ಅತ್ತಲಿತ್ತ ಹರಿದಾಡುವ ಮನಸಿನ ಜಾಣ ಕಣ್ಣು!  

ನಮ್ಮ ಮನಸ್ಸಿಗೆ ಪ್ರಿಯವಾದ ವಸ್ತುವಿನ ಬಗ್ಗೆ ಸಾರ್ವಜನಿಕ ಭಾಷಣ ಮಾಡುವಾಗಲೆಲ್ಲ ಆ ಮಾತುಗಳನ್ನು ಕೇಳಲು ತಕ್ಕ ಮುಖಗಳನ್ನು ಚಿತ್ತ ಹುಡುಕುತ್ತಿರುತ್ತದೆ; ನಮ್ಮ ಕಣ್ಣು ಸಭಾಂಗಣದ ಉದ್ದಗಲಕ್ಕೂ ಹರಿದಾಡುತ್ತಿರುತ್ತದೆ; ನಮ್ಮ ‘ಭಾಷಣಮಗ್ನ ಮನಸ್ಸು’ ತಂಗಲು ತಕ್ಕ ತಾಣವನ್ನು ಅರಸುತ್ತಿರುತ್ತದೆ.

ಭಾಷಣಮಗ್ನ ಮನಸ್ಸಿನ ಇಂಥ ಹರಿದಾಟಗಳನ್ನು ಗೋಪಾಲಕೃಷ್ಣ ಅಡಿಗರ ‘ಚಿಂತಾಮಣಿಯಲ್ಲಿ ಕಂಡ ಮುಖ’ ಕವಿತೆಗಿಂತ ಚೆನ್ನಾಗಿ ಹೇಳಿದ ಕನ್ನಡ ಕವಿತೆಯನ್ನು ನಾನಂತೂ ಕಂಡಿಲ್ಲ. ನಿಜವಾದ ಕವಿಯ ಶಕ್ತಿ ಅದು. ಶಕ್ತ ಕವಿಯಲ್ಲಿ ಎಂಥ ಸಂದರ್ಭ ಬೇಕಾದರೂ ಕಾವ್ಯಸಂದರ್ಭವಾಗುತ್ತದೆ. ಕುಂಬಾರನ ಕೈಲಿ ಮಣ್ಣು ಏನೇನೋ ಆಕಾರ ಪಡೆಯುವ ಹಾಗೆ ಅಸಲಿ ಕವಿಯ ಭಾಷೆ ನಾದದಲ್ಲಿ, ಹೊರಳುವಿಕೆಯಲ್ಲಿ, ಶಬ್ದ ನಿಶ್ಶಬ್ದಗಳಲ್ಲಿ ಹಲ ಬಗೆಯ ಆಕಾರ ಪಡೆಯುತ್ತಿರುತ್ತದೆ. ಆಗ ಏನು ಬೇಕಾದರೂ ಕಾವ್ಯವಾಗುತ್ತದೆ! 

ಜಗತ್ತಿನ ದೊಡ್ಡ ಕವಿಗಳಲ್ಲೊಬ್ಬನಾದ ವಿಲಿಯಂ ಬಟ್ಲರ್ ಯೇಟ್ಸ್ ಕೂಡ ಒಂದು ಭಾಷಣದ ಸಂದರ್ಭವನ್ನು ಕವಿತೆ ಮಾಡುತ್ತಾ, ‘ಈ ಭಾಷಣ ಗೀಷಣ ಬಿಟ್ಟು ಅಲ್ಲಿ ಕೂತಿರುವ ಆ ಹುಡುಗಿಯನ್ನು ಅಪ್ಪಿಕೊಳ್ಳುವಂತಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು!’ ಎಂಬರ್ಥದ ಮಾತುಗಳನ್ನು ಬರೆಯುತ್ತಾನೆ. ಆ ಗಳಿಗೆಯಲ್ಲಿ ‘ಅತ್ತಲಿತ್ತ ಹರಿದಾಡುವ ಮನಸಿಗೆ ಮಚ್ಚಿಲ್ಹೊಡೆದು ನಿಲ್ಲಿಸು ಜಾಣ’ ಎಂಬ ಶಿಶುನಾಳ ಶರೀಫನ ಬುದ್ಧಿಮಾತನ್ನು, ಕವಿಯ ಕಿವಿಯಲ್ಲಿ ಯಾರೂ ಉಸುರಿದಂತಿಲ್ಲ! ಶರೀಫ ತೀರಿಕೊಂಡಾಗ ಯೇಟ್ಸ್ ಮೂವತ್ನಾಲ್ಕು ವರ್ಷದ ಪ್ರಖರ ಕವಿಯಾಗಿದ್ದ.

ಅದಿರಲಿ, ಮೇಲೆ ಹೇಳಿದ ಯೇಟ್ಸ್ ಕವಿತೆಯಲ್ಲಿ ಭಾಷಣಕಾರನಿಗೆ ಭಾಷಣದ ನಡುವೆ ಕಾಣಿಸಿಕೊಳ್ಳುವ ಈ ರೊಮ್ಯಾಂಟಿಕ್ ಬಯಕೆ ಸರಿಯಲ್ಲ ಎಂದು ಯಾವ ಮಹನೀಯರೂ ಭಿನ್ನಮತ ವ್ಯಕ್ತಪಡಿಸಿದಂತಿಲ್ಲ! 

ಶರೀಫರ ಮಾತನ್ನು ಯೇಟ್ಸ್ ಕೇಳಿಸಿಕೊಳ್ಳುತ್ತಿದ್ದನೋ ಇಲ್ಲವೋ, ಆದರೆ ಸ್ವತಃ ಶರೀಫನೇ ತನ್ನ ಮಾತನ್ನು ತಾನೇ ಕೇಳಿಸಿಕೊಳ್ಳುತ್ತಿದ್ದನೇ ಎನ್ನುವುದೇ ಅನುಮಾನ! ಗುರು ಗೋವಿಂದಭಟ್ಟರೇ ಶರೀಫನ ಮನಸ್ಸು ಅತ್ತಲಿತ್ತ ಹರಿದಾಡದಂತೆ ನೋಡಿಕೊಳ್ಳಬೇಕೆಂದು ತಾಕೀತು ಮಾಡಿದ್ದರೂ ಕಿಲಾಡಿ ಕವಿ ಶರೀಫ ಅದನ್ನೆಲ್ಲ ಕೇಳಿಸಿಕೊಳ್ಳುವ ಆಸಾಮಿಯಾಗಿರಲಿಲ್ಲ! ಯಾಕೆಂದರೆ, ಅವನೊಳಗಿನ ಕವಿಯು ಹಾವು ತುಳಿದ ಮಾನಿನಿ, ಹುಬ್ಬಳ್ಳಿ ಕೊಡದ ಮಾಟದಂಥ ಹುಡುಗಿ...ಎಲ್ಲರನ್ನೂ ನೋಡಿ ನೋಡಿ ತನ್ನ ‘ಪದ ಬರಕೋ’ಬೇಕಾಗಿತ್ತಲ್ಲ! 

ಶರೀಫರು ಕನ್ನಡ ಭಾಷೆಯನ್ನು ಆಧುನಿಕವಾಗಿ ಬಳಸಿ ಬರೆದ ಸುಮಾರು ನೂರು ವರ್ಷಗಳ ನಂತರ ‘ಚಿಂತಾಮಣಿಯಲ್ಲಿ ಕಂಡ ಮುಖ’ ಬರೆದ ಅಡಿಗರ ಕವಿತೆಯಲ್ಲಿ ನಿರೂಪಕನ ಭಾಷಣಮಗ್ನ ಮನಸ್ಸು ಶರೀಫರ ಮಾತು ಕೇಳದೆ ಅತ್ತಲಿತ್ತ ಹರಿದಾಡುತ್ತಲೇ ಇತ್ತು:

ಚಿಂತಾಮಣಿಯ ಸಭಾಂಗಣದಲ್ಲಿ ಭಾಷಣಮಗ್ನ 
ಮನಸ್ಸು, ಮನಸ್ಸಿನ ಶೇಕಡಾ ತೊಂಬತ್ತು ಪಾಲು; ಕಣ್ಣು 
ಹಾಯುತ್ತಿತ್ತು ಮುಖದಿಂದ ಮುಖಕ್ಕೆ, ಹುಡುಕುತ್ತಿತ್ತು 
ರೇವುಳ್ಳ ನಡುಗಡ್ಡೆಯೊಂದ, ತಂಗಲು ನಿಮಿಷ; ತಂಗಿ
ಅಂತರಂಗದ ಅನಂಗ ಭಂಗಿಗೆ ತಕ್ಕ ಭಂಗಿ, ದೃಷ್ಟಿಗೆ ದೃಷ್ಟಿ,
ಬಡಿತಕ್ಕೆ ತಕ್ಕ ಪ್ರತಿ ಬಡಿತ ಕೊಡುವಿನ್ನೊಂದು
ಸಮ ಹೃದಯದ ನಿಗೂಢ ಸಹಕಂಪನದ ರೋಮಾಂಚ
ಪ್ರತಿಫಲಿಸಬಲ್ಲೊಂದು ಮುಖವ.

ದಶಕಗಳ ಕೆಳಗೆ ಈ ಕವಿತೆಯನ್ನು ಮೊದಲ ಬಾರಿಗೆ ಓದಿದಾಗಿನಿಂದಲೂ ಮತ್ತೆ ಮತ್ತೆ ಸುಳಿಯುತ್ತಲೇ ಇರುವ ‘ಭಾಷಣಮಗ್ನ ಮನಸ್ಸು’, ’ಅಂತರಂಗದ ಅನಂಗ ಭಂಗಿಗೆ ತಕ್ಕ ಭಂಗಿ’, ತಂಗಲು ’ರೇವುಳ್ಳ ನಡುಗಡ್ಡೆಯೊಂದ’ ಮುಂತಾದ ನುಡಿಚಿತ್ರಗಳು; ಭಾಷಣಕಾರನ ಏಕಾಂಗಿ ಕಣ್ಣು ಸಭಾಂಗಣದಲ್ಲಿ ಹರಿದಾಡುವ ರೀತಿ...ಎಲ್ಲವೂ ನನ್ನೊಳಗೆ ಉಳಿದುಬಿಟ್ಟಿವೆ. 

ಎಂಟು ವರ್ಷಗಳ ಕೆಳಗೆ ಒಂದು ತಂಪಾದ ಮಧ್ಯಾಹ್ನ ‘ಚಿಂತಾಮಣಿಯಲ್ಲಿ ಕಂಡ ಮುಖ’ ಕವಿತೆಯ ಅನುಭವವನ್ನು ಬೆಂಗಳೂರಿನ ಜ್ಞಾನಭಾರತಿಯ ಕನ್ನಡ ಹುಡುಗಿಯರು, ಹುಡುಗರಿಗೆ ದಾಟಿಸಲೆತ್ನಿಸುತ್ತಿದ್ದೆ; ಆಗ ಇದ್ದಕ್ಕಿದ್ದಂತೆ ಅಂಥದೊಂದು ಪರಮಾಪ್ತ ಮುಖದ ಹುಡುಕಾಟವನ್ನು ನನ್ನ ಕಣ್ಣು ಕೂಡ ಆರಂಭಿಸಿದ್ದು ನೆನಪಾಗುತ್ತದೆ. 

ಹಲವು ಸಲ ವೇದಿಕೆಯ ಮೇಲೆ ನಿಂತಾಗ ಒಂದಲ್ಲ ಒಂದು ರೀತಿಯಲ್ಲಿ ಪ್ರತ್ಯಕ್ಷವಾಗುವ ‘ಚಿಂತಾಮಣಿಯಲ್ಲಿ ಕಂಡ ಮುಖ’ದ ಈ ಪ್ರತಿಮೆಗಳು ಈಚೆಗೆ ಮತ್ತೆ ನನ್ನೆದುರು ಮೂಡತೊಡಗಿದವು. ಗುಲಬರ್ಗಾದ ಸೆಂಟ್ರಲ್ ಯೂನಿವರ್ಸಿಟಿಯ ಹುಡುಗ, ಹುಡುಗಿಯರಿಗೆ ಅಂಬೇಡ್ಕರ್ ಕುರಿತು ಮಾತಾಡುವ ಮುನ್ನ ನನ್ನ ‘ಭಾಷಣಮಗ್ನ ಮನಸ್ಸು’ ಅಡಿಗರ ಕವಿತೆಯ ನಿರೂಪಕನ ಥರವೇ ‘ಹುಡುಕುತ್ತಿತ್ತು ತಂಗಲು ರೇವುಳ್ಳ ನಡುಗಡ್ಡೆಯೊಂದ.’ 

ಆದರೆ ಅವತ್ತು ಒಂದು ವ್ಯತ್ಯಾಸವಿತ್ತು. ಇಪ್ಪತ್ತೊಂದನೆಯ ಶತಮಾನದಲ್ಲಿ ಅಂಬೇಡ್ಕರ್ ಬಗ್ಗೆ ಮಾತಾಡಲು ನಿಂತಿದ್ದ ಅಧ್ಯಾಪಕನೊಬ್ಬ ಅಡಿಗರ ಕವಿತೆಯ ಭಾಷಣಕಾರನಂತೆ ‘ಒಂದು’ ಮುಖವನ್ನು ಹುಡುಕಬೇಕಾಗಿರಲಿಲ್ಲ. ಅಲ್ಲಿ ಅಂಬೇಡ್ಕರ್ ಸ್ಫೂರ್ತಿಯಿಂದ ಛಾರ್ಜ್ ಆದ ಒಂದಲ್ಲ, ನೂರು, ನೂರಾರು ಮುಖಗಳಿದ್ದವು! ಸೆಂಟ್ರಲ್ ಯೂನಿವಿರ್ಸಿಟಿಯ ಲೈಬ್ರರಿಯ ಉದ್ಯೋಗಿ ಹರಿಶ್ಚಂದ್ರ ಡೋನಿ ಲತಾ ಮಂಗೇಶ್ಕರ್‍ ಅವರ ‘ಪಂಖ್ ಹೋತಿ ತೊ ಉಡ್ ಆತಿ ರೇ’ ಧಾಟಿ ಅನುಸರಿಸಿ ಅಂಬೇಡ್ಕರ್  ಮೇಲೆ ಹಾಡು ಕಟ್ಟಿ ಹಾಡಿದ್ದ… 

ಆಗ ಇದ್ದಕ್ಕಿದ್ದಂತೆ ಇದೇ ಅಂಕಣದಲ್ಲಿ (READ HERE) ಅಂಬೇಡ್ಕರ್ ಜಯಂತಿಯಂದು ಸಿದ್ಧಲಿಂಗಯ್ಯನವರ ‘ಅಂಬೇಡ್ಕರ್’ ಕವಿತೆಯ ಪಂಕ್ತಿಯ ಪದವೊಂದನ್ನು ಹೊಸ ಗಾಯಕರು ಬದಲಿಸಿ ಹಾಡಿದ್ದನ್ನು ಕುರಿತು ಬರೆದದ್ದು ನೆನಪಾಯಿತು. ಆ ಅಂಕಣದಲ್ಲಿ ಪ್ರಸ್ತಾಪಿಸಿದ್ದ ಸಿದ್ಧಲಿಂಗಯ್ಯನವರ ಕವಿತೆ ಕೊನೆಗೆ ಬಾಬಾಸಾಹೇಬರನ್ನು ಕೇಳುತ್ತದೆ:

ಮಲಗಿದ್ದವರ ಕೂರಿಸಿದೆ 
ನಿಲಿಸುವವರು ಯಾರೋ?
ಛಲದ ಜೊತೆಗೆ ಬಲದ ಪಾಠ 
ಕಲಿಸುವವರು ಯಾರೋ?  

ಇಪ್ಪತ್ತನೆಯ ಶತಮಾನದ ತೊಂಬತ್ತರ ದಶಕದ ಕೊನೆಯಲ್ಲಿ ಬಹುಜನ ಸಮಾಜ ಪಕ್ಷದ ರಾಜಕಾರಣ ಗಟ್ಟಿಯಾಗಿ ಬೆಳೆಯುತ್ತಿದ್ದ ಕಾಲದಲ್ಲಿ ಕೆಲವು ಹಾಡುಗಾರರು ಇದನ್ನು ಬದಲಿಸಿ ಹಾಡತೊಡಗಿದ ರೀತಿಯನ್ನೂ ಅದೇ ಅಂಕಣದಲ್ಲಿ ಉಲ್ಲೇಖಿಸಿದ್ದೆ:

ಮಲಗಿದ್ದವರ ಕೂರಿಸಿದೆ
ನಿಲಿಸುವವರು ನಾವು 
ಛಲದ ಜೊತೆಗೆ ಬಲದ ಪಾಠ 
ಕಲಿಸುವವರು ನಾವು. 

ಈ ಬದಲಾವಣೆ ಹೇಗಾಯಿತು ಎಂಬುದನ್ನು ಅವತ್ತು ಅಂಬೇಡ್ಕರ್ ಜನ್ಮದಿನದ ಅಂಕಣದಲ್ಲಿ ಊಹಿಸಲೆತ್ನಿಸಿದ್ದ ನನಗೆ ಗುಲಬರ್ಗಾದ ಸಭೆಯಲ್ಲಿ ಮತ್ತೊಂದು ಕಾರಣ ಹೊಳೆಯಿತು. ಗೆಳೆಯ ಅಪ್ಪಗೆರೆ ಸೋಮಶೇಖರ್ ಹೇಳಿದಂತೆ `ಅಂಬೇಡ್ಕರ್ ಜಯಂತಿಯನ್ನು ಹೊಸ ಬಟ್ಟೆ ತೊಟ್ಟು ಹಬ್ಬದಂತೆ ಆಚರಿಸುವ ಗುಲಬರ್ಗಾದಲ್ಲಿ’, ನಾನೇ ಕಂಡಂತೆ ಆಟೋಗಳ ಮೇಲೆ ‘ಜೈ ಭೀಮ್’ ಎದ್ದು ಕಾಣುವ ಗುಲಬರ್ಗಾದಲ್ಲಿ, ಈ ಕಾರಣ ಹೊಳೆದದ್ದು ಮತ್ತೂ ವಿಶೇಷವಾದುದು!  

ಸಿದ್ಧಲಿಂಗಯ್ಯನವರ ಪದ್ಯ ಐವತ್ತು ವರ್ಷಗಳ ಹಿಂದೆ ಕೇಳಿದ್ದ ‘ಯಾರು?’ ಎಂಬ ಪ್ರಶ್ನೆಗೆ, ಹೊಸ ದಲಿತ ಹಾಡುಗಾರರು ‘ನಿಲಿಸುವವರು ನಾವು, ಕಲಿಸುವವರು ನಾವು’ ಎಂದು ಆತ್ಮವಿಶ್ವಾಸದಿಂದ ಹಾಡಿದ್ದು ಹೇಗೆ ಎಂಬ ಪ್ರಶ್ನೆಗೆ ಗುಲಬರ್ಗಾದಲ್ಲಿ ಹೊಸ ಉತ್ತರ ಸಿಕ್ಕಿತು!

ಆ ಉತ್ತರ ಹೊಳೆದ ಗಳಿಗೆ ಇದು: ಅದೇ ಆಗ ಸೆಂಟ್ರಲ್ ಯೂನಿವರ್ಸಿಟಿಯ ‘ಅಂಬೇಡ್ಕರ್’ ಸಮಾರಂಭದ ಆರಂಭದಲ್ಲಿ ಅನನ್ಯ ಎಂಬ ಜಾಣ ಹುಡುಗಿ ಸಂವಿಧಾನದ ಪೀಠಿಕೆಯನ್ನು ಸಭಿಕರಿಗೆ ಬೋಧಿಸಿದ್ದಳು: ‘ವಿ ದ ಪೀಪಲ್ ಆಫ್ ಇಂಡಿಯಾ’ ಎಂಬ ಈ ಪ್ರತಿಜ್ಞೆಯನ್ನು ವೇದಿಕೆಯ ಮೇಲಿದ್ದ ಅತಿಥಿಗಳು, ಸಭೆಯಲ್ಲಿದ್ದ ಹುಡುಗಿಯರು, ಹುಡುಗರು, ಮೇಡಂಗಳು, ಮೇಷ್ಟ್ರುಗಳು, ವಿಶ್ವವಿದ್ಯಾಲಯದ ಸಿಬ್ಬಂದಿ ಎಲ್ಲರೂ ಸ್ವೀಕರಿಸಿದ್ದರು.

‘ವಿ ದ ಪೀಪಲ್ ಆಫ್ ಇಂಡಿಯಾ’ ಪ್ರತಿಜ್ಞೆಯನ್ನು ಸ್ವೀಕರಿಸುತ್ತಿದ್ದ ಈ ಹೊಸ ಮುಖಗಳನ್ನು ನೋಡನೋಡುತ್ತಾ ಮಾತು ಶುರು ಮಾಡಿದ ಈ ಅಂಕಣಕಾರನ ಭಾಷಣಮಗ್ನ ಮನಸ್ಸಿನಲ್ಲಿ ‘ಅಂಬೇಡ್ಕರ್’ ಪದ್ಯದ ಹೊಸ ಓದು ಮೊಳೆಯಿತು: ಯೆಸ್! ಸಿದ್ಧಲಿಂಗಯ್ಯನವರ ಪದ್ಯದಲ್ಲಿರುವ ‘ಯಾರು?’ ಎಂಬ ಪ್ರಶ್ನೆಗೆ ಹೊಸ ಹಾಡುಗಾರರು ‘ನಾವು’ ಎಂದು ಉತ್ತರಿಸಲು ‘ವಿ ದ ಪೀಪಲ್ ಆಫ್ ಇಂಡಿಯಾ’ ಘೋಷಣೆಯೂ ಕಾರಣವಿರಬಹುದು! ಅಂದರೆ, ಹೊಸ ದಲಿತ ಹಾಡುಗಾರರಿಗೆ ‘ಛಲದ ಜೊತೆಗೆ ಬಲದ ಪಾಠ ಕಲಿಸುವವರು ನಾವು’ ಎಂಬ ಆತ್ಮವಿಶ್ವಾಸ ನಮ್ಮ ಸಂವಿಧಾನದಿಂದಲೇ ಹುಟ್ಟಿದೆ!

ಈ ಸಲ ಸಮಾಜಕಲ್ಯಾಣ ಇಲಾಖೆಯನ್ನು ವಹಿಸಿಕೊಂಡ ತಕ್ಷಣ ಶಾಲಾಕಾಲೇಜುಗಳಲ್ಲಿ ಸಂವಿಧಾನದ ಪೀಠಿಕೆಯ ಓದನ್ನು ಜಾರಿಗೊಳಿಸಿದ ಹಿರಿಯ ಸಚಿವರಾದ ಎಚ್.ಸಿ. ಮಹಾದೇವಪ್ಪನವರ ಮುನ್ನೋಟ, ಬದ್ಧತೆಗಳ ಮಹತ್ವ ಮತ್ತೆ ಮನವರಿಕೆಯಾಗತೊಡಗಿತು.

ನಾನು, ನಾನು, ನನ್ನ ಜಾತಿ, ನನ್ನ ಕುಟುಂಬ..ಅಥವಾ ಸ್ವಾರ್ಥಕ್ಕೋ, ದ್ವೇಷಕ್ಕೋ ನನ್ನ ಧರ್ಮ… ಇದರಿಂದಾಚೆಗೆ ಹೋಗದ ಜಾತಿಕೋರ, ಧರ್ಮಕೋರ ಭಾರತೀಯ ಮನಸ್ಸಿಗೆ ಅಂಬೇಡ್ಕರ್ ‘ವಿ ದ ಪೀಪಲ್ ಆಫ್ ಇಂಡಿಯಾ’ ಎಂಬ ಪೀಠಿಕಾ ಪ್ರಮಾಣವಚನ ಕೊಡುವ ಮೂಲಕ ಹೊಸ ಭಾಷೆಯನ್ನೇ ಸೃಷ್ಟಿಸಿದ್ದರು; ಭಾರತೀಯ ಸಂಕುಚಿತ ಮನಸ್ಸಿನ ‘ನಾನು’ ಎನ್ನುವುದನ್ನು ಅಂಬೇಡ್ಕರ್ ಭಾಷೆಯ ಮಟ್ಟದಲ್ಲಿ ಮುರಿದು, ‘ನಾವು’ ಎಂಬುದನ್ನು ಹೇಳಿಕೊಟ್ಟಿದ್ದರು. 

ಭಾಷೆಯ ಮಟ್ಟದಲ್ಲಿ ಮೊದಲು ಮುರಿದರೆ ಅದು ನಂತರ ಪ್ರಜ್ಞೆಯ ಮಟ್ಟದಲ್ಲಿ, ಅನಂತರ ಸಮಾಜದ ಮಟ್ಟದಲ್ಲಿ, ಮುರಿಯುವ ಹಂತಗಳಿಗೆ ದಾರಿ ಮಾಡಿಕೊಡುತ್ತದೆ ಎಂಬುದನ್ನು ಸ್ತ್ರೀವಾದಿಗಳು ನಮಗೆ ಹೇಳಿಕೊಟ್ಟಿದ್ದಾರಲ್ಲವೆ? 

ಒಂದು ಭಾಷಣಮಗ್ನ ಮನಸ್ಸು ಅತ್ತಲಿತ್ತ ಹರಿದಾಡುತ್ತಿದ್ದರೆ; ಯಾರನ್ನೋ ಮೆಚ್ಚಿಸುವ, ಅಥವಾ ಯಾರಿಂದಲಾದರೂ ಮೆಚ್ಚಿಸಿಕೊಳ್ಳುವ ಕಾತರವಿಲ್ಲದೆ ಐಡಿಯಾಗಳು ಒಳಗೂ ಹೊರಗೂ ನಿಸ್ವಾರ್ಥದಿಂದ ಅಡ್ಡಾಡುತ್ತಿದ್ದರೆ... ನಮ್ಮಂಥವರಿಗೂ ಸಣ್ಣ ಪುಟ್ಟ ಜ್ಞಾನೋದಯ ಯಾಕಾಗಲಾರದು? 

‘ಓದು ಎಂದರೆ ಅರ್ಥದ ನಿರಂತರ ಮುಂದೂಡಿಕೆ’ ಎಂದು ನಿರಚನಾವಾದಿ ಗುರು ಜಾಕ್ವೆಸ್ ಡೆರಿಡಾ ಹೇಳಿದ್ದು…ಬರಿ ಬೆಡಗಲ್ಲೋ ಅಣ್ಣ!

ಬ್ಲಾಗ್ ಫಾಲೋ ಮಾಡಲು ಒಪ್ಪಿ, ಕ್ಲಿಕ್ ಮಾಡಿ; ನೋಟಿಫಿಕೇಶನ್ ಪಡೆಯಿರಿ, ಶೇರ್ ಮಾಡಿ: FOLLOW
ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com 
ಬಿಡುವಾದಾಗ ನೋಡಿ, ಶೇರ್ ಮಾಡಿ:  YOUTUBE LINK 

Share on:


Recent Posts

Latest Blogs



Kamakasturibana

YouTube



Comments

13 Comments



| Harishchandra A Doni kadaganchi

Thanks 

\r\n


| Dr Manjula GH

ನಿಮ್ಮ ಬರಹದ ಅಭಿಮಾನಿ ಓದುಗಳು ನಾನು ಸರ್, ನಿಮ್ಮ ಬ್ಲಾಗ್ ಬರಹಗಳನ್ನು  ಓದುತ್ತಾ ಇರುತ್ತೇನೆ. ನಾನು ಸಹ ಕೇಂದ್ರೀಯ ವಿಶ್ವವಿದ್ಯಾಲಯ ಗುಲ್ಬರ್ಗಾದಲ್ಲಿಯೇ ಓದಿದ್ದು,  ಈ ಬರಹ ಓದಬೇಕಾದಾಗ ನನಗೂ ಒಂದು ಕ್ಷಣ ಬರಹದ ಜೊತೆಗೆ ಗುಲ್ಬರ್ಗಾದಲ್ಲಿ ಆಚರಿಸುವ ಅಂಬೇಡ್ಕರ್ ಜಯಂತಿಯ ಜೊತೆಗೆ ವಿಹರಿಸಿದೆ.

\r\n


| ಬಂಜಗೆರೆ ಜಯಪ್ರಕಾಶ

ಒಂದು ವ್ಯಕ್ತಿನಿಷ್ಠ ನಿರ್ದಿಷ್ಟ ಅನುಭವವನ್ನು  ಮತ್ತೊಂದು ಅನುಭವನಿಷ್ಠ ಕವಿತೆಯ ಅರ್ಥದ ಜಾಡು ಹಿಡಿದು ನಡೆಸಿರುವ ಮಂಥನ ಬಹಳ ಚೇತೋಹಾರಿಯಾಗಿದೆ. ಚಲದ ಜೊತೆಗೆ ಬಲದ ಪಾಠ ಕಲಿಸುವವರು ನಾವು ಎನ್ನುವ ತಿದ್ದುಪಡಿಗೆ ನೀವು ಕೊಟ್ಟಿರುವ ವಿವರಣೆ ಮನನೀಯವಾಗಿದೆ

\r\n


| Muralidhar Khajane

ತುಂಬಾ ಚೆನ್ನಾಗಿದೆ

\r\n


| ಡಾಮಿನಿಕ್

ಸೊಗಸಾದ ಒಳನೋಟವನ್ನು ಓದುಗರಿಗೆ ಮುಖಾಮುಖಿ ಆಗಿಸುತ್ತದೆ.

\r\n


| M Hiremath

ನಿಮ್ಮ ಮಾತು ಎಲ್ಲೆಲ್ಲೋ ಹರಿದಾಡಿ ತಂಗುದಾಣ ತಲುಪಿದೆ. ಮನಸ್ಸಿನ ಸೂಕ್ಷ್ಮ ವಿಶ್ಲೇಷಣೆಯ ಒಂದು ಒಳ್ಳೆಯ ಪ್ರಬಂಧ

\r\n


| ಕಲ್ಲಯ್ಯ

ಅದ್ಭುತವಾದ ಬರಹ

\r\n


| ಡಾ. ನಿರಂಜನ ಮೂರ್ತಿ ಬಿ ಎಂ

ತಂಗುದಾಣವ ಕಾಣಲು ಕಾತರಿಸುವ ಭಾಷಣಕಾರನೊಬ್ಬನ ಮನದ ಹುಡುಕಾಟವನ್ನೇ ಆಧಾರವಾಗಿಟ್ಟುಕೊಂಡು,ಅಡಿಗರು  ಚಿಂತಾಮಣಿಯಲ್ಲಿ  ಕಂಡ ಮುಖವನ್ನು ಮತ್ತು ಯೇಟ್ಸ್ ಕವಿಯ ರಮ್ಯ ಬಯಕೆಯನ್ನು ಸಂತ ಶರೀಫರ ತತ್ವದೊಂದಿಗೆ ಸಮೀಕರಿಸಿ  ನಡೆಸಿರುವ ಚಿಂತನೆ ಚೇತೋಹಾರಿಯಾಗಿದೆ. 

\r\n\r\n

ನಾನು, ನನ್ನ ಜಾತಿ, ಮತ್ತು‌ ನನ್ನ ಮತ-ಪಂಥದ ಭಾವನೆಗಳಿಗೆ ಅತೀತವಾಗದ ಭಾರತೀಯ ಮನಸುಗಳಿಗೆ ಮತ್ತು ಕವಿ ಸಿದ್ಧಲಿಂಗಯ್ಯನವರು ಅಂಬೇಡ್ಕರ್ ಅವರಿಗೆ ಕೇಳಿದ ಪ್ರಶ್ನೆಗಳಿಗೆ ಉತ್ತರವನ್ನು ಹೊಸ ತಲೆಮಾರಿನ ಯುವ ವರ್ಗ ಕಂಡುಕೊಂಡಿರುವುದನ್ನು ಬಲು ಸೂಕ್ಷ್ಮವಾಗಿ ತೋರಿಸಿರುವ ಹುಳಿಯಾರರ ಮಾನವೀಯ ಅಂತಃಕರಣಯುಕ್ತ,  ಸಮ್ಯಕ್ ದೃಷ್ಟಿ ಕೋನದ ಚತುರ ಮನಸಿಗೆ ನಮೋನ್ನಮಃ!

\r\n


| ನಿರಂಜನ್

ತುಂಬಾ ಚೆನ್ನಾಗಿದೆ ಈ ಬರಹ. ಯಾವುದಾವುದನ್ನೋ ಎಲ್ಲೆಲ್ಲಿಗೋ ಜೋಡಿಸಿ ತೋರುವ ಮಿಂಚಿನಂತಹ ಬೆಳಕು ಮನಸಿಗೆ ತುಂಬಾ ತಂಪೆರಚಿತು. ಅದ್ಭುತವಾದ ಬರಹ ನಿನ್ನದು. ಮನಃಪೂರ್ವಕ ಧನ್ಯವಾದಗಳು. 

\r\n


| Dr.Prabhakar

Superb! Your narration covers wide gamut of poetic minds!🌹🌹 

\r\n


| ಶಾಮರಾವ್

ಕಿಲಾಡಿ)ಕವಿ ಶರೀಫರೂ ಸೇರಿದಂತೆ ಸಂವಿಧಾನ ಪೀಠಿಕೆ ಕವಿಯ ಕಾವ್ಯದ ಸಾಲನ್ನು ಬದಲಿಸುವಂತೆ ಮಾಡಿದ ಪರಿಯನ್ನು ಚೆನ್ನಾಗಿ ಕಟ್ಟಿಕೊಟ್ಟಿದ್ದೀರಿ.🙏🏻 

\r\n


| Venkatesh

Nice one

\r\n


|




Add Comment