ಯೋಗದ ಹೊಲಬ ನೀವೆತ್ತ ಬಲ್ಲಿರೋ…

ವಾರ್ಷಿಕ ಯೋಗದ ಆಟಾಟೋಪ ನೋಡುತ್ತಿರುವಾಗ ಅಲ್ಲಮಪ್ರಭುಗಳ ‘ಅಗ್ನಿಯ ಸುಡುವಲ್ಲಿ ಉದಕವ ತೊಳೆವಲ್ಲಿ, ವಾಯುವ ಮೆಟ್ಟಿ ಆಕಾಶವ ಹಿಡಿವಲ್ಲಿ, ಯೋಗದ ಹೊಲಬ ನೀನೆತ್ತ ಬಲ್ಲೆ?’… ವಚನ ನೆನಪಾಯಿತು. ನನ್ನ ಪ್ರಿಯ ಹಿಂದೂಸ್ತಾನಿ ಗಾಯಕರಲ್ಲೊಬ್ಬರಾದ ವೆಂಕಟೇಶ್‌ಕುಮಾರ್ ಕಂಠದಲ್ಲಿ ಈ ವಚನ ಕಿವಿಯಲ್ಲಿ ಗುಂಯ್‌ಗುಡತೊಡಗಿತು. 

ವೆಂಕಟೇಶ್‌ಕುಮಾರ್ ಹಾಡಿದ್ದ ವಚನದಲ್ಲಿ ‘ಯೋಗದ ಹೊಲಬ ನೀವೆತ್ತ ಬಲ್ಲಿರೋ’ ಎಂಬ ಪಾಠಾಂತರವಿತ್ತು. ಹಿಂದೂಸ್ತಾನಿ ಗಾಯನದ ಹರಿವಿನಲ್ಲಿ ಸದಾ ಹೊಸ ಹೊಸ ಅರ್ಥಗಳು ಹೊಳೆಯುತ್ತಾ ಹೋಗುತ್ತವೆ. ವೆಂಕಟೇಶ್‌ಕುಮಾರ್ ಹಾಡತೊಡಗಿದಾಗ ‘ಯೋಗದ ಹೊಲಬ ನೀವೆತ್ತ ಬಲ್ಲಿರೋ’ ಎಂಬ ಸಾಲು ಒಮ್ಮೆ ಪ್ರಶ್ನೆಯಾಯಿತು; ಮತ್ತೊಮ್ಮೆ ಆಶ್ಚರ್ಯಸೂಚಕವಾಯಿತು; ಮರುಗಳಿಗೆಗೆ ವಿಷಾದವಾಯಿತು; ಮಗದೊಮ್ಮೆ ’ಅಯ್ಯೋ’ ಎಂಬ ಕನಿಕರವಾಯಿತು;  ಆತ್ಮಪರೀಕ್ಷೆಯಾಯಿತು, ಸವಾಲ್ ಆಯಿತು, ಕಾಲೆಳೆತವಾಯಿತು…ಯುಟ್ಯೂಬ್‌ನಲ್ಲಿರುವ ಈ ಹಾಡು ಕೇಳಿಸಿಕೊಂಡರೆ ಇನ್ನಷ್ಟು ಧ್ವನಿಗಳು ನಿಮ್ಮಲ್ಲೂ ಹೊರಡಬಹುದು. 

ನಿಘಂಟಿನಲ್ಲಿ ‘ಹೊಲಬು’ ಎಂದರೆ ದಾರಿ, ರೀತಿ, ಮಾರ್ಗ ಎಂಬ ಅರ್ಥಗಳಿದ್ದವು. ’ಹೊಲಬುಗೆಡಿಸು’ ಎಂಬ ಪ್ರಯೋಗವೂ ನಿಘಂಟಿನಲ್ಲಿತ್ತು.  

ಅಲ್ಲಮಪ್ರಭು ‘ಯೋಗದ ಹೊಲಬ ನೀನೆತ್ತ ಬಲ್ಲೆ’ ಎನ್ನುತ್ತಲೇ, ಕೊನೆಗೆ ‘ಕದಳಿಯ ಬನವ ನಿನ್ನಲ್ಲಿ ನೀನೆ ತಿಳಿದು ನೋಡು’ ಎಂದು ಹೇಳುತ್ತಾರೆ. 

ಇವತ್ತು ಯೋಗವನ್ನು ರಾಜಕೀಯ ಪ್ರದರ್ಶನವಾಗಿ ಮಾಡುತ್ತಿರುವವರು ’ಯೋಗದ ಹೊಲಬ ಬಲ್ಲರೋ?’ ಅಥವಾ ’ಯೋಗದ ಹೊಲಬುಗೆಡಿಸುತ್ತಿರುವರೋ?’ ಇದೆಲ್ಲವನ್ನೂ ಸೂಕ್ಷ್ಮಜೀವಿಗಳು ಬಲ್ಲರು. ಯೋಗದ ಹೊಲಬು ತಿಳಿಯದ ಮಂದಿಗೆ ಕುವೆಂಪು ‘ಉಳುವ ಯೋಗಿಯ ನೋಡಲ್ಲಿ!’ ಎಂದು ‘ಯೋಗಿ’ಯ ಪರಿಕಲ್ಪನೆಗೇ ಹೊಸ ಅರ್ಥ ಕೊಟ್ಟಿರುವುದು ಕೇಳಿಸಿರಲಿಕ್ಕಿಲ್ಲ. ಮೂಗು ಹಿಡಿದ ಯೋಗಿಗಳಿಗೆ ಕವಿ ಉಳುವ ಯೋಗಿಯನ್ನು ತೋರಿಸುತ್ತಿರುವ ಚಿತ್ರ ಕಂಡಿರಲಿಕ್ಕಿಲ್ಲ!

ರಾಮಮನೋಹರ ಲೋಹಿಯಾ ಅವರ ‘ಆ್ಯನ್ ಎಪಿಸೋಡ್ ಇನ್ ಯೋಗ’ ಎಂಬ ಮಹತ್ವದ ಲೇಖನವೊಂದಿದೆ. ಅದನ್ನು ಕೆ.ವಿ. ಸುಬ್ಬಣ್ಣ ‘ಯೋಗದಲ್ಲಿ ಒಂದು ಅಧ್ಯಾಯ’ ಎಂದು ಅನನ್ಯವಾಗಿ ಕನ್ನಡಿಸಿದ್ದಾರೆ. 

ಲೋಹಿಯಾ ಲೇಖನಕ್ಕೊಂದು ಹಿನ್ನೆಲೆಯಿದೆ: ಇಸವಿ ೧೯೪೪. ಸ್ವಾತಂತ್ರ‍್ಯ ಹೋರಾಟಗಾರ ಲೋಹಿಯಾರನ್ನು ಬ್ರಿಟಿಷ್ ಸರ್ಕಾರ ಬಂಧಿಸಿತ್ತು. ಈ ಮೊದಲೇ, ೧೯೪೨ರ ಕ್ವಿಟ್ ಇಂಡಿಯಾ ಚಳುವಳಿ ಶುರುವಾದ ತಕ್ಷಣ ಗಾಂಧಿ, ನೆಹರು, ಪಟೇಲ್, ಮೌಲಾನ ಮುಂತಾದ ಮುಂಚೂಣಿ ನಾಯಕರ ಬಂಧನವಾಗಿತ್ತು. ಲೋಹಿಯಾ, ಜೆ.ಪಿ., ಅರುಣಾ ಅಸಫ್ ಆಲಿ, ಅಚ್ಯುತ್ ಪಟವರ್ಧನ್ ಥರದ ಸಮಾಜವಾದಿಗಳ ಜೊತೆಗೆ ಲಕ್ಷಾಂತರ ಜನರು ಪೊಲೀಸರ ಕಣ್ತಪ್ಪಿಸಿ ಭೂಗತ ಹೋರಾಟ ನಡೆಸುತ್ತಿದ್ದರು; ಸ್ವಾತಂತ್ರ‍್ಯ ಚಳುವಳಿಯ ಸ್ಪಿರಿಟ್ಟನ್ನು ಕಾಯ್ದುಕೊಂಡಿದ್ದರು. ಉಷಾ ಮೆಹ್ತಾ, ಲೋಹಿಯಾ ಮೊದಲಾದವರು ಭೂಗತ ‘ಕಾಂಗ್ರೆಸ್ ರೇಡಿಯೋ’ ನಡೆಸಿ ಚಳುವಳಿಗಾರರನ್ನು ಮುನ್ನಡೆಸುತ್ತಿದ್ದರು. 

ಕೊನೆಗೂ ಸಿಕ್ಕುಬಿದ್ದ ಲೋಹಿಯಾರ ಬಾಯಿ ಬಿಡಿಸಲು ವಸಾಹತು ಪೊಲೀಸರು ಚಿತ್ರವಿಚಿತ್ರವಾದ ದೈಹಿಕ, ಮಾನಸಿಕ ಹಿಂಸೆಗಳನ್ನು ಕೊಡಲಾರಂಭಿಸಿದರು. ‘ನಾನು ಮಾಡಿದ್ದರ ಬಗ್ಗೆ ಏನು ಬೇಕಾದರೂ ಕೇಳಿ, ಹೇಳುತ್ತೇನೆ; ವಿಚಾರಣೆ, ಶಿಕ್ಷೆ ಎಲ್ಲವನ್ನೂ ಎದುರಿಸಲು ಸಿದ್ಧ. ಆದರೆ ಬೇರೆಯವರ ಬಗ್ಗೆ ಏನನ್ನೂ ಹೇಳುವುದಿಲ್ಲ’ ಎಂದು ಲೋಹಿಯಾ ಖಡಕ್ಕಾಗಿ ಹೇಳಿದರು.

ಪೊಲೀಸರ ಹಿಂಸೆ ಮುಂದುವರಿಯಿತು. ಅಂಥದೊಂದು ಹಿಂಸೆಯ ದಿನ ಲೋಹಿಯಾಗೆ ಅಪ್ಪ ಹೀರಾಲಾಲ್ ಹೇಳುತ್ತಿದ್ದ ಪತಂಜಲಿಯ ಸೂತ್ರ ಇದ್ದಕ್ಕಿದ್ದಂತೆ ನೆನಪಾಯಿತು: ಯೋಗದ ಹಾದಿ ಎಂದರೆ ‘ಚಿತ್ತದ ಪ್ರವೃತ್ತಿಯ ನಿರೋಧ.’ ಆಗ ಚಿತ್ತದ ಪ್ರವೃತ್ತಿಯ ಮೇಲೆ ಹತೋಟಿ ಸಾಧಿಸಲೆತ್ನಿಸಿದ ಲೋಹಿಯಾಗೆ ತಾನು ಹಠಯೋಗದಲ್ಲಿ ಮುಳುಗಿದ್ದೇನೆ ಅನ್ನಿಸತೊಡಗಿತು.  

ಬರ್ಬರ ಹಿಂಸೆಯನ್ನು ಮೀರಲು ನೆರವಾದ ಯೋಗದ ಹೊಳಹನ್ನು ಅನುಭವಿಸಿ ಕಂಡಿದ್ದ ಲೋಹಿಯಾ ಮುಂದೆ ಈ ಅನುಭವವನ್ನು ನೆನೆಯುತ್ತಾ ೧೯೫೭ರಲ್ಲಿ ’ಯೋಗದಲ್ಲಿ ಒಂದು ಅಧ್ಯಾಯ’ ಬರೆದರು. ಅರವತ್ತರ ದಶಕದ ಭಾರತದಲ್ಲಿ ಯೋಗವು ಪ್ರದರ್ಶನದ ಸರಕಾಗಿದ್ದನ್ನೂ ಕಂಡರು; ಯೋಗ, ಆಧ್ಯಾತ್ಮಗಳ ಬಗ್ಗೆ ಮಾತಾಡುವುದು ಹುಸಿ ಫ್ಯಾಶನ್ ಆದಾಗ ಲೋಹಿಯಾ ಬರೆದ ಮಾತುಗಳನ್ನು ಮೊನ್ನೆ ಶ್ರೀಧರ್ ಏಕಲವ್ಯ ನನ್ನ ’ಆರ್ಟ್ ಆಫ್ ಲಿವಿಂಗ್ ಎಂದರೇನು?’ (’ಗಾಳಿ ಬೆಳಕು’, ಪಲ್ಲವ ಪ್ರಕಾಶನ) ಬರಹದಿಂದ ಹೆಕ್ಕಿ ಕಳಿಸಿದರು:

‘ಈ ಯೋಗದ ಪ್ರಯತ್ನಗಳನ್ನು ಕುರಿತಂತೆ ಎರಡು ಮುಖ್ಯ ಅಂಶಗಳನ್ನು ಅಗತ್ಯವಾಗಿ ಗಮನಿಸಬೇಕು: ಈ ಪಂಥದ ಅನುಯಾಯಿಗಳಲ್ಲಿ ಬಹಳಷ್ಟು ಜನ ಸ್ಥಿತಿವಂತರೇ ಇದ್ದಾರೆ. ಬಹುತೇಕ ಸಂದರ್ಭಗಳಲ್ಲಿ ಅವರ ಬದುಕುಗಳು ಅರ್ಥವನ್ನೇ ಕಳೆದುಕೊಂಡಿರುತ್ತವೆ; ಅವರ ಬದುಕು ಸಾಮಾನ್ಯವಾಗಿ ಹಣ ಗಳಿಸುವುದು, ಬೇರೆಯವರ ನೋವಿಗೆ ಅಥವಾ ಬಡತನಕ್ಕೆ ಕಾರಣವಾಗುವುದು... ಇವೇ ಮುಂತಾದ ವಿಷಮಯ ಅಂಶಗಳಿಂದಲೇ ತುಂಬಿರುವುದು ಗ್ಯಾರಂಟಿ. 

‘ಯೋಗಿಗಳು ಹಾಗೂ ಅವರ ಪ್ರಚಾರಕರಿಬ್ಬರೂ ಈ ದೇಶದ ‘ಬುದ್ಧಿಜೀವಿಗಳು’ ಎಂದು ಕರೆಯಲಾಗುವ ವರ್ಗದಿಂದಲೇ ತಮ್ಮ ಅನುಯಾಯಿಗಳನ್ನು ಪಡೆದಿದ್ದಾರೆ. ಅವರಲ್ಲಿ ಬಹುತೇಕರು ನಿವೃತ್ತರಾದ ನ್ಯಾಯಾಧೀಶರುಗಳು, ಆಡಳಿತ ವರ್ಗದಲ್ಲಿದ್ದವರು, ಪೊಲೀಸ್ ಇನ್‌ಸ್ಪೆಕ್ಟರುಗಳು, ಲಾಯರುಗಳು, ವಿಶ್ವವಿದ್ಯಾಲಯಗಳ ಅಧ್ಯಾಪಕರುಗಳು ಹಾಗೂ ವ್ಯಾಪಾರಿಗಳು. ಇವರೆಲ್ಲ ತಮ್ಮ ವೃತ್ತಿಜೀವನದಲ್ಲಿ ಖಾಲಿ ಬದುಕನ್ನು ಸವೆಸಿದವರು; ಅಥವಾ ತಂತಮ್ಮ ಅಂತಸ್ಸಾಕ್ಷಿಗೆ ಹಾನಿ ಮಾಡಿಕೊಂಡವರು. ಭಾರತದ ವಿವಿಧ ವೃತ್ತಿಗಳಲ್ಲಿರುವ ಈ ಜನ ಇತರ ದೇಶಗಳ ವೃತ್ತಿಪರ ಜನರಂತೆ ಮಾನವನ ನಿಜವಾದ ಏಳಿಗೆಗೆ ಶ್ರಮಿಸುವುದಿಲ್ಲ; ಬದಲಿಗೆ, ಜನರಿಂದ ದೂರ ಇರುವುದಕ್ಕೇ ತಮ್ಮೆಲ್ಲ ಬುದ್ಧಿಯನ್ನು ಖರ್ಚು ಮಾಡಿರುವ ಜನರಿವರು.’

ಯೋಗಪೀಡಿತ ಮನಸ್ಸುಗಳನ್ನು ಕುರಿತ ಲೋಹಿಯಾ ಮಾತು ಇವತ್ತು ಅವತ್ತಿಗಿಂತ ಹೆಚ್ಚು ಸಕಾಲಿಕವಾಗಿದೆ.

ಕಳೆದೆರಡು ದಶಕಗಳಲ್ಲಿ ಯೋಗ ಋಷಿ ಪತಂಜಲಿಯನ್ನು ಲಾಭದ ಸಾಧನವಾಗಿ ಬಳಸಿರುವ ರಾಮದೇವ್ ಥರದವರು; ಈಚಿನ ವರ್ಷಗಳಲ್ಲಿ ಯೋಗ ಪ್ರದರ್ಶಿಸಿ ಉಬ್ಬಸ ಪಡುತ್ತಿರುವ ರಾಜಕಾರಣಿಗಳು; ಇದನ್ನೇ ಭಾರತದ ಸಾಧನೆಯೆಂದು ಕೂಗುತ್ತಿರುವವರು- ಇವರೆಲ್ಲ ಲೋಹಿಯಾ ಲೇಖನವನ್ನಿರಲಿ, ಪತಂಜಲಿಯನ್ನೂ ಓದಿರಲಾರರು. ಯೋಗದ ಈ ಅಣಕು ಪ್ರದರ್ಶನಗಳನ್ನು ಕಂಡು ಹೊಲ, ಗದ್ದೆಗಳಲ್ಲಿ ಸಹಜವಾಗಿ ನೂರಾರು ಸಲ ಬಗ್ಗಿ, ಮೇಲೇಳುವ ರೈತ, ಕಾರ್ಮಿಕ ಯೋಗಿಗಳು ಕನಿಕರದಿಂದ ನಗುತ್ತಿರಬಹುದು!

ಕಳೆದ ಎರಡು ದಶಕಗಳಲ್ಲಿ ಭಾರತದ ಸುಖವಾದಿ ವರ್ಗಗಳಲ್ಲಿ ದೇಹದ ಬಗ್ಗೆ ಹಬ್ಬಿರುವ ಹೊಸ-ಹುಸಿ ಆತಂಕದಿಂದ ರಾಮದೇವ್ ಅಂಡ್ ಕಂಪನಿಗೆ ಸಾವಿರಾರು ಕೋಟಿ ರೂಪಾಯಿ ಗಳಿಸುವ ‘ಯೋಗ’ ದೊರೆತದ್ದು ಎಲ್ಲರಿಗೂ ಗೊತ್ತಿದೆ; ಈಗ ಸೈಡ್‌ವಿಂಗ್‌ಗೆ ಸರಿದಿರುವ ರಾಮದೇವ್, ಕೊರೋನಾ ಔಷಧಿ ಕುರಿತು ಕೊಟ್ಟ ಜಾಹಿರಾತುಗಳಿಗೆ ಸುಪ್ರೀಂ ಕೋರ್ಟ್ ಹಾಕಿದ ಛೀಮಾರಿಯನ್ನೂ ಮೊನ್ನೆ  ನೋಡಿದ್ದೇವೆ!

ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವಿದ್ದಾಗ ಆರ್ಥಿಕ ಭ್ರಷ್ಟಾಚಾರದ ವಿರುದ್ಧ ಭಾರಿ ಮಾತಾಡುತ್ತಿದ್ದ ರಾಮದೇವ್ ‘ಯೋಗ ದೃಷ್ಟಿ’ಗೆ ನಂತರದ ಸರ್ಕಾರದಲ್ಲಿ ಯಾವ ಭ್ರಷ್ಟಾಚಾರವೂ ಕಾಣಲಿಲ್ಲ! ಇಂಥವರ ಯೋಗ, ಆಧ್ಯಾತ್ಮದ ಮುಸುಕಿನ ಶಿಬಿರಗಳು ನಿಯಂತ್ರಿಸುತ್ತಿರುವ ಭಾರತದ ಮಧ್ಯಮ ವರ್ಗ ಹಾಗೂ ಕಾರ್ಪೊರೇಟ್ ವರ್ಗ, ಹಾಗೂ ಅಲ್ಲಿ ನಾಜೂಕಾಗಿ ಬಳಸುತ್ತಿರುವ ಕಂದಾಚಾರಿ ಭಾಷೆ ಇವೆಲ್ಲ ಯಾವ ಶಕ್ತಿಗಳಿಗೆ ಸಹಾಯ ಮಾಡುತ್ತಿವೆ ಎಂಬುದು ಗುಟ್ಟಾಗಿ ಉಳಿದಿಲ್ಲ.

ಇಂಥ ಕಡೆ ನಿಜವಾದ ವ್ಯಕ್ತಿಗತ ಶುದ್ಧಿ, ಅಸಲಿ ಆತ್ಮಪರೀಕ್ಷೆಯ ಮಾತಾಡಿದರೆ ಶಿಬಿರಾರ್ಥಿಗಳೇ ಜಾಗ ಖಾಲಿ ಮಾಡುತ್ತಾರೇನೋ!  ಆಧ್ಯಾತ್ಮಿಕ ಶಿಬಿರಗಳ ಅಮೂರ್ತ ‘ಆತ್ಮಶುದ್ದಿ’ಯ ಪ್ರವಚನಗಳು ಶಿಬಿರದ ಸಂಘಟಕರ ಹಾಗೂ ಶಿಬಿರಾರ್ಥಿಗಳ ನೀಚತನ, ಜಾತೀಯತೆಗಳನ್ನು, ಜನವಿರೋಧಿ ಧೋರಣೆಗಳನ್ನು ತಿದ್ದಿದ ಉದಾಹರಣೆಗಳಿಲ್ಲ. ಯಾವುದನ್ನಾದರೂ ಭ್ರಷ್ಟಗೊಳಿಸುವ ದೇಶದಲ್ಲಿ ಯೋಗದಂಥ ದೈಹಿಕ ವ್ಯಾಯಾಮ, ಚಿತ್ತದ ಪ್ರವೃತ್ತಿಯ ನಿರೋಧ ಎಲ್ಲವೂ ದಿಕ್ಕೆಟ್ಟಿದ್ದರೆ ಅಚ್ಚರಿಯಲ್ಲ.

ಮೊನ್ನೆ ಲೋಹಿಯಾ ಮಾತುಗಳನ್ನು ಕಳಿಸಿದ್ದ ಶ್ರೀಧರ್, ಗೆಳೆಯ ನಟರಾಜ್ ಬೂದಾಳು ಅನುವಾದಿಸಿದ ಸರಹಪಾದರ ಪದ್ಯವನ್ನೂ ಕಳಿಸಿದ್ದರು:

ದಣಿದ ಕುದುರೆಯ ಹಾಗೆ ಉಸಿರ ಎಳೆದು ಬಿಡುವೆಯಲ್ಲ!
ಸಹಜದಲ್ಲಿ ಸುಮ್ಮನಿರು ನಿಶ್ಚಲನಾಗಿ;
ಪವನವ ನಿರ್ಬಂಧಿಸಿ ನಿನ್ನ ಬಗ್ಗೆಯೇ ಧ್ಯಾನಿಸುವುದ ಬಿಡು
ಕಟ್ಟಾಜೋಗಿ, ಮೂಗಿನ ತುದಿಯ ನೋಡುತ್ತ ಕೂರಬೇಡ.

ಈ ಕಾಲದ ಧಿಡೀರ್ ಯೋಗಿಗಳಿಗೆ ಇದೊಂದು ಪದ್ಯದ ಕಿವಿಮಾತು ಸಾಕೆನ್ನಿಸುತ್ತದೆ; ‘ಇನ್ನು ಮುಂದೆ ಶಬ್ದವಿಲ್ಲ’ ಎಂದು ಅಲ್ಲಮಪ್ರಭುಗಳ ಅಪ್ಪಣೆಯಿದೆ!

ಕೊನೆಟಿಪ್ಪಣಿ: ಲೇಖಕರೊಬ್ಬರ ಯೋಗಾಯೋಗ! 

ಚಿತ್ರ ನಟರೊಬ್ಬರು ಅತಿಯಾಗಿ ಯೋಗ ಮಾಡಿ ಫಳಫಳ ಹೊಳೆಯುವುದನ್ನು ಕಂಡ ಲೇಖಕರೊಬ್ಬರು ಕೇಳಿದರು: 

‘ಸಾರ್! ದಿನಕ್ಕೆ ಎಷ್ಟು ಹೊತ್ತು ಯೋಗ ಮಾಡುತ್ತೀರಿ?’ 

‘ಒಂದು ಗಂಟೆ!’ ನಟರ ಉತ್ತರ.

‘ಹಾಗಾದರೆ ನಾನು ಎರಡು ಗಂಟೆ ಯೋಗ ಮಾಡಿದರೆ ಈ ನಟನಿಗಿಂತ ಚಿರಂಜೀವಿ ಆಗಬಹುದಲ್ಲ!’ ಎಂದು ಈ ಲೇಖಕರಿಗೆ ಅನ್ನಿಸಿತೋ ಏನೋ! ಬೆಳಗ್ಗೆ ಒಂದು ಗಂಟೆ, ಸಂಜೆ ಒಂದು ಗಂಟೆ ಅವರು ‘ಅತಿ ಯೋಗಿ’ಯಾದರು. 

ಕೆಲವೇ ದಿನಗಳಲ್ಲಿ ನರಗಳ ಸೆಳೆತ ಶುರುವಾಗಿ ಡಾಕ್ಟರ್ ಬಳಿ ಹೋದರು. ಎಲ್ಲ ಪರೀಕ್ಷಿಸಿದ ಡಾಕ್ಟರು ‘ಇದು ಯೋಗದ ಅತಿ ಬಳಕೆಯ ಫಲ’ ಎಂದು ಬುದ್ಧಿ ಹೇಳಿ ಕಳಿಸಿದರು. 

ಸದರಿ ಲೇಖಕರು ಯೋಗದ ಹೊಲಬಿನಲ್ಲಿ ಮುಂದುವರಿದಿರುವರೋ ಇಲ್ಲವೋ ಎಂಬ ಬಗ್ಗೆ ಯಾವುದೇ ವರದಿಯಿಲ್ಲ; ಕ್ಷಮೆಯಿರಲಿ!  
                                
ಬ್ಲಾಗ್ ಫಾಲೋ ಮಾಡಲು ಒಪ್ಪಿ, ಕ್ಲಿಕ್ ಮಾಡಿ; ನೋಟಿಫಿಕೇಶನ್ ಪಡೆಯಿರಿ, ಶೇರ್ ಮಾಡಿ: FOLLOW
ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com 
ಬಿಡುವಾದಾಗ ನೋಡಿ, ಶೇರ್ ಮಾಡಿ:  YOUTUBE LINK 

Share on:

Comments

9 Comments



| Suresha B

ನಿಮ್ಮ ಮನೋಯೋಗದಲ್ಲಿ ಮೂಡಿದ ಕೃತ್ರಿಮ ಯೋಗಿಗಳ ಕುರಿತ ಲೇಖನ ಓದುವಾಗಲೇ ಇನ್ಸ್ಟಾಗ್ರಾಂನಲ್ಲಿ ಕಂಡ ಯೋಗಿ ಆದಿತ್ಯನಾಥ್ ಅವರು ಯೋಗ ದಿನ ಒಂಟಿ ಕಾಲಲ್ಲಿ ನಿಲ್ಲಲಾಗದೆ ಹರಸಾಹಸ ಮಾಡಿದ ವಿಡಿಯೋ ನೆನಪಾಗಿ ನಗು ಮೂಡಿತು.

\r\n\r\n

ಅಲ್ಲಮ್ಮನ ವಚನ ಹಾಗೂ ಸರಹಪಾದನ ನಾಲ್ಕು ಸಾಲಿನ ಮಾತುಗಳು ಒಟ್ಟು ಲೇಖನಕ್ಕೆ ದಿಕ್ಸೂಚಿ ಆಗಿವೆ. ಅವೆರಡನ್ನೂ ಮರಳಿ ನೆನಪಿಸಿದ್ದಕ್ಕೆ ಡಬಲ್ ಥ್ಯಾಂಕ್ಸು ಗುರುಗಳೇ.

\r\n\r\n

- ಬಿ. ಸುರೇಶ

\r\n


| ChandrashekharaTalya

ಯೋಗದ ರಾಜಕೀಯ ವ್ಯಾಪಾರ ಭರಂದು ನಡೆಯುತ್ತಿದೆ, ಈಗ ಅದೊಂದು ಉದ್ಯಮ, ಅಲ್ಲಮ ಮತ್ತು ಲೋಹಿಯಾರ ನುಡಿಗಳು ಇಂದಿನ ರಾಜಕೀಯ ಜೀವಿಗಳಿಗೆ ಅಪಥ್ಯ, ನಮ್ಮ ಮಧ್ಯಮ ವರ್ಗದ ಸಿರಿವಂತರಿಗಂತೂ ಈ ಈರ್ವರ ಹೆಸರಿನ ಕಾಗುಣಿತವೇ ತಿಳಿದಿಲ್ಲ, ಯುವತಿ, ಯುವಕರಂತೂ ಈ ಲೋಕದಲ್ಲೇ ಜೀವಿಸುತ್ತಿಲ್ಲ 'ಸೂರ್ಯರನೇಕರು ಮೂಡಿ ದಾರಿಯ ಹೊಲಬೆಂಬುದು ಕೆಟ್ಟಿತ್ತು ನೋಡಾ' ಈಗಿನ ದುಸ್ಥಿತಿ ಇದು.  

\r\n


| Reader

ಯೋಗದ ಆಟಾಟೋಪ ಲೇಖನದ ಕೊನೆಯ ಭಾಗ ಹೆಚ್ಚಿನ ಪರಿಣಾಮ ಬೀರಿತು .ತಾವು ಯೋಗ ಮಾಡಲು ಹೊರಟು ಅನುಭವಿಸಿದ  'ಯಾತನೆ' ಗಳ ಬಗೆಗೆ ವ್ಯಥೆಯಿಂದ ಹೇಳಿ, ಧ್ಯಾನ ಮಾಡಲು ಹೊರಟು 'ಮೂರ್ಛೆ' ಹೋದ ಸ್ಥಿತಿಯ ಬಗ್ಗೆ ಹೇಳಿ, ಯೋಗ ನಿಲ್ಲಿಸಿದ ಕಾರಣ ತಿಳಿಸಿದ್ದು... ನಿಮ್ಮ ಬ್ಲಾಗ್ ನ  ಅಡ್ಡಪರಿಣಾಮ 😄😀ಇರಬಹುದೇನೊ!

\r\n


| Reader

ಯೋಗದ ಆಟಾಟೋಪ ಲೇಖನದ ಕೊನೆಯ ಭಾಗ ಹೆಚ್ಚಿನ ಪರಿಣಾಮ ಬೀರಿತು .ತಾವು ಯೋಗ ಮಾಡಲು ಹೊರಟು ಅನುಭವಿಸಿದ  'ಯಾತನೆ' ಗಳ ಬಗೆಗೆ ವ್ಯಥೆಯಿಂದ ಹೇಳಿ, ಧ್ಯಾನ ಮಾಡಲು ಹೊರಟು 'ಮೂರ್ಛೆ' ಹೋದ ಸ್ಥಿತಿಯ ಬಗ್ಗೆ ಹೇಳಿ, ಯೋಗ ನಿಲ್ಲಿಸಿದ ಕಾರಣ ತಿಳಿಸಿದ್ದು... ನಿಮ್ಮ ಬ್ಲಾಗ್ ನ  ಅಡ್ಡಪರಿಣಾಮ 😄😀ಇರಬಹುದೇನೊ!

\r\n


| savitha

ಯೋಗದ ಹೊಲಬು...  ಚೆನ್ನಾಗಿದೆ

\r\n


| ಡಾ. ನಿರಂಜನ ಮೂರ್ತಿ ಬಿ ಎಂ

ಯೋಗವು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಉತ್ತಮ ಮಾರ್ಗವೆಂಬುದು ನಿಸಂದೇಹವಾಗಿ ಮತ್ತು ವೈಜ್ಞಾನಿಕವಾಗಿ ಋಜುವಾತಾದ ಸಂಗತಿಯೆಂಬುದು ಸರ್ವವಿದಿತ ಎಂಬುದನ್ನು ಗುರುತಿಸುತ್ತಲೇ; ಅದು ಕೇವಲ ಪ್ರದರ್ಶನದ ಪ್ರಕ್ರಿಯೆಯಾದಾಗ ಅಥವಾ ಲಾಭದ ಉದ್ಯಮವಾದಾಗ ಅಥವಾ ಸ್ವಾರ್ಥಹಿತಾಸಕ್ತಿಗಳಿಗೆ ಬಳಕೆಯಾದಾಗ, ಏನಾಗುತ್ತದೆಂಬುದನ್ನು ಲೇಖನ ಸರಿಯಾಗಿ ವಿವರಿಸಿದೆ. ಆ ರೀತಿ ಬಳಸುವವರು ಯೋಗದ ಹೊಲಬನೇನು ಬಲ್ಲರು? ಯೋಗದ ಹೊಲಬುಗೆಡಿಸದೆ ಬಿಡಬಲ್ಲರೆ? ಹುಳಿಯಾರರ ಈ ಲೇಖನ ಸಕಾಲಿಕ ಮತ್ತು ಸಮಂಜಸ. ಧನ್ಯವಾದಗಳು.

\r\n


| Dr.Prabhakar

Probably this article is the rarest of its kind! A great insight into the 'true ' yoga and commercial yoga! Congrats and best wishes. 

\r\n


| ರವಿ

ಸಕಾಲಿಕ‌ ಲೇಖನ.ನನ್ನ ವಿಷಯ ಮಾತ್ರ ಹೇಳುವೆ. ಪ್ರಾಣ ಹೋದರೂ  ಬೇರೆಯವರ ವಿಷಯ ಹೇಳಲಾರೆ ಎಂಬ ಲೋಹಿಯಾರ ಮಾತು ಮನಸ್ಸಿನಲ್ಲಿ ಉಳಿದುಬಿಟ್ಟಿತು. ಇವತ್ತು ಬೇರೆವಯರ ಬಗೆಗೆ ಮಾತನಾಡುವ ಎಲ್ಲರ ನೆನೆದು ನಾಚಿಕೆಯಾಯಿತು.ಅಭಿನಂದನೆಗಳು 

\r\n


| JP

ಯೋಗವನ್ನು ಮಧ್ಯಮ ವರ್ಗದ ಸೋಮಾರಿಗಳ ಸರಕಾಗಿಸಿರುವ ಬಗ್ಗೆ ಈ ಮಾತುಗಳು ಅರ್ಥ ಪೂರ್ಣ. ಸಕಾಲಿಕ ಲೇಖನ

\r\n




Add Comment






Recent Posts

Latest Blogs



Kamakasturibana

YouTube