ಒಂದು ವರ್ಷದ ಗಳಿಕೆ!

ನೋಡನೋಡುತ್ತಿದ್ದಂತೆಯೇ ಒಂದು ವರ್ಷ ಗಳಿಕೆಯಾಗಿದೆ! 

ಒಂದು ವರ್ಷ ಉರುಳಿಹೋಗಿದೆ ಎಂದು ಬರೆಯಲು ಕೈ ಬರಲಿಲ್ಲ. ಇದು ಈಚಿನ ವರ್ಷಗಳಲ್ಲಿ ನನಗೆ ರೂಢಿಯಾಗಿರುವ ಒಂದು ಬಗೆಯ ‘ಪಾಸಿಟೀವ್ ಥಿಂಕಿಂಗ್’ನ ಪರಿಣಾಮವೂ ಇರಬಹುದು!  ಇದೆಲ್ಲ ಬರೆಯಲು ಕಾರಣ-ಅಚಾನಕ್ಕಾಗಿ ೨೦ ಆಗಸ್ಟ್ ೨೦೨೩ ಎಂಬ ದಿನಾಂಕ ನನ್ನ ಕಣ್ಣಿಗೆ ಬಿದ್ದದ್ದು! ಅದು `ಗಾಳಿ ಬೆಳಕು- ೩.೦’ ಮೋಡದ ಬೆನ್ನೇರಿದ ದಿನ! ನೀವು ಓದುತ್ತಿರುವ ಈ ಅಂಕಣ ಶುರುವಾಗಿ ಒಂದು ವರ್ಷವಾಯಿತು. ಇದು ನನ್ನ `ಗಳಿಕೆ’ ಎಂದು ನನಗರಿವಿಲ್ಲದೆಯೇ ಬೆರಳು ಬರೆಯಿತು. 

`ಬೆರಳು ಬರೆಯಿತು’ ಎನ್ನಲು ಈ ಅಂಕಣ ಬರವಣಿಗೆ ನನಗೆ ಮತ್ತೆ ಮತ್ತೆ ಮನವರಿಕೆ ಮಾಡಿಕೊಟ್ಟಿರುವ `ರೈಟಿಂಗ್ ಈಸ್ ಥಿಂಕಿಂಗ್’ ಎಂಬ ಅರಿವು ಕಾರಣ. `ಥಿಂಕ್ ಬಿಫೋರ್ ಯು ಇಂಕ್’ ಎಂಬ ಇಂಗ್ಲಿಷ್ ನಾಣ್ಣುಡಿ ನಿಮಗೆಲ್ಲ ಗೊತ್ತಿರುತ್ತದೆ. ಅದು ಇಂಕ್ ಪೆನ್ನಿನಲ್ಲಿ ಬರೆಯುವ ಕಾಲದ ಕಿವಿಮಾತು; ಎಚ್ಚರಿಕೆ. ನಾಣ್ಣುಡಿಗಳೆಲ್ಲ ನಾನಾರ್ಥ ಕೊಡುವ ರೂಪಕಗಳೇ ತಾನೆ? ಆದ್ದರಿಂದ ಈ ನಾಣ್ಣುಡಿಯನ್ನು ಈಗ ಬೆರಳಿನಲ್ಲಿ ಅಕ್ಷರ ಒತ್ತುವ ಕಾಲದಲ್ಲಿ `ಥಿಂಕ್ ಬಿಪೋರ್ ಯು ಟಚ್’ ಅಥವಾ `ಥಿಂಕ್ ಬಿಫೋರ್ ಯು ಪ್ರೆಸ್’ ಎಂಬ ಎಚ್ಚರ ಉಳಿಸಿಕೊಂಡೇ `ರೈಟಿಂಗ್ ಈಸ್ ಥಿಂಕಿಂಗ್’ ಕೂಡ ನಡೆಯುತ್ತಿರಬೇಕು!

ರೈಟಿಂಗ್ ಈಸ್ ಥಿಂಕಿಂಗ್ ಎಂಬ ಮಾತನ್ನು ಒಪ್ಪಿದ ಜಿಯಾಲಜಿ ಫ್ರೊಫೆಸರ್ ಪ್ರಭಾಕರ್ ತಮ್ಮ ಪಿಎಚ್.ಡಿ. ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಆಗಾಗ್ಗೆ ಹೇಳುತ್ತಿದ್ದ ಮಾತೊಂದನ್ನು ನೆನಸಿಕೊಂಡರು: `ನೀವು ಡಾಟಾ ಸಂಗ್ರಹಿಸಿದ ಮಾತ್ರಕ್ಕೇ ಎಲ್ಲವೂ ಆಗುವುದಿಲ್ಲ. ಬರೆಯಲು ಶುರು ಮಾಡಿದಾಗ, ನೀವು ವ್ಯಾಖ್ಯಾನ ಮಾಡತೊಡಗಿದಾಗ ಮಾತ್ರ ಹೊಸ ಒಳನೋಟಗಳು ಬರುತ್ತವೆ; ಒಂದರ್ಥದಲ್ಲಿ ಬರೆಯುವುದೇ ಆಲೋಚನಾ ಪ್ರಕ್ರಿಯೆ.’

ಜಗತ್ ಸಾಹಿತ್ಯದ ವಿದ್ಯಾರ್ಥಿಯೂ, ಅಧ್ಯಾಪಕನೂ ಆದ ನನಗೆ ಪಶ್ಚಿಮದ ಬರವಣಿಗೆಯ ಎರಡು ಪರಿಕಲ್ಪನೆಗಳು ಪರಿಚಿತ: ೧. ಆಟೊಮ್ಯಾಟಿಕ್ ರೈಟಿಂಗ್- ಅಂದರೆ, ನಮಗರಿವಿಲ್ಲದೆಯೇ ‘ಸ್ಪಿರಿಚುಯಲ್’ ಎಂಬಂತೆ ಮೂಡುವ ಬರವಣಿಗೆ. ೨. ಸ್ಟ್ರೀಮ್ ಆಫ್ ಕಾನ್ಷಿಯಸ್‌ನೆಸ್- ಅಂದರೆ, ನಮ್ಮ ಒಳಗಿರುವುದೆಲ್ಲ ಅಡೆತಡೆಯಿಲ್ಲದೆ ಹರಿವ ಪ್ರಜ್ಞಾಪ್ರವಾಹ. 

ಕನ್ನಡ ವಿಮರ್ಶೆ ಬಳಸಿರುವ ‘ಪ್ರಜ್ಞಾಪ್ರವಾಹ’ ಎಂಬ ಐಡಿಯಾ ಇಂಗ್ಲಿಷಿನ ‘ಸ್ಟ್ರೀಮ್ ಆಫ್ ಕಾನ್ಸಿಯಸ್‌ನೆಸ್’ಗಿಂತ ವಿಸ್ತೃತ ಹಾಗೂ ಅರ್ಥಗರ್ಭಿತ. ಇಂಗ್ಲಿಷಿನಲ್ಲಿ ಅದು ಪ್ರಜ್ಞೆಯ ಹೊಳೆ; ಸ್ಟ್ರೀಮ್. ಆದರೆ ಕನ್ನಡದಲ್ಲಿ ಅದು ಪ್ರಜ್ಞಾಪ್ರವಾಹ! ಈ ಎರಡೂ ಪದಗಳನ್ನು ಕನ್ನಡಕ್ಕೆ ಕೊಟ್ಟಿರುವ ಸಂಸ್ಕೃತ ಭಾಷೆಯ ಆಧುನಿಕ ಸಾಹಿತ್ಯ ವಿಮರ್ಶೆ (ಸಂಸ್ಕೃತದಲ್ಲಿ ಅದು ಬೆಳೆದಿದ್ದರೆ!) ’ಪ್ರಜ್ಞಾಪ್ರವಾಹ’ ಪರಿಕಲ್ಪನೆಯನ್ನು ಹೀಗೆ ಬಳಸಿದೆಯೋ, ಇಲ್ಲವೋ ತಿಳಿಯದು. ವ್ಯಾಸನಿಗೆ ಪ್ರಜ್ಞಾಪ್ರವಾಹ ಎಂಬ ಪರಿಭಾಷೆ ಗೊತ್ತಿಲ್ಲದಿರಬಹುದು. ಆದರೆ ದ್ರೌಪದಿಯ ಒಂದು ಅಪೂರ್ವ ನಿವೇದನೆಯಲ್ಲಿ ಪ್ರಜ್ಞಾಪ್ರವಾಹದ ಹರಿವಂತೂ ಇದ್ದೇ ಇದೆ.

ಸ್ವಗತ, ಪ್ರಜ್ಞಾಪ್ರವಾಹ… ಇವೆಲ್ಲ ಈ ಅಂಕಣ ಬರವಣಿಗೆಯಲ್ಲೂ ಸೇರಿಕೊಂಡು ರೈಟಿಂಗ್ ಈಸ್ ಥಿಂಕಿಂಗ್‌ನ ಅನುಭವ ಈ ಅಂಕಣಕಾರನಿಗೆ ಆಗಾಗ ಆಗುತ್ತಿರುತ್ತದೆ. ಇದು ಎಷ್ಟೋ ಸಲ ಮಿಂಚಿ, ಮೂಡಿ ಮರೆಯಾಗುವ ನಿಗೂಢ ಸೆಲೆಗಳಿಂದ, ಕಾತರದ ಮುಖಗಳಿಂದಲೂ ಪ್ರೇರಣೆ, ಸ್ಫೂರ್ತಿ ಪಡೆಯುತ್ತಿರುತ್ತದೆ! 

ಈ ಬರಹದ ಶುರುವಿನಲ್ಲಿ ಇದು ‘ಗಳಿಕೆ’ ಎಂದೆ. ಇದೇನೂ ಉತ್ಪ್ರೇಕ್ಷೆಯಲ್ಲ…ಓದುಗ ಓದುಗಿಯರು ಇಲ್ಲೇ ಕಣ್ಣೆದುರಿಗಿರುವಂತೆ ಬರೆಯುತ್ತಲೇ ಜಗತ್ತಿನ ದೊಡ್ಡ ಲೇಖಕ ಲೇಖಕಿಯರು, ಅವರ ಬರಹಗಳು, ಪುಸ್ತಕಗಳು; ಅವರ ಜ್ಞಾನದ ಬೆಳಕು, ಅವರ ಅರಿವು…ಈ ಬರವಣಿಗೆಗೆ ಒಡ್ಡೊಡೆದುಕೊಂಡು ನುಗ್ಗಿ ಬಂದಿವೆ. ಬರೆವ ಗಳಿಗೆಯಲ್ಲೇ ಇವೆಲ್ಲ ಮರಳಿ ಮನಸ್ಸಿಗೆ ಬಂದ ರೀತಿ ಅಥವಾ ಮನಸ್ಸಿಗೆ ಕರಕೊಂಡ ಗಳಿಗೆ ನಿಜಕ್ಕೂ ಬೆಲೆ ಕಟ್ಟಲಾಗದ ಗಳಿಕೆ! ಇದು ಎಷ್ಟೋ ಸಲ ಶನಿವಾರ ರಾತ್ರಿ ಅಥವಾ ಭಾನುವಾರ ಬೆಳಗ್ಗೆ ನನ್ನ ಲ್ಯಾಪ್ ಟಾಪಿನ ಮೇಲೆ ಬೆರಳು ಓಡತೊಡಗಿದ ತಕ್ಷಣವೂ ಆಗಿದೆ.

ಈ ಬರಹಗಳನ್ನು ಓದುತ್ತಾ ತುಮಕೂರಿನ ಪ್ರಾಧ್ಯಾಪಕ-ಗೆಳೆಯ ಶಿವಲಿಂಗಮೂರ್ತಿ ಓದುವ ‘ಬೆದೆ’ ಹುಟ್ಟಿದೆ ಎಂದು ಬರೆದಾಗ ಆ ಬಣ್ಣನೆಯ ತಾಜಾತನಕ್ಕೆ ಬೆರಗಾದೆ. ಇಂಗ್ಲಿಷ್ ಮೇಷ್ಟ್ರು ಸುನಿಲ್‌ಗೆ ಈ ಅಂಕಣ ಓದಿ ಬರೆಯುವ ಆಸೆ ಮೂಡಿದಾಗ ಸಾರ್ಥಕ ಭಾವ ಹುಟ್ಟಿತು. ಹಿರಿಯ ಲೇಖಕಿ ಇಳಾ ವಿಜಯಮ್ಮನವರು ‘ನೀವು ಬರೆಯುತ್ತಿಲ್ಲ ನಿಮ್ಮೊಳಗೇ ನೀವು ಪಿಸುಗುಟ್ಟಿಕೊಳ್ಳುತ್ತೀರಿ’ ಎಂದಾಗ; ಹಿಸ್ಟರಿ ಪ್ರೊಫೆಸರ್ ಜಮುನ ‘ಇದು ಇಂಟಿಮೇಟ್ ಕಾನ್ವರ್ಸೇಶನ್’ ಎಂದಾಗ ಚಕಿತನಾದೆ; ‘ಇದು ಸ್ಪರ್ಶ ಬರವಣಿಗೆ’ ಎಂದು ಸ್ತ್ರೀವಾದಿ ಚಿಂತಕಿ ಆಶಾದೇವಿ ಬರೆದಾಗ ಈ ವ್ಯಾಖ್ಯಾನದ ಹೊಸತನಕ್ಕೆ ಮೂಕನಾದೆ…
ಇಂಥ ಹತ್ತಾರು ಪ್ರಸಂಗಗಳು ನೆನಪಾಗುತ್ತವೆ. ವಂದನಾರ್ಪಣೆಯ ಪಟ್ಟಿ ಕೊಟ್ಟು ಎಲ್ಲರಿಗೂ ಮುಜಗರ ಹುಟ್ಟಿಸಲು ಇದೇನೂ ಕೊನೆಯ ಅಂಕಣವಲ್ಲ!

ಪ್ರಕಟವಾಗುವ ಮುನ್ನ ಹತ್ತಲ್ಲ ಇಪ್ಪತ್ತು ಸಲ ಬರೆದು ತಿದ್ದುವ ನನಗೆ ಮುದ್ರಣಗೊಂಡ ಪುಸ್ತಕವನ್ನು ಓದಲು ಹಿಂಜರಿಕೆ…ಅದು ಬರವಣಿಗೆಯ ಪರೀಕ್ಷೆಯ ಕಟ್ಟ ಕಡೆಯ ಕಟಕಟೆಯಲ್ಲಿ ನಿಂತ ಹಾಗೆ! ಆದ್ದರಿಂದಲೋ ಏನೋ, ಈ ಬರಹಗಳನ್ನು ಈಗ ಮತ್ತೆ ಓದಲಿಲ್ಲ; ಈ ಅಂಕಣಗಳ ಐವತ್ತಕ್ಕೂ ಹೆಚ್ಚಿನ ಟೈಟಲ್‌ಗಳನ್ನು ನೋಡುತ್ತಾ ಹೋದೆ…ಇದ್ದಕ್ಕಿದ್ದಂತೆ ೨೦೦೭-೮ರ ನಡುವೆ ‘ಕನ್ನಡ ಟೈಮ್ಸ್‌’ ಪತ್ರಿಕೆಗಾಗಿ ‘ಗಾಳಿ ಬೆಳಕು’ ಬರೆದ ಗಳಿಗೆ ನೆನಪಾಯಿತು. ನಾನು ಬರೆದು ಕೊಡುತ್ತಿದ್ದ ಅಂಕಣಗಳಿಗೆ ಅಪರೂಪದ ಕನ್ನಡ ಕತೆಗಾರ ಮಂಜುನಾಥ ಲತಾ ಕೊಡುತ್ತಿದ್ದ ಟೈಟಲ್‌ಗಳು ನೆನಪಾದವು. ನನ್ನ ಬರಹವೊಂದಕ್ಕೆ ಅವನು ಕೊಟ್ಟ ‘ಧರ್ಮ ಎಂಬ ಮೋಹಕ ಭಯೋತ್ಪಾದನೆ’ ಟೈಟಲ್ ಹುಟ್ಟಿಸಿದ ಪುಳಕ ಇವತ್ತಿಗೂ ನನ್ನಲ್ಲಿದೆ. ಎಂದಾದರೊಂದು ದಿನ ಅವನಿಗೆ ಸೈಡ್ ಹೊಡೆಯುವ ಟೈಟಲ್ ಕೊಡಬೇಕೆಂಬ ಆಸೆ ಬತ್ತಿಲ್ಲ!

ನಿಮ್ಮಲ್ಲಿ ಕೆಲವರಿಗಾದರೂ ಗೊತ್ತಿರಬಹುದು: ಇದು ’ಗಾಳಿ ಬೆಳಕು’ ಅಂಕಣದ ಮೂರನೆಯ ಹುಟ್ಟು. ಅದಕ್ಕೇ ಇದು ಗಾಳಿ ಬೆಳಕು: ೩.೦! ಒಂದು ರಾತ್ರಿ ಇದ್ದಕ್ಕಿದ್ದಂತೆ ಲಂಕೇಶರು ’ಲಂಕೇಶ್ ಪತ್ರಿಕೆ’ಗೆ ಕಾಲಂ ಬರೆಯಲು ಹೇಳಿದಾಗ ನಾನು ಹುಡುಕಿಕೊಂಡ ಟೈಟಲ್ ಇದು. ಮುಂದೆ ಚಂದ್ರಶೇಖರ ಐಜೂರ್ ಸಂಪಾದಕತ್ವದ ‘ಕನ್ನಡ ಟೈಮ್ಸ್’ ವಾರಪತ್ರಿಕೆಗೆ ಮತ್ತೆ ಇದೇ ಟೈಟಲ್ ಬಳಸಿದೆ. ಇವೆರಡೂ ಪತ್ರಿಕೆಗಳ ಅಂಕಣಗಳು ‘ಗಾಳಿ ಬೆಳಕು’ (ಪಲ್ಲವ ಪ್ರಕಾಶನ, ರೂ ೨೦೦) ಪುಸ್ತಕದಲ್ಲಿ ಹಲವು ಮುದ್ರಣಗಳನ್ನು ಕಂಡಿವೆ.

ಈಗ ‘ಗಾಳಿ ಬೆಳಕು’ ಕಳೆದೊಂದು ವರ್ಷದಿಂದ ಈ ವೆಬ್‌ಸೈಟಿನಲ್ಲಿ, ಹಾಗೂ ಈ ಬರಹಗಳನ್ನು ಸಾವಿರಾರು ಓದುಗ, ಓದುಗಿಯರಿಗೆ ತಲುಪಿಸುವ ವಾರ್ತಾಭಾರತಿ ಹಾಗೂ ಇತರ ಕೆಲವು ಪತ್ರಿಕೆಗಳಲ್ಲೂ ಪ್ರಕಟವಾಗುತ್ತಿದೆ. ಈ ಅಂಕಣ ಪ್ರಕಟವಾದ ತಕ್ಷಣ ಶೇರ್ ಮಾಡಿ ಎಲ್ಲೆಡೆ ಹಬ್ಬಿಸುವ ನಿರ್ಮಲ ಮನಸ್ಸಿನ ಗೆಳೆಯ ಗೆಳತಿಯರಿಗೆ; ಓದುಗಿಯರಿಗೆ, ಓದುಗರಿಗೆ; ಮುಖ್ಯವಾಗಿ, ಈ ಅಂಕಣದ ಉಸ್ತುವಾರಿ ನೋಡುವ ಸಮಂತ, ವಿನ್ಯಾಸ ಬಡಿಗೇರ ಎಂಬ ಪ್ರತಿಭಾವಂತ ಹುಡುಗರು ಹಾಗೂ ’ಓಪನ್ ಮೈಂಡ್ಸ್’ ಸಾಹಸಜೀವಿ ಕಿರಣ್‌ಕುಮಾರ್… ಎಲ್ಲರಿಗೂ ನನ್ನ ಪ್ರೀತಿ ಮತ್ತು ಕೃತಜ್ಞತೆ. 

ಚಿಯರ್‍ಸ್!


Share on:

Comments

17 Comments



| Gangadhara BM

ನಮ್ಮ ಪಾಲಿಗೆ ತಾವು \'ಬರಹದ ಬೆರಗೇ\' ಆಗಿದ್ದೀರಿ ಸರ್. ಪ್ರತಿ ವಾರದ ಲಿಖಿತ ಸಂವಹನದಿಂದ ನೀವು ಸದಾ‌ ನಮ್ಮೊಡನಿದ್ದೀರಿ ಎಂದು ಗಾಳಿ ಬೆಳಕು ೩.೦ ದ ವರ್ಷ ಮುಗಿದಿರುವ ಈ ಗಳಿಗೆಯಲ್ಲಿ ಅನ್ನಿಸುತ್ತಿದೆ. ಅಭಿನಂದನೆಗಳು ಸರ್.\r\n\r\nನಾವೇ ಅದೃಷ್ಟವಂತರು.


| ಮಂಜುನಾಥ್ ಸಿ ನೆಟ್ಕಲ್

ಹಲೋ ಸರ್ ಈ ಅಂಕಣ ಇನ್ನೂ ಹಲವಾರು ವರ್ಷಗಳ ಕಾಲ ಗಾಳಿ ಬೀಸುತ್ತಿರಲಿ.... ಬೆಳಕು ಸೂಸುತ್ತಿರಲಿ....ನಮ್ಮ ಅರಿವು ಹೆಚ್ಚಿಸುತ್ತಿರಲಿ... ಧನ್ಯವಾದಗಳು ಸರ್


| sanganagouda

ಹೀಗೆ ನಮ್ಮ ಮನದ ಕುದಿತ ಹದಕ್ಕೆ ಬಂದು ಅಕ್ಪ್ರಷರದ ಪ್ರವಾಹದಿಂದ ಸಿದ್ಧಮಾದರಿಯ ಒಡ್ಡೊಡಿಯಲಿ ಸರ್


| Dr. Mohan Mirle

ಓಹ್! ಬ್ಲಾಗ್ ಬರಹಕ್ಕೆ ವರ್ಷವಾಯಿತೇ. ಬ್ಲಾಗ್ ನ ನಿರಂತರ ಓದುಗನಾದ ನನಗೆ ಕಾಲದ ಈ ದೀರ್ಘತೆಯ ಬಗ್ಗೆ ಎಂದೂ ಅನಿಸಲೇ ಇಲ್ಲ. ನಿಜಕ್ಕೂ ಖುಷಿಯಾಯಿತು. ಸಂಭ್ರಮವೆನಿಸಿತು. ಇದೊಂದು ಪುನಶ್ಚೇತನ ತರಗತಿಯಂತೆ ಪ್ರತಿವಾರ ನಮ್ಮನ್ನು ಎಚ್ಚರಿಸುತ್ತಾ ಇರುವ ಪರಿಗೆ ಬೆರಗಾಗಿದ್ದೇನೆ. ಈ ಅಂಕಣ ನಮ್ಮ ನಿತ್ಯ ಬದುಕಿನ ಭಾಗವಾಗಿದೆ. ಶನಿವಾರ ಬರುತ್ತಿದ್ದಂತೆ ಮೊದಲು ನೆನಪಾಗುತ್ತಿದ್ದುದೇ ನಾಳೆ \'ಗಾಳಿ ಬೆಳಕು\' ಅಂಕಣ, ಈ ಬಾರಿ ಏನು ಬರೆದಿರಬಹುದು, ಯಾವ ಹೊಸ ವಿಚಾರ ನಾಳೆ ನಮಗೆ ಸಿಗಬಹುದು ಎಂಬ ಪುಳಕ. ಮತ್ತು ಬರಹದ ಲಿಂಕ್ ಬಂದ ಕೂಡಲೇ ಅದನ್ನು ಆಪ್ತರೊಂದಿಗೆ ಹಂಚಿಕೊಳ್ಳುವ ತವಕ. ಈ ಒಂದು ಸಮ್ಮೋಹನಕ್ಕೆ ಅಂತೂ ವರ್ಷವಾಗಿದೆ. ಇಲ್ಲಿಂದ ಅನೇಕ ಹೊಸಪಾಠಗಳನ್ನು ಕಲಿತಿದ್ದೇನೆ. ಈ ಅಂಕಣ ನಮಗೆ ಅನೇಕ ಜಗತ್ತಗಳನ್ನು ತೆರೆದು ತೋರಿದೆ. ಇದರಿಂದ ನನ್ನ ಓದಿನ ವ್ಯಾಪ್ತಿ, ಆಲೋಚನೆಯ ಹರಹು ಖಂಡಿತಾ ವಿಸ್ತರಿಸಿದೆ. ನನ್ನಂತೆ ನಾಡಿನಾದ್ಯಂತ ಈ ಬರಹಗಳನ್ನು ಓದುತ್ತಿದ್ದಾರೆ, ಕಲಿಯುತ್ತಿದ್ದಾರೆ, ಪುಳಕಗೊಳ್ಳುತ್ತಿದ್ದಾರೆ. ನಿಮ್ಮ ಸಮಕಾಲೀನರೂ ಸ್ಪಂದಿಸುತ್ತಿದ್ದಾರೆ. ಹೀಗೆ ಸಮಾಜವನ್ನು ಅರ್ಥಪೂರ್ಣ ಸಮ್ಮೋಹನಕ್ಕೆ ಒಳಗು ಮಾಡಿ ಮುನ್ನಡೆಸುವ ನಿಮ್ಮ ಈ ಕಾರ್ಯ ಮನನೀಯ, ಶ್ಲಾಘನೀಯ ಹಾಗೂ ಸಾರ್ಥಕ ಸೇವೆ ಎಂದೇ ಭಾವಿಸಿದ್ದೇನೆ. ನಾಡು ನಿಮ್ಮಿಂದ ಮತ್ತಷ್ಟು, ಮಗದಷ್ಟು ನಿರೀಕ್ಷಿಸುತ್ತಿದೆ. ಖಂಡಿತಾ ಆ ಜವಾಬ್ದಾರಿ ಕೂಡ ನಿಮ್ಮ ಹೆಗಲ ಮೇಲಿದೆ. ಬಹುಶಃ \'ನಾಡೋಜ\' ಪದದ ಅರ್ಥವೂ ಇದೇ ಏನೋ!\r\n


| ಶಿವಲಿಂಗಮೂರ್ತಿ

ಗಾಳಿ ಚಲನೆಯ ಸಂಕೇತವಾದರೆ ಬೆಳಕು ಜ್ಞಾನದ ಪ್ರತೀಕ. ಗಾಳಿ ಬೆಳಕಿನ ಮೋಹಕ ರೂಪಕದ ನಿಮ್ಮ ಬ್ಲಾಗಿ ಬರಹಗಳು ನಮ್ಮನ್ನು ರೋಮಾಂಚನಗೊಳಿಸುತ್ತಿವೆ.(ಇತರೆ ನಿಮ್ಮ ಬರಹಗಳು ಕೂಡ) ಅಂದು ಲಂಕೇಶ್ ಪತ್ರಿಕೆಯಲ್ಲಿನ ಟೀಕೆ-ಟಿಪ್ಪಣಿಗಾಗಿ ಕಾತರಿಸುತ್ತಿದ್ದ ಮನ ಇಂದು ಪ್ರತಿ ಭಾನುವಾರದ ಗಾಳಿ ಬೆಳಕಿನ ಬರಹದ ನಿರೀಕ್ಷೆಯಲ್ಲಿದೆ. ಪ್ರತಿ ವರ್ಷವೂ ಹೀಗೆ ಹುಟ್ಟು ಹಬ್ಬವನ್ನು ಆಚರಿಸೋಣ.ಧನ್ಯವಾಗಳು ಸಾರ್


| ಶಿವಲಿಂಗಮೂರ್ತಿ

ಗಾಳಿ ಚಲನೆಯ ಸಂಕೇತವಾದರೆ ಬೆಳಕು ಜ್ಞಾನದ ಪ್ರತೀಕ. ಗಾಳಿ ಬೆಳಕಿನ ಮೋಹಕ ರೂಪಕದ ನಿಮ್ಮ ಬ್ಲಾಗಿ ಬರಹಗಳು ನಮ್ಮನ್ನು ರೋಮಾಂಚನಗೊಳಿಸುತ್ತಿವೆ.(ಇತರೆ ನಿಮ್ಮ ಬರಹಗಳು ಕೂಡ) ಅಂದು ಲಂಕೇಶ್ ಪತ್ರಿಕೆಯಲ್ಲಿನ ಟೀಕೆ-ಟಿಪ್ಪಣಿಗಾಗಿ ಕಾತರಿಸುತ್ತಿದ್ದ ಮನ ಇಂದು ಪ್ರತಿ ಭಾನುವಾರದ ಗಾಳಿ ಬೆಳಕಿನ ಬರಹದ ನಿರೀಕ್ಷೆಯಲ್ಲಿದೆ. ಪ್ರತಿ ವರ್ಷವೂ ಹೀಗೆ ಹುಟ್ಟು ಹಬ್ಬವನ್ನು ಆಚರಿಸೋಣ.ಧನ್ಯವಾಗಳು ಸಾರ್


| Malleshappa S

ಗಾಳಿಯೊಳಗಣ ಬೆಳಕು, ಬೆಳಕಿನೊಳಗಣ ಗಾಳಿ ಎರಡೂ ಕದಲಿಸಿ ಕಾರ್ಯೋನ್ಮುಖರನ್ನಾಗಿಸುತ್ತಿವೆ.


| Udaykumar Habbu

ಗಾಳಿ‌ ಬೆಳಕು‌ ಆರೋಗ್ಯವಂತ ಬದುಕಿಗೆ ಅಸ್ತಿತ್ವಕ್ಕೆ ಇವೆರಡೂ‌ ಅತ್ಯವಶ್ಯಕ.‌ಗಾಳಿ ಬೆಳಕು ನಮ್ಮ ಮೇಲೆ ಬೀಳುತ್ತಿರಲಿ.ಬ


| HARIPRASAD

Cheers!


| Kirankumar

ಕೃತಜ್ಞತೆಗೊಂದು ಕೃತಜ್ಞತೆ


| ಡಾ.ನಿರಂಜನ್

ಅದ್ಭುತ ನಿಮ್ಮೀ ವರ್ಷದ ಗಳಿಕೆ. ಏರುತಲಿರಲಿ ಹೀಗೇ ಮೇಲಕೆ. ನಿಮಗಿದೋ ನನ್ನಯ ಹಾರೈಕೆ!


| ಡಾ. ನಿರಂಜನ ಮೂರ್ತಿ ಬಿ ಎಂ

ನಿಮ್ಮ ಈ ಬ್ಲಾಗಾಂಕಣದ ಹೆಸರೇ ಅದ್ಭುತ; ಗಾಳಿಯಿಲ್ಲದೆ ಉಸಿರಿಲ್ಲ, ಅಂದರೆ ಜೀವವಿಲ್ಲ; ಬೆಳಕಿಲ್ಲದೆ ಕಾಣುವುದಿಲ್ಲ, ಅಂದರೆ ಜ್ಞಾನವಿಲ್ಲ. ಜ್ಞಾನವಿಲ್ಲದ ಬದುಕು ಬದುಕೇ ಅಲ್ಲ. ಜೀವಕೆ ಬೇಕಾದ ಗಾಳಿ ಮತ್ತು ಬದುಕಿಗೆ ಬೇಕಾದ ಜ್ಞಾನಗಳನ್ನು ಪ್ರತೀವಾರವೂ ಒದಗಿಸುವ ಈ ಬ್ಲಾಗೀಬರಹ ನಿರಂತರವಾಗಿ ಸಾಗಲಿ, ಸಾಗುತಲೇ ಇರಲಿ. ಸಮಾಜದ ಗತಿಯನ್ನು ಬಿಂಬಿಸಿ, ಸರಿದಾರಿಗೆ ತರುವ ಚಾಲಕಶಕ್ತಿಯಾಗಿರಲಿ ನಿರಂತರ. ಕನಸು ಕಟ್ಟುವ, ಮನಸು ಮುಟ್ಟುವ, ಮತ್ತು ಹೃದಯ ತಟ್ಟುವ ಬರಹಗಳು ಹೇರಳವಾಗಿ ಅರಳಲಿ ನಿಮ್ಮಿಂದ. ನಿಮ್ಮೀ ಸಾಹಿತ್ಯಿಕ, ಸಾಂಸ್ಕ್ರತಿಕ, ವೈಚಾರಿಕ, ಮತ್ತು ಜ್ಞಾನಾರ್ಜಕ ನುಡಿಸೇವೆ ನಡೆಯುತಲಿರಲಿ ಅನವರತ.


| ಕುಸುಮ ಬಿ. ಎಂ

ಹೊಸ ಬೆಳಕಿನ ಹೊಸ ಗಾಳಿಯ ಸೂಸುತ್ತಿರುವ ಗಾಳಿ ಬೆಳಕು ಅಂಕಣಕ್ಕೆ ಅಭಿನಂದನೆಗಳು.\r\nಪ್ರತಿ ಅಂಕಣದಲ್ಲಿಯೂ ಓದುವ ಹೊಸದಾರಿ, ಸ್ಫೂರ್ತಿ ನೀಡಿರುವ ಅಂಕಣ\r\n


| ವಸಂತ

ಗಾಳಿ ಬೆಳಕು ಎಲ್ಲೆಲ್ಲೂ ಪಸರಿಸಿದೆ. ಇದು ನಿರಂತರವಾಗಿರಲಿ


| Shamarao

ಗಾಳಿ ಬೀಸುತ್ತಿರಲಿ, ಬೆಳಕು ಹರಿಯುತ್ತಿರಲಿ


| Prabhakar

Lovely reminiscing


| Mythili P Rao

Sir, This is truly an amazing achievement. Also, I would like to add that these blogs do not carry trivial matters!! Each one of them compels one to introspect, question and find answers. In many cases I have even gone back to history to get the facts correct. This is imperative to get the right perspective about your thoughts. Not just critical thinking but my kannada vocabulary has improved just because of reading your blogs. Wishing you and these blogs many many years. Another thought which has occured to me is how about publishing all these blogs!! It could reach a larger audience. Maybe nothing very ance but a simple book.




Add Comment






Recent Posts

Latest Blogs



Kamakasturibana

YouTube