ಟಾಲ್‌ಸ್ಟಾಯ್ ಕನ್ನಡಿಯಲ್ಲಿ ಈ ಕಾಲದ ಇಂಡಿಯಾ!
by Nataraj Huliyar
ಸಾಹಿತ್ಯದ ಓದುಗರು ಬಾವಿಯೊಳಗಿನ ಕಪ್ಪೆಗಳಾದರೆ ಕೊನೆಗೂ ನಷ್ಟವಾಗುವುದು ಅವರಿಗೇ! ನಾವು ಮೀಡಿಯೋಕರ್ ಸಂಸ್ಕೃತಿಯನ್ನೇ ಆದರ್ಶ ಸಂಸ್ಕೃತಿ ಎಂದು ಬಿಂಬಿಸುತ್ತಿದ್ದರೆ ತಲೆಮಾರುಗಳೇ ಅಭಿರುಚಿಹೀನವಾಗುತ್ತವೆ. ನಮಗೆ ಟಾಲ್‌ಸ್ಟಾಯ್ ಯಾಕೆ? ಶೇಕ್‌ಸ್ಪಿಯರ್ ಯಾಕೆ ಎಂದು ‘ದೇಶಭಕ್ತ’ರಂತೆ ಚೀರುತ್ತಿದ್ದರೆ ಮಾನವ ಮನಸ್ಸಿನ ಸಂಕೀರ್ಣತೆಯನ್ನು, ಚರಿತ್ರೆಯ ಊಹಾತೀತ ಚಲನೆಗಳನ್ನು ಗ್ರಹಿಸುವ ಜೀನಿಯಸ್‌ಗಳ ಒಳನೋಟಗಳೇ ನಮಗೆ ದಕ್ಕದೆ ಹೋಗುತ್ತವೆ.
ಹದಿಹರೆಯದಲ್ಲಿ ಟಾಲ್‌ಸ್ಟಾಯ್‌ನ ‘ರೆಸರಕ್ಷನ್’ ಕಾದಂಬರಿಯ ದೇಜಗೌ ಕನ್ನಡಾನುವಾದ ’ಪುನರುತ್ಥಾನ’ ಲೈಬ್ರರಿಯಲ್ಲಿ ಸಿಕ್ಕಿತ್ತು; ಆದರೆ ದೇಜಗೌ ಬಗೆಗಿನ ಪೂರ್ವಗ್ರಹದಿಂದಲೋ, ಅವರ ಅನುವಾದದ ಜಡತೆಯಿಂದಲೋ ಓದಿರಲಿಲ್ಲ! ಕೆಲವು ವರ್ಷಗಳ ಕೆಳಗೆ ‘ರೆಸರಕ್ಷನ್’ ಓದುತ್ತಿದ್ದಾಗ ಇದನ್ನು ಓದುವುದು ಇಷ್ಟು ತಡವಾಯಿತಲ್ಲ ಎಂದು ವಿಷಾದ ಹುಟ್ಟಿತು.
ಯಾಕೆಂದರೆ, ಶ್ರೇಷ್ಠ ಲೇಖಕರ ಕೃತಿಗಳು ಎಲ್ಲ ಕಾಲದ ಎಲ್ಲ ದೇಶಗಳ ಸತ್ಯವನ್ನೂ ಹೇಳುತ್ತಿರುತ್ತವೆ. ಆದ್ದರಿಂದಲೇ ಯಾವುದೇ ಲೇಖಕ, ಲೇಖಕಿಯರು ಯಾವ ಜಾತಿ, ಉಪಜಾತಿ, ವರ್ಗ, ದೇಶದಿಂದ ಬಂದಿದ್ದಾರೆ ಎಂಬುದರ ಬಗೆಗೇ ತಲೆ ಕೆಡಿಸಿಕೊಳ್ಳುವ ಕೆಟ್ಟ ಹಳ್ಳಕ್ಕೆ ಬಿದ್ದರೆ ನಮ್ಮ ಓದೇ ಸೀಮಿತವಾಗುತ್ತದೆ.
ಈ ಕಾದಂಬರಿ ಇವತ್ತಿನ ಇಂಡಿಯಾಕ್ಕೆ ಹಿಡಿದ ಕನ್ನಡಿಯಂತೆಯೂ ಕಂಡಿದ್ದನ್ನು ಹಿಂದೊಮ್ಮೆ ಬರೆದಿರುವೆ. ಚಾರಿತ್ರಿಕವಾಗಿ ನೋಡಿದರೆ, ‘ರೆಸರಕ್ಷನ್’ ಹತ್ತೊಂಬತ್ತನೇ ಶತಮಾನದ ರಶ್ಯಾದ ಕತೆ:
ಇಲ್ಲಿ ಹೊಸ ಹುಡುಗರು ನ್ಯಾಯ ಕೇಳುತ್ತಿದ್ದಾರೆ. ಓದಿದ ಹುಡುಗಿಯರು ಬಂಡೆದಿದ್ದಾರೆ. ಹೊಟ್ಟೆಪಾಡಿಗಾಗಿ ಸಣ್ಣಪುಟ್ಟ ಅಪರಾಧ ಮಾಡಿದವರೂ, ಅಪರಾಧ ಮಾಡದಿರುವವರೂ ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ಅಪರಾಧಿಗಳಿಗೆ ಶಿಕ್ಷೆ ಕೊಡುತ್ತಿರುವ ನ್ಯಾಯಾಧೀಶರು ಅಪರಾಧಿಗಳಿಗಿಂತ ಘೋರ ಅಪರಾಧಗಳನ್ನು ಮಾಡಿದ್ದಾರೆ. ಸರ್ಕಾರದ ಮಂದಿಯಂತೂ ತಮ್ಮ ಅಧಿಕಾರ, ಆದಾಯಗಳನ್ನು ಕಾಯ್ದುಕೊಳ್ಳುವುದರಲ್ಲೇ ನಿರತರಾಗಿದ್ದಾರೆ.
ಕಾದಂಬರಿಯ ಕೇಂದ್ರ ಪಾತ್ರ ಮೂವತೈದರ ಹರೆಯದ ಸೂಕ್ಷ್ಮ ಮನಸ್ಸಿನ ರಾಜಕುಮಾರ ಡಿಮಿಟ್ರಿ ನೆಕ್ಲುಡೋಫ್; ಆದರೆ ಕಾದಂಬರಿಯ ನಿಜವಾದ ಕೇಂದ್ರ ಪಾತ್ರ ಕಟುಶಾ. ಕಟುಶಾಳ ಕೊನೆಯೇ ಇಲ್ಲದ ದುಃಖ ಲೋಕದ ಹೆಂಗಸರ ಕೊನೆಯಿಲ್ಲದ ದುಃಖದ ಪ್ರತಿನಿಧಿಯಂತಿದೆ. ತನ್ನ ಬದುಕಿನ ಘೋರ ತಿರುವುಗಳಿಂದಾಗಿ ವೇಶ್ಯೆಯಾಗುವ ಅವಳ ಹೆಸರು ಮಾಸ್ಲೋವ ಆಗುತ್ತದೆ. ಗಿರಾಕಿಯೊಬ್ಬನಿಗೆ ವಿಷವುಣ್ಣಿಸಿದ ಆಪಾದನೆಯ ಮೇಲೆ ಮಾಸ್ಲೋವ ವಿಚಾರಣೆ ಎದುರಿಸುತ್ತಿದ್ದಾಳೆ.
ಹತ್ತೊಂಬತ್ತನೆಯ ಶತಮಾನದ ರಶ್ಯಾದಲ್ಲಿ ಈಗಿನ ಥರದ ನ್ಯಾಯಾಲಯಗಳಿರಲಿಲ್ಲ. ಸಮಾಜದ ‘ಗಣ್ಯರು’ ನ್ಯಾಯಮಂಡಲಿಗಳ ಸದಸ್ಯರು. ಅವತ್ತು ನ್ಯಾಯಮಂಡಲಿಯಲ್ಲಿ ಕೂತು ನ್ಯಾಯ ನೀಡಲಿರುವವರಿಗೆ ‘ತುರ್ತು’ ಕೆಲಸಗಳಿವೆ: ಮಂಡಲಿಯ ಅಧ್ಯಕ್ಷನಿಗೆ ಸರಸರನೆ ವಿಚಾರಣೆ ಮುಗಿಸಿ ಪ್ರೇಯಸಿಯನ್ನು ಕಾಣುವ ಕಾತರ. ಬೆಳಗಿನ ಜಾವದವರೆಗೂ ಪಾರ್ಟಿಯೊಂದರಲ್ಲಿ ಇಸ್ಪೀಟಾಡುತ್ತಿದ್ದ ಪಬ್ಲಿಕ್ ಪ್ರಾಸಿಕ್ಯೂಟರ್‌ಗೆ ಅವತ್ತಿನ ಕೇಸಿನ ಎಳೆಗಳೇ ಗೊತ್ತಿಲ್ಲ. ಬ್ರಾಂಡಿಯ ಸುವಾಸನೆ ಸೂಸುತ್ತಿರುವ ಮತ್ತೊಬ್ಬ ಸದಸ್ಯನಿಗೆ ಬಾಯಿಗೆ ಬಂದದ್ದನ್ನು ಬೊಗಳುವ ಚಪಲ!
ಇಂಥ ಬೂಟಾಟಿಕೆಯ ನ್ಯಾಯಮಂಡಲಿಯಲ್ಲಿ ಒಲ್ಲದ ಮನಸ್ಸಿನಿಂದ ಕೂತಿರುವ ರಾಜಕುಮಾರ ನೆಕ್ಲುಡೋಫ್ ತನ್ನ ಕಾಲದ ಹೊಸ ಆಲೋಚನೆಗೆ ತಕ್ಕಂತೆ ಭೂಮಿ ಎಲ್ಲರಿಗೂ ಸೇರಿದ್ದು, ಅದು ಖಾಸಗಿ ಸ್ವತ್ತಲ್ಲ ಎಂದು ನಿರ್ಧರಿಸಿದವನು; ಸಾವಿರಾರು ಎಕರೆ ಪಿತ್ರಾರ್ಜಿತ ಭೂಮಿಯನ್ನು ರೈತರಿಗೆ ಕೊಟ್ಟಿರುವವನು.
ನ್ಯಾಯಮಂಡಳಿಯೆದುರು ಮಾಸ್ಲೋವ ಹಾಜರಾಗುತ್ತಾಳೆ. ಖೈದಿಯ ಉಡುಪನ್ನು ಮೀರಿ ಅವಳ ಸೌಂದರ್ಯ ಎಲ್ಲ ಗಂಡಸರ ಕಣ್ಣು ಕುಕ್ಕುತ್ತಿದೆ. ನೆಕ್ಲುಡೋಫ್ ಅವಳನ್ನು ನೋಡಿದವನೇ ಬೆಚ್ಚುತ್ತಾನೆ. ತಾನು ಹರೆಯದಲ್ಲಿ ಪ್ರೇಮಿಸಿ ಕೈಬಿಟ್ಟು ಬಂದ ಕಟುಶಾಳೇ ಮಾಸ್ಲೋವ ಎಂಬ ಸತ್ಯ ಅವನ ಮುಖಕ್ಕೆ ಹೊಡೆಯುತ್ತದೆ. ಇದು ಅವನ ಜ್ಞಾನೋದಯದ ಮೊದಲ ಘಟ್ಟ. ಇನ್ನೇನು ಅವಳು ನನ್ನತ್ತ ನೋಡುತ್ತಾಳೆ; ಗುರುತಿಸುತ್ತಾಳೆ; ನಾನೀಗ ಎದ್ದು ಲೋಕಕ್ಕೆ ನಿಜವನ್ನು ಸಾರಬೇಕು ಎಂದು ನೆಕ್ಲುಡೋಫ್ ಚಡಪಡಿಸುತ್ತಾನೆ. ಆದರೆ ಆಕೆ ಅವನನ್ನು ಗಮನಿಸುವುದೇ ಇಲ್ಲ.
ಮಾಸ್ಲೋವ ನಿರಪರಾಧಿ ಎಂಬುದು ನೆಕ್ಲುಡೋಫ್‌ಗೆ ಗೊತ್ತಾಗುತ್ತದೆ. ಆಕೆಗೆ ನ್ಯಾಯ ಒದಗಿಸಲು ಪ್ರಯತ್ನ ಮಾಡುತ್ತಾನೆ. ಆದರೆ ಮನುಷ್ಯರೇ ಇಲ್ಲದ ಕೋರ್ಟಿನಲ್ಲಿ ಅವಳಿಗೆ ನಾಲ್ಕು ವರ್ಷಗಳ ಶಿಕ್ಷೆಯಾಗುತ್ತದೆ. ಸೈಬೀರಿಯಾದ ಜೈಲಿಗೆ ಅವಳನ್ನು ಕಳಿಸುವ ಮುನ್ನ ನೆಕ್ಲುಡೋಫ್ ಅಪೀಲು ಹಾಕಿ ಅವಳನ್ನು ಉಳಿಸಲು ನಿರ್ಧರಿಸುತ್ತಾನೆ. ಜೈಲಿಗೆ ಹೋಗಿ ಮಾಸ್ಲೋವಳನ್ನು ಕಂಡು ತನ್ನ ಗುರುತು ಹೇಳುತ್ತಾನೆ; ಅವಳನ್ನು ಅಲ್ಲಿಂದ ಬಿಡಿಸಿ, ಮದುವೆಯಾಗುವುದಾಗಿ ಹೇಳುತ್ತಾನೆ.
ಅಲ್ಲಿಂದಾಚೆಗೆ ಅವನಿಗೆ ಸಮಾಜದ ವಾಸ್ತವದ ದರ್ಶನವಾಗುತ್ತದೆ:
ಜೈಲಿನಲ್ಲಿರುವ ಯಾರ ಕತೆ ಕೇಳಿದರೂ ಅವೆಲ್ಲ ಜೈಲಿನ ಹೊರಗಿರುವ ಎಲ್ಲರೂ ಮಾಡಿರುವ ಅಪರಾಧಗಳಂತೆಯೇ ನೆಕ್ಲುಡೋಫ್‌ಗೆ ಕಾಣುತ್ತವೆ: ಅವನ ಹರೆಯದ ಬೇಜವಾಬ್ದಾರಿತನಕ್ಕೆ ಬಲಿಯಾಗಿದ್ದ ಮಾಸ್ಲೋವ ಹೆತ್ತ ಮಗು ಆರೈಕೆಯಿಲ್ಲದೆ ತೀರಿಕೊಂಡಿದೆ. ಮಾಸ್ಲೋವ ವೇಶ್ಯೆಯಾಗಿ ಬದುಕು ನೂಕಿದ್ದಾಳೆ; ನ್ಯಾಯಮಂಡಲಿಯ ಅಚಾತುರ್ಯದಿಂದಾಗಿ ಶಿಕ್ಷೆಗೆ ಗುರಿಯಾಗಿದ್ದಾಳೆ.
ಈ ಜೈಲನ್ನು ನೋಡನೋಡುತ್ತಾ ನೆಕ್ಲುಡೋಫ್‌ಗೆ ಪ್ರಭುತ್ವ, ಧರ್ಮ, ಅಧಿಕಾರಿ ವರ್ಗ, ಪೊಲೀಸ್ ವ್ಯವಸ್ಥೆ ಎಲ್ಲ ಸೇರಿ ಇಡೀ ನಾಡನ್ನೇ ಜೈಲಾಗಿರಿಸಿರುವ ಭಯಾನಕ ದೃಶ್ಯಗಳು ಕಾಣತೊಡಗುತ್ತವೆ. ಜೈಲಿನ ಹೊರಗೆ ಬದುಕುತ್ತಿರುವ ರೈತರ, ಮಹಿಳೆಯರ ಬಡತನ, ಅಸಹಾಯಕತೆಗಳು ಕೂಡ ಜೈಲಿನೊಳಗಿರುವ ನಿರ್ಗತಿಕರ ಸ್ಥಿತಿಯಂತೆಯೇ ಇರುವುದು ಗೊತ್ತಾಗುತ್ತದೆ.
ಆ ಕಾಲದ ರಷ್ಯಾದಲ್ಲಿ ಇಂಥ ಅನ್ಯಾಯಗಳ ವಿರುದ್ಧ ದನಿಯೆತ್ತುತ್ತಿರುವ ಲಿಬರಲ್ ಹುಡುಗ ಹುಡುಗಿಯರಿದ್ದಾರೆ; ಆದರೆ ಅವರೆಲ್ಲ ರಾಜಕೀಯ ಕೈದಿಗಳಾಗಿ ಜೈಲಿನಲ್ಲಿದ್ದಾರೆ. ಜೈಲಿಗೆ ಹಾಕಿದರೂ ಅವರ ಸ್ಪಿರಿಟ್ ಬತ್ತಿಲ್ಲ; ಹೋರಾಟ ಕುರಿತು ವಿಷಾದವಿಲ್ಲ. ಆದರೆ ಉದಾರವಾದಿ ನೆಕ್ಲುಡೋಫ್‌ಗೆ ವ್ಯವಸ್ಥೆಯ ಬದಲಾವಣೆಗಾಗಿ ರಾಜಕೀಯ ಹೋರಾಟ ಮಾಡುತ್ತಿರುವ ಹುಡುಗ ಹುಡುಗಿಯರ ಬಗ್ಗೆ ಸ್ಪಷ್ಟತೆಯಿಲ್ಲ. ಹೊಸ ರಾಜಕೀಯ ಮಾಡುತ್ತಿರುವವರು ಅತಿ ಮಾಡುತ್ತಿದ್ದಾರೆ ಎಂಬುದು ಅವನ ಅನುಮಾನ.
ಮಾರ್ಕ್ಸ್‌ವಾದಿ ವಿಮರ್ಶೆ ಹೇಳುವಂತೆ ಮನುಷ್ಯ ತಾನು ಯಾವ ವರ್ಗದ ಭಾಗಿಯಾಗಿದ್ದಾನೋ ಆ ವರ್ಗದ ಧೋರಣೆಗಳು ಅವನನ್ನು ನಿಯಂತ್ರಿಸುತ್ತಲೇ ಇರುತ್ತವೆ; ಅದನ್ನು ಮೀರಲು ಅವನ ಪ್ರಜ್ಞೆಯಲ್ಲಿ ದೊಡ್ಡ ಪಲ್ಲಟವೇ ಆಗಬೇಕಾಗುತ್ತದೆ. ಇದೆಲ್ಲ ಟಾಲ್‌ಸ್ಟಾಯ್ ಸ್ವತಃ ಹಾದು ಬಂದ ಸ್ಥಿತಿ ಕೂಡ. ಈ ಕಾದಂಬರಿ ಬರೆದಾಗ ಎಪ್ಪತ್ತು ತಲುಪಿದ್ದ ಭಾರಿ ಜಮೀನ್ದಾರ ಟಾಲ್‌ಸ್ಟಾಯ್ ತನ್ನ ಸಾವಿರಾರು ಎಕರೆ ಜಮೀನನ್ನು ತ್ಯಜಿಸಲು ಹೊರಟು ತನ್ನ ಕುಟುಂಬದಲ್ಲೇ ವಿರೋಧ ಕಟ್ಟಿಕೊಂಡವನು. ಬೀಸುತ್ತಿರುವ ಕಮ್ಯುನಿಸಮ್ಮಿನ ಹೊಸ ಗಾಳಿಯ ಬಗ್ಗೆ ಟಾಲ್‌ಸ್ಟಾಯ್‌ಗೂ ಅನುಮಾನ, ಆತಂಕಗಳಿವೆ. ಆದರೆ ಭೂಮಿಯ ಬಗ್ಗೆ, ಖಾಸಗಿ ಸ್ವತ್ತಿನ ಬಗ್ಗೆ ಕಮ್ಯುನಿಸ್ಟರು ಎತ್ತುತ್ತಿರುವ ಪ್ರಶ್ನೆಗಳು ಅವನ ಒಳಗಿನಿಂದಲೂ ಮೂಡಿವೆ.
ಆ ಘಟ್ಟದ ಭೂಮಾಲೀಕರು, ಶ್ರೀಮಂತರು, ರಾಜಪ್ರಭುತ್ವ, ಕಮ್ಯುನಿಸಂ...ಇವೆಲ್ಲದರ ನಡುವೆ ನಿಂತಿರುವ ಟಾಲ್‌ಸ್ಟಾಯ್ ಕಾದಂಬರಿಯ ನೆಕ್ಲುಡೋಫ್ ಈ ಬೆಳವಣಿಗೆಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾನೆ. ಮಾರ್ಕ್ಸ್‌ವಾದದ ಮೂಲ ಸಂದೇಶವನ್ನು ಅರ್ಥ ಮಾಡಿಕೊಳ್ಳದಿದ್ದರೂ, ಸಾವಿರಾರು ಎಕರೆಗಳ ಮೋಹ ತೊರೆದಿರುವ ಅವನಿಗೆ ರಾಜಕೀಯ ಪ್ರಶ್ನೆಗಳೂ, ಹೊಸ ನ್ಯಾಯದ ಪ್ರಶ್ನೆಗಳೂ ನಿಧಾನಕ್ಕೆ ಅರ್ಥವಾಗತೊಡಗುತ್ತವೆ. ಧರ್ಮ, ಪ್ರಭುತ್ವ, ಅಧಿಕಾರಿ ವರ್ಗ, ಪೊಲೀಸ್ ವ್ಯವಸ್ಥೆ ಎಲ್ಲವೂ ಸೇರಿ ತಂತಮ್ಮ ವರ್ಗಗಳ ಹಿತರಕ್ಷಣೆಗಾಗಿ ಸಮಾಜವನ್ನೇ ಜೈಲಾಗಿ ಪರಿವರ್ತಿಸಿರುವುದನ್ನು ನೆಕ್ಲುಡೋಫ್ ನೋಡುತ್ತಾನೆ. ನಿಜಕ್ಕೂ ಜೈಲಿನಲ್ಲಿರಬೇಕಾದವರು ಜೈಲಿನ ಹೊರಗಿದ್ದಾರೆ ಎನ್ನಿಸುತ್ತದೆ.
ಮಾಸ್ಲೋವಳನ್ನು ಬಿಡಿಸುವ ಅವನ ಪ್ರಯತ್ನ ಕೈಗೂಡುವುದಿಲ್ಲ. ಶಿಕ್ಷೆಯ ಅವಧಿ ಮುಗಿಸಲು ಆಕೆ ಸೈಬೀರಿಯಾಕ್ಕೆ ಹೊರಡುವ ಕಾಲ ಬರುತ್ತದೆ. ತಾನೂ ಸೈಬೀರಿಯಾಕ್ಕೆ ಹೋಗಿ, ಅವಳ ಜೈಲು ಶಿಕ್ಷೆ ಮುಗಿಯುವವರೆಗೂ ಸೈಬೀರಿಯಾದಲ್ಲೇ ಇದ್ದು, ಬಿಡುಗಡೆಯ ನಂತರ ಅವಳನ್ನು ಮದುವೆಯಾಗಲು ನೆಕ್ಲುಡೋಫ್ ಖೈದಿಗಳ ಜೊತೆಗೇ ಸೈಬೀರಿಯಾಕ್ಕೆ ಹೊರಡುತ್ತಾನೆ; ಆ ಕೈದಿಗಳ ಸ್ಥಿತಿ ನೋಡುತ್ತಾ, ತನ್ನ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸದ ವ್ಯವಸ್ಥೆ ತನ್ನ ತಪ್ಪನ್ನು ಸರಿಮಾಡಿಕೊಳ್ಳದೆ ಜನರಿಗೇ ಶಿಕ್ಷೆ ಕೊಡುತ್ತಿರುವ ಧೂರ್ತತನ ಅವನ ಕಣ್ಣಿಗೆ ರಾಚತೊಡಗುತ್ತದೆ.
ಕೊನೆಗೆ ಅಪೀಲೊಂದರಲ್ಲಿ ಮಾಸ್ಲೋವಗೆ ಬಿಡುಗಡೆ ಸಿಕ್ಕರೂ ಅವಳು ಬಿಡುಗಡೆಗೆ ಒಪ್ಪದೆ ಜೈಲಿನಲ್ಲೇ ಉಳಿಯತ್ತಾಳೆ. ಕಾರಣ, ರಾಜಕೀಯ ಹೋರಾಟದಲ್ಲಿ ಭಾಗಿಯಾಗಿ ಸೈಬೀರಿಯಾ ಜೈಲಿಗೆ ಹೊರಟಿರುವ ಹೊಸ ಕಾಲದ ಕ್ರಾಂತಿಕಾರಿಯೊಬ್ಬ ಮಾಸ್ಲೋವ ಹೇಗಿದ್ದಾಳೋ ಹಾಗೆಯೇ ಒಪ್ಪಿಕೊಂಡಿದ್ದಾನೆ. ಶಿಕ್ಷೆಯ ಅವಧಿಯ ನಂತರ ಅವನನ್ನೇ ಮದುವೆಯಾಗಲು ಮಾಸ್ಲೋವ ನಿರ್ಧರಿಸುತ್ತಾಳೆ; ನೆಕ್ಲುಡೋಫ್‌ನನ್ನು ಬೀಳ್ಕೊಡುತ್ತಾಳೆ.
ಬದುಕಿನ ಎಲ್ಲ ಸುಖ, ಸವಲತ್ತುಗಳನ್ನು ಅನುಭವಿಸಿ, ನಂತರ ಕಷ್ಟ, ನಿರಾಶೆಗಳನ್ನು ಆಹ್ವಾನಿಸಿಕೊಳ್ಳುವ, ಹಾದು ಹೋಗುವ ನೆಕ್ಲುಡೋಫ್ ಮೂಲಕ ಟಾಲ್‌ಸ್ಟಾಯ್ ರಶ್ಯನ್ ಬುದ್ಧನೊಬ್ಬನನ್ನು ಸೃಷ್ಟಿಸುತ್ತಾನೆ.
ನೂರಿಪ್ಪತ್ತೈದು ವರ್ಷಗಳ ಕೆಳಗೆ ಬಂದ ‘ರೆಸರೆಕ್ಷನ್’ ಕ್ರಾಂತಿಯ ಮುಂಚಿನ ದಶಕಗಳ ರಶ್ಯಾದ ಕತೆ. ಆದರೆ ಒಂದು ಕಾಲವನ್ನು ಪ್ರಾಮಾಣಿಕವಾಗಿ, ನಿಷ್ಠುರವಾಗಿ ನೋಡುವ ಲೇಖಕ ಎಲ್ಲ ಕಾಲಕ್ಕೂ ಕನ್ನಡಿಯಾಗುತ್ತಾನೆ. ಸ್ವಂತದ ಸುಳ್ಳುಗಳನ್ನು ಸೀಳಿ, ತನ್ನ ವ್ಯಕ್ತಿತ್ವವನ್ನೇ ತೀವ್ರ ಪರೀಕ್ಷೆಗೆ ಒಳಪಡಿಸಿ, ತನ್ನ ಚರ್ಮದಿಂದ ಆಚೆ ಬಂದು ಲೋಕವನ್ನು ಅರಿತ ಟಾಲ್‌ಸ್ಟಾಯ್ ತನ್ನ ಕಾಲದ ಸಂದಿಗ್ಧ, ಗೊಂದಲ, ನಿಯಂತ್ರಣ, ದಮನಗಳನ್ನು ಹೇಳಿದ. ಅವನ ದರ್ಶನಕ್ಕೆ ದಕ್ಕಿದ ಈ ಲೋಕ ಇವತ್ತಿನ ಇಂಡಿಯಾದ ಕ್ರೂರ ಸತ್ಯಗಳನ್ನೂ ಹೇಳುತ್ತದೆ.
‘ಟಾಲ್‌ಸ್ಟಾಯ್ ರಶ್ಯನ್ ಕ್ರಾಂತಿಯ ಕನ್ನಡಿ’ ಎಂದು ಮುಂದೊಮ್ಮೆ ಲೆನಿನ್ ಬಣ್ಣಿಸಿದ. ಆದರೆ ಸಾಹಿತ್ಯ ಕೃತಿಗಳ ಕನ್ನಡಿಗಳು ಕಾಲಾತೀತ; ದೇಶಾತೀತ! ಕಾಲ ಉರುಳಿದಂತೆ ಟಾಲ್‌ಸ್ಟಾಯ್ ಕನ್ನಡಿ ಸ್ವತಃ ಲೆನಿನ್ ರೂಪಿಸಿದ ಕಮ್ಯುನಿಸ್ಟ್ ಆಳ್ವಿಕೆಯೂ ಸೇರಿದಂತೆ ಎಲ್ಲ ಬಗೆಯ ಆಳ್ವಿಕೆಗಳ ಕ್ರೌರ್ಯವನ್ನೂ ಪ್ರತಿಫಲಿಸುತ್ತಿದೆ. ಕಮ್ಯುನಿಸ್ಟ್ ದೇಶಗಳಾದ ರಶ್ಯಾ, ಚೈನಾ,ಕ್ಯೂಬಾ; ಪ್ರಜಾಪ್ರಭುತ್ವವಾದಿ ರಾಷ್ಟ್ರ ಗಳೆನ್ನಲಾದ ಭಾರತ, ಅಮೆರಿಕಾ, ಇಸ್ರೇಲ್, ನೈಜೀರಿಯ...ಎಲ್ಲವೂ ದೇಶವನ್ನೇ ಜೈಲಾಗಿಸುವ ಕ್ರೂರ ಪ್ರಭುತ್ವಗಳನ್ನು ಕಂಡಿವೆ.
ಶೇಕ್‌ಸ್ಪಿಯರ್ ಬಿಟ್ಟರೆ ಜಗತ್ತಿನ ಅತ್ಯಂತ ಶ್ರೇಷ್ಠ ಲೇಖಕ ಎನ್ನಲಾದ ಟಾಲ್‌ಸ್ಟಾಯ್ ಕನ್ನಡಿಯಲ್ಲಿ ಎಲ್ಲ ದೇಶಗಳ, ಕಾಲಗಳ ಜನರೂ, ರಾಜಕಾರಣಿಗಳೂ ತಂತಮ್ಮ ದೇಶಗಳ ಮುಖಗಳನ್ನು ನೋಡಿಕೊಂಡರೆ, ಅವರ ಕಣ್ಣು ಅಷ್ಟಿಷ್ಟಾದರೂ ತೆರೆಯಬಲ್ಲದು.
ಬ್ಲಾಗ್ ಫಾಲೋ ಮಾಡಲು ಒಪ್ಪಿ, ಕ್ಲಿಕ್ ಮಾಡಿ; ನೋಟಿಫಿಕೇಶನ್ ಪಡೆಯಿರಿ, ಶೇರ್ ಮಾಡಿ: FOLLOW
ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com
ಬಿಡುವಾದಾಗ ನೋಡಿ, ಶೇರ್ ಮಾಡಿ: YOUTUBE LINK
Comments
11 Comments
| ಬಂಜಗೆರೆ ಜಯಪ್ರಕಾಶ
ಬಹಳ ಮನೋಜ್ಞ ಸಾಹಿತ್ಯಾವಲೋಕನ. ಟಾಲ್ಸ್ಟಾಯ್ , ಟಾಗೋರ್, ಕುವೆಂಪು- ಹೀಗೆ ನಮ್ಮ ಮನಸ್ಸಿನ ಮೇಲೆ ಬಹಳ ಪ್ರಭಾವ ಬೀರುವ ಲೇಖಕರ ಮಾಂತ್ರಿಕ ಶಕ್ತಿ ಎಲ್ಲಿಂದ ಬಂತು ಎಂದು ಕೇಳಿಕೊಂಡರೆ ತಕ್ಷಣ ಉತ್ತರ ಹೊಳೆಯುವುದು ಕಷ್ಟ. ಅದು ವಸ್ತುವೇ, ತಂತ್ರವೇ, ವರ್ಣನೆಯೇ, ತಾತ್ವಿಕತೆಯೇ? ಯಾವುದರಿಂದ ಇದು ಸಾಧ್ಯವಾಯಿತು, ಅಥವಾ ಇವೆಲ್ಲವೂ ಕೂಡಿ ಆಗಿದ್ದೇ? ಈ ಲೇಖನ ವಿವರಿಸುವ ಹಾಗೆ, 'ಕಲೆಯ ಕದನ' ಲೇಖನದಲ್ಲಿ ಗೂಗಿಯೂ ಹೇಳಿರುವ ಹಾಗೆ ಕಲೆಯಿಲ್ಲದ ಕನ್ನಡಿ ತನ್ನೆದುರಿನ ವಸ್ತುವಿನ ನಿಚ್ಚಳ ಬಿಂಬ ತೋರಿಸುವ ಹಾಗೆ ಇವರೆಲ್ಲ ತಮ್ಮ ಕಲೆಯನ್ನು ಪರಿಶುಭ್ರ ಕನ್ನಡಿಯನ್ನಾಗಿಸಿದರು- ಅವರವರ ಕಾಲಕ್ಕೆ. ಇವರ ಕಲೆಯಲ್ಲಿ ಪುನರ್ ಭವಿಸಿ ನಮಗೆ ದರ್ಶನವೀಯುವ ಆ ಕಾಲದ ಸಮಾಜವೇ ಬಹುಶಃ ನಮ್ಮನ್ನು ಅಷ್ಟು ಮಂತ್ರಮುಗ್ಧರನ್ನಾಗಿಸುತ್ತಿರಬಹುದು. ಪುನರುತ್ಥಾನ ಕುರಿತು ಬರೆಯುತ್ತಾ ನೀವು ಸೂಚಿಸಿರುವ ಟಾಲ್ಸ್ಟಾಯ್ ಸೃಷ್ಟಿಸಿರುವ ರಷ್ಯನ್ ಬುದ್ಧನನ್ನು ಕಲ್ಪಿಸಿಕೊಂಡೆ. ವೇಷಭೂಷಣಗಳಲ್ಲಿ ಈ ಬುದ್ಧನಿಗೂ ಆ ಬುದ್ಧನಿಗೂ ಎಷ್ಟು ವ್ಯತ್ಯಾಸವಿದ್ದರೂ, ಸಂವೇದನೆಯಲ್ಲಿರುವ ಸಾಮ್ಯತೆ ಬುದ್ಧತ್ವವನ್ನು ಅಭಿನ್ನವಾಗಿಸಿದೆ. ಚಿಂತನೆಗೆ ಒಳ್ಳೆ ಮೇವು ಹಾಕಿದ್ದೀರಿ.
\r\n| Subramanya Swamy
ಪುನರುತ್ಥಾನ ಕಾದಂಬರಿ ಆಧಾರಿತ ಈ ಬರಹ ನನಗೆ ತುಂಬಾ ಆಪ್ತವಾಗಿ ಕಂಡಿತು. ಕಾರಣ ಈ ವಾಸ್ತವ ಸಮಾಜದ ಎಲ್ಲಾ ಆಯಾಮಗಳನ್ನು ಕುರಿತು ವಿಚಾರ ಮಾಡಿದಂತೆ ಭಾಸವಾಗುತ್ತದೆ. ಟಾಲ್ಸ್ಟಾಯ್ ನಿಜಕ್ಕೂ ಮಹತ್ವದ ಬರಹಗಾರ ಏಕೆಂದರೆ ರಶ್ಯಾ ಸಮಾಜದ ಚರಿತ್ರೆಯ ಊಹಾತೀತ ಚಲನೆಗಳು ವಾಸ್ತವ ಚುನಾವಣೆ ಹಿನ್ನಲೆಯಲ್ಲಿ ಆಡಳಿತಾರೂಢ ಭಾರತೀಯ ಸಮಾಜದ ರಾಜಕೀಯ ಹಾಗೂ ಬಹುಪಾಲು ರಾಜಕಾರಣಿಗಳು ೨೧ ನೆಯ ಶತಮಾನದಲ್ಲಿ ಇವರಿಗೆ ಹಿಡಿದು ಕನ್ನಡಿ ಇದ್ದಂತೆ ಭಾಸವಾಗುತ್ತದೆ. ಬರಹ ತುಂಬಾ ಅರ್ಥಪೂರ್ಣವಾಗಿದೆ ಹಾಗೂ ಬೇಕಾಗಿದೆ ಯುವ ತಲೆಮಾರು ವಿಕಾಸಗೂಳ್ಳಲು.
\r\n| Gangadhara BM
ಕಾದಂಬರಿಯ ಘಟನೆಗಳು ಕಣ್ಣಮುಂದೆ ಹಾದುಹೋದಂತಿತ್ತು. ವ್ಯವಸ್ಥೆಯ ಲೋಪಗಳ ಅರಿವಾಯಿತು. ಧನ್ಯವಾದಗಳು ಸರ್
\r\n| Mohan
ಒಂದು ಹಂತದ ಆಚೆ ಆಲೋಚಿಸಲು ಈ ರೀತಿ ಎಚ್ಚರಿಸದಿದ್ದರೆ ಸಮಾಜ ಜಡಗೊಳ್ಳುತ್ತದೆ. ಅಂಧಾನುಕರಣೆ, ವ್ಯಕ್ತಿಪೂಜೆ, ಶ್ರೇಷ್ಠತೆಯ ವ್ಯಸನ, ಅರ್ಥಹೀನ ಸಂಘರ್ಷ, ದಾಸ್ಯ – ಇವು ಜನಸಾಮಾನ್ಯರ ಬದುಕನ್ನು ಕಸಿದುಕೊಳ್ಳುತ್ತವೆ. ಶ್ರೇಷ್ಠ ವ್ಯಕ್ತಿಗಳ ಆಲೋಚನೆಗಳು ಕೃತಿಗಳ ರೂಪದಲ್ಲಿ ದೊರೆಯುತ್ತಿದ್ದರೂ ಇಂದಿನ ರೀಲ್ಸ್ ಯುಗದಲ್ಲಿ ಅವುಗಳನ್ನು ಓದಿ ಪಡೆದುಕೊಳ್ಳಬೇಕಾದ್ದನ್ನು ಪಡೆದುಕೊಳ್ಳಲಾಗದ ದಿಕ್ಕಿನಲ್ಲಿ ಯುವ ಸಮಾಜ ಚಲಿಸುತ್ತಿರುವಂತೆ ಕಾಣುತ್ತಿದೆ. ಇದು ಮುಂದುವರಿದರೆ ಚೇತರಿಕೊಳ್ಳಲಾಗದ ನಷ್ಟ ಉಂಟಾಗುವುದು ಶತಸಿದ್ಧ. ಪ್ರಸ್ತುತ ಲೇಖನ ಇದನ್ನು ಸೂಕ್ಷ್ಮವಾಗಿ ಮನದಟ್ಟು ಮಾಡಿದೆ. ಸ್ತ್ರೀ ಶೋಷಣೆ, ಕಲುಷಿತಗೊಂಡಿರುವ ನ್ಯಾಯಾಂಗ ವ್ಯವಸ್ಥೆ, ನಿರುದ್ಯೋಗ, ಅಧಿಕಾರ ದುರುಪಯೋಗ, ನೌಕರಶಾಹಿಯ ಭ್ರಷ್ಟತೆ – ಇವು ಜಾಗೃತ ಸಮಾಜವಿಲ್ಲದೆಡೆ ಕಾಲ ದೇಶ ಗಡಿಗಳನ್ನು ಮೀರಿ ತನ್ನ ಕಬಂಧ ಬಾಹುಗಳನ್ನು ಚಾಚಿಕೊಂಡಿದೆ. ಇದರಿಂದ ಪಾರಾಗಲು ಇಲ್ಲಿ ಪ್ರಸ್ತಾಪಿಸಿರುವಂತೆ ಜೀನಿಯಸ್ ಗಳು ಜಗತ್ತಿನಾದ್ಯಂತ ಉಳಿಸಿ ಹೋಗಿರುವ ಆಲೋಚನೆಗಳನ್ನು ಅವಲೋಕಿಸಬೇಕಿದೆ. ಅವುಗಳ ತಳಗಟ್ಟಿನ ಮೇಲೆ ನೈತಿಕ ಸಮಾಜವನ್ನು ರೂಪಿಸಿಕೊಳ್ಳಬೇಕಾದ ತುರ್ತು ದೇಶದಲ್ಲಿ ಇಂದು ಎಂದಿಗಿಂತಲೂ ಹೆಚ್ಚಿದೆ. ಇಡೀ ಬರಹ ವಾಸ್ತವದ ವ್ಯಂಗ್ಯದಂತಿದೆ. ಖಂಡಿತಾ ನಾವು ಬಾವಿಯೊಳಗಿನ ಕಪ್ಪೆಗಳಾಗದೆ ಹೊರ ಜಗತ್ತಿಗೆ ತೆರದುಕೊಳ್ಳಬೇಕಿದೆ. ಇನ್ನು ‘ಪುನರುತ್ಥಾನ’ ಕೃತಿಯ ಸಾರವನ್ನು ನೀಡಿ ನಮ್ಮ ಕುತೂಹಲವನ್ನು ಹೆಚ್ಚಿಸಿದ್ದೀರಿ. ಇನ್ನಷ್ಟೆ ಕೃತಿಯನ್ನು ಓದಬೇಕಿದೆ
\r\n| Vijay
ಮಾರ್ಮಿಕ ಬರಹ
\r\n| Hariprasad
ರಷ್ಯನ್ ಬುದ್ಧ!
\r\n| ಡಾ. ನಿರಂಜನ ಮೂರ್ತಿ ಬಿ ಎಂ
ವಿಶ್ವವಿಖ್ಯಾತ ರಷ್ಯಾ ಸಾಹಿತಿ ಟಾಲ್ ಸ್ಟಾಯ್ ಅವರ ಸುಪ್ರಸಿದ್ಧ 'ದ ರೆಸರೆಕ್ಷನ್' (ಪುನರುತ್ಥಾನ) ಕಾದಂಬರಿ ಹೇಗೆ ಎಲ್ಲಾ ಎಲ್ಲೆ ಮತ್ತು ಕಾಲಗಳನ್ನು ದಾಟಿ ವಿಶ್ವವ್ಯಾಪಿಯಾಗಿ, ಇಡೀ ಮನುಕುಲದ ಕನ್ನಡಿಯಾಗಿ, ಮನುಜಬದುಕಿನ ಪ್ರತಿಬಿಂಬ-ಗತಿಬಿಂಬವಾಗಿದೆ ಎನ್ನುವುದನ್ನು ಮನಮುಟ್ಟುವಂತೆ ವಿಮರ್ಶಿಸಿರುವ ನಿಮ್ಮೀ ಲೇಖನ ತುಂಬಾ ರುಚಿಯಾಗಿದೆ. ಇದು ನಮ್ಮೀ ಕಾಲದ ನಮ್ಮೀ ದೇಶಕ್ಕೂ ಹಿಡಿದ ಕನ್ನಡಿಯಾಗಿದೆ ಅಥವಾ ಬೇರಾವುದೇ ದೇಶಕ್ಕೂ ಹಿಡಿದ ಕನ್ನಡಿಯಾಗಿದೆ ಎಂಬುದು ಮನದಟ್ಟಾಗುತ್ತದೆ. ಮಂಕು ಹಿಡಿದ ಮನಸುಗಳನು ಮತ್ತು ಜಡ್ಡುಗಟ್ಟಿದ ಬದುಕುಗಳನು ತಿದ್ದಿತೀಡಿ ಕ್ರಿಯಾಶೀಲವಾಗಿಸಲು ಮತ್ತು ಚೈತನ್ಯಮಯಗೊಳಿಸಲು, ಆಗಾಗ್ಗೆ ಈ ತರಹದ ವಿಮರ್ಶಾಲೇಖನಗಳು ತುಂಬಾ ಅವಶ್ಯಕ. ಈ ಅವಶ್ಯಕ ಕಾರ್ಯ ನಿಮ್ಮಿಂದ ನಡೆಯುತಿರಲಿ ನಿರಂತರ.
\r\n| Mallikarjun Hiremath
ರೆಸರಕ್ಷನ್ ಓದಿನ ಅನುಭವವನ್ನು ಹಂಚಿಕೊಂಡಿದ್ದೀರಿ. ಒಬ್ಬ ಒಳ್ಳೆಯ ಲೇಖಕ ತನ್ನ ಕಾಲದ,ತನ್ನ ದೇಶದ,ತನ್ನ ಸಮಾಜದ ಬಗ್ಗೆ ಬರೆದರೂ ಅದರ ನಿರ್ವಹಣೆಯಲ್ಲಿಯೇ ಸಾರ್ವಕಾಲಿಕತೆ ಇರುತ್ತದೆ.ಮನುಷ್ಯ ಸ್ವಭಾವದ, ನಡವಳಿಕೆಯ,ಏಳು ಬೀಳಿನ ಗೊಂದಲ ಯಾವತ್ತೂ ಇರುವಂಥದೇ.
\r\n| Somanna
ಉತ್ತಮ ವಾಗಿದೆ ಸರ್ ವಂದನೆಗಳು
\r\n| Shamarao
ಸಾರ್ವಕಾಲಿಕ ಲೇಖಕ ಟಾಲ್ ಸ್ಟಾಯ್ ಕುರಿತ ತಮ್ಮ ಬರಹ ಸಕಾಲಿಕವಾಗಿದೆ.ನಾವು ಇಂಥ ಲೇಖಕರನ್ನು ಓದಲಿಲ್ಲವೆಂದರೆ ಬೇರುಗಳಿಲ್ಲದೆ ಬದುಕಿದಂತಾಗುತ್ತದೆ.ನೆನಪು ಮಾಡಿದ್ದಕ್ಕೆ ಧನ್ಯವಾದಗಳು.
\r\n| gundanna chickmagalur
ಬಹಳ ಉತ್ತಮವಾದ ಕಾದಂಬರಿಯನ್ನು ಪರಿಚಿಸಿದ್ದಕ್ಕೆ ಧನ್ಯವಾದಗಳು...
\r\n\r\nತಾವು ಹೇಳಿರುವಂತೆ ೧೨೫ ವರುಷಗಳ ಹಿಂದಿನ ಟಾಲ್ಸ್ಟಾಯ್ ನ ರಿಸರ್ಕ್ಷನ್ ಕಾದಂಬರಿಯಲ್ಲಿನ ಸಾಮಾಜಿಕ ವಾಸ್ತವತೆಗೂ , ಇಂದಿನ ಭಾರತದ ವಾಸ್ತವತೆಗೂ ತುಂಬಾ ವೆತ್ಯಾಸವೇನೂ ಇಲ್ಲ. ಆದರೆ ನೆಕ್ಲುಡುಫ್ ನ ಆಂತರಿಕ ಕಣ್ಣುಗಳ ವ್ಯಕ್ತಿಯ ಅವಶ್ಯಕತೆ ಮಾತ್ರ ಖಂಡಿತ ಇದೆ. ಟಾಲ್ಸ್ಟಾಯ್ , ಚೆಕೊಫ್ , ಬೆರ್ಟೊಲ್ಟ್ ಬ್ರೆಕ್ಟ್ , ಇವರುಗಲ್ಲೆರ ಆಲೋಚನಾ ಕ್ರಮ ತೀರಾ ಹತ್ತಿರದ್ದು ಅಂತ ಅನ್ನಿಸುತ್ತಿದೆ ನನಗೆ. ಈ ಮಾತನ್ನು ಹೇಳಲು ನನಗೆ ಇರುವ ಜ್ಞಾನವೆಂದರೆ ಇವರುಗಳ ನಾಟಕದಲ್ಲಿನ ಸಂಭಾಷಣೆಗಳ ಒಳ ಸತ್ವ. ಚೆಕಾಫ್ ನ ಕತ್ತಲೆ ದಾರಿ ದೂರ ನಾಟಕದಲ್ಲಿ ಬರುವ ಮಾತು: ಆಸ್ಪತ್ರೆ ಒಂದು ಜೈಲು ಆಗಿದೆ, ಇದರ ಒಳಗೆ ಇರುವವರು ಮಾತ್ರ ಹುಚ್ಚರಲ್ಲ ; ಹೊರಗೂ ತುಂಬಾ ಗಂಭೀರ ಖಾಹಿಲೆಯ ಹುಚ್ಚರಿದ್ದಾರೆ ಅನ್ನುವ ಮಾತು; ಮನುಷ್ಯ ಮೂಲತಃ ಒಳ್ಳೆಯವನು ಎನ್ನುವ ಮಾತು; ಬ್ರೆಕ್ಟ್ ನ ನಾಟಕ ಕಕೇಶಿಯನ್ ಚಾಕ್ ಸರ್ಕಲ್ ನಲ್ಲಿ ಬರುವ, ಹುಚ್ಚನಂತೆ ಎಲ್ಲರಿಗೂ ಅನ್ನಿಸುವ, ನ್ಯಾಯಾಧೀಶ ಅಜಡಕ್ ನ ನ್ಯಾಯ ವಿಶ್ಲೇಷಣೆ ಮತ್ತು ನ್ಯಾಯ ನೀಡುವ ಪರಿ; ಇವೆಲ್ಲವೂ ರಿಸರ್ಕ್ಷನ್ ಕಾದಂಬರಿಯ ಹತ್ತಿರಕ್ಕೆ ಇದೆ. ತುಂಬಾ ಆಪ್ತವಾಗಿದ್ದು ಬುದ್ಧನ ಪರಿಕಲ್ಪನೆ.. ಬಹಳ ಪರಿಣಾಮ ಬೀರಿತು. ಹಾಗೆ ಯಾವುದೋ ಒಂದು ಸಂದಿಗ್ಧ ಪರಿಸ್ಥಿತಿಯಲ್ಲಿ ಬುದ್ಧ ದರ್ಶನ ಆಗುವುದೇ? ಈ ಬುದ್ಧ ದರ್ಶನ ವ್ಯಾಮೋಹವೇ ಆಸೆಯಾಗಿ ಪರಿಣಮಿಸಿದರೆ?
\r\nರಿಸರ್ಕ್ಷನ್ ಕಾದಂಬರಿಯನ್ನು ಓದುವ ಹುಚ್ಚು ಹಿಡಿಸಿದಕ್ಕೆ ಧನ್ಯವಾದಗಳು..
Add Comment