ಬದಲಾಗುವ ಬರವಣಿಗೆ
by Nataraj Huliyar
ಸುಮಾರು ಐವತ್ತು ವರ್ಷಗಳ ಕೆಳಗೆ ಮೈಸೂರು ಬಿಟ್ಟು ಚಿಕ್ಕಮಗಳೂರು ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ವ್ಯವಸಾಯ ಮಾಡಲು ಹೋದ ಪೂರ್ಣಚಂದ್ರ ತೇಜಸ್ವಿಯವರಿಗೆ ತಾವು ನಿತ್ಯ ಒಡನಾಡುತ್ತಿದ್ದ ಅನಕ್ಷರಸ್ಥರನ್ನು ನೋಡನೋಡುತ್ತಾ, ‘ನಾನು ಯಾರಿಗೆ ಬರೆಯಬೇಕು?’ ಎಂಬ ಪ್ರಶ್ನೆ ಎದುರಾಯಿತು. ಆಗ ಅವರು ತಾವು ಆವರೆಗೆ ಬಳಸುತ್ತಿದ್ದ ಕನ್ನಡವನ್ನೇ ಸರಳಗೊಳಿಸಿಕೊಂಡು ಕತೆಗಳನ್ನು ಬರೆಯತೊಡಗಿದರು. ಮುಂದೆ ತೇಜಸ್ವಿಗೆ ತಮ್ಮ `ಕಾದಂಬರಿಯ ಪಾತ್ರಗಳಾದ ಪ್ಯಾರ, ಬಿರಿಯಾನಿ ಕರಿಯಪ್ಪ ಕೂಡ ತಮ್ಮ ಕಾದಂಬರಿ ಓದುವಂತೆ ಬರೆಯಬೇಕಲ್ಲವೆ?’ ಎನ್ನಿಸಿದಾಗ, ಅವರ ಕಥಾಬರವಣಿಗೆ ಇನ್ನಷ್ಟು ನೇರವಾಯಿತು.
ತೇಜಸ್ವಿಯವರಿಗಿಂತ ಮೊದಲು ಪ್ರಗತಿಶೀಲ ಸಾಹಿತ್ಯ ಸಾಮಾನ್ಯ ಜನರ ಕಷ್ಟವನ್ನು ಕಾದಂಬರಿಗಳ ಕೇಂದ್ರಕ್ಕೆ ತರುವುದನ್ನು, ಬರವಣಿಗೆಯ ಕ್ರಮವನ್ನು ಕುರಿತ ದೊಡ್ಡ ಚರ್ಚೆಯನ್ನೇ ಹುಟ್ಟು ಹಾಕಿತ್ತು. ಮುಂದೆ ದಲಿತಸಾಹಿತ್ಯ ಹಾಗೂ ಬಂಡಾಯ ಸಾಹಿತ್ಯಗಳು ಸಾಹಿತ್ಯ ಸಾಮಾನ್ಯರ ದನಿಯನ್ನು, ದುಮ್ಮಾನಗಳನ್ನು ಬಿಂಬಿಸಬೇಕೆಂಬ ಚರ್ಚೆ ಶುರು ಮಾಡಿದಾಗ ‘ಸಾಹಿತ್ಯ ಮತ್ತು ಸಾಮಾನ್ಯ ಮನುಷ್ಯ’ ಎಂಬ ಮಹತ್ವದ ಚರ್ಚೆ ನಡೆಯಿತು. ಲಂಕೇಶರು ಪತ್ರಿಕೋದ್ಯಮಕ್ಕೆ ಬಂದ ಮೇಲೆ ಸಾಮಾನ್ಯ ಓದುಗರ ಪ್ರಶ್ನೆ ಅವರಿಗೂ ಎದುರಾಯಿತು. ಅವರು ಗಾಂಧೀಜಿಯ ಗದ್ಯದಿಂದ ಕೂಡ ಹೆಚ್ಚು ಜನರನ್ನು ತಲುಪಬಲ್ಲ ನೇರ, ಕ್ಷಿಪ್ರ ಗದ್ಯವನ್ನು ರೂಢಿಸಿಕೊಂಡರು. ‘ಲಂಕೇಶ್ ಪತ್ರಿಕೆ’ ಸಾಮಾನ್ಯರ ದೃಷ್ಟಿಯಿಂದ ರಾಜಕೀಯ, ಧರ್ಮ, ಸಮಾಜಗಳನ್ನು ಪರೀಕ್ಷಿಸುವ ಬರವಣಿಗೆಯನ್ನು ರೂಪಿಸಲೆತ್ನಿಸಿತು. ಆಧುನಿಕ ಕರ್ನಾಟಕದಲ್ಲಿ ನಡೆದ ಇಂಥ ಅನೇಕ ಬೆಳವಣಿಗೆಗಳಿಂದಾಗಿ ನವೋದಯ ಕಾಲದಿಂದಲೂ ಸಾಮಾನ್ಯರ ಆಸೆ, ನಿರಾಸೆ, ನಿಲುವು, ಬಿಕ್ಕಟ್ಟುಗಳನ್ನು ಮಂಡಿಸುವ ಸಾವಿರಾರು ಕೃತಿಗಳು ಸೃಷ್ಟಿಯಾಗಿವೆ.
ಇದಕ್ಕೂ ಮೊದಲು ಹನ್ನೆರಡನೇ ಶತಮಾನದಲ್ಲಿ ಜನರ ಆಡುಮಾತು ಹಾಗೂ ಜನರ ನೋಟಗಳು ಸಾಹಿತ್ಯರಚನೆಯ ಭಾಗವಾದವು. ಹಲಬಗೆಯ ಜಾತಿಗಳು ಹಾಗೂ ಕಸುಬುಗಳ ಹಿನ್ನೆಲೆಯಿಂದ ಬಂದ ಗಂಡು ಹೆಣ್ಣುಗಳು ವಚನಗಳನ್ನು ನುಡಿಯಲು, ಬರೆಯಲು ಶುರು ಮಾಡಿದ್ದು ಕೂಡ ಇದಕ್ಕೆ ಕಾರಣ. ಬಹುಜನ ಸಮುದಾಯ ಸಾಹಿತ್ಯ ಪರಿಸರಕ್ಕೆ ಬಂದಾಗ ಸಾಹಿತ್ಯರಚನೆಗಳಿಗೆ ಬರುವ ವಿಶಾಲ ವ್ಯಾಪ್ತಿ, ಭಾಷೆಗೆ ಒದಗುವ ಸರಳತೆ ಹಾಗೂ ವೈವಿಧ್ಯ ವಚನ ಸಾಹಿತ್ಯದಲ್ಲಿ ಎದ್ದು ಕಾಣುತ್ತದೆ. ಯಾರು ಬೇಕಾದರೂ ಬಳಸಬಲ್ಲ, ಮುಕ್ತವಾದ, ಸರಳ ಚೌಕಟ್ಟನ್ನು ಆದ್ಯ ವಚನಕಾರ ದಾಸಿಮಯ್ಯನವರು ಹನ್ನೊಂದನೇ ಶತಮಾನದಲ್ಲೇ ರೂಪಿಸಿಕೊಟ್ಟಿದ್ದರು. ಇದಕ್ಕೂ ಮೊದಲೇ ಜನಪದ ಸಾಹಿತಿಗಳು, ಮುಖ್ಯವಾಗಿ ಹೆಂಗಸರು, ದನಿಯಿಲ್ಲದವರ ದನಿಯಾಗಿ ಕೆಲಸವನ್ನು ಮಾಡುತ್ತಾ ಬಂದಿದ್ದರು.
ವಚನ ಸಾಹಿತ್ಯ ಹಾಗೂ ಜನಪದ ಸಾಹಿತ್ಯಗಳು ಸಂಸ್ಕೃತದ ಹೊರೆಯಿಲ್ಲದ ಕನ್ನಡದಲ್ಲಿ ಮೂಡಿದ್ದರಿಂದ ಸಾಮಾನ್ಯರ ನುಡಿ, ನಿಲುವು, ನೋಟಗಳು ಇಲ್ಲಿ ದಾಖಲಾದವು. ವಚನಕಾರ ನಗೆಯ ಮಾರಿತಂದೆ ಸಂಸ್ಕೃತವನ್ನು ಬಳಸಿ ಸತ್ಯವನ್ನು ಮರೆಮಾಚುವ ಬರವಣಿಗೆಯನ್ನು ನೇರವಾಗಿಯೇ ಟೀಕಿಸುತ್ತಾನೆ:
ವಾಗೈದ್ವೈತವ ಕಲಿತು,
ಸಂಸ್ಕೃತದ ಮಾತಿನ ಪಸರವ ಇಕ್ಕಿಕೊಂಡು,
ಮತ್ಸ್ಯದ ವಕ್ತ್ರದಲ್ಲಿ ಗ್ರಾಸವ ಹಾಕುವವನಂತೆ
ಅದೇತರ ನುಡಿ, ಮಾತಿನ ಮರೆ?’
ಸಂಸ್ಕೃತದ `ಮಾತಿನ ಮರೆ’ಯನ್ನು ಬಿಟ್ಟು ಕನ್ನಡ ಭಾಷೆಯನ್ನು ಬಳಸುವುದು; ಜನರೇ ತಂತಮ್ಮ ಸಹಜ ಭಾಷೆಯಲ್ಲಿ ವಚನ ನುಡಿಯುವುದು; ವೇದಶಾಸ್ತ್ರಪುರಾಣಗಳ ಲೋಕವನ್ನು ತಿರಸ್ಕರಿಸಿ ಜನಸಾಮಾನ್ಯರ ಧರ್ಮ, ನೋಟಗಳನ್ನು ಬಿಂಬಿಸುವುದು… ಇವೆಲ್ಲ ಸೇರಿ ವಚನ ಸಾಹಿತ್ಯ ಸಾಮಾನ್ಯರ ಸಖನಾಯಿತು, ಸಾಮಾನ್ಯರನ್ನು ಬಿಂಬಿಸಿತು. ಹಾಗೆಯೇ, ಪ್ರಾಚೀನ ಕಾಲದಿಂದಲೂ ರಂಗಭೂಮಿ, ಗಾಯನ, ಪ್ರದರ್ಶಕ ಕಲೆಗಳು ಓದು ಬಾರದವರಿಗೂ ಸಾಹಿತ್ಯವನ್ನು ತಲುಪಿಸಲೆತ್ನಿಸಿವೆ ಎಂಬುದನ್ನೂ ಮರೆಯದಿರೋಣ.
ಹತ್ತೊಂಬತ್ತನೇ ಶತಮಾನದಿಂದೀಚೆಗೆ ಸಾಹಿತ್ಯ ಸಾಮಾನ್ಯರನ್ನು ಬಿಂಬಿಸಬೇಕು, ಸಾಮಾನ್ಯರಿಗೆ ಹತ್ತಿರವಾಗಬೇಕು ಎಂಬ ಪ್ರಶ್ನೆಗಳು ಸ್ಪಷ್ಟವಾಗಿ ಲೋಕದಾದ್ಯಂತ ಹಲಬಗೆಯ ತಾತ್ವಿಕ ನೆಲೆಗಳಲ್ಲಿ ಚರ್ಚಿತವಾಗತೊಡಗಿವೆ. ಕಮ್ಯುನಿಸ್ಟ್ ಸಾಹಿತ್ಯ ತತ್ವಗಳ ಪ್ರಭಾವದಿಂದ ಈ ಪ್ರಶ್ನೆಗಳಿಗೆ ಖಚಿತ ಚೌಕಟ್ಟುಗಳು ಬಂದಿವೆ. ಸಾಹಿತ್ಯ ದುಡಿಯುವ ವರ್ಗದ ಪರವಾಗಿರಬೇಕು ಎಂಬುದರ ಬಗ್ಗೆ ಪ್ರಣಾಳಿಕೆಗಳೇ ಹುಟ್ಟಿವೆ.
ಆದರೆ ಸಾಹಿತ್ಯ ಜನರ ಸಂಗಾತಿಯಾಗುವುದೆಂದರೆ ಜನರಿಗೆ ರೈಲು ಹತ್ತಿಸುವುದಲ್ಲ; ಕತೆಯಲ್ಲೋ, ಕಾದಂಬರಿಯಲ್ಲೋ, ಕೃತಕವಾದ ಕೊನೆಯನ್ನು ಸೃಷ್ಟಿಸಿ ಸಾಮಾನ್ಯರು ಗೆಲ್ಲುವಂತೆ ಮಾಡಿ ಹುಸಿ ಸಮಾಧಾನ ಪಡೆಯುವುದಾಗಲೀ, ನೀಡುವುದಾಗಲೀ ಅಲ್ಲ. ಇಂಥ ದುರ್ಬಲ ಬರವಣಿಗೆ ಕಾಲದ ಓಟದಲ್ಲಿ ನಿಲ್ಲುವುದಿಲ್ಲ; ನಮ್ಮ ಕಣ್ಣೆದುರೇ ಇಂಥ ನೂರಾರು ಪುಸ್ತಕಗಳು ಬಿದ್ದು ಹೋಗಿವೆ. ಜನರ ಪರವಾಗಿ ಬರೆಯುವುದರಲ್ಲಿ ಜನರನ್ನು ತಿದ್ದುವ ಕೆಲಸವೂ ಸೇರಿದೆ. ’ಕಾಮನ್‌ಸೆನ್ಸ್ ಅಂದರೆ ‘ಪೂರ್ವಗ್ರಹ’ ಎಂಬ ಅರ್ಥವೂ ಇದೆ ಎನ್ನುತ್ತಾನೆ’ ಲೆನಿನ್. ಬಗೆಬಗೆಯ ಪೂರ್ವಗ್ರಹಗಳಿಂದ ಜನರನ್ನು ಹೊರತರುವುದು ಕೂಡ ಸಾಹಿತ್ಯದ ಜವಾಬ್ದಾರಿಯೇ. ಈ ಮೂಲಕ ಉತ್ತಮ ಸಾಹಿತ್ಯ ಪರಿಸರ ಸಾಮಾನ್ಯ ಓದುಗರನ್ನು ಜ್ಞಾನಿಗಳಾದ ಓದುಗರನ್ನಾಗಿಸುತ್ತದೆ; ಉತ್ತಮ ಲೇಖಕರನ್ನಾಗಿ ಮಾಡುತ್ತಿರುತ್ತದೆ.
ಆದ್ದರಿಂದಲೇ ಇವತ್ತು ‘ಸಾಹಿತ್ಯ’ ಅಂದರೆ ಕೇವಲ ಕತೆ, ಪದ್ಯ, ಕಾದಂಬರಿ ಮಾತ್ರ ಅಲ್ಲ; ಎಲ್ಲ ಬಗೆಯ ಬರವಣಿಗೆಯೂ ಸಾಹಿತ್ಯವೇ. ಸಾಮಾನ್ಯ ಜನರನ್ನು ಬಿಂಬಿಸುವುದು ಎಂದರೆ ಅವರ ದೃಷ್ಟಿಕೋನದಿಂದ ಚರಿತ್ರೆಯನ್ನು, ಘಟನಾವಳಿಗಳನ್ನು ನೋಡುವುದು ಹಾಗೂ ಆ ಬಗ್ಗೆ ಜನರಿಗೆ ಅರಿವು ನೀಡುವುದು ಎಂಬ ಅರ್ಥವೂ ಈಗ ಇದೆ. ರಷ್ಯದ ಗಾರ್ಕಿಯ ‘ಮದರ್’ ಅಥವಾ ನಿರಂಜನರ ‘ಚಿರಸ್ಮರಣೆ’ ಕಾದಂಬರಿಗಳೆರಡೂ ಜನಸಾಮಾನ್ಯರ ದೃಷ್ಟಿಕೋನದಿಂದ ವರ್ಗ ಸಂಘರ್ಷವನ್ನು ನೋಡಲೆತ್ನಿಸಿದವು; ಅದೇ ರೀತಿ ಈ ಕಾಲದ ಸಬಾಲ್ಟರ್ನ್ ಅಧ್ಯಯನಗಳು, ಹೊಣೆಯುಳ್ಳ ಪತ್ರಿಕೋದ್ಯಮ ಕೂಡ ಈ ಕೆಲಸ ಮಾಡುತ್ತಿವೆ.
ಜೋತಿಬಾ ಫುಲೆ, ಅಂಬೇಡ್ಕರ್, ಪೆರಿಯಾರ್ ಬರವಣಿಗೆಗಳು ಪ್ರಬಲ ಜಾತಿಗಳು, ಆಳುವ ವರ್ಗಗಳು ಹೇಳುತ್ತಾ ಬಂದಿರುವ ಚರಿತ್ರೆಗಿಂತ ಭಿನ್ನವಾದ ಚರಿತ್ರೆಯನ್ನು, ಸತ್ಯಗಳನ್ನು ನಮ್ಮೆದುರು ಮಂಡಿಸುತ್ತವೆ. ಇವೆಲ್ಲದರ ಫಲವಾಗಿ ಸಾಮಾನ್ಯರ ಪರವಾದ ಚಿಂತನೆಗಳು ಹಾಗೂ ಯೋಜನೆಗಳು ನಾಯಕರಲ್ಲಿ, ಸರ್ಕಾರ ನಡೆಸುವವರಲ್ಲಿ ಮೂಡತೊಡಗುತ್ತವೆ. ಕರ್ನಾಟಕದ ಶ್ರೇಷ್ಠ ನಾಯಕರಾದ ಶಾಂತವೇರಿ ಗೋಪಾಲಗೌಡ, ದೇವರಾಜ ಅರಸು, ಬಿ. ಬಸವಲಿಂಗಪ್ಪನವರಿಗೆ ಇದ್ದ ಜನಪರ ಕಾಳಜಿಗಳಲ್ಲಿ ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯ, ವೈಚಾರಿಕ ಬರಹಗಳ ಕೊಡುಗೆಯೂ ಇದೆ. ಬಡ ಮಹಿಳೆಯರ ಪರವಾದ ಅನೇಕ ಸರ್ಕಾರಿ ಯೋಜನೆಗಳ ಹಿಂದೆ ಸ್ತ್ರೀವಾದಿ ಚಿಂತನೆ ಬರಹಗಳ ಕೊಡುಗೆಯೂ ಪ್ರಧಾನವಾಗಿದೆ.
ಇಷ್ಟೆಲ್ಲ ಇದ್ದರೂ, ಯಾವ ಗಂಭೀರ ಲೇಖಕ, ಲೇಖಕಿಯೂ ಸದಾ ಸಾಮಾನ್ಯ ಓದುಗರನ್ನು ತಲೆಯಲ್ಲಿಟ್ಟುಕೊಂಡು ಬರೆಯಲಾರರು. ಆದರೆ ಸಾಮಾನ್ಯರನ್ನು ಕುರಿತ ಕಾಳಜಿ, ಜವಾಬ್ದಾರಿ ಅವರ ಬರವಣಿಗೆಯ ಹಿನ್ನೆಲೆಯಲ್ಲಿ ಇರಲೇಬೇಕು. ಇವತ್ತಿನ ಅತಿ ಸ್ವಕೇಂದ್ರಿತ ಜಾಲತಾಣಗಳ ಲೇಖಕ, ಲೇಖಕಿಯರಲ್ಲಿ ಸಾಮಾನ್ಯ ಜನರ ಪ್ರಶ್ನೆಗಳಿಗೆ ಸ್ಥಾನವೇ ಇಲ್ಲವೆನ್ನಿಸುತ್ತದೆ. ಆದರೆ ಜಾಲತಾಣಗಳಲ್ಲಿ ಕೂಡ ಮೇಲೆ ಹೇಳಿದ ಎಲ್ಲ ಕಾಳಜಿಗಳನ್ನು ಹಂಚಿಕೊಳ್ಳುವ ತರುಣ, ತರುಣಿಯರಿದ್ದಾರೆ. ಅಸಮಾನತೆ, ಕೋಮುವಾದ, ಜಾತೀಯತೆಗಳನ್ನು ದಿಟ್ಟವಾಗಿ ಮುಖಾಮುಖಿಯಾಗುವವರಿದ್ದಾರೆ.
ಆದರೆ ‘ಜನಪ್ರಿಯ’ ಎನ್ನಲಾಗುವ ‘ಜನಬಳಕೆಯ ಸಂಸ್ಕೃತಿ’ಯನ್ನು ಪ್ರಭಾವಿಸುವ ರಾಜಕೀಯ ಲೋಕ, ಧಾರ್ಮಿಕ ಲೋಕ ಹಾಗೂ ತೆರೆ ಲೋಕ- ಈ ಮೂರೂ ಲೋಕಗಳು ಮಾತ್ರ ಒಟ್ಟಾರೆಯಾಗಿ ಸಾಮಾನ್ಯ ಜನರನ್ನು ಅತ್ಯಂತ ನಿಕೃಷ್ಟವಾಗಿ ಕಾಣತೊಡಗಿವೆ: ರಾಜಕೀಯ ನಾಯಕರಿಗೆ ಸಾಮಾನ್ಯ ಮಹಿಳೆ ಎಂದರೆ ಒಂದು ಓಟು; ಧಾರ್ಮಿಕ ಲೋಕದ ಜನಕ್ಕೆ ಸಾಮಾನ್ಯ ಮನುಷ್ಯ ತಮ್ಮನ್ನು ಹಿಂಬಾಲಿಸುವ ಕುರಿ; ಜನಪ್ರಿಯ ಸಿನಿಮಾ ಹಾಗೂ ಟೆಲಿಲೋಕಕ್ಕೆ ಸಾಮಾನ್ಯ ಗಂಡು,ಹೆಣ್ಣು ಕೇವಲ ಗ್ರಾಹಕರು.
ಇಂಥ ಸಿನಿಕ ಹಾಗೂ ಕ್ರೂರ ಕಾಲದಲ್ಲಿ ಸರ್ಕಾರದ ಅನುದಾನ, ಜನರ ತೆರಿಗೆಯ ಹಣಪಡೆದು ಕಾಲಹರಣ, ಕಾಸುಹರಣ ಮಾಡುವ ಸಾಹಿತ್ಯ ಸಮ್ಮೇಳನಗಳಿಗೆ ಸಾಮಾನ್ಯರನ್ನು ಕುರಿತ ಪ್ರಶ್ನೆಗಳನ್ನು ಮುನ್ನೆಲೆಗೆ ತರುವ ಬೌದ್ಧಿಕ ಸಿದ್ಧತೆಯಾಗಲೀ ಕಾಳಜಿಯಾಗಲೀ ಇದ್ದಂತಿಲ್ಲ. ಕರ್ನಾಟಕದಲ್ಲಿ ಪ್ರಗತಿಶೀಲ-ಬಂಡಾಯ-ದಲಿತ ಸಾಹಿತ್ಯಗಳ ಸಮ್ಮೇಳನಗಳು ರೂಪಿಸಿದ ಪ್ರಶ್ನೆಗಳು, ಚರ್ಚೆಗಳು ಹತ್ತಾರು ವರ್ಷ ಕಾಲ ಸಾಮಾನ್ಯರ ಕನಸುಗಳನ್ನು, ದೃಷ್ಟಿಕೋನವನ್ನು ಪ್ರತಿನಿಧಿಸಿವೆ; ಸಾವಿರಾರು ಸಾಹಿತ್ಯ ಕೃತಿಗಳ ಸೃಷ್ಟಿಗೆ ಪ್ರೇರಣೆಯಾಗಿವೆ; ಲಕ್ಷಾಂತರ ಸೂಕ್ಷ್ಮ ಓದುಗರನ್ನು ಸೃಷ್ಟಿಸಿವೆ. ಆದರೆ ಕನ್ನಡ ಭಾಷೆ ಅಥವಾ ಕನ್ನಡ ಸಾಹಿತ್ಯ ಕುರಿತಂತೆ ಒಂದು ಮಹತ್ವದ ಚರ್ಚೆಯನ್ನೂ ಈಚಿನ ದಶಕಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಯಾವ ಸಾಹಿತ್ಯ ಸಮ್ಮೇಳನವೂ ಎತ್ತಲು ಸಾಧ್ಯವಾಗಿಲ್ಲ, ಏಕೆ?
ಇಂಥ ನಿರ್ಜೀವ ಸಂಸ್ಥೆಗಳ ಸಮ್ಮೇಳನಗಳಿಗೆ ಸಾವಿರಾರು ಜನ ಸಾಮಾನ್ಯ ಓದುಗರು, ಶಿಕ್ಷಕ, ಶಿಕ್ಷಕಿಯರು, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉತ್ಸಾಹದಿಂದ ಬಂದು ಸೇರುತ್ತಾರೆ. ಅವರಲ್ಲಿ ಕೆಲವು ಸಾವಿರ ಜನವಾದರೂ ಸಾಹಿತ್ಯದೆಡೆಗೆ, ಪುಸ್ತಕಗಳ ಕಡೆಗೆ ವಾಲುವ ಸೂಕ್ಷ್ಮ ಓದುಗರಾಗುವ, ಲೇಖಕರಾಗುವ ಸಾಧ್ಯತೆ ಇದ್ದೇ ಇರುತ್ತದೆ. ಆದರೆ ಇಂಥ ಗ್ರಹಿಕೆಗಳೇ ಇಲ್ಲದೆ, ಹೇಗೋ ಸಮ್ಮೇಳನ ನಡೆದರೆ ಸಾಕು ಎಂಬ ಅಲ್ಪತೃಪ್ತಿಯಲ್ಲಿ ಈ ಸಮ್ಮೇಳನಗಳು ನಡೆಯುತ್ತಿರುತ್ತವೆ. ಹೊಸ ಹೊಸ ಸವಾಲುಗಳು, ಹೊಸ ಹೊಸ ಓದುಗರು ಸೃಷ್ಟಿಯಾದಂತೆ ಹೊಸ ಚರ್ಚೆಗಳನ್ನು ಹುಟ್ಟು ಹಾಕಬೇಕು; ಹೊಸ ಸಂವೇದನೆಯನ್ನು, ಆರೋಗ್ಯಕರ ಜನಾಭಿಪ್ರಾಯವನ್ನು ರೂಪಿಸಬೇಕು ಎಂಬ ಪ್ರಾಮಾಣಿಕ ಕಾಳಜಿ ಇಲ್ಲಿ ಕಾಣುವುದೇ ಇಲ್ಲ.
ಸಾರ್ವಜನಿಕ ಭಾಷೆ ಅತಿ ದುರ್ಬಳಕೆಯಾಗುತ್ತಿರುವ ಈ ಕಾಲದಲ್ಲೂ ಭಾಷೆಯನ್ನು, ಭಾವನೆಗಳನ್ನು ಸೂಕ್ಷ್ಮವಾಗಿ ಬಳಸಬಲ್ಲ ಸಾಧ್ಯತೆಯಿರುವ ಸಾಹಿತ್ಯ ಲೋಕಕ್ಕೆ ಸಾಮಾನ್ಯ ಮನುಷ್ಯರ ಪರವಾಗಿ ಮಾತಾಡುವ ಅವಕಾಶ ಇನ್ನೂ ಉಳಿದಿದೆ. ಆದರೆ ಇಂಥ ಯಾವ ಕಾಳಜಿ, ಎಚ್ಚರ, ಪ್ರಜ್ಞೆಗಳೂ ಇಲ್ಲದೆ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಆಡುತ್ತಿರುವ ಮಾತುಗಳನ್ನು ನೋಡಿದರೆ, ಈ ಮಂದಿಗೆ ಕನ್ನಡ ಸಾಹಿತ್ಯದ ಸಾವಿರ ವರ್ಷಗಳ ಪರಂಪರೆಯ ಘನತೆ, ಅರ್ಥಪೂರ್ಣತೆ, ಜವಾಬ್ದಾರಿ ಕುರಿತ ಪ್ರಾಥಮಿಕ ಪಾಠವೂ ಗೊತ್ತಿರಲಿಕ್ಕಿಲ್ಲ. ಇಂಥ ಮಹನೀಯರು ಸಾವಿರ ವರ್ಷಗಳ ಕನ್ನಡ ಸಾಹಿತ್ಯದ ರಿಫ್ರೆಶರ್ ಕೋರ್ಸ್‌ಗಳನ್ನು ಕಡ್ಡಾಯವಾಗಿ ತಕ್ಷಣ ಅಟೆಂಡ್ ಮಾಡುವುದು ಒಳ್ಳೆಯದು.
ಬ್ಲಾಗ್ ಫಾಲೋ ಮಾಡಲು ಒಪ್ಪಿ, ಕ್ಲಿಕ್ ಮಾಡಿ; ನೋಟಿಫಿಕೇಶನ್ ಪಡೆಯಿರಿ, ಶೇರ್ ಮಾಡಿ: FOLLOW
ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com
ಬಿಡುವಾದಾಗ ನೋಡಿ, ಶೇರ್ ಮಾಡಿ: https://www.youtube.com/@NatarajHuliyarYT
Comments
3 Comments
| Dr.Mohan
ನವೋದಯ ಕಾಲಘಟ್ಟ ನಂತರದ ಹೊರಳು ದಾರಿಗಳಲ್ಲಿ ಕಂಡು ಬಂದಿರುವ ಕನ್ನಡದ ಪ್ರಮುಖ ಸಾಹಿತಿಗಳ, ವಿವಿಧ ಸಾಹಿತ್ಯ ಪ್ರಕಾರಗಳಲ್ಲಿನ ಬರವಣಿಗೆಗಳ ದಿಕ್ಕು, ಉದ್ದೇಶ ಮತ್ತು ಮಹತ್ವವನ್ನು ವಿವರಿಸುವ ಒಂದು ಅರ್ಥಪೂರ್ಣ ಸಮೀಕ್ಷೆ ಇಲ್ಲಿದೆ. ತನ್ಮೂಲಕ ಹೊಸ ಬರಹಗಾರರ ಬರವಣಿಗೆ ಶೈಲಿ ಹೇಗಿರಬೇಕೆಂಬ ತೋರುದಾರಿಯೂ ಇದೆ. ಮಂಡ್ಯ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಆಯ್ಕೆಯ ಗೊಂದಲದ ನಡೆಗಳ ಈ ಹೊತ್ತಿನಲ್ಲಿ, ಈ ಬರಹ ವಿವೇಕಯುತ ನಡೆಗೆ ಒತ್ತಾಯಿಸುತ್ತದೆ.
| ಡಾ. ನಿರಂಜನ ಮೂರ್ತಿ ಬಿ ಎಂ
ಬದಲಾಗುತ್ತಿರುವ ಬರವಣಿಗೆಯನ್ನು ಮತ್ತು ಆ ಬದಲಾವಣೆಗಳ ಹಿಂದಿನ ಪರಿಸ್ಥಿತಿಗಳನ್ನು ಮತ್ತು ಕಾರಣಗಳನ್ನು ತುಂಬಾ ಚೆನ್ನಾಗಿ ವಿವರಿಸುವ ಈ ಲೇಖನ ಬರವಣಿಗೆಯ ಬದಲಾವಣೆಗಳ ಅಗತ್ಯಗಳನ್ನೂ ಗುರುತಿಸುತ್ತದೆ. ಸಾಹಿತ್ಯವೆಂದರೆ ಸಮಾಜದ ಬದುಕಿನ ಪ್ರತಿಬಿಂಬ ಮತ್ತು ಗತಿಬಿಂಬವೇ ಅಲ್ಲವೆ? ಬದಲಾಗುವ ಬದುಕನ್ನು ಸಾಹಿತ್ಯ-ಕಲೆಗಳು ಚಿತ್ರಿಸಲೇ ಬೇಕಲ್ಲವೆ? ಮತ್ತು ಬದಲಾವಣೆ ಈ ಜಗದ ಮತ್ತು ಈ ಜಗದಲ್ಲಿನ ಮನುಜನ ಬದುಕಿನ ಮೂಲ ನಿಯಮವೇ ಅಲ್ಲವೆ? \r\n\r\nಕಾಲ ಉರುಳಿದಂತೆ ಶಿಕ್ಷಣ, ವೈಜ್ಞಾನಿಕತೆ, ಮತ್ತು ವೈಚಾರಿಕತೆಗಳು ಬೆಳೆದಂತೆಲ್ಲಾ ಮನುಷ್ಯನ ಚಿಂತನೆ ಮತ್ತು ಮನೋಧರ್ಮಗಳು ಬದಲಾಗುವುದು ಸಹಜ ಮತ್ತು ಆ ಬದಲಾವಣೆಗಳಿಗೆ ತಕ್ಕಂತೆ ಸಾಹಿತ್ಯ-ಕಲೆಗಳು ಬದಲಾಗುವುದೂ ಸಹಜ. ಇಂತಹ ಗಹನ ವಿಚಾರಗಳನ್ನು ಚರ್ಚಿಸುವ ಲೇಖನ ಅದ್ಭುತವಾಗಿದೆ. ವಾರದ ಕೊನೆಯ ಓದಿಗೆ ಅತ್ಯುತ್ತಮವಾಗಿದೆ.
| ಶಿವವೆಂಕಟಯ್ಯ ವಿ
ಗುರು ಗೋವಿಂದಭಟ್ಟರ ಮರಿ ಮೊಮ್ಮಗನಿಗೆ ಸಾಹಿತ್ಯದ ಪ್ರಾಥಮಿಕ ಪಾಠ ಬೇಕಿದೆ.
Add Comment