ರೀಡರ್ ಅಥವಾ ಓದುಗಿಯ ಹುಟ್ಟು

ಈ ಸಲದ ಅಂಕಣದ ತಲೆಬರಹದಲ್ಲಿ `ರೀಡರ್’ ಎಂಬ ಪದ ನೋಡಿ, ಇಲ್ಲಿ ಇಂಗ್ಲಿಷ್ ಪದ ಯಾಕೆ? ಓದುಗ ಎಂಬ ಪದ ಇಲ್ಲವೆ? ಎಂದು ಅಚ್ಚರಿಗೊಳ್ಳುವವರು, ಗೊಣಗುವವರು ಇರಬಹುದು; ಇರುತ್ತಾರೆ! 

ಕಳೆದ ವಾರದ ಅಂಕಣದ ಎರಡನೆಯ ಭಾಗದಲ್ಲಿರುವ ಸಹ-ಅಂಕಣಕ್ಕೆ ಕೊಟ್ಟಿದ್ದ `ಓದುಗಿ-ಓದುಗ ಸ್ಪಂದನ’ ಎಂಬ ಖಾಯಂ ತಲೆಬರಹವನ್ನು ನೀವು ಗಮನಿಸಿರಬಹುದು.
ಆ ಭಾಗಕ್ಕೆ ಓದುಗಿ-ಓದುಗ ಎರಡನ್ನೂ ಸೇರಿಸಿ ಟೈಟಲ್ ಕೊಟ್ಟಿದ್ದಕ್ಕೆ ಕಾರಣ `ರೀಡರ್’ ಎಂಬ ಪದಕ್ಕೆ ನಾವು ಬಳಸುವ `ಓದುಗ’ ಎಂಬ ಪದಕ್ಕೆ ಇರುವ ಮಿತಿ.

ಇಂಗ್ಲಿಷಿನ `ರೀಡರ್’ ಎಂಬ ಪದ ಓದುಗಿಯನ್ನೂ, ಓದುಗನನ್ನೂ, ಲಿಂಗಾತೀತರನ್ನೂ ಒಳಗೊಳ್ಳುತ್ತದೆ. ಅಷ್ಟೇ ಅಲ್ಲ, ಓದಬಲ್ಲ ಯಂತ್ರಜೀವಿಯನ್ನೂ `ರೀಡರ್’ ಎಂಬ ಪದ ಒಳಗೊಳ್ಳುತ್ತದೆ.  

ಕನ್ನಡದ ‘ಓದುಗ’ ಎಂಬ ಪದಕ್ಕೂ ಈ ಎಲ್ಲ ಅರ್ಥಸಾಧ್ಯತೆಗಳು ಇಲ್ಲ ಎಂದು ಹೇಳುತ್ತಿಲ್ಲ; ಆದರೂ, `ಓದುಗ’ ಎಂದಾಕ್ಷಣ ಗಂಡಸೇ ನನ್ನ ಕಣ್ಣೆದುರು ಬರುತ್ತಾನೆ; ಹೆಂಗಸು, ‘ಓದುಗಿ’, ತಕ್ಷಣ ಕಣ್ಣೆದುರು ಬರುವುದಿಲ್ಲ. ಲೋಕಸಭಾ ಚುನಾವಣೆಯ ಕಾಲದ ನನ್ನ ಪ್ರಜಾವಾಣಿ ಅಂಕಣವೊಂದರಲ್ಲಿ ‘ಮತದಾರ್ತಿ’ ಎಂಬ ಪದವನ್ನು ಪ್ರತ್ಯೇಕವಾಗಿ ಬಳಸಿದ್ದೇನೆ; `ವೋಟರ್’ ಎನ್ನುವುದರ ಬದಲು ’ಮತದಾರ’ ಎಂಬ ಪದ ಬಳಸಿದ ತಕ್ಷಣ ಗಂಡಸು ಎಂಬುದೇ ನಮ್ಮ ಕಣ್ಣೆದುರು ಯಾಕೆ ಬರುತ್ತದೆ? ಈ ಪದರಾಜಕಾರಣದ ಬಗೆಗೂ ಚರ್ಚಿಸಿದ್ದೇನೆ.

ಈ ಸಮಸ್ಯೆ ಕೇವಲ ಭಾಷೆಯಲ್ಲಲ್ಲ, ಒಟ್ಟು ಜನಮಾನಸದ ಧೋರಣೆಯಲ್ಲೇ ಹುದುಗಿಬಿಟ್ಟಿದೆ ಎಂಬುದನ್ನು ಬ್ಲ್ಯಾಕ್ ಫೆಮಿನಿಸ್ಟ್ ಬೆಲ್ ಹುಕ್ಸ್ ಹೇಳುತ್ತಾರೆ: `ಸಾಮಾನ್ಯವಾಗಿ `ಬ್ಲ್ಯಾಕ್ ಪೀಪಲ್’ ಎಂದು ಮಾತಾಡುವಾಗ ಒತ್ತು ಕಪ್ಪು ಗಂಡಸರ ಬಗೆಗೆ ಇರುತ್ತದೆ; ಹಾಗೆಯೇ ‘ಹೆಂಗಸರು’ ಎಂದು ಸಾಮಾನ್ಯವಾಗಿ ಮಾತಾಡುವಾಗ ಒತ್ತು ಬಿಳಿಯ ಮಹಿಳೆಯರ ಕಡೆಗೆ ವಾಲುತ್ತದೆ.’

ಇಷ್ಟಾಗಿಯೂ, ಕನ್ನಡ ಭಾಷೆ ಕೆಲವೆಡೆ ಸ್ತ್ರೀಯರನ್ನು `ರಕ್ಷಿಸಿದೆ’ ಎನ್ನಿಸುತ್ತದೆ! ಈ ವಿಶೇಷ ಅಂಶವನ್ನು ಕನ್ನಡ ಸ್ತ್ರೀವಾದಿಗಳಾದ ಸುಮಿತ್ರಾಬಾಯಿ, ಆಶಾದೇವಿ, ಸುಮಾ, ಮೀರಾ, ಕಾವ್ಯಶ್ರೀ, ತಾರಿಣಿ ಇವರ ಗಮನಕ್ಕೆ ವಿನಮ್ರವಾಗಿ ತರಲೆತ್ನಿಸುತ್ತೇನೆ:                     

ಇದು ನನಗೆ ಒಂದು ದಿನ ಇದ್ದಕ್ಕಿದ್ದಂತೆ ಹೊಳೆದಿದ್ದು ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ಕಾರಿಡಾರಿನಲ್ಲಿ; ಯಾರೋ ರೂಮಿನ ಬೀಗ ಮುರಿದಿದ್ದು ಪತ್ತೆಯಾದ ದಿನ. ಅವತ್ತು ನಾನು ಕ್ಲಾಸಿಗೆ ಹೋಗುವ ಹಾದಿಯಲ್ಲಿ ವಿದ್ಯಾರ್ಥಿಯೊಬ್ಬ ಕಡು ಉತ್ಸಾಹದಿಂದ ಒಂದು ರೋಚಕ ಬ್ರೇಕಿಂಗ್ ನಾಯ್ಸ್ ಬಿತ್ತರಿಸಿದ: ‘ಸಾರ್! ಯಾವನೋ ಕಳ್ಳ ಬೀಗ ಮುರ್‍ದಿದಾನೆ!’

‘ಕಳ್ಳಿ ಯಾಕಾಗಿರಬಾರದು?’ ಎಂಬ ಪ್ರಶ್ನೆ ತಕ್ಷಣ ನನಗೆ ಎದುರಾಯಿತು! ಅವನನ್ನು ಈ ಪ್ರಶ್ನೆ ಕೇಳಿ ಪ್ರಯೋಜನವಿರಲಿಲ್ಲ. ನಂತರ, ಕ್ಲಾಸಿನಲ್ಲಿ ಸ್ತ್ರೀವಾದ ಪಾಠ ಮಾಡುತ್ತಾ, ‘ಭಾಷೆಯಲ್ಲಿ ಪುರುಷ ಪೂರ್ವಗ್ರಹ ಹುದುಗಿರುವ ಬಗೆಯನ್ನು ಡೇಲ್ ಸ್ಪೆಂಡರ್ ‘ಮ್ಯಾನ್ ಮೇಡ್ ಲ್ಯಾಂಗ್ವೇಜ್’ ಪುಸ್ತಕದಲ್ಲಿ ತೋರಿಸಿದ್ದಾರೆ; ಆದರೆ…’ ಎಂದು ಚಣ ನಿಲ್ಲಿಸಿದೆ; 
ತಮಾಷೆಯೆಂಬಂತೆ ಈ ಹೊಸ ‘ಸಂಶೋಧನೆ’ಯನ್ನು ಹೇಳಿದೆ:

ಸಾಮಾನ್ಯವಾಗಿ ಕಳ್ಳತನ, ಕೊಲೆ, ಭ್ರಷ್ಟಾಚಾರಗಳ ವಿಚಾರ ಬಂದಾಗ ಜನರ ಬಾಯಲ್ಲಿ ಬರುವ ವಾಡಿಕೆಯ ಮಾತುಗಳನ್ನು ಗಮನಿಸಿ:

‘ಯಾವನೋ ಕಳ್ಳ ನುಗ್ಗಿದಾನೆ!’ 
‘ಯಾವನೋ ಕದ್ಕೊಂಡೋಗಿದಾನೆ!’ 
‘ಯಾವನೋ ಕೊಲೆ ಮಾಡಿದಾನೆ!’
‘ಯಾವನೋ ಹೊಡೆದಾಕಿದಾನೆ!’

ಅಂದರೆ, ಪಾತಕಗಳ ವಿಚಾರದಲ್ಲಂತೂ ಕನ್ನಡವೂ ಸೇರಿದಂತೆ ಭಾರತೀಯ ಭಾಷೆಗಳು ಇನ್ನೂ ಪುರುಷಪಕ್ಷಪಾತಿಯಾಗಿರುವುದು ನಿಜ! 
ಈ ಮಾತು ಕೇಳಿ ಹುಡುಗಿಯರ ಮುಖ ಅರಳಿತು; ಮುಕ್ತ ಮನಸ್ಸಿನ ಹುಡುಗರ ಮುಖವೂ ಅರಳಿತು; ಕೆಲವು ಪುರುಷವಾದಿ ಮುಖಗಳು ಸಣ್ಣಗೆ ಬಿಗಿದುಕೊಂಡಂತೆ ಕಂಡಿತು! ಅವತ್ತು ಗಂಡು ಹೆಣ್ಣುಗಳ ಪಾತಕಗಳ ಪ್ರಮಾಣದ ಬಗ್ಗೆ ಭಾಷೆಯಿಂದ ಪಡೆದ ಸೂಚನೆಯನ್ನು ಈಚೆಗೆ ಮತ್ತೆ ಚೆಕ್ ಮಾಡಿದೆ:  ವಾಸ್ತವದಲ್ಲೂ ಅದು ನಿಜವಾಗಿತ್ತು! ೨೦೨೨ರಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿಇದ್ದ ಮಹಿಳಾ ಕೈದಿಗಳ ಸಂಖ್ಯೆ ೨೦೬. ಪುರುಷ ಕೈದಿಗಳ ಸಂಖ್ಯೆಯನ್ನು ಎಷ್ಟೋ ಪಟ್ಟು ಹೆಚ್ಚಿಸಿ, ನೀವೇ ಲೆಕ್ಕ ಹಾಕಿಕೊಳ್ಳಬಹುದು!   

ಅದೆಲ್ಲ ಇರಲಿ. ಈ ಲೇಖನದ ಶುರುವಿನಲ್ಲಿ ಹೇಳಿದ ‘ಓದುಗಿ’ ಎಂಬ ಪದವನ್ನು ನಾನು ಅಧಿಕೃತವಾಗಿ ಬಳಸಿದ್ದು ಕನ್ನಡ ಅಧ್ಯಯನ ಕೇಂದ್ರದ ಮೌಖಿಕ ಪರೀಕ್ಷೆಯೊಂದರಲ್ಲಿ; ಅವತ್ತು ವಿಷಯತಜ್ಞರಾಗಿದ್ದ ಸ್ತ್ರೀವಾದಿ ಚಿಂತಕಿ ಎಚ್. ಎಸ್. ಶ್ರೀಮತಿಯವರು ಈ ಪದಪ್ರಯೋಗವನ್ನು ಮನಸಾರೆ ಒಪ್ಪಿದ್ದು ನೆನಪಾಗುತ್ತಿದೆ; ಅಲ್ಲೇ ಇದ್ದ ಭಾಷಾವಿಜ್ಞಾನಿ ಕೆ.ವಿ. ನಾರಾಯಣರು ಈ ವರ್ಗೀಕರಣವನ್ನು ಯಾಕೋ ಒಪ್ಪಲಿಲ್ಲ; ಕೊನೆಗೆ ಅಳೆದೂ ಸುರಿದೂ, ‘ಓದುಗಿತ್ತಿ… ಬೆಟರ್’ ಎಂದರು. 

ಭಾಷಾತಜ್ಞನಲ್ಲದ ನನಗೆ, ಲೇಖಕ-ಲೇಖಕಿ, ಪ್ರೇಕ್ಷಕ- ಪ್ರೇಕ್ಷಕಿ ಇವೆಲ್ಲ ಇರುವಂತೆ ಓದುಗ- ಓದುಗಿಯೇ ಸರಿ ಅನ್ನಿಸಿ, ಅದನ್ನೇ ಬಳಸುತ್ತಾ ಬಂದಿರುವೆ. ಈ ಅಂಕಣ ಓದಿರುವ ಕೆಲವರು ಓದುಗಿ ಎಂದು ಬಳಸುವುದನ್ನು ಕಂಡು ಪುಳಕಗೊಂಡಿರುವೆ!

ಈ ಅಂಕಣ ಬರೆಯುತ್ತಾ, ಬೆಲ್ ಹುಕ್ಸ್ ಮಾತನ್ನು ಗಮನಿಸಿದಾಗ ಮತ್ತೊಂದು ವಿಚಾರ ಹೊಳೆಯಿತು: ಎಂದೂ ಇಲ್ಲದ ಓದುಗಿಯ ಪ್ರಶ್ನೆ ಈ ಕಾಲದಲ್ಲಿ ಹೇಗೆ ಬಂತು? ಅಂದರೆ, ಓದುಗಿ ಹುಟ್ಟುವುದು ಫೆಮಿನಿಸ್ಟ್ ರೀಡಿಂಗ್ ಬಂದ ನಂತರ! 

ಹೀಗೇ ರೀಡಿಂಗ್ ಬಗ್ಗೆ ಬರೆಯುತ್ತಾ, ಮೊನ್ನೆ ಪದ್ಯದ ಹೊಸ ರೀಡಿಂಗ್ ಬಗ್ಗೆ ಮೋಹನ್ ಮಿರ್ಲೆಯವರ ಜೊತೆ ಮಾತಾಡಿದ್ದು ನೆನಪಾಯಿತು; ಫ್ರೆಂಚ್ ವಿಮರ್ಶಕ ರೊಲಾ ಬಾರ್ತ್ ರೂಪಿಸಿದ ’ರೀಡರ್‍ಸ್ ರೆಸ್ಪಾನ್ಸ್ ಥಿಯರಿ’ಯ ಬಗ್ಗೆ ನಾನೊಮ್ಮೆ ರಿಫ್ರೆಶರ್ ಕೋರ್ಸಿನಲ್ಲಿ ಮಾತಾಡಿದ್ದನ್ನು ಮಿರ್ಲೆ ನೆನಪಿಸಿದರು. 

ರೀಡರ್‍ಸ್ ರೆಸ್ಪಾನ್ಸ್ ಥಿಯರಿಯ ಸರಳ ರೂಪ ಇದು: ಕೃತಿ ರಚನೆಯ ನಂತರ ’ಆಥರ್’ ಸಾವು;  ರೀಡರ್ ಹುಟ್ಟು. ಅಂದರೆ, ಕೃತಿ ರಚನೆಯ ನಂತರ ಕೃತಿರಚಿಸಿದವರು ಸಾಯುತ್ತಾರೆ; ಓದುವವರು ಹುಟ್ಟುತ್ತಾರೆ. ಇದು ರೋಲಾ ಬಾರ್ಥ್‌ನ ’ಡೆತ್ ಆಫ್ ದ ಆಥರ್’ ಎಂಬ ಮಹತ್ವದ ಪ್ರಬಂಧದ ಒಂದು ಗ್ರಹಿಕೆ. ಡೆತ್ ಆಫ್ ದಿ ಆಥರ್ ಎಂಬುದಕ್ಕೆ ರೂಪಕಾರ್ಥವಿದೆ ಎಂದು ಬಿಡಿಸಿ ಹೇಳಬೇಕಿಲ್ಲ! ಆಥರ್-ಗಾಡ್ (ಲೇಖಕಿದೇವಿ ಅಥವಾ ಲೇಖಕ ದೇವರು) ಕೃತಿಯಲ್ಲಿನ ಎಲ್ಲ ಅರ್ಥವನ್ನೂ ಕೊಟ್ಟಿರಬಹುದು ಎಂದು ರೀಡರ್ ತಿಳಿಬೇಕಾಗಿಲ್ಲ; ಅದನ್ನು ನಿರೀಕ್ಷಿಸಲೂ ಬೇಕಾಗಿಲ್ಲ. ಕೊನೆಗೂ ಕೃತಿಗೆ ಅರ್ಥ ತುಂಬುವುದು ’ರೀಡರ್’ ಮಾತ್ರ. ಇದು ರೋಲಾಬಾರ್ಥ್ ವಾದದ ಸರಳ ಸಂಗ್ರಹರೂಪ. 
ಮುಂದೆ ಯಾವುದಾದರೂ ಅಂಕಣದಲ್ಲಿ ರೋಲಾ ಬಾರ್ಥ್ ‘ರೀಡರ್’ ಗ್ರಹಿಕೆಯ ಬಗ್ಗೆ ಇನ್ನಷ್ಟು ಮಾತಾಡಬಹುದು.

ಓದುಗಿ-ಓದುಗ ಸ್ಪಂದನ
ಈ ಅಂಕಣದಲ್ಲೂ ಓದುಗಿ, ಓದುಗರ ಸ್ಪಂದನದ ಮೂಲಕ ಕೃತಿಗಳು, ಐಡಿಯಾಗಳು ಬೆಳೆಸುವ ಸಣ್ಣ ಪ್ರಯತ್ನ ಆಗೀಗ ನಡೆಯುತ್ತಿರುತ್ತದೆ. ಕಳೆದ ವಾರ ಬರೆದ ’ದಲಿತ’ ಪದ ಕುರಿತ ಚರ್ಚೆ ಓದಿದ ಪ್ರೊಫೆಸರ್‍ ವತ್ಸಲ, ಈ ಪದದ ಮೂಲ ಹೀಬ್ರೂ, ಸಂಸ್ಕೃತ ಭಾಷೆಗಳಲ್ಲೂ ಇರುವುದರ ಬಗ್ಗೆ ಬರೆದರು. 

ಆದರೆ, ಸಾವಿತ್ರಿಬಾಯಿ ಫುಲೆ, ಜ್ಯೋತಿಬಾ ಫುಲೆಯವರಲ್ಲಿ ಈ ಪದ ಮೊದಲು ಕಾಣಿಸಿಕೊಂಡಿದೆ ಎಂದಾದರೆ, ಮರಾಠಿಯಲ್ಲಿ ಕಿಟ್ಟೆಲ್ ಕೋಶದಂಥ ನಿಘಂಟು ಇದ್ದರೆ ಈ ಪದದ ಮೂಲ ಸಿಕ್ಕಬಹುದು. ಸಿಗದಿದ್ದರೇನಂತೆ? ೧೯೭೨ರಿಂದೀಚೆಗೆ ದಲಿತ್ ಪ್ಯಾಂಥರ್‍ಸ್ ಓದುಗ ಕೊಟ್ಟ ಹೊಸ ಅರ್ಥದ ಜೊತೆಗೇ ಹೊರಡಬಹುದು. 

‘ನೀನು ಬೆಳೆದರೆ ನಾನು ಬೆಳೆವೆ’. ರೈಟ್?

ಬ್ಲಾಗ್ ಫಾಲೋ ಮಾಡಲು ಒಪ್ಪಿ, ಕ್ಲಿಕ್ ಮಾಡಿ; ನೋಟಿಫಿಕೇಶನ್ ಪಡೆಯಿರಿ, ಶೇರ್ ಮಾಡಿ: FOLLOW
ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com 
ಬಿಡುವಾದಾಗ ನೋಡಿ, ಶೇರ್ ಮಾಡಿ:  YOUTUBE LINK 

Share on:

Comments

8 Comments



| Hari Prasad

ಯೋಚನೆಗೆ ಕಚಗುಳಿ ಇಡುವ ಈ ಬರಹವನ್ನು ಓದುತ್ತಿರುವಾಗ ಮುಖ್ಯಮಂತ್ರಿಗಳ ಕಛೇರಿಯಲ್ಲಿ ಕೆಲಸ ಮಾಡುವ ಗೆಳೆಯನೊಬ್ಬ ಫೋನ್ ಮಾಡಿದ. ಆತನ ಮಾತು ಮಾತಿನಲ್ಲೂ *ಸಾಹೇಬರು* ಬಳಕೆಯಾಗುತ್ತಿತ್ತು. \r\nನನಗಂತೂ ಈತರದ ಬಳಕೆಗಳು ಕಿರಿಕಿರಿ ಹುಟ್ಟಿಸುತ್ತದೆ. ಎದುರಿಗೆ ಸಾಹೇಬರು ಇಲ್ಲದಾಗಲೂ ಈ ಸಾಹೇಬ ಬಳುಸುವಂತ ಒತ್ತಡ ಎಲ್ಲಿಂದ ಹುಟ್ಟುತ್ತದೆ? ಹಿಂದೆ ಯಡಿಯೂರಪ್ಪನವರ ಕಾಲದಲ್ಲಿ ಅವರಿಗೆ ಹತ್ತಿರವಿದ್ದ ಗೆಳೆಯ *ಸಾಹೇಬರು* ಎಂದೇ ಮಾತು ಶುರು ಮಾಡುತ್ತಿದ್ದ. ಯಾವುದೇ ಹಿನ್ನೆಲೆಯ ನಾಯಕರು ಮುಖ್ಯಮಂತ್ರಿ ಆದರೂ ಈ ಸಾಹೇಬರನ್ನು ಓಡಿಸುವುದು ಕಷ್ಟವೇನೋ.\r\nಸಿನಿಮಾ ರಂಗದಲ್ಲೂ ಸಾಹೇಬರಿಗೆ ಬದಲಾಗಿ ಸರ್ ಈರೀತಿ ಬಳಕೆಯಲ್ಲಿಯೇ ಇದೆ. ಎಷ್ಟರ ಮಟ್ಟಿಗೆ ಎಂದರೆ ಯಾರಾದರೂ ಸಿನಿಮಾದವರ ಬಳಿ ಫೋನ್ ನಂಬರ್ ಕೇಳಿದಾಗ ಅವರು ಕಳಿಸುವುದು ದೊಣ್ಣೆ ನಾಯಕ ಸರ್ ಎಂದೇ. ತಮ್ಮ ಮೊಬೈಲುಗಳಲ್ಲಿ ಹೆಸರು ಸೇವ್ ಮಾಡುವಾಗಲೂ ದೊಣ್ಣೆ ನಾಯಕ ಸರ್ ಎಂದು ಸೇವ್ ಮಾಡಿಕೊಳ್ಳುವ ಈ ಜೀತ ಪದ್ದತಿ ಹೇಗೆ ನಿರ್ಮೂಲನೆ ಆಗುವುದೋ ನಾನರೀಯೆ. \r\nಹಿಂದೆ ಪ್ರಸನ್ನ ರಂಗಾಯಣದ ನಿರ್ದೇಶಕ ಆಗಿದ್ದಾಗ ರಾಣಿ ಸತೀಶ್ ಸಂಸ್ಕೃತಿ ಮಂತ್ರಿ ಆಗಿದ್ದರು. ವೇದಿಕೆಯಲ್ಲಿ ಮಾತಾಡುವಾಗ ಪ್ರಸನ್ನ ಸಚಿವೆಯವರಾದ..... ಎಂದೇ ಸಂಬೋಧಿಸುತ್ತಿದ್ದರು. ಸದ್ಯಕ್ಕೆ ಇಷ್ಟು ಸರ್


| Hari Prasad

ಯೋಚನೆಗೆ ಕಚಗುಳಿ ಇಡುವ ಈ ಬರಹವನ್ನು ಓದುತ್ತಿರುವಾಗ ಮುಖ್ಯಮಂತ್ರಿಗಳ ಕಛೇರಿಯಲ್ಲಿ ಕೆಲಸ ಮಾಡುವ ಗೆಳೆಯನೊಬ್ಬ ಫೋನ್ ಮಾಡಿದ. ಆತನ ಮಾತು ಮಾತಿನಲ್ಲೂ *ಸಾಹೇಬರು* ಬಳಕೆಯಾಗುತ್ತಿತ್ತು. \r\nನನಗಂತೂ ಈತರದ ಬಳಕೆಗಳು ಕಿರಿಕಿರಿ ಹುಟ್ಟಿಸುತ್ತದೆ. ಎದುರಿಗೆ ಸಾಹೇಬರು ಇಲ್ಲದಾಗಲೂ ಈ ಸಾಹೇಬ ಬಳುಸುವಂತ ಒತ್ತಡ ಎಲ್ಲಿಂದ ಹುಟ್ಟುತ್ತದೆ? ಹಿಂದೆ ಯಡಿಯೂರಪ್ಪನವರ ಕಾಲದಲ್ಲಿ ಅವರಿಗೆ ಹತ್ತಿರವಿದ್ದ ಗೆಳೆಯ *ಸಾಹೇಬರು* ಎಂದೇ ಮಾತು ಶುರು ಮಾಡುತ್ತಿದ್ದ. ಯಾವುದೇ ಹಿನ್ನೆಲೆಯ ನಾಯಕರು ಮುಖ್ಯಮಂತ್ರಿ ಆದರೂ ಈ ಸಾಹೇಬರನ್ನು ಓಡಿಸುವುದು ಕಷ್ಟವೇನೋ.\r\nಸಿನಿಮಾ ರಂಗದಲ್ಲೂ ಸಾಹೇಬರಿಗೆ ಬದಲಾಗಿ ಸರ್ ಈರೀತಿ ಬಳಕೆಯಲ್ಲಿಯೇ ಇದೆ. ಎಷ್ಟರ ಮಟ್ಟಿಗೆ ಎಂದರೆ ಯಾರಾದರೂ ಸಿನಿಮಾದವರ ಬಳಿ ಫೋನ್ ನಂಬರ್ ಕೇಳಿದಾಗ ಅವರು ಕಳಿಸುವುದು ದೊಣ್ಣೆ ನಾಯಕ ಸರ್ ಎಂದೇ. ತಮ್ಮ ಮೊಬೈಲುಗಳಲ್ಲಿ ಹೆಸರು ಸೇವ್ ಮಾಡುವಾಗಲೂ ದೊಣ್ಣೆ ನಾಯಕ ಸರ್ ಎಂದು ಸೇವ್ ಮಾಡಿಕೊಳ್ಳುವ ಈ ಜೀತ ಪದ್ದತಿ ಹೇಗೆ ನಿರ್ಮೂಲನೆ ಆಗುವುದೋ ನಾನರೀಯೆ. \r\nಹಿಂದೆ ಪ್ರಸನ್ನ ರಂಗಾಯಣದ ನಿರ್ದೇಶಕ ಆಗಿದ್ದಾಗ ರಾಣಿ ಸತೀಶ್ ಸಂಸ್ಕೃತಿ ಮಂತ್ರಿ ಆಗಿದ್ದರು. ವೇದಿಕೆಯಲ್ಲಿ ಮಾತಾಡುವಾಗ ಪ್ರಸನ್ನ ಸಚಿವೆಯವರಾದ..... ಎಂದೇ ಸಂಬೋಧಿಸುತ್ತಿದ್ದರು. ಸದ್ಯಕ್ಕೆ ಇಷ್ಟು ಸರ್


| Dhruva Patil

\r\nಕವಿ ಸಿದ್ಧಲಿಂಗಯ್ಯ ಅವರ ಕುರಿತ ಬರಹ ಪದಾರ್ಥವನರಿಯಬಹುದೆ? ವಿಶೇಷ ಲೇಖನ.\r\nಸಿದ್ಧಲಿಂಗಯ್ಯ ಅವರ ಕುರಿತ ಅನೇಕ ಗಾಸಿಪ್ ಗಳು ಕನ್ನಡ ಸಾಹಿತ್ಯ ವಲಯದಲ್ಲಿ ಇವೆ. ಅದರಾಚೆಗೂ ಈ ಬರಹ ಅವರನ್ನು ಕಣ್ಣು ಧರಿಸಿ ಕಾಣಿ ಎಂದು ಹೇಳುತ್ತದೆ. ನೋಡುವ ದೃಷ್ಟಿಕೋನ ಬದಲಾದಾಗ ವ್ಯಕ್ತಿ ಮತ್ತು ವ್ಯಕ್ತಿತ್ವದ ಬಗ್ಗೆ ಸರಿಯಾಗಿ ಅರಿಯಲು ಸಾಧ್ಯ. ಅಕ್ಷರ ವಂಚಿತ ಸಮುದಾಯದಿಂದ ಬಂದ ಸಿದ್ಧಲಿಂಗಯ್ಯ ಅವರಿಗೆ ತನ್ನ ಸಮುದಾಯದ ಜನರ ನೋವು ಗೊತ್ತಿತ್ತು. ಅವರ ಕವಿತೆಗಳಲ್ಲಿ ಇದನ್ನು ನೋಡಬಹುದು.\r\n\r\nಅವರನ್ನು ನಾನು ೨೦೧೮ ರಲ್ಲಿ ಕನ್ನಡ ವಿಶ್ವವಿದ್ಯಾಲಯದಲ್ಲಿ ನೋಡಿದ್ದೆ. ಅವರ ಭಾಷಣದ ಉದ್ದಕ್ಕೂ ನಕ್ಕು ನಗಿಸುತ್ತಾ ಅದರೊಳಗೆ ವೈಚಾರಿಕ ಸಂಗತಿಗಳ ಎಳೆಗಳನ್ನು ನಮ್ಮಲ್ಲಿ ಬಿತ್ತಿದರು.\r\n\r\n🌹🤝


| A. Devi

Wonderful insights!


| ಡಾ. ಶಿವಲಿಂಗೇಗೌಡ ಡಿ

ಭಾಷೆಗಳಲ್ಲಿ ಹುದುಗಿರುವ ಪುರುಷವಾಚೀ ಅಭಿವ್ಯಕ್ತಿಯ ಪದಗಳ ಬಗ್ಗೆ ಚೆನ್ನಾಗಿ ಚರ್ಚಿಸಿದ್ದೀರಿ. ಈ ತರದ ಪುರುಷಸೀಮಿತ ಅರ್ಥದ ಪದಗಳು ಒಂದು ಭಾಷಾ ಸಂಸ್ಕೃತಿಯೊಳಗೆ ಹುಟ್ಟಿಕೊಂಡು ಯಜಮಾನಿಕೆ ನಡೆಸುವುದರೊಂದಿಗೆ ಹೆಣ್ಣನ್ನ ಅದರಿಂದ ಹೊರಗಿಟ್ಟೇ ನೋಡುವುದನ್ನ ಕಲಿಸಿಬಿಟ್ಟಿರುತ್ತದೆ. ಅದರ ಅರಿವೇ ಇಲ್ಲದಂತೆ ನಿರಂತರವಾಗಿ ಬಳಸುತ್ತಿರುತ್ತೇವೆ. ಇಂಥ ಪದಗಳಿಗೆ ಬದಲಾಗಿ ಲಿಂಗಾತೀತ ಪದಗಳ ಸೃಷ್ಟಿ ಸಾಧ್ಯವಿಲ್ಲವೇ? ಅಥವಾ ಇರುವ ಪದಗಳನ್ನ ಲಿಂಗಾತೀತ ನೆಲೆಯಲ್ಲಿ ಗ್ರಹಿಸುವ ಮತ್ತು ಬಳಸುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಲು ಸಾಧ್ಯವಿಲ್ಲವೇ?


| ಡಾ. ನಿರಂಜನ ಮೂರ್ತಿ ಬಿ ಎಂ

ಓದುಗಿಯ ಹುಟ್ಟಿನ ಮೂಲವನ್ನು ಕೆದಕುವ ಕನ್ನಡ ಭಾಷೆಯ ಸಾಂಸ್ಕ್ರತಿಕ ಪದರಾಜಕಾರಣದ ಚರ್ಚೆ ಚೆನ್ನಾಗಿದೆ. ಇಂಗ್ಲಿಷ್ ಮತ್ತು ಕನ್ನಡವೂ ಸೇರಿದಂತೆ ಭಾರತೀಯ ಭಾಷೆಗಳು ಒಂದೇ ಭಾಷಾಕುಟುಂಬಕ್ಕೆ ಅಂದರೆ ಇಂಡೋಯುರೋಪಿಯನ್ ಭಾಷಾಕುಟುಂಬಕ್ಕೆ ಸೇರಿದ್ದರೂ ಕೂಡ, ಇಂಗ್ಲಿಷ್ ಭಾಷೆಯಲ್ಲಿನ ಲಿಂಗತಟಸ್ಥ ಗುಣ ಕನ್ನಡದಲ್ಲೇಕೆ ಬೆಳೆದುಬಂದಿಲ್ಲವೆಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಭಾಷಾವಿಜ್ಞಾನಿಗಳು ಈ ವಿಷಯದ ಬಗ್ಗೆ ಬೆಳಕು ಚೆಲ್ಲಬೇಕಲ್ಲವೆ?


| Mythili P Rao

Sir, extremely insightful!! This has always been a thought which teases us all the time. In hindi the word is \'पाठक\' which is neutral gender, hence does not lead to much challenge. Even for example if I take the word \'चोर\' (thief / ಕಳ್ಳ) in Hindi it is not necessary to use any gender specific noun though to force-fit sometimes the word चोरनी is used. Another aspect which teases me is th


| Mythili P Rao

Sir, extremely insightful!! This has always been a thought which teases us all the time. In hindi the word is \'पाठक\' which is neutral gender, hence does not lead to much challenge. Even for example if I take the word \'चोर\' (thief / ಕಳ್ಳ) in Hindi it is not necessary to use any gender specific noun though to force-fit sometimes the word चोरनी is used. Another aspect which teases me is the designations. Should they be gender specific? अध्यक्ष / अध्यक्षा, महोदय / महोदया . Mridula Garg ji had once commented on the frivolous nature of such debates especially for eg. लेखक /कवि she questioned why the same cannot be used even for women writers? Why do we need gender specific address there? Of course feminists may not agree, sometimes in conferences I have noticed that if the speaker somehow uses neutral gender while speaking, the women speakers correct them. You have in fact addressed a very contentious matter.




Add Comment






Recent Posts

Latest Blogs



Kamakasturibana

YouTube