ಆ ರಾತ್ರಿ ಕುವೆಂಪು ಹುಡುಕಾಟ
by Nataraj Huliyar
ಇಸವಿ ೧೯೪೭. ಆಗಸ್ಟ್ ೧೫ ಇನ್ನೇನು ಅಡಿಯಿಡಲಿದ್ದ ನಡು ರಾತ್ರಿಯ ಗಳಿಗೆ.
ಇತ್ತ ಕವಿ ಕುವೆಂಪು ದೆಹಲಿಯಲ್ಲಿ ನಡೆಯುತ್ತಿದ್ದ ಸ್ವತಂತ್ರ ಭಾರತದ ಉದಯದ ವಿವರ, ಸಡಗರಗಳ ಕಾಮೆಂಟರಿಯನ್ನು ಆಕಾಶವಾಣಿಯಲ್ಲಿ ಕೇಳಿಸಿಕೊಳ್ಳುತ್ತಿದ್ದರು. ಭಾರತಕ್ಕೆ ಸ್ವಾತಂತ್ರ‍್ಯ ಬರಲಿದ್ದ ಆ ಗಳಿಗೆಯಲ್ಲಿ ಕವಿಯ ಮನದಲ್ಲಿ ‘ಶ್ರೀ ಸ್ವಾತಂತ್ರ್ಯೋದಯ ಮಹಾಪ್ರಗಾಥ’ ಮೂಡತೊಡಗಿತ್ತು.
ಸಂಭ್ರಮ, ಪ್ರಾರ್ಥನೆ, ಜಯಕಾರಗಳ ಮೂಡ್‌ನಲ್ಲಿ ಮುನ್ನಡೆಯುತ್ತಿದ್ದ ಮಹಾಪ್ರಗಾಥ ಯಾಕೋ ಥಟ್ಟನೆ ಉತ್ಸಾಹದ, ಹುಮ್ಮಸ್ಸಿನ ನಡೆ ತಪ್ಪಿ ತಡವರಿಸತೊಡಗಿತು. ಅದಕ್ಕೆ ಕಾರಣವಿತ್ತು: ಆ ರಾತ್ರಿ ಗಾಂಧೀಜಿ ದಿಲ್ಲಿಯ ಆ ಸಂಭ್ರಮದ ನಡುವೆ ಇರಲಿಲ್ಲ; ಅವರೆಲ್ಲಿದ್ದಾರೆ ಎಂದು ಕವಿತೆ ಹುಡುಕತೊಡಗಿತು:
ಮರೆವುದೆಂತಾ ನಮ್ಮ ಸ್ವಾತಂತ್ರ ಶಿಲ್ಪಿಯಂ
ದಿವ್ಯ ದಿನದೀ ಶುಭ ಮುಹೂರ್ತದಲ್ಲಿ?
ಮರೆವುದೆಂತಯ್ ಭುವನ ಗೌರವ ಮಹಾತ್ಮನಂ
ಸ್ವಾತಂತ್ರ‍್ಯದೀ ಸುಪ್ರಭಾತದಲ್ಲಿ?
ಹಜ್ಜೆ ಹೆಜ್ಜೆಯನಿಡಿಸಿ ಕೈಹಿಡಿದು
ಬಿಡುಗಡೆಗೆ ತಂದ ಆ ತಂದೆಯೆಲ್ಲಿ?
ಎಲ್ಲಿ? ಓ ಅವನೆಲ್ಲಿ ನಿಚ್ಚವೂ ನಮ್ಮೆದೆಯ
ನಂಜೀಂಟುವಾ ನೀಲಕಂಠನೆಲ್ಲಿ?
‘ಸ್ವಾತಂತ್ರ‍್ಯ ಶಿಲ್ಪಿ’ ಎಲ್ಲಿರುವನೆಂದು ಹುಡುಕುತ್ತಾ ಕುವೆಂಪು ಪ್ರಗಾಥದ ಕಣ್ಣು ಗಾಂಧೀಜಿಯಿದ್ದ ಕಲ್ಕತ್ತಾದ ರಕ್ತಸಿಕ್ತ ಹಾದಿಬೀದಿಗಳನ್ನು ತಲುಪುತ್ತದೆ:
ಇಲ್ಲಿ ಉತ್ಸವದೊಳವನಿಲ್ಲ, ಆ ದೂರದಲಿ
ಕ್ರೋಧ ಕಾರ್ಪಣ್ಯ ರೋದನಗಳೊಡನೆ
ಕೆನ್ನೀರು ಕಣ್ಣೀರುಗಳ ಹೊನಲ ಗೋಳ್ ನಡುವೆ
ದಾರಿದ್ಯ್ರ ದೈನ್ಯ ಧನಮದಗಳೊಡನೆ
ವಾದಿಸುತೆ ಬೋಧಿಸುತೆ ಕರುಣೆಯಂ ಸಾಧಿಸುತೆ
ಭಕ್ತಿಯಿಂ ದೇವನಂ ಪ್ರಾರ್ಥಿಸುತ್ತೆ
ನಿರಶನವ್ರತನಿಷ್ಠನಾಗಿಹನು ನೋಡಲ್ಲಿ
ಧರ್ಮಶಕ್ತಿಯ ಕೃಪೆಯನರ್ಥಿಸುತ್ತೆ!
ಕುವೆಂಪು ಇದನ್ನು ‘ಮಹಾಪ್ರಗಾಥ’ ಎನ್ನುತ್ತಾರೆ. ಗ್ರೀಕ್ ಸಾಹಿತ್ಯಲೋಕದ ‘ಓಡ್’ ಕಾವ್ಯರಚನೆ ಕನ್ನಡದಲ್ಲಿ ’ಪ್ರಗಾಥ’ ಆಗಿದೆ. ವ್ಯಕ್ತಿ, ವಿದ್ಯಮಾನ ಅಥವಾ ಒಂದೇ ವಸ್ತುವನ್ನು ಭವ್ಯ ಶೈಲಿಯಲ್ಲಿ ಬರೆಯಲು ಗ್ರೀಕ್ ಕವಿಗಳು ಕಾವ್ಯದ ಈ ಉಪಪ್ರಕಾರವನ್ನು ಬಳಸುತ್ತಿದ್ದರು. ಇದು ಸ್ವಾತಂತ್ರ್ಯೋದಯ ಕುರಿತ ಪ್ರಗಾಥವಾದದ್ದರಿಂದ ಕುವೆಂಪು ಇದನ್ನು ಮಹಾಪ್ರಗಾಥ ಎಂದಿರಬಹುದೆ?
ಕುವೆಂಪು ತಮ್ಮ ಕವಿತೆಗಳ ಕೊನೆಯಲ್ಲಿ ಕೊಡುವ ತಾರೀಕುಗಳ ಬಗ್ಗೆ ನನಗೆ ಯಾವಾಗಲೂ ಕುತೂಹಲ ಮತ್ತು ವಿಸ್ಮಯ. ಯಾಕೆಂದರೆ, ಅವರು ಎಷ್ಟೋ ಕವಿತೆಗಳನ್ನು ಒಂದೇ ದಿನ ಒಂದೇ ಸಿಟ್ಟಿಂಗಿನಲ್ಲಿ ಬರೆದು ಮುಗಿಸಿದಂತೆ ಕಾಣುತ್ತದೆ! ಒಮ್ಮೊಮ್ಮೆ ಒಂದು ಕತೆಯನ್ನೋ, ಪದ್ಯವನ್ನೋ ಐದು-ಹತ್ತು ವರ್ಷ ಬರೆದಿರುವ ನನಗೆ ಕುವೆಂಪು ಪ್ರಗಾಥದಂಥ ಸುದೀರ್ಘ ರಚನೆಯನ್ನೂ ಒಂದೇ ಸಿಟ್ಟಿಂಗಿನಲ್ಲಿ ಮುಗಿಸಿರುವುದು ವಿಸ್ಮಯ ಹುಟ್ಟಿಸುವುದು ಸಹಜ!
ಕುವೆಂಪು ಥರವೇ ಲಂಕೇಶ್, ಡಿ. ಆರ್. ಇಬ್ಬರೂ ಒಂದೇ ಸಿಟ್ಟಿಂಗಿನಲ್ಲಿ ಲೇಖನ ಬರೆದ ಸ್ಪೀಡ್ ನೋಡಿದ್ದೇನೆ. ಅಂಥ ಬರಹಗಳು ಹಲವರ ಕ್ಷಿಪ್ರ ಬರವಣಿಗೆಗಳಂತೆ, ಇಬ್ಬನಿಯಂತೆ, ಕರಗದೆ ಶ್ರೇಷ್ಠ ಬರಹಗಳೂ ಆಗಿ ಇವತ್ತಿಗೂ ಉಳಿದಿರುವುದನ್ನೂ ನೋಡಿದ್ದೇನೆ. ಅವು ಅವರ ಮನಸ್ಸಿನಲ್ಲಿ ಎಷ್ಟು ವರ್ಷ ಮಾಗಿದ್ದವೋ, ಏನೋ…
ಕುವೆಂಪು ಪ್ರಗಾಥದ ಕೊನೆಗೆ ಕೊಟ್ಟಿರುವ ತಾರೀಕು ನೋಡಿದೆ: ೧೫.೮. ೧೯೪೭! ಅವತ್ತು ರಾತ್ರಿ ಇಡೀ ಪ್ರಗಾಥ ಒಂದು ಓಘದಲ್ಲಿ ಬಂದಂತಿದೆ. ಕುವೆಂಪುವಿನ ಪ್ರಿಯ ಕವಿ ವರ್‍ಡ್ಸ್‌ವರ್ತ್ ಹೇಳಿದಂತೆ ‘ಕಾವ್ಯ ಶಕ್ತ ಭಾವನೆಗಳ ಸಹಜ ಉಕ್ಕುವಿಕೆ’ ಎನ್ನುವುದು ಈ ಪ್ರಗಾಥದಲ್ಲೂ ನಡೆದಂತಿದೆ.
ಮೊನ್ನೆ ಆಗಸ್ಟ್ ಹದಿನೈದರಂದು ಶಾಲೆ, ಕಾಲೇಜುಗಳಲ್ಲಿ ಸ್ವಾತಂತ್ರ‍್ಯ ದಿನಾಚರಣೆಯಲ್ಲಿ ಭಾಗಿಯಾದ ಮಕ್ಕಳು, ಮೇಡಂ, ಮೇಷ್ಟರುಗಳಿಗೆ; ಸಾರ್ವಜನಿಕರಿಗೆ, ರಾಜಕಾರಣಿಗಳಿಗೆ ಆಗಸ್ಟ್ ೧೯೪೭ರ ಆ ರಾತ್ರಿ ಗಾಂಧೀಜಿ ದಿಲ್ಲಿಯಲ್ಲಿರಲಿಲ್ಲ ಹಾಗೂ ಯಾಕೆ ದಿಲ್ಲಿಯಲ್ಲಿರಲಿಲ್ಲ ಎಂಬುದು ಅಷ್ಟಾಗಿ ಗೊತ್ತಿರಲಿಕ್ಕಿಲ್ಲ. ಆದ್ದರಿಂದಲೇ ಕುವೆಂಪು ಆ ರಾತ್ರಿ ಗಾಂಧಿಯನ್ನು ಹುಡುಕಿದ ಈ ಪದ್ಯದ ಮಹತ್ವ ಹಾಗೂ ಆ ರಾತ್ರಿಯ ಚರಿತ್ರೆ ಎಲ್ಲರ ಗಮನದಲ್ಲಿರಲಿ.
ಆಗಸ್ಟ್ ಹದಿನೈದರ ಬೆಳಗ್ಗೆ ಕಲ್ಕತ್ತಾದ ಬಡವರ ಕೇರಿಯ ಮುಸ್ಲಿಮರೊಬ್ಬರ ಮನೆಯಲ್ಲಿ ಗಾಂಧೀಜಿ ಕಣ್ತೆರೆದರು. ಕೋಮುಗಲಭೆಗೆ ತುತ್ತಾಗಿದ್ದ ಕಲ್ಕತ್ತಾದಲ್ಲಿ ಇವತ್ತಾದರೂ ಹಾದಿಬೀದಿಗಳಲ್ಲಿ ಜನರ ಸಂಭ್ರಮ ಉಕ್ಕಿದ್ದು ಕೇಳಿ ಅವರು ಕೊಂಚ ನೆಮ್ಮದಿಯಲ್ಲಿದ್ದರೆಂದು ಕಾಣುತ್ತದೆ; ಭಾರತ ವಿಭಜನೆಯ ಕಹಿ ಅಷ್ಟಿಷ್ಟು ಹಿನ್ನೆಲೆಗೆ ಸರಿಯತೊಡಗಿತ್ತು. ಗಾಂಧೀ ಸಲಹೆಯಂತೆ ಆ ಕಾಲದಲ್ಲಿ ಕಲ್ಕತ್ತಾದಲ್ಲಿದ್ದ ಲೋಹಿಯಾ ಬರೆಯುತ್ತಾರೆ:
‘ಆಗಸ್ಟ್ ಹದಿನೈದರಂದು ಎಣೆಯಿಲ್ಲದ ಉತ್ಸಾಹ, ಸಂಭ್ರಮವಿತ್ತು. ಹಿಂದೂಗಳು, ಮುಸಲ್ಮಾನರು ಒಬ್ಬರನ್ನೊಬ್ಬರು ಅಪ್ಪಿಕೊಳ್ಳಲಾರಂಭಿಸಿದರು. ಒಂದು ವರ್ಷಕ್ಕಿಂತ ಹಿಂದಿನಿಂದ ಬೆಳೆದುಬಂದ ಶತ್ರುತ್ವ, ಧರ್ಮೋನ್ಮಾದಗಳು ಕೊನೆಗೊಂಡು ಪ್ರತಿಯೊಂದು ಮೊಹಲ್ಲವೂ ಪ್ರತಿಯೊಬ್ಬರ ಪಾಲಿಗೂ ತೆರೆಯಿತು. ಅದೇ ಕ್ಷಣದಲ್ಲಿ ನಮಗೊಂದು ವಿಚಾರ ಹೊಳೆಯಿತು: ಇಡೀ ರಾತ್ರಿ ಒಂದು ಮೆರವಣಿಗೆಯ ಏರ್ಪಾಟು ಮಾಡಿದೆವು. ಆ ಮೆರವಣಿಗೆ ಎಲ್ಲ ತಡೆಗೋಡೆಗಳನ್ನೂ ಒಡೆದು ಹಾಕಿತು.’
ಆದರೆ ಸಾಮಾನ್ಯ ಜನರಲ್ಲಿ ಅವತ್ತು ಹೊರಚೆಲ್ಲಿದ್ದ ಈ ಒಳಿತಿನ ಭಾವ ಉಳಿಯದಂತೆ ಎರಡೂ ಧರ್ಮಗಳ ವಿಭಜಕ ಶಕ್ತಿಗಳು ಹುನ್ನಾರ ನಡೆಸುತ್ತಲೇ ಇದ್ದವು. ಮತ್ತೆ ಕೋಮು ಗಲಭೆ ಶುರುವಾಯಿತು.
ಗಾಂಧೀಜಿ ಮಾತ್ರ ಎಂಥ ಕಲ್ಲು ಹೃದಯಗಳನ್ನು ಕೂಡ ಕರಗಿಸಬಹುದೆಂಬ ನಂಬಿಕೆಯಿಂದ ಕಲ್ಕತ್ತಾದಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದರು. ಪರಸ್ಪರರನ್ನು ಹಿಂಸಿಸುತ್ತಾ, ಗಲಭೆ ಹಬ್ಬಿಸುತ್ತಿದ್ದವರ ಮನಸ್ಸನ್ನು ಪರಿವರ್ತಿಸಲು ಉಪವಾಸ ಮಾಡುತ್ತಲೇ ಆತ್ಮಪರೀಕ್ಷೆ ಮಾಡಿಕೊಳ್ಳುತ್ತಿದ್ದರು.
ಆ ಕಾಲದ ಕಲ್ಕತ್ತಾದಲ್ಲಿ ತಾವು ಕಂಡ ಜನರ ಪ್ರತಿಕ್ರಿಯೆಗಳನ್ನು ಬಂಗಾಳದ ಪ್ರೊಫೆಸರೊಬ್ಬರು ದಾಖಲಿಸಿದ್ದಾರೆ:
ಆಗ ಕೆಲವು ವಿದ್ಯಾರ್ಥಿಗಳು ತಮಗೆ ಅಪಾಯವಿದ್ದರೂ ಲೆಕ್ಕಿಸದೆ, ಮನೆಗಳಿಂದ, ಹಾದಿಬೀದಿಗಳಿಂದ ಆಯುಧಗಳನ್ನು ತಂದು ಗಾಂಧೀಜಿಯವರ ಎದುರು ಇಟ್ಟರು; ತಾವು ಹಿಂಸೆಯ ಮಾರ್ಗದಿಂದ ದೂರ ಸರಿದಿದ್ದೇವೆ ಎಂಬುದನ್ನು ನಿವೇದಿಸಿದರು. ಇದು ವಿದ್ಯಾರ್ಥಿಗಳ ಮೇಲೆ ಗಾಂಧೀಜಿಯ ಉಪವಾಸ ಉಂಟು ಮಾಡಿದ ಸಾತ್ವಿಕ ಪ್ರಭಾವವನ್ನು ಸೂಚಿಸುವ ಒಂದು ಘಟನೆ.
ಇದಕ್ಕಿಂತ ಮನ ಕರಗಿಸುವ ಪ್ರತಿಕ್ರಿಯೆ ಕಲ್ಕತ್ತಾದ ಮನೆಗಳಲ್ಲಿ ಕಂಡು ಬಂತು. ಕಲ್ಕತ್ತಾದ ಗಂಡಸರು ತಂತಮ್ಮ ಕೆಲಸಕ್ಕೆ ಹೋಗಿ ಸಂಜೆ ಮನೆಗೆ ಮರಳುವ ಹೊತ್ತಿಗೆ ಎಂದಿನಂತೆ ಅವರ ಊಟ ರೆಡಿಯಾಗಿರುತ್ತಿತ್ತು. ಆದರೆ ಮನೆಯಲ್ಲಿದ್ದ ಮಡದಿಯರು ಇಡೀ ದಿನ ಊಟ ಮಾಡಿದಂತಿರಲಿಲ್ಲ. ‘ಯಾಕೆ ಊಟ ಮಾಡಿಲ್ಲ?’ ಎಂದು ಆ ಗಂಡಸರು ಮಡದಿಯರನ್ನು ಕೇಳಿದರು.
ಆಗ ಆ ಮಹಿಳೆಯರ ಉತ್ತರ: ’ಗಾಂಧೀಜಿ ನಾವು ಮಾಡಿದ ಪಾಪಗಳಿಗಾಗಿ ಸಾಯುತ್ತಿರುವಾಗ ನಾವು ಹೇಗೆ ಊಟ ಮಾಡುವುದು.’
ಆ ಮಹಿಳೆಯರ ಈ ಪ್ರತಿಕ್ರಿಯೆ ಏನನ್ನು ಹೇಳುತ್ತದೆ?
ನಾಯಕನೊಬ್ಬ ನಿಜಕ್ಕೂ ಉದಾತ್ತನಾಗಿದ್ದರೆ, ಸ್ವಾರ್ಥವಿಲ್ಲದೆ ಜನರಿಗಾಗಿ ಮಿಡಿಯುತ್ತಿದ್ದಾನೆ ಎಂಬುದು ಅರಿವಾದರೆ ಕೆಲವರಾದರೂ ಅವರ ಮಾತುಗಳನ್ನು ಕೇಳಿಸಿಕೊಳ್ಳುತ್ತಾರೆ ಎಂಬುದನ್ನು ಇದು ಸೂಚಿಸುತ್ತದೆ. ಇನ್ನೂ ಮುಗ್ಧತೆ ಉಳಿಸಿಕೊಂಡ ವಿದ್ಯಾರ್ಥಿಗಳು ಹಾಗೂ ಮಹಿಳೆಯರು ಗಾಂಧಿಗೆ ಮಿಡಿದ ರೀತಿ ಮನುಷ್ಯರ ಬಗೆಗಿನ ನಮ್ಮ ನಂಬಿಕೆಯನ್ನು ಹೆಚ್ಚಿಸುತ್ತದೆ. ‘ಅರ್ಧನಾರೀಶ್ವರ’ ಕಲ್ಪನೆಯನ್ನು ಎಲ್ಲರೂ ಅನುಸರಿಸಬಲ್ಲ ಆದರ್ಶ ಸಂಕೇತವಾಗಿ ಕಂಡಿದ್ದ ಗಾಂಧಿ ಮಾನವನೊಳಗಿನ ಮುಗ್ಧತೆ, ಒಳಿತು, ಸ್ತ್ರೀತನವನ್ನು ಸದಾ ಎಚ್ಚರಗೊಳಿಸಲು ಯತ್ನಿಸುತ್ತಿದ್ದರು.
ತಮ್ಮ ಮಾತಿನ ಪರಿಣಾಮವೇನು ಎಂಬ ಪ್ರಜ್ಞೆಯೇ ಇಲ್ಲದೆ ಬಾಯಿಗೆ ಬಂದದ್ದನ್ನು ಬೊಗಳುವ ಚಾಳಿಯವರು; ಮನಸ್ಸಿನಲ್ಲಿ ಕೇಡು ತುಂಬಿಕೊಂಡು ಜನರ ಕೇಡಿತನವನ್ನು ಉದ್ದೀಪಿಸುವವರು- ಈ ಎರಡೂ ವರ್ಗದ ವಾಚಾಳಿಗಳಿಗೆ ಗಾಂಧಿಯಾಗಲಿ, ಕುವೆಂಪು ಆಗಲಿ ಜನರೊಳಗಿನ ಒಳಿತನ್ನು ಹೊರ ತರಲು ಪ್ರಯತ್ನಿಸಿರುವ ರೀತಿ ಒಂದು ಪಾಠವಾಗಬೇಕು.
ಜನರ ಪೂರ್ವಗ್ರಹಗಳನ್ನು ಹೆಚ್ಚಿಸಿ ಅಗ್ಗದ ಜನಪ್ರಿಯತೆ ಗಳಿಸಿಕೊಳ್ಳುವುದು ಸುಲಭ; ಆದರೆ ಪೂರ್ವಗ್ರಹಗಳನ್ನು ತಿದ್ದುವ ಕೆಲಸ ಕಷ್ಟ. ಬಸವಣ್ಣ, ಅಕ್ಕಮಹಾದೇವಿ, ಗಾಂಧಿ, ಅಂಬೇಡ್ಕರ್ ಥರದವರು ಜನರ ಪೂರ್ವಗ್ರಹಗಳನ್ನು ತಿದ್ದುವ, ಎದುರಿಸುವ ಕಷ್ಟದ ಹಾದಿ ಹಿಡಿದಿದ್ದರು. ಅಂಥವರು ಮಾತ್ರ ಜನರ ಮನಸ್ಸಿನ ಆರೋಗ್ಯ ಕಾಪಾಡಬಲ್ಲರು.
ಆಗಸ್ಟ್ ೧೫ರ ರಾತ್ರಿ ಏಕಾಂಗಿಯಾಗಿದ್ದ ಗಾಂಧೀಜಿ; ಗಾಂಧೀಜಿಯ ಏಕಾಕಿತನವನ್ನು ಕಾವ್ಯರಚನೆಯ ಏಕಾಂತದಲ್ಲಿ ನೆನೆಯುತ್ತಿದ್ದ ಕುವೆಂಪು...ಇವೆರಡೂ ವ್ಯಕ್ತಿತ್ವಗಳು ಸಂಧಿಸಿ ನನ್ನಂಥವನೊಳಗೆ ಹಬ್ಬಿಸಿದ ದಿವ್ಯ ಕೋಮಲ ಭಾವ ಎಲ್ಲರಲ್ಲೂ ಹುಟ್ಟಬಲ್ಲದು ಎಂಬ ನಂಬಿಕೆ ನನ್ನದು.
ಬ್ಲಾಗ್ ಫಾಲೋ ಮಾಡಲು ಒಪ್ಪಿ, ಕ್ಲಿಕ್ ಮಾಡಿ; ನೋಟಿಫಿಕೇಶನ್ ಪಡೆಯಿರಿ, ಶೇರ್ ಮಾಡಿ: FOLLOW
ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com
ಬಿಡುವಾದಾಗ ನೋಡಿ, ಶೇರ್ ಮಾಡಿ: https://www.youtube.com/@NatarajHuliyarYT
Comments
19 Comments
| NAGESHA B
ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಇಂಥ ನೆನಪುಗಳು ಮನಸ್ಸಿಗೆ ಒಂದಿಷ್ಟು ಸಮಾಧಾನ ನೀಡುತ್ತವೆ. ನಮ್ಮ ಆಲೋಚನೆಗಳಿಗೆ ಸರಿ ದಾರಿ ತೋರುಬಲ್ಲವು. ಧನ್ಯವಾದಗಳು.... ಸರ್......
| Udaykumar Habbu
ಈಗ ನೀವಂದಙತೆ ಗಾಂಧಿಜೀಯವರ ಇಮೇಜನ್ನು ಹಾಳುಗೆಡಯವ ಎಲ್ಲ ಪ್ರಯತ್ನಗಳೂ ನಡೆಯುತ್ತಿವೆ ಯುವ ಜನರ ಮನಸ್ಸುಗಳನ್ನು ವಾಟ್ಸಾಪ್ ವಿಶ್ವವಿದ್ಯಾಲಯ ವಿಷಮಯವನ್ನಾಗಿ ಮಾಡಿದೆ. ಕೆಟ್ಟ ಅವಾಚ್ಯ ಪದಗಳಲ್ಲಿ ಗಾಂಧಿಜೀಯವರನ್ನು ನಿಂದಿಸಲಾಗುತ್ತಿದೆ ಮೋಪ್ಲಾ ದಂಗೆ, ಖಿಲಾಫತ್ ಚಳವಳಿ, ನೌಖಾಲಿಯ ಹಿಂದುಗಳ ಮಾರಣ ಹೋಮಕ್ಕೆ ಗಾಙಧಿಜೀಯವರನ್ನೇ ಹೊಣೆಗಾರರನ್ನಾಗಿ ಮಾಡಲಾಗುತ್ತಿದೆ. \r\n
| Dr.Mohan
Good one for the Independent Day. Kuvempu\'s poem is marvellous
| Dr.Kaavya
Nice one
| ಡಾ. ನಿರಂಜನ ಮೂರ್ತಿ ಬಿ ಎಂ
ಇಬ್ಬರು ದಿಗ್ಗಜರಾದ ರಾಷ್ಟ್ರಪಿತ ಗಾಂಧೀಜಿ ಮತ್ತು ರಾಷ್ಟ್ರಕವಿ ಕುವೆಂಪು ಅವರ ಬಗೆಗಿನ ಈ ಬ್ಲಾಗೀಬರಹ ಅತ್ಯುತ್ತಮ. ಗಾಂಧೀಜಿ ಮತ್ತು ಕುವೆಂಪು ಅವರು ಎಲ್ಲಾ ಕಾಲಕ್ಕೂ ಸಲ್ಲುವವರು. ಎಲ್ಲೋ ಕೆಲವು ಕಡೆ ಎಲ್ಲೋ ಕೆಲವರಿಂದ ಮಾತ್ರ ಕೆಲವು ಅಪಸ್ವರಗಳು ಕೇಳಿಬಂದಿದ್ದಿರಬಹುದು ಮತ್ತು ಕೇಳಿಸದಂತಾಗಿ ಹೋಗಿದ್ದಿರಬಹುದು; ಮತ್ತು ಆಗಾಗ್ಗೆ ಅಂತಹ ಅಪಸ್ವರಗಳು ಕೇಳಿಬರಬಹುದು ಮತ್ತು ಕೇಳಿಸದಂತಾಗಬಹುದು. ಅದೇನೇ ಆದರೂ ಗಾಂಧೀಜಿಯಂತಹ ಒಬ್ಬ ಮಹಾನಾಯಕ ಮತ್ತು ಕುವೆಂಪು ಅವರಂತಹ ಮಹಾಲೇಖಕ ಜಗತ್ತಿನ ಬೇರೆಡೆಯೆಲ್ಲಿಯೂ ಸಿಕ್ಕಲಾರರು ಎಂಬುದಂತೂ ಸತ್ಯವಾದ ಮಾತು. ಅವರು ಬಾಳಿ ಬೆಳಗಿ ಹೋಗಿರುವಂತಹ ಈ ದೇಶದಲ್ಲಿ ಹುಟ್ಟಿರುವುದೇ ನಮ್ಮೆಲ್ಲರ ಸೌಭಾಗ್ಯವಲ್ಲವೆ? ಓದುಗರನ್ನು ಚಿಂತನೆಗೆ ಹಚ್ಚುವ ಮತ್ತು ಇಂತಹ ಅಪೂರ್ವ ವ್ಯಕ್ತಿತ್ವಗಳನ್ನು ಸ್ಮರಿಸುವ ಇಂತಹ ಲೇಖನಗಳು ಆಗಾಗ್ಗೆ ಬರುತ್ತಿದ್ದರೆ, ನಾಡಿನ ನಾಡಿಮಿಡಿತ ಸರಿಯಾಗಿರುತ್ತದೆ. ಹುಳಿಯಾರರಿಗೆ ನಮನಗಳು.
| Dr.M. S. Ashadevi
ಇದು ನಿಜವಾದ ಸ್ಪರ್ಶ ಬರವಣಿಗೆ
| ಮಹೇಶ್ ಹರವೆ
ಕುವೆಂಪು ಕವಿತೆ ಮತ್ತು ಗಾಂಧಿಯ ಹುಡುಕಾಟ ಖುಷಿ ಕೊಟ್ಟಿತು.
| ಅನಂತ್
ಒಬ್ಬ ಮೂಲಭೂತವಾದಿ ಸಮಾರಂಭದಲ್ಲಿ ಬಡಬಡಿಸಿರುವುದನ್ನು ನೋಡಿದರೆ ಒಂದು ವರ್ಗ ಹೇಗೆ ನಿರಂತರವಾಗಿ ಸುಳ್ಳುಗಳನ್ನು ಹೇಳುತ್ತಾ ಯುವ ಮನಸುಗಳಲಿ ಗಾಂಧಿ ದ್ವೇಷವನ್ನು ತುಂಬಲು ಪ್ರಯತ್ನಿಸುತ್ತಿದೆ ಎಂಬುದು ತಿಳಿಯುತ್ತದೆ. ಇಂತಹ ಸಂದರ್ಭದಲ್ಲಿ ಈ ಲೇಖನ ಯುವ ಮನಸುಗಳನ್ನ ತಲುಪಬೇಕು, ತಲುಪಲೇಬೇಕಾದ ತುರ್ತು ಇದೆ.
| shyamala
ಬಹಳ ಒಳ್ಳೆಯ ಬರಹ.
| shyamala
ಬಹಳ ಒಳ್ಳೆಯ ಬರಹ.
| P.R. Venkatesh
ಓಳ್ಳೆಯ ಬರಹ ಸರ್
| Sunanada
Good one
| Dr.Vijaya
ಪ್ರಗಾಥ ನನ್ನ ಮೆಚ್ಚಿನ ಓದು.ಇದರ ಬಗ್ಗೆ ಕುವೆಂಪು ಅವರ ಬಳಿ ಗಂಟೆಗಟ್ಟಲೆ ಹರಟಿದ್ದೇನೆ.ಅವರಿಗೂ ಮಾತಾಡಿ ಆದಷ್ಟೂ ಹೊಸ ಉತ್ಸಾಹ ಉಕ್ಕುತ್ತಿತ್ತು ಪ್ರಗಾಧದ ಹಾಗೇ.\r\nನಾನು ಪ್ರಗಾಥವನ್ನು ಬೇಂದ್ರೆಯವರ ಗಂಗಾವತರಣದ ಧಾಟಿಯಲ್ಲಿ ಓದುತ್ತಿದ್ದೆ.ಕುವೆಂಪು ಗೆ ಅದು ಬಹಳ ಇಷ್ಟ.ಮದ್ಯೆ ಮಧ್ಯೆ ಗದ್ಯಕ್ಕೆ ಅವರ ಸ್ವರ ಕೂಡುತ್ತಿತ್ತು.ಎಂಥ ಮಧುರ ನೆನಪನ್ನು ಕೆದಕಿದಿರಿ ನಟರಾಜ್!🙏👏
| Dr.Vijaya
ಪ್ರಗಾಥ ನನ್ನ ಮೆಚ್ಚಿನ ಓದು.ಇದರ ಬಗ್ಗೆ ಕುವೆಂಪು ಅವರ ಬಳಿ ಗಂಟೆಗಟ್ಟಲೆ ಹರಟಿದ್ದೇನೆ.ಅವರಿಗೂ ಮಾತಾಡಿ ಆದಷ್ಟೂ ಹೊಸ ಉತ್ಸಾಹ ಉಕ್ಕುತ್ತಿತ್ತು ಪ್ರಗಾಧದ ಹಾಗೇ.\r\nನಾನು ಪ್ರಗಾಥವನ್ನು ಬೇಂದ್ರೆಯವರ ಗಂಗಾವತರಣದ ಧಾಟಿಯಲ್ಲಿ ಓದುತ್ತಿದ್ದೆ.ಕುವೆಂಪು ಗೆ ಅದು ಬಹಳ ಇಷ್ಟ.ಮದ್ಯೆ ಮಧ್ಯೆ ಗದ್ಯಕ್ಕೆ ಅವರ ಸ್ವರ ಕೂಡುತ್ತಿತ್ತು.ಎಂಥ ಮಧುರ ನೆನಪನ್ನು ಕೆದಕಿದಿರಿ ನಟರಾಜ್!🙏👏
| ಬದುಕಿನ ರೀತಿ ಮತ್ತು ನೀತಿಗಳು ಒಂದೇ ಆದವರ ಮಾತು ಮತ್ತು ಕ್ರಿಯೆಗಳು ಎಂತಹ ಗುಣಾತ್ಮಕ ಪರಿಣಾಮ ಬೀರುತ್ತವೆ ಎಂಬುದನ್ನು ಈ ಪ್ರಸಂಗ ನಿರೂಪಿಸುತ್ತದೆ ಗಾಂಧಿ ಮತ್ತು ಕುವೆಂಪು ಅವರಿಗೆ ಮಿತಿಗಳಿದ್ದವು, ಮನಸ್ಸು ನಿರ್ಮಲವಾಗಿತ್ತು. ಅದು ನೈತಿಕ ಶಕ್ತಿಯೇ ಹೃದಯಸ್ಪರ್ಶಿ ಆದದ್ದು.
\r\n
| Prof. Shivalingaiah
ಇದನ್ನು ಓದುತ್ತಿದ್ದರೆ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿದ ನವೋದಯದ ಸಾಹಿತಿಗಳಾದ ದರಾ ಬೇಂದ್ರೆ ಶಿವರಾಮ ಕಾರಂತ ಮೊದಲಾದವರ ಬರಹ ಮತ್ತು ಬದುಕು ಕಣ್ಮುಂದೆ ಬರುತ್ತದೆ
| K R Durgadas
ಒಳ್ಳೆಯ ಬರಹ. ಒಳ್ಳೆಯದಕ್ಕೆ ತುಡಿಯುವ್ವರು ಇದ್ದರೆ ಎಂಬುದು ಸಮಾಧಾನದ ವಿಷಯ.
| K R Durgadas
ಒಳ್ಳೆಯ ಬರಹ. ಒಳ್ಳೆಯದಕ್ಕೆ ತುಡಿಯುವ್ವರು ಇದ್ದರೆ ಎಂಬುದು ಸಮಾಧಾನದ ವಿಷಯ.
| K R Durgadas
ಒಳ್ಳೆಯ ಬರಹ. ಒಳ್ಳೆಯದಕ್ಕೆ ತುಡಿಯುವ್ವರು ಇದ್ದರೆ ಎಂಬುದು ಸಮಾಧಾನದ ವಿಷಯ.
Add Comment