ಓದಬೇಕಾಗಿರುವ ಪುಸ್ತಕಗಳು ಕಾಯುತ್ತಿವೆ
by Nataraj Huliyar
ಗೆಳೆಯ ವಿಠ್ಠಲ ಭಂಡಾರಿ ಒಮ್ಮೆ ಈ ಲೇಖನವನ್ನು ಮರುಬರವಣಿಗೆ ಮಾಡಿಸಿ ಪಠ್ಯಪುಸ್ತಕವೊಂದಕ್ಕೆ ಆಯ್ದುಕೊಂಡರು. ಅವತ್ತು `ಅದು ಬೇಡ, ಬೇರೆ ಹಾಕೋಣ’ ಎಂದಿದ್ದೆ. ಇವತ್ತು ನೋಡುತ್ತಿದ್ದರೆ, ಈ ಲೇಖನದ ಮೂಲಕ ಮಕ್ಕಳಲ್ಲಿ ಓದುವ ಪ್ರವೃತ್ತಿಯನ್ನು ಹುಟ್ಟು ಹಾಕಬಯಸಿದ್ದ ಭಂಡಾರಿಯವರ ಮುಂದಾಲೋಚನೆ ವಿಸ್ಮಯ ಹುಟ್ಟಿಸಿತು; ಅಂಥ ಧೀಮಂತ ಮೇಷ್ಟರುಗಳ, ಪ್ರಾಮಾಣಿಕ ಚಿಂತಕ ಕ್ರಿಯಾಶೀಲರ ನಿರ್ಗಮನದಿಂದ ಆಗುವ ಸಾಂಸ್ಕೃತಿಕ ನಷ್ಟದ ಆಳ ಅರಿವಾಗತೊಡಗಿತು.
ಭಂಡಾರಿ ಆಯ್ದುಕೊಂಡ ಲೇಖನವನ್ನು ಕೊಂಚ ಎಡಿಟ್ ಮಾಡಿ ಇಲ್ಲಿ ಕೊಟ್ಟಿರುವೆ. ಅದನ್ನು ಕೊಡಲು ಇನ್ನೂ ಒಂದು ಕಾರಣವಿದೆ. ಅದನ್ನು ನಂತರ ಹೇಳುವೆ:
೨೦೧೬ರಲ್ಲಿ ಕ್ಯೂಬಾದ ಕಮ್ಯುನಿಸ್ಟ್ ನಾಯಕ ಫಿಡೆಲ್ ಕ್ಯಾಸ್ಟ್ರೋ ತೀರಿಕೊಂಡಾಗ, ಫಿಡೆಲ್ ಚಿತಾಭಸ್ಮವನ್ನು ಅವನ ನೆಚ್ಚಿನ ಕ್ರಾಂತಿಕಾರಿ ಲೇಖಕನಾದ ಜೋಸ್ ಮಾರ್ತಿಯ ಸಮಾಧಿಯ ಪಕ್ಕದಲ್ಲಿಟ್ಟಿದ್ದರು. ಈ ಫೋಟೋ ಕಂಡಾಗ, ‘ಮುಂದಿನ ಜನ್ಮದಲ್ಲಿ ಲೇಖಕನಾಗಿ ಹುಟ್ಟಬೇಕೆಂಬುದು ನನ್ನ ಆಸೆ’ ಎಂದು ಫಿಡೆಲ್ ಒಮ್ಮೆ ಗೆಳೆಯ ಮಾರ್ಕ್ವೆಜ್‌ಗೆ ಹೇಳಿದ್ದು ನೆನಪಾಯಿತು.
ಜಗತ್ತಿನ ಶ್ರೇಷ್ಠ ಲೇಖಕರಲ್ಲೊಬ್ಬನಾದ ಮಾರ್ಕ್ವೆಜ್‌ಗೆ ತನ್ನ ಗೆಳೆಯ, ಕ್ರಾಂತಿಕಾರಿ ನಾಯಕ ಫಿಡೆಲ್ ಕ್ಯಾಸ್ಟ್ರೋ (೧೯೨೬-೨೦೧೬) ಬಗ್ಗೆ ವಿಚಿತ್ರ ಅಕ್ಕರೆ: ‘ಫಿಡೆಲ್ ಬಗ್ಗೆ ಮಾತಾಡುವಾಗ ನಾನು ತೀರ್ಮಾನ ಕೊಡುವ ಸ್ಥಾನದಲ್ಲಿ ನಿಂತು ಮಾತಾಡಲಾರೆ; ಭಾವನೆಗಳ ಲೋಕದಿಂದ ಮಾತ್ರ ಮಾತಾಡಬಲ್ಲೆ... ಈ ಜಗತ್ತಿನಲ್ಲಿ ನಾನು ಅತ್ಯಂತ ಪ್ರೀತಿಸುವ ವ್ಯಕ್ತಿ ಫಿಡೆಲ್’ ಎನ್ನುತ್ತಾನೆ ಮಾರ್ಕ್ವೆಜ್. ಕ್ಯಾಸ್ಟ್ರೋಗಿಂತ ಎರಡು ವರ್ಷ ಮೊದಲು ತೀರಿಕೊಂಡ ಮಾರ್ಕ್ವೆಜ್‌ನ ಈ ಭಾವ ಕೊನೆವರೆಗೂ ಹಾಗೇ ಇದ್ದಂತಿತ್ತು. ಆದರೆ ಗೆಳೆಯ ಮಾಡಿದ್ದೆಲ್ಲವನ್ನೂ ಮಾರ್ಕ್ವೆಜ್ ಒಪ್ಪುತ್ತಿದ್ದನೆಂದಲ್ಲ. ಝೆಕೊಸ್ಲವಾಕಿಯಾದಲ್ಲಿ ಸೋವಿಯತ್ ಯೂನಿಯನ್ ಹಸ್ತಕ್ಷೇಪ ಮಾಡಿದ್ದನ್ನು ಕ್ಯಾಸ್ಟ್ರೋ ಬೆಂಬಲಿಸಿದ್ದ; ಮಾರ್ಕ್ವೆಜ್ ಹಸ್ತಕ್ಷೇಪವನ್ನು ಪ್ರತಿಭಟಿಸಿದ್ದ.
ಅಧಿಕಾರವೆನ್ನುವುದು ‘ಮಾನವನ ಅತ್ಯುನ್ನತ ಮಹತ್ವಾಕಾಂಕ್ಷೆ ಹಾಗೂ ಅವನ ಇಚ್ಛಾಶಕ್ತಿಯ ರೂಪ’ ಎಂಬುದನ್ನು ಅರಿತಿದ್ದ ಮಾರ್ಕ್ವೆಜ್, ಹಲವು ದೇಶಗಳ ರಾಜಕೀಯ ನಾಯಕರನ್ನು ಹತ್ತಿರದಿಂದ ಬಲ್ಲವನಾಗಿದ್ದ. ಫಿಡೆಲ್ ಜೊತೆಗಿನ ಮಾರ್ಕ್ವೆಜ್ ಸ್ನೇಹ ಬೆಳೆದದ್ದು ಸಾಹಿತ್ಯದ ಮೂಲಕ. ಒಂದು ರಾತ್ರಿ ಮಾರ್ಕ್ವೆಜ್ ಹಾಗೂ ಫಿಡೆಲ್ ಮಾತಾಡುತ್ತಾ ಕೂತಿದ್ದರು. ಇನ್ನೇನು ಬೆಳಗಿನ ಜಾವವಾಗುತ್ತಿದ್ದಾಗ, ಫಿಡೆಲ್ ‘ಇವತ್ತು ಓದಬೇಕಾಗಿರುವ ಪುಸ್ತಕಗಳು ನನಗಾಗಿ ಕಾಯುತ್ತಿವೆ’ ಎನ್ನುತ್ತಾ ಮೇಲೆದ್ದ; ‘ಈ ಪುಸ್ತಕಗಳನ್ನೆಲ್ಲ ಓದಬೇಕಾದದ್ದು ಅನಿವಾರ್ಯ; ಇದು ಬೋರಿಂಗ್ ಕೆಲಸ, ಸುಸ್ತಾಗಿಸುವ ಕೆಲಸ ಕೂಡ’ ಎಂದ.
‘ಓದಿನ ಮಧ್ಯೆ ಒಳ್ಳೆಯ, ಆದರೆ ಕೊಂಚ ಲೈಟಾದ, ಪುಸ್ತಕಗಳನ್ನು ಓದುವುದು ಈ ಓದಿನ ಭಾರವನ್ನು ಕಳೆಯುವ ಉಪಾಯ’ ಎಂದ ಮಾರ್ಕ್ವೆಜ್, ಅಂಥ ಪುಸ್ತಕಗಳ ಪಟ್ಟಿ ಕೊಟ್ಟರೆ, ಫಿಡೆಲ್ ಅವನ್ನೆಲ್ಲ ಓದಿಬಿಟ್ಟಿದ್ದ. ಅಷ್ಟೇ ಅಲ್ಲ, ಅವುಗಳ ಬಗ್ಗೆ ತನ್ನ ಅಭಿಪ್ರಾಯಗಳನ್ನೂ ಹೇಳತೊಡಗಿದ!
ಮಾರ್ಕ್ವೆಜ್ ಒಂದು ಬೆಳಗಿನ ಜಾವ ಫಿಡೆಲ್‌ಗೆ ತನ್ನ ‘ದಿ ಟೇಲ್ ಆಫ್ ಎ ಶಿಪ್‌ರೆಕ್ಡ್ ಸೈಲರ್’ ಪುಸ್ತಕ ಕೊಟ್ಟ. ಮಧ್ಯಾಹ್ನ ಹನ್ನೆರಡು ಗಂಟೆಯ ಹೊತ್ತಿಗಾಗಲೇ ಫಿಡೆಲ್ ಆ ಪುಸ್ತಕವನ್ನು ಓದಿ ಮುಗಿಸಿ, ಅದರಲ್ಲಿದ್ದ ತಪ್ಪುಗಳನ್ನು ಕೂಡ ಮಾರ್ಕ್ವೆಜ್‌ಗೆ ತೋರಿಸಿಕೊಟ್ಟ! ಮಾರ್ಕ್ವೆಜ್ ಫಿಡೆಲ್‌ನನ್ನು ಭೇಟಿಯಾದಾಗಲೆಲ್ಲ ಬಗೆಬಗೆಯ ಪುಸ್ತಕಗಳನ್ನು ಕೊಡತೊಡಗಿದ.
ಫಿಡೆಲ್ ಕೂಡ ಬರವಣಿಗೆಯ ಖುಷಿ ಕಂಡುಕೊಂಡಿದ್ದನೆಂಬುದು ಒಮ್ಮೆ ಮಾರ್ಕ್ವೆಜ್‌ಗೆ ಗೊತ್ತಾಯಿತು. ಕಾರಿನಲ್ಲಿ ಹೋಗುವಾಗ ಫಿಡೆಲ್ ನೋಟ್‌ಬುಕ್ಕಿನಲ್ಲಿ ಬರೆಯುತ್ತಿದ್ದ. ಒಳ್ಳೆಯ ಲೇಖಕನಂತೆ ತಕ್ಕ ನುಡಿಗಟ್ಟಿಗಾಗಿ ತಡಕಾಡುತ್ತಿದ್ದ. ಬರೆದದ್ದನ್ನು ಹೊಡೆದು ಹಾಕಿ ಮಾರ್ಜಿನ್ನಿನಲ್ಲಿ ಇನ್ನೇನೋ ಸೇರಿಸುತ್ತಿದ್ದ. ಸರಿಯಾದ ಪದಕ್ಕಾಗಿ ನಿಘಂಟುಗಳನ್ನು ಹುಡುಕುತ್ತಿದ್ದ; ತನ್ನ ಆಲೋಚನೆಯನ್ನು ಹೇಳಲು ತಕ್ಕ ಪದಕ್ಕಾಗಿ ಅವರಿವರನ್ನು ಕೇಳುತ್ತಿದ್ದ.
ಕ್ಯೂಬಾದ ಕ್ರಾಂತಿಕಾರಿ ಸೇನೆಯು ಬ್ಯಾಟಿಸ್ತಾ ಸರ್ಕಾರವನ್ನು ಕಿತ್ತೊಗೆದ ಮೇಲೆ, ಸೇನೆಯ ನಾಯಕ ಫಿಡೆಲ್ ಹವಾನದಲ್ಲಿ ಏಳು ಗಂಟೆ ಕಾಲ ಮಾಡಿದ ಭಾಷಣವನ್ನು ಮಾರ್ಕ್ವೆಜ್ ಮರೆಯುವಂತೆಯೇ ಇರಲಿಲ್ಲ. ಅವತ್ತು ಎಲ್ಲಿ ಹೋದರೂ ರೇಡಿಯೋದಲ್ಲಿ ಫಿಡೆಲ್ ಭಾಷಣ ಕೇಳುತ್ತಲೇ ಇತ್ತು. ‘ಇದೊಂದು ವಿಶ್ವದಾಖಲೆಯೇ ಇರಬಹುದು’ ಎನ್ನುತ್ತಾನೆ ಮಾರ್ಕ್ವೆಜ್. ಫಿಡೆಲ್‌ನ ಸುದೀರ್ಘ ಭಾಷಣ ಕೇಳುತ್ತಾ ಅವನ ಮಾತಿನ, ವಾದದ ಮಾಂತ್ರಿಕ ಶಕ್ತಿ ಮಾರ್ಕ್ವೆಜ್‌ಗೆ ಅರಿವಾಗುತ್ತಾ ಹೋಯಿತು.
ಫಿಡೆಲ್‌ನ ಒರಟು ದನಿ ಕೇಳಿದ ಡಾಕ್ಟರು, ‘ಇನ್ನು ಐದು ವರ್ಷಗಳಲ್ಲಿ ಫಿಡೆಲ್ ಮಾತು ನಿಂತುಹೋಗುತ್ತೆ’ ಎಂದರು. ೧೯೬೨ರಲ್ಲೊಂದು ದಿನ ಫಿಡೆಲ್ ಮಾತು ನಿಂತೇಹೋಯಿತು; ಆದರೆ ಕೆಲವೇ ದಿನಗಳಲ್ಲಿ ಅವನ ಮಾತು ಮರಳಿ ಬಂತು! ಚಿಂತನೆ, ಕ್ರಿಯೆ, ಜನರ ಜೊತೆಗಿನ ಮಾತುಕತೆಯ ಮೂಲಕ ವಿಕಾಸಗೊಳ್ಳುತ್ತಿದ್ದ ಫಿಡೆಲ್ ಮಾತು ಹೇಗಿರುತ್ತಿತ್ತು ಎಂಬುದನ್ನು ಮಾರ್ಕ್ವೆಜ್ ಮಾತಿನಲ್ಲೇ ಕೇಳಿ:
‘ಸಣ್ಣಗಿನ ದನಿಯಲ್ಲಿ, ಮಾತಾಡಲೋ ಬೇಡವೋ ಎಂಬ ಅನುಮಾನದಲ್ಲೇ, ಫಿಡೆಲ್ ಮಾತು ಶುರುವಾಗುತ್ತಿತ್ತು. ಇನ್ನೂ ಖಚಿತವಿರದ ದಿಕ್ಕಿನಲ್ಲಿ, ಮಂಜಿನಲ್ಲಿ ತಡವರಿಸುವವನಂತೆ ಅವನ ಮಾತು ಮುಂದಡಿಯಿಡುತ್ತಿತ್ತು. ಫಿಡೆಲ್ ಇಂಚಿಂಚೇ ಬೇರು ಬಿಡುತ್ತಾ, ಹಟಾತ್ತನೊಮ್ಮೆ ದೊಡ್ಡ ಪಂಜದ ಹೊಡೆತದ ಮೂಲಕ ಜನರನ್ನು ಹಿಡಿದಿಟ್ಟುಕೊಳ್ಳಲಾರಂಭಿಸುತ್ತಿದ್ದ. ಆಮೇಲೆ ಜನರ ಜೊತೆಗೆ ಅವನ ಸಂವಾದ ಶುರುವಾಗುವುದು; ಜನರಿಂದ ಐಡಿಯಾಗಳನ್ನು ಪಡೆಯುವುದು, ವಾಪಸ್ ಕೊಡುವುದು ನಡೆಯತೊಡಗುತ್ತಿತ್ತು. ಇಂಥ ಉದ್ವಿಗ್ನತೆಯಲ್ಲಿ ಫಿಡೆಲ್‌ನ ಉತ್ತುಂಗ ಸ್ಥಿತಿ ಸೃಷ್ಟಿಯಾಗುವುದು. ಇದು ಅವನ ಸ್ಫೂರ್ತಿಯ ನೆಲೆ. ಈ ರಮ್ಯ ಘನತೆಯ ಉಜ್ವಲತೆಯನ್ನು ನೋಡದವರು, ಅನುಭವಿಸದೇ ಇರುವವರು ಮಾತ್ರ ಇದನ್ನು ಅಲ್ಲಗಳೆಯಬಲ್ಲರು.’
ಮಾರ್ಕ್ವೆಜ್ ಕಂಡಂತೆ, ಫಿಡೆಲ್ ಕಮ್ಯುನಿಸಮ್ಮಿನ ಕ್ಲೀಷೆಗಳನ್ನು, ವಾಸ್ತವದ ಸ್ಪರ್ಶವಿಲ್ಲದ ಭಾಷೆಯನ್ನು ಬಳಸುವವನಲ್ಲ. ಗುರು ಜೋಸ್ ಮಾರ್ತಿಯ ಮಾತುಗಳನ್ನು ಬಿಟ್ಟರೆ ಬೇರೆ ಲೇಖಕರನ್ನು ಅವನು ಹೆಚ್ಚು ಉಲ್ಲೇಖಿಸುವುದಿಲ್ಲ. ಜೋಸ್ ಮಾರ್ತಿಯ ಇಪ್ಪತ್ತೆಂಟು ಸಂಪುಟಗಳನ್ನೂ ಫಿಡೆಲ್ ಓದಿದ್ದ. ಮಾರ್ತಿಯ ಚಿಂತನೆಯನ್ನು ಕಮ್ಯುನಿಸ್ಟ್ ಕ್ರಾಂತಿಯ ರಕ್ತನಾಳಗಳ ಜೊತೆ ಬೆರೆಯುವಂತೆ ಮಾಡಿದ್ದ. ಪ್ರತಿಕೂಲ ಪರಿಸ್ಥಿತಿ ಎದುರಾದಾಗಲೆಲ್ಲ ಫಿಡೆಲ್ ತೀವ್ರವಾಗುತ್ತಿದ್ದ. ಗೆಳೆಯನೊಬ್ಬ ಒಮ್ಮೆ ಫಿಡೆಲ್‌ಗೆ ಹೇಳಿದ್ದ: ‘ಪರಿಸ್ಥಿತಿ ತೀರಾ ಬಿಗಡಾಯಿಸಿರಬೇಕು; ಅದಕ್ಕೇ ಇಷ್ಟೊಂದು ಬ್ರೈಟಾಗಿ ಕಾಣ್ತಿದೀಯ!’
ಫಿಡೆಲ್ ಮಾತಾಡುತ್ತಲೇ ಚಿಂತಿಸುತ್ತಿದ್ದ. ಚಿಂತಿಸುತ್ತಲೇ ಮಾತಾಡುತ್ತಾ ಸ್ಪಷ್ಟತೆ ಪಡೆಯುತ್ತಿದ್ದ. ಒಮ್ಮೆ ನಡುರಾತ್ರಿಯಲ್ಲಿ ಗೆಳೆಯನೊಬ್ಬನ ಮನೆಗೆ ಹೋದ ಫಿಡೆಲ್, ‘ಐದೇ ಐದು ನಿಮಿಷ’ ಎಂದು ನಿಂತೇ ಮಾತು ಶುರು ಮಾಡಿದ. ಮಾತುಕತೆ ಉಕ್ಕಿಸಿದ ಎನರ್ಜಿಯಿಂದಾಗಿ ಗಂಟೆಗಟ್ಟಲೆ ಮಾತಾಡಿದ. ಕೊನೆಗೆ ಆರಾಮಕುರ್ಚಿಯಲ್ಲಿ ಕೂತು, ‘ನಾನೀಗ ಹೊಸ ಮನುಷ್ಯನಾದೆ ಎನ್ನಿಸುತ್ತಿದೆ’ ಎಂದ. ‘ಮಾತಾಡಿ ದಣಿದ ಫಿಡೆಲ್, ಮಾತಿನಲ್ಲೇ ದಣಿವಾರಿಸಿಕೊಳ್ಳುವುದು ಹೀಗೆ’ ಎನ್ನುತ್ತಾನೆ ಮಾರ್ಕ್ವೆಜ್.
ಮಾರ್ಕ್ವೆಜ್ ಪ್ರಕಾರ, ರಾಜಕಾರಣಿ ಫಿಡೆಲ್‌ಗೆ ಇದ್ದ ಅದ್ಭುತ ಶಕ್ತಿಯೆಂದರೆ, ಒಂದು ಸಮಸ್ಯೆ ಎಲ್ಲಿ ಹುಟ್ಟಿ, ಹೇಗೆ ಬೆಳೆಯುತ್ತಿದೆ ಎಂಬುದನ್ನು ಆಳವಾಗಿ ಗ್ರಹಿಸುವುದು. ಅವನ ಈ ಗ್ರಹಿಕೆ ಕೂಡ ಹಲಬಗೆಯ ಮಾತುಕತೆಗಳ ಮೂಲಕವೇ ಬೆಳೆಯುತ್ತಾ ಹೋಗುತ್ತಿತ್ತು. ಒಮ್ಮೆ ಹಲವು ತಿಂಗಳುಗಳ ಚಿಂತನೆ, ಮಾತುಕತೆಯ ನಂತರ ಫಿಡೆಲ್, ಲ್ಯಾಟಿನ್ ಅಮೆರಿಕಾದ ದೇಶಗಳು ತೀರಿಸಬೇಕಾದ ಸಾಲ ಕುರಿತು ತರ್ಕಬದ್ಧ ವಿಶ್ಲೇಷಣೆಯೊಂದನ್ನು ಮಂಡಿಸಿದ; ‘ಈ ಸಾಲವನ್ನು ಲ್ಯಾಟಿನ್ ಅಮೆರಿಕನ್ ದೇಶಗಳು ತೀರಿಸಬೇಕಾಗಿಲ್ಲ’ ಎಂಬುದನ್ನು ತೋರಿಸಿದ.
ಫಿಡೆಲ್‌ಗಿದ್ದ ಮತ್ತೊಂದು ಶಕ್ತಿಯೆಂದರೆ ನೆನಪು. ಬೆಳಗಾಗೆದ್ದು ಸುಮಾರು ಇನ್ನೂರು ಪುಟಗಳಷ್ಟು ಸುದ್ದಿ ಓದುತ್ತಾ ಫಿಡೆಲ್‌ನ ಬೆಳಗಿನ ಉಪಹಾರ; ಪ್ರತಿದಿನ ಓದಲೇಬೇಕಾದ ಕೊನೇಪಕ್ಷ ಐವತ್ತು ದಾಖಲೆಗಳು; ಜೊತೆಗೆ ಪುಸ್ತಕಗಳು. ಫಿಡೆಲ್ ಇದನ್ನೆಲ್ಲ ಹೇಗೆ ನೆನಪಿಟ್ಟುಕೊಳ್ಳುತ್ತಾನೆ? ಅವನಿಗೆ ಟೈಮೆಲ್ಲಿ ಸಿಗುತ್ತದೆ? ಅವನ ಓದಿನ ಸ್ಪೀಡ್ ಏನು? ಇವೆಲ್ಲ ಊಹಿಸುವುದು ಕಷ್ಟ! ಅವನ ಕಾರಿನಲ್ಲಿ ಯಾವಾಗಲೂ ಓದಲು ಒಂದು ಲೈಟ್ ಇರುತ್ತಿತ್ತು. ಎಷ್ಟೋ ಸಲ ಫಿಡೆಲ್ ಬೆಳಗಿನ ಜಾವ ಗೆಳೆಯರಿಂದ ಓದಲು ಒಯ್ದ ಪುಸ್ತಕದ ಬಗ್ಗೆ ಬೆಳಬೆಳಗ್ಗೆಗಾಗಲೇ ಮಾತಾಡಿದ್ದಿದೆ. ಅವನಿಗೆ ಆರ್ಥಿಕತೆ, ಚರಿತ್ರೆಯ ಪುಸ್ತಕಗಳು ಇಷ್ಟ. ತೀಕ್ಷ್ಣ ಮಾತುಕತೆಗಳೂ ಇಷ್ಟ. ಈ ಮೂಲಕ ಫಿಡೆಲ್ ಹಲವು ದೇಶಗಳನ್ನು ಅರಿತಿದ್ದ. ಅದರಲ್ಲೂ ಅಮೆರಿಕದ ಜನ, ಅಲ್ಲಿನ ಅಧಿಕಾರ ರಚನೆಗಳು, ಅಮೆರಿಕನ್ ಸರ್ಕಾರಗಳು ಕ್ಯೂಬಾಕ್ಕೆ ಒಡ್ಡುವ ಅಡೆತಡೆಗಳು, ಅವನ್ನು ಎದುರಿಸುವ ಮಾರ್ಗಗಳು ಎಲ್ಲವನ್ನೂ ಗ್ರಹಿಸುತ್ತಿದ್ದ. ತನ್ನ ಅಧಿಕಾರಿಗಳು ಏನೇ ಸತ್ಯ ಬಚ್ಚಿಟ್ಟರೂ ಫಿಡೆಲ್‌ಗೆ ತಿಳಿಯುತ್ತಿತ್ತು…
ಫಿಡೆಲ್‌ನ ಈ ವ್ಯಾಪಕ ಓದು ಎಂಥ ವಾತಾವರಣದಲ್ಲಿ ನಡೆಯುತ್ತಿತ್ತು ಎಂಬುದನ್ನು ಗಮನಿಸಬೇಕು. ಅಮೆರಿಕದ ಸಿಐಎ ಮತ್ತು ಇನ್ನಿತರ ಶಕ್ತಿಗಳು ಅಮೆರಿಕದ ವಿರುದ್ಧ ಗಟ್ಟಿ, ದಿಟ್ಟ ದನಿಯಾಗಿದ್ದ ಫಿಡೆಲ್ ಕ್ಯಾಸ್ಟ್ರೋನನ್ನು ಮುಗಿಸಲು ೬೩೮ ಬಗೆಯ ಸಂಚುಗಳನ್ನು ರೂಪಿಸಿದ್ದ ದಶಕಗಳವು. ಆ ಕುರಿತ ದಾಖಲೆಗಳೇ ಇವೆ. ಅಂಥ ವಾತಾವರಣದಲ್ಲಿ ಕ್ಯಾಸ್ಟ್ರೋನನ್ನು ಚಿಂತಕನನ್ನಾಗಿ ಮಾಡಿದ, ಪೊರೆದ ಈ ಪುಸ್ತಕಗಳನ್ನು, ಬರಹಗಳನ್ನು ಅವನು ಹೇಗೆ, ಎಲ್ಲಿ ಓದಿದ ಎಂಬುದನ್ನು ಊಹಿಸಿಕೊಳ್ಳುವುದೂ ಕಷ್ಟ. ಓದಲು ಟೈಮಿಲ್ಲ ಎನ್ನುವ ಸೋಮಾರಿಗಳು ಈ ಮಹಾನ್ ’ಓದುಪಯಣ’ವನ್ನು ಗಮನಿಸಲಿ ಎಂಬುದು ಈ ಲೇಖನವನ್ನು ಇಲ್ಲಿ ಕೊಡಲು ಮತ್ತೊಂದು ಕಾರಣ.
ಲೋಕದ ದೊಡ್ಡ ನಾಯಕನೊಬ್ಬನನ್ನು ಕುರಿತು ಜಗತ್ತಿನ ದೊಡ್ಡ ಲೇಖಕನೊಬ್ಬ ಕೊಟ್ಟಿರುವ ಈ ಆತ್ಮೀಯ ಚಿತ್ರಗಳನ್ನು ನೋಡುತ್ತಿದ್ದರೆ ಫಿಡೆಲ್‌ನಂಥ ನಾಯಕನ ಚಾಲಕ ಶಕ್ತಿಗೆ ನೆರವಾದ ಓದು, ಆ ಓದಿನ ಮೂಲಕವೂ ಇಂದಿನ ಬಂಡವಾಳಶಾಹಿಯ ಕ್ರೌರ್ಯವನ್ನು ಎದುರಿಸಲು ಚಿಂತಕ-ನಾಯಕನಾಗಿ ಫಿಡೆಲ್ ಹುಡುಕಿಕೊಂಡ ಹಾದಿ… ಎಲ್ಲವೂ ಕಾಣತೊಡಗುತ್ತವೆ. ’ಸಾಹಿತ್ಯ ಸೃಷ್ಟಿಯಲ್ಲಿ ಲೇಖಕನಿಗೆ ಸಿದ್ಧಾಂತಗಳಿಂದ ಮುಕ್ತವಾದ ಸ್ವಾಯತ್ತತೆಯಿರಬೇಕು’ ಎಂದು ಖಚಿತವಾಗಿ ನಂಬಿದ್ದ ಮಾರ್ಕ್ವೆಜ್, ಕಮಿಟೆಡ್ ಕಮ್ಯುನಿಸ್ಟ್ ಫಿಡೆಲ್ ಕ್ಯಾಸ್ಟ್ರೋನನ್ನು ಯಾಕೆ ದೊಡ್ಡ ನಾಯಕನೆಂದು ಒಪ್ಪಿಕೊಂಡಿದ್ದ ಎಂಬ ಸಂಕೀರ್ಣ ಅಂಶವನ್ನು ಕುರಿತು ಲೇಖಕ, ಲೇಖಕಿಯರು ಗಾಢವಾಗಿ ಯೋಚಿಸಬೇಕು.
ಬ್ಲಾಗ್ ಫಾಲೋ ಮಾಡಲು ಒಪ್ಪಿ, ಕ್ಲಿಕ್ ಮಾಡಿ; ನೋಟಿಫಿಕೇಶನ್ ಪಡೆಯಿರಿ, ಶೇರ್ ಮಾಡಿ: FOLLOW
ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com
ಬಿಡುವಾದಾಗ ನೋಡಿ, ಶೇರ್ ಮಾಡಿ: https://www.youtube.com/@NatarajHuliyarYT
Comments
17 Comments
| Gangadhara BM
\'ಓದುಪಯಣ\' ಕ್ಕೆ ಪ್ರೇರಣೆ ನೀಡುವ ಲೇಖನ. ಧನ್ಯವಾದಗಳು ಸರ್. ಮಾರ್ಕ್ವೆಜ್ ಮತ್ತು ಫಿಡೆಲ್ ಕ್ಯಾಸ್ಟ್ರೋ \'ರಕ್ಕಸ ಓದುಗರು\' ಎನ್ನುವುದು ಈ ಲೇಖನ ದಿಂದ ತಿಳಿಯಿತು. ತಾವೂ ಸಹ.
| B.M.Basheer
ಓದಲು ಸ್ಫೂರ್ತಿ ಕೊಡುವ ಓದು... ವಂದನೆಗಳು ಸರ್.
| B.M.Basheer
ಓದಲು ಸ್ಫೂರ್ತಿ ಕೊಡುವ ಓದು... ವಂದನೆಗಳು ಸರ್.
| ದೇವಿಂದ್ರಪ್ಪ ಬಿ.ಕೆ.
\r\n\r\n---------- Forwarded message \r\nಈ ಲೇಖನವು ಎರಡು ಕಾರಣಕ್ಕೆ ಮುಖ್ಯ. ಯುವ ಪೀಳಿಗೆಯು ಓದಿನಿಂದ ದೂರವಾಗುವ ಹೊತ್ತಿನಲ್ಲಿ ಓದಿನ ಕ್ರಮ ರೂಢಿಸಿಕೊಳ್ಳಲು ಬೇಕಾದ ದಾರಿಯನ್ನು ಇದು ತೋರಿಸುತ್ತದೆ. ಎರಡು ಸಾಹಿತ್ಯ ಮತ್ತು ರಾಜಕಾರಣ ಒಂದಕ್ಕೊಂದು ಅವಿನಾಭಾವ ಸಂಬಂಧ ಹೊಂದಿವೆ. ಕಾಲಕಾಲಕ್ಕೆ ಸಾಹಿತ್ಯವು ರಾಜಕಾರಣವನ್ನು ಪ್ರೋತ್ಸಾಹಿಸುವ, ವಿರೋಧಿಸುವ ಗುಣವನ್ನು ಕಾಪಾಡಿಕೊಂಡು ಬಂದಿದೆ. ಕನ್ನಡ ಸಾಹಿತ್ಯವನ್ನು ಸುಮ್ಮನೆ ಗಮನಿಸಿದಾಗ ಇಲ್ಲಿ ಪ್ರಭುತ್ವಕ್ಕೆ ವಿರುದ್ಧವಾಗಿ ಸಾಹಿತ್ಯ ರಚನೆಗೊಂಡಿರುವುದನ್ನು ನನ್ನ ಓದಿನ ಮಿತಿಯಲ್ಲಿ ಕಂಡುಕೊಂಡಿದ್ದೇನೆ. ಪಂಪನ ಆದಿಯಾಗಿ ರಚನೆಗೊಂಡ ಕಾವ್ಯವನ್ನು ಗಮನಿಸಬಹುದು. ಕೆಲವು ಕಡೆ ಕವಿಗಳು ತಮ್ಮ ಆಶ್ರಯದಾತರ ಬಗ್ಗೆ ಹೊಗಳಿದ್ದು ಇದೆ. \r\nಪಾಶ್ಚಾತ್ಯರಲ್ಲಿ ಗಮನಿಸಿದಾಗ ಸಾಹಿತ್ಯ ಮತ್ತು ರಾಜಕಾರಣದ ಬಗ್ಗೆ ಸ್ಪಷ್ಟ ನಿಲುವು ಸಿಗುವುದು ಫಿಡೆಲ್ ಕ್ಯಾಸ್ಟ್ರೋ ಮತ್ತು ಮಾರ್ಕ್ವೇಜ್ ನಡುವೆ. ಇವರಿಬ್ಬರೂ ಸಾಹಿತ್ಯದ ಜೊತೆಗೆ ತಮ್ಮ ಮಾನವೀಯ ಸಂಬಂಧವನ್ನು ಕಾಪಾಡಿಕೊಂಡು ಬಂದಿದ್ದಾರೆ. ಸದಾ ಹೊಸ ಪುಸ್ತಕಗಳಿಗಾಗಿ ಹಂಬಲಿಸುವ ರಾಜಕಾರಣಿಗಳಲ್ಲಿ ಫಿಡೆಲ್ ಕ್ಯಾಸ್ಟ್ರೋ ಭಿನ್ನವಾಗಿ ನಿಲ್ಲುತ್ತಾನೆ. ನನ್ನ ನೆಚ್ಚಿನ ಲೇಖಕ ಮಾರ್ಕ್ವೇಜ್. ಆತನ ನೆಚ್ಚಿನ ನಾಯಕ ಮತ್ತು ಸ್ನೇಹಿತನಾದ ಫಿಡೆಲ್ ಕ್ಯಾಸ್ಟ್ರೋ ಬಗೆಗಿನ ನಿಲುವು ಸದಾಕಾಲ ನಮ್ಮ ಮುಂದೆ ನಿಲ್ಲುವಂತಹವು. ಪುಸ್ತಕ ಓದಿದಂತೆಲ್ಲ ನಮ್ಮ ವಿಚಾರಗಳು ಪ್ರಖರಗೊಳ್ಳುತ್ತವೆ. ಹೊಸತನಕ್ಕೆ ಹಂಬಲಿಸುತ್ತಾ ಇರುತ್ತೇವೆ. ಇಂತಹ ಅಪರೂಪದ ವ್ಯಕ್ತಿ ಫಿಡೆಲ್ ಕ್ಯಾಸ್ಟ್ರೋ ಎಂದರೆ ನಿಜ್ಕಕೂ ಆಶ್ಚರ್ಯ. ಒಂದು ದೇಶವನ್ನು ಮುನ್ನಡೆಸುವುದು ಸಾಮಾನ್ಯ ಕೆಲಸವಲ್ಲ. ಆದರೆ ಸಾಹಿತ್ಯದ ಒಡನಾಟ ಹೊಂದಿದವರಿಗೆ ಜನರ ನಾಡಿ ಮಿಡಿತ ಬೇಗನೇ ಅರ್ಥ ಆಗುತ್ತದೆ. ಓದಲು ಟೈಮಿಲ್ಲ ಎನ್ನುವ ವಿದ್ಯಾರ್ಥಿಗಳಿಗೆ ಈ ಲೇಖನ ಒಂದು ದಾರಿದೀಪ
| Mohan
ಓದಲು ಸಮಯವಿಲ್ಲ ಎಂದು ಹೇಳುವ ಎಲ್ಲ ಓದುಗಳ್ಳರಿಗೂ ಈ ಲೇಖನ ಒಂದು ದೊಡ್ಡ ಪಾಠದಂತಿದೆ
| Vijayendra Kumar G L
\r\nನಮಸ್ತೆ ಸರ್,\r\n\r\n\'ಓದಬೇಕಾಗಿರುವ ಪುಸ್ತಕಗಳು ಕಾಯುತ್ತಿವೆ\' ಲೇಖನ ಓದುವಾಗ, ನೀವು ಈ ಹಿಂದೆ ಬರೆದಿದ್ದ \'ಓದದ ಪುಸ್ತಕಗಳ ಭಯ\' ಎಂಬ ಲೇಖನ ನೆನಪಾಯಿತು ಸರ್. \r\n\r\nನಮ್ಮ ಗ್ರಂಥಾಲಯಗಳಲ್ಲಿ ಕನ್ನಡಿ ಇರುವ ಕಪಾಟುಗಳಲ್ಲಿ ಕಂಗೊಳಿಸುತ್ತಿರುವ ಪುಸ್ತಕಗಳನ್ನು ನೋಡಿದಾಗ, ವರ್ಷಕ್ಕೊಮ್ಮೆ ನಮ್ಮ ಕಾಲೇಜು ಗ್ರಂಥಾಲಯದ ಸ್ಟಾಕ್ ವೆರಿಫಿಕೇಶನ್ ಮಾಡುವಾಗ, ನಿಮ್ಮಂತಹ ಲೇಖಕರು ತಮ್ಮ ಬರಹಗಳಲ್ಲಿ ನೀಡುವ ರೆಫರೆನ್ಸ್ ಗಳನ್ನು ನೋಡಿದಾಗ ನಾವು ಓದಬೇಕಾಗಿರುವ ಹಲವಾರು ಪುಸ್ತಕಗಳು ನಮಗಾಗಿಯೇ ಕಾಯುತ್ತಿವೆ ಅಂತ ಫೀಲ್ ಆಗುತ್ತೆ. \r\n\r\nಪಠ್ಯಕ್ರಮವನ್ನು ಗಮನದಲ್ಲಿಟ್ಟುಕೊಂಡು ಬಂದ ಪುಸ್ತಕಗಳು, ಹೆಚ್ಚಿನ ಓದಿಗಾಗಿ ನಾವೇ ಆಯ್ಕೆ ಮಾಡಿ ತರಿಸಿಕೊಂಡಿರುವ ಪುಸ್ತಕಗಳು ನಮ್ಮ ಕಾಲೇಜು ಗ್ರಂಥಾಲಯಗಳಲ್ಲಿ ಓದುವವರ ಪ್ರೀತಿ-ಕಾಳಜಿಗಳಿಲ್ಲದೆ ನರಳುತ್ತಿವೆ. \r\n\r\nವಿಶೇಷವಾಗಿ, ನಾನು ಕನ್ನಡ ಮತ್ತು ಇಂಗ್ಲಿಷ್ ವಿಭಾಗದ ಪುಸ್ತಕಗಳನ್ನು ಗಮನಿಸಿದ್ದೇನೆ. ನಾವು ಅತ್ಯಂತ ಶ್ರೇಷ್ಠವೆಂದು ಭಾವಿಸಿರುವ ಎಷ್ಟೋ ಪುಸ್ತಕಗಳನ್ನು ಇದುವರೆಗೆ ಒಮ್ಮೆಯೂ ಅಧ್ಯಾಪಕರಾಗಲೀ ವಿದ್ಯಾರ್ಥಿಗಳಾಗಲೀ ಸಬ್ ಸ್ಕ್ರೈಬ್ ಮಾಡದಿರುವುದನ್ನು ಕಂಡಿದ್ದೇನೆ. ಓದುವ ಆಸೆಯಿಂದ ಕೊಂಡುಕೊಂಡಿರುವ ಪುಸ್ತಕಗಳೂ ಸಹ ಇತ್ತೀಚೆಗೆ ನಮ್ಮ ಬಿಡುವಿಗಾಗಿ ನಮ್ಮ ಟೇಬಲ್ ಮೇಲೆ ತಾಳ್ಮೆಯಿಂದ ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಸರ್.\r\n\r\nಒಂದು ಕಾಲಕ್ಕೆ ನಾವು ಮೆಚ್ಚಿದ ಪುಸ್ತಕಗಳನ್ನು ದೃಷ್ಟಿಯಾಗುವಷ್ಟು ಕಣ್ಣು ಹಾಕುತ್ತಿದ್ದೆವು. ಅವು ನೋಡ ನೋಡುತ್ತಿದ್ದಂತೆಯೇ ಗ್ರಂಥಾಲಯಗಳಿಂದ ಕಾಣೆಯಾಗುತ್ತಿದ್ದವು! ಅದೊಂದು ಸಾಹಸದ ಕೆಲಸ ಎಂಬಂತೆ ನಮಗೆ ಹೆಚ್ಚು ಆತ್ಮೀಯರಾದ ಸಹಪಾಠಿಗಳ ಹತ್ತಿರ ಹೇಳಿಕೊಳ್ಳುತ್ತಿದ್ದೆವು. ಆದರೆ ಈಗ ಪುಸ್ತಕಗಳು ಕಳುವಾಗುತ್ತಲೇ ಇಲ್ಲ ಸರ್.\r\n\r\nವಿದ್ಯಾರ್ಥಿಗಳಿರಲಿ; ನಮ್ಮ ಬಹಳಷ್ಟು ಅಧ್ಯಾಪಕರೂ ಸಹ ಪಠ್ಯಪುಸ್ತಕಗಳಿಗೆ ಮಾತ್ರವೇ ಸೀಮಿತವಾಗಿದ್ದಾರೆ. ಇನ್ನು ಕೆಲವು ಮಹಾನುಭಾವರು ಪಠ್ಯಪುಸ್ತಕ ಸಹ ಕೊಂಡುಕೊಳ್ಳುವುದಿಲ್ಲ. ಕೈಬೀಸಿಕೊಂಡು ತರಗತಿಗಳಿಗೆ ಹೋಗಿ, ವಿದ್ಯಾರ್ಥಿಗಳ ಹತ್ತಿರ ಪುಸ್ತಕವನ್ನೋ ಜೆರಾಕ್ಸ್ ಕಾಪಿಯನ್ನೋ ತೆಗೆದುಕೊಂಡು ಅಲ್ಲಿ ಪಠ್ಯದ ಮೊದಲ ಓದನ್ನು ಆರಂಭಿಸುತ್ತಾರೆ. ಇನ್ನೂ ಕೆಲವರು ಆ ರಿಸ್ಕ್ ಸಹ ತೆಗೆದುಕೊಳ್ಳದೆ, ವಿದ್ಯಾರ್ಥಿಗಳಿಂದಲೇ ಓದಿಸಿ, ವಿದ್ಯಾರ್ಥಿಗಳ ಪ್ರತಿಭಾ ಪರೀಕ್ಷೆ ನಡೆಸುವ ನಾಟಕವಾಡಿ ಕಾಲಯಾಪನೆ ಮಾಡುತ್ತಾರೆ.\r\nಉತ್ಪ್ರೇಕ್ಷೆ ಎನಿಸಿದರೂ ಇದು ವಾಸ್ತವ ಸಂಗತಿ ಸರ್.\r\n\r\nಸೋಮಾರಿತನ ಮತ್ತು ಬೇಜವಾಬ್ದಾರಿತನದ ಪರಮಾವಧಿಯನ್ನು ನಮ್ಮ ಬಹುಪಾಲು ಅಧ್ಯಾಪಕರು ತಲುಪಿದ್ದಾರೆ. ಅಧ್ಯಾಪಕರು ಕೇವಲ ಪುಸ್ತಕಗಳನ್ನ ಅಷ್ಟೇ ಅಲ್ಲ, ಮೌಲ್ಯಮಾಪನ ಸಂದರ್ಭದಲ್ಲಿ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಸಹ ಓದುವುದಿಲ್ಲ. ಓದದೆಯೇ ಅಂಕ ನೀಡುತ್ತಾರೆ. \r\n\r\nಶೈಕ್ಷಣಿಕವಾಗಿ ಮತ್ತು ಸಾಹಿತ್ಯಕವಾಗಿ ನಮ್ಮಲ್ಲಿ ಬಹುಪಾಲು ಮಂದಿ \'ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣಿತಮತಿಗಳ್\' ಆಗಿದ್ದಾರೆ.\r\n\r\nಈ ನಿಟ್ಟಿನಲ್ಲಿ, ನಮ್ಮ ದೌರ್ಬಲ್ಯ ಎಲ್ಲಿದೆ ಎಂಬುದನ್ನು ನಿಮ್ಮ ಬರಹ ಸೂಚಿಸುತ್ತಿದೆ.\r\n\r\nಧನ್ಯವಾದಗಳು ಸರ್. 🙏\r\n\r\n\r\n\r\n
| Vijayendra Kumar G L
ನಮಸ್ತೆ ಸರ್,\r\n\r\n\'ಓದಬೇಕಾಗಿರುವ ಪುಸ್ತಕಗಳು ಕಾಯುತ್ತಿವೆ\' ಲೇಖನ ಓದುವಾಗ, ನೀವು ಈ ಹಿಂದೆ ಬರೆದಿದ್ದ \'ಓದದ ಪುಸ್ತಕಗಳ ಭಯ\' ಎಂಬ ಲೇಖನ ನೆನಪಾಯಿತು ಸರ್. \r\n\r\nನಮ್ಮ ಗ್ರಂಥಾಲಯಗಳಲ್ಲಿ ಕನ್ನಡಿ ಇರುವ ಕಪಾಟುಗಳಲ್ಲಿ ಕಂಗೊಳಿಸುತ್ತಿರುವ ಪುಸ್ತಕಗಳನ್ನು ನೋಡಿದಾಗ, ವರ್ಷಕ್ಕೊಮ್ಮೆ ನಮ್ಮ ಕಾಲೇಜು ಗ್ರಂಥಾಲಯದ ಸ್ಟಾಕ್ ವೆರಿಫಿಕೇಶನ್ ಮಾಡುವಾಗ, ನಿಮ್ಮಂತಹ ಲೇಖಕರು ತಮ್ಮ ಬರಹಗಳಲ್ಲಿ ನೀಡುವ ರೆಫರೆನ್ಸ್ ಗಳನ್ನು ನೋಡಿದಾಗ ನಾವು ಓದಬೇಕಾಗಿರುವ ಹಲವಾರು ಪುಸ್ತಕಗಳು ನಮಗಾಗಿಯೇ ಕಾಯುತ್ತಿವೆ ಅಂತ ಫೀಲ್ ಆಗುತ್ತೆ. \r\n\r\nಪಠ್ಯಕ್ರಮವನ್ನು ಗಮನದಲ್ಲಿಟ್ಟುಕೊಂಡು ಬಂದ ಪುಸ್ತಕಗಳು, ಹೆಚ್ಚಿನ ಓದಿಗಾಗಿ ನಾವೇ ಆಯ್ಕೆ ಮಾಡಿ ತರಿಸಿಕೊಂಡಿರುವ ಪುಸ್ತಕಗಳು ನಮ್ಮ ಕಾಲೇಜು ಗ್ರಂಥಾಲಯಗಳಲ್ಲಿ ಓದುವವರ ಪ್ರೀತಿ-ಕಾಳಜಿಗಳಿಲ್ಲದೆ ನರಳುತ್ತಿವೆ. \r\n\r\nವಿಶೇಷವಾಗಿ, ನಾನು ಕನ್ನಡ ಮತ್ತು ಇಂಗ್ಲಿಷ್ ವಿಭಾಗದ ಪುಸ್ತಕಗಳನ್ನು ಗಮನಿಸಿದ್ದೇನೆ. ನಾವು ಅತ್ಯಂತ ಶ್ರೇಷ್ಠವೆಂದು ಭಾವಿಸಿರುವ ಎಷ್ಟೋ ಪುಸ್ತಕಗಳನ್ನು ಇದುವರೆಗೆ ಒಮ್ಮೆಯೂ ಅಧ್ಯಾಪಕರಾಗಲೀ ವಿದ್ಯಾರ್ಥಿಗಳಾಗಲೀ ಸಬ್ ಸ್ಕ್ರೈಬ್ ಮಾಡದಿರುವುದನ್ನು ಕಂಡಿದ್ದೇನೆ. ಓದುವ ಆಸೆಯಿಂದ ಕೊಂಡುಕೊಂಡಿರುವ ಪುಸ್ತಕಗಳೂ ಸಹ ಇತ್ತೀಚೆಗೆ ನಮ್ಮ ಬಿಡುವಿಗಾಗಿ ನಮ್ಮ ಟೇಬಲ್ ಮೇಲೆ ತಾಳ್ಮೆಯಿಂದ ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಸರ್.\r\n\r\nಒಂದು ಕಾಲಕ್ಕೆ ನಾವು ಮೆಚ್ಚಿದ ಪುಸ್ತಕಗಳನ್ನು ದೃಷ್ಟಿಯಾಗುವಷ್ಟು ಕಣ್ಣು ಹಾಕುತ್ತಿದ್ದೆವು. ಅವು ನೋಡ ನೋಡುತ್ತಿದ್ದಂತೆಯೇ ಗ್ರಂಥಾಲಯಗಳಿಂದ ಕಾಣೆಯಾಗುತ್ತಿದ್ದವು! ಅದೊಂದು ಸಾಹಸದ ಕೆಲಸ ಎಂಬಂತೆ ನಮಗೆ ಹೆಚ್ಚು ಆತ್ಮೀಯರಾದ ಸಹಪಾಠಿಗಳ ಹತ್ತಿರ ಹೇಳಿಕೊಳ್ಳುತ್ತಿದ್ದೆವು. ಆದರೆ ಈಗ ಪುಸ್ತಕಗಳು ಕಳುವಾಗುತ್ತಲೇ ಇಲ್ಲ ಸರ್.\r\n\r\nವಿದ್ಯಾರ್ಥಿಗಳಿರಲಿ; ನಮ್ಮ ಬಹಳಷ್ಟು ಅಧ್ಯಾಪಕರೂ ಸಹ ಪಠ್ಯಪುಸ್ತಕಗಳಿಗೆ ಮಾತ್ರವೇ ಸೀಮಿತವಾಗಿದ್ದಾರೆ. ಇನ್ನು ಕೆಲವು ಮಹಾನುಭಾವರು ಪಠ್ಯಪುಸ್ತಕ ಸಹ ಕೊಂಡುಕೊಳ್ಳುವುದಿಲ್ಲ. ಕೈಬೀಸಿಕೊಂಡು ತರಗತಿಗಳಿಗೆ ಹೋಗಿ, ವಿದ್ಯಾರ್ಥಿಗಳ ಹತ್ತಿರ ಪುಸ್ತಕವನ್ನೋ ಜೆರಾಕ್ಸ್ ಕಾಪಿಯನ್ನೋ ತೆಗೆದುಕೊಂಡು ಅಲ್ಲಿ ಪಠ್ಯದ ಮೊದಲ ಓದನ್ನು ಆರಂಭಿಸುತ್ತಾರೆ. ಇನ್ನೂ ಕೆಲವರು ಆ ರಿಸ್ಕ್ ಸಹ ತೆಗೆದುಕೊಳ್ಳದೆ, ವಿದ್ಯಾರ್ಥಿಗಳಿಂದಲೇ ಓದಿಸಿ, ವಿದ್ಯಾರ್ಥಿಗಳ ಪ್ರತಿಭಾ ಪರೀಕ್ಷೆ ನಡೆಸುವ ನಾಟಕವಾಡಿ ಕಾಲಯಾಪನೆ ಮಾಡುತ್ತಾರೆ.\r\nಉತ್ಪ್ರೇಕ್ಷೆ ಎನಿಸಿದರೂ ಇದು ವಾಸ್ತವ ಸಂಗತಿ ಸರ್.\r\n\r\nಸೋಮಾರಿತನ ಮತ್ತು ಬೇಜವಾಬ್ದಾರಿತನದ ಪರಮಾವಧಿಯನ್ನು ನಮ್ಮ ಬಹುಪಾಲು ಅಧ್ಯಾಪಕರು ತಲುಪಿದ್ದಾರೆ. ಅಧ್ಯಾಪಕರು ಕೇವಲ ಪುಸ್ತಕಗಳನ್ನ ಅಷ್ಟೇ ಅಲ್ಲ, ಮೌಲ್ಯಮಾಪನ ಸಂದರ್ಭದಲ್ಲಿ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಸಹ ಓದುವುದಿಲ್ಲ. ಓದದೆಯೇ ಅಂಕ ನೀಡುತ್ತಾರೆ. \r\n\r\nಶೈಕ್ಷಣಿಕವಾಗಿ ಮತ್ತು ಸಾಹಿತ್ಯಕವಾಗಿ ನಮ್ಮಲ್ಲಿ ಬಹುಪಾಲು ಮಂದಿ \'ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣಿತಮತಿಗಳ್\' ಆಗಿದ್ದಾರೆ.\r\n\r\nಈ ನಿಟ್ಟಿನಲ್ಲಿ, ನಮ್ಮ ದೌರ್ಬಲ್ಯ ಎಲ್ಲಿದೆ ಎಂಬುದನ್ನು ನಿಮ್ಮ ಬರಹ ಸೂಚಿಸುತ್ತಿದೆ.\r\n\r\nಧನ್ಯವಾದಗಳು ಸರ್. 🙏\r\n\r\n\r\n\r\n
| Dr. VIJAYENDRA KUMAR G. L.
ಫಿಡೆಲ್ ಕ್ಯಾಸ್ಟ್ರೋ ನಂತಹ ಬೆಸ್ಟ್ ರಾಜಕಾರಣಿಯ ಎಕ್ಸಾಂಪಲ್ ಕೊಟ್ಟು, ಬಿಡುವಿಲ್ಲದ ಬದುಕಿನಲ್ಲಿ ಪುಸ್ತಕದ ಓದಿಗೆ ಮತ್ತು ಚರ್ಚೆಗೆ ಬಿಡುವು ಮಾಡಿಕೊಳ್ಳುವ ಬಗೆಯನ್ನು ಅರ್ಥ ಮಾಡಿಸುವ ಲೇಖನ - \'ಓದಬೇಕಾದ ಪುಸ್ತಕಗಳು ಕಾಯುತ್ತಿವೆ\'
| Shamarao
ಪುಸ್ತಕಗಳ ಓದು ಹಾಗೂ ಲೇಖಕನೊಬ್ಬನ ಸ್ನೇಹ ಆಡಳಿತಗಾರನೊಬ್ಬನನ್ನು ರೂಪಿಸಿದ ಅಪರೂಪದ ಚಿತ್ರಣ. ನಮಗಾಗಿ ಕಾಯುತ್ತಿರುವ ಪುಸ್ತಕಗಳನ್ನು ಓದಲು ಉಳಿದಿರುವ ಕಾಲ ಸಾಲದು.
| Udaykumar Habbu
ನನಗೂ ಹಲವು ಪುಸ್ರಕಗಳು ಕಾಯುತ್ತಿವೆ ಅವನ್ನೆಲ್ಲ ಖರೀದಿಸಿ ಇಟ್ಟಿದ್ದೇನೆ ಸಾಯುವ ಮೊದಲು ಓದಿ ಮುಗಿಸಬೇಕೆಂಬ ಇರಾದೆ ಇದೆ ಆದರೆ ತುಂಬ ಓದು ಸಾಹಿತಿಯ ಸೃಜನಶೀಲತೆಗೆ ಬಹು ದೊಡ್ಡ ತೊಡಕು. ಅಲ್ಲವೆ ಸರ್?!
| Dr.Prabhakar
Great writing. All these days I had thought Fidel was just another Communist leader. But to my surprise I learnt from your articka that he was a great intellectual and thinker!
|
|
| ಪುಟ್ಟಸ್ವಾಮಿ ಕೆ
ಜಗತ್ತಿನ ಬಹುತೇಕ ಪರಿವರ್ತನೆಯ ಹರಿಕಾರರು ( ಕ್ರಾಂತಿಕಾರಿಗಳು ಪದದ ಬದಲು )ದೊಡ್ಡ ಓದುಗರು. ಅನೇಕ ಮೂಲಗಳಿಂದ ಓದಿ ಪಡೆದ ತಿಳಿವಳಿಕೆಯನ್ನು ಜನರ ನಡುವೆ ಹೋಗಿ ಪರೀಕ್ಷಿಸಿದ ನಂತರ ಅದನ್ನು ಹೋರಾಟದ ಆಯುಧವಾಗಿ ಮಾಡಿಕೊಳ್ಳುತ್ತಿದ್ದರು. ಬುದ್ಧ, ಯೇಸು, ಮಹಮ್ಮದ್, ಲೆನಿನ್, ಮಾವೋ, ಲೋಹಿಯಾ, ಲಿಂಕನ್, ಫಿಡೆಲ್, ಚೆ, ಮುಂತಾದ ನಾಯಕರು ಈ ಗುಂಪಿನವರು. ನನಗೆ ತಿಳಿದಿರುವಂತೆ ಈ ಪ್ರಖರ ನಾಯಕರ ಸಾಲಿನಲ್ಲಿ ನಮ್ಮ ಕಾಲದಲ್ಲಿ ನಿಲ್ಲಬಲ್ಲವರು ಪ್ರೊ ಎಂ ಡಿ ಎನ್ ಒಬ್ಬರೇ.
| ಡಾ. ನಿರಂಜನ ಮೂರ್ತಿ ಬಿ ಎಂ
ಫಿಡೆಲ್ ಕ್ಯಾಸ್ಟ್ರೊ ಒಬ್ಬ ಸೇನಾನಾಯಕ ಹಾಗೂ ಕಮ್ಯುನಿಸ್ಟ್ ರಾಜಕಾರಣಿ ಅಂತ ಮಾತ್ರ ಗೊತ್ತಿತ್ತು. ಆದರೆ ಆತನೊಬ್ಬ ರಾಕ್ಷಸ ಓದುಗ ಅಂತ ಗೊತ್ತಾಗಿ ಆಶ್ಚರ್ಯವಾಯಿತು. ಆತನ ಓದಿನ ವೇಗವೂ ಭಯಂಕರ. ಅಷ್ಟೊಂದು ವೇಗವಾಗಿ ಓದುವುದಲ್ಲದೆ, ಅದನ್ನು ನೆನಪಿಟ್ಟುಕೊಂಡು ಅದರ ಬಗ್ಗೆ ಮಾತನಾಡಿರುವುದನ್ನು ನೋಡಿದರೆ ಆತನೊಬ್ಬ ಗಂಭೀರ ಓದುಗನಾಗಿದ್ದ ಎಂಬುದು ಗೊತ್ತಾಗಿ ಆತನ ಬಗ್ಗೆ ಭಕ್ತಿಭಾವ ಮೂಡಿದೆ. ಹಾಗೆಯೇ ಆತನೊಬ್ಬ ಪ್ರಚಂಡ ಮಾತುಗಾರ-ಭಾಷಣಕಾರ ಆಗಿದ್ದನೆನ್ನುವುದು ಮತ್ತು ಏಳು ತಾಸುಗಳ ಕಾಲ ನಿರಂತರವಾಗಿ ಮಾತನಾಡಿದ್ದನೆನ್ನುವುದು ಕೂಡ ಅತ್ಯಾಶ್ಚರ್ಯಕರವಾದ ಸಂಗತಿಯೇ ಸರಿ. ಇಂತಹ ನಾಯಕ-ಓದುಗನನ್ನು ಗುರುತಿಸಿ ಗೆಳೆಯನನ್ನಾಗಿ ಮಾಡಿಕೊಂಡ ಮಾರ್ಕ್ವೆಜ್ ಕೂಡ ಈ ಜಗತ್ತು ಕಂಡ ಅಪರೂಪದ ಮಾನವ ಮತ್ತು ಲೇಖಕ!\r\n\r\nಸಾಹಿತ್ಯದ ಓದು ಪ್ರಾಮಾಣಿಕ, ಮಾನವೀಯ ಅಂತಃಕರಣವುಳ್ಳ ರಾಜಕೀಯ ನಾಯಕನನ್ನು ಸೃಷ್ಟಿಸಬಲ್ಲದೆಂಬುದು ಋಜುವಾತಾಗಿದೆ! ಇಂತಹ ಅದ್ಭುತವಾದ ಓದನ್ನು ಉಣಬಡಿಸಿರುವ ಹುಳಿಯಾರರಿಗೆ ನಮನಗಳು. ಓದಿಸಿಕೊಳ್ಳಲು ಕಾಯುತ್ತಿರುವ ಪುಸ್ತಕಗಳ ನೆನಪಾಗಿ ನಡುಕವುಂಟಾಗುತ್ತಿದೆ!
| Shamarao
ಫಿಡೆಲ್ ಕ್ಯಾಸ್ಟ್ರೋ ಎಂದ ತಕ್ಷಣ ನನಗೆ ನೆನಪಾಗುವುದು ಇಂದಿರಾಗಾಂಧಿ ಯವರಿಗೆ ಅವರು ಕೊಟ್ಟ ಕರಡಿ ಅಪ್ಪುಗೆ
|
Add Comment