ಬಾಬಾಸಾಹೇಬರು ದೇವರಲ್ಲದೆ ನೀ ದೇವನೆ?

`ನಾ ದೇವನಲ್ಲದೆ ನೀ ದೇವನೆ?’ ಎಂಬ ಅಲ್ಲಮಪ್ರಭುಗಳ ಸವಾಲ್ ಮೊನ್ನೆ ಇದ್ದಕ್ಕಿದ್ದಂತೆ ನೆನಪಾಯಿತು. ಈ ಸಾಲನ್ನು ಕೊಂಚ ಬದಲಿಸಿ, `ಅಂಬೇಡ್ಕರ್ ದೇವನಲ್ಲದೆ ನೀ ದೇವನೆ?’ ಎಂದು ಈ ಅನಾಗರಿಕ ನಾಲಗೆಗಳಿಗೆ ಸವಾಲ್ ಎಸೆಯಬೇಕೆನ್ನಿಸಿತು. ಪ್ರಭುವಿನ ವಚನ ಗುಹೇಶ್ವರನಿಗೇ ಎಸೆಯುವ ಈ ಸವಾಲ್ ನೋಡಿ:

ನಾ ದೇವನಲ್ಲದೆ ನೀ ದೇವನೆ?
ನೀ ದೇವನಾದಡೆ ಎನ್ನನೇಕೆ ಸಲಹೆ?
ಆರೈದು, ಒಂದು ಕುಡಿತೆ ಉದಕವನೆರೆವೆ
ಹಸಿದಾಗ ಒಂದು ತುತ್ತು ಓಗರವನಿಕ್ಕುವೆ.
ನಾ ದೇವ ಕಾಣಾ ಗುಹೇಶ್ವರಾ!

ಇದು ಭಾರತದ ಸ್ವಾತಂತ್ರ‍್ಯದ ಅಮೃತ ಮಹೋತ್ಸವದ ಕಾಲ; ಜೊತೆಗೆ, ಅಂಬೇಡ್ಕರ್ ಯುಗದ ಅಮೃತ ಮಹೋತ್ಸವದ ಕಾಲ ಕೂಡ. ಅಂಬೇಡ್ಕರ್ ಚಿಂತನೆ-ಕ್ರಿಯೆಗಳು ’ಕುಡಿತೆ ಉದಕ’ ಅಥವಾ ಬೊಗಸೆ ನೀರು ಕೊಟ್ಟ ಯುಗ ಹಾಗೂ ಕೋಟ್ಯಾಂತರ ಮಂದಿಗೆ ತುತ್ತು ಓಗರ ಅಥವಾ ತುತ್ತು ಅನ್ನ ಕೊಟ್ಟ ಯುಗ ಕೂಡ. 

ಮೊದಲಿಗೆ, ಬೊಗಸೆ ನೀರಿನ ಕತೆ: ಹತ್ತೊಂಬತ್ತನೇ ಶತಮಾನದ ಕೊನೆಯಲ್ಲಿ ಬಾಲಕ ಭೀಮ ಶಾಲೆಯಲ್ಲಿ ಸವರ್ಣೀಯ ಹುಡುಗರ ಜೊತೆ ಕೂರುವಂತಿರಲಿಲ್ಲ; ತಾನೇ ಮನೆಯಿಂದ ತಂದ ಗೋಣಿಚೀಲದ ಮೇಲೆ ಪ್ರತ್ಯೇಕವಾಗಿ ಕೂರಬೇಕಾಗಿತ್ತು. ಉಳಿದ ಮಕ್ಕಳು ತಾವೇ ನಲ್ಲಿ ತಿರುಗಿಸಿ ನೀರು ಕುಡಿಯಬಹುದಿತ್ತು. ಆದರೆ ಭೀಮನಿಗೆ ಶಾಲೆಯ ಅಟೆಂಡರ್ ಬಂದು ನಲ್ಲಿ ತಿರುಗಿಸಿದರೆ ಮಾತ್ರ ಕುಡಿಯಲು ಬೊಗಸೆ ನೀರು; ಅಟೆಂಡರಿಲ್ಲದ ದಿನ ಭೀಮನಿಗೆ ನೀರೇ ಇಲ್ಲ. ಬಾಲ್ಯದಿಂದಲೂ ನೀರು ಸಿಕ್ಕದ ಭೀಮರಾವ್ ಅಂಬೇಡ್ಕರ್ ೧೯೨೭ರ ಮಾರ್ಚ್ ೨೦ರಂದು ದಲಿತರಿಗೆ ನಿಷಿದ್ಧವಾಗಿದ್ದ ಮಹಾರಾಷ್ಟ್ರದ ಮಹಾಡ್‌ನ ಚವ್ದಾರ್‍ ಸಿಹಿನೀರು ಕೆರೆಯ ನೀರು ಮುಟ್ಟಿದರು; ಒಂದು ಬೊಗಸೆ ನೀರು ಕೈಗೆತ್ತಿಕೊಂಡರು. ಅದು ಸಾವಿರಾರು ವರ್ಷಗಳಿಂದ ಸಾರ್ವಜನಿಕ ಕೆರೆಬಾವಿಗಳ ನೀರು ಮುಟ್ಟಲಾಗದಿದ್ದ ಭಾರತದ ಕೋಟ್ಯಾಂತರ ದಲಿತರಿಗೆ ಹಕ್ಕಿನ ಹೋರಾಟದ ಮಾರ್ಗ ತೋರಿಸಿತು. 

ಇನ್ನು, ತುತ್ತು ಓಗರದ ಸವಾಲು: ಅಂಬೇಡ್ಕರ್ ಕೊಲಂಬಿಯಾದಲ್ಲಿ ಓದಲು ಹೋದಾಗ ಊಟಕ್ಕೆ ದಿನಕ್ಕೆ ಒಂದು ಡಾಲರಿಗಿಂತ ಹೆಚ್ಚು ಖರ್ಚು ಮಾಡುವಂತಿರಲಿಲ್ಲ. ಅಂಬೇಡ್ಕರ್ ದಿನವಿಡೀ ಲೈಬ್ರರಿಯಲ್ಲಿ ಓದುತ್ತಾ ಬಿಸ್ಕತ್ತು, ಟೀಯಲ್ಲಿ ಕಳೆದ ದಿನಗಳಿದ್ದವು.  ವಿದ್ಯಾರ್ಥಿಗಳ ಕಷ್ಟ ಕಂಡುಂಡ ಅಂಬೇಡ್ಕರ್ ಇಂಡಿಯಾಕ್ಕೆ ಮರಳಿ ೧೯೨೪ರಲ್ಲಿ ‘ಬಹಿಷ್ಕೃತ ಹಿತಕಾರಿಣಿ ಸಭಾ’ ಶುರು ಮಾಡಿದ ಮೇಲೆ, ಮಕ್ಕಳಿಗಾಗಿ ಹಾಸ್ಟೆಲ್ ಶುರು ಮಾಡಿದರು. ಸ್ವತಂತ್ರ ಭಾರತದಲ್ಲಿ ಅಂಬೇಡ್ಕರ್ ಹಾಕಿಕೊಟ್ಟ ಸಬಲೀಕರಣದ ಯೋಜನೆಗಳ ಫಲವಾಗಿ ಇವತ್ತು ದಲಿತರಷ್ಟೇ ಅಲ್ಲ, ನೂರಾರು ಹಿಂದುಳಿದ ಜಾತಿಗಳ ಬಡ ಹುಡುಗ, ಹುಡುಗಿಯರು ಹಾಸ್ಟೆಲ್‌ಗಳಲ್ಲಿ ಮೂರು ಹೊತ್ತಿನ ಊಟ ಉಂಡು ಓದುವ ಭಾಗ್ಯ ಸಿಕ್ಕಿದೆ. ತಂತಮ್ಮ ಜಾತಿಗಳಿಗಷ್ಟೇ ಹಾಸ್ಟೆಲ್ ಮಾಡಿಕೊಂಡಿದ್ದ ಇಂಡಿಯಾದ ಮೇಲ್ಜಾತಿಗಳು ಅಂಬೇಡ್ಕರ್ ಬಾರದಿದ್ದರೆ ಇತರ ಜಾತಿಗಳ ಮಕ್ಕಳನ್ನು ಕುರಿತು ಯೋಚಿಸುವ ಸಾಧ್ಯತೆ ಕಮ್ಮಿಯಿತ್ತು. ಸಮಾಜಕಲ್ಯಾಣ ಇಲಾಖೆ ದಲಿತ, ಹಿಂದುಳಿದ ವರ್ಗಗಳಿಗೆ, ಬಾಲಕಿಯರಿಗೆ ನಡೆಸುವ ಹಾಸ್ಟೆಲ್ಲುಗಳು ಅಂಬೇಡ್ಕರ್ ಚಿಂತನೆ-ಯೋಜನೆಗಳ ಫಲ ಎಂಬುದನ್ನು ಕೃತಜ್ಞತೆಯಿಂದ ನೆನೆಯುವ, ನೆನೆಯಲೇಬೇಕಾದ ಕೋಟ್ಯಾಂತರ ಜನ ಈ ದೇಶದಲ್ಲಿದ್ದಾರೆ. ದಲಿತ ಚಳುವಳಿ ಮತ್ತೆ ಮತ್ತೆ ’ಅಂಬೇಡ್ಕರ್’ ’ಅಂಬೇಡ್ಕರ್’ ಎಂದು ಸಾರಿ ಸಾರಿ ಹೇಳಿದ್ದರಿಂದಲೇ ಈ ಸವಲತ್ತುಗಳು ಹೆಚ್ಚಿವೆ, ವಿಸ್ತಾರಗೊಂಡಿವೆ. 

ಮನಮೋಹನ್ ಸಿಂಗ್ ಪ್ರಧಾನಮಂತ್ರಿಯಾಗಿದ್ದಾಗ, ೨೦೦೫ರಲ್ಲಿ ಹಿಂದೂ ಮಹಿಳೆಯರಿಗೆ ಆಸ್ತಿಯ ಸಮಾನ ಹಕ್ಕು ದೊರೆತಾಗ, ಅದರ ಹಿಂದೆ ಅಂಬೇಡ್ಕರ್ ೧೯೪೭ರಿಂದಲೂ ಮಾಡಿದ ಅಧ್ಯಯನ-ಮಂಡನೆಗಳ ಶ್ರಮವಿತ್ತು. ಹಿಂದೂ ಮಹಿಳೆಯರಿಗೆ ಇವತ್ತು ದಕ್ಕಿರುವ ಆಸ್ತಿಯ ಹಕ್ಕಿಗೆ ೧೯೪೮ರಲ್ಲಿ ಅಂಬೇಡ್ಕರ್ ಮಂಡಿಸಿ, ನಂತರ ೧೯೫೧ರಲ್ಲಿ ವಿಸ್ತೃತ ಚರ್ಚೆಗೆ ಬಂದು ತಿರಸ್ಕೃತವಾಗಿದ್ದ ’ಹಿಂದೂ ಕೋಡ್ ಬಿಲ್’ ಮೂಲ ತಳಹದಿ. ಈ ಅಂಬೇಡ್ಕರ್ ಕೊಡುಗೆ ತಮ್ಮ ಜೀವನ ಚಕ್ರವನ್ನೇ ಬದಲಿಸಿರುವುದನ್ನು ಹಿಂದೂ ಮಹಿಳೆಯರು ಅಪಾರ ಕೃತಜ್ಞತೆಯಿಂದ ನೆನೆಯುತ್ತಿರಲೇಬೇಕಾಗುತ್ತದೆ. 
ಅಲ್ಲಮಪ್ರಭುಗಳ ಭಾಷೆಯಲ್ಲೇ ಹೇಳುವುದಾದರೆ, ಕುಡಿತೆ ನೀರು ಕೊಟ್ಟು ಕೋಟ್ಯಾಂತರ ಮಂದಿಯ ಓಗರಕ್ಕೆ ದಾರಿ ಮಾಡಿಕೊಟ್ಟಿರುವ ಬಾಬಾಸಾಹೇಬರನ್ನು ದೇವರೆನ್ನದೆ ಇನ್ಯಾರನ್ನು ದೇವರೆನ್ನಬೇಕು? ದೇವರುಗಳು, ಧರ್ಮಗಳ ನಡುವೆ ಜಗಳ ತಂದಿಕ್ಕಿ, ದೇವರನ್ನೇ ಉಚ್ಛಾಟಿಸುತ್ತಿರುವ ಖಳರನ್ನು ದೇವರೆನ್ನಲುಂಟೆ? ಇಂಥವರ ಬಾಲ ಬಡಿಯುವ ಪರಮಾಭಿಮಾನಿಗಳು ಕೂಡ ಅವರನ್ನು ದೇವರೆನ್ನಲಾರರು! ಹಾಲಿ ಪ್ರಧಾನಮಂತ್ರಿ ಕುರಿತ ಸಿನಿಮಾ ಎರಡೆರಡು ರಿಲೀಸ್ ಆದರೂ ಅದರ ಗತಿ ಏನಾಯಿತೆಂಬುದು ನಿಮಗೆಲ್ಲ ಗೊತ್ತಿದೆ. ಆದರೆ ಥೇಟರುಗಳಲ್ಲಿ ಬಿಡುಗಡೆಯಾಗುವ ಸೌಭಾಗ್ಯವೇ ಸಿಗದ, ಮಮ್ಮೂಟಿ ಅಭಿನಯದ, ‘ಡಾ. ಬಾಬಾಸಾಹೇಬ್ ಅಂಬೇಡ್ಕರ್’ ಸಿನಿಮಾವನ್ನು ಯೂಟ್ಯೂಬ್ ಹಾಗೂ ಸಾರ್ವಜನಿಕ ಪ್ರದರ್ಶನಗಳಲ್ಲಿ ಕೋಟಿ ಕೋಟಿ ಜನ ನೋಡಿದ್ದಾರೆ; ನೋಡುತ್ತಿದ್ದಾರೆ. 

ಅಂದರೆ, ಅಂಬೇಡ್ಕರ್ ನಿರ್ಗಮನದ ಅರವತ್ತೇಳು ವರ್ಷಗಳ ನಂತರವೂ ಅಂಬೇಡ್ಕರ್ ದೈವಿಕ ಪ್ರಭಾವಳಿ ವಿಸ್ತಾರವಾಗುತ್ತಲೇ ಬಂದಿದೆ. ಇದು ನಾನು ಭಾರತೀಯ ಸಮಾಜದ ವಿದ್ಯಾರ್ಥಿಯಾಗಿ ವಸ್ತುನಿಷ್ಠವಾಗಿ ಕಂಡುಕೊಂಡಿರುವ ವಾಸ್ತವ ಚಿತ್ರ. ಕಳೆದ ಆರೇಳು ದಶಕಗಳಲ್ಲಿ ಭಾರತದ ವಿವಿಧೆಡೆಗಳಲ್ಲಿ ಅಂಬೇಡ್ಕರ್ ಹಬ್ಬಿರುವ ರೀತಿಗಳನ್ನು ಸುಮ್ಮನೆ ಕಣ್ಣು ಬಿಟ್ಟು ನೋಡಿದರೂ ಈ ಅಂಶ ಸ್ಪಷ್ಟವಾಗುತ್ತದೆ. ಮೂರು ವರ್ಷಗಳ ಕೆಳಗೆ ಗೆಳೆಯ-ಹಿಂದಿಲೇಖಕ-ಕಾನ್ಷಿರಾಮ್‌ ಜೀವನಚರಿತ್ರಕಾರ ಬದರಿನಾರಾಯಣ್ ಅಂಬೇಡ್ಕರ್ ದೇವರೆಂದು ಸಾರುವ ಇಂಡಿಯಾದ ಜನಪದ ಹಾಡುಗಳನ್ನು ಕುರಿತು ಬರೆದದ್ದು ನೆನಪಾಗುತ್ತದೆ: 

ಮಹಾರಾಷ್ಟ್ರದ ದಲಿತ ಹೆಂಗಸರು ಮಕ್ಕಳ ನಾಮಕರಣಗಳಲ್ಲಿ, ಮದುವೆಗಳಲ್ಲಿ ಹಾಡುವ ಹಾಡುಗಳಲ್ಲಿ ಅಂಬೇಡ್ಕರ್ ಮಹಾಪುರುಷನಾಗಿ ಮೂಡಿದ್ದಾರೆ; ದೇವರಾಗಿದ್ದಾರೆ. ಉತ್ತರಪ್ರದೇಶದ ದಲಿತ ಹುಡುಗ, ಹುಡುಗಿಯರು ಹತ್ತನೆಯ ತರಗತಿಯ ಬೋರ್ಡ್ ಪರೀಕ್ಷೆಗೆ ಹೋಗುವ ಮುನ್ನ ಅಂಬೇಡ್ಕರ್ ಪ್ರತಿಮೆಗಳ ಕಾಲು ಮುಟ್ಟಿ ನಮಸ್ಕರಿಸಿ ಹೋಗುತ್ತಾರೆ. ಅನೇಕ ಕಬೀರ್ ಆಶ್ರಮಗಳಲ್ಲಿ ಕಬೀರ್ ಫೋಟೋ ಅಂಬೇಡ್ಕರ್ ಫೋಟೋ ಜೊತೆಗೇ ಇದೆ. ಉತ್ತರಪ್ರದೇಶ, ಬಿಹಾರಗಳ ನವಬೌದ್ಧರ ಮನೆಗಳಲ್ಲಿ ಗಣೇಶ, ಬುದ್ಧ, ಅಂಬೇಡ್ಕರರನ್ನು ಒಟ್ಟಿಗೇ ಪೂಜಿಸುತ್ತಾರೆ.   ಉತ್ತರಪ್ರದೇಶದ ಮನೆಗಳಲ್ಲಿ ವೈ಼ಷ್ಣೋದೇವಿ, ರವಿದಾಸ್‌ಜೀ, ಅಂಬೇಡ್ಕರ್ ಫೊಟೋಗಳು ಒಟ್ಟಿಗೇ ಗೋಡೆಯಲ್ಲಿ ತೂಗಾಡುತ್ತಿರುತ್ತವೆ. ಭೋಜಪುರಿ ಮದುವೆ ಹಾಡುಗಳಲ್ಲಿ ಮನೆಯ ಹಿರೀಕನಾಗಿ ಕಾಣಿಸಿಕೊಳ್ಳುವ ಅಂಬೇಡ್ಕರ್, ಈ ಹಾಡುಗಳಲ್ಲಿ ಚಿಂತಕರಾಗಿ, ನಾಯಕರಾಗಿ ಕಾಣದೆ, ಮನೆಮಂದಿಯಲ್ಲಿ ಒಬ್ಬರಾಗಿಬಿಡುತ್ತಾರೆ. ಇವೆಲ್ಲವನ್ನೂ ಬದರಿನಾರಾಯಣ್ ದಾಖಲಿಸುತ್ತಾರೆ.

ಅಷ್ಟು ದೂರ ಯಾಕೆ, ಪ್ರತಿ ವರ್ಷ ಏಪ್ರಿಲ್ ೧೪ರ ಅಂಬೇಡ್ಕರ್ ಜನ್ಮದಿನ ಹಾಗೂ ಡಿಸೆಂಬರ್ ೬ರ ಅಂಬೇಡ್ಕರ್ ಪರಿನಿಬ್ಬಾಣದ ದಿನ ಬೆಂಗಳೂರಿನ ವಿಧಾನಸೌಧದ ಎದುರು ಸಾವಿರಾರು ಪುರುಷರು, ಮಹಿಳೆಯರು, ಮಕ್ಕಳು ಊರೂರುಗಳಿಂದ ಬಂದು ಅಂಬೇಡ್ಕರ್ ಪ್ರತಿಮೆಗೆ ಹೂ ಅರ್ಪಿಸಿ ನಮಸ್ಕರಿಸುವುದನ್ನು ನಾವೆಲ್ಲ ನೋಡುತ್ತಲೇ ಇರುತ್ತೇವೆ. ಇದು ನಿಮ್ಮೂರಿನಲ್ಲೂ ಕಾಣುವ ದೃಶ್ಯ. ದೈವಭಕ್ತಿ-ನಂಬಿಕೆಗಳಿಲ್ಲದ ನನಗೆ ನಿಜಕ್ಕೂ ಶ್ರದ್ಧೆಯಿಂದ ಕೈ ಮುಗಿಯಬೇಕೆನ್ನಿಸುವ ಕೆಲವೇ ಮಾನವಮೂರ್ತಿಗಳಲ್ಲಿ ಅಂಬೇಡ್ಕರ್ ಮುಖ್ಯರು. ಈ ಭಕ್ತಿಭಾವ ಅಂಬೇಡ್ಕರ್ ನಿಜವಾದ ಯುಗಪುರುಷನಾಗಿ ಇಡೀ ಭಾರತಕ್ಕೇ ಕೊಟ್ಟಿರುವ ಕೊಡುಗೆಯ ಬಗೆಗೆ ನನ್ನೊಳಗಿರುವ ಕೃತಜ್ಞತೆಯಿಂದಲೂ ಹುಟ್ಟಿದೆ. ನಿಮಗೂ ಹೀಗಾಗಿರಬಹುದು; ಹೀಗಾಗಲಿ ಎಂಬುದು ನನ್ನಾಸೆ.

ಇಷ್ಟೆಲ್ಲದರ ನಡುವೆಯೂ, ಬಾಬಾಸಾಹೇಬರನ್ನು ದೇವರನ್ನಾಗಿಸಿ, ಅವರ ವಿವಿಧ ವ್ಯಕ್ತಿತ್ವಗಳ ಸಂದೇಶಗಳನ್ನು, ಅವರ, ಬರಹಗಳ ವೈಚಾರಿಕತೆ, ವಿಮೋಚನೆಯ ಮಾರ್ಗಗಳನ್ನು ಹಿನ್ನೆಲೆಗೆ ಸರಿಸಿಬಿಟ್ಟರೆ, ಅಂಥ ಸೆಲ್ಫ್-ಮೇಡ್ ಮಹಾವ್ಯಕ್ತಿತ್ವಕ್ಕೆ ಅಪಚಾರ ಮಾಡಿದಂತಾಗುತ್ತದೆ. ಬಾಬಾಸಾಹೇಬರ ದೈವತ್ವದ ಜೊತೆಗೇ ತೇಲಿ ಬರುವ ಬಾಬಾಸಾಹೇಬರ ಹಲಬಗೆಯ ಮಾನವಚಿತ್ರಗಳನ್ನು ಎಂದೂ ಮರೆಯಬಾರದು. ನನ್ನ ಅಂಕಣವೊಂದರಲ್ಲಿ ಕೊಟ್ಟಿದ್ದ ಅಂಬೇಡ್ಕರ್ ವ್ಯಕ್ತಿತ್ವದ ಈ ಚಿತ್ರಗಳನ್ನು ಮತ್ತೆ ನೆನಪಿಸುವೆ: 

ಸ್ವಂತದ ಅವಮಾನಗಳ ಮೂಲಕ ಸಮುದಾಯಗಳ ಅವಮಾನಗಳ ಚರಿತ್ರೆ-ವರ್ತಮಾನಗಳನ್ನು ಅಧ್ಯಯನ ಮಾಡಿದ ಚಿಂತಕ; ಕೊಲಂಬಿಯಾ ವಿಶ್ವವಿದ್ಯಾಲಯದ ಗ್ರಂಥಾಲಯಕ್ಕೆ ‘ಎಲ್ಲರಿಗಿಂತಲೂ ಮೊದಲು ಬಂದು ಎಲ್ಲರೂ ಹೋದ ನಂತರ ಹೋಗುತ್ತಿದ್ದ’ ವಿದ್ಯಾರ್ಥಿ-ವಿದ್ವಾಂಸ;  ಭಾರತೀಯ ಸಮಾಜದ ಹತ್ತಾರು ಸಮಸ್ಯೆಗಳ ಬಗ್ಗೆ ಆಳವಾಗಿ ಅಧ್ಯಯನ ಮಾಡಿ ಇಂಗ್ಲಿಷ್ ಹಾಗೂ ಮರಾಠಿಯಲ್ಲಿ ಇಪ್ಪತ್ತು ಸಾವಿರಕ್ಕೂ ಹೆಚ್ಚು ಪುಟಗಳ ವಿಶ್ಲೇಷಣೆ ಬರೆದ ಗಂಭೀರ ಆಕ್ಟಿವಿಸ್ಟ್-ಲೇಖಕ; ಸಮಾನತೆಯ ಹೋರಾಟಗಳನ್ನು ರೂಪಿಸಿದ ಜನನಾಯಕ; ಚಿಂತಕನೊಬ್ಬ ಜಾತಿಪೀಡಿತ ಸಮಾಜದ ರೋಗಮೂಲಗಳನ್ನು ವಿಶ್ಲೇಷಿಸಿದರಷ್ಟೇ ಸಾಲದು, ಅವಕ್ಕೆ ಪರಿಹಾರಗಳನ್ನೂ ಹುಡುಕಬೇಕೆಂದು ಹೊರಟ ಡಾಕ್ಟರ್; ಪರಿಹಾರ ಸೂಚಿಸಿದರಷ್ಟೇ ಸಾಲದು, ಅದನ್ನು ಬದಲಾಯಿಸಲೂಬೇಕು ಎಂಬ ಗುರಿ ಹೊತ್ತು ಜಡ ಭಾರತದ ರಚನೆಯನ್ನು ಬದಲಿಸಿದ ಭಾರತೀಯ ಸಂವಿಧಾನದ ಸೃಷ್ಟಿಕರ್ತ; ಮೊಗಳ್ಳಿ ಗಣೇಶ್ ಹೇಳಿದಂತೆ ‘ಪ್ರತಿರೋಧದ ಚರಿತ್ರೆಯನ್ನು ರೂಪಿಸಿದ ಚರಿತ್ರಕಾರ; ರೇಸ್, ಕ್ಯಾಸ್ಟ್, ಟ್ರೈಬ್‌ಗಳನ್ನು ಆಳವಾಗಿ ಗ್ರಹಿಸಿದ ವಿಭಿನ್ನ ಸಮಾಜವಿಜ್ಞಾನಿ’; ಸಾಮ್ರಾಟ್ ಅಶೋಕನ ನಂತರ, ಇಪ್ಪತ್ತನೆಯ ಶತಮಾನದಲ್ಲಿ ಬೌದ್ಧ ಧರ್ಮವನ್ನು ಮರುಜೀವಗೊಳಿಸಿದ ‘ಮಹಾ ಬೌದ್ಧ ಭಿಕ್ಷು’; ಇಷ್ಟೆಲ್ಲದರ ನಡುವೆಯೂ ಎಲ್ಲೋ ಕೆಲ ಚಣ ವಯೊಲಿನ್ ನುಡಿಸುತ್ತಾ, ಕಬೀರ್ ಭಜನೆ ಗುನುಗುತ್ತಾ ಎಲ್ಲವನ್ನೂ ಮೀರಲೆತ್ನಿಸಿದ ಕಲಾವಿದ …

೧೮೯೧ರಿಂದ ೧೯೫೬ರವರೆಗಿನ ಅರವತ್ತೈದು ವರ್ಷಗಳ ತಮ್ಮ ಜೀವಿತದಲ್ಲಿ ಇಂಡಿಯಾದ ಸಾವಿರಾರು ವರ್ಷಗಳ ದಮನದ ಚರಿತ್ರೆಯನ್ನು ಎದುರಿಸಿ, ಹಿಮ್ಮೆಟ್ಟಿಸಿ, ಯುಗಪಲ್ಲಟ ಮಾಡಿದ ಬಾಬಾಸಾಹೇಬ ಅಂಬೇಡ್ಕರ್ ಅವರನ್ನು ದೇವರೆಂದು ಕರೆದರೆ ಹುಲುಮಾನವರಿಗೇಕೆ ಉರಿಯೇಳಬೇಕು?
 

Share on:

Comments

1 Comments



| ಡಾ. ಜ್ಯೋತಿ. ಎಸ್

ಸಮಾಜದ ಆರೋಗ್ಯ ಹದಗೆಡಿಸುವ ವಿಕೃತ ಮನಸುಗಳಿಗೆ ಈ ಲೇಖನ ತಕ್ಕ ಉತ್ತರದಂತಿದೆ ಸರ್, ಸಾವಿರಾರು ವರ್ಷಗಳ ದಮನಿತರ ಚರಿತ್ರೆಯ ಸತ್ಯಶೋಧನೆಯ ದಾರಿಗೆ ಬಾಬಾಸಾಹೇಬರ ವಿಚಾರಧಾರೆಗಳು ಪ್ರಸ್ತುತವೆಂಬ ಚಿಂತನೆ ಎಲ್ಲರಲಿ ಮೂಡಲಿ........\r\nಧನ್ಯವಾದಗಳು ಸರ್




Add Comment






Recent Posts

Latest Blogs



Kamakasturibana

YouTube