ಮಾರ್ಕ್ವೆಜ್ ಕತೆಗಳ ಮಾಯಾಲೋಕದಲ್ಲಿ

‘ನಾನು ಸಣ್ಣವನಾಗಿದ್ದಾಗ ಅಜ್ಜಿ ಸರೊತ್ತಿನಲ್ಲಿ ಸದ್ದು ಮಾಡದಂತೆ ಎದ್ದು ನಾನು ಮಲಗಿದ್ದ ಕಡೆಗೆ ಬರುತ್ತಿದ್ದಳು... ನನ್ನ ಎಬ್ಬಿಸಿ ಕತೆ ಹೇಳುತ್ತಿದ್ದಳು... ಅವಳಿಂದ ಕತೆ ಬರೆಯುವ ಕಲೆ ಕಲಿತೆ’ ಎನ್ನುತ್ತಾನೆ ಮಾರ್ಕ್ವೆಜ್. ‘ಬೆಕ್ಕು ಓಣಿಯಲ್ಲಿ ತಿರುಗುವುದನ್ನು ಹೇಗೆ ಬರೆಯಬೇಕೆಂಬುದನ್ನು ಹೆಮಿಂಗ್ವೆಯಿದ ಕಲಿತೆ’ ಎಂದು ಮುಂದೊಮ್ಮೆ ಹೇಳುತ್ತಾನೆ. 

ಮಾರ್ಕ್ವೆಜ್ ಕಣ್ಣೇ ವಿಚಿತ್ರ. ನಾವು ನೋಡುತ್ತಿರುವ ಸನ್ನಿವೇಶಗಳನ್ನೇ ಅವನೂ ನೋಡುತ್ತಾನೆ; ಅವನಿಗೆ ಹೊಳೆಯುವ ಸತ್ಯಗಳೇ ಬೇರೆ. ನೀವು ಹೊರವಾಸ್ತವದ ಕತೆಗಳನ್ನೇ ಮೆಚ್ಚುವ ವೈಚಾರಿಕ ಮನಸ್ಸಿನವರಾದರೆ ಈ ಕತೆಗಳು ‘ಫ್ಯಾಂಟಸಿ’ ಎನ್ನುತ್ತೀರಿ; ಮೇಲುನೋಟಕ್ಕೆ ‘ಅವಾಸ್ತವ’ ಎನ್ನಿಸುವ ಈ ಕತೆಗಳನ್ನು ಹೇಗೆ ವಿವರಿಸಬೇಕು ಎಂದು ಪರದಾಡಿದ ಪಶ್ಚಿಮದ ವಿಮರ್ಶಕರು ಇದು ‘ಮಾಂತ್ರಿಕ ವಾಸ್ತವತಾವಾದ’ ಎಂದರು! ಮಾರ್ಕ್ವೆಜ್, ‘ನಮ್ಮ ಲ್ಯಾಟಿನ್ ಅಮೆರಿಕದ ವಾಸ್ತವ ಇರೋದೇ ಹೀಗೆ. ಇದು ವಾಸ್ತವತಾವಾದಿ ಬರವಣಿಗೆ’ ಅಂದ.

ಎಲ್ಲ ಸೃಜನಶೀಲರಲ್ಲಿ ಸಂದಿಗ್ಧತೆ ಹುಟ್ಟಿಸುವ ಸವಾಲು ಇದು: ಕತೆ ಬರೆಯುವಾಗ ಅತಿಯಾದ  ತರ್ಕ, ಅತಿ ವೈಚಾರಿಕತೆ ಪ್ರಧಾನವಾಗಿಬಿಟ್ಟರೆ ಮಾನವ ವರ್ತನೆಯ ನಿಗೂಢಗಳು ಅರ್ಥವಾಗದೆ ಉಳಿದುಬಿಡುತ್ತವೆ. ಆದರೆ ಕತೆ ಬರೆಯಲು ಹೋಗಿ ವೈಚಾರಿಕತೆಯನ್ನು ಪೂರಾ ಕೈಬಿಟ್ಟರೆ, ಅಂಧಶ್ರದ್ಧೆಗಳು ಸವಾರಿ ಮಾಡತೊಡಗುತ್ತವೆ! ಇದು ತಂತಿಯ ಮೇಲಿನ ನಡಿಗೆ. ಇಂಗ್ಲಿಷ್ ಕವಿ ಕೋಲರಿಜ್ ‘ಸಸ್ಪೆನ್ಷನ್ ಆಫ್ ಡಿಸ್‌ಬಿಲೀಫ್’ ಎಂಬ ಪರಿಕಲ್ಪನೆ ಕೊಟ್ಟು ಈ ಗೊಂದಲವನ್ನು ಬಗೆಹರಿಸಿದ; ಸಾಹಿತ್ಯ ಕೃತಿಗಳನ್ನು ಓದುವಾಗ ‘ಅಪನಂಬಿಕೆಯನ್ನು ಅಮಾನತ್ತಿನಲ್ಲಿಟ್ಟು ಓದಬೇಕು’ ಎಂದ.

ಕೊಲಂಬಿಯಾದ ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ ತನ್ನ ಕತೆಗಳ ವಿವರಗಳನ್ನು ಓದುಗರು ಅಪನಂಬಿಕೆಯಿಂದ ತಳ್ಳಿ ಹಾಕಲಾರದಂತೆ ಬರೆಯುತ್ತಾನೆ. ಅವನ ಕಥಾಶೈಲಿಗೆ ಅವನ ಸುತ್ತಮುತ್ತಲ ಜನ, ಅವರ ವಾಸ್ತವಗಳು, ನಂಬಿಕೆಗಳು ಸಲೀಸಾಗಿ ಬಂದು ಕೂಡಿಕೊಳ್ಳುತ್ತವೆ. ಮಾನವ ಲೋಕದ ಅವಿತಿಟ್ಟ ಗುಟ್ಟುಗಳನ್ನು, ವಿಚಿತ್ರ ವಿವರಗಳನ್ನು ನಮ್ಮ ಒಳಮನಸ್ಸು ಒಪ್ಪಿ ಅಹುದಹುದೆನುವಂತೆ ಮಾರ್ಕ್ವೆಜ್ ಬರೆಯುತ್ತಾನೆ. ಅವನಂತೆ ಬರೆಯುವ ಇನ್ನೊಬ್ಬ ಲೇಖಕನನ್ನು ನಾನು ಕಂಡಿಲ್ಲ. ಸರಳ ತರ್ಕಕ್ಕೆ ದಕ್ಕದ ಅವನ ಕತೆಗಳು ತಮ್ಮದೇ ಆಂತರಿಕ ತರ್ಕವನ್ನು ಸೃಷ್ಟಿಸಿಕೊಳ್ಳುತ್ತವೆ. ಮನುಷ್ಯರು ಯಾವ ಗಳಿಗೆಯಲ್ಲಿ ಹೇಗೆ ವರ್ತಿಸುತ್ತಾರೆ, ಅವರ ವರ್ತನೆಯ ಪರಿಣಾಮಗಳೇನು, ಮಾನವ ಮನಸ್ಸು ಸತ್ಯಗಳನ್ನು ಹೇಗೆಲ್ಲ ಗ್ರಹಿಸುತ್ತದೆ...ಇವನ್ನೆಲ್ಲ ಮಾರ್ಕ್ವೆಜ್ ಕಣ್ಣು ಹುಡುಕುತ್ತಲೇ ಇರುತ್ತದೆ.

ಮಾರ್ಕ್ವೆಜ್ ಒಂದು ಸಂದರ್ಶನದಲ್ಲಿ ಹೇಳಿದ ಮಾತು: ‘ಹದಿನೇಳು ವರ್ಷದ ಹುಡುಗನಾಗಿದ್ದಾಗಿಂದ ಹಿಡಿದು ಇವತ್ತಿನ ಬೆಳಗ್ಗೆಯ ತನಕ ನಾನು ಮಾಡಿರುವುದು ಇಷ್ಟೇ: ಪ್ರತಿ ದಿನ ಬೇಗ ಏಳುವುದು, ಹಿಂದೆಂದೂ ಯಾರೂ ಹೇಳದ ಕತೆಯೊಂದನ್ನು ಹೇಳಿ, ಅಸ್ತಿತ್ವದಲ್ಲೇ ಇಲ್ಲದ ಓದುಗನ ಬದುಕನ್ನು ಖುಷಿಯಲ್ಲಿಡುವ ಏಕಮಾತ್ರ ಉದ್ದೇಶದಿಂದ ಟೈಪ್‌ರೈಟರ್ ಮೇಲಿನ ಖಾಲಿ ಹಾಳೆಯನ್ನು ತುಂಬಿಸಲು ಕೀಗಳ ಮೇಲೆ ಬೆರಳಿಡುವುದು... ಅಬ್ಬ! ನನ್ನ ರೂಮಿನ ಏಕಾಂತದಲ್ಲಿ ಕೂತು ಬರೇ ಇಪ್ಪತ್ತೆಂಟು ಅಕ್ಷರಗಳನ್ನು, ಎರಡು ಬೆರಳುಗಳನ್ನು, ನನ್ನ ಏಕಮಾತ್ರ ಸಾಧನವಾಗಿ ಬಳಸಿ ಬರೆದದ್ದನ್ನು ಹತ್ತು ಲಕ್ಷ ಜನ ಓದುತ್ತಾರೆ ಅಂದರೆ... ಇದು ನಿಜಕ್ಕೂ ಒಂದು ಹುಚ್ಚಲ್ಲವೆ!’ 

ಈ ‘ಹುಚ್ಚಿ’ನಲ್ಲಿ ಮಾರ್ಕ್ವೆಜ್ ಕತೆಗಳು ಹುಟ್ಟಿವೆ. ‘ಕೃತಕ ಗುಲಾಬಿಗಳು’ ಕತೆಯಲ್ಲಿ ಕಣ್ಣು ಕಾಣದ ಮುದುಕಿಯೊಬ್ಬಳು ತರುಣಿಯೊಬ್ಬಳ ಪ್ರೇಮಲೋಕದ ಗುಟ್ಟನ್ನು ಕರಾರುವಾಕ್ಕಾಗಿ ಗಮನಿಸುತ್ತಿರುತ್ತಾಳೆ. ಪ್ರೇಮದ ಭಾಷೆ ಅರಿಯಲು ಕಣ್ಣೇಕೆ ಬೇಕು! ‘ನೀರು ಪಾಲಾಗಿದ್ದ ಲೋಕದ ಕಡು ಚೆಲುವ’ ಕತೆಯಲ್ಲಿ ಭಾರೀ ವಿಲಕ್ಷಣ ದೇಹವೊಂದು ಕಡಲಲ್ಲಿ ತೇಲಿ ಬರುತ್ತದೆ. ಆ ವಿಲಕ್ಷಣ ದೇಹಕ್ಕೆ ಊರಿನ ಹೆಂಗಸರು ಬಗೆಬಗೆಯ ಅಲಂಕಾರ ಮಾಡುತ್ತಾ, ಆವರೆಗೆ ಪುರುಷ ದೇಹದ ಬಗ್ಗೆ ತಮ್ಮೊಳಗೇ ಅವಿತುಕೊಂಡಿದ್ದ ಭಾವಗಳನ್ನು ಮೆಲ್ಲಗೆ ಹೊರಚೆಲ್ಲತೊಡಗುತ್ತಾರೆ! ಕತೆ ಮೇಲುನೋಟಕ್ಕೆ ಅವಾಸ್ತವ; ಆದರೆ ಈ ಹೆಂಗಸರ ಮಾತುಗಳನ್ನು ಸರಿಯಾಗಿ ಕೇಳಿಸಿಕೊಂಡರೆ ಅದು ಅವರೊಳಗೆ ಹುದುಗಿರುವ ಅಸಲಿ ಲೈಂಗಿಕ ಭಾವಗಳ ಸ್ಫೋಟ. ಎಲ್ಲೂ ಹೇಳಲಾಗದ ಭಾವಗಳನ್ನು ನಾವು ವ್ಯಕ್ತಪಡಿಸುವುದು ಸಂಕೇತದಲ್ಲಿ; ಗುಪ್ತ ಭಾಷೆಯಲ್ಲಿ. ಮಾನವಜೀವಿಗಳ ಸೂಕ್ಷ್ಮ ಸತ್ಯಗಳನ್ನು ಗ್ರಹಿಸಲು ಪರಕಾಯ ಪ್ರವೇಶ ಮಾಡುವ ಮಾರ್ಕ್ವೆಜ್ ಈ ಗುಪ್ತ ಭಾಷೆಗೆ ಕಿವಿಗೊಡುತ್ತಾನೆ.

ಮಾರ್ಕ್ವೆಜ್ ಕತೆಗಳ ಲೋಕದಲ್ಲಿ ತೀರಿಕೊಂಡವರು ‘ತೀರಿ’ ಹೋಗುವುದಿಲ್ಲ; ಅವರು ಇದ್ದೇ ಇರುತ್ತಾರೆ. ತೀರಿಕೊಂಡವರು ನಮ್ಮ ಚಿತ್ತದಲ್ಲಿರುವುದರ ಜೊತೆಗೇ, ಇಲ್ಲೇ ಎಲ್ಲೋ ನಮ್ಮ ಸುತ್ತಮುತ್ತ ಇರುವಂತೆ ಕಾಣುತ್ತಾರಲ್ಲವೆ? ಅವರ ಜೊತೆ ನಾವು ಒಳಗೊಳಗೇ ಮಾತಾಡುತ್ತಲೇ ಇರುತ್ತೇವೆ. ಒಮ್ಮೊಮ್ಮೆ ನಮ್ಮ ಚಿತ್ತದಲ್ಲಿ ನಡೆಯುವುದಕ್ಕೂ, ಹಾಲಿ ಪ್ರಪಂಚದಲ್ಲಿ ನಡೆಯುವುದಕ್ಕೂ ವ್ಯತ್ಯಾಸವೇ ಮರೆಯಾಗುತ್ತಿರುತ್ತದೆ. ಇಂಥ ಚಣಗಳನ್ನು ಹಿಡಿಯುವುದರಲ್ಲಿ ಮಾರ್ಕ್ವೆಜ್ ರುಸ್ತುಮ! ‘ಜೋಡಿಸಿಟ್ಟ ಗುಲಾಬಿಗಳನ್ನು ಯಾರೋ ಕೆದರುತ್ತಿದ್ದಾರೆ’ ಕತೆಯಲ್ಲಿ ಎಷ್ಟೋ ವರ್ಷಗಳ ಕೆಳಗೆ ತೀರಿಕೊಂಡವರ ಜೊತೆ ಹೆಂಗಸರು ನಿತ್ಯ ಮಾತಾಡಿಕೊಳ್ಳುತ್ತಾರೆ; ಕತೆ ಓದುವವರಿಗೆ ಇದು ಅಸಹಜ ಅನ್ನಿಸುವುದೇ ಇಲ್ಲ.

 ಕತೆಯೊಂದರ ಶಕ್ತಿ ಓದುಗರಿಗೆ ಪಾತ್ರ, ಘಟನೆ, ಪರಿಸರಗಳನ್ನು ಕಾಣಿಸುವ ರೀತಿಯಲ್ಲೂ ಇರುತ್ತದೆ. ಮಾರ್ಕ್ವೆಜ್ ಕತೆಗಳ ವಿವರಗಳಲ್ಲಿ, ಬಣ್ಣನೆಗಳಲ್ಲಿ ಮೈದಾಳುವ ಕೆರೆಬಿಯನ್ ಪ್ರದೇಶಗಳ ಬದುಕನ್ನು ಓದುಗರು ಮುಟ್ಟಿ ಅನುಭವಿಸಬಲ್ಲರು. ಅವನ ಕತೆಗಳಲ್ಲಿ ಲ್ಯಾಟಿನ್ ಅಮೆರಿಕದ ಭೀಕರ ಬಿಸಿಲು ಸೃಷ್ಟಿಸುವ ಗರ ಬಡಿದ ಸ್ಥಿತಿ, ಬಿಸಿಲಿನ ತೀವ್ರ ಝಳ ಓದುಗರ ಮೈ ಮುಖಕ್ಕೆ ರಾಚುತ್ತಿರುತ್ತದೆ. ‘ಮಕೊಂಡೊದಲ್ಲಿ ಸುರಿವ ಮಳೆ ನೋಡುತ್ತಾ ತನಗೆ ತಾನೇ ಮಾತಾಡಿಕೊಳ್ಳುವ ಇಸಬೆಲ್ಲಾ’ ಕತೆಯಲ್ಲಿ ಒಮ್ಮೆ ಶುರುವಾದ ಜಡಿ ಮಳೆ ಎಂದೆಂದಿಗೂ ಮುಗಿಯುವುದಿಲ್ಲವೇನೋ ಎನ್ನಿಸತೊಡಗುತ್ತದೆ. ಕತೆ ಓದುತ್ತಾ ಓದುಗ, ಓದುಗಿಯರಿಗೂ ಮಳೆಯಲ್ಲಿ ತೊಯ್ದು ತೊಪ್ಪೆಯಾದಂಥ ಅನುಭವವಾಗುತ್ತದೆ; ಮನಸ್ಸು ಸ್ವೆಟರ್, ರಗ್ಗು ಹುಡುಕತೊಡಗುತ್ತದೆ; ಮೈ ಬಿಸಿಯೇರಿಸುವ ಮದ್ಯಕ್ಕಾಗಿ ಕೈ ತಡಕಾಡತೊಡಗುತ್ತದೆ. ‘ಕಳೆದು ಹೋದ ಕಾಲದ ಕಡಲು’ ಕತೆಯ ಊರಿನಲ್ಲಿ ವರ್ಷಗಟ್ಟಲೆ ಹಬ್ಬುವ ವಿಚಿತ್ರ ವಾಸನೆ ನಮ್ಮ ಮೂಗಿಗೂ ಅಡರತೊಡಗುತ್ತದೆ! 

ಮಾರ್ಕ್ವೆಜ್ ಪಾತ್ರಗಳ ಕಣ್ಣೆದುರು ವಿಚಿತ್ರ ಸತ್ಯಗಳು ಫಳಾರನೆ ಮಿಂಚುತ್ತವೆ: ‘ಜನ ತಾವು ಸಾಯಬೇಕಾದ ಕಾಲಕ್ಕೆ ಸಾಯುವುದಿಲ್ಲ; ಸಾಯಬೇಕೆಂದುಕೊಂಡಾಗ ಸಾಯುತ್ತಾರೆ.’ ಮಾರ್ಕ್ವೆಜ್ ಬಣ್ಣನೆಯ ಚಿತ್ರಗುಣ ನಮ್ಮನ್ನು ಅಲುಗಾಡಿಸುತ್ತದೆ: ‘ಆ ಸುಕ್ಕುಗಟ್ಟಿದ ಒಣ ಮುಖ ನೋಡಿದರೆ ಆಕೆ ಅದೇ ಆಗ ಗೋರಿಯಿಂದ ಎದ್ದು ಬಂದಂತಿದ್ದಳು.’ 

ಮಾರ್ಕ್ವೆಜ್ ಕತೆಗಳ ತಾಜಾ ಹೆಸರುಗಳು ನಮ್ಮನ್ನು ವಿಸ್ಮಯಗೊಳಿಸುತ್ತವೆ: ‘ಇವಾ ಅವಳ ಬೆಕ್ಕಿನಲ್ಲಿದ್ದಾಳೆ’, ‘ನೀಲಿ ನಾಯಿಯ ಕಣ್ಣು’, ‘ಮೂವರು ನಿದ್ರಾ ಸಂಚಾರಿಗಳ ಕಹಿತನ’, ‘ಜೋಡಿಸಿಟ್ಟ ಗುಲಾಬಿಗಳನ್ನು ಯಾರೋ ಕೆದರುತ್ತಿದ್ದಾರೆ.’

ತಾರುಣ್ಯದಲ್ಲಿ ಪತ್ರಕರ್ತನಾಗಿದ್ದ ಮಾರ್ಕ್ವೆಜ್ ಉತ್ತಮ ಪತ್ರಿಕಾ ಬರವಣಿಗೆಯ ಸದ್ಯತನವನ್ನು, ಕ್ಷಿಪ್ರತೆಯನ್ನು ಕಥಾ ಬರವಣಿಗೆಗೆ ತಂದ. ಹೀಗಾಗಿ ಅವನ ಬರವಣಿಗೆಯಲ್ಲಿ ನೀರಸ ಸಾಲುಗಳಾಗಲೀ, ನಿರ್ಜೀವ ವಿವರಗಳಾಗಲೀ ಕಡಿಮೆ. ಈ ಕತೆಗಳ ಲೋಕದಲ್ಲಿ ನಿಧಾನವಾಗಿ, ವಿರಾಮವಾಗಿ ಹಾದು ಮುಂದೆ ಸಾಗುವ, ನಿಂತು ವಿವರಗಳನ್ನು ಹೀರಿಕೊಳ್ಳುವ ವ್ಯವಧಾನ ಓದುವವರಿಗಿರಬೇಕು; ಆಗ ಮಾತ್ರ ಮಾರ್ಕ್ವೆಜ್ ಲೋಕಗಳನ್ನು ಮುಟ್ಟಿ, ಅಲ್ಲಿ ಮಿಂದು, ಅನುಭವಿಸಬಹುದು. ಇಂಥ ಕಥಾಲೋಕಗಳನ್ನು ಸೃಷ್ಟಿಸಿ ನಾವು ‘ಅತ್ತಲಿತ್ತ ಹೋಗದಂತೆ’ ಅಲ್ಲೇ ತಂಗುವಂತೆ ಮಾಡುವ, ಎಲ್ಲೂ ಅಗ್ಗವಾಗದಂತೆ ಬರೆಯಬಲ್ಲ, ಕತೆಗಾರರು ಲೋಕದಲ್ಲಿ ತೀರಾ ಕಡಿಮೆ.

ಗತಿಸಿದ ಕಾಲವೊಂದರಲ್ಲಿ ನಿಂತು ಕತೆ ಬರೆಯುವವನಂತೆ ಕಾಣುವ ಮಾರ್ಕ್ವೆಜ್ ತನ್ನ ಕಾಲದಲ್ಲಿ ನಿಂತು ಸಮಾಜದ ರಾಜಕೀಯ ಬಿಕ್ಕಟ್ಟುಗಳನ್ನು ಕಣ್ಣು ಬಿಟ್ಟು ನೋಡುವ, ಅನುಭವಿಸುವ ಲೇಖಕನೂ ಆಗಿದ್ದ. ‘ಐ ಓನ್ಲಿ ಕೇಮ್ ಟು ಯೂಸ್ ದ ಫೋನ್’ (ನಾನು ಒಂದು ಫೋನ್ ಮಾಡಲು ಬಂದೆ, ಅಷ್ಟೆ’) ಕತೆ ಹುಟ್ಟಿಸಿದ ದಿಗ್ಭ್ರಮೆ, ಕತೆಯ ವ್ಯಾಪಕ ಅರ್ಥ ಕುರಿತು ಡಿ. ಆರ್. ನಾಗರಾಜ್ ಕಣ್ಣರಳಿಸಿ ಮಾತಾಡಿದ ಗಳಿಗೆ ನೆನಪಾಗುತ್ತದೆ. ಈ ಕತೆಯಲ್ಲಿ ಮಾರ್ಕ್ವೆಜ್ ದಮನಕಾರಿ ರಾಜಕೀಯ ವ್ಯವಸ್ಥೆಯನ್ನು ಚಿತ್ರಿಸುವ ರೀತಿ ಅವನ ದೇಶದ ಕತೆಯನ್ನೂ, ಇಂದಿನ ಭಾರತದ ದಮನಕಾರಿ ಪ್ರಭುತ್ವದ ಕತೆಯನ್ನೂ ಹೇಳುತ್ತದೆ. ‘ದ ಇನ್‌ಕ್ರೆಡಿಬಲ್ ಅಂಡ್ ಸ್ಯಾಡೆಸ್ಟ್ ಟೇಲ್ ಆಫ್ ಇನ್ನೊಸೆಂಟ್ ಎರೆಂದಿರಾ ಅಂಡ್ ಹರ್ ಹಾರ್ಟ್‌‌ಲೆನ್ ಗ್ರ್ಯಾಂಡ್ ಮದರ್’ ನೀಳ್ಗತೆ ಅಸಹಾಯಕ ಎರೆಂದಿರಾ ಮೂಲಕ ಇಡೀ ಸ್ತ್ರೀಸಂಕುಲದ ಎಣೆಯಿಲ್ಲದ ಕಷ್ಟಗಳನ್ನು, ಎಲ್ಲ ಕಾಲದ ಸ್ತ್ರೀ ದಮನದ ಕತೆಯನ್ನು ಹೇಳತೊಡಗುತ್ತದೆ.

ಮಾರ್ಕ್ವೆಜ್ ಕತೆಗಳು ಕನ್ನಡವೂ ಸೇರಿದಂತೆ ಜಗತ್ತಿನ ನೂರಾರು ಭಾಷೆಗಳಿಗೆ ಅನುವಾದವಾಗಿವೆ; ಲಕ್ಷಾಂತರ ಪ್ರತಿಗಳು ಮಾರಾಟವಾಗಿವೆ; ಕೋಟ್ಯಾಂತರ ಓದುಗರನ್ನು ಮುಟ್ಟಿವೆ. ಆರೇಳು ದಶಕಗಳ ಕಾಲ ಬರೆದ ಮಾರ್ಕ್ವೆಜ್ ಒಂದು ಶತಮಾನದ ಲ್ಯಾಟಿನ್ ಅಮೆರಿಕದ ಚರಿತ್ರೆಗೆ ಸಾಕ್ಷಿಯಾಗಿ ನಿಂತು ತನ್ನ ಕಾಲವನ್ನೂ, ಕಾಲದ ವಿದ್ಯಮಾನಗಳನ್ನೂ ಕತೆಯಾಗಿಸಿದ; ಅದರ ಹಿಂದಿನ ಶತಮಾನದ ಚರಿತ್ರೆಯನ್ನು ಹಿರಿಯರ ನೆನಪು, ಕಥಾನಕಗಳ ಮೂಲಕ ಪಡೆದುಕೊಂಡು ಕಳೆದುಹೋದ ಕಾಲವನ್ನು ಸೃಷ್ಟಿಸಿದ. ಮಾರ್ಕ್ವೆಜ್ ಕತೆಗಳಲ್ಲಿ ಹಿಂದಣವೂ ಮುಂದಣವೂ ಬೆರೆತು ಹುಟ್ಟುವ ಕಾಲಜ್ಞಾನ, ಸಮುದಾಯದ ಸಾಮೂಹಿಕ ಜ್ಞಾನ ಎಲ್ಲ ಬೆರೆತು ಹೊಸ ನೋಟಗಳು ಮೂಡುತ್ತವೆ. ‘ಕಳೆದು ಹೋದ ಕಾಲ ಹಾಗೂ ಇಂದಿನ ಕಾಲ ಎರಡೂ ಮುಂದಿನ ಕಾಲದಲ್ಲಿ ಹಾಜರಿರುತ್ತವೆ’ ಎಂಬ ಟಿ.ಎಸ್. ಎಲಿಯಟ್ ಕಾಣ್ಕೆ ಮಾರ್ಕ್ವೆಜ್ ಕತೆಗಳಲ್ಲಿ ಸಾಕಾರವಾಗುತ್ತಿರುತ್ತದೆ. 

ಕೊನೆಕೊನೆಗೆ ಮಾರ್ಕ್ವೆಜ್ ಪೂರ್ಣ ಮರೆವಿನ ಕಾಯಿಲೆಗೆ ತುತ್ತಾದ ಘಟ್ಟ ಕುರಿತು ಹಿಂದೆ ಈ ಅಂಕಣದಲ್ಲೇ ಬರೆದಿರುವೆ: (READ HERE) ನೆನಪು ಹಠಾತ್ತನೆ ಕಂತುವ ತನಕವೂ ಸೃಜನಶೀಲನಾಗಿಯೇ ಉಳಿದಿದ್ದ ಮಾರ್ಕ್ವೆಜ್ ಕತೆಗಳು ನಿಜಕ್ಕೂ `ಭುವನದ ಭಾಗ್ಯ'ದಂತಿವೆ. ಬರೆಯುವವರಿಗೆ ಇನ್ನೊಬ್ಬ ಲೇಖಕಿ ಅಥವಾ ಲೇಖಕನೇ ಗುರು ಎಂದು ನನ್ನಂತೆ ನೀವೂ ನಂಬುವುದಾದರೆ, ಮಾರ್ಕ್ವೆಜ್ ಕತೆಗಳೇ ಬರೆವವರ ಗುರುವಾಗಬಲ್ಲವು!

ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ (೧೯೨೭-೨೦೧೪) ತಾನು ಬರೆದಿದ್ದು ನಿಜಕ್ಕೂ ಕಲೆಯಾಗಿದೆಯೆಂದು ತನ್ನೊಳಗಿಗೆ ಪೂರಾ ಒಪ್ಪಿಗೆಯಾಗುವ ಸಾಲು ಮೂಡುವವರೆಗೂ ದಿನಗಟ್ಟಲೆ, ವರ್ಷಗಟ್ಟಲೆ ಸೆಣಸುತ್ತಿದ್ದ; ಶ್ರಮ, ಪ್ರತಿಭೆ, ಕಾಣ್ಕೆ ಬೆರೆತು ಹುಟ್ಟಿದ ಅವನ ಕತೆಗಳು ಅದ್ಭುತ ಕಲೆಗಳಾಗುತ್ತಿದ್ದವು. ‘ಕಲ್ಪನೆ ಗಿಲ್ಪನೆ… ಇವೆಲ್ಲ ನನಗೆ ಹೇಳಲೇಬೇಡಿ; ಇದು ರಿಯಾಲಿಟಿ. ಕೊನೆಗೂ ಸಾಹಿತ್ಯ ರಚನೆ ಬಡಗಿ ಕೆಲಸದ ಥರಾನೇ. ಎರಡೂ ಶ್ರಮದ ಕೆಲಸಗಳೇ’ ಎನ್ನುತ್ತಿದ್ದ ಮಾರ್ಕ್ವೆಜ್, ಶ್ರೇಷ್ಠವಾದದ್ದನ್ನೇ ಬರೆಯಬೇಕೆಂದು ಬೆವರು ಹರಿಸುತ್ತಿದ್ದ. ಕೆ.ವಿ. ಸುಬ್ಬಣ್ಣನವರು ಯಾವುದೋ ಸಿನಿಕ ಸಂದರ್ಭದಲ್ಲಿ ಹೇಳಿದ ‘ಶ್ರೇಷ್ಠತೆಯ ವ್ಯಸನ’ ಎಂಬ ಮಾತನ್ನೇ ಕಣ್ಣು ಮುಚ್ಚಿ ಪಠಿಸುವವರಿದ್ದಾರೆ!  ಬರೆವ ವೃತ್ತಿಯಲ್ಲಿ ಗಂಭೀರವಾಗಿ ತೊಡಗಿರುವವರು ಮಾರ್ಕ್ವೆಜ್ ಆಗಲಿ, ಕುವೆಂಪು, ಬೇಂದ್ರೆ, ತೇಜಸ್ವಿ ಆಗಲಿ, ನಮ್ಮ ಕಾಲದ ಎನ್.ಕೆ.ಹನುಮಂತಯ್ಯ ಆಗಲಿ ಯಾಕೆ ಶ್ರೇಷ್ಠವಾದದ್ದನ್ನು ಬರೆಯಬೇಕೆಂದು ಹಂಬಲಿಸುತ್ತಿದ್ದರು ಎಂಬುದನ್ನು ಧ್ಯಾನಿಸಿ ನೋಡಬೇಕಾಗುತ್ತದೆ. ಈ ಧ್ಯಾನವಿಲ್ಲದೆ ಬರೆವ ಬದುಕು ಬರವಣಿಗೆಯ ಜೀತದಂತಿರುತ್ತದೆ!

ಬ್ಲಾಗ್ ಫಾಲೋ ಮಾಡಲು ಒಪ್ಪಿ, ಕ್ಲಿಕ್ ಮಾಡಿ; ನೋಟಿಫಿಕೇಶನ್ ಪಡೆಯಿರಿ, ಶೇರ್ ಮಾಡಿ: FOLLOW
ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com 
ಬಿಡುವಾದಾಗ ನೋಡಿ, ಶೇರ್ ಮಾಡಿ:  https://www.youtube.com/@NatarajHuliyarYT

Share on:


Recent Posts

Latest BlogsKamakasturibana

YouTubeComments

9 Comments| ಶಿವಲಿಂಗೇಗೌಡ ಡಿ

ಮಾರ್ಕ್ವಿಜ್ ನ  ಕಥಾಲೋಕದ ವಿಮರ್ಶೆಯ ಮೂಲಕ ಸಾಹಿತ್ಯದ ಓದುಗರಿಗೆ ಮತ್ತು ಬರೆಯುವವರಿಗೆ ಉತ್ತಮ ಮಾರ್ಗದರ್ಶನವಿದೆ. "ಶ್ರೇಷ್ಠವಾದುದನ್ನೇ ಬರೆಯಬೇಕು. ಧ್ಯಾನವಿಲ್ಲದೆ ಬರೆವ ಬದುಕು ಬರವಣಿಗೆಯ ಜೀತ." ಈ ಸಾಲುಗಳು ಓದುಗರನ್ನೂ ಲೇಖಕರನ್ನೂ ಕಾಡುವಂತವು.

\r\n


| MANJUNATH

ಮಾರ್ಕ್ವೆಜ್ ಕತೆಗಳನ್ನು ಅರಿಯಲು ನಿಮ್ಮ ಬರಹ ನೆರವಾಗುತ್ತದೆ.... ಮಾಂತ್ರಿಕ ವಾಸ್ತವದ ಅವನ ಕತೆಗಳು ನನ್ನ ಅರಿವಿಗೆ ಇನ್ನೂ ನಿಲುಕಿರಲಿಲ್ಲ ನಿಮ್ಮ ಲೇಖನದ ಸಹಾಯದಿಂದ ಮತ್ತೊಮ್ಮೆ ಓದಿ ಗ್ರಹಿಸಲು ಪ್ರಯತ್ನಿಸುವೆ... ನನ್ನ ಹಾಗೆಯೇ ಓದಿ ಅರಗಿಸಿಕೊಳ್ಳಲು ಆಗದೆ ತಹತಹಿಸುವವರಿಗೆ ಸಹಾಯವಾಗಲೆಂದು ಶೇರ್ ಮಾಡಿದ್ದೇನೆ...

\r\n


| Dr.Prabhgakar

Beautiful depiction of Marquez's world. I made up my mind to read his stories

\r\n


| Gangadhar

ನಿಮ್ಮ ಗಾಳಿ ಬೆಳಕು ಮಾರ್ಕ್ವೆಜ್ ಕತೆಗಳನ್ನು ಓದಬೇಕೆನಿಸುವಂತೆ ಮಾಡಿದೆ

\r\n


| Banjagere Jayaprakash

ಮಾರ್ಕ್ವೆಜ್ ಕತೆಗಳಿಗೊಂದು ಮನನೀಯ ಪ್ರವೇಶಿಕೆ. ವಾಸ್ತವತೆಯನ್ನೋ, ಫ್ಯಾಂಟಸಿಯನ್ನೋ ಬರೆಯುವ ಲೇಖಕ ತನಗೆ ತಾನೇ ನಂಬಿಸಿಕೊಳ್ಳುವಂತೆ ಬರೆಯಬೇಕು. ಕೇವಲ ಓದುಗರನ್ನು ನಂಬಿಸಲು ಬರೆದ ಮಾಂತ್ರಿಕತೆ ಕಣ್ಕಟ್ಟಿನ ಹಾಗೆ ಕೃತಕವಾಗಿರುತ್ತದೆ.

\r\n


| Dr. Raju B L

ಬಹುಶಃ ಮಾರ್ಕ್ವೆಜ್ ನ ರೂಪಕ ಜಗತ್ತನ್ನು ಇಷ್ಟು ಸರಳವಾಗಿ, ಅಷ್ಟೇ ಪರಿಣಾಮಕಾರಿಯಾಗಿ ಕನ್ನಡದ ಪ್ರಜ್ಞೆ ಗೆ ದೊರಕಿಸಿಕೊಡಲು ಸಾಧ್ಯವೇ ಇಲ್ಲ. ಕೊನೆಯ ಸಾಲುಗಳಂತೂ ಅದ್ಬುತ ಒಳನೋಟ

\r\n


| Mohan Mirle

“ಮಾರ್ಕ್ವೆಜ್ ಕತೆಗಳ ಮಾಯಾಲೋಕದಲ್ಲಿ” ಬರಹ ಓದಿ ನಿಜಕ್ಕೂ ಜಾಗತಿಕ ಕಥಾ ಲೋಕದ ದಿಗ್ಗಜನ ಬಗ್ಗೆ ಓದಿ ಪುಳಕಿತಗೊಂಡೆ. ಯುವ ಕಥೆಗಾರರಿಗೆ, ಬರಹಗಾರರಿಗೆ ಮಾರ್ಕ್ವೆಜ್ ಏನು ಹೇಳಿಹೋಗಿದ್ದಾನೆ, ಏನು ಬಿಟ್ಟು ಹೋಗಿದ್ದಾನೆ ಎನ್ನುವುದನ್ನು ಸರಳವಾಗಿ ತಿಳಿಸಿಕೊಟ್ಟು ಉಪಕಾರ ಮಾಡಿದ್ದೀರಿ. ‘ಅಪನಂಬಿಕೆಯ ಅಮಾನತು’ ಪರಿಕಲ್ಪನೆ, ‘ಮಾಂತ್ರಿಕ ವಾಸ್ತವತಾವಾದ’ದ ಅರ್ಥ – ಇವು ನನಗೆ ಈ ಲೇಖನದ ಮೂಲಕ ಮೊದಲ ಬಾರಿಗೆ ತಿಳಿದವು. ಅವನ ಕತೆಗಳು ಆಂತರಿಕ ತರ್ಕವನ್ನು ಸೃಷ್ಟಿಸಿಕೊಳ್ಳುವ ಬಗೆ, ಕತೆಯಲ್ಲಿ ಗುಪ್ತ ಭಾಷೆಯ ಬಳಕೆ, ಮಾರ್ಕ್ವೆಜ್ ಬಣ್ಣನೆಯ ಚಿತ್ರಗುಣ, ಬರವಣಿಗೆಯ ಸದ್ಯತನ ಮತ್ತು ಕ್ಷಿಪ್ರತೆ, ಚರಿತ್ರೆ ಮತ್ತು ರಾಜಕಾರಣವನ್ನು ಆತ ನೋಡಿರುವ ಬಗೆ - ಇವು ಬರಹಗಾರನಾಗಿ ನನಗೆ ಹೊಸ ಒಳನೋಟಗಳನ್ನು ನೀಡಿದವು. ‘ಧ್ಯಾನವಿಲ್ಲದೆ ಬರೆವ ಬದುಕು ಬರವಣಿಗೆಯ ಜೀತದಂತಿರುತ್ತದೆ!’ ಎಂಬ ನಿಮ್ಮ ಮಾತು ಎಲ್ಲ ಬರಹಗಾರರನ್ನು ಎಚ್ಚರಿಸುವಂತಿದೆ. ವಿಭಿನ್ನ ಬರಹಗಳ ಮೂಲಕ ಸಾಹಿತ್ಯ ಪ್ರೇಮಿಗಳನ್ನು ಮತ್ತು ಹೊಸ ಬರಹಗಾರರನ್ನು ಇನ್ನಷ್ಟು ಸೂಕ್ಷ್ಮಗೊಳಿಸುತ್ತಿರುವ ನಿಮಗೆ ಧನ್ಯವಾದಗಳು 

\r\n


| Siddagangaiah Holathalu

Inspiring notes on Marquez.

\r\n


| Shamarao

ಲೇಖಕನ ಪ್ರವೇಶಕ್ಕೆ ಬೇಕಾದುದನ್ನು ಕೊಟ್ಟಿದ್ದೀರಿ. ಸುಂದರವಾಗಿ ಅರ್ಥ ಮಾಡಿಸಿದ್ದೀರಿ.

\r\n
Add Comment