ಬರೆವವರ ಇರುಳು, ನಸುಕು!
by Nataraj Huliyar
ಟಾಲ್‌ಸ್ಟಾಯ್‌ಗೆ ಬರೆಯಲು ನಸುಕಿನ ಸಮಯ ಪ್ರಶಾಂತ ಮತ್ತು ಚಂದ ಅನ್ನಿಸಿತ್ತು; ದಾಸ್ತೋವಸ್ಕಿಗೆ ರಾತ್ರಿ ಬರೆಯುವುದು ಹೆಚ್ಚು ಒಗ್ಗುತ್ತಿತ್ತು! ಈ ಇಬ್ಬರು ಮಹಾನ್ ರಶ್ಯನ್ ಲೇಖಕರ ಬರವಣಿಗೆಯ ಕಾಲದ ಆಯ್ಕೆ ಕುರಿತ ಒಂದು ಅಚ್ಚರಿಯ ಪ್ರಶ್ನೆ ನನ್ನೊಳಗೆ ಹಾಗೇ ಉಳಿದಿದೆ: 'ಟಾಲ್‌ಸ್ಟಾಯ್ ಹಾಗೂ ದಾಸ್ತೋವಸ್ಕಿ ಬರೆಯುವ ಹೊತ್ತನ್ನು ಆರಿಸಿಕೊಂಡಿರುವುದಕ್ಕೂ, ಅವರ ಬರವಣಿಗೆಯಲ್ಲಿ ಹಬ್ಬಿಕೊಳ್ಳುವ ಲೋಕಕ್ಕೂ ಸಂಬಂಧವಿರಬಹುದೇ?'
ಈ ಅಚ್ಚರಿ ಇವರಿಬ್ಬರ ಬರವಣಿಗೆಯ ಬಗ್ಗೆ ಅರೆಸಂಶೋಧಕರಂತೆ ಹುಸಿ ಥಿಯರೈಸ್ ಮಾಡುವ ಪ್ರಚೋದನೆಗೂ ನನ್ನನ್ನು ದೂಡಲೆತ್ನಿಸಿದೆ! ಪೂರ್ಣಾವಧಿ ಲೇಖಕರಾದ ಈ ಇಬ್ಬರೂ ಬರೆಯಲು ಆರಿಸಿಕೊಂಡ ಕಾಲ ಅವರ ಬರವಣಿಗೆಯ ರೀತಿಯನ್ನೂ ರೂಪಿಸಿರಬಹುದೆ? ಟಾಲ್‌ಸ್ಟಾಯ್ ಬರವಣಿಗೆಯ ಸ್ಪಷ್ಟತೆಗೂ, ದಾಸ್ತೋವಸ್ಕಿ ಗಂಡು, ಹೆಣ್ಣುಗಳ ಕತ್ತಲಲೋಕವನ್ನು ಅಗೆಯುವುದಕ್ಕೂ ಅವರ ಬರವಣಿಗೆಯ ಕಾಲವೂ ಕಾರಣವಿರಬಹುದೆ? ಇಂಥ ಆಧಾರವಿಲ್ಲದ ಊಹೆಗಳೂ ನನ್ನನ್ನು ಕೆಣಕಿದ್ದಿದೆ!
ಮೊನ್ನೆ ಈ ಲೇಖಕರ ಇರುಳು, ನಸುಕು ವಿಭಿನ್ನ ಸಂಕೇತ, ರೂಪಕಗಳಂತೆ ಕಾಡತೊಡಗಿ, ಕಾರ್ಲ್ ಯೂಂಗ್ ಮತ್ತಿತರ ಮನೋವಿಜ್ಞಾನಿಗಳು ರಾತ್ರಿ-ಹಗಲುಗಳ ಬಗ್ಗೆ ಹೇಳಿದ್ದ ಮಾತುಗಳೂ ಅದರೊಳಗೆ ಸೇರಿಕೊಳ್ಳತೊಡಗಿದವು. ಆಗಾಗ್ಗೆ ನಾನು ಓದಿದ ಕೆಲವು ಮನೋವಿಜ್ಞಾನಿಗಳ ಗ್ರಹಿಕೆಗಳ ಸಾರ ಹೀಗಿದೆ: ಹಗಲು ಎನ್ನುವುದು ಸ್ಪಷ್ಟ; ರಾತ್ರಿ ಎನ್ನುವುದು ಅಸ್ಪಷ್ಟ. ಅದಕ್ಕೇ ಹಗಲಿನಲ್ಲಿ ಆರಾಮಾಗಿ ಹೋಗುವ ಜಾಗಗಳಿಗೆ ರಾತ್ರಿಯ ಹೊತ್ತು ಹೋಗುವಾಗ ನಮಗೆ ದಿಗಿಲಾಗುತ್ತದೆ. ನಾವು ರಾತ್ರಿಯ ಭಯವನ್ನು ಗೆಲ್ಲಲು ವಿಶಲ್ ಹಾಕುತ್ತಾ ಮುಂದೆ ಸಾಗುತ್ತೇವೆ. ಆದರೆ ಕತ್ತಲಲ್ಲಿ ಶಿಳ್ಳೆ ಹಾಕುವುದರಿಂದ ಯಾವ ಬೆಳಕೂ ಬರುವುದಿಲ್ಲ… ದೊಡ್ಡ ಲೇಖಕ, ಲೇಖಕಿಯರು ಹೆದರದೆ ಬದುಕಿನ ರಾತ್ರಿಯ ಮುಖವನ್ನು ಮುಖಾಮುಖಿಯಾಗಿ ಬರೆಯುತ್ತಾರೆ…ಅವರು ಬದುಕಿನ, ಸಮುದಾಯದ ಅಧೋಲೋಕವನ್ನು, ಅಂದರೆ ಆಳದ ಕತ್ತಲಲೋಕವನ್ನು ಎದುರಾಗುತ್ತಿರುತ್ತಾರೆ…
ಮನೋವಿಜ್ಞಾನಿಗಳು ಇದನ್ನೆಲ್ಲ ಥಿಯರಿಟಿಕಲ್ ಆಗಿ ಹೇಳುವ ಮೊದಲೇ ಟಾಲ್‌ಸ್ಟಾಯ್, ದಾಸ್ತೋವಸ್ಕಿ ಇಬ್ಬರೂ ಈ ಅಧೋಲೋಕವನ್ನು ಹೊಗಲೆತ್ನಿಸಿದ್ದರು. ಈ ವಿಷಯದಲ್ಲಿ ದಾಸ್ತೋವಸ್ಕಿ ಟಾಲ್‌ಸ್ಟಾಯ್‌ಗಿಂತ ಮುಂದಿದ್ದಂತೆ ಕಾಣುತ್ತದೆ. ಟಾಲ್‌ಸ್ಟಾಯ್‌ನ 'ವಾರ್ ಅಂಡ್ ಪೀಸ್’, ದಾಸ್ತೋವಸ್ಕಿಯ 'ಕ್ರೈಂ ಅಂಡ್ ಪನಿಶ್‌ಮೆಂಟ್’ ಕೃತಿಗಳನ್ನು ಕನ್ನಡಿಸಿರುವ ಓ.ಎಲ್. ನಾಗಭೂಷಣಸ್ವಾಮಿ ಈ ಇಬ್ಬರೂ ಲೇಖಕರು ಕಂಡಿರುವ ಅಧೋಲೋಕಗಳಲ್ಲಿರುವ ವ್ಯತ್ಯಾಸಗಳನ್ನು ಚೆನ್ನಾಗಿ ವಿವರಿಸಬಹುದೇನೋ. 'ಅನ್ನಾಕರೆನಿನಾ’ ಕಾದಂಬರಿಯನ್ನು ಕನ್ನಡಿಸಿರುವ ತೇಜಶ್ರೀ ಅಥವಾ ದಾಸ್ತೋವಸ್ಕಿಯ 'ನೋಟ್ಸ್ ಫ್ರಂ ಅಂಡರ್ ಗ್ರೌಂಡ್’ ಕಾದಂಬರಿಯನ್ನು 'ಅಧೋಲೋಕದ ಟಿಪ್ಪಣಿಗಳು’ ಎಂದು ಕನ್ನಡಿಸಿರುವ ಗೌತಮ್ ಜ್ಯೋತ್ಸ್ನಾ ಕೂಡ ಈ ಅಂಶ ಕುರಿತು ನಿಖರವಾಗಿ ಹೇಳಬಲ್ಲರೇನೋ. ಅನುವಾದಕರು ಮೂಲಪಠ್ಯವನ್ನು ಅತ್ಯಂತ ನಿಕಟವಾಗಿ ಓದುವುದರಿಂದ, ಇದು ಅವರ ಗ್ರಹಿಕೆಗೆ ಹೆಚ್ಚು ಬಂದಿರಬಲ್ಲದು.
ಅದೇನೇ ಇರಲಿ, ಟಾಲ್‌ಸ್ಟಾಯ್, ದಾಸ್ತೊವಸ್ಕಿ ಥರದವರಿಗೆ ಬರೆಯಲು ಇದ್ದಂಥ ಕಾಲದ ಆಯ್ಕೆ ಎಲ್ಲರಿಗೂ ಇರಲಾರದು. ಸ್ಕೂಲು, ಕಾಲೇಜು, ಮನೆಗಳಲ್ಲಿ ಬಿಡುವಿಲ್ಲದ ಕೆಲಸದಲ್ಲಿ ತೊಡಗಿದ ಅಧ್ಯಾಪಕಿಗೆ, ಅಥವಾ ಪತ್ರಕರ್ತ, ಪತ್ರಕರ್ತೆಯರಿಗೆ ಬೈಗು, ಬೆಳಗುಗಳಿಗಾಗಿ ಕಾದು ಕೂತು, ಆಲೋಚನೆಗಳನ್ನೆಲ್ಲ ಒಗ್ಗೂಡಿಸಿಕೊಂಡು ಬರೆಯುವ ಲಕ್ಷುರಿ ಇರುವುದಿಲ್ಲ. ಅಂಥವರು ಸಿಕ್ಕ ಸಿಕ್ಕ ಬಿಡುವಿನಲ್ಲಿ ಗೀಚಿಕೊಳ್ಳುತ್ತಿರಬೇಕಾಗುತ್ತದೆ. ಸಣ್ಣಪುಟ್ಟ ಚೀಟಿಗಳಲ್ಲಿ, ನೋಟ್‌ಬುಕ್ಕುಗಳಲ್ಲಿ ಬರೆಯುತ್ತಿರಬೇಕಾಗುತ್ತದೆ. ಮೊಬೈಲ್‌ನಲ್ಲಿ ಟೈಪ್ ಮಾಡಿಕೊಳ್ಳುತ್ತಿರಬೇಕಾಗುತ್ತದೆ. ಕಾದಂಬರಿ ಬರವಣಿಗೆಯಿಂದ ಹಿಡಿದು ನನ್ನ ಹತ್ತಾರು ಟಿಪ್ಪಣಿಗಳ ಬರವಣಿಗೆ ಇವತ್ತಿಗೂ ನನ್ನ ಕೀ ಪ್ಯಾಡ್ ಮೊಬೈಲ್‌ನಲ್ಲೂ ನಡೆಯುತ್ತಿರುತ್ತದೆ.
ಬರೆವ ಸಮಯ ಯಾವುದಾದರೂ ಇರಲಿ, ಒಮ್ಮೆ ಬರವಣಿಗೆಯ ಮೈದುಂಬಿದ ಸ್ಥಿತಿ ಸೃಷ್ಟಿಯಾಯಿತೆಂದರೆ, ಲೋಕವೇ ತಲೆಕೆಳಕಾದರೂ ಗೊತ್ತಾಗದ ಪರವಶ ಸ್ಥಿತಿ ಸೃಷ್ಟಿಯಾಗಬಲ್ಲದು. ರಾಘವೇಂದ್ರಸ್ವಾಮಿಯ ಪಾತ್ರ ಮಾಡುತ್ತಿದ್ದ ನಟ ರಾಜ್‌ಕುಮಾರ್ ಅವರಿಗೆ ತಾವು ಕಣ್ಮುಚ್ಚಿ ಕೂತಿದ್ದೆಡೆಯಲ್ಲೇ ಬೆಂಕಿ ಬಿದ್ದಿದ್ದೇ ತಿಳಿಯದೆ ನಟನೆಯಲ್ಲಿ ತಲ್ಲೀನರಾಗಿದ್ದ ಘಟನೆ ನಿಮಗೆ ಗೊತ್ತಿರಬಹುದು. ಕೆಲ ವರ್ಷಗಳ ಕೆಳಗೆ ಬೆಂಗಳೂರಿನ ಚೌಡಯ್ಯ ಕಲಾಕ್ಷೇತ್ರದಲ್ಲಿ ಭೀಮಸೇನ್ ಜೋಶಿಯವರು ಬೆಳಗಿನ ರಾಗವೊಂದನ್ನು ಹಾಡುತ್ತಿದ್ದಾಗ ವೇದಿಕೆಯ ಮೇಲೆ ತೂಗಾಡುತ್ತಿದ್ದ ವೈರೊಂದು ಶಾರ್ಟ್ ಸರ್‍ಕ್ಯೂಟ್ ಆಗಿ ಬೆಂಕಿ ಹತ್ತಿಕೊಂಡಿತು. ಅವರ ಸಂಗೀತ ಕೇಳುತ್ತಿದ್ದ ನಾವೆಲ್ಲ ಹೌಹಾರಿದೆವು. ಭೀಮಸೇನ್ ಜೋಶಿ ಮಾತ್ರ ತಮ್ಮ ರಾಗದ ವಿಸ್ತಾರದ ನಡುವೆ ಚಣ ಕತ್ತೆತ್ತಿ ಮತ್ತೆ ರಾಗ ವಿಸ್ತರಿಸತೊಡಗಿದರು…
ಇಂಥ ಅನುಭವ ಬರೆಯುವವರಿಗೂ ಆಗುತ್ತಿರುತ್ತದೆ. ಮನೆಯ ಆಸುಪಾಸಿನಲ್ಲಿ ಬಿಲ್ಡಿಂಗ್ ಕಟ್ಟುವವರು, ಮೈಕ್ ಹಾಕಿಕೊಂಡು ಮಾರುವವವರು, ವಿವಿಧ ಸೇವಾಕಾಂಕ್ಷಿಗಳ ಗಲಾಟೆ… ಇವೆಲ್ಲದರಿಂದ ಎಲ್ಲರಂತೆ ನನಗೂ ರೇಗುತ್ತಿರುತ್ತದೆ. ಆದರೆ ಅದು ಹೇಗೋ ನನ್ನನ್ನು ಹೀರಿಕೊಳ್ಳುವ ಓದು; ತೀವ್ರವಾಗಿ ಒಳಗೆಳೆದುಕೊಳ್ಳುವ ಬರವಣಿಗೆ; ಅಥವಾ ತೊಡಗಿಕೊಳ್ಳುವ ಯಾವುದೇ ಶ್ರಮದ ಕೆಲಸ… ಇವೆಲ್ಲವೂ ನಿತ್ಯದ ಸದ್ದಿನ ಕಿರಿಕಿರಿಗಳಿಂದ ನನ್ನನ್ನು ಪಾರು ಮಾಡುತ್ತಿರುತ್ತವೆ. ಇದು ಎಲ್ಲರ ಅನುಭವಕ್ಕೂ ಬಂದಿರುತ್ತದೆ. ಆಗ ನಿಮ್ಮ ಹೊರಗೇನಾಗುತ್ತಿದೆ ಎಂಬುದೇ ಗೊತ್ತಾಗದಂತೆ ನಿಮ್ಮ ಕೆಲಸಗಳು ಕನಸಿನಲ್ಲಿ ನಡೆದಂತೆ ನಡೆಯುತ್ತಿರುತ್ತವೆ! ಇವತ್ತಿಗೂ ನನ್ನ ಬರವಣಿಗೆ ಅಥವಾ ಕ್ಲಾಸ್ ರೂಂ ಪಾಠಗಳು ಹೀಗೆ ಕನಸಿನಲ್ಲಿ ನಡೆದಂತೆ ನಡೆದರೆ ಮಾತ್ರ ನಾನು ಬಚಾವ್; ಇಲ್ಲದಿದ್ದರೆ, ತಡೆಯಿಲ್ಲದ ಒಳರೋದನ…
ಬರೆವ ಲೋಕ ಕುರಿತ ಈ ಬರಹ ಈ ದಿಕ್ಕಿನಲ್ಲಿ ಹರಿದಿದ್ದಕ್ಕೆ, 'ಬರುವ ಮಾರ್ಚ್ ೩೧ರ ನಂತರ ಬರೆಯಲು ಶುರು ಮಾಡುತ್ತೇನೆ’ ಎಂದ ಗೆಳೆಯರೊಬ್ಬರ ಪ್ರತಿಜ್ಞೆ ಕೂಡ ಕಾರಣವಾಗಿತ್ತು. ಎಷ್ಟೋ ವರ್ಷಗಳಿಂದ ಬರೆಯುವುದನ್ನು ಮುಂದೂಡುತ್ತಲೇ ಇದ್ದ ಅವರ ಲೇಟೆಸ್ಟ್ ಪ್ರತಿಜ್ಞೆ ಇದು! ಇಂಗ್ಲಿಷ್ ಸಾಹಿತ್ಯದ ಒಳ್ಳೆಯ ಪ್ರೊಫೆಸರ್ ಆಗಿದ್ದ ಹಿರಿಯರೊಬ್ಬರು, 'ಬರೆದರೆ ಹೆನ್ರಿ ಜೇಮ್ಸ್ ಥರದ ದೊಡ್ಡ ಲೇಖಕರ ಥರ ಬರೆಯಬೇಕು…’ ಎನ್ನುತ್ತಾ, ಇವತ್ತಿಗೂ ಬರೆದಂತಿಲ್ಲ.
ಬರೆವ ಕಾತರವುಳ್ಳ ಹಲವರ ಬಿಕ್ಕಟ್ಟು ಇದು: ಬರೆಯಲು ಶುರು ಮಾಡುವ ತನಕ ಬರವಣಿಗೆ ಕೈ ಹತ್ತುವುದಿಲ್ಲ; ಬರವಣಿಗೆ ಕೈ ಹತ್ತಿದ ನಂತರವೇ ಬರೆಯಲು ಶುರು ಮಾಡುತ್ತೇನೆ ಎಂದರೆ ಅದು ನಡೆಯುವುದಿಲ್ಲ. ಬರವಣಿಗೆ ಕೂಡ ಅಂಬೆಗಾಲಿಟ್ಟು, ಮೇಲೆದ್ದು, ತಡವರಿಸಿ, ತಟ್ಟಾಡುತ್ತಾ, ನಡೆಯಲು ಕಲಿಯುವ ಹಾಗೆಯೇ! ನಿತ್ಯ ಪ್ರಾಕ್ಟೀಸ್ ಮಾಡದೆ ಫೀಲ್ಡಿಗಿಳಿದರೆ ಸಚಿನ್ ತೆಂಡೂಲ್ಕರ್ ಕೂಡ ಒಂದೇ ಬಾಲ್‌ಗೆ ಔಟಾಗುತ್ತಾನೆ. ಬರವಣಿಗೆಯೂ ಹಾಗೆಯೇ! ಆದರೆ ನಿತ್ಯ ಪ್ರಾಕ್ಟೀಸ್ ಮಾಡುವ ವಿರಾಟ್ ಕೊಹ್ಲಿ ಕೂಡ ಒಂದೇ ಒಂದು ರನ್ ಗಳಿಸಲು ಪರದಾಡಬಹುದು. ಹಾಗೆಯೇ, ಬರವಣಿಗೆಯಲ್ಲಿ ನುರಿತವರಿಗೆ ಕೂಡ 'ಇದು ಬರವಣಿಗೆ’ ಎನ್ನಿಸುವ ಒಂದು ಸಾಲು ದಿನಗಟ್ಟಲೆ ಮೂಡದಿರಬಹುದು. ಈ ಅನುಭವವನ್ನು ಬರೆಯುವ ಎಲ್ಲರೂ ಹಾದುಹೋಗುತ್ತಿರುತ್ತಾರೆ.
ಇಲ್ಲಿ ಮತ್ತೊಂದು ವಿಚಿತ್ರವಿದೆ. ಬರವಣಿಗೆ ಬರುತ್ತದೆ ಎಂದು ನಾವಂದುಕೊಂಡರೂ ಬರೆಯುವುದು ಕಷ್ಟ. ಅನೇಕ ಸಲ ಈ ಅಂಕಣದ ಕಾಮೆಂಟ್ ವಿಭಾಗದಲ್ಲಿ ಪ್ರತಿಕ್ರಿಯಿಸುವ ಅಥವಾ ನನಗೆ ನೇರವಾಗಿ ಬರೆಯುವ ಕೆಲವರ ಒಳನೋಟಗಳು ಸ್ಪಷ್ಟವಾಗಿರುತ್ತವೆ; ವಿಶಿಷ್ಟವಾಗಿರುತ್ತವೆ; ನನ್ನ ಆಲೋಚನೆಗಳನ್ನು ಬೇರೆಡೆಗೆ ಒಯ್ಯುತ್ತಿರುತ್ತವೆ. ಅವರಲ್ಲಿ ಕೆಲವರು ತಾವು ಫೇಸ್‌ಬುಕ್ ಇತ್ಯಾದಿ ವೇದಿಕೆಗಳಲ್ಲಿ ಬರೆದ ಪುಟ್ಟ ಬರಹಗಳನ್ನೂ ಕೆಲವೊಮ್ಮೆ ನನಗೆ ಓದಿಸುತ್ತಾರೆ.ಈ ಕ್ಷಿಪ್ರ ಪ್ರತಿಕ್ರಿಯೆಗಳನ್ನು ನೋಡುತ್ತಾ ಕೆಲವು ಸಲ ನನಗನ್ನಿಸಿದೆ: ಇಲ್ಲಿ ಬರವಣಿಗೆಗೆ ಬೇಕಾದ ಪ್ರಾಮಾಣಿಕತೆ ಇದೆ; ಅನ್ನಿಸಿದ್ದನ್ನು ಅತಿ ಅಲಂಕಾರ ಮಾಡದೆ ನೇರವಾಗಿ, ಸರಳವಾಗಿ ಹೇಳುವ ಗುಣವಿದೆ. ಓದಿನಿಂದ, ಚಿಂತನೆಯಿಂದ ಹುಟ್ಟಿದ ಹೊಸ ನೋಟಗಳಿವೆ. ಬರೆವ ಕಾತರವೂ ಇದೆ. ಜೊತೆಗೆ ಒಂದು ಸಮಸ್ಯೆಯೂ ಇದೆ. ಇಂಥವರು ಕೊಂಚ ಗಂಭೀರವಾದ ವಸ್ತುವನ್ನುಳ್ಳ ದೀರ್ಘ ನಿರೂಪಣೆ ಬರೆಯಹೊರಟಾಗ ಗೊಂದಲ ಮಾಡಿಕೊಳ್ಳುವಂತೆ ಕಾಣುತ್ತದೆ. ಈ ಗೊಂದಲ, ತಡವರಿಕೆ ಕೂಡ ಬರವಣಿಗೆಯ ಭಾಗವೇ ಎನ್ನುವುದನ್ನು ಮರೆತು ಬರಬರುತ್ತಾ ಬರೆಯುವುದನ್ನೇ ಕೈ ಬಿಡುತ್ತಾರೆ. ಬರಹಗಾರ್ತಿಯಾಗಲು, ಬರಹಗಾರರಾಗಲು ಹಿಂಜರಿಯತೊಡಗುತ್ತಾರೆ.
ಈ ಹಿಂಜರಿಕೆಗೆ ಒಂದು ಕಾರಣ ನಮ್ಮ ಸಾಂಸ್ಕೃತಿಕ ಪರಿಸರದಲ್ಲೇ ಇದೆ. ಇವತ್ತಿಗೂ ಅನೇಕರಿಗೆ ’ನಾನು ಲೇಖಕ ಅಥವಾ ಲೇಖಕಿ’ ಎಂದು ಹೇಳಿಕೊಳ್ಳಲು ಸಂಕೋಚ, ಹಿಂಜರಿಕೆ ಇರುತ್ತದೆ. ಎಷ್ಟೋ ಸಲ ಕೆಲವು ಲೇಖಕರು, ಅದರಲ್ಲೂ 'ರಾಷ್ಟ್ರೀಯ’ ವಿಚಾರ ಸಂಕಿರಣಗಳಲ್ಲಿ ನನಗೆ ಸಿಕ್ಕುವ ವಿಚಿತ್ರ ಆತ್ಮವಿಶ್ವಾಸದ ಲೇಖಕರು, 'ನಾನು ಈಚೆಗೆ ಮೂರು ಕತೆ, ಆರು ಪದ್ಯ ಬರೆದಿದ್ದೇನೆ. ಮೂರು ಪುಸ್ತಕ ಪ್ರಕಟಿಸಿದ್ದೇನೆ; ನೀವೇನು ಬರೆಯುತ್ತಿದ್ದೀರಿ?’ ಎಂದಾಗ, ತಕ್ಷಣ ಉತ್ತರ ಹೊಳೆಯದೆ ನಾನೂ ಪೇಚಾಡಿದ್ದಿದೆ. ಇದು ಕೂಡ ಮೇಲೆ ಹೇಳಿದ ರೀತಿಯ ಸಂಕೋಚದಿಂದಲೇ ಹುಟ್ಟಿರಬಹುದು.
ಅದೇನೇ ಇರಲಿ. ಈ ಅಂಕಣದ ಓದುಗ ಓದುಗಿಯರಲ್ಲಿ ಹಲವರು ಬರೆವ ಕಾತರ ಉಳ್ಳವರಾದ್ದರಿಂದ, ‘ಎಡವಲಿ, ಬೀಳಲಿ, ಅವರವರ ಬರವಣಿಗೆ ಶುರುವಾಗಲಿ, ಸದಾ ಸಾಗುತ್ತಿರಲಿ’ ಎಂದು ಹೊಸ ವರ್ಷದ ಶುರುವಿನಲ್ಲಿ ಹಾರೈಸಿದರೆ ತಪ್ಪಾಗಲಿಕ್ಕಿಲ್ಲ ಎಂದು ನಂಬುವೆ.
Comments
16 Comments
| ಡಾ.ಕಾವ್ಯಶ್ರೀ ಎಚ್
ಹೊಸ ವರ್ಷದ ನಿಮ್ಮ ಹಾರೈಕೆಗಳಿಗೆ ಧನ್ಯವಾದಗಳು ಸರ್ . ಎಡವದೇ ನಡೆಯುತ್ತೇವೆ ಎನ್ನುವುದು ಮಹಾ ಭ್ರಮೆಯೇ ಸರಿ. ಸಾಹಿತ್ಯದ ವಿದ್ಯಾರ್ಥಿಗಳಿಗೆ ಹೇಗೋ ಹಾಗೆಯೇ ಸಾಹಿತ್ಯ ಪ್ರೇಮಿಗಳಿಗೂ, ಹೊಸ ಬರಹಗಾರರಿಗೂ ನಿಮ್ಮ ಬ್ಲಾಗ್ ಲೈಟ್‌ಹೌಸ್ ಆಗಿದೆ. ಈ ಹೊಸ ವರ್ಷದಲ್ಲಿಯೂ ನೀವು ಇನ್ನಷ್ಟು ಬರೆಯುತ್ತಾ ನಮ್ಮಂತವರಿಗೆ ಬರೆಯಲು ಸದಾ ಸ್ಫೂರ್ತಿಯಾಗಿರುತ್ತಾ ಇರಿ ಎಂದು ಬಯಸುತ್ತಾ, ಹೊಸ ವರ್ಷದ ಶುಭಾಶಯಗಳು.
| Dr.Mohan Mirle
Truly motivating article on the process of writing
| Kallaiah
ಬರವಣಿಗೆಯ ಬಗ್ಗೆ ಅದ್ಭುತ ಬರಹ
| ಡಾ. ಶಿವಲಿಂಗೇಗೌಡ ಡಿ.
ಹೊಸ ವರ್ಷದ ಶುಭಾಶಯಗಳು ಸರ್. ಬರವಣಿಗೆಯ ಇಕ್ಕಟ್ಟುಗಳನ್ನು ಇಬ್ಬರು ಮಹಾನ್ ಲೇಖಕರ ಬರವಣಿಗೆಯ ಕಾಲದ ಆಯ್ಕೆಯ ಮೂಲಕ ಚರ್ಚಿಸುತ್ತಾ ಆ ಕಾಲದ ಆಯ್ಕೆಗೂ ಅವರ ಸಾಹಿತ್ಯಲೋಕಕ್ಕೂ ಸಂಬಂಧವವಿರಬಹುದಾದದ್ದನ್ನು ಚರ್ಚಿಸಿದ್ದೀರಿ. ಜೊತೆಗೆ ಬರೆವ ತಾಕಲಾಟ, ಬಿಕ್ಕಟ್ಟು , ಹಿಂಜರಿಕೆ, ಸಂಕೋಚ ಇವುಗಳಲ್ಲೇ ಇಂದಿಗೂ ಬರೆಯಲಾಗದ ಒತ್ತಡಗಳಲ್ಲೇ ಕಾಲ ನೂಕುತ್ತಿರುವವರಿಗೆ ಆತ್ಮಸ್ಥೈರ್ಯವನ್ನು ಈ ಲೇಖನದ ಮೂಲಕ ನೀಡುತ್ತಿದ್ದೀರಿ. ನಿಮ್ಮ ಬರಣಿಗೆ ಸಾಹಿತ್ಯ ಓದುವ ಒಳನೋಟಗಳನ್ನು ನೀಡುವುದರೊಂದಿಗೆ ಬರೆಯುವ ಪ್ರೇರಣೆಯಾಗಿಯೂ ಇರುವುದು ವಿಶೇಷ. ಬರೆಯುವ ಆಸೆ ಹೊತ್ತು ಅದಕ್ಕಾಗಿ ಬರದಿರುವ ಕಾಲವನ್ನು ಕಾಯುತ್ತಾ, ಇರುವ ಕಾಲವನ್ನು ನೂಕುತ್ತಾ ಇರುವ ನನ್ನಂಥ ಅನೇಕರಿಗೆ ಈ ನಿಮ್ಮ ಲೇಖನ ಹೊಸ ಪ್ರೇರಣೆಯಾಗಲಿದೆ. ಧನ್ಯವಾದಗಳು ಸರ್
| ಮಂಜುನಾಥ. ಬಿ ಹೊಳೆಹೊನ್ನೂರು
ಬರವಣಿಗೆಯ ಸಂದರ್ಭದ ಕಾಲದ ಮಹತ್ವ ಎದುರಿಸುವ ಸಂದಿಗ್ಧ ಸವಾಲುಗಳು ಬಗೆಗೆ ಮನಮುಟ್ಟುವಂತೆ ಬರೆದಿರುವಿರಿ ಸರ್
| Prof. Prabhakar
I read today the last four writings and each one reflects manifold dimensions of our literary heritage, giants of social reform and contemporary conflicts. Each of them are master pieces aptly reflecting your great insights and societal concerns and they are truly guiding spirits for aspiring writers. Warm regards 🌹🌹
| ಮಂಜುನಾಥ್ ಸಿ ನೆಟ್ಕಲ್
ಹಲೋ ಸರ್, ಕನ್ನಡ ಎಂ ಎಂ ವಿದ್ಯಾರ್ಥಿಯಾಗಿದ್ದಾಗ ನನಗೆ ಬರೆವ ಉಮೇದು ತುಂಬಾ ಇತ್ತು. ಕೆಲವು ಲೇಖನಗಳನ್ನು ಪತ್ರಿಕೆಗಳು ಪ್ರಕಟಿಸಿದ್ದವು. ಅವುಗಳಲ್ಲಿ ಕೆಲವು ಲೇಖನಗಳನ್ನು ನಿಮ್ಮ ಗಮನಕ್ಕೆ ತಂದು ನಿಮ್ಮಿಂದ ಓದಿಸಿ ಅಭಿಪ್ರಾಯ ಕೇಳಿದೆ. ಆಗ ನೀವು addressing to self and addressing to others ಇವೆರಡರ ನಡುವಿನ ವ್ಯತ್ಯಾಸ ಗ್ರಹಿಸಿದರೆ ಉತ್ತಮ ಬರಹಗಾರ ಆಗಬಹುದು ಎಂದು ಹೇಳಿದ್ದಿರಿ. ಇಪ್ಪತ್ತೇಳು ವರ್ಷಗಳ ಹಿಂದೆ ಹೇಳಿದ ಈ ಮಾತುಗಳನ್ನು ಇವತ್ತಿಗೂ ಏನನ್ನಾದರೂ ಬರೆಯ ಹೊರಟಾಗ ನೆನಪಿಸಿಕೊಳ್ಳುತ್ತೇನೆ. ಹಲವು ಜನ ಹೆಚ್ಚು ಬರೆಯದೇ ಇರುವುದಕ್ಕೆ ನೀವು ಹೇಳಿದ ಹಲವಾರು ಕಾರಣಗಳು ಇರಬಹುದು.ಅವರೆಲ್ಲರೂ ಮೈ ಚಳಿ ಬಿಟ್ಟು ಮತ್ತೆ ಧೈರ್ಯವಾಗಿ ಬರೆಯಲು ಆರಂಭಿಸುವಂತೆ ಪ್ರೇರೇಪಿಸುತ್ತಿದೆ ಈ \r\nಬರಹ. ಧನ್ಯವಾದಗಳು.
| ಕುಸುಮ ಬಿ. ಎಂ
ಹೊಸ ವರುಷದ ಶುಭಾಶಯಗಳು ಸರ್, ನೀವು ನಮ್ಮ ಮೇಲಿಟ್ಟ ಭರವಸೆಯೇ ನಮಗೆ ಆತ್ಮವಿಶ್ವಾಸವಾಗಲಿ
| Dr.subramanya Swamy
ಇಬ್ಬರು ಮಹಾನ್ ಬರಹಗಾರರ ಬರವಣಿಗೆ ಬಗೆಗಿನ ವಿಚಾರ ಯುವ ಮನಸ್ಸುಗಳಿಗೆ ಮತ್ತು ಹೊಸ ಬರಹಗಾರರಿಗೆ ಚಲನಶೀಲತೆಯನ್ನು ತಂದುಕೊಡುವಲ್ಲಿ ಪ್ರಭಾವ ಬೀರಿವೆ. ನಮಸ್ಕಾರಗಳು ಸಾರ್
| ದೇವಿಂದ್ರಪ್ಪ ಬಿ.ಕೆ.
ಬರೆವವರ ಇರುಳು, ನಸುಕು ಲೇಖನ\' ಹೊಸದಾಗಿ ಬರವಣಿಗೆ ಆರಂಭಿಸುವವರಿಗೆ ಒಂದು ರೀತಿಯಲ್ಲಿ ಹೊಸ ಹೊಳವುಗಳನ್ನು ನೀಡುತ್ತದೆ. ಓದು ಮತ್ತು ಬರಹ ಇವೆರಡೂ ಧ್ಯಾನಸ್ಥ ಸ್ಥಿತಿಯಲ್ಲಿ ನಡೆಯುವಂತಹವು. ಕೆಲವು ಸಂದರ್ಭದಲ್ಲಿ ಓದುವಾಗ ನಮ್ಮ ಸುತ್ತ ಮುತ್ತ ಏನು ನಡೆದರೂ ಆ ಕಡೆ ಲಕ್ಷ್ಯ ಇರುವುದಿಲ್ಲ. ಆದರೆ ಬರವಣಿಗೆಯ ಸಂದರ್ಭದಲ್ಲಿ ಏಕಾಂತ ಬೇಕಾಗುತ್ತದೆ. ಕುವೆಂಪು ಅವರು ರಾಮಕೃಷ್ಣ ಆಶ್ರಮದಲ್ಲಿ ಇದ್ದಾಗ ಅವರ ಬರವಣಿಗೆಯನ್ನು ಪ್ರತ್ಯೇಕ ಕೊಠಡಿಯಲ್ಲಿ ಮಾಡುತ್ತಿದ್ದರಂತೆ ಆಗ ಅವರನ್ನು ಯಾರೂ ಮಾತಾಡಿಸುವುದಾಗಲಿ, ಭೇಟಿ ಆಗುವುದನ್ನು ಮಾಡುತ್ತಿರಲಿಲ್ಲ ಎಂದು ಓದಿರುವೆ. ಬರವಣಿಗೆಗೆ ಇರುಳು ಮತ್ತು ನಸುಕು ಎರಡೂ ಪೂರಕವಾಗಿ ದಕ್ಕುತ್ತವೆ. ಆ ಎರಡರ ಅನುಭವಗಳು ಕುವೆಂಪು ಅವರ ಸಾಹಿತ್ಯದಲ್ಲಿ ಮೂಡಿ ಬಂದಿರುವುದನ್ನು ನೋಡಬಹುದು. ಕುವೆಂಪು ಹೇಳಿದ ಹಾಗೆ ರಾತ್ರಿಗೆ ಸಾವಿರ ಕಣ್ಣುಗಳು ಹಗಲಿಗೆ ಕಣ್ಣೊಂದೆ ಎಂಬ ಸಾಲು, ಬರವಣಿಗೆಯ ಜೊತೆಗೆ ಲೋಕವನ್ನು ಕಾಣುವ ಒಂದು ಲೋಕದೃಷ್ಟಿ ನಮ್ಮ ಮುಂದೆ ಬರುತ್ತದೆ. ನನ್ನ ಓದು ಮತ್ತು ಬರವಣಿಗೆಗೆ ರಾತ್ರಿಯೇ ಹೆಚ್ಚು ಪ್ರಭಾವ ಬೀರಿದೆ
| Sanganagowda
ಬರೆವವರ ಇರುಳು ನಸುಕು ಓದಿದೆ ! ಪ್ರತಿವಾರ ಒಂದೊಂದು ವಿಷಯ ಹೊತ್ತು ಬರೆಯುತ್ತೀರಿ. ನನ್ನದೊಂದು ಪ್ರೀತಿಯ ರಿಕ್ವೆಸ್ಟ್. ನಾನು ಇನ್ನೊಂದು ಕವಿಜೋಡಿಯ ಆತ್ಮಗೀತದಂಥ ಕೃತಿಯ ನಿರೀಕ್ಷೆಯಲ್ಲಿರುವೆ..
| Rajaram
Brilliant article on writing!
| ಡಾ. ನಿರಂಜನ ಮೂರ್ತಿ ಬಿ ಎಂ
ಓಹ್, ಅದ್ಭುತ ಲೇಖನ! ಬರವಣಿಗೆಯ ಬಗೆಗಿನ ಬರವಣಿಗೆ ಬೆರಗುಗೊಳಿಸುತ್ತಿದೆ!! ಬರೆಯಬೇಕೆಂದು ಬಯಸುವವರ, ಕನಸು ಕಾಣುವವರ, ತುಡಿಯುವವರ, ಬಯಕೆ-ಕನಸು-ತುಡಿತಗಳನ್ನು ಮುಂದೂಡಲು ನೆಪಗಳನ್ನು ಹುಡುಕುವ, ಮುಂದೂಡುತ್ತಲೇ ಕೊನೆಗೆ ಕೈಚೆಲ್ಲುವವರ ಸ್ಥತಿಗತಿಗಳನ್ನು ಮನಮುಟ್ಟುವ ಹಾಗೆ ಚಿತ್ರಿಸಿರುವ ಈ ಲೇಖನ ಹೃದಯಸ್ಪರ್ಶಿಯಾಗಿದೆ. ಮೈಕೊಡವಿಕೊಂಡೆದ್ದು ಲೇಖನಿಯನ್ನು ಕೈಗೆತ್ತಿಕೊಳ್ಳುವಂತೆ ಮಾಡುವ ಮಂತ್ರದಂಡದಂತೆ ಕಾಣುತ್ತಿದೆ. ಹುಳಿಯಾರರಿಗೆ ನಮನಗಳು.
| ಡಾ. ನಿರಂಜನ ಮೂರ್ತಿ ಬಿ ಎಂ
ಓಹ್, ಅದ್ಭುತ ಲೇಖನ! ಬರವಣಿಗೆಯ ಬಗೆಗಿನ ಬರವಣಿಗೆ ಬೆರಗುಗೊಳಿಸುತ್ತಿದೆ!! ಬರೆಯಬೇಕೆಂದು ಬಯಸುವವರ, ಕನಸು ಕಾಣುವವರ, ತುಡಿಯುವವರ, ಬಯಕೆ-ಕನಸು-ತುಡಿತಗಳನ್ನು ಮುಂದೂಡಲು ನೆಪಗಳನ್ನು ಹುಡುಕುವ, ಮುಂದೂಡುತ್ತಲೇ ಕೊನೆಗೆ ಕೈಚೆಲ್ಲುವವರ ಸ್ಥತಿಗತಿಗಳನ್ನು ಮನಮುಟ್ಟುವ ಹಾಗೆ ಚಿತ್ರಿಸಿರುವ ಈ ಲೇಖನ ಹೃದಯಸ್ಪರ್ಶಿಯಾಗಿದೆ. ಮೈಕೊಡವಿಕೊಂಡೆದ್ದು ಲೇಖನಿಯನ್ನು ಕೈಗೆತ್ತಿಕೊಳ್ಳುವಂತೆ ಮಾಡುವ ಮಂತ್ರದಂಡದಂತೆ ಕಾಣುತ್ತಿದೆ. ಹುಳಿಯಾರರಿಗೆ ನಮನಗಳು.
| Gawtham
I didn\'t know about this. Thank you for introducing me to this strange paradox. Dostoevsky\'s night is vividly present in all his works, exploring the corners where the sun never dares to shine. He truly is the king of the underground! In contrast, Tolstoy is like the glistening early dawn, the silence of the meadows, and the spiritual new morning. His vision is reminiscent of the Magi in Eliot\'s poem, who travel far to witness the miracle and see a white horse in the meadows (if I remember correctly). That is Tolstoy. You\'ve made a very interesting analysis here, which has piqued my curiosity!
| Nataraj Huliyar Replies
Thanks Gowtham. What a fine reflection!
Add Comment