ಕೃತಕ ಜಾಣತನಕ್ಕೆ ಸವಾಲ್!
by Nataraj Huliyar
ಈ ಪುಸ್ತಕದ ಸಂಪಾದಕನನ್ನು ಕುರಿತ ಪ್ರಶ್ನೆಗೆ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಅಥವಾ ಕೃತಕ ಜಾಣತನ ಏನು ಉತ್ತರ ಕೊಡಬಹುದು ಎಂಬ ಕುತೂಹಲ ಕನ್ನಡ ಅಧ್ಯಾಪಕಿಯೊಬ್ಬರಿಗೆ ಹುಟ್ಟಿತು. ಅವರು ಮೆಟಾ ಎಐಗೆ ಆ ಪ್ರಶ್ನೆ ಹಾಕಿದರು. ಅವರು ಆ ಪ್ರಶ್ನೆ ಹಾಕಿದ್ದು ನಟರಾಜ್ ಹುಳಿಯಾರ್ ಸಂಪಾದಿಸಿದ The Sour Mango Tree ಎಂಬ ಲಂಕೇಶರ ಆಯ್ದ ಕೃತಿಗಳ ಇಂಗ್ಲಿಷ್ ಅನುವಾದಗಳ ಸಂಕಲನದ ಬಗ್ಗೆ.
ಈಚೆಗೆ ಪೆಂಗ್ವಿನ್-ರಾಂಡಮ್ ಹೌಸ್ ಮಾಡರ್ನ್ ಕ್ಲಾಸಿಕ್ಸ್ ಸರಣಿಯಲ್ಲಿ ಲಂಕೇಶರು ಬರೆದ ಎಲ್ಲ ಪ್ರಕಾರಗಳ ಮುಖ್ಯ ಕೃತಿಗಳನ್ನು ಒಳಗೊಂಡಿರುವ The Sour Mango Tree ಸಂಕಲನವನ್ನು ಪ್ರಕಟಿಸಿದೆ. ಈ ಮುಖಪುಟವನ್ನು ಮೊನ್ನೆ ಕೆಲವರಿಗೆ ಕಳಿಸಿದೆ. ಈ ಪುಸ್ತಕದ ಮುಖಪುಟವನ್ನು ಗೂಗಲ್‌ನಲ್ಲಿ ನೋಡಿದ್ದ ಅಧ್ಯಾಪಕಿ ಕೇಳಿದ ‘What inspired Nataraj Huliyar to edit Lankesh's works?' ಎಂಬ ಪ್ರಶ್ನೆಗೆ ಮೆಟಾ ಎಐ ಕೊಟ್ಟ ಉತ್ತರ ಈ ಸಲದ ಅಂಕಣಕ್ಕೆ ಕುತೂಹಲಕರ ವಸ್ತುವಾಗಿ ಕಂಡಿತು; ಹೀಗಾಗಿ ಈ ಟಿಪ್ಪಣಿ.
‘ಲಂಕೇಶರ ಕೃತಿಗಳನ್ನು ಸಂಪಾದಿಸಲು ನಟರಾಜ್ ಹುಳಿಯಾರ್‍ಗೆ ಪ್ರೇರಣೆಯಾದ ಅಂಶ ಯಾವುದು?’ ಎಂಬ ಈ ಪ್ರಶ್ನೆಗೆ ಎಐ ಉತ್ತರ:
Nataraj Huliyar's inspiration to edit P. Lankesh's works likely stems from his deep respect for Lankesh's literary contributions and his desire to share those works with a wider audience. As a scholar and editor, Huliyar may have seen the value in curating Lankesh's writings, which offer insightful commentary on Kannada culture, society, and politics.
By editing "The Sour Mango Tree: Selected Works", Huliyar may have aimed to introduce Lankesh's oeuvre to new readers, while also providing a fresh perspective on his works for those already familiar with them. Additionally, Huliyar's effort may have been driven by a sense of responsibility to preserve and promote Kannada literary heritage.
ಈ ಉತ್ತರ ಓದಿದ ಇಬ್ಬರು ಗೆಳೆಯರು, ‘ಗುಡ್’, ‘ಇಂಟೆರೆಸ್ಟಿಂಗ್’ ಎಂದರು. ಆದರೆ ಇದನ್ನು ಓದಿದ ತಕ್ಷಣ, ಇದೊಂದು ಕಿಲಾಡಿ ಉತ್ತರ ಅಥವಾ ‘ಸ್ಮಾರ್ಟ್ ಆನ್ಸರ್’ ಎಂದು ನನಗನ್ನಿಸಿತ್ತು. ಈ ಕೃತಕ ಜಾಣತನದ ಆಳವನ್ನು ಪರೀಕ್ಷಿಸುವ ಕುತೂಹಲದಿಂದ ಮತ್ತಷ್ಟು ಹತ್ತಿರದಿಂದ ಈ ಉತ್ತರವನ್ನು ನೋಡಿದೆ. ಈ ಪುಸ್ತಕದಲ್ಲಿ ಏನಿದೆ ಎಂಬುದು ಗೊತ್ತಿರದೆ ಈ ಪುಸ್ತಕದ ಬ್ಲರ್ಬಿನಲ್ಲಿದ್ದ, ಅಥವಾ ಈ ಪುಸ್ತಕದ ಬಗ್ಗೆ ಗೂಗಲ್ ಕೊಟ್ಟ ವಿವರಗಳನ್ನು ಆಧರಿಸಿ, ಊಹಿಸಿ ಎಐ ಉತ್ತರಿಸಿತ್ತು. ಆ ಉತ್ತರದ ಒಂದೊಂದೇ ವಿವರವನ್ನು ಗಮನಿಸಿದಂತೆಲ್ಲ ಅದರ ಕಿಲಾಡಿ ಜಾಣತನ ಕಚಗುಳಿಯಿಡುವಂತಿತ್ತು. ಈ ಕಿಲಾಡಿತನವನ್ನು ಇನ್ನಷ್ಟು ಸ್ಪಷ್ಟವಾಗಿ ನೋಡಲು ಅದನ್ನು ಕನ್ನಡಕ್ಕೆ ಅನುವಾದಿಸಿಕೊಂಡೆ:
‘ಪ್ರಾಯಶಃ ಲಂಕೇಶರ ಸಾಹಿತ್ಯಕ ಕೊಡುಗೆಗಳ ಬಗೆಗಿನ ಆಳವಾದ ಗೌರವದಿಂದ ಹಾಗೂ ಈ ಕೃತಿಗಳನ್ನು ವಿಸ್ತೃತ ಓದುಗಸಮುದಾಯದ ಜೊತೆಗೆ ಹಂಚಿಕೊಳ್ಳುವ ಆಸೆಯಿಂದ ಲಂಕೇಶರ ಕೃತಿಗಳನ್ನು ಸಂಪಾದಿಸುವ ಪ್ರೇರಣೆ ನಟರಾಜ್ ಹುಳಿಯಾರ್‍ಗೆ ಹುಟ್ಟಿದಂತಿದೆ. ಕನ್ನಡ ಸಂಸ್ಕೃತಿ, ಸಮಾಜ ಮತ್ತು ರಾಜಕಾರಣದ ಬಗ್ಗೆ ಒಳನೋಟವುಳ್ಳ ವಿವರಣೆ, ವ್ಯಾಖ್ಯಾನಗಳನ್ನು ಕೊಡುವ ಲಂಕೇಶರ ಕೃತಿಗಳನ್ನು ಸಂಗ್ರಹಿಸಿಕೊಡುವುದರ ಮೌಲ್ಯವನ್ನು ಒಬ್ಬ ವಿದ್ವಾಂಸ ಹಾಗೂ ಸಂಪಾದಕನಾಗಿ ನಟರಾಜ್ ಹುಳಿಯಾರ್ ಕಂಡುಕೊಂಡಿರಬಹುದು.
‘ದ ಸೋರ್ ಮ್ಯಾಂಗೋ ಟ್ರೀ: ಸೆಲೆಕ್ಟೆಡ್ ವರ್ಕ್ಸ್’ ಸಂಪಾದಿಸುವ ಮೂಲಕ ಲಂಕೇಶರ ಸಮಗ್ರ ಕೃತಿಗಳನ್ನು ಹೊಸ ಓದುಗರಿಗೆ ಪರಿಚಯಿಸುವ ಗುರಿ ಹುಳಿಯಾರ್‍ಗೆ ಪ್ರಾಯಶಃ ಇರಬಹುದು; ಅಲ್ಲದೆ, ಈಗಾಗಲೇ ಲಂಕೇಶರ ಕೃತಿಗಳ ಪರಿಚಯ ಇರುವವರಿಗೂ ಹೊಸ ನೋಟಗಳನ್ನು ಒದಗಿಸುವ ಗುರಿಯೂ ಇರಬಹುದು. ಜೊತೆಗೆ, ಕನ್ನಡ ಸಾಹಿತ್ಯ ಪರಂಪರೆಯನ್ನು ಸಂರಕ್ಷಿಸುವ ಹಾಗೂ ಪಸರಿಸುವ ಹೊಣೆಗಾರಿಕೆಯ ಪ್ರಜ್ಞೆಯಿಂದ ಕೂಡ ಹುಳಿಯಾರ್ ಪ್ರಯತ್ನಗಳು ಪ್ರೇರಣೆಗೊಂಡಿರಬಹುದು.’
ಈ ‘ಕೃಜಾ’ ಉತ್ತರ ಕಿಲಾಡಿ ಉತ್ತರ ಯಾಕೆಂದು ಹೊಳೆಯಿತೆ? ಇಂಥ ಮೇಲ್ಪದರದ ವಿವರಣೆಗಳು ಒಂಥರದಲ್ಲಿ ಸುಲಭ. ಇಂಥ ಬುಡುಬುಡಿಕೆ ಮಾತುಗಳನ್ನು ನೀವು ನಿಮ್ಮ ಸುತ್ತಮುತ್ತ ಕೇಳುತ್ತಲೇ ಇರುತ್ತೀರಿ. ಉದಾಹರಣೆಗೆ, ಕುವೆಂಪು ಕುರಿತ ಭಾಷಣಕಾರರೊಬ್ಬರ ಭಾಷಣದ ಅಥವಾ ಬರಹದ ಸ್ಯಾಂಪಲ್ ನೋಡಿ:
‘ಮಹಾಕವಿ ಕುವೆಂಪು ಕನ್ನಡವನ್ನು ಕಟ್ಟುವ ಕೆಲಸಕ್ಕೆ ದಣಿವರಿಯದೆ ಸದಾ ತಮ್ಮನ್ನು ಸಮರ್ಪಿಸಿಕೊಂಡಿದ್ದರು. ಕುವೆಂಪು ಕನ್ನಡ ಸಂಸ್ಕೃತಿಯನ್ನು ರೂಪಿಸುವ ಅನನ್ಯ ಹೊಣೆಗಾರಿಕೆಯಿಂದ ಸಾಹಿತ್ಯದ ಸರ್ವ ಪ್ರಕಾರಗಳಲ್ಲೂ ಕೈಯಾಡಿಸಿದರು. ಪ್ರಖರ ವೈಚಾರಿಕ ದೃಷ್ಟಿಕೋನದಿಂದ ಸಮಾಜವನ್ನು ವಿಶ್ಲೇಷಿಸುತ್ತಿದ್ದ ವಿಶ್ವಮಾನವ ಕುವೆಂಪು ಆಳವಾದ ಸಾಮಾಜಿಕ ಪ್ರಜ್ಞೆಯಿಂದ ಬರೆದರು, ದಿಟ್ಟವಾಗಿ ಮಾತಾಡಿದರು…ಅಸಾಮಾನ್ಯ ಎತ್ತರಕ್ಕೆ ಏರಿದರು.’
ಈ ಭಾಷಣ ಅಥವಾ ಬರಹ ಯಾರದು, ಇದು ಎಲ್ಲಿದೆ ಎಂದು ಅನಗತ್ಯ ಕುತೂಹಲದಿಂದ ಹುಡುಕದಿರಿ! ಇಂಥ ಭಾಷಣಗಳನ್ನು, ಬರಹಗಳನ್ನು ನೀವು ನಿತ್ಯ ನೋಡುತ್ತಿರುತ್ತೀರಿ. ಇವು ಅನೇಕ ಬುಡುಬುಡಿಕೆ ಭಾಷಣಕಾರರ ನಿತ್ಯದ ಟೆಂಪ್ಲೆಟ್‌ಗಳು ಅಥವಾ ಮಾದರಿ ಚೌಕಟ್ಟುಗಳು! ಈ ಚೌಕಟ್ಟುಗಳಲ್ಲಿ ಕೃತಿಯ ಹೆಸರನ್ನು ಬದಲಿಸಿ, ಕೃತಿ ಬರೆದವರ ಹೆಸರಿನ ಬದಲಿಗೆ ಮತ್ತೊಬ್ಬರ ಹೆಸರು ಹಾಕಿದರೆ ಅದು ಆ ಮತ್ತೊಬ್ಬರನ್ನು ಕುರಿತ ಭಾಷಣವಾಗುತ್ತದೆ!
ಅಂದರೆ, ಮೇಲಿನ ಭಾಷಣ ಅಥವಾ ಬರಹದಲ್ಲಿ ಕುವೆಂಪು ಬದಲಿಗೆ ಬೇಂದ್ರೆಯವರ ಹೆಸರು ಹಾಕಿದರೂ ನಡೆಯುತ್ತದೆ; ತೇಜಸ್ವಿಯವರ ಹೆಸರು ಹಾಕಿದರೂ ಯಾರೂ ಬೆರಳು ಮಾಡಿ ತೋರಿಸುವುದಿಲ್ಲ! ಅದೇ ರೀತಿ, ‘ದ ಸೋರ್ ಮ್ಯಾಂಗೋ ಟ್ರೀ’ ಸಂಕಲನದ ಸಂಪಾದಕನನ್ನು ಕುರಿತು ‘ಕೃಜಾ’ ಕೊಟ್ಟಿರುವ ಉತ್ತರದಲ್ಲಿ ಸಂಪಾದಕ ನಟರಾಜ್ ಹುಳಿಯಾರ್ ಬದಲಿಗೆ, ಸಂಪಾದಕ ತಾರಕೇಶ್ವರ್ ಎಂದರೂ ನಡೆಯುತ್ತದೆ; ‘ಲಂಕೇಶರ ಆಯ್ದ ಕೃತಿಗಳು’ ಎಂಬುದರ ಬದಲಿಗೆ ‘ಶ್ರೀಕೃಷ್ಣ ಆಲನಹಳ್ಳಿಯವರ ಆಯ್ದ ಕೃತಿಗಳು’ ಎಂದರೂ ನಡೆಯುತ್ತದೆ!
ಎಐ ಉತ್ತರಗಳು ಸೃಷ್ಟಿಸುವ ಸವಾಲು ಇಷ್ಟು ಸರಳವಲ್ಲ ಎಂಬುದು ನಿಜ. ಎಐ ಉಪಯೋಗ ಕೆಲವೆಡೆ ಅದ್ಭುತವಾಗಿದೆ. ಅದು ಇಂಗ್ಲಿಷಿನಲ್ಲಿ ಕವಿತೆಗಳಿಗೆ ಟೈಟಲ್ ಕೊಡುವ ಅಚ್ಚರಿಯನ್ನು ಇದೇ ಅಂಕಣದ ‘ಇನ್ನಷ್ಟು ಟೈಟಲ್ ಬೇಕೆ?’ ಎಂದು ಅದು ಕೇಳಿತು’ ಎಂಬ ಲೇಖನದಲ್ಲಿ ಹಿಂದೊಮ್ಮೆ ಬರೆದಿದ್ದೇನೆ. ಎಐ ಅಲ್ಲಿಂದ, ಇಲ್ಲಿಂದ ಕಿತ್ತು ಹಾಕಿ ಕಿಲಾಡಿ ಕತೆಗಳನ್ನು ಬರೆಯುವುದನ್ನೂ ನೋಡಿದ್ದೇನೆ; ಶೇಕ್‌ಸ್ಪಿಯರ್, ಎಲಿಯಟ್ ಬಗ್ಗೆ ಸ್ಟೂಡೆಂಟುಗಳಿಗೆ ಅದು ಕ್ಷಣಮಾತ್ರದಲ್ಲಿ ಅಸೈನ್‌ಮೆಂಟ್ ಬರೆದುಕೊಡುವುದನ್ನೂ ಕೇಳಿದ್ದೇನೆ. ಈ ಎಲ್ಲದರಲ್ಲೂ ಜಾಣತನ, ಸ್ಮಾರ್ಟ್‌ನೆಸ್ ಎದ್ದು ಕಾಣುವುದನ್ನು ನೀವು ಗಮನಿಸಿರಬಹುದು.
ಆದರೂ ಕೆಲ ಬಗೆಯ ವಿಜ್ಞಾನದ ಪ್ರಯೋಗಗಳಲ್ಲಿ, ವೈದ್ಯಕೀಯ ಚಿಕಿತ್ಸೆಗಳಲ್ಲಿ ಎಐ ಕ್ರಾಂತಿಕಾರಕ ಕೆಲಸ ಮಾಡತೊಡಗಿರುವುದು ಕೂಡ ನಿಜ. ಮೊನ್ನೆ ತಾನೇ X ಡಿಜಿಟಲ್ ವೇದಿಕೆಯ GROK ಎಂಬ ಸಾಧನ ಇಂಡಿಯಾದ ರಾಜಕಾರಣಿಗಳ ಬಗ್ಗೆ ಖಡಕ್ ಸತ್ಯದ ಉತ್ತರ ಕೊಡುತ್ತಿರುವುದನ್ನು ಕಂಡು ಈ ಸತ್ಯಪಿಶಾಚಿ ಗ್ರೋಕನ್ನೇ ಇಂಡಿಯಾದಿಂದ ಬ್ಯಾನ್ ಮಾಡುವ ಹೊಂಚು ಕೂಡ ನಡೆಯುತ್ತಿದೆ!
ಇಷ್ಟಾಗಿಯೂ, ಮೇಲೆ ಹೇಳಿದ ಲಂಕೇಶರ ’ದ ಸೋರ್ ಮ್ಯಾಂಗೋ ಟ್ರೀ’ ಪುಸ್ತಕದಲ್ಲಿರುವ ‘ಸಹಪಾಠಿ’ ಕತೆಯ ‘ದ ಕ್ಲಾಸ್‌ಮೇಟ್’ ಎಂಬ ಇಂಗ್ಲಿಷ್ ಅನುವಾದವನ್ನು ಎಐ ನಿಜಕ್ಕೂ ಸೂಕ್ಷ್ಮವಾಗಿ ಗ್ರಹಿಸಬಲ್ಲದೆ? ‘ಸಹಪಾಠಿ’ ಕತೆಯನ್ನು ‘ಶತಮಾನದ ಕನ್ನಡ ಕತೆ’ ಎಂದು ಬಣ್ಣಿಸಿದ ಡಿ. ಆರ್. ನಾಗರಾಜರ ವಿಶಿಷ್ಟ ಸಾಂಸ್ಕೃತಿಕ ವ್ಯಾಖ್ಯಾನ ಎಐಗೆ ದಕ್ಕಬಲ್ಲದೆ? ಅಥವಾ ಸಾಹಿತ್ಯ ಕೃತಿಗಳ ಸೂಕ್ಷ್ಮ ಓದುಗರಾದ ಕನ್ನಡದ ಕಿ.ರಂ. ನಾಗರಾಜ್, ಓ.ಎಲ್. ನಾಗಭೂಷಣಸ್ವಾಮಿ, ಎಚ್.ಎಸ್. ರಾಘವೇಂದ್ರರಾವ್, ಆಶಾದೇವಿ, ರಾಜೇಂದ್ರ ಚೆನ್ನಿ ಥರದವರಂತೆ; ಅಥವಾ ಇಂಗ್ಲಿಷಿನ ವಿಲಿಯಂ ಎಂಪ್ಸನ್ ಅಥವಾ ಹೆರಾಲ್ಡ್ ಬ್ಲೂಮ್ ಥರದವರಂತೆ ಎಐ ಈ ಕತೆಯನ್ನು ನಿಕಟವಾಗಿ ಓದಬಲ್ಲದೆ? ಈ ಥರದ ಸೂಕ್ಷ್ಮ ಕಣ್ಣು, ವಿಶೇಷ ಗ್ರಹಿಕೆಗಳ ಮೂಲಕ ಕೃತಿಗಳ ಸಂಕೀರ್ಣ ಅರ್ಥಗಳನ್ನು ‘ಎಐ’ ವಿವರಿಸುವ ಸಾಧ್ಯತೆ ಸದ್ಯದಲ್ಲಂತೂ ಕಾಣುತ್ತಿಲ್ಲ. ‘ಓದುವುದು ಎಂದರೆ ಅರ್ಥದ ನಿರಂತರ ಮುಂದೂಡಿಕೆ’ ಎಂದ ಡೆರಿಡಾನ ಸೃಜನಶೀಲ ಸವಾಲಿನ ಕೆಲಸವನ್ನು ಕೃಜಾ ಕೈಗೆತ್ತಿಕೊಳ್ಳಬಲ್ಲದೆ? ಅಕಸ್ಮಾತ್ ಕೈಗೆತ್ತಿಕೊಂಡರೂ, ಅದು ಕೊಡುತ್ತಿರುವುದು ಅರ್ಥವೋ ಅನರ್ಥವೋ ಎಂಬುದನ್ನು ಮಾತ್ರ ನಿಮ್ಮ ಸಹಜ ಬುದ್ಧಿಯೇ ತೀರ್ಮಾನಿಸಬೇಕಾಗುತ್ತದೆ.
ಹೀಗಿದ್ದರೂ ಸಾಹಿತಿಗಳಾಗಲೀ, ಸಾಹಿತ್ಯದ ಅಧ್ಯಾಪಕ, ಅಧ್ಯಾಪಕಿಯರಾಗಲೀ ಎಐ ಸವಾಲನ್ನು ತೀರಾ ಹಗುರಾಗಿ ನೋಡಿ ಆರಾಮಾಗಿರಲಾಗದು! ಅನುಭವ ಶೋಧನೆಯನ್ನು, ಅನುಭವ ಮಂಡನೆಯನ್ನು, ಕೃತಿ ರಚನೆಯನ್ನು; ಕೃತಿಗಳ ಓದು, ವ್ಯಾಖ್ಯಾನಗಳನ್ನು ಇನ್ನಷ್ಟು ಸೂಕ್ಷ್ಮವಾಗಿಸುವುದು, ಆಳವಾಗಿಸುವುದು ಹಾಗೂ ಸೃಜನಶೀಲಗೊಳಿಸುವುದೇ ಎಲ್ಲ ಬಗೆಯ ಕೃತಕ ಜಾಣತನಕ್ಕೆ ಉತ್ತರವಾಗಬಲ್ಲದೇನೋ! ಸ್ಟೂಡೆಂಟುಗಳು ಒಂದರ ಮೇಲೊಂದು ಕೃಜಾ ಅಸೈನ್‌ಮೆಂಟುಗಳನ್ನು ತಂದುಕೊಡಬಹುದು; ಆದರೆ ಅವರಿಗೆ ಕೇವಲ ಐದು ನಿಮಿಷಗಳ ಕಾಲ ಒಂದು ಪುಸ್ತಕದ ಸೂಕ್ಷ್ಮ ಅಂಶಗಳನ್ನು ನೇರವಾಗಿ ಹೇಳುವಂತೆ ಮೇಡಂ, ಮೇಷ್ಟ್ರುಗಳು ಕೇಳಿ ನೋಡಲಿ: ಅವರ ಸಹಜ ಬುದ್ಧಿಯೆಷ್ಟು, ಸ್ವಂತ ಬುದ್ಧಿಯ ಶಕ್ತಿಯೆಷ್ಟು ಎಂಬುದು ಕೇಳಿದವರಿಗೂ ಕೇಳಿಸಿಕೊಂಡವರಿಗೂ ನಿಧಾನಕ್ಕೆ ಹೊಳೆಯತೊಡಗುತ್ತದೆ.
ಆದರೂ ‘ಇದು ಬರಿ ಎಐ ಅಲ್ಲೋ ಅಣ್ಣ! ಎಂಬುದನ್ನೂ ಹೇಳಲೇಬೇಕು!
Comments
16 Comments
| ಮಂಜುನಾಥ್ ಸಿ ನೆಟ್ಕಲ್
ಯಾಂತ್ರಿಕ ಬುದ್ಧಿ ಮತ್ತೆ ಯಾಂಬು...ಕೃತಕ ಜಾಣತನ ಕೃಜಾ ಇವು ಮಾನವನ ಹಾಗೂ ಅವನ ಬೆರಳುಗಳು ಸೂಕ್ಷ್ಮ ಮನಸ್ಸಿನ ಒಳತೋಟಿಗಳನ್ನು ಇನ್ನೂ ಸಮಗ್ರವಾಗಿ ಗ್ರಹಿಸಿ ಪ್ರತಿಕ್ರಿಯಿಸುವ ಹಂತಕ್ಕೆ ಸದ್ಯಕ್ಕಂತೂ ಬೆಳೆದಿಲ್ಲ ಸರ್... ಹೀಗಾಗಿ ಸಾಹಿತ್ಯ ವಿಮರ್ಶೆಗೆ ... ಸದ್ಯಕ್ಕೆ ನಮ್ಮ ಸೂಕ್ಷ್ಮ ಗ್ರಾಹಿ ಮನಸ್ಸಿನ ನೇರ ನಿಷ್ಠುರ ಕೃತಿ ನಿಷ್ಠ ವಿಮರ್ಶಕರನ್ನೇ ನೆಚ್ಚ ಬೇಕಾಗಿದೆ.... ನಿಮ್ಮ ಬರಹದಲ್ಲಿ...ಹಾಡಿದ್ದೇ ಹಾಡುವ .. ಭಾಷಣ ಕೋರರನ್ನು ಕೃಜಾ ಗೆ ಹೋಲಿಸಿದ್ದು ಮಾರ್ಮಿಕವಾಗಿದೆ.... ಧನ್ಯವಾದಗಳು
| sanganagouda
ಬಹುಶಃ ಇಂಥ ಬಂಡವಾಳಶಾಹಿಗಳು ನಡೆಸುವ ಅಧ್ವಾನವನ್ನು ನೋಡಿಯೇ ಅಲ್ಲಮ ಪ್ರಭು ಅವರು "ಆಸೆಯೆಂಬ ಕೂರಲಗನಿಕ್ಕಿ ಹೇಸದೆ ಕೊಂದೆಯಲ್ಲ" ಎಂದು ಹೇಳಿದ್ದಾರೆ ಸರ್
| Nataraj Huliyar Replies
Thanks Sangangowda for this fine shot of ಅಲ್ಲಮ ಪ್ರಭು: "ಆಸೆಯೆಂಬ ಕೂರಲಗನಿಕ್ಕಿ ಹೇಸದೆ ಕೊಂದೆಯಲ್ಲ,"
| Sadananda R
ʼಕೃಜಾʼ ಅನೇಕ ವೇಳೆ ತಿಪ್ಪೆ ಸಾರಿಸುವ ಕೆಲಸ ಮಾಡುವುದನ್ನು ಉದಾಹರಣೆಗಳ ಸಮೇತ ವಿವರಿಸಿದ್ದೀರಿ. ಎಲ್ಲರಿಗೂ ಒಪ್ಪಿತವಾಗುವ ಮಾತುಗಳನ್ನು ಹೇಳಿ ಎಲ್ಲರಿಂದಲೂ ಸೈ ಅನಿಸಿಕೊಳ್ಳುವ ನಾಜೂಕಯ್ಯಗಳ ಸಾಲಿಗೆ ಮತ್ತೊಂದು ಸೇರ್ಪಡೆ ಕೃಜಾ ಎಂಬ ಧಣಿವರಿಯದ ಮಿಥ್ಯ ಜೀವಿ. ಕೃಜಾ ಅನ್ನು Politically Correct ಮಾಡುವ ಕೆಲಸವನ್ನು ಕಂಪನಿಗಳು ನಿರಂತರವಾಗಿ ಮಾಡುತ್ತವೆ. ಇದಕ್ಕಾಗಿಯೇ Humans in Loop ಎನ್ನುವ ಕೂಲಿಗಳನ್ನು ನೇಮಿಸಿಕೊಳ್ಳುತ್ತಾರೆ. ಇವರು ಈ ಕೃಜಾಕ್ಕೆ ಡೇಟಾ ಫೀಡ್ ಮಾಡಿ - ನಾಯಿಯನ್ನು ತರಬೇತುಗೊಳಿಸಿದಂತೆ ತರಬೇತುಗೊಳಿಸುತ್ತಾರೆ. ಇದೊಂದು ಸಂಕೀರ್ಣವಾದ ಪ್ರಕ್ರಿಯೆ. ಹಾಗೆ ನೀವು ಹೇಳಿದಂತೆ ಸಾಹಿತ್ಯದ ಅಧ್ಯಾಪಕರು ಮೈಯೆಲ್ಲಾ ಎಚ್ಚರದಿಂದಿರಬೇಕು. ಶೇಕ್ಸಪಿಯರ್ಗೂ ಮಿಗಿಲಾದ ಸಾಹಿತ್ಯವನ್ನು ಸೃಜಿಸಿ ನೀಡುವ ಕೃಜಾದ ಸಹಾಯ ಪಡೆದು ವಿದ್ಯಾರ್ಥಿಗಳು ಕ್ಷಣಾರ್ಧದಲ್ಲಿ ಅಸೈನ್‌ಮೆಂಟ್‌ಗಳನ್ನು ಬರೆದು ಸಲ್ಲಿಸುತ್ತಾರೆ. ಆದರೆ ತಕ್ಷಣಕ್ಕೆ ಕನ್ನಡ ಸಾಹಿತ್ಯದ ಅಧ್ಯಾಪಕರು ಕ್ಷೇಮ...ಏಕೆಂದರೆ ಕನ್ನಡದಲ್ಲಿ ಸೃಜಿಸಬಲ್ಲ ಕೃಜಾ ಜೀವಿ ಇನ್ನು ಸೃಷ್ಟಿಯಾಗಿಲ್ಲ. ಇಂಗ್ಲಿಷ್ ಸಾಹಿತ್ಯದ ಶಿಕ್ಷಕರು ಕೃಜಾದ ಕೈಚಳಕವನ್ನು ಗುರುತಿಸಿ ಹೇಳಲು ಇರುವ ʼಇತರೆ ಕೃಜಾʼ ಗಳನ್ನು ಬಳಸುವ ಕೌಶಲ್ಯ ಕಲಿಯದೇ ಹೋದಲ್ಲಿ ಮಾನ ಕಳೆದುಕೊಳ್ಳುವುದು ಶತಸಿದ್ಧ.
| Shivavenkataiah
ಕೃಜಾ ಹೊಸ ನಾಮಕರಣ!
| N C Mahesh
Dear NH Sir Even I was looking for some solid points to defend against AI. I got it from your column. The limits and tricky intelligence of AI has been exposed in satirical way. Very much insightful sir. Thanks
| Dr. Shivalingamurthy
ಈ ಲೇಖನದಲ್ಲಿ "ಓದುವುದು ಎಂದರೆ ಅರ್ಥದ ನಿರಂತರ ಮುಂದೂಡಿಕೆ" ಎಂಬ ಡೆರಿಡಾ ಹೇಳಿಕೆ "ಓದುವುದು ಎಂದರೆ ಅರ್ಥದ ನಿರಂತರ ಮುಂದುವರಿಕೆ" ಎಂದಿರಬಹುದೆ?
| Nataraj Huliyar Replies
ಪ್ರಿಯ ಶಿವಲಿಂಗಮೂರ್ತಿ, ಡೆರಿಡಾ ಬಳಸಿದ "continual deference of meaning" ಎಂಬ ಮಾತಿಗೆ "ಅರ್ಥದ ನಿರಂತರ ಮುಂದೂಡಿಕೆ" ಎಂಬುದು ಹತ್ತಿರದ ಅರ್ಥ. ಫ್ರೆಂಚ್ ಭಾಷೆಯಲ್ಲಿ deference ಎಂಬ ಪದದಲ್ಲಿ difference ಎಂಬುದೂ ಸೂಚಿತವಾಗುತ್ತದೆ ಎಂದು ನಂತರದ ವಿವರಣೆಗಳು ಹೇಳುತ್ತವೆ. ಕೃತಿಯ ಅರ್ಥ ಅಥವಾ ಅರ್ಥಗಳು ನಿರ್ದಿಷ್ಟವಾಗದೆ ಇರಲಿ ಎಂಬ ಆಶಯ ಡೆರಿಡಾನಲ್ಲಿದೆ.
| Chandrashekhara Talya
ಸಹಜವಲ್ಲದ್ದು ನನ್ನ ಬಳಿಯೂ ಸುಳಿಯದು. ಕೃಜಾ ಜಗತ್ತಿಗೆ ಅದ್ಭುತ, ಸೋಜಿಗ, ಏನೇ ಇರಲಿ ನನಗದು ಕಿಂಚಿತ್
| Prof. Prabhakar
Beautiful analysis of AI which is going to rule the roost!
| Shamarao
ನಿಮ್ಮ ಊಹೆಯೇ ಸತ್ಯ. ಕೃಜಾ ಎಂದಿಗೂ ಸಜಾವನ್ನು ಸರಿಗಟ್ಟಲಾಗದು!
| ಕುಸುಮ ಬಿ.ಎಂ
ಕೃತಕ ಜಾಣತನವು ಹೆಸರಿನಷ್ಟೇ ಕೃತಕವಾಗಿದ್ದರೂ ಅದು ಒಂದು ವರ್ಗ ಅಂದರೆ ವಿದ್ಯಾರ್ಥಿ ವಲಯದಲ್ಲಿ ಸೃಷ್ಟಿಸುತ್ತಿರುವ ಆತ್ಮವಿಶ್ವಾಸವನ್ನು ನಾವು ನಿರಾಕರಿಸಲಾಗದು ಹಾಗೇಯೇ ಕೃಜಾ ಮೇಲಿನ ಅವಲಂಬನೆಯೂ ಆತಂಕಕಾರಿಯಾಗಿದೆ. ಈ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಶಿಕ್ಷಕರ ಪಾತ್ರದ ಮಹತ್ವವನ್ನು ಲೇಖನ ಮನಗಾಣಿಸಿತು. ಪ್ರಯತ್ನಿಸುತ್ತಿರುವೆ ಸರ್
| ಡಾ. ನಿರಂಜನ ಮೂರ್ತಿ ಬಿ ಎಂ
ಬಹಶಃ ಎಲ್ಲರೂ ಒಪ್ಪಬಹುದಾದ ಮತ್ತು ಬಹುಶಃ ಎಲ್ಲರಿಗೂ ಒಪ್ಪುವಂತಹ ಕೃಜಾದ ವಿಶ್ಲೇಷಣಾ ತಂತ್ರಗಳನ್ನು ಬಯಲುಮಾಡಿರುವುದು ಬಹುಶಃ ಎಲ್ಲರಿಗೂ ಸಮ್ಮತವಾಗಬಹುದು. ಕೃಜಾ ಒಂದು ಸುಂದರ ಬೊಂಬೆ ಮಾತ್ರ. ಅದರ ಚೆಲುವು ಮನಸೆಳೆಯಬಹುದು. ಆದರೆ ಅದು ಮನವಿಲ್ಲದ, ಹೃದಯವಿಲ್ಲದ, ನಿರ್ಭಾವ ನಿರ್ಜೀವ!
| Chirantan K.
I read your article on AI. AI works this way because it is trained to analyse the question you ask and use the relevant information about which it has been trained to address the question. AI does not use live internet results. It uses the information which is basically all the publicly available information during its training. If much information is not available, AI tries to give a convincing answer which could be more generic. That is the reason why you see generic answers. It is all about the training the AI has received.
| Nataraj Huliyar Replies
Hi Chirantan,Excellent clarity on how ಕೃಜಾ works. Thank you
| Suresha B
ಕಾಮ್ರೇಡ್ ಗುರುಗಳೇ, ಯಾಂಬು (ಯಾಂತ್ರಿಕ ಬುದ್ಧಿಮತ್ತೆ) ಸ್ವಂತ ಬುದ್ಧಿಯದಲ್ಲ. ಅದು ಕೇಳಿದ ಪ್ರಶ್ನೆಗೆ ತಕ್ಕಂತೆ ಉತ್ತರ ನೀಡುತ್ತದೆ. ಪ್ರಶ್ನೆ ಕೇಳುವವರು ಜಾಣರಾಗಿದ್ದರೆ ಮತ್ತು "ಜಾಣ" ಪ್ರಶ್ನೆ ಕೇಳಿದರೆ ಯಾಂಬು ಉತ್ತರ ಸಹ ಅಷ್ಟೇ "ಜಾಣತನ" ದಿಂದ ಇರುತ್ತದೆ. ಒಟ್ಟಾರೆ ವಿಷಯ ಇಷ್ಟೇ. ಯಾಂಬು ಅನ್ನುವುದು ಒಂದು ತಂತ್ರಜ್ಞಾನ. ಅದನ್ನು ಸದ್ಬಳಕೆ ಮಾಡಿಕೊಳ್ಳುವ "ಜಾಣತನ" ನಮಗೆಲ್ಲರಿಗೂ ಬರಬೇಕಿದೆ.
Add Comment