ಬಸವಣ್ಣನವರ ದರ್ಶನ ಯಾವುದು?

ಈ ಹಳೆಯ ಪ್ರಶ್ನೆಗಳು ಮತ್ತೆ ಮತ್ತೆ ಎದುರಾಗುತ್ತಲೇ ಇರುತ್ತವೆ: ಒಂದು ಕತೆ ಅಥವಾ ಪದ್ಯ ಓದುವಾಗ ನಮ್ಮ ವೈಯಕ್ತಿಕ ಭಾವಗಳ ಜೊತೆಜೊತೆಗೇ ಅವನ್ನು ಓದುವುದು ಸರಿಯೋ? ಅಥವಾ, ಎಡ್ವರ್ಡ್ ಬುಲ್ಲೋ ಹೇಳಿದಂತೆ ಪಠ್ಯದಿಂದ ಸರಿಯಾದ ಅಂತರ ಕಾಯ್ದುಕೊಂಡು ಓದುವುದು ಸರಿಯೋ? ಒಂದು ಕವಿತೆಯ ಹಾಡಿನ ರೂಪ ಕೊಡುವ ವ್ಯಾಖ್ಯಾನಗಳಾಚೆಗೆ ಕವಿತೆಯನ್ನು ಓದುವುದು ಹೇಗೆ?  

ಈ ಪ್ರಶ್ನೆಗಳು ವಚನವೊಂದನ್ನು ಹಾಡಿನರೂಪದಲ್ಲಿ ಕೇಳಿಸಿಕೊಂಡಾಗ ಮತ್ತೆ ಎದುರಾದವು. ಆ ಹಾಡಿನ ರೂಪ ಕೇಳಿದಾಗ ದುರಂತ ಭಾವ ಉಕ್ಕಿದ್ದನ್ನು ಕುರಿತು ವಾರ್ತಾಭಾರತಿಯಲ್ಲಿ ಬರೆಯುತ್ತಾ ಆ ವಚನವನ್ನೂ ಕೊಟ್ಟಿದ್ದೆ. ಆ ವಚನವನ್ನು ಮೊದಲ ಬಾರಿಗೆ ಈ ಬರಹದಲ್ಲಿ  ಓದಿದ ಕನ್ನಡ ಅಧ್ಯಾಪಕ ಧನಂಜಯಮೂರ್ತಿಗೂ, ಸಹೋದ್ಯೋಗಿ ಇಂಗ್ಲಿಷ್ ಅಧ್ಯಾಪಕರಿಗೂ ನನಗೆ ಉಕ್ಕಿದಂಥ ತಳಮಳದ ಭಾವವೇ ಉಕ್ಕಿತೆಂದು ತಿಳಿಯಿತು. ನನ್ನ ಆ ಬರಹದ ಒಂದು ಭಾಗ:

ಹನ್ನೆರಡನೆಯ ಶತಮಾನದ ನಡುಭಾಗದಲ್ಲಿ ಬಸವಣ್ಣನವರು ಕಲ್ಯಾಣದ ಹಿಂಸಾಮಯ ಘಟನಾವಳಿಗಳಿಂದ ದುಗುಡಗೊಂಡು ನಿರ್ಗಮಿಸಿದ ನಂತರ, ವಚನ ಚಳುವಳಿಯ ಅನುಯಾಯಿಗಳ ಮೇಲೆ, ಶರಣ ಶರಣೆಯರ ಮೇಲೆ ದಾಳಿ ಶುರುವಾಯಿತು. ಪ್ರಭುತ್ವ, ಪ್ರಭುತ್ವದ ಬಾಲಂಗೋಚಿಗಳು, ಜಾತಿಕ್ರೂರಿಗಳು ಶುರು ಮಾಡಿದ ಹಿಂಸೆಯಿಂದಾಗಿ ಅನೇಕ ಶರಣ, ಶರಣೆಯರು, ವಚನಪ್ರಿಯರು ವಚನಗಳ ಕಟ್ಟುಗಳನ್ನು ಬಚ್ಚಿಟ್ಟುಕೊಂಡು ಕನ್ನಡನಾಡಿನ ಬೇರೆ ಬೇರೆ ಭಾಗಗಳಿಗೆ ಚದುರಿಹೋದರು. ಆ ಕಾಲದ ಆತಂಕ, ಛಲ, ಸಾಹಸದ ಚಿತ್ರಗಳು ೨೦೧೭-೧೯ರ ವರ್ಷಗಳಲ್ಲಿ ನನ್ನನ್ನು ಕಾಡತೊಡಗಿದ್ದವು. ಹೀಗೆ ಕಾಡಿದ್ದಕ್ಕೆ ಈ ವರ್ಷಗಳಲ್ಲಿ ಇಂಡಿಯಾದಲ್ಲಿ ನಡೆಯುತ್ತಿದ್ದ ವಿದ್ಯಮಾನಗಳೂ ಕಾರಣವಾಗಿದ್ದವು. 

ನಮ್ಮ ಕಾಲದಲ್ಲೂ ಸಾಹಿತ್ಯದ ಪ್ರಭಾವದ ಬಗ್ಗೆ ಬೆದರಿರುವ, ಸಾಹಿತ್ಯದ್ವೇಷಿ ಕೋಮುವಾದಿ ರಕ್ಕಸಗಣಗಳು ಸಾಹಿತಿಗಳ, ಸಾಹಿತ್ಯ ಕೃತಿಗಳ ಬೆನ್ನು ಹತ್ತಿದ್ದವು. ಆ ದಿನಗಳಲ್ಲೊಂದು ಸಂಜೆ ಕವಿ ಡಾ. ಸಿದ್ಧಲಿಂಗಯ್ಯ, ಗೆಳೆಯ ಸ್ವಾಮಿ ಆನಂದ್ ಜೊತೆ ಶ್ರೀರಂಗಪಟ್ಟಣದ ಬಳಿಯ ಕಾವೇರಿ ನದಿಯ ದಂಡೆಯಲ್ಲಿ ಅಡ್ಡಾಡುತ್ತಿದ್ದಾಗ ಖ್ಯಾತ ಗಾಯಕ ಅಂಬಯ್ಯ ನುಲಿ ಸಿಕ್ಕರು. ಆ ರಾತ್ರಿ ಕಾವೇರಿ ನದಿ ದಂಡೆಯ ಪ್ರವಾಸಿಮಂದಿರದಲ್ಲಿ ಅಂಬಯ್ಯ ನುಲಿಯವರು ಹಾಡಿದ ಹಲವು ವಚನಗಳ ನಡುವೆ ಒಂದು ವಚನ ನನ್ನಲ್ಲಿ ಕಣ್ಣೀರು ಉಕ್ಕಿಸಿತು: 

ನಾನು ಬಂದ ಕಾರ್ಯಕ್ಕೆ ನೀವು ಬಂದಿರಯ್ಯಾ
ನೀವು ಬಂದ ಕಾರ್ಯಕ್ಕೆ ನಾನೂ ಬಂದೆನಯ್ಯಾ
ನಾನು ನೀವು ಬಂದ ಕಾರ್ಯಕ್ಕೆ ಪ್ರಭುದೇವರು ಬಂದರಯ್ಯಾ.

ಕಲ್ಯಾಣವೆಂಬುದು ಪ್ರಣತೆಯಾಗಿತ್ತು
ನಾನು ತೈಲವಾದೆನು, ನೀವು ಬತ್ತಿಯಾದಿರಿ
ಪ್ರಭುದೇವರು ಜ್ಯೋತಿಯಾದರು.

ಪ್ರಣತೆ ಒಡೆದಿತ್ತು, ತೈಲ ಚೆಲ್ಲಿತ್ತು
ಬತ್ತಿ ಬಿದ್ದಿತ್ತಯ್ಯಾ, ಜ್ಯೋತಿ ನಂದಿತ್ತು
ಕೂಡಲಸಂಗನ ಶರಣರ ಮನ
ನೊಂದಿತ್ತಯ್ಯಾ, ನೊಂದಿತ್ತಯ್ಯಾ...

ಈ ಹಾಡನ್ನು ನೀವೂ ಕೇಳಿರಬಹುದು. ಆರೇಳು ವರ್ಷಗಳ ಕೆಳಗೆ ಈ ಹಾಡು ಸೂಚಿಸುತ್ತಿರುವ ದುರಂತದ ಗುಂಗಿನಲ್ಲೇ ಇದ್ದ ನಾನು 'ಮುಂದಣ ಕಥನ’ ನಾಟಕ ಬರೆಯುವಾಗ (ಆ ನಾಟಕ  ಇದೇ ವೆಬ್‌ಸೈಟಿನಲ್ಲಿದೆ) ಈ ವಚನಕ್ಕಾಗಿ ಬಸವಣ್ಣನವರ ವಚನ ಸಂಪುಟವನ್ನು ಹುಡುಕಿದೆ. ಅಲ್ಲಿದ್ದ ವಚನದಲ್ಲಿ ಅಂಬಯ್ಯ ನುಲಿ ಹಾಡಿದ್ದ ವಚನದ ಒಂದೆರಡು ಸೂಚನೆಗಳು ಮಾತ್ರ ಇದ್ದವು; ಆದರೆ ವಚನದ ಧ್ವನಿ ಬೇರೆಯಿತ್ತು. ಬಸವಣ್ಣನವರ ವಚನ ಹೀಗಿದೆ:  

ನಾನೊಂದು ಕಾರಣಕ್ಕೆ ಮರ್ತ್ಯಕ್ಕೆ ಬಂದೆನು
ಬಂದ ಬಳಲಿಕೆಯ ಪರಿಹರಿಸಲಿಕ್ಕೆ ಚನ್ನಬಸವಣ್ಣ ಬಂದನು
ಇನ್ನು ಬಾರದಂತೆ ಪ್ರಭುದೇವರು ಬಂದರು.
ಇದಕ್ಕೆ ಆಜ್ಞಾಕರ್ತೃ ಮಡಿವಾಳ ಮಾಚಿ ತಂದೆ ಬಂದನು    
ನಾನಿನ್ನಾರಿಗಂಜೆನು, ಬದುಕಿದೆನು
ಕಾಣಾ ಕೂಡಲಸಂಗಮದೇವಾ

ಬಸವಣ್ಣನವರು ತಾನೊಂದು 'ಕಾರಣಕ್ಕೆ’ ಭುವಿಗೆ ಬಂದಾಗ, ಚೆನ್ನಬಸವಣ್ಣ, ಅಲ್ಲಮಪ್ರಭು, ಮಡಿವಾಳ ಮಾಚಿದೇವರು ಮೊದಲಾದ ಸಮಾನಮನಸ್ಕರು ಜೊತೆಗೂಡಿದಾಗ ಉಕ್ಕಿದ ಧೈರ್ಯ, ಆತ್ಮವಿಶ್ವಾಸ, ನೆಮ್ಮದಿಯನ್ನು ಈ ವಚನ ಸೂಚಿಸುವಂತಿದೆ. ಆದರೆ ಅಂಬಯ್ಯ ನುಲಿ ಹಾಡಿದ ವಚನದಲ್ಲಿ ಈ ಆತ್ಮವಿಶ್ವಾಸದ ಬದಲಿಗೆ ದುರಂತದ ಭಾವವಿತ್ತು. ಬಸವಣ್ಣನವರ ವಚನವನ್ನು ಮುಂದೆ ಯಾವುದೋ ಕಾಲದ ಕವಿ ಮರುಬರವಣಿಗೆ ಮಾಡಿರಬಹುದು. ಶರಣ ಕ್ರಾಂತಿಯ ದುರಂತವನ್ನು ನೆನೆಯುತ್ತಾ ಬರೆಯಲಾದ ಈ ವಚನದ ಮೊದಲ ಭಾಗದಲ್ಲಿ ಶರಣ ಚಳುವಳಿಯಲ್ಲಿ ಭಾಗಿಯಾದವರು ಪ್ರಣತೆ, ತೈಲ, ಬತ್ತಿ, ಜ್ಯೋತಿಗಳಾಗಿದ್ದರು ಎಂಬ ಆಶಾದಾಯಕವಾದ ಪಾಸಿಟಿವ್ ಪ್ರತಿಮೆಗಳಿವೆ; ಮುಂದಿನ ಪಂಕ್ತಿಯಲ್ಲಿ ಈ ಚಿತ್ರಗಳಿಗೆ ತದ್ವಿರುದ್ಧ ಪ್ರತಿಮೆಗಳನ್ನು ಬಳಸಿರುವ ಜಾಣ ಕವಿಗೆ ಒಂದು ಕವಿತೆಯ ಎರಡು ಪಂಕ್ತಿಗಳಲ್ಲಿ ತದ್ವಿರುದ್ಧ ಪ್ರತಿಮೆಗಳನ್ನು ಬಳಸಿದಾಗ ಹುಟ್ಟುವ ಪರಿಣಾಮದ ಬಗ್ಗೆ ಸ್ಪಷ್ಟವಾದ ಅರಿವಿದ್ದಂತಿದೆ. 

ಅಂಬಯ್ಯ ನುಲಿಯವರ ಕಂಠದಲ್ಲಿ ಈ ಹಾಡು ಕೇಳಿದಾಗಿನಿಂದ ‘ನಾನು ಬಂದ ಕಾರ್ಯಕ್ಕೆ ನೀವು ಬಂದಿರಯ್ಯಾ’ ಎಂಬ ನಿವೇದನೆ ಎಲ್ಲ ಕಾಲದಲ್ಲೂ ನಾವು ಮಾಡಹೊರಡುವ ಅರ್ಥಪೂರ್ಣ ಕೆಲಸಗಳಿಗೆ ಬಂದು ಸೇರಿಕೊಳ್ಳುವ ಗೆಳೆಯ, ಗೆಳತಿಯರನ್ನು ಕುರಿತ ರೂಪಕ ಎನ್ನಿಸಿತು; ಈ ನಿವೇದನೆ ನನ್ನನ್ನು ಬಲವಾಗಿ ಹಿಡಿಯಿತು. ಅಂಬಯ್ಯ ಹಾಡಿದ ರೆಕಾರ್ಡೆಡ್ ಹಾಡು ಕೂಡ ಸಿಕ್ಕಿತು. ನಂತರ ಗೆಳೆಯ ವಚನ ಉಮೇಶ್ ನನ್ನ 'ಮುಂದಣ ಕಥನ’ ನಾಟಕಕ್ಕೆ ಈ ಹಾಡು ಹಾಡಿಸಲು ಅಂಬಯ್ಯ ನುಲಿಯವರನ್ನು ಗೆಳೆಯ ಎಸ್. ಆರ್. ರಾಮಕೃಷ್ಣರ  ಮ್ಯೂಸಿಕ್ ಮಿಂಟ್ ಸ್ಟುಡಿಯೋಕ್ಕೆ ಕರೆ ತಂದರು. ರಾಮಕೃಷ್ಣರ ಸಂಗೀತ ನಿರ್ದೇಶನದಲ್ಲಿ ಅಂಬಯ್ಯ ನುಲಿ ನಿಧಾನಗತಿಯಲ್ಲಿ ಹಾಡಿದ ಪ್ರತಿಮೆಗಳು ವಚನಯುಗದ ರುದ್ರತೆಯನ್ನು ಇನ್ನಷ್ಟು ಆಳವಾಗಿಸಿದವು.   

ಈ ನಡುವೆ ಮತ್ತೊಂದು ಸಂಜೆ ಈ ವಚನ ನೆನಪಾಯಿತು. ಮೈಸೂರಿನಲ್ಲಿ ನಡೆದ ಸೆಮಿನಾರೊಂದರ ನಂತರದ ಸಂಧ್ಯಾ ಪಾರ್ಟಿಯಲ್ಲಿ ಹಲವು ಧಾರೆಗಳ ಗೆಳೆಯರು ಸೇರಿದ್ದರು. ಅಲ್ಲಿ ದಲಿತ ಚಿಂತನೆ, ಸೋಷಲಿಸ್ಟ್ ನೋಟ, ಸಾಹಿತ್ಯ ವಿಮರ್ಶೆ, ರಂಗಭೂಮಿ, ಪತ್ರಿಕೋದ್ಯಮ, ಸೋಷಿಯಲ್ ಮೀಡಿಯಾ, ಟೀಚಿಂಗ್, ರೈತ ಚಳುವಳಿ ಮುಂತಾದ ಹಲವು ವಲಯಗಳ ಗೆಳೆಯರಿದ್ದರು. ಅವರೆಲ್ಲರ ಜೊತೆ ಮಾತಾಡುತ್ತಿದ್ದಾಗ, ಈ ಹಾಡನ್ನು ನುಡಿಯಲೆತ್ನಿಸುತ್ತಾ ಅದರ ಅರ್ಥವನ್ನು ನಮ್ಮ ಕಾಲಕ್ಕೆ ಅನ್ವಯಿಸಲೆತ್ನಿಸಿದೆ: ‘ಕಲ್ಯಾಣದ ಕನಸು ಎಂದೂ ಮಾಯವಾಗುವುದಿಲ್ಲ; ಅದು ಹೀಗೆ ನೀವೆಲ್ಲ ಒಟ್ಟಾಗಿ ಸೇರಿ ಸೆಮಿನಾರ್ ಮಾಡುವುದರಲ್ಲೂ ಇರುತ್ತದೆ. ಇದೇ ಮೈಸೂರಿನಲ್ಲಿ ವಿಚಾರವಾದಿ ಕೆ. ರಾಮದಾಸ್ ಥರದವರು ಮಾಡಿದ ಕೆಲಸಗಳನ್ನು ನಿಮ್ಮದೇ ರೀತಿಯಲ್ಲಿ ಮುಂದುವರಿಸುತ್ತಿರುವ ನೀವು ಕೂಡ ಕಲ್ಯಾಣದ ಶರಣರಂತೆ ನಾನು ಬಂದ ಕಾರ್ಯಕ್ಕೆ ಅವನೂ ಇವನೂ, ಇವಳೂ ಅವಳೂ ಬಂದರಯ್ಯಾ ಎಂಬಂತೆ ಬಂದು ಅನೇಕ ಬಗೆಯ ಸಾಂಸ್ಕೃತಿಕ ಉದ್ದೇಶಗಳಿಗಾಗಿ ಹೀಗೆ ಸೇರಿಕೊಳ್ಳುತ್ತಲೇ ಇರುತ್ತೀರಿ...’  

ನಾಲ್ಕು ವರ್ಷದ ಕೆಳಗೆ ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮಿಗಳು 'ಮತ್ತೆ ಕಲ್ಯಾಣದೆಡೆಗೆ’ ಸಾಂಸ್ಕೃತಿಕ ಜಾಥಾ ಮಾಡಿದಾಗ ಹಲವು ಪಂಥದ ಲೇಖಕರು ಅದಕ್ಕೆ ಬಂದು ಸೇರಿದರು; ’ನಾನು ಬಂದ ಕಾರ್ಯಕ್ಕೆ’ ವಚನ ಮತ್ತೆ ನೆನಪಾಯಿತು. ಜಾತಿ, ವರ್ಗ, ಸಾಹಿತ್ಯ ಮಾರ್ಗ, ಸಾಹಿತ್ಯ ಪಂಥಗಳನ್ನು ಮೀರಿ ಕನ್ನಡ ಕಲ್ಪನಾವಿಲಾಸವನ್ನು ಮತ್ತೆ ಮತ್ತೆ ಕಾಡುವ ಕಲ್ಯಾಣದ ರೂಪಕದ ಅರ್ಥಪೂರ್ಣತೆ ಇನ್ನಷ್ಟು ಬೆಳೆಯುತ್ತಾ ಹೋಯಿತು. ವಚನ ಚಳುವಳಿಯಿಂದ ಪ್ರೇರೇಪಿತವಾದ 'ನಾನು ಬಂದ ಕಾರ್ಯಕ್ಕೆ ನೀವು ಬಂದಿರಯ್ಯಾ’ ಎಂಬ ಆಧುನಿಕ ವಚನದ ಆರಂಭದ ಧ್ವನಿ ಒಂದು ಉತ್ತಮ ಉದ್ದೇಶಕ್ಕಾಗಿ ಪ್ರಾಮಾಣಿಕವಾಗಿ ಒಟ್ಟಾಗುವ ಎಲ್ಲ ಜನರ ವಲಯಗಳಲ್ಲೂ ಮರುದನಿ ಪಡೆಯಬಲ್ಲದು. ಕಳೆದ ವಾರ ಈ ಅಂಕಣದಲ್ಲಿ ಬರೆದ 'ಒಂದು ಸೆಲ್ಫ್ ಮತ್ತೊಂದು ಸೆಲ್ಫನ್ನು ಸಂಧಿಸುವುದೆ ?’ ಎಂಬ ಪ್ರಶ್ನೆಯನ್ನು ಹಲವರು ಸೂಕ್ಷ್ಮವಾಗಿ ವಿಸ್ತರಿಸಿದ್ದನ್ನು ಆ ಬರಹದ ಕಾಮೆಂಟ್ಸ್ ವಿಭಾಗದಲ್ಲಿ ನೀವು ನೋಡಿರಬಹುದು: 

ಮಂಜುನಾಥ್ ನೆಟ್ಕಲ್, ವಿಕ್ರಮ ವಿಸಾಜಿ, ಮೋಹನ್ ಮಿರ್ಲೆ, ದೇವೀಂದ್ರಪ್ಪ, ಗಂಗರಾಜು, ರೂಪ ಹಾಸನ, ನಿರಂಜನಮೂರ್ತಿ, ವಿಜಯೇಂದ್ರಕುಮಾರ್‍, ಕುಸುಮ, ಭೀಮೇಶ ಯರಡೋಣಿ, ಕೃಷ್ಣಕುಮಾರ್‍, ವತ್ಸಲ, ಡಾ,ಪ್ರಭಾಕರ್ ಮುಂತಾದ ಗೆಳೆಯ, ಗೆಳತಿಯರು ’ಆತ್ಮಾನುಸಂಧಾನ’ಕ್ಕೆ ಹಲವು ವ್ಯಾಖ್ಯಾನ, ಉದಾಹರಣೆಗಳನ್ನು ಕೊಟ್ಟರು. ಇವೆಲ್ಲವೂ ‘ನಾನು ಬಂದ ಕಾರ್ಯಕ್ಕೆ ನೀವು ಬಂದಿರಿ’ ಎಂಬ ರೂಪಕವನ್ನು ವಿಸ್ತರಿಸಿದಂತೆಯೇ ಈಗ ನನಗೆ  ಕಾಣತೊಡಗಿವೆ. ಇಂಥ ಸಮಾನ ಸ್ಪಂದನಗಳೇ ವಚನದ ಕೊನೆಯ ಭಾಗದಲ್ಲಿರುವ ‘ಬತ್ತಿ ಬಿದ್ದಿತ್ತಯ್ಯಾ, ಜ್ಯೋತಿ ನಂದಿತ್ತು’ ಎಂಬ ಚಿತ್ರ ಹುಟ್ಟಿಸುವ ದುರಂತ, ದಿಗ್ಭ್ರಮೆಗಳನ್ನು ಹಿಮ್ಮೆಟ್ಟಿಸಬಲ್ಲವು.


ಮತ್ತೆ ಈ ಬರಹದ ಆರಂಭದ ಪ್ರಶ್ನೆಗೆ ಮರಳುವೆ: ಅಂಬಯ್ಯ ನುಲಿ ಹಾಡಿದ ಹಾಡು ನಮ್ಮಂಥವರಲ್ಲಿ ವಿಷಾದ ಉಕ್ಕಿಸುವುದಕ್ಕೆ ಈಗಾಗಲೇ ನಮ್ಮೊಳಗೆ ಇರುವ ವಚನ ಚಳುವಳಿಯ ಆಸೆ, ಭರವಸೆಗಳ ಅತ್ಯುತ್ತಮ ದಿನಗಳು ಹಾಗೂ ಕಲ್ಯಾಣದ ಪತನದ ಚರಿತ್ರೆಯೂ ಕಾರಣವಾಗಿರಬಲ್ಲದು. ಜೊತೆಗೆ ಈ ವಿಷಾದಕ್ಕೆ ಹಾಡನ್ನು ರೂಪಿಸಿರುವ ರಾಗದ ಓಟವೂ ಕಾರಣ ಎನ್ನಿಸಿದಾಗ, ಈ ಹಾಡಿನಲ್ಲಿ ಮಾರ್ವಾ ರಾಗದ ಛಾಯೆಯಿದೆ ಅನ್ನಿಸಿತು. ’ಮಾರ್ವಾ ಛಾಯೆಯೂ ಇದೆ; ಪುರಿಯಾ ಧನಶ್ರೀ ರಾಗವನ್ನು ಹೆಚ್ಚು ಬೇಸ್ ಮಾಡಿದಂತಿದೆ’ ಎಂದು ಈ ಹಾಡಿಗೆ ಟ್ಯೂನ್ ಮಾಡಿದ ರಾಮಕೃಷ್ಣ ಹೇಳಿದರು: ‘ಅಂಬಯ್ಯ ನುಲಿಯವರ ಹಾಡಿನಲ್ಲಿ ಏಕಕಾಲಕ್ಕೆ ವಚನದ ಭಾವಗಳ ಮಂಡನೆ ಹಾಗೂ ಭಾವನೆಗಳ ಹದವಾದ ನಿಯಂತ್ರಣ ಎರಡೂ ಸಾಧ್ಯವಾಗಿದೆ. ಆದ್ದರಿಂದಲೇ ಅದು ‘ಗೋಳು’ ಅನ್ನಿಸುವುದಿಲ್ಲ. ಕೆಲ ವರ್ಷಗಳ ನಂತರ ಮತ್ತೆ ಈ ಹಾಡು ಕೇಳಿದಾಗ ‘ಮುಂದಣ ಕಥನ’ ನಾಟಕ ಹಾಗೂ ಅಂಬಯ್ಯನವರ ನಿರಾಯಾಸ ಮಂಡನೆಯ ಕಲೆ ಎರಡೂ ನೆನಪಾದವು. ವಿಷಾದವನ್ನು ಅತಿ ಮಾಡದೆ ಹೇಳುವ ಈ ಬಗೆ ವಿಸ್ಮಯ ಹುಟ್ಟಿಸಿತು. ಯಾತನೆಯ ಜೊತೆಗೇ, ಫಿಲಸಾಫಿಕಲ್ ಆದ, ಬಹುತೇಕ ನಿರ್ಲಿಪ್ತವಾದ, ಸ್ವೀಕಾರವೂ ಇಲ್ಲಿ ಕಾಣುತ್ತದೆ. ಇದರಲ್ಲಿ ರಾಗ ಅಥವಾ ಟ್ಯೂನ್‌ನ ಪಾತ್ರವೆಷ್ಟು; ಹಾಡುಗಾರ ಅದನ್ನು ನೋಡಿರುವ ರೀತಿಯ ಪಾಲೆಷ್ಟು; ಕೇಳುವವರ ಗ್ರಹಿಕೆಯ ಪಾಲೆಷ್ಟು…  ಹೇಳುವುದು ಕಷ್ಟ.’  

ಇದೆಲ್ಲ ಬರೆಯುತ್ತಿರುವಾಗ ಮತ್ತೆ ಬಸವಣ್ಣನವರ ‘ನಾನೊಂದು ಕಾರಣಕ್ಕೆ ಮರ್ತ್ಯಕ್ಕೆ ಬಂದೆನು’ ವಚನ ಕಣ್ಣೆದುರು ಬಂತು. ಈ ವಚನದಲ್ಲಿ ಬಸವಣ್ಣನವರು ತಮ್ಮ ಜೀವಿತದ ಉದ್ದೇಶವನ್ನು ವಿವರಿಸಿಕೊಳ್ಳಲೆತ್ನಿಸಿದ ರೀತಿ, ‘ನಾನು ಬಂದ ಕಾರ್ಯಕ್ಕೆ’ ಎಂಬ ಜನಪ್ರಿಯ ವಚನದಿಂದ ಹಿನ್ನೆಲೆಗೆ ಸರಿಯಿತೇ ಎಂಬ ಸಣ್ಣ ಅನುಮಾನವೂ ಹುಟ್ಟಿತು. ನಾವು ಈ ಭೂಮಿಯಲ್ಲಿ ಬದುಕಿರುವ ಕಾರಣವನ್ನು ಮತ್ತೆ ಮತ್ತೆ ಡಿಫೈನ್ ಮಾಡಿಕೊಳ್ಳುತ್ತಿರಬೇಕೆಂಬ ಮಹತ್ವದ ಫಿಲಾಸಫಿಯನ್ನು ಸೂಚಿಸುವ ಬಸವಣ್ಣನವರ ವಚನ ನಮ್ಮೆಲ್ಲ ಕ್ರಿಯೆಗಳಿಗೂ  ಮಾರ್ಗದರ್ಶನದಂತಿದೆ. ಇದು ಬಸವಣ್ಣನವರ ‘ಅಧಿಕೃತ’ ನೋಟವೋ? ಅಥವಾ ಬಸವಣ್ಣನವರ ಪರವಾಗಿ ಘಟನಾವಳಿಗಳನ್ನು ನೋಡಿದ ಅವರ ನಂತರದ ಓದುಗ-ಕವಿಯ ನೋಟ ‘ಅಧಿಕೃತ’ವೋ?

ಇದೆಲ್ಲ ಅಂತಿಮವಾಗಿ ಕಾವ್ಯ- ಕವಿ-ಓದುಗಿ-ಓದುಗ ಕುರಿತ ನಮ್ಮ ಎಂದಿನ ಪ್ರಶ್ನೆಗಳಿಗೇ ಬಂದು ನಿಲ್ಲುತ್ತದೆ!

ಕೊನೆ ಟಿಪ್ಪಣಿ: 
ಅಂಬಯ್ಯ ನುಲಿಯವರು ಹಾಡಿರುವ ಹಾಡನ್ನು https://natarajhuliyar.com ವೆಬ್‌ಸೈಟ್ ಉಸ್ತುವಾರಿ ನೋಡಿಕೊಳ್ಳುವ ಬಾಲಕ ಸಮಂತ ಆಡಿಯೋ ಪ್ಲೇಯರ್ ಗೆ ಜೋಡಿಸಿದ್ದಾನೆ. ಓದಿದಾಗ, ಹಾಡಿದಾಗ ಭಾವಗಳು ಬದಲಾಗುವ ಬಗೆಯನ್ನು ಬಲ್ಲ ನಿಮ್ಮೊಳಗೆ ಈ ಹಾಡು ಎಂಥೆಂಥ ಭಾವ ಉಕ್ಕಿಸುತ್ತದೆ ಎಂಬುದನ್ನು ಇಲ್ಲಿ ಕೊಟ್ಟಿರುವ ಆಡಿಯೋ ದಲ್ಲಿ ಕೇಳಿ.

 

 

ಈ ಹಾಡು ಕೇಳಿದ ಮೇಲೆ, ವಿರಾಮವಾಗಿ ಬಸವಣ್ಣನವರ ‘ನಾನೊಂದು ಕಾರ್ಯಕ್ಕೆ…’ ವಚನವನ್ನೂ ಹತ್ತಿರದಿಂದ ಓದಿ ನೋಡಿ.

Share on:

Comments

14 Comments



| S R RAMAKRISHNA

Superb read. Raag Puriya shares some Marwa elements and the song is leaning towards the Puriya Approach


| ಚಂದ್ರಶೇಖರ ತಾಳ್ಯ

ಆ ಶತಮಾನದ ದುರಂತ ಕಥನವನ್ನು ಮೂಲ ವಚನಕ್ಕಿಂತಲೂ ಮರುನಿರೂಪಣೆಯ ವಚನ ಹೆಚ್ಚು ಪರಿಣಾಮಕಾರಿಯಾಗಿ ದುರಂತವನ್ನು ಕಣ್ಮುಂದೆ ನಿಲ್ಲಿಸಿ ಎದೆಯನ್ನು ಆರ್ದ್ರಗೊಳಿಸುವಂತಿದೆ. ನಿಮ್ಮ ತಲ್ಲಣ ಪ್ರಾಮಾಣಿಕವಾದುದು. ತುರುಗಾಹಿ ರಾಮಣ್ಣನ ವಚನ ಇದೇ ಭಾವವನ್ನು ವಿವರಿಸುವಂತಿದೆ: \r\nಬಂದಿತ್ತು ದಿನ ಬಸವಣ್ಣ ಕಲ್ಲಿಗೆ\r\nಚನ್ನಬಸವಣ್ಣ ಉಳುವೆಯಲ್ಲಿಗೆ\r\nಪ್ರಭು ಅಕ್ಕ ಕದಳಿದ್ವಾರಕ್ಕೆ\r\nಮಿಕ್ಕಾದ ಪ್ರಮಥರೆಲ್ಲರೂ ತಮ್ಮ ಲಕ್ಷ್ಯಕ್ಕೆ\r\nನಾ ತುರುವಿನ ಬೆಂಬಳಿಯಲ್ಲಿ ಹೋದ ಮರೆಯಲ್ಲಿ\r\nಅಡಗಿಹರೆಲ್ಲರು ಅಡಗಿದುದ ಕೇಳಿ ನಾ\r\nಗೋಪತಿನಾಥ ವಿಶ್ವೇಶ್ವರಲಿಂಗದಲ್ಲಿಯೆ ಉಡುಗುವೆನು.


| ವಿಜಯೇಂದ್ರಕುಮಾರ್ ಜಿ.ಎಲ್

ಇದು ಸಾಂದರ್ಭಿಕ ಚಿತ್ರ ಮತ್ತು ಸಂಗೀತದೊಂದಿಗೆ ವಚನದ ಹಾಡುಗಾರಿಕೆಯನ್ನು ಜೋಡಿಸಿ ಬಸವಣ್ಣನವರ ಆಶಯಗಳನ್ನು ಕೇಳಿಸುವ, ಕಾಣಿಸುವ, ಭಾವಿಸುವ ವಿಶಿಷ್ಟ ಬರಹ. ಈ ಬರಹ ಓದುವಾಗ ಚರಿತ್ರೆ ಮತ್ತು ವರ್ತಮಾನಗಳೆರಡೂ ಕಣ್ಣ ಮುಂದೆ ಬಂದು ಸಿಟ್ಟು ಮತ್ತು ದುಃಖ ಉಕ್ಕಿ ಬಂತು . ಯಾಕೆಂದರೆ, ಬಸವಣ್ಣನವರನ್ನು ಕೊಂದ ಕೈಗಳೇ ಗಾಂಧಿಯನ್ನೂ ಕಲಬುರ್ಗಿಯನ್ನೂ ಗೌರಿಯನ್ನೂ ಕೊಂದದ್ದು. ಆದರೂ ಕೊಂದವರಿಗಾಗಲೀ, ಅವರ ಸಮ್ಮೋಹನಕ್ಕೆ ಒಳಗಾಗಿರುವ ಬಹುಸಂಖ್ಯಾತರಿಗಾಗಲೀ ಈ ಅಮಾನವೀಯ ಕೊಲೆಗಳ ಬಗ್ಗೆ ಕಿಂಚಿತ್ತೂ ಪಾಪಪ್ರಜ್ಞೆಯಿಲ್ಲ. ಪಶ್ಚಾತಾಪವಿಲ್ಲ. ನೋವುಣ್ಣದ ಈ ಜನಗಳ ಕಂಡು ನನಗೆ ತುಂಬಾ ಅಸಹಾಯಕತೆ ಕಾಡುತ್ತದೆ. ಬಹಳ ದೊಡ್ಡವರು ಎಂದು ನಾನು ಅಂದುಕೊಂಡಿದ್ದ ವ್ಯಕ್ತಿಗಳಲ್ಲಿ ಬಹಳಷ್ಟು ಮಂದಿ ಆಳದಲ್ಲಿ ಉಗ್ರ ಜಾತಿವಾದಿಗಳೂ, ಕೋಮುವಾದದ ಬೆಂಬಲಿಗರೂ, ಕೊಲೆಯ ಸಮರ್ಥಕರೂ ಆಗಿದ್ದಾರೆ. ಇದು ಅತ್ಯಂತ ನೋವಿನ ಸಂಗತಿ. ಕಲಬುರ್ಗಿಯವರನ್ನು ನಾನು ತುಂಬಾ ಹತ್ತಿರದಿಂದ ಕಂಡಿದ್ದೇನೆ .\r\nತಮ್ಮ ಇಡೀ ಜೀವಮಾನವನ್ನು ಸಂಶೋಧನೆಗಾಗಿ, ವಚನ ಸಾಹಿತ್ಯದ ಆಶಯಗಳ ವಿಸ್ತರಣೆಗಾಗಿ ಮುಡಿಪಾಗಿಟ್ಟ ಅವರನ್ನು ಕೊಂದ ರೀತಿ; ಅವರ ಕೊಲೆಯ ಸಂದರ್ಭದಲ್ಲಿ ಸ್ವತಃ ಲಿಂಗಾಯತ ಸಮುದಾಯ ತೋರಿದ ಮಹಾಮೌನವನ್ನು ನೆನಪಿಸಿಕೊಂಡರೆ ದುಃಖ ಒತ್ತರಿಸಿ ಬರುತ್ತದೆ. ಕೋಮುವಾದದ Network ಮಹಿಮೆಯಿಂದ \\\"ವಚನಕಾರ ಬಸವಣ್ಣ\\\" ದೇವಾಲಯದ ಹೊರಗೆ ಪ್ರತಿಷ್ಠಾಪಿಸಲ್ಪಟ್ಟ \\\"ಕಲ್ಲಿನ ಬಸವ\\\"ಆಗಿಬಿಟ್ಟಿದ್ದಾನೆ. ಪ್ರಣತೆ ಒಡೆದಿತ್ತು, ತೈಲ ಚೆಲ್ಲಿತ್ತು; ಬತ್ತಿ ಬಿದ್ದಿತ್ತಯ್ಯಾ, ಜ್ಯೋತಿ ನಂದಿತ್ತು. ಇನ್ನೆಲ್ಲಿಯ ಕಲ್ಯಾಣ? ಎಂಬ ಪ್ರಶ್ನೆ ಎದುರಿಗಿದೆ. ಉರುಳಿಸುವವರೇ ಅಧಿಕಾರದಲ್ಲಿರುವ, ಉರುಳಿಸುವುದನ್ನು ಸಂಭ್ರಮಿಸುವವರೇ ಹೇರಳವಾಗಿರುವ ಈ ದುರಿತ ಕಾಲದಲ್ಲಿ ಕಟ್ಟುವ ಕೆಲಸಕ್ಕೆಕೈ ಜೋಡಿಸುವವರು ಅತ್ಯಂತ ವಿರಳ. ಹಾಗಾಗಿ, ಬಸವಣ್ಣನವರು, ಅವರ ಸಮಕಾಲೀನ ವಚನಕಾರರು ಸಮಾನತೆ ಮತ್ತು ಜಾತ್ಯಾತೀತತೆಯ ತಳಹದಿಯ ಮೇಲೆ ಕಟ್ಟಬಯಸಿದ ನವಸಮಾಜ ಇನ್ನೂ ನಮ್ಮಗಳ ಮುಂದೆ ಒಂದು ಆಶಯವಾಗಿಯೇ ಉಳಿದಿದೆ. ಹಲವು ರೂಪಗಳಲ್ಲಿ ಕೋಮುವಾದದ ದಿಗ್ವಿಜಯ ವಿಘ್ನಗಳಿಲ್ಲದೆ ಸಾಗಿದೆ!ಕೋಮುವಾದದ ಈ ದಿಗ್ವಿಜಯ ಇಂದು ನಿನ್ನೆಯದಲ್ಲ. ಸಾವಿರಾರು ವರ್ಷಗಳ ಚರಿತ್ರೆಯಿದೆ. ಇದನ್ನೇ ಡಾ. ಬಿ.ಆರ್. ಅಂಬೇಡ್ಕರ್ ಅವರು \"ಪ್ರಾಚೀನ ಭಾರತದಲ್ಲಿ ಕ್ರಾಂತಿ ಮತ್ತು ಪ್ರತಿಕ್ರಾಂತಿ\" ಎಂಬ ಪುಸ್ತಕದಲ್ಲಿ ವಿವರಿಸಿದ್ದಾರೆ.ಎಲ್ಲಾ ಬಾಗಿಲುಗಳು ಮುಚ್ಚಿದ ದುಗುಡಗಳ ನಡುವೆ ಕಿರುಕಿಂಡಿಯನ್ನು ತೆರೆದಂತೆ, ನಿಮ್ಮ ಬರಹ \\\"ನಾನೊಂದು ಕಾರಣಕ್ಕೆ/ ನಾನೊಂದು ಕಾರ್ಯಕ್ಕೆ\\\" ಎಂಬ ಬಸವಣ್ಣನವರ ವಚನವನ್ನು ಒಂದು ರೂಪಕವಾಗಿ ವಿಶ್ಲೇಷಿಸುತ್ತಾ, ಸಾಂಸ್ಕೃತಿಕ ಉದ್ದೇಶಗಳಿಗಾಗಿ ವಿವಿಧ ದಿಕ್ಕುಗಳಿಂದ ಸ್ನೇಹಿತ ಸ್ನೇಹಿತೆಯರು ಒಂದೆಡೆ ಸೇರಬಹುದಾದ ಆಶಯಭಾವವನ್ನು ನಿದರ್ಶನಗಳ ಮೂಲಕ ಪ್ರಕಟಿಸಿದೆ. ಆದರೆ ನನಗೆ ಮಾತ್ರ ಆ ವಚನದ \\\"ನಾನೊಂದು\\\" ಎಂಬ ಶಬ್ದ \\\"ನಾನು ಒಂದು\\\" ಎಂಬರ್ಥದ ಬದಲಿಗೆ \\\"ನಾ ನೊಂದು\\\"-\\\"ನೊಂದು\\\" ಎಂಬರ್ಥವನ್ನೇ ಜಿನುಗಿಸುತ್ತಿದೆಯೇನೋ ಅಂತ ಫೀಲ್ ಆಗ್ತಿದೆ.\r\n\r\n


| ಮೋಹನ್ ಮಿರ್ಲೆ

ಒಂದೇ ಕವಿತೆ ಪಠ್ಯ ರೂಪದಲ್ಲಿ ಮತ್ತು ಹಾಡಿನ ರೂಪದಲ್ಲಿ ಬೇರೆ ಬೇರೆ ಭಾವ ತಾಳುವುದು ಹೊಸದೇನಲ್ಲ. ಸಂಗೀತಕ್ಕಿರುವ ಶಕ್ತಿಯೇ ಅಂತಹುದು. ಈ ವಿಚಾರವಾಗಿಯೇ ಹಿಂದೆ ಹಲವು ವಿವಾದಗಳೂ ಆಗಿವೆ. ವಚನಗಳು ಮತ್ತು ಪ್ರಸಿದ್ಧ ಕವಿಗಳ ಕೆಲವು ಗೀತೆಗಳು ನಾನು ಹಾಡಿದ್ದರಿಂದಲೆ ಪ್ರಸಿದ್ಧಿಗೆ ಬಂದವು ಎಂದು ಹೇಳಿದ ಪ್ರಸಿದ್ಧ ಹಾಡುಗಾರರೊಬ್ಬರು ಪ್ರತಿರೋಧ ಎದುರಾಗುತ್ತಿದ್ದಂತೆ ಕ್ಷಮೆ ಕೇಳಿದರು ಎಂಬ ಸುದ್ದಿಯನ್ನು ದಶಕಗಳ ಹಿಂದೆ ಕೇಳಿದ ನೆನಪು. ಇನ್ನು, ನಾನು ಬಂದ ಕಾರ್ಯಕ್ಕೆ ನೀವು ಬಂದಿರಯ್ಯಾ ಎಂಬ ನಿವೇದನೆ ಎಲ್ಲ ಕಾಲಕ್ಕೂ, ಎಲ್ಲ ಚಾರಿತ್ರಿಕ ಘಟನಾವಳಿಗಳಿಗೂ, ಸಾಮೂಹಿಕ ನಾಯಕತ್ವದಲ್ಲಿ ನಡೆದ ಎಲ್ಲ ಹೋರಾಟಗಳಿಗೂ, ಒಂದೇ ಉದ್ದೇಶಕ್ಕೆ ಹೋರಾಡುವ ಎಲ್ಲ ಗುಂಪು, ಸಂಘಟನೆಗಳಿಗೂ, ಎಲ್ಲ ಪಂಥ, ಮಾರ್ಗಗಳಿಗೂ ಅನ್ವಯವಾಗಬಲ್ಲ ಒಂದು ದೊಡ್ಡ ರೂಪಕವಾಗಿದೆ. ಎಲ್ಲರನ್ನೂ ಜೊತೆಗೆ ಒಯ್ಯುವ ಸಾಮೂಹಿಕ ನಾಯಕತ್ವವನ್ನು ಈ ವಚನ ಪ್ರತಿಪಾದಿಸುವಂತಿದೆ. ಇಲ್ಲಿ ಆತ್ಮವಿಶ್ವಾಸ ಮತ್ತು ದುರಂತದ ಎರಡು ಭಾವಗಳಿದ್ದು, ಈ ವಚನದ ಬೇರೆ ಬೇರೆ ಆವೃತ್ತಿಗಳನ್ನು ನೋಡಿದರೆ ಮೂಲ ಎಷ್ಟು? ಪ್ರಕ್ಷಿಪ್ತ ಎಷ್ಟು ಎಂಬ ಪ್ರಶ್ನೆ ಹಾಗೆಯೇ ಉಳಿಯುತ್ತದೆ. ದ್ವಿತೀಯಾರ್ಧದ ದುರಂತದ ಭಾವ ನಂತರ ಬಂದ ಕವಿಯೊಬ್ಬನ ತಲ್ಲಣವಿರಬಹುದೆ? ಎಂಬ ಅನುಮಾನವಂತೂ ಇದ್ದೇ ಇದೆ.


| ವಿಜಯೇಂದ್ರ ಕುಮಾರ್‌ ಜಿ.ಎಲ್.

ಗದ್ಯದ ಲಯದೊಂದಿಗೆ ಕಾವ್ಯಾತ್ಮಕತೆ ಬೆರೆಸಿ, ಸಂಕೀರ್ಣವೂ ತಾತ್ವಿಕವೂ ಆದ ವಿಚಾರಗಳನ್ನೂ ಸಹ ಅತ್ಯಂತ ಸರಳವಾಗಿ ನುಡಿಯುವುದು ಹೇಗೆ ಎಂಬ ಕಲೆಯನ್ನು ನಾವು ವಚನಕಾರರ ಮೂಲಕವೇ ಕಲಿಯಬೇಕು. ಆದರೆ ತಮಾಷೆಯ ಸಂಗತಿಯೆಂದರೆ, ವಚನಕಾರರ ಭಾಷಿಕ ಶೈಲಿಯನ್ನು (ಹಾಗೆಯೇ ಕುವೆಂಪು, ಬೇಂದ್ರೆ, ದೇವನೂರರ ಭಾಷಿಕಶೈಲಿಯನ್ನು) ಅನುಕರಿಸಲು ಹೋಗಿ ಎಷ್ಟೋ ಕವಿಗಳು ಕಳೆದುಹೋಗಿದ್ದಾರೆ. \r\n\r\nಇದಕ್ಕೆ ಕಾರಣ - ನುಡಿಯಲ್ಲಿಲ್ಲ; ನುಡಿ-ನಡೆಗಳ ಸಾಂಗತ್ಯದಲ್ಲಿದೆ. ಈ ನುಡಿ-ನಡೆಗಳ ಸಾಂಗತ್ಯ ಹೇಗಿರಬೇಕು ಎಂಬುದನ್ನು ಬಸವಣ್ಣನವರೇ \"ನುಡಿದರೆ ಮುತ್ತಿನ ಹಾರದಂತಿರಬೇಕು, ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು, ನುಡಿದರೆ ಸ್ಫಟಿಕದ ಸಲಾಕೆಯಂತಿರಬೇಕು.... ನುಡಿಯೊಳಗಾಗಿ ನಡೆಯದಿದ್ದರೆ ಮೆಚ್ಚನು ಕೂಡಲಸಂಗಮದೇವನು\" ಎಂದು ತಮ್ಮದೊಂದು ವಚನದಲ್ಲಿ ಅತ್ಯಂತ ಸುಂದರವಾಗಿ ಹೇಳಿದ್ದಾರೆ. \'ನುಡಿಗೆ ಮೌಲ್ಯ ಇರುವುದು ನಡೆಯಲ್ಲಿ\' ಎಂಬುದು ಬಸವಣ್ಣನವರ ಈ ವಚನದ ಸಾರ. ಈ ವಿಚಾರವನ್ನೇ ಅಲ್ಲಮಪ್ರಭುಗಳು \"ಮಾತೆಂಬುದು ಜ್ಯೋತಿರ್ಲಿಂಗ\" ಎಂದು ಸೂಚ್ಯವಾಗಿ ಹೇಳಿದ್ದಾರೆ.\r\n\r\nವಚನ ಅಂದರೇನೇ ನುಡಿ-ಮಾತು-ಭಾಷೆ-ಪ್ರಮಾಣ(Promise) ಎಂಬರ್ಥಗಳಿವೆ. ವಚನಕಾರರು ಮೂಲತಃ ವಚನಗಳನ್ನು ಬರೆಯಲಿಲ್ಲ, ಹೇಳಿದರು. ಹೆಚ್ಚೂಕಡಿಮೆ ಮೂರು ನಾಲ್ಕು ಶತಮಾನಗಳ ಕಾಲ ಆಡುಭಾಷೆಯ ರೂಪದಲ್ಲಿ ಪ್ರಚುರಗೊಂಡಿದ್ದ ವಚನಗಳು ವ್ಯಕ್ತಿಯಿಂದ ವ್ಯಕ್ತಿಗೆ, ಕಾಲದಿಂದ ಕಾಲಕ್ಕೆ, ಒಂದು ನಾಡಿನಿಂದ ಇನ್ನೊಂದು ನಾಡಿಗೆ ದಾಟುವಾಗ ರೂಪಾಂತರಗೊಂಡಿವೆ. ಪುನರ್ ಸೃಷ್ಟಿಯಾಗಿವೆ. ಮರುನಿರೂಪಣೆಗೊಂಡಿವೆ. ಜನಪದ ಸಾಹಿತ್ಯದ ಹಾಗೆ ಚಲನಶೀಲವಾಗಿದ್ದ ವಚನಗಳು ಲಿಖಿತರೂಪಕ್ಕೆ ಬಂದು ಸಾಂಸ್ಥಿಕ ಆಯಾಮ ಪಡೆದುಕೊಂಡದ್ದು 15-16ನೇ ಶತಮಾನಗಳಲ್ಲಿ, ಶೂನ್ಯಸಂಪಾದನಕಾರರಿಂದ.\r\n\r\nಆದ್ದರಿಂದ “ನಾನೊಂದು ಕಾರಣಕ್ಕೆ/ನಾನು ಬಂದ ಕಾರ್ಯಕ್ಕೆ\" ವಚನದ ಎರಡು ಆವೃತ್ತಿಗಳಲ್ಲಿ ಒಂದನ್ನು ʼಮೂಲʼ ಎಂದು, ಮತ್ತೊಂದನ್ನು ʼಪ್ರಕ್ಷಿಪ್ತʼ ಎಂದು ನೋಡುವುದರ ಬದಲಿಗೆ, ಕಾಲದ ಒತ್ತಡಕ್ಕೆ ಸಿಲುಕಿ ದಾಟುವ ಪ್ರಕ್ರಿಯೆಯಲ್ಲಿ ಹಲವರ ಭಾವಗಳನ್ನು ಒಳಗೊಂಡು ರೂಪುಗೊಂಡ ಮರುನಿರೂಪಣೆಗಳೆಂದೇ ನೋಡಬೇಕಾಗುತ್ತದೆ. ವಸ್ತು ಮತ್ತು ಆಶಯದ ದೃಷ್ಟಿಯಿಂದ ಹೇಳುವುದಾದರೆ, ಕಲಬುರ್ಗಿಯವರ \"ಕೆಟ್ಟಿತ್ತು ಕಲ್ಯಾಣ\" ನಾಟಕಕೃತಿಯೂ ಸಹ ಬಸವಣ್ಣನವರ ಇದೇ ವಚನದ ನಮ್ಮ ಸಮಕಾಲೀನ ಮರುನಿರೂಪಣೆ. ಲಂಕೇಶರ \"ಸಂಕ್ರಾಂತಿ\", ಎಚ್.ಎಸ್.ಶಿವಪ್ರಕಾಶರ \"ಮಹಾಚೈತ್ರ\", ಕಾರ್ನಾಡರ \"ತಲೆದಂಡ\" ನಾಟಕಗಳನ್ನು ಸಹ ವಸ್ತುವಿನ ದೃಷ್ಟಿಯಿಂದ ಬಸವಣ್ಣನವರ ಈ ವಚನದ ವಿವಿಧ ಆವೃತ್ತಿಗಳೊಂದಿಗೆ ತೌಲನಿಕವಾಗಿ ಅಧ್ಯಯನ ಮಾಡಲು ಸಾಧ್ಯವಿದೆ.\r\n\r\nಈ ಮೇಲೆ, ಹುಳಿಯಾರ್ ಸರ್ ಮತ್ತು ಮೋಹನ್ ಮಿರ್ಲೆ ಅವರು ಗುರುತಿಸುವಂತೆ, ಬಸವಣ್ಣನವರ ವಚನದಲ್ಲಿ ಗಟ್ಟಿ ಆತ್ಮವಿಶ್ವಾಸ ಪ್ರಕಟಗೊಂಡಿದೆಯಾದರೂ, ಅಂತರಂಗದಲ್ಲಿ ಆತಂಕ ಅಡಗಿದೆ ಎಂದೇ ನನಗನಿಸುತ್ತದೆ. \"ನಾನಿನ್ನಾರಿಗಂಜೆನು, ಬದುಕಿದೆನು, ಕಾಣಾ ಕೂಡಲಸಂಗಮದೇವಾ\" - ಈ ಕೊನೆಯ ಸಾಲನ್ನು ಈ ನಿಟ್ಟಿನಲ್ಲಿ ಮತ್ತೊಮ್ಮೆ ಓದಿಕೊಳ್ಳಲು ಸಾಧ್ಯವಿದೆ. ಇಲ್ಲಿನ ಉದ್ಗಾರದಲ್ಲಿ ಅವ್ಯಕ್ತ ದುಗುಡವಿದೆ. ಈ ದುಗುಡವೇ ನಂತರದ ಆವೃತ್ತಿಯಲ್ಲಿ ಹೆಚ್ಚು ಢಾಳಾಗಿದೆ. ವಚನ ಚಳುವಳಿಯು ಛಿದ್ರಗೊಂಡ ಚಾರಿತ್ರಿಕ ದುಃಖ ದುಮ್ಮಾನಗಳನ್ನು ನಿರೂಪಿಸುವ ದುರಂತದ ಪ್ರತಿಮೆಗಳು ಇಲ್ಲಿ ಹೇರಳವಾಗಿವೆ. \r\n\r\nಬಸವಣ್ಣನವರು ಮತ್ತು ಅವರ ಸಮಕಾಲೀನ ವಚನಕಾರರು ಎಲ್ಲ ಬಗೆಯ ಲೌಕಿಕ ಮತ್ತು ಧಾರ್ಮಿಕ ಅಧಿಕಾರಕೇಂದ್ರಗಳನ್ನು ಪ್ರಶ್ನಿಸಿದವರು. ವೈದಿಕ ಸಂಸ್ಕೃತಿಗೆ ಎದುರಾಗಿ ಪ್ರತಿಸಂಸ್ಕೃತಿಯನ್ನು ರೂಪಿಸಲು ಯತ್ನಿಸಿದವರು. ಇವರಿಂದ ಆರಂಭವಾದ ವಚನ ಚಳುವಳಿಗೆ ಒಂದು ನಿರ್ದಿಷ್ಟ ತಾತ್ವಿಕತೆಯಿತ್ತು. ಈ ಚಳುವಳಿಯು ಅತ್ಯಂತ ಸ್ಪಷ್ಟವಾಗಿ ಮನುಷ್ಯರನ್ನು ಜಾತಿವ್ಯವಸ್ಥೆಯಿಂದ ಹೊರತರುವ ಪ್ರಯತ್ನವಾಗಿತ್ತು. ಆದರೆ ಮುಂದೆ ಇದೇ ವಚನಚಳುವಳಿ ಸಾಂಸ್ಥಿಕರೂಪ ಪಡೆದುಕೊಂಡು ಅದೇ ವೈದಿಕ ಸಂಸ್ಕೃತಿಪ್ರಣೀತ ಜಾತಿವ್ಯವಸ್ಥೆಯೊಳಗೆ ಒಂದಾಗಿ ಸೇರಿಕೊಂಡ ವಿವರಗಳನ್ನು ತಮ್ಮ ಸಂಶೋಧನೆಗಳ ಮೂಲಕ ನೀಡಿದವರು ಎಂ.ಎಂ.ಕಲಬುರ್ಗಿಯವರು.\r\n \r\nವಚನ ಸಾಹಿತ್ಯವನ್ನು ಜಾತ್ಯತೀತ ನೆಲೆಯಲ್ಲಿ ವಿಶ್ಲೇಷಿಸಿ ಮೌಲಿಕಗೊಳಿಸಿದ; ಲಿಂಗಾಯತ ಧರ್ಮವನ್ನು ಪುರೋಹಿತಶಾಹಿಯ ಕಬಂಧ ಬಾಹುಗಳಿಂದ ಮುಕ್ತಗೊಳಿಸಲು ಹೆಣಗಾಡಿದ; ಒಟ್ಟು ಹಳಗನ್ನಡ ಸಾಹಿತ್ಯವನ್ನು ಪ್ರಜಾಪ್ರಭುತ್ವದ ವಿವೇಕದ ಬೆಳಕಿನಲ್ಲಿ ಮರುಪರಿಶೀಲಿಸಿದ; ಸಂಶೋಧನೆಯೆಂದರೆ ಸತ್ಯದ ಪ್ರತಿಪಾದನೆಯೆಂದೇ ನಂಬಿ, ಸತ್ಯಕ್ಕಾಗಿಯೇ ಸಾವನ್ನು ಎದುರುಗೊಂಡು, ಕೋಮುಕ್ರಿಮಿಗಳ ಗುಂಡಿಗೆ ಬಲಿಯಾದ ಸಂಶೋಧಕ ಎಂಎಂ ಕಲ್ಬುರ್ಗಿಯವರು. ಈ ಹಿನ್ನೆಲೆಯಲ್ಲಿ, ಕಲಬುರ್ಗಿಯವರ ಈ ಎರಡು ಹೇಳಿಕೆಗಳನ್ನು ಬಸವಣ್ಣನವರ ವಚನದ ಆ ಎರಡು ಆವೃತ್ತಿಗಳೊಂದಿಗೆ ಇಟ್ಟುನೋಡಿ:\r\n\r\n\"ನಿಜವಾದ ಸಂಶೋಧಕನಿಗೆ ಸಂಶೋಧನೆ ಎನ್ನುವುದು ಕೇವಲ ಸತ್ಯದ ಅನ್ವೇಷಣೆಯಲ್ಲ, ಸತ್ಯದ ಸಹವಾಸ. ಇದರಿಂದಾಗಿ ನಿಜ ಜೀವನದಲ್ಲಿಯೂ ಸತ್ಯವನ್ನು ಪ್ರೀತಿಸುವ, ಅಸತ್ಯವನ್ನು ಪ್ರತಿಭಟಿಸುವ ಮನೋಧರ್ಮ ಅವನಲ್ಲಿ ಬೆಳೆದಿರುತ್ತದೆ. ಹೀಗಾಗಿ ವಿದ್ವಾಂಸರ ಪ್ರತಿಕ್ರಿಯೆಗೆ ಗುರಿಯಾಗುವ ಸಂಶೋಧಕ ಸಮಾಜದ ಪ್ರತಿಭಟನೆಯನ್ನೂ ಜೀರ್ಣಿಸಿಕೊಳ್ಳುತ್ತ ಬೆಳೆಯಬೇಕಾಗುತ್ತದೆ.\" (ಆತ್ಮವಿಶ್ವಾಸ)\r\n\r\n\"ಭಾರತದಂಥ ಭಾವನಿಷ್ಠ ರಾಷ್ಟ್ರದಲ್ಲಿ ಸಂಶೋಧನೆ ಸರಳದಾರಿಯಲ್ಲ. \'ಕಹಿ ಸತ್ಯ ಹೇಳಬಾರದು\' ಎಂಬ ಸಂಪ್ರದಾಯದ ವಾರಸುದಾರರಾದ ಭಾರತೀಯರಿಗೆ ಅಂಥ ಸತ್ಯ ಸಹಜವಾಗಿಯೆ ಸಿಹಿ ಎನಿಸುವುದಿಲ್ಲ. ಹೀಗಾಗಿ ಈ ರಾಷ್ಟ್ರದಲ್ಲಿ ಸಂಶೋಧಕ ಆಗಾಗ ಸಣ್ಣ ಸಣ್ಣ ಶಿಲುಬೆಗಳನ್ನೇರಬೇಕಾಗುತ್ತದೆ… ಅನೇಕ ಅಗ್ನಿಕುಂಡಗಳನ್ನು ದಾಟಬೇಕಾಗುತ್ತದೆ.\" (ಆತಂಕ)\r\n\r\nಈಗ, ಎಂತಹವರಿಗೂ ಏಳುವ ಪ್ರಶ್ನೆಯೆಂದರೆ, ಕೋಮುವಾದವನ್ನು ಎದುರಿಸಿ ನಿಂತ ಕ್ರಾಂತಿಕಾರಿ ಬಸವಣ್ಣನವರಿಗೆ ಮತ್ತು ಸಂಶೋಧಕ ಕಲಬುರ್ಗಿಯವರಿಗೆ ತಾವು ಸಾಗುತ್ತಿರುವ ದಾರಿಯ ಅರಿವು ಮತ್ತು ತಮ್ಮ ಅಂತ್ಯದ ಸುಳಿವು ಮೊದಲೇ ಇತ್ತೇ?\r\n\r\n


| ಜಿ.ಎನ್.ಧನಂಜಯ ಮೂರ್ತಿ

ವಿಜಯೇಂದ್ರ ಕುಮಾರ್ ಸರ್ ದುರಿತ ಕಾಲದಲ್ಲಿಯೆ ದಾರ್ಶನಿಕನಿಗೆ ಹೆಚ್ಚು ಜವಬ್ಧಾರಿಗಳಿರಲು ಸಾಧ್ಯ. ಕೆಂಡದ ಮಳೆ ಸುರಿವಾಗ ಉದಕದಂತಿರಬೇಕು ಎಂಬ ಪಾಠವನ್ನು ಇದೇ ಶರಣಚಳವಳಿ ನಮಗೆ ಕಲಿಸಿಕೊಟ್ಟಿದೆ. ಸಹಜವಾಗಿ ಶರಣಚಳವಳಿಯ ಸಾಂಸ್ಥಿಕ ಅವಸಾನವನ್ನು ಓದಿದಾಗ ತೀವ್ರ ದುಗುಡವಾಗುತ್ತದೆ. ಆದರೆ ಕರ್ಮಠ ವ್ಯವಸ್ಥೆಯ ವಿರುದ್ಧ ಸೆಟೆದು ನಿಂತ ಶರಣರ ಕಾಳಜಿ ಮತ್ತು ವಿವೇಕ ಸಮಾನತೆಯ ಕಾರ್ಯಕ್ಕೆ ಬಂದವರಿಗೆ ರೋಮಾಂಚನವನ್ನೂ ಉಂಟು ಮಾಡದಿರದು. ನಮ್ಮಲ್ಲಿನ ಜಾತಿ ವ್ಯವಸ್ಥೆ ಘಟಸರ್ಪ. ಆದರೆ ಅದಕ್ಕೆ ನಾವು ಅಂಜಬೇಕಿಲ್ಲ. ಅವರು ಬಂದು ಹೋಗಿರುವ ಕಾರ್ಯಕ್ಕೆ ನಾವೂ ಜತೆಯಾಗೋಣ.


| Dr.Vimala

ಬಸವಣ್ಣನವರ ದರ್ಶನ ಯಾವುದು ? ಈ ಹಿನ್ನೆಲೆಯಲ್ಲಿ ನೆನಪಿಗೆ ಬಂದುದು\r\nಮೋಳಿಗೆ ಮಾರಯ್ಯನವರ ಕಲ್ಯಾಣಕ್ರಾಂತಿಯ ನಂತರದ ಪರಿಸ್ಥಿತಿಯನ್ನು ಕುರಿತು ಹೇಳಿರಬಹುದಾದ ಈ ವಚನ:\r\nಊರು ಕೆಟ್ಟು ಸೂರೆಯಾಡುವಲ್ಲಿ ಆರಿಗಾರೂ ಇಲ್ಲ\r\nಬಸವಣ್ಣ ಸಂಗಮಕ್ಕೆ, ಚೆನ್ನಬಸವಣ್ಣ ಉಳುವೆಗೆ, \r\nಪ್ರಭು ಕದಳಿಗೆ ಮಿಕ್ಕಾದ ಪ್ರಮಥರೆಲ್ಲರೂ\r\nತಮ್ಮ ತಮ್ಮ ಲಕ್ಷ್ಯಭಾವಕ್ಕೆ ಮುಕ್ತಿಯನೆಯ್ದಿಹರು \r\nನನಗೊಂದು ಬಟ್ಟೆಯ ಹೇಳಾ,\r\nನಿಃಕಳಂಕ ಮಲ್ಲಿಕಾರ್ಜುನಾ !\r\nನಿಮ್ಮ ಲೇಖನ, ಸಮುದಾಯ ನಾಯಕತ್ವದ ಮಾದರಿ ಹಾಗೂ ಆ ಕಾಲಘಟ್ಟ ಕಂಡ ದುರಂತದ ಚಿತ್ರಣವನ್ನು ಬಸವಣ್ಣನವರ ಮೂಲ ವಚನ ಹಾಗೂ ನಂತರದ ಪ್ರಕ್ಷಿಪ್ತಗೊಂಡ / rewritten version ನ ಉದಾಹರಣೆಯೊಂದಿಗೆ ಚರ್ಚಿಸಿರುವುದು ,ಇಂದಿನ political allianceಗಳ ಸಫಲತೆಯ ಹಿನ್ನೆಲೆಯಲ್ಲಿ ಮಾರ್ಗದರ್ಶಿ ಆಗಬಹುದು ಅನ್ನಿಸುತ್ತದೆ.


| ಕುಸುಮ ಬಿ.ಎಂ.

ಪ್ರಕ್ಷಿಪ್ತಗಳ ಭೇರುಂಡಗಳಲ್ಲಿ ಆಯ್ಕೆಯೆಂಬುದು ಕಠಿಣ ಸರ್. ಬಸವಣ್ಣನವರು ಆಶಾಕಿರಣವಾಗಿ ಕಲ್ಯಾಣವನ್ನು ಕಂಡಿದ್ದಾರೆ. ದುರಂತವನ್ನು ಚಿತ್ರಿಸುವ ಪ್ರಕ್ಷಿಪ್ತವು ಹಾಡಿದಾಗ, ಗಟ್ಟಿಯಾಗಿ ಓದಿದಾಗ... ಧ್ವನಿಗಳೊಡನೆ ಬದಲಾಗುವ ಸಾಧ್ಯತೆಯನ್ನು ಅಲ್ಲಗಳೆಯಲು ಸಾಧ್ಯವೇ?


| Dr. Mythili

Wonderful article. So many pertinent questions\r\n


| ದೇವಿಂದ್ರಪ್ಪ ಬಿ.ಕೆ.

ವಚನ ಸಾಹಿತ್ಯ ಚಳುವಳಿ ಮತ್ತು ಅಂದಿನ ಸಾಮಾಜಿಕ ಸಂದರ್ಭ ಗಮನಿಸಿದಾಗ ಬಸವಣ್ಣನವರಿಗೆ ಆರಂಭದಲ್ಲಿ ಇದ್ದ ನಿರೀಕ್ಷೆ, ವಿಶ್ವಾಸ ಕೊನೆಗೆ ವಿಫಲ ಆಯ್ತು ಎಂದು ಈ ವಚನದ ಮೂಲಕ ಕಾಣಿಸುತ್ತದೆ. ವಚನಕಾರರು ನಂತರದಲ್ಲಿ ವಚನ ಸಾಹಿತ್ಯ ಚಳುವಳಿಯ ಆಶಯವನ್ನು ಮರೆತು ಮತ್ತೆ ವೈದಿಕೀಕರಣಕ್ಕೆ ಒಳಪಟ್ಟಿತು ಎಂದು ಅನ್ನಿಸುತ್ತದೆ. ಆ ನೋವು ಬಸವಣ್ಣನವರನ್ನು ಕಾಡಿದೆ. ವಚನಗಳನ್ನು ಮತ್ತೆ ಮತ್ತೆ ಮರು ಓದಿಗೆ ಒಳಪಡಿಸಿದಾಗ ಭಿನ್ನ ಭಿನ್ನ ಅರ್ಥಗಳು ನಮಗೆ ಕಾಣಿಸುತ್ತವೆ. ಹಾಗಾಗಿ ಈ ವಚನವು ಒಂದು ರೀತಿಯಲ್ಲಿ ವಿಷಾದವನ್ನು ವ್ಯಕ್ತಪಡಿಸುತ್ತದೆ. ಆದರೆ ವಚನ ಚಳುವಳಿಯ ಹಿಂದಿನ ಉದ್ದೇಶ ಕಾರ್ಯ ಸಫಲ ಅಂತೂ ಆಗಿದೆ.


| Mallikarjun Hiremath

ಮನ ಕಲಕುವ, ಚಿಂತಿಸಬೇಕಾದ ವಚನವನ್ನು ಅದೇ ರೀತಿಯಲ್ಲಿ ನಮಗೆ ದಾಟಿಸಿದ್ದೀರಿ. ಶರಣು


| Mallikarjun Hiremath

ಬಿಡಲಾರೆ ಮರ್ತ್ಯವ, ಬಿಡಲಾರೆ ನೆಲದ ತಿಂತಿಣಿಯ ಮರ್ತ್ಯಲೋಕವು ಮಹಾಮನೆಯಾಗದನ್ನಕ್ಕ -ಬಸವಣ್ಣ


| ಡಾ. ನಿರಂಜನ ಮೂರ್ತಿ ಬಿ ಎಂ

\'ಬಸವಣ್ಣನ ದರ್ಶನ ಯಾವುದು?\' ಎಂಬ ಲೇಖನದಲ್ಲಿ, ಬಸವಣ್ಣನವರ ಒಂದು ಮೂಲವಚನ ಮತ್ತದರ ಒಂದು ರೂಪಾಂತರ ವಚನಗಳ ಬಗೆಗಿನ ವಿಶ್ಲೇಷಣೆ ಓದುಗರನ್ನು ಚಿಂತನೆಗೆ ಒಡ್ಡುವಷ್ಟು ಹೃದಯಸ್ಪರ್ಶಿಯಾಗಿದೆ. ಆ ಎರಡೂ ವಚನಗಳು ಆಯಾ ಕಾಲಘಟ್ಟದ ಆತ್ಮವಿಶ್ವಾಸ ಮತ್ತು ಆಘಾತಗಳನ್ನು ಸಮರ್ಥವಾಗಿ ಬಿಂಬಿಸುತ್ತವೆ. ಈ ದಿಸೆಯಲ್ಲಿ ಆ ರೂಪಾಂತರ ವಚನವೇ ನಮ್ಮನ್ನು ಹೆಚ್ಚು ತಟ್ಟುತ್ತದೆ ಎಂಬುದು ವಿಚಿತ್ರವೆನಿಸಿದರೂ ಸತ್ಯ. ಒಡೆದ ಪ್ರಣತೆ, ಚೆಲ್ಲಿದ ತೈಲ, ಬಿದ್ದ ಬತ್ತಿ, ನಂದಿದ ಜ್ಯೋತಿ, ಮತ್ತು ನೊಂದ ಮನಗಳು. ಅಬ್ಬಾ, ಅದ್ಭುತವಾದ ಪ್ರತಿಮಾವಿಲಾಸ! ಹೃದಯಗಳನ್ನು ತಟ್ಟದಿರಲು ಸಾಧ್ಯವೆ?\r\n\r\nನಮ್ಮ ಇಂದಿನ ಕಾಲಘಟ್ಟದಲ್ಲೂ, ಹಲವರು ಬಂದು ಸೇರಿ ಹಲವರ ಒಳಿತಿಗಾಗಿ ಮಾಡುವ ಅರ್ಥಪೂರ್ಣವಾದ ಮತ್ತು ಪ್ರಾಮಾಣಿಕವಾದ, ಸಾಹಿತ್ಯಿಕ-ಸಾಂಸ್ಕೃತಿಕ-ಸಾಮಾಜಿಕ ಕಾರ್ಯಗಳಿಗೂ ಅದನ್ನು ಅನ್ವಯಿಸುವ ಲೇಖಕರ ಮನಸ್ಸು ತುಂಬಾ ಇಷ್ಟವಾಯಿತು. ಅವರಿಗೆ ತುಂಬು ಹೃದಯದ ಧನ್ಯವಾದಗಳು.


| Dr. Muniyappa

ಮನಸ್ಸನ್ನು ಆರ್ದ್ರಗೊಳಿಸುವ ಹಾಡು. ವಚನಕಾರರ ಆಶಯ ಮತ್ತು ವಿಫಲತೆ ಕುರಿತ ಲೇಖನ ಅರ್ಥಪೂರ್ಣವಾಗಿದೆ.




Add Comment


Shaksphere Manege Banda

YouTube






Recent Posts

Latest Blogs