ನಿತ್ಯ ಚಿಂದಿಯಾಗುವ ಸಿದ್ಧ ಅರ್ಥಗಳು!

‘ಓದು ಎನ್ನುವುದು ಅರ್ಥದ ನಿರಂತರ ಮುಂದೂಡಿಕೆ…’ 

ಫ್ರೆಂಚ್ ಥಿಯರಿಸ್ಟ್ ಜಾಕ್ವೆಸ್ ಡೆರಿಡಾ ಹೇಳಿದ ಈ ಮಾತನ್ನು ಇಪ್ಪತ್ತು ವರ್ಷಗಳ ಕೆಳಗೆ ಓದಿದಾಗ ವಿಸ್ಮಯವಾಗಿತ್ತು. ಅರೆರೆ! ಸಾಮಾನ್ಯವಾಗಿ ನಾವೆಲ್ಲ ಸಾಹಿತ್ಯದ ಓದು-ಟೀಚಿಂಗ್-ವಿಮರ್ಶೆ- ವ್ಯಾಖ್ಯಾನಗಳನ್ನು ಮಾಡುವಾಗಲೆಲ್ಲ, ‘ಏನು ಈ ಪದ್ಯದ ಅರ್ಥ?’ ‘ಈ ಕತೆಯ ಸಂಕೇತ ಏನು ಹೇಳುತ್ತದೆ?’ ‘ಈ ರೂಪಕ ಏನು ಸೂಚಿಸುತ್ತದೆ?’ ಎಂದೆಲ್ಲ ಹುಡುಕುತ್ತಾ, ಕೊನೆಗೆ ಯಾವುದಾದರೂ ಒಂದು ಅರ್ಥವನ್ನು ನಿರ್ದಿಷ್ಟಗೊಳಿಸುವ ಕೆಲಸವನ್ನೇ ಮಾಡುತ್ತಿದ್ದೇವಲ್ಲ ಎನ್ನಿಸಿತ್ತು. ಆದರೂ ಒಂದು ಪದ್ಯಕ್ಕೋ, ನಾಟಕದ ಭಾಗಕ್ಕೋ ಒಂದಕ್ಕಿಂತ ಹೆಚ್ಚಿನ ಅರ್ಥಗಳನ್ನು ಕೊಡುತ್ತಾ, ಹೊಸ ಹೊಸ ವ್ಯಾಖ್ಯಾನಗಳನ್ನು ಮಾಡುತ್ತಾ ನಾವೂ ಡೆರಿಡಾ ಮಾತಿಗೆ ಹತ್ತಿರವಿದ್ದೇವೆ ಎಂದು ಕೂಡ ಅನ್ನಿಸತೊಡಗಿತು. 

ಡೆರಿಡಾ ಮಾತಿನ ವಿಶಾಲ ಅರ್ಥ ಒಳಗಿಳಿದವರಿಗೆ, ಈ ಮಾತಿನ ಜಾಡು ಹಿಡಿದು ಆಗಾಗ ಪದ್ಯವನ್ನೋ ಕತೆಯನ್ನೋ ಓದುವವರಿಗೆ, ತಾವು ನಿಜಕ್ಕೂ ಒಂದು ಸೃಜನಶೀಲ ಚಟುವಟಿಕೆಯಲ್ಲಿ ತೊಡಗಿದ್ದೇವೆ ಎಂಬ ಉತ್ಸಾಹ ಉಕ್ಕುತ್ತಿರುತ್ತದೆ. ಈಚಿನ ವರ್ಷಗಳಲ್ಲಿ ಈ ಬಗೆಯ ಡೆರಿಡಾ ಗುಂಗಿನಲ್ಲಿದ್ದಾಗ, ಸಿದ್ಧಲಿಂಗಯ್ಯನವರ ‘ದಲಿತರು ಬರುವರು’ ಪದ್ಯದ ‘ದಲಿತರು ಬರುವರು ದಾರಿ ಬಿಡಿ, ದಲಿತರ ಕೈಗೆ ರಾಜ್ಯ ಕೊಡಿ’ ಎಂಬ ನೇರ, ಸರಳ ಸಾಲು ಕೂಡ ಹೊಸ ಅರ್ಥ ಸೂಚಿಸತೊಡಗಿತು. ಎಂಬತ್ತರ ದಶಕದ ಕೆಲವು ಲೇಖಕರು, ವಿಮರ್ಶಕರು ‘ಇದು ಘೋಷಣೆಯ ಕಾವ್ಯ’ ಎನ್ನುತ್ತಿದ್ದಾಗ, ವಿದ್ಯಾರ್ಥಿಗಳಾದ ನಾವು ಅದನ್ನೇ ನಂಬಿಕೊಂಡು ಇದೆಲ್ಲ ಘೋಷಣೆಯ ಕಾವ್ಯ ಎಂದು ಮೂಗು ಮುರಿಯುತ್ತಿದ್ದೆವು! 1995ರಲ್ಲಿ ಮಾಯಾವತಿಯವರು ಉತ್ತರ ಪ್ರದೇಶದ ಮುಖ್ಯಮಂತ್ರಿಯಾದಾಗ, ಸಿದ್ಧಲಿಂಗಯ್ಯನವರ ಘೋಷಣೆಯಂಥ ಸಾಲು ಮಂತ್ರದಂತೆ ನಿಜವಾಯಿತಲ್ಲ ಎಂದು ರೋಮಾಂಚನವಾಯಿತು. ಸಿದ್ಧಲಿಂಗಯ್ಯನವರ ಈ ಸಾಲು ಪಶ್ಚಿಮ ಬಂಗಾಳದ ಕಲಕತ್ತಾದ ಗೋಡೆಬರಹವಾಗಿ ರಾರಾಜಿಸಿದ್ದನ್ನು ಗೆಳೆಯ ವಿಕ್ರಮ ವಿಸಾಜಿ ಹೇಳಿದಾಗಲಂತೂ ಒಂದು   ಕನ್ನಡ ಪದ್ಯದ ಆಶಯ-ಘೋಷಣೆ ದೇಶದುದ್ದಕ್ಕೂ ಪಡೆದ ಪ್ರತಿಧ್ವನಿ ಕಂಡು ಕಾವ್ಯದ ಶಕ್ತಿಯ ಬಗ್ಗೆ ವಿಶ್ವಾಸ ಉಕ್ಕತೊಡಗಿತು. ಬಂಗಾಳೀಕರಣಗೊಂಡ ಸಿದ್ಧಲಿಂಗಯ್ಯನವರ ಪದ್ಯದ ಸಾಲು: 
ದಲಿತೇರ್ ಆಸ್ಚಿನ್ ರಾಸ್ತಾ ದಾವ್
ದಲಿತೇರ್ ಹಾಥೇ ರಾಜ್ಯಾ ದಾವ್

ಇದಾದ ಎಷ್ಟೋ ವರ್ಷಗಳ ನಂತರ ‘ದಲಿತರು ಬರುವರು ದಾರಿ ಬಿಡಿ’ ಸಾಲನ್ನು ಎಂ.ಎ. ವಿದ್ಯಾರ್ಥಿನಿಯರು-ವಿದ್ಯಾರ್ಥಿಗಳ ಜೊತೆ ಚರ್ಚಿಸುತ್ತಿರುವಾಗ, ಇದು ಹಿಂದೊಮ್ಮೆ ಇಂಡಿಯಾದ ಬರ್ಬರ ಸಾಂಪ್ರದಾಯಿಕತೆಯ ಕಾಲದಲ್ಲಿ ದಲಿತರು ಅನುಭವಿಸಿದ ಭೀಕರ ಅಸ್ಪೃಶ್ಯ ಸ್ಥಿತಿಯನ್ನು ನೆನಪಿಸುತ್ತಲೇ ಅದನ್ನು ಪಲ್ಲಟಗೊಳಿಸುವ ಗಾಢ ರೂಪಕ ಎನ್ನಿಸತೊಡಗಿತು. ದಲಿತರು ಬರುತ್ತಿದ್ದಾರೆ ಎನ್ನುವುದು ಸವರ್ಣೀಯರಿಗೆ ತಿಳಿಯುವಂತೆ ದಲಿತರು ಕೂಗಿಕೊಂಡು ಬರಬೇಕು; ಅವರ ನೆರಳು ಕೂಡ ಬೀಳದಂತೆ ಸವರ್ಣೀಯರು ದೂರ ಸರಿಯಬೇಕು ಎಂಬ ಹಿಂದೂ ಸಮಾಜದ ಒತ್ತಾಯವನ್ನು ಸಿದ್ಧಲಿಂಗಯ್ಯನವರ ಸಾಲು ಅಣಕಿಸಿ ಪಲ್ಲಟಗೊಳಿಸುತ್ತಿತ್ತು; ಅಂಬೇಡ್ಕರ್ ಯುಗದಲ್ಲಿ ವಿಮೋಚನೆಗೊಂಡ ದಲಿತರು ಅಧಿಕಾರ ಹಿಡಿಯಲು ಸಜ್ಜಾಗಿ ಬರುತ್ತಿದ್ದಾರೆ; ಅವರಿಗೆ ದಾರಿ ತೆರವುಗೊಳಿಸಿ ಎಂದು ಈ ಸಾಲು ಗುಡುಗುತ್ತಿರುವಂತೆ ತೋರಿತು. 

ಈ ಅರ್ಥ ಹೊಳೆದ ಕೆಲವು ವರ್ಷಗಳ ನಂತರ, ಬಿಬಿಎಂಪಿ ಹಾಗೂ ಪೌರ ಕಾರ್ಮಿಕ ಇಲಾಖೆಯ ವ್ಯಾನುಗಳಲ್ಲಿ ಮನೆ ಮನೆಯ ಕಸವನ್ನು ಕೊಡಲು ಕೋರಿ ಮೈಕ್ ಹಾಕಿಕೊಂಡು ಬರುವವರು ಬಹುತೇಕ ದಲಿತರೇ ಎಂದ ದಸಂಸ ನಾಯಕ ಮಾವಳ್ಳಿ ಶಂಕರ್ ಸಿಟ್ಟಿನಿಂದ ಹೇಳಿದ ಮಾತು: ‘ಹಿಂದಿನ ಕಾಲದಲ್ಲಿ ದಲಿತರು ದಾರಿಯಲ್ಲಿ ಗಂಟೆ ಬಾರಿಸಿಕೊಂಡು ಬರುತ್ತಾ ಸವರ್ಣೀಯರಿಗೆ ಸೂಚನೆ  ಕೊಡುತ್ತಿದ್ದ ಕೆಟ್ಟ ಪದ್ಧತಿ ಈಗ ಮತ್ತೆ ಬಂದಿದೆ.’ ಹೀಗೆ ಹೋರಾಟಗಾರರೊಬ್ಬರ ಕಣ್ಣಿಂದ ನೋಡಿದಾಗ, ಸಿದ್ಧಲಿಂಗಯ್ಯನವರ ಸಾಲು ಮತ್ತೊಂದು ಅರ್ಥ ಪಡೆಯತೊಡಗಿತು. ಡೆರಿಡಾ ಹೇಳಿದ ಅರ್ಥದ ನಿರಂತರ ಮುಂದೂಡಿಕೆ ನಡೆಯುತ್ತಲೇ ಇತ್ತು!

ಎರಡು ತಿಂಗಳ ಕೆಳಗೆ ಸಂಗೀತಗಾರ ಗೆಳೆಯ ಎಸ್. ಆರ್. ರಾಮಕೃಷ್ಣ  ‘ದಲಿತರು ಬರುವರು ದಾರಿ ಬಿಡಿ, ದಲಿತರ ಕೈಗೆ ರಾಜ್ಯ ಕೊಡಿ’ ಸಾಲುಗಳಿಗೆ ಸೈನ್ಯದ ನಡಿಗೆಯ ತೀವ್ರ ಲಯದ ಟ್ಯೂನ್ ಮಾಡಿ ತೋರಿಸಿದರು; ಅವರ ಟ್ಯೂನಿನಲ್ಲಿ ಈ ಸಾಲು ಎಚ್ಚೆತ್ತ ದಲಿತ ಸೇನೆಯ ಬಿರುಸು ನಡಿಗೆಯನ್ನು ಬಿಂಬಿಸತೊಡಗಿತು. ಇದೆಲ್ಲದರ ನಡುವೆ, ನಲವತ್ತು ವರ್ಷಗಳ ಕೆಳಗೆ ಸಿದ್ಧಲಿಂಗಯ್ಯನವರ ಸಾಲನ್ನು ವಾಚ್ಯವಾಗಿ ಉಲ್ಲೇಖಿಸಿದ ಲೇಖಕ ಶ್ರೀಕೃಷ್ಣ ಆಲನಹಳ್ಳಿ ಸೃಷ್ಟಿಸಿದ ತಮಾಷೆಯ ಪ್ರಸಂಗವೂ ಒಂದಿದೆ: ‘ದಲಿತರು ಬರುವರು’ ಪದ್ಯ ಪ್ರಖ್ಯಾತವಾಗಿದ್ದ ಆ ಕಾಲದಲ್ಲಿ ಸಿದ್ಧಲಿಂಗಯ್ಯನವರು ಮಿತ್ರಕೂಟವೊಂದಕ್ಕೆ  ಹೋದರು; ತಕ್ಷಣ ಶ್ರೀಕೃಷ್ಣ ಆಲನಹಳ್ಳಿ ‘ದಲಿತರ ಕೈಗೆ ರಾಜ್ಯ ಕೊಡಿ’ ಎಂದು ಗಹಗಹಿಸಿ ನಗುತ್ತಾ, ಮೇಲೆದ್ದು ಸಿದ್ದಲಿಂಗಯ್ಯನವರಿಗೆ ತಮ್ಮ ಕುರ್ಚಿ ಬಿಟ್ಟುಕೊಟ್ಟರು. ಇದು ಮಿತ್ರಕೂಟವನ್ನು ನಗಿಸಿದ ರೀತಿಯನ್ನು ಒಮ್ಮೆ ಹೇಳಿಕೊಂಡು ಲಂಕೇಶ್ ಮನಸಾರೆ ನಕ್ಕಿದ್ದರು. 

ಹೀಗೆ ಕೊಂಚ ಸರಳವಾಗಿ ಡೆರಿಡಾನ ‘ಅರ್ಥದ ನಿರಂತರ ಮುಂದೂಡಿಕೆ’ಯ ಐಡಿಯಾವನ್ನು ವಿವರಿಸುತ್ತಿರುವಾಗ ಈ ಮಾತಿಗಿರುವ ಗಂಭೀರವಾದ ಸಂಕೀರ್ಣಾರ್ಥಗಳೂ ಗೋಚರವಾಗತೊಡಗುತ್ತವೆ. ಮೂಲತಃ ಸಾಹಿತ್ಯ ಕೃತಿಗಳಾದ, ‘ಧಾರ್ಮಿಕ’ ಎನ್ನಲಾದ ಗ್ರಂಥಗಳಿಗೆ ನಿರ್ದಿಷ್ಟವಾದ ಸರ್ವಾಧಿಕಾರಿ ಅರ್ಥಗಳನ್ನು ಕೊಡುವ, ಅದರಲ್ಲೂ ತಮ್ಮ ಹಿತಾಸಕ್ತಿ ಕಾಪಾಡುವ ಅರ್ಥಗಳನ್ನು ಕೊಡುವ ಧಾರ್ಮಿಕ ಪಟ್ಟಭದ್ರರ ಸಂಕುಚಿತ ಅರ್ಥಗಳನ್ನು ವಿಚಾರವಂತ ಓದುಗ, ಓದುಗಿಯರು ಮುರಿಯುವ ಸಾಧ್ಯತೆಯನ್ನೂ ಡೆರಿಡಾ ಮಾರ್ಗ ತೆರೆಯುತ್ತದೆ. 

ಈ ಟಿಪ್ಪಣಿಯ ಕೊನೆಗೆ ಸಿ.ಜಿ.ಕೃಷ್ಣಸ್ವಾಮಿಯವರು ನಿರ್ದೇಶಿಸಿದ ಮಂಜುನಾಥ ಬೆಳಕೆರೆಯವರ ‘ಶರೀಫ’ ನಾಟಕದ ದೃಶ್ಯವೊಂದು ಫಟಾರನೆ ಚಿಮ್ಮಿಸಿದ ಅರ್ಥ ನೆನಪಾಗುತ್ತದೆ. ಶಿಶುವಿನಹಾಳ ಶರೀಫರ ಬದುಕು, ತತ್ವ, ಪದಗಳನ್ನೆಲ್ಲ ಒಳಗೊಂಡಿದ್ದ ‘ಶರೀಫ’ ನಾಟಕದ ಒಂದು ದೃಶ್ಯದಲ್ಲಿ ಶರೀಫರು ‘ಏನ್ ಕೊಡನೇನ್ ಕೊಡವಾ’ ಪದವನ್ನು ಹಾಡತೊಡಗುತ್ತಾರೆ. ಆಗ ಇದ್ದಕ್ಕಿದ್ದಂತೆ ತರುಣಿಯೊಬ್ಬಳು ಸೊಂಟದಲ್ಲಿ ಕೊಡ ಇರುಕಿಕೊಂಡು ಛಂಗನೆ ರಂಗದ ಮೇಲೆ ಜಿಗಿದು ಕುಣಿಯುತ್ತಾ, ಹಾಡಿನ ಲಯಕ್ಕೆ ತಕ್ಕಂತೆ ನರ್ತಿಸತೊಡಗುತ್ತಾಳೆ. ಶರೀಫರ ಪದವನ್ನು ಕೇಳಿಸಿಕೊಳ್ಳುತ್ತಾ ಈ ನರ್ತನ ನೋಡುತ್ತಿದ್ದ ನನಗೆ ಸಡನ್ನಾಗಿ ಹೊಸ ಅರ್ಥವೊಂದು ಹೊಳೆದು ನಗು ಉಕ್ಕಿತು! ಕಿಲಾಡಿ ಶರೀಫ ಅಂದುಕೊಂಡೆ! ಈವರೆಗೆ ನಮ್ಮ ವ್ಯಾಖ್ಯಾನಕಾರರು ಆಧ್ಯಾತ್ಮದ ನೆಲೆಯಲ್ಲಿ ವ್ಯಾಖ್ಯಾನಿಸುತ್ತಿದ್ದ ‘ಏನ್ ಕೊಡನೇನ್ ಕೊಡವ’ ಪದಕ್ಕೆ ಅಪಾರ ಜೀವಂತಿಕೆಯ ರಸಿಕ ಅರ್ಥ ಬಂದಿತ್ತು! ಅಂದರೆ, ಶರೀಫ ಕೊಡದ ರೂಪಕದ ಮರೆಯಲ್ಲಿ ಹುಬ್ಬಳ್ಳಿಯ ಹುಡುಗಿಯನ್ನೇ ವರ್ಣಿಸುತ್ತಿರಬಹುದು! ಯಾಕಿರಬಾರದು? ಇಂಗ್ಲಿಷ್ ಕವಿಗಳಾದ ಜಾನ್ ಡನ್, ಆ್ಯಂಡ್ರೂ ಮಾರ್ವೆಲ್ ಥರದವರು ಬರೆದ ಮೆಟಫಿಸಿಕಲ್ ಕಾವ್ಯದಲ್ಲಿ ಎಂಥೆಂಥ ರಸಿಕ ವರ್ಣಗಳಿವೆಯಲ್ಲವೆ! ಶಭಾಸ್ ಸಿ.ಜಿ.ಕೆ.! ಶಭಾಸ್ ಶರೀಫ! 

ನಾವು ‘ಇದೇ ಇದರ ಅರ್ಥ’ ಎಂದುಕೊಳ್ಳುವ ಅರ್ಥಗಳು ನಿತ್ಯ ಚಿಂದಿಯಾಗುವುದು ಹೀಗೆ. ಕೃತಿಯ ಅರ್ಥ ನಿರಂತರವಾಗಿ ಮುಂದೂಡುತ್ತಾ ಹೋಗಿ ಹೊಸ ಹೊಸ ಅರ್ಥಗಳು ಮೂಡುವುದು ಹೀಗೆ. ಹೀಗೆ ಅರ್ಥವನ್ನು ಮುಂದೂಡುವುದನ್ನು ಸದಾ ಆನಂದಿಸುತ್ತಿದ್ದ ಕಿ.ರಂ. ನಾಗರಾಜ್ ಒಂದು ಸಂಜೆ ಇದ್ದಕ್ಕಿದ್ದಂತೆ ಬೇಂದ್ರೆಯವರ ‘ಭಾವಗೀತ’ ಪದ್ಯದ ‘ಅರ್ಥವಿಲ್ಲ, ಸ್ವಾರ್ಥವಿಲ್ಲ ಬರಿಯ ಭಾವಗೀತ’ ಎಂಬ ಸಾಲನ್ನು ಒಗೆದರು; ‘ಅರ್ಥ ಅಂದ್ರೆ ದುಡ್ಡು ಅಂತಾನೂ ಅರ್ಥ! ‘ಅರ್ಥ’ವಿಲ್ಲ ಅಂದರೆ, ಭಾವಗೀತೆ ಬರೆಯೋನಿಗೆ ದುಡ್ಡಿಲ್ಲ ಅಂತ ಅರ್ಥ ಸಾರ್!’ ಎಂದು ಕಣ್ಣು ಮಿಟುಕಿಸುತ್ತಾ ನಕ್ಕರು. ತಕ್ಷಣ ಅವರ ಓದಿನ ಜಾಡನ್ನೇ ಮುಂದುವರಿಸಿ, ‘ಸ್ವಾರ್ಥವಿಲ್ಲ ಅಂದರೆ ಭಾವಗೀತೆಯಲ್ಲಿ ಕವಿಯ ‘ಸ್ವ- ಅರ್ಥವಿಲ್ಲ’ ಎಂದು ಕೂಡ ಅರ್ಥ ಬರುತ್ತೆ’ ಎಂದೆ; ಕೀರಂ ‘ಯೆಸ್!’ ಎಂದು ಉಲ್ಲಾಸದಿಂದ ನಕ್ಕರು.

ಡೆರಿಡಾರನ್ನು ಓದುವ ಮೊದಲೇ ಅರ್ಥದ ನಿರಂತರ ಮುಂದೂಡಿಕೆಯಲ್ಲಿ ‘ಪಂಟರ್’ ಆಗಿದ್ದ ಕೀರಂ ತಮ್ಮ ಓದಿನ ಮಾರ್ಗ ನನ್ನಂಥವರಲ್ಲೋ, ಆಶಾದೇವಿಯವರಲ್ಲೋ ಮುಂದುವರಿಯುವ ಕ್ರಮ ಕಂಡು ಕೃತಾರ್ಥ ಭಾವ ಹೊತ್ತು, ಚಣ ಸಂಕೋಚದಿಂದ ನಸು ಬಾಗಿ ನಿಂತರು.

ಬ್ಲಾಗ್ ಫಾಲೋ ಮಾಡಲು ಒಪ್ಪಿ, ಕ್ಲಿಕ್ ಮಾಡಿ; ನೋಟಿಫಿಕೇಶನ್ ಪಡೆಯಿರಿ, ಶೇರ್ ಮಾಡಿ: FOLLOW
ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com 
ಬಿಡುವಾದಾಗ ನೋಡಿ, ಶೇರ್ ಮಾಡಿ:  YOUTUBE LINK

Share on:

Comments

15 Comments



| ರಂಗ ಚ೦ದಿರ ತಂಡ

Good sir, 💐💐💐

\r\n


| Rajappa Dalavayi

ಒಳ್ಳೆಯ ಲೇಖನ. ಇಷ್ಟ ಆಯಿತು.

\r\n


| Narasimhappa

ನವನವೋನ್ಮೇಷ ಶಾಲಿನಿ ಪ್ರತಿಭಾನ್  ಎನ್ನುವ ಕಾವ್ಯ ತತ್ವ ಹಾಗು

\r\n\r\n

ಕಾವ್ಯ ವಜ್ರಮುಖಿ ಎನ್ನುವ ಪಂಪನ ಮಾತು ಇಲ್ಲಿ ರುಜುವಾತು  ಮಾಯಾವತಿ ದಾರಿ ಮಾಡಿಕೊಂಡಳು ಮೈಲುಗಲ್ಲಾಗಬೇಕಿತ್ತು

\r\n


| ಡಾ ರುದ್ರೇಶ್ ಅದರಂಗಿ

ಭಲೇ ರಸಿಕರು ನೀವು 

\r\n


| ಸುನೀಲ

ಆಗಲೇಬೇಕು ಆಗಲೇ ಬೇಕು

\r\n\r\n

 

\r\n


| O L NAGABHUSHANASWAMY

ಡೆರೀಡನನ್ನು ಓದುಗರಿಗೆ ಪರಿಚಯ ಮಾಡಿಸಿರುವ ರೀತಿ ಇಷ್ಟವಾಯಿತು. ಅರ್ಥವೆಂಬುದು ಅನುಭವಕ್ಕೆ ಹಾಕುವ ಬ್ರಾಕೆಟ್‌ ಕೂಡಾ. ಅರಿತು ದಣಿವಾದಾಗ ಇಷ್ಟು ಸಾಕು ಎಂದು ನಾವೇ ಹಾಕಿಕೊಳ್ಳುವ ಬ್ರಾಕೆಟ್ಟು ಅರ್ಥ. ಅರ್ಥದಲ್ಲಿ ರಮಿಸಿ ವಿರಮಿಸದೆ ಎಂದು ಪುತಿನ ಹೇಳುವ ಮಾತು ಆಧುನಿಕೋತ್ತರ ಕಾಲದ ಎರಾಟಿಕ್ಸ್‌ ಆಫ್‌ ಪೊಯೆಟ್ರಿಯ ಸಂಗ್ರಹ ರೂಪ. ಅರಿವಂ ಪೊಸಯಿಸುವುಉ ಧರ್ಮಂ ಎಂದು ಪಂಪ ಹೇಳಿದ್ದು ಕೂಡಾ ಅರ್ಥದ ನಿರಂತರ ವಿಕಾಸದ ಸಾಧ್ಯತೆಯನ್ನೇ. ಅಂತರ ತಡೆವುದು ಅಧರ್ಮಮ ಎಂದೂ ಮುಂದುವರೆದು ಹೇಳುತ್ತಾನೆ. ಅರ್ಥವನ್ನು ನಿಶ್ಚಿತಗೊಳಿಸುವುದು ಮೂಲಭೂತವಾದದ, ರಾಜಕೀಯದ ದುಷ್ಟ ಮುಖವೂ ಹೌದು. ಅರ್ಥದ ಸತತ ವಿಸ್ತಾರವನ್ನೇ ಅರಿವನ್ನು ಹೊಸತುಗೊಳಿಸುವುದು ಎಂದರೆ ಅರ್ಥದ ಸತತ ವಿಸ್ತಾರವೇ ಅಲ್ಲವೇ? ಇದು ವಚನಕಾರರಿಗೆ ಬಂದಾಗ ಜಂಗಮವೆಂಬ ಐಡಿಯಾ ಆಗುತ್ತದೆ. ಸತತ ಬದಲಾವಣೆಯ ಹೆಸರೇ ಜಂಗಮ. ಡೆರೀಡಾ ಹಾಗೆ ರಿಯಾಲಿಟಿಯ ಸ್ವರೂಪವನ್ನೇ ಶಬ್ದ-ಅರ್ಥಗಳ ಸಂಬಂಧದ ಮೂಲಕ ವ್ಯಕ್ತಪಡಿಸುತ್ತಾನೆ. ಅರ್ಥದ ರಚನೆ ತನ್ನಷ್ಟಕೆ ತಾನೇ ಸಿಡಿದು ಚೂರಾಗಿ ಮತ್ತೊಂದು ರಚನೆಯಾಗಿ, ಅದೂ ಮುರಿದು ಬಿದ್ದು ವಾಸ್ತವವು ಸದಾ ಜಂಗಮವಾಗಿಯೇ ಇರುವ ವಿಸ್ತರಿಸುತ್ತಲೇ ಇರುವ ಅರ್ಥ. ಅದನ್ನು ರಮಿಸುವುದಕ್ಕೆ ಸಾಧ್ಯವಾದರೆ ಅದೇ ದೊಡ್ಡ ಖುಷಿ. ಬುದ್ಧನ ಹಾಗೆ ಬಿಳಿಯ ಮೋಡವಾಗಿ ಯಾವಯಾವದೋ ಆಕಾರ ಪಡೆಯುತ್ತ ಗುರಿ ಇರದೆ ತೇಲುತಿರುವ ಆನಂದ. ಅರ್ಥವನ್ನು ನಿಗದಿ ಮಾಡುವುದದು ಸಾವು, ಸ್ಥಾವರ, ಭವ. ಹೀಗೆಲ್ಲ ಯೋಚನೆ ಬಂದವು. ಥ್ಯಾಂಕ್ಯೂ.

\r\n


| JAYANTHI

ಇವರು ದಾರೀನೂ ಕೊಡಲ್ಲ, ರಾಜ್ಯಾನೂ ಬಿಡಲ್ಲ

\r\n


| HARISHGOWADA

ಲೇಖನ ತುಂಬ ಇಷ್ಟವಾಯಿತು…insightful and apt examples

\r\n


| MALLIKARJUNA HIREMATH

ಹೌದು. ಒಳ್ಳೆಯ ಬರಹಕ್ಕೆ ಹಲವಾರು ಧ್ವನಿಸ್ತರಗಳಿರುತ್ತವೆ. ಡೆರಿಡಾ ಹೇಳುವಂತೆ ಓದುವುದು ಅರ್ಥದ ಮುಂದೂಡಿಕೆಯೇ ಹೌದು. ಕೃತಿಯನ್ನು ಒಂದು ಅರ್ಥಕ್ಕೆ ಕಟ್ಟಿ ಹಾಕಲು  ಬರುವುದಿಲ್ಲ.

\r\n


| SANGANAGOWDA

ಡೆರಿಡಾನ 'ನಿರಚನವಾದ' ಥಿಯರಿ ನನಗೆ ಇಷ್ಟ. ಇದನ್ನು ನನ್ನ ಥೀಸಿಸ್ ಗೆ ಬಳಸಿಕೊಂಡಿರುವೆ. ಈ ಲೇಖನಕ್ಕೆ ನೀವು ಬಳಸಿದ 'ಓದುಗ/ಓದುಗಿ' ಎನ್ನುವ ಪದದಲ್ಲಿಯೇ ಈಗಾಗಲೇ ರೂಪಿತವಾದ ರಚನೆಯನ್ನು ಒಡೆಯುವ ಪ್ರಯತ್ನವಿದೆ.ಹೆದ್ದಾರಿಗೆ ಹದ್ದು ಬಡಿದು ಕಾಲು ದಾರಿ ಕವಲೊಡೆಯೋದಂದ್ರೆ ಹೀಗೇನೆ! 

\r\n


| B SURESHA

ಓದಿದೆ ಸಾ...

\r\n\r\n

ಮತ್ತೆ ಮತ್ತೆ ಬೆಳಗಾದಂಗೆ

\r\n\r\n

ಮತ್ತೆ ಮತ್ತೆ ಅರುತ ಚೇಂಜಾಯ್ತದೆ ಸಾ...

\r\n\r\n

ಅದ್ಕೆ ಯಿರೀಕ್ರು ಯೋಳಿದ್ದು:

\r\n\r\n

ಮತ್ತೆ ಮತ್ತೆ ಹಾಡ್ಕಳಪ್ಪ ಅದ್ನೇ...

\r\n\r\n

ಒಂದಿಸ ಲೋಕವೇ ಕಾಣ್ತದೆ ಅದ್ರಾಗೇನೆ...

\r\n\r\n

ಈಗ ನಿಮ್ ರೈಟಿಂಗ್ ಓದುದೇಟ್ಗೆ... ದೊಡ್ಡೋರ ಮಾತು ಸರಿ ಅನ್ನುಸ್ತು ಸಾ...

\r\n\r\n

ಜೈ ಕಾಮ್ರೇಡ್...

\r\n


| J N SHAMARAO

ಡೆರಿಡಾ ಅರ್ಥ ವ್ಯಾಖ್ಯಾನದ ಪರಿಧಿಯಲ್ಲಿ ಕವಿ ಸಿದ್ಧಲಿಂಗಯ್ಯನವರ ಕಾವ್ಯ ವ್ಯಾಖ್ಯಾನ ಓದಿ ಕಣ್ಣು ತೇವಗೊಂಡಿತು.ಕವಿಗಳು ಹಿಗೆ ಅರ್ಥವಾಗುತ್ತಲೇ ಹೋಗುವ ಕವಿ.

\r\n


| BANJAGERE JAYAPRAKASH

ಓದು ಅರ್ಥದ ನಿರಂತರ ಮುಂದೂಡಿಕೆ. ಮರು ಓದು ಮತ್ತೂ ಮುಂದೂಡಿಕೆ. ಅರ್ಥದ ಮುಂದೂಡಿಕೆ ಅದರ ಮುಂದುವರಿಕೆ ಅಥವಾ ಮುನ್ನಡೆಯೂ ಆಗಿರಬಲ್ಲುದೇ. ಓದಿದ್ದನ್ನು ಎಷ್ಟೋ ಸಮಯದ ನಂತರ ಮತ್ತೆ ಓದಿದಾಗ ಹಳೆಯ ಅರ್ಥವೇ ಹುಟ್ಟಲಿ ಎಂದು ಕಾಯಬಾರದೇನೋ. ಅಂದರೆ ಹೊಳೆದ ಅರ್ಥಗಳನ್ನು ತೀರಾ ನೆನಪಲ್ಲಿಟ್ಟುಕೋಬಾರದೇನೋ. ಭಾಷಣಕಾರನಾಗಿ ನನ್ನ ಸಮಸ್ಯೆ ಏನೆಂದರೆ ಹೊಳೆದ ಅರ್ಥವನ್ನು ಹಲವು ಕಡೆ ಹೇಳಿ ಅದು ಮನಸ್ಸಿನಲ್ಲಿ ಅಚ್ಚೊತ್ತಿದಂತೆ ನಿಂತುಬಿಡುವುದು. ಅಳಿಸಲಾಗದ ಲಿಪಿಯನು ಬರೆಯಲಾಗದು ಎಂಬಂತೆ ಮರೆಯದಂತೆ ಅರ್ಥವ ನೆನಪಿಟ್ಟುಕೋಬಾರದು. ಪ್ರತಿ ಸಲವೂ ಹೊಳೆವ ಹೊಸ ಅರ್ಥಕ್ಕೆ ಕಾಯಬೇಕು- ಅದೇ ಸಾಂಗತ್ಯ ಸಲ ಹೊಸದೇ ರೀತಿಯಲ್ಲಿ ಫಲಿಸಬಹುದು ಎಂಬ ನಿರೀಕ್ಷೆ ಹೊಂದಿದವನಂತೆ. ಬಹಳ ಒಳ್ಳೆಯ ಚಿಂತನೆ ಓದಿದಂತಾಯಿತು ನಿಮ್ಮ ಹೊಸ ಗಾಳಿ ಬೆಳಕಿನಲ್ಲಿ.

\r\n\r\n

 

\r\n


| C. B. Inalli

 ನಿಜಕ್ಕೂ  ಡೆರಿಡಾನನ್ನ  ವಿದ್ಯಾರ್ಥಿಗಳಿಗೆ ತಲುಪಿಸಬೇಕಾದ ರೀತಿ ಇದು ಎನಿಸಿತು ಸರ್.   ಎಷ್ಟು ಲವಲವಿಕೆಯಿಂದ ನಿರೂಪಿಸಿದ್ದೀರಿ !   ಓ ಎಲ್ ಎನ್  ರವರ  ಅಲ್ಲಮನ  ವಚನಗಳ ವಿಶ್ಲೇಷಣೆಯ  ಆಡಿಯೋ ಸಿಕ್ಕಿವೆ.  ಅವರ ಆ  ವಚನಗಳ ಬಹು ಆಯಾಮಗಳ  ಚರ್ಚೆ  ಡೆರಿಡಾನನ್ನು ಮತ್ತೆ ಮತ್ತೆ ನೆನಪಿಸುತ್ತದೆ.  ನೀವು ಈ ಬರಹಗಳ ಮೂಲಕ  ಅವರು  ತಮ್ಮ ಮೌಖಿಕ  ವಾಗ್ಮಯದ ಮೂಲಕ ನನ್ನನ್ನು ತಲುಪಿ ಸೂಕ್ಷ್ಮಗೊಳಿಸುತ್ತಿರುವುದು ಖುಷಿಯ ವಿಚಾರ. ಇಲ್ಲಿ  ಅವರ ಪ್ರತಿಕ್ರಿಯೆಯನ್ನು ನೋಡಿ ಮತ್ತಷ್ಟು ಖುಷಿಯಾಯಿತು.  ಹೀಗೆ ತಲುಪುತ್ತಿರಿ  ಸರ್.  

\r\n


| ನಾಗಭೂಷಣಬಗ್ಗನಡು

ಓದಿನ ಬಗ್ಗೆ ಒಂದು ಭಿನ್ನ ಹಾದಿ ಒಂಥರಾ ಚೆನ್ನಾಗಿದೆ ಸಾರ್ 

\r\n




Add Comment






Recent Posts

Latest Blogs



Kamakasturibana

YouTube