾರೆ. ನಮ್ಮ ಮನೆಯಲ್ಲಿ ನಮ್ಮ ತಾಯಿಯವರು ಸುಮಾರು ಐವತ್ತಕೂ ಹೆಚ್ಚು ವರ್ಷ ಕಾಫಿ ಕುಡಿಯುತ್ತಿದ್ದ ಸ್ಟೀಲ್ ಲೋಟ ಒಂದಿದೆ. ನಮ್ಮ ತಾಯಿಯವರಿಗೆ ನಾವು ಅದರಲ್ಲೇ ಕಾಫಿ ಕೊಡಬೇಕು. ಅದು ಕಾನೂನು. ಸುಮಾರು ಕಾಲು ಲೀಟರ್ ಕಾಫಿ ಹಿಡಿಸುತ್ತೆ. ಅದರಲ್ಲಿ ಅವರು ದಿನಕ್ಕೆ  8-10 ಬಾರಿ ಭರ್ತಿ ಲೋಟ ಕಾಫಿ ಕುಡಿಯುತಿದ್ದರು. ಅದು ಬಿಟ್ಟು, ಮನೆಗೆ ಬಂದವರಿಗೆ ಕಾಫಿ ಕೊಟ್ಟಾಗಲೆಲ್ಲಾ, ಒಂದು ಚಿಕ್ಕ ಲೋಟದಲ್ಲಿ ಕುಡಿಯುತ್ತಿದ್ದರು‌. ಇಂದು ಆ ದೊಡ್ಡ ಲೋಟವನ್ನು ನಮ್ಮ ಮನೆಯವರು ಬಳಸುತ್ತಿದ್ದಾರೆ... ಅದು ನಮಗೆ ಒಂದು ರೀತಿಯಲ್ಲಿ ಅನಿವಾರ್ಯದ ವಸ್ತು.

\r\n\r\n

ಹೀಗೇ ಹೇಳುತ್ತಾ ಹೋದರೆ, ಸಾಕಷ್ಟು ವಸ್ತುಗಳ ಬಗ್ಗೆ ಹೇಳಬಹುದು...
\r\nನನ್ನ ಮಗ ಶಶಾಂಕ ಸಾಲಿಗ್ರಾಮ ಚಿತ್ರರಂಗದ ಕಲಾ ನಿರ್ದೇಶಕ. ಅಕಾಲಿಕವಾಗಿ ನಮ್ಮನ್ನು ಅಗಲಿದ. ಅವನು ಬಳಸುತಿದ್ದ ಹಲವಾರು ವಸ್ತುಗಳನ್ನು ನಾವು ಬಹಳ ಜತನದಿಂದ ಕಾಪಾಡಿದ್ದೇವೆ. ಬಾಹ್ಯವಾಗಿ ಅವನ 8-10 ಫೋಟೋಗಳನ್ನು ಬರುವ- ಹೋಗುವ ಜನ ನೋಡಬಹುದು. ಅದು ಕಣ್ಣಿಗೆ ಕಾಣುವಂತಹದ್ದು; ಆದರೆ ಅವನ ಬ್ರಾಂಡ್ ಸಿಗರೇಟ್ ಪ್ಯಾಕ್, ಅವನ ಕೈ ಗಡಿಯಾರ, ಧರಿಸುತಿದ್ದ ಹಲವು ಉಡುಪುಗಳು, ಅವನ ಪುಸ್ತಕ ಸಂಗ್ರಹಗಳು, ಕೂಲಿಂಗ್ ಗ್ಲಾಸ್... ಅವನ ಮೋಟರ್‍ ಬೈಕ್, ಅವನ ಕೈ ಬರಹದ ಹಲವು ಬರವಣಿಗೆಗಳು... ಎಲ್ಲವೂ ಇವೆ...ನಾವು ಯಾರೂ ಇವುಗಳನ್ನು ಬಳಸುವುದಿಲ್ಲ; ಆದರೆ ಜತನದಿಂದ, ಪ್ರೀತಿ-ಮಮಕಾರದಿಂದ ಕಾಪಿಟಿದ್ದೇವೆ. ಎಂದಾದರೂ ಬಂದು ‘ನನ್ನ ವಾಚ್ ಎಲ್ಲಿ?’ ಎಂದು ಮಗ ಕೇಳಿದರೆ ಏನು ಹೇಳುವುದು? ಆ ಹೆದರಿಕೆ ಮತ್ತು ಜವಾಬ್ದಾರಿ ಎರಡನ್ನೂ ಇಟ್ಟುಕೊಂಡು ನೋಡಿಕೊಳ್ಳುತಿದ್ದೇವೆ.
\r\nಮ್ಯೂಸಿಯಂ ಎಂದು ಎಲ್ಲೂ ಹೇಳಿಲ್ಲ. ಆದರೆ ಅದಕ್ಕೂ ಮಿಗಿಲು...
\r\n 

\r\n\r\n

ಆದರೆ, ಒರಾನ್ ಪಾಮುಕ್ ಬರೆದ ‘ಮ್ಯೂಸಿಯಂ ಆಫ್ ಇನ್ನೊಸೆನ್ಸ್’ ನಲ್ಲಿ ಕೇಮಲ್ ತನ್ನ ಪ್ರೀತಿಯ ಹುಡುಗಿ ತಿಂದು ಎಸೆದ ಚಾಕಲೇಟ್ ಕವರ್‌ಗಳು, ಟೀ ಲೋಟಗಳನ್ನು ಸಂಗ್ರಹಿಸಿ, ಅವಳ ನೆನಪಿನಲ್ಲಿ ಕಾಪಿಟ್ಟುಕೊಳ್ಳುವುದು ನಿಜಕ್ಕೂ ಅನನ್ಯವೆನಿಸಿತು. ನಿಮ್ಮ ಬರಹದಲ್ಲೇ ಆ ಸಾಲುಗಳನ್ನು ಓದಿ ಮನಸ್ಸು ಹಿತವಾಯಿತು; ಏನೋ ಆಹ್ಲಾದಕರ, ಹೊಸತನದ ಅನುಭವ ಆಯಿತು. ಆ ಪುಸ್ತಕ ಓದಬೇಕು ಅನ್ನಿಸಿತು...
\r\nಇಷ್ಟೆಲ್ಲಾ ಹೇಳಿದರೂ ಸಹ ನನಗೆ ಡಿ. ಹೆಚ್. ಲಾರೆನ್ಸ್ ಅವರ ನಾಣ್ಣುಡಿ ಆಪ್ಯಾಯಮಾನವಾಯಿತು. ‘ಕಾದಂಬರಿ ಎನ್ನುವುದು ಬದಲಾಗುತ್ತಾ ಹೋಗುವ ಜೀವಂತ ಸಂಬಂಧಗಳ ಕಾಮನಬಿಲ್ಲು’ ಎಂಬ ಮಾತುಗಳು ಬಹುಶಃ ಒಂದು ಕಾಮನಬಿಲ್ಲಿಗೆ ಮಾತ್ರ ಸರಿಗಟ್ಟಬಹುದೇನೋ... That’s D.H. Lawrence! ‘ಕಾಮನಬಿಲ್ಲು’ ಪದ ಓದಿದ ಕೂಡಲೇ ಕಣ್ಣ ಮುಂದೆ ಹಲವು ಬಣ್ಣಗಳು ಅದ್ದಿ, ಕಲಸಿ, ಬಣ್ಣ ಬಳಿದು ಕಣ್ಣಾಚೆಗೆ ಹೊರಟುಹೋಗುತ್ತವೆ. ಅದು ಏಳು ಬಣ್ಣಗಳಿಗೆ ಮಾತ್ರ ಸೀಮಿತವಾಗುವುದಿಲ್ಲ... ಕಾಮನಬಿಲ್ಲಿನ ಬಣ್ಣಗಳಿಗೆ ಮಾತ್ರವೂ ಸೀಮಿತವಾಗುವುದಿಲ್ಲ...ಗಾಢ ಬಣ್ಣಗಳ ಕುಂಚ ಕುಣಿದಾಡುತ್ತದೆ... ಎಷ್ಟೊಂದು ಬಣ್ಣಗಳು...ಎಷ್ಟೊಂದು ಕನಸುಗಳು… ಪ್ರತಿ ಬಣ್ಣಕ್ಕೂ ಒಂದು ಅರ್ಥ... ಸಾವಿರಾರು ಬಣ್ಣಗಳ ಓಕುಳಿ...ಇದರ ಮಧ್ಯೆ, ಲಾರೆನ್ಸ್ ನ ಒಂದು ಪುಟ್ಟ ಮುಖ ಹೀಗೆ ಬಂದು ಹಾಗೆ ಹೋಗುತ್ತದೆ... A great, wonderful writer for centuries to come...  
\r\nಧನ್ಯವಾದಗಳು- ಒಂದು ಸುಂದರ ಕಲ್ಪನಾ ಲೋಕಕ್ಕೆ ಕರೆದೊಯ್ಯಿತು ತಮ್ಮ ಬರವಣಿಗೆ...
\r\n‘ಮ್ಯೂಸಿಯಂ ಆಫ್ ಇನ್ನೊಸೆನ್ಸ್’ ಪುಸ್ತಕ ಓದಬೇಕು ಅನ್ನಿಸಿತು...ಹಾಗೆಯೇ ಲಾರೆನ್ಸ್ ನ ಯಾವುದಾದರೂ ಒಂದು ಬರವಣಿಗೆಯನ್ನು…

\r\n


| Dr. B.C. Prabhakar

Brilliant!

\r\n


| ಈರಪ್ಪ ಎಂ ಕಂಬಳಿ

ನಮ್ಮೊಳಗಿನ ಆ ಮುಗ್ಧತೆಯನ್ನೆ ಕಳೆದು ಕೊಂಡು ಕಂಗಾಲಾದ ಈ ಹೊತ್ತಿನಲ್ಲಿ  ನಿಮ್ಮ 'ದಿ ಮ್ಯೂಸಿಯಂ ಆಫ್ ಇನ್ನೋಸೆನ್ಸ್' ಟಿಪ್ಪಣಿ ಅಗಾಧ ಅನುಭವ ನೀಡುತ್ತದೆ. ಕಾಲದ ಹಂಗಿಲ್ಲದೆ ಕಾಡುವ ನಮ್ಮೊಳಗಿನ ಪ್ರೇಮಲೋಕದ ಬಾಗಿಲೆಡೆಗೆ ಹಿಂತಿರುಗಿ ನಿಂತು ನೋಡುವಂತೆ ಮಾಡುತ್ತದೆ. . . . ಜಡ್ಡುಗಟ್ಟಿದ ಮನಸ್ಸಿಗೆ ಮುದ ನೀಡುವ ನಿಮ್ಮ ಪೆನ್ನು ದಣಿವರಿಯದಿರಲಿ. ಹದುಳ.

\r\n


| Doreswamy

ಸರ್,

\r\n\r\n

ಲೇಖನ ಮುಗ್ಧತೆಯನ್ನು ಆವರಿಸಿದೆ. 

\r\n\r\n

ನಾನು ಸಿಲೆಬಸ್ ನಲ್ಲಿರೋ 'ಇಮೋಷ್ನಲ್ ಇಂಟೆಲಿಜೆನ್ಸ್' ಟಾಪಿಕ್ ಪಾಠ ಮಾಡುವಾಗ/ವಿವರಿಸುವಾಗ ವಿದ್ಯಾರ್ಥಿಗಳ ಹಾವಭಾವದ ಪ್ರತಿಕ್ರಿಯೆಗೂ ಈ ಮುಗ್ಧತೆಗೂ ಸಾಮ್ಯತೆಯಿದೆ.

\r\n




Add Comment