ಬೆಡ್‌ಸೈಡ್ ಬುಕ್ಸ್
by Nataraj Huliyar
ಇಡಿ ಲೋಕವನ್ನೇ ಗೆಲ್ಲಲು ಹೊರಟ ಅಲೆಕ್ಸಾಂಡರ್ 'ತನ್ನ ತಲೆದಿಂಬಿನಡಿ ಹೋಮರ್‌ನ ’ಇಲಿಯಡ್’ ಮಹಾಕಾವ್ಯ ಇಟ್ಟುಕೊಂಡು ಮಲಗುತ್ತಿದ್ದ…’ ಎಂದು ಹಿಂದೊಮ್ಮೆ ಸ್ಕೂಲ್ ಹುಡುಗನೊಬ್ಬ ಹೇಳಿದಾಗ ಅಚ್ಚರಿಯಾಯಿತು.
ಅಲೆಕ್ಸಾಂಡರ್ ಹೋಮರನ ’ಇಲಿಯಡ್’ ಮಹಾಕಾವ್ಯವನ್ನು ತಲೆದಿಂಬಿನಡಿ ಇಟ್ಟುಕೊಂಡು ಮಲಗುತ್ತಿದ್ದುದಕ್ಕೆ ಕಾರಣಗಳಿದ್ದವು: ಅವನ ತಾಯಿ, ’ನೀನು ’ಇಲಿಯಡ್’ ಮಹಾಕಾವ್ಯದ ಮಹಾವೀರ ಅಖಿಲೀಸನ ವಂಶಸ್ಥ’ ಎಂದು ಹೇಳಿದ್ದಳು; ’ಇಲಿಯಡ್’ ಯುರೋಪಿನ ವೀರಯುಗದ ಗಾಥೆಯಾಗಿತ್ತು; ಜೊತೆಗೆ, ಗ್ರೀಕ್ ಫಿಲಾಸಫರ್ ಅರಿಸ್ಟಾಟಲ್ ಅಲೆಕ್ಸಾಂಡರನ ಗುರುವಾಗಿದ್ದ. ಅಲೆಕ್ಸಾಂಡರ್ ಸರಿಯಾಗಿ ಕಲಿಯದಿದ್ದರೆ ಚರ್ಮದ ಚಾಟಿಯಲ್ಲಿ ಬಾರಿಸುತ್ತಿದ್ದ!
ಅಷ್ಟೊತ್ತಿಗಾಗಲೇ ಮಹಾಕಾವ್ಯಗಳು, ಮಹಾನ್ ಟ್ರ್ಯಾಜಿಡಿಗಳು, ಕಾಮಿಡಿಗಳನ್ನು ಬರೆದ ಯುಗ ಪ್ರವರ್ತಕ ಗ್ರೀಕ್ ಕ್ಲಾಸಿಕಲ್ ಲೇಖಕರು ತೀರಿಕೊಂಡಿದ್ದರು; ಗ್ರೀಕ್ ಸಂಸ್ಕೃತಿಯ ಸೃಜನಶೀಲ ಲೋಕದಲ್ಲಿ ಒಂಥರದ ಶೂನ್ಯ ಆವರಿಸಿತ್ತು. ಅದು ಗ್ರೀಕ್ ಸಂಸ್ಕೃತಿಯ ಇಳಿಮುಖದ ಕಾಲ ಎನ್ನುವವರಿದ್ದರು. ಸಾಹಿತ್ಯ ರಚನೆ ಇಳಿಮುಖವಾದ ಈ ಕಾಲದಲ್ಲಿ ಸಾಕ್ರೆಟಿಸ್, ಪ್ಲೇಟೋ ಥರದ ಫಿಲಾಸಫರ್‍ಸ್ ಮೇಲೆದ್ದರು. ಆದರೆ ಬಹುಶಿಸ್ತೀಯ ಫಿಲಾಸಫರ್ ಆಗಿಯೂ ’ಸಾಹಿತ್ಯವಾದಿ’ಯಾಗಿದ್ದ ಅರಿಸ್ಟಾಟಲ್‌ಗೆ ತನ್ನ ಕಾಲದಲ್ಲಿ ಮತ್ತೆ ದೊಡ್ಡ ದೊಡ್ಡ ಗ್ರೀಕ್ ಸಾಹಿತ್ಯ ಕೃತಿಗಳು ಹುಟ್ಟಲಿ ಎಂಬ ಹಂಬಲ ಹುಟ್ಟಿತು.
ಅರಿಸ್ಟಾಟಲ್ ಗ್ರೀಕ್ ಭಾಷೆಯ ದೊಡ್ಡ ದೊಡ್ಡ ಲೇಖಕರ ಎಲ್ಲ ಕೃತಿಗಳನ್ನೂ ಆಳವಾಗಿ ಅಧ್ಯಯನ ಮಾಡತೊಡಗಿದ. ಕೃತಿಗಳ ನಡೆ, ಓಟ, ವಸ್ತು, ವಸ್ತುವಿನ್ಯಾಸ, ಪಾತ್ರ, ಭಾಷೆ, ಅಂತಿಮ ಪರಿಣಾಮ… ಎಲ್ಲವನ್ನೂ ಸ್ಪಷ್ಟವಾಗಿ ಕಂಡುಕೊಂಡ. ತನ್ನ ಕಾಲದ ಲೇಖಕರು ಮಹಾಕಾವ್ಯ, ಟ್ರ್ಯಾಜಿಡಿ, ಕಾಮಿಡಿಗಳನ್ನು ಬರೆಯಲು ಬೇಕಾದ ದಾರಿ, ಸೂತ್ರಗಳನ್ನು ಈ ಸಾಹಿತ್ಯ ಕೃತಿಗಳ ಅಧ್ಯಯನದ ಆಧಾರದಿಂದಲೇ ತೋರಿಸಿದ. ಕೃತಿಗಳ ಮೂಲಕವೇ ಮಹಾಕಾವ್ಯ ಹೀಗಿರಬೇಕು; ಟ್ರ್ಯಾಜಿಡಿ ಹೀಗಿರಬೇಕು…ಮುಂತಾದ ಸರಳ, ಸ್ಥೂಲ ನಿಯಮಗಳನ್ನು ರೂಪಿಸಿದ. ಈ ಪ್ರಕಾರಗಳಲ್ಲಿ ಬರೆಯಲು ಹೊಸ ತಲೆಮಾರಿಗೆ ದಾರಿ ತೋರಿಸಿದ.
ಹೀಗೆ ತನ್ನ ಭಾಷೆಯ ಎಲ್ಲ ಶ್ರೇಷ್ಠ ಕೃತಿಗಳನ್ನೂ ಓದಿ ಹೊಸ ತಲೆಮಾರುಗಳಿಗೆ ಬರೆಯುವ ಮಾರ್ಗಗಳನ್ನು ರೂಪಿಸಿಕೊಟ್ಟ ಮತ್ತೊಬ್ಬ ವಿದ್ವಾಂಸನ ಉದಾಹರಣೆ ಜಗತ್ತಿನಲ್ಲಿಲ್ಲವೇನೋ! ಅರಿಸ್ಟಾಟಲ್ ವಿದ್ವಾಂಸ-ಫಿಲಾಸಫರ್-ಮೀಮಾಂಸಕ ಎಲ್ಲವೂ ಆಗಿದ್ದ. ರಾಜಕಾರಣ, ಸಸ್ಯವಿಜ್ಞಾನ, ಖಗೋಳವಿಜ್ಞಾನ, ಎಕನಾಮಿಕ್ಸ್, ಭಾಷಾವಿಜ್ಞಾನ…ಹೀಗೆ ಹಲವು ಜ್ಞಾನಮಾರ್ಗಗಳನ್ನು ಗ್ರಹಿಸುತ್ತಿದ್ದ. ಇಂಥ ಅರಿಸ್ಟಾಟಲ್ ಅಲೆಕ್ಸಾಂಡರನ ರಾಜಕೀಯ ಗುರುವೂ ಆದ ಮೇಲೆ ಅಲೆಕ್ಸಾಂಡರ್ ಜಗದೇಕವೀರ ಆಗದಿರುತ್ತಾನೆಯೆ!
ಲೋಕ ಗೆಲ್ಲಲು ಹೊರಟ ಅಲೆಕ್ಸಾಂಡರನ ತಲೆದಿಂಬಿನಡಿ ‘ಇಲಿಯಡ್’ ಇತ್ತು; ಆದರೆ ಅರಿಸ್ಟಾಟಲ್ ಸುಮಾರು ಎರಡು ಸಾವಿರಕ್ಕೂ ಹೆಚ್ಚು ವರ್ಷ ಕಾಲ ತನ್ನ ಕಾವ್ಯಮೀಮಾಂಸೆಯ ಮೂಲಕ ಲೋಕದ ಅಕಡೆಮಿಕ್ ವಲಯಗಳನ್ನೇ ಆಳಿದ; ಈಗಲೂ ಆಳುತ್ತಿದ್ದಾನೆ! ಈಗಲೂ ಜಗತ್ತಿನ ವಿಶ್ವವಿದ್ಯಾಲಯಗಳಲ್ಲಿ ಸಾಹಿತ್ಯವನ್ನೇ ಪಟ್ಟಾಗಿ ಹಿಡಿದ ಅರಿಸ್ಟಾಟಲ್‌ವಾದಿಗಳಿದ್ದಾರೆ. ಇಂಥ ಅರಿಸ್ಟಾಟಲ್‌ನ ತಲೆದಿಂಬಿನಡಿ, ತಲೆದಿಂಬಿನ ಪಕ್ಕ ಎಂಥೆಂಥ ಪುಸ್ತಕಗಳಿದ್ದವು ಎಂದು ಊಹಿಸುವ ಕೆಲಸವೇ ಇವತ್ತು ನಮ್ಮಲ್ಲಿ ರೋಮಾಂಚನ, ಸ್ಫೂರ್ತಿ, ಪ್ರೇರಣೆಗಳನ್ನು ಹುಟ್ಟಿಸಬಲ್ಲದು!
ಅಲೆಕ್ಸಾಂಡರ್ ತನ್ನ ತಲೆದಿಂಬಿನಡಿ ‘ಇಲಿಯಡ್’ ಇಟ್ಟುಕೊಳ್ಳುತ್ತಿದ್ದ ಕತೆ ಹೇಳಿದ ಹುಡುಗ ಕೂಡ ಒಂದು ಕಾಲಕ್ಕೆ ‘ಇಲಿಯಡ್’ ‘ಒಡಿಸ್ಸಿ’ ಮಹಾಕಾವ್ಯಗಳ ಇಂಗ್ಲಿಷ್, ಕನ್ನಡಾನುವಾದಗಳನ್ನು, ಓದುತ್ತಾ, ನಿದ್ದೆಗೆ ಜಾರಿದಾಗ ಅವನ್ನು ತಲೆದಿಂಬಿನ ಬದಿಗೆ ಸರಿಸುತ್ತಾ ಮಲಗುತ್ತಿದ್ದ; ಬರಬರುತ್ತಾ ಲಂಕೇಶ್, ಎಂ.ಡಿ. ನಂಜುಂಡಸ್ವಾಮಿ, ಅಂಬೇಡ್ಕರ್, ಪೆರಿಯಾರ್…ಎಲ್ಲ ಅವನ ಬೆಡ್‌ಸೈಡಿಗೆ ಬಂದರು. ಅವನಿಗೆ ಇಪ್ಪತ್ತು ವರ್ಷವಾಗುವವರೆಗೂ ಒಂದಲ್ಲ ಒಂದು ಪುಸ್ತಕ ಅಲ್ಲಿರುತ್ತಿದ್ದ ಆ ದೃಶ್ಯ ಮನೋಹರವಾಗಿತ್ತು! ಹೀಗೆ ಬೆಡ್‌ಸೈಡ್ ಪುಸ್ತಕಗಳಿಂದ ತನ್ನೊಳಗಿಳಿದ ವಿವರಗಳನ್ನು ಆ ಹುಡುಗ ಇವತ್ತಿಗೂ ನನ್ನ ಕ್ಲಾಸುಗಳಿಗೆ, ಬರವಣಿಗೆಗೆ ಹೆಕ್ಕಿ ಕೊಡುವ ಸುಂದರ ಕೆಲಸ ಸದಾ ನಡೆಯುತ್ತಿರುತ್ತದೆ. ಸ್ವತಃ ಈ ಅಂಕಣಕಾರನ ಬರಹಗಳ ವಿವರಗಳು, ಉಲ್ಲೇಖಗಳು, ಅಷ್ಟಿಷ್ಟು ಜ್ಞಾನ ಇವೆಲ್ಲ ಹೀಗೆಯೇ ಸಾವಿರಾರು ಬೆಡ್‌ಸೈಡ್ ಪುಸ್ತಕಗಳಿಂದ ಬಂದಿವೆ.
ನನ್ನ ಅನುಭವದಲ್ಲಿ ಈ ಬೆಡ್‌ಸೈಡ್ ಪುಸ್ತಕಗಳ ವಿವರಗಳು ಇಷ್ಟು ಗಾಢವಾಗಿ ನಮ್ಮ ಮನಸ್ಸಿನಲ್ಲಿ ಉಳಿಯಲು ರಾತ್ರಿಯ ನಿರ್ಜನತೆ, ಏಕಾಂತ, ನೀರವತೆ, ಪ್ರಶಾಂತತೆ ಹಾಗೂ ತಕ್ಷಣದ ಸೀಮಿತ ಉದ್ದೇಶಗಳಿಲ್ಲದ ಆರಾಮಿನ ಓದು…ಇವೆಲ್ಲವೂ ಕಾರಣವಿರಬಹುದು. ಇದೇ ಅಂಕಣದಲ್ಲಿ ಹಿಂದೊಮ್ಮೆ ಬರೆದ ವರ್ಡ್ಸ್‌ವರ್ತ್ ಕಾವ್ಯ ತತ್ವವನ್ನು ಮೊನ್ನೆ ಪ್ರಖ್ಯಾತ ವೈದ್ಯೆಯೊಬ್ಬರಿಗೆ ನೆನಪಿಸಿದೆ: ‘ಕಾವ್ಯವೆನ್ನುವುದು ಶಕ್ತ ಭಾವನೆಗಳ (ಫೀಲಿಂಗ್ಸ್) ಸಹಜ ಉಕ್ಕುವಿಕೆ: ಅದು ಹುಟ್ಟುವುದು ಪ್ರಶಾಂತ ಸನ್ನಿವೇಶದಲ್ಲಿ ಮರಳಿ ಮನಕ್ಕೆ ಕರೆದುಕೊಂಡ ಭಾವ (ಎಮೋಶನ್)ದಿಂದ.’
ಬೆಡ್‌ಸೈಡ್ ಪುಸ್ತಕಗಳ ಅನನ್ಯ ಲೋಕ ನಮ್ಮೊಳಗೆ ಗಾಢವಾಗಿ ಉಳಿಯುವುದಕ್ಕೆ ಅವು ಪ್ರಶಾಂತ ಸನ್ನಿವೇಶದಲ್ಲಿ ನಮ್ಮ ಮನ ಹೊಕ್ಕ ಭಾವಗಳಾಗಿರುವುದೂ ಕಾರಣವಿರಬಹುದು! ಈ ಕಾಲದಲ್ಲಿ ಬೆಡ್‌ಸೈಡ್ ಪುಸ್ತಕಗಳ ಜಾಗವನ್ನು ಓದಿನ ನವಸಂಗಾತಿಯಾದ ‘ಕಿಂಡಲ್’ ಒತ್ತರಿಸಿಕೊಂಡು ಬರುತ್ತಿದೆ. ಈ ‘ಕಿಂಡಲ್’ ಒಳಗೂ ನಾನು ತೆರೆತೆರೆದಾಗ ಮರಳಿ ನನ್ನೆದೆಗೆ ಬರುವ ನೂರಾರು ಪ್ರಿಯ ಪುಸ್ತಕಗಳಿವೆ. ದುರದೃಷ್ಟವೆಂದರೆ, ನೀವು ದಮ್ಮಯ್ಯಗುಡ್ಡೆ ಹಾಕಿದರೂ ಅಲ್ಲಿ ಕನ್ನಡ ಪುಸ್ತಕಗಳು ಬರುವುದಿಲ್ಲ. ಇಂಗ್ಲಿಷ್, ಫ್ರೆಂಚ್, ತಮಿಳು, ತೆಲುಗು, ಹಿಂದಿ ಭಾಷೆಯ ಪುಸ್ತಕಗಳು ಅಲ್ಲಿವೆ. ಯಾವ ಸಾಹಿತ್ಯ ಸಮ್ಮೇಳನದಲ್ಲಿ ಎಷ್ಟು ಕೋಟಿ ನುಂಗಲಿ ಎಂದು ಹಾತೊರೆಯುವ ಕನ್ನಡಭಕ್ಷಕರ ಈ ನಾಡಿನಲ್ಲಿ ನಮಗಾಗಲೀ, ಕನ್ನಡದ ಹೊಸ ಕಂದಮ್ಮಗಳಿಗಾಗಲೀ ಕಿಂಡಲ್‌ನಲ್ಲಿ ಕನ್ನಡ ಪುಸ್ತಕಗಳು ಸಿಗುವ ಕಾಲ ಸದ್ಯಕ್ಕಂತೂ ಕಾಣುತ್ತಿಲ್ಲ…
ನನ್ನ ಸಾವಿರಾರು ಬೆಡ್‌ಸೈಡ್ ಪುಸ್ತಕಗಳಲ್ಲಿ ಬಹುಕಾಲ ಯೇಟ್ಸ್ ಕವಿಯ ಸಮಗ್ರ ಕಾವ್ಯದ ಸಂಪುಟವೂ ಕಾಣಿಸಿಕೊಳ್ಳುತ್ತಿತ್ತು. ಅದರಲ್ಲಿ ನನಗೆ ಪ್ರಿಯವಾದ, ಮುದಗೊಳಿಸುವ ಹತ್ತಾರು ಕವಿತೆಗಳು, ನೂರಾರು ಸಾಲುಗಳಿವೆ. ಹೀಗೇ ಒಂದು ರಾತ್ರಿ ಯೇಟ್ಸ್ ಕಾವ್ಯಲೋಕದಲ್ಲಿ ಬೆಚ್ಚಗೆ ಬದುಕುತ್ತಾ, ಹಾಗೇ ಕನ್ನಡಿಸಿಕೊಂಡ ‘ವೆನ್ ಯು ಆರ್ ಓಲ್ಡ್’ ಕವಿತೆಯ ಒಂದು ಡ್ರಾಫ್ಟ್ ನನ್ನ ಫೈಲಿನಲ್ಲಿತ್ತು. ಈ ಸುಂದರ ಕವಿತೆಯನ್ನು ಆಗಾಗ್ಗೆ ತಿದ್ದಿದ ನೆನಪಿದೆ. ಈ ಶನಿವಾರ ತಡರಾತ್ರಿ ಈ ಅಂಕಣ ಬರೆಯುವಾಗ ಅದನ್ನು ಮತ್ತೆ ಹುಡುಕಿದೆ. ಈಗ ನೋಡಿದರೆ, ಅದು ಹಲ ಬಗೆಯ ಅರ್ಥಗಳನ್ನು ಸೂಚಿಸುವಂತೆ ಕಾಣತೊಡಗಿತು! ಅದು ಈ ಅಂಕಣದ ರಮ್ಯ ಓದುಗಿಯರಿಗೆ, ಓದುಗರಿಗೆ ನಿಜಕ್ಕೂ ಪ್ರಿಯವಾಗಬಹುದೆಂದು ಇಲ್ಲಿ ಕೊಟ್ಟೆ:
ನೀ ಮಾಗಿದ ಕಾಲಕ್ಕೆ…
ನೀ ಇನ್ನಷ್ಟು ಮಾಗಿ ತಲೆತುಂಬ ಬಿಳಿಗೂದಲಾಗಿ ನಿದ್ದೆ ಕಣ್ಣಿಗೆ ಕವಿದು
ಬೆಂಕಿ ಕಾಯಿಸುತ್ತಾ ತೂಕಡಿಸುತಿರುವಾಗ, ಈ ಪುಸ್ತಕವ ಕೈಗೆತ್ತಿಕೋ;
ಮೆಲ್ಲಮೆಲ್ಲಗೆ ಪುಟ ತೆರೆದು ಓದುತ್ತಾ ಹೋಗು; ಒಂದಾನೊಂದು ಕಾಲಕ್ಕೆ
ನಿನ್ನ ಕಣ್ಣೊಳಗಿದ್ದ ಕೋಮಲ ನೋಟದ ಬಗ್ಗೆ, ಆ ಕಣ್ಣೊಳಗಿದ್ದ
ಗಾಢ ನೆರಳುಗಳ ಬಗ್ಗೆ ಕನಸುತ್ತ ಕೂರು.
ಅದೆಷ್ಟು ಜನ ನಿನ್ನ ಖುಷಿಯ ಸಂಪನ್ನ ಚಣಗಳನ್ನು ಪ್ರೀತಿಸಿದರೋ,
ಮತ್ತಿನ್ನೆಷ್ಟು ಜನ ಹುಸಿ ಒಲವಿನಲ್ಲೋ, ನಿಜ ಒಲವಿನಲ್ಲೋ, ನಿನ್ನ ಚೆಲುವನ್ನು ಪ್ರೀತಿಸಿದರೋ!
ಒಬ್ಬನು ಮಾತ್ರ ನಿನ್ನ ಯಾತ್ರಾರ್ಥಿ ಆತ್ಮವನ್ನು ಪ್ರೀತಿಸಿದನು;
ನಿನ್ನ ಮೊಗದಲ್ಲಿ ಮಾರ್ಪಡುವ ದುಗುಡದ ಎಳೆಗಳನ್ನು ಪ್ರೀತಿಸಿದನು.
ಬೆಂಕಿಗೆ ಹೊಳೆವ ಕಂಬಿಗಳ ಬಳಿ ನಿಂತು ತುಸು ಬಾಗಿ,
ಒಂಚೂರು ಖಿನ್ನವಾಗಿ, ಹೀಗೆ ಗೊಣಗಿಕೋ:
‘ಅದು ಹೇಗೆ ಒಲವು ಕೈ ಕೊಟ್ಟು ಹಾರಿ
ಗಿರಿಶಿಖರಗಳ ತುದಿಯೇರಿ ನಾಗಾಲೋಟದಲ್ಲಿ ಓಡೋಡಿ
‘ಅಗಣಿತ ತಾರಾಗಣಗಳ ನಡುವೆ’ ಮುಖ ಮರೆಸಿಕೊಂಡಿತೋ!’
Comments
21 Comments
| ದಾಕ್ಷಾಯಣಿ ಹೊನ್ನಾವರ
ಚಂದದ ಬರಹ
| sanganagouda
ನಮ್ಮ ಆಗುವಿಕೆಯ ಆತ್ಮವನ್ನು ಪ್ರೀತಿಸುವವರು ಬೇಕು. ಸರ್ಇರುವಿಕೆಗೆ ಇದ್ದೇ ಇದ್ದಾರೆ..
| vali R
\"ಅಮ್ಮನ ಜೋಗುಲವಿರದ ರಾತ್ರಿಯಲಿ ಪುಸ್ತಕದ ಪುಟ ತಿರುವು\" ಎಂದು ನಾನು ಈ ಹಿಂದೆ ಬರೆದದ್ದು ನೆನಪಾಯಿತು. ನಾನು ಈಗ ಬೆಡ್ ಮೇಲೆ ಮಲಗಿ ಬರೆಯುತ್ತಿರುವೆ. .... ಪಕ್ಕದಲ್ಲಿ ಪ್ರಜ್ಞೆ ಮತ್ತು ಪರಿಸರ, ಆಖ್ಯಾನ ವ್ಯಾಖ್ಯಾನ, ಜಾತಿ ಪದ್ಧತಿ, ಗಿರಡ್ಡಿ ಅವರ ಸಮಗ್ರ ವಿಮರ್ಶೆ....
| Dr. Mohan Mirle
‘ಬೆಡ್ ಸೈಡ್ ಬುಕ್ಸ್’ ಅತ್ಯಂತ ಪ್ರೇರಣಾತ್ಮಕ ಬರಹ. ನನಗೆ ಅತಿ ಹೆಚ್ಚು ಇಷ್ಟವಾದ ಬರಹಗಳಲ್ಲಿ ಇದೂ ಒಂದು. ಈ ಹಿಂದೆ ಪ್ರಕಟವಾಗಿದ್ದ ನಿಮ್ಮ ‘ಓದಬೇಕಾಗಿರುವ ಪುಸ್ತಕಗಳು ಕಾಯುತ್ತಿವೆ’ ಬರಹದಲ್ಲಿ ಮಾರ್ಕ್ವೇಜ್ ಮತ್ತು ಕ್ಯೂಬಾ ಅಧ್ಯಕ್ಷ ಫಿಡೆಲ್ ಕ್ಯಾಸ್ಟ್ರೋ” ಅವರ ಮೂಲಕ ಓದು ಪ್ರೀತಿಯನ್ನು ಪರಿಚಯಿಸಿದ್ದ ನೀವು, ಇಲ್ಲಿ ಅರಿಸ್ಟಾಟಲ್ ಮತ್ತು ಅಲೆಗ್ಸಾಂಡರ್ ಮೂಲಕ ನಮಗೆ ಮತ್ತೊಮ್ಮೆ ಓದುವ ಹುಮ್ಮಸ್ಸನ್ನು ತುಂಬುವ ಪ್ರಯತ್ನವನ್ನು ಮಾಡಿದ್ದೀರಿ. ‘ಬೆಡ್ ಸೈಡ್ ಬುಕ್ಸ್’ ರೀಡಿಂಗ್ ನಿಂದ ಆಗುವ ಲಾಭಗಳನ್ನೂ ಸೊಗಸಾಗಿ ವಿವರಿಸಿದ್ದೀರಿ. ನಮ್ಮೆಲ್ಲರ ಒತ್ತಡ, ಜಂಜಾಟಗಳ ನಡುವೆಯೂ ಓದಿಗೆ ಇರುವ ದಾರಿಗಳನ್ನು ನೈಜ ದೃಷ್ಟಾಂತಗಳೊಡನೆ ನಮ್ಮೆದುರಿಗೆ ಇಟ್ಟಿದ್ದೀರಿ. ಇಂದು ನನ್ನ ತಲೆದಿಂಬಿನ ಬಳಿ ಇಟ್ಟುಕೊಳ್ಳಬೇಕಾದ ಪುಸ್ತಕ ಯಾವುದು? ಎಂದು ಯೋಚಿಸುತ್ತಿದ್ದೇನೆ. ಬಹುಶಃ ಅದು ಆ ಹೊತ್ತಿಗೆ ತೀರ್ಮಾನವಾಗಬಹುದೇನೊ!\r\n\r\nಇನ್ನು ಯೇಟ್ಸ್ ಕವಿಯ ಕಾವ್ಯದ ನಿಮ್ಮ ಅನುವಾದ ಆಕರ್ಷಣೆ, ಪ್ರೇಮ, ವಿರಹ ಎಲ್ಲ ಅನುಭವಗಳನ್ನು ಅತ್ಯಂತ ಸರಳ ನಿರೂಪಣೆಯಲ್ಲಿ ಎದೆಗೆ ದಾಟಿಸುವ ಪರಿಯಂತೂ ಅನನ್ಯ.
| Dr.G.Gangaraju
ಕನಸು, ಕಲ್ಪನೆ ಮತ್ತು ವಿಚಾರಗಳ ಮೇಳೈಸುವಿಕೆಯ ಓದಿಗೆ ಬೆಡ್ ,ಸೈಡ್ ಬುಕ್ ಗಳ ಕೊಡುಗೆ ಅಪಾರ
| Kavitha
Wonderful!!!
| Kavyashree
Beatiful translation\r\n
| Rupa
ವಾಹ್! ಬೆಡ್ ಸೈಡ್ ಬುಕ್ಸ್! ವಾಸ್ತವದ ಒಂದು ತುಣುಕನ್ನು ಎಷ್ಟು ಕಲಾತ್ಮಕವಾಗಿ ವಿಸ್ತರಿಸಲಾಗಿದೆ! ಹಾಗೇ ಬೆಡ್ ಸೈಡ್ ಬಿದ್ದ ಕವಿತೆಯ ಚೂರುಪಾರು...ತುಣುಕುಗಳೂ...
| Siraj
ಅದ್ಭುತವಾದ ಒಳನೋಟಗಳಿವೆ. ಲಂಕೇಶರು ತಮ್ಮ ಕೊನೆಯ ದಿನವೂ ಬೆಡ್ ಸೈಡ್ ಪುಸ್ತಕವೊಂದನ್ನು ಇಟ್ಟುಕೊಂಡೇ ಮಲಗಿದ್ದರು ಎಂಬುದು ಮತ್ತೊಮ್ಮೆ ನೆನಪಾಯಿತು. ಅಂಥ ಲಂಕೇಶರೇ ಬೆಳಗ್ಗೆ ಎದ್ದು ಬರೆದ ಹಾಗಿದೆ ಈ ಬರಹ \r\n
| ನಟರಾಜ್ ಹುಳಿಯಾರ್ ರಿಪ್ಲೈ
ಲಂಕೇಶರ ಕೊನೆಯ ರಾತ್ರಿ ಅವರ ಹಾಸಿಗೆಯ ಮೇಲೆ ಶಂಕರಭಟ್ಟರ \'ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ\' ಹಾಗೂ ಅಮೆರಿಕನ್ ಕವಿ ಆಗ್ಡನ್ ನ್ಯಾಶ್‌ನ Limericks (ಬೌದ್ಧಿಕತೆ, ಹಾಸ್ಯ ಹಾಗೂ ಭಾಷಿಕ ಚಿನ್ನಾಟ ಬೆರೆತ ಪುಟ್ಟ ಪದ್ಯಗಳು) ಪುಸ್ತಕಗಳು ಇದ್ದವು. ೨೦೦೦ನೇ ಇಸವಿಯ ಜನವರಿ ೨೪ರಂದು ಪಿ. ಲಂಕೇಶ್ ಒಂಬತ್ತೂವರೆಗೆ ಆಫೀಸ್ ಬಿಟ್ಟು ಹೊರಡುವ ಮುನ್ನ ಅವರ ಪ್ರಿಯ ಲೇಖಕಿ ಜೇನ್ ಆಸ್ಟಿನ್ ಅವರ ’ಪ್ರೈಡ್ ಅಂಡ್ ಪ್ರಿಜುಡೀಸ್’ ಕಾದಂಬರಿ ಆಧರಿಸಿದ ಅದೇ ಹೆಸರಿನ ಸಿನಿಮಾ ನೋಡುತ್ತಿದ್ದರು. ಈ ವಿವರಗಳೆಲ್ಲ ನನ್ನ ‘ಇಂತಿ ನಮಸ್ಕಾರಗಳು’ (ಪಲ್ಲವ ಪ್ರಕಾಶನ) ಪುಸ್ತಕದಲ್ಲಿವೆ.
| Dr. Rajaram
Bedside Books...wonderful!
| Dr. Narasimhamurthy Halehatti
ಸುಂದರವಾದ ಬರಹ. ಅಭಿನಂದನೆಗಳು ಸರ್...
| ಶಿವಲಿಂಗಮೂರ್ತಿ
ಬೆಡ್ ಸೈಡ್ ಬುಕ್ಸ್ ಈ ಶೀರ್ಷಿಕೆ ಮತ್ತು ವಿವರಣೆ ಕುತೂಹಲವನ್ನುಂಟು ಮಾಡುವ ಬರಹವಾಗಿದೆ. ಓದುಗ / ಓದುಗಿಯರಿಗೆ ಓದಲು ಪ್ರೇರಣೆ ನೀಡುತ್ತದೆ. ಗ್ರೀಕ್ ಸಾಹಿತ್ಯದ ಶೂನ್ಯಕಾಲದ ಸಂದರ್ಭದಲ್ಲಿ ಆ ಸಾಹಿತ್ಯದ ಸಮೃದ್ಧಿಗೆ ಅರಿಸ್ಟಾಟಲ್ ತೋರಿದ ಆಸಕ್ತಿ ವಿಶ್ವ ಸಾಹಿತ್ಯಕ್ಕೆ ಮಾದರಿ. ಈ ನಿಮ್ಮ ಬರಹವನ್ನು ಓದುತ್ತಿರುವ ಸಂದರ್ಭದಲ್ಲಿಯೇ ಕ್ರಿಸ್ತಶಕ 9ನೇ ಶತಮಾನದಲ್ಲಿ ಹಳಗನ್ನಡ ಸಾಹಿತ್ಯದ ಹೆಬ್ಬಾಗಿಲು ತೆರೆದು ಕನ್ನಡ ಸಾಹಿತ್ಯದ ಶ್ರೀಮಂತಿಕೆಗೆ ಶ್ರೀವಿಜಯ ಕಾರಣನಾದರೆ; 20ನೇ ಶತಮಾನದ ಸಂದರ್ಭದಲ್ಲಿ ಬಿಎಂ ಶ್ರೀ ಅವರು ಹೊಸಗನ್ನಡ ಸಾಹಿತ್ಯದ ಹೆಬ್ಬಾಗಿಲನ್ನು ತೆರೆದು ಆಧುನಿಕ ಸಾಹಿತ್ಯದ ಶ್ರೀಮಂತಿಕೆಗೆ ( ಕ್ರೈಸ್ತ ಮಿಷನರಿಗಳು ಎಸ್ ಜಿ ನರಸಿಂಹಾಚಾರ್ಯರು ಹಟ್ಟಿಯಂಗಡಿ ನಾರಾಯಣರಾಯರು ಪಂಜೆ ಮಂಗೇಶರಾಯರು ಮುಂತಾದವರ ಕೊಡುಗೆಯೂ ಇದೆ) ಶ್ರಮಿಸಿದ್ದಾರೆ. ನಂತರದಲ್ಲಿ ಕನ್ನಡ ಸಾಹಿತ್ಯ ಏನೆಲ್ಲ ವೈವಿಧ್ಯದೊಂದಿಗೆ ಸಂಪನ್ನಗೊಂಡಿದೆ ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಆಧುನಿಕ ತಂತ್ರಜ್ಞಾನದ ಜೊತೆ ಜೊತೆಯಲಿ ಹೆಜ್ಜೆ ಹಾಕುತ್ತಿರುವ ಇಂದಿನ ಪೀಳಿಗೆಗೆ ಕಿಂಡಲ್ ನಂತಹ ಗ್ರಂಥಾಲಯದಲ್ಲಿ ಕನ್ನಡದ ಕೃತಿಗಳು ಓದಲು ಲಭ್ಯವಿಲ್ಲ ಎಂಬುದು ನಿಜಕ್ಕೂ . ನೋವಿನ ಸಂಗತಿ. ಕನ್ನಡದ ಕೆಲಸಕ್ಕಾಗಿ ಇರುವ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳು ಇತ್ತ ಗಮನಹರಿಸಬೇಕೆನಿಸುತ್ತದೆ. ಕನ್ನಡವನ್ನು ಕಟ್ಟುವ ಬಗೆಗಿನ ನಿಮ್ಮ ಈ ಸಲಹೆ ನಿಜಕ್ಕೂ ಗಮನಾರ್ಹವಾದುದು.ಧನ್ಯವಾದಗಳು ಸಾರ್.
| ಡಾ. ನಿರಂಜನ ಮೂರ್ತಿ ಬಿ ಎಂ
\'ಬೆಡ್ ಸೈಡ್ ಬುಕ್ಸ್\' ಅತ್ಯುತ್ತಮವಾಗಿದೆ. ಓದಿನ ಒಂದು ವಿಭಿನ್ನ, ವಿಶಿಷ್ಟ, ಮತ್ತು ಪ್ರಶಾಂತವಾದ ರೀತಿಯಾಗಿದೆ!; ಮೆದುಳು, ಮನ, ಮತ್ತು ಆತ್ಮದೊಳಗೆ ನೇರವಾಗಿ ಇಳಿಯುವ ದಾರಿಯನ್ನ ತೋರಿಸಿದೆ! It\'s simply wonderful!!
| ವಿಜಯಾ
ಹುರಿಗಟ್ಟುವ ನೆನಪುಗಳು,ವರ್ತಮಾನ
|
| ವಿಜಯೇಂದ್ರ ಕುಮಾರ್ ಜಿ.ಎಲ್.
ನಮಸ್ತೆ ಸರ್,\r\nಅತ್ಯಂತ ʼಆಪ್ತ ಓದುʼ ಸಾಧ್ಯವಾಗುವುದೇ ನೀವು ಇಲ್ಲಿ ವಿವರಿಸಿರುವ “ಬೆಡ್ ಸೈಡ್ ಬುಕ್ಸ್” ಎಂಬ ಓದಿನ ಪರಿಕಲ್ಪನೆಯ ಮೂಲಕ. ನಿಜಕ್ಕೂ ಇದು ಎದೆಗೆ ಹತ್ತಿರವಾದ ಓದಿನ ವಿಧಾನ. \r\n\r\nಅಂಕಣದ ಕೊನೆಯಲ್ಲಿ \'ಬೆಡ್ ಸೈಡ್ ಬುಕ್\' ಪ್ರಸ್ತಾಪವಿರುವ ಯೇಟ್ಸ್ ನ \'When You Are Old\' ಕವಿತೆಯ ಅದ್ಭುತ ಅನುವಾದವನ್ನು ಕೊಟ್ಟಿದ್ದೀರಿ. ನಾನೂ ಸಹ ಈ ಕವಿತೆಯನ್ನು, ಸುಮಾರು 24 ವರ್ಷಗಳ ಹಿಂದೆ, ಎಂ.ಎ. ವಿದ್ಯಾರ್ಥಿಯಾಗಿ ನಿಮ್ಮ ಪಾಠಗಳನ್ನು ಕೇಳುತ್ತಿದ್ದ ಕಾಲದಲ್ಲಿ ಅನುವಾದಿಸಿದ್ದೆ. ಕುತೂಹಲಕ್ಕೆ ಇಲ್ಲಿ ಹಂಚಿಕೊಂಡಿದ್ದೇನೆ: \r\n\r\nನೀ ಮುದುಕಿಯಾಗಿ ನಿನ್ನ ಕೂದಲು ನರೆತು ಒಲೆಯ ಪಕ್ಕ ತೂಕಡಿಸುತ್ತಿರುವಾಗ, ಈ ಪುಸ್ತಕ ಕೈಗೆತ್ತಿಕೊ; ನಿಧಾನವಾಗಿ ಓದು: ಒಂದು ಕಾಲಕ್ಕೆ ನಿನ್ನ ಕಣ್ಣುಗಳಲ್ಲಿದ್ದ ಕೋಮಲ ನೋಟದ ಕನಸುಗಳನ್ನು ಮತ್ತು ಅವುಗಳ ಗಾಢ ನೆರಳುಗಳನ್ನು. \r\n\r\nಎಷ್ಟೊಂದು ಮಂದಿ ಪ್ರೀತಿಸಿದ್ದರು ನಿನ್ನ ಅದೃಷ್ಟದ ಘಳಿಗೆಗಳನ್ನು. ಅದು ಸುಳ್ಳೋ, ನಿಜವೋ. ಅಂತೂ ನಿನ್ನ ಸೌಂದರ್ಯವನ್ನು ಎಲ್ಲ ಎಷ್ಟೊಂದು ಇಷ್ಟಪಟ್ಟಿದ್ದರು. ಆದರೆ ಒಬ್ಬ ಮಾತ್ರ ನಿನ್ನ ಪವಿತ್ರ ಆತ್ಮವನ್ನು ಪ್ರೀತಿಸಿದ್ದ; ಬದಲಾಗುತ್ತಿದ್ದ ನಿನ್ನ ಮುಖದ ದುಗುಡಗಳ ಬಗ್ಗೆ ಕಾಳಜಿ ಹೊಂದಿದ್ದ. \r\n\r\nಜಗಮಗಿಸುವ ಸರಳುಗಳ ಬದಿಯಲ್ಲಿ ತುಸು ಬಾಗಿ ನಿಂತು ವಿಷಾದದಿಂದ ಗೊಣಗಿಕೊ: ಪ್ರೇಮವು ಅದು ಹೇಗೆ ಭಗ್ನಗೊಂಡಿತ್ತು; ಗಿರಿಶಿಖರಗಳ ತುದಿಗೆ ಮುಖಮಾಡಿದ್ದವನ ಮುಖವು ನಕ್ಷತ್ರಗಳ ಹಿಂಡಿನಲ್ಲಿ ಅದು ಹೇಗೆ ಕರಗಿಹೋಗಿತ್ತು.\r\n\r\nಇಂಗ್ಲಿಷ್ ಅಷ್ಟಾಗಿ ಗೊತ್ತಿಲ್ಲದ ನನಗೆ ಈ ಅನುವಾದದ ಕೆಲಸ ಒಂದು ರೀತಿಯಲ್ಲಿ ಇಂಗ್ಲಿಷ್ ಅನ್ನು ಗ್ರಹಿಸಿಕೊಳ್ಳಲು ಮಾಡಿದ ಅಭ್ಯಾಸವೂ ಆಗಿತ್ತು. ಅಂದು ಉಕ್ಕುಕ್ಕುವ ಯವ್ವನದ ದಿನಗಳು! Pan Classics ಪ್ರಕಟಿಸಿದ್ದ \"Yeats: Selected Poetry\" ಪುಸ್ತಕ ನಾನು ವಿದ್ಯಾರ್ಥಿಯಾಗಿದ್ದ ದಿನಗಳಲ್ಲಿ ನನ್ನ ಬೆಡ್ ಸೈಡ್ ಬುಕ್ ಆಗಿತ್ತು ಸರ್. \r\n\r\nಆದರೆ ವಿಚಿತ್ರ ಸಂಗತಿ ಎಂದರೆ, ಯೇಟ್ಸ್ ತನ್ನ ವೃದ್ಧಾಪ್ಯದಲ್ಲಿಯೇ ಹೆಚ್ಚು ತೀವ್ರವಾಗಿ ಪ್ರೇಮಕವಿತೆಗಳನ್ನು ಬರೆದಿರುವುದು! ಎಲಿಯಟ್ ನಲ್ಲಿ ಕಾಣದ ಪ್ರೇಮದ ಕಸುವು ಯೇಟ್ಸ್ ನಲ್ಲಿದೆ. ಈತನದು ಜೀವನದ ಕಟ್ಟಕಡೆಯಲ್ಲಿಯೂ ಸೆಳೆ ಕಳೆದುಕೊಳ್ಳದ ಅದಮ್ಯ ಪ್ರೇಮ. \r\n\r\nಪ್ರೇಮದ ಹುಚ್ಚಿನ ಬಗ್ಗೆ ಎಚ್ಚರ ನೀಡುವ \'Do not love too long\', \'Never Give All the Heart\' ನಂತಹ ಕೆಲವು ಕವಿತೆಗಳ ನಡುವೆಯೂ, ಯೇಟ್ಸ್ ನ ಬಹುಪಾಲು ಕವಿತೆಗಳು ಪ್ರೇಮವನ್ನೇ ಧ್ಯಾನಿಸುತ್ತವೆ. ಪ್ರೇಮವನ್ನೇ ಉಸಿರಾಡುತ್ತವೆ. ದಾಂಪತ್ಯವನ್ನು ಮೀರಿದ ಪ್ರೇಮವಾಗಿಯೂ ನೈತಿಕತೆ ಉಳಿಸಿಕೊಂಡ ಪ್ರೇಮ- ಈತನ ಕಾವ್ಯದ ಮುಖ್ಯವಸ್ತು. \r\n\r\nಯೇಟ್ಸ್ ಕಾವ್ಯದಲ್ಲಿ ಪ್ರೇಮವೇ ಆಧ್ಯಾತ್ಮವಾಗಿದೆ. ಇಲ್ಲಿ ಪ್ರೇಮ, ಕಾಮ, ಆಧ್ಯಾತ್ಮಗಳ ನಡುವೆ ಮೇಲುಕೀಳಿನ ಕಲ್ಪನೆಯೂ ಇಲ್ಲ. ತನ್ನ ಕೊನೆಗಾಲದಲ್ಲಿ ಯೇಟ್ಸ್ ಬರೆದ \'Politics\' ಕವಿತೆ ಇದಕ್ಕೆ ಒಳ್ಳೆಯ ಉದಾಹರಣೆ. \r\n\r\nಒಂದು ಕೋರಿಕೆ: ತನ್ನ ವೈಯಕ್ತಿಕ ಬದುಕನ್ನೇ ಕಾವ್ಯವಾಗಿಸಿಯೂ ಅದು ಅಶ್ಲೀಲ ಅನ್ನಿಸದ ಹಾಗೆ ಶ್ರೇಷ್ಠ ಕಾವ್ಯ ಬರೆದವನು ಯೇಟ್ಸ್. ಆದರೂ ತಾನು ಕಷ್ಟಪಟ್ಟು ರೂಪಿಸಿದ ಕಾವ್ಯಶೈಲಿಯನ್ನು ಕದ್ದರು ಎಂದು ಕವಿ ಯೇಟ್ಸ್ \'A Coat\' ಕವಿತೆಯಲ್ಲಿ ಬೆರಳು ಮಾಡುತ್ತಿರುವುದು ಯಾರ ಕಡೆಗೆ? ಈ ಕವಿತೆಯ ವಸ್ತುವಿನ್ಯಾಸದ ಬಗ್ಗೆ ಸಾಧ್ಯವಾದರೆ ತಿಳಿಸಿ ಸರ್.\r\n\r\nಒಂದು ತಕರಾರು: ಮೂಲತಃ ಸೃಜನಶೀಲ ಕವಿಯಾದ ನೀವು ಕನ್ನಡ-ಇಂಗ್ಲಿಷ್ ಎರಡೂ ಭಾಷಾ-ಸಾಹಿತ್ಯಗಳನ್ನು ಆಳವಾಗಿ ಬಲ್ಲವರು. ಕಾವ್ಯದ ಅನುವಾದ ಕಾರ್ಯದಲ್ಲಿ ನಿಮ್ಮನ್ನು ನೀವು ಇನ್ನೂ ಹೆಚ್ಚು ತೊಡಗಿಸಿಕೊಳ್ಳಬಹುದಿತ್ತು.\r\n\r\n(ತಮ್ಮ ತಲೆದಿಂಬಿನ ಅಡಿ, ಹಾಸಿಗೆ ಮೇಲೆ ಇಷ್ಟದ ಪುಸ್ತಕಗಳ ಚೆಲ್ಲಾಪಿಲ್ಲಿ ಹರಡಿಕೊಂಡು ಒರಗುತ್ತಿದ್ದ ಓದುತ್ತಿದ್ದ ಕಿರಂ ಮೇಷ್ಟರು ಕಣ್ಣ ಮುಂದೆ ಬರುತ್ತಿದ್ದಾರೆ ಸರ್.)\r\n
| NATARAJ HULIYAR replies
ವಿಜಯೇಂದ್ರಕುಮಾರ್ ಅವರ ವಿದ್ಯಾರ್ಥಿ ದೆಸೆಯ ಅನುವಾದದ ಪ್ರಯತ್ನ ನಿಜಕ್ಕೂ ಕುತೂಹಲಕರ. ನನ್ನ ಗ್ರಹಿಕೆಗಾಗಿ ಆಗಾಗ್ಗೆ ಹೀಗೆ ಕನ್ನಡಿಸಿಕೊಳ್ಳುವೆ, ಅಷ್ಟೆ. ಈಗ ಅನುವಾದವನ್ನು ಪೂರ್ಣಾವಧಿ ಕೈಗೆತ್ತಿಕೊಳ್ಳುವುದು ವಿಜಯೇಂದ್ರಕುಮಾರ್ ಸರದಿ!
| Dr Niranjana Murthy B M responds
ಹುಳಿಯಾರರ ಬಗ್ಗೆ ವಿಜಯೇಂದ್ರ ಕುಮಾರ್ ಅವರ ತಕರಾರು ರೂಪದ ಸಲಹೆ ಸರಿಯಾಗಿದೆಯೆಂದು ನಾನು ಭಾವಿಸುತ್ತೇನೆ. ದ್ವಿಭಾಷಾ (ಕನ್ನಡ-ಇಂಗ್ಲಿಷ್) ಸಾಹಿತ್ಯವನ್ನು ಆಳಕ್ಕಿಳಿಸಿಕೊಂಡಿರುವ ಹುಳಿಯಾರರು ಕಾವ್ಯದ ಅನುವಾದ ಕಾರ್ಯಕ್ಕೆ ಪೂರ್ಣವಾಗಿಯಲ್ಲದಿದ್ದರೂ, ವಿಜಯೇಂದ್ರ ಕುಮಾರ್ ಅವರು ಹೇಳಿರುವ ಹಾಗೆ, ಇನ್ನಷ್ಟು ತೊಡಗಿಸಿಕೊಳ್ಳಬಹುದು. \r\n\r\nನಟರಾಜ್ ಸರ್, ಬರೀ ನಿಮ್ಮ ಗ್ರಹಿಕೆಗಾಗಿ ಅನುವಾದಿಸಿಕೊಳ್ಳುವ ಬದಲು, ಸಾಹಿತ್ಯಾಸಕ್ತ ಸಹೃದಯಿಗಳಿಗಾಗಿಯೂ ಅನುವಾದಿಸಿ. ಕೊನೆಯ ಪಕ್ಷ, ನಿಮಗೆ ಅಗಾಧ-ಅದ್ಭುತವೆನಿಸುವ ಆಂಗ್ಲ ಕಾವ್ಯ-ಸಾಹಿತ್ಯವನ್ನಾದರೂ ಅನುವಾದಿಸಿದರೆ ಎಲ್ಲ ಸಾಹಿತ್ಯಾಸಕ್ತ ಕನ್ನಡಿಗರಿಗೆ ತುಂಬಾ ಅನುಕೂಲವಾಗುತ್ತದೆ. ಒಮ್ಮೆ ಈ ಬಗ್ಗೆ ಚಿಂತಿಸಿ, ಕೃಪೆಯಿಟ್ಟು.
| Nataraj Huliyar Replies
Sure.Will do so for my dear friends Niranjan and Vijayendra. It is a delight to take such tasks
| Dr.Prabhakar
Superbly crafted!
Add Comment