ನಗರ ಪುರಾಣ v/s ಕಟ್ಟೆ ಪುರಾಣ!

ಆ ಮೋಟಾರ್ ಕಂಪನಿಯ ವಿಸಿಟರ‍್ಸ್ ಲೌಂಜ್‌ನಲ್ಲಿ ಟೆಲಿವಿಶನ್ ನ್ಯೂಸ್ ಚಾನಲ್ ಹೊಡೆದುಕೊಳ್ಳುತ್ತಲೇ ಇತ್ತು. ಇನ್ನೂ ಅರ್ಧ ಗಂಟೆ ಕಾಯಬೇಕಿದ್ದರಿಂದ ಲ್ಯಾಪ್‌ಟಾಪ್ ತೆಗೆದು ನನ್ನ ಕೆಲಸದಲ್ಲಿ ಮುಳುಗಲೆತ್ನಿಸಿದೆ. ಕಣ್ಣು ಲ್ಯಾಪ್‌ಟ್ಯಾಪ್ ತೆರೆಯ ಮೇಲಿದ್ದರೂ ನ್ಯೂಸಿಣಿ ಕಿವಿ ಕೊರೆಯುತ್ತಲೇ ಇದ್ದಳು. 

ಎಷ್ಟೋ ಸಲ ಸುತ್ತಮುತ್ತಲಿನ ಯಾವ ಗಲಾಟೆಯೂ ಕೇಳದಂತೆ ನಾವು ಮಾಡುತ್ತಿರುವ ಕೆಲಸಗಳು ನಮ್ಮನ್ನು ಒಳಸೆಳೆದು ಹೊರಲೋಕದಿಂದ ಪಾರು ಮಾಡುತ್ತಿರುತ್ತವೆ. ಅವತ್ತು ಆ ಭಾಗ್ಯ ಇನ್ನೂ ಬಂದಿರಲಿಲ್ಲ. ಕತ್ತೆತ್ತಿ ಟೆಲಿವಿಷನ್ ನೋಡಿದೆ. ಅದೇ ನಿರೀಕ್ಷಿತ ಏಕಮುಖೀ ಚುನಾವಣೆಯ ಬೊಂಬಡಾ!  ನ್ಯೂಸಿಣಿಯ ಚರ್ಯೆಗಳು ವಿಚಿತ್ರವಾಗಿದ್ದವು.  ಇನ್ನೇನು ಸಿಂಹಿಣಿಯಾಗಿ ವೀಕ್ಷಕ, ವೀಕ್ಷಕಿಯರ ಮೇಲೆ ಮೂರನೇ ಮಹಾಯುದ್ಧ ಘೋಷಿಸಲು ತಯಾರಿರುವಂತೆ ಕಂಡಳು. ಏಳೆಂಟು ವರ್ಷಗಳಿಂದ ಟೆಲಿವಿಷನ್ ನೋಡುವ ಅಭ್ಯಾಸವಿಲ್ಲದ ನನಗೆ ಈಕೆ ಸಣ್ಣ, ಪುಟ್ಟ ವಿಷಯಗಳಿಗೂ ಯಾಕಿಷ್ಟು ಉಗ್ರ ಸ್ವರೂಪ ತಾಳುತ್ತಿದ್ದಾಳೆ ಎಂಬುದು ವಿಸ್ಮಯ ಹುಟ್ಟಿಸಿತು. 

ಅಲ್ಲಿ ಕಾಯುತ್ತಿದ್ದ ಇತರರು ಈಕೆಯ ಯುದ್ಧಪ್ರಸಾರವನ್ನು ಹೇಗೆ ನೋಡುತ್ತಿರಬಹುದು ಎಂದು ಸುತ್ತ ನೋಡಿದೆ. ಅವರು ನನಗಿಂತ ಜಾಣರಾಗಿದ್ದರು; ಅಂದರೆ, ತಂತಮ್ಮ ಸ್ಮಾರ್ಟ್ ಫೋನುಗಳಲ್ಲಿ ಮುಳುಗಿದ್ದರು! ಅಲ್ಲಿ ಯಾರು, ಏನನ್ನು ಇವರ ತಲೆಯಲ್ಲಿ ಬಿತ್ತುತ್ತಿದ್ದಾರೋ? ಈ ಜನ ಕಾಮಿಡಿ ನೋಡಿ ನಗುತ್ತಿದ್ದಾರೋ? ಅಥವಾ ಇಂಥ ಸುದ್ದಿಗಳನ್ನೇ ಜನ ಕಾಮಿಡಿಗಳಂತೆ ನೋಡುತ್ತಿದ್ದಾರೋ! ಸುಳ್ಳು ಯಾವುದು, ನಿಜ ಯಾವುದು ಎಂಬುದನ್ನು ಬಿಡಿಸಿ ನೋಡುವ ಮನಸ್ಥಿತಿಯೇ ಮಾಯವಾದಂತಿರುವ ಕಾಲ ಇದು. ಇದೀಗ ಚುನಾವಣೆಯ ಕಾಲದಲ್ಲಿ ಹುಟ್ಟುವ ಸುಳ್ಳುಗಳನ್ನು, ಯೋಜಿತ ಸಮೀಕ್ಷೆಗಳನ್ನು ಮೀರಿ ಜನ ವೋಟು ಹಾಕಬಲ್ಲರೇ ಎಂಬ ಪ್ರಶ್ನೆ ಸೂಕ್ಷ್ಮ ಮನಸ್ಸುಗಳಲ್ಲಿ ಹುಟ್ಟುತ್ತಲೇ ಇರುತ್ತದೆ.    

ಅವತ್ತು ಟೆಲಿವಿಷನ್ ಸುದ್ದಿ ಚೀತ್ಕಾರ ಕೇಳಿದ ಕೆಲದಿನಗಳ ನಂತರ ಸಲ್ಮಾನ್ ರಶ್ದಿಯವರ ‘ವಿಕ್ಟರಿ ಸಿಟಿ’ ಕಾದಂಬರಿ ಕುರಿತು ಹಿಂದೊಮ್ಮೆ ಬರೆದ ಟಿಪ್ಪಣಿಗಳನ್ನು ಈಗ ಬೇರೆ ಥರ ನೋಡಬಹುದೆನ್ನಿಸಿತು:

ಮೇಲುನೋಟಕ್ಕೆ ಫ್ಯಾಂಟಸಿಯಂತೆ ಕಾಣುವ ಈ ಕಾದಂಬರಿಯಲ್ಲಿ ಪಂಪ ಕಂಪನಾ ಎಂಬ ಕಥನಕಾರ್ತಿ ಆದರ್ಶ ಸಾಮ್ರಾಜ್ಯವೊಂದನ್ನು ತನ್ನ ಅಪೂರ್ವ ಬೀಜಗಳಿಂದ ಸೃಷ್ಟಿಸುತ್ತಾಳೆ. ಈ ವಿಶಿಷ್ಟ ಕಾದಂಬರಿಯ ಘಟನಾವಳಿಗಳು ನಡೆಯುವ ‘ಬಿಸ್ನಾಗ’ ಸಾಮ್ರಾಜ್ಯ ಹಳೆಯ ಸಿದ್ಧ ಜಾಡಿನಿಂದ ತಪ್ಪಿಸಿಕೊಂಡು ಹೊಸ ಹಾದಿ ತೆರೆಯುವ ರಾಜ್ಯವಾಗಲೆತ್ನಿಸುತ್ತದೆ. 

ಈ ಸಾಮ್ರಾಜ್ಯ ಸೃಷ್ಟಿಸಿ ನೂರಾರು ವರ್ಷ ಬದುಕುವ ಪಂಪ ಕಂಪನಾ ಮುಂದೊಮ್ಮೆ ಕಲೆ, ಸಂಗೀತ, ಸ್ವಾತಂತ್ರ‍್ಯ, ಸರ್ವಧರ್ಮ ಸ್ವೀಕಾರ ಮುಂತಾದ ಉದಾರ ಚಿಂತನೆಗಳು ರಾಜ ಕೃಷ್ಣದೇವರಾಯನ ಅಂತರಂಗದಲ್ಲಿ ಉಕ್ಕುವಂತೆ ಉಸುರುತ್ತಾಳೆ. ಈ ಚಿಂತನೆಗಳನ್ನು ಜನರ ಕಿವಿಯಲ್ಲೂ ಉಸುರಿ ನಾಡಿನುದ್ದಕ್ಕೂ ಹಬ್ಬಿಸುತ್ತಾಳೆ. ಇದು ಸಾಂಪ್ರದಾಯಿಕ  ಸಾಮ್ರಾಜ್ಯವೊಂದು ಉದಾರವಾದಿಯಾದ ಸುಂದರ ವಿದ್ಯಮಾನವನ್ನು ವಿವರಿಸಲು ಕಾದಂಬರಿಕಾರ ಬಳಸಿರುವ ಮಾಂತ್ರಿಕ ವಾಸ್ತವತಾವಾದಿ ಕಥಾತಂತ್ರ! ಆದರೇನಂತೆ! ವೈವಿಧ್ಯಮಯ ಜಾತಿ, ಧರ್ಮ, ಜನಾಂಗಗಳನ್ನು ಒಳಗೊಂಡ ಹೊಸ ರೀತಿಯ ಆಳ್ವಿಕೆ, ಹೊಸ ಸಮಾಜಗಳು ಜನರ ಅಂತರಂಗದ ಪಿಸುಮಾತಿನಿಂದಲೂ ಸೃಷ್ಟಿಯಾಗುತ್ತವೆ ಎಂಬ ಶಾಶ್ವತ ಸತ್ಯವನ್ನು ಕಾದಂಬರಿ ಅದ್ಭುತವಾಗಿ ಹೇಳುತ್ತದೆ.  

ರಶ್ದಿಯ ಕಾದಂಬರಿಯ ಕಥನಕಾರ್ತಿ ಪಂಪ ಕಂಪನಾಳ ಅಂತರಂಗದ ಮೃದಂಗದ ದನಿ ಹಬ್ಬಿಸಿದ ಉದಾರವಾದಿ ಸಾಮ್ರಾಜ್ಯ ಕಂಡು ಪುಳಕಗೊಳ್ಳುವ ನಮ್ಮ ಕಾಲದ ಓದುಗರೆದುರು ಇದಕ್ಕೆ ಪೂರಾ ವಿರುದ್ಧವಾದ ಈ ಕಾಲದ ಸೈತಾನ ಕಾರ್ಖಾನೆಗಳ ಗಟ್ಟಿ ಗಂಟಲಿನ, ಜೋರು ದನಿಗಳ ಅಬ್ಬರ ಮೂಡತೊಡಗಿದರೆ ಅಚ್ಚರಿಯಲ್ಲ.

ಏಕಕಾಲಕ್ಕೆ ಕೆಟ್ಟ ಪಿಸುಮಾತನ್ನೂ, ಲಜ್ಜೆಗೇಡಿ ಗಂಟಲನ್ನೂ ಬಳಸಿ ಲಾಭ ಮಾಡಿಕೊಳ್ಳುವ ನೀಚರ ಚಿತ್ರಗಳು ನಿತ್ಯ ನಮ್ಮ ಕಣ್ಣಿಗೆ ರಾಚುತ್ತಿರುತ್ತವೆ. ಚುನಾವಣೆಯ ಕಾಲದಲ್ಲಿ ಅವುಗಳ ಅಬ್ಬರ ಇನ್ನೂ ಜೋರು!

ನಿತ್ಯ ನೀವು ಕೇಳಿಸಿಕೊಳ್ಳುವ ಈ ಅಸಂಬದ್ಧ ಹೇಳಿಕೆಗಳನ್ನು ಈ ಮಹನೀಯರೇ ಸೃಷ್ಟಿಸುತ್ತಾರೋ, ಇವರಿಗೆ ಉಚಿತಾನುಚಿತ ಸಲಹೆಗಳನ್ನು ಕೊಡುವ ‘ಸಂಶೋಧಕ’ರು ಸೃಷ್ಟಿಸುತ್ತಾರೋ, ತಿಳಿಯದು! ಈ ಥರದ ಮಾತುಗಳನ್ನು ಈ ಕಾಲದ ಇಂಗ್ಲಿಷ್ ಪತ್ರಿಕೋದ್ಯಮ ಅನಗತ್ಯ ಗೌರವ ಕೊಟ್ಟು ‘ನೆರೇಟಿವ್’ ಎನ್ನುತ್ತಿದೆ. 

‘ನೆರೇಟಿವ್’ (Narrative) ಎಂಬ ಪದ ಮೂವತ್ತು ವರ್ಷಗಳ ಕೆಳಗೆ ಬೇರೆ ಥರದಲ್ಲಿ ಜಗತ್ತಿನ ಗಂಭೀರ ಅಕಡೆಮಿಕ್ ವಲಯದಲ್ಲಿ ಹೆಚ್ಚು ಚಾಲ್ತಿಗೆ ಬಂದಾಗ ಸಂಸ್ಕೃತಿ ಚಿಂತಕ ಡಿ. ಆರ್. ನಾಗರಾಜ್ ಈ ಪರಿಕಲ್ಪನೆಯನ್ನು ‘ಕಥನ’ ಎಂದು ಕರೆದರು; ತಮ್ಮ ಪುಸ್ತಕಕ್ಕೆ ‘ಸಾಹಿತ್ಯ ಕಥನ’ ಎಂದು ಹೆಸರಿಟ್ಟರು. ಅದಕ್ಕೂ ಮೊದಲು ಯು.ಆರ್. ಅನಂತಮೂರ್ತಿ ತಮ್ಮ ‘ಪೂರ್ವಾಪರ’ ಪುಸ್ತಕದ ‘ನೆರೇಟಿವ್’ಗಳನ್ನು ‘ಆಖ್ಯಾನ’ ಎಂದು ಕರೆದರು. ಕನ್ನಡದ ಈ ಎರಡು ಶ್ರೇಷ್ಠ ಪುಸ್ತಕಗಳ ಗಂಭೀರ ಕಥನಗಳನ್ನು ಓದಿ ಬಲ್ಲವರಿಗೆ ‘ನೆರೇಟಿವ್’ ಪದವನ್ನು ಈಗ ಎಷ್ಟು ಅಗ್ಗವಾಗಿ ಬಳಸಲಾಗುತ್ತಿದೆ ಎಂಬುದರ ಅರಿವಾಗಬಲ್ಲದು.

ಗಂಭೀರ ಅರ್ಥಗಳುಳ್ಳ ಪದಗಳನ್ನು ದುರ್ಬಳಕೆ ಮಾಡಿಕೊಂಡು, ಅವುಗಳ ಅರ್ಥಗಳನ್ನು ಅಗ್ಗವಾಗಿಸುವುದು ಇಂದಿನ ವಿದ್ಯಾವಂತರ ಕಾಯಿಲೆ! ಈ ಕಾಯಿಲೆ ರಾಜಕೀಯ, ಮಾಧ್ಯಮ, ಶಿಕ್ಷಣ, ಡಿಜಿಟಲ್ ಹಾಗೂ ಸಮಾಜ ವಿಭಜಕ ವಲಯಗಳಲ್ಲಿ ವ್ಯಾಪಕವಾಗಿದೆ. ವಿಶಾಲ ಸಾಂಸ್ಕೃತಿಕ ಸಾಧ್ಯತೆಯುಳ್ಳ ‘ನೆರೇಟಿವ್’ ಪದವನ್ನು ಅತಿ ವಾಚ್ಯಗೊಳಿಸಿ, ಇದೀಗ ‘ಕಟ್ಟು ಕತೆ’ ಎಂಬ ಅರ್ಥಕ್ಕೆ ಇಳಿಸಲಾಗಿದೆ. ರಾಜಕೀಯ ಪಕ್ಷವೊಂದು ಹರಿಯಬಿಡುವ ಸುಳ್ಳುಗಳನ್ನೇ ‘ನೆರೇಟಿವ್’ ಎಂದು ಕರೆಯುವವರಿದ್ದಾರೆ. ‘ಆ ಪಕ್ಷಕ್ಕೆ ಒಂದು ‘ನೆರೇಟಿವ್’ ಇದೆ, ಮತ್ತೊಂದು ಪಕ್ಷಕ್ಕೆ ‘ನೆರೇಟೀವ್’ ಇಲ್ಲ’...ಹೀಗೆ ಏನನ್ನು ಬೇಕಾದರೂ ಥಿಯರೈಸ್ ಮಾಡುವವರಿದ್ದಾರೆ! 

ಆದರೆ ರಾಜಕೀಯ ಪಕ್ಷಗಳು ಸೃಷ್ಟಿಸುವ ಕಟ್ಟುಕತೆಗಳಿಗೆ, ಅವುಗಳನ್ನು ಆಧರಿಸಿ ಪೆಯ್ಡ್ ಸರ್ವೆಂಟ್ಸ್ ಸೃಷ್ಟಿಸುವ ಸೋ ಕಾಲ್ಡ್ ನೆರೇಟಿವ್‌ಗಳಿಗೆ ಪ್ರತಿಯಾಗಿ ಜನರೂ ತಮ್ಮ ಕತೆಗಳನ್ನು ರೂಪಿಸಬಲ್ಲರು. ಲಂಕೇಶರ ಕಾಲದ ‘ಲಂಕೇಶ್ ಪತ್ರಿಕೆ’ಯಲ್ಲಿ ಗೆಳೆಯ ಬಿ. ಚಂದ್ರೇಗೌಡರ ‘ಕಟ್ಟೆ ಪುರಾಣ’ ಎಂಬ ವಿಶಿಷ್ಟ ವಿನೋದದ ಅಂಕಣವನ್ನು ಓದುತ್ತಿದ್ದೆ. ಅಲ್ಲಿ ನಾಗಮಂಗಲದ ಸುತ್ತಮುತ್ತಲ ಪಾತ್ರಗಳು ತಮ್ಮ ಜವಾರಿ ಭಾಷೆಯಲ್ಲಿ ರಾಜಕೀಯ ವಿಶ್ಲೇಷಣೆ ಮಾಡುತ್ತಿದ್ದವು. ಪತ್ರಿಕೆಗಳಲ್ಲಿ ಬರುವ ರಾಜಕಾರಣಿಗಳ ಹೇಳಿಕೆಗಳನ್ನು ತಮ್ಮದೇ ರೀತಿಯಲ್ಲಿ ಗೇಲಿ ಮಾಡಿ ವ್ಯಾಖ್ಯಾನಿಸುತ್ತಿದ್ದವು. ಈ ಪುರಾಣಗಳನ್ನು ಚಂದ್ರೇಗೌಡರು ಅನೇಕ ಸಲ ನಾಗಮಂಗಲದ ಸುತ್ತಮುತ್ತ ಅಡ್ಡಾಡುತ್ತಲೂ ಬರೆಯುತ್ತಿದ್ದರು; ಕೆಲವು ಸಲ ಕಲ್ಪನಾವಿಲಾಸದ ಬೆನ್ನೇರಿ ಕೂಡ ಬರೆಯುತ್ತಿದ್ದರು. 

ಇಪ್ಪತ್ತೈದು ವರ್ಷಗಳ ಹಿಂದೆ ಓದಿದ ಕಟ್ಟೆ ಪುರಾಣಗಳನ್ನು ನೆನಪಿಸಿಕೊಂಡು ಹೇಳುವುದಾದರೆ, ಅವು ಆರೋಗ್ಯಕರ ಡೆಮಾಕ್ರಸಿಯ ಮುಕ್ತ ಜನತಾ ಪ್ರತಿಕ್ರಿಯೆಗಳಂತಿರುತ್ತಿದ್ದವು. ಮಂಡ್ಯ ಪ್ರದೇಶದ ಜನ ಯಾವ ದೊಡ್ಡ ನಾಯಕರಿಗೂ ಕೇರ್ ಮಾಡದೆ ತಂತಮ್ಮ ಸ್ವತಂತ್ರ ಟೀಕೆ ಟಿಪ್ಪಣಿ ಮಾಡುವುದನ್ನೂ, ಯಾರು ಎಷ್ಟೇ ದುಡ್ಡು ಕೊಟ್ಟರೂ ತಮಗೆ ಬೇಕಾದಂತೆ ವೋಟು ಹಾಕುತ್ತಿದ್ದ ಮಾದರಿಯನ್ನೂ ಅವು ಬಿಂಬಿಸುತ್ತಿದ್ದವು. 

ಚಂದ್ರೇಗೌಡರ ‘ಕಟ್ಟೆ ಪುರಾಣ’ ಕಾಲಂ ನಿಂತಿರಬಹುದು. ಆದರೆ ಇವತ್ತಿಗೂ ಕರ್ನಾಟಕದ ಹಳ್ಳಿಗಾಡಿನ ಜನ ನಮ್ಮ ನಾಯಕರುಗಳ ‘ನಿತ್ಯ ಪುರಾಣ ಸೃಷ್ಟಿ’ಗಳಿಗೆ ಕಟ್ಟೆಗಳಲ್ಲಿ, ಹಾದಿಬೀದಿಗಳಲ್ಲಿ ತಮ್ಮ ಪುರಾಣಗಳ ಟಾಂಗ್ ಕೊಡುವುದಂತೂ ನಿಂತಿಲ್ಲ. ಇದು   ನಿಮ್ಮೂರಿನ ಬೀದಿಗಳಲ್ಲೂ ನಡೆಯುತ್ತಿರುವುದನ್ನು ನೀವು ನೋಡಿರಬಹುದು. ಜನ ತಮ್ಮದೇ ಆದ ಒರಿಜಿನಲ್ ಚುನಾವಣಾ ಪುರಾಣ ಸೃಷ್ಟಿ ಮಾಡುತ್ತಾ ತಂತಮ್ಮ ವ್ಯಾಖ್ಯಾನಗಳನ್ನು ಕೊಡುತ್ತಿರುತ್ತಾರೆ. ಟೀವಿಯಲ್ಲಿ ಯಾರು ಯಾರನ್ನಾದರೂ ಅತಿಯಾಗಿ ಹೊಗಳುತ್ತಿದ್ದರೆ ಅಥವಾ ಬಯ್ಯುತ್ತಿದ್ದರೆ, ‘ಓ! ಪೇಮೆಂಟಾಗಿದೆ ಬಿಡಲೇ!’ ಎನ್ನುತ್ತಿರುತ್ತಾರೆ!

ರಶ್ದಿ ಕಾದಂಬರಿಯಲ್ಲಿ ಬರುವ ಪಿಸುಮಾತುಗಳಂತಿರುವ ಈ ಪ್ರತಿಕ್ರಿಯೆಗಳು, ನಮ್ಮ ಜನರು ಚುನಾವಣಾ ಕಟ್ಟು ಕತೆಗಾರರು ಹೇಳಿದ್ದನ್ನೆಲ್ಲ ನಂಬುವ ದಡ್ಡರಲ್ಲ ಎಂಬುದನ್ನು ಸಾರುತ್ತವೆ. ಎಲ್ಲ ಬಗೆಯ ಜನರೂ ತಮ್ಮ ಕತೆ ಕಟ್ಟುತ್ತಿರುತ್ತಾರೆ; ಈ ಜನರು ನೀವು ಹೇಳುವ ಕತೆಗಳನ್ನು ಸುಮ್ಮನೆ ನುಂಗುವುದಿಲ್ಲ. ಇದಕ್ಕೆ ದೊಡ್ಡ ಪುರಾವೆ ಎರಡು ವರ್ಷಗಳ ಕೆಳಗೆ ದೇಶದ ಶೇರು ಮಾರುಕಟ್ಟೆಯ ಪ್ರತಿಕ್ರಿಯೆಯಲ್ಲಿ ನನಗೆ ಕಂಡಿತ್ತು. ಅದಾನಿ ಸಮೂಹದ ವಿರುದ್ಧ ಹಿಂಡನ್‌ಬರ್ಗ್ ವರದಿ ಬಂದಾಗ ಅದಾನಿ ಉದ್ಯಮ ಏರುಪೇರಾಯಿತು. ಅದಾನಿ ಸಮೂಹ ಪುಟಗಟ್ಟಲೆ ಜಾಹಿರಾತು ಕೊಟ್ಟು ತನ್ನದೇ ಆದ ‘ನೆರೇಟಿವ್’ ಸೃಷ್ಟಿಸಲು ಯತ್ನಿಸಿತು. ತನ್ನ ವಿರುದ್ಧ ಬಂದಿರುವ ವರದಿ ದೇಶದ ಮೇಲಿನ ದಾಳಿ ಎಂದೇ ಬಣ್ಣಿಸಿಕೊಂಡಿತು. ಆದರೆ ಶೇರು ಮಾರುಕಟ್ಟೆಯ ಸಹಭಾಗಿಗಳು ಮಾತ್ರ ತಮ್ಮದೇ ಆದ ‘ನೆರೇಟಿವ್’ ಸೃಷ್ಟಿಸಿಕೊಂಡರು! ಜನ ತಮ್ಮ ಕತೆಯನ್ನೇ ನೆಚ್ಚಿಕೊಂಡರು. ಅದಾನಿ ಉದ್ಯಮಗಳ ಶೇರುಮೌಲ್ಯ ಕುಸಿಯತೊಡಗಿತು.

ಇವೆಲ್ಲ ಒಂದು ಇನ್ನೊಂದನ್ನು ಮುಗಿಸುವ ‘ನೆರೇಟಿವ್’ಗಳೋ? ಅಥವಾ ಗಟ್ಟಿ ಸಂಶೋಧನೆಯೊಂದು ಬೃಹತ್ ವ್ಯಾಪಾರೋದ್ಯಮವನ್ನೇ ಉರುಳಿಸಬಹುದು ಎಂಬ ಹೊಸ ಕಥನದ ಉದಯವನ್ನು ಇದು ಹೇಳುತ್ತಿದೆಯೋ?  

ಇಂಥ ಬೆಳವಣಿಗೆಗಳ ನಡುವೆ, ‘ವಿಕ್ಟರಿ ಸಿಟಿ’ ಕಾದಂಬರಿ ಹೇಳುತ್ತಿರುವಂತೆ ಒಳಿತನ್ನು ಬಿತ್ತಿ ಬೆಳೆಯಬಯಸುವವರ ಅಂತರಂಗದ ಪಿಸುದನಿಗಳು ಕೂಡ ಜನರ ಅಂತರಂಗದ ಒಳಿತಿನ ಪಿಸುದನಿಗಳಾಗಿ ಬೆಳೆಯಬಹುದು. ಜೋರುಗಂಟಲ ಚೀರುದನಿಯ ಕಟ್ಟುಕತೆಗಳಿಗೆ ಜನರ ಪಿಸುಮಾತುಗಳು ಗಟ್ಟಿ ಉತ್ತರವಾಗಬಲ್ಲವು ಎಂಬ ನಂಬಿಕೆಯನ್ನು ನಾವು ಎಂದೂ ಕಳೆದುಕೊಳ್ಳಬಾರದು. 

ರಾಜಕೀಯದ ಅಬ್ಬರದ ಕಟ್ಟುಕತೆಗಳ ಎದುರು ಪ್ರಾಮಾಣಿಕರ ಮೆಲುದನಿಗಳು ಕೂಡ ಜನಾಭಿಪ್ರಾಯ ರೂಪಿಸಬಲ್ಲವು. ಇದು ಎಲ್ಲ ಚುನಾವಣೆಗಳಲ್ಲೂ ಸಾಬೀತಾಗುತ್ತಿರುತ್ತದೆ.

ಬ್ಲಾಗ್ ಫಾಲೋ ಮಾಡಲು ಒಪ್ಪಿ, ಕ್ಲಿಕ್ ಮಾಡಿ; ನೋಟಿಫಿಕೇಶನ್ ಪಡೆಯಿರಿ, ಶೇರ್ ಮಾಡಿ: FOLLOW
ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com 
ಬಿಡುವಾದಾಗ ನೋಡಿ, ಶೇರ್ ಮಾಡಿ:  YOUTUBE LINK

Share on:

Comments

6 Comments



| sanganagouda

ಇಲ್ಲಿ ಅವಸರವೂ ಸಾವಧಾನದ ಬೆನ್ನು ಏರಿದೆ. ಸರ್

\r\n\r\n

ಬಾಯಬಡುಕ ಮಾಧ್ಯಮಗಳು ಜಾಸ್ತಿ ಆಗಿವೆ. ಸರ್ಕಾರ ವಡ್ಡರ್ಸೆ ಅವರ ಹೆಸರಲ್ಲಿ ಮಾಧ್ಯಮ ಪ್ರಶಸ್ತಿ ಘೋಷಿಸಿದೆ. ಅದು ಎಷ್ಟರಮಟ್ಟಿಗೆ ಒಳದನಿಯ ನೆರೆಟಿವ್ ಇರುವವರಿಗೆ ಸಿಗುತ್ತದೆ ನೋಡಬೇಕು 

\r\n


| ಮಮತಾ

ನೆರೇಟಿವ್ಸ್, ಪಿಸುಮಾತುಗಳು, ಅಬ್ಬರಗಳು ಸಮಯ ಸಂದರ್ಭಾನುಸಾರ ಬದಲಾಗುತ್ತವೆ. ಬರಹದ ಧಾಟಿ ಚೆನ್ನಾಗಿದೆ

\r\n


| Dominic

ಲೇಖನ ಭರವಸೆಯ ಪಿಸುದನಿಯಾಗಿ ಬಿರುಗಾಳಿಯಾಗುವ ಒಳ ದನಿಯನ್ನು ಅಡಗಿಸಿಕೊಂಡಿದೆ....👏👏👏

\r\n


| Subramanya Swamy

ವಿಕ್ಟರಿ ಸಿಟಿ ಕಾದಂಬರಿ ಹಾಗೂ ವಾಸ್ತವ ಚುನಾವಣೆ ಮತ್ತು ಕಟ್ಟೆ ಪುರಾಣಗಳ ನಡುವೆಯೇ ಪ್ರಾಮಾಣಿಕ ಮೆಲು ದನಿಗಳು ಜನಾಭಿಪ್ರಾಯ ರೂಪಿಸಬಲ್ಲವು ಎಂಬುದು ನನಗೆ ಸಮಾಜದ ಒಳ ಸತ್ಯ ಹಾಗೂ ಸತ್ವಗಳನ್ನು ಗುರುತಿಸುವ ಬಹುಮುಖ್ಯ ಸಂಗತಿ ಎನಿಸುತ್ತದೆ .

\r\n


| ಗುರುಪ್ರಸಾದ್

ಸರ್ ಲೇಖನ ಬಹಳ ಮೌಲಿಕವಾಗಿದೆ.ಕನ್ನಡದ ಟಿ.ವಿ.ಆಂಕರಗಳು  ಪ್ರಪಂಚದಲ್ಲಿ ತಮ್ಮಷ್ಟು ತಿಳಿದವರು ಯಾರೂ ಇಲ್ಲ ಎಂದುಕೊಂಡಿದ್ದಾರೆ.ಅವರ ಮನೆಯಲ್ಲೇ ಅವರ ಮಾತನ್ನು ಕೇಳುವುದು ಅನುಮಾನ.  ಎಷ್ಕೋ ಸಲ ಪತ್ರಿಕೆಯನ್ನು ಕೊಂಡು ಕಟ್ಟೆಪುರಾಣವನ್ನೇ ಮೊದಲು ಓದುತ್ತಿದ್ದೇವು. ಜುಮ್ಮಿ,ವಾಟಸ್ಸೆ(ಈಗಿನ ವಾಟ್ಸ್ ಅಪ್)  ಇತ್ಯಾದಿ ಪಾತ್ರಗಳ ಮುಖಾಂತರ ಸಮಾಕಾಲೀನ ರಾಜಕೀಯ ಸನ್ನಿವೇಶವನ್ನು ಕಣ್ಣಿಗೆ ಕಟ್ಟುವಂತೆ ಹಾಸ್ಯಮಯವಾಗಿ ಹೇಳುತ್ತಿದ್ದರು.ಈಗಿನ  ಪತ್ರಿಕೆಗಳಲ್ಲಿ  ಕೆಲವರು ಚಂದ್ರೇಗೌಡರನ್ನು ಇಮಿಟೇಟ್ ಮಾಡುತ್ತಾರೆ.ಆದರೆ ಚಂದ್ರೇಗಡರ ಕಟ್ಟೇಪುರಾಣದ ಹಾಸ್ಯ ಅವರಿಗೆ ಸಾಧ್ಯವಾಗಿಲ್ಲ.

\r\n


| ಡಾ. ನಿರಂಜನ ಮೂರ್ತಿ ಬಿ ಎಂ

ರಾಜಕೀಯ ಪಕ್ಷಗಳು ಕಟ್ಟುವ ಕಥನಗಳಿಗೆ ಮತ್ತು ದುಡ್ಡಿಗಾಗಿ ಕುಟ್ಟುವ ಕಥೆಗಳಿಗೆ ಪ್ರತಿಯಾಗಿ ಸಾಮಾನ್ಯ ಜನರೂ ತಮ್ಮ ಕಥೆಗಳನ್ನು ಚೆನ್ನಾಗಿ ರೂಪಿಸಬಲ್ಲರೆಂಬುದು ಸಮಾಧಾನದ ವಿಷಯ. ಅಂತಹ ಸಾಮಾನ್ಯ ಜನರ ಕಥೆಗಳ ಪ್ರತಿರೂಪದಂತಿರುತ್ತಿದ್ದ ಚಂದ್ರೇಗೌಡರ 'ಕಟ್ಟೆ ಪುರಾಣ'ದಂತಹ ಅಂಕಣಗಳು ಇತ್ತೀಚಿನ ವರ್ಷಗಳಲ್ಲಿ ಕಾಣಸಿಗುವುದು ವಿರಳವಾಗಿದ್ದರೂ, ಹಳ್ಳಿಗಳಲ್ಲಿನ ಕಟ್ಟೆ ಪುರಾಣಗಳು ಇನ್ನೂ ಜೀವಂತವಾಗಿವೆ. ದೂರದರ್ಶನದ ಅಬ್ಬರಗಳಿಂದಾಗಿ ಅವುಗಳ ಸ್ವರೂಪ ಸ್ವಲ್ಪ ಬದಲಾಗಿದೆ ಅಷ್ಟೆ. ನಮ್ಮ ಶ್ರೀಸಾಮಾನ್ಯರು, ರಾಜಕೀಯ ಪಕ್ಷಗಳು ಮತ್ತವುಗಳಿಂದ ಪ್ರೇರಿತವಾದ ಕಥನಗಳಿಗೆ ಮಾರುಹೋಗದೆ, ತಮ್ಮದೇ ಆದ ರೀತಿಯಲ್ಲಿ ವಿಶ್ಲೇಷಿಸಿ ಅರ್ಥಮಾಡಿಕೊಳ್ಳುವಷ್ಟು ಪ್ರಬುದ್ಧರಾಗುತ್ತಿದ್ದಾರೆ. ಒಳಿತನ್ನು ಬಯಸುವ ಜನಮಾನಸದ ಪಿಸುದನಿಗಳು ಮತ್ತು ಬಯಲಿಗೆ ಬಾರದ ಪ್ರಾಮಾಣಿಕರ ಮೆಲುದನಿಗಳು ಕೂಡ ಒಟ್ಟಾರೆ ಜನಾಭಿಪ್ರಾಯ ರೂಪಿಸುವಲ್ಲಿ ಮಹತ್ತರ ಪಾತ್ರವಹಿಸುತ್ತವೆಂಬುದನ್ನು  ಗುರುತಿಸುವ ನಟರಾಜ್ ಹುಳಿಯಾರರ ಈ ಲೇಖನ ಅರ್ಥಪೂರ್ಣ ಮತ್ತು ಸಕಾಲಿಕ.

\r\n




Add Comment






Recent Posts

Latest Blogs



Kamakasturibana

YouTube