ಟೀಚರ್ ಮತ್ತು ಟೀಚಿಂಗ್
by Nataraj Huliyar
ಸೌತ್‌ಈಸ್ಟ್ ಏಷ್ಯನ್ ಸಂಸ್ಥೆಯ ಮೇಡಂಗಳು, ಮೇಷ್ಟ್ರುಗಳ ಜೊತೆ ಮಾತಾಡುತ್ತಾ ‘ನಿಮ್ಮ ಪ್ರಕಾರ ಟೀಚಿಂಗ್ ಎಂದರೇನು?’ ಎಂದೆ. ಅವತ್ತು ಗೆಳೆಯ-ಪ್ರಿನ್ಸಿಪಾಲ್ ಮುತ್ತೇಗೌಡರು ಫ್ಯಾಕಲ್ಟಿ ಡೆವಲಪ್‌ಮೆಂಟ್ ಪ್ರೋಗ್ರಾಮಿನಲ್ಲಿ ಮಾತಾಡಲು ಕರೆದಿದ್ದರು. ‘ಟೀಚಿಂಗ್ ಎಂದರೆ ನಿರಂತರ ಕಲಿಕೆ’ ಎಂದರು ಒಬ್ಬ ಮೇಡಂ.
ಅಲ್ಲೇ ತೆರೆಯ ಮೇಲೆ ನನ್ನ ಪವರ್ ಪಾಯಿಂಟ್ ಮಂಡನೆಯಲ್ಲಿದ್ದ ಝೆನ್ ಸಾಲು ಇದನ್ನೇ ಇನ್ನಷ್ಟು ಪರಿಣಾಮಕಾರಿಯಾಗಿ ಹೇಳುತ್ತಿತ್ತು: ‘ದೇರ್ ಆರ್ ನೋ ಟೀಚರ್ಸ್; ವಿ ಆರ್ ಆಲ್ ಲರ್ನರ್‍ಸ್’. (‘ಟೀಚರ್ಸ್ ಅಂತ ಯಾರೂ ಇರುವುದಿಲ್ಲ; ನಾವೆಲ್ಲ ಕಲಿಯುವವರೇ’). ಈ ಝೆನ್ ಮಾತು ಹುಸಿ ವಿನಯದ ಮಾತೇನಲ್ಲ; ನನಗಂತೂ ಇದು ನಿತ್ಯ ಅನುಭವಕ್ಕೆ ಬರುತ್ತಿರುತ್ತದೆ.
ಅವತ್ತಿನ ಮಾತಿನಲ್ಲಿ ಹಿಂದೆ ಇದೇ ಅಂಕಣದಲ್ಲಿ ಬರೆದಿದ್ದ ನಟ ಇರ್ಫಾನ್‌ಖಾನ್ ಮಾತನ್ನು ನೆನಪಿಸಿದೆ: ‘ನಾಟಕದಲ್ಲಿ ಆ್ಯಕ್ಟ್ ಮಾಡೋಕೆ ನನಗೆ ನಿಜಕ್ಕೂ ಇಷ್ಟ. ಆದರೆ ಇವತ್ತು ನಟನೆ ಮಾಡಿದಂತೆ ನಾಳೆ ಮಾಡಬಾರದು; ಇದು ನನ್ನಾಸೆ. ನಟನೆ, ಡೈಲಾಗ್ ಡೆಲಿವರಿ… ಎಲ್ಲದರಲ್ಲೂ ನಾಳಿನ ಪ್ರಯೋಗ ಬೇರೆಯದೇ ಆಗಿರಬೇಕು.’ ಇರ್ಫಾನ್ ಮಾತು ಟೀಚಿಂಗ್, ಬರವಣಿಗೆ, ನೃತ್ಯ, ಸಂಗೀತ ಎಲ್ಲದಕ್ಕೂ ಅನ್ವಯಿಸುತ್ತದೆ ಎಂಬುದು ನಂತರ ಹೊಳೆಯಿತು.
ಅವತ್ತು ‘ಟೀಚಿಂಗ್ ಎಂದರೇನು?’ ಎಂದು ಕೇಳುತ್ತಾ, ‘ಟೀಚಿಂಗ್ ಬಗ್ಗೆ ನಿಮ್ಮ ಅನುಭವದಿಂದ ಹುಟ್ಟಿರುವ ಡೆಫನಿಶನ್ ಮಾತ್ರ ಹೇಳಿ; ಟೀಚರ್ಸ್ ಡೇ quotes, ಗುರು ವಿಷ್ಣು, ಗುರು ಬ್ರಹ್ಮ…ಇವನ್ನೆಲ್ಲ ಹೇಳಬೇಡಿ’ ಎಂದಿದ್ದೆ. ಆದರೂ ಇಂಡಿಯಾದಲ್ಲಿ ‘ಗುರು’ ಎಂಬ ಕಲ್ಪನೆ ಎಷ್ಟು ಆಳವಾಗಿ ಬೇರೂರಿದೆ ಎಂದರೆ, ಇಲ್ಲಿ ತಮ್ಮ ರಾಜಕೀಯ ಮುಂದಾಳುಗಳನ್ನು ಕೂಡ ಜನರು ಗುರುಗಳಂತೆ, ತಮ್ಮ ಮಾರ್ಗದರ್ಶಕರಂತೆ ಕಾಣುತ್ತಾರೆ ಎಂಬುದನ್ನು ರಿಚರ್ಡ್ ಲ್ಯಾನಾಯ್ ‘ದ ಸ್ಪೀಕಿಂಗ್ ಟ್ರೀ’ ಪುಸ್ತಕದಲ್ಲಿ ಗುರುತಿಸುತ್ತಾನೆ.
‘ಗುರು’ ಎಂಬುದಕ್ಕೆ ಈ ಅರ್ಥ ಸ್ವಾತಂತ್ರ‍್ಯ ಚಳುವಳಿಯ ಕಾಲದ ನಿಸ್ವಾರ್ಥಿ ನಾಯಕರನ್ನು ನೋಡಿ ಕೂಡ ಹುಟ್ಟಿರಬಹುದು ಎಂದು ನನಗನ್ನಿಸುತ್ತದೆ. ಜನರು ನೆಹರೂರನ್ನು ‘ಪಂಡಿತ್‌ಜೀ’ ಎಂದಿದ್ದನ್ನು ಹಾಗೂ ಗಾಂಧೀಜಿ ರವೀಂದ್ರನಾಥ ಟ್ಯಾಗೋರರನ್ನು ‘ಗುರುದೇವ್’ ಎಂದಿದ್ದನ್ನು ಲ್ಯಾನಾಯ್ ಉದಾಹರಿಸುತ್ತಾನೆ. ಮುಂದೊಮ್ಮೆ ಜನ ಅಂಬೇಡ್ಕರ್ ಅವರನ್ನು ‘ಬಾಬಾಸಾಹೇಬ್’ ಎಂದಿದ್ದನ್ನು, ಲೋಹಿಯಾರನ್ನು ‘ಡಾಕ್ಟರ್ ಸಾಹೇಬ್’ ಎಂದಿದ್ದನ್ನು ನೋಡಿದಾಗ, ಇವರೆಲ್ಲ ತಮಗೆ ಸರಿ ದಾರಿ ತೋರಿಸುವ ಗುರುಗಳು ಎಂಬ ಭಾವ ಜನರಲ್ಲಿರುವುದು ಹೊಳೆಯುತ್ತದೆ.
ಲ್ಯಾನಾಯ್ ಪ್ರಕಾರ ಇಂಡಿಯಾದಲ್ಲಿ ‘ಗುರು ಎನ್ನುವುದು ಒಂದು ಮಾನಸಿಕ ಅಗತ್ಯ’ ಕೂಡ. ಆದರೂ ಅವರ ಪುಸ್ತಕದ ‘ಗುರು’ ಎಂಬ ಪದ ಗಂಡನ್ನೇ ಸೂಚಿಸುತ್ತಿದೆಯಲ್ಲ ಎಂದು ಎಂದಿನಂತೆ ಮುಜಗರ ಹುಟ್ಟಿ, ಟೀಚರ್ ಎಂಬ ಪದ ಬಳಸಿರುವೆ.
ನೀವು ಎಷ್ಟೇ ಬೆಳೆದು, ಏನೇ ಆಗಿರಿ; ನೀವು ಸೂಕ್ಷ್ಮ ಮನಸ್ಸಿನವರಾಗಿದ್ದರೆ, ಟೀಚರ್ ಎಂಬ ಪದಕ್ಕಿರುವ ತೂಕ ನಿಮ್ಮ ಮನಸ್ಸಿನಲ್ಲಿ ಹಾಗೆಯೇ ಉಳಿದಿರುತ್ತದೆ. ನಮ್ಮ ಹೈಸ್ಕೂಲ್ ಮೇಷ್ಟ್ರು ಎಚ್.ಕೆ. ರಾಮಯ್ಯನವರು ಸುಮಾರು ಮೂವತ್ತೇಳು ವರ್ಷಗಳ ನಂತರ ನನ್ನ ರೂಮಿಗೆ ಅಡಿಯಿಡುತ್ತಲೇ ‘ಗುರುತು ಸಿಕ್ತೇನಪ್ಪಾ?’ ಎಂದು ಒಳಬಂದರು; ಅವರ ದನಿ ಕೇಳಿದ ತಕ್ಷಣ, ನನಗರಿವಿಲ್ಲದೆಯೇ ಥಟ್ಟನೆ ಎದ್ದು ನಿಂತೆ. ಅವರು ತೀರಾ ಗೌರವದಿಂದ ನನ್ನನ್ನು ಮಾತಾಡಿಸತೊಡಗಿದಾಗ ಸಂಕೋಚದಿಂದ ಕುಗ್ಗಿದೆ.
ರಾಮಯ್ಯ ಮೇಷ್ಟರ ಬಗೆಗಿನ ಗೌರವಕ್ಕೆ ಅವರ ಕನ್ನಡ ಟೀಚಿಂಗಿನ ಜೊತೆಗೇ ಮತ್ತೊಂದು ಕಾರಣವೂ ಇತ್ತು: ಎಂ.ಎ. ಓದಲು ಹೊರಟಿದ್ದ ನಾನು ಹಾಸ್ಟೆಲ್ ಫೀಸ್ ಇತ್ಯಾದಿಗಳಿಗಾಗಿ ಬ್ಯಾಂಕ್ ಲೋನ್‌ಗೆ ಅರ್ಜಿ ಹಾಕಿದ್ದೆ; ಬ್ಯಾಂಕ್ ಅಧಿಕಾರಿಯೊಬ್ಬರು ‘ಅರ್ಜಿಗೆ ಶೂರಿಟಿ ಹಾಕಿಸಿಕೊಂಡು ಬಾ’ ಎಂದರು. ಸುಮ್ಮನೆ ಅಲ್ಲೇ ನಿಂತಿದ್ದೆ. ಬ್ಯಾಂಕಿಗೆ ಬಂದಿದ್ದ ರಾಮಯ್ಯ ಮೇಷ್ಟ್ರಿಗೆ ಅಧಿಕಾರಿಯ ಮಾತು ಕೇಳಿಸಿತ್ತು. ಮೇಷ್ಟ್ರು ನನ್ನತ್ತ ತಿರುಗಿ ನೋಡಿದವರೇ, ನನ್ನತ್ತ ಬಂದರು; ಅರ್ಜಿ ತೆಗೆದುಕೊಂಡವರೇ ಶೂರಿಟಿ ಹಾಕಿ ಹೊರಟರು. ಅವತ್ತು ಅವರಿಗೆ ಥ್ಯಾಂಕ್ಸ್ ಹೇಳಿದ್ದು ಕೂಡ ನನಗೆ ನೆನಪಿಲ್ಲ! ಆದರೆ ಆ ಗಳಿಗೆ ಹುಟ್ಟಿದ ಜೀವಮಾನದ ಕೃತಜ್ಞತೆ ಹಾಗೇ ಉಳಿದಿದೆ.
‘ಯಾರು ಟೀಚರ್’ ಎಂಬ ಪ್ರಶ್ನೆ ಆಗಾಗ್ಗೆ ನನ್ನನ್ನು ಕುತೂಹಲಕರ ಹುಡುಕಾಟಗಳತ್ತ ಕರೆದೊಯ್ಯುತ್ತದೆ: ನನಗೆ ಅಆಇಈ, ಎಬಿಸಿ, ಮಗ್ಗಿ ಮೂರನ್ನೂ ಕಲಿಸಿದ ತಾಯಿಯೇ ನನ್ನ ನಿಜವಾದ ಟೀಚರ್ ಎಂದು ಅನೇಕ ಸಲ ಅನ್ನಿಸಿದೆ. ಮೊನ್ನೆ ಲೋಹಿಯಾ ಜೀವನಚರಿತ್ರೆ ಬರೆಯುವಾಗ ಲೋಹಿಯಾ ಕುರಿತ ಹಿಂದಿ ಜೀವನಚರಿತ್ರೆಗಳನ್ನು, ಅವರ ಹಿಂದಿ ಭಾಷಣಗಳನ್ನು ಸಲೀಸಾಗಿ ಓದುತ್ತಿದ್ದ ರಾತ್ರಿ ‘ಥ್ಯಾಂಕ್ಯೂ ಮದರ್’ ಎಂದುಕೊಂಡೆ. ಕಾರಣ, ನಾನು ಮಿಡ್ಲ್‌ಸ್ಕೂಲ್, ಹೈಸ್ಕೂಲಿನಲ್ಲಿದ್ದಾಗ ಅವರು ನನಗೆ ಹಿಂದಿ ಪ್ರಥಮ, ಮಧ್ಯಮ, ರಾಷ್ಟ್ರಭಾಷಾ ಪರೀಕ್ಷೆಗಳನ್ನು ಕಲಿಯಲು ಹಿಂದಿ ಟೀಚರ್ ಬಳಿ ಕಳಿಸಿದ್ದರು; ಹಿಂದಿ ಕಲಿಸಿದ ಆ ಹಿಂದಿ ಮೇಡಂಗಳು ನೆನಪಾಗುತ್ತಾರೆ.
ಅವತ್ತು ಹಿಂದಿ ಕಲಿತಿದ್ದು ಎಷ್ಟು ಮಹತ್ವದ್ದೆಂಬುದು ಲೋಹಿಯಾ ಭಾಷಣಗಳನ್ನು ಒರಿಜಿನಲ್ ಹಿಂದಿಯಲ್ಲಿ ಓದುತ್ತಿರುವಾಗಲೆಲ್ಲ ನನಗೆ ಅರಿವಾಗುತ್ತಿರುತ್ತದೆ. ನಮ್ಮ ಮನೆಗೆ ಬರುತ್ತಿದ್ದ ಶಫಿ, ಬಾಷಾ ಮಾತಾಡುತ್ತಿದ್ದ ಉರ್ದುವೂ ಸೇರಿ ನನ್ನ ಹಿಂದಿ ಕಲಿಕೆ ವಿಸ್ತಾರವಾಗಿತ್ತು. ಇದೆಲ್ಲದರ ಜೊತೆಗೆ, ತಾಯಿ ಬಾಲ್ಯದಲ್ಲಿ ಕಲಿಸಿದ ಹೊಲಿಗೆ, ಅಡಿಗೆ, ಸುಧಾ, ಪ್ರಜಾಮತಗಳ ಧಾರಾವಾಹಿಗಳ ಓದಿನ ಅಭ್ಯಾಸ ಈ ಗಳಿಗೆಯಲ್ಲೂ ನೆರವಾಗುತ್ತಲೇ ಇದೆ. ಅಂಥವರು ಟೀಚರ್ ಅಲ್ಲದೆ, ಮತ್ಯಾರು?
ಇದನ್ನೆಲ್ಲ ಆತ್ಮಚರಿತ್ರಾತ್ಮಕ ಟಿಪ್ಪಣಿಯೆಂದು ನೋಡದೆ, ‘ಟೀಚಿಂಗ್’, ‘ಟೀಚರ್’ ಎಂಬ ವಸ್ತುಗಳ ಸುತ್ತ ಬೆಳೆದ ಪ್ರಬಂಧವೆಂದು ತಾವು ನೋಡಬೇಕೆಂದು ಬಿನ್ನಹ. ಒಬ್ಬ ವ್ಯಕ್ತಿಗೆ ಹತ್ತಾರು ಥರದ ಟೀಚರುಗಳಿರುತ್ತಾರೆ ಎಂದು ಸೂಚಿಸಲು ಇದನ್ನೆಲ್ಲ ಹೇಳುತ್ತಿರುವೆ.
ನನ್ನ ಕಲ್ಪನೆಯ ‘ಟೀಚರ್’ ಎಂಬುದರ ಅರ್ಥ ನಿತ್ಯ ವಿಸ್ತಾರವಾಗುತ್ತಿರುತ್ತದೆ: ಸಾಮಿಲ್‌ನ ಕಂಬಿಗಳ ಮೇಲೆ ಮರದ ತುಂಡಿಟ್ಟು, ಅತ್ತಣಿಂದ ಕತ್ತರಿಸುವ ಯಾಂತ್ರಿಕ ಗರಗಸ ಬರುವ ಹೊತ್ತಿಗೆ ಛಕ್ಕನೆ ಮತ್ತೊಂದು ಮರದ ತುಂಡಿಡುತ್ತಿದ್ದ ಗಡ್ಡದ ಸಾಬರು ‘ಕಾನ್ಸೆಂಟ್ರೇಶನ್ ಎಂದರೇನು’ ಎಂಬುದನ್ನು ನನಗೆ ಕಲಿಸಿದ ಟೀಚರ್! ನಮ್ಮ ಮನೆಯ ನಲ್ಲಿ ರಿಪೇರಿ ಮಾಡುತ್ತಲೇ ನನಗೂ ರಿಪೇರಿ ಕಲೆ ಕಲಿಸಿದ ಪ್ಲಂಬರ್ ಗೋಪಾಲ್ ನನ್ನ ಟೀಚರ್. ನೀವು ಗಮನಿಸಿರಬಹುದು: ಯಾವ ಕಸುಬಿನವರೇ ಆಗಲಿ, ಏನನ್ನಾದರೂ ಹೇಳಿಕೊಡಲು ಶುರು ಮಾಡಿದ ತಕ್ಷಣ ಟೀಚರ್ ಆಗುತ್ತಾರೆ; ಕಲಿಸುವ ಥ್ರಿಲ್, ಆತ್ಮವಿಶ್ವಾಸ; ಸರಿಯಾದದ್ದನ್ನು ಕಲಿಸಬೇಕೆಂಬ ಜವಾಬ್ದಾರಿ ಎಲ್ಲವೂ ಅವರ ಕಣ್ಣು, ಮಾತುಗಳಲ್ಲಿ ಮಿಂಚತೊಡಗುತ್ತದೆ. ಟೀಚಿಂಗಿನ ಈ ಮೂಲ ಮಾದರಿ ಎಂದೂ ಮಾಯವಾಗುವುದಿಲ್ಲ!
ನನ್ನ ಟೀಚರುಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ: ಬಾಲ್ಯದಲ್ಲಿ ಕರ್ನಾಟಿಕ್ ಸಂಗೀತ ಕಲಿಸಿದ ಕೃಷ್ಣಪ್ಪ ಮೇಷ್ಟ್ರು; ನಂತರ ಹಿಂದೂಸ್ತಾನಿಯ ಹತ್ತಾರು ರಾಗಗಳನ್ನು ಕಲಿಸಿದ ಎಸ್.ಆರ್. ರಾಮಕೃಷ್ಣ, ಸಿತಾರ್ ಕಲಿಸಿದ ಜಯಂತ್‌ಕುಮಾರ್‌ದಾಸ್ ನನ್ನ ಸಂಗೀತ ಟೀಚರುಗಳು; ಈ ಸಂಗೀತ ಕಲಿಕೆಯಲ್ಲಿ ತಾಯಿಯ ಹಾಡುಗಳೂ, ಆಕಾಶವಾಣಿಯ ಬೆಳಗಿನ ಸಂಗೀತ ಪಾಠಗಳೂ, ಸಿನಿಮಾ ಹಾಡುಗಳೂ ಸೇರಿವೆ. ನಾನು ಇಂಗ್ಲಿಷ್ ಮೇಷ್ಟರಾದ ಮೇಲೆ ಹೊಸ ಕಾಲದ ಇಂಗ್ಲಿಷ್ ಕಲಿಸಿದ ಎನ್‌ಎಂಕೆಆರ್‌ವಿ ಕಾಲೇಜಿನ ಗಿಳಿಗಳಂಥ ಹುಡುಗಿಯರೂ ನನ್ನ ಟೀಚರುಗಳೇ.
ಮೂರೂವರೆ ದಶಕಗಳಿಂದಲೂ ನಾನು ತೊಡಗಿರುವ ಟೀಚಿಂಗ್ ನನಗೆ ಕಲಿಸಿರುವ ಒಂದು ಮುಖ್ಯ ಪಾಠವೆಂದರೆ, ನಾನು ಪೂರ್ಣವಾಗಿ ತೊಡಗುವ ಟೀಚಿಂಗಿನ ಇಡೀ ಪ್ರಕ್ರಿಯೆಯೇ ನನ್ನ ಟೀಚರ್ ಎನ್ನುವುದು. ವಿಮರ್ಶೆ, ಓದುವ ಹಾದಿಗಳು, ಲಿಟರರಿ ಫಾರ್‍ಮ್ಸ್, ಅನುವಾದ, ಅಂಬೇಡ್ಕರ್ ಸ್ಟಡೀಸ್, ಗಾಂಧಿಯನ್ ಸ್ಟಡೀಸ್, ಮಹಿಳಾ ಅಧ್ಯಯನ, ಬಹುಶಿಸ್ತೀಯ ಅಧ್ಯಯನ... ಹೀಗೆ ಹಲವು ವಿಶ್ವವಿದ್ಯಾಲಯಗಳಲ್ಲಿ ನಾನು ಹಲಬಗೆಯ ಕೋರ್ಸ್‌ಗಳನ್ನು ಕೊಡುವಾಗ ಅದು ನನ್ನ ನಿಜವಾದ ಕಲಿಕೆಯಾಗಿ ಮಾರ್ಪಟ್ಟಿದೆ. ಟೀಚಿಂಗ್ ಮತ್ತು ಕಲಿಕೆಗಳ ಸುಂದರ ಸಂಬಂಧದ ಬಗ್ಗೆ; ಕಲಿಸುತ್ತಾ ಕಲಿಯುವ ಬಗ್ಗೆ ಹಿಂದೆ ಈ ಅಂಕಣದಲ್ಲೇ ಬರೆದಿರುವೆ.
ಆದ್ದರಿಂದಲೇ, ಶಿಕ್ಷಕರ ಚುನಾವಣಾ ಕ್ಷೇತ್ರಗಳ ಮತದಾನಗಳಲ್ಲಿ ಟೀಚರುಗಳ ಭ್ರಷ್ಟತೆಯಿಂದ ‘ಟೀಚರ್’ ಪರಿಕಲ್ಪನೆಗಿರುವ ದಿವ್ಯತೆ ನಾಶವಾದಾಗ ಬೇಜಾರಾಗುತ್ತದೆ. ಗುರು-ಶಿಷ್ಯ ಕಲ್ಪನೆಯಲ್ಲಿರುವ ಜಮೀನ್ದಾರಿ ದರ್ಪ ಚಲಾಯಿಸುವ ಮೇಷ್ಟರೊಬ್ಬ ತನ್ನ ವಿದ್ಯಾರ್ಥಿಯನ್ನು ’ನನ್ನ ಶಿಷ್ಯ’ ಎನ್ನುವ ಠೇಂಕಾರ ಕಂಡಾಗ ಅಸಹ್ಯವಾಗುತ್ತದೆ.
ಆದರೂ ಇವತ್ತಿಗೂ ನಾನು ಬಲ್ಲ ನೂರಾರು ಮೇಡಂಗಳು, ಮೇಷ್ಟ್ರುಗಳು ನಿಜಕ್ಕೂ ‘ಟೀಚಿಂಗ್’ ಎಂದರೆ ‘ಕಲಿಕೆ’ ಎಂದು ಆಳದಲ್ಲಿ ನಂಬಿರುವುದನ್ನು ಕಂಡು ನೆಮ್ಮದಿಯಾಗುತ್ತದೆ. ಇಂಥ ಲಕ್ಷಾಂತರ ವೃತ್ತಿವಂತ ಟೀಚರುಗಳನ್ನು, ನಿತ್ಯ ಹಲವು ಪಾಠಗಳನ್ನು ಕಲಿಸುವ ಇನ್ನಿತರ ಎಲ್ಲ ಟೀಚರುಗಳನ್ನು ನೆನೆಯುತ್ತಲೇ ಅಡ್ವಾನ್ಸ್ ಆಗಿ ‘ಹ್ಯಾಪಿ ಟೀಚರ್ಸ್ ಡೇ’ ಹೇಳುವೆ.
ಈ ಮಾತು ಬರೆಯುತ್ತಿರುವಾಗ ಕುವೆಂಪುವಿನ ‘ಮುಚ್ಚುಮರೆಯಿಲ್ಲದೆಯೆ ನಿನ್ನ ಮುಂದೆಲ್ಲವನು ಬಿಚ್ಚಿಡುವೆ ಓ ಗುರುವೆ ಅಂತರಾತ್ಮ’ ಎಂಬ ನಿವೇದನೆ- ಹಾಡಿದವರ ಮೊಗಸಮೇತ- ನೆನಪಾಗುತ್ತಿದೆ; ಎಲ್ಲ ಬಗೆಯ ಟೀಚರುಗಳ ಒಳಗೂ ನೆಲೆಸಿರುವ ‘ಅಂತರಾತ್ಮ’ ಎಂಬ ಟೀಚರ್ ಸದಾ ಎಚ್ಚರವಾಗಿರಲಿ!
ಬ್ಲಾಗ್ ಫಾಲೋ ಮಾಡಲು ಒಪ್ಪಿ, ಕ್ಲಿಕ್ ಮಾಡಿ; ನೋಟಿಫಿಕೇಶನ್ ಪಡೆಯಿರಿ, ಶೇರ್ ಮಾಡಿ: FOLLOW
ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com
ಬಿಡುವಾದಾಗ ನೋಡಿ, ಶೇರ್ ಮಾಡಿ: YOUTUBE LINK
Comments
16 Comments
| MAHESH HARAVE
ಟೀಚರ್ ಮತ್ತು ಟೀಚೀಂಗ್ ಎದೆಗೆ ಬಿತ್ತು...
| ಶಿವಲಿಂಗಮೂರ್ತಿ
ಸಮಾಜದಲ್ಲಿ ಬಾಳಿ ಬದುಕಬೇಕಾದ ಜನರನ್ನು ಸರಿಯಾಗಿ ರೂಪಿಸಬೇಕಾದ ಗುರುತರವಾದ ಜವಾಬ್ದಾರಿ ಪೋಷಕರು ಮತ್ತು ಶಿಕ್ಷಕರ ಮೇಲಿದೆ. ನಡೆ-ನುಡಿಯಲ್ಲಿ ದೊಡ್ಡತನವಿದ್ದಾಗ ಮಾತ್ರ ಗುರುವಿಗೆ ಗುರುತನ ಬರುತ್ತದೆ. ಇಂಥ ದೊಡ್ಡತನವು ಸಮಾಜದಲ್ಲಿನ ಅನೇಕ ಶಿಕ್ಷಕರಲ್ಲಿ ಮಾಯವಾಗಿರುವುದನ್ನು, ಅವರ ಬದುಕು ಕೇವಲ ವ್ಯವಹಾರಿಕ ಗೊಂಡಿರುವುದನ್ನು ನಿಮ್ಮ ಬರಹ ಕುಟುಕಿದೆ. ಜನಸಾಮಾನ್ಯರು ಚುನಾವಣೆಯಲ್ಲಿ ಭ್ರಷ್ಟ ಗೊಂಡಿರುವಂತೆ ಅನೇಕ ಶಿಕ್ಷಕರು ಭ್ರಷ್ಟ ಗೊಂಡಿರುವುದನ್ನು ಕಂಡಾಗ ನಿಜಕ್ಕೂ ದುಃಖವಾಗುತ್ತದೆ. ಶಿಕ್ಷಕರ ಕ್ಷೇತ್ರದ ಚುನಾವಣೆಗಳ ಸಂದರ್ಭದಲ್ಲಿ ಮೊದಮೊದಲಿಗೆ ಮತದಾರರಿಗೆ ಪೆನ್ನು ಕ್ಯಾಲೆಂಡರ್ ಕೊಡುವುದರ ಮೂಲಕ ಪ್ರಾರಂಭವಾಗಿ ಅದು ತಲುಪಿರುವ ಅವಸ್ಥೆಯನ್ನು ನೋಡಿದರೆ ನಿಜಕ್ಕೂ ಹೇಸಿಗೆಯಾಗುತ್ತದೆ ಇಂತಹ ಹೇಸಿಗೆಯಿಂದ ಹೊರಬಂದು ನಮ್ಮನ್ನು ಶುದ್ಧೀಕರಿಸಿಕೊಳ್ಳದೆ ಹೋದರೆ ಶಿಕ್ಷಕರಾದ ನಾವು ಇರುವ ಘನತೆಯನ್ನು ಕಳೆದುಕೊಳ್ಳಬೇಕಾಗುತ್ತದೆ.\r\nನಮ್ಮ ಹಳ್ಳಿಗಳಲ್ಲಿ ಶುದ್ಧವಾಗಿ ಬದುಕಿದ ರಾಮಯ್ಯ ಮೇಷ್ಟ್ರು ಅಂತವರ ಬದುಕು ನಿಜಕ್ಕೂ ಆದರ್ಶ. ಗಾಂಧಿ ,ಅಂಬೇಡ್ಕರ್ ,ಲೋಹಿಯಾ ,ಶಾಂತವೇರಿ ಗೋಪಾಲ ಗೌಡ -ಇಂಥವರ ನಡೆನುಡಿಗಳ ಪಾಠವನ್ನು ಕಿಂಚಿತ್ತಾದರೂ ನಾವು ಅನುಸರಿಸದೇ ಇದ್ದರೆ ಜೀವನ ಸಾರ್ಥಕವಾಗದು.
| Prof.Mohan
ಟೀಚಿಂಗ್ ಈಸ್ ಲರ್ನಿಂಗ್’ ಎಂಬುದು ಒಬ್ಬ ಅಧ್ಯಾಪಕನಾಗಿ ನನಗೂ ಅನುಭವಕ್ಕೆ ಬಂದಿದೆ. ನಮ್ಮ ತಿಳುವಳಿಕೆಗಾಗಿ ಓದುವುದೇ ಬೇರೆ, ವಿದ್ಯಾರ್ಥಿಗಳಿಗೆ ಬೋಧಿಸಲು-ಅರ್ಥೈಸಲು ಸಿದ್ಧತೆ ನಡೆಸುವ ಕ್ರಮವೇ ಬೇರೆ, ಇನ್ನು ಬೋಧನಾ ಸಮಯದಲ್ಲಿ ಆ ವಿಷಯ ಬೆಳೆಯುವ ರೀತಿಯೂ ಬೇರೆ, ಮತ್ತು ಅಲ್ಲಿ ಎದುರಾಗುವ ಪ್ರಶ್ನೆಗಳು, ಮೂಡುವ ಹೊಳಹುಗಳು ಹಾಗೂ ತೋರುವ ದಾರಿಗಳೂ ಬೇರೆಯೇ. ಹಾಗಾಗಿ ‘ಟೀಚಿಂಗ್ ಈಸ್ ಲರ್ನಿಂಗ್’ ಎಂಬುದು ಎಷ್ಟೋ ಬಾರಿ ನನ್ನ ಅನುಭವಕ್ಕೂ ಬಂದಿದೆ. ಎಷ್ಟೋ ಸಂದರ್ಭಗಳಲ್ಲಿ ವಿದ್ಯಾರ್ಥಿಗಳು ಎತ್ತಿದ ಪ್ರಶ್ನೆಗಳು, ನೀಡಿದ ಸುಳುಹುಗಳು ಕೆಲವೊಂದು ವಿಷಯಗಳ ಬಗ್ಗೆ, ನನಗೆ ಹೊಸ ನೋಟ ನೀಡಿವೆ ಮತ್ತು ಅವು ನನ್ನಲ್ಲಿ ಮತ್ತಷ್ಟು ಸ್ಪಷ್ಟಗೊಳ್ಳಲು ನೆರವಾಗಿವೆ. ಹಾಗಾಗಿ ನೀವು ಉಲ್ಲೇಖಿಸಿರುವ ‘ಟೀಚರ್ಸ್ ಅಂತ ಯಾರೂ ಇರುವುದಿಲ್ಲ; ನಾವೆಲ್ಲಾ ಕಲಿಯುವವರೇ’ ಎಂಬ ಝೆನ್ ಸಾಲು ನನ್ನ ಮೆಚ್ಚಿನ ಮತ್ತು ಒಪ್ಪಿತ ಸಾಲಾಗಿದೆ. ಇನ್ನು ‘ಯಾರು ಟೀಚರ್’ ಎಂಬ ಪ್ರಶ್ನೆಯೊಂದಿಗೆ ನೀವು ನೀಡಿರುವ ವಿವರಗಳು ಎಲ್ಲರ ಅನುಭವಕ್ಕೂ ಬಂದಿರುತ್ತವೆ ಎಂದೇ ಭಾವಿಸುತ್ತೇನೆ. ‘ಒಂದಕ್ಷರ ಕಲಿಸಿದಾತಂ ಗುರು’ ಎಂಬ ಮಾತನ್ನು ಕೇಳಿಸಿಕೊಂಡೇ ಬೆಳೆದ ನಾವು ಬದುಕಿನಲ್ಲಿ ಅಕ್ಷರವಷ್ಟೇ ಅಲ್ಲದೆ ಹಲವು ಬಗೆಯ ಕಲಿಕೆಗಳನ್ನು ನೂರಾರು ಸಾವಿರಾರು ಸಂಖ್ಯೆಯ ಜನರಿಂದ ಕಲಿತಿದ್ದೇವೆ. ನಿಜಕ್ಕೂ ಅವರೆಲ್ಲರೂ ಟೀಚರ್ಸ್ ಗಳೇ ನಿಜ.\r\n\r\nಮೊದಲ ಗುರು ತಾಯಿಗೆ, ಸಾಂಪ್ರದಾಯಿಕ ಶಿಕ್ಷಣದ ನನ್ನೆಲ್ಲಾ ಗುರುವೃಂದಕ್ಕೆ ಮತ್ತು ಬದುಕು, ಬರಹ, ಶ್ರದ್ಧೆ, ಬದ್ಧತೆ – ಇವೆಲ್ಲವನ್ನೂ ಕಲಿಸಿದ, ಕಲಿಸುತ್ತಿರುವ ನಿಮಗೆ ಮುಂಚಿತವಾಗಿ ಶಿಕ್ಷಕರ ದಿನದ ಹಾರ್ದಿಕ ಶುಭಾಶಯಗಳು
| Dr.Muthegowda
ತುಂಬು ಹೃದಯದ ಧನ್ಯವಾದಗಳು ಸರ್, ಶಿಕ್ಷಕರಿಗೆ ಅಗತ್ಯವಾದ ಮಾಹಿತಿಗೆ
| Dr.Sunanda
Very nice!
| ಕವಿತಾ ಎಂ ಎನ್
ನಿಮ್ಮ ಬರೆಹಗಳಲ್ಲಿ ತುಂಬಾ ಒಳನೋಟಗಳಿರುತ್ತವೆ ಸರ್. ಹೀಗೆ ನಿರಂತರವಾಗಿರಲಿ ನಿಮ್ಮ ಲೇಖನಗಳು.
| Subramanya Swamy
Very good article sir, about teaching and learning, especially teacher.
| Dr.Prabhakar
The definitions of guru may be manifold, the true guru may be one who taught selflessly and with concern and affection, however small he may be
| ವಸಂತ
ಶಿಕ್ಷಕರ ದಿನಾಚರಣೆಯ ದಿನ ನಿಮ್ಮ ಜೀವನದ ಪ್ರತಿ ಹಂತದ ಟೀಚರುಗಳನ್ನು ನೆನಪಿಸಿಕೊಂಡ ನಿಮ್ಮ ಲೇಖನ ನಮಗೆ ದಾರಿ ದೀಪ.
| Dr.Muniyappa
ಶಿಕ್ಷಕರ ದಿನಾಚರಣೆ ಗೆ ಅರ್ಥಪೂರ್ಣವಾದ ಲೇಖನ
| Guruprasad
ಈ ಲೇಖನ ಗುರು ಎಂಬ ಮೈಮರೆವನ್ನು ಎಚ್ಚರಿಸಿತು.
| Anil Gunnapur
ಲೇಖನ ತುಂಬಾ ಇಷ್ಟವಾಯಿತು
| ದೇವಿಂದ್ರಪ್ಪ ಬಿ.ಕೆ.
ಟೀಚರ್ ಮತ್ತು ಟೀಚಿಂಗ್ ಕುರಿತ ಈ ಲೇಖನವು ತುಂಬಾ ಸೂಕ್ಷ್ಮ ವಿಚಾರಗಳನ್ನು ನಮ್ಮ ಮುಂದಿಡುತ್ತದೆ. ಇಲ್ಲಿಯವರೆಗೂ ಗುರು ಪರಂಪರೆಯ ಬಗ್ಗೆ ಸರಿಯಾದ ಅರ್ಥಗಳು ನಮಗೆ ಲಭಿಸಿಲ್ಲ. ನಾವೆಲ್ಲ ಚಿಕ್ಕವರಿದ್ದಾಗ ಶಾಲೆಯಲ್ಲಿ ಕಲಿಸಿದ ಗುರುಗಳು ಮಾತ್ರ ನಿಜವಾದ ಗುರುಗಳು ಎಂದು ಹೇಳೋರು. ನಂತರ ಬೆಳೆದಂತೆಲ್ಲ ಓದಿನ ವಿಸ್ತಾರ ಈ ಏಕಮಾತ್ರ ನಿಲುವನ್ನು ಬದಲಾಯಿಸಿಕೊಳ್ಳಲು ಸಾಧ್ಯವಾಯಿತು. ಒಬ್ಬ ಮನುಷ್ಯನಿಗೆ ಏನು ಬೇಕು ಅದನ್ನು ಕಲುಹಿಸವವನು ಗುರು. ನಾನು ನೋಡಿದ ಹಾಗೆ ನನ್ನ ಬಾಲ್ಯವೆಲ್ಲವೂ ನನ್ನ ಅಜ್ಜಿಯ ಜೊತೆಯಲ್ಲಿಯೇ ಕಳೆದ ಕಾರಣ ನನ್ನ ಅಜ್ಜಿಯೇ ನನಗೆ ಮೊದಲ ಗುರು. ಮಾರ್ಕ್ವೆಜ್ ಕೂಡ ತನ್ನೆಲ್ಲ ಸಾಹಿತ್ಯ ರಚನೆಯ ಹಿಂದೆ ತನ್ನ ಅಜ್ಜಿಯ ಗಾಢ ಪ್ರಭಾವ ಇರುವುದನ್ನು ಹೇಳುತ್ತಾನೆ. \r\nಚಿಕ್ಕ ಮಕ್ಕಳಿಂದ ಕಲಿತ ಅನೇಕ ಪಾಠಗಳು ನಮಗೆ ಮಾರ್ಗದರ್ಶನ ನೀಡಿವೆ. ಗುರು ನಿತ್ಯ ತನ್ನನ್ನು ತಾನು ಆತ್ಮವಿಮರ್ಶೆಗೆ ಒಡ್ಡಿಕೊಳ್ಳಬೇಕು. ಪಾಠ ಮಾಡುವ ಮುಂಚೆ ನಿರಂತರ ಅಭ್ಯಾಸ ಮಾಡಬೇಕು. ಇದನ್ನು ಕೊನೆಯವರೆಗೂ ಕಿರಂ ಅವರು ಪಾಲಿಸಿದ್ದರು ಎಂದು ಕೇಳಿದ್ದೇನೆ. \r\nಕಲಿಕೆ ಎನ್ನುವುದು ನಿಂತ ನೀರಲ್ಲ, ಸದಾ ಹೊಸತನದ ಕಡೆಗೆ ಹಂಬಲಿಸುವ ಮಗುವಿನಂತೆ. ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬುದಕ್ಕಿಂತ ಗುರುವಿನ ಸಮಾನ ಬೆಳೆಯುವ ಶಕ್ತಿ ಗುರು ನೀಡಲಿ ಎಂಬುದೇ ಇಂದಿನ ಆಶಯ
| Venkatesh
🌷🌷
| ಡಾ. ನಿರಂಜನ ಮೂರ್ತಿ ಬಿ ಎಂ
ಟೀಚರ್ ಮತ್ತು ಟೀಚಿಂಗ್ ಹಲವಾರು ಮೌಲ್ಯಯುತ ವಿಚಾರಗಳು ಮತ್ತು ಸೂಕ್ಷ್ಮ ಒಳನೋಟಗಳೊಂದಿಗೆ ಸಮೃದ್ಧವಾಗಿದೆ. ಕಲಿಸುವ ಗುರುವನ್ನು ಮತ್ತು ಕಲಿಕೆಯನ್ನು ಬದುಕಿನ ಎಲ್ಲಾ ಕೆಲಸಗಳಲ್ಲಿ ಕಾಣುವ ರೀತಿ ಸಮಂಜಸವಾಗಿದೆ. ಅಕ್ಷರ ಕಲಿಸುವ ಟೀಚರ್, ಮಾತು ಕಲಿಸುವ ಮಾತೆ, ಮನುಷ್ಯತ್ವ ಕಲಿಸುವ ತಂದೆ, ಸಂಬಂಧಗಳ ಮೌಲ್ಯ ತಿಳಿಸುವ ಬಂಧುಗಳು ಮತ್ತು ಸ್ನೇಹಿತರು ಅಲ್ಲದೆ ಯಾವುದೇ ಕೌಶಲ್ಯವನ್ನು ಕಲಿಸುವ ಪರಿಣಿತ, ಹೀಗೆ ಎಲ್ಲರೂ ಟೀಚರುಗಳೇ. ವಿಶಾಲ ಅರ್ಥದಲ್ಲಿ ನೀವು ಬಳಸಿರುವ \'ಟೀಚರ್ ಯಾರೂ ಇರುವುದಿಲ್ಲ, ಎಲ್ಲರೂ ಕಲಿಯುವವರೇ\' ಎನ್ನುವ ಝೆನ್ ಮಾತು ಅರ್ಥಗರ್ಭಿತವಾಗಿದೆ. ಶಿಕ್ಷಕರ ದಿನಾಚರಣೆಯ ಅಂಗವಾಗಿ ಬಂದಿರುವ ನಿಮ್ಮೀ ಲೇಖನ ಎಲ್ಲಾ ಶಿಕ್ಷಕರುಗಳಿಗೆ ಅವರು ಸಾಗಬೇಕಾಗಿರುವ ಸರಿಯಾದ ದಾರಿ ತೋರುವ ದೀಪವಾಗಿದೆ. ಇಂತಹ ಮಾರ್ಗದರ್ಶಕ ಬರಹಕ್ಕಾಗಿ ಮತ್ತು ಈ ಸಂದರ್ಭದಲ್ಲಿ ನನ್ನ ಎಲ್ಲಾ ಗುರುಗಳನ್ನು ಸ್ಮರಿಸುವ ಹಾಗೆ ಮಾಡಿದ ನಿಮಗೆ ನಮನಗಳು.
| ಮಾಲತಿ ಪಟ್ಟಣಶೆಟ್ಟಿ
\"ತನ್ನರಿವು ತನಗೆ ಗುರು \"ಅಲ್ಲಮನ ಈ ಮಾತು ಯಾರಾದರೂ ಒಪ್ಪಿಕೊಳ್ಳುವಂಥದ್ದು.\r\nನನ್ನ ಜ್ಞಾನದ ಹಸಿವು, ನನ್ನ ಕುತೂಹಲಗಳು, ತಿಳಿಯಲೇಬೇಕೆಂಬ ಹಟಮಾರಿತನಗಳು ನನ್ನೊಳಗಿನ ಗುರು.\r\nಬದುಕಲ್ಲಿ ಗುರುವನ್ನರಸುತ್ತ ಆದಿ ಶಂಕರರು ಉತ್ತರಕ್ಕೆ ಹೋದಂತೆ ಸಾಧ್ಯವಾಗುವುದಿಲ್ಲ. ಏಕಲವ್ಯನಂತೆ ತನ್ನಲ್ಲಿಯ ಹಪಾಹಪಿಯನ್ನು ಗುರುವಾಗಿಸಿಕೊಳ್ಳಬಹುದು...\r\n\r\n
Add Comment