ನಳಂದದ ಮರು ಸೃಷ್ಟಿಯ ಕನಸು
by Nataraj Huliyar
ಏಳನೆಯ ಶತಮಾನದಲ್ಲಿ ಚೀನಾದಿಂದ ಬಂದು ನಳಂದ ವಿಶ್ವವಿದ್ಯಾಲಯದಲ್ಲಿ ಕಲಿತ ಪ್ರತಿಭಾವಂತ ವಿದ್ಯಾರ್ಥಿ ಹ್ಯೂಯೆನ್ ತ್ಸಾಂಗ್‌ನ ವಿದ್ಯಾಭ್ಯಾಸ ಮುಗಿದ ಮೇಲೆ ‘ವಿಶ್ವವಿದ್ಯಾಲಯದಲ್ಲೇ ಪ್ರಾಧ್ಯಾಪಕ ಹುದ್ದೆ ಕೊಡುತ್ತೇವೆ. ಇಲ್ಲೇ ಉಳಿಯಿರಿ’ ಎಂದು ಹಿರಿಯ ಪ್ರಾಧ್ಯಾಪಕರು ಹೇಳಿದರು.
ಹ್ಯೂಯೆನ್ ತ್ಸಾಂಗ್ ಹೇಳಿದ: “...‘ಜ್ಞಾನೋದಯದ ಫಲವನ್ನು ಒಬ್ಬನೇ ಅನುಭವಿಸಬಾರದು; ನಾವು ಏನನ್ನಾದರೂ ಕಲಿತರೆ ಅದನ್ನು ಇನ್ನೊಬ್ಬರೊಡನೆ ಹಂಚಿಕೊಳ್ಳುವುದು ನಮ್ಮ ಕರ್ತವ್ಯ’ ಎಂದು ಗೌತಮ ಬುದ್ಧ ಹೇಳಿಕೊಟ್ಟಿದ್ದಾನೆ; ನಾನೀಗ ನಮ್ಮೂರಿಗೆ ಹೋಗಿ, ಬುದ್ಧ ಹೇಳಿದ ಆ ಕೆಲಸ ಮಾಡಬೇಕಾಗಿದೆ.”
ಜಗತ್ತಿನ ಮೊಟ್ಟಮೊದಲ ವಿಶ್ವವಿದ್ಯಾಲಯ ಭಾರತದಲ್ಲಿತ್ತು; ಅದರ ಹೆಸರು ನಳಂದ ವಿಶ್ವವಿದ್ಯಾಲಯ ಎಂಬ ಪ್ರಜ್ಞೆ ಹಾಗೂ ಹೆಮ್ಮೆ ನಮ್ಮ ಸರ್ಕಾರಿ ಜನರಲ್ಲಿರಲಿ, ಅಕಡೆಮಿಕ್ ವಲಯಗಳಲ್ಲೂ ಕಣ್ಮರೆಯಾದಂತಿದೆ. ಆದರೆ ‘ಗಡಿಗೆರೆಗಳಿಲ್ಲದ ಜ್ಞಾನೋದಯ; ಎಲ್ಲರಿಗೂ ದಕ್ಕುವ ಜ್ಞಾನೋದಯ’ ಎಂಬ ನಳಂದ ವಿಶ್ವವಿದ್ಯಾಲಯದ ಈ ಮಹಾನ್ ಬೌದ್ಧ ಆಶಯ ಎಂದಿಗೂ ಕಣ್ಮರೆಯಾಗಲು ಬಿಡಬಾರದು. ಹದಿನೈದು ವರ್ಷಗಳ ಕೆಳಗೆ ಖ್ಯಾತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನರ ಕಣ್ಣೆದುರು ನಳಂದದ ಈ ಹೆಮ್ಮೆಯ ಪುಟಗಳು ತೆರೆದುಕೊಳ್ಳತೊಡಗಿದ್ದವು:
ಐದು, ಆರನೆಯ ಶತಮಾನದ ನಡುವೆ ನಳಂದ ವಿಶ್ವವಿದ್ಯಾಲಯ ಶುರುವಾದ ಆರುನೂರು ವರ್ಷಗಳ ನಂತರ ಯುರೋಪಿನ ಮೊದಲ ವಿಶ್ವವಿದ್ಯಾಲಯ ಇಟಲಿಯ ಬಲೋನ ವಿಶ್ವವಿದ್ಯಾಲಯ ೧೦೮೮ರಲ್ಲಿ ಶುರುವಾಯಿತು. ಅಂದಿನಿಂದ ಇಂದಿನವರೆಗೂ ಬಲೋನ ವಿಶ್ವವಿದ್ಯಾಲಯ ನಡೆಯುತ್ತಲೇ ಇದೆ. ಈಗ ಪಾಕಿಸ್ತಾನದಲ್ಲಿರುವ ತಕ್ಷಶಿಲಾ ವಿಶ್ವವಿದ್ಯಾಲಯ ನಳಂದಕ್ಕಿಂತ ಮೊದಲು ಅಸ್ತಿತ್ವದಲ್ಲಿದ್ದರೂ ಅದು ಧರ್ಮದ ಅಧ್ಯಯನಕ್ಕೆ ಮಾತ್ರ ಒತ್ತು ಕೊಟ್ಟಿತ್ತು. ನಳಂದ ವಿಶ್ವವಿದ್ಯಾಲಯ ಧಾರ್ಮಿಕ ವಿಷಯಗಳ ಜೊತೆಗೆ ಖಗೋಳ ವಿಜ್ಞಾನ, ಗಣಿತ ಇತ್ಯಾದಿಗಳ ಉನ್ನತ ಅಧ್ಯಯನದ ಕೇಂದ್ರವಾಯಿತು.
೧೫೦೦ ವರ್ಷಗಳ ಕೆಳಗೆ ನಳಂದದಲ್ಲಿ ಕ್ಲಾಸುಗಳು ನಡೆಯುತ್ತಿದ್ದ ಕಾಲಕ್ಕೆ ಜಗತ್ತಿನಲ್ಲಿದ್ದ ಉನ್ನತ ವಿದ್ಯಾಭ್ಯಾಸದ ಕೇಂದ್ರ ಅದೊಂದೇ! ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ (೧೧೬೯) ಹಾಗೂ ಕೇಂಬ್ರಿಡ್ಜ್ ವಿಶ್ವವಿದ್ಯಾಲಯ (೧೨೦೯) ಹುಟ್ಟಿದ್ದು ದಾಳಿಕೋರರು ನಳಂದವನ್ನು ನಾಶ ಮಾಡಿದ ನಂತರ.
ಅಮರ್ತ್ಯ ಸೇನ್‌ಗೆ ಇವೆಲ್ಲ ನೆನಪಾದದ್ದಕ್ಕೆ ಒಂದು ಹಿನ್ನೆಲೆಯಿತ್ತು: ೨೦೦೭ನೆಯ ಇಸವಿಯಲ್ಲೊಂದು ದಿನ ಮನಮೋಹನ್ ಸಿಂಗ್ ಸಂಪುಟದ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿಯವರಿಂದ ಸೇನ್‌ಗೆ ಒಂದು ಫೋನ್ ಬಂತು. ಇಂಡಿಯಾದ ಚರಿತ್ರೆಯ ಹೆಮ್ಮೆಯ ವಿಶ್ವವಿದ್ಯಾಲಯವಾಗಿದ್ದ ನಳಂದ ವಿಶ್ವವಿದ್ಯಾಲಯವನ್ನು ಮರಳಿ ಕಟ್ಟುವ ಗಂಭೀರ ವಿದ್ವಾಂಸರ ಸಭೆಯ ಅಧ್ಯಕ್ಷತೆ ವಹಿಸಬೇಕೆಂದು ಮುಖರ್ಜಿ ಕೇಳಿದಾಗ ಅಮರ್ತ್ಯ ಸೇನ್ ಒಪ್ಪಿಕೊಂಡರು. ಕಾರಣ, ಸೇನ್ ೨೦೦೪ರಲ್ಲಿ ಬರೆದಿದ್ದ ನಳಂದ ವಿಶ್ವವಿದ್ಯಾಲಯದ ಇತಿಹಾಸ ಕುರಿತ ಲೇಖನದಲ್ಲಿ ಎಂದಾದರೊಂದು ದಿನ ನಳಂದ ಮರುಜೀವ ಪಡೆಯಬಹುದೆಂದು ಆಶಿಸಿದ್ದರು. ಆ ಕಾಲ ಹಟಾತ್ತನೆ ಅವರೆದುರು ಬಂದಂತಿತ್ತು!
ನೊಬೆಲ್ ಪ್ರಶಸ್ತಿ ವಿಜೇತ ಅಮರ್ತ್ಯ ಸೇನ್ ನಳಂದದ ಕನಸು ಹೊತ್ತು ಅಮೆರಿಕದಿಂದ ಬಿಹಾರದ ನಳಂದಕ್ಕೆ ಬಂದರು. ತಾವೇ ಒಂದು ವಿಶ್ವವಿದ್ಯಾಲಯದಂತಿರುವ ಅಮರ್ತ್ಯ ಸೇನ್ ಎದುರಿಗೆ ದೇಶ ವಿದೇಶಗಳಲ್ಲಿ ತಾವು ಗಳಿಸಿದ ಜ್ಞಾನವನ್ನು ನಳಂದದ ಧ್ಯೇಯವಾಕ್ಯಕ್ಕೆ ತಕ್ಕಂತೆ ತಮ್ಮ ದೇಶದಲ್ಲಿ ಹಂಚುವ ಕರ್ತವ್ಯವೂ ಇತ್ತು. ನಳಂದದ ಚಾರಿತ್ರಿಕ ಹೆಸರು, ಹಾಗೂ ‘ನಳಂದಕ್ಕೆ ಮರಳಿ ಬನ್ನಿ’ ಎಂಬ ಭಾರತದ ಕರೆ ಕೇಳಿ ಜಗತ್ತಿನ ಹಲವೆಡೆಯಲ್ಲಿ ಗಂಭೀರ ಅಧ್ಯಯನ ಹಾಗೂ ಟೀಚಿಂಗಿನಲ್ಲಿ ತೊಡಗಿದ್ದ ಪ್ರೊಫೆಸರುಗಳು ಪುಳಕಗೊಂಡರು; ತಂತಮ್ಮ ವಿಶ್ವವಿದ್ಯಾಲಯಗಳ ಸಂಬಳಕ್ಕಿಂತ ಅರ್ಧ ಸಂಬಳಕ್ಕೆ ಬರಲು ಸಿದ್ಧವಾದರು. ನಳಂದದ ವಿಶಾಲ ಆಶಯಗಳನ್ನು ಮತ್ತೆ ಸಾಕಾರಗೊಳಿಸಬಲ್ಲ ಮಹತ್ವಾಕಾಂಕ್ಷೆಯ ವಿಶ್ವವಿದ್ಯಾಲಯವನ್ನು ಕಟ್ಟುವ ಕನಸು ಕಂಡ ಏಷ್ಯಾದ ಹಲವು ದೇಶಗಳ ದೊಡ್ಡ ವಿದ್ವಾಂಸರು ಅಮರ್ತ್ಯ ಸೇನರ ಜೊತೆಗೂಡತೊಡಗಿದರು.
ಮನಮೋಹನ್ ಸಿಂಗ್ ಸರ್ಕಾರ ನಳಂದ ವಿಶ್ವವಿದ್ಯಾಲಯದ ಆಧುನಿಕ ಮರುಸೃಷ್ಟಿಯನ್ನು ನಿಜಕ್ಕೂ ಗಂಭೀರವಾಗಿ ಕೈಗೆತ್ತಿಕೊಂಡಿತು. ವಿಶ್ವವಿದ್ಯಾಲಯಕ್ಕೆ ಸಂಪೂರ್ಣ ಅಕಡೆಮಿಕ್ ಸ್ವಾಯತ್ತತೆ, ಸ್ವಾತಂತ್ರ‍್ಯಗಳನ್ನು ನೀಡಲು ಸರ್ಕಾರ ಬದ್ಧವಾಗಿತ್ತು. ನಳಂದ ವಿಶ್ವವಿದ್ಯಾಲಯದ ಅಕಡೆಮಿಕ್ ಸ್ವಾಯತ್ತತೆಯನ್ನು ರಕ್ಷಿಸುವ ಮಸೂದೆ ಪಾರ್ಲಿಮೆಂಟಿನಲ್ಲಿ ಪಾಸಾಯಿತು. ೨೦೨೧ರವರೆಗೂ ನಳಂದದ ಆರ್ಥಿಕ ಭದ್ರತೆಯ ಏರ್ಪಾಡೂ ಆಯಿತು. ಬಿಹಾರದ ಮುಖ್ಯಮಂತ್ರಿ ನಿತೀಶ್‌ಕುಮಾರ್ ವಿಶ್ವವಿದ್ಯಾಲಯಕ್ಕೆ ಭೂಮಿ ಮಂಜೂರು ಮಾಡಿದರು. ಪ್ರಾಚೀನ ಯುಗದ ನಳಂದದ ಕನಸು ಇಪ್ಪತ್ತೊಂದನೆಯ ಶತಮಾನದ ಆಧುನಿಕೋತ್ತರ ಯುಗದಲ್ಲಿ ಸಾಕಾರವಾಗುವ ಕಾಲ ಬಂತು. ತರಗತಿಗಳೂ ಶುರುವಾದವು.
ಅಷ್ಟೊತ್ತಿಗಾಗಲೇ, ಲೋಕದ ದೊಡ್ಡ ದೊಡ್ಡ ವಿಶ್ವವಿದ್ಯಾಲಯಗಳ ಮಹತ್ವವನ್ನು ಬಲ್ಲವರಾಗಿದ್ದ ಸುಶಿಕ್ಷಿತ ಪ್ರಧಾನಿ ಡಾ. ಮನಮೋಹನ್ ಸಿಂಗ್ ಸ್ವತಃ ಆಸಕ್ತಿ ವಹಿಸಿ ದೇಶದ ಉತ್ತಮ ಪ್ರತಿಭೆಗಳು ಇಂಡಿಯಾದ ಎಲ್ಲ ವಿಶ್ವವಿದ್ಯಾಲಯಗಳಲ್ಲೂ ಇರಬೇಕೆಂದು ಕನಸು ಕಂಡಿದ್ದರು; ಆ ಕಾರಣದಿಂದ ಕೂಡ ಇಂಡಿಯಾದ ಎಲ್ಲ ವಿಶ್ವವಿದ್ಯಾಲಯಗಳ ಬೋಧಕ ಸಿಬ್ಬಂದಿಯ ಸಂಬಳವನ್ನು ಹತ್ತಿರ ಹತ್ತಿರ ಎರಡು ಪಟ್ಟು ಹೆಚ್ಚಿಸಿದ್ದರು. ಮನಮೋಹನ್ ಸಿಂಗ್ ಸರ್ಕಾರಕ್ಕೆ ಇದ್ದ ಶೈಕ್ಷಣಿಕ ವಲಯಗಳ ಏಳಿಗೆ ಹಾಗೂ ಶೈಕ್ಷಣಿಕ ಸ್ವಾತಂತ್ರ‍್ಯ ಕುರಿತ ಪ್ರಾಮಾಣಿಕ ಬದ್ಧತೆ, ಕಾಳಜಿಗಳ ಮಹತ್ವ ಈ ಪತನದ ಕಾಲದಲ್ಲಿ ಇನ್ನಷ್ಟು ಎದ್ದು ಕಾಣುತ್ತಿದೆ.
ಮನಮೋಹನ್ ಸಿಂಗ್ ಸರ್ಕಾರದ ನಿರ್ಗಮನದ ನಂತರ ಅಕಡೆಮಿಕ್ ವಲಯಗಳನ್ನು ಯೋಜಿತವಾಗಿ ನಾಶ ಮಾಡುತ್ತಿರುವ ನಿತ್ಯದ ಭಯಾನಕ ಚಿತ್ರಗಳು ನಮ್ಮ ಕಣ್ಣ ಮುಂದೇ ಇವೆ. ಅದರಲ್ಲಿ ನಳಂದದ ಕನಸಿನ ನಾಶವೂ ಸೇರಿದೆ. ೨೦೧೪ರ ನಂತರ ಅಮರ್ತ್ಯ ಸೇನ್ ನಳಂದದಿಂದ ಹೊರಹೋಗುವಂತೆ ನೋಡಿಕೊಳ್ಳಲಾಯಿತು; ನಳಂದ ವಿಶ್ವವಿದ್ಯಾಲಯದ ಅಕಡೆಮಿಕ್ ಸ್ವಾಯತ್ತತೆಗೆ ಧಕ್ಕೆ ಬಂತು. ಸರ್ಕಾರಿ ನಾಮನಿರ್ದೇಶಿತ ಸದಸ್ಯರ ಹಾವಳಿ ಶುರುವಾಯಿತು.
ಬಾಯಿ ಬಿಟ್ಟರೆ ದೇಶದ ಗತ ಕಾಲ ಕುರಿತು ಚೀರುವ ಜನಕ್ಕೆ ದೇಶದ ಪ್ರಾಚೀನ ಯುಗದ ಹೆಮ್ಮೆಯನ್ನು ಮರಳಿ ಸ್ಥಾಪಿಸಹೊರಟಿದ್ದ ನಳಂದ ವಿಶ್ವವಿದ್ಯಾಲಯದ ಏಳಿಗೆಯ ಬಗ್ಗೆ ಕನಿಷ್ಠ ಬದ್ಧತೆಯೂ ಇರಲಿಲ್ಲ. ದೇಶದ ಅತ್ಯುತ್ತಮ ವಿಶ್ವವಿದ್ಯಾಲಯಗಳ ಗತಿ ಏನಾಗತೊಡಗಿತ್ತೋ ಅದೇ ಗತಿ ಜಗತ್ತಿನ ವಿಶ್ವವಿದ್ಯಾಲಯಗಳಲ್ಲೇ ವಿಶಿಷ್ಟವಾಗಲು ಹೊರಟಿದ್ದ ನಳಂದ ವಿಶ್ವವಿದ್ಯಾಲಯಕ್ಕೂ ಬರತೊಡಗಿತು. ಈ ವಿವರಗಳನ್ನೆಲ್ಲ ಅಮರ್ತ್ಯ ಸೇನರ ‘ದ ಕಂಟ್ರಿ ಆಫ್ ಫಸ್ಟ್ ಬಾಯ್ಸ್’ ಪುಸ್ತಕದಲ್ಲಿ ಓದುತ್ತಿದ್ದರೆ ಕೇವಲ ಹತ್ತು ವರ್ಷಗಳಲ್ಲಿ ಇಂಡಿಯಾಕ್ಕೆ ಒದಗಿದ ಭೀಕರ ಬೌದ್ಧಿಕ ದುರಂತ ಕಂಡು ದುಗುಡ ಆವರಿಸತೊಡಗುತ್ತದೆ.
ಆದರೂ ನಳಂದದ ‘ಗಡಿಗೆರೆಗಳಿಲ್ಲದ ಜ್ಞಾನೋದಯ; ಎಲ್ಲರಿಗೂ ದಕ್ಕುವ ಜ್ಞಾನೋದಯ’ ಸ್ವತಂತ್ರ ಭಾರತದಲ್ಲಿ ಹಲವು ದಶಕಗಳ ಕಾಲ ಸಾರ್ವಜನಿಕ ವಿಶ್ವವಿದ್ಯಾಲಯಗಳ ಮೂಲ ಗುರಿಯಾಗಿತ್ತು ಎಂಬುದನ್ನು ಇವತ್ತು ಮತ್ತೆ ನೆನೆಯಲೇಬೇಕಾಗಿದೆ. ‘ಸ್ವಾಯತ್ತ’ ಎಂದುಕೊಳ್ಳುವ ಅನೇಕ ಪ್ರೈವೇಟ್ ಸಂಸ್ಥೆಗಳು ಹಣವಿದ್ದವರಿಗೆ, ಹಣ ಬರುತ್ತದೆಂದು ಹೇಳಲಾದ ‘ಜ್ಞಾನ’ವನ್ನು ಹಂಚತೊಡಗಿರುವ ಕಾಲ ಇದು. ಇಲ್ಲಿ ನಳಂದದ ‘ಗಡಿಗೆರೆಗಳಿಲ್ಲದ ಜ್ಞಾನೋದಯ’ಕ್ಕಾಗಲೀ, ‘ಎಲ್ಲರ ಜ್ಞಾನೋದಯ’ಕ್ಕಾಗಲೀ ಅವಕಾಶವೇ ಇಲ್ಲ. ಇವತ್ತಿಗೂ ದೇಶದ ಲಕ್ಷಾಂತರ ಕೆಳ ಮಧ್ಯಮವರ್ಗಗಳ ಮಕ್ಕಳ ಪಾಲಿಗೆ ಇರುವುದು ಸಾರ್ವಜನಿಕ ವಿಶ್ವವಿದ್ಯಾಲಯಗಳೇ. ಆದರೆ ಸಾರ್ವಜನಿಕ ವಿಶ್ವವಿದ್ಯಾಲಯಗಳು ಖಾಸಗಿ ವಲಯದ ಲಾಭಕೋರ ಮನಸ್ಸಿನ ಉಡಾಫೆ ಯೋಜನೆಗಳಿಗೆ ಬಲಿಯಾಗತೊಡಗಿವೆ.
ಸರ್ಕಾರಗಳ ದುರುಳ ಹಸ್ತಕ್ಷೇಪ, ನೇಮಕಾತಿಗಳ ಭಷ್ಟಾಚಾರ ಇತ್ಯಾದಿಗಳು ವಿಶ್ವವಿದ್ಯಾಲಯಗಳ ಪತನದ ಮೂಲದಲ್ಲಿರುವುದು ನಿಜ; ಆದರೆ ಈ ಪತನಕ್ಕೆ ವಿಶ್ವವಿದ್ಯಾಲಯಗಳ ಒಳಗಿದ್ದೇ ಅವುಗಳ ಸಾವಿಗೆ ಕಾರಣರಾದವರ ಕೊಡುಗೆಯೇನೂ ಕಡಿಮೆಯಿಲ್ಲ. ವಿಶ್ವವಿದ್ಯಾಲಯಗಳಲ್ಲಿ ದೊಡ್ಡ ಮಟ್ಟದ ಬೋಧಕ, ಬೋಧಕಿಯರಿಲ್ಲ ಎನ್ನುವ ರಾಗ ಹಳೆಯದು; ಆದರೆ ಅಳಿದುಳಿದ, ‘ಅಳಿವಿನಂಚಿನಲ್ಲಿರುವ ಸಂತತಿ’ (‘ಎನ್‌ಡೇಂಜರ‍್ಡ್ ಸ್ಪೀಸೀಸ್’)ಗಳಂತಿರುವ ಧೀಮಂತರನ್ನು ಪೊರೆಯುವ, ರಕ್ಷಿಸುವ ಕೆಲಸ ನಡೆಯುತ್ತಲೇ ಇರಬೇಕಾಗುತ್ತದೆ.
ಕಾರಣ, ಇಡೀ ವ್ಯವಸ್ಥೆಯನ್ನೇ ಜಡಗೊಳಿಸಿ ನಾಶ ಮಾಡುವ ವಿದ್ಯಾವಿರೋಧಿ ಫ್ಯಾಸಿಸ್ಟ್ ಶಕ್ತಿಗಳು ಸುತ್ತ ವಿಜೃಂಭಿಸುತ್ತಿರುವಾಗಲೂ ಪ್ರಯೋಗಾಲಯಗಳಲ್ಲಿ ಹೊಸ ಸಂಶೋಧನೆಗಳಲ್ಲಿ ತೊಡಗಿರುವ ವಿಜ್ಞಾನಿಗಳಿದ್ದಾರೆ; ಆರ್ಥಿಕತೆಯ ಬಗ್ಗೆ, ಸಮಾಜ, ಸಾಹಿತ್ಯ, ಸಂಸ್ಕೃತಿಗಳ ಬಗ್ಗೆ ಆಳವಾದ ಸಂಶೋಧನೆ-ಚಿಂತನೆ ನಡೆಸುತ್ತಾ, ಓದುತ್ತಾ, ಬರೆಯುತ್ತಾ ಇರುವ ಅಧ್ಯಾಪಕ, ಅಧ್ಯಾಪಕಿಯರು ಇನ್ನೂ ಇಲ್ಲಿದ್ದಾರೆ. ಮಕ್ಕಳಿಗೆ ಉತ್ತಮ ಸಂಶೋಧನಾ ಕ್ರಮಗಳನ್ನು, ಸಾಹಿತ್ಯ ವಿಮರ್ಶೆಯ ಕ್ರಮಗಳನ್ನು ಗಂಭೀರವಾಗಿ ಹೇಳಿಕೊಡುತ್ತಿರುವವರು ಇನ್ನೂ ವಿಶ್ವವಿದ್ಯಾಲಯಗಳಲ್ಲಿದ್ದಾರೆ. ಆದರೆ ಇಂಥ ಗಂಭೀರ ಮಂದಿಗೂ ತಮ್ಮ ಸಂಖ್ಯೆ ಹೆಚ್ಚು ಇಲ್ಲ; ತಮ್ಮಿಂದ ಏನಾದೀತು ಎಂಬ ಭಾವ ಮುತ್ತುತ್ತಿರುವುದು ಆತಂಕಕಾರಿಯಾಗಿದೆ.
ಇಂಥ ಅಧೀರ ಮನಸ್ಥಿತಿಯ ಜಡರು ಹೊಸ ತಲೆಮಾರುಗಳಿಗೂ ತಮ್ಮ ಹತಾಶೆ, ಜಡತೆಗಳನ್ನು ಅಂಟಿಸತೊಡಗುತ್ತಾರೆ. ಪ್ರತಿ ತಲೆಮಾರಿನಲ್ಲೂ ಮುಕ್ತ ಮನಸ್ಸಿನ, ಹೊಸದನ್ನು ಕಲಿತು ತಮ್ಮ ಟೀಚಿಂಗಿಗೆ ಅಳವಡಿಸಿಕೊಳ್ಳಲು ಬಯಸುವ, ಗಂಭೀರ ಅಧ್ಯಾಪಕ, ಅಧ್ಯಾಪಕಿಯರಿರುತ್ತಾರೆ. ನುರಿತವರು ಹೊಸ ಹೊಸ ಅಧ್ಯಯನ ಕ್ರಮ, ಬೋಧನಾ ಕ್ರಮಗಳನ್ನು ಹೇಳಿಕೊಟ್ಟರೆ ಅವುಗಳಿಂದ ಹೊಸ ಟೀಚರುಗಳು ಸ್ಫೂರ್ತಿಗೊಂಡು ಹೊಸ ಉತ್ಸಾಹದಿಂದ ತರಗತಿಗಳಿಗೆ ಮರಳಬಲ್ಲರು. ಒಬ್ಬ ಮೇಡಂ, ಒಬ್ಬ ಮೇಷ್ಟ್ರು ಕೂಡ ತರಗತಿಗಳಲ್ಲಿ ಏನನ್ನಾದರೂ ಸೃಷ್ಟಿಸಬಲ್ಲರು ಎಂಬ ಬಗ್ಗೆ ಒಂದು ಸಮಾಜ ಎಂದೂ ನಂಬಿಕೆ ಕಳೆದುಕೊಳ್ಳಬಾರದು.
ಅದಿರಲಿ. ಅಮರ್ತ್ಯ ಸೇನ್ ಮತ್ತು ಏಷ್ಯಾದ ದೊಡ್ಡ ವಿದ್ವಾಂಸರು ಹೊರ ಹೋಗುವಂತೆ ಮಾಡಿದ ಮೇಲೆ ನಳಂದ ವಿಶ್ವವಿದ್ಯಾಲಯದ ಹೊಸ ಕಟ್ಟಡವೇನೋ ಬಂದಿದೆ. ಜ್ಞಾನವಿರೋಧಿಗಳ ಈ ಕಾಲದಲ್ಲಿ ನಳಂದದ ಆತ್ಮ ಹಾಗೂ ಕನಸು ಆ ಕಟ್ಟಡದಲ್ಲಿ ನೆಲೆಸುವ ಲಕ್ಷಣ ಸದ್ಯಕ್ಕಂತೂ ಕಾಣುತ್ತಿಲ್ಲ. ಆದರೇನಂತೆ, ಬುದ್ಧದರ್ಶನದಿಂದ ಹುಟ್ಟಿದ ನಳಂದ ವಿಶ್ವವಿದ್ಯಾಲಯದ ಕನಸು, ಕಲ್ಪನೆ ಸದಾ ನಮ್ಮೊಳಗಿರಲೇಬೇಕಾಗುತ್ತದೆ.
Comments
12 Comments
| ಸತೀಶ್ ಎ ಎಂ
ಉತ್ತಮವಾದ ಲೇಖನ ಭಾರತದ ನಳಂದ ವಿಶ್ವವಿದ್ಯಾಲಯ ಪ್ರಪಂಚದಲ್ಲಿಯೇ ಸ್ಥಾಪಿತವಾದ ಮೊದಲ ವಿಶ್ವವಿದ್ಯಾಲಯ ಎಂಬುದು ಹೆಮ್ಮೆಯ ಸಂಗತಿ ಕಾಲಾಯ ತಸ್ಮೈ ನಮಃ ಎಂಬಂತೆ ನಶಿಸಿದ್ದ ವಿಶ್ವವಿದ್ಯಾಲಯ ಪುನರ್ ಸ್ಥಾಪಿತವಾದಂತೆ ಮುಂದೊಂದು ದಿನ ಶೈಕ್ಷಣಿಕ ಚಟುವಟಿಕೆಗಳ ಕನಸು ನನಸುಗೊಳ್ಳುತ್ತದೆ.. ನಂಬಿಕೆಯಿಂದ ತಾಳ್ಮೆಯಿಂದ ಕಾಯುವ ಅಗತ್ಯವಿದೆ. ಎಂಬುದನ್ನು ಸೂಕ್ಷ್ಮವಾಗಿ ಅಭಿವ್ಯಕ್ತವಾಗಿರುವ ಲೇಖಕರ ಚಿಂತನೆಗಳಿಗೆ ನನ್ನದೊಂದು ನಮನ..
| Vishukumar N R
ನಳಂದ ವಿಶ್ವವಿದ್ಯಾಲಯದ ಪುನರುತ್ಥಾನದ ಪರಿಕಲ್ಪನೆಯನ್ನು ಮಾಡಿದ ಮನಮೋಹನ ಸಿಂಗ್ ಅವರ ಮುಂಗಾಣ್ಕೆಗೆ ಶರಣು. ಪ್ರತಿನಿತ್ಯ ಅಧಿಕಾರಕ್ಕಾಗಿ ಹಪಹಪಿಸುತ್ತಾ ನೈತಿಕವಾಗಿ ನಶಿಸಿಹೋಗಿರುವ ಈ ರಾಜಕೀಯ ವ್ಯವಸ್ಥೆಯಲ್ಲಿ ನಳಂದ ವಿಶ್ವ ವಿದ್ಯಾಲಯ ನಳ ನಳನಳಿಸಿದರೆ ಅದೊಂದು ಜಗತ್ತಿನ ಅಚ್ಚರಿಯಾಗುತ್ತದೆ ; ನವಭಾರತದ ಹೆಮ್ಮೆಯಾಗುತ್ತದೆ . .
| ಗುರು ಜಗಳೂರು
ಸರ್ ಮೂಕನಾಯಕ ತಡವಾಗಿ ಓದಿದೆ.ಎಷ್ಟು ಒಳ್ಳೆಯ ಲೇಖನ.ಕೊಲ್ಹಾಪುರದ ಶಾಹು ಮಹಾತಾಜರ ಅರಮನೆ ನೋಡಿದ್ದೇನೆ.ಕೊಲ್ಹಾಪುರದಲ್ಲಿ ಶಾಹು ಮಹರಾಜ್ ಬಗ್ರ್ಗೆ ಭಾರೀ ಗೌರವವಿದೆ.\r\nನಳಂದದಲ್ಲಿ ಚೀನಾದ ಹುಯೆನ್ ತ್ಸಾಂಗ್ ಇಷ್ಟು ದಿನ ಯಾತ್ರಿಕನೆಂದೇ ತಿಳಿದಿದ್ದೆವು.ಅವನು ಅದರ ವಿದ್ಯಾರ್ಥಿ ಎಂದು ತಿಳಿದು ಆಶ್ಚರ್ಯವಾಯಿತು.ಇಲ್ಲಿ ಸಾಹಿತ್ಯದಲ್ಲಿ ರಾಜಕಾರಣ ಖಂಡಿತ ಇದೆ.\r\nಇತ್ತೀಚಿನ ದಿನಗಳಲ್ಲಿ ಎಡ ಮತ್ತು ಬಲ ಪಂತೀಯರು ತಮ್ಮ ವಿಚಾರವೇ ಸರಿ ಎಂದು ಸಾಹಿತ್ಯ ಗೋಷ್ಟಿಗಳಲ್ಲಿ ಮಾತನಾಡುತ್ತಾರೆ. ನಮ್ಮಂಥ ಮದ್ಯಮ ಪಂತೀಯರಿಗೆ ಇದು ಕಷ್ಡ. ಎರಡೂ ಸಂಘಟನೆಗಳಲ್ಲಿ ಒಳ್ಳೆಯ ಅಂಶಗಳು,ಕೆಟ್ಟ ಅಂಶಗಳು ಇವೆ.( ಎಡದ ನಕ್ಸಲಿಂಸಂ ಬಗೆಗಿನ ಅನುಕಂಪ ಅಪಾಯಕಾರಿ ,ಜೀವನಪ್ರೀತಿ ನಾಟಕ,ಸಾಹಿತ್ಯ \r\nಕೋಮು ಸಾಮರಸ್ಯ ಮಾದರಿಯಾಗಿದೆ.ಬಲಪಂತೀಯರ ಕೋಮುವಾದ ಅಪಾಯಕಾರಿ.ಆದರೆ ಅವರ ಅಭಿವೃದ್ಧಿ ಬಗೆಗಿನ ತ್ವರಿತ ನಿರ್ಣಯಗಳು ,ದೇಶಪ್ರೇಮ ಗಮನಿಸಬೇಕಾಗಿದೆ.ಇದು ನಾನು ವೈಯಕ್ತಿಕವಾಗಿ ನೋಡಿದಂತೆ.ಇದರಲ್ಲಿ ತಪ್ಪಿರಬಹುದು) ಇಬೆರಡೂ ಮಘಟನೆಗಳ ನಡುವೆ ಭವಿಷ್ಯದಲ್ಲಿ ಸಾಮರಸ್ಯ ಸಾಧ್ಯವಿಲ್ಲವೇ?\r\nಏಕೆಂದರೆ ಈ ಹಿಂದೆ ಆಳಿದ ಜಡ ,ಭ್ರಷ್ಟ ಸರ್ಕಾರಗಳನ್ನು ನೋಡಿಯೇ ಮತದಾರ ಬದಲಾವಣೆ ಮಾಡಿದ್ದಾನೆ. ಸ್ವಾತಂತ್ರ್ಯಾ ನಂತರ ಹರಿಹರದಲ್ಲಿ ರೇಲ್ವೇಯ ವಿದ್ಯುತೀಕರಣ ಬರಬೇಕಾದರೆ ಈಗಿನ ಸರ್ಕಾರವೇ ಬರಬೇಕಾಯಿತು.ಇದು ಒಂದು ಉದಾಹರಣೆ ಮಾತ್ರ.
| Madhu Biradar
ಉತ್ತಮವಾದ ಲೇಖನ. ಇಷ್ಟವಾಯಿತು ಸರ್
| ಡಾ. ನಿರಂಜನ ಮೂರ್ತಿ ಬಿ ಎಂ
\'ನಳಂದದ ಮರುಸೃಷ್ಟಿಯ ಕನಸು\' ದುಃಖ-ದುಮ್ಮಾನಗಳ ಜೊತೆಗೆ, ಆಸೆ-ಭರವಸೆಗಳ ಅಲೆಗಳನ್ನು ಎಬ್ಬಿಸಿತು ಹೃದಯಾಂತರಾಳದ ಸಾಗರದಲ್ಲಿ. ಈ ಲೇಖನ ಸಮಸ್ಯೆಯ ಎಲ್ಲಾ ಮುಖಗಳನ್ನು ಸಮಗ್ರವಾಗಿ ಚರ್ಚಿಸಿದೆ. ಮನಮೋಹನ ಸಿಂಗ್ ಅವರ ಕರ್ತೃತ್ವ ಶಕ್ತಿಗೆ ನಮೋನ್ನಮಃ! ರಾಜಕೀಯ, ಶಿಕ್ಷಣ ಕ್ಷೇತ್ರದಲ್ಲಿ ಪ್ರವೇಶ ಮಾಡಬಾರದು. ಗಡಿಗೆರೆಗಳ ಅಡ್ಡಿಯಿಲ್ಲದೆ ಎಲ್ಲರಿಗೂ ಜ್ಞಾನವನ್ನು ಒದಗಿಸುತ್ತಿದ್ದ ನಮ್ಮ ಹೆಮ್ಮೆಯ, ವಿಶ್ವದ ಪಪ್ರಥಮ, ನಳಂದ ವಿಶ್ವವಿದ್ಯಾನಿಲಯದ ಪತನ ಮತ್ತು ಪುನರುತ್ಥಾನಗಳನ್ನು ಚರ್ಚಿಸಿರುವ ಈ ಲೇಖನ, \'ಜಾತಿ, ಜನಾಂಗ, ಮತ, ಪಂಥ, ತತ್ವ, ಸಿದ್ಧಾಂತ, ಮುಂತಾದ ಯಾವುದೇ ತಾರತಮ್ಯಗಳಿಗೆ ಅವಕಾಶ ಕೊಡದ ಶಿಕ್ಷಣ ಸರ್ವರಿಗೂ ಬೇಕೆಂಬ ದಿಟನಂಬಿಕೆಯನ್ನು ಈ ಲೇಖನ ಸ್ಪಷ್ಟಪಡಿಸುವುದರ ಜೊತೆಗೆ, ಅದರ ಪುನರ್ನಿರ್ಮಾಣದ ಅಗತ್ಯತೆಯನ್ನು ವಿಶದಪಡಿಸುತ್ತದೆ. ಜನಪರ ಸರ್ಕಾರಗಳ ಕಾಳಜಿ-ಪ್ರೋತ್ಸಾಹಗಳ ಕೊರತೆ ಮತ್ತು ಖಾಸಗಿ ವಿದ್ಯಾಸಂಸ್ಥೆಗಳ ಲಾಭಬಡುಕತನದಿಂದಾಗಿ, ಕೆಳವರ್ಗದರಿಗೆ, ಬಡವರಿಗೆ, ಮತ್ತು ಸಾಮಾನ್ಯರಿಗೆ, ಉತ್ತಮ ಶಿಕ್ಷಣವನ್ನು ಕೊಡಲಾಗದೆ, ಎಲ್ಲಾ ಹೆಸರಾಂತ ಸಾರ್ವಜನಿಕ ವಿಶ್ವವಿದ್ಯಾನಿಲಯಗಳೂ ಪತನದ ಹಾದಿಯಲ್ಲಿರುವ ಶೋಚನೀಯ ಸ್ಥಿತಿಯನ್ನು ಕಟ್ಟಿಕೊಡುತ್ತದೆ ಈ ಲೇಖನ. \r\n\r\nಇಷ್ಟೆಲ್ಲಾ ನಕಾರಾತ್ಮಕ ಸನ್ನಿವೇಶದ ಮಧ್ಯೆಯೂ, ನಾವು ನಮ್ಮ ಭರವಸೆಯನ್ನು ಕಳೆದುಕೊಳ್ಳದೆ, ನಮ್ಮೀ ಭುವಿಯ ಪಪ್ರಥಮ ವಿಶ್ವವಿದ್ಯಾನಿಲಯ ನಮ್ಮದೆಂಬ ಹೆಮ್ಮೆಯನ್ನು ಕಾಪಿಟ್ಟುಕೊಂಡು, ಅದರ ಪುನರುತ್ಥಾನಕ್ಕೆ ನಾವೆಲ್ಲರೂ ಶ್ರಮಿಸಬೇಕೆಂಬ ಆಶಯವನ್ನು ಬಿತ್ತುವ ಹುಳಿಯಾರರಿಗೆ ನಮೋನ್ನಮಃ.
| Dr. Narasimhamurthy Halehatti
ಬೌದ್ಧಿಕ ದಾರಿದ್ರ್ಯದಲ್ಲಿ ಮುಳುಗಿಹೋಗಿರುವ ಇಂಡಿಯಾದ ವಿಶ್ವವಿದ್ಯಾಲಯಗಳು ಮತ್ತು ಕಾಲೇಜಿನ ಅಧ್ಯಾಪಕರು, ವಿದ್ಯಾರ್ಥಿಗಳು ಓದಲೇಬೇಕಾದ ಬರಹ ಇದು. ಇದೊಂದು ಅರ್ಥಪೂರ್ಣವಾದ ಚಿಕಿತ್ಸಕ ಹಾಗೂ ಸಕಾಲಿಕ ಲೇಖನ. ಈ ಅಪೂರ್ವ ಬರಹವನ್ನು ಓದಿಸಿದ್ದಕ್ಕೆ ನಿಮಗೆ ಅಭಿನಂದನೆಗಳು.
| Subramanya Swamy
ನಳಂದ ವಿಶ್ವ ವಿದ್ಯಾಲಯದ ಮೌಲ್ಯಗಳ ಮುಂದುವರಿಕೆ ಅನೇಕ ಶಿಕ್ಷಕ, ಶಿಕ್ಷಕಿಯರಲ್ಲಿ ಇನ್ನೂ ಮುಂದುವರಿಯುತ್ತದೆ ಎಂಬುದು ಗಮನಾರ್ಹವಾದ ಮಾತು, ಅಮಾರ್ತ್ಯ ಸೇನ್ ಅಂತವರಿಗೆ ಮಾಡಿದ ಅಗೌರವ ಭಾರತದ ಅಸ್ಮಿತೆ ಗೆ ದಕ್ಕೆ ತಂದಂತೆ. ನಿಮ್ಮ ಈ ಬರಹ ತುಂಬಾ ಮಹತ್ವದ ವಿಚಾರಗಳನ್ನು ನಮಗೆ ಅನಾವರಣ ಮಾಡಿದೆ. ಧನ್ಯವಾದಗಳು ಸಾರ್.\r\n\r\n\r\n\r\n\r\n\r\n
| Dr.Rajanna
ನಳಂದ ವಿಶ್ವವಿದ್ಯಾಲಯ ಕುರಿತ ಲೇಖನ ಅನೇಕ ಒಳನೋಟಗಳನ್ನು ಕಟ್ಟಿಕೊಡುವ ತುಂಬಾ ಮಾಹಿತಿ ಪೂರ್ಣ ಲೇಖನ.
| Dr.Divya
ನಳಂದ ವಿಶ್ವವಿದ್ಯಾನಿಲಯದ ಬಗೆಗಿನ ಅಪರೂಪದ ವಿಚಾರಗಳು, ಅದರ ಉನ್ನತಿ ಮತ್ತು ಅವಜ್ಞೆಗಳ .... ಚಿಂತಿಸುವಂತೆ ಮಾಡಿತು.ಸಮಕಾಲೀನವಾಗಿಯೂ ಗುರುತಿಸಿಕೊಂಡಿರುವುದು ಆಶಾವಾದ ತೋರಿತು.ನಾನು ವಿಶ್ವವಿದ್ಯಾನಿಲಯದಲ್ಲಿ ಸೇವೆ ಸಲ್ಲಿಸುತ್ತಿರುವುದರಿಂದ ಇಂತಹ ಕೆಲತಲ್ಲಣ ಸಮಸ್ಯೆ ಸವಾಲುಗಳನ್ನು... ಬೇರೆ ಸ್ವರೂಪದಲ್ಲಿ ನೋಡಬಹುದು ಎನಿಸಿದೆ.
| ಅನಿಲ್
ನಳಂದ ಕುರಿತ ಬರಹ ಇಷ್ಟವಾಯಿತು. ಹೊಸ ವಿಚಾರ ತಿಳಿಯಿತು
| ಮಹೇಶ್ ಹರವೆ
ಒಳ್ಳೆಯ ಲೇಖನ. ಧನ್ಯವಾದಗಳು.
| Prof. Prabhakar
Haunting legacy of Nalanda and deteriorating conditions of present universities in India are well brought out in your Eye-opener essay. No hope in sight as to who will stem the rot!
Add Comment