ವಚನಗಳನ್ನು ಉಳಿಸಿದ ಉಳವಿಗೆ ಶರಣು!
by Nataraj Huliyar
‘ಫೆಬ್ರವರಿಯಲ್ಲಿ ಉಳವಿಯ ಜಾತ್ರೆ ಶುರುವಾಗಲಿದೆ’ ಎಂದು ‘ಕರಾವಳಿ ಮುಂಜಾವು’ ಪತ್ರಿಕೆಯ ಸಂಪಾದಕರೂ, ಗೆಳೆಯರೂ ಆದ ಗಂಗಾಧರ ಹಿರೇಗುತ್ತಿಯವರು ಹೇಳಿದ ತಕ್ಷಣ, ಮನಸ್ಸು ಹನ್ನೆರಡನೆಯ ಶತಮಾನಕ್ಕೆ ಹೊರಳಿತು.
ಈಗ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಉಳವಿ ಎಂಬ ಪುಟ್ಟ ಊರಿನ ಚಾರಿತ್ರಿಕ ಮಹತ್ವ ನನಗೆ ಮೊದಲು ಗೊತ್ತಾಗಿದ್ದು ಚೆನ್ನಪ್ಪ ಕವಿಯ ‘ಶರಣಲೀಲಾಮೃತ’ ಕೃತಿ ಓದಿದಾಗ. ಈ ಕೃತಿಯನ್ನು 1750ರ ಹೊತ್ತಿಗೆ ಬರೆದ ಚೆನ್ನಪ್ಪ ಕವಿ [ನನ್ನ ಜಿಲ್ಲೆಯೂ ಆಗಿರುವ] ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ನಿಡುಗಲ್ಲಿನಲ್ಲಿ ಜೀವಿಸಿದ್ದ ಎಂಬುದನ್ನು ಓದಿದಾಗ ರೋಮಾಂಚನವಾಯಿತು. ಈ ಕೃತಿಯಲ್ಲಿ ಕವಿ ಬಣ್ಣಿಸುವ ‘ಉಳುವೆ’ಯೇ ಮುಂದೆ ಉಳವಿಯಾಯಿತೇನೋ. ಉಳುವೆಯನ್ನು ಕವಿ ಕಂಡಿದ್ದನೋ ಇಲ್ಲವೋ, ತಿಳಿಯದು. ಆದರೆ ವಚನಕಾರರಿಗೆ ಆಶ್ರಯತಾಣವಾದ ಉಳುವೆ ಹಾಗೂ ಉಳುವೆಯ ಮಹಾಮನೆಯ ಬಗ್ಗೆ ಕವಿಯ ಮನಸ್ಸಿನಲ್ಲಿ ತುಂಬಿರುವ ಪ್ರೀತಿ, ಕೃತಜ್ಞತೆಗಳು ‘ಶರಣ ಲೀಲಾಮೃತ’ದ ಕೊನೆಯ ಭಾಗದಲ್ಲಿ ಉಕ್ಕಿ ಹರಿಯುತ್ತವೆ.
ಈ ಮಾತುಗಳ ಹಿನ್ನೆಲೆ ಅರ್ಥವಾಗಲು ಹನ್ನೆರಡನೆಯ ಶತಮಾನದ ವಚನಯುಗದ ಚರಿತ್ರೆಯ ಬಗ್ಗೆ ಸಾಹಿತ್ಯ ಕೃತಿಗಳ ಮೂಲಕ ಈಗಾಗಲೇ ಪರಿಚಿತವಾಗಿರುವ ವಿವರಗಳನ್ನು ಚಣ ನೆನಪಿಸಿಕೊಳ್ಳಿ:
ಬಸವಣ್ಣನವರ ನಿರ್ಗಮನದ ನಂತರ ಕಲ್ಯಾಣದಲ್ಲಿ ಕೋಲಾಹಲವುಂಟಾಯಿತು; ಬಿಜ್ಜಳ ದೊರೆಯ ಭೀಕರ ಹತ್ಯೆಯಾಯಿತು. ಹತ್ಯೆಯ ನಂತರ ಹಬ್ಬಿದ ಅರಾಜಕ ದಿನಗಳಲ್ಲಿ ವಚನಕಾರರ ಮೇಲೆ, ಶರಣರ ಮೇಲೆ ಹಲ್ಲೆಗಳು ಶುರುವಾದವು; ಹತ್ಯೆಗಳು ನಡೆದವು. ಬಸವಣ್ಣ ಕಟ್ಟಿದ ಕಲ್ಯಾಣದ ಮಹಾಮನೆ ವಚನಕಾರರ ಪಾಲಿಗೆ ಇಲ್ಲವಾಯಿತು. ಆ ಘಟ್ಟದಲ್ಲಿ ಕಲ್ಯಾಣವನ್ನು ತೊರೆಯಬೇಕಾಗಿ ಬಂದ ವಚನಕಾರರ ಒಂದು ತಂಡ ಉಳುವೆಯ ಮಹಾಮನೆ ತಲುಪಲು ಕಾಡುಮೇಡಿನ ಹಾದಿ ಹಿಡಿಯಿತು. ‘ಉಳುವೆ ದಾರಿಯಲ್ಲಿ ಇರುವಂಥಾ ವನದ ಶೃಂಗಾರಮಂ ಪೇಳ್ವೆನದೆಂತೆನೆ’ ಎಂದು ಆರಂಭವಾಗುವ ಕವಿಬಣ್ಣನೆಯಲ್ಲಿ ಹಾದಿಯ ಚೆಲುವು ಕಣ್ತುಂಬತೊಡಗುತ್ತದೆ:
‘ಕಾರೆ ತಾರೆಯು ಬಿಲ್ವ ಬೋರೆ ಬೊಬ್ಬುಲಿ ಬೇಲ
ಗೇರು ಕಾಮಾರೆ ಕಾಂತಾರದೊಳು
ತೂರಬಾರದ ಸೀಗೆ ಲತೆ ಗುಲ್ಮ ತರುಮಧ್ಯ
ದಾರಿಯಿಮ್ಮಯ್ಯಲೊಪ್ಪಿರುವುವು.’
ಇನ್ನೂರೈವತ್ತು ವರ್ಷಗಳ ಕೆಳಗೆ ಚೆನ್ನಪ್ಪ ಕವಿ ಬರೆದ ಇಂಥ ಹತ್ತಾರು ಪದ್ಯಗಳ ಬಣ್ಣನೆ ಓದುತ್ತಿದ್ದರೆ ಉಳುವೆಯ ಹಾದಿಯ ಪ್ರಕೃತಿಲೋಕದಲ್ಲಿ ನಾವೇ ಹಾದು ಹೋಗುತ್ತಿರುವಂತೆ ಭಾಸವಾಗತೊಡಗುತ್ತದೆ.
ಚೆನ್ನಪ್ಪ ಕವಿ ಬಣ್ಣಿಸುವ ಈ ಉಳುವೆಯ ಬಗ್ಗೆ ನನಗೆ ಮೋಹ ಹಾಗೂ ಅಪಾರ ಕೃತಜ್ಞತೆ ಹುಟ್ಟಿದ್ದು ಆರೇಳು ವರ್ಷಗಳ ಕೆಳಗೆ ನನ್ನ ‘ಮುಂದಣ ಕಥನ’ ನಾಟಕ ಬರೆಯಲು ರಿಸರ್ಚ್ ಮಾಡುತ್ತಿರುವಾಗ. ಶಿವಪ್ರಕಾಶರ ‘ಮಹಾಚೈತ್ರ’ ನಾಟಕದ ಮುನ್ನುಡಿಯಲ್ಲಿ ಈ ಕೃತಿಯ ಉಲ್ಲೇಖವಿತ್ತು; ಆಗ ನನ್ನ ರಿಸರ್ಚ್ ವಿದ್ಯಾರ್ಥಿಯಾಗಿದ್ದ ಚೆನ್ನರಾಜು ಬಸಪ್ಪನದೊಡ್ಡಿ ಈ ಪುಸ್ತಕ ಹುಡುಕಿ ಕೊಟ್ಟರು; ರಿಸರ್ಚ್ ವಿದ್ಯಾರ್ಥಿನಿ ಸೋನಿಯಾ ವಚನಯುಗ ಕುರಿತ ಬಗೆಬಗೆಯ ಪುಸ್ತಕಗಳನ್ನು ತಂದುಕೊಟ್ಟರು. ಮೇಷ್ಟರೊಬ್ಬ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಂದ ಕಣ್ಣು ಪಡೆಯುವ ಅರ್ಥಪೂರ್ಣ ಸಂದರ್ಭಗಳು ಇವು. ಆ ಪುಸ್ತಕಗಳಲ್ಲಿ ವಚನಯುಗದ ನಂತರ ವಚನಗಳಿಗೇನಾಯಿತು ಎಂಬುದನ್ನು ಹುಡುಕಲು ಹೊರಟ ನನಗೆ ಕನ್ನಡ ಸಾಂಸ್ಕೃತಿಕ ಭೂಪಟದಲ್ಲಿ ಉಳುವೆಗೆ ಎಂಥ ಮಹತ್ವದ ಸ್ಥಾನವಿದೆಯೆನ್ನುವುದು ಅರಿವಿಗೆ ಬರತೊಡಗಿತು. ಹನ್ನೆರಡನೆಯ ಶತಮಾನದಲ್ಲಿ ಕಲ್ಯಾಣದ ಪತನದ ನಂತರ ನಡೆದ ಈ ಮಹಾಶರಣಪಯಣವನ್ನು ಊಹಿಸಿಕೊಳ್ಳಿ: ಎಲ್ಲಿಯ ಉಳುವೆ! ಎಲ್ಲಿಯ ಕಲ್ಯಾಣ! ಇಂದಿನ ಬಸವಕಲ್ಯಾಣದಿಂದ ಉಳುವೆಗೆ ಕಾಡುಮೇಡುಗಳ ಹಾದಿಯಲ್ಲಿ ನಡೆದರೂ ಆರುನೂರು ಕಿಲೋಮೀಟರ್ ದೂರ.
ಎಂಟುನೂರು ವರ್ಷಗಳ ಕೆಳಗೆ ಸೈನಿಕರ ಭೀತಿ, ಆತಂಕಗಳ ನಡುವೆ ಶರಣ, ಶರಣೆಯರು ಉಳುವೆಯತ್ತ ಹೊರಟ ಹಿನ್ನೆಲೆ ನೆನಪಿಸಿಕೊಳ್ಳಿ: ಒಂದು ಕಾಲಕ್ಕೆ ಬಸವಣ್ಣನವರಿಗೆ ಬೆಂಬಲವಾಗಿ ನಿಂತು, ನಂತರ ಕವಲೊಡೆದ ಬಿಜ್ಜಳ ದೊರೆಯ ಹತ್ಯೆಯ ನಂತರ ಕಲ್ಯಾಣದಲ್ಲಿ ಸಾಂಪ್ರದಾಯಿಕ ಶಕ್ತಿಗಳ ಆರ್ಭಟ ಶುರುವಾಯಿತು. ಬಸವಣ್ಣ ತಂದ ಬದಲಾವಣೆಗೆ ವಿರುದ್ಧವಾಗಿದ್ದ ಇಂಥ ಶಕ್ತಿಗಳ ಕೈಗೊಂಬೆಯಾಗಿ ಹೂಂಕರಿಸುತ್ತಿದ್ದ ಅಳಿಯ ಬಿಜ್ಜಳನ ಸೈನಿಕರು ಶರಣರನ್ನು, ವಚನಕಾರರನ್ನು ಬೇಟೆಯಾಡತೊಡಗಿದರು. ದಿಕ್ಕೆಟ್ಟ ವಚನಕಾರರು ಮಾಚಿದೇವರ ಹೋರಾಟ, ರಕ್ಷಣೆಯ ಆಸರೆಯಲ್ಲಿ ವಚನಗಳ ಕಟ್ಟುಗಳನ್ನು ಹೊತ್ತು ನಾಡಿನ ಹಲವು ದಿಕ್ಕುಗಳಿಗೆ ಹೊರಡುವ ಕಾಲ ಬಂತು. ಚೆನ್ನಬಸವಣ್ಣನವರು ಕಲ್ಯಾಣದಿಂದ ಹೊರಟು ನಿಂತ ಗಳಿಗೆಯನ್ನು ಚೆನ್ನಪ್ಪ ಕವಿ ಬಣ್ಣಿಸುತ್ತಾನೆ:
ನಡುಗಿತಾ ಕಲ್ಯಾಣ ತನ್ನಯ ಒಡಲ ಜೀವವು ಹೊರಡುತಿದೆ ಇದ
ತಡೆದು ಸಲಹುವರಿಲ್ಲವೆನುತಲಿ- ನಡುಗಿತಾ ಪುರವು.
ಈ ಕಾಲ ಬರುವುದಕ್ಕಿಂತ ಹಿಂದೆಯೇ ಅಲ್ಲಮಪ್ರಭುಗಳು ‘ಉಳುಮೆಯಲ್ಲಿ ನಿಜವನೆಯ್ದು ನಡೆ ಚೆನ್ನಬಸವಣ್ಣ’ ಎಂದು ಕೊಟ್ಟಿದ್ದ ನಿರೂಪ ಇದೇ ಉಳುವೆಯನ್ನು ಕುರಿತಾದದ್ದಿರಬಹುದು; ಆ ನಿರೂಪದಂತೆ ಕೂಡ ಚೆನ್ನಬಸವಣ್ಣನವರು ಉಳುವೆಯ ಹಾದಿ ಹಿಡಿದಿರಬಹುದು. ಶರಣ, ಶರಣೆಯರ ತಂಡದ ಜೊತೆಗೆ ಮಡಿವಾಳ ಮಾಚಿದೇವರ ಪಡೆಯ ರಕ್ಷಣೆಯಲ್ಲಿ ಕವಿ-ತತ್ವಜ್ಞಾನಿ ಚೆನ್ನಬಸವಣ್ಣನವರು ಉಳುವೆಯ ಹಾದಿ ಹಿಡಿದ ಮೇಲೂ ಅಳಿಯ ಬಿಜ್ಜಳನ ಸೈನಿಕರು ವಚನಕಾರರ ಬೆನ್ನು ಹತ್ತುತ್ತಲೇ ಇದ್ದರು. ಮಡಿವಾಳ ಮಾಚಿದೇವರ ನೇತೃತ್ವದಲ್ಲಿ ವಚನಕಾರ, ವಚನಕಾರ್ತಿಯರು ಯೋಧರೂ ಆಗಿ ಹೋರಾಡಿದರು. ಸಾವು, ನೋವುಗಳನ್ನು ಅನುಭವಿಸಿದರು. ಇತ್ತ ಚೆನ್ನಬಸವಣ್ಣನವರ ತಾಯಿ, ಬಸವಣ್ಣನವರ ಸೋದರಿ, ಅಕ್ಕನಾಗಮ್ಮನವರು ಶರಣರಿಗೆ ವಚನರಕ್ಷಣೆಯ ಮಾರ್ಗಗಳನ್ನು ಹೇಳಿಕೊಡುತ್ತಿದ್ದರು. ವಚನಕಾರ ಡೋಹರ ಕಕ್ಕಯ್ಯನವರು ಕಕ್ಕೇರಿಯಲ್ಲಿ ಹುತಾತ್ಮರಾದರು.
ವಚನಸಂಗಾತಿಗಳನ್ನು ಕಳೆದುಕೊಂಡು ಮುನ್ನಡೆದ ಚೆನ್ನಬಸವಣ್ಣನವರು ಕೊನೆಗೆ ಅಳಿದುಳಿದ ಶರಣ ಶರಣೆಯರ ಜೊತೆ ಉಳುವೆಯ ಕಡೆಗೆ ಆರಂಭಿಸಿದ ಪಯಣದ ವಿವರಗಳು ನಮ್ಮಲ್ಲಿ ರುದ್ರ ವಿಷಾದ ಹುಟ್ಟಿಸುತ್ತವೆ. ‘ನಡೆದು ದಾರಿಯ ಪಾದಗಳು ಬಳಲಿದವು’ ಎನ್ನುತ್ತಾನೆ ಕವಿ. ಈ ಪಯಣದ ಕೊನೆಯ ಘಟ್ಟದಲ್ಲಿ ಕರಿ ಹೊಳೆ (ಕಾಳೀ ನದಿ) ಎದುರಾಗುತ್ತದೆ. ಆವರೆಗಿನ ಕಾಳಗಗಳಲ್ಲಿ ತೊಡಗಿ ರಕ್ತಸಿಕ್ತವಾಗಿದ್ದ ತಮ್ಮ ಕತ್ತಿಯನ್ನು ಕರಿ ಹೊಳೆಯಲ್ಲಿ ತೊಳೆದಿಟ್ಟ ಮಡಿವಾಳ ಮಾಚಿದೇವರು ಪಿಪ್ಪಲಿಗೆ ಎಂಬ ಊರಿಗೆ ಹೊರಟು ನಿಂತು, ಚೆನ್ನಬಸವಣ್ಣನವರನ್ನು ಬೀಳ್ಕೊಡುತ್ತಾ ಹೇಳುತ್ತಾರೆ: ‘ನೀವು ಉಳುವೆಗೆ ಪೋಗಿ, ಯಾವ ಭಯ ನಮಗಿಲ್ಲ…ನಾವು ಪಿಪ್ಪಲಿಗೆಯ ಠಾವಿಗೈದುವೆವು.’ ಆವರೆಗೆ ತಮ್ಮ ಬೆಂಗಾವಲಿಗೆ ನಿಂತ ತುರಗ ವಜೀರರನ್ನು ಹರಸಿದ ಚೆನ್ನಬಸವಣ್ಣನವರು ಅವರನ್ನು ದಿಳ್ಳಿಪುರಿಗೆ ಕಳಿಸಿಕೊಡುತ್ತಾರೆ.
ಇದಾದ ಕೆಲ ದಿನಗಳಲ್ಲಿ ಉಳುಮೆ ತಲಪಿದ ಶರಣರು ‘ಗಿರಿಯ ಮಧ್ಯದೆಸೆಯೊಳಗಿರುವ ಮಹಮನೆಯನ್ನು ಕಂಡರು.’ ಉಳುಮೆ ತಲುಪಿದ ಮೇಲೂ ಶತ್ರುಗಳ ಭೀತಿಯಿದ್ದ ಕಾರಣಕ್ಕಾಗಿ ಅಕ್ಕನಾಗಮ್ಮ, ನುಲಿಯ ಚಂದಯ್ಯ, ಕಿನ್ನರಿ ಬೊಮ್ಮಯ್ಯ, ಉಳಿದ ಶರಣರು ಸುತ್ತಣ ಗುಹೆಗಳಲ್ಲಿ ವಾಸಿಸಿರಬಹುದು ಎನ್ನುವವರಿದ್ದಾರೆ. ಕಲ್ಯಾಣದಲ್ಲಿ ಅಲ್ಲಮಪ್ರಭುಗಳ ಗೈರುಹಾಜರಿಯಲ್ಲಿ ಶೂನ್ಯ ಸಿಂಹಾಸನ ನಿರ್ವಹಣೆ ಮಾಡುತ್ತಿದ್ದ ಚೆನ್ನಬಸವಣ್ಣನವರು ಉಳುವೆಯಲ್ಲಿ ಮತ್ತೆ ಮಹಾಮನೆಯ ಹಿರಿಮೆಯನ್ನು ಮರು ಸೃಷ್ಟಿಸಲು ಪ್ರಯತ್ನಿಸಿದರು ಎಂದು ಊಹಿಸಬಹುದು…
ಚರಿತ್ರೆಯ ಮಹಾಸಾಧನೆಗಳ ಕಾಲ ಕಣ್ಣ ಮುಂದೆಯೇ ಕಣ್ಮರೆಯಾದದ್ದನ್ನು ಕಂಡವರಲ್ಲಿ ಎಂಥ ದಿಗ್ಭ್ರಮೆ ಹುಟ್ಟಿರಬಹುದು! ತಾವು ಸಾಕ್ಷಿಯಾಗಿದ್ದ ಅರ್ಥಪೂರ್ಣ ಘಟ್ಟಗಳನ್ನು ಮತ್ತೆ ಸೃಷ್ಟಿ ಮಾಡುವ ಕೆಲಸ ಎಂಥ ಸವಾಲಾಗಿರಬಲ್ಲದು! ಈ ಸ್ಥಿತಿಗಳನ್ನು ಚೆನ್ನಬಸವಣ್ಣ ಹಾಗೂ ಶರಣರ ಉಳುವೆಯ ಪಯಣ, ಆ ಪಯಣದ ನಂತರದ ದಿನಗಳು ಸೂಚಿಸುತ್ತವೆ. ಇದೆಲ್ಲದರ ನಡುವೆಯೂ, ಕಲ್ಯಾಣದ ಕೋಲಾಹಲದಲ್ಲಿ ಕಣ್ಮರೆಯಾಗಲಿದ್ದ ವಚನಗಳಲ್ಲಿ ಹಲವಾದರೂ ಈ ಪಯಣದಲ್ಲಿ ಉಳಿದುಕೊಂಡಂತೆ ಕಾಣುತ್ತದೆ. ವಚನ ಸಾಹಿತ್ಯ ಉಳುವೆಯಲ್ಲಿ ಉಳಿದುಕೊಂಡದ್ದು ಹೀಗೆ. ಕಾಲಾನಂತರ ಉಳುವೆಯಿಂದಲೂ ಕನ್ನಡನಾಡಿನ ಹಲವು ದಿಕ್ಕುಗಳಿಗೆ ಹೊರಟ ಶರಣರು ವಚನಗಳನ್ನು ಕಾಪಾಡಿಕೊಂಡು, ಅವನ್ನು ಪ್ರತಿ ಮಾಡುತ್ತಾ ಕನ್ನಡನಾಡಿನ ಬೇರೆ ಬೇರೆ ಭಾಗಗಳಲ್ಲೂ ಹಂಚುತ್ತಾ ಹೋಗಿರಬಹುದು.
ಸಾಹಿತ್ಯ ಕೃತಿಗಳು ಕೊಡುವ ವಚನಯುಗದ ಈ ಚಿತ್ರಗಳು ಇತಿಹಾಸದ ವಿವರಗಳಿಗೆ ಎಷ್ಟು ಹೊಂದಿಕೊಳ್ಳುತ್ತವೆ ಎಂಬುದನ್ನು ಆ ಕಾಲದ ಇತಿಹಾಸವನ್ನು ಅಧಿಕೃತವಾಗಿ ಹೇಳಬಲ್ಲ ವಿದ್ವಾಂಸರು ನಿರ್ಧರಿಸಬಲ್ಲರು. ಆದರೆ, ‘ಹಾಡೆ ಹಾದಿಯ ತೋರಿತು’ ಎಂಬ ಕೆ.ಎಸ್.ನರಸಿಂಹಸ್ವಾಮಿಯವರ ರೂಪಕದ ಅರ್ಥವನ್ನು ನೀವು ಒಪ್ಪುವುದಾದರೆ, ಈವರೆಗೆ ಕೊಟ್ಟಿರುವ ವಚನ ಪಯಣದ ಚಿತ್ರಗಳು ಚೆನ್ನಪ್ಪಕವಿಯ ಹಾಡು ತೋರಿದ ಹಾದಿಯಲ್ಲಿ ನನ್ನ ಕಣ್ಣಿಗೆ ಕಂಡವು ಎಂದಷ್ಟೇ ಹೇಳಬಲ್ಲೆ.
ಇವತ್ತಿಗೂ ಉಳುವೆಯಲ್ಲಿ ಚೆನ್ನಬಸವಣ್ಣನವರ ಗದ್ದುಗೆಯಿದೆ. ಪ್ರತಿವರ್ಷ ಜಾತ್ರೆ ನಡೆಯುತ್ತದೆ. ಈ ವರ್ಷ ಬಸವಣ್ಣನವರು ನಮ್ಮ ಸಾಂಸ್ಕೃತಿಕ ನಾಯಕರೆಂದು ಕರ್ನಾಟಕ ಸರ್ಕಾರ ಅಧಿಕೃತವಾಗಿ ಘೋಷಿಸಿದೆ. ಇದೆಲ್ಲ ಒಟ್ಟಿಗೆ ಸೇರಿ, ಉಳವಿಯ ಜಾತ್ರೆಯ ಸಂಭ್ರಮದಲ್ಲಿ ವಚನಗಳ ಸಮಾನತೆಯ ಆಶಯ ಮೊಳಗುವಂತಾದರೆ ಜಾತ್ರೆಗೆ ಹೊಸ ಅರ್ಥ ಬರಬಲ್ಲದು. ಉಳವಿಯಲ್ಲಿ ಕೆಲ ಕಾಲ ನೆಲೆ ನಿಂತ ಅನನ್ಯ ವಚನಕಾರ ಚೆನ್ನಬಸವಣ್ಣನವರ ವಚನಗಳ ಹೊಸ ಹೊಸ ಓದು, ವ್ಯಾಖ್ಯಾನಗಳು ಕೂಡ ಉಳವಿ ಜಾತ್ರೆಯ ಸಂಭ್ರಮಕ್ಕೆ ಗಂಭೀರ ಸಾಂಸ್ಕೃತಿಕ ಸ್ಪರ್ಶ ನೀಡಬಲ್ಲವು. ಆ ಕೆಲಸ ಮುಂದಿನ ವರ್ಷದ ಜಾತ್ರೆಯಲ್ಲಾದರೂ ಆಗಲಿ!
ವಚನಕಾರರು ಉಳುವೆಯವರೆಗೂ ಕಾಲ್ನಡಿಗೆಯಲ್ಲಿ ಹೊರಟು ಕನ್ನಡದ ಅಪೂರ್ವ ವಚನ ಸಾಹಿತ್ಯಪಯಣವನ್ನು ಮುಂದುವರಿಸಿದ ರೀತಿಯಂತೂ ನಾವು ಇತಿಹಾಸದ ಪುಟಗಳಿಂದ ಪಡೆಯಲೇಬೇಕಾದ ಸ್ಫೂರ್ತಿಗಳು ಎಂಥವು ಎಂಬುದನ್ನು ಸೂಚಿಸುತ್ತದೆ. ಇತಿಹಾಸದ ರಾಡಿಗಳನ್ನು ಹೊರತೆಗೆದು ಹರಡಿ ಶಾಂತಿ ಕದಡುವ ಗಲಭೆಕೋರ ಮನಸ್ಸುಗಳು ಇತಿಹಾಸದ ಇಂಥ ದಿವ್ಯ ಸಾಂಸ್ಕೃತಿಕ ಪಯಣಗಳಿಂದ ಪಾಠ ಕಲಿಯುವ ಕಾಲ ಬರಬಹುದೆ?
ಬ್ಲಾಗ್ ಫಾಲೋ ಮಾಡಲು ಒಪ್ಪಿ, ಕ್ಲಿಕ್ ಮಾಡಿ; ನೋಟಿಫಿಕೇಶನ್ ಪಡೆಯಿರಿ, ಶೇರ್ ಮಾಡಿ: FOLLOW
ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com
ಬಿಡುವಾದಾಗ ನೋಡಿ, ಶೇರ್ ಮಾಡಿ: YouTube Channel Link
Comments
4 Comments
| ಹರಿಪ್ರಸಾದ್
ಮೆಚ್ಚುಗೆ, ಕೃತಜ್ಞತೆಯ ಕಣ್ಣೀರು......
\r\n| ಬಂಜಗೆರೆ ಜಯಪ್ರಕಾಶ
ನಿಮ್ಮ 'ಮುಂದಣ ಕಥನ' ರಂಗ ಕೃತಿಯ ಗಟ್ಟಿತನಕ್ಕೆ ನೀವು ಕೈಗೊಂಡ ಅಧ್ಯಯನ ಹಾಗೂ ಶೋಧ, ಅದನ್ನೆಲ್ಲಾ ಸೃಜನಶೀಲವಾಗಿ ವರ್ತಮಾನದ ಸಂದರ್ಭಕ್ಕೆ ಅಳವಡಿಸಿರುವ ವಿಧಾನ ಬಹಳ ಪರಿಣಾಮಕಾರಿಯಾಗಿದೆ. ಈ ಲೇಖನ ಅದರ ಸುಳಿವುಗಳನ್ನು ಸೂಚಿಸುತ್ತಿದೆ. ಅದನ್ನು ಮತ್ತೊಂದು ಸಲ ರಂಗದ ಮೇಲೆ ತರುವುದಕ್ಕೆ ಇದು ಸೂಕ್ತ ಸಂದರ್ಭ. ಬಸವಣ್ಣ ಈಗ ಅಧಿಕೃತವಾಗಿ ನಮ್ಮ ಸಾಂಸ್ಕೃತಿಕ ನಾಯಕ.
\r\n| Dr.Vijaya
ದಕ್ಷಿಣದ ಬಹುತೇಕ ಕರ್ನಾಟಕದ ಬಳ್ಳಾರಿ,ಹೊಸಪೇಟೆ,ಜಗಳೂರು,ಚಳ್ಳಕೆರೆ ಮೊದಲಾದ ಕಡೆ ಅನೇಕ ಮಠಗಳಿವೆ.ಹೆಜ್ಜೆ ಹೆಜ್ಜೆಗೂ ಸಿಗುತ್ತವೆ.ಅಂದು ವಚನಗಳನ್ನು ಹೊತ್ತು ತಂದವರೇ ಈ ಮಠಗಳನ್ನು ಸ್ಥಾಪಿಸಿ ವಚನಗಳನ್ನು ಕಾಪಿಟ್ಟರು ಎನ್ನುವ ಸಂಗತಿ ಅಲ್ಲಿಯವರು ಹೇಳುತ್ತಾರೆ.
\r\n\r\n
| ಡಾ. ನಿರಂಜನ ಮೂರ್ತಿ ಬಿ ಎಂ
ಜಾತಿಗಳ ತರತಮಗಳ ತೊಲಗಿಸಲು, ಮೇಲುಕೀಳುಗಳನಳಿಸಲು, ಸಮಾನತೆ ಸಹೋದರತೆಗಳ ರೂಢಿಸಲು, ಕಾಯಕದ ಮಹತಿಯನರುಹಲು, ಒಟ್ಟಾರೆ ಮನುಕುಲದ ಏಳ್ಗೆಗಾಗಿ, ಹನ್ನೆರಡನೆಯ ಶತಮಾನದ ಶರಣರು ವಚನಗಳ ಮೂಲಕ ಜಾಗೃತಿ ಮೂಡಿಸಲೆತ್ನಿಸಿದ ಮತ್ತು ಆಚರಣೆಯಲ್ಲಿ ತರಲೆತ್ನಿಸಿದ ಪರಿ ಇಡೀ ವಿಶ್ವಕ್ಕೇ ಅಪರೂಪದ ಮಾದರಿಯೆಂದರೆ ತಪ್ಪಾಗಲಾರದು. ಅಂಥಹ ವಿಶಿಷ್ಟವಾದ ಶರಣ-ವಚನ ಚಳುವಳಿಯ ಕೊನೆಯ ಹಂತದ ದುರಂತಮಯ ಸಂಘರ್ಷವನ್ನು ಮತ್ತು ಅಂದಿನ ಶರಣರು ವಚನಗಳ ರಕ್ಷಣೆಗಾಗಿ ಮಾಡಿದ ಹೋರಾಟವನ್ನು ಮತ್ತು ಪಟ್ಟ ಪಾಡುಗಳನ್ನು ಸಂಕ್ಷಿಪ್ತವಾಗಿಯಾದರೂ ಸಮಗ್ರ ನೋಟದಿಂದ ಕಟ್ಟಿಕೊಡುವ ಮತ್ತು ವಚನ ಸಾಹಿತ್ಯ ಕ್ಷೇತ್ರದಲ್ಲಿ ಉಳವಿಯ ಮಹತ್ವವನ್ನು ನೆನಪಿಸುವ ಹುಳಿಯಾರರ ಈ ಲೇಖನ ಸ್ತುತ್ಯಾರ್ಹ.
\r\n\r\nAdd Comment