ಪಠ್ಯ ಪುಸ್ತಕಗಳು ಮತ್ತು ಅರಳುವ ಮನಗಳು

ಸಿದ್ಧರಾಮಯ್ಯನವರ ನೇತೃತ್ವದ ಸರ್ಕಾರ ಶಾಲಾಪಠ್ಯಗಳ ಪರಿಷ್ಕರಣೆಗೆ ಹೊಸ ಸಮಿತಿಯೊಂದನ್ನು ನೇಮಿಸಿದೆ. ಮಕ್ಕಳ ಮನಸ್ಸನ್ನು ಹದಗೊಳಿಸುವ, ಮುದಗೊಳಿಸುವ ಪ್ರಾಥಮಿಕ ಕೆಲಸವನ್ನು ಪಠ್ಯಗಳು ಸದಾ ಮಾಡುತ್ತಿರಬೇಕು ಹಾಗೂ  ಎಳೆಯರನ್ನು ಕೊಲ್ಲುವ ವಿಷಮದ್ದುಗಳಾಗುವ ಪಠ್ಯಗಳನ್ನು ಹೊರಗಿಡಬೇಕು ಎಂಬ ಖಚಿತ ಅರಿವು ಪಠ್ಯಪುಸ್ತಕ ಸಮಿತಿಯ ತಜ್ಞ ಮಹಿಳೆಯರು, ಮಹನೀಯರಿಗೆ ಇದೆಯೆಂದು ನಿರೀಕ್ಷಿಸೋಣ. ಈ ಹಿನ್ನೆಲೆಯಲ್ಲಿ ಈ ಹಿಂದೆ ನನ್ನ ‘ಪ್ರಜಾವಾಣಿ’ ಅಂಕಣವೊಂದರಲ್ಲಿ ಬರೆದ ಟಿಪ್ಪಣಿಗಳನ್ನು ಮರು ವಿಸ್ತರಿಸಿ, ಅನಂತರ ಪಠ್ಯಪುಸ್ತಕಗಳನ್ನು ಕುರಿತ ಈ ಕಾಲದ ‘ಕಲೆಕ್ಟೀವ್ ವಿಸ್ಡಂ’ -ಸಾಮೂಹಿಕ ಜ್ಞಾನ- ಒಗ್ಗೂಡಿಸಲು ಪ್ರಯತ್ನಿಸುವೆ.

ಕಳೆದೆರಡು ವರ್ಷಗಳಲ್ಲಿ ಪಠ್ಯಪುಸ್ತಕಗಳಲ್ಲಿ ವಿಕೃತ ಸೇರ್ಪಡೆಗಳನ್ನು ಮಾಡಿದ ದುಷ್ಟರನ್ನು ಮತದಾರರು ಕಸದ ಬುಟ್ಟಿಗೆ ಎಸೆದಿರುವುದು ಎಲ್ಲ ಆರೋಗ್ಯವಂತ ಮನಸ್ಸುಗಳಲ್ಲಿ ನೆಮ್ಮದಿಯ ಭಾವ ತಂದಿದೆ. ಈ ದುಷ್ಟರು ಪಠ್ಯಪುಸ್ತಕಗಳನ್ನು ಕಸದ ತೊಟ್ಟಿಗಳನ್ನಾಗಿ ಮಾಡುತ್ತಿದ್ದಾಗ, ಹಲವಾರು ವರ್ಷ ಪಾಠ ಮಾಡಿರುವ ಮೇಡಂ ಒಬ್ಬರು ರೇಗಿ ಹೇಳಿದ್ದರು: ‘ಈ ಜನ ಕ್ಲಾಸ್ ರೂಮುಗಳನ್ನಾಗಲೀ, ಟೀಚರುಗಳನ್ನಾಗಲೀ, ಮಕ್ಕಳನ್ನಾಗಲೀ ಸರಿಯಾಗಿ ನೋಡಿಯೇ ಇಲ್ಲ. ತರಗತಿಗಳಲ್ಲಿ ಯಾವ ಪಾಠ ಹೇಗೆ ಬೆಳೆಯುತ್ತದೆ, ಹೇಗೆ ತಲುಪುತ್ತದೆ ಎಂಬ ಅಂದಾಜೇ ಈ ಥರ ಪಠ್ಯಪುಸ್ತಕ ಮಾಡುವವರಿಗೆ ಇಲ್ಲ.’

ಈ ಮಾತನ್ನು ಹಲವು ತಲೆಮಾರುಗಳ ಗೆಳೆಯ ಗೆಳತಿಯರಿಗೆ ಹೇಳಿದಾಗ, ಅವರಲ್ಲನೇಕರು ತಂತಮ್ಮ ಶಾಲಾ ಪಾಠಗಳನ್ನು ನೆನಸಿಕೊಳ್ಳತೊಡಗಿದರು. ಕೆಲವು ಕತೆ, ಕವಿತೆಗಳು ವಿದ್ಯಾರ್ಥಿ ದೆಸೆಯಿಂದಲೂ ತಮ್ಮೊಳಗೆ ಬೆಳೆದು, ತಾವು ದೊಡ್ಡವರಾದ ಮೇಲೆ ಅವು ಮತ್ತಷ್ಟು ಬೆಳೆದ ರೀತಿಯನ್ನು ಕೆಲವು ಮೇಷ್ಟ್ರು, ಮೇಡಂಗಳು ಕಂಡುಕೊಂಡಿದ್ದರು. ಅವರೆಲ್ಲ ಎಲ್ಲ ಕಾಲಕ್ಕೂ ಸ್ಫೂರ್ತಿ ನೀಡುವ ಪಾಠಗಳ ಮೆಲುಕು ಹಾಕತೊಡಗಿದರು. ಹಲವು ತಲೆಮಾರುಗಳಿಗೆ ಗೋವಿನ ಹಾಡಿನ ಲಯ, ನೀತಿಸಂದೇಶಗಳು  ನೆನಪಿನಲ್ಲಿದ್ದವು. ಗೋವಿನ ಹಾಡಿನ ಅಪ್ಪಟ ಕನ್ನಡ ಛಂದಸ್ಸು ಎಳೆಯ ಮನಸ್ಸುಗಳಲ್ಲಿ ಬೆಳೆದು, ಉಳಿದು ಕೋಟಿಗಟ್ಟಲೆ ಕನ್ನಡ ಮಕ್ಕಳಲ್ಲಿ ಕಾವ್ಯದ ಲಯಗಳು ಮೊಳೆತಿವೆ; ಕವಿತೆ ಬರೆಯುವ ಆಸೆ, ಕಾತರಗಳು ಮಕ್ಕಳ ಮನಸ್ಸಿನಲ್ಲಿ ಹುಟ್ಟಿವೆ. ‘ಬಣ್ಣದ ತಗಡಿನ ತುತ್ತೂರಿ, ಕಾಸಿಗೆ ಕೊಂಡನು ಕಸ್ತೂರಿ’ ಪದ್ಯ ಇತ್ತೀಚಿನ ಮಗುವಿನಲ್ಲೂ ಪ್ರಾಸದ ಮೋಹ ಹುಟ್ಟಿಸುತ್ತದೆ. ಹುತ್ತರಿ ಹಾಡಿನ ‘ಎಲ್ಲಿ ಭೂರಮೆ ದೇವಸನ್ನಿಧಿ ಬಯಸಿ ಬಿಮ್ಮನೆ ಬಂದಳೋ ಅಲ್ಲೆ ಕೊಡಗರ ನಾಡಲಾ’ ಗೇಯತೆ ದಶಕಗಳುದ್ದಕ್ಕೂ ಕನ್ನಡ ಮಕ್ಕಳ ಕಿವಿಯಲ್ಲಿ ಮರುದನಿಸುತ್ತಲೇ ಬಂದಿದೆ. ಇವೆಲ್ಲವೂ ಎಳವೆಯಲ್ಲಿ ನಾನು ಪದ್ಯ ಬರೆಯಲು ಶುರು ಮಾಡಿದ ಕಾಲದಿಂದಲೂ ನನ್ನೊಳಗೆ ಬೆಳೆಯುತ್ತಾ ಬಂದಿವೆ. 

ಶಾಲೆಯಲ್ಲಿ ತಾವು ಓದಿದ ಪಠ್ಯಗಳನ್ನು ಮುಂದೊಮ್ಮೆ ತಾವೇ ಪಾಠ ಮಾಡಿದವರಿಗೆ ಕೆಲವು ಪಠ್ಯಗಳು ಎಲ್ಲ ಕಾಲಕ್ಕೂ ಬೇಕಾದಂಥವು ಎಂಬುದು ಸ್ಪಷ್ಟವಾಗಿ ಕಂಡಿದೆ. ಗೆಳೆಯ ಗುರುಮೂರ್ತಿ ಕೊಟಿಗೆಮನೆ ಚಿಕ್ಕನಾಯಕನಹಳ್ಳಿಯಲ್ಲಿ ನಾಲ್ಕನೆಯ ಕ್ಲಾಸಿನಲ್ಲಿದ್ದಾಗ, ‘ಮೂಡುವನು ರವಿ ಮೂಡುವನು, ಕತ್ತಲೊಡನೆ ಜಗಳಾಡುವನು’ ಬಣ್ಣನೆಗೆ ಬೆರಗಾಗಿದ್ದ. ಮುಂದೆ ಗುರುಮೂರ್ತಿ ಅದೇ ಊರಿನಲ್ಲಿ ಮೇಷ್ಟರಾದಾಗ, ಕತ್ತಲೊಡನೆ ಸೂರ್ಯ ಜಗಳಾಡುವ ಚಿತ್ರ ತನ್ನ ವಿದ್ಯಾರ್ಥಿ, ವಿದ್ಯಾರ್ಥಿನಿಯರಲ್ಲೂ ಅಂಥದೇ ಪುಳಕ ಹುಟ್ಟಿಸಿದ್ದನ್ನು ಕಂಡ. ನನಗೆ ಐದನೇ ತರಗತಿಯಲ್ಲಿ ‘ಸಂಡೇ’ ‘ಮಂಡೇ’ಗಳನ್ನು ಹೇಳಿಕೊಟ್ಟಿದ್ದ  ‘ಸಾಲೊಮನ್ ಗ್ರಂಡಿ, ಬಾರ್ನ್ ಆನ್ ಎ ಮಂಡೇ’ ಇಂಗ್ಲಿಷ್ ಶಿಶುಗೀತವನ್ನು ಗುರುಮೂರ್ತಿ ಕೂಡ ಹೇಳಿಕೊಟ್ಟ ಪರಿಗೆ ಮಕ್ಕಳು ಅರಳಿದ್ದಾರೆ; ಗುರುಮೂರ್ತಿಯ ತರಗತಿಗಳಲ್ಲಿ ‘ಮಾಲ್ಗುಡಿ ಡೇಸ್’ನ ಸ್ವಾಮಿಯ ಗೊಂದಲ, ಸಂಭ್ರಮಗಳು ತಮ್ಮದೇ ಎಂಬಂತೆ ಮಕ್ಕಳು ಮಿಡಿದಿದ್ದಾರೆ; ಹಿಮಾಲಯ ಕುರಿತ ಪಾಠವೊಂದು ಹಳೆಯ ಕಗ್ಗಗಳನ್ನೆಲ್ಲ ಬದಿಗೆ ಸರಿಸಿ, ವಾಸ್ತವದ ಹಿಮಾಲಯವನ್ನು ಕಾಣಿಸಿದಾಗ ಹೊಸ ಲೋಕ ಕಂಡಂತೆ ಪುಳಕಗೊಂಡಿದ್ದಾರೆ. ಈ ಅನುಭವ ಲಕ್ಷಾಂತರ ಶಾಲಾ ಟೀಚರುಗಳಿಗೆ ಆಗಿರಬಲ್ಲದು. 

ಆದ್ದರಿಂದಲೇ ಪಠ್ಯಪುಸ್ತಕ ಮಾಡುವವರಿಗೆ ಮಕ್ಕಳ ಮನೋವಿಜ್ಞಾನ, ಭಾಷೆ, ಸಾಹಿತ್ಯ, ಹಾಗೂ ವಿವಿಧ ಜ್ಞಾನಕ್ಷೇತ್ರಗಳ ಆಳವಾದ ಜ್ಞಾನ ಇರಲೇಬೇಕು; ಅಥವಾ ಇವೆಲ್ಲ ವಲಯಗಳ ತಜ್ಞರ ಒಡನಾಟವಿರಬೇಕು. ಪಠ್ಯಗಳ ಉತ್ತಮ ಪರಿಣಾಮಗಳ ಬಗ್ಗೆ ಸದಾ ಗಮನವಿರಬೇಕು. ಕ್ಷುಲ್ಲಕ ಉದ್ದೇಶಗಳಿಗಾಗಿ ತಮ್ಮ ತಲೆಯ ಕಸವನ್ನು ಮುಗ್ಧ ಮಕ್ಕಳ ತಲೆಗೆ ತುಂಬಬಾರದು. ಉತ್ತಮ ಭಾಷೆ, ಉತ್ತಮ ಬರವಣಿಗೆಗಳು ಟೀಚರುಗಳ ಹಾಗೂ ಮಕ್ಕಳ ಮನಸ್ಸನ್ನು ತೆರೆಯುತ್ತವೆ. ಕಣ್ಣು, ಕಿವಿ, ಬುದ್ಧಿಗಳನ್ನು ಚುರುಕಾಗಿಸುತ್ತವೆ. ಒಂದು ದಿನದ ಆರಂಭದ ತರಗತಿಗಳಲ್ಲಿ ಲವಲವಿಕೆ ತುಂಬುವ ಕತೆ, ಕವಿತೆಗಳು, ಹುಮ್ಮಸ್ಸು ತುಂಬುವ ಚರಿತ್ರೆಯ ಪಾಠಗಳಿದ್ದರೆ, ಅವು ನಂತರದ ಪಿರಿಯಡ್ಡುಗಳಲ್ಲಿ ಕಠಿಣವಾದ ವಿಜ್ಞಾನ, ಗಣಿತ ಪಾಠಗಳಿಗೆ ಮಕ್ಕಳು ಸಜ್ಜಾಗುವಂತೆ ಮಾಡಬಲ್ಲವು. 

ಪಠ್ಯಪುಸ್ತಕಗಳು ಮಕ್ಕಳ ಮನಸ್ಸನ್ನು, ಅಭಿರುಚಿಯನ್ನು ಸದಾ ತಿದ್ದುತ್ತಿರಬೇಕು. ಅನೇಕ ಬಗೆಯ ಭೇದಭಾವಗಳಿಗೆ ‘ಮನೆಯೆ ಮೊದಲ ಪಾಠಶಾಲೆ’ಯಾಗಿ, ಮನೆಯ ಹಿರಿಯರಿಂದಾಗಿಯೇ ಮಕ್ಕಳಲ್ಲಿ ಮೊಳೆಯುವ ವಿಕಾರಗಳನ್ನು ತೊಡೆಯುವಂತಿರಬೇಕು. ಆರನೆಯ ತರಗತಿಯಲ್ಲಿ ಓದಿದ ಭಾರತೀಪ್ರಿಯರ ‘ಮೋಚಿ’ ಕತೆ ನನ್ನಂಥ ಹಲವರಲ್ಲಿ ಜಾತಿ ಮೀರಿದ ಸಂಬಂಧಗಳ ಬಗ್ಗೆ ಅರಿವು ಮೂಡಿಸಿದ್ದು ನೆನಪಾಗುತ್ತದೆ. ‘ಪುರದ ಪುಣ್ಯಂ ಪುರುಷ ರೂಪಿಂದೆ ಪೋಗುತಿದೆ’ ಎಂಬ ರಾಘವಾಂಕನ ಮಧ್ಯಕಾಲೀನ ಕನ್ನಡ ಬಣ್ಣನೆ ಈ ಕಾಲದ ಮಕ್ಕಳಿಗೂ ಪ್ರಿಯವಾಗಿದೆಯಲ್ಲ! ಹತ್ತನೆಯ ತರಗತಿಯಲ್ಲಿ ನಮ್ಮ ಕನ್ನಡ ಮೇಷ್ಟ್ರು ರಾಮಯ್ಯನವರು ಬಸವಣ್ಣನ ವಚನದ ಪಾಠ ಹೇಳುತ್ತಾ, ‘ಕೂಡಲ ಸಂಗಮದೇವಾ, ನಿನ್ನ ಚರಣಕಮಲದೊಳಗಾನು ತುಂಬಿ’ ಎಂದವರು, ಚಣ ನಿಲ್ಲಿಸಿ, ‘ತುಂಬಿ’ ಎಂಬ ಪದಕ್ಕೆ ‘ದುಂಬಿ’ ಹಾಗೂ ‘ತುಂಬುವುದು’ ಎಂಬ ಎರಡು ಅರ್ಥಗಳನ್ನು ಹೇಳಿದರು; ಈ ಶ್ಲೇಷಾಲಂಕಾರ ಕಂಡು ನಾನು ಅಚ್ಚರಿಗೊಂಡೆ. ಇಂಗ್ಲಿಷಿನಲ್ಲಿ ಇದನ್ನು PUN ಎನ್ನುತ್ತಾರೆ. ಅಂದಿನಿಂದ ನನ್ನೊಳಗೆ ಕಾವ್ಯದ ಮಾಂತ್ರಿಕ ಸಾಧ್ಯತೆಗಳ ಹುಡುಕಾಟ ಶುರುವಾಯಿತು. ಹಾಡುವ ಮೇಡಂ, ಮೇಷ್ಟ್ರುಗಳಂತೂ ಕವಿತೆಗಳನ್ನು ಕಾಯಮ್ಮಾಗಿ ಮಕ್ಕಳ ನೆನಪಿನಲ್ಲಿ ಉಳಿಸಿದ್ದಾರೆ. ‘ಬಾರಿಸು ಕನ್ನಡ ಡಿಂಡಿಮವ’ ಓದಿ, ಹಾಡಿ, ಕುಣಿದ ಮಕ್ಕಳು, ಮೇಷ್ಟ್ರುಗಳಿದ್ದಾರೆ. ‘ಡೊಂಕು ಬಾಲದ ನಾಯಕರೇ’ ಎಂಬ ದಾಸರ ಪದ ಕೇಳಿ ಮಕ್ಕಳು ಬಿದ್ದು ಬಿದ್ದು ನಕ್ಕಿದ್ದಾರೆ.

ಹಾಗೆಯೇ, ವಿಜಯನಗರ ಸಾಮ್ರಾಜ್ಯದ ಚರಿತ್ರೆ ಹಾಗೂ ಟಿಪ್ಪೂಸುಲ್ತಾನ್ ಚರಿತ್ರೆ ಎರಡನ್ನೂ ಮಕ್ಕಳು ಹಲವು ದಶಕಗಳಿಂದ ಇಷ್ಟಪಡುತ್ತಾ ಬಂದಿದ್ದಾರೆ. ಚರಿತ್ರೆಯ ಪಠ್ಯದ ಮಾಹಿತಿಗಳು ಶ್ರೇಷ್ಠ ಇತಿಹಾಸತಜ್ಞರಿಂದ ಸಾಧಾರವೆಂದು ಸಿದ್ಧವಾಗಿರಬೇಕು; ಅಧಿಕೃತವಾಗಿರಬೇಕು. ಚರಿತ್ರೆಯ ಹೆಸರಿನಲ್ಲಿ ಅಸಂಬದ್ಧವಾದ ಹುಸಿ ಅಂಶಗಳನ್ನು ತುರುಕಿದರೆ, ಕರ್ನಾಟಕದ ಮಕ್ಕಳು ಸಾಮಾನ್ಯ ಸ್ಪರ್ಧಾತ್ಮಕ ಪರೀಕ್ಷೆಗಳಿಂದ ಹಿಡಿದು ಕೆಎಎಸ್, ಐಎಎಸ್ ಪರೀಕ್ಷೆಗಳವರೆಗೂ ಅಂಕಗಳನ್ನು ಕಳೆದುಕೊಳ್ಳುತ್ತಾರೆ. ವಿಜ್ಞಾನ ಪಠ್ಯದಂತೆಯೇ ಎಲ್ಲ ಪಠ್ಯಗಳಲ್ಲೂ ಸೇರಿಸಬೇಕಾದ ಹೊಸ ವಿವರಗಳು ಅಧಿಕೃತ ಸಂಶೋಧನೆಗಳನ್ನಷ್ಟೇ ಆಧರಿಸಿರಬೇಕು; ಹುಸಿ ಊಹಾಪೋಹಗಳನ್ನಲ್ಲ. 

ಜೊತೆಗೆ ಶಿಕ್ಷಣ ಇಲಾಖೆಯಲ್ಲಿರುವ ಪಠ್ಯಪುಸ್ತಕ ಸಿಬ್ಬಂದಿ ಪ್ರತಿ ವರ್ಷವೂ ಪಠ್ಯಗಳನ್ನು ಕುರಿತು ಬೋಧಕ, ಬೋಧಕಿಯರ, ಮಕ್ಕಳ, ಪೋಷಕರ ಸ್ವತಂತ್ರ ಅಭಿಪ್ರಾಯಗಳನ್ನು ತಪ್ಪದೆ ದಾಖಲು ಮಾಡುತ್ತಿರಬೇಕು. ಹಿಂದೆ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿದ್ದ ಹೊಣೆಯರಿತ ಅಧಿಕಾರಿಗಳು ಈ ಕೆಲಸವನ್ನು ಅಪಾರ ಶ್ರದ್ಧೆಯಿಂದ ಮಾಡುತ್ತಿದ್ದುದು ನೆನಪಿದೆ. ಈ ಅಧಿಕಾರಿಗಳು ಎಲ್ಲರ ಅಭಿಪ್ರಾಯಗಳನ್ನು ಒಗ್ಗೂಡಿಸಿ ತಜ್ಞರ ಸಮಿತಿಯ ಮುಂದಿಟ್ಟು ಪಠ್ಯಗಳನ್ನು ಮರುಪರಿಶೀಲಿಸಲು ಅನುವು ಮಾಡಿಕೊಡುತ್ತಿದ್ದರು. ಹತ್ತು ವರ್ಷಗಳ ಕೆಳಗೆ ಮೊದಲನೆಯ ಪಿಯುಸಿ ಓದುತ್ತಿದ್ದ ಜಾಣ ಹುಡುಗಿಯೊಬ್ಬಳು ‘ಪ್ರಥಮ ಪಿಯುಸಿ ಪಠ್ಯ ಹದಿ ಹರೆಯದ ಮಕ್ಕಳಲ್ಲಿ ಉತ್ಸಾಹ ಹುಟ್ಟಿಸುವಂತಿರಲಿಲ್ಲ’ ಎಂದು ದೂರಿದಳು; ಆಗ ಪಠ್ಯಪುಸ್ತಕದ ಸಲಹಾ  ಸಮಿತಿಯಲ್ಲಿದ್ದ ನಾನು, ಎರಡನೆಯ ಪಿಯುಸಿಯ ಇಂಗ್ಲಿಷ್ ಪಠ್ಯಕ್ಕೆ ಶೇಕ್‌ಸ್ಪಿಯರನ ‘ರೋಮಿಯೋ ಅ್ಯಂಡ್ ಜೂಲಿಯಟ್’ ನಾಟಕದ ಪ್ರೇಮಿಗಳ ಲವಲವಿಕೆಯ ವರ್ಣನೆಯ ಭಾಗವನ್ನೂ, ಪುಸ್ತಕಗಳ ಮಹತ್ವ ಕುರಿತು ಅರ್ಜೆಂಟೀನಾದ ಪ್ರಖ್ಯಾತ ಲೇಖಕ ಬೋರ್ಹೆಸ್ ಸಂದರ್ಶನವನ್ನೂ ಸೇರಿಸಲು ಪಠ್ಯಪುಸ್ತಕ ಸಮಿತಿಗೆ ಸಲಹೆ ಮಾಡಿದೆ. ಅವು ಇಂದಿಗೂ ಹುಡುಗ, ಹುಡುಗಿಯರ ಪ್ರಿಯ ಪಠ್ಯಗಳಾಗಿವೆ ಎಂದು ಕೇಳಿರುವೆ. ಆಯಾ ವಯಸ್ಸಿನ ಮಕ್ಕಳು ತಮ್ಮನ್ನು ಗುರುತಿಸಿಕೊಳ್ಳಬಲ್ಲ, ಕನ್ನಡಿಯಂತೆ ತಮ್ಮನ್ನು ನೋಡಿಕೊಳ್ಳಬಲ್ಲ, ಆಯಾ ವಯೋಮಾನಕ್ಕೆ ಒಗ್ಗುವ ಕೆಲವಾದರೂ ಪಾಠಗಳು ಪಠ್ಯಪುಸ್ತಕದಲ್ಲಿದ್ದಾಗ ಕ್ಲಾಸುಗಳಲ್ಲಿ ಜೀವಂತ ಸ್ಪಂದನವಿರುತ್ತದೆ; ಇದು ಪಿಯುಸಿ, ಡಿಗ್ರಿ, ಸ್ನಾತಕೋತ್ತರದವರೆಗೂ ಟೀಚ್ ಮಾಡುತ್ತಾ, ಪಠ್ಯಪುಸ್ತಕ ರೂಪಿಸುವ ಸಮಿತಿಗಳಲ್ಲಿ ಕೆಲಸ ಮಾಡುತ್ತಾ ಬಂದಿರುವ ನನ್ನ ಅನುದಿನದ ಅನುಭವ. 

ಅದೆಲ್ಲದರ ಜೊತೆಗೇ ಪಠ್ಯಪುಸ್ತಕಗಳು ಮಕ್ಕಳ ಮನೋಲೋಕಕ್ಕೆ ಆರೋಗ್ಯ ತುಂಬುವ ಹೊಸ ಹೊಸ ಜ್ಞಾನವನ್ನು ಸೇರಿಸುತ್ತಿರಬೇಕು ಎಂಬ ದೃಷ್ಟಿಯಿಂದ ಪಠ್ಯಪುಸ್ತಕ ರೂಪಿಸುವವರು ಸದಾ ನೆನಪಿಡಬೇಕಾದ ಕೆಲವು ಅಂಶಗಳನ್ನು ಪಟ್ಟಿ ಮಾಡಬಹುದು: 

1. ಪಠ್ಯಗಳು ಪಾಠ ಮಾಡುವವರಲ್ಲೂ, ಮಕ್ಕಳಲ್ಲೂ ನವಚೈತನ್ಯ ಹುಟ್ಟಿಸುತ್ತಿರಬೇಕು. 
2. ಬೋಧನೆಯ ಸಂದರ್ಭದಲ್ಲಿ ಒಳ್ಳೊಳ್ಳೆಯ ವ್ಯಾಖ್ಯಾನಗಳನ್ನು ತಂತಾವೇ ಚಿಮ್ಮಿಸಬಲ್ಲ ಪಠ್ಯಗಳಿರಬೇಕು. 
3. ಕೇವಲ ಜಡವಾದ ಹಳೆಯ ನೀತಿ ಹೇಳುವುದಷ್ಟೇ ಪಠ್ಯಗಳ ಕೆಲಸವಲ್ಲ; ಅವು ಹಲ ಬಗೆಯ ಸತ್ಯಗಳನ್ನು ಸೂಚಿಸುವಂತಿರಬೇಕು.
4. ಕನ್ನಡವಾಗಲಿ, ಇಂಗ್ಲಿಷಾಗಲಿ, ಭಾಷೆಯನ್ನು ಚೆನ್ನಾಗಿ, ದಕ್ಷವಾಗಿ, ಸೃಜನಶೀಲವಾಗಿ ಬಳಸಿರುವ ಕೃತಿಗಳು ಪಠ್ಯದಲ್ಲಿರಬೇಕು. 
5. ಪಠ್ಯಗಳು ವಿದ್ಯಾರ್ಥಿ, ವಿದ್ಯಾರ್ಥಿನಿಯರಲ್ಲಿ ಓದುವ, ಬರೆಯುವ ಆಸೆ, ಸಾಧ್ಯತೆಗಳನ್ನು ಮೂಡಿಸುವಂತಿರಬೇಕು. ಪದ್ಯ, ಗದ್ಯಗಳ ಅನುಕರಣೆಯನ್ನಾದರೂ ಮಾಡಿ ಮಕ್ಕಳು ಬರವಣಿಗೆ ಕಲಿಯುವಂತಿಬೇಕು. 
6. ತರಗತಿಗಳಲ್ಲಿ ಎರಡು, ಮೂರು ಭಾಷೆಗಳನ್ನು ಬಲ್ಲ ಮಕ್ಕಳಿದ್ದರೆ ಪಠ್ಯಗಳನ್ನು ಅನುವಾದಿಸಲು ಆಹ್ವಾನಿಸುವಂತಿರಬೇಕು. 
7. ಮಕ್ಕಳು ಮನೆಗೆ ಹೋದ ಮೇಲೆ ಮನೆಮಂದಿಯ ಜೊತೆ ಹಂಚಿಕೊಳ್ಳುವಂಥ ಕುತೂಹಲಕರ, ಆರೋಗ್ಯಕರ ಸಂಗತಿಗಳು ಪಠ್ಯದಲ್ಲಿರಬೇಕು. 
8. ಮೈ-ಮನಗಳ ಆರೋಗ್ಯಕ್ಕೆ ಸಂಬಂಧಿಸಿದ ಪಾಠಗಳಿರಬೇಕು. 
9. ಮಕ್ಕಳಲ್ಲಿ ವಿಮರ್ಶಾ ಪ್ರಜ್ಞೆಯನ್ನು, ಸಮಾನತೆಯ ಪ್ರಜ್ಞೆಯನ್ನು, ಉದಾರ ಮನೋಭಾವವನ್ನು ಬೆಳೆಸುವ ಪಠ್ಯಗಳಿರಬೇಕು.

10. ಮಕ್ಕಳು ತಮ್ಮ ನಿತ್ಯದ ನಡೆ ನುಡಿಗಳನ್ನು ಪರೀಕ್ಷೆ ಮಾಡಿಕೊಳ್ಳುವಂಥ ಪಠ್ಯಗಳಾಗಿರಬೇಕು. 

ಇವೆಲ್ಲ ಕೆಲವು ಉದಾಹರಣೆಗಳಷ್ಟೇ. ಇಂಥ ಇನ್ನೂ ಅನೇಕ ಉತ್ತಮ ಉದ್ದೇಶ, ಗುರಿಗಳನ್ನು ತಲುಪಬೇಕೆಂದರೆ, ಆಯಾ ಕ್ಷೇತ್ರಗಳಲ್ಲಿ ಹಲವು ವರ್ಷ ಕೆಲಸ ಮಾಡಿರುವ  ಆರೋಗ್ಯಕರ ಮನಸ್ಸಿನ ವಿಷಯತಜ್ಞರು ಪಠ್ಯಪುಸ್ತಕಗಳನ್ನು ರೂಪಿಸಬೇಕು. ಸಮಿತಿಗಳಲ್ಲಿ ವೈವಿಧ್ಯಮಯ ಸಾಮಾಜಿಕ ವರ್ಗಗಳನ್ನು ಪ್ರತಿನಿಧಿಸುವ ವಿಷಯತಜ್ಞ-ತಜ್ಞೆಯರಿರಬೇಕು. ಎಲ್ಲ ಪಠ್ಯಗಳಲ್ಲೂ ಹಿರಿಯರ ಶ್ರೇಷ್ಠ ಕೃತಿಗಳ ಭಾಗಗಳಿರಲೇಬೇಕು; ಹೊಸ ತಲೆಮಾರುಗಳ ಉತ್ತಮ ಬರಹಗಳಿರಬೇಕು. ‘ಪ್ರಗತಿಪರ’ವಾಗಿದೆ ಎಂಬ ಒಂದೇ ಕಾರಣದಿಂದ ಕಳಪೆ ಪಠ್ಯಗಳನ್ನು ಸೇರಿಸಬಾರದು! ಬಹುತೇಕ ಕರ್ನಾಟಕದ ಮಕ್ಕಳು, ಅದರಲ್ಲೂ ಬಡ ಮಕ್ಕಳು ಓದುತ್ತಿರುವ ಸರ್ಕಾರಿ, ಅನುದಾನಿತ ಶಾಲೆಗಳ ಪಠ್ಯಗಳಲ್ಲಿ  ಮಾತ್ರ ಬಳಕೆಯಾಗುವ ಈ ಪಠ್ಯಗಳಿಗೆ ಹಲವು ತಲೆಮಾರುಗಳನ್ನು ಬೆಳೆಸುವ  ದೊಡ್ಡ ಜವಾಬ್ದಾರಿಯಿದೆ. ಪಠ್ಯಪುಸ್ತಕಗಳು ಸಂಕುಚಿತತೆ ಮೀರುವ, ವಿಶಾಲ ಮನಸ್ಸನ್ನು ಬೆಳೆಸುವ ತಾಣಗಳಾಗಬೇಕು. 

ಕನ್ನಡ ಮಕ್ಕಳ ಇಂಥ ಜೀವನ್ಮರಣದ ಪ್ರಶ್ನೆಗಳನ್ನು ಕುರಿತು ಗಂಭೀರವಾಗಿ ಯೋಚಿಸಬೇಕಾಗಿರುವುದು ಯಾವುದೇ ಜವಾಬ್ದಾರಿಯುಳ್ಳ ಸರ್ಕಾರದ ಆದ್ಯ ಕರ್ತವ್ಯ. ಶಾಸಕರು, ಮಂತ್ರಿಗಳು, ಶಿಕ್ಷಣ ಮಂತ್ರಿಗಳು ತಾವು ಶಾಲೆಗಳಲ್ಲಿ ಓದಿರಬಹುದಾದ ಒಳ್ಳೆಯ ಪಠ್ಯಗಳನ್ನಾದರೂ ನೆನೆದು, ಆತ್ಮಾವಲೋಕನ ಮಾಡಿಕೊಳ್ಳುತ್ತಿರಬೇಕಾಗುತ್ತದೆ. ಕೊನೇ ಪಕ್ಷ ನಮ್ಮ ತಜ್ಞರು, ಅಧಿಕಾರಿಗಳು ಈಗಾಗಲೇ ಟೀಚಿಂಗಿನಲ್ಲಿ ತೊಡಗಿರುವ ಉತ್ತಮ ಮೇಡಂ, ಮೇಷ್ಟ್ರುಗಳು, ಫಲಾನುಭವಿ ಮಕ್ಕಳು ಎಲ್ಲರ ಜೊತೆ ಅಷ್ಟಿಷ್ಟಾದರೂ ಸಂವಾದ ನಡೆಸಿ ಉತ್ತಮ ಪಠ್ಯಗಳನ್ನು ರೂಪಿಸಿದರೆ ನಿಜಕ್ಕೂ ಆರೋಗ್ಯವಂತ ತಲೆಮಾರುಗಳನ್ನು ರೂಪಿಸಬಹುದು.

ಈ ಹಿನ್ನೆಲೆಯಲ್ಲಿ, ಈ ಬ್ಲಾಗಿನ ಓದುಗರು ಇಲ್ಲಿನ ಕಾಮೆಂಟ್ಸ್ ವಿಭಾಗದಲ್ಲಾಗಲೀ ಅಥವಾ ತಂತಮ್ಮ ಜಾಲತಾಣಗಳಲ್ಲಾಗಲೀ ತಾವು ಓದಿದ ಉತ್ತಮ ಪಠ್ಯಗಳನ್ನು ಹೆಸರಿಸಬಹುದು; ವಿವರಿಸಬಹುದು; ಉಲ್ಲೇಖಿಸಬಹುದು. ನನಗೂ ಬರೆಯಬಹುದು. ಇವನ್ನೆಲ್ಲ ಒಗ್ಗೂಡಿಸುವುದರ ಮೂಲಕವೂ ಪಠ್ಯ ಪುಸ್ತಕಗಳನ್ನು ಕುರಿತಂತೆ ಒಂದು ಬಗೆಯ ಕನ್ನಡ ‘ಕಲೆಕ್ಟೀವ್ ವಿಸ್ಡಂ’ ರೂಪಿಸಬಹುದು. ಈ ಬ್ಲಾಗಿನ ಮುಖ್ಯ ಉದ್ದೇಶಗಳಲ್ಲಿ ಇಂಥ ‘ಕಲೆಕ್ಟೀವ್ ವಿಸ್ಡಂ’ ರೂಪಿಸುವುದೂ ಒಂದು ಎಂಬುದನ್ನು ಮತ್ತೆ ನೆನಪಿಸುವೆ. 
 

ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com 

Share on:


Recent Posts

Latest Blogs



Kamakasturibana

YouTube



Comments

7 Comments



| Very informative

Good decision 


| Gangadhara BM

ನಮಸ್ತೆ ಸರ್.

ತಮ್ಮ ಈ ಲೇಖನ ಓದಿದಾಗ ನನ್ನ ಮೊದಲ ಐದು ವರ್ಷಗಳ ಸರ್ಕಾರಿ ಪ್ರಾಥಮಿಕ ಶಾಲೆ ಪಠ್ಯ ಪುಸ್ತಕಗಳು ನೆಪಿಗೆ ಬಂದವು. ಐದನೆಯ ತರಗತಿಯ ಎಲ್ಲಾ ವಿಷಯಗಳನ್ನು ಬೋಧಿಸಬೇಕಿದ್ದ ಸನ್ನಿವೇಶದಲ್ಲಿ ಚಟುವಟಿಕೆ ಆಧಾರಿತ ಕಲಿಕೆಯ ವಾತಾವರಣ ಹಿತಕರವಾಗಿತ್ತು. ಆಗ ತ್ರೈಮಾಸಿಕಕ್ಕೆ ಸೀಮಿತವಾದ ಪಠ್ಯಪುಸ್ತಕ ಗಳು ಇದ್ದವು.ಮಕ್ಕಳ ವಯಸ್ಸು ಮತ್ತು ಮನಸ್ಸಿಗೆ ತಕ್ಕವಾಗಿದ್ದವು.

ಪಿಯುಸಿ ಮಕ್ಕಳಿಗೆ ನಾಲ್ಕು ವರ್ಷಗಳ ಕಾಲ ಬೋಧಿಸಿದ ಅನುಭವದ ಸಹ ನನಗೆ ಸಿಕ್ಕಿತ್ತು.  ಈಗಲೂ ಬಳಕೆಯಲ್ಲಿರುವ ಪ್ರಥಮ ಮತ್ತು ದ್ವಿತೀಯ ಪಿಯು ಕನ್ನಡ ಪಠ್ಯಪುಸ್ತಕ ನೆನಪಿಗೆ ಬರುತ್ತವೆ. ಪ್ರಥಮ ಪಿಯು ಪಠ್ಯ ವನ್ನು 'ಬರೀ ಗೋಳು' ಎಂದು ಟೀಕಿಸಿದ ಗೆಳೆಯರು ‌ನೆನಪಿಗೆ ಬರುತ್ತಾರೆ. ಆಗ ಅಧ್ಯಾಪಕರ ಪ್ರಶ್ನೆ ಗಳಿಗೆ ಉತ್ತರಿಸಲು ತಡವರಿಸಿದ ಪಠ್ಯಪುಸ್ತಕ ರಚನ ಸಮಿತಿ ಸದಸ್ಯರು ನೆನಪಾಗುತ್ತಾರೆ. ಆದರೆ ಸಮತೋಲನ ಕಾಯ್ದುಕೊಂಡ ದ್ವಿತೀಯ ಪಿಯುಸಿ ಪಠ್ಯಪುಸ್ತಕ ಪ್ರಶಂಸೆ ಗಳಿಸಿತು. ಹೆಚ್.ಎಸ್.ಸತ್ಯನಾರಾಯಣ ಸರ್ ಅವರು ಇದಕ್ಕೆ ಸಂಚಾಲಕರಾಗಿದ್ದರು.

ಪದವಿ ಹಂತದಲ್ಲಿ ಪಠ್ಯಪುಸ್ತಕ ಗಳು ವಿಶ್ವವಿದ್ಯಾಲಯ ಹಂತದಲ್ಲಿ ರಚನೆ ಯಾದರೂ ಸರಿಯಾದ ಪೂರ್ವ ಸಿದ್ದತೆ ಕೊರತೆ ಕಂಡುಬರುತ್ತಿವೆ. ನಮ್ಮ ತುಮಕೂರು ವಿವಿ ಕನ್ನಡ ಅಧ್ಯಯನ ಮಂಡಲಿ ಸಕಾಲದಲ್ಲಿ ಪಠ್ಯಪುಸ್ತಕ ಒದಗಿಸುತ್ತಿದೆ ಎಂಬುದೇ ಸಂತಸಕರ. ಏಕೆಂದರೆ ಇಂಗ್ಲಿಷ್ ಮತ್ತು ಇತರೆ ವಿಭಾಗಗಳಿಗೆ ಅದು ಸಾಧ್ಯ ವಾಗಿಲ್ಲ. ಕೆಲವು ಪಠ್ಯ ಗಳಿಗೆ ಲೇಖಕರ‌ ಅನುಮತಿ ಪಡೆಯಲು ಸೂಕ್ತ ಸರಳ ವಿಧಾನಗಳು ಇರಬೇಕಿದೆ.

ಹೀಗೆ ಹಲವು ನೆನಪು ಮತ್ತು ಆಲೋಚನೆಗಳಿಗೆ ಪ್ರೇರೆಪಿಸಿದ ತಮಗೆ ಧನ್ಯವಾದಗಳು ಸರ್.


| Gangadhara BM

ನಮಸ್ತೆ ಸರ್.

ತಮ್ಮ ಈ ಲೇಖನ ಓದಿದಾಗ ನನ್ನ ಮೊದಲ ಐದು ವರ್ಷಗಳ ಸರ್ಕಾರಿ ಪ್ರಾಥಮಿಕ ಶಾಲೆ ಪಠ್ಯ ಪುಸ್ತಕಗಳು ನೆಪಿಗೆ ಬಂದವು. ಐದನೆಯ ತರಗತಿಯ ಎಲ್ಲಾ ವಿಷಯಗಳನ್ನು ಬೋಧಿಸಬೇಕಿದ್ದ ಸನ್ನಿವೇಶದಲ್ಲಿ ಚಟುವಟಿಕೆ ಆಧಾರಿತ ಕಲಿಕೆಯ ವಾತಾವರಣ ಹಿತಕರವಾಗಿತ್ತು. ಆಗ ತ್ರೈಮಾಸಿಕಕ್ಕೆ ಸೀಮಿತವಾದ ಪಠ್ಯಪುಸ್ತಕ ಗಳು ಇದ್ದವು.ಮಕ್ಕಳ ವಯಸ್ಸು ಮತ್ತು ಮನಸ್ಸಿಗೆ ತಕ್ಕವಾಗಿದ್ದವು.

ಪಿಯುಸಿ ಮಕ್ಕಳಿಗೆ ನಾಲ್ಕು ವರ್ಷಗಳ ಕಾಲ ಬೋಧಿಸಿದ ಅನುಭವದ ಸಹ ನನಗೆ ಸಿಕ್ಕಿತ್ತು.  ಈಗಲೂ ಬಳಕೆಯಲ್ಲಿರುವ ಪ್ರಥಮ ಮತ್ತು ದ್ವಿತೀಯ ಪಿಯು ಕನ್ನಡ ಪಠ್ಯಪುಸ್ತಕ ನೆನಪಿಗೆ ಬರುತ್ತವೆ. ಪ್ರಥಮ ಪಿಯು ಪಠ್ಯ ವನ್ನು 'ಬರೀ ಗೋಳು' ಎಂದು ಟೀಕಿಸಿದ ಗೆಳೆಯರು ‌ನೆನಪಿಗೆ ಬರುತ್ತಾರೆ. ಆಗ ಅಧ್ಯಾಪಕರ ಪ್ರಶ್ನೆ ಗಳಿಗೆ ಉತ್ತರಿಸಲು ತಡವರಿಸಿದ ಪಠ್ಯಪುಸ್ತಕ ರಚನ ಸಮಿತಿ ಸದಸ್ಯರು ನೆನಪಾಗುತ್ತಾರೆ. ಆದರೆ ಸಮತೋಲನ ಕಾಯ್ದುಕೊಂಡ ದ್ವಿತೀಯ ಪಿಯುಸಿ ಪಠ್ಯಪುಸ್ತಕ ಪ್ರಶಂಸೆ ಗಳಿಸಿತು. ಹೆಚ್.ಎಸ್.ಸತ್ಯನಾರಾಯಣ ಸರ್ ಅವರು ಇದಕ್ಕೆ ಸಂಚಾಲಕರಾಗಿದ್ದರು.

ಪದವಿ ಹಂತದಲ್ಲಿ ಪಠ್ಯಪುಸ್ತಕ ಗಳು ವಿಶ್ವವಿದ್ಯಾಲಯ ಹಂತದಲ್ಲಿ ರಚನೆ ಯಾದರೂ ಸರಿಯಾದ ಪೂರ್ವ ಸಿದ್ದತೆ ಕೊರತೆ ಕಂಡುಬರುತ್ತಿವೆ. ನಮ್ಮ ತುಮಕೂರು ವಿವಿ ಕನ್ನಡ ಅಧ್ಯಯನ ಮಂಡಲಿ ಸಕಾಲದಲ್ಲಿ ಪಠ್ಯಪುಸ್ತಕ ಒದಗಿಸುತ್ತಿದೆ ಎಂಬುದೇ ಸಂತಸಕರ. ಏಕೆಂದರೆ ಇಂಗ್ಲಿಷ್ ಮತ್ತು ಇತರೆ ವಿಭಾಗಗಳಿಗೆ ಅದು ಸಾಧ್ಯ ವಾಗಿಲ್ಲ. ಕೆಲವು ಪಠ್ಯ ಗಳಿಗೆ ಲೇಖಕರ‌ ಅನುಮತಿ ಪಡೆಯಲು ಸೂಕ್ತ ಸರಳ ವಿಧಾನಗಳು ಇರಬೇಕಿದೆ.

ಹೀಗೆ ಹಲವು ನೆನಪು ಮತ್ತು ಆಲೋಚನೆಗಳಿಗೆ ಪ್ರೇರೆಪಿಸಿದ ತಮಗೆ ಧನ್ಯವಾದಗಳು ಸರ್.


| Guruprasad

ಸರ್ ಇತ್ತೀಚಿಗೆ ನಾನು ಓದಿದ ಬಹಳ ಒಳ್ಳೆಯ ಪುಸ್ತಕ "ನಾಡು ಕಂಡ ರಾಜಕುಮಾರ್". ಟೋಟಲ್ ಕನ್ನಡ ವಾಹಿನಿಯವರು 1983 ರಲ್ಲಿ ಮುದ್ರಣಗೊಂಡ ಈ ಅಪರೂಪದ ಪುಸ್ತಕವನ್ನು ಕಷ್ಟಪಟ್ಟು ಹುಡುಕಿ ಪನರ್ ಮುದ್ರಿಸಿದ್ದಾರೆ.ಇದರಲ್ಲಿ ರಾಜಕುಮಾರರ ಜೊತೆಯಲ್ಲಿ ನಟಿಸಿರುವ ನಟರು,ತಂತ್ರಜ್ಞರ ಒಳನೋಟವಿದೆ.ನನಗೆ ಇದರಲ್ಲಿ ಹಿಡಿಸಿದ್ದು ಜಿ ವಿ.ಅಯ್ಯರ್ ಮುತ್ತುರಾಜ್ ಆಗಿದ್ದಾಗಿನ  ನಾಟಕದ ಒಡನಾಟ,ಕಷ್ಟಗಳನ್ನು ಬರೆದಿದ್ದಾರೆ ಮತ್ತು ಪಾಟೀಲ ಪುಟ್ಟಪ್ಪ ಗೋಕಾಕ್ ಹೋರಾಟದಲ್ಲಿ ಮಾಗಿದ ರಾಜ್ ರ ವಿನಯವನ್ನು ಸ್ಮರಿಸಿದ್ದಾರೆ.ಇದು ನನಗೆ ಮಹತ್ವವೆನಿಸಿದೆ.ಇದನ್ನು ವಿಧ್ಯಾರ್ಥಿಗಳು ಅಭ್ಯಾಸ ಮಾಡಬೇಕು.


| Hanamantappa

Thanks sir. 

ಈ ಹೊತ್ತಿನ ಪಠ್ಯಪುಸ್ತಕಗಳ ಕುರಿತಾದ ಅನುಮಾನ ಮತ್ತು ಆತಂಕಗಳಿಗೆ ಔಷಧಿ ಮತ್ತು ಮುನ್ಸೂಚನಾತ್ಮಕ ಪರಿಹಾರ ಎರಡೂ ಇದೆ. 

ನಮ್ಮಂತವರಿಗೆ ಮಾರ್ಗದರ್ಶಕವೂ ಹೌದು ಸರ್.


| Kishor K

ನಮಸ್ತೆ ಸರ್.

 

ಮಕ್ಕಳ ಮನವನ್ನು ಅರಳಿಸುವ ಪಠ್ಯಗಳ ಮಹತ್ವವನ್ನು ಕುರಿತ ತಮ್ಮ ಸಂದರಗಭೋಚಿತವಾಗಿದೆ ಸರ್‌. 

ಸರ್ಕಾರಗಳು ಬದಲಾದಂತೆ ಪಠ್ಯಗಳು ಬದಲಾಗುವುದರಿಂದ ಮಕ್ಕಳ ಮನೋಲೋಕದ ಮೇಲೆ ಬೀರುವ ವ್ಯತಿರಿಕ್ತ ಪರಿಣಾಮಗಳ ಬಗೆಗೆ ಗಂಭೀತವಾಗಿ ಚಿಂತಿಸಬೇಕಿದೆ ಸರ್. ಮಕ್ಕಳ ಮನಸ್ಸನ್ನು ಕಲುಷಿತಗೊಳಿಸಿ, ದಿಕ್ಕುತಪ್ಪಿಸುವ ಉದ್ದೇಶದಿಂದ ಪಠ್ಯಪುಸ್ತಕ ರಚನೆಯಲ್ಲಿ ಹಸ್ತಕ್ಷೇಪ ಮಾಡುವ ಸರ್ಕಾರಗಳ ನಡೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕೆಲವು ಮಾರ್ಗಸೂಚಿಗಳನ್ನು ರೂಪಿಸಬೇಕಾದ ಅಗತ್ಯವಿದೆ ಸರ್.


| ಮಂಜುಳ ಜಿ

ನಮಸ್ತೆ ಸರ್ ಪಠ್ಯ " ಪುಸ್ತಕಗಳು ಮತ್ತು ಅರಳುವ ಮನಸುಗಳು " ಶೀರ್ಷಿಕೆ ತುಂಬಾ ಮೆಚ್ಚುಗೆಯಾಯೊತು. ನನ್ನ ನೆನಪಿನ ಬುತ್ತಿಯಿಂದ ನಾನು ಬಾಲ್ಯದಲ್ಲಿ ಓದಿದ " ಕುರುಡು ಕಾಂಚಾಣ "ಪದ್ಯ ನೆನಪಾಯಿತು.. ಕವಿ ದ.ರಾ.ಬೇಂದ್ರೆಯವರು ಕುರುಡು ಕಾಂಚಾಣದ ಲೋಬಿ ಬಗ್ಗೆ, ಹೃದಯ ಹೀನರ ಬಗ್ಗೆ ಸಂಪತ್ತಿನ ದೇವಿ ಎದುರಿನಲ್ಲಿ ತುಳಿತಕ್ಕೆ ಒಳಗಾದವರ ಬಗ್ಗೆ, ತಮಗೆ ಬೆಕಾದದ್ದು ಸಿಗುವವರೆಗೂ ತಿಳಿಯುತ್ತಾ ಹೋಗುವವರ ಬಗ್ಗೆ ಶ್ರೀಮಂತರ ಚೆಲಾಗಳು ಮಾಡುವ ಕೆಲಸಗಳನ್ನು ಕಣ್ಮುಂದೆ ತಂದಂತ್ತೆ ಭಾಸವಾಗಿತ್ತು. ಬದುಕಿಮ ಸತ್ವ, ಧನದಾಹದ ಕ್ರೌರ್ಯದ ಚಿತ್ರಣ ಅಂದು ನಮ್ಮ ಟೀಚರ್ ಹೇಳಿದ್ದು ಇಂದಿಗೂ ಸತ್ಯವಾಗಿ ಕಾಣುತ್ತಿದೆ. ನನ್ನ ಬಾಲ್ಯದ ನೆನಪು ನೆನೆಯಲು ಪ್ರೇರೇಪಿಸಿದ ತಮಗೆ ಧನ್ಯವಾದಗಳು ಸರ್ ಮಂಜುಳ ಜಿ, ತಿಪಟೂರು




Add Comment