ಘನತೆ, ನೈತಿಕತೆ ಇಲ್ಲದ ಪೇಪರ್ ತೂರಿದ ಪ್ರಹಸನ

ಸಭಾಧ್ಯಕ್ಷರ ಮೇಲೆ ಕಾಗದ ಹರಿದೆಸೆಯುವ ಶಾಸಕರು ನಾಡಿಗೆ ನೀಡುತ್ತಿರುವ ಸಂದೇಶವೇನು?  
 

ಸಿದ್ಧರಾಮಯ್ಯನವರ ನೇತೃತ್ವದ ಕರ್ನಾಟಕ ಸರ್ಕಾರದ ಬಜೆಟ್ ಅಧಿವೇಶನದಲ್ಲಿ ಕೆಲವು ಬಿಜೆಪಿ ಶಾಸಕರು ವಿಧಾನಸಭೆಯ ಉಪಸಭಾಧ್ಯಕ್ಷರಾದ ರುದ್ರಪ್ಪ ಲಮಾಣಿಯವರ ಮೈ, ಮುಖಗಳ ಮೇಲೆ ಕಾಗದದ ಚೂರುಗಳನ್ನು ಹರಿದು ತೂರಿದರು; ಈ ವಿಡಿಯೋ ದೃಶ್ಯಗಳು ಇನ್ನೂ ನಮ್ಮ ಕಣ್ಣ ಮುಂದಿವೆ. ಈ ಹೀನ ದೃಶ್ಯಗಳನ್ನು ಕಂಡು ಪ್ರಜ್ಞಾವಂತರೆಲ್ಲ ಅಸಹ್ಯ ಪಟ್ಟಿದ್ದಾರೆ. ಲಮಾಣಿಯವರು ಸದನವನ್ನು ಮುಂದೂಡಿದರು. ನಂತರ ಸಭಾಧ್ಯಕ್ಷರಾದ ಯು.ಟಿ. ಖಾದರ್ ಬಿಜೆಪಿಯ ಹತ್ತು ಶಾಸಕರನ್ನು ಸದ್ಯದ ಅಧಿವೇಶನದಿಂದ ಉಚ್ಛಾಟಿಸಿದರು.    
 

ಈ ಪ್ರಹಸನದಲ್ಲಿ ಬಿಜೆಪಿ ಶಾಸಕರು ಮಸೂದೆಯನ್ನು ಹರಿದೆಸೆದರು ಎಂಬ ಸುದ್ದಿಯೂ ಇದೆ.  ಆದರೆ ಆ ಮಸೂದೆ ಯಾವುದು ಎಂಬುದು ಮಾತ್ರ ವರದಿಯಾಗಿಲ್ಲ! ಅಕಸ್ಮಾತ್ ಸದರಿ ಶಾಸಕರು ಅವತ್ತು ಮಂಡಿಸಿದ್ದ ಯಾವುದಾದರೂ ಮಸೂದೆಯನ್ನಾದರೂ ಓದಿ, ಅದರಲ್ಲಿನ ವಿವರಗಳು ತಮಗೆ ಒಪ್ಪಿಗೆಯಾಗದೇ ಇದ್ದುದರಿಂದ ಮಸೂದೆಯ ವಿರುದ್ಧ ಪ್ರತಿಭಟಿಸಲು ಮುಂದಾಗಿದ್ದರೆಂಬುದಕ್ಕೂ ಪುರಾವೆಯಿಲ್ಲ. ಶಾಸಕರು ಪೇಪರ್ ಹರಿದು ಹರಿದು ಎಸೆಯುತ್ತಿದ್ದಾಗ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿಯ ಹಿರಿಯ ನಾಯಕ ಸುರೇಶ್ ಕುಮಾರ್ ಇಬ್ಬರೂ ಕೈ ಕಟ್ಟಿ ನಿಂತಿದ್ದ ದೃಶ್ಯ ಕೂಡ ನಿಗೂಢ ಅರ್ಥಗಳನ್ನು ಹೊರಡಿಸುವಂತಿತ್ತು! 
 

ಅವತ್ತಿನ ಶಾಸಕರ ಪ್ರತಿಭಟನೆಯ ಹಿನ್ನೆಲೆಯ ವಿಚಿತ್ರವೊಂದಿದೆ: ರಾಷ್ಟ್ರೀಯ ನಾಯಕರು ಬಂದಾಗ ಐಎಎಸ್ ಆಧಿಕಾರಿಗಳ ನಿಯೋಜನೆ ತಪ್ಪು ಎಂಬ ಪ್ರಶ್ನೆಯನ್ನು ಮೊದಲು ಎತ್ತಿದವರು ಜನತಾದಳದ ನಾಯಕರಾದ ಎಚ್.ಡಿ. ಕುಮಾರಸ್ವಾಮಿಯವರು. ಈ ಹಿಂದೆ ಜನತಾದಳ, ಬಿಜೆಪಿ ಸರ್ಕಾರಗಳೂ ಇಂಥ ಸಂದರ್ಭಗಳಲ್ಲಿ ಐಎಎಸ್ ಅಧಿಕಾರಿಗಳನ್ನು ನಿಯೋಜಿಸಿವೆ ಎಂದು  ಕಾಂಗ್ರೆಸ್ ವಕ್ತಾರರು ಈ ನಿಯೋಜನೆಯನ್ನು ಸಮರ್ಥಿಸಿಕೊಂಡರು. ತಮಾಷೆಯೆಂದರೆ, ತಮ್ಮ ನಾಯಕರಾದ ಕುಮಾರಸ್ವಾಮಿ ಎತ್ತಿದ ಪ್ರಶ್ನೆಯನ್ನು ಜನತಾದಳದ ಶಾಸಕರೇ ಮೈಮೇಲೆ ಹಾಕಿಕೊಳ್ಳದೆ, ಸಭಾನಾಯಕರಹಿತ ಬಿಜೆಪಿ ಶಾಸಕರು ಮೈಮೇಲೆ ಹಾಕಿಕೊಂಡಿದ್ದು!  
 

ಸಭಾಧ್ಯಕ್ಷ ಖಾದರ್ ಅವರು ಈ ಪ್ರಕರಣ ‘ವಿಧಾನಸಭಾ ಇತಿಹಾಸದಲ್ಲೊಂದು ಕಪ್ಪು ಚುಕ್ಕೆ’ ಎಂದಿದ್ದಾರೆ. ಇದೇ ಸದನದಲ್ಲಿ ತೀಕ್ಷ್ಣ ಪ್ರತಿಕ್ರಿಯೆಯ ಪ್ರಕರಣಗಳು ಈ ಹಿಂದೆಯೂ ನಡೆದಿವೆ. ಅಂಥ ಪ್ರಕರಣಗಳ ಇತಿಹಾಸದ ಹಿನ್ನೆಲೆಯಲ್ಲಿ ನೋಡಿದಾಗ, ಮೊನ್ನೆ ಶಾಸಕರು ಪೇಪರ್ ತೂರಿದ  ಪ್ರಕರಣ ಅಸಹ್ಯಕರ ಪ್ರಹಸನದಂತಿದೆಯೇ ಹೊರತು, ಅಲ್ಲಿ ರಾಜ್ಯವನ್ನು ಕಾಡುತ್ತಿರುವ ಮಹತ್ವದ ಪ್ರಶ್ನೆಗಳ ಬಗ್ಗೆ ಪ್ರಾಮಾಣಿಕ ಪ್ರತಿಭಟನೆಯ ಎಳೆಯೂ ಇದ್ದಂತಿಲ್ಲ. 
 

ವಿಧಾನಸಭೆಯ ಇತಿಹಾಸದಲ್ಲಿ ತಾವು ಒಪ್ಪದ ಮಸೂದೆಗಳನ್ನು ಶಾಸಕರು ಹರಿದು ಪ್ರತಿಭಟಿಸಿದ್ದಿದೆ. ಆ ಪ್ರತಿಕ್ರಿಯೆಗಳಲ್ಲಿದ್ದ ನೈತಿಕ ಸಿಟ್ಟಿನ ಕುರಿತು ಗಂಭೀರ ಚರ್ಚೆಗಳೂ ನಡೆದಿವೆ. ನಾಡಿನ ಪ್ರಜ್ಞಾವಂತರು ಅಂಥ ಪ್ರತಿಭಟನೆಯ ಹಿಂದಿನ ಕಾಳಜಿಯನ್ನು ಅರ್ಥ ಮಾಡಿಕೊಂಡು, ಅವನ್ನು ಒಪ್ಪಿದ್ದೂ ಇದೆ. 1963ರ ಕರ್ನಾಟಕ ವಿಧಾನಸಭೆಯ ಅಧಿವೇಶನದ ಸಂದರ್ಭದಲ್ಲಿ ಮೈಸೂರಿನ ಮಾಜಿ ರಾಜ ಜಯಚಾಮರಾಜೇಂದ್ರ ಒಡೆಯರ್ ರಾಜ್ಯಪಾಲರಾಗಿದ್ದರು. ಅಧಿವೇಶನದಲ್ಲಿ ಒಡೆಯರ್ ಇಂಗ್ಲಿಷಿನಲ್ಲಿ ತಮ್ಮ ರಾಜ್ಯಪಾಲರ ಭಾಷಣ ಮಾಡಿದರು. ಅಂದಿನ ವಿಧಾನಸಭೆಯಲ್ಲಿದ್ದ ಧೀಮಂತ ಸಮಾಜವಾದಿ ನಾಯಕ ಶಾಂತವೇರಿ ಗೋಪಾಲಗೌಡರು ಅರಸೊತ್ತಿಗೆಯನ್ನು ವಿರೋಧಿಸಿದ್ದವರು. ಇಂಡಿಯಾಕ್ಕೆ ಸ್ವಾತಂತ್ರ್ಯ ಬಂದರೂ ಮೈಸೂರು ಸಂಸ್ಥಾನಕ್ಕೆ ಜವಾಬ್ದಾರಿ ಸರ್ಕಾರ ಬರುವುದು ತಡವಾಗುವುದಕ್ಕೆ ಮೈಸೂರು ಮಹಾರಾಜ ಚಾಮರಾಜೇಂದ್ರ ಒಡೆಯರೂ ಕಾರಣವಾಗಿದ್ದರು. ಆಗ ಅವರ ವಿರುದ್ಧ ನಡೆದ ಚಳುವಳಿಯಲ್ಲಿ ತರುಣ ಶಾಂತವೇರಿ ಗೋಪಾಲಗೌಡರು ಭೂಗತ ಹೋರಾಟ ನಡೆಸಿದ್ದರು. ಇದೀಗ ಸ್ವತಂತ್ರ ಮೈಸೂರು ವಿಧಾನಸಭೆಯಲ್ಲಿ ಕನ್ನಡ ನಾಡಿನ ಮಾಜಿ ಮಹಾರಾಜರು ಇಂಗ್ಲಿಷಿನಲ್ಲಿ ಭಾಷಣ ಮಾಡಿದ್ದನ್ನು ಕಂಡು ಗೋಪಾಲಗೌಡರಿಗೆ ರೇಗಿಹೋಯಿತು. ಈ ಕುರಿತ ವಿವರಗಳು ‘ಜೀವಂತ ಜ್ವಾಲೆ’ (ಸಂ.ಕೋಣಂದೂರು ವೆಂಕಪ್ಪಗೌಡ) ‘ಶಾಂತವೇರಿ ಗೋಪಾಲಗೌಡ: ನೆನಪಿನ ಸಂಪುಟ’ (ಸಂ. ಜಿ.ವಿ. ಆನಂದಮೂರ್ತಿ, ಕಾಳೇಗೌಡ ನಾಗವಾರ), ಶಾಂತವೇರಿ ಗೋಪಾಲಗೌಡ (ನಟರಾಜ್ ಹುಳಿಯಾರ್) ಪುಸ್ತಕಗಳಲ್ಲಿವೆ:  
 

‘ಅಂದು ಗೋಪಾಲಗೌಡರು ರಾಜ್ಯಪಾಲರ ಭಾಷಣದ ಪ್ರತಿಯನ್ನು ಕೈಯಲ್ಲಿ ಹಿಡಿದು, ‘ಮಾನ್ಯ   ಅಧ್ಯಕ್ಷರೇ, ಈ ಭಾಷಣಕ್ಕೆ ನನ್ನ ಪ್ರತಿಭಟನೆ ಇದೆ. ಇಪ್ಪತ್ತೈದು ನಿಮಿಷ ಮಾತಾಡಲು ಅವಕಾಶ ಕೊಡಿ’ ಎಂದು ಕೇಳಿದರು. ಗೌಡರು ಹತ್ತು ಸಲ ಕೇಳಿದರೂ ಸ್ಪೀಕರ್ ಅವಕಾಶ ಕೊಡಲಿಲ್ಲ. ಇನ್ನಿತರ ಸದಸ್ಯರೂ ಗೌಡರ ಪರವಾಗಿ ಸಭಾಧ್ಯಕ್ಷರನ್ನು ಕೇಳಿಕೊಂಡರು. ಆಗಲೂ ಸ್ಪೀಕರ್ ಅವಕಾಶ ಕೊಡಲಿಲ್ಲ. ಆಗ ಗೋಪಾಲಗೌಡರು, ‘ಅಧ್ಯಕ್ಷರೇ, ಮೂರು ನಿಮಿಷ ಮಾತಾಡಲು ಅವಕಾಶ ಕೊಡಿ. ಇಲ್ಲದಿದ್ದರೆ...ಇಲ್ಲದಿದ್ದರೆ...’ ಎನ್ನುತ್ತಾ, ರಾಜ್ಯಪಾಲರ ಭಾಷಣದ ಪ್ರತಿಯನ್ನು ಹರಿದು ತುಳಿದು ಹಾಕಿದರು.’  
 

ತಮ್ಮ ಈ ಉಗ್ರ ಪ್ರತಿಕ್ರಿಯೆ ಕುರಿತು ಅನಂತರ ಗೋಪಾಲಗೌಡರು ಹೇಳಿದ ಮಾತು: ‘ನೋಡಿ, ನನ್ನನ್ನು ಜನ ಚುನಾಯಿಸಿ ಕಳಿಸಿರೋದು ಶಾಸಕರ ಭತ್ಯೆ ಪಡೆದು ಮೋಜು ಮಾಡಲು ಅಲ್ಲ. ಅವತ್ತು ನಾನು ಅಸೆಂಬ್ಲಿಯಲ್ಲಿ ರಾಜ್ಯಪಾಲರ ಭಾಷಣದ ಬಗ್ಗೆ, ಗೇಣಿದಾರರ ಬಗ್ಗೆ ತರಬೇಕಾಗಿದ್ದ ಕಾನೂನುಗಳ ಬಗ್ಗೆ, ಬಿ.ಡಿ. ಜತ್ತಿ ಸಮಿತಿಯ ವರದಿಯ ಬಗ್ಗೆ ಮಾತಾಡಬೇಕಾಗಿತ್ತು. ಅಲ್ಲಿ ಕಾಂಗ್ರೆಸ್ ಶಾಸಕರಿಗೆ ಹೆಚ್ಚು ಮಾತಾಡಲು ಅವಕಾಶ ಕೊಡುತ್ತಿದ್ದರು. ನಾನು ಎಷ್ಟು ಬಾರಿ ಪ್ರಯತ್ನಿಸಿದರೂ ಅವಕಾಶ ಕೊಡಲಿಲ್ಲ...’ 
 

ಗೋಪಾಲಗೌಡರು ಆ ಕಾಲಕ್ಕಾಗಲೇ ಕನ್ನಡದ ಜಾಗೃತಿಗಾಗಿ ಯುವಸೇನೆ ಹುಟ್ಟು ಹಾಕಿದ್ದವರು; ಸಮಾಜವಾದಿ ಪಕ್ಷದ ದೇಶಭಾಷೆಗಳ ಪರ ನಿಲುವಿಗೆ ತಕ್ಕಂತೆ ಕನ್ನಡಪರ ಹೋರಾಟಗಾರರೂ ಆಗಿದ್ದವರು. ಇಂಥ ಗೋಪಾಲಗೌಡರಿಗೆ ಕನ್ನಡದವರಾಗಿದ್ದ ರಾಜ್ಯಪಾಲರು ಇಂಗ್ಲಿಷಿನಲ್ಲಿ ಭಾಷಣ ಮಾಡಿದ್ದರಿಂದ ಸಿಟ್ಟು ಬಂದಿದ್ದು ಸಹಜವಾಗಿತ್ತು. ಅವತ್ತು ಗೌಡರು ರಾಜ್ಯಪಾಲರ ಭಾಷಣದ ಪ್ರತಿಯನ್ನು ತುಳಿದಿದ್ದನ್ನು ಕುರಿತು, ಲೇಖಕರೊಬ್ಬರು ‘ಇದು ಸಂಸ್ಕೃತಿಗೆ ಮಾಡಿದ ಅಪಚಾರ\\\' ಎಂದು ಅಪಸ್ವರ ಎತ್ತಿದ್ದರು. ಇದಕ್ಕೆ ಉತ್ತರ ಬರೆಯಲು ಗೋಪಾಲಗೌಡರು ಮಾಡಿಕೊಂಡ ಟಿಪ್ಪಣಿಗಳ ಹಾಳೆಗಳು ಗೋಪಾಲಗೌಡರ ಮಗ ರಾಮಮನೋಹರ ಅವರ ಬಳಿ ದೊರೆತವು. ಟಿಪ್ಪಣಿಗಳಲ್ಲಿನ ಮುಖ್ಯ ಅಂಶಗಳು: 

‘...ನಾನು ವಿಧಾನಸಭೆಯಲ್ಲಿ ಸದಸ್ಯನಾಗಿ ನನ್ನ ಹಕ್ಕುಬಾಧ್ಯತೆಗಳೇನು, ಅವುಗಳಿಗೆ ಚ್ಯುತಿ ಬಂದಾಗ ಅವನ್ನು ರಕ್ಷಿಸಿಕೊಳ್ಳುವುದು ಹೇಗೆ ಎಂಬುದನ್ನು ಅರಿತುಕೊಳ್ಳಲೆತ್ನಿಸುತ್ತಿದ್ದೇನೆ. ಉದ್ದೇಶಪೂರ್ವಕವಾಗಿ ನಾನು ರಾಜ್ಯಪಾಲರ ಪ್ರತಿಯನ್ನು ತುಳಿಯಲಿಲ್ಲ. ಮಾನ್ಯ ಸಭೆಗಾಗಲೀ, ಸಭಾಪತಿಯವರಿಗಾಗಲೀ, ರಾಜ್ಯಪಾಲರಿಗಾಗಲೀ ಅವಮಾನ ಮಾಡುವುದು ನನ್ನ ಉದ್ದೇಶವಾಗಿರಲಿಲ್ಲ. ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆದ ರೀತಿ ವೈಧಾನಿಕವಾಗಿತ್ತೆಂದು ಸಭಾಪತಿಯವರು ಸಮರ್ಥಿಸಿಕೊಂಡಿದ್ದಾರೆ. ಅವರ ವಾದವನ್ನು ನಾನು ಪ್ರಶ್ನಿಸುತ್ತಿಲ್ಲವಾದರೂ, ಚರ್ಚೆ ನಡೆದ ರೀತಿ ಸರಿಯಲ್ಲವೆಂದು ನನ್ನ ಅಭಿಪ್ರಾಯ. ವಿರೋಧ ಪಕ್ಷದ ಸದಸ್ಯನೂ, ಸೋಷಲಿಸ್ಟ್ ಪಾರ್ಟಿಯ ಏಕಮಾತ್ರ ಪ್ರತಿನಿಧಿಯೂ, ರಾಜ್ಯಪಾಲರ ಭಾಷಣಕ್ಕೆ ತಿದ್ದುಪಡಿ ಸೂಚಿಸಿದವನೂ, ಮಾತನಾಡಲು ಉತ್ಕಟ ಇಚ್ಛೆಯಿಂದ ವಿಕ್ಟೋರಿಯಾ ಆಸ್ಪತ್ರೆಯಿಂದ ವೈದ್ಯರ ಅನುಮತಿ ಪಡೆದು ಸಭೆಗೆ ಬಂದವನೂ ಆಗಿದ್ದ ನನಗೆ ಆ ಚರ್ಚೆಯಲ್ಲಿ ಭಾಗವಹಿಸಲು ಕಾಲಾವಕಾಶ ದೊರೆಯಲಿಲ್ಲವೆಂದಾಗ ಸಹಜವಾಗಿಯೇ ನಾನು ತಾಳ್ಮೆ ಕಳೆದುಕೊಂಡೆ...
 

 ‘...ನನ್ನ ಸಿಟ್ಟು ತಾಮಸವಾಗಿರಲಿಲ್ಲ. ಸಾತ್ವಿಕವೇ ಆಗಿತ್ತು. ಪ್ರತಿಭಟನೆ ಯಾವ ರೀತಿ ಇರಬೇಕೆಂಬುದನ್ನು ವಿವೇಚಿಸುವ ಮೊದಲೇ ನನ್ನ ಕೈಕಾಲುಗಳು ಪ್ರತಿಭಟನೆಯನ್ನು ತೋರಿಸಿದ್ದವು. ಇಂತಹ ಪರಿಸ್ಥಿತಿ ಉಂಟಾದುದಕ್ಕಾಗಿ ನಾನು ನನ್ನ ವಿಷಾದ ವ್ಯಕ್ತಪಡಿಸಿದ್ದೇನೆ...ಆದರೆ ನನ್ನ ಕೃತಿ ನನ್ನದೇ. ಇತರರ ದೃಷ್ಟಿಯಿಂದ ಅದು ಕೀಳಾಗಿ ಕಂಡರೂ ಅದು ನನ್ನ ಕೃತಿ. ಅದರ ಪೂರ್ಣ ಹೊಣೆ ನನ್ನದು. ...ಕಾಗದವನ್ನು ಸರಸ್ವತಿಯ ಪ್ರತೀಕವೆಂದಾಗಲೀ, ಕಾಲನ್ನು ಉತ್ತಮಾಂಗವಲ್ಲವೆಂದಾಗಲೀ ನಾನು ತಿಳಿಯುವುದಿಲ್ಲ. ಇದನ್ನು ವಿಶೇಷ ವ್ಯಾಖ್ಯಾನ ಎಂದು ಭಾವಿಸುತ್ತೇನೆ.’ 
 

ಆ ಸಂದರ್ಭದಲ್ಲಿ ಸ್ಪೀಕರ್ ವೈಕುಂಠ ಬಾಳಿಗ ಗೋಪಾಲಗೌಡರನ್ನು ಆ ಅಧಿವೇಶನದ ಮಟ್ಟಿಗೆ ಸಸ್ಪೆಂಡ್ ಮಾಡಿದ್ದರು. ಅಧಿವೇಶನ ನಡೆಯುತ್ತಿದ್ದರೂ ಗೌಡರು ಊರಿನಲ್ಲೇ ಇದ್ದದ್ದನ್ನು ಕಂಡು ಜನ, ‘ಗೌಡರೇ! ಯಾಕೆ ವಿಧಾನಸಭೆಗೆ ಹೋಗಿಲ್ಲ?’ ಎಂದು ಕೇಳಿದರು. ‘ಏನು ಮಾಡಲಪ್ಪಾ! ಆ ಬಾಳಿಗ ನನ್ನನ್ನ ವೈಕುಂಠದಿಂದ ಹೊರಗೆ ಹಾಕಿದಾನೆ!’ ಎಂದು ಗೌಡರು ನಕ್ಕರು. 
 

ಗೋಪಾಲಗೌಡರು ಸದನದಲ್ಲಿ ಸಿಟ್ಟಿಗೆದ್ದ ಮತ್ತೊಂದು ಪ್ರಸಂಗ: ಸದಸ್ಯರೊಬ್ಬರು ಗೇಣಿದಾರರ ಬಗ್ಗೆ ಕೇಳಿದ್ದ ಪ್ರಶ್ನೆಗೆ ಪೂರಕವಾದ ಉಪಪ್ರಶ್ನೆಯೊಂದನ್ನು ಕೇಳಲು ಗೋಪಾಲಗೌಡರು ಎದ್ದು ನಿಂತರು. ಆದರೆ ಸಭಾಧ್ಯಕ್ಷ ಕೊಠಾವಳೆ ಗೌಡರಿಗೆ ಅವಕಾಶ ಕೊಡಲಿಲ್ಲ. ಮತ್ತೆ ಮತ್ತೆ ಗೌಡರು ಎದ್ದು ನಿಂತು ಕೇಳಿದರೂ ಸಭಾಧ್ಯಕ್ಷರು ಅವಕಾಶ ಕೊಡಲಿಲ್ಲ. ಗೌಡರು ತಮ್ಮ ಎದುರಿಗಿದ್ದ ಮೈಕನ್ನು ಕಿತ್ತು ಸಭಾಧ್ಯಕ್ಷರ ಮುಂದಿದ್ದ ಜಾಗಕ್ಕೆ ಎಸೆದರು. 
 

ಮತ್ತೊಮ್ಮೆ ಶಾಸನಸಭೆಯಲ್ಲಿ ಸಿಟ್ಟಾದ ಗೋಪಾಲಗೌಡರು ಅಲ್ಲೇ ಇದ್ದ ಶೀಘ್ರ ಲಿಪಿಕಾರನ ಶರಟನ್ನು ಹರಿದರು. ನಂತರ ಕ್ಷಮೆ ಕೇಳುತ್ತಾ ಅವರು ಹೇಳಿದ ಮಾತು: ‘ನಾನು ಹೃದಯಪೂರ್ವಕವಾಗಿ, ಅಂತರಾತ್ಮ ಪ್ರೇರಣೆಯಿಂದ ಕ್ಷಮೆ ಕೇಳುತ್ತಿದ್ದೇನೆ. ನೀವು [ಸಭಾಧ್ಯಕ್ಷ ವೈಕುಂಠ ಬಾಳಿಗ] ಕೊಡಬಹುದಾದ ಶಿಕ್ಷೆಗೆ ಹೆದರಿ ಕ್ಷಮೆ ಕೇಳುತ್ತಿಲ್ಲ. ಶಿಕ್ಷೆ ಅನುಭವಿಸಲು ಸಿದ್ಧ.’ ಇದಾದ ಮೇಲೆ ಗೋಪಾಲಗೌಡರು ಶೀಘ್ರ ಲಿಪಿಕಾರನಿಗೆ ಹೊಸ ಶರಟೊಂದನ್ನೂ ಕೊಟ್ಟರು. 
 

ಗೋಪಾಲಗೌಡರ ಸದನದಲ್ಲಿ ತೋರುತ್ತಿದ್ದ ಸಿಟ್ಟಿನ ಹಿಂದಿದ್ದ ನೈತಿಕತೆ, ಪ್ರಾಮಾಣಿಕತೆಗಳನ್ನು ಅರಿತಿದ್ದ ಸ್ಪೀಕರ್ ವೈಕುಂಠ ಬಾಳಿಗ ಮುಂದೊಮ್ಮೆ ಹೇಳಿದರು: ‘ಗೋಪಾಲಗೌಡರಂಥ ರಾಜಕಾರಣಿಗಳು ಐದು ಜನ ಸಿಕ್ಕರೆ ಸಾಕು; ನಾನು ಈ ರಾಜ್ಯವನ್ನು ರಾಮರಾಜ್ಯವನ್ನಾಗಿ ಮಾಡುತ್ತೇನೆ.’
 

ಮೊನ್ನೆ ರಾಜ್ಯ ವಿಧಾನಸಭೆಯಲ್ಲಿ, ಮೊಟ್ಟ ಮೊದಲ ಬಾರಿಗೆ ಉಪಸಭಾಧ್ಯಕ್ಷ ಸ್ಥಾನಕ್ಕೆ ಏರಿರುವ ಲಂಬಾಣಿ ಸಮುದಾಯದ ರುದ್ರಪ್ಪ ಲಮಾಣಿಯವರ ಮೇಲೆ ಪೇಪರ್ ಹರಿದು ತೂರಿದ ಪ್ರಕರಣವನ್ನು  ಗೋಪಾಲಗೌಡರ ನಿಜ ಕಾಳಜಿಯ ಸಿಟ್ಟಿಗೆ, ಅನಂತರದ ಪ್ರತಿಕ್ರಿಯೆಗಳಿಗೆ ಹೋಲಿಸಿ ನೋಡಿ: ಪೇಪರ್ ಹರಿದು ತೂರಿದ ಶಾಸಕರ ನಡವಳಿಕೆಯಲ್ಲಿ ಗೋಪಾಲಗೌಡರ ಪ್ರತಿಕ್ರಿಯೆಗಳ ಯಾವ ನೈತಿಕ ಅಂಶಗಳೂ ಇಲ್ಲದಿರುವುದು ಹೊಳೆಯುತ್ತದೆ. ತಮ್ಮ ಸ್ಫೋಟಗಳ ನಂತರ ಗೋಪಾಲಗೌಡರ ಪ್ರತಿಕ್ರಿಯೆಗಳಲ್ಲಿದ್ದ ಘನತೆ, ಹಾಗೂ ಗೋಪಾಲಗೌಡರು ಸದನದಲ್ಲಿ ಸಿಟ್ಟಿನಿಂದ ವರ್ತಿಸುತ್ತಿದ್ದುದನ್ನು ಕಣ್ಣಾರೆ ಕಂಡಿದ್ದ ಸ್ಪೀಕರ್ ವೈಕುಂಠ ಬಾಳಿಗರ ಮನದಾಳದ ಮಾತು- ಎರಡೂ ಐತಿಹಾಸಿಕವಾಗಿವೆ.  ನಾಡಿನ ವಿಧಾನಸಭೆಯ ಇಂಥ ಇತಿಹಾಸದೆದುರು, ಇವತ್ತಿನ ಶಾಸಕರ  ಪ್ರತಿಭಟನೆಯ ಮಟ್ಟ, ಭಾಷೆಗಳ ಕುಬ್ಜತೆಯನ್ನು ಎಲ್ಲ ಪಕ್ಷಗಳ ಪ್ರಜ್ಞಾವಂತರೂ ಅರಿಯಬೇಕು. ಯಾಕೆಂದರೆ, ಗೋಪಾಲಗೌಡರಂತೆ ನಿಜವಾದ ಪ್ರತಿಭಟನೆ ಮಾಡಲು ಅಸಲಿಗೆ ರಾಜಕಾರಣಿಗಳ ವ್ಯಕ್ತಿತ್ವ, ಚಾರಿತ್ರ್ಯಗಳು ಗಟ್ಟಿ ಹಾಗೂ ಪರಿಶುದ್ಧವಾಗಿರಬೇಕು. 
 

ಕೊನೆ ಟಿಪ್ಪಣಿ: ಮೊನ್ನೆ ಶಾಸಕರು ಪೇಪರ್ ತೂರಿದ ಪ್ರಕರಣದ ಇನ್ನೊಂದು ವಿಶೇಷ ಚಿತ್ರ ಕೂಡ ನಮ್ಮ ಕಣ್ಣ ಮುಂದಿದೆ: ಅವತ್ತು ತಮ್ಮ ಜೊತೆಯಿದ್ದ ಶಾಸಕರು ಪೇಪರ್ ತೂರುತ್ತಿದ್ದಾಗ, ಮುಜುಗರದಿಂದಲೋ, ಸಭ್ಯತೆಯಿಂದಲೋ ಬಿಜೆಪಿ ಶಾಸಕ ಸುರೇಶ್ ಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಬ್ಬರೂ ಕೈಕಟ್ಟಿ ನಿಂತಿದ್ದರು. ವಿರೋಧಾಭಾಸವೆಂದರೆ, ಅದಕ್ಕಿಂತ ಎರಡೇ ದಿನಗಳ ಕೆಳಗೆ ಕ್ರಿಯಾಶೀಲ ಅಧ್ಯಾಪಕ ಹುಲಿಕುಂಟೆ ಮೂರ್ತಿ ವಿಜ್ಞಾನಿಗಳ ಮೂಢನಂಬಿಕೆಯನ್ನು ಟೀಕಿಸಿದ್ದಕ್ಕೆ, ‘ಇಂಥವರು ವಿದ್ಯಾರ್ಥಿಗಳಿಗೆ ಎಂಥ ಪಾಠ ಹೇಳಿಕೊಡುತ್ತಾರೆ?’ ಎಂದು ಸುರೇಶ್ ಕುಮಾರ್ ಸದನದ ಹೊರಗೆ ಪ್ರಶ್ನಿಸಿದ್ದರು; ಶಿಕ್ಷಣ ಇಲಾಖೆಗೂ ದೂರು ಬರೆದಿದ್ದರು. 
 

ಇದೀಗ ತಮ್ಮ ಪಕ್ಷದ ಶಾಸಕರು ಯಾವ ಘನತೆಯೂ ಇಲ್ಲದೆ ಸದನದ ಉಪಸಭಾಪತಿಗಳಿಗೆ ಎಸಗಿದ ಅವಮಾನದ ಮೂಲಕ ಇಡೀ ನಾಡಿನ ಜನತೆಗೆ ಯಾವ ಪಾಠ ಹೇಳಿಕೊಡುತ್ತಿದ್ದಾರೆ ಎಂದು ಸುರೇಶ್ ಕುಮಾರ್ ಹೇಳಬಲ್ಲರೇ? ಹಿಂದೊಮ್ಮೆ ಇದೇ ಸದನದಲ್ಲಿ ಗೋಪಾಲಗೌಡರು ತೋರಿದ್ದ ಉಗ್ರ ಪ್ರತಿಭಟನೆಯಲ್ಲಿದ್ದ ನೈತಿಕತೆ, ತಾತ್ವಿಕ ನಿಲುವು ಹಾಗೂ ನಂತರದ ಅವರ ಪ್ರತಿಕ್ರಿಯೆಯಲ್ಲಿದ್ದ ಘನತೆಯನ್ನು ಅರ್ಥ ಮಾಡಿಕೊಳ್ಳಬಲ್ಲ ಸುರೇಶ್ ಕುಮಾರ್, ಬಸವರಾಜ ಬೊಮ್ಮಾಯಿ ಥರದವರು ಈಗಿನ ಸಹಶಾಸಕರಿಗೆ ಕೆಲವಾದರೂ ಪಾಠಗಳನ್ನು ಹೇಳಿಕೊಡಬಲ್ಲರೇ? ಬಿಜೆಪಿ ಶಾಸಕರು ಮಾತ್ರವಲ್ಲದೆ, ಎಲ್ಲ ಪಕ್ಷದ ಶಾಸಕರೂ, ಮಂತ್ರಿಗಳೂ ಶಾಂತವೇರಿ ಗೋಪಾಲಗೌಡರಿಂದ ಇಂಥ ಪಾಠಗಳನ್ನು ಕಲಿಯಬಲ್ಲರೇ? ಈ ಮಹನೀಯರು ಗೋಪಾಲಗೌಡರು ಸದನದಲ್ಲಿ ಎತ್ತುತ್ತಿದ್ದ ಪ್ರಶ್ನೆಗಳ ಮಹತ್ವವನ್ನು ಕೋಣಂದೂರು ಲಿಂಗಪ್ಪ ಸಂಪಾದಿಸಿರುವ ‘ಶಾಸನಸಭೆಯಲ್ಲಿ ಶಾಂತವೇರಿ’ ಪುಸ್ತಕದಲ್ಲಿರುವ ಭಾಷಣಗಳನ್ನು ಓದಿಯಾದರೂ ಅರಿತು ತಮ್ಮ ಭಾಷಣಗಳನ್ನು ಸಿದ್ಧಪಡಿಸಿಕೊಂಡು ಬರಬಲ್ಲರೇ?

(ವಾರ್ತಾಭಾರತಿ, 29 ಜುಲೈ 2023)  

Share on:


Recent Posts

Latest Blogs



Kamakasturibana

YouTube



Comments

0 Comments





Add Comment