ಕವಿಮೂಲ; ಕಾವ್ಯಮೂಲ

ಪ್ರಸಂಗ- ಒಂದು: 

ಕುವೆಂಪು ಅವರ ಕುಪ್ಪಳ್ಳಿಯಲ್ಲಿ ಹತ್ತಾರು ವರ್ಷ ಇದ್ದ ಗೆಳೆಯ-ಪ್ರಾಧ್ಯಾಪಕ ಶಿವಾರೆಡ್ಡಿ ಕುವೆಂಪು ಕೃತಿಗಳಲ್ಲಿ ಬರುವ ಜಾಗಗಳನ್ನೆಲ್ಲ ಖುದ್ದು ಮೆಟ್ಟಿ ನೋಡಿದ್ದರು. ಕುಪ್ಪಳ್ಳಿಗೆ ಬರುವ ಲೇಖಕ, ಲೇಖಕಿಯರಿಗೆ; ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಆ ಜಾಗಗಳನ್ನು ತೋರಿಸುತ್ತಾ ಕುವೆಂಪು ಮೈಮೇಲೆ ಬಂದವರಂತೆ ವರ್ಣಿಸುತ್ತಿದ್ದರು. ಹಾಗೇ ನನಗೂ ಹಲವು ಜಾಗಗಳನ್ನು ತೋರಿಸಿದರು. ಆ ಅಡ್ಡಾಟ ಕುತೂಹಲಕರವಾಗೇನೋ ಇತ್ತು. ಆದರೆ, `ಕುವೆಂಪು ’ಶಿಲಾತಪಸ್ವಿ’ ಕವಿತೆ ಬರೆಯಲು ಪ್ರೇರಣೆಯಾದ ಶಿಲೆ ಇದೇ ಸಾರ್‍!’ ಎಂದು ಅವರು ಕಣ್ಣರಳಿಸಿ ಆ ಶಿಲೆಯನ್ನು ತೋರಿಸಿದ ಸಂಜೆ ಮಾತ್ರ ಇದ್ದಕ್ಕಿದ್ದಂತೆ 'ಛೆ! ಈ ಶಿಲೆಯನ್ನು ನೋಡಬಾರದಾಗಿತ್ತು’ ಎನ್ನಿಸಿತು! 

ಪ್ರಸಂಗ- ಎರಡು: 

ತಮ್ಮ ಪುಸ್ತಕಗಳ ಕಾಡಿನಿಂದ ಅಡಿಗರ ಸಮಗ್ರ ಕಾವ್ಯವನ್ನು ಹುಡುಕಿ ಕೊಡುತ್ತಾ ಗೆಳೆಯ-ವಿಮರ್ಶಕ ದಂಡಪ್ಪ ಆ ಸಂಕಲನದಲ್ಲಿದ್ದ `ಚಿಂತಾಮಣಿಯಲ್ಲಿ ಕಂಡ ಮುಖ’ ಕವಿತೆಯನ್ನು ಅಡಿಗರು ಬರೆದ `ಸಂದರ್ಭ’ವನ್ನು ನೆನಸಿಕೊಂಡರು: `೧೯೮೦ರ ದಶಕದಲ್ಲಿ ಅಡಿಗರು ಕೋಲಾರ ಜಿಲ್ಲೆಯ ಚಿಂತಾಮಣಿಗೆ ಬಂದಿದ್ದರು. ಅಲ್ಲಿ ಲಕ್ಷ್ಮಣರಾವ್ ಮೊದಲಾದವರು ಏರ್ಪಡಿಸಿದ್ದ ಸಾಹಿತ್ಯಕ ಸಭೆಯಲ್ಲಿ ಭಾಷಣ ಮಾಡಿದರು. ಮುಂದಿನ ವಾರಗಳಲ್ಲಿ `ಚಿಂತಾಮಣಿಯಲ್ಲಿ ಕಂಡ ಮುಖ’ ಕವಿತೆಯನ್ನು ಪ್ರಜಾವಾಣಿಯಲ್ಲಿ ಪ್ರಕಟಿಸಿದರು.’

ಹಿಂದೊಮ್ಮೆ `ಚಿಂತಾಮಣಿಯಲ್ಲಿ ಕಂಡ ಮುಖ’ ಕವಿತೆಯಲ್ಲಿ ನನಗೆ ಪ್ರಿಯವಾದ ಸಾಲುಗಳನ್ನು ಇದೇ ಅಂಕಣದಲ್ಲಿ ಉಲ್ಲೇಖಿಸಿದ್ದು ನಿಮಗೆ ನೆನಪಿರಬಹುದು: 

ಚಿಂತಾಮಣಿಯ ಸಭಾಂಗಣದಲ್ಲಿ ಭಾಷಣಮಗ್ನ 
ಮನಸ್ಸು, ಮನಸ್ಸಿನ ಶೇಕಡಾ ತೊಂಬತ್ತು ಪಾಲು; ಕಣ್ಣು 
ಹಾಯುತ್ತಿತ್ತು ಮುಖದಿಂದ ಮುಖಕ್ಕೆ, ಹುಡುಕುತ್ತಿತ್ತು 
ರೇವುಳ್ಳ ನಡುಗಡ್ಡೆಯೊಂದ, ತಂಗಲು ನಿಮಿಷ; ತಂಗಿ
ಅಂತರಂಗದ ಅನಂಗ ಭಂಗಿಗೆ ತಕ್ಕ ಭಂಗಿ, ದೃಷ್ಟಿಗೆ ದೃಷ್ಟಿ,
ಬಡಿತಕ್ಕೆ ತಕ್ಕ ಪ್ರತಿ ಬಡಿತ ಕೊಡುವಿನ್ನೊಂದು
ಸಮ ಹೃದಯದ ನಿಗೂಢ ಸಹಕಂಪನದ ರೋಮಾಂಚ
ಪ್ರತಿಫಲಿಸಬಲ್ಲೊಂದು ಮುಖವ. 

ಈ ಕವಿತೆಯನ್ನು ನಾನು ಕ್ಲಾಸಿನಲ್ಲಿ ಚರ್ಚಿಸುವಾಗ ದಂಡಪ್ಪನವರು ಹೇಳಿದ್ದ ಕವಿತೆ ಹುಟ್ಟಿದ ಸಂದರ್ಭವನ್ನೂ ಹುಡುಗ, ಹುಡುಗಿಯರಿಗೆ ಹೇಳಿದೆ. ಆದರೆ ಕ್ಲಾಸಿನ ನಂತರ `ಛೇ! ಈ ಸಂದರ್ಭ ನನಗೆ ಗೊತ್ತಾಗದಿದ್ದರೆ ಚೆನ್ನಾಗಿರುತ್ತಿತ್ತು’ ಎನ್ನಿಸತೊಡಗಿತು. ನಿಜಕ್ಕೂ ಬೇಜಾರಾಯಿತು! ಆ ಬೇಜಾರಿಗೂ ಕಾವ್ಯದ ಓದನ್ನು ಕುರಿತ ನನ್ನ ನಂಬಿಕೆಗೂ ಸಂಬಂಧವಿತ್ತು. `ಕವಿತೆ ಹುಟ್ಟಿದ ಸಂದರ್ಭ ಇದು’ ಎಂದು ಕವಿತೆ ಬರೆದವರು ಹೇಳುವುದನ್ನು ಬಿಟ್ಟು ಕವಿತೆ ಓದಿದರೆ ಮಾತ್ರ ಹೊಸ ಓದು ಹುಟ್ಟುತ್ತದೆ ಎಂದು ನಂಬುವ ಸ್ಕೂಲ್‌ಗೆ ಸೇರಿದವನು ನಾನು. 

ಅದಕ್ಕೇ `ಶಿಲಾತಪಸ್ವಿ’ ಕವಿತೆಗೆ ಸ್ಫೂರ್ತಿಯಾದ ಶಿಲೆಯ ವಿವರ, ಅಥವಾ `ಚಿಂತಾಮಣಿಯಲ್ಲಿ ಕಂಡ ಮುಖ’ ಹುಟ್ಟಿದ ಸಂದರ್ಭದ ವಿವರ ನನಗೆ ಗೊತ್ತಾಗದಿದ್ದರೆ ಚೆನ್ನಾಗಿರುತ್ತಿತ್ತು ಎನ್ನಿಸಿದ್ದು! ಕಾರಣ, ಕವಿತೆ ಹುಟ್ಟಿದ ಸಂದರ್ಭ ಕೆಲವೊಮ್ಮೆ ನಮ್ಮನ್ನು ಸುಗ್ಗಿ ಕಣದ ಮೇಟಿಗೆ ಕಟ್ಟಿದ ಎತ್ತಿನಂತೆ ಅಲ್ಲೇ ಸುತ್ತರಗಾಣ ಹೊಡೆಸುತ್ತದೆ. ಕವಿತೆ ಹುಟ್ಟಿದ ಹಿನ್ನೆಲೆ, ಸಂದರ್ಭಗಳ ಆಚೆಗೆ ಹೊರಡಲು ಒಲ್ಲದವರನ್ನಂತೂ ಮೇಟಿಗೇ ಕಟ್ಟಿಹಾಕಿಬಿಡುತ್ತದೆ.  

ಅದೇನೇ ಇರಲಿ, ಕವಿತೆ ಒಂದು ನಿರ್ದಿಷ್ಟ ಸಂದರ್ಭದಲ್ಲಿ ಹುಟ್ಟಿತೋ, ಅಥವಾ ಕವಿಚಿತ್ತದಲ್ಲಿ ಎಷ್ಟೋ ದಿನಗಳಿಂದ, ಎಷ್ಟೋ ವರ್ಷಗಳಿಂದ ಹಾದು ಹೋಗುತ್ತಿದ್ದ ಭಾವಗಳು, ಐಡಿಯಾಗಳು ಆ ಗಳಿಗೆಯಲ್ಲಿ ತಕ್ಕ `ವಸ್ತು ಪ್ರತಿರೂಪ’ವನ್ನು ಕಂಡುಕೊಂಡವೋ…ಹೇಳುವುದು ಕಷ್ಟ! 

ತಮ್ಮ ಕವನ ಸಂಕಲನಗಳ ಕೊನೆಯಲ್ಲಿ ಕವಿತೆಯ ಸಂದರ್ಭಸೂಚಿಗಳನ್ನು ಪ್ರಕಟಿಸುತ್ತಿದ್ದ ಬೇಂದ್ರೆ ಈ ಕುರಿತ ಪ್ರಶ್ನೆಯೊಂದಕ್ಕೆ ಕೊಟ್ಟ ಉತ್ತರ ಕುತೂಹಲಕರವಾಗಿದೆ: ಬೇಂದ್ರೆಯವರ ಕವಿತೆಯೊಂದು ಕಾಲೇಜು ಪಠ್ಯವಾಗಿತ್ತು. ಕನ್ನಡ ಅಧ್ಯಾಪಕರಾಗಿದ್ದ ಬೇಂದ್ರೆಯವರ ಮಗ ವಾಮನ ಬೇಂದ್ರೆ ಕ್ಲಾಸಿನಲ್ಲಿ ಈ ಕವಿತೆಯನ್ನು ಪಾಠ ಮಾಡುವಾಗ ಅರ್ಥದ ತೊಡಕು ಎದುರಾಯಿತು. ಮನೆಗೆ ಬಂದು ತಂದೆಯನ್ನು ಈ ಭಾಗದ ಅರ್ಥವೇನೆಂದು ಕೇಳಿದರು. `ನಂಗೊತ್ತಿಲ್ಲ’ ಎಂದ ಬೇಂದ್ರೆ, ತಬ್ಬಿಬ್ಬಾದ ಪ್ರೊಫೆಸರ್ ಮಗನನ್ನು ಕುಟುಕಿದರು: ‘ನಾನೇನೋ ಮನೆಯಲ್ಲಿ ನಿನಗೆ ಸಿಕ್ಕಿದೆ; ಆ ಕವಿತೆಯ ಅರ್ಥ ಕೇಳಿದೆ. ಪಂಪನ ಕಾವ್ಯದಲ್ಲಿ ಈ ಸಮಸ್ಯೆ ಬಂದರೆ ಅದನ್ನು ಕೇಳಲು ಪಂಪನ ಬಳಿ ಹೋಗುತ್ತೀಯೇನು?’

ಇದು ನಡೆದ ಘಟನೆಯೋ, ಕವಿ ಸುತ್ತಣ ಉಪಕತೆಯೋ ತಿಳಿಯದು. ಆದರೆ ಕವಿತೆಯ ಅರ್ಥ ಕವಿಯಲ್ಲಿದೆಯೋ, ಕವಿತೆಯಲ್ಲಿದೆಯೋ, ಓದುವವರಲ್ಲಿದೆಯೋ ಎಂಬ ಪ್ರಶ್ನೆಯನ್ನು ಈ ಅಂಕಣದಲ್ಲಿ ಪದೇ ಪದೇ ಎದುರಾಗುವ ನನಗೆ ಬೇಂದ್ರೆಯವರ ಉತ್ತರ ಅರ್ಥಪೂರ್ಣ ಎನ್ನಿಸಿತು. ಇಂಗ್ಲಿಷ್ ಕವಿ ವಿಲಿಯಂ ಬ್ಲೇಕ್, `ದಿಸ್ ಪೊಯೆಮ್ ಈಸ್ ಮೈನ್, ಬಟ್ ನಾಟ್ ಮೈನ್’ (`ಈ ಕವಿತೆ ನನ್ನದು; ಆದರೆ ನನ್ನದಲ್ಲ’) ಎಂದಿದ್ದು ನೆನಪಾಗುತ್ತದೆ.  

ಕವಿ ಕೂಡ ತಾನು ಬರೆದ ಕವಿತೆಯ ಸಂದರ್ಭ, ಹಿನ್ನೆಲೆಗಳ ಆಚೆಗಿನ ಹೊಸ ಅರ್ಥ ಕೊಡುವವರನ್ನು ಕಂಡು ಪುಳಕಗೊಳ್ಳುವುದು ಸಹಜ. ಹೊಸ ತಲೆಮಾರಿನ ಕವಿ ದಾದಾಪೀರ್ ಜೈಮನ್ ’ಲೋಕಚರಿತ’ದ ಸಭೆಯಲ್ಲಿ ತಮ್ಮ ಕವಿತೆ ಓದಿದಾಗ, `ನಿಮ್ಮ ಕವಿತೆಯಲ್ಲಿ ಬರುವ ’ಕಾದರು’ ಎಂಬ ಪದಕ್ಕೆ `ಕಾಯುವಿಕೆ’, `ಕಾವು’, `ಬಿಸಿ’ ಎಂಬ ಎರಡುಮೂರು ಅರ್ಥಗಳಿವೆ!’ ಎಂದೆ. ಜೈಮನ್ ಚಕಿತರಾದರು; ಖುಷಿಯಾದರು! 

ಒಂದು ದಿನ `ಕಾವ್ಯಾರ್ಥ ಚಿಂತಾಮಣಿ’ (ಇದು ಇದೀಗ ಹೊಳೆದ ಬಣ್ಣನೆ!) ಕಿ.ರಂ. ನಾಗರಾಜರ ಬೆಂಗಳೂರಿನ ಡಿ.ವಿ.ಜಿ. ರಸ್ತೆಯ ಮನೆಗೆ ಬೇಂದ್ರೆ ಇದ್ದಕ್ಕಿದ್ದಂತೆ ಬಂದಿದ್ದನ್ನು ಕೀರಂ ಹೇಳಿದ ಗಳಿಗೆಯ ಸಂಭ್ರಮದ ಮುಖ ಚೆನ್ನಾಗಿ ನೆನಪಿದೆ. ಬೇಂದ್ರೆಯವರು ಕೀರಂ ತಮ್ಮ ಕವಿತೆಗಳಿಗೆ ಕೊಡುವ ಹೊಸ ಹೊಸ ಅರ್ಥ ಕೇಳಿಸಿಕೊಳ್ಳಲು ಬಂದಿರಲೂಬಹುದು; ಈ ಇಬ್ಬರ `ಮಾತು ಮಾತು ಮಾತು ಮಥಿಸಿ’ ಕಾವ್ಯದ `ನವನೀತ’ ಹುಟ್ಟಿರಬಹುದು… ಇವೆಲ್ಲ ನನ್ನ ಸುಂದರ ಊಹೆಗಳು! ಅವರಿಬ್ಬರ ನಡುವೆ ಏನೇನು ಮಾತುಕತೆ ನಡೆಯಿತೋ…ಅದನ್ನೆಲ್ಲ ಕಿರಂ ಅವತ್ತು ಹೇಳುವುದನ್ನು ಮರೆತರು; ನಾನು ಕೇಳುವುದನ್ನು ಮರೆತೆ. ಮನುಷ್ಯ ಅಮರ ಎಂಬ ಭ್ರಮೆಯಲ್ಲಿ ನಾವು ಕೇಳಬೇಕಾದುದನ್ನು ಕೇಳದೆ ಮುಂದೂಡುತ್ತೇವೆ; ಹಲವರ ವಿಚಾರದಲ್ಲಿ ನನಗೆ ಹೀಗೇ ಆಗಿದೆ ಎನ್ನಿಸಿ ಇವತ್ತು ಪಿಚ್ಚೆನ್ನಿಸಿತು; ಇನ್ನುಮುಂದೆ ಹೀಗೆ ಮಾಡಬಾರದು ಎಂದುಕೊಂಡೆ.

ಕವಿತೆ ಹುಟ್ಟಿದ ಸಂದರ್ಭ ಕುರಿತ ಪ್ರಶ್ನೆಗಳನ್ನು ಕುರಿತು ಈ ಅಂಕಣದಲ್ಲಿ ಆಗಾಗ್ಗೆ ಬರೆದಿರುವೆ. ಕನ್ನಡ ರಿಫ್ರೆಶರ್ ಕೋರ್ಸುಗಳಲ್ಲಿ, ’ಬೇಂದ್ರೆ ತಮ್ಮ ಕವನ ಸಂಕಲನಗಳ ಕೊನೆಯಲ್ಲಿ ಕೊಡುವ ಸಂದರ್ಭಸೂಚಿಗಳು ಬೇಕೋ ಬೇಡವೋ?’ ಎಂದು ಕೇಳುತ್ತಿರುತ್ತೇನೆ. ಬೇಂದ್ರೆ ವಾಮನ ಬೇಂದ್ರೆಗೆ ಕೊಟ್ಟ ಉತ್ತರ ನೋಡಿದರೆ, ಸ್ವತಃ ಬೇಂದ್ರೆ ಕೂಡ ಆ ಸಂದರ್ಭಸೂಚಿಗಳ ಬಗ್ಗೆ ಹೆಚ್ಚು ನಂಬಿಕೆ ಇರಿಸಿಕೊಂಡಿರಲಿಕ್ಕಿಲ್ಲ ಎನ್ನಿಸುತ್ತದೆ! 

ಆದರೂ `ಕವಿತೆ ಓದಲು ಈ ಬಗೆಯ ಸಂದರ್ಭಸೂಚಿಗಳ ಊರುಗೋಲು ಬೇಕು’ ಎಂದು ಹೇಳುವ ಮೇಡಂ, ಮೇಷ್ಟ್ರುಗಳ ಸಂಖ್ಯೆ ದೊಡ್ಡದಿದೆ ಎಂಬುದನ್ನು ಗಮನಿಸಿರುವೆ. `ಪರೀಕ್ಷೆಯಲ್ಲಿ ಉತ್ತರ ಬರೆಯಲು ಇವು ಬೇಕಾಗುತ್ತವೆ’ ಎನ್ನುವವರೂ ಇದ್ದಾರೆ. ಇಂಥವರ ನಡುವೆ ಕವಿತೆಯನ್ನು ಹಿಡಿದು, ಮುಟ್ಟಿ, ನುಡಿಸುವ ಆನಂದಮಯ ಸವಾಲನ್ನೇ ಕೈಗೆತ್ತಿಕೊಳ್ಳದೆ, ಕವಿತೆಯೊಳಗಣ ಪಯಣವನ್ನೇ ಅನುಭವಿಸದೆ, ಬಾಯಿಗೆ ಬಂದದ್ದನ್ನು ಒದರುವ `ಪ್ರೊಫೆಸರ್’ಗಳೂ ಸಾಕಷ್ಟಿದ್ದಾರೆ. ಎಷ್ಟೋ ಕಾಲೇಜು ಕನ್ನಡ ಪಠ್ಯಗಳಲ್ಲಿ ಸಂಪಾದಕರು ಕವಿತೆಗಳಿಗೆ ಬರೆದಿರುವ ವಿವರಣೆ ನೆನಸಿಕೊಂಡರೆ ಗಡಗಡ ನಡುಕ ಹುಟ್ಟುತ್ತದೆ!

ಓದುಗಿ-ಓದುಗ ಸ್ಪಂದನ 

ಹಿಂದೆ ಇದೇ ಅಂಕಣದಲ್ಲಿ `ಅತ್ತಲಿತ್ತ ಹರಿದಾಡುವ ಜಾಣ ಕಣ್ಣು’ (READ HERE) ಎಂಬ ಲೇಖನದಲ್ಲಿ `ಚಿಂತಾಮಣಿಯಲ್ಲಿ ಕಂಡ ಮುಖ’ ಕುರಿತು ಬರೆದಾಗ ಕನ್ನಡ ಪ್ರಾಧ್ಯಾಪಕಿಯೊಬ್ಬರು ಅದಕ್ಕೆ ಮತ್ತೊಂದು ವ್ಯಾಖ್ಯಾನ ಬರೆದಿದ್ದರು: 

`ಭಾಷಣಕಾರರ ಹಾಗೆಯೇ ಕೇಳುಗರಿಗೂ ಭಾಷಣಕಾರ ಇಷ್ಟವಾದರೆ, ಅವರು ನಮ್ಮ ಕಡೆ ನೋಡಿಕೊಂಡು ಮಾತಾಡಲಿ ಅನ್ನಿಸುತ್ತೆ! ಹಾಗಾದಾಗ, ಆತನಕ ಇದ್ದ ನಮ್ಮ ಭಂಗಿಯನ್ನು ಸರಿ ಮಾಡಿಕೊಳ್ಳುವುದೋ; ಆತನಕ ಇರದಿದ್ದ ಗಾಂಭೀರ್ಯ ಇದ್ದಕ್ಕಿದ್ದ ಹಾಗೆ ಬಂದಂತೆಯೋ; ಒಂಥರಾ ಅಸ್ವಸ್ಥತೆ ಉಂಟಾದಂತೆಯೋ…ಹೀಗೆಲ್ಲ ಆಗಿದೆ. ಅದರಲ್ಲೂ ನನ್ನ ಇಷ್ಟದ, ನಾನು ಗೌರವಿಸುವ, ಅಭಿಮಾನ ಪಡುವ ಗುರುಗಳು ಮಾತಾಡುವಾಗ ಹಾಗನ್ನಿಸಿರೋದುಂಟು. ಇದು ಕೇಳುಗರ angle.’    

ನಾನು ಈ ದಿಕ್ಕಿನಲ್ಲಿ ಯೋಚಿಸಿರಲೇ ಇಲ್ಲ! ಪುಳಕ ಹುಟ್ಟಿತು. ಪ್ರತಿಭೆ ಕುರಿತ ಭಾರತೀಯ ಕಾವ್ಯಮೀಮಾಂಸೆಯಲ್ಲಿ ನವ ನವ ಅರ್ಥಗಳನ್ನು ಹೊಳೆಯಿಸುವುದು; ಹೇಳುವ ನವ ನವ ರೀತಿಗಳನ್ನು ಹೊಳೆಯಿಸುವುದು ಎರಡೂ ಪ್ರತಿಭೆಯ ಕೆಲಸವೇ ಎನ್ನುತ್ತಾರೆ. ಈ ಮಾತು ಓದುಗಿಯರ, ಓದುಗರ ಪ್ರತಿಭೆಗೂ ಅನ್ವಯಿಸುತ್ತದೆ. ಪ್ರತಿಭೆ ಕುರಿತ ಈ ವ್ಯಾಖ್ಯಾನಗಳು ಸಂಸ್ಕೃತದಲ್ಲಿವೆ ಎಂದೋ, ಕೋಲರಿಜ್‌ನ ಪ್ರತಿಭೆಯ ವ್ಯಾಖ್ಯಾನ ಇಂಗ್ಲಿಷಿನಲ್ಲಿದೆ ಎಂದೋ ಕಣ್ಣು ಕಿವಿ ಮುಚ್ಚಿಕೊಂಡರೆ, ನಷ್ಟ ನಮಗೇ ಹೊರತು, ಎಂದೋ ತೀರಿಹೋದ ಆ ಕಾವ್ಯತತ್ವಜ್ಞಾನಿಗಳಿಗಲ್ಲ! 

ಬ್ಲಾಗ್ ಫಾಲೋ ಮಾಡಲು ಒಪ್ಪಿ, ಕ್ಲಿಕ್ ಮಾಡಿ; ನೋಟಿಫಿಕೇಶನ್ ಪಡೆಯಿರಿ, ಶೇರ್ ಮಾಡಿ: FOLLOW
ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com 
ಬಿಡುವಾದಾಗ ನೋಡಿ, ಶೇರ್ ಮಾಡಿ:  YOUTUBE LINK 

Share on:

Comments

8 Comments



| Vasa

ಬೇಂದ್ರೆಯವರು ವಾಮನ ಬೇಂದ್ರೆಯವರೀಗೆ ಕೊಟ್ಟ ಉತ್ತರ ಸರ್ವಕಾಲಿಕ ಸತ್ಯ


| Dr.Muthegowda

ಕಿ ರಂ ಮತ್ತು ಬೇಂದ್ರೆ ಯವರ ಮಾತುಗಳಂತೆ ಬಹಳಷ್ಟು ಸ್ವಾರಸ್ಯಕರವಾದ ಸಂಭಾಷಣೆಗಳು ನಮ್ಮ ಬದುಕಿಗೆ ಅವಶ್ಯಕ ಎಂದರೆ ನಟರಾಜ್ ಹುಳಿಯಾರ್ ಅವರ ಜೊತೆ ಮಾತಾಡುತ್ತಾ ಕುಳಿತರೆ ಸಾಕು ಹಲವಾರು ಆಯಾಮಗಳಿಗೆ ನಮ್ಮನ್ನು ಕರೆದೊಯ್ಯುತ್ತಾರೆ. ಧನ್ಯವಾದಗಳು ಸರ್


| Dr.Muthegowda

ಕೀ ರಂ ಮತ್ತು ಬೇಂದ್ರೆ ಯವರ ಮಾತುಗಳಂತೆ ಬಹಳಷ್ಟು ಸ್ವಾರಸ್ಯಕರವಾದ ಸಂಭಾಷಣೆಗಳು ನಮ್ಮ ಬದುಕಿಗೆ ಅವಶ್ಯಕ ಎಂದರೆ ನಟರಾಜ್ ಹುಳಿಯಾರ್ ಅವರ ಜೊತೆ ಮಾತಾಡುತ್ತಾ ಕುಳಿತರೆ ಸಾಕು ಹಲವಾರು ಆಯಾಮಗಳಿಗೆ ನಮ್ಮನ್ನು ಕರೆದೊಯ್ಯುತ್ತಾರೆ. ಧನ್ಯವಾದಗಳು ಸರ್


| ಮಾಲತಿ ಪಟ್ಟಣಶೆಟ್ಟಿ

ಕವಿತೆಯನ್ನು ಕಲಿಸುವವರಲ್ಲಿ ಪ್ರತಿಭೆ ಇರಬೇಕಾದ ಅಗತ್ಯ ಇದೆ.. ಕವಿತಾ ರಚನೆ ಮಾಡಿದ ಸ್ಥಳ, ಸಂದರ್ಭ ಇತ್ಯಾದಿಗಳ ಅಗತ್ಯ ತಿಳಿ ಯ ಬೇಕಿಲ್ಲ ಅನ್ನಿಸುತ್ತದೆ. ಕವಿತೆಯನ್ನು ಓದಿ ಓದಿ ತಾವೇ ಸೃಷ್ಟಿ ಸಿಕೊಳ್ಳ ಬೇಕು. ಕವಿಯಲ್ಲಿ ಏಕಾತ್ಮ ನಾಗಿ ಅನುಭವಿಸಿ ಹೊಸ ಅರ್ಥ ಗಳನ್ನೂ ಕಂಡು ಕೊಂಡು ಆನಂದಿಸಾಬೇಕು


|


| ಡಾ. ನಿರಂಜನ ಮೂರ್ತಿ ಬಿ ಎಂ

\'ಕವಿಮೂಲ;ಕಾವ್ಯಮೂಲ\'ದ ಎರಡು ಪ್ರಸಂಗಗಳು ಮನಮುಟ್ಟಿದವು. ದ.ರಾ. ಬೇಂದ್ರೆಯವರು ಪುತ್ರ ವಾಮನ ಬೇಂದ್ರೆಯವರಿಗೆ ಕೊಟ್ಟ ಉತ್ತರ ನೂರ್ಕಾಲ ಮನದಲ್ಲಿ ಉಳಿಯುತ್ತದೆ. ಹೌದಲ್ಲವೆ, ಸಾಮಾನ್ಯ ಓದುಗ-ಓದುಗಿಗೆ ಎದುರಿರುವ ಕವಿತೆ ಬಿಟ್ಟು, ಆ ಕವಿತೆಯ ಕರ್ತನ ಮೂಲವಾಗಲಿ ಅಥವಾ ಆ ಕವಿತೆಯ ಹುಟ್ಟಿಗೆ ಕಾರಣವಾದ ಮೂಲ (ಸಂದರ್ಭ)ವಾಗಲಿ ಗೊತ್ತಾಗುವುದೇ ಇಲ್ಲ. ಮತ್ತು ಅದರ ಅವಶ್ಯಕತೆಯೂ ಇಲ್ಲ. ಸಂದರ್ಭಸೂಚಿಗಳೂ ಈ ದಿಸೆಯಲ್ಲಿ ಅಲ್ಪ ಸಹಾಯವನ್ನಲ್ಲದೆ ಹೆಚ್ಚಿನದೇನನ್ನೂ ಮಾಡಲಾರವು. ಎದುರಿಗಿರುವ ಕವಿತೆಯೇ ಎಲ್ಲ ಅರ್ಥಗಳನ್ನೂ ಬಿಚ್ಚಿಡಬೇಕು ಅಥವಾ ಆ ಓದುಗ-ಓದುಗಿಯೇ ಬಿಚ್ಚಿಸಬೇಕು. ಈ ಪ್ರಯತ್ನದಲ್ಲಿ ಕವಿತೆಯ ಮೂಲಕ ಕವಿ ಹೇಳಿರುವ ಅರ್ಥಕ್ಕಿಂತ ಭಿನ್ನವಾದ ಹೊಸ ಅರ್ಥಗಳು ಮತ್ತು ಹೊಸ ಒಳನೋಟಗಳು ಗೋಚರಿಸಬಹುದು. ಕವನ, ಕವಿತೆ, ಕಾವ್ಯ ಹಾಗಿದ್ದರೇನೇ ಚೆಂದ. ಆಗ ಅದು ಓದುಗ-ಓದುಗಿಯ ಅಂತರಂಗಕ್ಕಿಳಿಯಬಹುದು! ಇಂತಹ ಸೂಕ್ಷ್ಮ ವಿಚಾರಗಳ ಬಗ್ಗೆ ಬರೆದಿರುವ ಹುಳಿಯಾರರಿಗೆ ನಮನಗಳು.


|


| DEVENDRAPPA

ಕವಿಮೂಲ; ಜಾವ್ಯಮೂಲ ಲೇಖನವು ಕವಿಯ ಕಾವ್ಯ ರಚನೆಯ ಹಿಂದಿನ ಸಂದರ್ಭವನ್ನು ಎರಡು ಮೂರು ಪ್ರಸಂಗಗಳಲ್ಲಿ ಹೇಳಿದ್ದೀರಿ. ಅನುಭವದ ಮೇಷ್ಟ್ರುಗಳು ಇದ್ದರೆ ಅವರ ಓದಿನ ಹಿನ್ನೆಲೆಯಲ್ಲಿ ಪಾಠ ಮಾಡುವ ಸಂದರ್ಭದಲ್ಲಿ ಕಾವ್ಯ ರಚನೆಯ ಸಂದರ್ಭ ಹೇಳಿದ್ದಾರೆ. ಆದರೆ ಒಬ್ಬ ಸಹೃದಯಿ ಓದುಗ ಒಂದು ಕವಿತೆಯನ್ನು ಓದುವಾಗ ಅವನಿಗೆ ತನ್ನದೇ ಪರಿಸರ, ತನ್ನ ಊರು, ಕುಟುಂಬ, ಸ್ನೇಹಿತ ವಲಯ ಕಣ್ಣ ಮುಂದೆ ಬರುತ್ತದೆ. ಉದಾಹರಣೆಗೆ ಬೇಂದ್ರೆ ಅವರ \'ನೀ ಹಿಂಗ ನೋಡಬ್ಯಾಡ ನನ್ನ \' ಕವಿತೆ ಇಂದಿಗೂ ಎಲ್ಲರ ಬಾಯಲ್ಲಿ ಫೆಮೇಸ್ ಕವಿತೆ. ಅದು ಹುಟ್ಟಿದ ಸಂದರ್ಭ ನೋಡಿದರೆ ಬೇಂದ್ರೆ ಅವರ ಮಗನ ಸಾವು. ಹೆಂಡತಿಗೆ ಸಮಾಧಾನ ಮಾಡಲು ಆ ಪದ್ಯವನ್ನು ಹಾಡುತ್ತಾರೆ. ಆದರೆ ಇಂದಿನ ಅನೇಕ ಯುವ ಮನಸ್ಸುಗಳು ಆ ಪದ್ಯವನ್ನು ಪ್ರೇಮ ಪದ್ಯವನ್ನಾಗಿ ಮಾಡಿಕೊಂಡಿದ್ದಾರೆ. ವಿಲಿಯಂ ಬ್ಲೇಕ್ ಹೇಳುವುದರಲ್ಲಿ ಸತ್ಯವಿದೆ. ಈ ಕವಿತೆ ನನ್ನದು, ಆದರೆ ನನ್ನದಲ್ಲ. ಬೇಂದ್ರೆ ಅವರ ಅನೇಕ ಕವಿತೆಗಳ ಬಗ್ಗೆ ಈಗಲೂ ಚರ್ಚೆ ಆಗುತ್ತಲೇ ಇದೆ. ಅವರ ಇನ್ನೂ ಯಾಕ ಬರಲಿಲ್ಲವ್ವ ಹುಬ್ಬಳ್ಳಿಯಾಂವ ಕವಿತೆ ಅವರ ಕಾಲಕ್ಕೆ ಅವರನ್ನು ಕೇಳಿ ಉತ್ತರ ಪಡೆಯಲಾಗಿತ್ತು. \r\nಒಂದು ಕಾವ್ಯ ಓದಿದಾಗ ಅದು ಹುಟ್ಟಿಸುವ ಅರ್ಥವೇ ಬೇರೆ. ಮೂಲ ಅರ್ಥ ಬರಬೇಕು ಎನ್ನುವುದು ಓದುಗನ ದೃಷ್ಟಿಯಲ್ಲಿ ಸರಿಯಾದುದು ಅಲ್ಲ. ಇಂದಿನ ದಿನಮಾನದಲ್ಲಿ ಕನ್ನಡದ ಎಷ್ಟೋ ಕವಿತೆಗಳು ರಚನೆಗೊಂಡ ಸಂಧರ್ಭಕ್ಕೂ ಅವುಗಳನ್ನು ಹಾಡುವ ಸಂದರ್ಭಕ್ಕೂ ತೀರಾ ಭಿನ್ನತೆ ಇದೆ. ಅದೇನೇ ಇರಲಿ ಒಟ್ಟಿನಲ್ಲಿ ಕವಿತೆಯ ಆಶಯ ರಚನೆಕಾರರಿಗಿಂತ ಓದುಗರಾದ ನಮ್ಮದೇ ಆಗಿದೆ. ಬರೆದವರು ಒಬ್ಬರು, ಹಾಡಿದವರು ಸಾವಿರಾರು ಜನ. ಹಾಡುವ ಕವಿತೆಗೆ ಸಾವಿರ ನದಿಗಳು. \r\n




Add Comment






Recent Posts

Latest Blogs



Kamakasturibana

YouTube