ಅಭಿನಂದನಾ ಚಳುವಳಿ  2.0!

‘ಏನ್ ರಾಜು! ನಿಮ್ಮೂರ ಕಡೆ ಹೊಸ ಸಾಹಿತ್ಯ ಚಳುವಳಿ ನಡೀತಾ ಇರುವಂತಿದೆ?’ ಅಂದೆ.

‘ಯಾವ ಚಳುವಳಿ ಸಾರ್?’ ಲೇಖಕ ರಾಜು ಕಣ್ಣರಳಿಸಿದರು.

‘ಅದೇ…ಅಭಿನಂದನಾ ಚಳುವಳಿ!’ 

ರಾಜು ಕಣ್‌ಕಣ್ ಬಿಟ್ಟರು.   

‘ನಿಮ್ಮೂರಿಗೆ ಕಾಲಿಟ್ಟ ಎಂಟು ಗಂಟೆಗಳಲ್ಲಿ ನನಗೆ ಎರಡು ಭಾರೀ ಗಾತ್ರದ ಪುಸ್ತಕ ಕೊಟ್ಟಿದ್ದಾರೆ. ಎರಡೂ ಅಭಿನಂದನಾ ಗ್ರಂಥಗಳೇ! ಹೋದ ಸಲ ಬಂದಾಗಲೂ ಇಂಥದೇ ಪುಸ್ತಕಗಳು ಸಿಕ್ಕಿದ್ದವು! ಇದನ್ನೇ ಅಭಿನಂದನಾ ಚಳುವಳಿ ಅನ್ನೋದು!’

‘ಇದೊಂದು ಹೊಸ ಪದ ಸಿಕ್ತಲ್ಲ ನನಗೆ!’ ಎಂದು ರಾಜು ನಗತೊಡಗಿದರು.

ಕಾರ್ ಡ್ರೈವ್ ಮಾಡುತ್ತಿದ್ದ ರಾಜುವಿನ ನಗು ನಿಲ್ಲುವ ಮೊದಲೇ ದಾರಿಯಲ್ಲಿ ಈ ಅಂಕಣಕಾರನಿಗೊಂದು ಫೋನ್ ಬಂತು. 

‘ಹಲೋ!’

‘ಸಾರ್! ನಮ್ಮ ಫ್ರೆಂಡ್ ರಮೇಶ್... ಅವರು ನಿಮಗೂ ಗೊತ್ತಲ್ಲ... ಅವರು ಮೂವತ್ತನೇ ತಾರೀಕು ರಿಟೈರ್ಡ್ ಆಗ್ತಾ ಇದಾರೆ...’

‘ಛೇ! ಹಾಗಾಗಬಾರದಿತ್ತು!’

‘ಅದೇ ಸಾರ್! ಅವರನ್ನು ಬೀಳ್ಕೊಡಲು ಒಂದು ಪುಸ್ತಕ ತರ‍್ತಾ ಇದೀವಿ...’

‘ಗುಡ್!’

‘ಆ ಪುಸ್ತಕಕ್ಕೆ...’

‘ಬರೆಯೋದು ಕಷ್ಟ!’

‘ಪರವಾಗಿಲ್ಲ. ನೀವು ಹಿಂದೆ ನಿಮ್ಮ ವೆಬ್‌ಸೈಟಲ್ಲಿ ಸಂಸ್ಕೃತಿ ಬಗ್ಗೆ ಬರೆದಿದೀರಲ್ಲ ಆ ಲೇಖನ  ಬಳಸಿಕೊಂಡಿದೀವಿ...’

‘ಫೈನ್!’ 

ನಿಜಕ್ಕೂ ಆನಂದವಾಗಿತ್ತು. ಕಾರಣ, ಗೆಳೆಯರನ್ನು ‘ಅಭಿನಂದಿಸಿ’ ಲೇಖನ ಬರೆಯಲು ಕೇಳಲಿಲ್ಲ! 

ಯಾಕೆಂದರೆ, ಇವತ್ತಿಗೂ ನನಗೆ ದುಃಸ್ವಪ್ನದಂತೆ ಕಾಡುವ ಬರವಣಿಗೆಯ ಕೋರಿಕೆಗಳೆಂದರೆ  ಅಭಿನಂದನಾ ಗ್ರಂಥಗಳ ಬರವಣಿಗೆಗಳು; ನನ್ನನ್ನು ಗಡ ಗಡ ನಡುಗಿಸುವ ಸಭೆಗಳೆಂದರೆ ಅಭಿನಂದನಾ ಸಮಾರಂಭಗಳು!

ಇದೇನೂ ಕಠೋರ ವ್ರತವಲ್ಲ. ಸಹಜವಾದ ಪ್ರೀತಿ, ಅಭಿಮಾನ ಉಕ್ಕಿದರೆ ಗಂಟೆಗಟ್ಟಲೆ ಯಾರ ಬಗ್ಗೆಯಾದರೂ ಮಾತಾಡಬಹುದು; ಪುಟಗಟ್ಟಲೆ ಬರೆಯಬಹುದು. ಅವು ಅಭಿನಂದನೆಗಳೇ ಆಗಿರಬೇಕೆಂದಿಲ್ಲ; ಅವೆಲ್ಲ ಮುಕ್ತವಾಗಿ ಗೆಳೆಯ, ಗೆಳತಿಯರ ಬಳಗದಲ್ಲಿ ಮಾತಾಡುವ ರೀತಿಯಲ್ಲಿರಬೇಕು. ಅಲ್ಲಿ ಏನು ಹೇಳಿದರೂ ಮಾಫಿ ಎನ್ನುವಂತಿರಬೇಕು. ಕಳೆದ ವರ್ಷ ಗೆಳೆಯ ಪ್ರಕಾಶ ಮಂಟೇದ ಬರೆದ ಕವನಗಳ ಸಂಕಲನ ‘ಕಾಮ ಕಸ್ತೂರಿ ಬನ’ ಪುಸ್ತಕ ಬಿಡುಗಡೆಯ ಸಂದರ್ಭದಲ್ಲಿ ಮಾತಾಡುತ್ತಿದ್ದಾಗ ನನಗೆ ಹಾಗೆನ್ನಿಸಿತು: 

ವೇದಿಕೆಯ ಮೇಲೆ ನೆಲ್ಲುಕುಂಟೆ ವೆಂಕಟೇಶ್, ಬಂಜಗೆರೆ ಜಯಪ್ರಕಾಶ್, ಚಾಂದಿನಿ, ರವಿ ಈಚಲಮರ ಥರದ ಆಪ್ತರು; ಎದುರಿಗೆ ಕೂತಿದ್ದವರೆಲ್ಲ ಗೆಳೆಯ ಗೆಳತಿಯರು; ಪ್ರೀತಿಯ ವಿದ್ಯಾರ್ಥಿ ವಿದ್ಯಾರ್ಥಿನಿಯರು...ಬ್ರೇಕಿಲ್ಲದ ಮುಕ್ತ ಮಾತು- ಅದೂ ಕಾಮ ಕಸ್ತೂರಿ ಕುರಿತು; ಮುಕ್ತ ಮಾತಿಗೆ ತಕ್ಕ ವಸ್ತು! 

ಅದಿರಲಿ! ಮೊನ್ನೆ ಜಿಲ್ಲೆಯೊಂದರಲ್ಲಿ ಸುತ್ತಾಡುತ್ತಿದ್ದಾಗ ಎಂದಿನಂತೆ ಗೆಳೆಯರು, ಹಿರಿಯರು ತಂತಮ್ಮ ಪುಸ್ತಕಗಳನ್ನು ಕೊಟ್ಟರು. ಅವುಗಳಲ್ಲಿ ಎರಡು ಅಭಿನಂದನಾ ಗ್ರಂಥಗಳಿದ್ದವು. ಅವನ್ನು ನೋಡನೋಡುತ್ತಾ ನನ್ನ ಬಾಯಿಂದ ‘ಅಭಿನಂದನಾ ಚಳುವಳಿ’ ಎಂಬ ಬಣ್ಣನೆ ಹೊರಬಿದ್ದಿತ್ತು! ‘ಅಭಿನಂದನಾ ಚಳುವಳಿ’ ಎಂಬ ಬಣ್ಣನೆ ನನಗೆ ಹೊಳೆದು ಹತ್ತಿರ ಹತ್ತಿರ ಇಪ್ಪತ್ತು ವರ್ಷವಾಗಿತ್ತು!

ಅದಾಗಿದ್ದು ಹಿಂದೊಮ್ಮೆ ಸಾಹಿತ್ಯ ಪರಿಷತ್ತು ಅನಂತಮೂರ್ತಿಯವರ ಹುಟ್ಟುಹಬ್ಬವನ್ನು ಆಚರಿಸಿದಾಗ. ಅನಂತಮೂರ್ತಿಯವರೇನೂ ನನ್ನಿಂದ ಅಭಿನಂದನೆ ನಿರೀಕ್ಷಿಸಿರಲಿಲ್ಲ.

ಅದೇ ಆಗ ಅನಂತಮೂರ್ತಿಯವರಿಗೆ ಓಪನ್ ಹಾರ್ಟ್ ಸರ್ಜರಿ ಆಗಿತ್ತು. ಆದರೂ ಅವರು ಆ ಸಭೆಗೆ ಬಂದರು. ಇದ್ದಕ್ಕಿದ್ದಂತೆ ನನ್ನ ಭಾಷಣದ ನಡುವೆ, ‘ಕನ್ನಡ ಸಾಹಿತ್ಯದಲ್ಲಿ ನವೋದಯ, ಪ್ರಗತಿಶೀಲ, ನವ್ಯ, ದಲಿತ, ಬಂಡಾಯ… ಯಾವ ಚಳುವಳಿಗಳೂ ನಡೆಯುತ್ತಿಲ್ಲ; ಈಗ ಕನ್ನಡದಲ್ಲಿ ನಡೆಯುತ್ತಿರುವ ಚಳುವಳಿ ಒಂದೇ… ಅಭಿನಂದನಾ ಚಳುವಳಿ!’ ಎಂದೆ.

ಅನಂತಮೂರ್ತಿ ಮನಸಾರೆ ನಕ್ಕರು. ಅವರು ನಿರಾಳವಾಗಿ ನಕ್ಕಿದ್ದರಿಂದ, ಅನಂತರ ಅವರ ಬಗ್ಗೆ ಅನ್ನಿಸಿದ ಸರಿ, ತಪ್ಪುಗಳನ್ನೆಲ್ಲ ಮಾತಾಡಿದೆನೆಂದು ಕಾಣುತ್ತದೆ! 

ನಂತರ ಅನಂತಮೂರ್ತಿ ಮಾತು ಶುರು ಮಾಡಿದಾಗ ನನ್ನತ್ತ ತಿರುಗಿ ಮತ್ತೆ ಕೇಳಿದರು: 

‘ಅದೇನು ಚಳುವಳಿ ನೀನು ಹೇಳಿದ್ದು?’

‘ಅಭಿನಂದನಾ ಚಳುವಳಿ ಸಾರ್!’ ಎಂದೆ. 

ಅನಂತಮೂರ್ತಿ ಮತ್ತೆ ನಕ್ಕರು. ಅವರ ಆರಾಮ್ ನಗೆ ನೋಡಿ ಅವರ ಮೇಲೆ ಏನೇನೋ ಮಾತಾಡಿದ್ದ ನನಗೂ ಆರಾಮೆನ್ನಿಸಿತು! 

ಇದಾದ ಕೆಲ ವರ್ಷಗಳ ನಂತರ ಪ್ರಜಾವಾಣಿಯವರು ನನಗೆ ಅಂಕಣ ಬರೆಯಲು ಹೇಳಿದಾಗ ಬರೆದ ಮೊದಲ ಲೇಖನದ ಶೀರ್ಷಿಕೆಯೇ ‘ಕ್ಷಮಿಸಿ! ಇದು ಅಭಿನಂದನಾ ಚಳುವಳಿಗಳ ಕಾಲ!’ 

ಆ ಅಂಕಣ ಬರೆದು ಹತ್ತು ವರ್ಷವಾಯಿತು. ಮತ್ತೆ ಓದಿ ನೋಡೋಣವೆಂದರೆ, ‘ಅಳಿಸಲಾಗದ ಲಿಪಿಯನು ಬರೆಯಬಾರದು’ ಎಂಬ ಅಲ್ಲಮ ಪ್ರಭುಗಳ ವಿಷಾದ, ತಾಕೀತು ನೆನಪಾಯಿತು; ದಶಕದ ಕೆಳಗೆ ಬರೆದ ಆ ಅಂಕಣ ಲಿಪಿಯನ್ನು ಬೆದರುತ್ತಲೇ ನೋಡಿದೆ: ಅದು ಅಂದಿನ ಸತ್ಯವಾಗಿತ್ತು. ಆದರೇನಂತೆ! ಇವತ್ತು ಅಭಿನಂದನಾ ಚಳುವಳಿ ಕುರಿತು ಬರೆಯುವಾಗಲೂ ಸ್ಥಿತಿಯೇನೂ ಬದಲಾದಂತಿರಲಿಲ್ಲ. ಅಭಿನಂದನಾ ಚಳುವಳಿ ಮುಂದುವರಿಯುತ್ತಲೇ ಇದೆ! 

ಹೀಗೆನ್ನಲು ಕಾರಣವಿದೆ: ಮೊನ್ನೆ ತಾನೇ ಲೇಖಕರೊಬ್ಬರ ಅಭಿನಂದನಾ ಗ್ರಂಥದ ಆಹ್ವಾನ ಪತ್ರಿಕೆ ನೋಡಿದೆ: ಸಂಘಟನೆಯ ಹೆಸರು ‘ಪ್ರೊಫೆಸರ್ ಚಂದ್ರಪ್ಪರವರ ಅಭಿಮಾನಿ ಬಳಗ.’  

ಪರವಾಯಿಲ್ಲ! ಈ ಕಾಲದಲ್ಲಿ ಡಾಕ್ಟರ್ ರಾಜ್‌ಕುಮಾರ್ ಅವರಂತೆ ಲೇಖಕರಿಗೂ ಅಭಿಮಾನಿ ಬಳಗಗಳಿವೆ; ಅಂದರೆ, ಕನ್ನಡ ಸಾಹಿತ್ಯ ಪ್ರಗತಿಯ ಹಾದಿಯಲ್ಲಿದೆ! ’ಲಾಂಗ್ ಲಿವ್ ಅಭಿನಂದನಾ ಮೂವ್‌ಮೆಂಟ್’ ಎಂಬ ಉದ್ಗಾರ ಸಣ್ಣಗೆ ಹೊರಟಿತು!

ಕೊನೆಯದಾಗಿ, ಈ ಅಭಿನಂದನಾ ಗ್ರಂಥಗಳ ಶೈಲಿಯ ಬಗ್ಗೆ ಹಿಂದೊಮ್ಮೆ ಬರೆದ ಟಿಪ್ಪಣಿಗಳ ಸಾರ: 

ಅದು ಹೇಗೋ ಏನೋ, ‘ಅಭಿನಂದನೆ’ ಎಂಬ ಶಬ್ದದಿಂದ ಹಿಡಿದು ಅಂಥ ಪುಸ್ತಕಗಳಲ್ಲಿನ ಬರವಣಿಗೆಯವರೆಗೂ ಸಂಸ್ಕೃತವೇ ಎದ್ದು ಕಾಣುತ್ತಿರುತ್ತದೆ! ದೇವ, ದೇವಿಯರ ಸ್ತೋತ್ರಗಳು ಸಂಸ್ಕೃತದಲ್ಲಿ ಹೆಚ್ಚು ಸೃಷ್ಟಿಯಾಗಿರುವುದರಿಂದ ಹೊಗಳಿಕೆಗೆ ಸಂಸ್ಕೃತವೇ ಸರಿ ಎಂಬ ನಂಬಿಕೆ ಈಗಲೂ ಮುಂದುವರಿದಿರಬಹುದು! ಕುಚೋನ್ನತೆ, ಕುಂಕುಮರಾಗ ಶೋಭಿತೆ ಥರದ ಚಿತ್ರಕ ಬಣ್ಣನೆಗಳು ನೆನಪಾಗುತ್ತವೆ! 

ಅಂದರೆ, ದೈವಸ್ತುತಿಯಲ್ಲಿ ಎತ್ತಿದ ಕೈ ಹಾಗೂ ತೆರೆದ ಬಾಯಾಗಿರುವ ಸಂಸ್ಕೃತ ಭಾಷಾ ಬಳಕೆದಾರರಿಗೂ, ಉತ್ಪ್ರೇಕ್ಷಿತ ವರ್ಣನೆಗಳಿಗೂ ರಕ್ತಸಂಬಂಧ ಇರಬಹುದು! ಹೊಗಳುಭಟರ ‘ತ್ರಿಭುವನ ಮಲ್ಲ’ ‘ಮಾರ್ತಾಂಡ ತೇಜ’ದಂಥ ಹೊನ್ನಶೂಲಗಳನ್ನು ಬರೆದು ನೆಟ್ಟವರು ರಾಜಪುರೋಹಿತರು, ಆಸ್ಥಾನ ಪಂಡಿತರು ತಾನೆ!

ಅದೇನೇ ಇರಲಿ, ಅಭಿನಂದನಾ ಸಾಹಿತ್ಯ `ಪ್ರಕಾರ' ಎನ್ನುವುದು ಒಂದಿದ್ದರೆ, ಅದು ತನ್ನದೇ ಆದ ಕ್ಲೀಷೆಗಳನ್ನು ತಯಾರಿಸಿ ಹಂಚುತ್ತಿರುತ್ತದೆ: ಇಂಥ ಬರಹಗಳನ್ನು ಬರೆಯುವಾಗ ಮನಸ್ಸು ಆ ಸಿದ್ಧ ಪದಗಳ ಸುತ್ತ ಅನಿವಾರ್ಯವಾಗಿ ಸುತ್ತತೊಡಗುತ್ತದೆ. 

ಉದಾಹರಣೆಗೆ, ಅಭಿನಂದಿತ ಮಹನೀಯರನ್ನು (ಹೌದು! ಇದು ಅಕ್ಷರಶಃ ಪುರುಷ ಪ್ರಧಾನ ಪ್ರಕಾರ! ಮಹಿಳೆಯರನ್ನು ಕುರಿತ ಅಭಿನಂದನಾ ಗ್ರಂಥಗಳು ತೀರಾ ತೀರಾ ಕಡಿಮೆ!) ಕುರಿತ ಬರಹಗಳಲ್ಲಿ ಬಳಕೆಯಾಗುವ ಶಬ್ದಗಳನ್ನು ನೋಡಿ: ‘ವಿಶಾಲ ಹೃದಯ’ ‘ನಿಸ್ಪೃಹ ಸೇವೆ’ ‘ಸಮರ್ಪಣಾ ಮನೋಭಾವ’ ‘ಅಜಾತ ಶತ್ರು’…ಈ ಥರದ ಗಾಳಿ ತುಂಬಿದ ಶಬ್ದಗಳ ಗಾಲಿಗಳಿಲ್ಲದೆ ಈ ಪುಸ್ತಕಗಳು ಮುಂದಕ್ಕೆ ಉರುಳುವುದೇ ಇಲ್ಲ! ಇತ್ತಿತ್ತಲಾಗಿ ‘ತಾಯಿ ಕರುಳು’, ’ಆತುಕೊಳ್ಳುವುದು’ ಮುಂತಾದ ಪದಗಳೂ ಈ ಪದಜಾಲದೊಳಗೆ ಸೇರಿಕೊಂಡಂತಿವೆ!

ಕೆಲವು ವರ್ಷಗಳ ಕೆಳಗೆ, ಕೊಂಚ ಉತ್ತಮ ಎನ್ನಬಹುದಾದ ರಾಜಕಾರಣಿಯೊಬ್ಬರ ಬಗ್ಗೆ ಮಿತ್ರರು ಹೊರತಂದ ಅಭಿನಂದನಾ ಗ್ರಂಥಕ್ಕೆ ಕೊಟ್ಟಿದ್ದ ಹೆಸರು: `ಪುಣ್ಯಕೋಟಿ.’ ಪುಸ್ತಕದ ಒಳಗೇನಿದೆಯೆಂದು ನೋಡುವ ಮೊದಲೇ ಪಿಚ್ಚೆನ್ನಿಸಿತು; ಕನ್ನಡನಾಡಿನಲ್ಲಿ ನೂರಾರು ವರ್ಷಗಳಿಂದ ಹಬ್ಬಿರುವ `ಪುಣ್ಯಕೋಟಿ' ಎಂಬ ಕನ್ನಡ ಜಾನಪದದ ಅರ್ಥಪೂರ್ಣ ರೂಪಕ ಏಕ್‌ದಂ ಕುಬ್ಜವಾದಂತೆ ಕಂಡಿತು; ಮನಸ್ಸು ಖಿನ್ನವಾಯಿತು.   

‘ಪುಣ್ಯಕೋಟಿ’ ರೂಪಕದ ಬಿಡುಬೀಸು ಬಳಕೆ ಕುರಿತು ಬರೆದ ಕೆಲ ವರ್ಷಗಳ ನಂತರ ಬೆಂಗಳೂರಿನ ಜೆ.ಪಿ. ನಗರದ ಸ್ಕೂಲೊಂದರ ಎದುರಿಗೆ ಕಂಡ ಬೋರ್ಡು: ‘ಪುಣ್ಯಕೋಟಿ ಚಿಟ್ ಫಂಡ್ಸ್!’ 

ಈ ಬೋರ್ಡು ನೋಡಿದ ಮೇಲೆ ಗೆಳೆಯರು ಹಿಂದೆ ಅಭಿನಂದನಾ ಗ್ರಂಥಕ್ಕೆ ಕೊಟ್ಟ ‘ಪುಣ್ಯಕೋಟಿ’ ಎಂಬ ಹೆಸರು ಎಷ್ಟೋ ಪರವಾಯಿಲ್ಲ ಎನ್ನಿಸಿತು; ಯಾಕೆಂದರೆ, ಅಲ್ಲಿ ಪುಣ್ಯಕೋಟಿ ರೂಪಕ ಈ ಚಿಟ್‌ಫಂಡ್ಸ್ ನಡೆಸುವವನ ಬೋರ್ಡಿನಷ್ಟು ದುರ್ಬಳಕೆಯಾಗಿರಲಿಲ್ಲ. 

ಕೊನೆಗೆ, ’ಇದೇನು? ಈ ಸಲದ ಅಂಕಣ ಬರಹಕ್ಕೆ ‘ಅಭಿನಂದನಾ ಚಳುವಳಿ: 2.0’ ಎಂಬ ಪೋಸ್ಟ್ ಮಾಡರ್ನ್ ಹೆಸರು!’ ಎಂದು ಬೆರಗಾಗದಿರಿ! ಹಿಂದೊಮ್ಮೆ ಇದೇ ವಸ್ತುವಿನ ಮೇಲೆ ಬರೆದಿದ್ದರಿಂದ ಈ ಅಂಕಣಕ್ಕೆ ನಮ್ಮ ಡಿಜಿಟಲ್ ಹುಡುಗಿಯರ ಶೈಲಿಯಲ್ಲಿ 2.0 ಎಂದು ಹೆಸರಿಟ್ಟೆ. 2.0 ಎಂದು ಹೆಸರಿಟ್ಟರೆ ಇದು ಇಲ್ಲಿಗೆ ಕೊನೆಯಾಗಬಹುದು ಎಂಬ ಆಸೆ!

ಅಭಿನಂದನಾ ಚಳುವಳಿಗೆ ಎಲ್ಲಿಯ ಕೊನೆ! ಇನ್ನೇನು ಹೊರಹೊಮ್ಮಲಿದೆಯಲ್ಲ ಪೇ-ಟಿವಿಗಳ ನಿರ್ಲಜ್ಜ ಅಭಿನಂದನಾ ಚಳುವಳಿ…3.0!

ಬ್ಲಾಗ್ ಫಾಲೋ ಮಾಡಲು ಒಪ್ಪಿ, ಕ್ಲಿಕ್ ಮಾಡಿ; ನೋಟಿಫಿಕೇಶನ್ ಪಡೆಯಿರಿ, ಶೇರ್ ಮಾಡಿ: FOLLOW
ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com 
ಬಿಡುವಾದಾಗ ನೋಡಿ, ಶೇರ್ ಮಾಡಿ:  YOUTUBE LINK 

Share on:


Recent Posts

Latest Blogs



Kamakasturibana

YouTube



Comments

4 Comments



| Gangadhara BM

ತಮ್ಮ ಇಂದಿನ ಬರಹ ಅಭಿನಂದನ ಚಳವಳಿ' ಬಗ್ಗೆ ಮತ್ತಮ್ಮೆ ಆಲೋಚಿಸುವಂತೆ ಮಾಡಿದೆ. ವ್ಯಕ್ತಿ ಆರಾಧನಾ ಪರಂಪರೆಯ ಒಂದು ರೂಪ ಇದು ಅನ್ನಿಸ್ತಾ ಇದೆ ಸರ್.  ಧನ್ಯವಾದಗಳು.

\r\n


| Subramanya Swamy

ನಿಮ್ಮ ಆಲೋಚನೆಗಳು ನಿಜಕ್ಕೂ ಮಹತ್ವದ ಸೂಚನೆ ಎಂದರೆ ತಪ್ಪಾಗಲಾರದು ಏಕೆಂದರೆ ಅಭಿನಂದನೆಗಳು ಮತ್ತು ಆ ರೀತಿ ಸಮಾರಂಭ ಚಳುವಳಿಗೆ ಭಾಗವಾಗಿ ನೋಡಿದಾಗ ಕ್ರಮ ಬೇರೆ ಆಗುತ್ತದೆ. 

\r\n


| Sadanand

Funny and intriguing

\r\n


| ಡಾ. ನಿರಂಜನ ಮೂರ್ತಿ ಬಿ ಎಂ

ಅಭಿನಂದಿಸುವ ಸುಸಂಸ್ಕ್ರತ ನಾಗರೀಕ ಅಭ್ಯಾಸ ತನ್ನ ಘನತೆಯನ್ನು ಕಳೆದುಕೊಂಡಿದೆಯೇನೋ ಎನ್ನುವ ಮಟ್ಟಿಗೆ ವಿಪರೀತವಾಗಿ ಆಚರಿಸಲ್ಪಡುತ್ತಿರುವುದರಿಂದಲೇ ತುಸು ತಮಾಷೆಯಾಗಿ, ಸ್ವಲ್ಪ ವಿಡಂಬನಾತ್ಮಕವಾಗಿ ಅದನ್ನು ಅಭಿನಂದನಾ ಚಳುವಳಿ ಎಂದು ಹೆಸರಿಸಲಾಗಿದೆ. ಅಭಿನಂದನಾ ಗ್ರಂಥಗಳಿಗೆ ಲೇಖನಗಳನ್ನು ಬರೆಯುವ ತ್ರಾಸದಾಯಕ ಕೆಲಸದ ಬಗ್ಗೆ ಹಗುರ ಭಾವದಿಂದ ಹರಟೆ ಹೊಡೆಯುವ ರೀತಿಯಲ್ಲಿ ಬರೆದಿರುವ ಹುಳಿಯಾರರ ಈ ಲೇಖನ ರಂಜನೀಯವಾಗಿದೆ. ಯಾವುದೇ ವಿಧವಾದ ಬರವಣಿಗೆಯಲ್ಲಿ ಹುಳಿಯಾರರು ಸಿದ್ಧಹಸ್ತರು. ಇವರ ಶೈಲಿ ಆಪ್ಯಾಯಮಾನ; ಇವರು ಬಳಸುವ ಭಾಷೆ ಸುಲಲಿತ; ಮತ್ತು ಎತ್ತಿಕೊಳ್ಳುವ ವಿಚಾರ ಪ್ರಚಲಿತ. ಕ್ಷಮಿಸಿ, ಇದು ಅಭಿನಂದನಾ ಗ್ರಂಥಕ್ಕೆ ಬರೆದ ಪ್ರತಿಕ್ರಿಯೆ ಅಲ್ಲ!

\r\n




Add Comment