ಕಡಲ ತಡಿಯಲ್ಲಿ ತೇಲಿ ಬಂದ ಪ್ರತಿಮೆಗಳು

 ಈಚೆಗೆ ಕಾವ್ಯ ಕುರಿತು ಹೆಚ್ಚು ಧ್ಯಾನಿಸುತ್ತಿದ್ದುದಕ್ಕೋ ಏನೋ, ಮೊನ್ನೆ ಪಾಂಡಿಚೆರಿಯ ಮಾಹೆ ಬೀಚಿನಲ್ಲಿ ಶೂನ್ಯನಾಗಿ ನಿಂತಿದ್ದರೆ, ಕಡಲ ಪ್ರತಿಮೆಗಳೇ ತೇಲಿ ಬರತೊಡಗಿದವು. ಇಪ್ಪತ್ತೈದು ವರ್ಷಗಳ ಕೆಳಗೆ ಕವಿ ಸು.ರಂ. ಎಕ್ಕುಂಡಿ ತಮಗೆ ಪ್ರಿಯವಾದ ಕವಿತೆ ಯಾವುದು ಎಂಬುದನ್ನು ನೆನೆಯುತ್ತಾ ಬೇಂದ್ರೆ ಸಾಲುಗಳನ್ನು ಸಲೀಸಾಗಿ ಹೇಳತೊಡಗಿದ್ದು ನೆನಪಾಯಿತು. ಇವತ್ತು ಕವಿತೆಯ ಮೊದಲೆರಡು ಸಾಲು, ‘ಅಂಬಿಗನು ಬಂದ ನಂಬಿಗನು ಬಂದ ಬಂದದ ದಿವ್ಯ ಗಳಿಗೆ’ ಪ್ರತಿಮೆಗಳು ಮಾತ್ರ ನೆನಪಾದವು. ಮಂಜುನಾಥ ನೆಟ್ಕಲ್ ಕವಿತೆಗಳ ಸಂಗ್ರಹದಿಂದ ಪದ್ಯದ ಮೊದಲ ಪಂಕ್ತಿ:

ಬಂಗಾರ ನೀರ ಕಡಲಾಚೆಗೀಚೆಗಿದೆ ನೀಲ ನೀಲ ತೀರಾ 
ಮಿಂಚು ಬಳಗ ತೆರೆತೆರೆಗಳಾಗಿ ಅಲೆಯುವುದು ಪುಟ್ಟ ಪೂರಾ
ಅದು ನಮ್ಮ ಊರು, ಇದು ನಿಮ್ಮ ಊರು, ತಂತಮ್ಮ ಊರೊ ಧೀರಾ
ಅದರೊಳಗೆ ನಾವು, ನಮ್ಮೊಳಗೆ ತಾವು, ಅದು ಇಲ್ಲವಣ್ಣ ದೂರಾ

ಅತಿಯಾದ ‘ಚಮಚಾ ತುತ್ತಿ’ನಿಂದ (ಸ್ಪೂನ್ ಫೀಡಿಂಗ್) ಓದುಗಿಯರು ಸೋಮಾರಿಗಳಾಗಬಲ್ಲರು! ಉಲ್ಲೇಖವನ್ನು ಇಲ್ಲಿಗೇ ನಿಲ್ಲಿಸಿ, ಬೇಂದ್ರೆಯವರ ‘ಹೃದಯ ಸಮುದ್ರ’ ಸಂಕಲನವನ್ನು ತೆಗೆದು ನೋಡಲು ಓದುಗಿ-ಓದುಗರನ್ನುಹುರಿದುಂಬಿಸುವೆ! 
ಅದು ಕೇರಳಕ್ಕು ಹೊಂದಿ ಕೊಂಡ ಕಡಲ ತಡಿಯಾದದ್ದರಿಂದ ತಕಳಿ ಶಿವಶಂಕರ ಪಿಳ್ಳೈ ಬರೆದ ಬೆಸ್ತರ ಕರುತಮ್ಮ–ಮುಸ್ಲಿಮರ ಪೆರೀಕುಟ್ಟಿ ಎಂಬ ಯುವ ಪ್ರೇಮಿಗಳ ಪ್ರೇಮ ಕತೆ ‘ಚೆಮ್ಮೀನ್’ (ಕೆಂಪುಮೀನು) ನೆನಪಾಗದಿದ್ದರೆ ಹೇಗೆ! ನಮ್ಮ ಹೃದಯ ತಟ್ಟಿ, ಅಲ್ಲಿ ಬಹು ಕಾಲ ನೆಲಸುವ ‘ಚೆಮ್ಮೀನ್’ ಬಗ್ಗೆ ಲಂಕೇಶರ ‘ಮತ್ತೆ ಚೆಮ್ಮೀನ್’ ಓದಿ’ ಎಂಬ ಟೀಕೆ ಟಿಪ್ಪಣಿಯೂ  ನೆನಪಾಗಲೇಬೇಕಲ್ಲ! ಒಂದು ಮಲಯಾಳಂ ಕಾದಂಬರಿಯ ಅನುಭವವನ್ನು ಕನ್ನಡದ ಲಕ್ಷಾಂತರ ಓದುಗರಿಗೆ ಸರಳವಾಗಿ, ನೇರವಾಗಿ ತಲುಪಿಸುವ ಕಲೆಯನ್ನು ಲಂಕೇಶರ ಇಂಥ ಟಿಪ್ಪಣಿಗಳನ್ನು ಮತ್ತೆ ಮತ್ತೆ ಆಳವಾಗಿ ಓದಿ ಕಲಿಯಬಹುದು. ಸೃಜನಶೀಲ ಕಾದಂಬರಿಗೆ ಸರಿಸಮನಾಗಬಲ್ಲ ಸೃಜನಶೀಲ ಸ್ಪಂದನದ ಕಲೆಯನ್ನು ಕೂಡ ಕಲಿಸಬಲ್ಲ ಲಂಕೇಶರ ಈ ಬರಹದ ಕೊನೆಯ ಸಾಲು: ‘ಒಟ್ಟಿನಲ್ಲಿ ‘ಚೆಮ್ಮೀನ್’ ಅದೆಷ್ಟು ಒಳ್ಳೆಯ ಕೃತಿಯೆಂದರೆ, ಅನೇಕಾನೇಕ ಪ್ರಶ್ನೆಗಳನ್ನು ಕೇಳಿಸಿಕೊಳ್ಳುತ್ತಲೇ ಮನವನ್ನು ಅಲ್ಲಾಡಿಸುತ್ತದೆ .’  
ಸಾಮಾನ್ಯವಾಗಿ ನಮ್ಮೊಳಗೆ ಕಾವ್ಯ, ಸಾಹಿತ್ಯ ಎಂದರೆ ಕೇವಲ ಕ್ಲಾಸಿಕ್ಕುಗಳಲ್ಲದೆ ಜನಪ್ರಿಯವಾದ ಸರಳ ರಚನೆಗಳೂ, ಸಿನಿಮಾ ಹಾಡುಗಳೂ ಬೆರೆತಿರುತ್ತವೆ ತಾನೆ? ‘ಚೆಮ್ಮೀನ್’ ನೆನೆಯುತ್ತಿರುವಾಗ, ಸೂರ್ಯ ಕಡಲಿಗಿಳಿಯತೊಡಗಿದಂತೆ ಹಳೆಯ ಸಿನಿಮಾವೊಂದರ ‘ಸಂಜೆಗೆಂಪು ಮೂಡಿತು, ಇರುಳು ಸೆರಗು ಹಾಸಿತು, ಇಂದು ನಾಳೆಯ ಸೇರಿತು’ ಸಾಲು ಹಾರಿ ಬಂತು. ಅದರ ಬೆನ್ನಿಗೇ, ಕವಿ ರನ್ನ ಕುರುಕುಲದ ಸೂರ್ಯನ ಅಸ್ತಮಾನವನ್ನೂ ಸೂರ್ಯಾಸ್ತಮಾನವನ್ನೂ ಒಂದೇ ಪ್ರತಿಮೆಯಲ್ಲಿ ಬೆಸೆದ ವಿಷಾದಮಯ ಬಣ್ಣನೆ: ‘ಕುರುಕುಲಾರ್ಕನುಮರ್ಕನುಮಸ್ತಮೆಯ್ದಿದರ್.’ 


ಹೀಗೇ ‘ಮದ್ಯ’ ರಾತ್ರಿಯೊಂದರಲ್ಲಿ ಕವಿ ಸಿದ್ಧಲಿಂಗಯ್ಯನವರು ‘ಇದೇನ್ ನಟರಾಜ್! ಡ್ರಂಕನ್ ಬೋಟ್ ಥರಾ ಆಗ್ತಾ ಐತಲ್ಲ!’ ಎಂದು ಆರ್ಥರ್ ರಂಬೋನ ‘ದ ಡ್ರಂಕನ್ ಬೋಟ್’ ಕವಿತೆಯನ್ನು ನೆನಪಿಸಿದ ಸುಂದರ ಗಳಿಗೆ ಕಣ್ಣಿಗೆ ಬಂತು. ಇನ್ನು ಸಾಗರ ಎಂದ ಮೇಲೆ, ‘ಓಡುವ ನದಿ ಸಾಗರವ ಸೇರಲೆ ಬೇಕು’ ಎಂಬ ಸಿನಿಮಾ ಹಾಡಿನ ಜೊತೆಗೇ, ವಿಶಿಷ್ಟ ಕವಿಗಳೊಬ್ಬರು ಎದೆ ಬಡಿತವನ್ನು ಯಮುನೆಯ ಅಲೆಗಳಿಗೆ ಹೋಲಿಸಿದ ಸಾಲು ವಿಚಿತ್ರ ವಿಸ್ಮಯವನ್ನು ಸೃಷ್ಟಿಸಿತು. ಅದರ ಬೆನ್ನಿಗೇ, ಯಮನಾ ನದಿಯ ಏಳುಬೀಳುಗಳನ್ನು ಇಡೀ ನಾಗರಿಕತೆಯ ಕಥನವನ್ನಾಗಿ ಮಾಡಿದ ಡಿ. ಆರ್. ನಾಗರಾಜರ ಅನನ್ಯ ಸಾಂಸ್ಕೃತಿಕ ಅಧ್ಯಯನ ‘ನದಿಯ ನೆನಪಿನ ಹಂಗು’ವಿನ ವ್ಯಾಖ್ಯಾನಗಳು ನೆನಪಾಗಿ ಗುರುವಿಗೆ ಮನದಲ್ಲೇ ಶರಣೆಂದೆ. 


ಈ ತೆರನಾಗಿ ಕನ್ನಡ, ಮಲಯಾಳಂ ಇಂಗ್ಲಿಷ್ ಸಾಹಿತ್ಯದ ಸುತ್ತ ಅಲೆಯುತ್ತಿದ್ದ ಮನಸ್ಸಿಗೆ ಕೋಲರಿಜ್ ಬರೆದ ‘ದ ರೈಮ್ ಆಫ್ ದಿ ಏನ್ಸಿಯೆಂಟ್ ಮ್ಯಾರಿನರ್’ (ಹಳೇ ಕಾಲದ ನಾವಿಕನ ಹಾಡು) ಕಥನ ಕಾವ್ಯ ಎದುರಾಯಿತು. ಕಡಲಕೋಳಿಯನ್ನು ಕೊಂದು ಅನಾಥನಾಗಿ ಏಕಾಕಿಯಾಗಿ ಕಡಲಲ್ಲಿ ಅಲೆಯುವ ನಾವಿಕನ ‘ವಾಟರ್ ವಾಟರ್ ಎವೆರಿ ವೇರ್, ನಾಟ್ ಎ ಡ್ರಾಪ್ ಟು ಡ್ರಿಂಕ್’ ಉದ್ಗಾರದ ಎದೆಯೊಡೆಯುವ ದಿಗ್ಭ್ರಮೆ ಮನಸ್ಸನ್ನು ಮುತ್ತಿತು. ಮದುವೆಯ ಔತಣಕೂಟವೊಂದಕ್ಕೆ ಹೋಗಿದ್ದ ತರುಣರಲ್ಲಿ ಒಬ್ಬನನ್ನು ಕೂರಿಸಿಕೊಂಡು, ಈ ಹಳೇ ಕಾಲದ ನಾವಿಕ ತನ್ನ ತಾರುಣ್ಯಕಾಲದ ದುಬಾರಿ ದುಡುಕಿನ ಕತೆ ಹೇಳಿ ಅಚ್ಚರಿಗೊಳಿಸುತ್ತಾನೆ. ಈ ಪದ್ಯ ಇಂಗ್ಲಿಷ್ ಕಾವ್ಯ ಮಂಕಾಗಿದ್ದಾಗ ಕವಿ ಮಿತ್ರರಾದ ಕೋಲರಿಜ್-ವರ್ಡ್ಸ್ ವರ್ತ್ ಇಬ್ಬರೂ ಜಾನಪದ, ದಂತಕತೆ, ಜನರ ಆಡು ಭಾಷೆ ಎಲ್ಲದರಿಂದ ಸಮೃದ್ಧವಾದ ಕವಿತೆಗಳನ್ನು ರೂಪಿಸಿದ ಚಾರಿತ್ರಿಕ ಸಂಕಲನ ‘ಲಿರಿಕಲ್ ಬ್ಯಾಲಡ್ಸ್’ ಸಂಕಲನದಲ್ಲಿದೆ.


ಈ ಕಥನ ಕಾವ್ಯದ ಸಾರಾಂಶ: ದಕ್ಷಿಣ ಧೃವದಲ್ಲಿ ಹಿಮಗಡ್ಡೆಯಿಂದ ಸುತ್ತುವರಿದ ಹಡಗಿನ ಬಳಿ ಭಾರೀ ಗಾತ್ರದ ಕಡಲಕೋಳಿ (ಅಲ್ಬಟ್ರಾಸ್) ಕಾಣಿಸಿಕೊಳ್ಳುತ್ತದೆ. ಆ ಕಾಲದ ನಂಬಿಕೆಯ ಪ್ರಕಾರ ಇದೊಂದು ಶುಭಶಕುನ. ಸುತ್ತುವರಿದ ಹಿಮಗಡ್ಡೆಯನ್ನೊಡೆದು ಹಡಗು ಉತ್ತರಕ್ಕೆ ಚಲಿಸುತ್ತದೆ. ಕಡಲ ಕೋಳಿ ಹಡಗನ್ನು ಹಿಂಬಾಲಿಸುತ್ತದೆ. ಅದೇನೆನ್ನಿಸಿತೋ ಏನೋ, ನಾವಿಕ ಬಂದೂಕಿನಿಂದ ಗುಂಡು ಹಾರಿಸಿ ಹಕ್ಕಿಯನ್ನು ಸುಟ್ಟು ಹಾಕುತ್ತಾನೆ; ಹಡಗಿಗೆ ಶಾಪ ಮುತ್ತಿಕೊಳ್ಳುತ್ತದೆ. ಉಳಿದವರಲ್ಲಿ ಗೊಂದಲ ಶುರುವಾಗಿ ನಾವಿಕನನ್ನು ಜರಿಯುತ್ತಾ, ಹೀಗಳೆಯುತ್ತಾ, ಸತ್ತ  ಹಕ್ಕಿಯನ್ನು ಅವನ ಕುತ್ತಿಗೆಗೆ ನೇತು ಬಿಡುತ್ತಾರೆ. ಆ ನಡುವೆ ಒಂದು ಪಿಶಾಚಿ ಹಡಗು ಈ ಹಡಗನ್ನು ದಾಟಿ ಮುಂದೆ ಸಾಗುತ್ತದೆ. ಇದೊಂದು ಅಪಶಕುನ. ಅಲ್ಲಿಂದಾಚೆಗೆ ನಾವಿಕನೊಬ್ಬನನ್ನು ಬಿಟ್ಟು ಉಳಿದವರೆಲ್ಲ ಸತ್ತು ಬೀಳುತ್ತಾರೆ. ಕೊನೆಗೆ ನಾವಿಕನೊಬ್ಬನೇ ಉಳಿದು ಏಕಾಕಿಯಾಗಿ ಕಡಲಿನಲ್ಲಿ ಅಲೆಯುತ್ತಾನೆ. ಒಂದು ರಾತ್ರಿ ಅವನಿಗೆ ಕಡಲ ಮೇಲೆ ಕಂಡ ಚಂದ್ರನ ಬೆಳಕಿನಲ್ಲಿ ಬದುಕುವ, ಜೀವನ ಪ್ರೀತಿಯ ದರ್ಶನವೊಂದು ಉಕ್ಕುತ್ತದೆ; ಒಂದು ಒಳ್ಳೆಯ ಪ್ರಾರ್ಥನೆ ಸಲ್ಲಿಸಿದ ನಂತರ ಅವನ ಕೊರಳಿಗೆ ಜೋತು ಬಿದ್ದಿದ್ದ ಕಡಲಕೋಳಿ ಕಡಲಿಗೆ ಬೀಳುತ್ತದೆ. ಕೊನೆಗೂ ಬದುಕಿ ಉಳಿದ ನಾವಿಕನಿಗೆ ತನ್ನ ವಿನಾಶಕಾರಿ ಕೆಲಸಕ್ಕೆ ಪ್ರಾಯಶ್ಚಿತ್ತ: ತನ್ನ ಹೃದಯವಿದ್ರಾವಕ ಕತೆಯನ್ನು ಮತ್ತೆ ಮತ್ತೆ ಹೇಳುತ್ತಾ ಒಂಟಿಯಾಗಿ ಜಗತ್ತನ್ನು ಸುತ್ತುವುದು.’ ಈ ಸಾರಾಂಶದಾಚೆಗೆ ಈ ಪದ್ಯದಲ್ಲಿರುವ ಅಪರಾಧ–ಶಿಕ್ಷೆಗಳ ಬಹುಸೂಕ್ಷ್ಮ ಪ್ರಶ್ನೆಗಳ ಅಸಂಖ್ಯಾತ ವ್ಯಾಖ್ಯಾನಗಳಿವೆ. ಬಸವಣ್ಣನವರ ‘ಕೊಂದವರುಳಿಯುವರೇ ಕೂಡಲ ಸಂಗಮದೇವಾ’ ಎಂಬ ದಾರ್ಶನಿಕ ಉದ್ಗಾರ ಕೋಲರಿಜ್ ಪದ್ಯಕ್ಕಿಂತ ಆರುನೂರು ವರ್ಷಗಳ ಹಿಂದೆಯೇ ಹುಟ್ಟಿತ್ತು ಎಂಬುದು ನಿಜಕ್ಕೂ ಹೆಮ್ಮೆ ಮೂಡಿಸುತ್ತದೆ! ಕಾವ್ಯದ ಮಹಾನ್ ದರ್ಶನಕ್ಕೆ ಕಾಲ, ಭಾಷೆ, ಜಾತಿ ಧರ್ಮಗಳ ಹಂಗಿಲ್ಲ ಎಂಬುದು ಮತ್ತೆ ಮನವರಿಕೆಯಾಗುತ್ತದೆ.


ನೀವು ಶಾಲೆಯಲ್ಲಿ ‘ಡ್ಯಾಪೋಡಿಲ್ಸ್’ ಕವಿತೆ ಓದಿರಬಹುದು. ಈ ಪದ್ಯದಲ್ಲಿ ವರ್ಡ್ಸ್ ವರ್ತ್ ತನ್ನ ಕಾವ್ಯ ಹೇಗೆ ಹುಟ್ಟುತ್ತದೆ ಎಂಬುದನ್ನು ಸಣ್ಣಗೆ ಸೂಚಿಸುತ್ತಾನೆ.  ಕವಿತೆಯ ನಿರೂಪಕ ಬೇಸರದಲ್ಲಿ ಅಡ್ಡಾಡುತ್ತಿರುವಾಗ ಹೊನ್ನಿನಂಥ ಡ್ಯಾಫೊಡಿಲ್ಸ್ ಹೂಗಳು ಎದುರಾಗಿ ಅವನ ಮನದುಂಬುತ್ತವೆ. ಅದರ ಪ್ರಭಾವ ಅವನಿಗೆ ಹೊಳೆಯುವುದು ಅನಂತರ: ‘ಖಾಲಿ ಮನದಲ್ಲೋ, ದುಗುಡದಲ್ಲೋ ಮಂಚದ ಮೇಲೆ ಉರುಳಿಕೊಂಡಾಗ ಆಗಾಗ್ಗೆ ಆ ಡ್ಯಾಫೊಡಿಲ್ ಹೂಗಳು ನನ್ನ ಒಳಗಣ್ನಿನಲ್ಲಿ ಹೊಳೆಯುತ್ತವೆ; ನನ್ನೆದೆಯಲ್ಲಿ ಸಂತಸ ತುಂಬುತ್ತದೆ; ನನ್ನದೆ ಡ್ಯಾಫೊಡಿಲ್ಸ್ ಹೂಗಳ ಜೊತೆ ಕುಣಿಕುಣಿದಾಡುತ್ತದೆ.’ ಹೆಚ್ಚು ಕಡಿಮೆ ಇದನ್ನೇ ವರ್ಡ್ಸ್ ವರ್ತ್ ಮತ್ತೊಂದೆಡೆ ತನ್ನ ಕಾವ್ಯ ತತ್ವ ಎಂಬಂತೆ ಗದ್ಯದಲ್ಲಿ ವಿವರಿಸುತ್ತಾನೆ: ‘ಕಾವ್ಯವೆಂದರೆ ಶಕ್ತ ಭಾವನೆಗಳ ಸಹಜ ತುಳುಕು; ಅದರ ಹುಟ್ಟು ಪ್ರಶಾಂತ ಮನಸ್ಥಿತಿಯಲ್ಲಿ ಮರಳಿ ಮನಕ್ಕೆ ಕರೆದುಕೊಂಡ ಭಾವದಲ್ಲಿದೆ.’ 


ದೊಡ್ಡ ಕವಿಗೆ ಆದದ್ದು ನಮ್ಮಂಥ ಸುಮಾರಾದ ಕವಿಗಳಿಗೂ ಯಾಕಾಗಬಾರದು! ಮೊನ್ನೆ ಬೀಚಿನಲ್ಲಿ ಅಡ್ಡಾಡುತ್ತಾ, ಮಾನೋಲಾಗಿನಂತೆ ಮಿತ್ರರೊಡನೆ ಪೋನಿನಲ್ಲಿ ಮಾತಾಡುತ್ತಾ, ಮರಳಿ ಮನಸ್ಸಿಗೆ ಕರೆದುಕೊಂಡ ಕಡಲ ಪ್ರತಿಮೆಗಳನ್ನು ಬರೆಯುತ್ತಾ ಬರೆಯುತ್ತಾ ಅದು ಈ ಪರಿಯಲ್ಲಿ ಪ್ರಜ್ಞಾಪ್ರವಾಹದಂತೆ ಉಕ್ಕತೊಡಗಿತು. 

ಕಡಲ ತಡಿಯ ಈ ಪ್ರಜ್ಞಾಪ್ರವಾಹ ಉಕ್ಕಿ ಬಂದದ್ದರ ಪುಟ್ಟ ಹಿನ್ನೆಲೆ: ಮಾಹೆಯಲ್ಲಿ ಫ್ರೆಂಚ್ ವಸಾಹತುಕಾರರ ವಿರುದ್ಧ ಹೋರಾಡಿದ ಲೇಖಕ-ಪತ್ರಕರ್ತ ಹಿರಿಯ ಸಮಾಜವಾದಿ ಮಂಗಳತ್ ರಾಘವನ್ ಅವರ ನೆನಪಿನ ಉಪನ್ಯಾಸ: ‘ಸೆಕ್ಯುಲರ್ ಡೆಮಾಕ್ರೆಸಿ:  ಸೋಷಲಿಸ್ಟ್ ಪರ್ಸ್ಪೆಕ್ಟೀವ್ಸ್’. ಆ ಬಗ್ಗೆ ಇಲ್ಲಿ ಬೇಡ. ಮಂಗಳತ್ ರಾಘವನ್ ಅವರ ಕೊನೆಯ ದಿನಗಳ ಚಡಪಡಿಕೆಯೊಂದನ್ನು ದಾಖಲಿಸಿ ಈ ಟಿಪ್ಪಣಿ ಮುಗಿಸುವೆ: 

ಮಂಗಳತ್ ರಾಘವನ್ ಫ್ರೆಂಚ್ ಕಾಲನಿಯಲ್ಲಿ ಹುಟ್ಟಿದ್ದರಿಂದ ಫ್ರೆಂಚ್ ಕಲಿತರು. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಫ್ರೆಂಚ್ ಸರ್ಕಾರದಿಂದ ಜೈಲು ಶಿಕ್ಷೆಗೊಳಗಾದರು; ನಂತರ ಇಂಡಿಯನ್ ಯೂನಿಯನ್ ಕಡೆಗೆ ತಪ್ಪಿಸಿಕೊಂಡು ಬಂದರು. ಫ್ರೆಂಚರು ತೊಲಗುವ ತನಕ ಹೋರಾಟ ರೂಪಿಸುತ್ತಲೇ ಇದ್ದರು. ನಂತರ ‘ಮಾತೃಭೂಮಿ’ಯ ಪತ್ರಿಕೆ ಸೇರಿ  ಪತ್ರಕರ್ತರಾದರು. ಫ್ರೆಂಚ್ ರಮ್ಯ ಕವಿತೆಗಳನ್ನು ಮಲಯಾಳಮ್ಮಿಗೆ ತಂದರು. ವಿಕ್ಟರ್ ಹ್ಯೂಗೋನ ಪ್ರಖ್ಯಾತ ‘ಲೆ ಮಿಸರಬಲ್ಸ್’ ಫ್ರೆಂಚ್ ಕಾದಂಬರಿಯನ್ನು ‘ಪಾವಂಗಳ್’ ಎಂದು ಮಲಯಾಳಂಗೆ ಅನುವಾದಿಸಿದರು. ‘ದ ಮಿಸರಬಲ್ಸ್’ ಕಾದಂಬರಿ ಓದಿ ಅಂಬೇಡ್ಕರ್ ಅತ್ತಿದ್ದು ಇಲ್ಲಿ ನೆನಪಾಗುತ್ತದೆ. ಕೊನೆಯ ತನಕ ಓದು, ಅನುವಾದ ಮಾಡುತ್ತಲೇ ಇದ್ದ ರಾಘವನ್ ನೂರು ವರ್ಷ ತಲುಪುವ ಕೆಲವು ದಿನಗಳ ಮೊದಲು ಆಸ್ಪತ್ರೆ ಸೇರಿದರು. ಆಗ ರಾಘವನ್ ಒಮ್ಮೆ ತಮ್ಮ ಅಣ್ಣನ ಮಗ ಮಹೇಶರನ್ನು ಕರೆದು, ‘ಮಹೇಶ್! ಈ ‘ಮಿಸರಬಲ್ಸ್’ ಅನುವಾದದಲ್ಲಿ ಒಂದು ಪ್ಯಾರ ಬಿಟ್ಟು ಹೋಗಿದೆ. ಅದು ಯಾವುದೂಂದ್ರೆ…’ ಎನ್ನುವಷ್ಟರಲ್ಲಿ ಅವರ ನೆನಪು ಹಾರಿ ಹೋಯಿತು. ಏನು ಮಾಡಿದರೂ ಆ ಪ್ಯಾರ ನೆನಪಾಗಲೊಲ್ಲದು. ಪೇಪರ್ ಮೇಲೆ ಬರೆದರು. ನೆನಪು ಬರಲಿಲ್ಲ. ಆರೇ ದಿನಗಳಲ್ಲಿ  ರಾಘವನ್ ಚಿರ ನಿದ್ರೆಗೆ ಜಾರಿಬಿಟ್ಟರು. ನೂರು ವರ್ಷ ತಲುಪಲು ಹನ್ನೊಂದು ದಿನ ಬಾಕಿಯಿರುವಾಗ ತೀರಿಕೊಂಡ ಮಂಗಳತ್ ರಾಘವನ್ ಅವರ ಅರ್ಥಪೂರ್ಣ ಚಟುವಟಿಕೆಯ ಬದುಕು ನನ್ನಲ್ಲಿ ಸ್ಫೂರ್ತಿ ಉಕ್ಕಿಸಿತು; ಅಷ್ಟೇ ಮುಖ್ಯವಾಗಿ, ಅನುವಾದದಲ್ಲಿ ಬಿಟ್ಟು ಹೋದ ಪ್ಯಾರವೊಂದರ ಬಗ್ಗೆ ಲೇಖಕನೊಬ್ಬನ ಕೊನೆಯ ಗಳಿಗೆಯವರೆಗಿನ ಸೃಜನಶೀಲ ಚಡಪಡಿಕೆ ಮತ್ತು ಕರ್ತವ್ಯ ದೃಷ್ಟಿ ಕೂಡ. 
ಇಂಥ ಬದ್ಧತೆ ಇಲ್ಲದಿದ್ದರೆ ಸಾಹಿತ್ಯ ಮಾತ್ರ ಅಲ್ಲ, ಬದುಕಿನ ಯಾವ ವಲಯದಲ್ಲೂ ಏನನ್ನೂ ಮಾಡಲಾರೆವು ಎನ್ನಿಸತೊಡಗಿತು. 


ಸಣ್ಣಪುಟ್ಟ ಸ್ವಾರ್ಥ, ಸಿನಿಕತೆಗಳನ್ನು ಚದುರಿಸಿ, ಭಿನ್ನಮತವಿದ್ದಾಗಲೂ ಒಟ್ಟಾಗಿ ಚಿಂತಿಸಿದರೆ, ಹಲ ಬಗೆಯ ಸಾಂಸ್ಕೃತಿಕ ಆತಂಕಗಳಿಗೆ ಒಂದಲ್ಲ ಒಂದು ಬಗೆಯ ಉತ್ತರಗಳು ಸಿಕ್ಕಬಲ್ಲವು. ಈ ವೆಬ್ ಸೈಟಿನ ಉದ್ದೇಶಗಳಲ್ಲಿ ‘ಸರ್ವರೊಳೊಂದೊಂದು ನುಡಿಗಲಿತು’ ಸಾಹಿತ್ಯ ಕಾಳಜಿಯನ್ನು ಉಳಿಸಿಕೊಳ್ಳುವುದು, ಬೆಳೆಸಿಕೊಳ್ಳುವುದು ಹಾಗೂ ಈ ಕಾಲದಲ್ಲಿ ಸೃಷ್ಟಿಯಾಗುವ ‘ಕಲೆಕ್ಟೀವ್ ವಿಸ್ಡಂ’ ರೂಪಿಸಿಕೊಳ್ಳುವುದು, ಹಬ್ಬಿಸುವುದು… ಇವು ಕೂಡ ಸೇರಿವೆಯೆಂಬುದನ್ನು ಮತ್ತೆ ಮತ್ತೆ ನೆನಪಿಸಬೇಕಿಲ್ಲ, ಅಲ್ಲವೆ? 
ಹ್ಯಾಪಿ ಪೊಯೆಟ್ರಿ! ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com

Share on:

Comments

0 Comments





Add Comment






Recent Posts

Latest Blogs



Kamakasturibana

YouTube