ದೊಡ್ಡವರ ‘ನುಡಿಮರೆವು’!

 ಎದುರಿಗೆ ಕೂತಿದ್ದ ಗೆಳೆಯ-ವಿಮರ್ಶಕ ದಂಡಪ್ಪನವರು ವಿಸ್ಮಯಗೊಂಡರು. ಆಗ ಅವರಿನ್ನೂ ಈಗಿನಂತೆ ಪೂರ್ಣಪ್ರಮಾಣದ ವಿಮರ್ಶಕರಾಗಿರಲಿಲ್ಲ; ಆಗಾಗ್ಗೆ ವಿಮರ್ಶಾಲೇಖನ ಬರೆಯುತ್ತಿದ್ದ ಅವರು ತೆರಿಗೆ ಇಲಾಖೆಯಲ್ಲಿ ಡೆಪ್ಯುಟಿ ಕಮಿಷನರ್ ಆಗಿದ್ದರು. ಅವರ ಆ ಗಳಿಗೆಯ ವಿಸ್ಮಯಕ್ಕೆ ಅವತ್ತಿನ ಪುಸ್ತಕ ಬಿಡುಗಡೆಯ ಕಾರ್ಯಕ್ರಮದಲ್ಲಿ ನನ್ನ ಬಾಯಿಂದ ಅಕಸ್ಮಾತ್ ಹೊರ ಬಂದ ತಕ್ಷಣದ ಪ್ರತಿಕ್ರಿಯೆ ಕಾರಣವಾಗಿತ್ತು. 

ಸಾರ್ವಜನಿಕ ಜೀವನದಲ್ಲಿರುವ ಎಲ್ಲರಿಗೂ ಹೀಗಾಗಿರುತ್ತದೆ: ನೀವು ತಯಾರು ಮಾಡಿಕೊಂಡ ಭಾಷಣದ ಟಿಪ್ಪಣಿಗಳು ಎಲ್ಲೋ ಚೆಲ್ಲಾಪಿಲ್ಲಿಯಾಗಿ, ಆ ಕ್ಷಣದ ಸತ್ಯವೊಂದು ಹುಟ್ಟುವ, ಅಥವಾ ನೀವು ಯೋಚಿಸಿರದ ಸತ್ಯವೊಂದು ನಿಮ್ಮ ಬಾಯಿಂದ ಹೊರಬರುವ ವಿಚಿತ್ರ-ವಿಶಿಷ್ಟ ಗಳಿಗೆ ಅದು. ಈ ದೃಷ್ಟಿಯಿಂದ ನೋಡಿದಾಗ, ಸ್ಪಾಂಟೇನಿಯಸ್ ಆದ ಮಾತು, ಬರಹ, ಹೂ ಬುಟ್ಟಿ ಹೆಣೆವವಳ ಹೊಸ ಪ್ರಯೋಗ, ಪ್ಲಂಬರ್ ಕೈ ಚಳಕ... ಎಲ್ಲವೂ ಕ್ರಿಯೇಟಿವ್ ಎಂದು ನನಗೆ ಮತ್ತೆ ಮತ್ತೆ ಅನ್ನಿಸುತ್ತಿರುತ್ತದೆ. ಯಾವುದು ನಮ್ಮೊಳಗಿನ ಕೇಡನ್ನು ಉದ್ದೀಪಿಸದೆ, ನಮ್ಮ ನಿಜವಾದ ಸತ್ವ ಹಾಗೂ ಪಾಸಿಟಿವ್ ಶಕ್ತಿಯನ್ನು ಹೊರ ತರುತ್ತದೋ ಅದು ಕ್ರಿಯೇಟಿವ್ ಆಗಿರಬಲ್ಲದು ಎಂದು ನನ್ನ ನಂಬಿಕೆ.

ಈ ಬರಹದ ಶುರುವಿನಲ್ಲಿ ಹೇಳಿದ ಪುಟ್ಟ ವಿಸ್ಮಯದ ಸಂದರ್ಭದ ಹಿನ್ನೆಲೆ: ಅವತ್ತು ದಂಡಪ್ಪ ಸಂಪಾದಿಸಿದ ಸಿದ್ಧಲಿಂಗಯ್ಯ ವಾಚಿಕೆ, ವಾಸುದೇವಮೂರ್ತಿ ಬರೆದ ಕಿ.ರಂ. ನಾಗರಾಜ್ ಕುರಿತ ಪುಸ್ತಕ… ಇತ್ಯಾದಿಗಳ ಬಿಡುಗಡೆಯಿತ್ತು. ವೇದಿಕೆಯಲ್ಲಿ ಸಿದ್ಧಲಿಂಗಯ್ಯ, ಚಂದ್ರಶೇಖರ ಕಂಬಾರ, ಅನಂತಮೂರ್ತಿ, ವೆಂಕಟೇಶಮೂರ್ತಿಯವರ ಜೊತೆಗೆ ನಾನೂ ಒಬ್ಬ ಅತಿಥಿ. 

ಪುಸ್ತಕಗಳನ್ನು ಬಿಡುಗಡೆ ಮಾಡಿದ ಅನಂತಮೂರ್ತಿ ಮಾತುಮಾತಾಡುತ್ತಲೇ ಯಾವುದೋ ಉತ್ಸಾಹದಲ್ಲಿ ‘ಅಡಿಗರ ನಂತರದ ಮಹತ್ವದ ಕವಿ ವೆಂಕಟೇಶಮೂರ್ತಿ’ಎಂದರು. 

ಈ ಉಬ್ಬಿದ ಮಾತು ಕೇಳಿದ ತಕ್ಷಣ ಅವತ್ತು ಕಿ.ರಂ ನಾಗರಾಜರ ಮೇಲೆ ಮಾತಾಡಬೇಕಾಗಿದ್ದ ನನ್ನ ಸಿದ್ಧ ಟಿಪ್ಪಣಿಗಳು ಹಿನ್ನೆಲೆಗೆ ಸರಿದುಹೋದವು! ಅನಂತಮೂರ್ತಿಯವರ ಮಾತು ಗುಂಗೆ ಹುಳುವಿನಂತೆ ನನ್ನ ಕಿವಿಯಲ್ಲಿ ಗುಯ್‌ಗುಟ್ಟತೊಡಗಿತು; ನನ್ನ ಸರದಿ ಬಂದಾಗ ಕಿ.ರಂ. ಬಗ್ಗೆ ಮಾತಾಡುವುದು ಪಕ್ಕಕ್ಕೆ ಸರಿದು, ಅನಂತಮೂರ್ತಿಯವರನ್ನು ಉದ್ದೇಶಿಸಿದ ನನ್ನ ಪ್ರಶ್ನೆ ಹೊರ ಬಂದೇಬಿಟ್ಟಿತು: 

‘ಸಾರ್! ನಿಮ್ಮ ಪಕ್ಕದಲ್ಲೇ ಕಂಬಾರರು ಕೂತಿದ್ದಾರೆ. ಇಲ್ಲೇ ಕನ್ನಡ ಕಾವ್ಯದ ಹೊಸ ಮಾರ್ಗ ತೆರೆದ ಸಿದ್ಧಲಿಂಗಯ್ಯ ಕೂತಿದ್ದಾರೆ. ಈಗಾಗಲೇ ಶಿವಪ್ರಕಾಶ್ ಕನ್ನಡದ ಗಂಭೀರವಾದ ಕವಿಯಾಗಿದ್ದಾರೆ. ಹೀಗಿದ್ದಾಗ ನೀವು ಇದ್ದಕ್ಕಿದ್ದ ಹಾಗೆ ‘ಅಡಿಗರ ನಂತರ... ವೆಂಕಟೇಶಮೂರ್ತಿ’ ಎಂದು ಸ್ವೀಪಿಂಗ್ ಸ್ಟೇಟ್‌ಮೆಂಟ್ ಮಾಡಿದರೆ ಹೇಗೆ? ವೆಂಕಟೇಶಮೂರ್ತಿಯವರು ಮುಖ್ಯ ಕವಿ, ನನಗೂ ಇಷ್ಟವಾದ ಕವಿ. ಆ ಮಾತು ಬೇರೆ...’

ನನ್ನ ಮಾತು ಮುಗಿಯುವ ಮೊದಲೇ ಅನಂತಮೂರ್ತಿ ಕೂತಲ್ಲಿಂದಲೇ, ‘ನೀನು ಅವ್ರನ್ನೂ ಇಷ್ಟ ಪಡ್ತೀಯ, ಇವ್ರನ್ನೂ ಇಷ್ಟ ಪಡ್ತೀಯ!’ ಎಂದು ತಮಾಷೆ ಮಾಡುತ್ತಾ ನಕ್ಕರು. ಅದೊಂದು ಪುಟ್ಟ ಸಾಹಿತ್ಯಕ ಜುಗಲ್‌ಬಂದಿಯೇ ಆಗತೊಡಗಿತು!

`ಸಾರ್! ವೆಂಕಟೇಶಮೂರ್ತಿಯವರ ಕಾವ್ಯದ ಬಗ್ಗೆ ನನಗೂ ಮೆಚ್ಚುಗೆ ಇದೆ. ಆದರೆ ಪುಸ್ತಕ ಬಿಡುಗಡೆಯ ಭರದಲ್ಲಿ ಮುಖ್ಯವಾದ ಸಾಹಿತ್ಯಕ ತೀರ್ಮಾನಗಳು ಹೀಗೆ ಪೂರಾ ಕಿತ್ತು ಹರಿದುಕೊಂಡು ಹೋದರೆ ಹೇಗೆ?’ ಎಂದು ಹೇಳಲೆತ್ನಿಸಿದೆ...

ಅನಂತಮೂರ್ತಿ ನಮ್ಮ ಮುಖ್ಯ ಸೃಜನಶೀಲ ವಿಮರ್ಶಕರಲ್ಲಿ ಒಬ್ಬರು. ಒಳ್ಳೆಯ ಕಾದಂಬರಿ, ಕತೆ ಬರೆಯುತ್ತಲೇ ಸಾಹಿತ್ಯ ಕೃತಿಗಳಿಗೆ ಪ್ರಖರವಾದ ಒಳನೋಟ ಕೊಡಬಲ್ಲವರಾಗಿದ್ದರು. ಅವರು ಸಾರ್ವಜನಿಕ ಸಭೆಗಳಲ್ಲಿ ಹುಸಿ ಗಣ್ಯತೆಗೆ ಬೆಲೆ ಕೊಡದೆ ನೇರವಾಗಿ ಮಾತಾಡುತ್ತಿದ್ದ ಸಂದರ್ಭಗಳಿದ್ದವು; ಪುಸ್ತಕ ಬಿಡುಗಡೆಯ ಔಪಚಾರಿಕ ಸಭೆಗಳಲ್ಲಿ ಕೂಡ ಅವರು ಸ್ಪಷ್ಟವಾದ ವಿಮರ್ಶೆಯ ಹಾದಿಯಲ್ಲೇ ಮಾತಾಡುತ್ತಿದ್ದರು. ಹಿಂದೊಮ್ಮೆ ರಾಮಚಂದ್ರ ಶರ್ಮರ ‘ದೆಹಲಿಗೆ ಬಂದ ಹೊಸ ವರ್ಷ’ ಕವನ ಸಂಕಲನದ ಬಿಡುಗಡೆಯಲ್ಲಿ ನಡೆದ ಕತೆಯನ್ನು ನನ್ನ ‘ಗಾಳಿ ಬೆಳಕು’ಪುಸ್ತಕದ ‘ಕವಿ ಮತ್ತು ವಿಮರ್ಶೆ: ವಿಮರ್ಶೆಯೆಂಬ ಹೂ ಬಾಣ’ಲೇಖನದಲ್ಲಿ ಬರೆದಿರುವೆ. ಈ ಬಗ್ಗೆ ಹಿಂದೆಯೂ ಉಲ್ಲೇಖಿಸಿರುವೆ:

ಅವತ್ತು ಒಬ್ಬ ಕವಿಯ ಸಾಂಸ್ಕೃತಿಕ ಬೇರುಗಳು ಕಡಿದು ಹೋದಾಗ ಅವನ ಕಾವ್ಯಕ್ಕೆ ಏನಾಗುತ್ತದೆ ಎಂಬ ಪ್ರಶ್ನೆಯನ್ನು ಅನಂತಮೂರ್ತಿ ಗಂಭೀರವಾಗಿ ಚರ್ಚಿಸಿದ್ದರು.  ಸಭೆಯಲ್ಲಿದ್ದ ಕಿ.ರಂ. ನಾಗರಾಜ್ ಕೂಡ ಇದೇ ಧಾಟಿಯಲ್ಲಿ ಮಾತಾಡಿದ್ದರು. ಹೀಗೆ ಅನಂತಮೂರ್ತಿ, ಕಿ.ರಂ. ಮಾತಾಡಿದ ವಿಮರ್ಶಾತ್ಮಕ ರೀತಿಗೆ ಶರ್ಮರು ವ್ಯಗ್ರರಾಗಿ, ‘ಪುಸ್ತಕ ಬಿಡುಗಡೆ ಎಂದರೆ ಶಾಲಿನಲ್ಲಿ ಸುತ್ತಿ ಹೊಡೆಯುವುದು’ಎಂದಿದ್ದರು; ಈ ರೇಗುಮಾತನ್ನು ಮತ್ತೆ ಮತ್ತೆ ನೆನೆಯುವ ವಿಕ್ರಮ ವಿಸಾಜಿಯವರ ರಾಗಮಯ ನಗು ಕೂಡ ನನ್ನ ಕಿವಿಯಲ್ಲಿ ಅನುರಣಿಸುತ್ತಿದೆ!  

ಶರ್ಮರ ಕಾವ್ಯದ ಬಗ್ಗೆ ಅನಂತಮೂರ್ತಿ, ಕಿ.ರಂ. ಕೊಂಚ ಓವರ್‌ರಿಯಾಕ್ಟ್ ಮಾಡಿದರೇನೋ ಎಂದು ಮುಂದೊಮ್ಮೆ ಅನ್ನಿಸಿದರೂ ಅವರ ವಿಮರ್ಶೆಯ ಖಚಿತತೆಯ ಬಗ್ಗೆ ಅವತ್ತು ಗೌರವವಂತೂ ಮೂಡಿತ್ತು; ಆ ಗೌರವ ಇವತ್ತಿಗೂ ಹಾಗೇ ಇದೆ. ಸಾರ್ವಜನಿಕ ಸಭೆಯಿರಲಿ, ಖಾಸಗಿ ಮಾತುಕತೆಯಿರಲಿ, ಸತ್ಯ ಮಾತಾಡುವವರ ಬಗ್ಗೆ, ಅಥವಾ ಕೊನೇ ಪಕ್ಷ ಸತ್ಯಕ್ಕೆ ಹತ್ತಿರವಾಗಿ ಮಾತಾಡುವವರ ಬಗ್ಗೆ, ಎಲ್ಲ ಸೂಕ್ಷ್ಮ ಜನರಲ್ಲೂ ಗೌರವ ಮೂಡುತ್ತಲೇ ಇರುತ್ತದೆ; ಅಂಥ ಗೌರವ ಹುಟ್ಟಿಸಬಲ್ಲವರು ಹುಟ್ಟುತ್ತಲೇ ಇರಬೇಕು. ಇಲ್ಲದಿದ್ದರೆ ಇಡೀ ಸಂಸ್ಕೃತಿ ಸಾಹಿತ್ಯ ಪರಾವಲಂಬಿಗಳ ಭೋಳೆ ಸಂಸ್ಕೃತಿಯಾಗುತ್ತದೆ. 

ತಮಾಷೆಯೆಂದರೆ ಅವತ್ತು ಶರ್ಮರ ಕವನ ಸಂಕಲನದ ಬಗ್ಗೆ ಅಷ್ಟೊಂದು ನಿಖರವಾದ ವಿಮರ್ಶೆಯ ಸೂತ್ರಗಳನ್ನು ಬಳಸಿದ್ದ ಕಿ.ರಂ. ನಾಗರಾಜರೇ ಮತ್ತೊಂದು ಪುಸ್ತಕ ಬಿಡುಗಡೆಯಲ್ಲಿ ಉತ್ಪ್ರೇಕ್ಷಾಲಂಕಾರ ಝಳಪಿಸಿದರು; ಆಗ ಮತ್ತೊಮ್ಮೆ ನನ್ನ ಸಿದ್ಧ ಟಿಪ್ಪಣಿಗಳು ಹಿನ್ನೆಲೆಗೆ ಸರಿವ ಪ್ರಸಂಗ ಬಂತು! ಅವತ್ತು ಕೆ.ಬಿ. ಸಿದ್ದಯ್ಯನವರ ‘ದಕ್ಲದೇವಿ ಕಥಾಕಾವ್ಯ’ ಖಂಡಕಾವ್ಯವನ್ನು ಇಷ್ಟಪಟ್ಟ ಕಿ.ರಂ., ‘ಈ ಕಾವ್ಯವನ್ನು ವಿವರಿಸಲು ಕನ್ನಡ ವಿಮರ್ಶೆಯ ಮಾನದಂಡಗಳೇ ಬದಲಾಗಬೇಕು’ ಎಂದುಬಿಟ್ಟರು! ಇದು ಪುಸ್ತಕ ಬಿಡುಗಡೆಗೂ ಮುನ್ನ ಕೃಷ್ಣಮೂರ್ತಿ ಬಿಳಿಗೆರೆಯವರ ದೇಶಿ ಸಂಸ್ಕೃತಿ ಪ್ರಚಾರದ ಪರಿಣಾಮವೂ ಇರಬಹುದು ಎಂದು ಗುಮಾನಿ ಪಟ್ಟವರಿದ್ದಾರೆ!

ಆ ಖಂಡಕಾವ್ಯದ ವಿಶೇಷ, ಅದರ ಹಿಮ್ಮುಖಿ ಸಾಂಸ್ಕೃತಿಕ ರಾಜಕಾರಣ, ಹಾಗೂ ಅದು ಕಾವ್ಯದ ಜಾಣ ಓದುಗರನ್ನು ಕೂಡ ತಲುಪಲು ಉಬ್ಬಸಪಡುತ್ತಿದ್ದ ರೀತಿ… ಎಲ್ಲವನ್ನೂ ಗಮನಿಸಿದ್ದ ನನಗೆ ಈ ಪುಸ್ತಕ ಓದಲು ವಿಮರ್ಶೆಯ ಮಾನದಂಡಗಳು ಯಾಕೆ ಬದಲಾಗಬೇಕು ಎಂಬುದು ಮಾತ್ರ ಅರ್ಥವಾಗಲಿಲ್ಲ! 

‘ಅಲ್ಲಾ ಸಾರ್! ಬೇಂದ್ರೆ ಕಾವ್ಯ ಓದಲು ನಮ್ಮ ವಿಮರ್ಶೆಯ ಮಾನದಂಡ ಬದಲಿಸಿಕೊಂಡಿಲ್ಲ, ಅಡಿಗರ ಕಾವ್ಯವನ್ನಾಗಲೀ, ಕಂಬಾರರ ಕಾವ್ಯವನ್ನಾಗಲೀ ಓದುವಾಗ; ಅಥವಾ ಸಿದ್ಧಲಿಂಗಯ್ಯನವರ ಕಾವ್ಯ ಅಥವಾ ಇನ್ನಾವುದೇ ಮುಖ್ಯ ಕವಿಗಳ ಕಾವ್ಯ ಬಂದಾಗ... ನಮ್ಮ ವಿಮರ್ಶೆಯ ಮಾನದಂಡಗಳನ್ನು ಏಕಾಏಕಿ ಬದಲಿಸಿಕೊಂಡಿಲ್ಲ; ಈಗ ಯಾಕೆ ಇದ್ದಕ್ಕಿದ್ದಂತೆ ಮಾನದಂಡಗಳನ್ನು ಬದಲಿಸಬೇಕು?’ ಎಂಬ ಪ್ರಶ್ನೆ ನಿಜಕ್ಕೂ ಸ್ಪಾಂಟೇನಿಯಸ್ ಆಗಿ ನನ್ನ ಬಾಯಿಂದ ಬಂತು. ಕಿ.ರಂ. ಒಮ್ಮೆ ಕತ್ತೆತ್ತಿ ನನ್ನತ್ತ ನೋಡಿ ಸಣ್ಣಗೆ ಸಿಡಿಮಿಡಿಗೊಂಡರು; ಆದರೆ ಆ ಪ್ರಶ್ನೆಯ ಅಂತರಾಳವನ್ನು ಅವರು ಒಪ್ಪಿಕೊಂಡರೆಂದು ಅವತ್ತಿನ ಬಿಡುಗಡೆಯೋತ್ತರ ಗೋಷ್ಠಿಯಲ್ಲಿದ್ದವರು ಹೇಳಿದರು. 

ಈ ಎರಡೂ ‘ನುಡಿಮರೆವು’ಗಳ (ಮೈಮರೆವಿನ ಹಾಗೇ ನುಡಿಮರೆವೂ ಇದೆ!) ಪ್ರಸಂಗಗಳ ನಂತರ ಅನಂತಮೂರ್ತಿಯವರ ಜೊತೆಯಾಗಲೀ, ಕಿ.ರಂ. ನಾಗರಾಜರ ಜೊತೆಯಾಗಲೀ ನಾನು ಆರಾಮಾಗೇ ಇದ್ದೆ; ಅವರೂ ನನ್ನೊಡನೆ ಆರಾಮಾಗಿದ್ದರು. ಕಿರಿಯವನಾದ ನನ್ನ ಪ್ರಶ್ನೆಯಲ್ಲಿ ಇದ್ದಿರಬಹುದಾದ ಒಂದು ಮಟ್ಟದ ಸತ್ಯವನ್ನು ಅವರ ಒಳಮನಸ್ಸು ಒಪ್ಪಿರಬಹುದು. 

ಎಷ್ಟೋ ಸಲ ಹೀಗೆ ನಮ್ಮ ಸಿದ್ಧ ಟಿಪ್ಪಣಿ ಮೀರಿ ಹೊಳೆಯುವ ಆ ಕ್ಷಣದ ಸತ್ಯಗಳು ಎಲ್ಲರಲ್ಲೂ ಮೂಡಿರುತ್ತವೆ. ಅವನ್ನು ಅನಗತ್ಯವಾಗಿ ಅದುಮಿಡದೆ ಅವು ಸುಮ್ಮನೆ ನುಡಿಯಲು ಬಿಡುವುದು ನಮಗೂ ಒಳ್ಳೆಯದು; ಸಂಸ್ಕೃತಿಯ ಆರೋಗ್ಯಕ್ಕೂ ಒಳ್ಳೆಯದು. ನಮಗೆ ಓದಲು ಕೊಟ್ಟ ಪುಸ್ತಕ ಓದಿ ನಾವೇನೋ ಉಪಕಾರ ಮಾಡುತ್ತಿದ್ದೇವೆ ಎಂಬ ಠೇಂಕಾರವೂ ನಮಗೆ ಇರಬೇಕಿಲ್ಲ; ಅಥವಾ ಪುಸ್ತಕಕ್ಕಾಗಲೀ, ಅದನ್ನು ಬರೆದ ಲೇಖಕ ಲೇಖಕಿಯರಿಗಾಗಲೀ ವಿಧೇಯರಾಗಿರಲೂ ಬೇಕಾಗಿಲ್ಲ; ಒಂದು ಪುಸ್ತಕದ ಮುನ್ನುಡಿಯಲ್ಲೋ, ಪುಸ್ತಕದ ಬಿಡುಗಡೆಯಲ್ಲೋ ಈ ಪುಸ್ತಕವನ್ನು ಲೋಕದ ಅತ್ಯುತ್ತಮ ಪುಸ್ತಕವೆಂದು ಸಾಬೀತು ಮಾಡುತ್ತೇನೆ ಎಂದು ಹೊರಡುವ ಸಾಹಿತ್ಯ ಪರಾವಲಂಬಿಗಳ ಹುಂಬ ಹುಮ್ಮಸ್ಸು ಕೂಡ ಸಿಲ್ಲಿಯೇ! ಒಂದು ಪುಸ್ತಕವೇ ನಮಗೆ ನಿಜಕ್ಕೂ ಏನನ್ನು ನುಡಿಯುತ್ತದೋ ಅದನ್ನು ಮಾತ್ರ ನೆಚ್ಚಿ ಮಾತಾಡುವವರು, ಬರೆಯುವವರು ಒಂದು ಸಂಸ್ಕೃತಿಗೆ ಜೀವ ತುಂಬುತ್ತಾರೆ; ಉಳಿದದ್ದೆಲ್ಲ ಶವಶೃಂಗಾರ! 

ಇಂಥ ಸರಳ, ಗಂಭೀರ ಸತ್ಯಗಳನ್ನು ಎಲ್ಲರಿಗೂ ಹೇಳಿಕೊಟ್ಟಿರುವ ಕನ್ನಡ, ಇಂಗ್ಲಿಷಿನ ದೊಡ್ಡ ಲೇಖಕ, ಲೇಖಕಿಯರಿದ್ದಾರೆ. ಈಚೆಗೆ ಪೂರ್ಣ ಪ್ರಮಾಣದಲ್ಲಿ ವಿಮರ್ಶೆ ಬರೆಯುವ, ನಿಜಕ್ಕೂ ಶ್ರಮ ವಹಿಸಿ ಬರೆಯುವ, ಮಾತಾಡುವ ಹೊಸ ತಲೆಮಾರಿನ ಮೂವರು ಅಧ್ಯಾಪಕ ಗೆಳೆಯರಿಗೆ ಇವನ್ನೆಲ್ಲ ಕಿವಿಮಾತಿನಂತೆ ಹೇಳಬೇಕೆನ್ನಿಸಿತು. ಈ ಕಿವಿಮಾತು ಇಂಥ ಇನ್ನೂ ಹತ್ತಾರು ಸೂಕ್ಷ್ಮ ಕಿವಿಗಳಿಗೆ ಉಪಯುಕ್ತವಾದೀತು ಎಂದು ಈ ಸಾರ್ವಜನಿಕ ವೇದಿಕೆಯಲ್ಲಿ ಹೇಳಿರುವೆ. 

ಕೊನೆ ಟಿಪ್ಪಣಿ


ಕಳೆದ ವಾರದ ಅಂಕಣದಲ್ಲಿ ಸೂಚಿಸಿದಂತೆ, ಲೋಹಿಯಾ ಜೊತೆಗಿನ ನನ್ನ ಜೀವಮಾನದ ಸುಂದರ ಗೀಳಿನ ಫಲ ‘ಡಾಕ್ಟರ್ ಸಾಹೇಬ್: ರಾಮಮನೋಹರ ಲೋಹಿಯಾ ಜೀವನಯಾನ’. ಈ ಧಾರಾವಾಹಿ ಗುರುವಾರ (೪ ಏಪ್ರಿಲ್ ೨೦೨೪) ಮಾರುಕಟ್ಟೆಗೆ ಬರುವ ‘ಸುಧಾ’ವಾರಪತ್ರಿಕೆಯಲ್ಲಿ ಹಲವು ವಾರಗಳು ಬರಲಿದೆ. ಇಂಡಿಯಾದ ಶ್ರೇಷ್ಠ ಚಿಂತಕರಲ್ಲೊಬ್ಬರಾದ ಲೋಹಿಯಾಲೋಕಕ್ಕೆ ಕನ್ನಡಿತಿಯರನ್ನು, ಕನ್ನಡಿಗರನ್ನು ಮತ್ತೆ ಮತ್ತೆ ಒಯ್ಯವ ಅಯಾಚಿತ ಭಾಗ್ಯ ನನ್ನದು! ಸಾಧ್ಯವಾದರೆ ಪ್ರತಿವಾರ ಓದಿರಿ, ಓದಿಸಿರಿ!  

ಬ್ಲಾಗ್ ಫಾಲೋ ಮಾಡಲು ಒಪ್ಪಿ, ಕ್ಲಿಕ್ ಮಾಡಿ; ನೋಟಿಫಿಕೇಶನ್ ಪಡೆಯಿರಿ, ಶೇರ್ ಮಾಡಿ: FOLLOW
ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com 
ಬಿಡುವಾದಾಗ ನೋಡಿ, ಶೇರ್ ಮಾಡಿ: YouTube Channel Link

Share on:


Recent Posts

Latest Blogs



Kamakasturibana

YouTube



Comments

12 Comments



| ಹರಿಪ್ರಸಾದ್

Worth debate 

\r\n


| ಮಂಜುನಾಥ್ ಸಿ ನೆಟ್ಕಲ್

ಉದಯೋನ್ಮುಖ ಮತ್ತು ಈಗಾಗಲೇ ಉದಯಿಸಿ ವಿಮರ್ಶಾ ಲೋಕವನ್ನು ಬೆಳಗುತ್ತಿರುವ ವಿಮರ್ಶಕರಿಗೆ ನಿಮ್ಮ ಈ ಬರಹ ಹೊಸ ಹೊಳಹು ನೀಡಬಹುದು ಸರ್...ಕಿ.ರಂ.  ಮಾತು ಮತ್ತು ಯು ಆರ್ ಅನಂತಮೂರ್ತಿವರ ಅಪಾರ ವಿದ್ವತ್ತು ಮತ್ತು ನಿಷ್ಠುರ ವಿಮರ್ಶೆಯು ಸಹ ಕೆಲವೊಮ್ಮೆ ಯಾವುದೋ ಕಾರಣಕ್ಕೆ ಹಾದಿ ತಪ್ಪಿದ್ದ ಕ್ಷಣಗಳನ್ನು ಗುರುತಿಸಿದ್ದು  ವಿಮರ್ಶಕರಿಗೆ ಎಚ್ಚರಿಕೆ ಗಂಟೆ ಆಗಲಿ. ಕನ್ನಡ ವಿಮರ್ಶಾ ವಿವೇಕ ಇನ್ನಷ್ಟು ಜಾಗರೂಕತೆ ವಹಿಸಲಿ

\r\n


| ಬಂಜಗೆರೆ ಜಯಪ್ರಕಾಶ

ಸಿದ್ಧ ಟಿಪ್ಪಣಿ ಮೀರಿ ಹುಟ್ಟುವ ನುಡಿಸತ್ಯಗಳಲ್ಲಿ ಅಪಾರ ಜೀವಂತಿಕೆ ಇರುತ್ತದೆ ಎಂಬ ಈ ಲೇಖನದ ಮಾತು ತುಂಬಾ ಇಷ್ಟವಾಯಿತು. ಮೆಚ್ಚಿಸುವುದಕ್ಕೆ ಮಾತನಾಡುವುದು ಸಂಕಟಕರ. ಹಾಗೇ ಕುಟುಕುವುದಕ್ಕಾಗಿಯೇ ಮಾತನಾಡುವುದು ಘಾತುಕ. ಕೃತಿಯೊಂದನ್ನು ಓದಿ ಸನ್ನಿವೇಶದ ಔಚಿತ್ಯ ಮರೆಯದೆ ಸಹಜ ಸ್ಫೂರ್ತಿಯಿಂದ ಮಾತನಾಡುವ ಕೆಲವು ಭಾಷಣಗಳನ್ನು ನಾನೂ ಕೇಳಿ ಕಲಿತಿದ್ದೇನೆ. ಕೃತಿಕಾರನ ಹೆಗಲ ಮೇಲೆ ಕೈಹಾಕಿಕೊಂಡು  ಮಮಕಾರ ಅಥವಾ ಮತ್ಸರ ಮೀರಿ ಮಾತಾಡುತ್ತಾ  ನಡೆಯುತ್ತಿರುವವರಂತೆ ಕೃತಿಯ ಬಗ್ಗೆ ಮಾತಾಡುವವರನ್ನು ಕಂಡರೆ ನನಗೆ ಬಹಳ ಮೆಚ್ಚುಗೆ. ಕೃತಿಕಾರನ ಬಗ್ಗೆ ನಿರ್ದಿಷ್ಟವಾಗಿ ಏನನ್ನೂ ಹೇಳದೆ ಮಾತು ಮುಗಿಸುವ ಲೋಕಾಭಿರಾಮವೂ ಸರಿಯಲ್ಲ. ಹಾಗೇ ಉಮೇದಿಗೆ ಬಿದ್ದು ಉತ್ಪ್ರೇಕ್ಷಾಲಂಕಾರ ಬಳಸುವುದೂ ಸರಿಯಲ್ಲ ಎನ್ನುವ ನಿಮ್ಮ ನಿಲುವು ಬಹಳ ಸೂಕ್ತವಾಗಿದೆ. ಮನನೀಯವಾದ ಲೇಖನ.

\r\n


| Kaavya

ನುಡಿ ಮರೆವಿನ ಘಳಿಗೆಗಳನ್ನು ನಮ್ಮೊಂದಿಗೆ ಹಂಚಿಕೊಂಡದ್ದಕ್ಕೆ ಮತ್ತು  ನಿಮ್ಮ ಹಾಗೆ ಸಾಹಿತ್ಯ ದಿಗ್ಗಜರೊಂದಿಗಿನ ನೇರ ಮುಖಾಮುಖಿಯಿಂದ ವಂಚಿತರಾದ ಮುಂದಿನ ತಲೆಮಾರಿನವರಿಗಾಗಿ ಇಂತಹ ಸಾಹಿತ್ಯಕ ವಾದಸರಣಿಯನ್ನು ಒಂದೆಡೆ ದಾಖಲು ಮಾಡುತ್ತಿರುವುದಕ್ಕೆ ಧನ್ಯವಾದಗಳು.

\r\n


| Dr.Mohan

ಕಳೆದ ವಾರದ ಬರಹದಲ್ಲಿ ಸಿಕ್ಕ ‘ಸುಂದರ ಗೀಳು’ ಎಂಬ ಹೊಸ ನುಡಿಗಟ್ಟಿನಂತೆ, ಪ್ರಸ್ತುತ ಬ್ಲಾಗ್ ಬರಹದಲ್ಲೂ ಕೂಡ ‘ನುಡಿಮರೆವು’ ಎಂಬ ಮತ್ತೊಂದು ಹೊಸ ನುಡಿಗಟ್ಟನ್ನು ಕನ್ನಡಕ್ಕೆ ನೀಡಿದ್ದೀರಿ. ‘ಕ್ರಿಯೇಟಿವ್’/‘ಕ್ರಿಯೇಟಿವಿಟಿ’ಯ ಮರುವ್ಯಾಖ್ಯಾನ; ‘ಸಾಹಿತ್ಯ ಪರಾವಲಂಬಿ’, ‘ಸೃಜನಶೀಲ ವಿಮರ್ಶೆ’, ‘ಸ್ವೀಪಿಂಗ್ ಸ್ಟೇಟ್ ಮೆಂಟ್’, ಸಾಹಿತ್ಯಕ ತೀರ್ಮಾನಗಳು’ ಮುಂತಾದ ಸಾಹಿತ್ಯ-ಸಂಸ್ಕೃತಿಗಳನ್ನು ವ್ಯಾಖ್ಯಾನಿಸುವ ಪದಪ್ರಯೋಗಗಳು, ಚರ್ಚೆಗಳು ನಮ್ಮನ್ನು ಹೆಚ್ಚು ಸೂಕ್ಷ್ಮಗೊಳಿಸುತ್ತಿವೆ. ಇಲ್ಲಿನ ವಿಮರ್ಶೆಯ ಪಾಠಗಳು ನಿಜಕ್ಕೂ ಹೊಸ ಬರಹಗಾರರಿಗೆ ಉಪಯುಕ್ತವಾಗಿವೆ.ಇನ್ನು, ಪೂರ್ಣಪ್ರಮಾಣದ ವಿಮರ್ಶೆಯಲ್ಲಿ ತೊಡಗಿಕೊಂಡಿರುವ, ನೀವು ಗುರುತಿಸಿರುವ, ಹೊಸ ತಲೆಮಾರಿನ ಮೂವರು ಅಧ್ಯಾಪಕ ಗೆಳೆಯರು ಯಾರು? ಎಂಬ ಕುತೂಹಲವನ್ನು ಹಾಗೇ ಉಳಿಸಿದ್ದೀರಿ. ಹೀಗೆ ಓದುಗರ ಚಿಂತನೆಗೆ, ವಿವೇಚನೆಗೆ ಬಿಟ್ಟಿರುವುದು ಒಂದು ರೀತಿಯಲ್ಲಿ ಬರಹದ ಮುಂದಕ್ಕೂ ಯೋಚಿಸಲು ನೆರವಾಗಿದೆ. ನಮ್ಮ ಓದು-ಬರಹ-ಚಿಂತನೆಗಳಿಗೆ ಸಾಣೆ ಹಿಡಿಯುವ ಉದ್ದೇಶದ ನಿಮ್ಮ ವಿಭಿನ್ನ ಶೈಲಿಯ ಬರಹಗಳಿಗಾಗಿ ಪ್ರತಿ ವಾರ ಕಾಯುತ್ತಿರುತ್ತೇವೆ.

\r\n


| Dr.Sanganagowda

ಪ್ರತಿ ಲೇಖನದಲ್ಲಿ ಜಾಲ್ತಿಯಲ್ಲಿರುವ ಪದ ಪದ ಪೋಣಿಸಿ ಹೊಸ ನುಡಿಗಟ್ಟು ಕೊಟ್ಟು ಬರೆಯುತ್ತೀರಿ. ಈಗ 'ನುಡಿಮರೆವು' ಪದ! ಅನಂತಮೂರ್ತಿ, ಕಿ.ರಂ ರಂಥ ಹಿರಿಯರ ವಿಮರ್ಶೆಯ ಜವಾಬ್ದಾರಿ ಕುರಿತು ತರಾಟೆಗೆ ತೆಗೆದುಕೊಂಡರೂ ಮತ್ತದೇ ಅನನ್ಯ ಸ್ನೇಹ ಉಳಿಸಿಕೊಂಡಿರುವುದು ಮೆಚ್ಚುವಂಥದ್ದು. ಈಗ ಹಂಗಲ್ಲ ಸರ್. ಒಂದು ಪುಸ್ತಕದ ಮಿತಿಗಳ ಕುರಿತು ಬರೆದರೆ ಫೇಸ್ಬುಕ್, ವಾಟ್ಸಾಪ್ ಒಳಗಡೆ ಬ್ಲಾಕ್ ಆಗುವ ಕಾಲದಲ್ಲಿ ನಾವಿದ್ದೇವೆ. ಈ ಲೇಖನ ಬರೆಹವನ್ನೇ ಮೆಚ್ಚಿಕೊಳ್ಳಬಯಸುವ ಯುವ ಸಮುದಾಯ ಓದಲೇ ಬೇಕು.. ಕೆಲವರಿಗೆ ಕಳುಹಿಸಿದೆ.

\r\n


| ಡಾ. ಶಿವಲಿಂಗೇಗೌಡ ಡಿ.

ಸಾಹಿತ್ಯ ಪರಾವಲಂಬಿಗಳ ಹುಂಬ ಹೇಳಿಕೆಗಳಿಂದ ಸಾಹಿತ್ಯ, ಸಂಸ್ಕೃತಿಗೆ ಆಗುವ ಬಹುದೊಡ್ಡ ಅಪಚಾರವನ್ನು ಹಾಗೂ ಸಾಹಿತ್ಯ ಕೃತಿಯನ್ನು ಕುರಿತ ಪ್ರತಿಕ್ರಿಯೆ, ವಿಮರ್ಶೆ ಹೇಗೆ ಪ್ರಾಮಾಣಿಕ ನಿಷ್ಠುರತೆಯಿಂದ ಕೂಡಿರಬೇಕೆಂಬುದರ ಬಗ್ಗೆ ಎಚ್ಚರಿಸುವ ಮಾತುಗಳು ಇಷ್ಡವಾದವು. ಕೃತಿಯ ಬಗೆಗಿನ ಮಾತು, ವಿಮರ್ಶೆಗಳು ಉತ್ಪ್ರೇಕ್ಷಾಲಂಕಾರಗಳಲ್ಲೇ ಮುಳುಗೇಳುತ್ತಿರುವ  ಓದು ಸಂಸ್ಕೃತಿಯ ಈ ಹೊತ್ತಿನಲ್ಲಿ ನಿಮ್ಮ ಮಾತುಗಳು ಮಹತ್ವ ಪಡೆಯುತ್ತವೆ. ಈ ಮಾತುಗಳು ನಮ್ಮೊಳಗನ್ನೂ ಕೆಣಕುತ್ತವೆ. ಧನ್ಯವಾದಗಳು  ಸರ್

\r\n


| Dr.Gowtam

Associating creativity with all kind of crafts was a nice touch

\r\n


| Dr.Gowtam

Associating creativity with all kind of crafts was a nice touch

\r\n


| ಗುರುಪ್ರಸಾದ್

ಸರ್  ಈ ಲೇಖನದಲ್ಲಿನ ಘಟನೆಗಳನ್ನು ಓದುವುದಕ್ಕೆ ಒಂದು ಖುಷಿ.ಅದರಲ್ಲಿನ ನಿಮ್ಮ ಸಾಹಿತ್ಯಕ ಒಳನೋಟಗಳನ್ನು  ಎಲ್ಲರೂ ಗಮನಿಸಬೇಕು.ಹಿಂದೆ ಈ ಥರದ ರಂಜನೀಯ ಗುದ್ದಾಟವನ್ನು ದಿನಪತ್ರಿಕೆ,ಲಂಕೇಶ್ ಪತ್ರಕೆ,ವಾರ ಪತ್ರಕೆ(ವೈಕುಂಟರಾಜು) ಬಾಯಿಚಪ್ಪರಿಸಿ ಓದುತ್ತಿದ್ದೆವು.ಲಂಕೇಶ್  ಅನಂತಮೂರ್ತಿ ಗುದ್ದಾಟ,ಅನಂತಮೂರ್ತಿ ಚಂಪಾ ಗುದ್ದಾಟ,ಲಂಕೇಶ್ ಚಂಪಾ ಗುದ್ದಾಟ, ಭೆರಪ್ಪ vs ಲಂಕೇಶ್, ಭೈರಪ್ಪvs ಅನಂತಮೂರ್ತಿ,ಚಿತ್ತಾಲ ಲಂಕೇಶ್ ಮುಖಾಮುಖಿ,ತೇಜಸ್ವಿ ಲಂಕೇಶರ ಗೇಳೆತನ ಕೊನೆಗೆ ವಿರಸ ಇತ್ಯಾದಿಗಳು ideology  ಗೆ ಸಂಬಂಧಿಸಿದಂತೆ, ಸ್ವಲ್ಲ ವೈಯಕ್ತಿಕವಾಗಿ ಓದುಗರಿಗೆ ರೋಚಕವಾಗಿದ್ದವು.ಈಗ ಏನಿದೆ ಸರ್? ಬರೀ ರಾಜಕೀಯ ಗುದ್ದಾಟ.ಪತ್ರಿಕೆ ತಿರುವಿದರೆ ಬರೀ ಅವೇ.

\r\n


| Subash Rajamane

ದೊಡ್ಡವರ ನುಡಿ ಮರೆವು-ಈ ಲೇಖನ ಸದ್ಯಕ್ಕೆ ಹಾಗೂ ಯಾವ ಕಾಲಕ್ಕಾದರೂ ಪ್ರಸ್ತುತವೇ ಆಗಿದೆ.ಪುಸ್ತಕ ಬಿಡುಗಡೆಯ ಕಾರ್ಯಕ್ರಮಗಳಲ್ಲಿ ಕೃತಿಯ ಬಗ್ಗೆ ಮಾತಾಡಲು ಟಿಪ್ಪಣಿಗಳನ್ನು ಮಾಡಿಕೊಂಡು ಬಂದ ವಿಮರ್ಶಕರು ಆ ಟಿಪ್ಪಣಿಗಳ ಆಚೆಗೂ ಒಳನೋಟಗಳನ್ನು ಹುಟ್ಟಿಸಿದರೆ ಅದೊಂದು ಅದ್ಭುತವೇ. ಈ ಹಿನ್ನೆಲೆಯಲ್ಲಿ ಅನಂತಮೂರ್ತಿ,  ಕೀರಂ, ಡಿ ಆರ್, ಕೆವಿಯನ್, ಕಲ್ಗುಡಿ, ನಟರಾಜ್ ಹುಳಿಯಾರ್, ಬಂಜಗೆರೆ, ಅಗ್ರಹಾರ ಕೃಷ್ಣಮೂರ್ತಿ-ಈ ಹಿರಿಯರು ವಿಮರ್ಶೆ, ನಿಷ್ಟುರತೆ , ಒಳನೋಟಗಳಿಗೆ ಸಂಬಂಧಿಸಿದಂತೆ ನನಗೆ ಪ್ರಿಯರಾದವರೇ ಆಗಿದ್ದಾರೆ. ಈ ಲೇಖನದಲ್ಲಿ ಹುಳಿಯಾರ್ ಅವರು ಹೇಳಿರುವ ನುಡಿ ಮರೆವು ಅನ್ನೋ ಪರಿಕಲ್ಪನೆ ನನಗೂ ಇಷ್ಟವಾಯಿತು. ಈಗೀಗ ಪುಸ್ತಕ ಬಿಡುಗಡೆ ಕಾರ್ಯಕ್ರಮಗಳಿಗೆ ಹೋದರೆ ಕೇವಲ ಔಪಚಾರಿಕ ಮಾತುಗಳನ್ನೇ ಕೇಳಬೇಕಾಗಿದೆ. ಕೃತಿಗಳನ್ನು ಓದಿಕೊಂಡು ಮಾತನಾಡುವ ವಿಮರ್ಶಕರು ಕೃತಿಕಾರ ಅಥವಾ ಕೃತಿಯ ಬಗ್ಗೆ ಅತಿಯಾಗಿ ಮೆಚ್ಚಿಕೆಯ ಮಾತುಗಳನ್ನ ಆಡ್ತಾ ಆಡ್ತಾ ನಿಜವಾಗಿ ಹೇಳಬೇಕಾಗಿದ್ದ, ನೀಡಬೇಕಾದ್ನೋದ ಒಳಟಗಳೇ ಹಿಂದಕ್ಕೆ ಸರಿದು ಬಿಡುತ್ತವೆ. ಅಥವಾ ಉದ್ದೇಶಪೂರ್ವಕವೋ ಕೃತಿಕಾರನ ಮೇಲಿನ ಮಮಕಾರಕೊ ಅಥವಾ ನಿಷ್ಠುರವಾಗಿ ಹೇಳದಿರುವ ಅಧೀರತೆಗೋ ಅಥವಾ ಮುಜುಗರಕ್ಕೊ ಒಳಗಾಗ್ತಾ ಇರ್ತಾರೆ. 

\r\n


| ಡಾ. ನಿರಂಜನ ಮೂರ್ತಿ ಬಿ ಎಂ

ಕನ್ನಡ ಸಾಹಿತ್ಯದ ಹಿರಿಯ ವಿಮರ್ಶಕರ ವಿಮರ್ಶೆಯ ಒಳನೋಟಗಳನ್ನು ಒಳಗೊಂಡಿರುವ ಈ ಲೇಖನ ವರ್ತಮಾನದ ವಿಮರ್ಶಕರಿಗೆ ಹೊಸ ಹೊಳಹುಗಳನ್ನು ನೀಡಿದೆ. ಲೇಖಕರ ಅಥವಾ ಪ್ರಕಾಶಕರ ಮರ್ಜಿಗೆ ಒಳಗಾಗದೆ ನಿಷ್ಪಕ್ಷಪಾತವಾದ ವಿಶ್ಲೇಷಣೆ ಮಾಡುವುದೇ ನ್ಯಾಯಯುತವಾದ ವಿಮರ್ಶೆ. ಅದನ್ನು ಎಲ್ಲರೂ ಒಪ್ಪಲೇಬೇಕಾಗುತ್ತದೆ. ಈ ದಿಸೆಯಲ್ಲಿ ಲೇಖಕರ  'ಒಂದು ಪುಸ್ತಕವೇ ನಮಗೆ ನಿಜಕ್ಕೂ ಏನನ್ನು ನುಡಿಯುತ್ತದೋ ಅದನ್ನು ಮಾತ್ರ ನೆಚ್ಚಿ ಮಾತಾಡುವವರು, ಬರೆಯುವವರು ಒಂದು ಸಂಸ್ಕೃತಿಗೆ ಜೀವ ತುಂಬುತ್ತಾರೆ; ಉಳಿದದ್ದೆಲ್ಲ ಶವಶೃಂಗಾರ!' ಎನ್ನುವ ಮಾತು ಸಾರ್ವಕಾಲಿಕ ಸತ್ಯ.

\r\n




Add Comment