ಕತೆ ಬರೆವ ಕಾತರ; ಕಥಾನಂತರದ ತಲ್ಲಣ

ಮೊದಲಿಗೆ, ನನ್ನ ಹಿಂದಿನ ಕಥಾ ಸಂಕಲನಕ್ಕೆ ಬರೆದ ಮುನ್ನುಡಿಯ ಭಾಗಗಳು: 

ನೀಷೆಯಂಥ ದೊಡ್ಡ ತತ್ವಜ್ಞಾನಿಯನ್ನು ಓದುತ್ತಾ ಓದುತ್ತಾ ಅವನು ಎಷ್ಟೋ ಸಲ ಒಂದೇ ಸಾಲಿನಲ್ಲಿ ಅಥವಾ ಒಂದು ಪುಟ್ಟ ಟಿಪ್ಪಣಿಯಲ್ಲಿ ತಲುಪುವ ಸೂಕ್ಷ್ಮ ಸತ್ಯಗಳನ್ನು ಕಂಡು ಅಚ್ಚರಿಯಾಗುತ್ತದೆ; ಅವನ ಬಗ್ಗೆ ಕೃತಜ್ಞತೆ ಮೂಡುತ್ತದೆ. ಈ ಥರದ ತೀಕ್ಷ್ಣ ಸತ್ಯ ತಲುಪಲು ಕತೆ ಬರೆಯುವ ವ್ಯಕ್ತಿ ಎಷ್ಟೊಂದು ಸರ್ಕಸ್ ಮಾಡಬೇಕಾಗುತ್ತದಲ್ಲ ಎನಿಸತೊಡಗುತ್ತದೆ...
ಆದರೂ ಕತೆ ಬರೆಯವ ವ್ಯಕ್ತಿಗೆ ಎಂದೋ ಕಂಡ, ಹೊಳೆದ, ಬೆಳೆದ ಘಟನೆಗಳಿಗೆ ಅಥವಾ ಘಟನೆಗಳಂಥ ರೂಪಕಕ್ಕೆ ಬರಬರುತ್ತಾ ಹೊಸ ಮುಖಗಳು ಸೇರಿಕೊಳ್ಳತೊಡಗುತ್ತವೆ; ಕಥಾಮಾಧ್ಯಮವೇ ಕಾಣಿಸುವ ಸತ್ಯಗಳು ಕತೆ ಬರೆಯುವ ಕೆಲಸದ ಬಗ್ಗೆ ಹೊಸ ಉಮೇದು ಹುಟ್ಟಿಸತೊಡಗುತ್ತವೆ. ಆ ಉಮೇದು ಯಾವುದೋ ಗಳಿಗೆಯಲ್ಲಿ ಹಾಗೇ ನಿಂತುಹೋಗುತ್ತದೆ; ಮುಂದೆಂದೋ, ಯಾವ ವರ್ಷವೋ ಆ ಕತೆಗೆ ಇನ್ನೇನೋ ಕೂಡಿಕೊಂಡಂತಾಗಿ ಬರೆಯುವ ಒತ್ತಾಯ ಶುರುವಾಗುತ್ತದೆ. ಇದು ಒಂದು ಕತೆಯನ್ನು ವರ್ಷಗಟ್ಟಲೆ ಬರೆಯವ ನನ್ನ ಅನುಭವ. 

ಇದೆಲ್ಲದರ ನಡುವೆ ಒಂದು ದೃಶ್ಯ: 

ಬೆಂಗಳೂರಿನ ಜೆ.ಪಿ.ನಗರದ ವೈನ್ ಸ್ಟೋರಿನ ಹೊರಗಿನ ಮಂದ ಬೆಳಕಿನಲ್ಲಿ ಗೋಡೆಗೊರಗಿ ಬಿಳಿಯ ಹತ್ತಿ ಸೀರೆ ಉಟ್ಟ ಆ ಕಪ್ಪನೆಯ ತಮಿಳು ಹೆಂಗಸು ಅದೇ ಆಗ ಒಂದೇ ಗುಟುಕಿಗೆ ಮದ್ಯವನ್ನು ಗಂಟಲಿಗಿಳಿಸಿ ಹುಡುಗನೊಬ್ಬನಿಗೆ ಏನನ್ನೋ ತಿನ್ನಲು ಕೊಡುತ್ತಾ, ಅವನ ಬಗೆಗೆ ಪ್ರೀತಿಯನ್ನೋ, ಮತ್ತಾವುದೋ ಭಾವವನ್ನೋ ತೋರುತ್ತಿರುವ ದೃಶ್ಯ ನೆನಪಾಗುತ್ತದೆ. ಆ ಗಳಿಗೆಯಲ್ಲಿ ಆ ಹೆಣ್ಣು ಮುಖದ ಮೇಲಿದ್ದ ಭಾವ ಏನನ್ನು ಹೇಳುತ್ತಿತ್ತು ಎಂಬ ಪ್ರಶ್ನೆ ಮುತ್ತತೊಡಗುತ್ತದೆ. ಆ ಹುಡುಗನನ್ನು ಸಾಕಲಾಗದ ಅಸಹಾಯಕತೆಯೇ? ಅಗಲಿಕೆಯ ಭಾವವೇ? ಆ ಹುಡುಗನ ಮುಖದ ಭಾವವೇನು? ಅವನ ಮನಸ್ಸಿನಲ್ಲಿ ನಡೆಯುತ್ತಿರಬಹುದಾದ ವ್ಯಾಪಾರ ಏನಿರಬಹುದು...? 

ಫೋಟೋದ ಫ್ರೇಮಿನಂತೆ ಆ ಚಿತ್ರ ನನ್ನ ಚಿತ್ತದಲ್ಲಿ ಹಾಗೇ ಇದೆ, ಮಾಸಲು ಮಾಸಲಾಗಿ. ಆ ಹೆಂಗಸಿನ ಜೊತೆಗೆ ಅಲ್ಲೇ ಇದ್ದ ಮತ್ತೊಬ್ಬ ಹೆಂಗಸಿನ ಮುಖವೂ ಈ ಫೋಟೋದೊಳಗೆ ಸೇರಿಕೊಳ್ಳಲೆತ್ನಿಸುತ್ತದೆ. 

ಅವತ್ತು ಅಲ್ಲೇ ನಿಂತು ವಿಚಾರಿಸಿದ್ದರೆ ಆ ಮೂವರ ಆ ಕ್ಷಣದ ಮನೋಲೋಕ ನನ್ನ ಅರಿವಿಗೆ ಬರುತ್ತಿತ್ತೇ? ಅವರು ತಮಿಳರಿರಬಹುದೆಂಬ ಊಹೆಯ ಮೇಲೆ ಹೇಳುವುದಾದರೆ, ಅವರ ಭಾಷೆ ಬರದ ನನಗೆ ಅವರ ಮನಸ್ಸು ತಿಳಿಯುವುದು ಸಾಧ್ಯವಿತ್ತೇ? ಅಕಸ್ಮಾತ್ ತಮಿಳು ಬಂದಿದ್ದರೂ ಆ ಭಾವ ತಿಳಿಯುತ್ತಿತ್ತೇ? ನಾನು ಅವರನ್ನು ವಿಚಾರಿಸಿದ್ದರೂ ಅವರು ತಮ್ಮ ಮನಸ್ಸಿನಲ್ಲಿ ನಡೆಯುತ್ತಿದ್ದುದನ್ನು ವಿವರಿಸುವುದು ಸಾಧ್ಯವಿತ್ತೇ... 
ಹೀಗೆ ಆ ಚಿತ್ರ ನೆನಪಾದಾಗಲೆಲ್ಲ ಆ ಸನ್ನಿವೇಶದ ಅಸಲಿ ಅರ್ಥ ಇನ್ನೆಂದೂ ಹೊಳೆಯುವುದು ಸಾಧ್ಯವಿಲ್ಲ ಎನ್ನಿಸುತ್ತದೆ. ಅಷ್ಟೇ ಯಾಕೆ, ಇವತ್ತು ಕೂಡ ಆ ಸನ್ನಿವೇಶ ಅರ್ಥವಾಗುವ ಸಾಧ್ಯತೆ ತೀರಾ ಕಮ್ಮಿಯಿತ್ತು.

ಅಂದರೆ, ಮಾನವ ಸನ್ನಿವೇಶ ಹಾಗೂ ಸ್ಥಿತಿಗಳು ನನಗೆ ಅರ್ಥವಾಗಿವೆ ಎಂದು ಬರೆಯಹೊರಡುವುದೇ ಒಂದು ಭ್ರಮೆಯೇನೋ! ಬರೆವ ಕ್ರಿಯೆಯಲ್ಲೇ ಕೆಲವು ಅರ್ಥಗಳು ಹೊಳೆಯುತ್ತವೆ ಎಂಬ ಗ್ರಹಿಕೆ ಕೂಡ ಪೂರ್ತಿ ನಿಜವಿರಲಿಕ್ಕಿಲ್ಲ. ಬರೆಯುವವರು ಕೊನೆಗೂ ಮತ್ತೊಬ್ಬನ ಅಥವಾ ಮತ್ತೊಬ್ಬಳ ಬಗೆಗಿನ ಹೊರ ವಿವರಗಳನ್ನು ಕೊಡಬಹುದೇ ಹೊರತು ಅವರೊಳಗೆ ನಿಜಕ್ಕೂ ಏನಾಗುತ್ತಿದೆ ಎಂದು ಹೇಳುವುದು ಕಷ್ಟ...
ಈ ಅರಿವಿನ ಎದುರು, ಬರವಣಿಗೆಯ ಮೂಲಕ `ಕಂಡಿರುವೆ’, `ಕಾಣುತ್ತಿರುವೆ’ ಎಂಬ ಠೇಂಕಾರ ಝರ್ರನೆ ಇಳಿದು, ಅಷ್ಟಿಷ್ಟು ಸತ್ಯ ಮಾತ್ರ ಅಕಸ್ಮಾತ್ ಹೊಳೆದಿರಬಹುದು ಹಾಗೂ ಕೆಲಬಗೆಯ ವೈರುಧ್ಯಗಳಾದರೂ ಈ ಬರವಣಿಗೆಯ ಕ್ರಿಯೆಯಲ್ಲಿ ಗೋಚರಿಸಿರಬಹುದು ಎಂಬ ಅನುಮಾನದಿಂದ ಈ ಕತೆಗಳನ್ನು ನಿಮಗೆ ದಾಟಿಸುತ್ತಿರುವೆ...

ಈ ಮಾತುಗಳನ್ನು ಬರೆದು ಹದಿನೈದು ವರ್ಷಗಳಾದ ಮೇಲೂ ಕತೆ ಬರೆಯುವ ಬಗೆಗಿನ ಅಳುಕು ಹಾಗೇ ಇದೆ. ಈಚೆಗೆ ಕತೆಗಳನ್ನು ಬರೆದ ನಂತರವೂ ಕತೆಗಳು ಬೆಳೆಯುತ್ತಲೇ ಇರುವ ವಿಸ್ಮಯಗಳೂ ಬಂದು ನನ್ನನ್ನು ಕೆಣಕುತ್ತವೆ; ಆ ಸೃಜನಶೀಲ ಕೆಣಕಿನ ಫಲವೇ ನನ್ನ ಮೂರನೆಯ ಕಥಾ ಸಂಕಲನ: 'ಕಥಾನಂತರ'.  

ನಿಮಗೆ ಬಿಡುವಿದ್ದರೆ 14 ಡಿಸೆಂಬರ್ 2023 ಗುರುವಾರ ಸಂಜೆ 6 ಗಂಟೆಗೆ ಬೆಂಗಳೂರಿನ ಬಸವನಗುಡಿಯ ನ್ಯಾಶನಲ್ ಕಾಲೇಜಿನ ಎಚ್. ಎನ್. ಸಭಾಂಗಣದಲ್ಲಿ ನಡೆಯುವ ‘ಕಥಾನಂತರ’ ಕಥಾ ಸಂಕಲನದ ಬಿಡುಗಡೆಯಲ್ಲಿ ನಮ್ಮೊಡನೆ ಇರಬೇಕೆಂದು ಕೋರುವೆ. ಕಾರ್ಯಕ್ರಮ ನಿಜಕ್ಕೂ ವಿಶೇಷವಾಗಿರುತ್ತದೆ ಎಂದು ಗ್ಯಾರಂಟಿ ಕೊಡುವೆ.

ಕಥಾನಂತರದ ಅನುಭವ ಹಂಚಿಕೊಳ್ಳಲು ಪ್ರಿಯರಾದ ಮೊಗಳ್ಳಿ ಗಣೇಶ್, ದು. ಸರಸ್ವತಿ; ಜೊತೆಗೆ ರವಿಕುಮಾರ್ ಬಾಗಿ ವೇದಿಕೆಯಲ್ಲಿರುತ್ತಾರೆ. ಸಿನಿಮಾನಟರಾದ ಕಿರಣ್ ನಾಯಕ್, ಶಿವಪ್ರಸಾದ್ ಕೆಲವು ಕಥಾಭಾಗಗಳನ್ನು ಮಂಡಿಸುತ್ತಾರೆ.

ಆಹ್ವಾನ ಪತ್ರಿಕೆಯಲ್ಲಿ ವಿವರಗಳಿವೆ. ಸಾಧ್ಯವಾದರೆ ಬನ್ನಿ.
 

Share on:


Recent Posts

Latest Blogs



Kamakasturibana

YouTube



Comments

6 Comments



| Gangadhara BM

'ಕಥಾನಂತರ' ದ ಕುತೂಹಲ ಕಳೆದುಕೊಳ್ಳಲು ಗುರುವಾರ ಸಂಜೆ ಆಗಮಿಸುತ್ತೇವೆ ಸರ್.!

\r\n


| ಅಜಿತ್. ಎಂ

"Wow" Congratulations on publishing your book! Sir

\r\n\r\n

Your unique perspective and thoughtful insights will surely make an impact on the readers. 

\r\n\r\n

Thank you for sharing your story with us.

\r\n


| Gangadhara BM

*ಕುತೂಹಲ ತಣಿಸಿಕೊಳ್ಳಲು

\r\n


| MOHAN MIRLE

ಕಥಾ ಬರವಣಿಗೆಯ ಸಾಹಸವನ್ನೂ ಕಥಾ ರಚನೆಯ ಸೂಕ್ಷ್ಮ ಒಳನೋಟಗಳನ್ನೂ ಸವಾಲುಗಳನ್ನೂ ನಿಮ್ಮ ಈ ಹಿಂದಿನ ಕಥಾಸಂಕಲನದ ಮುನ್ನುಡಿ ಸೂಚ್ಯವಾಗಿ ತಿಳಿಸುತ್ತದೆ. ಪ್ರಶಸ್ತಿಗಾಗಿ ಕಥೆ ಬರೆಯುವ, ಸಂತೆಯ ಹೊತ್ತಿಗೆ ಮೂರು ಮೊಳ ನೇಯುವ, ಸಿದ್ಧ ಮಾದರಿಗಳನ್ನು ಅನುಸರಿಸುವ ಕಥೆಗಾರರ ನಡುವೆ ವರ್ಷಗಟ್ಟಲೆ ಕಥೆಯನ್ನು ಧೇನಿಸುವ, ಕಥಾ ಪ್ರಕಾರವನ್ನು ಸತ್ಯಾನ್ವೇಷಣೆ ಗಂಭೀರ ಮಾರ್ಗವಾಗಿ ಪರಿಗಣಿಸಿರುವ ನಿಮ್ಮಂತಹ ಕತೆಗಾರರು ಖಂಡಿತಾ ಅಪರೂಪದಲ್ಲಿ ಅಪರೂಪ ಎಂದು ಭಾವಿಸಿದ್ದೇನೆ. ಇಂತಹ ಕಥಾ ಸೃಷ್ಟಿಯ ಕಥಾನಕಗಳೇ ನಮ್ಮಂತವರಿಗೆ ಮಾರ್ಗದರ್ಶಕ ಮತ್ತು ಪ್ರೇರಕ.

\r\n


| Rajappa Dalavayi

Kate roopa padeva vinyasavannu channagi vishleshisidderi.

\r\n


| Dr. B.C Prabhakar

Beautifully scripted! In fact you posed many possibilities as to what makes one take up writing. To me it is essentially the brilliance of an individual , thinking process, as you have rightly pointed out, and an urge are the key . Besides, one needs to shrug off the lethargy and stop pondering over its final impact.
\r\nIn any case, if any writing has to stand test of time he/she should be an artist! That's my view, may be I am wrong!
\r\nThanks for sharing and best wishes. 

\r\n




Add Comment