ಹ್ಯಾಪಿ ಬರ್ತ್ ಡೇ ಶೇಕ್‌ಸ್ಪಿಯರ್
by Nataraj Huliyar
ಹೊಸಪೇಟೆಯ ಸರ್ಕಾರಿ ಪದವಿ ಕಾಲೇಜಿನ ಹುಡುಗ ಹುಡುಗಿಯರ ಜೊತೆಗೆ ಇನ್ನೂ ಕೆಲವು ಕಾಲೇಜಿನ ಐನೂರಕ್ಕೂ ಹೆಚ್ಚಿನ ಹುಡುಗ ಹುಡುಗಿಯರು `ಶೇಕ್‌ಸ್ಪಿಯರ್ ಮನೆಗೆ ಬಂದ’ ನಾಟಕ ಕುರಿತ ಸಂವಾದಕ್ಕೆ ಸೇರಿದ್ದರು. ಹುಡುಗಿಯರು ಉಳಿದವರ ಜೊತೆಗೂಡಿ ಬಳ್ಳಾರಿ ವಿಶ್ವವಿದ್ಯಾಲಯದ ಪಠ್ಯಪುಸ್ತಕವಾಗಿರುವ ನನ್ನ ನಾಟಕದ ಮೂರನೆಯ ಮುದ್ರಣವನ್ನೂ ಬಿಡುಗಡೆ ಮಾಡಿದರು. ಅದೊಂದು ಅರ್ಥಪೂರ್ಣ ಆನಂದದ ಗಳಿಗೆ.
`ಶೇಕ್‌ಸ್ಪಿಯರ್’ ಎನ್ನಬೇಕೋ `ಶೇಕ್ಸ್ ಪಿಯರ್’ ಎಂದು ಹುಡುಗಿಯೊಬ್ಬಳು ಕೇಳಿದಳು. ಕನ್ನಡದಲ್ಲಿ ಹಲ ಬಗೆಯ ಪ್ರಯೋಗಗಳಿರುವುದರಿಂದ ಈ ಅನುಮಾನ ಸಹಜವಾಗಿತ್ತು. `ಶೇಕ್‌ಸ್ಪಿಯರ್’ ಎನ್ನುವುದೇ ಸರಿಯಾದ ರೂಪ ಎಂದು ಮಕ್ಕಳಿಗೆ ಮನವರಿಕೆ ಮಾಡಿದೆ.
ಏಪ್ರಿಲ್ ೨೩ರ ಶೇಕ್‌ಸ್ಪಿಯರ್ ಹುಟ್ಟುಹಬ್ಬದ ನೆಪದಲ್ಲಿ ಅವತ್ತು, ಆಗಾಗ ಶೇಕ್‌ಸ್ಪಿಯರ್ ಬಗ್ಗೆ ಟಿಪ್ಪಣಿ ಮಾಡಿದ್ದನ್ನು ಇಲ್ಲಿ ಕೊಡುತ್ತಿರುವೆ:
ಇಂಗ್ಲಿಷ್ ಲೇಖಕ ಜೇಮ್ಸ್ ಜಾಯ್ಸ್‌ನನ್ನು‘ಜನರೇ ಇಲ್ಲದ ಒಂಟಿ ದ್ವೀಪವೊಂದರಲ್ಲಿ ನೀನೊಬ್ಬನೇ ಇರುವ ಸಂದರ್ಭ ಬರುತ್ತದೆ ಎಂದಿಟ್ಟುಕೋ; ಆಗ ಯಾವ ಲೇಖಕನ ಪುಸ್ತಕಗಳ ಜೊತೆ ಇರುತ್ತೀಯ?’ ಎಂದು ಯಾರೋ ಕೇಳಿದರು. ‘ಶೇಕ್‌ಸ್ಪಿಯರ್ ಜೊತೆಗೆ ಇರುತ್ತೇನೆ’ ಎಂದ ಜಾಯ್ಸ್.
ನನಗೂ ಹಾಗೇ ಅನ್ನಿಸಿತು. ಜೊತೆಗೆ ಬೇಂದ್ರೆ, ಲಂಕೇಶ್ ಇದ್ದರೆ ಚಂದ ಎಂದೂ ಅನ್ನಿಸಿತು! ಓದುಗ-ಓದುಗಿಯರ ಚಿತ್ತದಲ್ಲಿ ಪ್ರತಿ ದಿನ ಹುಟ್ಟುವ ವಿಲಿಯಂ ಶೇಕ್‌ಸ್ಪಿಯರ್ (೧೫೬೪-೧೬೧೬) ಇಂಗ್ಲೆಂಡಿನ ಸ್ಟ್ರಾಟ್‌ಫರ್ಡ್ ಊರಲ್ಲಿ ಏಪ್ರಿಲ್ ೨೩ನೇ ತಾರೀಕು ಹುಟ್ಟಿದ; ಐವತ್ತಮೂರನೆಯ ವಯಸ್ಸಿಗೆ ಏಪ್ರಿಲ್ ೨೩ರಂದು ಹುಟ್ಟಿದೂರಲ್ಲೇ ತೀರಿಕೊಂಡ. ಅಬ್ಬಬ್ಬಾ ಎಂದರೆ ಇಪ್ಪತ್ತೈದು ವರ್ಷಗಳ ಸೃಜನಶೀಲ ಪಯಣದಲ್ಲಿ ಅದ್ಭುತ ನಾಟಕಗಳು, ಸಾನೆಟ್ಟುಗಳನ್ನು ಸೃಷ್ಟಿಸಿ ಅಮರನಾದ ಶೇಕ್‌ಸ್ಪಿಯರ್ ಈ ಗಳಿಗೆಯಲ್ಲೂ ಮರುಹುಟ್ಟು ಪಡೆಯುತ್ತಲೇ ಇದ್ದಾನೆ.
‘ಶೇಕ್‌ಸ್ಪಿಯರ್ ರಾಜರುಗಳ ಬಗ್ಗೆ ಬರೆಯುತ್ತಾನಲ್ಲ?’ ಎಂದು ಹುಡುಗನೊಬ್ಬ ಕೇಳಿದ. ಸ್ಯಾಮುಯಲ್ ಜಾನ್ಸನ್ ಉತ್ತರ ನೆನಪಾಯಿತು: ‘ಶೇಕ್‌ಸ್ಪಿಯರ್ ರಾಜರುಗಳ ಬಗ್ಗೆ ಬರೆದರೂ ಒಟ್ಟಾರೆಯಾಗಿ ಜನರ ಕಷ್ಟಗಳ ಬಗ್ಗೆ ಬರೆದ.’
ಅಂದರೆ, ಯಾವುದೇ ಸಾಹಿತ್ಯ ಕೃತಿ ಮೂಲತಃ ರೂಪಕ ಎಂಬುದನ್ನು ಮರೆಯಬಾರದು. ಅದು ಯಾರ ಕತೆ ಹೇಳಿದರೂ ಅದು ಇನ್ನಾರದೋ ಅನುಭವವಾಗುವ ಸಾಧ್ಯತೆ ಸದಾ ಮುಕ್ತವಾಗಿರುತ್ತದೆ. ಮೇಲುನೋಟಕ್ಕೆ ಚರಿತ್ರೆಯ ಕೇಂದ್ರದಲ್ಲಿರುವ ವ್ಯಕ್ತಿಗಳ, ಚರಿತ್ರೆಯನ್ನು ಬದಲಿಸಲೆತ್ನಿಸುವ, ಚರಿತ್ರೆಯ ಚಲನೆಯ ಹೊಡೆತಕ್ಕೆ ಸಿಕ್ಕ, ವ್ಯಕ್ತಿಗಳ ಒಳ ಮನಸ್ಸಿಗೆ ಏನಾಗುತ್ತದೆ ಎಂಬ ದೊಡ್ಡ ಪ್ರಶ್ನೆ ಶೇಕ್‌ಸ್ಪಿಯರ್ ಎದುರಿಗಿತ್ತು. ಆದರೆ ಹ್ಯಾಮ್ಲೆಟ್ ಇರಲಿ, ಥರ್‍ಸೈಟಿಸ್ ಇರಲಿ; ಅಥವಾ ಪೂಲ್, ಒಥೆಲೋ, ಓಫೀಲಿಯಾ, ಬ್ರೂಟಸ್ ಇರಲಿ…ಎಲ್ಲರೂ ನನ್ನ ಒಳಕನ್ನಡಿಗಳಂತೆ ಕಾಣತೊಡಗುತ್ತಾರೆ. ಇದು ನಾನು ಶೇಕ್‌ಸ್ಪಿಯರನಿಂದ ನಿತ್ಯ ಕಲಿಯುವ ಪಾಠ. ’ಶೇಕ್‌ಸ್ಪಿಯರ್ ನಮ್ಮೆಲ್ಲರನ್ನೂ ಕಂಡು ಹಿಡಿದ; ಅಂದರೆ, ಅವನಿಲ್ಲದಿದ್ದರೆ ನಮ್ಮೊಳಗೇ ಇದ್ದ ಭಾವಗಳನ್ನು ಕಾಣದೇ ಸುಮ್ಮನಿರುತ್ತಿದ್ದ ನಾವು, ಅವನಿಂದಾಗಿ ಈ ಭಾವಗಳನ್ನು ನೋಡುತ್ತಿದ್ದೇವೆ’ ಎನ್ನುತ್ತಾನೆ ಹೆರಾಲ್ಡ್ ಬ್ಲೂಮ್.
ಶೇಕ್‌ಸ್ಪಿಯರ್ ನಾಟಕಗಳ ನಿತ್ಯ ಜೀವಂತಿಕೆಗೆ ಇನ್ನೊಂದು ಕಾರಣ, ಅವನು ಸಂಪೂರ್ಣವಾಗಿ ರಂಗಭೂಮಿಯ ವ್ಯಕ್ತಿಯಾಗಿದ್ದುದು. ಓದುವವರನ್ನು, ನೋಡುವವರನ್ನು ಸದಾ ಎಚ್ಚರದಲ್ಲಿಡುವ ಕಲೆ ಅವನಿಗೆ ಒಲಿದುಬಿಟ್ಟಿತ್ತು. ದುರಂತ, ಹಾಸ್ಯ, ತೀವ್ರ ಚಿಂತನೆ ಎಲ್ಲವನ್ನೂ ಹೇಳಬಲ್ಲ ನುಡಿಗಟ್ಟುಗಳು ದಕ್ಕಿದ್ದವು. ಕತೆಯ ಓಟ, ಪಾತ್ರಗಳ ತೀವ್ರ ಸ್ಥಿತಿಯ ನಾಟ್ಯೀಕರಣದ ಜೊತೆಜೊತೆಗೇ ಭಾಷೆಯ ಬಗೆಬಗೆಯ ಆಟಗಳ ಮೂಲಕವೂ ನಮ್ಮನ್ನು ಹಿಡಿದಿಡುವ ಕೌಶಲ ಅವನಿಗಿತ್ತು. ‘ಜೂಲಿಯಸ್ ಸೀಸರ್’ ನಾಟಕದ ಈ ಸಂಭಾಷಣೆ ನೋಡಿ:
ಬ್ರೂಟಸ್: ತಾರೀಕು ಎಷ್ಟು?
ಸೇವಕ: (ಒಳ ಹೋಗಿ ಕ್ಯಾಲೆಂಡರ್ ನೋಡಿ ಬಂದು) ಮಾರ್ಚ್ ಹದಿನೈದು ದಿನಗಳನ್ನು ವೇಸ್ಟ್ ಮಾಡಿದೆ!
ಈ ಉತ್ತರ ಕೇಳಿದ ತಕ್ಷಣ ನಮ್ಮೊಳಗೆ ಲವಲವಿಕೆ ಮೂಡುತ್ತದೆ. ಜಾಣ ಮಾತಿನ ಜೀವಂತಿಕೆಯೆಂದರೆ ಇದೇ! ಹೊಸಪೇಟೆಯ ಹುಡುಗ, ಹುಡುಗಿಯರ ಎದುರು ಈ ಸಂಭಾಷಣೆ ನೆನಪಾದಾಗ, ‘ಹೌದಲ್ಲವೆ? ಈ ವರ್ಷದ ನನ್ನ ಮಾರ್ಚ್ ತಿಂಗಳು ವೇಸ್ಟ್ ಆಗಿದೆಯಲ್ಲವೆ?’ ಎಂಬ ಫಿಲಸಾಫಿಕಲ್ ಪ್ರಶ್ನೆ ನನ್ನಲ್ಲಿ ಮೂಡಿತು! ಹೀಗೆ ಸಾಧಾರಣ ಎನ್ನಿಸುವ ಮಾತುಗಳು ಫಿಲಾಸಫಿಯ ಮಟ್ಟಕ್ಕೇರುವ ಭಾಗ್ಯ ಲೋಕದ ಬಹುತೇಕ ಲೇಖಕರಿಗೆ ಈತನಕ ಸಾಧ್ಯವಾದಂತಿಲ್ಲ! ‘ಹ್ಯಾಮ್ಲೆಟ್’ ನಾಟಕದ ಗ್ರೇವ್ ಡಿಗ್ಗರ್ ದೃಶ್ಯದಲ್ಲಿ ಗೋರಿ ತೋಡುವವನನ್ನು ‘ಯಾರನ್ನು ಹೂಳುತ್ತಿದ್ದೀಯ?’ ಎಂದು ಹ್ಯಾಮ್ಲೆಟ್ ಕೇಳುತ್ತಾನೆ; ಗೋರಿ ತೋಡುವವನು ‘ನಿನ್ನೆಯವರೆಗೆ ಹೆಂಗಸಾಗಿದ್ದವಳನ್ನು’ ಎನ್ನುತ್ತಾನೆ! ಕರಾರುವಾಕ್ಕಾದ ವರ್ಣನೆ! ಸತ್ತ ಮೇಲೆ ಹೆಂಗಸೇನು! ಗಂಡಸೇನು!
‘ರಾತ್ರಿ ಟೈಮೆಷ್ಟು?’ಎನ್ನುವ ಬದಲು ‘ಹೌ ಗೋಸ್ ದಿ ನೈಟ್ ಬಾಯ್’ ಎಂದು ಒಬ್ಬ ಕೇಳಿದಾಗ, ಮತ್ತೊಬ್ಬ ‘ರಾತ್ರಿ ಕೋಮಲವಾಗಿದೆ’ಎಂದು ಉತ್ತರ ಕೊಡುತ್ತಾನೆ! ಒಂದೆರಡು ಮಾತಾಡುವ ಸಣ್ಣ ಪುಟ್ಟ ಪಾತ್ರಗಳಿಗೂ ಶೇಕ್‌ಸ್ಪಿಯರ್ ವಿಶಿಷ್ಟ ಆ್ಯಕ್ಷನ್ನನ್ನೋ, ಚುರುಕಾದ ಅರ್ಥಪೂರ್ಣ ಮಾತನ್ನೋ ಕೊಡುವುದರಿಂದ ಇಲ್ಲಿ ಎಲ್ಲರೂ ಜೀವಂತ. ‘ಜೂಲಿಯಸ್ ಸೀಸರ್’ನಾಟಕದ ಮೊದಲ ದೃಶ್ಯದಲ್ಲಿ ಅಧಿಕಾರಿಯೊಬ್ಬ ‘ನೀನು ಏನು ಕೆಲಸ ಮಾಡುತ್ತೀಯ?’ ಎಂದು ಚಪ್ಪಲಿ ಹೊಲೆಯುವವನನ್ನು ಕೇಳುತ್ತಾನೆ. ಅವನು ‘ಐ ಆ್ಯಮ್ ಎ ಮೆಂಡರ್ ಆಫ್ ಬ್ಯಾಡ್ ಸೋಲ್ಸ್’ ಎನ್ನುತ್ತಾನೆ. ಇಲ್ಲಿ ‘ಸೋಲ್’ ಎಂಬ ಪದಕ್ಕೆ ಆತ್ಮ ಹಾಗೂ ಚಪ್ಪಲಿಯ ಅಟ್ಟೆ ಎರಡೂ ಅರ್ಥಗಳು ಹೊರಡುತ್ತವೆ! ‘ಅದೇನು ಸರಿಯಾಗಿ ಹೇಳಯ್ಯಾ’ ಎಂದು ಅಧಿಕಾರಿ ರೇಗಿದರೆ, ‘ನಿನ್ನನ್ನೂ ರಿಪೇರಿ ಮಾಡಬಲ್ಲೆ... ನಿನ್ನನ್ನೂ ಹೊಲೆಯಬಲ್ಲೆ’ ಎಂದು ಚಮ್ಮಾರ ಆ ಅಧಿಕಾರಿಯ ಬಗ್ಗೆ ತನ್ನೊಳಗಿನ ಸಿಟ್ಟನ್ನು ತಮಾಷೆಯಾಗಿ ಹೇಳುತ್ತಾ ಅವನನ್ನು ರೇಗಿಸುತ್ತಾನೆ; ‘ಐ ಆ್ಯಮ್ ಎ ಸರ್ಜನ್ ಆಫ್ ಓಲ್ಡ್ ಶೂಸ್’ಎನ್ನುತ್ತಾನೆ. ಅಧಿಕಾರಿಗೆ ತಲೆ ಕೆಟ್ಟು ಹೋಗುತ್ತದೆ!
ಈ ಪುಟ್ಟ ಪಾತ್ರಗಳು ಖಾಯಮ್ಮಾಗಿ ಉಳಿಯುತ್ತವೆ; ಹಾಗೆಯೇ ದುರಂತ ದೃಶ್ಯಗಳಲ್ಲಿ ಅವನ ಭಾಷೆಯ ಭಾವಗೀತೆಯ ತೀವ್ರತೆ ಹಾಗೂ ಆಡುನುಡಿ ಕೂಡ. ವೃದ್ಧ ಲಿಯರ್ ಸತ್ತ ತನ್ನ ಮಗಳು ಕಾರ್ಡೀಲಿಯಾಳನ್ನು ಕಂಡು ‘ಒಂದು ನಾಯಿಗೆ, ಕುದುರೆಗೆ, ಇಲಿಗೆ ಇಲ್ಲಿ ಜೀವವಿದೆ; ನಿನಗ್ಯಾಕವ್ವ ಜೀವವಿಲ್ಲ?’ ಎಂದು ಮರುಗುವಾಗ ನಾವು ಕರಗಿ ಹೋಗುತ್ತೇವೆ.
ಶೇಕ್‌ಸ್ಪಿಯರ್ ೧೮೦೦ ಹೊಸ ಪದ ಪ್ರಯೋಗಗಳನ್ನು ಮಾಡಿರುವುದನ್ನು ವಿದ್ವಾಂಸರು ಹೆಕ್ಕಿ ತೋರಿಸಿದ್ದಾರೆ: ಅಸಾಸಿನೇಷನ್, ಅಪ್‌ಸ್ಟೇರ್ಸ್, ಕೋಲ್ಡ್ ಬ್ಲಡೆಡ್, ಐರನ್ ಹೀಲ್, ಗಾಸಿಪ್, ಲಾಫಬಲ್, ಅನ್‌ಡ್ರೆಸ್, ಅರೌಸ್…ಹೀಗೆ ಶೇಕ್‌ಸ್ಪಿಯರ್‌ನಲ್ಲಿ ಹೊಸ ಪದವೊಂದು ಹುಟ್ಟುತ್ತದೆ; ಎರಡು ಶಬ್ದಗಳು ಸೇರಿ ನವಪದ ನಿರ್ಮಾಣವಾಗುತ್ತದೆ. ಹಳೆಯ ಶಬ್ದಗಳು ರೂಪಾಂತರಗೊಳ್ಳುತ್ತವೆ; ಚರಿತ್ರೆಯ ಘಟನೆಗಳು, ಪರಿಚಿತ ಕತೆಗಳು ಹೊಸ ದರ್ಶನಗಳ ನಾಟಕಗಳಾಗುತ್ತವೆ.
ಶೇಕ್‌ಸ್ಪಿಯರ್ ತನ್ನ ನಾಟಕಗಳ ಕಥಾವಸ್ತು, ಘಟನಾವಳಿಗಳು, ಪಾತ್ರಗಳ ಬೆಳವಣಿಗೆಗಳ ಜೊತೆಜೊತೆಗೇ ಬದುಕಿನ ಗಾಢ ಫಿಲಾಸಫಿಗಳನ್ನು ಸಹಜವಾಗಿ ಹಬ್ಬಿಸಿದ. ‘ದ ಮರ್ಚೆಂಟ್ ಆಫ್ ವೆನಿಸ್’ ನಾಟಕದಲ್ಲಿ ಸಾಲಿಗ ಶೈಲಾಕನ ದುರಾಸೆ, ಕ್ರೌರ‍್ಯ ತೋರಿಸುತ್ತಲೇ, ಪೋರ್ಷಿಯಾ ಮೂಲಕ ಕರುಣೆಯ ಸಂದೇಶವೂ ಮೂಡುತ್ತದೆ:
ಕರುಣೆ ಹನಿ ಮಳೆಯ ಹಾಗೆ
ಇಳೆಯೆಡೆಗೆ ಇಳಿಯುವುದು;
ಕೊಡುವವನನ್ನೂ ಹರಸುವುದು;
ಪಡೆಯುವವನನ್ನೂ ಹರಸುವುದು.
ಪ್ರೀತಿ, ದ್ವೇಷ, ಅಗಲಿಕೆ, ಮಿಲನ, ಸಾವು, ಕಾದಾಟ, ಅತಿಯಾಸೆ, ಕಾಮ ಮುಂತಾದ ತೀವ್ರ ಸ್ಥಿತಿಗಳಲ್ಲಿ ಗಂಡು ಹೆಣ್ಣುಗಳ ವಿಚಿತ್ರ, ಸಂಕೀರ್ಣ ಭಾವನೆಗಳು, ಊಹಾತೀತ ವರ್ತನೆಗಳು ಪ್ರಕಟವಾಗುವುದನ್ನು ಶೇಕ್‌ಸ್ಪಿಯರ್ ಕಂಡುಕೊಂಡ. ಎಲ್ಲ ಸರಿಯಿರುವಂತೆ ಕಾಣುತ್ತಿರುವಾಗಲೇ ಮನುಷ್ಯನ ಬದುಕು ಯಾಕೆ ನಾಶವಾಗುತ್ತದೆ? ಮನುಷ್ಯ ತನ್ನ ಬದುಕನ್ನು ತಾನೇ ಯಾಕೆ ನಾಶ ಮಾಡಿಕೊಳ್ಳುತ್ತಾನೆ? ಈ ಗಾಢ ಪ್ರಶ್ನೆಗಳು ಶೇಕ್‌ಸ್ಪಿಯರ್ ಪಾತ್ರಗಳಲ್ಲಿ ಸಂಕೀರ್ಣವಾಗುತ್ತವೆ. ಸೇನಾನಾಯಕ ಮ್ಯಾಕ್‌ಬೆತ್ ಯುದ್ಧ ಗೆದ್ದು ಬಂದ ಮೇಲೆ ಅವನೊಳಗೆ ತಾನೇ ರಾಜನಾಗಬೇಕೆಂಬ ಆಸೆ ಹುಟ್ಟಿ, ಅದು ಅವನನ್ನು ದುರಂತಕ್ಕೂ ಒಯ್ಯುತ್ತದೆ. ಆದರೆ ‘ಆ ಆಸೆ ಅವನಲ್ಲಿ ಹುಟ್ಟಿದ್ದು ತಪ್ಪೆ?’ ಎಂಬ ಸೂಕ್ಷ್ಮ ಪ್ರಶ್ನೆಯೂ ನಮಗೆ ಎದುರಾಗುತ್ತದೆ.
ಕಿಂಗ್ ಲಿಯರ್ ಆ ಇಳಿವಯಸ್ಸಿನಲ್ಲಿ ತನ್ನ ಹೆಣ್ಣು ಮಕ್ಕಳಿಗೆ ರಾಜ್ಯ ಹಂಚುವ ಮೊದಲು ‘ನಿಮಗೆ ನನ್ನನ್ನು ಕಂಡರೆ ಎಷ್ಟು ಪ್ರೀತಿ, ಹೇಳಿ ನೋಡೋಣ?’ ಎಂಬ ಹುಡುಗಾಟಿಕೆಯ ಪ್ರಶ್ನೆಯನ್ನು ಯಾಕೆ ಕೇಳಿದ? ಅವನ ಕೊನೆಯ ಮಗಳು ಕಾರ್ಡೀಲಿಯಾ ತನ್ನ ಅಕ್ಕಂದಿರಂತೆ ಒಂಚೂರು ಉತ್ಪ್ರೇಕ್ಷೆ ಮಾಡಿ, ‘ಅಪ್ಪಾ ನಿನ್ನನ್ನು ಕಂಡರೆ ನನಗೆ ಸಿಕ್ಕಾಪಟ್ಟೆ ಪ್ರೀತಿ!’ ಎಂದಿದ್ದರೆ ಲಿಯರ್‌ನ ದುರಂತ ಸರಣಿ ತಪ್ಪುತ್ತಿತ್ತೆ? ಸದಾ ಆತ್ಮಪರೀಕ್ಷೆ ಮಾಡಿಕೊಳ್ಳುವ ಬುದ್ಧಿಜೀವಿ ಹ್ಯಾಮ್ಲೆಟ್ ತನ್ನ ತಂದೆಯ ಸಾವಿನ ಪ್ರತೀಕಾರದ ಸುಳಿಯಲ್ಲಿ ಯಾಕೆ ಸಿಕ್ಕಿ ಹಾಕಿಕೊಂಡು ನಾಶವಾದ?
‘ಜೂಲಿಯಸ್ ಸೀಸರ್’ ನಾಟಕದಲ್ಲಿ ಗಣ್ಯ ಸೆನೇಟರ್ ಆಗಿದ್ದ ಬ್ರೂಟಸ್ ಯಾಕೆ ಕ್ಯಾಸಿಯಸ್‌ನ ಸಂಚನ್ನು ಒಪ್ಪಿದ? ಯಾಕೆ ಸೀಸರ್‌ನ ಕೊಲೆ ಮಾಡಲು ತಕ್ಕ ತರ್ಕ, ನ್ಯಾಯಬದ್ಧತೆ ಸೃಷ್ಟಿಸಿಕೊಂಡ? ಮನುಷ್ಯನ ಆತ್ಮಪರೀಕ್ಷೆ ಯಾಕೆ ಅವನಿಗೆ ಸಕಾಲಕ್ಕೆ ಕೈ ಕೊಡುತ್ತದೆ? ಸೀಸರ್ ವಿರುದ್ಧದ ಸಂಚಿನಲ್ಲಿ ಭಾಗಿಯಾಗುವ ಬ್ರೂಟಸ್‌ಗೆ ಒಂದು ಕ್ಷಣ ‘ತೋರಿಕೆಯ ಹಾಗೆ ಮನುಷ್ಯ ಇದ್ದಿದ್ದರೆ?’ ಎಂಬ ಸೂಕ್ಷ್ಮ ಪ್ರಶ್ನೆಯೂ ಎದುರಾಗುತ್ತದೆ. ಈ ಮನುಷ್ಯ ಹೀಗೆ ಕಾಣುತ್ತಾನೆ; ಆದರೆ ನಿಜವಾಗಿಯೂ ಅವನು ಹೇಗಿದ್ದಾನೆ ನೋಡೋಣ ಎಂಬ ಹುಡುಕಾಟ ಶೇಕ್‌ಸ್ಪಿಯರ್ ನಾಟಕಗಳಲ್ಲಿ ಆಗಾಗ್ಗೆ ಸುಳಿಯುತ್ತದೆ. ಮಾನವ ಬದುಕಿನ ತೋರಿಕೆ-ವಾಸ್ತವಗಳ ನಡುವಣ ವ್ಯತ್ಯಾಸ ಕುರಿತ ಟೀಕೆ, ಅಣಕ ಹಾಗೂ ದಿಗ್ಭ್ರಮೆ ಇಲ್ಲಿ ಮತ್ತೆ ಮತ್ತೆ ಸುಳಿಯುತ್ತದೆ.
ಜಗತ್ತಿನ ಎಲ್ಲೆಡೆ ಜನ ತತ್ವಜ್ಞಾನಿಗಳನ್ನು ಉಲ್ಲೇಖಿಸುವಂತೆ ಶೇಕ್‌ಸ್ಪಿಯರ್ ಪಾತ್ರಗಳ ಮಾತುಗಳನ್ನು ಉಲ್ಲೇಖಿಸುತ್ತಾರೆ. ಪ್ರೇಮಿಗಳು ಅವನ ರೋಮಿಯೋ, ಜೂಲಿಯೆಟ್, ಮಿರಾಂಡ, ಫರ್ಡಿನೆಂಡ್ ಥರದ ಮುಗ್ಧ ರಮ್ಯ ಪ್ರೇಮಿಗಳಿಂದ ಸ್ಫೂರ್ತಿ ಪಡೆಯುತ್ತಲೇ ಇರುತ್ತಾರೆ. ಜಗತ್ತಿನ ನಾಟಕ, ಸಿನಿಮಾಗಳಲ್ಲಂತೂ ಅವನ ನಾಟಕಗಳ ಪಾತ್ರಗಳು, ಕಥಾವಸ್ತುಗಳು ಪ್ರತ್ಯಕ್ಷವಾಗುತ್ತಲೇ ಇರುತ್ತವೆ. ‘ರೋಮಿಯೋ ಅಂಡ್ ಜೂಲಿಯೆಟ್’ ಹಿಂದಿಯಲ್ಲಿ ‘ರಾಮ್ ಲೀಲಾ’ ಎಂಬ ಸಿನಿಮಾ ಆಯಿತು; ‘ಒಥೆಲೋ’ ‘ಓಂಕಾರ್’ ಆಯಿತು. ಅಕಿರ ಕುರೊಸಾವಾ ಸಿನಿಮಾಗಳಲ್ಲಿ ಶೇಕ್‌ಸ್ಪಿಯರ್ ನಾಟಕಗಳ ವಿಶಿಷ್ಟ ವ್ಯಾಖ್ಯಾನಗಳು ಹುಟ್ಟಿವೆ.
ಜೀವಮಾನಪೂರ್ತಿ ಶೇಕ್‌ಸ್ಪಿಯರ್ ಅಧ್ಯಯನದಲ್ಲೇ ತೊಡಗಿರುವ ಶೇಕ್‌ಸ್ಪಿಯರಿಯನ್ ಸ್ಕಾಲರುಗಳು, ಜಗತ್ತಿನ ಎಲ್ಲ ಭಾಗಗಳ ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಲಕ್ಷಾಂತರ ಬೋಧಕ ಬೋಧಕಿಯರು, ವಿಮರ್ಶಕ ವಿಮರ್ಶಕಿಯರು, ಶೇಕ್‌ಸ್ಪಿಯರ್ ಕೃತಿಗಳನ್ನು ವಿಸ್ತರಿಸುತ್ತಾ ತಮ್ಮೊಳಗೂ ನವಸ್ಫೂರ್ತಿ ತುಂಬಿಕೊಂಡಿದ್ದಾರೆ; ಸೂಕ್ಷ್ಮವಾಗಿದ್ದಾರೆ. ಶೇಕ್‌ಸ್ಪಿಯರ್ ನಾಟಕಗಳಲ್ಲಿ ಸ್ತ್ರೀವಿರೋಧಿ ಧೋರಣೆಗಳನ್ನು ಗುರುತಿಸಿರುವ ಸ್ತ್ರೀವಾದಿ ವಿಮರ್ಶಕಿಯರಿದ್ದಾರೆ. ಶೇಕ್‌ಸ್ಪಿಯರ್‌ನ ಪಾತ್ರಗಳಲ್ಲಿ ಯಹೂದಿಗಳ ವಿರುದ್ಧ ಇರುವ ಪೂರ್ವಗ್ರಹಗಳನ್ನು ತೋರಿಸಿದವರಿದ್ದಾರೆ. ‘ಒಥೆಲೋ’ಪಾತ್ರ ಸೃಷ್ಟಿಯಲ್ಲಿ ಆಫ್ರಿಕನ್ನರ ಬಗ್ಗೆ ಅಸಹನೆಯಿದೆ ಎನ್ನುವವರಿದ್ದಾರೆ.
ಅದೇನೇ ಇದ್ದರೂ, ಅವನ ನಾಟಕಗಳ ಹಲವು ಸ್ತರಗಳ ಅರ್ಥ ನಮ್ಮಲ್ಲಿ ವಿಸ್ಮಯ ಹುಟ್ಟಿಸುತ್ತಲೇ ಇರುತ್ತದೆ. ಓದುವವರನ್ನು ಸೃಜನಶೀಲವಾಗಿಸುವ ಭಾವಗೀತಾತ್ಮಕ ಸಂಭಾಷಣೆಗಳು, ಶಬ್ದಗಳ ಬಳುಕು, ತಿರುವು, ಭಾಷೆಯ ಚಿನ್ನಾಟ ನಮ್ಮನ್ನು ರೋಮಾಂಚನಗೊಳಿಸುತ್ತಲೇ ಇರುತ್ತದೆ. ಪ್ರತಿ ಸಲ ಶೇಕ್‌ಸ್ಪಿಯರ್ ಕೃತಿಗಳನ್ನು ಓದಿದಾಗ, ನಾಟಕ ಆಡಿದಾಗ, ನೋಡಿದಾಗ, ಅಲ್ಲಿ ಹೊಸಹೊಸ ಅರ್ಥಗಳು, ತಾತ್ವಿಕ ಅರಿವುಗಳು ಸೃಷ್ಟಿಯಾಗಿ ನಮ್ಮನ್ನು ಬೆರಗಾಗಿಸುತ್ತಿರುತ್ತವೆ. ಶೇಕ್‌ಸ್ಪಿಯರ್ ನಾಟಕಗಳನ್ನು ಹೊಕ್ಕಾಗಲೆಲ್ಲ ಅರ್ಥಪೂರ್ಣವಾದ ಸೃಜನಶೀಲ ಕ್ರಿಯೆಯಲ್ಲಿ ತೊಡಗಿದ ಸಾರ್ಥಕ ಭಾವ, ನಾವೇ ಬರೆಯುತ್ತಿರುವ ಭಾವ ಸದಾ ನಮ್ಮೊಳಗೆ ಹುಟ್ಟುತ್ತಿರುತ್ತದೆ.
ಈಗ ನಮ್ಮೆದುರು ಸರಳ ಇಂಗ್ಲಿಷ್ ಶೇಕ್‌ಸ್ಪಿಯರ್, ಕನ್ನಡ ಶೇಕ್ ಸ್ಪಿಯರ್ ಎಲ್ಲವೂ ಇವೆ. ಭಗವಾನ್ ಥರದವರ ಸುಂದರ ಕನ್ನಡಾನುವಾದಗಳಿವೆ. ಈ ಸಲದ ಶೇಕ್‌ಸ್ಪಿಯರ್ ಹುಟ್ಟು ಹಬ್ಬದ ದಿನದಿಂದಲಾದರೂ ನಿಮ್ಮ ಶೇಕ್‌ಸ್ಪಿಯರ್ ಯಾನ ಶುರುವಾಗಲಿ!
ಹ್ಯಾಪಿ ಬರ್ತ್ ಡೇ ವಿಲಿಯಂ!
Shakespeare Manege Banda Nataka YouTube Video Available Below
Comments
12 Comments
| Veerendra Patil C
Meaningful insights into Shakespeare sir.
| Dr.Prabhakar
Beautiful sketch of Shakespeare. Congratulations.
| Kaavya
ಶೇಕ್ ಸ್ಪಿಯರ್ ಕೃತಿಗಳು ಹಾಗೂ ಪಾತ್ರಗಳ ಜೊತೆಗೆ ಒಂದು ಚೇತೋಹಾರಿ ವಿಹಾರ ಮಾಡಿಸಿದ್ದಕ್ಕೆ ಧನ್ಯವಾದಗಳು. Nice write up.
| Dr. Narasimhamurthy Halehatti
ಕೆ.ಎಸ್.ಭಗವಾನ್ ಅವರು ಅನುವಾದಿಸಿರುವ 'ವೆನಿಸಿನ ವರ್ತಕ' ಬೆಂಗಳೂರು ನಗರ ವಿಶ್ವವಿದ್ಯಾಲಯದಲ್ಲಿ ಬಿಕಾಂ ವಿದ್ಯಾರ್ಥಿಗಳಿಗೆ ಪಠ್ಯವಾಗಿತ್ತು. ಶೇಕ್ಸ್ ಪಿಯರ್ ಜಗತ್ತಿನ ಪ್ರಖ್ಯಾತ ನಾಟಕಕಾರ. ಮತ್ತೆ ಶೇಕ್ಸ್ ಪಿಯರ್ ಯಾನಕ್ಕೆ ಈ ಮೂಲಕ ಚಾಲನೆ ಕೊಟ್ಟ ನಿಮಗೆ ಅಭಿನಂದನೆಗಳು.
| ಮಂಜುನಾಥ್ ಸಿ ನೆಟ್ಕಲ್
ಶೇಕ್ ಸ್ಪಿಯರ್ ನಮ್ಮನ್ನು ಕಾಡುವಂತೆ ಮಾಡುವ ಅವನ ಕೃತಿಗಳನ್ನು ಮತ್ತೆ ಮತ್ತೆ ಓದುವಂತೆ ಪ್ರೇರೇಪಿಸುವ ಬರಹ. ಶೇಕ್ ಸ್ಪಿಯರ್ ನಿಮ್ಮನ್ನು ಆವರಿಸಿದಂತೆ ಎಲ್ಲಾ ಹೊಸ ಹೊಸ ಸಾಹಿತ್ಯ ವಿದ್ಯಾರ್ಥಿಗಳನ್ನು ಆವರಿಸುವಂತೆ ಮಾಡಲಿ ಸರ್ ಈ ನೆನಪಿನ ಸಾಲುಗಳು ಧನ್ಯವಾದಗಳು.
| Dharmendra Urs
ಓದಿದೆ. ಹೊಸಪೇಟೆ ಕಾಲೇಜಿನ ಓದುಗ ಓದುಗಿಯರ ಬಗ್ಗೆ ಹೆಮ್ಮೆ ಎನಿಸಿತು...
| ಡಾ.ಪ್ರಭಾಕರ್
Very happy to know that your play is prescribed for Vijayanagara Shrikrishna Devaraya University Courses!
| ಮಾಲತಿ
ಹೀಗೆ ತನ್ನ ಓದುಗರ ಮನದಲ್ಲಿ ಮಾನವತೆಯ ಹೂವನ್ನರಳಿಸಿದ ಆ ಅಗಾಧ ಕಲೆಗಾರ ಶೇಕ್ ಸ್ಪಿಯರನನ್ನು ನೆನಪಿಸಿದ್ದಕ್ಕೆ ಧನ್ಯವಾದಗಳು! ಅವನ ನಾಟಕಗಳನ್ನು ಕಲಿಸಿ, ಅಭಿನಯಿಸಿ, ನಿರ್ದೇರ್ಶಿಸಿ ನಾನು ಪಡೆದ ಆನಂದವನ್ನು ವರ್ಣಿಸಲಾರೆ!
| ದೇವಿಂದ್ರಪ್ಪ ಬಿ.ಕೆ.
ಹೊಸಪೇಟೆಯಲ್ಲಿ ನಡೆದ ಶೇಕ್ ಸ್ಪಿಯರ್ ಮನೆಗೆ ಬಂದ ಪುಸ್ತಕ ಬಿಡುಗಡೆ ಮತ್ತು ಸಂವಾದ ಕಾರ್ಯಕ್ರಮದಲ್ಲಿ ನಾನು ಕೂಡ ಭಾಗವಹಿಸಿದ್ದೆ. ಅಲ್ಲಿನ ಯುವ ಓದುಗ ಓದುಗಿಯರ ಕಣ್ಣಲ್ಲಿನ ಕುತೂಹಲ ನೋಡಿ ಶೇಕ್ ಸ್ಪಿಯರ್ ಚಿತ್ರಿಸಿದ ಅನೇಕ ಪಾತ್ರಗಳು ಕಣ್ಣ ಮುಂದೆ ಬಂದವು. ಶೇಕ್ ಸ್ಪಿಯರ್ ಮತ್ತೆ ಮತ್ತೆ ಕನ್ನಡದಲ್ಲಿ ಪ್ರಸ್ತುತ ಆಗುತ್ತಲೇ ಬರುತ್ತಿದ್ದಾನೆ. ನಮ್ಮಲ್ಲಿನ ಕುವೆಂಪು, ಬೇಂದ್ರೆ ಅವರಂತೆ ಶೇಕ್ ಸ್ಪಿಯರ್ ಮತ್ತೆ ಎದುರಾಗುತ್ತಿದಾನೆ. ನಮ್ಮೊಳಗಿನ ಅನೇಕ ಗುಣ ದೋಷಗಳನ್ನು ಓದುಗರ ಮುಂದಿಡುತ್ತಾನೆ. ಶೇಕ್ ಸ್ಪಿಯರ್ ನಾಟಕ ಓದುವುದಕ್ಕೂ, ರಂಗಭೂಮಿಯಲ್ಲಿ ಅಭಿನಯ ನೋಡುವುದು ತೀವ್ರ ಪರಿಣಾಮ ಬೀರುತ್ತದೆ ಎಂಬುದರಲ್ಲಿ ಅನುಮಾನವಿಲ್ಲ. ಶೇಕ್ ಸ್ಪಿಯರ್ ಬಗ್ಗೆ ಅನೇಕ ಒಳ ನೋಟಗಳನ್ನು ಅರಿಯಲು ನಿಮ್ಮ ಭಾಷಣ ಸಹಕಾರಿಯಾಯಿತು.
| Dr. Doreswamy
Teaching Shakespeare is worthier than reading Shakespeare alone
| Chandrashekhara Talya
ಶೇಕ್ ಸ್ಪಿಯರ್ ನ ಹ್ಯಾಮ್ಲೆಟ್ ಪದವಿ ಹಂತದಲ್ಲಿ ನನಗೆ ಪಠ್ಯವಾಗಿತ್ತು, ಕಿಂಗ್ ಲಿಯರ್ ನನ್ನನ್ನು ಕಲಕಿದ ಪಾಪದ ಮನುಷ್ಯ, ಮಿರಾಂಡಳ ಮುಗ್ಧತೆ ನನ್ನನ್ನು ಬೆರಗುಗೊಳಿಸಿತ್ತು, ವಂಚನೆ ಮನುಷ್ಯನ ಆಳದಲ್ಲಿ ಹರಡಿ ಹಬ್ಬಿದ ಬೇರು. ಸೀಜರ್, 'you too brutus' ಉದ್ಘಾರ, ಮೂವರು ಮಾಟಗಾತಿಯರು, ಇಯಾಗೋ ಇವರನ್ನೆಲ್ಲ ನಾಟಿ ಮಾಡಿ ಬೆಳೆಸಿದ ಶೇಕ್ ಸ್ಪಿಯರ್ ಎಂದಿಗೂ ದೊಡ್ಡವನು ಎನ್ನುವುದನ್ನು ನೀವು ಕರಾರುವಾಕ್ಕಾಗಿ ಚಿತ್ರಿಸಿರುವಿರಿ, ಹ್ಯಾಟ್ಸ್ ಆಫ್
| ಡಾ. ನಿರಂಜನ ಮೂರ್ತಿ ಬಿ ಎಂ
ಸಾಂಸ್ಕೃತಿಕ ಭಿನ್ನತೆಗಳ ಮೀರಿ ಇಡೀ ಮನುಕುಲವನ್ನು ಮುಟ್ಟಿದ ಮಹಾನ್ ನಾಟಕ ಕರ್ತೃ ಶೇಕ್ಸ್ಪಿಯರ್ ನ ಬಗ್ಗೆ ವಿಶೇಷ ಒಳನೋಟಗಳನ್ನು ನೀಡುವ ಲೇಖನವಿದು. ನಾವು ನಿರ್ದಿಷ್ಟವಾಗಿ ಗಮನವಿಟ್ಟು ಉಚ್ಛಾರಣೆ ಮಾಡಿದಾಗ ಮಾತ್ರ ಶೇಕ್ ಸ್ಪಿಯರ್ ಮತ್ತು ಶೇಕ್ಸ್ ಪಿಯರ್ ಮಧ್ಯೆ ವ್ಯತ್ಯಾಸ ಗೊತ್ತಾಗುತ್ತೆ; ಇಲ್ಲದಿದ್ದರೆ ನಾವು ಯಾವುದನ್ನೇ ಉಚ್ಚರಿಸಿದರೂ ಒಂದೇ ಆಗಿ ಕೇಳಿಸುತ್ತೆ ಅಂತ ಅನಿಸುತ್ತೆ. ಇನ್ನು ಭಗವಾನರು ಶೇಕ್ ಸ್ಪಿಯರ್ ನ ನಾಟಕಗಳನ್ನು ತುಂಬಾ ಚೆನ್ನಾಗಿ ಅನುವಾದಿಸಿದ್ದಾರೆ. ಮೂಲ ಪಠ್ಯಕ್ಕೆ ತುಂಬಾ ಹತ್ತಿರವಾಗಿರುವುದರಿಂದ, ಕನ್ನಡದ ಸೊಡರಿಗೆ ಅಲ್ಲಲ್ಲಿ ತುಸು ಹೊಸತೆನಿಸಿದರೂ, ಅವರ ಅನುವಾದ ಅದ್ಭುತವಾಗಿದೆ. ನಿಜ ಹೇಳಬೇಕೆಂದರೆ, ನನಗೆ ಶೇಕ್ ಸ್ಪಿಯರ್ ನ ನಾಟಕಗಳು ಪೂರ್ಣವಾಗಿ ಅರ್ಥವಾಗಿದ್ದೇ ಅವರ ಅನುವಾದಗಳ ಮೂಲಕ. ಸಕಾಲಿಕವಾದ ಹುಳಿಯಾರರ ಈ ಲೇಖನ ಈ ಬಾರಿ ಶೇಕ್ ಸ್ಪಿಯರ್ ನ 461ನೇ ಹುಟ್ಟುಹಬ್ಬವನ್ನು ಮತ್ತು 409ನೇ ಪುಣ್ಯತಿಥಿಯನ್ನು ವಿಶಿಷ್ಟವಾಗಿಸಿದ್ದಕ್ಕೆ ನಮನಗಳು.
Add Comment