ವಸು ಮಳಲಿ, ಎಂ.ಡಿ.ಎನ್. …ಫೆಬ್ರವರಿ 3

ಕಳೆದ ಸಲದ ಅಂಕಣದಲ್ಲಷ್ಟೇ ಇಪ್ಪತ್ತೈದು ವರ್ಷಗಳ ಕೆಳಗೆ ಅಗಲಿದ ಲಂಕೇಶರ ಬಗ್ಗೆ ಬರೆದಿದ್ದ ಬೆರಳುಗಳು ಮತ್ತೆ ಅಗಲಿದ ಆತ್ಮೀಯರ ಬಗ್ಗೆ ಬರೆಯಲು ಹಿಂಜರಿಯುತ್ತವೆ… ವಸು, ಎಂಡಿಎನ್ ತೀರಿಕೊಂಡ ದಿನಾಂಕ ಫೆಬ್ರವರಿ 3 ಎಂಬುದು ನೆನಪಾಗಿ, ‘ಅಳಿದ ಮೇಲೆ ಉಳಿದದ್ದೇನು?’ ಎಂಬ ಶಿವರಾಮ ಕಾರಂತರ ‘ಅಳಿದ ಮೇಲೆ’ ಕಾದಂಬರಿಯ ದನಿ ಮರುದನಿಸತೊಡಗುತ್ತದೆ…

ಪ್ರೊಫೆಸರ್ ಎಂ.ಡಿ.ನಂಜುಂಡಸ್ವಾಮಿ ನಾಡಿನ ಹಾಗೂ ಜಗತ್ತಿನ ರೈತ ಹೋರಾಟದಲ್ಲಿ, ಕನ್ನಡ ಸಮಾಜವಾದಿ ಚಿಂತನೆಯಲ್ಲಿ, ರೈತ ನಾಯಕರಲ್ಲಿ, ಕಾರ್ಯಕರ್ತರಲ್ಲಿ, ರೈತ ಪರ ಜನರಲ್ಲಿ, ಪುಸ್ತಕಗಳಲ್ಲಿ, ಬರಹಗಳಲ್ಲಿ, ಯುಟ್ಯೂಬ್ ಭಾಷಣಗಳಲ್ಲಿ ಉಳಿದು ಬೆಳೆದು ಹಬ್ಬುತ್ತಿದ್ದಾರೆ. ಇತಿಹಾಸದ ಪ್ರೊಫೆಸರ್ ಡಾ. ವಸು ಮಳಲಿ ‘ಮೌಖಿಕ ಇತಿಹಾಸ’, ‘ಕನ್ನಡದೊಳ್ ಭಾವಿಸಿದ ಜನಪದಂ’, ‘ಕಳ್ಳು ಬಳ್ಳಿ’ ಪುಸ್ತಕಗಳಲ್ಲಿ, ನನ್ನ ‘ನೆತ್ತರು ಮತ್ತು ಗುಲಾಬಿ’ ಕತೆಯನ್ನು ಆಧರಿಸಿ ಮಾಡಿದ ‘ಶಸ್ತ್ರ’ ಅಪೂರ್ಣ ಸಿನಿಮಾದ ರೀಲುಗಳಲ್ಲಿ ಜೀವಂತವಾಗಿದ್ದಾರೆ; ಟೀಚಿಂಗಿನ ಪ್ರಭಾವದ ಬಗ್ಗೆ ಅಪಾರ ನಂಬಿಕೆಯಿಂದ ಎಂ.ಎ. ತರಗತಿಗಳಲ್ಲಿ ಇತಿಹಾಸ ಪಾಠ ಮಾಡಿ ಬೆಳೆಸಿದ ನೂರಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರಲ್ಲಿ ಉಳಿದು ಬೆಳೆಯುತ್ತಿದ್ದಾರೆ.

ಎಂಡಿಎನ್ ಬಗ್ಗೆ ಕಳೆದ ತಿಂಗಳು ಇದೇ ಅಂಕಣದಲ್ಲಿ (READ HERE) ಬರೆದಿರುವುದರಿಂದ ವಸು ಮಳಲಿಯವರ ಬಗ್ಗೆ ಹಿಂದೊಮ್ಮೆ ಪ್ರಜಾವಾಣಿಯಲ್ಲಿ ಬರೆದ ಟಿಪ್ಪಣಿಯ ಭಾಗಗಳನ್ನು ಕೊಡುತ್ತಿರುವೆ:

‘ಮುಂದೂಡಿದ ಕನಸಿಗೆ ಏನಾಗುತ್ತದೆ?’

ಇದು ಲ್ಯಾಂಗ್ಸ್‌ಟನ್ ಹ್ಯೂಸ್ ಬರೆದ ‘HARLEM’ ಎಂಬ ಹಾಡುಗವಿತೆಯ ಆರಂಭದ ಪ್ರಶ್ನೆ.

‘ಅದು ಬಿಸಿಲಲ್ಲಿ ಒಣಗಿದ ದ್ರಾಕ್ಷಿಯಂತೆ ಒಣಗುವುದೆ?’ ಎಂಬ ಉತ್ತರ ರೂಪದ ಪ್ರಶ್ನೆ ಶುರುವಿನಲ್ಲಿದೆ. ಮುಂದೂಡಿದ ಕನಸಿಗೆ ಏನೇನಾಗಬಹುದು ಎಂಬುದನ್ನು ಓದುಗರೇ ಕೇಳಿಕೊಳ್ಳುವಂತೆ ಪ್ರೇರೇಪಿಸುತ್ತಾ ಕವಿತೆ ಬೆಳೆಯುತ್ತದೆ.

‘ಅದು ಸ್ಫೋಟಗೊಳ್ಳುವುದೆ?’ ಎಂದು ಕವಿತೆ ನಿಲ್ಲುತ್ತದೆ; ಆದರೆ ಕವಿತೆ ಅಲ್ಲಿಗೇ ಮುಗಿಯುವುದಿಲ್ಲ.

ವಸು ಮಳಲಿ ಇನ್ನಿಲ್ಲವೆಂಬ ಸುದ್ದಿ (3 ಫೆಬ್ರವರಿ 2015) ಎರಗಿದ ತಕ್ಷಣ ಹುಟ್ಟಿದ ದುಃಖದ ಜೊತೆಗೇ ‘What happens to a dream deferred?’ ಎಂಬ ಸಾಲು ಮುತ್ತತೊಡಗಿತು. ರೂಪಕಗಳ ಸತ್ಯ ರುದ್ರ ಭೀಕರ ಅನ್ನಿಸತೊಡಗಿತು. ಇನ್ನು ಕಾಯಮ್ಮಾಗಿ ಮುಂದೂಡಲ್ಪಟ್ಟ ವಸುವಿನ ಕನಸುಗಳು ಕೇವಲ ಖಾಸಗಿ ಕನಸುಗಳಾಗಿರಲಿಲ್ಲ. ಕರ್ನಾಟಕದ ವಿವಿಧ ವೇದಿಕೆಗಳಲ್ಲಿ ಮಾಡಬೇಕಾದ ಗಂಭೀರ ಉಪನ್ಯಾಸಗಳು, ಸಿನಿಮಾ ಸ್ಕ್ರಿಪ್ಟುಗಳು, ಸಂಗೀತ, ಹೊಸ ತಲೆಮಾರಿಗಾಗಿ ಪ್ರಗತಿಪರ ಚಿಂತನೆಗಳ ಪುಸ್ತಕ ಸಂಪಾದನೆ, ಇತಿಹಾಸದ ವಿದ್ಯಾರ್ಥಿಗಳಿಗೆ ಆಧುನಿಕೋತ್ತರ ಚಿಂತನ ಮಾರ್ಗಗಳು, ಮಹಿಳಾ ವೇದಿಕೆಗಳಿಗಾಗಿ ಅನೇಕ ಬಗೆಯ ಸಂಶೋಧನಾ ಸಾಮಗ್ರಿಗಳ ತಯಾರಿ... ಹೀಗೆ ಒಂದಲ್ಲ ಒಂದು ಕನಸಿನ ಹಣ್ಣನ್ನು ಅಂಗೈಲಿ  ಹಿಡಿದವರಂತೆ ವಸು ಕಣ್ಣರಳಿಸಿ ಮಾತಾಡುತ್ತಿದ್ದರು.

ನಮ್ಮ ಹತ್ತಿರದವರಿಗೆ ಕಾಯಿಲೆಯಾದಾಗ ನಮ್ಮೊಳಗೆ ವಿಚಿತ್ರ ಭಯ ಶುರುವಾಗುತ್ತದೆ. ಈ ಭಯ ಎಲ್ಲರ ಅನುಭವಕ್ಕೂ ಬಂದಿರುತ್ತದೆ. ಒಂದು: ಅವರನ್ನು ಕಳೆದುಕೊಳ್ಳುವ ಭಯ. ಇನ್ನೊಂದು: ನಾವು ಅವರ ಕಷ್ಟ ಕೊನೆಗಾಣಿಸಲು ಏನೂ ಮಾಡಲಿಲ್ಲವಲ್ಲ ಎಂದು ಒಳಗೊಳಗೇ ಹಬ್ಬುವ ಪಾಪಪ್ರಜ್ಞೆ.

ನನ್ನ ಜೊತೆಗೇ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಚರಿತ್ರೆಯ ಪ್ರಾಧ್ಯಾಪಕರಾಗಿದ್ದ ವಸು ಕ್ಯಾನ್ಸರಿನಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ವಾಪಸು ಬಂದ ದಿನ ನನಗೂ ಹೀಗಾಗಿತ್ತು. ವಸು ಕೆಲವೇ ದಿನಗಳ ಕೆಳಗೆ ಕಿಮೋಥೆರಪಿ ಮುಗಿಸಿಕೊಂಡು ಕ್ಲಾಸಿಗೆ ಹಾಜರಾಗಿದ್ದರು. ಕೂದಲು ಉದುರಿದ ತಲೆಗೆ ಹಸಿರು ನೀಲಿ ಬೆರೆತ ಸ್ಕಾರ್ಫ್ ಕಟ್ಟಿಕೊಂಡಿದ್ದರು. ಗಂಡಸಾದ ಕಾರಣಕ್ಕೆ… ನನ್ನ ಗಂಟಲಲ್ಲಿ ಉಕ್ಕಿ ಅಲ್ಲೇ ನೆಲೆನಿಂತ ಅಳು; ವಸು ಕಷ್ಟದಲ್ಲಿದ್ದಾಗ ಏನೂ ಮಾಡಲಿಲ್ಲವಲ್ಲ ಎಂಬ ಕಸಿವಿಸಿ. 

ಆ ಕಸಿವಿಸಿಯ ಭಾವವನ್ನೇ ನನ್ನಿಂದ ಹೊಡೆದು ಓಡಿಸುವಂತೆ ವಸು ನಕ್ಕರು. ಅದೇ ಆಗ ಚೇತರಿಸಿಕೊಂಡ ರೋಗಿಯಂತೆ ತನ್ನನ್ನು ನೋಡಕೂಡದೆಂದು ಸೂಚಿಸುವಂತೆಯೂ ನಕ್ಕರು. ವಸು ಆಸ್ಪತ್ರೆಯಲ್ಲಿದ್ದಾಗ ಹೋಗಿ ನೋಡಲಾಗದ ನನಗೆ ಅವರಿಗೆ ಕಾಯಿಲೆಯಾಗಿದ್ದೇ ಸುಳ್ಳಿರಬೇಕು ಎನ್ನಿಸುವಷ್ಟು ಅವರ ಮುಖ ಫ್ರೆಶ್ ಆಗಿತ್ತು. ನೀವು ಅಷ್ಟೆಲ್ಲ ಕಷ್ಟಗಳನ್ನು ಹಾದು ಬಂದಿದ್ದೀರಿ ಎಂದು ನಿಮ್ಮ ಮುಖ ನೋಡಿದರೆ ಅನ್ನಿಸುವುದೇ ಇಲ್ಲ ಎಂದು ನಿಜಕ್ಕೂ ಅನಿಸಿದ್ದನ್ನು ಹೇಳಿದೆ. ವಸು ಅಪಾರ ಸಮಾಧಾನದಿಂದ ನಕ್ಕರು. ವಸು ಸಾವನ್ನು ಗೆದ್ದಿದ್ದಾರೆ ಎಂದುಕೊಂಡೆ.

ಪ್ರಜಾವಾಣಿಯಲ್ಲಿ ‘ಕಳ್ಳು ಬಳ್ಳಿ’ ಎಂಬ ಅಂಕಣ ಶುರು ಮಾಡಿದ ದಿನ ಅವರು ಬರೆದ ‘ಒಡಲ ಬೆಂಕಿ ಆರದಿರಲಿ’ ಬರಹದಲ್ಲಿ ಅವರ ಕಾಯಿಲೆಯ ಘಟ್ಟದ ತಲ್ಲಣಗಳೆಲ್ಲ ಇರುವಂತೆ ಕಂಡಿತು. ಆ ವಿವರಗಳನ್ನು ಎದುರಿಸಲಾರದೆ ನಾನು ಆ ಅಂಕಣ ಓದುವುದನ್ನೇ ತಪ್ಪಿಸಿಕೊಂಡೆ. ಅಂಕಣ ಬರವಣಿಗೆ ವಸುವಿಗೆ ಅಪಾರ ಸಾರ್ಥಕ್ಯ ಭಾವವನ್ನೂ ಹೊಸ ಜೀವನೋದ್ದೇಶವನ್ನೂ ಕೊಟ್ಟು ಅವರನ್ನು ಪೊರೆಯತೊಡಗಿತು. ಅಂಕಣ ಪ್ರಕಟವಾದ ದಿನ ಬರುತ್ತಿದ್ದ ಫೋನ್ ಕರೆಗಳು ಹಾಗೂ ಟೀಕೆಗಳು ಅವರಲ್ಲಿ ಹೊಸ ಜೀವ ತುಂಬುತ್ತಿದ್ದವು.

ಆಸ್ಪತ್ರೆಯಿಂದ ಬಂದ ನಂತರದ ಒಂದೆರಡು ವರ್ಷಗಳಲ್ಲಿ ವಸು ಬದುಕಿದ ಒಂದೊಂದು ದಿನವೂ, ಅವರು ತೊಡಗಿಕೊಂಡ ಪ್ರತಿ ಬೌದ್ಧಿಕ ಹಾಗೂ ಸೃಜನಶೀಲ ಕೆಲಸವೂ ಅವರು ಸಾವಿನ ಜೊತೆ ನಡೆಸಿದ ಸೆಣಸಾಟವೇ ಆಗಿದ್ದುದರ ಸುಳಿವು ನನ್ನ ಕಣ್ಣಿಗೂ ಹತ್ತುತ್ತಿತ್ತು. ಸೂಕ್ಷ್ಮಜೀವಿಗಳು ಆಳವಾಗಿ ತೊಡಗಿ ನಡೆಸುವ ಪ್ರತಿ ಕೆಲಸವೂ ಎಲ್ಲೋ ಆಳದಲ್ಲಿ ಸಾವನ್ನು ಮುಂದೂಡುವ ಪ್ರಯತ್ನವೇ! ಕಾಲೇಜು ಹುಡುಗಿಯಾಗಿದ್ದಾಗಿನಿಂದ ಸಹಜ ನಾಯಕತ್ವದ ಗುಣ ಚಿಮ್ಮುತ್ತಿದ್ದ ವಸು ಎಂಥ ಕಷ್ಟ ಬರಲಿ, ಸುಮ್ಮನೆ ಕೂತಿರುವುದು ಸಾಧ್ಯವೇ ಇರಲಿಲ್ಲ. ಕಾಲೇಜಿನ ಯೂನಿಯನ್ ಎಲೆಕ್ಷನ್ ಗೆದ್ದ ವಸು ಮೈಸೂರು ವಿಶ್ವವಿದ್ಯಾಲಯದ ಖೊಖೋ ಟೀಮಿನ ನಾಯಕಿಯಾಗಿದ್ದವರು. ಜೊತೆಯಲ್ಲಿದ್ದವರನ್ನು ತನ್ನೊಡನೆ ಮುಂದೊಯ್ಯಬೇಕೆಂಬ ನಾಯಕಿಧ್ವನಿ ಅವರು ಮಾತಾಡಿದಾಗ, ಬರೆದಾಗ, ಸಂವಾದ ಮಾಡಿದಾಗ ಮತ್ತೆ ಮತ್ತೆ ಕಾಣುತ್ತಿತ್ತು.

‘ಸಮಾಜದಲ್ಲಿ ಮತ್ತು ಚರಿತ್ರೆಯಲ್ಲಿ ಧ್ವನಿ ಕಳೆದುಕೊಂಡವರ ಧ್ವನಿಯಾಗಬೇಕಾದುದು ಮೌಖಿಕ ಇತಿಹಾಸ’ ಎಂಬ ಉದ್ದೇಶದಿಂದ ‘ಮೌಖಿಕ ಇತಿಹಾಸ’ ಪುಸ್ತಕ ಬರೆದ ವಸು, ಕರ್ನಾಟಕದ ಚರಿತ್ರೆಯನ್ನು ಅರಿಯಲು ಮೌಖಿಕ ಆಕರಗಳನ್ನು ಬಳಸಲು ಉತ್ಸುಕರಾಗಿದ್ದರು. ಅನನ್ಯ ಇತಿಹಾಸಕಾರ ಇರ್ಫಾನ್ ಹಬೀಬ್ ಮಾದರಿಯಲ್ಲಿ ಜನ ಸಮುದಾಯದ ಚರಿತ್ರೆಯನ್ನು ನೋಡಲೆತ್ನಿಸಿದ ವಸು ಆ ದಿಕ್ಕಿನಲ್ಲಿ ಅಪಾರ ಕೆಲಸ ಮಾಡುವ ಸಾಧ್ಯತೆಯಿತ್ತು. ಅವರು ನನ್ನ ಕಣ್ಣೆದುರೇ ಕೆಲವೇ ತಿಂಗಳಲ್ಲಿ ‘ಕನ್ನಡದೊಳ್ ಭಾವಿಸಿದ ಜನಪದಂ’ ಎಂಬ ಬೃಹತ್ ರೆಫರೆನ್ಸ್ ಪುಸ್ತಕವನ್ನು ಸಂಪಾದಿಸಿ ಕೊಟ್ಟರು. ಈ ಪುಸ್ತಕದಲ್ಲಿ ವಸು ಎಡತಾಕುತ್ತಿದ್ದ ಹಲಬಗೆಯ ಅಕಡೆಮಿಕ್ ಶಿಸ್ತುಗಳನ್ನು ಬಳಸಿದ ಲೇಖಕ, ಲೇಖಕಿಯರ ಬರಹಗಳಿವೆ.

ಕರ್ನಾಟಕದಲ್ಲಿ ಎಸ್. ಚಂದ್ರಶೇಖರ್, ಷ. ಶೆಟ್ಟರ್, ಅಶೋಕ ಶೆಟ್ಟರ್ ಮುಂತಾದ ಚರಿತ್ರಕಾರರಂತೆ, ಅವರ ನಂತರದ ತಲೆಮಾರಿನ ಸಿ.ಆರ್.ಗೋವಿಂದರಾಜು, ವಸು ಕೂಡ ಕನ್ನಡ ಸಾಹಿತ್ಯದೊಂದಿಗೆ ನಿಕಟ ಸಂಬಂಧವಿಟ್ಟುಕೊಂಡು ಇತಿಹಾಸಲೇಖನವನ್ನು ಮುಂದುವರೆಸಿದರು. ವಸುವಿನಲ್ಲಿ ಸ್ತ್ರೀವಾದ-ಎಡಪಂಥೀಯ ನೋಟಕ್ರಮ ಎರಡೂ ಬೆರೆತು, ಈ ಎಲ್ಲರಿಗಿಂತ ಭಿನ್ನವಾಗಿ ನಡೆಯಲೆತ್ನಿಸಿದರು.  

ವಸು ಹಲಬಗೆಯ ಕಲಾಪ್ರಕಾರಗಳ ಜೊತೆಗೆ ಒಡನಾಡುತ್ತಿದ್ದುದರಿಂದ ಅವರು ಚರಿತ್ರೆಯನ್ನು ನೋಡುತ್ತಿದ್ದ ಕ್ರಮವೂ ಹೆಚ್ಚು ಜೀವಂತವಾಗಿತ್ತು. ಅನಿಮೇಷನ್ ಮೂಲಕ ಇಂಡಿಯಾದ ಇತಿಹಾಸವನ್ನು ನಿರ್ಮಿಸುವ ಮಹತ್ವಾಕಾಂಕ್ಷೆಯ ಪ್ರಯತ್ನವನ್ನೂ ವಸು ಮಾಡಿದರು; ಅದು ನಿಂತುಹೋಯಿತು. ಈ ನಡುವೆ ಹಾಲಿವುಡ್‌ಗೆ ಹೋಗಿ ಅಲ್ಲಿ ಒಂದು ಸಿನಿಮಾ ಕೋರ್ಸ್ ಕೂಡ ಮಾಡಿ ಬಂದರು. ಆ ನಂತರ ವಸು ‘ಶಸ್ತ್ರ’ ಸಿನಿಮಾ ಶೂಟ್ ಮಾಡುತ್ತಿದ್ದರು. ಈ ಸಿನಿಮಾ ಶೂಟಿಂಗಿನ ಕಾಲದಲ್ಲಿ ಹಟಾತ್ತನೆ ಕಾಣಿಸಿಕೊಂಡ ಎದೆನೋವನ್ನು ಅವರು ಉದಾಸೀನ ಮಾಡಲಿಲ್ಲ. ಈ ಎಚ್ಚರ ಇದ್ದಕ್ಕಿದ್ದಂತೆ ಎರಗಿದ ವಿಪತ್ತನ್ನು ಎದುರಿಸುವ, ಬದುಕುವ ವಸುವಿನ ಛಲದ ಭಾಗವಾಗಿತ್ತು. ಕಿಮೋಥೆರಪಿಗಳ ಭೀಕರ ಯಾತನೆಗಳನ್ನು ಅವರು ಹಾದು ಬಂದರು. ನಾನು ಭೇಟಿಯಾಗುವ ಹೊತ್ತಿಗೆ ವಸು ಆತಂಕದಿಂದ ಪಾರಾದಂತಿದ್ದರು.

ಇನ್ನೇನು ಹರಳುಗಟ್ಟುತ್ತಿದ್ದ ಚಿಂತಕಿಯಾಗಿ ವಸು ವಿದ್ಯಮಾನಗಳನ್ನು ನೋಡುತ್ತಿದ್ದ ರೀತಿಯಲ್ಲಿ ಎಡಪಂಥೀಯ ಒಲವಿತ್ತು; ಎಡಪಂಥೀಯ ಹಣೆಪಟ್ಟಿ ಹಚ್ಚಿಕೊಳ್ಳಲು ಅವರೊಳಗೆ ಹಿಂಜರಿಕೆಯಿತ್ತು. ಆದರೆ ಜನವಾದಿ ಮಹಿಳಾ ಸಂಘಟನೆಯ ಬಗ್ಗೆ ಅವರಿಗೆ ಅಪಾರ ವಿಶ್ವಾಸವಿತ್ತು. ಮೊಗಳ್ಳಿ ಗಣೇಶರಂಥ ಚಿಂತಕರ ಹಾಗೆ ವಸು ಕೂಡ ಸಮೂಹಪ್ರಜ್ಞೆ ಎಂಬುದನ್ನು ಜಾನಪದ ನೆಲೆಯಲ್ಲಿ ವಿವರಿಸಿಕೊಳ್ಳಲೆತ್ನಿಸುತ್ತಿದ್ದರು. ಮೂರು ವರ್ಷಗಳ ಕೆಳಗೆ ಹಾಸನ ಜಿಲ್ಲೆಯಲ್ಲಿರುವ ತಮ್ಮೂರು ಮಳಲಿಗೆ ಹೋಗಿ ಗ್ರಾಮದೇವತೆ ಮಳಲಿ ಗಿಡ್ಡಮ್ಮನ ಜಾತ್ರೆಯನ್ನು ಚಿತ್ರೀಕರಿಸಿಕೊಂಡು ಬಂದಿದ್ದರು. ‘ಅದೆಲ್ಲ ಟೈಂ ವೇಸ್ಟ್ ಅಲ್ಲವೆ!’ ಎಂದು ನಾನು ಕುಟುಕಿದರೆ ಅದನ್ನೂ ನಕ್ಕು ಸ್ವೀಕರಿಸುತ್ತಿದ್ದರು.

ಸಿದ್ಧಾಂತಗಳು ಒಂದೆಡೆ ಎಳೆದರೆ, ಕಾಲದ ಒತ್ತಾಯಗಳು ವಸುವನ್ನು ಮತ್ತೊಂದೆಡೆಗೆ ಎಳೆಯುತ್ತಿದ್ದಂತೆ ಕಾಣುತ್ತಿತ್ತು. ಇವೆರಡರ ನಡುವಣ ಬಿರುಕು ಅವರಿಗೂ ಗೊತ್ತಿತ್ತು. ಅವನ್ನು ಕುರಿತು ನಮ್ಮಂಥವರ ಟೀಕೆಗೂ ಅವರಲ್ಲೊಂದು ವಿಶಾಲ ಸ್ಪೇಸ್ ಇತ್ತು. ಅವರು ಮೆಚ್ಚುವ ಸಿನಿಮಾಗಳನ್ನು, ಹೆಣೆಯುವ ಸ್ರ‍್ಕೀನ್ ಪ್ಲೇಗಳನ್ನು ಕುರಿತು ನಾನು ರೇಗಿಸಿದಾಗ ವಸು ಕೊಂಚ ಮುದುಡಿದರೂ, ವಿಷಯ ಬದಲಿಸಿ ನನ್ನನ್ನೇ ಹಗುರಗೊಳಿಸಲೆತ್ನಿಸುತ್ತಿದ್ದರು. ಮತ್ತೆ ಸಿಕ್ಕಾಗ ಅವತ್ತು ಮುದುಡಿದ ಕುರುಹು ಅವರಲ್ಲಿ ಒಂಚೂರೂ ಇರುತ್ತಿರಲಿಲ್ಲ. ಹೆಣ್ಣಿನ ರಿಯಾಯತಿಯನ್ನಾಗಲೀ, ಹೆಣ್ಣೆಂಬ ಕಾರಣಕ್ಕೆ ತನ್ನ ಮಾತಿಗೆ ಮನ್ನಣೆ ನೀಡಬೇಕೆಂದಾಗಲೀ ವಸು ನಿರೀಕ್ಷಿಸುತ್ತಿರಲಿಲ್ಲ.

ತಮ್ಮ ತಾತ್ವಿಕತೆಗಳನ್ನೂ, ತಮ್ಮ ವೈಯಕ್ತಿಕ ಸ್ವಾತಂತ್ರ‍್ಯವನ್ನೂ, ತಾವು ಹೇಳಬಯಸಿದ್ದನ್ನು ಹೇಳಲು ತಕ್ಕ ಪ್ರಕಾರಗಳನ್ನೂ ತಮಗೆ ಸರಿಕಂಡಂತೆ ರೂಪಿಸಿಕೊಂಡಿದ್ದ ವಸು ಚರಿತ್ರೆ, ಸಂಶೋಧನಾ ಉಪನ್ಯಾಸ, ಸಿನಿಮಾ, ಜಾನಪದ, ಸಂಸ್ಕೃತಿ ವಿಮರ್ಶೆ… ಹೀಗೆ ಎಲ್ಲ ವಲಯಗಳಲ್ಲೂ  ಗಟ್ಟಿಯಾದದ್ದನ್ನು ತಮ್ಮ ಡೆಸ್ಕ್ ಟಾಪಿನಲ್ಲಿ, ತಮ್ಮ ಡೈರಿ ಹಾಗೂ ನೋಟ್ ಬುಕ್ಕುಗಳಲ್ಲಿ ಬಿಟ್ಟು ಹೋದಂತಿದೆ. ಅವು ಸಂಪುಟಗಳಲ್ಲಿ ಪ್ರಕಟವಾದರೆ ವಸುವಿನ ಒಟ್ಟು ಸತ್ವ ಇನ್ನಷ್ಟು ಪ್ರಖರವಾಗಿ ಕಾಣಬಲ್ಲದು.  

ವಸು ತೀರಿಕೊಂಡದ್ದು 3 ಫೆಬ್ರವರಿ 2015ರಂದು. 3 ಫೆಬ್ರವರಿ 2004ರಂದು ನಮ್ಮೆಲ್ಲರ ಪ್ರಿಯ ಚಿಂತಕರೂ ಕನ್ನಡನಾಡಿನ ಶ್ರೇಷ್ಠ ಧೀಮಂತ ನಾಯಕರೂ ಆಗಿದ್ದ ಪ್ರೊ.ಎಂ.ಡಿ. ನಂಜುಂಡಸ್ವಾಮಿಯವರು ಕೂಡ ಕ್ಯಾನ್ಸರಿಗೆ ಬಲಿಯಾದದ್ದು ನೆನಪಾಗುತ್ತಿದೆ. ಈ ಬಗೆಯ ಖಚಿತ ನಿಲುವುಗಳುಳ್ಳ ಚಿಂತಕ, ಚಿಂತಕಿಯರ ನಿರ್ಗಮನ ನಮ್ಮೆಲ್ಲರ ಸಾಮೂಹಿಕ ವೈಚಾರಿಕ ಪ್ರಯತ್ನಗಳಿಗೆ ಎಂಥ ಹಿನ್ನಡೆ ತರುತ್ತವೆ ಎಂಬುದನ್ನು ನೆನೆದರೆ ದುಗುಡ ಮುತ್ತತೊಡಗುತ್ತದೆ.

ಬ್ಲಾಗ್ ಫಾಲೋ ಮಾಡಲು ಒಪ್ಪಿ, ಕ್ಲಿಕ್ ಮಾಡಿ; ನೋಟಿಫಿಕೇಶನ್ ಪಡೆಯಿರಿ, ಶೇರ್ ಮಾಡಿ: FOLLOW
ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com 
ಬಿಡುವಾದಾಗ ನೋಡಿ, ಶೇರ್ ಮಾಡಿ:  https://www.youtube.com/@NatarajHuliyarYT

Share on:

Comments

7 Comments



| Hanamantappa

ಕಾಯ ಅಳಿದರೂ ಮಾಡಿದ ಕಾರ್ಯ ಶಾಶ್ವತವಾಗಿರುತ್ತೆ, ಹಾಗಾಗಿ ಇರುವಾಗಲೇ ಉತ್ತಮ ಕಾರ್ಯ ಮಾಡಿದರೆ  ಮನುಷ್ಯ ಶಾಶ್ವತವಾಗಿರುತ್ತಾನೆ ಎಂಬ ಈ ಲೇಖನದ ಉದ್ದೇಶ ನಮ್ಮಂತವರಿಗೆ ಸ್ಪೂರ್ತಿ ಸರ್ 

\r\n\r\n

ಅಭಿನಂದನೆಗಳು ಸರ್.

\r\n


| Dr. Kavyashree H

ವಸು, ಎಂದಿಗೂ ಬತ್ತದ ಜೀವಂತ ನದಿ. ಅವರ ಚಿಂತನೆಗಳ ಹರಿವು ನಮ್ಮೊಳಗನ್ನು ಜೀವಂತವಾಗಿರಿಸುತ್ತದೆ. ನಾವು ಕೈಬಿಟ್ಟ ಕನಸುಗಳಿಗಾಗಿ ಮತ್ತೆ ತುಡಿಯುವಂತೆ ಮಾಡುವ ಶಕ್ತಿ ಅವರ ನೆನಪುಗಳಿಗಿವೆ. ಅವರ  ಉತ್ಸಾಹ, ಹುರುಪು, ನೋಟಕ್ರಮ ಮತ್ತು ನಗುಮೊಗವನ್ನು ಮತ್ತೊಮ್ಮೆ ಎದುರುಗೊಳ್ಳುವಂತೆ ಮಾಡಿದ ನಿಮ್ಮ ಬರಹಕ್ಕೆ, ಅಂತಹವರಿಗಾಗಿ ಮಿಡಿಯುವ ನಿಮ್ಮ ಮನಕ್ಕೆ ಶರಣು!

\r\n


| Rupa Hassan

ವಸು ಮರೆಯಲಾಗದ ಅದ್ಭುತ ಕ್ರಿಯಾ ಶೀಲ ಚೇತನ. ಅವಳ ಕನಸಿನ ಮಹತ್ವಾಕಾಂಕ್ಷೆ ಯ ಕೆಲಸಗಳನ್ನು ಪೂರೈಸಲಾಗಲಿಲ್ಲ ಎಂಬುದು, ಹಾಗೂ ಅವಳ ಕನಸುಗಳನ್ನು ಮುಂದುವರಿಸುವಂಥ ಹೆಚ್ಚಿನ ಕ್ರಿಯಾಶೀಲರೂ ಇಲ್ಲವೆಂಬುದು ಅನವರತ ಕಾಡುವ ನೋವು...

\r\n\r\n

 

\r\n


| ಬಂಜಗೆರೆ ಜಯಪ್ರಕಾಶ್

ವಸು ಅವರಿಗಿದ್ದ ನಾಯಕತ್ವ ದ ಸ್ವಭಾವ, ಕಾಯಿಲೆಯ ಬಗ್ಗೆ ಅನುಕಂಪ ನಿರೀಕ್ಷಿಸದ ಗಟ್ಟಿತನ, ಹರಳುಗಟ್ಟುತ್ತಿದ್ದ ಚಿಂತನೆ ಎಲ್ಲವೂ ಬಹಳ ವಸ್ತುನಿಷ್ಠವಾಗಿವೆ

\r\n\r\n

\r\n\r\n

 

\r\n


| ರವಿಕುಮಾರ್ ಬಾಗಿ

ವಸು ಮೇಡಂ ಆಪ್ತವಾಗಿ ಕಣ್ಣ ಮುಂದೆ ಹಾದು ಹೋದರು

\r\n


| Vasantha H L

ವಸು ಅವರ ನಗುಮೊಗದ ನೆನಪು ಚಿರಸ್ಥಾಯಿಯಾಗಿದೆ.

\r\n


| Dr Niranjana Murthy B M

ಅಂತಹ ಅದ್ಭುತ ಬಹುಮುಖೀ ಪ್ರತಿಭೆಯ ವಸು ಮಳಲಿಯವರು ಬದುಕನ್ನು ಎದುರಿಸಿದ ರೀತಿ ತುಂಬಾ ಇಷ್ಟವಾಯಿತು. ಅದನ್ನು ಕಟ್ಟಿಕೊಟ್ಟ ನಟರಾಜ್ ಹುಳಿಯಾರು ಕೂಡ ತುಂಬಾ ಇಷ್ಟವಾದರು. ಬಹಳ ದುಃಖದ ವಿಷಯವೆಂದರೆ ಅವರು ಕಂಡ ಕನಸುಗಳನ್ನೆಲ್ಲಾ ಮುಂದೂಡಿ ಮರೆಯಾದದ್ದು. 

\r\n




Add Comment






Recent Posts

Latest Blogs



Kamakasturibana

YouTube