ಸಿಡ್ ಫೀಲ್ಡ್ ಹೇಳಿಕೊಟ್ಟ ಸ್ಕ್ರೀನ್‌ಪ್ಲೇ ಪಾಠ

ಹಾಲಿವುಡ್ ಸ್ಕ್ರೀನ್‌ಪ್ಲೇ ಗುರು ಸಿಡ್ ಫೀಲ್ಡ್ ಜಗತ್ತಿನ ಹಲವೆಡೆ ಸಿನಿಮಾಕ್ಕೆ ಚಿತ್ರಕತೆಗಳನ್ನು ಬರೆಯುವ ಕ್ಲಾಸುಗಳನ್ನು ನಡೆಸುತ್ತಿದ್ದ. ಹಲವು ದಿಕ್ಕುಗಳಿಂದ ಉದಯೋನ್ಮುಖ ಚಿತ್ರಕಥಾಲೇಖಕರು ಬಂದು ಸೇರಿಕೊಳ್ಳುತ್ತಿದ್ದ ಆ ಕ್ಲಾಸುಗಳಲ್ಲಿ ದೊಡ್ಡ ದೊಡ್ಡ ಕಾದಂಬರಿಕಾರರಿಂದ ಕಲಿತ ಗಂಭೀರ ಪಾಠಗಳನ್ನು ಕೂಡ ಸಿಡ್ ಫೀಲ್ಡ್ ಬಳಸುತ್ತಿದ್ದ. ಒಂದು ಕ್ಲಾಸಿನಲ್ಲಿ ಸಿಡ್ ಫೀಲ್ಡ್ ಅಮೆರಿಕದ ಮಹತ್ವದ ಕಾದಂಬರಿಕಾರ ಹೆನ್ರಿ ಜೇಮ್ಸ್ ರೂಪಿಸಿದ ‘ಪಾತ್ರ ಪ್ರಕಾಶ ತತ್ವ’ (ಥಿಯರಿ ಆಫ್ ಇಲ್ಯುಮಿನೇಶನ್) ಪರಿಕಲ್ಪನೆಯನ್ನು ಬಳಸಿದ. ಪ್ರಖ್ಯಾತ ‘ಪೋರ್ಟ್ರೈಟ್ ಆಫ್ ಎ ಲೇಡಿ’ ಕಾದಂಬರಿ ಬರೆದ ಹೆನ್ರಿ ಜೇಮ್ಸ್, ಪ್ರತಿ ಪಾತ್ರಗಳ ಜೊತೆಗಿನ ಮಾತುಕತೆ, ಪ್ರತಿಕ್ರಿಯೆಗಳು ಕೇಂದ್ರ ಪಾತ್ರವನ್ನು ಬೆಳಗಿಸುವ ರೀತಿಯನ್ನು ತನ್ನ ಕಾದಂಬರಿ ಬರವಣಿಗೆಯಲ್ಲಿ ಕಂಡುಕೊಂಡಿದ್ದ. ಸಿಡ್ ಫೀಲ್ಡ್ ಈ ತತ್ವವನ್ನು ಸಿನಿಮಾಕ್ಕೂ ವಿಸ್ತರಿಸಿಕೊಂಡು ಉಳಿದ ಪಾತ್ರಗಳ ಜೊತೆಗಿನ ಮುಖಾಮುಖಿಗಳು ಕೇಂದ್ರ ಪಾತ್ರವನ್ನು ಬೆಳಗಿಸುವ ರೀತಿಯನ್ನು ತೋರಿಸಲೆತ್ನಿಸಿದ.

ಇಂಥದೊಂದು ಕ್ಲಾಸಿನಲ್ಲಿ ಸಿಡ್ ಫೀಲ್ಡ್ ಜಗತ್ತಿನ ಶ್ರೇಷ್ಠ ಕಾದಂಬರಿಕಾರರ ಸಾಲಿನಲ್ಲಿರುವ ಜೇಮ್ಸ್ ಜಾಯ್ಸ್ ಮಾತೊಂದನ್ನು ಉಲ್ಲೇಖಿಸುತ್ತಾನೆ: ‘ಬರೆಯುವುದೆಂದರೆ ಪರ್ವತ ಹತ್ತಿದ ಹಾಗೆ. ಪರ್ವತವನ್ನೇರುವಾಗ ನೀವು ನೋಡುವುದು ಆ ಕ್ಷಣಕ್ಕೆ ನಿಮ್ಮ ಎದುರಿಗಿರುವ ಬಂಡೆಯನ್ನು ಹಾಗೂ ನಿಮ್ಮ ಹಿಂದಿರುವ ಬಂಡೆಯನ್ನು. ನೀವು ಎಲ್ಲಿಂದ ಬಂದಿರಿ, ಎಲ್ಲಿಗೆ ಹೋಗುತ್ತಿದ್ದೀರಿ…ಇದ್ಯಾವುದೂ ನಿಮಗೆ ಕಾಣುವುದಿಲ್ಲ.’ 


ಅದೇ ಆಗ ಸ್ಕ್ರೀನ್‌ ಪ್ಲೇ ಕ್ಷೇತ್ರದಲ್ಲಿ ತಡವರಿಸುತ್ತಾ ನಡೆಯಲೆತ್ನಿಸುತ್ತಿದ್ದ ನನಗೆ ಸಿಡ್ ಫೀಲ್ಡ್ ಪುಸ್ತಕಗಳ ಪಾಠಗಳ ಜೊತೆಗೇ ಹೆನ್ರಿ ಜೇಮ್ಸ್, ಜೇಮ್ಸ್ ಜಾಯ್ಸ್ ಒಳನೋಟಗಳಿಂದ ಝಗ್ಗಂತ ಬೆಳಕಾಯಿತು! ಅವುಗಳಿಂದ ಕಲಿಯುತ್ತಲೇ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ, ರಿಫ್ರೆಶರ್ ಕೋರ್ಸುಗಳಲ್ಲಿ ಅಧ್ಯಾಪಕ, ಅಧ್ಯಾಪಕಿಯರಿಗೆ ಈ ಬೆಳಕನ್ನು ಹಂಚಿಕೊಂಡ ನೆನಪಿದೆ. 2020ರ ಸುಮಾರಿಗೆ ಸಿಡ್ ಫೀಲ್ಡ್ ಪುಸ್ತಕಗಳು ನನಗೆ ಸಿಕ್ಕಿದ್ದು ಕೂಡ ಆಕಸ್ಮಿಕ. ಚಿತ್ರಕತೆಯೊಂದನ್ನು ಬರೆಯಲು ಪ್ರಯತ್ನಿಸುತ್ತಿದ್ದ ನನಗೆ ಈ ಥರದ ಬರವಣಿಗೆಗೆ ಆವರೆಗಿನ ನನ್ನ ನಾಟಕ ಬರವಣಿಗೆಯ ಅನುಭವವಷ್ಟೇ ಸಾಕಾಗಲಿಕ್ಕಿಲ್ಲ ಎಂಬುದು ಮನದಟ್ಟಾಗತೊಡಗಿತು. ಆ ತಡವರಿಕೆಯ ಕಾಲದಲ್ಲಿ ಗೆಳೆಯ, ಚಲನಚಿತ್ರ ನಿರ್ದೇಶಕ ರಾಘು ಶಿವಮೊಗ್ಗ ಪ್ರತಿ ಪುಟದ ಬರವಣಿಗೆಯಲ್ಲೂ ಕಲಿಸಿದ ದೃಶ್ಯಪಾಠಗಳು ಮೊನ್ನೆ ತಾನೇ ಕಲಿತ ಪಾಠಗಳಂತಿವೆ. ಇದರ ಜೊತೆಗೆ ಗೆಳೆಯ, ನಟ ಕಿರಣ್ ನಾಯಕರ ನಟನೆಯ ಅನುಭವದಿಂದ ಹುಟ್ಟಿದ ಪ್ರತಿಕ್ರಿಯೆಗಳೂ ಸೇರಿಕೊಂಡವು; ಈ ಮಾತುಕತೆಗಳ ಬೆಳಕಿನಲ್ಲಿ ಚಿತ್ರಕತೆ ಬರೆಯತೊಡಗಿದಾಗ ಬರವಣಿಗೆಯ ಹೊಸ ಕಲೆಯೊಂದನ್ನು ಕಲಿಯಬಹುದು ಎಂಬ ನಂಬಿಕೆ ಬರತೊಡಗಿತು; ಸಿಡ್ ಫೀಲ್ಡ್ ಬರೆದ ‘ಸ್ಕ್ರೀನ್‌ಪ್ಲೇ’, ‘ದ ಸ್ಕ್ರೀನ್ ರೈಟರ್ಸ್ ವರ್ಕ್ ಬುಕ್’, ‘ಗೋಯಿಂಗ್ ಟು ದ ಮೂವೀಸ್’ ಪುಸ್ತಕಗಳನ್ನು ಓದುತ್ತಾ ಇನ್ನಷ್ಟು ಸ್ಪಷ್ಟತೆ ಬರತೊಡಗಿತು. ಸ್ಕ್ರೀನ್‌ಪ್ಲೇ ವರ್ಕ್ ಶಾಪ್ ಮಾಡುತ್ತಾ ಸಿಡ್ ಫೀಲ್ಡ್ ರೂಪಿಸಿದ ಈ ಪುಸ್ತಕಗಳು ನನಗೆಂದೂ ಗೊತ್ತಿರದ ಹೊಸ ಬಗೆಯ ಬರವಣಿಗೆಯನ್ನು, ಸಿನಿಮಾ ಬರವಣಿಗೆಯ ಒಳಹೊರಗನ್ನು, ಕಾಣಿಸತೊಡಗಿದವು.  

ಸಿಡ್ ಫೀಲ್ಡ್ ಬಗ್ಗೆ ಇನ್ನಷ್ಟು ಗೌರವ ಮೂಡತೊಡಗಿದ್ದು ದೊಡ್ಡ ದೊಡ್ಡ ನಿರ್ದೇಶಕರು, ಮಹತ್ವದ ಸಿನಿಮಾಗಳು ಹಾಗೂ ಕಾದಂಬರಿಕಾರರಿಂದ ಕಲಿತ ಬರವಣಿಗೆಯ ಪಾಠಗಳನ್ನು ಅವನು ತನ್ನ ಸ್ಕ್ರೀನ್‌ಪ್ಲೇ ಕ್ಲಾಸುಗಳಲ್ಲಿ ಬಳಸುವ ಕ್ರಿಯೇಟಿವ್ ಪ್ರಯೋಗ ಕಂಡಾಗ. ಸಿಡ್ ಫೀಲ್ಡ್ ಪುಸ್ತಕಗಳನ್ನು ಓದಿ ಟಿಪ್ಪಣಿ ಮಾಡಿಕೊಳ್ಳುತ್ತಾ ಹತ್ತಾರು ಸಲ ತಿದ್ದಿ ಬರೆದ ಚಿತ್ರಕತೆಯನ್ನು ರಾಘು ಶಿವಮೊಗ್ಗ ಹಾಗೂ ನಟ ಕಿಶೋರ್ ಇಬ್ಬರೂ ಒಪ್ಪಿದ ಮೇಲೆ, ವೃತ್ತಿಪರ ನಿರ್ದೇಶಕರಾದ ಬಿ.ಸುರೇಶ್, ಕೃಷ್ಣ ಮಾಸಡಿ, ಕಬಡ್ಡಿ ನರೆಂದ್ರಬಾಬು, ನಟರಾಜ್ ಹೊನ್ನವಳ್ಳಿಯವರ ಎದುರು ಕೂಡ ಓದಿ ಪಾಸಾದೆ! ನಾವು ಹಲ ಬಗೆಯ ಬರವಣಿಗೆಗಳನ್ನು ನಿಜಕ್ಕೂ ಒಂದು ಮಟ್ಟದವರೆಗಾದರೂ ಕಲಿಯಬಹುದು ಎಂದು ಸೂಚಿಸಲು ಮಾತ್ರ ಈ ಅನುಭವವನ್ನು ಇಲ್ಲಿ ಹೇಳಿರುವೆ. ಹಾಗೆ ಹೇಳಲು ಕಳೆದ ವಾರದ ಅಂಕಣದಲ್ಲಿ ಪ್ರಕಟವಾದ ‘ಬರೆವ ಕಲೆ: ಕಲಿಯಬಹುದೆ? ಕಲಿಸಬಹುದೆ?’ (READ HERE) ಎಂಬ ಪ್ರಶ್ನೆಗಳಿಗೆ ಬಂದ ಪ್ರತಿಕ್ರಿಯೆಗಳ ಕಚಗುಳಿಯೂ ಪ್ರೇರಣೆಯಾಗಿದೆ! ಆ ಪ್ರತಿಕ್ರಿಯೆಗಳನ್ನು ಆ ಬರಹದ ಕಾಮೆಂಟ್ಸ್ ವಿಭಾಗದಲ್ಲೂ ನೀವು ನೋಡಬಹುದು. 

ಈ ನಡುವೆ ಕಂಡ ಕವಿ ಚಂದ್ರಶೇಖರ ತಾಳ್ಯರ ಏಕಲವ್ಯ ಸಾಧನೆಯ ಅನುಭವ ಬರವಣಿಗೆಯ ಕಲಿಕೆಯ ಮತ್ತೊಂದು ಲೋಕವನ್ನು ತೋರಿಸುವಂತಿದೆ:
‘ನಾನು ಬರೆಯುವುದನ್ನು ಕಲಿತ ರೀತಿ ವಿಚಿತ್ರವಾಗಿದೆ, ಹಳ್ಳಿಯಲ್ಲಿ ಬೆಳೆದ ನನಗೆ ಬರಹ ಕಲೆಯ ಮರ್ಮ ತಿಳಿಯುವುದು ಅಷ್ಟು ಸಲೀಸಾಗಿರಲಿಲ್ಲ. ನಮ್ಮ ಮನೆಯಲ್ಲಿ ಮೊದಲ ಅಕ್ಷರಸ್ಥ ನಾನೇ. ಹೇಗೋ ಏನೋ ಮಹಾಕವಿ ಕುವೆಂಪು ಅವರ ವಿಳಾಸ ಹುಡುಕಿ ಅವರ ಯಾವುದಾದರೂ ಪುಸ್ತಕವನ್ನು ವಿ.ಪಿ.ಪಿ. ಮೂಲಕ ಕಳಿಸಿಕೊಡುವಂತೆ ಪತ್ರ ಬರೆದು ಪ್ರಾರ್ಥಿಸಿದ್ದೆ. ಕುವೆಂಪು ಅವರು ಮರುಟಪಾಲಿನಲ್ಲೇ ‘ಕೊಳಲು’, ‘ಬೊಮ್ಮನಹಳ್ಳಿ ಕಿಂದರಿಜೋಗಿ’ ಪುಸ್ತಕಗಳನ್ನು ಕಳಿಸಿದ್ದರು; ‘ಬೊಮ್ಮನಹಳ್ಳಿ ಕಿಂದರಿಜೋಗಿ’ಗೆ ಹಣ ತೆಗೆದುಕೊಳ್ಳದೆ ‘ಆಶೀರ್ವಾದ’ ಎಂದು ಬರೆದು ತಮ್ಮ ಸಹಿ ಹಾಕಿ ಕಳಿಸಿದ್ದರು.


‘ನಂತರ ನಾನು ವರಕವಿ ಬೇಂದ್ರೆಯವರ ಧಾರವಾಡದ ‘ಶ್ರೀಮಾತಾ’ಕ್ಕೆ ಅವರ ‘ಮೇಘದೂತ’ ಮತ್ತು ‘ಗರಿ’ ಸಂಕಲನಗಳನ್ನು ಕೊಂಡುಕೊಂಡು ಹೋಗಿದ್ದೆ. ಅಲ್ಲಿ ಅವರು ‘ಮೇಘದೂತ’ದ ಕೆಲವು ಭಾಗವನ್ನು, ‘ಗರಿ’ಯ ಕೆಲವು ಕವನಗಳನ್ನು ಸುಮಾರು ಅರ್ಧ ಗಂಟೆ ವಾಚಿಸಿ ಆಶೀರ್ವಾದ ಮಾಡಿ ಕಳಿಸಿಕೊಟ್ಟರು. ಇದೆಲ್ಲ ನಡೆದದ್ದು ನನ್ನ ಹೈಸ್ಕೂಲ್ ವಿದ್ಯಾಭ್ಯಾಸದ ಕೊನೆಯ ಹಂತದಲ್ಲಿ. ಮುಂದೆ ನಾನು ಈ ಮಹಾಕವಿಗಳಿಬ್ಬರೂ ಬರೆವ ರೀತಿಯಲ್ಲಿ ಬರೆಯಲು ಪ್ರಯತ್ನಿಸಿದೆ. ನಂತರ ನವ್ಯರು, ಅದರಲ್ಲೂ ಲಂಕೇಶ್, ಚಂದ್ರಶೇಖರ ಪಾಟೀಲ (ಚಂಪಾ), ಬರೆದಂತೆ ಬರೆಯಲು ಯತ್ನಿಸಿದೆ. ಇಲ್ಲಿಂದ ನಿಧಾನವಾಗಿ ಒಂದು ತಿಳಿವು ಮೂಡುತ್ತಾ ನನ್ನ ದಾರಿ ಕಂಡುಕೊಳ್ಳಲು ಕಾತರಿಸಿದೆ.

https://youtube.com/@bendrepedia

‘ಈಗಲೂ ನಾನು ನನ್ನ ನಂತರದ ಪೀಳಿಗೆಯ ಬರಹಗಾರರಿಂದಲೂ ಪ್ರಭಾವಗೊಂಡಿರುವುದೂ ಉಂಟು. ಕವಿತೆ ಅಥವಾ ಯಾವುದೇ ಪ್ರಕಾರದ ಬರವಣಿಗೆಯ ಕಲಿಕೆಗೆ ಕೊನೆ ಇಲ್ಲ. ಹೀಗೆ ಕಲಿಯುತ್ತಲೇ ನಮ್ಮದೇ ಆದ ಈಡಿಯಂ ಒಂದನ್ನು ಕಂಡುಕೊಳ್ಳುವುದು ಕ್ರಮ ಅನಿಸುತ್ತದೆ.’ 
ಕ್ರಮೇಣ ಚಂದ್ರಶೇಖರ ತಾಳ್ಯ ಒಬ್ಬ ಒಳ್ಳೆಯ ಕವಿಯಾಗಿ ಬೆಳೆದ ಹಾದಿ ಇದು.

ನಾವು ನಂಬಿದ ಮಾರ್ಗಗಳು ಅಥವಾ ಗ್ರಹಿಕೆಗಳ ಬಗೆಗೆ ಒಂದಿನಿತೂ ಸಂದೇಹವಿಲ್ಲದ ಬದ್ಧತೆ ನಮ್ಮನ್ನು ‘ಕನ್ಸರ್ವೇಟಿಸಂ’ ಕಡೆಗೆ, ಅಂದರೆ ನಾವು ಹಿಂದೊಮ್ಮ ನಂಬಿದ್ದೇ ಸರಿಯೆಂದು ತಿಳಿಯುವ ಅತಿಸಾಂಪ್ರದಾಯಿಕತೆಯ ಕಡೆಗೆ, ಜಗ್ಗುತ್ತಿರುತ್ತದೆ; ಆಗ ಹೊಸ ಪ್ರಯೋಗಗಳ, ಹೊಸ ಸತ್ಯಗಳ ಸಾಧ್ಯತೆಗಳ ಬಗೆಗೆ ನಮ್ಮ ಮನಸ್ಸು ಮುಚ್ಚಿಕೊಳ್ಳುತ್ತದೆ; ಡಿಮ್ಮಾಗತೊಡಗುತ್ತದೆ. ಚಿತ್ರಕತೆ ಬರೆಯುವ ಕಲೆಯನ್ನು ತಕ್ಕಮಟ್ಟಿಗೆ ಕಲಿತ ನನ್ನ ಅನುಭವ ಹಾಗೂ ಕವಿತೆ ಬರೆಯುವುದನ್ನು ಕಲಿತ ತಾಳ್ಯರ ಅನುಭವಗಳು ಬರೆವ ಕಲೆಯನ್ನು ಕಲಿಯಬಹುದು ಹಾಗೂ ನಮಗರಿವಿಲ್ಲದೆ ಕಲಿಸಲೂಬಹುದು ಎಂದು ಸಣ್ಣಗೆ ಸೂಚಿಸುವಂತಿದೆ. 

ಹೀಗೆ ಯಾರು ಯಾರಿಗಾದರೂ ಕಲಿಸುತ್ತಲೇ ಇರಬಹುದು ಎಂಬುದನ್ನು ನಾವು ನಿತ್ಯ ನೋಡುತ್ತಿರುತ್ತೇವೆ. ಒಳ್ಳೆಯ ಸಿನಿಮಾದಿಂದ ಕತೆ ಬರೆಯುವವರು ಕಲಿಯಬಲ್ಲರು; ಹಾಗೆಯೇ ಕಾದಂಬರಿ ಬರೆಯುವವರಿಂದ ಚಿತ್ರ ಬರೆಯುವವರು; ನಾಟಕ ನಿರ್ದೇಶಕರಿಂದ ನಾಟಕಕಾರರು; ಪೇಂಟರ್ ಸಾಲ್ವೆಡಾರ್ ಡಾಲಿಯಿಂದ ಕವಯಿತ್ರಿಯರು;…ಅಥವಾ ಬಡಗಿ, ಶಿಲ್ಪಿಗಳ ಅನುದಿನದ ಏಕಾಗ್ರ ಕೆತ್ತನೆಯಿಂದ ಕವಿ…ಹೀಗೆ ಕಲಿಯುವ ಕೆಲಸ ನಡೆಯುತ್ತಲೇ ಇರುತ್ತದೆ. ಏನನ್ನಾದರೂ ಕಲಿಯಬಲ್ಲೆ ಎಂದು ಹೊರಡುವ ಇಪ್ಪತ್ತೊಂದನೆಯ ಶತಮಾನದ ಎಳೆಯರ ಝೀಲ್ ನೋಡಿದ ಹಿರಿಯರಿಗೆ ಕೂಡ ಬರೆಯುವುದನ್ನು ಕಲಿಯಬಹುದು ಅಥವಾ ಕಲಿಸಬಹುದು ಎಂಬ ಹುಮ್ಮಸ್ಸು ಹುಟ್ಟಬಲ್ಲದು! ಅದರ ಜೊತೆಗೆ, ‘ಕಲಿಸದಿದ್ದರು ಕೂಡ ಕಲಿತಿಲ್ಲ ಎಂಬ ನೆನಪುಳಿಸು’ ಎಂಬ ಅಡಿಗರ ‘ಪ್ರಾರ್ಥನೆ’ಯ ಮನವಿ ನೆನಪಾದರೆ, ಆ ವಿವೇಕ ನಮ್ಮನ್ನು ಸದಾ ಎಚ್ಚರದಲ್ಲಿಡಬಲ್ಲದು!

ಈ ಮಧ್ಯೆ ಮೂವರು ವಿಭಿನ್ನ ಸಿನಿಮಾ ನಿರ್ದೇಶಕರು ಈ ಬಗೆಯ ಕಲಿಕೆ ಕುರಿತು ಕೊಟ್ಟ ಮೂರು ದಿಕ್ಕಿನ ಪ್ರತಿಕ್ರಿಯೆಗಳು ಈ ಬಗ್ಗೆ ಬೇರೆ ಬೇರೆ ದಿಕ್ಕಿನಿಂದ ಯೋಚಿಸುವಂತೆ ಕೆಣಕತೊಡಗಿವೆ. ಈ ಗೆಳೆಯರ ಜೊತೆಗಿನ ಮತ್ತೊಂದು ಸುತ್ತಿನ ಮಾತುಕತೆಯ ನಂತರ ಅದನ್ನೆಲ್ಲ ಮುಂದಿನ ಅಂಕಣಗಳಲ್ಲಿ ವಿಸ್ತೃತವಾಗಿ ಚರ್ಚಿಸಬಹುದೇನೋ!  

 

ಡಯಲಾಗ್

ಲೋಕದ ವಿಸ್ಮಯ ಸೃಷ್ಟಿಗಳಾದ ಗ್ರೀಕ್ ಟ್ರ್ಯಾಜಿಡಿಗಳನ್ನೆಲ್ಲ ಅರೆದು ಕುಡಿದ ಅರಿಸ್ಟೋಫನಿಸ್ (446 ಬಿ.ಸಿ.-386 ಬಿ.ಸಿ.) ಆ ಟ್ರ್ಯಾಜಿಡಿ ನಾಟಕಕಾರರನ್ನು, ಸರ್ವಾಧಿಕಾರಿ ರಾಜರನ್ನು, ನಾಟಕ ನೋಡುವವರನ್ನು ಗೇಲಿ ಮಾಡುತ್ತಲೇ ಶ್ರೇಷ್ಠ ಕಾಮಿಡಿನಾಟಕಕಾರನಾಗಿ ಬೆಳೆದ. ‘ಕಾಮಿಡಿ ಜನಕ’ ಅರಿಸ್ಟೋಫನಿಸ್ ಗ್ರೀಕ್ ದುರಂತ ನಾಟಕಕಾರರಿಗಿಂತ ಒಂದು ಹೆಜ್ಜೆ ಮುಂದೆಯೇ ಇದ್ದ ಎಂಬುದು ಅವನ ನಾಟಕಗಳನ್ನು ನೋಡಿದರೆ ಹೊಳೆಯುತ್ತದೆ. ಈಚೆಗೆ ಅವನ ‘ದ ಬರ್ಡ್ಸ್’ ನಾಟಕ ಓದುತ್ತಿರುವಾಗ ಅವನ ಇನ್ನಿತರ ನಾಟಕಗಳನ್ನೂ ಓದದೇ ಇರಲಾಗಲೇ ಇಲ್ಲ! ‘ದ ಬರ್ಡ್ಸ್’ ನಾಟಕದಲ್ಲಿ ಒಬ್ಬ ಧಣಿ, ಅವನ ಆಳು ಇಬ್ಬರೂ ಹಕ್ಕಿಯಾಗಿ ಪರಿವರ್ತನೆಯಾಗುತ್ತಾರೆ; ಆಗ ನಡೆಯುವ ಒಂದು ಡಯಲಾಗ್:

ಯೂಲ್ಪಿಡೀಸ್: ಎಂಥಾ ಪ್ರಾಣೀನಯ್ಯ ನೀನು?
ಟ್ರಾಕಿಲಸ್: ಯಾಕಣ್ಣ! ನಾನು ಗುಲಾಮ ಹಕ್ಕಿ!
ಯೂಲ್ಪಿಡೀಸ್: ಯಾಕೆ… ಕೋಳಿ ಏನಾರ ಬಂದು ನಿನ್ನ ಮೇಲೆ ಆಕ್ರಮಣ ಮಾಡ್ತಾ?
ಟ್ರಾಕಿಲಸ್: ಇಲ್ಲ ಇಲ್ಲ! ನನ್ನ ಧಣಿ ಟಿಟ್ಟಿಭ ಹಕ್ಕಿ ಆದಾಗ, ‘ನೀನೂ ಹಕ್ಕಿ ಆಗಿ ನನ್ನ ಸೇವೆ ಮಾಡ್ಕಂಡಿರುವಂತೆ… ನನ್ ಹಿಂದೆ ಬಾ’ ಅಂದ! 
ಯೂಲ್ಪಿಡೀಸ್: ಹಂಗಾರೆ ಹಕ್ಕೀಗೂ ಆಳು ಬೇಕೂನ್ನು!
ಟ್ರಾಕಿಲಸ್: ನಮ್ಮ ದಣಿ ಮನಷಾ ಆಗಿದ್ನಲ್ಲ, ಅದುಕ್ಕೆ! ಈಗ…ಅವನಿಗೆ ಕುಡಿಯೋಕೆ ಸೂಪ್ ಬೇಕೂಂದ್ರೆ ನಾನು ಕುಡಿಕೆ ತಗೊಂಡು ಓಡೋಗ್ತೀನಿ! 
 

ಬ್ಲಾಗ್ ಫಾಲೋ ಮಾಡಲು ಒಪ್ಪಿ, ಕ್ಲಿಕ್ ಮಾಡಿ; ನೋಟಿಫಿಕೇಶನ್ ಪಡೆಯಿರಿ, ಶೇರ್ ಮಾಡಿ: FOLLOW
ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com 
ಬಿಡುವಾದಾಗ ನೋಡಿ, ಶೇರ್ ಮಾಡಿ:  https://www.youtube.com/@NatarajHuliyarYT

Share on:

Comments

3 Comments



| Gangadhara BM

ನಮಸ್ತೆ ಸರ್. ಈ ವಾರದ ಲೇಖನದ ವಿಷಯ ವಸ್ತು ನನಗೆ ಹೊಸತು. ಆದರೆ ಇದೂ ಸಹ ಬರಹದ ಸೃಷ್ಟಿ ಕ್ರಿಯೆಗೆ ಸಂಬಂಧಿಸಿದ್ದು. ನಾಟಕ/ಸಿನೆಮಾ ಪ್ರಯೋಗದಲ್ಲಿ ಬಳಸುವ ಪಠ್ಯದ ಹೊಸ ಸಾಧ್ಯತೆಗಳ ಅನ್ವೇಷಣೆ ಕಡೆಗೆ  ಇದು ಗಮನ ಕೊಡುತ್ತದೆ. ಭವಿಷ್ಯದಲ್ಲಿ ಸಿಡ್ ಫೀಲ್ಡ್ ಕೃತಿ ಓದಬೇಕೆನಿಸುತ್ತದೆ. ಧನ್ಯವಾದಗಳು

\r\n


| ಉದಯಕುಮಾರ ಹಬ್ಬು

ಕಲೊಯುವ ಮತ್ತು  ಕಲಿಸುವ ಪ್ರಕ್ರಯೆ ಸೃಜನಶೀಲ ಸಾಹಿತ್ಯ ಸೃಷ್ಟಿಗೆ ಅನ್ವಯಿಸಬಹುದೆ? ಓದದೆ ಕವಿಗೆ ಬರೆಯಲು ಸಾಧ್ಯವೆ? ಸೃಷ್ಟಿ ಏಕಾಂತ ಧ್ಯಾನದಲ್ಲಿ ಆಗುವ ಪ್ರಕ್ರಿಯೆ. ಅಮೇರಿಕಾದಲ್ಲಿ ಪದವಿ ತರಗತಿಗಳಿಗೆ Crearuve Writing ಎಂಬ ಸಬ್ಜೆಕ್ಟ್ ಕೂಡ ಇದೆ. ಬರಹಗಾರರುಗೆ ಕಲಿಕೆ ಎಲ್ಲಿಂದ ಪ್ತಾರಂಭ? ಅವನು ಪೂರ್ವಸೂರಿಗಳನ್ನು ಓದಿಕೊಳ್ಳಬೇಕಾದದ್ದು ಮೊದಲ ಹಂತ. ಅವರಿಂದ ಪ್ರೇರಣೆ  ಪಡೆದು ತನ್ನ ಪ್ರತಿಭೆಯ ಮೂಸೆಯಲ್ಲಿ  ತನ್ನದೆ ಆದ ಕವಿತಾ ರತ್ನವನ್ನು ರಚಿಸುತ್ತಾನೆ. ಆದರೆ ಬರೆಯುವ ಸಾಮರ್ಥ್ಯ ಅಥವಾ ಸಯಜನಶೀಲ ಕೃತಿಗಳನ್ನು ರಚಿಸುವ ಸಾಮರ್ಥ್ಯ ಎಲ್ಲರಲ್ಲೂ ಇರುವುದಿಲ್ಲ. ಖ್ಯಾತ ಕಾದಂಬರಿಕಾರ ರಾಘವೇಂದ್ರ ಪಾಟೀಲರು ತಮ್ಮ ಒಂದು ಸಂದರ್ಶನದಲ್ಲಿ ಹೇಳಿದರು. "ಬರಹಗಾರನಲ್ಲಿ ಬರೆಯುವ ಅ್ಯಾಪ್ ಇರದಿದ್ದರೆ ಅವನಿಗೆ ಬರೆಯಲು ಮನಸ್ಸಿದ್ದರೂ ಬರೆಯಲಾಗುವುದಿಲ್ಲ. ತನ್ನ ಸಹೋದರ ವಿಜಯೇಂದ್ರ ಪಾಟೀಲ್ ಪ್ರಬಂಧಗಳನ್ನು ಬರೆದು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ. ಮುಂದೆ ಅವನು ಬರೆಯುವುದನ್ನೇ ಬಿಟ್ಡ‌" ಎನ್ನುತ್ತಾರೆ‌

\r\n\r\n

ನಮ್ಮ ಪೂರ್ವಸೂರಿಗಳು ಬರಹಗಾರರಿಗೆ ಬರೆಯಲು ಪ್ರೇರಣೆ ನೀಡಿರುವುದು ಒಂದು ಬಗೆಯ ತರಬೇತಿಯೆ. ಹಾಗಾಗಿ  ಸೃಜನಶೀಲ ಬರಹಗಾರನಿಂದ ತರಬೇತಿ ಪಡೆದಲ್ಲಿ ಬೆಹಗಾರ ಬರೆಯುವ ಸ್ಫೂರ್ತಿ ಪಡೆಯಬಹುದು. ನಿರಂತರ ಕಲಿಕೆ ಸೃಜನಶೀಲ ಬರಹಕ್ಕೆ ಪೂರಕ‌ 

\r\n


| MOINESH BADIGER

ಡೇವಿಡ್ ಫ್ಲಿಂಚರ್ ನಿರ್ಮಾಣದ HOUSE OF SERIES ವೆಬ್ ಸೀರೀಸ್ ನೋಡಿ. ಸ್ರ್ಕೀನ್ ಪ್ಲೇ, ಅಭಿನಯ, ಮೆಟಫರುಗಳು ಎಲ್ಲವೂ ತುಂಬ ಪರ್ಫೆಕ್ಟ್.  ಸ್ರ್ಕೀನ್ ಪ್ಲೇ ರೈಟಿಂಗ್ ಅಂತೂ ಕಲಿಕೆಗೆ ಅರ್ಹವಾಗಿದೆ

\r\n




Add Comment






Recent Posts

Latest Blogs



Kamakasturibana

YouTube