ಜನಪ್ರಿಯ ಕಲೆ: ಚಿಕಿತ್ಸೆಯೋ? ಕಾಯಿಲೆಯೋ?

ಯಾರಾದರೂ ಬಂಧನವಾದಾಗ, ಜೈಲು ಸೇರಿದಾಗ ಆರಾಮಾಗಿ ಹೇಳಿಕೆ ಕೊಡುವವರನ್ನು ಕಂಡರೆ ಇರಸುಮುರಸಾಗುತ್ತದೆ. ಅದರಲ್ಲೂ ಪಕ್ಕಾ ತನಿಖೆಗೆ ಒಳಪಡಿಸಿದರೆ ಸ್ವತಃ ತಾವೇ ಈ ಸ್ಥಿತಿ ತಲುಪಬಹುದಾದ ರಾಜಕಾರಣಿಗಳು ಯಾರಿಗಾದರೂ ‘ಉಗ್ರ ಶಿಕ್ಷೆ ವಿಧಿಸಿ’ ಎಂದರೆ ನಗು ಬರುತ್ತದೆ. 

ಮೊನ್ನೆ ಇಬ್ಬರು ರಾಜಕೀಯ ನಾಯಕರು ನಟನೊಬ್ಬನ ಬಂಧನದ ಬಗ್ಗೆ ಹೇಳಿಕೆ ಕೊಟ್ಟರು. ಅವರ ಹೇಳಿಕೆಯ ವರದಿಯ ಪಕ್ಕದಲ್ಲೇ ಅವರ ಪಕ್ಷದ ನಾಯಕರಿಗೆ ಜಾಮೀನುರಹಿತ ಅರೆಸ್ಟ್ ವಾರಂಟ್ ಜಾರಿಯಾದ ಸುದ್ದಿಯಿತ್ತು; ಮಾರನೆಯ ದಿನ ಅವರ ಪಕ್ಷದ ಮತ್ತೊಬ್ಬ ನಾಯಕನ ಮಗ ಬಂಧನವಾಗಲಿರುವ ಸುದ್ದಿಯಿತ್ತು. 

ಇಂಥ ನಿತ್ಯ ವಿರೋಧಾಭಾಸಗಳ ಈ ಕಾಲದಲ್ಲಿ ತೆರೆಯ ಮೇಲಿನ ಸೂಪರ್ ಹೀರೋ ಇಮೇಜುಗಳನ್ನು ತೆರೆಯಾಚೆಗೂ ಪ್ರಯೋಗಿಸುವವರ ಮನಸ್ಥಿತಿಯ ಬಗ್ಗೆ ಕೊಂಚ ವಸ್ತುನಿಷ್ಠವಾಗಿ ಯೋಚಿಸಬೇಕೆನ್ನಿಸುತ್ತದೆ. ‘ಅಪರಾಧ’ ಎನ್ನುವುದು ಯಾರು ಬೇಕಾದರೂ ಮಾಡುವ ಕ್ರಿಯೆ ಎನ್ನುವುದನ್ನು ನೆನಪಿನಲ್ಲಿಟ್ಟುಕೊಂಡೇ ಇಂಥ ಘಟನೆಗಳನ್ನು ನೋಡುವುದು ಒಳ್ಳೆಯದು. 

ಹೇಳಿ ಕೇಳಿ ಜನಪ್ರಿಯ ಸಿನಿಮಾ ಲೋಕ ಒಣ ಮೆಚ್ಚುಗೆಯನ್ನೇ ಹೆಚ್ಚು ಆಶ್ರಯಿಸಿದ ಲೋಕ. ಇಲ್ಲಿ ಸಂಗೀತ ನಿರ್ದೇಶಕನ ರಾಗ ಸಂಯೋಜನೆಗೆ ಆ ಕ್ಷಣದಲ್ಲೇ ಹಾಡು ಬರೆದ ಗೀತ ರಚನಕಾರ ಸುತ್ತಲಿನವರ ಮೆಚ್ಚುಗೆಗಾಗಿ ಕಾತರಿಸುವುದು ಸಹಜ. ಖ್ಯಾತ ನಟನೊಬ್ಬ ಒಂದು ಟೇಕ್ ಮುಗಿಸಿದ ಕೂಡಲೇ ‘ಸೂಪರ್‍ ಅಣ್ಣ!’ ಎನ್ನುವ ಜನ ಅವನ ಸುತ್ತಮುತ್ತ ಇರಬಲ್ಲರು. ಈ ವರಸೆ ಎಲ್ಲ ಕಡೆ ಕಾಣಬಲ್ಲದು.

ಒಣಮೆಚ್ಚುಗೆಯನ್ನು ಹೆಚ್ಚು ಆಶ್ರಯಿಸಿದ ಜನಪ್ರಿಯ ಸಿನಿಮಾ, ಸಂಗೀತ, ನೃತ್ಯದಂಥ ಕ್ಷೇತ್ರಗಳಲ್ಲಂತೂ ಅನೇಕ ಕಲಾವಿದರು ಬೆಳೆಯದೆ ಮರಗಟ್ಟುವುದು ಸಹಜ. ಅದರಲ್ಲೂ ಯಾವ ವಿಮರ್ಶೆಯೂ ಒಗ್ಗದ, ಯಾವ ವಿಮರ್ಶೆಗೂ ಬಗ್ಗದ, ನಟರ ಮನಸ್ಸು ಇನ್ನಷ್ಟು ಜಟಿಲವಾಗಿರಬಲ್ಲದು. ಈಚಿನ ವರ್ಷಗಳಲ್ಲಂತೂ ನಾಯಕನಟರನ್ನು ’ಹೈಪರ್ ಮ್ಯಾಸ್ಕುಲೈನ್’ ಹೀರೋಗಳನ್ನಾಗಿಸುವ ಸಿನಿಮಾಗಳನ್ನು ನೀವು ನೋಡಿರಬಹುದು. ಈ ನಾನ್ಸೆನ್ಸ್‌ಗಳನ್ನೆಲ್ಲ ಆಟದಂತೆ ಕಂಡು ನಟಿಸುವ ನಟನೊಬ್ಬ ಅತಿಮಾನವ ಭ್ರಮೆಯಿಂದ ಬಚಾವಾಗುತ್ತಾನೆ; ’ಈ ಅತಿಮಾನವ ನಾನೇ’ ಎಂದು ಭ್ರಮಿಸುವ ನಟ ಮುಗ್ಗರಿಸುತ್ತಾನೆ.

ಅಮೆರಿಕದ ಶ್ರೇಷ್ಠ ಕಾದಂಬರಿಕಾರ ಹೆನ್ರಿ ಜೇಮ್ಸ್ ಕಾದಂಬರಿ ಬರವಣಿಗೆ ಕುರಿತು ಮಾತಾಡುತ್ತಾ ‘ಥಿಯರಿ ಆಫ್ ಇಲ್ಯುಮಿನೇಶನ್’ ಎಂಬ ಐಡಿಯಾವನ್ನು ಚರ್ಚಿಸುತ್ತಾನೆ. ನಾನು ಇದನ್ನು ‘ಪಾತ್ರ ಪ್ರಕಾಶ ತತ್ವ’ ಎಂದು ಅನುವಾದಿಸಿಕೊಂಡಿದ್ದೇನೆ. ಈ ತತ್ವದ ಸಾರಾಂಶ:  

ಒಂದು ವೃತ್ತದ ಕೇಂದ್ರದಲ್ಲಿ ಮುಖ್ಯ ಪಾತ್ರ ನಿಂತಿದೆ. ಉಳಿದ ಪಾತ್ರಗಳು ಮುಖ್ಯ ಪಾತ್ರವನ್ನು ಸುತ್ತುವರಿದು ನಿಂತಿವೆ. ಮುಖ್ಯ ಪಾತ್ರ ತನ್ನ ಸುತ್ತ ನಿಂತಿರುವ ಪಾತ್ರಗಳೊಂದಿಗೆ ಹಲ ಬಗೆಯಲ್ಲಿ ವ್ಯವಹರಿಸುತ್ತದೆ. ಹಲವು ದೀಪಗಳು ಒಂದು ಕತ್ತಲ ಕೋಣೆಯ ವಿವಿಧ ಭಾಗಗಳನ್ನು ಬೆಳಗುವಂತೆ ಈ ಪಾತ್ರಗಳ ಜೊತೆಗಿನ ಪ್ರತಿಯೊಂದು ಒಡನಾಟವೂ ಮುಖ್ಯಪಾತ್ರದ ವಿವಿಧ ಆಯಾಮಗಳ ಮೇಲೆ ಬೆಳಕು ಚೆಲ್ಲುತ್ತದೆ. 

ಇತರ ಪಾತ್ರಗಳ ಮೂಲಕ ಕೇಂದ್ರ ಪಾತ್ರದಲ್ಲಿ ನಾವು ಕಾಣದ ಮುಖಗಳು ಬೆಳಕಿಗೆ ಬರುತ್ತವೆ ಎಂದು ಹೆನ್ರಿ ಜೇಮ್ಸ್ ಸೂಚಿಸುತ್ತಿದ್ದಾನೆ. ಈ ಐಡಿಯಾವನ್ನು ಟೀಚಿಂಗ್, ವಿಮರ್ಶೆ, ರಿಸರ್ಚ್ ಎಲ್ಲ ಕಡೆ ಬಳಸಿಕೊಳ್ಳಬಹುದು.

ಕಾದಂಬರಿಯ ಪ್ರೇರಣೆಯಿಂದಲೇ ವಿಕಾಸಗೊಂಡ ಹಾಲಿವುಡ್ ಸಿನಿಮಾ ಹೆನ್ರಿ ಜೇಮ್ಸ್ ಐಡಿಯಾವನ್ನು ಸೃಜನಶೀಲವಾಗಿ ಬಳಸಬಹುದಾದ ರೀತಿಯನ್ನು ಹಾಲಿವುಡ್ ಜನಪ್ರಿಯ ಸ್ಕ್ರೀನ್‌ಪ್ಲೇ ‌ ಗುರು ಸಿಡ್ ಫೀಲ್ಡ್ ಚರ್ಚಿಸುತ್ತಾನೆ. ಆದರೆ ಹಾಲಿವುಡ್‌ನಿಂದ ಹಿಡಿದು ಇಂಡಿಯನ್ ಸಿನಿಮಾದವರೆಗೂ ಜೇಮ್ಸ್ ಐಡಿಯಾವನ್ನು ಸಂತೆಯ ಹೊತ್ತಿಗೆ ಮೂರು ಮೊಳ ನೇಯುವ ಚಿತ್ರಕಥಾಕಾರರು ಅಗ್ಗವಾಗಿ ಬಳಸಿಕೊಂಡಂತಿದೆ. 

ಇದೇ ಥರ ಜೋಸೆಫ್ ಕ್ಯಾಂಪ್‌ಬೆಲ್‌ನ ‘ದ ಹೀರೋ ವಿತ್ ಎ ಥೌಸಂಡ್ ಫೇಸಸ್’ ಎಂಬ ಗಂಭೀರ ಸಂಶೋಧನಾ ಪುಸ್ತಕದ ಐಡಿಯಾಗಳನ್ನೂ ಹಾಲಿವುಡ್ ಸಿನಿಮಾ ಬಳಸಿಕೊಂಡಿದೆ. ಮನೋವಿಜ್ಞಾನಿ ಕಾರ್ಲ್ ಯೂಂಗ್‌ನ ನೋಟಗಳನ್ನು ಆಧರಿಸಿದ ಈ ಪುಸ್ತಕ ಪುರಾಣ, ಮಹಾಕಾವ್ಯಗಳ ಹೀರೋಗಳ ಮಹಾಪಯಣವನ್ನು ಶೋಧಿಸುತ್ತದೆ; ’ಸ್ಟಾರ್ ವಾರ್‍ಸ್’ನಂಥ ಜನಪ್ರಿಯ ಸಿನಿಮಾಗಳನ್ನೂ ಈ ಪುಸ್ತಕ ಪ್ರಭಾವಿಸಿದೆ.

ಸಿ.ಎಂ. ಬೌರಾ ಬರೆದ ’ಹೀರೋಯಿಕ್ ಪೊಯೆಟ್ರಿ’ ಪಶ್ಚಿಮದ ಮಹಾಕಾವ್ಯಗಳ ಹೀರೋಗಳ ವೈವಿಧ್ಯಮಯ ಲಕ್ಷಣಗಳನ್ನು ಶೋಧಿಸುತ್ತದೆ. ಈ ಥರದ ಗಂಭೀರ ಪುಸ್ತಕಗಳಲ್ಲಿರುವ ಹೀರೋಗಳ ಮೂಲಮಾದರಿಗಳ ಐಡಿಯಾಗಳನ್ನು ಹಾಲಿವುಡ್ ಮಂದಿ ತಮ್ಮ ತಲೆಮಟ್ಟಕ್ಕೆ ತಕ್ಕಂತೆ ತೆಳುಗೊಳಿಸಿದ್ದಾರೆ; ಹುಲುಮಾನವ ಹೀರೋಗಳನ್ನು ಅತಿಮಾನವರನ್ನಾಗಿ ಮಾಡಿದ್ದಾರೆ.

ಈ ಹೀರೋಗಳು ಬೈಕಿನಲ್ಲೇ ಆಫ್ಘಾನಿಸ್ಥಾನಕ್ಕೆ ಹಾರಿ, ಅಲ್ಲಿ ಸೆರೆಯಾಗಿದ್ದ ಭಾರತೀಯ ಗೂಢಚಾರನನ್ನು ‘ಎತ್ತಾಕಿಕೊಂಡು’ ಬರುತ್ತಾರೆ! ಲೋಕಲ್ ಹೀರೋಗಳು ಕೇಡಿಗಳು ಬೆನ್ನಟ್ಟಿ ಬಂದರೆ ಅವರನ್ನು ಎತ್ತಿ ಟೊಮ್ಯಾಟೋ ಗಾಡಿ, ತರಕಾರಿ ಗಾಡಿಗಳ ಮೇಲೆ ಎತ್ತಿ ಎಸೆಯುತ್ತಾರೆ. ಕೆಳಗೆ ಚೆಲ್ಲಾಡಿದ ಬಣ್ಣಬಣ್ಣದ ತರಕಾರಿಗಳು ಕ್ಯಾಮರಾಮನ್‌ಗೆ ಕಲರ್‌ಫುಲ್ ಆಗಿ ಕಾಣುತ್ತವೆ. ಹಾದಿಯಲ್ಲಿ ಚೆಲ್ಲಾಡುತ್ತಿರುವ ತರಕಾರಿಯನ್ನು ಅಸಹಾಯಕತೆಯಿಂದ ನೋಡುತ್ತಿರುವ ಹಸಿದ ಬಡವರಿಗೆ ಏನೆನ್ನಿಸಬಹುದು ಎಂಬ ಪ್ರಜ್ಞೆ ಕೂಡ ಈ ಜಡರಿಗೆ ಇರುವಂತಿಲ್ಲ.

ಹೀರೋ ಕೇಡಿಗಳನ್ನು ಎಸೆದ ರಭಸಕ್ಕೆ ಕೋಳಿಗಳು ಕಿಟಾರನೆ ಒರಲುತ್ತಾ ಹಾರಲೆತ್ನಿಸುತ್ತವೆ. ಬೈಕು ಆಗಸಕ್ಕೆ ಹಾರಿ ನೆಲಕ್ಕೆ ಅಪ್ಪಳಿಸುತ್ತದೆ. ಇಂಥ ಶೂಟಿಂಗ್‌ಗಳಲ್ಲಿ ಸ್ಟಂಟ್ ಕಲಾವಿದರು ಗಾಯಗೊಂಡ, ತೀರಿಕೊಂಡ ಉದಾಹರಣೆಗಳಿವೆ; ಹೀರೋಗಳು ಕೂಡ ಪ್ರಾಣಾಪಾಯದಿಂದ ಪಾರಾಗಿ ಸಿನಿಮಾದ ಹೀರೋ ಥರವೇ ಬದುಕುಳಿದ ಪ್ರಸಂಗಗಳಿವೆ.

ಇಂಥ ವಾತಾವರಣದಲ್ಲಿ ಕೆಲಸ ಮಾಡುವ ಹೀರೋ ತೆರೆಯ ಮೇಲಿನ ತನ್ನ ‘ಲಾರ್ಜರ್ ದ್ಯಾನ್ ಲೈಫ್’ ಇಮೇಜಿಗೆ ತಾನೇ ಮನಸೋತರೆ ದುರಂತ ಖಾತ್ರಿ! ತೆರೆಯ ಇಮೇಜಿಗೆ ಕಟ್ಟುಬಿದ್ದ ಹೀರೋಗೆ ತನ್ನ ಸಿನಿಮಾವನ್ನೋ, ತನ್ನ ನಟನೆಯನ್ನೋ ಹೊಗಳದವರಿಗೆ ಯಾಕೆ ನಾಲ್ಕು ಬಾರಿಸಬಾರದು ಎನ್ನಿಸತೊಡಗುತ್ತದೆ! ಹೀರೋ ಒಳಗಿನ ‘ನಾನು’ ಅಥವಾ ‘ಇಗೋ’ ಭಯಾನಕವಾಗಿ ಬೆಳೆಯತೊಡಗುತ್ತದೆ. ನನಗೆ ಬೇಕಾದ ರಾಜಕಾರಣಿಯ ಪರವಾಗಿ ಪ್ರಚಾರ ಮಾಡಿ ಗೆಲ್ಲಿಸಬಲ್ಲೆ ಎಂಬ ಅಹಂಕಾರ ಮೊಳೆಯುತ್ತದೆ. ಹೀರೋ ಒಂಚೂರು ಆಯ ತಪ್ಪಿದರೆ ಖೆಡ್ಡಾಗೆ ಕೆಡವಲು ಎದುರಾಳಿ ರಾಜಕಾರಣಿಗಳು ಕಾಯತೊಡಗುತ್ತಾರೆ.

ಇಂಥ ವಲಯಗಳಲ್ಲಿ ಗೆಲುವಿನ ಸಂಭ್ರಮವೂ ಅತಿ ಕುಡಿತದಲ್ಲಿ ಪರ್ಯವಸಾನವಾಗುತ್ತದೆ; ಸೋಲೂ ಅತಿ ಹತಾಶೆಯ ಕುಡಿತದಲ್ಲಿ ಕೊನೆಗೊಳ್ಳುತ್ತದೆ! ಮದ್ಯಪಾನ ಎಂದರೇನು, ತಾವು ಯಾಕೆ ಕುಡಿಯುತ್ತಿದ್ದೇವೆ... ಈ ಎಲ್ಲದರ ನೆದರೇ ಇರದ ಭ್ರಮೆಯ, ಆತ್ಮನಾಶದ ಭೀಕರ ವಾತಾವರಣ ಸೃಷ್ಟಿಯಾಗುತ್ತದೆ.

ಇನ್ನೊಂದು ವಿಚಿತ್ರ ನೋಡಿ: ನಮ್ಮ ಅನೇಕ ನಾಯಕ ನಟರು ತೆರೆಯ ಮೇಲೆ ಸಂವಿಧಾನ, ಕಾಯ್ದೆ, ಕಾನೂನುಗಳನ್ನು ಉಲ್ಲಂಘಿಸುವ ದುಷ್ಟರನ್ನು ಸದೆ ಬಡಿಯುತ್ತಲೇ ಇರುತ್ತಾರೆ. ಆದರೆ ಈ ಮಹನೀಯರಿಗೆ ನಮ್ಮ ಸಂವಿಧಾನ ಪ್ರತಿ ಪ್ರಜೆಯ ವರ್ತನೆ, ಹಕ್ಕು, ಕರ್ತವ್ಯಗಳ ಬಗ್ಗೆ ಏನು ಹೇಳುತ್ತದೆ ಎಂಬುದರ ಕನಿಷ್ಠ ಅರಿವು ಕೂಡ ಇದ್ದಂತಿಲ್ಲ; ತನ್ನನ್ನು ಯಾರಾದರೂ ಟೀಕಿಸಿದರೆ ಅದಕ್ಕೆ ತಕ್ಕ ಪ್ರತಿಟೀಕೆ, ವಾಗ್ವಾದ, ಕಾನೂನಿನ ಕ್ರಮ… ಇವೆಲ್ಲ ಇರುತ್ತವೆ ಎಂಬ ಸರಳ ಜ್ಞಾನ ಕೂಡ ಇದ್ದಂತಿಲ್ಲ! 

ಇಂಥ ಅಜ್ಞಾನದಿಂದಾಗಿ ಅರಣ್ಯನ್ಯಾಯಕ್ಕಿಳಿಯುವ ನಟ, ನಟಿಯರ ಅಷ್ಟಿಷ್ಟೂ ಕಲೆಯೂ ನಾಶವಾಗುತ್ತದೆ; ವೈಯಕ್ತಿಕ ದ್ವೇಷ, ಸೇಡು ವಿಜೃಂಭಿಸತೊಡಗುತ್ತದೆ. 

ಇದೆಲ್ಲ ಸಿನಿಮಾ ಕ್ಷೇತ್ರದಲ್ಲಿ ಮಾತ್ರ ಆಗುತ್ತದೆ ಎಂದುಕೊಂಡು ಇತರ ಸಾಂಸ್ಕೃತಿಕ ಕ್ಷೇತ್ರಗಳ ಜನ ತಾವು ಶ್ರೇಷ್ಠರೆಂದು ಬೀಗಬೇಕಾಗಿಲ್ಲ! ತನ್ನ ನಾಟಕವನ್ನು ಗೆಲ್ಲಿಸಲು ಮತ್ತೊಂದು ರಂಗತಂಡಕ್ಕೆ ಥಿಯೇಟರ್ ಸಿಗದಂತೆ ಪಿತೂರಿ ಮಾಡುವ ನಾಟಕಕಾರನೂ, ನಿರ್ದೇಶಕನೂ ಇಂಥದೇ ಕೊಲೆಗಡುಕ ಕೆಲಸದಲ್ಲಿ ಭಾಗಿಯಾಗಿರುತ್ತಾನೆ! ತನ್ನ ಕಳಪೆ ಕೃತಿಯನ್ನು ಮೆಚ್ಚಲಿಲ್ಲ ಎಂಬ ಕಾರಣಕ್ಕಾಗಿ ಮತ್ತೊಬ್ಬ ಒಳ್ಳೆಯ ಲೇಖಕನೊಬ್ಬನ ಮೇಲೆ ದ್ವೇಷ ಸಾಧಿಸಿ, ಯಾವುದೋ ಪ್ರಶಸ್ತಿ ತಪ್ಪಿಸುವ ಕವಿ; ಅಪಪ್ರಚಾರ ನಿರತರಾದ ಪತ್ರಕರ್ತ, ಪ್ರಾಧ್ಯಾಪಕಿ...ಹೀಗೆ ಅರಣ್ಯನ್ಯಾಯದ ಮೃಗಗಳು ಎಲ್ಲ ವಲಯದಲ್ಲೂ ಬೆಳೆಯುತ್ತಿರುತ್ತವೆ! 

ಒಟ್ಟು ಸಮಾಜವೇ ಹೀಗಿರುವಾಗ, ನಟನೊಬ್ಬನ ಅಪರಾಧ ಕುರಿತು ಅತಿ ನೈತಿಕತೆಯಿಂದ ಕೂಗುವವರಿಗೆ ನೆನಪಿರಲಿ: ಭಿನ್ನಮತ ವ್ಯಕ್ತಪಡಿಸುವವರನ್ನು ಕೊಚ್ಚಿ ಹಾಕುವ ರೋಗ ಎಲ್ಲೆಡೆ ಹಬ್ಬಿದೆ. ರಾಜಕೀಯ, ಸಾಹಿತ್ಯ, ಸಂಸ್ಕೃತಿಗಳ ರಂಗದಲ್ಲಿ ಈ ರೋಗ ಸಿನಿಮಾಕ್ಕಿಂತೆ ಹೆಚ್ಚಿದೆಯೆಂಬುದು ಗೊತ್ತಿರಲಿ!

ಕೊನೆ ಟಿಪ್ಪಣಿ: ಪಾತ್ರ ಬದಲಾವಣೆಯ ಕಾತರ!

ಮೇಲಿನ ಟಿಪ್ಪಣಿ ಬರೆಯುವಾಗ, ಸಿನಿಮಾಗಳ ಕೆಲವು ಖಳನಾಯಕರು ಬರಬರುತ್ತಾ ನಾಯಕಪಾತ್ರಗಳಲ್ಲಿ ಅಥವಾ ಹಾಸ್ಯ ಪಾತ್ರಗಳಲ್ಲಿ ನಟಿಸಲು ಕಾತರಿಸುವುದು ನೆನಪಾಯಿತು! ಹಿಂದೊಮ್ಮೆ ಖಳನಾಯಕನ ಪಾತ್ರ ಮಾಡಿ ಸ್ಟೀರಿಯೋ ಟೈಪ್ಡ್ ನಟನಾಗಿದ್ದ ಕನ್ನಡ ನಟ ದಿನೇಶ್ ಮುಂದೆ ಹಾಸ್ಯ ಪಾತ್ರಗಳಲ್ಲಿ ನಟಿಸುತ್ತಾ ತಮ್ಮ ಕಲೆಯ ಹೊಸ ಶಕ್ತಿಯನ್ನು ಕಂಡುಕೊಂಡರು. ಖಳನಾಯಕ ಟೈಗರ್ ಪ್ರಭಾಕರ್ ತಮ್ಮದೇ ಶೈಲಿಯಲ್ಲಿ ಹೀರೋ ಆಗಿ ಕ್ಲಿಕ್ಕಾದರು. 

ಎಲ್ಲೋ ಓದಿದ್ದು: ‘ಶೋಲೆ’ಯ ಗಬ್ಬರ್‌ಸಿಂಗ್ ಪಾತ್ರದಿಂದ ಖ್ಯಾತರಾಗಿದ್ದ ಅಮ್ಜದ್‌ಖಾನ್ ಒಮ್ಮೆ ಅಮಿತಾಭ್ ಬಚ್ಚನ್ ಮನೆಗೆ ಹೋದರು. ಆಗ ಅಮಿತಾಭ್ ಮಗ ಅಭಿಷೇಕ್ ಬಚ್ಚನ್ ಇನ್ನೂ ಬಚ್ಚಾ! ಅಮ್ಜದ್‌ಖಾನ್ ಬಂದ ತಕ್ಷಣ ಅಭಿಷೇಕ್, ‘ಗಬ್ಬರ್ ಸಿಂಗ್ ಆ ಗಯಾ!’ ಎಂದು ಹೆದರಿ ಅಪ್ಪನ ಹಿಂದೆ ಅವಿತುಕೊಂಡ. ಆಗ ಅಮಿತಾಭ್, ‘ಗಬ್ಬರ್ ಸಿಂಗ್ ಒಂದು ಪಾತ್ರ ಅಷ್ಟೆ’ ಎಂದು ಮಗನನ್ನು ಸಮಾಧಾನ ಮಾಡಿದರು. 

ಅಕಸ್ಮಾತ್ ಆ ಗಳಿಗೆಯಲ್ಲಿ ಅಮ್ಜಾದ್‌ಖಾನ್‌ಗೆ ‘ಒಳ್ಳೆಯ’ ಪಾತ್ರ ಮಾಡಿ ಮಕ್ಕಳಿಗೆ ಪ್ರಿಯವಾಗುವ ಆಸೆ ಹುಟ್ಟಿದ್ದರೆ ಅಚ್ಚರಿಯಲ್ಲ! ಅಮ್ಜದ್‌ಖಾನ್ ಮುಂದೆ ಮೈಲ್ಡ್ ಪಾತ್ರಗಳನ್ನು ಮಾಡಿ ಖುಷಿಯಾದಂತಿದೆ. 
ಇದಕ್ಕೆ ಪೂರಕವಾಗಿ ‘ಕಟ್ಟೇಪುರಾಣ’ದ ಬಿ. ಚಂದ್ರೇಗೌಡರು ಎರಡು ಸಿನಿಮಾ ಪಾತ್ರಗಳ ಘಟನೆಗಳನ್ನು ನೆನಪಿಸಿದರು:  

ಘಟನೆ ೧: ‘ಸಿಪಾಯಿ ರಾಮು’ ಸಿನಿಮಾದ ಚಿತ್ರೀಕರಣ ಶ್ರೀರಂಗಪಟ್ಟಣದ ಬಳಿ ನಡೆಯುತ್ತಿತ್ತು. ಕಾಲೇಜು ಹುಡುಗಿಯರು ರಾಜ್‌ಕುಮಾರ್ ಅವರನ್ನು ಮುತ್ತಿಕೊಂಡು ಮಾತಾಡಿಸುತ್ತಿದ್ದರು. ಆದರೆ ‘ಪ್ರಚಂಡ ರಾವಣ’ ನಾಟಕದ ಮೂಲಕ ಅದ್ಭುತ ರಂಗಭೂಮಿ ನಟರೆಂದು ಪ್ರಖ್ಯಾತರಾಗಿ, ಸಿನಿಮಾರಂಗಕ್ಕೆ ಬಂದಿದ್ದ ವಜ್ರಮುನಿಯವರನ್ನು ಒಬ್ಬ ಹುಡುಗಿಯೂ ಮಾತಾಡಿಸಲಿಲ್ಲ. ವಜ್ರಮುನಿ ಖಿನ್ನರಾದರು.

ಘಟನೆ ೨: ಖಿನ್ನತೆಯ ಮತ್ತೊಂದು ಬಗೆಯ ಕತೆ: ಹಿಂದಿ ಸಿನಿಮಾ ನಟ ದಿಲೀಪ್ ಕುಮಾರ್ ಭಗ್ನಪ್ರೇಮಿ ‘ದೇವದಾಸ್’ ಮುಂತಾದ ದುಃಖಿ ಪಾತ್ರಗಳನ್ನೇ ಮಾಡಿ ಖಿನ್ನತೆಗೊಳಗಾದರು. ಕೊನೆಗೆ ಮನೋವೈದ್ಯರನ್ನೂ ಭೇಟಿಯಾದರು. ‘ಈಗ ನೀವು ಮಾಡುತ್ತಿರುವ ಖಿನ್ನತೆಯ ಪಾತ್ರಗಳನ್ನು ಬಿಟ್ಟು ಲವಲವಿಕೆಯ ಪಾತ್ರಗಳನ್ನು ಮಾಡಿ ನೋಡಿ’ ಎಂದರು ವೈದ್ಯರು.
ದಿಲೀಪ್‌ಕುಮಾರ್ ಖಿನ್ನತೆಯ ಪಾತ್ರಗಳನ್ನು ಬಿಟ್ಟು, ವಿಭಿನ್ನ ಪಾತ್ರಗಳನ್ನು ಮಾಡಿ ತಮ್ಮ ಆರೋಗ್ಯವನ್ನು ಮರಳಿ ಪಡೆದುಕೊಂಡರು! 

ಸದಾ ಹೀರೋ ಪಾತ್ರ ಮಾಡಿ ಖ್ಯಾತರಾದವರು ತಮ್ಮ ಹೀರೋ ಇಮೇಜ್  ಕಳೆದುಕೊಳ್ಳಲು ಸಿದ್ಧರಿರುವುದಿಲ್ಲ! ಅದು ಅವರ ವೃತ್ತಿ ಬದುಕಿನ ಪ್ರಶ್ನೆ ಕೂಡ. ಸೋಲುವುದು ಮನುಷ್ಯನ ವ್ಯಕ್ತಿತ್ವಕ್ಕೆ ಧಕ್ಕೆ ತರುವಂತೆಯೇ ಅದು ಒಮ್ಮೊಮ್ಮೆ ಒಳಿತನ್ನೂ ಮಾಡಬಹುದು; ಆಗಾಗ್ಗೆಯಾದರೂ ’ನಾಯಕ’ ಪಾತ್ರ ಬಿಟ್ಟು ‘ಮನುಷ್ಯ’ ಪಾತ್ರಗಳನ್ನು ಮಾಡುವುದು  ನಟರ ಒಳಬದುಕಿಗೂ ಒಳ್ಳೆಯದೇನೋ!

ಖಳನಾಯಕನ ಪಾತ್ರ ಮಾಡಿ ಬೋರಾಗಿ ಕ್ಯಾರಕ್ಟರ್ ಪಾತ್ರಗಳನ್ನು, ಹಾಸ್ಯ ಪಾತ್ರಗಳನ್ನು ಮಾಡಿ ಗೆದ್ದ ದಿನೇಶ್ ಥರದವರ ಕತೆಯನ್ನು ಮೇಲೆ ಹೇಳಿರುವೆ. ಇದೇ ಮಾದರಿಯನ್ನು ಅನುಸರಿಸಿ, ಅತಿಮಾನವ ಪಾತ್ರಗಳನ್ನು ಮಾಡಿ ಬೋರಾದ ನಾಯಕನಟರು ಖಳಪಾತ್ರಗಳನ್ನೋ, ಹಾಸ್ಯಪಾತ್ರಗಳನ್ನೋ ಮಾಡುವುದು ಆರೋಗ್ಯಕರವಾಗಿರಬಲ್ಲದು. ಕೆಲವೊಮ್ಮೆ ಹಾಸ್ಯಾಸ್ಪದವಾಗುವುದು, ಸೋಲುವುದು ಕೂಡ ಮನುಷ್ಯರ ‘ಇಗೋ’ದ ಸಮಸ್ಯೆಗಳಿಗೆ ಮದ್ದರೆಯಬಲ್ಲದು. 

ನಟನೆ ಹಾಗೂ ಕಲೆ ನಟ, ನಟಿಯರಿಗೆ ಥೆರಪಿ ಅಥವಾ ಚಿಕಿತ್ಸೆಯಾಗಬಲ್ಲದು ಎಂಬ ಸ್ಪಷ್ಟ ನಂಬಿಕೆ ಕಲಾವಿದರಿಗೆ ಇದ್ದರೆ ಮಾತ್ರ ಇದೆಲ್ಲ ಸಾಧ್ಯವಾಗಬಹುದು.  

 

ಬ್ಲಾಗ್ ಫಾಲೋ ಮಾಡಲು ಒಪ್ಪಿ, ಕ್ಲಿಕ್ ಮಾಡಿ; ನೋಟಿಫಿಕೇಶನ್ ಪಡೆಯಿರಿ, ಶೇರ್ ಮಾಡಿ: FOLLOW
ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com 
ಬಿಡುವಾದಾಗ ನೋಡಿ, ಶೇರ್ ಮಾಡಿ:  YOUTUBE LINK 
 

Share on:


Recent Posts

Latest Blogs



Kamakasturibana

YouTube



Comments

14 Comments



| Dr.Mohan

ಸಕಾಲಿಕ ಅರ್ಥಪೂರ್ಣ ಬರಹ. ಈಗಿರುವ ಕೂಗುಮಾರಿ ಮಾಧ್ಯಮಗಳ ಬಗೆಬಗೆಯ ಕಿರುಚಾಟಗಳ ನಡುವೆ ಇಂತಹ ಸಂದರ್ಭದಲ್ಲಿ ಒಂದು ಘಟನೆಯನ್ನು ನೋಡಬೇಕಾದ ಬಗೆ, ಆ ಘಟನೆಯಿಂದ ಉಳಿದವರು ಕಲಿಯಬೇಕಾದ ಪಾಠಗಳು, ಆ ಮೂಲಕ ಸಮಾಜವನ್ನು ಶಿಕ್ಷಿತಗೊಳಿಸುವ ಹೊಣೆಗಾರಿ, ಇವೆಲ್ಲವನ್ನೂ ಅತಿ ಸೂಕ್ಷ್ಮವಾಗಿ ನಿಭಾಯಿಸಿರುವ ಪ್ರಸ್ತುತ ಲೇಖನ ಓದಿ ವಾರದ ಬಗ್ಗಡ ತಿಳಿಯಾಯಿತು. 

\r\n


| ಶಿವಲಿಂಗಮೂರ್ತಿ

ಇತ್ತೀಚಿನ ಕೆಲವು ಪ್ರಕರಣಗಳ ಬಗ್ಗೆ ಅನೇಕ ವಾಹಿನಿಗಳು ದೀರ್ಘವಾದ ಚರ್ಚೆಯನ್ನು ನಡೆಸಿವೆ. ಈ ಚರ್ಚೆಯ ಮೂಲ ಕಾಮ ಎಂಬುದನ್ನು ಮೊದಲು ನಾವು ಗ್ರಹಿಸಬೇಕಾಗಿದೆ. ಈ ಮೂಲವನ್ನು ಕುರಿತ ಚೆಲ್ಲಾಪಿಲ್ಲಿಯಾದ ಕೆಲವು ವಿಚಾರಗಳನ್ನು ಇಲ್ಲಿ ನೋಡಬಹುದು. ಕಾಮದ ಸರಿಯಾದ ನಿರ್ವಹಣೆ ಇಲ್ಲದ ಜೀವನ ಕ್ರಮದಿಂದಾಗುವ ದುರಂತಗಳನ್ನು ಈ ಹಿಂದಿನ ಮತ್ತು ಈಗಿನ ಪುರಾಣ ಮಹಾಕಾವ್ಯ ಮುಂತಾದ ಸಾಹಿತ್ಯ ಪ್ರಕಾರಗಳು ಚೆನ್ನಾಗಿ ವ್ಯಕ್ತಪಡಿಸಿವೆ. ಸರಿಯಾದ ಕಾಮದ ನಿರ್ವಹಣೆ ಇಲ್ಲದ್ದರ ಪರಿಣಾಮವನ್ನು ಈ ಪ್ರಕರಣಗಳು ಹೇಳುತ್ತಿವೆ. ಇಂಥ ಪ್ರಕರಣಗಳಿಗೆ ಸಂವಿಧಾನದ ಮೂಲಕ ಸರಿಯಾದ ಉತ್ತರವನ್ನು ಕಾಣಲು ಸಾಧ್ಯವಾಗಿದೆ. ಕಾಯ್ದೆ ಕಾನೂನುಗಳಿದ್ದು ಇಂತಹ ಪ್ರಕರಣಗಳು ನಡೆಯುತ್ತಿರುವುದು ಅವಿರತವಾಗಿ ಕಂಡುಬರುತ್ತಿದೆ. ಇದಕ್ಕೆ ಸದಾ ಎಚ್ಚರವಿರದ ಜನರ ಮನಸ್ಥಿತಿಯೇ ಕಾರಣ. ಲೈಂಗಿಕ ವಿಷಯವನ್ನು ಶಿಕ್ಷಣದಲ್ಲಿ ತರುವುದರ ಬಗ್ಗೆ ಮತ್ತು ಜನಸಾಮಾನ್ಯರಲ್ಲಿ ಅದರ ಅರಿವು ಉಂಟಾಗುವುದರ ಬಗ್ಗೆ ಸಂಬಂಧಿಸಿದ ತಜ್ಞರು ಆಲೋಚಿಸುವುದು ಸೂಕ್ತವೆನಿಸುತ್ತದೆ.

\r\n\r\n

ಸಾಹಿತ್ಯ ಕೃತಿಗಳನ್ನು ಆಧರಿಸಿ ಬರುತ್ತಿದ್ದ ಸಿನಿಮಾಗಳು ಈಗ ಕಂಡು ಬರುತ್ತಿಲ್ಲ. ಸಾಹಿತ್ಯ ಕೃತಿಗಳನ್ನು ಆಧರಿಸಿ ಬರುತ್ತಿದ್ದ ಸಿನಿಮಾಗಳಿಗೂ ತತ್ಕಾಲದಲ್ಲಿ ರಚಿತವಾಗಿ ಮೂಡಿ ಬರುತ್ತಿರುವ ಸಿನಿಮಾಗಳಿಗೆ ಇರುವ ಅಂತರವನ್ನು ಕಾಣಬಹುದು.

\r\n\r\n

ಸಾಹಿತ್ಯ ಕೃತಿಗಳನ್ನು ಆಧರಿಸಿ ಸಿನಿಮಾ ಮಾಡಿದಲ್ಲಿ ಹೀರೋ ಗಳ ಮತ್ತು ನೋಡುಗರ ಜೀವನ ಕ್ರಮದಲ್ಲಿಯೂ ಬದಲಾವಣೆಗಳಾಗಬಹುದು. ಹಾಗೆಯೇ ಎಡ್ವರ್ಡ್ ಬುಲ್ಲೋ ಹೇಳುವ" ಕಲೆಯನ್ನು ಒಂದು ನಿಯತ ದೂರದಲ್ಲಿಟ್ಟು(ಸೈಕಿಕಲ್ 

\r\n\r\n

ಡಿಸ್ಟೆನ್ಸ್)ನೋಡಬೇಕೆಂಬ "ಮಾತು ಅಷ್ಟೇ ಸತ್ಯ.

\r\n


| ಬಂಜಗೆರೆ ಜಯಪ್ರಕಾಶ

ಬಹಳ ಒಳನೋಟಗಳನ್ನು ನೀಡಿದ್ದೀರಿ. ಪ್ರತಿ ಸಾರ್ವಜನಿಕ ವ್ಯಕ್ತಿತ್ವಕ್ಕೂ ತನ್ನನ್ನು ತಾನು ವೈಭವೀಕರಿಸಿಕೊಳ್ಳಲು ಪೂರಕವಾದ ಚೋದಕಾಂಶಗಳು ಆಗಾಗ ಸಿಗುತ್ತವೆ. ಕೆಲವರಿಗೆ ಹೇರಳವಾಗಿ ಸಿಗುತ್ತವೆ. ಹಾಗೆ ವೈಭವೀಕರಣಕ್ಕೊಳಗಾದ ಡಾ. ರಾಜ್ ಗೆ ವೀರಪ್ಪನ್ ಜೊತೆ ಅಸಹಾಯಕವಾಗಿ ಕಾಲ ಕಳೆಯುವ ದುರದೃಷ್ಟ ಎದುರಾದಾಗ ಅವರು ಅನುಭವಿಸಿದ ಮನೋಯಾತನೆ ಹೇಗಿರಬಹುದು. ಪಾರ್ವತಮ್ಮನವರಿಗೆ ಹೇಗನಿಸಿರಬಹುದು. ಕೆಲವರಿಗೆ ಈ ಭ್ರಮೆಯಿಂದ ಕಳಚಿಕೊಳ್ಳುವ ಗುಣ ಇರುತ್ತದೆ. ಕೆಲವರು ಭಸ್ಮಾಸುರನ ಹಾದಿ ಹಿಡಿದು ನಾಶವಾಗುತ್ತಾರೆ. ಅಂತರಾವಲೋಕನ ಮತ್ತು ಅಹಮಿಕೆಯನ್ನು ನಿರಸನಗೊಳಿಸಿಕೊಳ್ಳುವುದನ್ನು ಕಲಿತರೆ ಇಂತಹ ಅವಘಡಗಳಿಂದ ಪಾರಾಗಬಹುದೇನೋ. ಎಲ್ಲರೂ ಕಲಿಯಬೇಕಾದ ಪಾಠಗಳಿವೆ ನಿಮ್ಮ ಬರಹದಲ್ಲಿ.

\r\n


| Rajaram

Lovely article.

\r\n


| Dr Purushothama

Good contemporary coverage. This is mostly Indian happening as we can see isn't it 🙏

\r\n


| ವೆಂಕಟಗಿರಿ ದಳವಾಯಿ

ಅಣ್ಣಾ ಬಹಳ ದಿನಗಳ ನಂತರ ವಾಕ್ ಮಾಡಿದೆ ಅರಳಿ ಮರದ ಕೆಳಗೆ ಧ್ಯಾನ ಮಾಡಿ ಮನೆಗೆ ಬಂದು ನಿಮ್ಮ ಬರಹವನ್ನು ಓದಿದೆ. ತುಂಬಾ ಫ್ರೆಶ್ ಅನಿಸಿತು.ಧ್ಯಾನದಷ್ಟೇ. ಒಂದು ವರ್ಷದ ನಂತರ ಯೂನಿವರ್ಸಿಟಿಗೆ ಹೋಗುತ್ತಿರುವೆ. ನಿಮ್ಮ ಬರಹ ನನಗೆ ಒಂದು ಚೈತನ್ಯ. ಆರಂಭದ ದಿನವೇ ಮನುಷ್ಯನ ಸ್ವಭಾವಗಳ ಕುರಿತು ಅರ್ಥಪೂರ್ಣ ಬರಹವನ್ನು ಓದಿದೆ. ಸಿನಿಮಾ, ರಾಜಕೀಯ, ಸಾಹಿತ್ಯ, ದ ಮೂಲಕ ಆಳದ ಸ್ವಭಾವಗಳನ್ನು ವಿಶ್ಲೇಷಣೆ ಮಾಡಿರುವುದು ವಿಮರ್ಶೆಯ ನಿಜವಾದ ದಾರಿಯಾಗಿದೆ. ಅಣ್ಣಾ ನಾನು ನಿಮ್ಮ ವಿಮರ್ಶೆಯ ಅಭಿಮಾನಿ. ಧನ್ಯವಾದಗಳು ಅಣ್ಣಾ ಇವತ್ತು ನನಗೆ ಒಳ್ಳೆಯ ದಿನ. ಶುಭೋದಯ ಅಣ್ಣ 🙏🙏🙏👏👏👏👏🪷🌿🌻💐🌱🌹🌴🍇🌷🌲

\r\n


| gundanna chickmagalur

ಮನೋ ವಿಜ್ಞಾನದ ಸಮಸ್ಯೆಗಳಿಗೆ ಉತ್ತಮ ಸಲಹಾ ಚಿಕಿತ್ಸಕ ಬರವಣಿಗೆ. ಎಂದಿನಂತೆ ಬರುವ ಅತಿ ಗಂಭೀರ ಸಾಹಿತ್ಯಿಕ ಪರಿಧಿಯ ಹೊರಗೆ ಇರುವ ಬರವಣಿಗೆ. 
\r\nಮತ್ಸರ ಎನ್ನುವ ಗುಣ ಎಲ್ಲ ರಂಗದಲ್ಲೂ ಕಂಡು ಬರುವ ಒಂದು ಸಹಜ ಸ್ಥಿತಿ. 
\r\nಕಲಾಕ್ಷೇತ್ರದಲ್ಲಿ ನಮ್ಮ ನಡುವಿನ ರಂಗ ಸಂಘಟಕರು ಒಬ್ಬರು, ಮೊದಲಿಗೆ ತಮ್ಮ ಸಂಘಟನೆಯಲ್ಲಿ ಇದ್ದು, ನಂತರದ ದಿನಗಳಲ್ಲಿ ತಮ್ಮದೇ ಸಂಘಟನೆ ಕಟ್ಟಿ, ನಾಟಕ ನಿರ್ದೇಶನಕ್ಕೆ ಸಜ್ಜಾದ ಹೊಸ ನಿರ್ದೇಶಕರಿಗೆ , ಸಂಘಟಕರು ಆ ನಾಟಕವನ್ನು ನಿಲ್ಲಿಸುವಂತೆ ರೋಫ್ ಹಾಕಿದರು. ಆ ಆದೇಶಕ್ಕೆ ಮಣಿಯದ ನಿರ್ದೇಶಕರು ನಾಟಕ ಪ್ರದರ್ಶನದ ಅಂತಿಮ ದಿನಗಳಲ್ಲಿ ಕಲಾಕ್ಷೇತ್ರದಲ್ಲಿ ಪೋಸ್ಟರ್ ಗಳನ್ನೂ ಹಾಕಿದಾಗ, ಮರುದಿನಕ್ಕೆ ಆ ಪೋಸ್ಟರ್ ಗಳು ಮಾಯವಾಗುವಂತೆ ಮಾಡಿದ್ದರು. 
\r\nಎಪ್ಪತ್ತರ ದಶಕದಲ್ಲಿ ಬೆಂಗಳೂರಿನಲ್ಲಿ ಇದ್ದ ಕೆಲವೇ ಪ್ರತಿಷ್ಠಿತ ರಂಗ ತಂಡಗಳು ಮಾಡುತಿದ್ದ ಹೊಸ ಪ್ರಯೋಗಗಳಿಗೆ ಪ್ರತಿಯೊಂದು ತಂಡದ ಪ್ರತಿಷ್ಠಿತರು ಮತ್ತು ಕಲಾವಿದರು ಬಂದು ನಾಟಕ ನೋಡಿ ಪರಸ್ಪರ ಬೆಂಬಲಿಸುತ್ತಿದ್ದರು. ಈ ಕಾರಣದಿಂದ ಬೆಂಗಳೂರಿನಲ್ಲಿ ಪ್ರಸ್ತುತಗೊಳ್ಳುತಿದ್ದ ಕೆಲವೇ ಪ್ರದರ್ಶನಗಳೂ ಸಹ ತುಂಬಿದ ಗೃಹಗಳಿಗೆ ಪ್ರದರ್ಶನ ಗೊಳ್ಳುತ್ತಿದ್ದವು.
\r\nಒಂದು ತಂಡದ ನಾಟಕ ತುಂಬಾ ಜನಪ್ರಿಯ ಆದಾಗ ಅಂದಿನ ಖ್ಯಾತ ನಿರ್ದೇಶಕರು ಮತ್ತು ಸಂಘಟಕರು ಆ ನಾಟಕದ ಪ್ರಮುಖ ಪಾತ್ರದಾರಿಗಳು ಆ ನಾಟಕದಲ್ಲಿ ಮುಂದುವರಿಯದಿರುವ ಹಾಗೆ ಮಾಡಿರುವ ಕುಟಿಲೋಪಾಯಗಳು ನನ್ನ ರಂಗ ಇತಿಹಾಸದ ನೆನಪಿನಲ್ಲಿ ನಿಚ್ಚಳವಾಗಿ ಇದೆ.
\r\nಈಗ ಮಹತ್ತರ ನಾಟಕ ಮಾಡುತ್ತಿದ್ದೇವೆ ಎಂದು ಪ್ರಚಾರ ಮಾಡುವ ಇಂದಿನ ರಂಗ ತಂಡಗಳಲ್ಲಿ ಅಂತಹ ಪರಸ್ಪರ ಬೆಂಬಲಿಸುವ ಸಾಂಸ್ಕೃತಿಕ ಮನಸ್ಸು ಇಲ್ಲವಾಗಿದೆ. ತಮ್ಮ ತಮ್ಮ ತಂಡದ ಚಟುವಟಿಕೆಗಳಿಗೆ ಆಯಾ ತಂಡದವರು ಬದ್ದರಾಗಿರುತ್ತಾರೆ. 
\r\nಒಂದು ತಂಡದ ನಾಟಕ ಹೆಚ್ಚು ಜನಪ್ರಿಯ ಆದಾಗ,ಸಂಘಟಕರು ಮತ್ತಷ್ಟು ಪ್ರಯೋಗಗಳನ್ನು ಆಯೋಜಿಸುತ್ತಿರುವಾಗಲೇ,ಆ ನಾಟಕದ ಪ್ರಮುಖ ನಟ ನಟಿ ಧಾರಾವಾಹಿಗಳಿಗೆ ,ಚಲನ ಚಿತ್ರ ಗಳಿಗೆ ವಲಸೆ ಹೋಗಿ ಅಂತಹ ಉತ್ತಮ ನಾಟಕಗಳು ಮರು ಪ್ರದರ್ಶನವಾಗದೆ ನಿಂತಿರುವ ಉದಾಹರಣೆಗಳು ಇಂದಿನ ವಾಸ್ತವ ಸಂಗತಿಗಳು.
\r\nಗುಂಡಣ್ಣ ಚಿಕ್ಕಮಗಳೂರ್  18.06.2024

\r\n


| Dr. Prabhakar

Superb analysis of the present situation where a hero's image has been dismantled and true face revealed. There is a beautiful lesson for every one, especially those who crave for fame and stardom. 

\r\n


| Dr. Eeraiah

ಕಟು ವಾಸ್ತವ ಸತ್ಯವನ್ನು ಹೇಳುವ ಉತ್ತಮವಾದ ಚಿಂತನೆ ಇಲ್ಲಿದೆ . ಧನ್ಯವಾದಗಳು 

\r\n\r\n

 

\r\n


| ಗುರುಪ್ರಸಾದ್

ಸರ್,ಎಷ್ಟು ಒಳ್ಳೆಯ ಲೇಖನ ಬರೆದಿದ್ದೀರಿ.ಇಷ್ಟು ಚೆನ್ನಾಗಿ ಯಾರು ಬರೆಯಲು ಸಾಧ್ಯ? ಒಂದೇ ಗುಕ್ಕಿಗೆ ಓದಿ ಮುಗಿಸಿದೆ.ಈ ಲೇಖನ ಬರೀ ಬ್ಲಾಗ್ ನಲ್ಲಿ ಉಳಿಯಬಾರದು.ಪತ್ರಿಕೆಗಳಲ್ಲಿ ಪ್ರಕಟವಾಗಿ ನಾಡಿನ ಪ್ರಜ್ಞಾವಂತರು ಚರ್ಚಿಸುವಂತಾಗಲಿ.


| ಡಾ. ಶಿವಲಿಂಗೇಗೌಡ ಡಿ.

ವರ್ತಮಾನದ ಘಟನೆಗಳ ಮೂಲಕ ಸಿನಿಮಾ, ಸಾಹಿತ್ಯ, ರಾಜಕಾರಣದ ಉದಾಹರಣೆಗಳೊಂದಿಗೆ ಮನುಷ್ಯ ಮುಖಗಳ ಶೋಧ ನಡೆಸಿರುವುದು ಅರ್ಥಪೂರ್ಣವಾಗಿದೆ. ತೀಕ್ಷ್ಣ ಒಳನೋಟಗಳುಳ್ಳ ಈ ಲೇಖನ ಎಲ್ಲರ ಮುಖವಾಡಗಳನ್ನ, ಭ್ರಮೆಗಳನ್ನ ಕಳಚುವುದರೊಂದಿಗೆ ಪ್ರತಿಯೊಬ್ಬರೂ ತಮ್ಮ ವ್ಯಕ್ತಿತ್ವವನ್ನು ಮಾನವೀಯ ನೆಲೆಗಟ್ಟಿನಲ್ಲಿ ರೂಪಿಸಿಕೊಳ್ಳಬೇಕಾದ ತುರ್ತನ್ನು ಒತ್ತಾಯಿಸುತ್ತದೆ. 

\r\n


| ಡಾ. ನಿರಂಜನ ಮೂರ್ತಿ ಬಿ ಎಂ

ಅತ್ಯುತ್ತಮವಾದ ಪ್ರಚಲಿತ ವಿದ್ಯಮಾನಗಳ ವಿಮರ್ಶಾತ್ಮಕ ಲೇಖನ. ಪ್ರಸಿದ್ಧ ನಟ, ಕಲಾಕಾರ, ಸಂಗೀತಗಾರ,  ರಾಜಕಾರಣಿ, ನೇತಾರ, ನಾಯಕ, ಯಾರಾದರಾಗಲಿ, ತನ್ನ ಎದುರಿಗೆ ಇರುವ ಮನುಷ್ಯ ಥೇಟು ತನ್ನ ಹಾಗೆಯೇ ಮನುಷ್ಯ ಎಂಬ ಸರಳ ಸತ್ಯವನ್ನು ಅರ್ಥ ಮಾಡಿಕೊಂಡು ಆಚರಿಸಿದರೆ, ಎಷ್ಟೋ ಅಪಘಾತಗಳು,  ಅವಗಡಗಳು, ಆಕಸ್ಮಿಕಗಳು  ನಡೆಯದೆ, ಮನುಜನ ಬದುಕು ಸರಳ ಸುಂದರವಾಗುತ್ತದೆ.

\r\n


| Dr Purushothama

Good contemporary coverage. This is mostly Indian happening as we can see isn't it 🙏

\r\n


|




Add Comment