ತಡವಾಗಿ ಬಂದ ಬೆಳಕೇ!

ಶೇಕ್‌ಸ್ಪಿಯರ್‌ನ ‘ಕಿಂಗ್ ಲಿಯರ್’ ನಾಟಕದಲ್ಲಿ ಮಹಾರಾಜ ಲಿಯರ್ ಎಂಬತ್ತನೆಯ ವಯಸ್ಸಿನಲ್ಲಿ ತನ್ನ ಮೂವರು ಹೆಣ್ಣು ಮಕ್ಕಳಿಗೆ ರಾಜ್ಯ ಹಂಚಲು ನಿರ್ಧರಿಸುತ್ತಾನೆ. ಹಂಚುವ ಮೊದಲು ಮೂವರನ್ನೂ ಆಸ್ಥಾನಕ್ಕೆ ಕರೆದು, ‘ನಿಮಗೆ ನನ್ನನ್ನು ಕಂಡರೆ ಎಷ್ಟು ಪ್ರೀತಿ, ಹೇಳಿ ನೋಡೋಣ’ ಎಂದು ಒಬ್ಬೊಬ್ಬರನ್ನೇ ಕೇಳುತ್ತಾನೆ. 

ಮೊದಲ ಇಬ್ಬರು ಹೆಣ್ಣುಮಕ್ಕಳು ಅವನನ್ನು ಬಾಯಿಗೆ ಬಂದಂತೆ ಹೊಗಳುತ್ತಾರೆ. ಉಬ್ಬಿದ ಲಿಯರ್ ಅವರಿಬ್ಬರಿಗೂ ರಾಜ್ಯದ ಸಮೃದ್ಧ ಪಾಲು ಕೊಡುತ್ತಾನೆ. ಕಿರಿ ಮಗಳು ಕಾರ್ಡೀಲಿಯಾ, ‘ಒಬ್ಬ ಮಗಳು ತನ್ನ ತಂದೆಯನ್ನು ಎಷ್ಟು ಪ್ರೀತಿಸಬಹುದೋ ಅಷ್ಟು ಮಾತ್ರ ನಿನ್ನನ್ನು ಪ್ರೀತಿಸುವೆ’ ಎಂಬ ಉತ್ತರ ಕೊಡುತ್ತಾಳೆ. ಅವಳ ಪ್ರಾಮಾಣಿಕ ಭಾಷೆ ಹಿಡಿಸದ ಲಿಯರ್ ಅವಳಿಗೆ ರಾಜ್ಯದಲ್ಲಿ ಪಾಲು ಕೊಡದೆ ಓಡಿಸುತ್ತಾನೆ. 

ಬಾಯ್ತುಂಬ ಹೊಗಳಿದ ಹಿರಿಯ ಹೆಣ್ಣುಮಕ್ಕಳು ಕೊನೆಗೆ ತನ್ನನ್ನು ಮನೆ ಬಿಟ್ಟು ಓಡುವಂತೆ ಮಾಡಿದ ಮೇಲೆ ಲಿಯರ್ ಮಹಾರಾಜನಿಗೆ ಕಾರ್ಡೀಲಿಯಾಳ ಪ್ರಾಮಾಣಿಕತೆಯ ಅರಿವಾಗತೊಡಗುತ್ತದೆ! ಅಷ್ಟೊತ್ತಿಗೆ ಲಿಯರ್ ಸಾವಿನ ಹಂತ ತಲುಪಿದ್ದಾನೆ. 

‘ತಡವಾಗಿ ಬಂದ ಬೆಳಕೇ!’ ಎಂಬ ರಾಮಚಂದ್ರ ಶರ್ಮರ ಪದ್ಯದ ಶೀರ್ಷಿಕೆ ನಿಮಗೆ ನೆನಪಿರಬಹುದು. ಸಾವಿನ ಅಂಚಿನಲ್ಲಾದರೂ ಲಿಯರ್‌ಗೆ ಬೆಳಕು ಸುಳಿಯಿತು; ಆದರೆ ಬೆಳಕು ಕೊನೆಗೂ ಸುಳಿಯದೆ ಸಾಯುವ ಲಿಯರ್‌ಗಳೇ ಹೆಚ್ಚು ಎಂದು ನನ್ನ ನಂಬಿಕೆ.

ನನ್ನ ಅಂಕಣವೊಂದರಲ್ಲಿ ಬರೆದಿದ್ದ ವಿಶ್ವವಿದ್ಯಾಲಯವೊಂದರ ಮುಖ್ಯಸ್ಥನ ಕತೆ ನೆನಪಾಗುತ್ತದೆ: 

ಈ ಮುಖ್ಯಸ್ಥನದು ಹಿತ್ತಾಳೆ ಕಿವಿಯೆಂದು ಎಲ್ಲರಿಗೂ ಗೊತ್ತಾಯಿತು; ಹೀಗಾಗಿ ಅವನ ಸುತ್ತ ತಮಗೆ ಬೇಕಾದ್ದನ್ನು ಹೇಳುವವರು ಹೆಚ್ಚಾದರು. ಮುಖ್ಯಸ್ಥ ಮೊದಮೊದಲು ತಾನು ಎಲ್ಲರಿಂದಲೂ ಮಾಹಿತಿ ಪಡೆದು ಹಳೆಯ ಕಾಲದ ರಾಜರಂತೆ ನೆಮ್ಮದಿಯಿಂದ ರಾಜ್ಯ ಆಳಬಹುದೆಂದು ಭ್ರಮಿಸಿದ್ದ. 

ಅದೆಲ್ಲ ಅಷ್ಟು ಸುಲಭವಿರಲಿಲ್ಲ. ಅವನಿಗೆ ಮಾಹಿತಿ ಕೊಡುವವರು ತಮ್ಮ ಅನುಕೂಲಕ್ಕೆ ತಕ್ಕ ಮಾಹಿತಿ ಕೊಡತೊಡಗಿದರು. ಅವನ ತಲೆ ಕೆಟ್ಟುಹೋಯಿತು! ತಾನು ಕಡುಜಾಣನೆಂದು ತಿಳಿದಿದ್ದ ಅವನು ಇತರರ ಮಾತನ್ನು ಸರಿಯಾಗಿ ಕೇಳಿಸಿಕೊಳ್ಳುತ್ತಿರಲಿಲ್ಲ. ಕೇಳಿಸಿಕೊಂಡರೂ ತನಗೆ ಇಷ್ಟವಿರುವ ಮಾತನ್ನು ಮಾತ್ರ ಕೇಳಿಸಿಕೊಳ್ಳುತ್ತಿದ್ದ. ಹೀಗಾಗಿ ಎಲ್ಲರೂ ತಂತಮ್ಮ ಲಾಭಗಳಿಗಾಗಿ ಅವನಿಗೆ ಪ್ರಿಯವಾದ ಮಾತುಗಳನ್ನಷ್ಟೆ ಹೇಳುತ್ತಿದ್ದರು…

ಅಧಿಕಾರ ಮುಗಿದ ನಂತರದ ವರ್ಷಗಳಲ್ಲಿ ತನ್ನ ಹಿತ್ತಾಳೆ ಕಿವಿಗೆ ನಿತ್ಯದ ಸರಕಿಲ್ಲದೆ ಈತ ಹುಚ್ಚಿನ ಸ್ಥಿತಿ ತಲುಪಿರಬಹುದೆಂದು ನನ್ನ ಊಹೆ!      

ಇಂಥ ಮೂರ್ಖರಿಗೆ ಶೇಕ್‌ಸ್ಪಿಯರ್ ಬರೆದ ‘ಒಥೆಲೊ’ ನಾಟಕದ ಇಯಾಗೊ ಎಂಬ ಹುಟ್ಟು ಚಾಡಿಕೋರ ಸೃಷ್ಟಿಸಿದ ಸರಣಿ ದುರಂತ ಗೊತ್ತಿರಲಿಕ್ಕಿಲ್ಲ! 

ಲೋಕದ ಸಾಹಿತ್ಯದಲ್ಲಿ ಚಾಡಿಗೆ ಮತ್ತೊಂದು ಹೆಸರು ಇಯಾಗೊ! ವೆನಿಸ್ಸಿನಲ್ಲಿ ’ಕರಿಯ’ ಒಥೆಲೊ ಸೇನಾಧಿಪತಿಯಾದ ಮೇಲೆ, ಬಿಳಿಯ ಇಯಾಗೋಗೆ ಕೊನೇಪಕ್ಷ ರಾಜ್ಯದ ಉಪಸೇನಾನಿಯಾದರೂ ಆಗುವ ಆಸೆ; ಆದರೆ ಈ ಹುದ್ದೆ ಕ್ಯಾಸಿಯೋಗೆ ಸಿಕ್ಕಿದ್ದಕ್ಕೆ ಇಯಾಗೊ ಕಹಿಯಾಗುತ್ತಾನೆ. ಜೊತೆಗೆ, ಬಿಳಿಯನಾದ ತಾನು ‘ನೀಗ್ರೋ’ ಒಥೆಲೋನ ಸಹಾಯಕನಾಗಿ ಕೆಲಸ ಮಾಡಬೇಕಲ್ಲ ಎಂದು ಇಯಾಗೋನ ‘ವರ್ಣಾಹಂಕಾರ’ ಕೆರಳಿದೆ. ಇದು ಸಾಲದೆಂಬಂತೆ, ಬಿಳಿ ಹುಡುಗಿ ಸುಂದರಿ ಡೆಸ್ಡಿಮೋನ ಒಥೆಲೋನನ್ನು ಒಲಿದಿದ್ದಾಳೆ. ಇದು ಇಯಾಗೋನಲ್ಲಿ ಉರಿಯೆಬ್ಬಿಸುತ್ತದೆ. ತನ್ನ ಹೆಂಡತಿ ಎಮಿಲಿಯಾ ಜೊತೆ ಒಥೆಲೊ ಮಲಗಿರಬಹುದೆಂಬ ಅನುಮಾನ ಕೂಡ ಅದ್ಯಾಕೋ ಇಯಾಗೋನಲ್ಲಿ ಹುಟ್ಟುತ್ತದೆ! 

ಥರಂಥರದ ನೀಚಭಾವಗಳು ಬೆರೆತು ಹುಟ್ಟಿದ ದುಷ್ಟ ಮನಸ್ಥಿತಿಯಲ್ಲಿ ಇಯಾಗೋನ ಎಲುಬಿಲ್ಲದ ನಾಲಗೆ ಎತ್ತೆಂದರತ್ತ ತಿರುಗತೊಡಗುತ್ತದೆ. ಸ್ವಾರ್ಥಕ್ಕಾಗಿ ಏನು ಬೇಕಾದರೂ ಹೇಳುವ ಹರಕು ನಾಲಿಗೆಯ ಇಯಾಗೋ ಪ್ರಕಾರ ಜನರ ಕಿವಿಯಿರುವುದೇ ಚಾಡಿ ಹೇಳುವುದಕ್ಕೆ! ಅವನ ಮೊದಲ ಬಲಿಪಶು ರಾಡರಿಗೋ. ಸುಂದರಿಯೊಬ್ಬಳನ್ನು ಲೋಕದ ಜನರೆಲ್ಲ ಪ್ರೀತಿಸುವಂತೆ ರೋಡರಿಗೋ ಕೂಡ ಡೆಸ್ಡಿಮೋನಳನ್ನು ಒಳಗೊಳಗೇ ಪ್ರೀತಿಸಿದ್ದ! ‘ನೀನು ಒಲಿದ ಹುಡುಗಿಯನ್ನು ‘ಕರಿಯ’ ಒಥೆಲೊ ಮದುವೆಯಾಗಿದ್ದಾನಲ್ಲಯ್ಯ!’ ಎಂದು ಇಯಾಗೊ ರೊಡರಿಗೋನನ್ನು ಒಥೆಲೊ ವಿರುದ್ಧ ಎತ್ತಿ ಕಟ್ಟುತ್ತಾನೆ. 
ಅತ್ತ ಡೆಸ್ಡಿಮೋನಳ ಅಪ್ಪನ ಬಳಿ ಹೋಗಿ ’ಕರಿಯ’ ಒಥೆಲೊ ನಿನ್ನ ಮಗಳನ್ನು ಹಾರಿಸಿಕೊಂಡು ಹೋಗಿದ್ದಾನೆ ಎಂದು ಕೆರಳಿಸುತ್ತಾನೆ. ಡೆಸ್ಡಿಮೋನ ತಾನು ಒಥೆಲೋನನ್ನು ಒಲಿದಿದ್ದೇನೆಂದು ಅಪ್ಪನೆದುರೇ ಸಾರಿದ ಮೇಲಂತೂ ಇಯಾಗೋನ ಕಿಚ್ಚು ಹೆಚ್ಚಾಗುತ್ತದೆ; ಈ ಮದುವೆಯನ್ನೇ ಮುರಿಯಲೆತ್ನಿಸುತ್ತಾನೆ.  

ಅಸೂಯೆಯನ್ನೇ ತಿಂದು ಬದುಕುವ ಇಯಾಗೋಗೆ ಯಾವುದೂ ಪವಿತ್ರವಲ್ಲ. ಎಲ್ಲರ ಬಗೆಗೂ ಅವನಿಗೆ ದ್ವೇಷ. ಪ್ರತಿ ಕ್ಷಣ ಒಬ್ಬರ ಮೇಲೊಬ್ಬರನ್ನು ಎತ್ತಿಕಟ್ಟದಿದ್ದರೆ ಅವನಿಗೆ ತೃಪ್ತಿಯಿಲ್ಲ. ಅವನ ಚಾಡಿಕೋರ ಬುದ್ಧಿ, ಅವನ ನಾಲಗೆ, ಅವನ ಗೋಸುಂಬೆ ನಟನೆ ಎಂಥ ಸನ್ನಿವೇಶವನ್ನಾದರೂ ದುರ್ಬಳಕೆ ಮಾಡಿಕೊಳ್ಳಬಲ್ಲದು.  ‘ಇಯಾಗೊ ಮನುಷ್ಯರನ್ನು ಮೊದಲು ದ್ವೇಷಿಸಲು ಶುರು ಮಾಡುತ್ತಾನೆ; ನಂತರ ಅದಕ್ಕೆ ಕಾರಣ ಹುಟ್ಟಿಸಿಕೊಳ್ಳುತ್ತಾನೆ!’ ಎಂದು ವಿಮರ್ಶಕನೊಬ್ಬ ಬರೆಯುತ್ತಾನೆ. 

ಕಿರುಕುಳಜೀವಿಯೂ, ನಿತ್ಯಸಂಚುಜೀವಿಯೂ ಆದ ಇಯಾಗೊ ‘ನನ್ನ ಸಣ್ಣ ಬಲೆಯಲ್ಲಿ ಈ ದೊಡ್ಡ ನೊಣ ಸಿಕ್ಕಿಕೊಳ್ಳುವಂತೆ ಮಾಡುವೆ’ ಎಂದು ಒಥೆಲೊ ಬಳಿ ಬರುತ್ತಾನೆ; ಒಥೆಲೊ ಕ್ಯಾಸಿಯೋನನ್ನು ಕೆಲಸದಿಂದ ತೆಗೆದು ಹಾಕುವಂತೆ ಮಾಡುತ್ತಾನೆ. ಕೆಲಸ ಕಳೆದುಕೊಂಡ ಕ್ಯಾಸಿಯೋ ಬಳಿ ಹೋಗಿ, ‘ಬಾ ಮತ್ತೆ ಅದೇ ಕೆಲಸ ಕೊಡಿಸುತ್ತೇನೆ’ ಎಂದು ಮತ್ತೊಂದು ಬಲೆ ಹೆಣೆಯುತ್ತಾನೆ. ‘ಡೆಸ್ಡಿಮೋನಳನ್ನು ಬೇಡಿಕೋ; ಅವಳು ಒಥೆಲೋಗೆ ಹೇಳಿ ಮತ್ತೆ ನಿನ್ನ ಕೆಲಸ ಕೊಡಿಸುತ್ತಾಳೆ’ ಎಂದು ಕ್ಯಾಸಿಯೋನನ್ನು ಡೆಸ್ಡಿಮೋನಳ ಬಳಿ ಕಳಿಸುತ್ತಾನೆ. 

ಅತ್ತ ಕ್ಯಾಸಿಯೋ ಡೆಸ್ಡಿಮೋನಳ ಬಳಿ ಈ ಬೇಡಿಕೆ ಇಡಲು ಹೊರಡುತ್ತಾನೆ; ಇತ್ತ ಇಯಾಗೊ, ‘ಕ್ಯಾಸಿಯೋ ನಿನ್ನ ಹೆಂಡತಿಯ ಬಳಿ ಹೋಗಿದ್ದಾನೆ; ಅವನ ಮೇಲೆ ಡೆಸ್ಡಿಮೋನಾಗೆ ಮೋಹ’ ಎಂದು ಒಥೆಲೋನ ಕಿವಿ ಕಚ್ಚುತ್ತಾನೆ. 

ಹುಸಿಯನಾಡುವ ನಾಲಗೆ, ಸದಾ ಒಸರುವ ವಿಷ, ನಟನೆ, ಕುತಂತ್ರ ಎಲ್ಲವೂ ಸೇರಿಕೊಂಡು ಇಯಾಗೊ ನಿರ್ದಯನಾಗುತ್ತಾ ಹೋಗುತ್ತಾನೆ. ಇಯಾಗೊ ಹೇಳಿದ್ದನ್ನೆಲ್ಲ ಮುಗ್ಧ ಒಥೆಲೊ ನಂಬತೊಡಗುತ್ತಾನೆ. ಮುಗ್ಧತೆ ಮೂರ್ಖತನವಾಗುವ ಉದಾಹರಣೆ ಇದು! ಇಯಾಗೋನ ಕ್ರೂರ ಅಸೂಯೆ ಒಥೆಲೋನ ನೆಮ್ಮದಿಗೆಡಿಸುವ ಹಸಿ ಅಸೂಯೆಯಾಗುತ್ತದೆ; ಅವನನ್ನು ದಹಿಸತೊಡಗುತ್ತದೆ. ಡೆಸ್ಡಿಮೋನಳ ಬಗೆಗಿನ ಅವನ ಮುಗ್ಧ ಪ್ರೀತಿ ಕುರುಡು ದ್ವೇಷವಾಗುತ್ತದೆ. ತೀವ್ರ ಪ್ರೀತಿ ಆಯ ತಪ್ಪಿದರೆ ತೀವ್ರ ದ್ವೇಷವಾಗುವ ರೀತಿಯನ್ನು ಶೇಕ್‌ಸ್ಪಿಯರ್‌ಗಿಂತ ಚೆನ್ನಾಗಿ ಇನ್ನಾರು ಹೇಳಬಲ್ಲರು! 

ಇಯಾಗೋನ ಸಂಚಿನ ಸರಣಿ ಬೆಳೆಯುತ್ತಾ ಹೋಗುತ್ತದೆ. ಒಥೆಲೊ ಡೆಸ್ಡಿಮೋನಾಗೆ ಪ್ರೀತಿಯಿಂದ ಕೊಟ್ಟ ಕರವಸ್ತ್ರವನ್ನು ಇಯಾಗೊ ಕದಿಯುತ್ತಾನೆ. ಈ ಕರವಸ್ತ್ರ ಕ್ಯಾಸಿಯೊ ಬಳಿ ಸಿಕ್ಕಿತೆಂದು ಒಥೆಲೋಗೆ ಹೇಳುತ್ತಾನೆ. ಕುಟಿಲ ಮಾತು, ಕಪಟ ಪುರಾವೆ, ಕೃತಕ ಸನ್ನಿವೇಶಗಳನ್ನು ಸೃಷ್ಟಿಸುವ ಇಯಾಗೋನನ್ನು ನಂಬಿ ಒಥೆಲೊ ಕುದಿಯತೊಡಗುತ್ತಾನೆ. ಇಯಾಗೋನ ಶಬ್ದಜಾಲ ಆ ಕುದಿಯನ್ನು ಹೆಚ್ಚಿಸುತ್ತಲೇ ಹೋಗುತ್ತದೆ. ಒಥೆಲೊ ಡೆಸ್ಡಿಮೋನಳ ಕತ್ತು ಹಿಸುಕುತ್ತಾನೆ. 

ಆ ಘಟ್ಟದಲ್ಲಿ ಎಮಿಲಿಯಾ ಇಯಾಗೋನ ಸಂಚನ್ನು ಬಯಲುಗೊಳಿಸುತ್ತಾಳೆ; ಒಥೆಲೋಗೆ ತನ್ನ ಬಗೆಗೇ ತೀವ್ರ ಅಸಹ್ಯವಾಗುತ್ತದೆ. ಒಥೆಲೊ ತನ್ನನ್ನೇ ತಾನು ಇರಿದುಕೊಳ್ಳುತ್ತಾನೆ. ಇಯಾಗೊ ಕೂಡ ಇರಿಸಿಕೊಳ್ಳುತ್ತಾನೆ. ಕುಟಿಲ ಚಾಡಿಕೋರನ ವಿಷನಾಲಗೆ, ದುರಂತನಾಯಕನ ಚಾಡಿಪ್ರಿಯ ಕಿವಿ... ಎರಡೂ ಸೇರಿ ಕೊನೆಗೆ ಎಲ್ಲರೂ ನಾಶವಾಗುತ್ತಾರೆ…

ತಮ್ಮ ಲಾಭಕ್ಕಾಗಿ ಯಾರಿಗೆ ಏನು ಬೇಕಾದರೂ ಹೇಳಬಹುದು ಎನ್ನುವ ಈ ಕಾಲದಲ್ಲಿ ಇಯಾಗೊ ಪಾತ್ರವನ್ನು ಅರಿಯುವುದು ನಮ್ಮ ಉಳಿವಿನ ದೃಷ್ಟಿಯಿಂದಲೂ ಅಗತ್ಯ. ನಿತ್ಯ ಚಾಡಿ ಹೇಳುವವರು ತಂತಮ್ಮ ಲಾಭಕ್ಕಾಗಿ ಆ ಕೆಲಸ ಮಾಡುತ್ತಿರುತ್ತಾರೆ; ಆದರೆ ಇಯಾಗೊ ಥರದ ೨೪x೭ ಪ್ರೊಫೆಶನಲ್ ಚಾಡಿಕೋರರು ಇನ್ನಷ್ಟು ಅಪಾಯಕಾರಿ! 

ಅಂದರೆ, ಮನುಷ್ಯ ಯಾವ ಕಾರಣವೂ ಇಲ್ಲದೇ ನೀಚನಾಗಬಲ್ಲ ಎಂಬುದನ್ನು ನಮ್ಮ ಸುತ್ತಮುತ್ತ ಇರುವ ಇಯಾಗೋಗಳನ್ನು ಒಮ್ಮೆ ನೋಡಿದರೆ ಗೊತ್ತಾಗುತ್ತದೆ! ಇಂಥವರ ನಡುವೆ, ಯಾರು ಪ್ರಾಮಾಣಿಕ, ಯಾರು ಕುಟಿಲ ಎಂಬುದನ್ನು ಅರಿಯುವ ಸೂಕ್ಷ್ಮತೆ ನಮಗಿಲ್ಲದಿದ್ದರೆ ದುರಂತ ಗ್ಯಾರಂಟಿ. ಇಯಾಗೋನಂಥವರ ಕುಟಿಲ ಮಾತುಗಳು ರೂಢಿಯಾದ ನಾಯಕರ ಕಿವಿಗಳಿಗೆ ಪ್ರಾಮಾಣಿಕರ ನೇರ ಮಾತುಗಳು ರುಚಿಸುವುದು ಕಷ್ಟ. 

ಈ ಸತ್ಯ ಲಂಕೇಶರ ‘ಗುಣಮುಖ’ ನಾಟಕದ ಚಕ್ರವರ್ತಿ ನಾದಿರ್‌ಶಾಗೆ ಒಮ್ಮೆ ಹೊಳೆಯುತ್ತದೆ. ನಾದಿರ್‌ಗೆ ಕಾಯಿಲೆಯಾಗಿದೆ; ಸಾಮಂತ ರಾಜರು, ಸರ್ಕಾರಿ ವೈದ್ಯರು ಅವನನ್ನು ಹೊಗಳಿ ಹೊಗಳಿ ಅವನ ಕಾಯಿಲೆಯನ್ನು ಹೆಚ್ಚು ಮಾಡುತ್ತಾರೆ. ಆಗ ನಾದಿರ್ ಕರೆಸಿಕೊಂಡ ಹಕೀಮ ಅಲಾವಿಖಾನ್ ರೇಗಿ ಹೇಳುತ್ತಾನೆ: ‘ಕಿವುಡ! ನಿನ್ನ ಕಾಯಿಲೆಯೆಲ್ಲ ನಿನ್ನ ಕಿವಿಯಿಂದಲೇ ಶುರುವಾಗಿದೆ!’. 

ನಾದಿರ್‌ಶಾನ ಅನಾರೋಗ್ಯದ ಬಗ್ಗೆ ಪ್ರಾಮಾಣಿಕ ಹಕೀಮ ಕಟುಸತ್ಯಗಳನ್ನು ಹೇಳತೊಡಗುತ್ತಾನೆ. ಈ ಕಟುಸತ್ಯಗಳನ್ನು ಕೇಳಿಸಿಕೊಳ್ಳುತ್ತಾ ನಾದಿರ್ ನಿಧಾನವಾಗಿ ಗುಣಮುಖನಾಗತೊಡಗುತ್ತಾನೆ. ಆದರೂ ಸರ್ವಾಧಿಕಾರಿ ನಾದಿರ್ ’ಗುಣಮುಖ’ನಾಗಬಹುದು ಎಂದು ಸಂದೇಹಿ ಲಂಕೇಶ್ ಸೂಚಿಸುತ್ತಾರೆಯೇ ಹೊರತು, ’ಗುಣಮುಖ’ನಾಗಿದ್ದಾನೆ ಎಂದಲ್ಲ. ಸರ್ವಾಧಿಕಾರಿಗಳ ಬಗ್ಗೆ ಈ ಎಚ್ಚರ ಸದಾ ನಮಗಿರಲಿ!

ಮನುಷ್ಯನೇಕೆ ನೀಚನಾಗುತ್ತಾನೆ? ಅದಕ್ಕೆ ಕಾರಣಗಳಿವೆಯೆ? ಅದು ನಿಷ್ಕಾರಣವೆ? ನೀಚನಾಗುವುದರಲ್ಲಿ ಅವನಿಗೆ ಆನಂದವಿದೆಯೆ? ಇಯಾಗೋಗೆ ತನ್ನ ಕುಟಿಲ ಭಾಷೆಯ ಬಳಕೆಯಿಂದ ಆನಂದವೂ ಆಗುತ್ತಿತ್ತೇನೋ! ಕಾರಣ, ಮನುಷ್ಯರು ಬರಬರುತ್ತಾ ತಮ್ಮ ನೀಚತನವನ್ನೂ ಆನಂದಿಸತೊಡಗುತ್ತಾರೆ. ಹೀಗೆ ಪೂರ್ಣಾವಧಿ ನೀಚನಾಗಿರುವ ವ್ಯಕ್ತಿ ಯಾರನ್ನಾದರೂ ಬಲಿ ತೆಗೆದುಕೊಳ್ಳಬಲ್ಲ. ಇದೆಲ್ಲ ಹುಂಬ ಒಥೆಲೋಗೆ ಅರ್ಥವಾಗುವುದಿಲ್ಲ. 

ಒಥೆಲೊ ಸೋತ ಕಡೆ ನಾದಿರ್ ಗೆಲ್ಲುತ್ತಾನೆ. ನಾದಿರ್ ಗೆಲ್ಲುವುದು ಚಾಡಿಕೋರರನ್ನು ಕೊಲ್ಲುವುದರಿಂದ. ನಾಯಕನಾದವನಿಗೆ ತಾನು ಕೇಳಿಸಿಕೊಳ್ಳುವ ಮಾತುಗಳಲ್ಲಿ ಯಾವುದು ಪ್ರಾಮಾಣಿಕ, ಯಾವುದು ಅಪ್ರಾಮಾಣಿಕ ಎಂಬ ಅರಿವಿರಬೇಕು; ಅದಿಲ್ಲದಿದ್ದರೆ ಅದು ಕೇಳಿಸಿಕೊಳ್ಳುವವನನ್ನೇ ನಾಶ ಮಾಡುತ್ತದೆ. ಈ ಅರಿವು ನಾದಿರ್ ಶಾಗಿತ್ತು.

ಸತ್ಯ ಯಾವುದು, ಸುಳ್ಳು ಚಾಡಿ ಯಾವುದು ಎಂಬುದು ‘ಧೀರ’ ಒಥೆಲೋಗೆ ಕೊನೆಯವರೆಗೂ ತಿಳಿಯಲಿಲ್ಲ; ಸತ್ಯ ತಿಳಿಯುವ ಹೊತ್ತಿಗೆ ತೀರಾ ತಡವಾಗಿತ್ತು; ತನ್ನ ಬಗೆಗೇ ಅಸಹ್ಯವಾಗಿ ತನ್ನನ್ನೇ ಇರಿದುಕೊಂಡು ಸತ್ತ. ಲಿಯರ್‌ಗೂ ಹಾಗಾಯಿತು. ಆದರೆ ನಾದಿರ್ ಶಾ ಇತರರ ಮಾತುಗಳನ್ನು ಪರೀಕ್ಷಿಸಿ ಸತ್ಯವನ್ನು ಗುರುತಿಸುವ ಪ್ರಜ್ಞೆ ಗಳಿಸಿಕೊಂಡ; ‘ಗುಣಮುಖ’ನಾಗತೊಡಗಿದ. ಲಿಯರ್ ಹಾಗೂ ಒಥೆಲೋರ ದುರಂತ ಸಾವು ಮತ್ತು ಜಾಣ ನಾದಿರ್ ಶಾನ ಉಳಿವು... ಇವೆಲ್ಲವೂ ಸಾರ್ವಜನಿಕ ಜೀವನದಲ್ಲಿರುವವರಿಗೆ ಬೆಳಕಿನ ಹಾದಿ ತೋರಬಲ್ಲವು.

ಕೊನೆ ಟಿಪ್ಪಣಿ: ಯೋಗ ಬರಹದ ಯೋಗ!

ಕಳೆದ ವಾರ ಈ ಅಂಕಣದಲ್ಲಿ ಬಂದ ’ಯೋಗದ ಹೊಲಬ ನೀವೆತ್ತ ಬಲ್ಲಿರೋ’ ಲೇಖನ (READ HERE) ಓದಿ ಕವಿ ಚಂದ್ರಶೇಖರ ತಾಳ್ಯ ಅಲ್ಲಮನು ದಾರಿ ಮತ್ತು ಹೊಲಬು ಎರಡನ್ನೂ ಒಟ್ಟಿಗೆ ಬಳಸಿದ  ’ಸೂರ್ಯರನೇಕರು ಮೂಡಿ ದಾರಿಯ ಹೊಲಬೆಂಬುದು ಕೆಟ್ಟಿತ್ತು ನೋಡಾ’ ಸಾಲನ್ನು ಉಲ್ಲೇಖಿಸಿದರು. ತಾಳ್ಯ ವಚನ ಪರಂಪರೆಯಿಂದ ಪಡೆದು ಕವಿಯಾಗಿ ಬೆಳೆದವರು.

ವಚನ ಸಂವೇದನೆಯನ್ನು ಕ್ಲಾಸಿನಲ್ಲಿ ಹಂಚಿಕೊಳ್ಳುವ ಪ್ರಾಧ್ಯಾಪಕಿ ವತ್ಸಲಾ ನೆನಸಿಕೊಂಡ ಉರಿಲಿಂಗಪೆದ್ದಿಗಳ ಕೆಲವು ಸಾಲುಗಳು:

ಯೋಗಾಭ್ಯಾಸ ಯೋಗಾಭ್ಯಾಸವೆಂದೆಂಬಿರಿ
ಯೋಗವು ಅಭ್ಯಾಸವೆ? ಅಭ್ಯಾಸವು ಯೋಗವೆ ಅಯ್ಯಾ?

ಯೋಗವ ನುಡಿವರೇ ಅಯ್ಯಾ?                                                                                                             
ಯೋಗಾಭ್ಯಾಸವೆಂಬನ್ನಕ್ಕ ತಾನಾ ಯೋಗಿಯೆ ಅಯ್ಯಾ…

ಅಂಕಣ ಓದಿದ ಪ್ರಖ್ಯಾತ ವಿಮರ್ಶಕಿಯೊಬ್ಬರು ’ಯೋಗವನರಸಿ ಹೋದಿರೇ’ ಎಂದು ಬೆರಗಾದರು. ಖ್ಯಾತ ನಿರ್ದೆಶಕ ಬಿ ಸುರೇಶ್, ಯೋಗಿ ಆದಿತ್ಯನಾಥ್ ಎಂಬುವವರ ಭಂಗಿ ನೋಡಿ ನಕ್ಕು ಕಾಮೆಂಟ್ ಸೆಕ್ಷನ್ನಿನಲ್ಲಿ ಬರೆದರು.

ಈ ಅಂಕಣವೇ ನೆಪವಾಗಿ ಪ್ರತಿವಾರ ಕನ್ನಡದ ’ಕಲೆಕ್ಟಿವ್ ವಿಸ್ಡಂ’ ರೂಪುಗೊಳ್ಳುವ ಪರಿ ಕಂಡು ಅಂಕಣಕಾರನಲ್ಲಿ ನಿತ್ಯ ಕಲಿಕೆಯ ವಿನಯ ಮತ್ತು ನಿಜ ವಿಸ್ಮಯ! 

ಬ್ಲಾಗ್ ಫಾಲೋ ಮಾಡಲು ಒಪ್ಪಿ, ಕ್ಲಿಕ್ ಮಾಡಿ; ನೋಟಿಫಿಕೇಶನ್ ಪಡೆಯಿರಿ, ಶೇರ್ ಮಾಡಿ: FOLLOW
ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com 
ಬಿಡುವಾದಾಗ ನೋಡಿ, ಶೇರ್ ಮಾಡಿ:  YOUTUBE LINK 

Share on:


Recent Posts

Latest Blogs



Kamakasturibana

YouTube



Comments

16 Comments



| ಚೆನ್ನರಾಜು ಎಂ

ಸತ್ಯ ಯಾವುದು, ಸುಳ್ಳು ಯಾವುದು ಎಂಬುದನ್ನೆಲ್ಲಾ ಅರಿಯದ ಮನುಷ್ಯ ತಾನು ಕೇಳಿಸಿಕೊಂಡದ್ದೆಲ್ಲವನ್ನು  ನಿಜವೆಂದೆ ಅರಿತು ವಿನಾಶದ ಹಾದಿ ಹಿಡಿದ ಬಗೆಯನ್ನು ಲಂಕೇಶರ 'ಮುಟ್ಟಿಸಿಕೊಂಡವನು' ಕಥೆ ಧ್ವನಿಸುತ್ತದೆ. ಬಸವಲಿಂಗನ ಎಡಗಣ್ಣಿಗೆ ಈಗಾಗಲೇ ನೋವು ಬಂದಿದೆ. ಡಾಕ್ಟರ್ ತಿಮ್ಮಪ್ಪನವರು ಶಸ್ತ್ರಚಿಕಿತ್ಸೆ ಮಾಡಿದ ನಂತರ ಒಂದು ವಾರ ತಲೆಸ್ನಾನ ಮಾಡಬೇಡ ಎಂಬ ಸಲಹೆ ನೀಡಿದ್ದಾರೆ.  ಜಾತಿಯಿಂದ ಅಸ್ಪೃಶ್ಯನಾದ ಕಣ್ಣಿನ ಡಾಕ್ಟರ್ ತಿಮ್ಮಪ್ಪನವರ ಬಗ್ಗೆ ಅಲ್ಲಿನ ಸುತ್ತಮುತ್ತಲಿನ ಜನರಿಗೂ ವೈದ್ಯರಿಗೂ ಅಸಹನೀಯತೆ ಇದೆ. ಆ ಜನಗಳು‌ ಹಾಗೂ ಆತನ ಹೆಂಡತಿ ಹೇಳಿದ ಮಾತುಗಳನ್ನು ಆಲಿಸಿ ಬಸವಲಿಂಗ ಮಡಿಸ್ನಾನ ಮಾಡಿ ಎಡಗಣ್ಣನ್ನು ಕಳೆದುಕೊಳ್ಳುತ್ತಾನೆ. ಕೆಲವು ದಿನಗಳ ನಂತರ ಮತ್ತೆ ಬಲಗಣ್ಣು ನೋಯಲು ಪ್ರಾರಂಭಿಸಿದಾಗ ಅವರಿವರ ಬಳಿ‌ ಹೋದರೂ ಯಾವುದೇ ಪ್ರಯೋಜನವಾಗದೇ ಕೊನೆಗೆ ಡಾಕ್ಟರ್ ತಿಮ್ಮಪ್ಪನವರ ಬಳಿಯೇ ಚಿಕಿತ್ಸೆ ಪಡೆದು ಒಂದು‌ ಕಣ್ಣನ್ನು ಉಳಿಸಿಕೊಳ್ಳುತ್ತಾನೆ. ತನ್ನ ನೆರೆಹೊರೆಯರು, ಇಲ್ಲಿನ ಜಾತಿ‌ಪೀಡಿತ ಮನಸ್ಸುಗಳು ಕಿವಿ ಕಚ್ಚುವ ಬಗೆಯನ್ನು ಅರಿತ ಬಸವಲಿಂಗ ಮಗುವಿನಂತೆ ತಿಮ್ಮಪ್ಪನವರ ಬಳಿಗೆ ಹೋಗಿದ್ದಾನೆ. 

\r\n\r\n

 

\r\n\r\n

ಹೀಗೆ ಅವರಿವರು ಹೇಳಿದ ಮಾತನ್ನು ಯಾವುದೇ ಅರಿವಿಲ್ಲದೆ ನಂಬಿದ ಮನುಷ್ಯ ತನ್ನ ವಿನಾಶಕ್ಕೆ ತಾನೇ ಕಾರಣನಾಗುತ್ತಾನೆ. ತನ್ನ ಅನುಭವಗಳಿಂದ ನಿಷ್ಠುರ ಸತ್ಯಗಳನ್ನು ಅರಿಯದೆ ಹೋಗಿದ್ದರೆ ಬಸವಲಿಂಗ ಕುರುಡನಾಗಿರುತ್ತಿದ್ದ.

\r\n\r\n

ನಾವು ಕೆಲಸ ಮಾಡುವ ಇನ್ಸ್ಟಿಟ್ಯೂಟ್ ಗಳಲ್ಲಿ ಒಥೆಲೊ ಅಂತಹ ಡೈರೆಕ್ಟರ್ ಮತ್ತು ಇಯಾಗೋ ರೀತಿಯ ಮನುಷ್ಯರೆಲ್ಲರೂ ಇದ್ದಾರೆ. ಆದರೆ ಬಸವಲಿಂಗನಿಗೆ ಬಂದ ಅರಿವು ಮೂಡಿದ ವ್ಯಕ್ತಿಗಳನ್ನು ಕಂಡಿದ್ದು ಕಡಿಮೆ. 

\r\n


| ಹರಿಪ್ರಸಾದ್

ಇದು ಇದು ಹುಳಿಯಾರ್ ಸಿಗ್ನೇಚರ್!

\r\n


| ಹರಿಪ್ರಸಾದ್

ಇದು ಇದು ಹುಳಿಯಾರ್ ಸಿಗ್ನೇಚರ್!

\r\n


| sanganagouda

ಇದನ್ನು ಓದಿದಾಗ ಒಂದು ಕತೆ ನೆನಪಾಯಿತು. ಒಬ್ಬ ಕಳ್ಳ, ಕಳ್ಳತನ ಬಿಡಬೇಕೆಂದು ಕಾಸಿಗೆ ಪಾದಯಾತ್ರೆ ಹೊರಟಿದ್ದ. ಒಂದೈವತ್ತು ಕೀ.ಮೀ ನಡೆದ ನಂತರ ಒಂದು ಮಠದಲ್ಲಿ ಪ್ರಸಾದ ಸೇವಿಸಿ ಮಲಗಿದರು. ರಾತ್ರಿ ಹನ್ನೆರಡಕ್ಕೆ ಎದ್ದ ಕಳ್ಳ, ಕಳ್ಳತನ ಮಾಡಬೇಕು ಅನಿಸಿತು ಅವನಿಗೆ, ಕಳ್ಳತನವನ್ನೇ ಬಿಡಲಿಕ್ಕೆ ಹೋಗ್ತಿದ್ದೀನಿ ಮತ್ತೆ ಕಳ್ಳತನ ಮಾಡುವುದು ಸರಿಯಲ್ಲ ಎಂದು ಮಲಗಿಕೊಂಡ. ಹುಟ್ಟು ಕಳ್ಳತನ ಮಾಡಿದ ಆತನಿಗೆ ರಾತ್ರಿ ಪೂರ ನಿದ್ದೆ ಹತ್ತಲಿಲ್ಲ. ಕೊನೆಗೂ ಎದ್ದವನೇ ಅವರ ಗಂಟಿನ ದುಡ್ಡು ಕಳುವು ಮಾಡಿ ಇನ್ನೊಬ್ಬರ ಗಂಟಿನಲ್ಲಿ, ಇನ್ನೊಬ್ಬರ ಗಂಟಿನ ದುಡ್ಡು ಮಗದೊಬ್ಬರ ಗಂಟಿನಲ್ಲಿ ಇಟ್ಟು ತನ್ನ ತೀಟೆ ತೀರಿಸಿಕೊಂಡ. ಬೆಳಿಗ್ಗೆ ಎಲ್ಲರೂ ಜಗಳವಾಡುತ್ತಿದ್ದಾಗ 'ಇದೆಲ್ಲಾ ಮಾಡಿದ್ದು ನಾನೆ, ನಾನೇಕೆ ಹೀಗೆ ಮಾಡಿದೆ ಎಂದು ವಿವರವಾಗಿ ಹೇಳಿದ. ಅಷ್ಟೊತ್ತಿಗೆ ಹೊಡೆದಾಟವಾಗಿ ಒಂದೆರಡು ಜೀವಗಳೂ ಹೋಗಿದ್ದವು. 

\r\n


| Azeempasha

 

\r\n\r\n

 

\r\n


| Sandip

ಈ ಅಂಕಣವೂ ಸೇರಿದಂತೆ ನಿಮ್ಮ‌ ವೈವಿಧ್ಯಮಯ ಬರಹಗಳನ್ನು ನಿರಂತರವಾಗಿ ಓದುತ್ತ, ಗಮನಿಸುತ್ತ, ಗ್ರಹಿಸುತ್ತ ಬಂದಿದ್ದೇನೆ. ನಿಮ್ಮ‌ ಬರವಣಿಗೆ ಹತ್ತಾರು ಬೆಳಕಿನ ಸೆಳಕುಗಳ ಹೆಣಿಗೆ ಎಂದು ನನಗೆ ಓದಿದಾಗಲೆಲ್ಲ ಅನಿಸಿದೆ. ಜಾಗತಿಕ ಸಾಹಿತ್ಯದ ಹಲವು ಲೇಖಕರನ್ನು ಕನ್ನಡದ ಜಗತ್ತಿಗೆ ತರುವ, ಅವರನ್ನು ಕನ್ನಡದ ಲೇಖಕರಿಗೆ, ಸಾಹಿತ್ಯಕ್ಕೆ ಜೋಡಿಸುವ ಪರಿಯೇ ಭಿನ್ನ ಮತ್ತು ವಿಶಿಷ್ಟ. ಅದು ನನ್ನಂತಹವರಿಗೆ ಕಲಿಕೆ ಕೂಡ. ಆ ದೃಷ್ಟಿಯಿಂದ ನೀವು ಲಂಕೇಶ್, ಅನಂತಮೂರ್ತಿ, ಕೀರಂ ಪರಂಪರೆ ಸೇರಿದ ಮೇಷ್ಟ್ರು. ಬಹುಶಃ ಕೊನೆಯವರು ಕೂಡ.

\r\n


| Dr.Govindaraj Hegde

Tadavaagi banda belake, is laced with humour and truth and is too good! 🙏 

\r\n


| Dr.Vijaya

ಅರ್ಥ ಪೂರ್ಣ. ಮತ್ತೆ ಮತ್ತೆ  ಓದಿಸಿಕೊಳ್ಳುವ ಲೇಖನ

\r\n


| ಬಂಜಗೆರೆ ಜಯಪ್ರಕಾಶ

ಚಿಂತನಗೆ  ಹಚ್ಚುವ ಬರಹ. ಅಸೂಯೆ ಮತ್ತು ಚಾಡಿಕೋರರಿಗೆ ಮನತೆತ್ತವರ ದುರಂತ ಎಲ್ಲೆಲ್ಲೂ ಕಾಣಬಹುದು. ಹೈದರ್ ಅಲಿಗೂ ಹಿತ್ತಾಳೆ ಕಿವಿ ಎಂಬ ಆರೋಪವಿತ್ತು. ಹಿತ್ತಾಳೆ ಕಿವಿಗಳಿಂದ ಕೂಡಿದ ವ್ಯಕ್ತಿತ್ವದವರು ಹೊಗಳುಭಟರ, ಸುಳ್ಳುಕೋರರ, ಚಾಡಿಕೋರರ ಕೈವಶವಾಗಿ ಅವಾಂತರಗಳನ್ನು ಮಾಡಿರುವುದು ಬೇಕಾದಷ್ಟಿದೆ. ಎಲ್ಲೋ ಕೆಲವರಿಗೆ ಮಾತ್ರ ತಡವಾಗಿಯಾದರೂ ಬೆಳಕು ಕಾಣುತ್ತದೆ. ಮನಮುಟ್ಟುವ ನಿರೂಪಣೆ ನಿಮ್ಮದು

\r\n


| ಜಯಾ ವಿ

ಈಚೆಗೆ ಈ ವಸ್ತು ಕುರಿತೇ  ಯೋಚಿಸುತ್ತಿದ್ದೆ. ಅದಕ್ಕೆ ಸರಿಯಾಗಿ ತಡವಾಗಿಯಾದರೂ ಬೆಳಕು ಬಂತು.ನೈಸ್ ಟು ರೀಡ್

\r\n


| ಮಲ್ಲಿಕಾರ್ಜುನ ಹಿರೇಮಠ

ಹಿತ್ತಾಳೆ ಕಿವಿಗಳಿಗೆ ಕಿವಿ ಹಿಂಡಿದ್ದೀರಿ ಶೇಕ್ ಸ್ಪಿಯರ್ ಮೂಲಕ!

\r\n\r\n

 

\r\n\r\n

 

\r\n


| Pashap

ತಡವಾಗಿ ಬಂದ ಬೆಳಕೇ is awakening to those who have got up too. The words are simple but sharpened to be penetrated into even the heartless. A warning to the present society.This is a timely article to alert the society. It is evident that  Desdemona is of more concern than Othello to Nataraj . His writings are reforming readers. Prof. Nataraj is a Socio-Reader REFORMERRocking and Tossing the heads of the readersEnjoyed the reading. Thanjs

\r\n


| Dr. Eraiah


| ಡ್ರಾ. Eraiah

ತಮ್ಮ ವಿಶಿಷ್ಟ ಚಿಂತನೆ ಮತ್ತು ಬರಹಗಳು ನಮ್ಮನ್ನು ಹೆಚ್ಚು ಚಿಂತನೆ ಮತ್ತು ಬರಹಗಳಿಗೆ ತೊಡಗಿಸಿ ಕೊಳ್ಳಲು ಪ್ರೇರೇಪಿಸುತ್ತಿವೆ. ಉತ್ತಮ ಲೇಖನ ಸರ್. ಧನ್ಯವಾದಗಳು 

\r\n


| S Ram

👏👏👌👌👌 

\r\n


| ಡಾ. ನಿರಂಜನ ಮೂರ್ತಿ ಬಿ ಎಂ

ನವಿರಾದ ವಿವರಣೆ, ಮನಮುಟ್ಟುವ ವಿಶ್ಲೇಷಣೆ, ತುಲನಾತ್ಮಕ ದೃಷ್ಟಿಕೋನದಿಂದ ಓದುಗನನ್ನು ಹಿಡಿದಿಟ್ಟುಕೊಳ್ಳುವ ಹುಳಿಯಾರರ ಬರವಣಿಗೆಯ ಶೈಲಿಗೆ ಈ ಲೇಖನ ಸಾಕ್ಷಿ. ದೇಶ, ಭಾಷೆ,  ಸಂಸ್ಕ್ರತಿಗಳ ಗಡಿಮೀರಿ ಮನುಜನ ಮತ್ತು ಮನುಜ ಮನಸಿನ ಬಗೆಗಿ‌ನ ಚಿಂತನೆ ಆಪ್ತವಾಗಿದೆ. ಶೇಕ್ಸ್ ಪಿಯರನ ನಾಟಕದ ಜೊತೆ ಲಂಕೇಶರ ನಾಟಕವನ್ನು ಹೋಲಿಸಿದ್ದು ತುಂಬಾ ಇಷ್ಟವಾಯಿತು. ಚಾಡಿಕೋರರ ಬಗ್ಗೆ ಎಲ್ಲರೂ ಹುಷಾರಾಗಿರಬೇಕೆಂದು ಎಚ್ಚರಿಸುವುದೇ ಈ ಲೇಖನದ ಮಹತ್ವವೆಂದರೆ ತಪ್ಪಾಗಲಿಕ್ಕಿಲ್ಲವೆನಿಸುತ್ತಿದೆ. ಮನುಷ್ಯನಿಗೆ ಬುದ್ಧಿ ಸಕಾಲಕ್ಕೆ ಬರಬೇಕು ಮತ್ತು ಬೆಳಕು ತಡವಾಗಿಯಾದರೂ ಎಲ್ಲರ ಬದುಕಿನಲ್ಲಿ ಬೀರಬೇಕು.

\r\n




Add Comment