ಬರೆವ ಕಲೆ: ಕಲಿಯಬಹುದೆ, ಕಲಿಸಬಹುದೆ?
by Nataraj Huliyar
ಗೆಳೆಯ ಸುನಿಲ್ ಬರೆದ ಮಾತು ಚಕಿತಗೊಳಿಸುವಂತಿತ್ತು: ‘ಮರೆತ ಬರಹವ ಮತ್ತೆ ನೆನಪಿಗೆ ಬರುವಂತೆ ಮಾಡಿದ ನಿಮಗೆ…’ ಎಂದು ಶುರು ಮಾಡಿದ್ದ ಸುನಿಲ್, ತಾನು ಇಂಗ್ಲಿಷ್ ಮೇಷ್ಟರಾದ ಹೊಸದರಲ್ಲಿ ಕತೆ ಬರೆಯಲು ಪ್ರೇರೇಪಿಸಿದ್ದ ಗಳಿಗೆಯ ಬಗ್ಗೆ ಬರೆದಿದ್ದು ಮನ ಕರಗಿಸುವಂತಿತ್ತು.
ಸುನಿಲ್‌ನ ಕ್ಲಾಸಿನಲ್ಲಿ ಕೂತಿದ್ದ ಕಣ್ಣಿಲ್ಲದ ನತದೃಷ್ಟ ವಿದ್ಯಾರ್ಥಿಯೊಬ್ಬ ಕೇಳಿದ: ‘ಹುಡುಗೀರು ಹೇಗಿರ್ತಾರೆ ಸಾ…ಸ್ಪರ್ಶಕ್ಕೆ…’
ಆ ಹುಡುಗನ ‘ಭಾವಗಳಿಗೆ ಪದ ಒದಗಿಸಲು ಆರಂಭವಾದ ನೀಳ್ಗತೆ… ತರಗತಿ ಬದಲಾವಣೆಯಿಂದ ಅರ್ಧಕ್ಕೆ ನಿಂತಿತು’ ಎಂದ ಸುನಿಲ್.
‘ಅಲ್ಲೇ ಕತೆ ಇರೋದು, ಸುನಿಲ್! ಆ ಹುಡುಗನ ಪ್ರಶ್ನೆಯಿಂದಲೇ ನೀನು ಮತ್ತೆ ಕತೆ ಶುರು ಮಾಡಬಹುದು. ಸಂಭಾಷಣೆಯ ಮೂಲಕವೇ ಕತೆ ಬೆಳೆಸಬಹುದು…’ ಎಂದೆ.
ಸುನಿಲ್ ಮುಂದೆ ಏನು ಮಾಡುತ್ತಾನೋ, ಅದು ಅವನ ಕ್ರಿಯೇಟಿವಿಟಿಗೆ ಬಿಟ್ಟಿದ್ದು! ಆದರೆ ಕ್ರಿಯೇಟಿವಿಟಿಯ ಮೇಲೆ ಭಾರ ಹಾಕಿ, ಓದು, ಬರಹ, ಸ್ವಂತದ ಅನುಭವ, ಇತರರ ಅನುಭವಗಳ ಲೋಕದ ಜೊತೆಗೆ ಸೆಣಸಾಡಿ, ಶ್ರಮ ಪಡದ ಲೇಖಕರ ಸ್ಥಿತಿ ವಿಧಿಗೆ ಎಲ್ಲವನ್ನೂ ಬಿಟ್ಟ ಹಳಬರ ಸ್ಥಿತಿಯಂತೆಯೇ ಇರುತ್ತದೆಂಬುದು ಮಾತ್ರ ಖಾತ್ರಿ!
‘…ವರುಷಗಳುರುಳಿದ ನಂತರ ಇತ್ತೀಚಿನ ನಿಮ್ಮ ಬರಹಗಳು ಮತ್ತೆ ಪದಗಳ ಚಡಪಡಿಕೆಗೆ ಕಾರಣವಾಗಿ, ಈತನಕ ಚುಟುಕಗಳಲ್ಲೇ ನಿಂತಿದ್ದ ಭಾವಲಹರಿ ಬರವಣಿಗೆಯ ಸುಳಿಗೆ ಸಿಕ್ಕಿ, ‘ಜಂಗಮವಾಣಿ’ ಬಿಟ್ಟು ಮತ್ತೆ ಲೇಖನಿ ಹಿಡಿಯುವಂತೆ ಮಾಡಿದ ನಿಮಗೆ ಥ್ಯಾಂಕ್ಸ್’ ಎಂದು ಸುನಿಲ್ ಪತ್ರ ಮುಗಿಯುತ್ತದೆ.
ಸುನಿಲ್ ಮಾತಿನ ಮೂಲಕ ಈ ಸಲದ ಅಂಕಣಕ್ಕೆ ‘ಬರೆವ ಕಲೆಯನ್ನು ಕಲಿಸಬಹುದೆ, ಕಲಿಬಹುದೆ?’ ಎಂಬ ವಸ್ತು ಮೂಡತೊಡಗಿದ್ದರಿಂದ ಆ ಸಾಲುಗಳನ್ನು ಇಲ್ಲಿ ಉಲ್ಲೇಖಿಸಿರುವೆ.
ಹೀಗೆ ಪ್ರಾಮಾಣಿಕವಾಗಿ ತಡವರಿಸುತ್ತಾ ಬರೆಯಲೆತ್ನಿಸುವ ಗೆಳೆಯ, ಗೆಳತಿಯರು, ವಿದ್ಯಾರ್ಥಿ, ವಿದ್ಯಾರ್ಥಿನಿಯರುಗಳ ಬಗ್ಗೆ ನನಗೆ ಎಂದೂ ಬತ್ತದ ಕುತೂಹಲ ನಿರೀಕ್ಷೆಗಳು ಮೂಡುತ್ತಿರುತ್ತವೆ. ರಾಮಚಂದ್ರ ಶರ್ಮರ ‘ಏಳು ಸುತ್ತಿನ ಕೋಟೆ’ ಪದ್ಯದಲ್ಲಿರುವ ‘ಸುಮಕೆ ಸೌರಭ ಬಂದ ಗಳಿಗೆ ಯಾವುದು ಹೇಳು?/ ಬಂತೆ ಮಗು/ ಅಥವಾ ಮನೆಯೊಳಗಿತ್ತೊ?/ ಅಜ್ಞಾತದಾಳದೊಳು ತಲೆ ಮರೆಸಿ ಕುಳಿತೊಂದು ನೆನಹಂತೆ ಆಗ ಅದು ಹೊರಬಿತ್ತೊ!’ ಎಂಬ ಪ್ರಶ್ನೆಗಳು ನೆನಪಾಗುತ್ತವೆ. ಆ ಪದ್ಯದಲ್ಲಿ ಆ ಪ್ರಶ್ನೆಗೆ ‘ಕಾಮಾಂಕುರವಾದ ಗಳಿಗೆ ಯಾವುದು? ಅದು ಈಗಾಗಲೇ ಅಪ್ರಜ್ಞೆಯಲ್ಲಿತ್ತೋ…’ ಮುಂತಾದ ಅರ್ಥಗಳು ಹೊರಡುತ್ತವೆ. ಇವಷ್ಟೇ ಇಲ್ಲಿನ ಅರ್ಥಗಳಲ್ಲ. ನೀವು ಅನೇಕಾನೇಕ ಅರ್ಥ ಹೊರಡಿಸಬಹುದು. ಕತೆ, ಪದ್ಯ ಬರೆಯುವ ಸುಂದರ ಬಯಕೆ ಹುಟ್ಟಿದ ಗಳಿಗೆ ಯಾವುದು ಹೇಳು ಎಂದು ಕೂಡ ಆ ಸಾಲು ನಮ್ಮನ್ನು ಕೇಳುವಂತಿದೆ!
ಸುನಿಲ್ ಹೇಳಿದ ವಿದ್ಯಾರ್ಥಿಗೆ ಅದು ಕಾಮಾಂಕುರವಾದ ಗಳಿಗೆಯೋ ಅಥವಾ ಅದನ್ನು ಅವನು ಬಾಯ್ಬಿಟ್ಟು ಹೇಳಿದ ಗಳಿಗೆಯೋ ಇವೆಲ್ಲವೂ ಮುಂದೆ ಸುನಿಲ್ ಈ ಅನುಭವವನ್ನು ಬರೆಯುವ ಹಾದಿಯಲ್ಲೇ ಸ್ಪಷ್ಟವಾಗಬಲ್ಲವು. ರೈಟಿಂಗ್ ಈಸ್ ಥಿಂಕಿಂಗ್ ಎಂದು ಖಚಿತವಾಗಿ ನಂಬಿರುವ ನನಗಂತೂ ಬರೆಯುವುದೂ ಚಿಂತಿಸುವ ರೀತಿಯೇ ಹೌದು ಎಂಬುದು ಪ್ರತಿ ದಿನ ಮನದಟ್ಟಾಗುತ್ತಿರುತ್ತದೆ.
ಅದಿರಲಿ, ಸುನಿಲ್ ಜೊತೆ ಕತೆ ಬರೆಯುವ ಬಗ್ಗೆ ಮಾತಾಡುತ್ತಿರುವಾಗಲೇ ಒಂದು ಹಳೆಯ ಪ್ರಶ್ನೆ ಮತ್ತೆ ಎದುರಾಯಿತು: ಬರೆಯುವುದನ್ನು, ಅದರಲ್ಲೂ ಕತೆ, ಕವನ, ಕಾದಂಬರಿ ಬರೆಯುವುದನ್ನು, ಯಾರು ಯಾರಿಗಾದರೂ ಕಲಿಸಬಹುದೇ? ಇದೊಂದು ಹಳೆಯ ಪ್ರಶ್ನೆ. ಇದಕ್ಕೆ ಉತ್ತರವೆಂಬಂತೆ ಪಶ್ಚಿಮದ ಕ್ರಿಯೇಟಿವ್ ರೈಟಿಂಗ್ ಕೋರ್ಸುಗಳು ನೆನಪಾಗುತ್ತವೆ. ಇಂಥ ಕೋರ್ಸುಗಳ ಮೂಲಕ ಬರವಣಿಗೆಯ ಕಲೆ ಕಲಿತೆ ಎಂದು ಹಲವು ದೇಶಗಳ ಹೊಸ ಲೇಖಕ ಲೇಖಕಿಯರು ಬರೆದಿರುವುದನ್ನು ಓದಿರುವೆ.
ಈ ಮಾರ್ಗದವರಿಗಿಂತ ಭಿನ್ನವಾಗಿ, ‘ಬರವಣಿಗೆಯನ್ನು ಕಲಿಸಲು ಸಾಧ್ಯವಿಲ್ಲ’ ಎನ್ನುವವರೂ ಇದ್ದಾರೆ.
ಬರವಣಿಗೆಯ ಕಲಿಕೆ ಸಮಾಜವಿಜ್ಞಾನ, ಇಂಜಿನಿಯರಿಂಗ್, ಚರಿತ್ರೆಗಳ ಕ್ಲಾಸುಗಳ ರೀತಿ ಇಲ್ಲದಿರಬಹುದು; ಆದರೆ ಅದು ಒಬ್ಬ ಲೇಖಕ ಅಥವಾ ಲೇಖಕಿ ಇನ್ನೊಬ್ಬರಿಗೆ ನೇರವಾಗಿ ಕಲಿಸದೆಯೇ ಕಲಿಸುವ ರೀತಿಯಾಗಿರಬಲ್ಲದು. ಈ ಅಂಕಣಗಳಲ್ಲಿ ಮತ್ತೆ ಮತ್ತೆ ಕಾಣಿಸಿಕೊಂಡಿರುವ ಮಾರ್ಕ್ವೆಜ್ ಕ್ರಿಯೇಟಿವ್ ರೈಟಿಂಗಿನ ಕ್ಲಾಸುಗಳನ್ನು ಕೂಡ ನಡೆಸಿದ್ದ; ಜಗತ್ತಿನ ವಿವಿಧ ಭಾಗಗಳಿಂದ ಹೊಸ ಲೇಖಕ ಲೇಖಕಿಯರು ಬಂದು ಈ ಕ್ಲಾಸುಗಳಿಗೆ ಸೇರಿಕೊಳ್ಳುತ್ತಿದ್ದರು. ಅಷ್ಟು ದೂರ ಯಾಕೆ, ನೂರಾರು ವಚನಕಾರ, ವಚನಕಾರ್ತಿಯರು ಅನುಭವ ಮಂಟಪದ ಸಂವಾದಗಳಲ್ಲಿ ಭಾಗಿಯಾಗಿ ಅಥವಾ ಇತರರ ವಚನಗಳಿಗೆ ಕಿವಿಗೊಟ್ಟು ತಾವೂ ಕವಿತೆಯಂಥ ವಚನಗಳನ್ನು ಕಟ್ಟುವ, ಹೇಳುವ, ಬರೆಯುವ ಕಲೆ ಕಲಿತ ಅದ್ಭುತ ಉದಾಹರಣೆಗಳು ನಮ್ಮಲ್ಲೇ ಇವೆ! ಜನಪದ ಸಾಹಿತಿಗಳಂತೂ ಲೋಕದ ಎಲ್ಲ ಭಾಷೆಗಳಲ್ಲೂ ಇದ್ದಾರೆ.
ಆದರೂ ಈ ಕಾಲದಲ್ಲಿ ನಾನು ಕಂಡುಕೊಂಡಂತೆ ಒಬ್ಬ ಲೇಖಕನಿಗೆ ಇನ್ನೊಬ್ಬ ಲೇಖಕ, ಲೇಖಕಿಯ ಕೃತಿಗಳೇ ಗುರು. ಕುವೆಂಪು ಕೂಡ ಮಹಾಕಾವ್ಯ ಬರೆಯಲು ವ್ಯಾಸ, ವಾಲ್ಮೀಕಿ, ಹೋಮರ್, ಡಾಂಟೆ ಥರದ ಮಹಾಕವಿಗಳಿಂದ ಕಲಿತ ಏಕಲವ್ಯ! ಕ್ರಿಯೇಟಿವ್ ರೈಟಿಂಗ್ ಕೋರ್ಸುಗಳನ್ನು ಕೊಟ್ಟ ಮಾರ್ಕ್ವೆಜ್ ಕೂಡ ‘ಒಂದು ಬೆಕ್ಕು ಓಣಿಯಲ್ಲಿ ತಿರುಗುವ ಕಲೆಯನ್ನು ನಾನು ಹೆಮಿಂಗ್ವೆಯಿಂದ ಕಲಿತೆ’ ಎನ್ನುತ್ತಾನೆ. ಒಂದು ಸಂಜೆ ‘ಕ್ಯಾಥರಿನ್ ಆ್ಯನ್ ಪೋರ್ಟರ್ ನಮಗೆಲ್ಲ ಕತೆ ಬರೆಯೋದನ್ನ ಕಲಿಸಿದವಳು’ ಎಂದ ಲಂಕೇಶ್, ಆಕೆಯ ಕತೆಗಳ ಪುಸ್ತಕವೊಂದನ್ನು ಓದಲು ಕೊಟ್ಟಿದ್ದು ನೆನಪಾಗುತ್ತದೆ. ಅಪ್ರತಿಮ ಕತೆಗಾರ ಲಂಕೇಶರಿಗೆ ಕ್ಯಾಥರಿನ್ ಆ್ಯನ್ ಪೋರ್ಟರ್ ಏನೇನು ಕಲಿಸಿರಬಹುದು ಎಂಬ ಕುತೂಹಲದಿಂದ ಆಕೆಯ ಕತೆಗಳನ್ನು ಓದಿದೆ. ಆದರೆ ‘ಆಕೆಯಿಂದ ಏನು ಕಲಿತಿರಿ?’ ಎಂದು ಆಗ ಕೇಳಿ ತಿಳಿದುಕೊಳ್ಳದಿದ್ದುದಕ್ಕೆ ಈಗ ‘ಛೆ!’ಅನ್ನಿಸುತ್ತದೆ.
ಹಲವು ಪ್ರಕಾರಗಳಲ್ಲಿ ಕೆಲಸ ಮಾಡುತ್ತಿದ್ದ ಲಂಕೇಶರ ಕತೆಗಳಲ್ಲಿ ಸಿನಿಮಾ, ಜರ್ನಲಿಸಂ, ಕಾವ್ಯ, ನಾಟಕ ಎಲ್ಲವೂ ಬೆರೆಯುತ್ತಿದ್ದವು; ಇವೆಲ್ಲ ಪ್ರಕಾರಗಳು ಬೆರೆತು ಹುಟ್ಟಿದ ಅವರ ಟೀಕೆ ಟಿಪ್ಪಣಿಗಳಿಂದಲೇ ಬರೆಯುವುದನ್ನು ಕಲಿತ ನೂರಾರು ಜನರನ್ನು ಕಂಡಿರುವೆ. ಮುಂದೆ ನಾನು ಅವರ ಟೀಕೆ ಟಿಪ್ಪಣಿಯ ಎರಡು ಸಂಪುಟಗಳನ್ನು ಎಡಿಟ್ ಮಾಡಿ, ನಂತರ ಅವರ ಸಮಗ್ರ ಕಾವ್ಯ ‘ಚಿತ್ರ ಸಮೂಹ’ಕ್ಕೆ ಪದ್ಯಗಳನ್ನು ಅಚ್ಚಿಗೆ ಸಿದ್ಧಪಡಿಸಿದ ನಂತರ, ಲಂಕೇಶರು ‘ಚಿತ್ರಸಮೂಹ’ದ ಬೆನ್ನುಡಿಯಲ್ಲಿ ಬರೆದ ಒಂದು ಮಾತು ಫಳಾರನೆ ಸುಳಿದ ಹೊಸ ಮಿಂಚಿನಂತೆ ನನ್ನ ತಲೆಯಲ್ಲಿ ಕಾಯಮ್ಮಾಗಿ ಉಳಿದುಬಿಟ್ಟಿದೆ: ‘ಬರೆಯುವ ಪ್ರಾಮಾಣಿಕತೆ ಮುಖ್ಯವೇ ಹೊರತು ಪ್ರಕಾರಗಳಲ್ಲಿ ಪರಿಶುದ್ಥತೆ ಅಲ್ಲ ಅನ್ನಿಸುತ್ತದೆ.’
ಇದೀಗ ಈ ಮಾತನ್ನು ನನ್ನ ಓರಿಗೆಯ ಸೀರಿಯಸ್ ಸಮಾಜವಿಜ್ಞಾನಿ, ಕ್ಯಾಸ್ಟ್ ಕೆಮಿಸ್ಟ್ರಿ ಎಕ್ಸ್‌ಪರ್ಟ್ ಲಕ್ಷ್ಮೀಪತಿಗೆ ನೆನಪಿಸಬೇಕೆನ್ನಿಸಿತು. ತಾನು ಎಷ್ಟೊಂದು ಗಂಭೀರ ಥಿಯರಿಟಿಕಲ್ ಲೇಖನಗಳನ್ನು ಬರೆದರೂ, ನನ್ನ ಅನುಭವಗಳನ್ನೆಲ್ಲ ಕತೆಯಾಗಿಸಲು ಆಗುತ್ತಿಲ್ಲವಲ್ಲ ಎಂದು ಲಕ್ಷ್ಮೀಪತಿ ಒಮ್ಮೆ ಸಣ್ಣಗೆ ವಿಷಾದಪಟ್ಟರು. ಲಂಕೇಶರ ಈ ಮಾತಿನಲ್ಲಿ ಲಕ್ಷ್ಮೀಪತಿಗೂ ಒಂದು ದಾರಿ ಕಾಣಬಹುದು. ಲಂಕೇಶರ ಎಲ್ಲ ಕತೆಗಳನ್ನೂ ಕತೆ ಬರೆಯುವ ಕಸುಬು ಕಲಿಯುವ ವಿದ್ಯಾರ್ಥಿಯಂತೆ ಓದಿದರೆ ಕತೆ ಹೇಳುವ ಹಲವು ದಾರಿಗಳು ಕಾಣಬಲ್ಲವು.
ಉದಾಹರಣೆಗೆ, ಲಂಕೇಶರ ‘ವೃಕ್ಷದ ವೃತ್ತಿ’ ಎಂಬ ಕತೆ ನೋಡಿ. ಈ ಕತೆ ನಿವೃತ್ತ ಮಿಲಿಟರಿ ಆಫೀಸರನ ಶ್ರದ್ದಾಂಜಲಿ ಭಾಷಣದ ವಿನ್ಯಾಸದಲ್ಲಿದೆ! ಪಾರ್ವತಜ್ಜಿಯಾಗಿ ತೀರಿಕೊಂಡ ಪಾರ್ವತಿ ತೆಂಗಿನ ಮರದ ಜೊತೆಗೆ ಗಳಿಸಿದ– ಅದು ನನ್ನ ಪ್ರಕಾರ, ‘ಕಳೆದ’ ಬದುಕಲ್ಲ; ಗಳಿಸಿದ ಬದುಕು- ಅರ್ಥಪೂರ್ಣ ಬದುಕನ್ನು ಕುರಿತಂತೆ ಈ ಆಫೀಸರ್ ಆಡುವ ಮಾತುಗಳಲ್ಲಿ ಇಡೀ ಕತೆ ಬೆಳೆಯುತ್ತದೆ. ಈ ಕತೆ ಓದಿ ಅಚ್ಚರಿಗೊಂಡ ನಾನು, ‘ಇದೇನ್ಸಾರ್! ನಿಮ್ಮ ಕೈಯಲ್ಲಿ ಶ್ರದ್ಧಾಂಜಲಿ ಭಾಷಣವೇ ಒಂದು ಬ್ಯೂಟಿಫುಲ್ ಕಥಾತಂತ್ರವಾಗಿ ಬಿಡುತ್ತಲ್ಲ!’ ಎಂದೆ. ಆ ಕತೆ ಓದಿದಾಗ ಹುಟ್ಟಿದ ಅಚ್ಚರಿಯ ದನಿ ಆ ಮಾತು ಹೇಳುವಾಗಲೂ ಹಾಗೇ ಇತ್ತು; ಈಗಲೂ ಹಾಗೇ ಇದೆ. ಲಂಕೇಶ್ ಸಂಕೋಚದ ಹೆಮ್ಮೆ ಸೂಸಿ ಹುಬ್ಬೇರಿಸಿ ನಕ್ಕರು. ನಿವೃತ್ತ ಮಿಲಿಟರಿ ಆಫೀಸರನ ವೃತ್ತಿಯ ಶಿಸ್ತು; ವೃತ್ತಿ ಎಂದು ಕರೆಯಲಾಗದ ಪಾರ್ವತಿಯ ವೃಕ್ಷದ ವೃತ್ತಿ ಹಾಗೂ ಅವಳ ಸಹಜ ಜೀವನ ಶೈಲಿಯ ಶಿಸ್ತು; ಅವಳ ತಮ್ಮನ ಲಂಗುಲಗಾಮಿಲ್ಲದ, ಶಿಸ್ತಿಲ್ಲದ ಬದುಕಿನ ದುರಂತ…ಎಲ್ಲವೂ ಆ ಭಾಷಣದಲ್ಲೇ ಮೈದಾಳುವ ರೀತಿ ಕುರಿತು ಹೇಳುತ್ತಲೇ ಇದ್ದೆ. ಲಂಕೇಶ್, ‘ಲವ್ಲಿ! ಗ್ಲಾಡ್ ಯು ಸೇ ದಟ್’ ಎಂದರು.
ಆ ಕತೆ ಓದುತ್ತಾ, ಮೆಚ್ಚುತ್ತಲೇ ನಾನು ಕತೆ ಹೇಳುವ ಹೊಸ ಹೊಸ ರೀತಿಯನ್ನು, ಕಥಾತಂತ್ರದ ಪಾಠಗಳನ್ನು ಕಲಿಯುತ್ತಿದ್ದೆ ಎಂದು ನನಗೆ ಈಗ ಅನ್ನಿಸುತ್ತಿದೆ. ಯಾರನ್ನಾದರೂ ಮೆಚ್ಚುವುದು ಅವರಂತಾಗುವ ಬಯಕೆಯಿಂದಲೂ ಹುಟ್ಟಿರಬಲ್ಲದು; ಹಾಗೆಯೇ, ಏನನ್ನಾದರೂ ಮೆಚ್ಚುವುದರ ಹಿಂದೆ ಅದನ್ನು ನಾವೂ ಸಾಧಿಸುವ ಆಸೆಯೂ ಇರಬಲ್ಲದು!
ಒಂದು ಕಾಲಕ್ಕೆ ಕ್ಯಾಥರಿನ್ ಆ್ಯನ್ ಪೋರ್ಟರ್ ಕತೆಗಳನ್ನು ಮೆಚ್ಚಿದ್ದ ಲಂಕೇಶರು ಆಕೆಯ ಕತೆಯೊಂದರಿಂದ ಪ್ರೇರಣೆ ಪಡೆದು ‘ಎಲ್ಲಿಂದಲೋ ಬಂದವರು’ ಸಿನಿಮಾ ಮಾಡಿದ್ದರು. ಆದರೆ ಆಕೆಗೆ ಹೋಲಿಸಿ ನೋಡಿದರೆ, ಲಂಕೇಶರೇ ಉತ್ತಮ ಕತೆಗಾರ ಎನ್ನಿಸುತ್ತದೆ; ಲಂಕೇಶರ ಕೈಯಲ್ಲಿ ಕನ್ನಡ ಭಾಷೆ ನುಡಿವ ರೀತಿ, ಅವರು ಮನುಷ್ಯನ ಊಹಾತೀತ ಮುಖಗಳು, ವರ್ತನೆಗಳನ್ನು ಹಿಡಿಯುವ ರೀತಿಯಿಂದಾಗಿಯೂ ಹೀಗನ್ನಿಸಿರಬಹುದು. ಲಂಕೇಶರ ಬಹುತೇಕ ಎಲ್ಲ ಬರಹಗಳನ್ನೂ ಹತ್ತಿರದಿಂದ ಓದಿರುವ ನನಗೆ, ಅವರು ತೀರಿಕೊಂಡ ಇಪ್ಪತ್ಮೂರು ವರ್ಷಗಳ ನಂತರ ಕೂಡ ಅವರ ಕತೆಗಳಷ್ಟೇ ಅಲ್ಲ, ಅವರ ಯಾವುದೇ ಪುಸ್ತಕದ ಪುಟ ತೆಗೆದು ಓದಿದರೂ ಜೀವ ಸಂಚಾರವಾಗುತ್ತದೆ; ಮುತ್ತಿದ ಜಡತೆ ಚದುರಿ ಹೋಗಿ, ಸ್ಪಂದಿಸುವ, ಬರೆಯುವ ಉತ್ಸಾಹ ಚಿಮ್ಮತೊಡಗುತ್ತದೆ.
ಅದು ಇಂಗ್ಲಿಷ್ ಮೇಷ್ಟ್ರು ಸುನಿಲ್, ಸಮಾಜವಿಜ್ಞಾನದ ಮೇಷ್ಟ್ರು ಲಕ್ಷ್ಮೀಪತಿಗೂ ಆಗಬಲ್ಲದು ಎಂಬ ನಂಬಿಕೆಯಿಂದ ಈ ಟಿಪ್ಪಣಿ; ಅದರ ಜೊತೆಗೆ, ಈ ಅಂಕಣ ಬರಹಗಳು ಬೆರಳೆಣಿಕೆಯಷ್ಟು ಎಳೆಯರಲ್ಲಾದರೂ ಓದುವ, ಬರೆಯುವ ಕಾತರ ಹುಟ್ಟಿಸಿರುವುದನ್ನು ಕೇಳಿ ಕೊಂಚ ಧನ್ಯತೆಯ ಭಾವ; ಜೊತೆಗೇ ಅಂಕಣದ ಫೋಕಸ್ ಕುರಿತಂತೆ ಇನ್ನಷ್ಟು ಸ್ಪಷ್ಟತೆ...
ಕಣ್ಣಿಗೆ ಬಿದ್ದ ಸಾಲು
ಜೋಸೆಫ್ ಕಾರ್ನಾಡನ ‘ಹಾರ್ಟ್ ಆಫ್ ಡಾರ್ಕ್‌ನೆಸ್’ ಕಾದಂಬರಿಯಲ್ಲಿ ಇದ್ದಕ್ಕಿದ್ದಂತೆ ಕಂಡ ಸಾಲು:
‘…he had the pose of a Buddha preaching in European clothes and without a lotus–flower…’
ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com
ಬಿಡುವಾದಾಗ ನೋಡಿ, ಶೇರ್ ಮಾಡಿ: https://www.youtube.com/@NatarajHuliyarYT
Comments
15 Comments
| ಉದಯಕುಮಾರ ಹಬ್ಬು
ಬರೆಯುವ ಕಲೆಯನ್ನು ಕಲಿಸಬಹುದೆ? ತರಬೇತಿ ಶಿಬಿರದಿಂದ ಬರೆಯುವ ಆಸೆ ಹುಟ್ಟಬಹುದು. ಆದರೆ ಉತ್ತಮ ಕಲಾತ್ಮಕ ಸಾಹಿತ್ಯ ಕೃತಿಗಳನ್ನು ರಚಿಸಲು ಅವನಲ್ಲಿ ಸಾಹಿತ್ಯ ಬರೆಯುವ Ap ಇರಬೇಕಾಗುತ್ತ್ತೆ. ಹೌದು ಉತ್ತಮ ಕೃತಿಯ ಓದು ಆ ಕೃತಿಯಂತೆ ಬರೆಯುವ ಉತ್ಸಾಹ ಹುಮ್ಮಸ್ಸು ಹುಟ್ಟಬಹುದು. ಆದರೆ ಪ್ರೇರಣೆ ಪಡೆದ ಕೃತಿಯಷ್ಟೆ ಗುಣಮಟ್ಟದ ಪ್ತಶ್ನೆ ಇದ್ದೆ ಇರುತ್ತದೆ ಉತ್ಕಟವಾದ ಅನುಭವ, ಬದುಕಿನಲ್ಲಿ ಕಂಡುಂಡ ಅನುಭವಗಳು ತೀವ್ರ ಮಾನಸಿಕ ತಲ್ಲಣಕ್ಕೆ ಕಾರಣವಾದಾಗ ಕೃತಿ ಹುಟ್ಟಬಹುದು ವಾಲ್ಮೀಕಿಗೆ ಕ್ರೌಂಚ ವಧೆ ಕಂಡು ರಾಮಾಯಣ ಬರೆಯಲು ಪ್ರೇರಣೆ ನೀಡಿದಂತೆ.
| Dr.Thyagaraj
Intersting About creativity
| ಉದಯಕುಮಾರ ಹಬ್ಬು
ಪತ್ರಿಕೆಯಲ್ಲಿ ಒಂದೆರಡು ಕಥೆಗಳು ಪ್ರಿಂಟ್ ಆದರೆ ಬರಹಗಾರನಿಗೆ ಪ್ರೇರಣೆ ಸಿಕ್ಕುತ್ತೆ
| Gangadhara BM
ಬರವಣಿಗೆ ಕೌಶಲದ ಬಗ್ಗೆ ಆಪ್ತ ವಾಗಿ ಬರೆದಿರುವ ತಮ್ಮ ಟಿಪ್ಪಣಿ ಓದಿದೆ ಸರ್. ಪ್ರತಿಕ್ರಿಯೆ ಏನು ಬರೆಯಬೇಕು? ಹೇಗೆ ಬರೆಯಬೇಕು? ಎಷ್ಟು ಬರೆಯಬೇಕು? ಎಂಬುದಕ್ಕೆ ಸಾಕಷ್ಟು ಯೋಚನೆ ಮಾಡುವ ನನ್ನಂತವರಿಗೆ ತಮ್ಮ ಬರಹದ ಶಿಸ್ತು, ವೈವಿಧ್ಯತೆ, ಪಾಂಡಿತ್ಯ ಅಚ್ಚರಿ ಹುಟ್ಟಿಸುತ್ತದೆ ಸರ್.
ಎಲ್ಲರಿಗೂ ಅನ್ವಯಿಸುವಂತೆ ಬರೆಯುವ ತಮ್ಮ ಬರಹದ ಬಗೆಗೆ ಧನ್ಯವಾದಗಳು ಸರ್.
ಗೆಳೆಯರಿಗೆಲ್ಲ ಷೇರ್ ಮಾಡಿರುವೆ.
| Rajappa Dalavayi
ಲೇಖನ ಇಷ್ಟ ಆಯ್ತು. ಪ್ರಸನ್ನ, laxmipati, ಲಂಕೇಶ್ ಇವರೆಲ್ಲ ಬಗ್ಗೆ ಚನ್ನಾಗಿ ಬರೆದಿದ್ದೀರಾ. ಧನ್ಯವಾದಗಳು
| Vaishali
Your write up on teaching creative writing was sheer poetry Loved those lines of Ramachandra Sharma . The portrayal of English teacher Sunil's rediscovery of his flair for creative writing is also narrated in a rivering lyrical prose .Congratulations
| Somanna
ನಿಮ್ಮ ಬರಹ ದ ರೀತಿ ತುಂಬ ಖುಷಿ ನೀಡಿದೆ.ಬೇರೆ ಓದುಗರಿಗೂ ಮಾರ್ಗದರ್ಶನ ನೀಡುತದೆ. ಸರ್ ಓದಿದೆ ಚೆನ್ನಾಗಿದೆ ಸರ್ . ಶುಭ ರಾತ್ರಿ. ಸೋಮಣ್ಣಹೊಂಗಳ್ಳಿ.
| Rupa Hassan
ನಿಮ್ಮ ಈ ಬಾರಿಯ ಅಂಕಣ ಓದಿ ನೆನಪಾದದ್ದು...
‘ನೀನು ಬರೆಯಲೇಬೇಕೆ? ಏಕೆ? ಎಂಬ ಕಾರಣವನ್ನು ಹುಡುಕಿಕೋ. ಬರೆಯುವ ಆಸೆ ಹೃದಯದಲ್ಲಿ ಆಳವಾಗಿ ಬೇರು ಬಿಟ್ಟಿದೆಯೋ, ಬರೆಯದಿದ್ದರೆ ಸಾಯುತ್ತೀಯೋ ನೋಡಿಕೋ. ಇರುಳಲ್ಲಿ ನಿನ್ನ ಮನಸ್ಸು ಅತ್ಯಂತ ಶಾಂತವಾಗಿರುವಾಗ ಕೇಳಿಕೋ, ನಾನು ಬರೆಯಲೇಬೇಕೆ? ನಿನ್ನ ಅಂತರಂಗದ ಆಳಕ್ಕಿಳಿದು ಉತ್ತರ ಹುಡುಕು. ಸರಳವಾದ, ಧೃಢವಾದ, ‘ಹೌದು, ಬರೆಯಲೇಬೇಕು’ ಎಂಬ ಉತ್ತರ ನಿನ್ನೊಳಗೆ ಮೊಳಗಿದರೆ ನಿನ್ನ ಇಡೀ ಬದುಕನ್ನು ಈ ಅಗತ್ಯಕ್ಕೆ ತಕ್ಕಂತೆ ಕಟ್ಟಿಕೋ. ನಿನ್ನ ಅಂತರಂಗವನ್ನು ಹೊಕ್ಕು ಪರೀಕ್ಷಿಸಿಕೋ. ನಿನ್ನ ಬದುಕಿನ ಒರತೆ ಎಷ್ಟು ಆಳದಿಂದ ಚಿಮ್ಮುತ್ತಿದೆ ಎನ್ನುವುದನ್ನು ಅರಿತುಕೊ. ಆ ಒರತೆಯ ಮೂಲದಲ್ಲಿಯೇ ನೀನು ಬರೆಯಬೇಕೋ ಎಂಬ ಪ್ರಶ್ನೆಗೂ ಉತ್ತರ ಸಿಗುತ್ತದೆ.
ಬರೆಯದೆಯೂ ಬದುಕಬಹುದು ಅನ್ನಿಸಿದರೆ ಬರೆಯದಿರುವುದೇ ಒಳ್ಳೆಯದು.
ಮತ್ತೊಂದು ಸೂಚನೆ: ಬೆಳೆಯುತ್ತಿರು, ಮೌನವಾಗಿ, ಪ್ರಾಮಾಣಿಕವಾಗಿ. ಹಾಗೆ ಬೆಳೆಯುತ್ತಿರುವಾಗ ಪೂರ್ಣ ಏಕಾಂತದಲ್ಲಿ ನಿನ್ನಂತರಂಗದ ಭಾವವು ಮಾತ್ರವೇ ನೀಡಬಹುದಾದ ಉತ್ತರವನ್ನು ಹೊರಜಗತ್ತಿನಿಂದ ಅಪೇಕ್ಷಿಸತೊಡಗಿದರೆ ಬೆಳವಣಿಗೆ ವ್ಯತ್ಯಾಸವಾಗುತ್ತದೆ, ಅಪಾಯಕ್ಕೀಡಾಗುತ್ತದೆ.
(ರೈನರ್ ಮಾರಿಯಾ ರಿಲ್ಕ್, ‘ಯುವಕವಿಗೆ ಬರೆದ ಪತ್ರಗಳು’ದಿಂದ ಆಯ್ದ ಸಾಲುಗಳು.
ಕನ್ನಡಕ್ಕೆ: ಓಎಲ್ಎನ್, ಅಭಿನವ ಪ್ರಕಾಶನ)
| SHYLESH
YOU ARE RIGHT ಲಂಕೇಶರ ಯಾವುದೇ ಪುಸ್ತಕದ ಪುಟ ತೆಗೆದು ಓದಿದರೂ ಜೀವ ಸಂಚಾರವಾಗುತ್ತದೆ; ಮುತ್ತಿದ ಜಡತೆ ಚದುರಿ ಹೋಗಿ, ಸ್ಪಂದಿಸುವ, ಬರೆಯುವ ಉತ್ಸಾಹ ಚಿಮ್ಮತೊಡಗುತ್ತದೆ.THIS IS MY EXPERIENCE. LANKESH IS MY TRUE HERO
| ಪ್ರಕಾಶ್ ಬಾಬು
ಕತೆ ಬರೆಯಲು ಕಲಿಸಲಾಗದು, ಆದರೆ ಬರೆಯಲು ಪ್ರೆರೇಪಿಸಬಹುದು. ಸಿನೆಮಾನೂ ಇದಕ್ಕಿಂತ ಭಿನ್ನವಲ್ಲ. ಯಾವುದೇ ಕಲೆಯನ್ನು ಹೇಳಿಕೊಡಲಾಗದು, ಶಿಕ್ಷಣವೂ ಅಷ್ಟೇ, ನೀವು ದಾರಿ ತೋರಿಸಬಹುದೇ ವಿನಃ ಗುರಿಯನ್ನು ತೋರಿಸಲಾಗದು. ಯಾವುದೇ ಕಲಾವಿದನಾಗಲಿ, ಸಾಹಿತಿ, ನಾಟಕಗಾರ, ಚಿತ್ರಕಾರ, ಸಿನೆಮಾ ನಿರ್ದೇಶಕ, ಯಾರೇ ಆಗಲಿ ತನ್ನ ಅನುಭವಕ್ಕೆ, ಗ್ರಹಿಕೆಗೆ ದಕ್ಕಿದನ್ನೇ ಕೃತಿಯಾಗಿಸುವುದು.
| ಸುರೇಶ ಬಿ
ಒಂದು ಕುತೂಹಲ ಕೆರಳಿಸುವ ಓದು.
ಕಲಿಸುವ ಕೆಲಸ ಯಾವತ್ತಿಗೂ ಕಷ್ಟದ್ದು. ಆದರೆ ಹಾಗೆ ಕಲಿಸುವಾಗ ಸಾಧನಗಳ ಬಳಕೆ ಕಲಿಸಬಹುದು. ಕೌಶಲ್ಯವನ್ನು ಆಯಾ ಪ್ರಯತ್ನಶೀಲ ವ್ಯಕ್ತಿಗಳೇ ರೂಢಿಸಿಕೊಳ್ಳಬೇಕು.
ಈ ಬಗ್ಗೆ ಮತ್ತೆ ಸಿಕ್ಕಾಗ ಮುಖತಃ ಮತ್ತಷ್ಟು ಮಾತಾಡುವ.
- ಬಿ. ಸುರೇಶ
| ರಾಘವೇಂದ್ರ ಕುಪ್ಪೇಲೂರ
ನಮಸ್ತೆ ಸರ್ ಈಗ ತಾನೆ ತಮ್ಮ ಇನ್ನೊಂದು ಅಂಕಣ 'ಬರೆವ ಕಲೆ: ಕಲಿಯಬಹುದೆ, ಕಲಿಸಬಹುದೆ?' ಓದಿ ಮುಗಿಸಿದೆ. ಅನುಭವ, ಪ್ರಾಮಾಣಿಕತೆ ಮತ್ತು ಭಾಷೆಯ ಸಂಕರದಿಂದ ಹುಟ್ಟುವ ಸಹಜ ಸೃಜನಶೀಲ ಬರೆಹದ ಸಂಗತಿಗಳನ್ನು, ಕಾರ್ಪೋರೇಟ್ ಜಗತ್ತು ಹೇಗೆ ಅದನ್ನೊಂದು ಉದ್ಯಮವಾಗಿ ನಿರ್ವಹಿಸುತ್ತಿದೆ ಎಂಬ ನಿಲುವನ್ನು ಬರೆಹ ಲೋಕದ ಅನುಭಾವಗಳಿಂದಲೆ ಅದ್ಭುತವಾಗಿ ಕಟ್ಟಿಕೊಟ್ಟಿದ್ದೀರಿ. ಲೋಕಸತ್ಯ ಹಾಗೂ ಅನುಭವಗಳಿಂದ ಹರಳುಗಟ್ಟಿದ ವಚನ ಸಾಹಿತ್ಯ, ಅಕಾಡೆಮಿಕ್ ವಲಯದ ಹೆಸರೇ ಕೇಳದ ತಮ್ಮ ಅನುಭವ ಲೋಕದ ಜ್ಞಾನ ಮೀಮಾಂಸೆಗಳನ್ನೇ ಬದುಕುತ್ತಿರುವ ಜಾನಪದ ಜಗತ್ತು ತನ್ನ ಅನುಭವಗಳನ್ನು ದಾಖಲಿಸಿದ್ದು ತನ್ನ ಪ್ರಾಮಾಣಿಕ ಸಹಜ ಅನುಭವದ ಅಭಿವ್ಯಕ್ತಿಯಿಂದಾಗಿ ಎಂಬುದನ್ನು ಅರ್ಥವತ್ತಾಗಿ ನಿರೂಪಿಸಿದ್ದೀರಿ. ಅಕ್ಷರವೇ ಅಕ್ಷರವನ್ನು ಹಡೆಯುತ್ತದೆ. ರೈಟಿಂಗ್ ಈಸ್ ಥಿಂಕಿಂಗ್ ಎಂಬ ನಿಮ್ಮ ನಿಲುವು ಅಕ್ಷರಶಃ ಪ್ರಾಕ್ಟಿಕಲ್ ಹಾಗೂ ಅಥೆಂಟಿಕ್ ಆಗಿದೆ. ಬರಹಕ್ಕಿರುವ ಅಂತಹ ಶಕ್ತಿಯನ್ನು ಕುವೆಂಪು, ಲಂಕೇಶ್‌ರು ಪರಿಭಾವಿಸಿದ ನೆಲೆಯಲ್ಲಿ ಅಚ್ಚುಕಟ್ಟಾಗಿ ಸಾದರಪಡಿಸಿದ್ದೀರಿ. ನಿಮ್ಮ ಜೀವನಾನುಭವದ ಮೂಲಕ ಅಭಿವ್ಯಕ್ತಿಸುವ ಇಂತಹ ಸಹಜ ಲಹರಿಯ ಬರೆಹ ಹೊಸ ತಲೆಮಾರಿನ ತರುಣರಿಗೆ ಹೆಚ್ಚು ಉಪಯುಕ್ತವಾಗಿದೆ. ಹೀಗೆ ಬರೆದು, ಬರೆಹದ ಮೂಲಕ ನಮ್ಮನ್ನು ಎಚ್ಚರಿಸುವ ಹಾಗೂ ಯೋಚಿಸುವ ಶಕ್ತಿಯನ್ನು ತುಂಬುತ್ತಿದ್ದೀರಿ ಸರ್ ವಂದನೆಗಳೊಂದಿಗೆ.. ರಾಘವೇಂದ್ರ ಕುಪ್ಪೇಲೂರ
| ಈರಪ್ಪ ಎಂ ಕಂಬಳಿ
ನಿಮ್ಮ ಟಿಪ್ಪಣಿ ಓದಿದ ಮೇಲೆ ಬರೆಯುವ ತುರ್ತಿನ ಬಗ್ಗೆ ಮತ್ತು ಬರಹಗಾರ ಆತ್ಮ ನಿರೀಕ್ಷಣೆ ಮಾಡಿಕೊಳ್ಳಬೇಕಾದುದರ ಬಗ್ಗೆ ಚಿಂತನೆಗೆ ಹಚ್ಚುತ್ತದೆ. ನಾನೇಕೆ ಬರೆಯುತ್ತೇನೆ? ಎಂಬಂಥ ಮೂಲಭೂತ ಪ್ರಶ್ನೆಗೆ ನಮ್ಮನ್ನು ಗುರಿಪಡಿಸುತ್ತದೆ. ಈ ದಿಶೆಯಲ್ಲಿ ನಿಮ್ಮ ಚಿಂತನೆಗಳನ್ನು ಇನ್ನಷ್ಟು ಸರಳವಾಗಿ ಹರಿಯಬಿಡುವುದು ಸೂಕ್ತ.
\r\n| Nataraj Honnavalli
ಇದೇ ವಿಸ್ಮಯ…ಮಾಂತ್ರಿಕ ಗಳಿಗೆ…. ರಸವಶನಾಗುವ ಗಳಿಗೆ. ನಮ್ಮೊಳಗೆ ಸೇರಿ ನುಡಿವ ನುಡಿಸುವ ಬೆಡಗು… ಯಾವುದು? Writing as a celebration of Potency …. ಓದಿದ ನೆನಪು. ಎಲ್ಲ ಕಲೆಗಳೂ ಹೀಗೆ ಒದ್ದಾಡುತ್ತಿರುತ್ತದೆ ಅಂತ ಕಾಣುತ್ತೆ. ನಿಮ್ಮ ಬರಹ ಕಲಿಯುವ ವಿಸ್ಮಯದ ಕಡೆ ಕರೆದುಕೊಂಡು ಹೋಗುತ್ತದೆ… Learning as a Sympathetic Magic. ನಮ್ಮ ನಟ-ನಟಿಯರು ಈ ನಿಮ್ಮ ಲೇಖನ ಓದಬೇಕು.
\r\n| Malleshappa Sidrampur
ಬರವಣಿಗೆ ಎನ್ನುವುದು ಬರಹಗಾರನ ಕ್ರಿಯಾಶೀಲತೆಯ ದ್ಯೋತಕ. ಕ್ರಿಯಾತ್ಮಕ ಚಟುವಟಿಕೆಯಲ್ಲಿನ ಉತ್ಪಾದಿತ ಭಾಗವಾದ ಬರವಣಿಗೆಗೆ ಅದರದೇ ಆದ ಸ್ವಾಯತ್ತತೆ ಇದ್ದಾಗಲೂ ಅದು ಒಳಗುಮಾಡಿಕೊಳ್ಳುವ ಅನುಭವ ಮತ್ತು ತಾತ್ವಿಕತೆಗಳು ಕಲಿಯುವ ಹಾಗೂ ಕಲಿಸುವವುಗಳ ಭಾಗಗಳು ಎನ್ನುವುದರ ಅಚ್ಚುಕಟ್ಟಾದ ವಿಶ್ಲೇಷಣೆಯಿದು.
\r\nAdd Comment