ಧರ್ಮಗುರುಗಳ ಮೈಮನಗಳ ಸುಳಿ

ಫ್ರೆಂಚ್ ಫಿಲಾಸಫರ್ ರೂಸೋಗೆ ಹದಿನಾರು ವರ್ಷವಾಗಿದ್ದಾಗ ಅವನ ಬದುಕಿನ ಒಂದು ನಿರ್ಣಾಯಕ ತಿರುವು ಘಟಿಸಿತು. ಕನ್ವರ್ಶನ್ ಅಥವಾ ನವಧರ್ಮ ಸ್ವೀಕಾರ ಎಂದರೆ ಏನೆಂಬುದೇ ಗೊತ್ತಿಲ್ಲದ ಹುಡುಗ ರೂಸೋ ಕ್ಯಾಥೊಲಿಕ್ ಕ್ರಿಶ್ಚಿಯನ್ ಧರ್ಮ ಸ್ವೀಕರಿಸಬೇಕಾಯಿತು. ಇದರಿಂದ ತನಗೊಂದು ಹೊಸ ಲೋಕ ತೆರೆಯುತ್ತದೆ ಎಂದು ಹುಡುಗ ರೂಸೋ ಅಂದುಕೊಂಡಿದ್ದ. ಹಾಗಾಗಲಿಲ್ಲ. ಅವನ ಮನಸ್ಸು ಧರ್ಮವನ್ನು ಬಿಟ್ಟು ಇನ್ನೆಲ್ಲವನ್ನೂ ಯೋಚಿಸತೊಡಗಿತು! ಅಲ್ಲಿಂದ ತಪ್ಪಿಸಿಕೊಂಡು ಓಡಿಹೋಗುವ ಚಡಪಡಿಕೆ ಶುರುವಾಯಿತು. ನವ ಧರ್ಮ ಸ್ವೀಕಾರದ ಹೆಜ್ಜೆಗಳಲ್ಲಿ ರೂಸೋ ನೆರವಿಗೆ ನಿಂತ ಮೇಡಮ್ ವಾರೆನ್ಸ್ ತನಗಿಂತ ಕಿರಿಯವನಾದ ರೂಸೋ ಜೊತೆ ಪ್ರಣಯವನ್ನಾರಂಭಿಸುತ್ತಾಳೆ. ಮುಂದೆ ಆಕೆ ಕ್ಯಾನ್ಸರ್ ಆಗಿ ತೀರಿಕೊಳ್ಳುತ್ತಾಳೆ. ಮತ್ತೆ ರೂಸೋನ ಪ್ರೇಮದ ಹುಡುಕಾಟ ಶುರುವಾಗುತ್ತದೆ.

ಈ ನಿವೇದನೆಗಳನ್ನು ರೂಸೋನ ‘ಕನಫೆಶನ್ಸ್’‌ನ (ಆತ್ಮನಿವೇದನೆಗಳು) ಎರಡನೆಯ ಸಂಪುಟದಲ್ಲಿ ಓದುತ್ತಿರುವಾಗಲೇ ಕರ್ನಾಟಕದಲ್ಲಿ ಸ್ವಾಮೀಜಿಯೊಬ್ಬರು ಬಂಧನಕ್ಕೊಳಗಾದ ಸುದ್ದಿ ಕಣ್ಣಿಗೆ ಬಿತ್ತು. ಅದು ಹೇಗೋ ಇವೆರಡೂ ನನ್ನ ಮನಸ್ಸಿನಲ್ಲಿ ಕನೆಕ್ಟ್ ಆದವು. ಎಷ್ಟೋ ಸಲ ಕಣ್ಣೆದುರಿನ ಘಟನೆಗಳು ಹೆಚ್ಚು ಸ್ಪಷ್ಟವಾಗುವುದು ಗಂಭೀರವಾದ ಓದು, ಬರಹಗಳ ಬೆಳಕಿನಲ್ಲಿ ಎಂಬ ನನ್ನ ಅನುಭವ, ನಂಬಿಕೆಗಳು ಮತ್ತೆ ಗಟ್ಟಿಯಾಗತೊಡದವು. 

ತನ್ನ ಐವತ್ತಮೂರು-ಐವತ್ತನೆಯ ವಯಸ್ಸಿನ ನಡುವೆ ಈ ನಿವೇದನೆಗಳ ಸಂಪುಟಗಳನ್ನು ಬರೆದ ಜೆ.ಜೆ. ರೂಸೋ ಹದಿನೆಂಟನೆಯ ಶತಮಾನದ ದೊಡ್ಡ ತತ್ವಜ್ಞಾನಿ. ಫ್ರೆಂಚ್ ಕ್ರಾಂತಿಯ ನಾಯಕರನ್ನು, ರೊಮ್ಯಾಂಟಿಕ್ ಸಾಹಿತ್ಯ ಚಳುವಳಿಯನ್ನು ಪ್ರಭಾವಿಸಿದವನು. ಯೂರೋಪಿನ ಜನ ಜಗತ್ತನ್ನು ನೋಡುವ ಕ್ರಮ ಅವನಿಂದಲೂ ಬದಲಾಯಿತು. 

ರೂಸೋನ ನಿವೇದನೆಗಳು ಧರ್ಮದ ಹೆಸರಿನಲ್ಲಿ ಮನುಷ್ಯರ ಮೇಲೆ ಹೇರಿರುವ ಕಟ್ಟಳೆಗಳು ಸೃಷ್ಟಿಸಿರುವ ಸಮಾಜದ ಅಸಹಜ ನೀತಿಗಳಿಗೂ ಮನುಷ್ಯನ ದೇಹಕ್ಕೂ ಏನೇನೂ ಸಂಬಂಧವಿರುವುದಿಲ್ಲ ಎಂಬ ಎಲ್ಲ ಕಾಲದ ಸತ್ಯಗಳನ್ನು ಮತ್ತೆ ನೆನಪಿಸುತ್ತವೆ. ಇದು ಎಲ್ಲ ಕಾಲದಲ್ಲೂ ಎಲ್ಲರೂ ಬಲ್ಲ ವಿಷಯ. ಆದರೂ ಧರ್ಮ, ಧಾರ್ಮಿಕ ಸಂಸ್ಥೆಗಳು ಹಾಗೂ ಸಂಪ್ರದಾಯಸ್ಥ ಸಮಾಜಗಳು ಧರ್ಮಗುರು, ಪಾದ್ರಿ, ಸ್ವಾಮೀಜಿಗಳ ಮೇಲೆ ಹಲ ಬಗೆಯ ಅಸಹಜ ಕಟ್ಟಳೆಗಳನ್ನು ಹೇರುತ್ತಾ ಬಂದಿವೆ. ಆ ಕಟ್ಟಳೆಗಳು ಸೃಷ್ಟಿಸುವ ಕಷ್ಟ, ಸುಖ, ಬಿಕ್ಕಟ್ಟು, ಉಲ್ಲಂಘನೆಗಳು ಕೂಡ ಸಮಾಜದಲ್ಲಿ ಎಲ್ಲರಿಗೂ ಗೊತ್ತಿರುತ್ತವೆ; ಆದರೂ ಜನ ಜಾಣ ಕಿವುಡು, ಜಾಣ ಕುರುಡುಗಳಲ್ಲಿ ಅವುಗಳನ್ನು ಕಡೆಗಣಿಸಿ ತಮ್ಮ ಪಾಡಿಗೆ ತಾವಿರುತ್ತಾರೆ. 

ಅಕಸ್ಮಾತ್ ರೂಸೋನಂಥವರು ಬರೆದದ್ದನ್ನು ಓದಿದಾಗ, ಅಥವಾ ಅಮೆರಿಕನ್ ಕಾದಂಬರಿಕಾರ ನಥಾನಿಯಲ್ ಹಾತಾನ್‌ನ ‘ಸ್ಕಾರ್ಲೆಟ್ ಲೆಟರ್’ ಕಾದಂಬರಿಯಲ್ಲಿ ತನ್ನ ಲೈಂಗಿಕ ಸಂಬಂಧದ ಹೊಣೆ ಹೊರಲಾಗದ ತಳಮಳದಲ್ಲಿರುವ ಧರ್ಮಗುರುವಿನ ತೊಳಲಾಟ ಕಂಡಾಗ, ‘ಅರೆ! ನಮ್ಮ ಸ್ವಾಮೀಜಿಗಳಿಗೂ ಈ ಕಷ್ಟಗಳಿರಬಹುದಲ್ಲವೆ?’ ಎಂದುಕೊಂಡು ಸುಮ್ಮನಾಗುತ್ತಾರೆ.  

ಈ ಕುರಿತು ಬರೆಯುತ್ತಿರುವಾಗ ಹದಿಹರೆಯದಲ್ಲಿ ಸ್ವಾಮೀಜಿಗಳಾಗಬೇಕಾಗಿದ್ದು, ನಂತರ ಅದನ್ನು ತಪ್ಪಿಸಿಕೊಂಡ ಗೆಳೆಯರ ನೆನಪಾಯಿತು. ಹಾಗೆ ತಪ್ಪಿಸಿಕೊಂಡ ಮೂವರು ಗೆಳೆಯರು ಮುಂದೆ ಸಾಹಿತ್ಯ, ಸಾರ್ವಜನಿಕ ಜೀವನ, ವೃತ್ತಿ, ರಂಗಭೂಮಿ, ಸಿನಿಮಾಗಳಲ್ಲಿ ತೊಡಗಿಕೊಂಡು ತಂತಮ್ಮ ಬದುಕನ್ನು ಬದುಕುತ್ತಾ ಬಂದಿದ್ದಾರೆ. ಈ ಗೆಳೆಯರ ಅನುಭವಗಳು ಪ್ರಾತಿನಿಧಿಕವಾದ್ದರಿಂದ ಅವರ ಹೆಸರು, ಹಿನ್ನೆಲೆಗಳ ಅಗತ್ಯವಿಲ್ಲ; ಇಲ್ಲಿನ ಹೆಸರುಗಳು ಕಾಲ್ಪನಿಕ ಎಂದು ಬಿಡಿಸಿ ಹೇಳಬೇಕಾಗಿಲ್ಲ:

ಮಠವೊಂದರ ಶಾಲೆಯಲ್ಲಿ ಓದುತ್ತಿದ್ದ ಚುರುಕು ಹುಡುಗ ರಾಮು ಸ್ವಾಮಿಯಾಗಲು ತಕ್ಕವನೆಂದು ಹಿರಿಯರು ತೀರ್ಮಾನಿಸಿದರು; ಹತ್ತನೆಯ ತರಗತಿಯಲ್ಲಿ ಓದುವ ಕಾಲಕ್ಕಾಗಲೇ ರಾಮು ಧರ್ಮ, ಆಧ್ಯಾತ್ಮಗಳ ಬಗ್ಗೆ ಬ್ರೇಕಿಲ್ಲದೆ ಮಾತಾಡುವುದನ್ನು ಕಲಿತ. ಒಳ್ಳೆಯ ಊಟೋಪಚಾರ, ಭಕ್ತರ ಅಯಾಚಿತ ಗೌರವ, ತನ್ನ ಮಾತಿನ ಕಿಕ್... ಎಲ್ಲವನ್ನೂ ಆನಂದಿಸತೊಡಗಿದ. ವರ್ಷದ ನಂತರ ರಾಜು ಪೂರ್ಣ ಪ್ರಮಾಣದ ಸ್ವಾಮಿಯಾಗುವ ಕಾಲ ಬಂತು. ‘ಸ್ವಾಮೀಜಿಯಾಗುವುದು ಅವನ ಪಾಲಿಗೆ ಬಂದಿದ್ದರೆ ಆಗಲಿ’ಎಂದು ಅಪ್ಪ ನಿರ್ಲಿಪ್ತನಾದ. ತಾಯಿ ಮಾತ್ರ ‘ಮಗ ಯಾವ ಕಾರಣಕ್ಕೂ ಸ್ವಾಮಿಯಾಗಬಾರದು ಎಂದು ಪಟ್ಟು ಹಿಡಿದಳು. ರಾಮು ಮಠದ ಹಾದಿ ಬಿಟ್ಟು, ಓದಿ, ಕೆಲಸ ಹಿಡಿದು ಸಂಸಾರಿಯಾದ. 

ಎರಡನೆಯದು, ರಾಜುವಿನ ಕತೆ: ‘ಮಗ ಧರ್ಮಕಾರ್ಯಕ್ಕೆ ಮುಡಿಪಾಗಿರಲಿ’ ಎಂಬ ನಿಜವಾದ ಶ್ರದ್ಧೆಯಿಂದಲೇ ಅಪ್ಪ ರಾಜುವನ್ನು ಮಠಕ್ಕೆ ಬಿಟ್ಟರು. ಸುಮಾರು ಹತ್ತು ವರ್ಷ ಸ್ವಾಮಿಯಾಗಲು ತಯಾರಾದ ರಾಜುವಿಗೆ ಧರ್ಮ, ಪ್ರವಚನಗಳ ಜೊತೆಜೊತೆಗೆ ಲೋಕದ ವಾಂಛಲ್ಯಗಳೂ ಕಾಡುತ್ತಿದ್ದವು. ಅಕಸ್ಮಾತ್ ಓದಿದ ಪುಸ್ತಕಗಳು, ಕಣ್ಣಿಗೆ ಬಿದ್ದ ಚಿತ್ರಗಳು ಬೇರೆಯ ಲೋಕವನ್ನೇ ಕಾಣಿಸುತ್ತಿದ್ದವು. ರಂಗಭೂಮಿಯ ನಿರ್ದೇಶಕರೊಬ್ಬರ ಮಾತುಗಳಲ್ಲಿದ್ದ ಜೀವಂತಿಕೆ ರಾಜುವನ್ನು ಹೆಚ್ಚು ಸೆಳೆಯತೊಡಗಿತು. ಸ್ವಾಮಿಯಾಗುವ ಗೊಡವೆ ಬಿಟ್ಟು ಓದು ಮುಂದುವರಿಸಿದ. ರಂಗಭೂಮಿಗೆ ಹೊರಳಿದ; ‘ಇಲ್ಲಿನ ಏಳು ಬೀಳುಗಳು ಏನೇ ಇದ್ದರೂ ಕಲೆಯ ಲೋಕದಲ್ಲೇ ಆರಾಮಾಗಿರುವೆ’ ಎನ್ನುತ್ತಾನೆ ರಾಜು.

ಮತ್ತೊಬ್ಬ ಗೆಳೆಯ ಚೆನ್ನಪ್ಪನನ್ನು ಬಡತನದ ಕಾರಣದಿಂದ ಮನೆಯವರು ಸ್ವಾಮಿಯಾಗಲು ಮಠವೊಂದಕ್ಕೆ ಸೇರಿಸಿದರು. ಚೆನ್ನಪ್ಪ ಒಂದು ದಿನ ಮಠ ಬಿಟ್ಟು ಓಡಿ ಹೋಗಿ ಕಾಲೇಜು ಸೇರಿಕೊಂಡ; ಮುಂದೆ ಮೇಷ್ಟರೂ ಆದ.

ಈ ಕತೆಗಳೆಲ್ಲ ನಮಗೆ ಪರಿಚಿತವೇ. ಇವರಂತೆ ಧಾರ್ಮಿಕ ಆವರಣದಿಂದ ಓಡಿ ಹೋಗದೆ, ಅದೇ ಆವರಣದಲ್ಲಿದ್ದು ಅರ್ಥಪೂರ್ಣ ಕೆಲಸ ಮಾಡಿಕೊಂಡಿರುವವರೂ ಇದ್ದಾರೆ. ವಿದ್ವಾಂಸರೂ, ಜ್ಞಾನಿಗಳೂ ಆಗಿ ವಿಕಾಸಗೊಂಡವರಿದ್ದಾರೆ; ಎಲ್ಲ ವಲಯಗಳಂತೆ ಇಲ್ಲೂ ಲೋಕಕಂಟಕರೂ ಇದ್ದಾರೆ! ಆದರೂ ಹನಿಟ್ರ‍್ಯಾಪ್, ಪೋಕ್ಸೋ ಪ್ರಕರಣ ಮುಂತಾದವು ಶುರುವಾದ ಮೇಲೆ ಸ್ವಾಮೀಜಿಗಳ ಆತ್ಮಹತ್ಯೆ, ಬಂಧನಗಳ ಪ್ರಕರಣಗಳೂ ಶುರುವಾಗಿವೆ; ಅವರ ಭಕ್ತರು ಕೂಡ ಈ ರೋಚಕ ಸುದ್ದಿಗಳನ್ನು ಜಗಿಯತ್ತಿರುತ್ತಾರೆ ಅಥವಾ ಚಣ ಬೆಚ್ಚುತ್ತಾರೆ; ಆದರೆ ಇದಕ್ಕೆ ಪರಿಹಾರ ಹುಡುಕುವ ಕಾಳಜಿ ತೋರುವವರು ಮಾತ್ರ ಕಡಿಮೆ. ಸಾಮಾನ್ಯವಾಗಿ ಯಾವ ವಲಯಗಳು ಸಮಸ್ಯೆ ಎದುರಿಸುತ್ತವೆಯೋ ಅವು ಆ ಸಮಸ್ಯೆಯನ್ನು ಚರ್ಚಿಸಿದಾಗ ಮಾತ್ರ ಆ ಚರ್ಚೆಗೆ ಅಧಿಕೃತತೆ ಬರುತ್ತದೆ. ಆದರೆ ಎಲ್ಲವನ್ನೂ ಸಾರ್ವಜನಿಕ ಭಾಷೆಯಲ್ಲೇ ಮಾತಾಡಬೇಕಾದ ನೈತಿಕ ಒತ್ತಡವಿರುವ ಧರ್ಮಗುರುಗಳ ವಲಯದಲ್ಲಿ ಈ ಮಾತನ್ನು ಕೊನೆಯ ಪಕ್ಷ ಚರ್ಚಿಸಲಾದರೂ ತಕ್ಕ ಭಾಷೆಯಾಗಲೀ, ಅವಕಾಶವಾಗಲೀ ಇದ್ದಂತಿಲ್ಲ. 

ಈ ನಡುವೆ ಸಮಾಜದ ಇತರ ವಲಯಗಳಲ್ಲಿನ ಬಲಾಢ್ಯರು ತಾವು ಮಾಡಿದ ಅನಾಚಾರಗಳನ್ನು ದಕ್ಕಿಸಿಕೊಳ್ಳುವಂತೆ ಧಾರ್ಮಿಕ ವಲಯದ ಬಲಾಢ್ಯರು ಕೂಡ ತಮ್ಮ ದುರಾಚಾರಗಳನ್ನು ದಕ್ಕಿಸಿಕೊಳ್ಳುವಷ್ಟು ಪ್ರಭಾವಿಗಳಾಗಿದ್ದಾರೆ. ಅಂಥವರು ತಮ್ಮ ಬಲಿಪಶುಗಳನ್ನೇ ಆತ್ಮಹತ್ಯೆಗೆ ತಳ್ಳುತ್ತಿರುತ್ತಾರೆ. ಕೆಲವರ ವಿಚಾರಣೆಯಿಂದ ನ್ಯಾಯಮೂರ್ತಿಗಳೇ ಹಿಂಜರಿದ ಪ್ರಸಂಗಗಳಿವೆ. ಇಂಥ ಬಲಾಢ್ಯರ ಬಗ್ಗೆ ಕೂಗುಮಾರಿ ಮಾಧ್ಯಮಗಳು ಸೊಲ್ಲೆತ್ತುವುದಿಲ್ಲ; ಆದರೆ ಮರ್ಯಾದೆಗೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುವ, ಅಷ್ಟಿಷ್ಟು ಅಳುಕಿನ ಸ್ವಾಮಿಗಳು ಮಾತ್ರ ಮಾಧ್ಯಮಗಳ ಹಲ್ಲಿಗೆ ಸಿಕ್ಕಿ ಬೀಳುತ್ತಾರೆ. 

ಇವೆಲ್ಲವನ್ನೂ ಚರ್ಚೆಗೆ ತಂದಿರುವ ಉದ್ದೇಶವಿಷ್ಟೆ: ಧರ್ಮಗುರು ಎನ್ನಿಸಿಕೊಂಡ ವ್ಯಕ್ತಿ ಕೂಡ ಮೂಳೆ ಮಾಂಸಗಳ ಮನುಷ್ಯ ಎಂಬುದನ್ನು ಕ್ಷಿಪ್ರ ಮಾಧ್ಯಮ ಸಂಸ್ಕೃತಿಯ ಮಂಪರಿನಲ್ಲಿ ನಾವು ಮರೆತಿದ್ದೇವೆ. ಧರ್ಮಗುರು ಕೂಡ ಸಾಮಾನ್ಯರು ಮಾಡುವ ಸರಿ, ತಪ್ಪುಗಳನ್ನು ಮಾಡುತ್ತಿರುತ್ತಾನೆ. ಪರಮ ಅಧಿಕಾರವಿರುವಂತೆ ಕಾಣುವ ಈತನಿಗೂ ಮಠೀಯ ವ್ಯವಸ್ಥೆಯಲ್ಲಿ ಬಿಕ್ಕಟ್ಟುಗಳು ಸೃಷ್ಟಿಯಾಗುತ್ತಿರುತ್ತವೆ. ಈತನ ಕುರ್ಚಿಯೂ ಅಲುಗಾಡುತ್ತಿರುತ್ತದೆ. ಧಾರ್ಮಿಕ ಸಂಸ್ಥೆಗಳಿಗೆ ಹರಿದು ಬರುವ ಹಣದ ವಾರಸುದಾರರಿಂದಾಗಿ ಅವು ಅಧಿಕಾರದ ತಿಕ್ಕಾಟದ ರಣರಂಗಗಳಾಗತೊಡಗುತ್ತವೆ.  
ಈ ನಡುವೆ ಎಲ್ಲ ಹುಲುಮಾನವರಂತೆ ಧರ್ಮಗುರುವಿಗೆ ಕೂಡ ವಾಂಚಲ್ಯಗಳಿರುತ್ತವೆ; ಅದುಮಿಟ್ಟ ಪ್ರೇಮ, ಕಾಮಗಳು ಸ್ಫೋಟಗೊಳ್ಳುತ್ತಿರುತ್ತವೆ. ಅವು ಇನ್ನೊಬ್ಬರ ಬದುಕಿಗೆ ಧಕ್ಕೆ ತಂದಾಗ ಮಾತ್ರ ಅವಕ್ಕೂ ಸಮಾಜಕ್ಕೂ ಸಂಬಂಧವಿರಬಲ್ಲದೇ ಹೊರತು, ಸ್ವಾಮೀಜಿಯೊಬ್ಬ ಜಿತೇಂದ್ರಿಯನಾಗಿರಲೇಬೇಕು ಎಂದು ಇತರರು ಕಿರುಚುವುದು ಬರ್ಬರವಾಗಿರಬಲ್ಲದು. 

ಧರ್ಮಗುರುಗಳ, ಸ್ವಾಮಿಗಳ ಲೋಕದ ಸಂಕೀರ್ಣತೆ ಹೆಚ್ಚು ನನ್ನ ಅರಿವಿಗೆ ಬರತೊಡಗಿದ್ದು ನನ್ನ ಕಾದಂಬರಿ ’ಕಾಮನ ಹುಣ್ಣಿಮೆ’ಯಲ್ಲಿ (ಪಲ್ಲವ ಪ್ರಕಾಶನ) ಸ್ವಾಮೀಜಿಯ ಪಾತ್ರವೊಂದು ತಂತಾನೇ ಸೃಷ್ಟಿಯಾದಾಗ; ಏಳೆಂಟು ವರ್ಷ ಕಾಲ ಬರೆದ ಈ ಕಾದಂಬರಿಯೊಳಕ್ಕೆ ಯಾವುದೋ ಗಳಿಗೆಯಲ್ಲಿ ಸ್ವಾಮೀಜಿಯ ಪಾತ್ರ ಪ್ರವೇಶಿಸಿತು. ಕಾದಂಬರಿ ಬರೆಯುತ್ತಾ ಹೋದಂತೆ ಸ್ವಾಮೀಜಿಯ ಪಾತ್ರ ನನ್ನ ಪ್ರಿಯ ಪಾತ್ರಗಳಲ್ಲೊಂದಾಯಿತು. ಸ್ವಾಮೀಜಿಯೊಬ್ಬ ನಮ್ಮಂತೆಯೇ ಓದು ಬರಹ, ಕೆಲಸ ಮಾಡುವ ವ್ಯಕ್ತಿ; ಅಥವಾ ನಮ್ಮಂತೆಯೇ ಸೋಲಬಲ್ಲ, ದಿಟ್ಟನಾಗಿ ನಿಲ್ಲಬಲ್ಲ ವ್ಯಕ್ತಿ ಎಂಬ ಸತ್ಯವನ್ನು ಬರವಣಿಗೆಯ ಅಪ್ರಜ್ಞಾಪೂರ್ವಕ ಪ್ರಕ್ರಿಯೆಯೇ ನನಗೆ ಹೇಳಿಕೊಡತೊಡಗಿತು. 

ಆದರೂ ಧರ್ಮದೊಳಗೆ ಸೆರೆಯಾದವರ ಅದುಮಿಟ್ಟ ವಾಂಛಲ್ಯಗಳ ಲೋಕ ನನಗೆ ಇನ್ನಷ್ಟು ಚೆನ್ನಾಗಿ ಅರ್ಥವಾಗತೊಡಗಿದ್ದು ಈಚೆಗೆ ರೂಸೋನ ನಿವೇದನೆಗಳನ್ನು, ‘ದ ಸ್ಕಾರ್ಲೆಟ್ ಲೆಟರ್’ ಕಾದಂಬರಿಯ ಧರ್ಮಗುರುವಿನ ತೊಳಲಾಟಗಳನ್ನು ಓದಿದಾಗ. ಎಷ್ಟೋ ಸಲ ನಾವು ಕಣ್ಣಾರೆ ಕಂಡಿದ್ದೇವೆ, ಅರ್ಥಮಾಡಿಕೊಂಡಿದ್ದೇವೆ ಎಂದುಕೊಳ್ಳುವ ನಿಜಜೀವನದ ವ್ಯಕ್ತಿಗಳು ನಮ್ಮ ಬರವಣಿಗೆಯ ಪ್ರಕ್ರಿಯೆಯಲ್ಲಿ ಅಥವಾ ಮತ್ತೊಬ್ಬರ ಬರವಣಿಗೆಯಲ್ಲಿ ನಮಗೆ ಹೆಚ್ಚು ಸ್ಪಷ್ಟವಾಗಿ ಅರ್ಥವಾಗತೊಡಗುತ್ತಾರೆ. ಕಾರಣ, ನಾವು ಆಳವಾಗಿ ತೊಡಗಿ ಮಾಡುವ ಓದು, ಬರವಣಿಗೆಗಳು ಲೋಕದ ಎಲ್ಲ ಬಗೆಯ ಪಾತ್ರಗಳನ್ನು ಗಾಢ ಅನುಕಂಪದಿಂದ ಅರ್ಥ ಮಾಡಿಕೊಳ್ಳುವಂತೆ ಪ್ರೇರೇಪಿಸುತ್ತವೆ. 

ಆದರೆ ತೆರೆಯುಗದ ವಾಚಾಳಿ ಸಮಾಜದ ಚೀರಾಟದಲ್ಲಿ ಇತರರನ್ನು ಅರ್ಥ ಮಾಡಿಕೊಳ್ಳುವ ವ್ಯವಧಾನವೇ ಕಣ್ಮರೆಯಾಗತೊಡಗಿದೆ; ವರ್ಷಗಟ್ಟಲೆ ಧ್ಯಾನಿಸಿ ಬರೆದ ಸಾಹಿತ್ಯ ಕೃತಿಗಳ ಮೂಲಕ ನಮ್ಮ ಸುತ್ತಣ ಗಂಡು, ಹೆಣ್ಣುಗಳ ಸಂಕೀರ್ಣ ಸ್ಥಿತಿಗಳನ್ನು ಅರ್ಥ ಮಾಡಿಕೊಳ್ಳುವ ಮನಸ್ಥಿತಿ ಮಾಯವಾಗತೊಡಗಿದೆ; ಛಕಛಕ ಬೆರಳಿನಾಟದ ಮೊಬೈಲ್ ಸ್ಕ್ರೀನ್‌ನಲ್ಲಿ ಕೂಡ ರೂಸೋ ನಿವೇದನೆ, ‘ದ ಸ್ಕಾರ್ಲೆಟ್ ಲೆಟರ್’ ಕಾದಂಬರಿ ಎಲ್ಲವೂ ಸಿಗುತ್ತವೆ. ಆದರೆ ಅವನ್ನು ಓದಲಾಗದಂಥ, ಓದಬಾರದಂಥ, ಧಾವಂತವನ್ನು ತೆರೆಯ ಮೇಲಿನ ಇನ್ನಿತರ ‘ಸ್ಟೋರಿ’ಗಳು ಸೃಷ್ಟಿಸುತ್ತಿರುತ್ತವೆ. ಆದ್ದರಿಂದಲೇ ಸ್ವಾಮೀಜಿಯೊಬ್ಬನ ಬ್ರೇಕಿಂಗ್ ಸ್ಟೋರಿಯನ್ನು ಚೀರುವವನ ಜೊತೆಗೆ ನೋಡುಗರ ಕೊರಳು, ಬೆರಳುಗಳೂ ಅವರಿಗೆ ಅರಿವಿಲ್ಲದೆಯೇ ಸೇರಿಕೊಳ್ಳತೊಡಗುತ್ತವೆ. 

ಇಂಥ ಅರ್ಥಹೀನ ಧಾವಂತದಲ್ಲಿ ಸುತ್ತಣ ಜನರಿರಲಿ, ಸ್ವತಃ ನಾವೇ ಏಕೆ ಹೀಗೆ ರಕ್ತದೊತ್ತಡ ಏರಿದವರಂತೆ ಏನನ್ನೋ ಬಡಬಡಿಸುತ್ತಿದ್ದೇವೆ, ಬರೆಯುತ್ತಿದ್ದೇವೆ ಎಂಬುದು ಕೂಡ ನಮಗೆ ಅರ್ಥವಾಗುವುದಿಲ್ಲ. ಇನ್ನು ಕಾರಂತರ ‘ಮೈ ಮನಗಳ ಸುಳಿಯಲ್ಲಿ’ ಅಥವಾ ‘ಸ್ಕಾರ್ಲೆಟ್ ಲೆಟರ್’ ಥರದ ಸಾಹಿತ್ಯ ಕೃತಿಗಳ ಮೂಲಕ ಮೈಮನಗಳ ಕಷ್ಟ ಸುಖಗಳನ್ನು ಅರಿಯಬಲ್ಲ ಗಾಢ ಅನುಕಂಪ ಎಲ್ಲಿಂದ ತಾನೇ ಹುಟ್ಟೀತು!

ಬ್ಲಾಗ್ ಫಾಲೋ ಮಾಡಲು ಒಪ್ಪಿ, ಕ್ಲಿಕ್ ಮಾಡಿ; ನೋಟಿಫಿಕೇಶನ್ ಪಡೆಯಿರಿ, ಶೇರ್ ಮಾಡಿ: FOLLOW
ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com 
ಬಿಡುವಾದಾಗ ನೋಡಿ, ಶೇರ್ ಮಾಡಿ: YouTube Channel Link

Share on:

Comments

9 Comments



| Gangadhara BM

'ಪರಚಿಂತೆ' ಮಾಡುವ ಧರ್ಮಗುರುಗಳ 'ಇಹ'ದ ಚಿಂತನೆಗೆ ದಾರಿ ಮಾಡಿಕೊಡುವ ಲೇಖನ ಚೆನ್ನಾಗಿದೆ ಸರ್.   ಕರ್ನಾಟಕದಲ್ಲಿ  ಧರ್ಮಗುರುಗಳ ಮುಖವಾಡದಲ್ಲಿ ರಾಜಕೀಯ, ಸಂಸಾರ, ಸುಖಲೋಲುಪತೆಗೆ ಈಡಾದವರ ಸುದ್ದಿಗಳಿಗೆ ಕೊರತೆಯಿಲ್ಲ.

\r\n


| Sadananda R

ಸೋಷಿಯಲ್ ಮೀಡಿಯಾ ನಿವ೯ಹಣೆಯ ವಿವೇಕ ಮೂಡಲು ಇನ್ನೂ ಒಂದಿಷ್ಟುಕಾಲಬೇಕು. ಸದ್ಯ ಅದರ ಉಸುಕಿನಲ್ಲಿ  ಹೂತು ಹೋಗಿರುವವರಿಗೆ ಬೇರೇನೂ ಕಾಣುವುದಿಲ್ಲ. ಮತ್ತೆ ಮಕ೯ಟ ಸ್ಥಿತಿ

\r\n


| Mahesh Babu MS

Excellent sir 

\r\n


| ವಲಿ ಆರ್

ನಮಸ್ತೆ ಸರ್,

\r\n\r\n

ನಿಮ್ಮ ಬರವಣಿಗೆ ಓದುತ್ತಾ ಹೋದಂತೆ ನನಗೆ ನನ್ನ ಗೆಳೆಯನೊಬ್ಬ ಸ್ವಾಮೀಜಿ ಆಗಿದ್ದವನು ಸಂಸಾರಿಯಾಗಿ, ಉಪನ್ಯಾಸಕನಾಗಿ ಉತ್ತಮ ಜೀವನ ಸಾಗಿಸುತ್ತಿರುವುದು ನೆನಪಾಯಿತು. ಅವನು ಸ್ವಾಮೀಜಿ ಆಗಿದ್ದವನು ನನಗೆ ಈ ಪಟ್ಟ ಬೇಡ ಎಂದು ಆ ಸಂಬಂಧ ಕಡಿದು ಕೊಂಡು ಬಂದ ಕಾರಣ ತುಂಬಾ ಆಸಕ್ತಿ ದಾಯಕ. ಒಂದು ಜಾತ್ರೆಯಲ್ಲಿ ಜನ ಅವನ ಕಾಲು ತೊಳೆದು ನೀರು ಕುಡಿಯುತ್ತಾರೆ. ಎಷ್ಟು ಹೇಳಿದರೂ ಕೇಳುವುದಿಲ್ಲ. ಆದ್ದರಿಂದ "ಥೂ ಈ ಜನ ಎಷ್ಟು ಹೇಳಿದರು ಕೇಳುವುದಿಲ್ಲ. ಕಾಲು ತೊಳೆದು ನೀರು ಕುಡಿಯುತ್ತಾರೆ. ಇದು ಎಷ್ಟು ಅಸಹ್ಯ" ಎಂದು ಅಂದಿಗೇ ನಾನು ಸ್ವಾಮೀಜಿ ಆಗಿ ಇರಲಾರೆನೆಂದು ತೀರ್ಮಾನಿಸಿ ಅಲ್ಲಿಂದ ಹೊರ ಬಂದ. ಈಗ ಆತ ಒಬ್ಬ ಒಳ್ಳೆಯ ಉಪನ್ಯಾಸಕ. ಒಳ್ಳೆಯ ಮಿತ್ರ.

\r\n


| Dr.Mohan

ಲೇಖನ ಓದುತ್ತಿರುವಾಗಲೇ ಆದಿ ವಚನಕಾರ ದೇವರ ದಾಸಿಮಯ್ಯನವರ “ಮಠದೊಳಗಣ ಬೆಕ್ಕು ಇಲಿಯ ಕಂಡು ಪುಟನೆಗೆದಂತಾಯ್ತು ಕಾಣಾ ರಾಮನಾಥ” ವಚನ ಸ್ಮೃತಿಪಟಲದಲ್ಲಿ ಹಾದುಹೋಯಿತು. ಹಾಗೆಯೇ ಕಳೆದ ಏಳೆಂಟು ವರುಷಗಳಿಂದ ಮೊನ್ನಮೊನ್ನೆಯ ತನಕ ದೇಶಾದ್ಯಂತ, ಪ್ರಮುಖವಾಗಿ ಕರ್ನಾಟದಲ್ಲಿ ಲೈಂಗಿಕ ಕಾರಣಗಳಿಗಾಗಿ ಸುದ್ದಿಯಾದ ಸ್ವಾಮೀಜಿಗಳ ಕಾಮಪುರಾಣಗಳೂ ಹಾದುಹೋದವು. ಜೊತೆಗೆ ಇಂತಹದೇ ಸಂದಿಗ್ಧ ಮನಸ್ಥಿತಿಯ ಕಥಾಹಂದರವಿರುವ ಕಥೆಗಾರ ಮಿತ್ರ ಗುರುಪ್ರಸಾದ್ ಕಂಟಲಗೆರೆ ಅವರ ‘ಶ್ರೀಮನದ ಹೂದೋಟ’ ಕಥೆಯೂ ನೆನಪಿಗೆ ಬಂದಿತು. ನಮ್ಮ ಪುರಾಣ ಪುಣ್ಯಕತೆಗಳಲ್ಲೇ ಋಷಿಗಳ ಜೊತೆ, ಋಷಿಪತ್ನಿಯರ ವಿಷಯವೂ ಪ್ರಸ್ತಾಪಿತವಾಗಿರುವುದು, ಹಲವು ಋಷಿಪತ್ನಿಯರು ಋಷಿಗಳಷ್ಟೇ ಪ್ರಭಾವಶಾಲಿಗಳಾಗಿರುವುದು ಕಂಡುಬರುತ್ತದೆ. ಅಲ್ಲದೆ, ಎಷ್ಟೋ ಋಷಿಗಳು ಸ್ತ್ರೀಮೋಹಕ್ಕೆ ಸೋತು ತಮ್ಮ ತಪಸ್ಸನ್ನು ಅರ್ಧಕ್ಕೇ ನಿಲ್ಲಿಸಿ ಪ್ರಣಯದಲ್ಲಿ ತೊಡಗಿ ಉದ್ದೇಶಿತ ಕಾರ್ಯದಿಂದ ವಿಮುಖರಾಗಿರುವುದು, ದೇವತೆಗಳೂ ಕೂಡ ಪರಸ್ತ್ರೀ ವ್ಯಾಮೋಹಕ್ಕೆ ಸಿಲುಕಿ ಶಪಿತರಾಗಿರುವುದು - ಹೀಗೆ ಸಾಕಷ್ಟು ಉದಾಹರಣೆಗಳು ನಮ್ಮ ಪ್ರಾಚೀನ ಪುರಾಣಸಾಹಿತ್ಯಗಳಲ್ಲಿ ದೊರೆಯುವಾಗ, ಅದರಿಂದ ನಾವು ಪಾಠ ಕಲಿಯಬೇಕಲ್ಲವೆ ಎನಿಸಿತು.ಸಮಾಜ ಇನ್ನಾದರೂ ಹುಸಿನಂಬಿಕೆಗಳಿಂದ ದೊರೆಯುವ ಹುಸಿತೃಪ್ತಿಯನ್ನು ತೊರೆದು, ರಾಮಕೃಷ್ಣ ಪರಮಹಂಸ ಮತ್ತು ಶಾರದಾದೇವಿ ದಂಪತಿಗಳಂತೆ ಜೊತೆಯಾಗಿ ನಿಂತು ಮಠಗಳನ್ನು ಮುನ್ನಡೆಸುವ ಬಗ್ಗೆ ಏಕೆ ಚಿಂತಿಸಿಬಾರದು?. ಇದೇ ದಾಸಿಮಯ್ಯನವರು “ಸತಿಪತಿಗಳೊಂದಾದ ಭಕ್ತಿ ಹಿತವಪ್ಪುದು ಶಿವಂಗೆ” ಎಂದೂ ಹೇಳಿಲ್ಲವೆ? ಸಮಾಜಕ್ಕೆ, ನಂಬಿದ ಸಮುದಾಯಕ್ಕೆ ಮುಜುಗರ ಉಂಟುಮಾಡುವ ಸಂಗತಿಗಳು ನಿಲ್ಲಬೇಕಾದರೆ ವಿವಾಹಿತ ಸ್ವಾಮೀಜಿಗಳಿರುವುದು ಕ್ಷೇಮ.

\r\n


| Dr.Vijaya

ಸ್ವಾಮೀಜಿ ವೇಷ ಕಳಚಿ ಹೊರಗೆ ಬಂದವರ ಬಗ್ಗೆ ಎರಡು ಮಾತಿಲ್ಲ.ಅಲ್ಲೇ ಕೂತು ಸಕಲ ವೈಭವಗಳನ್ನೂ ಅನುಭವಿಸಿ,ಅಧಿಕಾರ ಚಲಾಯಿಸಿ ಮುಗ್ಧ ಮಕ್ಕಳನ್ನು,ಮಹಿಳೆಯರನ್ನು ಕಳ್ಳ ತನದಲ್ಲಿ ಬಳಸಿಕೊಳ್ಳುವವರು ಕಳ್ಳರು.ಅವರ ವಿರುದ್ದ‌ ಸಮರ ಬೇಕು.ಸಂನ್ಯಾಸ ಬಿಟ್ಟು ಎದ್ದು ಬರಲಿ, ಸ್ವತಂತ್ರ ವಾಗಿ ಬದುಕಲಿ. 

\r\n


| ಗುರುಪ್ರಸಾದ್

ಮಠದ ಸ್ವಾಮಿ ಮದುವೆಯಾಗಿದ್ದರೆ ತಪ್ಪಲ್ಲ ಎಂದು ಕೆಲ ವರ್ಷಗಳ ಕೆಳಗೆ ನಿಡುಮಾಮಿಡಿ ಸ್ವಾಮಿಗಳು ತೀವ್ರವಾಗಿ ಪ್ರತಿಪಾದಿಸಿದರು. ಇದ್ರಿಯ ನಿಗ್ರಹ ಅಸಾಧ್ಯ ಎಂಬುದು ಅವರ ನಿಲುವಾಗಿತ್ತು..ಈ ಬಗ್ಗೆ ದಾವಣಗೆರೆಯ ಒಂದು ಸಮಾರಂಭದಲ್ಲಿ ಹೀಗೆ ಹೇಳುತ್ತ ತೀವ್ರ ಅಸ್ವಸ್ಥರಾದರು.ಮುಖ್ಯವಾಹಿನಿಯಲ್ಲಿದ್ದ ಅವರು ಹಿಂದೆ ಸರಿದರು.ಅವರು ಹೇಳಿದ್ದು ಸರಿಯಾಗಿತ್ತು.ಪ್ರಮುಖ ಮಠದ ಸ್ವಾಮಿಗಳು ಆಸ್ತಿ, ಶಿಕ್ಷಣ ಸಂಸ್ಥೆಗಳು, ರಾಜಕೀಯ ಇತ್ಯಾದಿ ಎಲ್ಲದರಲ್ಲಿ ತೊಡಗಿಕೊಂಡಿದ್ದಾರೆ.ಕಾವಿ ತೊಟ್ಟು ಪ್ರವಚನ ಮಾಡುತ್ತಾರೆ,.ನಂತರ ಒಳಗೆ ಕಾವಿ ಕಳಚಿಟ್ಟು  ಸೈಟ್ ವ್ಯಾಪಾರ ಮಾಡುತ್ತಾರೆ..ಇದು ಅವರಿಗೆ ಅನಿವಾರ್ಯವಾಗಿದೆ.ಒಬ್ಬ ಜನಸಾಮಾನ್ಯ ಒಂದು ಸಣ್ಣ ತಪ್ಪು ಮಾಡಿ ವೈಯಕ್ತಿಕವಾಗಿ ಪಶ್ಚಾತ್ತಾಪ ಪಡುತ್ತಾನೆ.ಆದರೆ ಕೆಲ ಸ್ವಾಮಿಗಳು ನೈತಿಕವಾಗಿ ನಾಶ ಹೊಂದಿದ್ದು ಅದರ ಬಗ್ಗೆಯೇ  ಭಕ್ತರಿಗೆ ಸುಳ್ಳೇ ಭಾಷಣ ಬಿಗಿಯುತ್ತಿರುತ್ತಾರೆ..

\r\n


| ಡಾ. ನಿರಂಜನ ಮೂರ್ತಿ ಬಿ ಎಂ

ಮನುಜನ ಬದುಕಿನಲ್ಲಿ ಹಾಸುಹೊಕ್ಕಾಗಿರುವ ಧರ್ಮ ಮತ್ತು ಅದನ್ನು ಪ್ರತಿನಿಧಿಸುವ ಧರ್ಮಗುರುಗಳ ಆಂತರಿಕ ತೊಳಲಾಟಗಳ ಬಗ್ಗೆ ವಾಸ್ತವ ಚರ್ಚೆಯನ್ನು ಹುಟ್ಟುಹಾಕಿರುವ ನಟರಾಜ್ ಹುಳಿಯಾರರ 'ಧರ್ಮಗುರುಗಳ ಮೈಮನಗಳ ಸುಳಿ' ಎಂಬ ಈ ಲೇಖನ ಸಮಯೋಚಿತ ಮತ್ತು ಸಂದರ್ಭೋಚಿತ.

\r\n\r\n

'ಗಡ್ಡ ಗಂಡನಿಗೊಂದು ಶಾಪ' ಎಂದು ಎಲ್ಲೋ ಓದಿದ ನೆನಪು. ಅದರ ವಿವರಣೆ ನೆನಪಿಲ್ಲ. (ಬಹುಶಃ ಪ್ರತೀ ಸೂರ್ಯೋದಯದಂದು ಕೆತ್ತಿದ ಗಡ್ಡ ಪ್ರತೀ ಸೂರ್ಯಾಸ್ತದೊಳಗೆ ಮತ್ತೆ ಚಿಗುರಿ ಮುದ್ದಿನ ಮಡದಿಯ ಕದಪುಗಳಿಗೆ ತಾಕಿ ನೋಯಿಸುವುದೇ ಕಾರಣವಿರಬಹುದು!)
\r\nಗಂಡನಿಗೆ ಗಡ್ಡವೇ ಶಾಪವೆನ್ನುವುದಾದರೆ, ಧರ್ಮಗುರುಗಳು ಪಾಲಿಸಲೇಬೇಕಾಗಿರುವ ಬ್ರಹ್ಮಚರ್ಯ ಮಹಾಶಾಪವೇ ಸರಿ!

\r\n\r\n

ಬಾಲ್ಯದಿಂದಲೇ ವೈರಾಗ್ಯ ಮನೋಭಾವ ತಾಳಿ ಧರ್ಮಗುರುಗಳಾಗಿರುವ ಹಲವರು ನಿಜವಾಗಿಯೂ ಈ ಸಮಾಜದಲ್ಲಿನ ಧರ್ಮೋದ್ಧಾರಕ್ಕೆ ಕಾರಣೀಭೂತರಾಗಿದ್ದಾರೆ  ಮತ್ತು ಆ ಮೂಲಕ ಧರ್ಮಾನುಯಾಯಿಗಳ ಬದುಕಿಗೆ ಅರ್ಥಪೂರ್ಣತೆ, ಧನ್ಯತೆ, ಮತ್ತು ಸಾರ್ಥಕತೆಗಳನ್ನು ತಂದಿದ್ದಾರೆ. ಸಮಾಜ ಸರಿದಾರಿಯಲ್ಲಿ ಸಾಗುವ ಹಾಗೆ ಮಾಡಿದ್ದಾರೆ. ಆದರೆ, ಬರೀ ಸ್ವಾರ್ಥ, ಸವಲತ್ತು, ಸಂಪತ್ತು, ಅಧಿಕಾರ, ಐಶಾರಾಮಗಳಿಗಾಗಿ ಧರ್ಮಗುರುಗಳಾಗುವವರು, ದೈವದ ತುಡಿತಗಳಿಗೆ ಮಿಡಿಯಲಾಗದೆ, ದೇಹದ ತುಡಿತಗಳನು ತಡೆಯಲಾಗದೆ, ಮರೆಯಲ್ಲಿ ಮೌನವಾಗಿ ಒದ್ದಾಡಿ, ಬಯಲಲ್ಲಿ ಜೋರಾಗಿ ಬಡಿದಾಡಿ, ಧರ್ಮದ ಅರ್ಥ ಮತ್ತು ಬದುಕಿನ ಅಂದವನ್ನು ಕೆಡಿಸಿಬಿಡುವರು.

\r\n\r\n

ನಿಜವಾದ ವೈರಾಗ್ಯವಿರುವವರು ಮಾತ್ರ ಧರ್ಮಗುರುಗಳಾಗುವುದು ಸಮಂಜಸ. ಇಲ್ಲವಾದರೆ ಸಮಾಜ ಅವರ ಮೇಲೆ ಹೇರಿರುವ ಅಸಹಜ ಕಟ್ಟುಪಾಡುಗಳನ್ನು ತೆಗೆದುಹಾಕಿ, ಅವರೂ ಕೂಡ ಸಹಜ-ಸಾಮಾನ್ಯ ಬದುಕಿನ ರೀತಿಯನ್ನಳವಡಿಸಿಕೊಂಡು , ಧರ್ಮೋದ್ಧಾರಕ್ಕೆ ದುಡಿಯುವಂತೆ ಮಾಡುವುದು ಅತೀ ಸಮಂಜಸ.

\r\n


| Dr.Muniyappa

ಧರ್ಮ ಗುರುಗಳ ಮೈಮನಗಳ ಸುಳಿ, ಲೇಖನ ಧರ್ಮ ಗುರುಗಳ ಅಂದು, ಇಂದು, ಮುಂದೆ ಎಲ್ಲಾ ಕಾಲದಲ್ಲಿನ ಮನುಷ್ಯನ ದೇಹದ ಭಾವನೆಗಳಿಗೆ ಹಿಡಿದು ಕನ್ನಡಿ, ಇಂದಿನ ಸಮಾಜ, ಮಾಧ್ಯಮ, ವ್ಯಕ್ತಿ ಎಲ್ಲಾ ನೆಲೆಗಳನ್ನು ಮುಖ್ಯವಾಗಿಸಿಕೊಂಡು ವಿಶ್ಲೇಷಿಸಿಸಲ್ಪಟ್ಟ ಲೇಖನ, ಅಭಿನಂದನೆಗಳು, ನಿಮ್ಮ ಬರವಣಿಗೆ ಸಮಾಜಕ್ಕೆ ಒಳ್ಳೆಯ ಕನ್ನಡಿಯಾಗಲಿ 

\r\n




Add Comment






Recent Posts

Latest Blogs



Kamakasturibana

YouTube