೧೨ ಅಕ್ಟೋಬರ್ ೧೯೬೭

ಕಳೆದ ವಾರ ವಿಮರ್ಶೆ ಕುರಿತು ಬರೆದ ಬರಹಕ್ಕೆ ಹಲವರ ಗಂಭೀರ ಪ್ರತಿಕ್ರಿಯೆಗಳು ಬಂದ ಮೇಲೆ ವಿಮರ್ಶೆ ಕುರಿತು ಲೋಹಿಯಾ ಬರೆದ ಮಾತುಗಳನ್ನು ಇಲ್ಲಿ ಕೊಡಬೇಕೆಂದುಕೊಂಡೆ. ಆದರೆ ಆ ವಿಮರ್ಶೆಯ ಟಿಪ್ಪಣಿಗಳನ್ನು ಹಿಂದಕ್ಕೆ ತಳ್ಳಿ ೧೯೬೭ರ ಅಕ್ಟೋಬರ್ ೧೨ರಂದು ಬೆಳಗಿನ ಜಾವ ೧ ಗಂಟೆಯ ಹೊತ್ತಿಗೆ ಲೋಹಿಯಾ ನಿರ್ಗಮಿಸಿದ ದೃಶ್ಯವೇ ಕಣ್ಣೆದುರು ಬಂತು. ಈಚೆಗೆ `ಸುಧಾ’ ವಾರಪತ್ರಿಕೆಯಲ್ಲಿ ಮುಗಿದ `ಡಾಕ್ಟರ್ ಸಾಹೇಬ್’ ಧಾರಾವಾಹಿಯ ಕೊನೆಕೊನೆಯ ಅಧ್ಯಾಯವೊಂದರ ಟಿಪ್ಪಣಿಗಳನ್ನು ಕೊಡುತ್ತಿರುವೆ: 

ಎಲ್ಲರ ಕಷ್ಟ ನೋಡಲು, ಕೇಳಿಸಿಕೊಳ್ಳಲು, ವಿರೋಧ ಪಕ್ಷಗಳನ್ನು ಒಗ್ಗೂಡಿಸಲು ಒಂದೆಡೆ ನಿಲ್ಲದೆ, ದೇಶದುದ್ದಕ್ಕೂ ಸುತ್ತುತ್ತಿದ್ದ ಲೋಹಿಯಾ ದೇಹ ನವೆಯುತ್ತಿತ್ತು. ಚುನಾವಣೆಯ `ಮಾಡು ಇಲ್ಲವೆ ಮಡಿ’ ಸುತ್ತಾಟದಿಂದ ದೇಹ ಹೈರಾಣಾಗಿತ್ತು. ಆದರೆ ಒಳಗಿದ್ದ ಬೆಂಕಿ ಪ್ರಜ್ವಲಿಸುತ್ತಲೇ ಇತ್ತು.

೧೯೬೭ರ ಸೆಪ್ಟೆಂಬರ್ ಎರಡನೆಯ ವಾರದಲ್ಲಿ ಸಮಾಜವಾದಿ ಪಕ್ಷದ ರಾಜ್ಯಸಭಾ ಸದಸ್ಯ, ಕವಿ ರಾಮ್‌ಧಾರಿ ಸಿಂಹ ’ದಿನಕರ್’ ಲೋಹಿಯಾ ಜೊತೆ ಮಾತಾಡುತ್ತಾ ಹೇಳಿದರು:’ಡಾಕ್ಟರ್ ಸಾಹೇಬ್, ನೀವೀಗ ಕೋಪವನ್ನು ಕಡಿಮೆ ಮಾಡಿಕೊಳ್ಳುವುದು ಒಳ್ಳೆಯದು. ದೇಶ ನಿಮ್ಮನ್ನು ಇಷ್ಟಪಡುತ್ತಿದೆ. ನೀವೀಗ ಸಣ್ಣಪುಟ್ಟ ವಿಷಯಗಳನ್ನು ಕೈಗೆತ್ತಿಕೊಂಡು ಕಹಿ ಸೃಷ್ಟಿಸಬೇಡಿ. ಈ ದೇಶ ಬಹಳ ಕ್ಲಿಷ್ಟ ದೇಶ. ದೇಶದ ಭಾರ ನಿಮ್ಮ ಹೆಗಲೇರಿದಾಗ ನಿಮ್ಮ ಈ ವ್ಯಕ್ತಿತ್ವ ನಿಮ್ಮ ಹಾದಿಯ ಮುಳ್ಳಾಗಬಾರದು.’

ಲೋಹಿಯಾ ಖಿನ್ನರಾಗಿ ಹೇಳಿದರು: `ನಾನು ಅಷ್ಟು ದಿನ ಬದುಕುತ್ತೇನೆ ಅಂದುಕೊಂಡಿದ್ದೀಯಾ? ನನ್ನ ಆಯಸ್ಸು ತೀರಾ ಕಡಿಮೆಯಿದೆ. ಅದಕ್ಕೇ ನಾನು ಹೇಳೋದನ್ನೆಲ್ಲ ಹೇಳಿ ಬಿಡುತ್ತೇನೆ, ಬಿಡು.’ ಅದೇ ವಾರ, `ನಾನು ಹೆಚ್ಚು ದಿನ ಬದುಕುವುದಿಲ್ಲ' ಎಂದು ಲೋಕಸಭೆಯಲ್ಲೂ ಹೇಳಿದ್ದರು. ಹೇಳಬೇಕಾದ್ದನ್ನೆಲ್ಲ ಧಾವಂತದಲ್ಲಿ ಹೇಳುತ್ತಾ ಹೋದರು.

ಕೆನಡಿಯನ್ ವಿಮರ್ಶಕ ನಾರ್ತ್ರಾಪ್ ಫ್ರೈ ಶೇಕ್‌ಸ್ಪಿಯರನ ಪ್ರಖ್ಯಾತ ದುರಂತ ನಾಟಕ ‘ಹ್ಯಾಮ್ಲೆಟ್’ನ ಕೊನೆಯ ಭಾಗಗಳನ್ನು ಪುರಾಣಪ್ರತೀಕ ವಿಮರ್ಶೆಗೆ ಒಳಪಡಿಸುತ್ತಾನೆ: ಹ್ಯಾಮ್ಲೆಟ್ ಸಾಯುವ ಮುನ್ನ, ‘ಗ್ರೇವ್ ಡಿಗ್ಗರ್ ಸೀನ್’, ಗೋರಿ ಅಗೆವವರ ದೃಶ್ಯ, ಬರುತ್ತದೆ. ನಾರ್ತ್ರಾಪ್ ಫ್ರೈ ಈ ದೃಶ್ಯದ ಮಹತ್ವವನ್ನು ಚರ್ಚಿಸುತ್ತಾ ಹೇಳುತ್ತಾನೆ: ‘ಸಾಮಾನ್ಯವಾಗಿ ದುರಂತ ನಾಯಕರಿಗೆ ಸಾವಿಗೆ ಮುನ್ನವೇ ಸಾವಿನ ದರ್ಶನವಾಗುತ್ತದೆ; ಇದೊಂದು ಆದಿಮ ಮಾದರಿ.’ ರನ್ನನ ‘ಗದಾಯುದ್ಧ’ದಲ್ಲಿ  ದುರಂತ ನಾಯಕನಂತೆ ಕಾಣುವ ದುರ್‍ಯೋಧನನಿಗೂ ಹೀಗೆ ಸಾವಿನ ದರ್ಶನವಾಗುತ್ತದೆ.

ಒಂದು ದೃಷ್ಟಿಯಿಂದ ನೋಡಿದರೆ, ಭಾರತೀಯ ರಾಜಕಾರಣದ ದುರಂತ ನಾಯಕನಂತೆಯೂ ಕಾಣತೊಡಗುವ ಲೋಹಿಯಾಗೂ ಕೊನೆಯ ಘಟ್ಟದಲ್ಲಿ ಸಾವಿನ ದರ್ಶನವಾದಂತಿದೆ. 

ಅವತ್ತು ಲೋಹಿಯಾ ಭೂಪಾಲ್‌ನಲ್ಲಿ ನಡೆಯಲಿದ್ದ ಸಭೆಯಲ್ಲಿ ಸಂಯಕ್ತ ವಿಧಾಯಕ ದಳಗಳ ಸರ್ಕಾರಗಳಿಗಾಗಿ ಯೋಜನೆಗಳ ಕರಡು ಸಿದ್ಧಪಡಿಸುತ್ತಿದ್ದರು. ಆ ಸಂಜೆ ಅವರಿಗೆ ಗಂಗಾನದಿಯಲ್ಲಿ ಸುತ್ತಾಡುವ ಮನಸ್ಸಾಯಿತು. ಇಡೀ ರಾತ್ರಿ ದೋಣಿಯಲ್ಲೇ ಕಳೆದರು. ದೋಣಿ ಸಾಗುತ್ತಿರುವಂತೆ ಮಣಿಕರ್ಣಿಕಾದಲ್ಲಿ ಚಿತೆಗಳು ಉರಿಯುತ್ತಿದ್ದುದನ್ನು ನೋಡಿ ಚಣ ದೋಣಿ ನಿಲ್ಲಿಸುವಂತೆ ಹೇಳಿದ ಲೋಹಿಯಾ, ಯೋಚಿಸುತ್ತಾ ಹೇಳಿದರು: ‘ಒಂದು ದೇಹಕ್ಕಾಗಿ ಇಷ್ಟೆಲ್ಲ ಪ್ರದರ್ಶನವೇ?’ 

ಆ ತಿಂಗಳು ಲೋಹಿಯಾ ಮಾರ್ಟಿನ್ ಲೂಥರನ ೪೫೦ನೇ ಸ್ಮರಣೆಯ ಕಾರ್ಯಕ್ರಮದಲ್ಲಿ ಭಾಗಿಯಾಗಲು ಜರ್ಮನಿಗೆ ಹೊರಡಬೇಕಾಗಿತ್ತು. ಆದರೆ ಪ್ರಾಸ್ಟೇಟ್ ಸಮಸ್ಯೆಗೆ ಸರ್ಜರಿ ಮಾಡಿಸಿಕೊಳ್ಳಲೇಬೇಕಾದ ಸ್ಥಿತಿ ಲೋಹಿಯಾಗೆ ಎದುರಾಯಿತು. ‘ಜರ್ಮನಿಯಲ್ಲೇ ಆಪರೇಶನ್ ಮಾಡಿಸಿಕೊಳ್ಳಿ’ ಎಂಬ ಸಲಹೆಯೂ ಬಂತು. ಲೋಹಿಯಾ ಯಾರ ಮಾತನ್ನೂ ಕೇಳಲಿಲ್ಲ. ಗೆಳೆಯರಿಗೆ ಹೇಳದೆ ವಿಲ್ಲಿಂಗ್‌ಡನ್ ಆಸ್ಪತ್ರೆ ಸೇರಿದರು. ಕಾರಣ, ಅದು ಜನಸಾಮಾನ್ಯರು, ಬಡವರು ಹೋಗುವ ಆಸ್ಪತ್ರೆಯಾಗಿತ್ತು. 

ಲೋಹಿಯಾ ಸುತ್ತ ಹಲವು ಡಾಕ್ಟರು, ನರ್ಸುಗಳು ನೆರೆದಿದ್ದರು. ಲೋಹಿಯಾ ಕೇಳಿದರು: ‘ಒಬ್ಬ ರೋಗಿಗೆ ಇಷ್ಟೊಂದು ಜನ ಡಾಕ್ಟರುಗಳೇಕೆ? ಇದು ಸಾಮಾನ್ಯ ಪ್ರಜೆಗೆ ಸಿಗುತ್ತದೆಯೆ? ನನ್ನ ಮೇಲೆ ಯಾಕೆ ಇಷ್ಟೊಂದು ಖರ್ಚು ಮಾಡುತ್ತಿದ್ದೀರಿ?’   

ಲೋಹಿಯಾ: ಡಾಕ್ಟ್ರೇ, ನನ್ನ ಕಾಯಿಲೆ ಗುಣ ಆಗುತ್ತಾ?

ಡಾಕ್ಟರ್: ಖಂಡಿತಾ ಗುಣವಾಗುತ್ತೆ.

ಲೋಹಿಯಾ: ಡಾಕ್ಟ್ರೆ! ನೀವೂ ರಾಜಕಾರಣಿಗಳ ಥರ ಸುಳ್ಳು ಹೇಳೋದನ್ನು ಕಲ್ತಿದೀರ...ಡಾಕ್ಟರುಗಳೂ ರಾಜಕಾರಣಿಗಳ ಥರ ಕತ್ತಲಲ್ಲಿ ತಡಕಾಡುತ್ತಿರುತ್ತಾರೆ ಅನ್ನಿಸುತ್ತೆ!’ 

ಲೋಹಿಯಾ ವಂಶಸ್ಥರ ಒಂದು ವಿಚಿತ್ರ ವಿವರವನ್ನು ಲೋಹಿಯಾರ ಸಂಗಾತಿ ಮಧು ಲಿಮಯೆ ಹೇಳುತ್ತಿದ್ದರು: ‘ಡಾಕ್ಟರ್ ಸಾಹೇಬರಿಗೆ ತಾನು ಐವತ್ತಾರು, ಐವತ್ತೇಳು ವರ್ಷ ಮೀರಿ ಬದುಕುವುದಿಲ್ಲ, ಯಾಕೆಂದರೆ ತಮ್ಮ ಕುಟುಂಬದಲ್ಲಿ ಯಾರೂ ಈ ವಯಸ್ಸಿನ ನಂತರ ಬದುಕಿಲ್ಲ ಎಂಬ ಭಾವನೆ ಇತ್ತು.’   

ಲೋಹಿಯಾ ಆಸ್ಪತ್ರೆ ಸೇರಿರುವ ಸುದ್ದಿ ದೇಶಾದ್ಯಂತ ಹಬ್ಬಿತು. ರಾಜಿಂದರ್ ಪುರಿ ಬರೆಯುತ್ತಾರೆ: ‘ಲೋಹಿಯಾ ಆಸ್ಪತ್ರೆಯಲ್ಲಿ ಸಾವಿನೊಂದಿಗೆ ಸೆಣಸುತ್ತಿದ್ದಾಗ ಜನರಿಗೆ ಇದ್ದಕ್ಕಿದ್ದಂತೆ ಅವರ ಮಹತ್ವದ ಅರಿವಾಯಿತು. ಅವರೀಗ ’ಮಿಸ್ಟರ್‍ ಆಪೋಸಿಶನ್’ ಆಗಿದ್ದರು. ಪ್ರತಿ ದಿನ ರಿಕ್ಷಾದವರು, ಹೋಟೆಲ್ ಕಾರ್ಮಿಕರು, ಲೇಖಕರು, ಪತ್ರಕರ್ತರು, ತಳ್ಳುಗಾಡಿಯ ವ್ಯಾಪಾರಿಗಳು, ಟೀಚರುಗಳು, ರಾಜಕಾರಣಿಗಳು ವಿಲ್ಲಿಂಗ್‌ಡನ್ ಆಸ್ಪತ್ರೆಯ ಎದುರು ಸೇರುತ್ತಿದ್ದರು; ಡಾಕ್ಟರ್‍ ಸಾಹೇಬ್ ಗುಣಮುಖರಾಗುವ ಸುದ್ದಿ ಎದುರು ನೋಡುತ್ತಾ ನಿಂತಿರುತ್ತಿದ್ದರು.’ 

ಆಸ್ಪತ್ರೆಯಲ್ಲಿ ಮಲಗಿದ್ದಾಗಲೂ ಲೋಹಿಯಾ ಲೋಕದ ಸ್ಥಿತಿಗತಿಗಳ ಬಗೆಗೇ ಕನವರಿಸುತ್ತಿದ್ದುದನ್ನು ರಮಾ ಮಿತ್ರ ದಾಖಲಿಸುತ್ತಾರೆ: ಹಾಸಿಗೆಯಲ್ಲಿ ಮಲಗಿದ್ದ ಲೋಹಿಯಾ ಭೂ ಕಂದಾಯ, ಹಿಂದೂ- ಮುಸ್ಲಿಂ ಏಕತೆ, ಬಡ ರೈತರ ಸ್ಥಿತಿ, ಭಾಷೆಯ ಸಮಸ್ಯೆ ಇವುಗಳ ಬಗೆಗೇ ಮಾತಾಡುತ್ತಿದ್ದರು. ಒಮ್ಮೊಮ್ಮೆ ಲೋಕಸಭೆಯಲ್ಲಿ ಮಾತಾಡುತ್ತಿದ್ದಂತೆಯೂ ಮಾತಾಡುತ್ತಿದ್ದರು: ‘ಅಧ್ಯಕ್ಷ್ ಮಹೋದಯ್! ನೀವು ಸ್ವಾತಂತ್ರ್ಯ, ಸತ್ಯ, ನ್ಯಾಯಗಳಿಗೆ ಸಂಪೂರ್ಣ ರಕ್ಷಣೆ ಕೊಡಬೇಕು.’

ಒಮ್ಮೆ ರಮಾ ಕೈ ಹಿಡಿದು ಲೋಹಿಯಾ ಕೇಳಿದರು: ‘ಹೇಳು ಇಳಾ, ನೀನು ನನಗೆ ಸುಳ್ಳು ಹೇಳಬಾರದು. ಈ ದೇಶದಲ್ಲಿ ಏನಾದರೂ ದೊಡ್ಡದು ನಡೆಯುತ್ತಿದೆಯಾ?’ ಹೀಗೆಂದವರೇ ಇಂಡಿಯಾ-ಪಾಕಿಸ್ತಾನಗಳ ಒಕ್ಕೂಟ ಕುರಿತು ಮಾತಾಡತೊಡಗಿದರು.

ಓಂ ಪ್ರಕಾಶ್ ದೀಪಕ್ ಲೋಹಿಯಾರನ್ನು ನೋಡಲು ಹೋದಾಗ ಹಾಸಿಗೆಯ ಮೇಲೆ ಒರಗಿದ್ದ ಲೋಹಿಯಾ ಭಾರತದ ಅಧಿಕಾರಶಾಹಿ ಕುರಿತ ಪುಸ್ತಕ ಓದುತ್ತಿದ್ದರು. ‘ಶೋಷಿತರ ಕೂಗು’ ಪತ್ರಿಕೆ ನಡೆಸುತ್ತಿದ್ದ ಗುಲಬರ್ಗಾದ ಸಮಾಜವಾದಿ ವೀರಣ್ಣ ತಿಮ್ಮಾಜಿ ಆಗ ದಿನವಿಡೀ ವಿಲ್ಲಿಂಗ್‌ಡನ್ ಆಸ್ಪತ್ರೆಯ ಬಳಿಯೇ ಇರುತ್ತಿದ್ದರು. ವೀರಣ್ಣ ತಿಮ್ಮಾಜಿ ಹಾಗೂ ಇತರ ಲೇಖಕ, ಲೇಖಕಿಯರು ಕೊಡುವ ಆ ದಿನಗಳ ವಿವರಗಳು: 

ಮೊದಮೊದಲು ಸರ್ಜರಿ ಮಾಡಿಸಿಕೊಳ್ಳಲು ಒಪ್ಪದ ಲೋಹಿಯಾ ಕೊನೆಗೂ ಮನಸ್ಸು ಮಾಡಿದರು. ಸೆಪ್ಟೆಂಬ‌ರ್ ೩೦. ಲೋಹಿಯಾರ ಶಸ್ತ್ರಕ್ರಿಯೆಯಾಯಿತು. ಶಸ್ತ್ರಕ್ರಿಯೆಯ ನಂತರ ಅವರ ಶರೀರದಿಂದ ಬಹಳಷ್ಟು ರಕ್ತ ಹರಿದು ಹೋಯಿತು. ಲೋಹಿಯಾಗೆ ರಕ್ತ ಕೊಡಲು ನೂರಾರು ಜನರು ಬಂದರು. ಅಕ್ಟೋಬ‌ರ್ ೧ರಂದು ರಕ್ತದ ಒತ್ತಡ ಹೆಚ್ಚಿತು. ಜ್ವರ ಏರಿತು. ಆಪರೇಶನ್ ಆದಾಗಿನಿಂದ ೪ನೇ ತಾರೀಖಿನವರೆಗೆ ಲೋಹಿಯಾ ಪರಿಸ್ಥಿತಿಯಲ್ಲಿ ಸ್ಥಿರತೆ ಬರಲಿಲ್ಲ.

ಅಕ್ಟೋಬರ್ ೬.  ದೇಹ ಕುಸಿದಂತಾಗಿ ಲೋಹಿಯಾ ಹೇಳಿದರು: ‘ಡಾಕ್ಟರ್, ನನಗಾಗಿ ಬಹಳ ಕಷ್ಟ ಪಡ್ತಿದೀರಿ. ಸಾಕು ಬಿಡಿ. ನನಗೂ ಸುಸ್ತಾಗಿದೆ.’ 

ಅವತ್ತು ರಾತ್ರಿ ಲೋಹಿಯಾ ಹೇಳಿದರು: ‘ಎಲ್ಲಾ ಮುಗೀತು. ನಾನು ಹೋಗ್ತಾ ಇದೀನಿ.’ 

ಲೋಹಿಯಾ ಸಾವು, ಬದುಕುಗಳ ನಡುವೆ ತೂಗಾಡುತ್ತಿದ್ದರು. ಜೆ.ಪಿ., ರಮಾ, ಮಧು ಲಿಮಯೆ, ಕಿಶನ್ ಪಟ್ನಾಯಕ್… ಒಬ್ಬರಲ್ಲ ಒಬ್ಬರು ಅಲ್ಲಿರುತ್ತಿದ್ದರು. ಒಂದು ದಿನ ಉಪಪ್ರಧಾನಿ ಮೊರಾರ್ಜಿ ದೇಸಾಯಿ ಲೋಹಿಯಾಗೆ ಏನೋ ಹೇಳಿದರು.

ಗೆಳೆಯರು ಕೇಳಿದರು: ಮೊರಾರ್ಜಿ ಏನು ಹೇಳಿದರು?

ಲೋಹಿಯಾ: ಲೋಕಸಭೆಯಲ್ಲಿ ಆಡಿದಂತೆ ಆಡಬೇಡ, ಡಾಕ್ಟರು ಹೇಳಿದ ಮಾತು ಕೇಳು ಅಂದರು!

ಪ್ರಧಾನಿ ಇಂದಿರಾಗಾಂಧಿಯವರು ಬಂದರು; ಕಾಮರಾಜ್, ಚವಾಣ್…ಹೀಗೆ ಲೋಹಿಯಾರಿಂದ ಟೀಕಿಸಿಕೊಂಡವರೂ ಬರುತ್ತಿದ್ದರು. 

ಪ್ರತಿ ದಿನ ಆಸ್ಪತ್ರೆಯ ಹೊರಗೆ ಜನ ಆತಂಕದಿಂದ, ಆಸೆಯಿಂದ ಕೇಳುತ್ತಲೇ ಇದ್ದರು:‘ಡಾಕ್ಟರ್ ಸಾಹೇಬ್ ಹೇಗಿದ್ದಾರೆ?’

೧೧ ಅಕ್ಟೋಬರ್ ೧೯೬೭. ಹಿಂದಿ ಲೇಖಕ ಮಸ್ತ್ರಂ ಕಪೂರ್ ಆಸ್ಪತ್ರೆಯ ಹೊರಗೆ ನೆರೆದಿದ್ದ ಜನರ ಗುಂಪಿನಲ್ಲಿ ನಿಂತಿದ್ದರು. ಆ ಗಳಿಗೆಯನ್ನು ಮಸ್ತ್ರಂ ನೆನೆಯುತ್ತಾರೆ: 

‘ಆಸ್ಪತ್ರೆಯೊಳಗಿಂದ ಯಾರಾದರೂ ಬಂದರೆ ಜನ ಅವರ ಮುಖವನ್ನೇ ನೋಡುತ್ತಾ ಆ ಮುಖಭಾವವನ್ನು ಓದಲೆತ್ನಿಸುತ್ತಿದ್ದರು. ಅವತ್ತು ಸಂಜೆ ಲೋಹಿಯಾ ಇದ್ದ ವಾರ್ಡಿನಿಂದ ಮಧು ಲಿಮಯೆ ಹೊರ ಬಂದರು. ಮುಖದಲ್ಲಿ ಉದ್ವಿಗ್ನತೆಯಿತ್ತು; ಭಯಾನಕವಾದ ಸುದ್ದಿಯ ಸೂಚನೆ ಅಲ್ಲಿತ್ತು. ಮಧು ಲಿಮಯೆ ಭರ್‍ರನೆ ಜೀಪಿನಲ್ಲಿ ಹೋದರು. ನನ್ನ ಪಕ್ಕದಲ್ಲಿ ಹಿಂದಿ ಲೇಖಕ ಶ್ರೀಕಾಂತ ವರ್ಮ ಕಣ್ಣೀರೊರೆಸಿಕೊಳ್ಳುತ್ತಾ ನಿಂತಿದ್ದರು.’

ಆ ನಡುರಾತ್ರಿ ಭಾರತದ ಮಹಾನ್ ಸಮಾಜವಾದಿ ಚೇತನ ನಿರ್ಗಮಿಸಿತು. ನಂತರ ಲೋಹಿಯಾವಾದ ಉಳಿದು ಬೆಳೆದು, ಈಚಿನ ‘ಇಂಡಿಯಾ’ ಒಕ್ಕೂಟದ ವಿರೋಧ ಪಕ್ಷಗಳ ಏಕತೆಯವರೆಗೂ ಹಾದಿ ತೋರಿದ್ದು ಎಲ್ಲರಿಗೂ ಗೊತ್ತಿದೆ. ಕೆಲವು ದಶಕಗಳ ಕೆಳಗೆ ಲೋಹಿಯಾರ ಸಂಗಾತಿ ಬಿ.ಪಿ. ಮಂಡಲ್ ತಯಾರಿಸಿದ ಹಿಂದುಳಿದ ಆಯೋಗಗಳ ವರದಿ ದೇಶದ ಹಿಂದುಳಿದ ವರ್ಗಗಳ ರಾಜಕಾರಣ ಹಾಗೂ ಹಿಂದುಳಿದವರ ಸಾಮಾಜಿಕ ಸ್ಥಾನಮಾನವನ್ನು ನಿರ್ಣಾಯಕವಾಗಿ ಬದಲಿಸಿತು. ರೈತ ಚಳುವಳಿ, ಸಮಾನತಾ ಚಿಂತನೆ, ವೈಚಾರಿಕತೆ, ಮೀಸಲಾತಿಯ ವಿಸ್ತಾರ, ಮಹಿಳೆಯರಿಗೆ ವಿಶೇಷಾಧಿಕಾರ, ಸಂಸ್ಕೃತಿ ಚಿಂತನೆ, ವೈಯಕ್ತಿಕ ನೈತಿಕತೆ, ವರ್ತನೆಯ ರೀತಿಗಳು... ಹೀಗೆ ದೇಶದ ಹಲವು ವಲಯಗಳನ್ನು ಪ್ರಭಾವಿಸುತ್ತಾ ಲೋಹಿಯಾ ಚಿಂತನೆಗಳು ಜೀವಂತ ತತ್ವವಾಗಿ ವಿಸ್ತರಿಸುತ್ತಿವೆ...  

ಆದರೂ ಲೋಹಿಯಾ ಕೊನೆಯ ದಿನಗಳ ಟಿಪ್ಪಣಿಗಳನ್ನು ಮತ್ತೆ ಇಲ್ಲಿ ತಿದ್ದಿ ಕೊಡುತ್ತಿರುವಾಗ ಮತ್ತೊಮ್ಮೆ ಮನಸ್ಸು ಭಾರವಾಗುತ್ತದೆ

ಬ್ಲಾಗ್ ಫಾಲೋ ಮಾಡಲು ಒಪ್ಪಿ, ಕ್ಲಿಕ್ ಮಾಡಿ; ನೋಟಿಫಿಕೇಶನ್ ಪಡೆಯಿರಿ, ಶೇರ್ ಮಾಡಿ: FOLLOW
ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com 
ಬಿಡುವಾದಾಗ ನೋಡಿ, ಶೇರ್ ಮಾಡಿ:  https://www.youtube.com/@NatarajHuliyarYT

Share on:


Recent Posts

Latest Blogs



Kamakasturibana

YouTube



Comments

6 Comments



|


| ಬಂಜಗೆರೆ ಜಯಪ್ರಕಾಶ

ಬಹಳ ಹೃದಯಸ್ಪರ್ಶಿ ಆದ ಲೋಹಿಯಾ ಕಡೆಯ ದಿನಗಳ ಚಿತ್ರಣ. ಅವರನ್ನು ದುರಂತ ನಾಯಕ ಅನ್ನುವ ವಿಶೇಷಣದಿಂದ ಅವರನ್ನು ಗುರುತಿಸುವುದು ಬೇಕೇ? ಅವರ ಕನಸುಗಳು ಪೂರ್ತಿ ಈಡೇರದ ಮಾತ್ರಕ್ಕೆ ಅವರು ದುರಂತ ನಾಯಕರಾಗುವ ಅಗತ್ಯವಿಲ್ಲ ಎನ್ನುವುದು ನನ್ನ ಅನಿಸಿಕೆ. ಜಗತ್ತಿನಲ್ಲಿ ಯಾವ ಮಹಾನ್ ಚಿಂತಕನ ಕನಸುಗಳು ಪೂರ್ತಿ ಸಾಕಾರಗೊಂಡಿವೆ? ವಿಶಿಷ್ಟ ಜನ ನಾಯಕ ಲೋಹಿಯಾಗೆ ನಮನಗಳು


| ಚಂದ್ರಶೇಖರ ತಾಳ್ಯ

ಮತ್ತೊಮ್ಮೆ ಕಣ್ಣೀರು, ಸುಧಾ ದ ಕೊನೆಯ ಕಂತಿನ ಸಂದರ್ಭದಲ್ಲಿ. ಮತ್ತೀಗ, ಸಾವಿನ ಗಳಿಗೆಯಲ್ಲೂ. ಆ ಸರಳತೆ, ಧೀಮಂತಿಕೆ, ಘನತೆ ಗಾಂಧೀಜಿಯನ್ನು ಬಿಟ್ಟರೆ ನಾನು ಕಂಡದ್ದು ಲೋಹಿಯಾರಲ್ಲೇ. ನಾನು ಗಂಗೋತ್ರಿಯಲ್ಲಿ ಸಮಾಜವಾದಿ ಯುವ ಜನ ಸಭಾದ ಸದಸ್ಯನಾಗಿದ್ದೆ. ಅಲ್ಲಿ ತೇಜಸ್ವಿ, ಎಂ.ಡಿ.ಎನ್, ರಾಮದಾಸ್ ಅವರು ಲೋಹಿಯಾರ ಬಗ್ಗೆ ಹೇಳಿ ನಮ್ಮನ್ನೆಲ್ಲ ಲೋಹಿಯಾವಾದಿಗಳನ್ನಾಗಿಸಿದರು.\r\nಈಗ ನನ್ನಂಥವರಲ್ಲಿ ಏನಾದರೂ ಸಮಾಜವಾದಿ ಚಿಂತನೆ ಇದ್ದರೆ ಅದಕ್ಕೆ ಲೋಹಿಯಾ ಪ್ರಭಾವವೇ ಕಾರಣ.\r\n


| SHARATH TR

👌 👍


| Vasantha

ಲೋಹಿಯಾ ಅವರ ಕಡೆಯ ದಿನಗಳು...ಮತ್ತೆ ಮತ್ತೆ ಕಣ್ಣೀರು.


| ಆಭಿನವ ರವಿಕುಮಾರ್

ಈ ಅಂಕಣ ಬರೆಯುವಾಗ ನೀವು ಪಟ್ಟಿರುವ ನೋವು ಸಂಕಟಗಳನ್ನು ಊಹಿಸಬಲ್ಲೆ.ಅಷ್ಟೇ ಸಂಕಟ ಓದುವವರಿಗೂ ದಾಟಿದೆ. ಆ ದಾರುಣ ನೋವಿನಲ್ಲೂ ನಿಮ್ಮ ಪ್ರಜ್ಞೆ ಎಚ್ಚರವಾಗಿದೆಯೆಂದರೆ ಲೋಹಿಯಾ ನಂತರದ ಬೆಳವಣಿಗೆಗಳನ್ನು ಆ ಪರಂಪರೆಯ ಟಿಸಿಲುಗಳನ್ನು ಗುರುತಿಸುವುದು. ಇವೆಲ್ಲ ನಿಮಗೆ ಹೊಗಳಿಕೆಯಾಗಿ ಕಾಣಬಹುದು.ಆದರೆ ಸದ್ಯದ ಸಂದರ್ಭದಲ್ಲಿ ಸಹಜವಾದ ಮಾತಾಡುವುದು ಕಷ್ಟ. ಈ ದುರಿತ ಕಾಲದಲ್ಲಿ ನೀವು ಆರಿಸಿಕೊಂಡಿರುವ ಲೋಹಿಯಾ ‌ಮಾದರಿ ಶ್ರೇಷ್ಠ ಎಂದೇ ನನ್ನ ಭಾವನೆ.




Add Comment