ಲಾ ಸ್ಟೂಡೆಂಟ್ ಆಲಿಯಾ; ಲೇಡಿ ಪೊಲೀಸ್ ಕೌರ್

ನಾವು ನಿತ್ಯ ನೋಡುವ ಕ್ಷಿಪ್ರ ಪ್ರತಿಕ್ರಿಯೆಗಳಲ್ಲಿ ವ್ಯಾಪಕ ರಾಜಕೀಯ ಸಂದೇಶಗಳೂ ಅಡಗಿರಬಲ್ಲವು!   ಪೋಸ್ಟ್ ಮಾಡರ್ನ್ ಚಿಂತನೆಯ ಒಂದು ವಲಯ ಅಂತಿಮವಾಗಿ ಎಲ್ಲವೂ ’ಪೊಲಿಟಿಕಲ್’ ಎನ್ನುತ್ತದೆ; ಈ ಹಿನ್ನೆಲೆಯಲ್ಲಿ, ಕೆಳಗೆ ಕೊಟ್ಟಿರುವ ಎರಡು ತಕ್ಷಣದ ಪ್ರತಿಕ್ರಿಯೆಗಳು ದೊಡ್ಡ ಪೊಲಿಟಿಕಲ್ ಪ್ರತಿಕ್ರಿಯೆಗಳಾದ ರೀತಿ ಗಮನಿಸಿ:

ಮೊದಲನೆಯದು, ಲೋಕಸಭಾ ಚುನಾವಣೆಯ ನಂತರ ನಡೆದ ಕರ್ನಾಟಕ ವಿಧಾನ ಪರಿಷತ್ ಚುನಾವಣೆಯ ಕಾಲದ ಪ್ರತಿಕ್ರಿಯೆ: ನೈರುತ್ಯ ವಿಧಾನ ಪರಿಷತ್ ಕ್ಷೇತ್ರದಿಂದ ಚುನಾವಣೆಗೆ ನಿಂತಿದ್ದ ಉಡುಪಿಯ ಮಾಜಿ ಶಾಸಕ ರಘುಪತಿಭಟ್ ಬಿಜೆಪಿಯಿಂದ ಉಚ್ಚಾಟಿತರಾಗಿದ್ದರು. ಆಗ ಉಡುಪಿಯ ಆಲಿಯಾ ಅಸಾದಿ ಎಂಬ ಹುಡುಗಿ ಭಟ್ಟರಿಗೆ ಕೊಟ್ಟ ಮೈಲ್ಡ್ ಶಾಟ್: 

‘ನಾನು ಹಿಜಾಬ್ ಧರಿಸಿದ ಒಂದೇ ಕಾರಣಕ್ಕೆ ನನ್ನನ್ನು ಕಾಲೇಜಿನಿಂದ ಹೊರದೂಡಲಾಯಿತು. ಆಗ ಅದು ನಿಮ್ಮ ಪಕ್ಷದ ಸಾಧನೆಯೆಂದು ನೀವು ತೋರಿಸಿದಿರಿ. ಆಗ ನಾನು ಉಚ್ಚಾಟಿತ ವಿದ್ಯಾರ್ಥಿನಿಯಾಗಿದ್ದೆ; ಅವತ್ತು ನಿಮಗೆ ಪಕ್ಷದಲ್ಲಿ ಸ್ಥಾನವಿತ್ತು. ಇವತ್ತು ನಾನು ಲಾ ವಿದ್ಯಾರ್ಥಿನಿ; ನಿಮ್ಮನ್ನು ಪಕ್ಷದಿಂದ ಹೊರ ಹಾಕಲಾಗಿದೆ.’

ಇದು ಆಲಿಯಾ ‘ಎಕ್ಸ್’ ವೇದಿಕೆಯಲ್ಲಿ ಬರೆದ ಇಂಗ್ಲಿಷ್ ಪೋಸ್ಟ್ ಸಾರಾಂಶ.   

ಎರಡನೆಯದು, ಲೋಕಸಭಾ ಚುನಾವಣೆಯ ಫಲಿತಾಂಶ ಬಂದ ನಂತರ ನೀವು ಗಮನಿಸಿರಬಹುದಾದ ಘಟನೆ: 

ಮೊನ್ನೆ ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಗೆದ್ದ ಕಂಗನಾ ರಣಾವತ್ ಎಂಬ ತಲೆ ತಿರುಕ ನಟಿ ಚಂಡೀಗಢದ ಏರ್‌ಪೋರ್ಟಿಗೆ ಬಂದಿಳಿದಾಗ ಆಕೆಯ ಹ್ಯಾಂಡ್‌ಬ್ಯಾಗ್ ಚೆಕಪ್ ನಡೆದಿತ್ತು. ’ನಾನು ಸಂಸದೆ; ನನ್ನ ಫೋನ್ ಚೆಕ್ ಮಾಡುವಂತಿಲ್ಲ’ ಎಂದು ಜೋರು ಮಾಡಿದ ನಟಿಯ ಕೆನ್ನೆಗೆ ಒಂದೇಟು ಬಿತ್ತು. ಈ ಕೆನ್ನೆಯೇಟು ಕೊಟ್ಟವರು ಕುಲ್ವಿಂದರ್ ಕೌರ್ ಎಂಬ ಮಹಿಳಾ ಕಾನ್‌ಸ್ಟೇಬಲ್.

ಇಂಡಸ್ಟ್ರಿಯಲ್ ಸೆಂಟ್ರಲ್ ಸೆಕ್ಯುರಿಟಿ ಫೋರ್ಸ್‌ನಲ್ಲಿ ಕೆಲಸ ಮಾಡುವ ಈ ಮಹಿಳಾ ಕಾನ್‌ಸ್ಟೇಬಲ್ ತನ್ನ ಸಿಟ್ಟಿನ ಪ್ರತಿಕ್ರಿಯೆಯ ಒಳಕಾರಣವನ್ನೂ ಹೇಳಿದರು: 
‘೨೦೨೦ರಲ್ಲಿ ಟಿಕ್ರಿ ಗಡಿಯಲ್ಲಿ ನಡೆದ ರೈತ ಹೋರಾಟದಲ್ಲಿ ಮಹಿಳೆಯರೂ ಭಾಗಿಯಾಗಿದ್ದರು. ಈ ಹೆಂಗಸರು ನೂರು ನೂರು ರೂಪಾಯಿ ಇಸ್ಕೊಂಡು ಅಲ್ಲಿ ಹೋರಾಟ ಮಾಡ್ತಿದಾರೆ ಎಂದಿದ್ದಳು ಈ ಕಂಗನಾ. ನಮ್ಮ ತಾಯಿಯೂ ಆ ಪ್ರತಿಭಟನೆಯಲ್ಲಿ ಕೂತಿದ್ದರು. ಕಂಗನಾ ಮಾತಿನಿಂದ ನನಗೆ ಸಿಟ್ಟು ಬಂದಿತ್ತು. ಈ ಕಂಗನಾ ಅಲ್ಲಿ ಹೋಗಿ ಕೂರ‍್ತಾಳೇನು?’ 

ಇಸವಿ ೨೦೨೦. ನಿಮಗೆ ನೆನಪಿರಬಹುದು: ಕೇಂದ್ರ ಸರ್ಕಾರದ ರೈತವಿರೋಧಿ ಕಾನೂನುಗಳನ್ನು ಹಿಂತೆಗೆದುಕೊಳ್ಳಲು ಒತ್ತಾಯಿಸಿ ದೇಶದ ರೈತರು, ಅದರಲ್ಲೂ ಮುಖ್ಯವಾಗಿ ಪಂಜಾಬ್, ಉತ್ತರ ಪ್ರದೇಶ, ಹರ್ಯಾಣಗಳ ರೈತರು ಹೋರಾಟ ನಡೆಸಿದ್ದರು. ದೆಹಲಿ-ಹರ್ಯಾಣಗಳ ನಡುವಣ ಟಿಕ್ರಿ ಗಡಿಯಲ್ಲಿ ಒಂದು ವರ್ಷ ಕಾಲ ಬೀಡುಬಿಟ್ಟರು. ಅಲ್ಲೇ ಊಟ, ಮಾತುಕತೆ, ಚರ್ಚೆ, ಚಿಂತನೆ ಎಲ್ಲವೂ ನಡೆದಿತ್ತು. 
ಕರ್ನಾಟಕದಿಂದ ತಿಪಟೂರು ಕಡೆಯ ದೇವರಾಜ್, ಶ್ರೀಕಾಂತ್ ಕೆಳಹಟ್ಟಿ; ಲೇಖಕ ದಿಲಾವರ್ ರಾಮದುರ್ಗ; ರೈತ ಸಂಘದ ಚುಕ್ಕಿ ನಂಜುಂಡಸ್ವಾಮಿ ಸೇರಿದಂತೆ ದೇಶದ ನಾನಾ ಕಡೆಗಳಿಂದ ರೈತ ಪರ ತರುಣ, ತರುಣಿಯರು ಅಲ್ಲಿಗೆ ಬಂದು ಹೋಗುತ್ತಲೇ ಇದ್ದರು. ಈಗ ಅಮಾನತ್ತಿಗೊಳಗಾಗಿರುವ ಕೌರ್ ಅವರ ಅಣ್ಣ ರೈತ ಚಳುವಳಿಯಲ್ಲಿದ್ದಾರೆ. 

‘ಕಂಗನಾ ರೈತರನ್ನು ಅವಮಾನಿಸಿದ್ದರಿಂದ ನಾನು ಹೀಗೆ ಮಾಡಿದೆ’ ಎಂದಿದ್ದಾರೆ ಕೌರ್. ‘ತಾಯಿಯ ಪರವಾಗಿ ಇಂಥ ನೂರು ಬಂಧನಗಳನ್ನು ಎದುರಿಸಲು ನಾನು ಸಿದ್ಧ’ ಎಂದು ಕೂಡ ಹೇಳಿದ್ದಾರೆ. ದೇಶದ ರೈತ ಚಳುವಳಿ ಅವರನ್ನು ಬೆಂಬಲಿಸಿದೆ. ರೈತ ನಾಯಕ ರಾಕೇಶ್ ಟಿಕಾಯತ್, ’ಅಲ್ಲಿ ತಳ್ಳಾಟವಾಗಿದೆಯೇ ಹೊರತು, ಕೌರ್ ಉದ್ದೇಶಪೂರ್ವಕವಾಗಿ ’ಕೆನ್ನೆಗೆ’ ಹೊಡೆದಿಲ್ಲ’ ಎಂದಿದ್ದಾರೆ; ಆಕೆಯ ಬೆಂಬಲಕ್ಕೆ ನಿಂತಿದ್ದಾರೆ.

ಕೌರ್  ಜೀವನ ನಿರ್ವಹಣೆಗೆ ಕಷ್ಟವಾದರೆ ಕ್ರೌಡ್ ಫಂಡಿಂಗ್ ಮಾಡಲು ಕೂಡ ಕೆಲವರು ಮುಂದಾಗಿದ್ದಾರೆ! ‘ಆಕೆ ಕೆಲಸ ಕಳೆದುಕೊಂಡರೆ ನನಗೆ ಹೇಳಿ; ನಾನು ಕೆಲಸ ಕೊಡುತ್ತೇನೆ’ ಎಂದು ಖ್ಯಾತ ಹಾಡುಗಾರ ವಿಶಾಲ್ ದದ್ಲಾನಿ ಹೇಳಿದ್ದಾರೆ. ಸರ್ವಾಧಿಕಾರ ಹಿಮ್ಮೆಟ್ಟಿದ ಮೂರೇ ದಿನಗಳಲ್ಲಿ ಭಾರತ ಮುಕ್ತವಾಗಿ, ಬೇರೆ ಥರ ಮಾತಾಡುತ್ತಿದೆ!  

ರೈತ ಕುಟುಂಬಕ್ಕೆ ಸೇರಿದ ಕೌರ್ ೨೦೦೯ರಿಂದ ಕಾನ್‌ಸ್ಟೇಬಲ್ ಕೆಲಸದಲ್ಲಿದ್ದಾರೆ. ಈ ಹಿಂದೆ ಅವರ ವಿರುದ್ಧ ಯಾವುದೇ ದೂರು, ವಿಚಾರಣೆ ದಾಖಲಾಗಿಲ್ಲ. ಅವರ ಗಂಡ ಕೂಡ ಇದೇ ಏರ್‌ಪೋರ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ.      

ಸಮಾಜ, ರಾಜಕಾರಣ, ಸಂಸ್ಕೃತಿಗಳ ಪ್ರಾಥಮಿಕ ಪಾಠವೂ ಗೊತ್ತಿರದೆ ಸದಾ ಬಾಯಿಗೆ ಬಂದದ್ದನ್ನು ಕಾರುವ ಕಂಗನಾ, ‘ಈ ಟೆರರಿಸಂ ಮತ್ತು ಉಗ್ರವಾದ ಎಂದು ಕೊನೆಗೊಳ್ಳುವುದೋ...’ ಎಂದೆಲ್ಲ ಹುಂಬ ಪ್ರತಿಕ್ರಿಯೆ ಬರೆದುಕೊಂಡಿದ್ದಾರೆ; ಕೌರ್ ಕೊಟ್ಟ ಕೆನ್ನೆಯೇಟು ನಟಿಯೊಬ್ಬಳು ಭವ್ಯ ಬಂಗಲೆಯಲ್ಲಿ ಭಾರಿ ಪೊಲೀಸ್ ರಕ್ಷಣೆಯಲ್ಲಿ ಕೂತು ನಡೆಸುವ ‘ಡಿಜಿಟಲ್ ಟೆರರಿಸಂ’ಗೆ ಅನೇಕರ ಪ್ರತಿಕ್ರಿಯೆಗಳ ಮೂರ್ತ ರೂಪವಾಗಿರಬಹುದೆ? 

ಈ ಸತ್ಯ ಈ ಇನ್‌ಸ್ಟೆಂಟ್ ರಾಜಕಾರಣಿ-ನಟೀಮಣಿಗೆ ಗೊತ್ತಿರಲಿಕ್ಕಿಲ್ಲ. ಅದೇ ಸಂದರ್ಭದಲ್ಲಿ ಕಂಗನಾ ತಂಡದಲ್ಲಿದ್ದ ಗಂಡಸೊಬ್ಬ ಬೇರೊಬ್ಬ ಮಹಿಳೆಯ ಕೆನ್ನೆಗೆ ಹೊಡೆದ ವಿಡಿಯೋವನ್ನೂ ನೆಟ್ಟಿಗರು ಹೊರ ಬಿಟ್ಟು, ಕಂಗನಾಗೆ ಪ್ರಶ್ನೆ ಎಸೆಯುತ್ತಿದ್ದಾರೆ. ಈ ಬಗ್ಗೆ ನಟೀಮಣಿ ತುಟಿ ಬಿಚ್ಚಿಲ್ಲ.

ಪೋಷಕ ನಟಿ ಸ್ಮೃತಿ ಇರಾನಿ ಈ ಸಲ ಅಮೇಥಿಯಲ್ಲಿ ಸೋತಿದ್ದರಿಂದ ನವ ಪಾರ್ಲಿಮೆಂಟಿನಲ್ಲಿ ನಟಿಯರ ಜಾಗ ಖಾಲಿಯಾಗಿತ್ತು. ಇಂಥ ಸಮಯದಲ್ಲಿ ಹೊಸ ಹೀರೋಯಿನ್ ಆಗಿ ಮಿಂಚಬಹುದೆಂದು ಹೊರಟಿದ್ದ ಕಂಗನಾ ಎದುರು ಲೇಡಿ ಕಾನ್‌ಸ್ಟೇಬಲ್ ಕೌರ್ ಇದ್ದಕ್ಕಿದ್ದಂತೆ ದೇಶದ ಹೊಸ ಹೀರೋಯಿನ್ ಆಗಿ ಎಮರ್ಜ್ ಆಗಿದ್ದಾರೆ!    

ಇತ್ತ ಉಡುಪಿಯಲ್ಲಿ ರಾಜಕಾರಣಿ ರಘುಪತಿ ಭಟ್, ಆಲಿಯಾ ಕುಟುಕನ್ನು ಡಿಪ್ಲೊಮ್ಯಾಟಿಕ್ ಆಗಿ ನಿಭಾಯಿಸಲು ಯತ್ನಿಸಿದರು. ತಾನು ಒಳ್ಳೆಯವನು ಎಂದು ಸಮಜಾಯಿಷಿ ಕೊಡಲು ಹೋಗಿ ತಮಾಷೆಯ ವಸ್ತುವಾದರು. ಪಕ್ಷದಿಂದ ಹೊರ ಹಾಕಿಸಿಕೊಂಡರೂ ಪರಿಷತ್ ಚುನಾವಣೆಗೆ ಸ್ಪರ್ಧಿಸಿ ಸೋತರು. 

ಸೋತ ಕ್ಷಣದಲ್ಲಾದರೂ, ಕಳೆದ ವರ್ಷ ಒಬ್ಬ ಶಾಸಕನಾಗಿ ಹಿಜಾಬ್ ಪ್ರಕರಣದಲ್ಲಿ ಕೊನೇ ಪಕ್ಷ ನ್ಯೂಟ್ರಲ್ ಆಗಿಯಾದರೂ ಇರಬೇಕಿತ್ತು ಎಂದು ಅವರಿಗೆ ಅನ್ನಿಸಿರಬಹುದೇ? ಅಕಸ್ಮಾತ್ ಅವತ್ತು ಅವರು ಹಿಜಾಬ್ ವಿರುದ್ಧದ ತರಲೆಯಲ್ಲಿ ದೂರ ಕಾಯ್ದುಕೊಂಡು ಬಡಪಾಯಿ ಮುಸ್ಲಿಂ ಹುಡುಗಿಯರು ಕೊನೇ ಪಕ್ಷ ಪರೀಕ್ಷೆ ಬರೆಯಲಾದರೂ ನೆರವಾಗಿದ್ದರೆ… ಆಲಿಯಾ ಥರದ ನೂರು ಹುಡುಗಿಯರು ನಿನ್ನೆ ಅವರಿಗೆ ವೋಟು ಕೊಟ್ಟಿರುತ್ತಿದ್ದರು. 

ನಾನು ಬಿ.ಎ. ಓದುತ್ತಿದ್ದಾಗ, ‘ನಾವು ಕೊಡುವುದಕ್ಕಿಂತ ಹೆಚ್ಚಿನ ಪ್ರೀತಿ ಕೊಡುವವರು ದಲಿತರು ಮತ್ತು ಮುಸ್ಲಿಮರು’ ಎಂದು ಲಂಕೇಶರು ಬರೆದ ಮಾತು ನಾನು ನೋಡುವ ರೀತಿಯನ್ನೇ ಬದಲಿಸಿತು; ಇದನ್ನು ಹಿಂದೆಯೂ ಬರೆದಿರುವೆ. ಇದೆಲ್ಲ ರಘುಪತಿ ಭಟ್ಟರಂಥವರಿಗೆ ಗೊತ್ತಿರಲಿಕ್ಕಿಲ್ಲ. ಲಂಕೇಶರ ಮಾತು ಕೋಮುವಾದಿ, ಜಾತಿವಾದಿ ಮಾತುಗಳಿಗೆ ಬಲಿಯಾಗಿ ದಲಿತರನ್ನು, ಮುಸ್ಲಿಮರನ್ನು ಅಸ್ಪೃಶ್ಯರಂತೆ ಕಾಣುವವರ ಕಣ್ತೆರೆಯುತ್ತಲೇ ಇರಲಿ!  

ಅತ್ತ ಕಂಗನಾ ೨೦೨೦ರಲ್ಲಿ ರೈತರ ಬಗ್ಗೆ ದುರಹಂಕಾರದ ಮಾತಾಡದೆ, ಟಿಕ್ರಿ ಗಡಿಯಲ್ಲಿ ಬಿಸಿಲು, ಮಳೆಯೆನ್ನದೆ ರೊಟ್ಟಿ ಬೇಯಿಸಿ ರೈತರಿಗೆ ಕೊಡುತ್ತಿದ್ದ ಧೀರ ರೈತ ಮಹಿಳೆಯರ ಬಗ್ಗೆ ಒಂದೇ ಒಂದು ಗೌರವದ ಮಾತಾಡಿದ್ದರೂ ಸಾಕಾಗಿತ್ತು; ಇವತ್ತು ಕೆನ್ನೆಗೆ ಹೊಡೆದ ಕಾನ್‌ಸ್ಟೇಬಲ್ ಕೌರ್ ಆಕೆಯ ಆಟೋಗ್ರಾಫ್ ಕೇಳಿರುತ್ತಿದ್ದರು! 

ರೈತರು, ಸಮಾಜ ಯಾವುದರ ಬಗೆಗೂ ಏನೂ ಗೊತ್ತಿರದೆ ಒಂದು ಜುಜುಬಿ ಲೋಕಸಭಾ ಸ್ಥಾನಕ್ಕಾಗಿ ಬಿಜೆಪಿಯನ್ನು ಮೆಚ್ಚಿಸಲು ಏನೇನೋ ಗೀಚುತ್ತಿದ್ದ ಕಂಗನಾ ಸ್ಥಿತಿ ನಗೆಪಾಟಲಾಗಿದೆ; ಹಾಗೇ ಬಿಜೆಪಿಯನ್ನು ಮೆಚ್ಚಿಸಲು ಏನೆಲ್ಲಾ ಕೋಮು ಸರ್ಕಸ್ ಮಾಡಿದರೂ ಈಚೆಗೆ ಎರಡೆರಡು ಸಲ ಟಿಕೆಟ್ ನಿರಾಕರಿಸಲಾದ ರಘುಪತಿ ಭಟ್ ಸ್ಥಿತಿ ಕೂಡ.

ಈ ನಡುವೆ, ತನ್ನ ಹಾಗೂ ತನ್ನ ಗೆಳತಿಯರಿಗೆ ಆದ ಅನ್ಯಾಯ ಕಂಡು ರೇಗಿ, ಪುಟಿದೆದ್ದು ಲಾ ಓದುತ್ತಿರುವ ಆಲಿಯಾಗೊಂದು ಕಿವಿ ಮಾತು: ತನ್ನ ‘ಎಕ್ಸ್’ ‘ಫೇಸ್‌ಬುಕ್’ ಪೋಸ್ಟುಗಳಿಗೆ ಬಂದ ಫಾಲೋಯಿಂಗ್‌ಗಳ ಹುಸಿಮಂಪರಿನಲ್ಲಿ ಆಲಿಯಾ ಮುಳುಗದಿರಲಿ. ಅಲ್ಲಿ ತನ್ನ ಪರವಾಗಿ ಹೆಬ್ಬೆಟ್ಟೆತ್ತಿ ರೈಲು ಹತ್ತಿಸುವ ಅನಾಮಿಕರ ಹುಂಬ ಪ್ರೋತ್ಸಾಹಕ್ಕೆ ಮರುಳಾಗದಿರಲಿ! ಚೆನ್ನಾಗಿ ಲಾ ಓದಿ, ಕಾನೂನಿನ ಪ್ರಬಲ ಅಸ್ತ್ರದ ಮೂಲಕ ತನ್ನ ಸಮುದಾಯದ ಅಸಹಾಯಕ ಮಹಿಳೆಯರಿಗೆ ಆಲಿಯಾ ನೆರವಾಗುವಂತಾಗಲಿ. 

ಅತ್ತ ಚಂಡೀಗಢದ ಕಾನ್‌ಸ್ಟೇಬಲ್ ಕೌರ್ ಕೂಡ ರೈತ ಮಹಿಳೆಯರ ಪರವಾಗಿ ಅಹಿಂಸಾತ್ಮಕವಾಗಿ, ಕಾನೂನಿನ ಚೌಕಟ್ಟಿನಲ್ಲೇ ಕೆಲಸ ಮಾಡಿ ನೆರವಾಗುವಂತಾಗಲಿ. ಯಾಕೆಂದರೆ ಆಲಿಯಾ, ಕೌರ್ ಥರದ ಸ್ತ್ರೀಯರ ಧೈರ್ಯ ಎಲ್ಲ ಕಾಲಕ್ಕೂ ದೊಡ್ಡ ಆಸ್ತಿಯಂತಿರಬಲ್ಲದು.          

ಕೊನೆ ಟಿಪ್ಪಣಿ:

ಈ ಸಲದ ಚುನಾವಣೆಗಳ ಕಾಲದ ಮತ್ತೊಂದು ದೃಶ್ಯ: 

ಚುನಾವಣೆಯಲ್ಲಿ ಸೋತಿದ್ದ ಡಿ.ಕೆ. ಸುರೇಶರನ್ನು ಮಂತ್ರಿ ಜಮೀರ್ ಅಹ್ಮದ್‌ಖಾನ್ ಅಪ್ಪಿಕೊಂಡ ವಿಡಿಯೋ ಕಂಡಾಗ ನನ್ನ ಹದಿಹರೆಯದಲ್ಲಿ ನಮ್ಮೂರ ಪಂಚಾಯಿತಿ ಚುನಾವಣೆಯ ಫಲಿತಾಂಶದ ಕಾಲ ನೆನಪಾಯಿತು. ಅವತ್ತಿನ ಒಂದು ದೃಶ್ಯ ಇವತ್ತಿಗೂ ನನ್ನ ಕಣ್ಣಿಗೆ ಕಟ್ಟಿದಂತಿದೆ. 

ಹೈಸ್ಕೂಲ್ ಮುಗಿಸಿದ್ದ ನಾನು ಅವತ್ತು ನಮ್ಮೂರ ಮಿಡ್ಲ್ ಸ್ಕೂಲ್ ಮೈದಾನದಲ್ಲಿ ನಿಂತಿದ್ದೆ. ಆ ಮಧ್ಯಾಹ್ನ ಅಲ್ಲಿ ಪಂಚಾಯಿತಿ ಚುನಾವಣೆಗಳ ಫಲಿತಾಂಶ ಘೋಷಣೆಯಾಗುತ್ತಿತ್ತು. ಹುಳಿಯಾರಿನ ಪಂಚಾಯತ್ ವಾರ್ಡೊಂದರಿಂದ ರಹಮತ್ ಉಲ್ಲಾ ಸಾಬ್ ಗೆದ್ದಿದ್ದರು. ಅವರ ಅಭಿಮಾನಿಗಳು ಹಾರಗಳನ್ನು ಹಿಡಿದು ಅವರನ್ನು ಮುತ್ತಿಕೊಂಡಿದ್ದರು. 

ಅಲ್ಲೇ ಕೊಂಚ ದೂರದಲ್ಲಿ ಖಾಕಿ ನಿಕ್ಕರ್ ಹಾಗೂ ಖಾಕಿಷರಟು ಹಾಕಿದ್ದ ನಮ್ಮೂರ ಸ್ವೀಪರ್ ಈ ಸಂಭ್ರಮ ನೋಡುತ್ತಾ ಸಂಕೋಚದಿಂದ ನಿಂತಿದ್ದರು. ರಹಮತ್ ತಕ್ಷಣ ಅವರತ್ತ ತೋಳು ಚಾಚುತ್ತಾ, ‘ನೀವು ಕಣ್ರೋ ನೀವು!’ ಎಂದು ಕೃತಜ್ಞತೆಯಿಂದ ಅವರನ್ನು ಬಾಚಿ ತಬ್ಬಿಕೊಂಡರು. 

ನನ್ನ ಬಾಲ್ಯದ ಸಾಂಪ್ರದಾಯಿಕ ಸಮಾಜದಲ್ಲಿ ನಾನು ಎಂದೂ ಕಾಣದಿದ್ದ ಒಂದು ‘ಮುಟ್ಟಿಸಿಕೊಂಡ’ ಘಟನೆ ನಡೆದಿತ್ತು. ನಮ್ಮಂಥ ಹುಡುಗರ ಮನಸ್ಸಿನಲ್ಲಿ ಸಮಾಜ, ಶಾಲೆ, ಮನೆ, ನೆರೆಹೊರೆಗಳಿಂದಾಗಿ ಬೆಳೆದು ನಿಂತಿದ್ದ ಅಸ್ಪೃಶ್ಯತೆಯ ಗೋಡೆ ಧಡ್ಡಂತ ಮುರಿದು ಬಿದ್ದಿತ್ತು; ಅದು ಮುರಿದು ಬಿದ್ದಿದ್ದು ರಹಮತ್ ಸಾಹೇಬರು ನಮ್ಮೂರ ಸ್ವೀಪರ್ ಒಬ್ಬರನ್ನು ಸಹಜವಾಗಿ ಅಪ್ಪಿಕೊಂಡ ರೀತಿಯಿಂದ. 

ಇಂಥ ಆರೋಗ್ಯಕರ ಆತ್ಮೀಯತೆಯ ಪ್ರದರ್ಶನದ ಪರಿಣಾಮದ ಬಗ್ಗೆ ಇವತ್ತಿಗೂ ನನಗೆ ನಂಬಿಕೆಯಿದೆ. ಮೊನ್ನೆ ಜಮೀರ್ ಅಹ್ಮದ್ ಡಿ.ಕೆ. ಸುರೇಶರನ್ನು ಅಪ್ಪಿಕೊಂಡಿದ್ದು ನನಗೇನೂ ಕೃತಕ ಅನ್ನಿಸಲಿಲ್ಲ. ಆ ಅಪ್ಪುಗೆ ಕೋಮುವಾದಿಗಳು ನಿತ್ಯ ಮುಸ್ಲಿಮರ ವಿರುದ್ಧ ಸೃಷ್ಟಿಸುತ್ತಿರುವ ಅಸ್ಪೃಶ್ಯತೆಗೆ ಧಿಕ್ಕಾರ ಹೇಳುವ ಸಹಜ ಸಂದೇಶದಂತಿತ್ತು.

ಬ್ಲಾಗ್ ಫಾಲೋ ಮಾಡಲು ಒಪ್ಪಿ, ಕ್ಲಿಕ್ ಮಾಡಿ; ನೋಟಿಫಿಕೇಶನ್ ಪಡೆಯಿರಿ, ಶೇರ್ ಮಾಡಿ: FOLLOW
ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com 
ಬಿಡುವಾದಾಗ ನೋಡಿ, ಶೇರ್ ಮಾಡಿ:  YOUTUBE LINK 

Share on:


Recent Posts

Latest BlogsKamakasturibana

YouTubeComments

14 Comments| Suresha B

ಎರಡು ವಿಭಿನ್ನ ವಿಷಯಗಳನ್ನು ಜೊತೆಗಿಟ್ಟು ನೋಡಿರುವ ಕ್ರಮ ನನಗೆ ಮೆಕ್ಸಿಕನ್ ಸಿನಿಮಾ ನಿರ್ದೇಶಕ ಅನರಿಟೋ (ಅಮರೋಸ್ ಪೆರೋಸ್ ಮುಂತಾದ ಚಿತ್ರಗಳ ನಿರ್ದೇಶಕ) ಅವರ ಹಲವು ಚಿತ್ರಗಳನ್ನು ನೆನಪಿಸಿತು.

\r\n


|


| ಮಂಜುನಾಥ್ ಸಿ ನೆಟ್ಕಲ್

ಈ ಅಂಕಣದಲ್ಲಿ ನಿಮ್ಮ ಸಮಕಾಲೀನ ರಾಜಕೀಯ ವಿಶ್ಲೇಷಣಾ ಲೇಖನಗಳು ಇತ್ತೀಚೆಗೆ ಕಡಿಮೆ ಆಗಿದ್ದವು... ಈ ಬಾರಿಯ ಲೇಖನ ಅರ್ಥಪೂರ್ಣ ಮತ್ತು ಸಕಾಲಿಕ ಅನಿಸಿತು ಸರ್.... ಲೇಖನದ ಕೊನೆಯಲ್ಲಿ ಅಲಿಯಾ ಮತ್ತು ಕೌರ್ ಅವರಿಗೆ ನೀವು ಹೇಳಿರುವ ಎಚ್ಚರಿಕೆಯ ಮಾತುಗಳು ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕರಿಗೆ ಹೇಳಿದಂತೆ ಇದೆ.  ಟೀಕೆಗಳಿಗೆ ಕುಗ್ಗದೆ, ಹೊಗಳಿಕೆಗೆ ಹಿಗ್ಗದೆ...ಎಂದಿನ ಕ್ರಿಯಾಶೀಲತೆ ಉಳಿಸಿಕೊಂಡು ಮುನ್ನಡೆಯುವುದರಲ್ಲಿ ಜಾಣತನವಿದೆ. ಈ ಲೇಖನಕ್ಕಾಗಿ ನಿಮಗೆ ಹೃತ್ಪೂರ್ವಕ ಧನ್ಯವಾದಗಳು ಸರ್ 

\r\n


| MAJID

It is the needful article for the day.Thank you

\r\n


| Jayashri

An eye opener.Hats off.I liked the term digital terrorism. SIMPLY MIND BLOWING

\r\n


| ಮುಟ್ಟಿತು ಸಾ


| ಮುಟ್ಟಿತು ಸಾ


| Kallaiah

ವಿಮರ್ಶೆಯನ್ನೂ ಮಾಡಬಲ್ಲವರಾಗಿದ್ದರು ಎಂಬುದಕ್ಕೆ "ದಲಿತ ಹೋರಾಟ :ಗಂಭೀರ ಸವಾಲುಗಳು "ಪುಟ್ಟ ಪುಸ್ತಕವು ದಲಿತ ಸಂಘಟಕರಿಗೆ ಕೈಗನ್ನಡಿ ಅಂತಿದೆ. ಅದು ದಲಿತ ಸಂಘರ್ಷ ಸಮಿತಿ ರಾಜ್ಯಮಟ್ಟದ ಶಿಬಿರವೊಂದರಲ್ಲಿ ಮಾಡಿದ ಉದ್ಘಾಟನೆ ಭಾಷಣದ ಪುಸ್ತಕ ರೂಪ ಅದು ಮೌಲ್ಯಯುತ ಕೃತಿ ದಲಿತರಿಗೆ. ಆ ಭಾಷಣವನ್ನು ಅದೇ ಸಭೆಯಲ್ಲಿ ಆಲಿಸಿದ್ದೆ ನಾನು.
\r\nನಾಯಕರ ಕುರಿತಾದ ಈ ನಿಮ್ಮ ಬರವಣಿಗೆ ತುಂಬಾ ಚನ್ನಾಗಿದೆ.

\r\n


| Kallaiah

ವಿಮರ್ಶೆಯನ್ನೂ ಮಾಡಬಲ್ಲವರಾಗಿದ್ದರು ಎಂಬುದಕ್ಕೆ "ದಲಿತ ಹೋರಾಟ :ಗಂಭೀರ ಸವಾಲುಗಳು "ಪುಟ್ಟ ಪುಸ್ತಕವು ದಲಿತ ಸಂಘಟಕರಿಗೆ ಕೈಗನ್ನಡಿ ಅಂತಿದೆ. ಅದು ದಲಿತ ಸಂಘರ್ಷ ಸಮಿತಿ ರಾಜ್ಯಮಟ್ಟದ ಶಿಬಿರವೊಂದರಲ್ಲಿ ಮಾಡಿದ ಉದ್ಘಾಟನೆ ಭಾಷಣದ ಪುಸ್ತಕ ರೂಪ ಅದು ಮೌಲ್ಯಯುತ ಕೃತಿ ದಲಿತರಿಗೆ. ಆ ಭಾಷಣವನ್ನು ಅದೇ ಸಭೆಯಲ್ಲಿ ಆಲಿಸಿದ್ದೆ ನಾನು.
\r\nನಾಯಕರ ಕುರಿತಾದ ಈ ನಿಮ್ಮ ಬರವಣಿಗೆ ತುಂಬಾ ಚನ್ನಾಗಿದೆ.

\r\n


| ಎ.ಎಸ್. ಎ ಖಾನ್, ತುಮಕೂರು

ಲಂಕೇಶ್ ಅವರ ಮಾತುಗಳನ್ನು ಪುನಃ ಕೇಳಿದಂತಹ ಪುಳಕ

\r\n


| ಖಾನುಂ

ಅದ್ಭುತ ಲೇಖನ. ಮತ್ತೆ ಮತ್ತೆ ಓದಿದೆ.

\r\n


| Vasantha

ಲೇಖನ ಓದಿದ್ದೇನೆ. ಬಾಲ್ಯದ ನೆನಪುಗಳು ನಮ್ಮ ಜೀವನದಲ್ಲಿ ಉತ್ತಮ ದಾರಿ ದೀಪವಾಗುತ್ತವೆ. ಲೇಖನ ತುಂಬಾ ಚೆನ್ನಾಗಿದೆ.  

\r\n


|


| ಮಹಾಲಿಂಗೇಶ್ವರ

ಕೊನೆಯ ಮಾತು , Really jewel in the crown.

\r\n\r\n

Fantastic writing brother.

\r\n\r\n

 

\r\n
Add Comment