ಓದುಗ, ಓದುಗಿಯರ ಪ್ರತಿಭಾ ವಿಲಾಸ!

‘ಬರೆಯುವವರಲ್ಲಿ ‘ಕಾರಯಿತ್ರೀ ಪ್ರತಿಭೆ’ (ಸೃಜನಶೀಲ ಪ್ರತಿಭೆ) ಇರುತ್ತದೆ; ಓದುಗರಲ್ಲಿ ‘ಭಾವಯಿತ್ರೀ ಪ್ರತಿಭೆ’ ಇರುತ್ತದೆ…’ ಈ ಕಾವ್ಯಮೀಮಾಂಸೆಯ ಮಾತನ್ನು ಸಾಹಿತ್ಯದ ಅಧ್ಯಯನ ಮಾಡುವವರೆಲ್ಲ ಕೇಳಿರುತ್ತಾರೆ. ಆದರೆ ಓದುಗರ ಕ್ರಿಯೇಟಿವ್ ಇಮ್ಯಾಜಿನೇಶನ್ ಕಂಡವರಿಗೆ ಈ ಥರದ ವರ್ಗೀಕರಣ ಸರಳ ಹಾಗೂ ಸ್ಥೂಲ ಎನ್ನಿಸುತ್ತಿರುತ್ತದೆ.  

ಈ ಮಾತು ಬರೆಯುವ ಹಿನ್ನೆಲೆಯಲ್ಲಿ ಗೆಳೆಯ ಸಂದೀಪ್ ನಾಯಕ್ ಹಿಂದೊಮ್ಮೆ ನನಗೆ ಕಳಿಸಿದ ಪ್ರಶ್ನೆಗಳು ಹಾಗೂ ಕೊಟ್ಟ ಉತ್ತರಗಳು ನನ್ನೆದುರಿಗಿವೆ. ‘ಕತೆ ಬರೆದ ಮೇಲೆ ಓದುಗರಿಂದ ಏನನ್ನು ನಿರೀಕ್ಷಿಸುತ್ತೀರಿ?’ ಎಂಬ ಸಂಕೀರ್ಣ ಪ್ರಶ್ನೆ ಕೂಡ ಸಂದೀಪ್ ಕಳಿಸಿದ ಪ್ರಶ್ನೆಗಳ ನಡುವೆ ಇತ್ತು. ಆಗ ಸಂದೀಪ್ ‘ಮಯೂರ’ ಮಾಸಪತ್ರಿಕೆಯ ಮುಖ್ಯ ಉಪಸಂಪಾದಕರಾಗಿದ್ದರು.

ಈ ಪ್ರಶ್ನೆಗೆ ನನ್ನ ಉತ್ತರಗಳು ಹೀಗಿದ್ದವು:

1. ಒಂದು ಕತೆಯಲ್ಲಿ ಎಲ್ಲೋ ನಾನು ಹಿಡಿಯಲೆತ್ನಿಸಿದ ಸತ್ಯವನ್ನು, ಸೂಕ್ಷ್ಮಗಳನ್ನು ಓದುಗರೂ ಹಿಡಿದದ್ದನ್ನು ಕಂಡಾಗ ಪುಳಕಗೊಳ್ಳುತ್ತೇನೆ.
2. ಓದುಗರು ಗಂಭೀರವಾಗಿ ಕತೆಯನ್ನು ಓದಿ, ನಾನು ಗ್ರಹಿಸಿದ್ದಕ್ಕಿಂತ ಭಿನ್ನವಾದ ಸತ್ಯವನ್ನು ತೋರಿಸಿದರೆ ಕೃತಜ್ಞನಾಗುತ್ತೇನೆ.
3. ನನ್ನ ಯಾವ ಕತೆಯಲ್ಲಿ ಯಾರಿಗೆ ಕ್ರಾಸ್ ರೆಫರೆನ್ಸುಗಳಿವೆ ಎಂಬುದನ್ನು ಗೆಳೆಯ, ಗೆಳತಿಯರು ಸರಿಯಾಗಿ ಊಹಿಸಿದರೆ ಖುಷಿಯಾಗುತ್ತೇನೆ.
4. ಓದುಗರು ಅವರವರ ಭಾವಕ್ಕೆ ತಕ್ಕಂತೆ ಕತೆ ಓದಿದಾಗ ಚಕಿತನಾಗುತ್ತೇನೆ.
5. ಎಲ್ಲ ಲೇಖಕರಂತೆ ನನ್ನ ಬರವಣಿಗೆಗೆ ಓದುಗವಲಯದ ಸಮ್ಮತಿ ಪಡೆಯುವ ಬಯಕೆ ಹಾಗೂ ನಿರೀಕ್ಷೆ ನನ್ನಲ್ಲೂ ಇರುತ್ತದೆ. ಆದರೆ ನಾನೇ ಒಬ್ಬ ಓದುಗನಾಗಿ ಅದನ್ನು ಓದಿದಾಗ ಅದು ಸತ್ಯವಾಗಿದೆಯೇ, ಇಲ್ಲವೇ ಎಂಬುದನ್ನು ನೋಡುತ್ತಿರುತ್ತೇನೆ.
6. ಆ ಕತೆಯೊಳಗೇ ಮೂಡುವ ‘ಸತ್ಯ’ ‘ಕನ್ವಿನ್ಸಿಂಗ್’ ಆಗಿಲ್ಲದಿದ್ದರೆ ಪೆಚ್ಚಾಗುತ್ತೇನೆ.
7. ಕತೆಯ ಭಾಷೆ, ಗ್ರಹಿಕೆಗಳು ದುರ್ಬಲವಾಗಿರುವುದು ಕತೆ ಪ್ರಕಟವಾದ ಮೇಲೆ ಹೊಳೆದರೆ ಕಸಿವಿಸಿಗೊಳ್ಳುತ್ತೇನೆ… ರಾಮಚಂದ್ರಶರ್ಮರ ಪದ್ಯವೊಂದರ ಸಾಲಿನಂತೆ, ‘ತಡವಾಗಿ ಬಂದ ಬೆಳಕೇ…’ ಎನ್ನಿಸಿ ‘ಛೇ!’ ಅಂದುಕೊಂಡು ಪೆಚ್ಚಾಗುತ್ತೇನೆ…

ಓದುಗರ ಪ್ರತಿಕ್ರಿಯೆಗಳನ್ನು ಕುರಿತು ಬರೆಯುತ್ತಿರುವ ಈ ಘಟ್ಟದಲ್ಲಿ, ನಾನು ‘ಸುಧಾ’ ವಾರಪತ್ರಿಕೆಯಲ್ಲಿ ಬರೆದ ‘ಜ್ಞಾನಪೀಠದ ಹಾದಿಯಲ್ಲಿ’ ಕತೆಗೆ ಬಂದ ನಾಲ್ಕು ಕುತೂಹಲಕರವಾದ ವಿಭಿನ್ನ ಪ್ರತಿಕ್ರಿಯೆಗಳನ್ನು ಇಲ್ಲಿ ಕೊಡಬಹುದೆಂದು ಕಾಣುತ್ತದೆ. ಮುಂದೆ ಈ ಕತೆ ನನ್ನ ‘ಬಸವಲಿಂಗಪ್ಪನವರು ಮತ್ತು ಡೇವಿಡ್ ಸಾಹೇಬರು’ (ಪಲ್ಲವ ಪ್ರಕಾಶನ) ಕಥಾ ಸಂಕಲನದಲ್ಲೂ ಸೇರಿದೆ. ‘ಜ್ಞಾನಪೀಠದ ಹಾದಿಯಲ್ಲಿ’ ಲೇಖಕನೊಬ್ಬನಿಗೆ ಜ್ಞಾನಪೀಠ ಬರುವ ಸುದ್ದಿ ಅಧಿಕೃತವಾಗಿ ಪ್ರಕಟವಾಗುವ ಹಿಂದಿನ ದಿನ ನಡೆಯುವ ಕತೆ. ಈ ಕತೆಯಲ್ಲಿ ದಕ್ಷ, ನಿಷ್ಠುರ ವಿಮರ್ಶಕನೊಬ್ಬ ಆ ಲೇಖಕನ ಸಂದರ್ಶನ ಮಾಡಲು ಬರುತ್ತಾನೆ. ಅವರಿಬ್ಬರ ಮುಖಾಮುಖಿಯನ್ನು ಕತೆ ಮಂಡಿಸುತ್ತದೆ… ಈ ಕತೆಯ ಮತ್ತಷ್ಟು ವಿವರಣೆಯನ್ನು ನಾನೇ ಕೊಡುವುದು ಕಷ್ಟ! ಜೊತೆಗೆ, ಲೇಖಕನೊಬ್ಬ ತನ್ನ ಬಗ್ಗೆ ತಾನೇ ಮಾತಾಡಿಕೊಳ್ಳುವುದು ಅಶ್ಲೀಲವಾಗಿರುತ್ತದೆ ಎಂದು ಒಂದೆರಡು ಕಡೆ ನಾನೇ ಬರೆದ ನೆನಪು!

‘ಜ್ಞಾನಪೀಠದ ಹಾದಿಯಲ್ಲಿ’ ಕತೆಗೆ ಬಂದ ಹಲ ಬಗೆಯ ಪ್ರತಿಕ್ರಿಯೆಗಳ ನಡುವೆ ನಾಲ್ಕು ಕುತೂಹಲಕರವಾದ ವಿಭಿನ್ನ ಮಾದರಿಗಳು ಹೀಗಿದ್ದವು:

1. ‘ಸುಧಾ’ದಲ್ಲಿ ಈ ಕತೆ ಪ್ರಕಟವಾದ ವಾರ ಕನ್ನಡ ಅಧ್ಯಾಪಕಿಯೂ, ಅನಂತಮೂರ್ತಿಯವರ ಅಭಿಮಾನಿಯೂ ಆದ ಒಬ್ಬ ಲೇಖಕಿಯ ಪ್ರತಿಕ್ರಿಯೆ: ‘…ಆ ನಟರಾಜ್ ಹುಳಿಯಾರ್ ಆ ಕತೇಲಿ ಅನಂತಮೂರ್ತಿಯನ್ನ ತೀಡಿ ಹಾಕಿದ್ದಾನೆ!’

2. ಈ ಕತೆ ಮುಂದೆ ನನ್ನ ಕಥಾ ಸಂಕಲನದದಲ್ಲಿ ಪ್ರಕಟವಾದಾಗ, ಅದನ್ನು ಓದಿದ ಅನಂತಮೂರ್ತಿಯವರು ನಗುತ್ತಾ ನೀಡಿದ ಪ್ರತಿಕ್ರಿಯೆ: ‘ಏಯ್! ಆ ಜ್ಞಾನಪೀಠದ ಕತೆ…ಭಾಳಾ wittyಯಾಗಿದೆ ಕಣಯ್ಯಾ.’

(ಅಷ್ಟೊತ್ತಿಗೆ ಅನಂತಮೂರ್ತಿಯವರಿಗೆ ಜ್ಞಾನಪೀಠ ಬಂದು ಹದಿನೈದು ವರ್ಷವಾಗಿತ್ತು. ಅದರಲ್ಲಿ ತಮ್ಮ ಪ್ರತಿಬಿಂಬವನ್ನೇನೂ ಅವರು ಕಂಡಂತಿರಲಿಲ್ಲ!)

3. ಈ ಕಥಾ ಸಂಕಲನ ಪ್ರಕಟವಾದ ಕೆಲವು ವರ್ಷಗಳ ನಂತರ ಈ ಕತೆಯನ್ನು ಓದಿದ ಚಂದ್ರಶೇಖರ ಕಂಬಾರರು ನಗುತ್ತಾ ಫೋನಿನಲ್ಲಿ ಹೇಳಿದ ಮಾತು: ‘ನನಗಂತೂ ಈ ಕತೆ ನನ್ನ ಮೇಲೇ ಬರೆದ್ಹಾಂಗಿದೆ ಅನ್ಸುತ್ತೆ ಕಣ್ರೀ!’
(ಆಗಿನ್ನೂ ಚಂದ್ರಶೇಖರ ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ ಬಂದಿರಲಿಲ್ಲ. ವಿಚಿತ್ರವೆಂದರೆ, ಈ ಕತೆಯಲ್ಲಿರುವ ಲೇಖಕನ ಹೆಸರು ಚಂದ್ರಶೇಖರ ಗೌಡ! ಆದರೆ ಚಂದ್ರಶೇಖರ ಕಂಬಾರರ ಸುಳಿವೇನೂ ಈ ಕತೆ ಬರೆಯುವಾಗ ಇದ್ದಂತಿರಲಿಲ್ಲ!)

4. ಎಷ್ಟೋ ಸಂಜೆ ಲಂಕೇಶರ ಜೊತೆ ನಾನು ಮಾತಾಡುತ್ತಾ ಕೂತಿರುತ್ತಿದ್ದುದನ್ನು ಆಗಾಗ್ಗೆ ಕಂಡಿದ್ದ ‘ಲಂಕೇಶ್ ಪತ್ರಿಕೆ’ಯ ‘ಕಟ್ಟೆ ಪುರಾಣ’ ಕಾಲಮಿಸ್ಟ್ ಬಿ. ಚಂದ್ರೇಗೌಡರ ಜವಾರಿ ಪ್ರತಿಕ್ರಿಯೆ: ‘ಏ! ಈ ಕತೇಲಿ ನೀನೂ ಲಂಕೇಶ್ನೂ ಕುಂತ್ಕಂಡು ಮಾತಾಡ್ದಂಗಾಯ್ತಪ್ಪಾ!’


ಈ ಎಲ್ಲ ಪ್ರತಿಕ್ರಿಯೆಗಳ ಹಿನ್ನೆಲೆಯಲ್ಲಿ ನನ್ನ ಕತೆಯನ್ನು ಹಿಂತಿರುಗಿ   ನೋಡಿದಾಗಲೆಲ್ಲ ನಾನು ಕತೆ ಬರೆಯಹೊರಟಾಗ ಈ ಯಾವ ಪಾತ್ರಗಳೂ ಹೀಗೆ ನನ್ನ ಮನಸ್ಸಿನಲ್ಲಿರಲಿಲ್ಲವಲ್ಲ ಎಂದು ಅಚ್ಚರಿಯಾಗುತ್ತದೆ. ಆದರೆ ಕಥಾ ಬರವಣಿಗೆಯ ಪ್ರಕ್ರಿಯೆಯಲ್ಲಿ ಏನೇನಾಯಿತೋ… ಓದುಗರು ಅದನ್ನು ಹೇಗೆ ಸ್ವೀಕರಿಸಿದರೋ ಎಂದು ವಿಸ್ಮಯಗೊಳ್ಳುತ್ತಿರುವಾಗ… ಯಾಕೋ ನನಗೂ ಓದುಗರು ಓದುತ್ತಿರುವ ರೀತಿಯೇ ಸರಿಯಿರಬಹುದೇನೋ ಅನ್ನಿಸತೊಡಗಿತು! ಅದರ ಜೊತೆಗೆ, ಆಧುನಿಕೋತ್ತರ ಕತೆಗಾರ, ಗೆಳೆಯ ವಿ. ಎಂ. ಮಂಜುನಾಥ್ ಈ ಕತೆಗೆ ಬರೆದ ಚಿತ್ರಗಳು ಬೇರೆ ಬೇರೆ ಅರ್ಥಗಳನ್ನೇ ಕೊಡತೊಡಗಿದವು!

ಯಾವುದೇ ಬರೆವ ವ್ಯಕ್ತಿಯನ್ನು ನಿತ್ಯ ಬೆಳೆಸುವ ದ್ರವ್ಯಗಳಲ್ಲಿ ಇಂಥ ಸೃಜನಶೀಲ ಪ್ರತಿಕ್ರಿಯೆಗಳ ವಿಸ್ಮಯಗಳೂ ಇರುತ್ತವೆ. ಭಾವಯಿತ್ರೀ ಪ್ರತಿಭೆಯು ಕಾರಯಿತ್ರೀ ಪ್ರತಿಭೆಯಾಗುವ ಈ ವಿಸ್ಮಯವನ್ನು ಬರವಣಿಗೆಯಲ್ಲಿ ತೊಡಗಿರುವವರೆಲ್ಲ ಕಂಡಿರುತ್ತಾರೆ. ಅಂಥದೊಂದು ವಿಸ್ಮಯ ಈಚೆಗೆ ‘ಮಯೂರ’ ಮಾಸಪತ್ರಿಕೆಯಲ್ಲಿ ಪ್ರಕಟವಾದ ನನ್ನ ‘ಇತಿಹಾಸ ಚಕ್ರದ ಎದುರು’ ಕತೆಯ ಸಂದರ್ಭದಲ್ಲೂ ಎದುರಾಯಿತು. ಈ ಕತೆ ನನ್ನ ಹೊಸ ಕಥಾ ಸಂಕಲನ ‘ಕಥಾನಂತರ’ದಲ್ಲೂ (ಪಲ್ಲವ ಪ್ರಕಾಶನ) ಇದೆ. ಈ ಕತೆಯಲ್ಲಿ ಬರುವ ಹಿಸ್ಟರಿ ರಿಸರ್ಚ್ ಸ್ಕಾಲರ್ ತನ್ನ ವಸ್ತು ವಿಷಯದ ಬಗ್ಗೆ ಯೋಚಿಸುತ್ತಿರುವಾಗ ಡಿ. ಆರ್. ನಾಗರಾಜ್ ಅವರು ಇದ್ದಕ್ಕಿದ್ದಂತೆ ಪ್ರವೇಶಿಸಿದರು! ಡಿ. ಆರ್. ಈ ಕತೆಯೊಳಗೆ ಬಂದಿದ್ದು, ಸಂಶೋಧಕನೊಡನೆ ಅವನ ಟಾಪಿಕ್ ಚರ್ಚಿಸುವ ಸನ್ನಿವೇಶ ಕತೆಯಲ್ಲಿ ಸೇರಿಕೊಂಡಿದ್ದು, ಅವನೊಡನೆ ಅವರು ವಿಸ್ಮೃತಿ ಕುರಿತು ಮಾತಾಡಿದ್ದು… ಇವೆಲ್ಲ ಹೇಗೆ ಬಂದವು ಎಂಬುದು ಇವತ್ತಿಗೂ ನನಗೆ ವಿಸ್ಮಯವೇ!

ಆದರೆ ಆ ಕತೆ ಓದಿ ಸೂಕ್ಷ್ಮ ಕನ್ನಡ ಅಧ್ಯಾಪಕಿ ವತ್ಸಲ ಬರೆದ ಪ್ರತಿಕ್ರಿಯೆ ಇನ್ನಷ್ಟು ವಿಸ್ಮಯಕರವಾಗಿತ್ತು: “…‘ಇತಿಹಾಸ ಚಕ್ರದ ಎದುರು’ ಕತೆಯಲ್ಲಿ ಡಿ. ಆರ್. ನಾಗರಾಜ್ ಅವರ ಹಾಜರಿ, ಕೆಳಸಮುದಾಯಗಳನ್ನು ಆವರಿಸಿರುವ ವಿಸ್ಮೃತಿಯನ್ನು ಹೋಗಲಾಡಿಸುವ ಬಗ್ಗೆ ಅವರು ಮಾತನಾಡಿದ್ದು ಹಾಗೂ ಅನಂತರ ಅವರು ಆ ನಿಟ್ಟಿನಲ್ಲಿ ಕೈಗೊಂಡ ಕೆಲಸ… ಎಲ್ಲವೂ ಪುನರ್ ಮನನ ಆಯಿತು.” ಎಷ್ಟೋ ವರ್ಷಗಳ ಕೆಳಗೆ ಕನ್ನಡ ಎಂ.ಎ. ಕ್ಲಾಸುಗಳಲ್ಲಿ ಡಿ. ಆರ್. ನಾಗರಾಜರ ಪಾಠ   ಕೇಳಿದ್ದ ವತ್ಸಲ ಕತೆಯನ್ನು ಮತ್ತೊಂದು ದಿಕ್ಕಿನಿಂದ ಓದಿದ್ದರು; ಈ ರೀತಿಯೂ ಓದಬಹುದಲ್ಲ ಎಂದು ವಿಸ್ಮಯಗೊಂಡೆ.    

ಯಾವುದೇ ಲೇಖಕ, ಲೇಖಕಿಯರಿಗೆ, ಟೀಚರುಗಳಿಗೆ ಇಂಥ ಜೀವಂತ ಓದುಗಳು ದೊರೆತಂತೆಲ್ಲ ಅವರ ಸೃಜನಶೀಲತೆ ವಿಸ್ತಾರವಾಗುತ್ತಿರುತ್ತದೆ. ಇಂಥ ನೂರಾರು ಓದುಗಿಯರು, ಓದುಗರು, ಲೇಖಕ, ಲೇಖಕಿಯರು ತಮ್ಮ ಜೀವಂತ ಸ್ಪಂದನದ ಮೂಲಕ ಈ ‘ಗಾಳಿ ಬೆಳಕಿ’ನ ಬರಹಗಳನ್ನು ಬೆಳೆಸುತ್ತಿರುವ ರೀತಿಗೆ ಹಾಗೂ ಹತ್ತಾರು ಮಂದಿ ಸಹೃದಯರು ಅವನ್ನು ತನ್ನ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೂ ಶೇರ್ ಮಾಡಿ ಸಾವಿರಾರು ಓದುಗರಿಗೆ ತಲುಪಿಸುತ್ತಿರುವ ಕಾಳಜಿಗೆ ಕೇವಲ ಥ್ಯಾಂಕ್ಸ್ ಹೇಳಿದರೆ ಸಾಕೆ?

ಅದಿರಲಿ, ‘ರೀಡರ್ಸ್ ರೆಸ್ಪಾನ್ಸ್’ ಥಿಯರಿ ರೂಪಿಸಿದ ರೊಲಾ ಬಾರ್ಥ್ ಬಗ್ಗೆ ಮುಂದೊಮ್ಮೆ ಬರೆದಾಗ ‘ಓದುಗ ಸ್ಪಂದನ’ದ ಬಗ್ಗೆ ಇನ್ನಷ್ಟು ಥಿಯರಿಟಿಕಲ್ ಆಗಿ ಮಾತಾಡಬಹುದು!

Share on:

Comments

2 Comments



| ಮಹಾಂತೇಶ ಪಾಟೀಲ

ನಿಮ್ಮ ಕತೆ ಮತ್ತು ಕಾದಂಬರಿ ಓದುವಾಗ, ಪ್ರತಿ ಪ್ರತಿಭಾವಂತ ಓದುಗ ಅಥವಾ ಲೇಖಕ ಸಮಾಜ, ಸಾಹಿತ್ಯ, ರಾಜಕೀಯ ಜೊತೆಗಿನ ಸಂವಾದದಂತೆ ನೆರೆಷನ್ ಇರುತ್ತದೆ. ಬರಹ ಮತ್ತು ವಾಸ್ತವ ಲೋಕಕ್ಕೂ ಇರುವ ಗ್ಯಾಪ್ ಅನ್ನು ನಿಮ್ಮ ಬರಹಗಳು ಕಡಿಮೆಗೊಳಿಸಿವೆ. ನಿಮ್ಮ ಬರಹಗಳು ಈ ಕಾಲದ ಓದುಗನ ಸೈಚಿಕಲ್ ಡಿಸ್ಟೆನ್ಸ್ ಗೆ ಸರಿಯಾಗಿ ಹೊಂದಾಣಿಕೆ ಆಗುತ್ತವೆ. 

\r\n


| SUBRAMANYASWAMY

 ‘ಜ್ಞಾನಪೀಠದ ಹಾದಿಯಲ್ಲಿ’ ಕತೆ ಪ್ರಕಟವಾದ ನಂತರ ಕನ್ನಡದ ಮುಖ್ಯ ಲೇಖಕರು ನೀಡಿರುವ ಪ್ರತಿಕ್ರಿಯೆ ಚೋದ್ಯವೆನಿಸಿದೆ ಹಾಗೂ ನಿಮ್ಮ ಬರಹಕ್ಕೆ ನೀಡಿರುವ ಶೀರ್ಷಿಕೆ ಮುಖ್ಯವಾಗಿ ನಿರ್ಲಕ್ಷ್ಯ ಧೋರಣೆಗೆ ಒಳಗಾಗಿ ಭಾಷಿಕವಾಗಿ ಕಣ್ಮರೆ ಆಗಿರುವ ಮತ್ತು ಸಾಮಾಜಿಕ ದೃಷ್ಟಿಯಲ್ಲಿ ಇನ್ನೂ ಕಡೆಗಣನೆಗೆ ಒಳಗಾಗಿರುವಸ್ತ್ರೀ ಬಗೆಗೆ ನಟರಾಜ್ ಹುಳಿಯಾರ್ ಅವರು ಹೆಣ್ಣು ಗಂಡು ಬೇಧವಿಲ್ಲದೆ  ನಾವು ಸಮಾನ ನೆಲೆಯಲ್ಲಿ ಯೋಚಿಸುವ ಸೂಕ್ಷ್ಮ ಸಂವೇದನೆಯ ಕಡೆ ಮುಖ ಮಾಡುವ ಅಂತರಂಗದ ಮಿಡಿತವಾಗಿದೆ.

\r\n




Add Comment






Recent Posts

Latest Blogs



Kamakasturibana

YouTube