೧೨ ಆಗಸ್ಟ್ ೧೯೯೮ ಮತ್ತುUntil August
by Nataraj Huliyar
ಬಸ್ಸಿನಲ್ಲಿ ಕೂತಿದ್ದ ನಾವಿಬ್ಬರೂ -ಅಂದರೆ ಈ ಅಂಕಣಕಾರ ಮತ್ತು ಒಬ್ಬ ಕನ್ನಡ ಲೇಖಕ- ಮಾತಿನ ನಡುವೆ ‘ಡಿ. ಆರ್.’ ‘ಡಿ. ಆರ್.’ ಎನ್ನುತ್ತಿದ್ದುದನ್ನು ಆ ಹಿರಿಯ ಲೇಖಕರು ಗಮನಿಸುತ್ತಿದ್ದರು; ಅವರ ಕುತೂಹಲ ಕೆರಳಿದಂತಿತ್ತು.
ಕನ್ನಡ ಬಾರದ ಅವರು ಬಸ್ಸಿಳಿದ ನಂತರ ನನ್ನನ್ನು ಅಕ್ಕರೆಯಿಂದ ನೋಡುತ್ತಾ ಇಂಗ್ಲಿಷಿನಲ್ಲಿ ಕೇಳಿದರು: ನೀವು ಮಾತಾಡುತ್ತಿದ್ದುದು ಡಿ. ಆರ್. ನಾಗರಾಜ್ ಅವರ ಬಗೆಗೇನು?’
ಅಚ್ಚರಿಯಿಂದ, ‘ಹೂಂ’ ಎಂದೆ.
‘ಹೌ ಡು ಯೂ ನೋ ಹಿಮ್?’ ಎಂದರು.
‘ಅವರು ನನ್ನ ಪಿಎಚ್. ಡಿ. ಗೈಡ್ ಅಂಡ್ ಗುರು’ ಎಂದೆ.
‘ನಾನು ಅವರನ್ನು ಶೆಲ್ಡನ್ ಪೊಲಾಕರ ಇನ್‌ಸ್ಟಿಟ್ಯೂಟಿನಲ್ಲಿದ್ದಾಗ ಕಂಡಿದ್ದೆ. ಹತ್ತಾರು ಗಂಟೆ ಕಳೆದಿದ್ದೆ. ಗ್ರೇಟ್ ಸ್ಕಾಲರ್. ನನ್ನ ಹೆಸರು ಸೀತಾಂಶು ಯಶಸ್ಚಂದ್ರ.’
ಆಗ ನಾನು ಅವರ ಹೆಸರು ಕೇಳಿರಲಿಲ್ಲ. ಅವರೊಬ್ಬ ದೊಡ್ಡ ಗುಜರಾತಿ ಕವಿ, ನಾಟಕಕಾರ, ಸ್ಕಾಲರ್ ಎಂಬುದು ಕೂಡ ಗೊತ್ತಿರಲಿಲ್ಲ. ಅವತ್ತು ಮಧ್ಯಾಹ್ನ ಹಾಗೂ ಸುದೀರ್ಘ ಸಂಜೆ ಅವರೊಡನೆ ಕಳೆದಾಗಲೂ ಅದು ಗೊತ್ತಿರಲಿಲ್ಲ. ನನ್ನ ಮನಸ್ಸಿನಲ್ಲಿದ್ದ ಡಿ. ಆರ್. ಬಗ್ಗೆ ಅವರೂ, ಅವರ ಮನಸ್ಸಿನಲ್ಲಿದ್ದ ಡಿ.ಆರ್. ಬಗ್ಗೆ ನಾನೂ ಕುತೂಹಲಗೊಂಡಿದ್ದೆವು.
ಮಾತಿನ ನಡುವೆ ಹೇಳಿದೆ: ‘ನನ್ನ ಇಬ್ಬರು ಗುರುಗಳಾದ ಡಿ. ಆರ್. ನಾಗರಾಜ್ ಹಾಗೂ ಲಂಕೇಶರ ಬಗ್ಗೆ ಒಂದು ಸಾಂಸ್ಕೃತಿಕ ಕಥಾನಕ ಬರೆದಿದ್ದೇನೆ. ಅದರ ಹೆಸರು ‘ಇಂತಿ ನಮಸ್ಕಾರಗಳು.’
ಕನ್ನಡ ಬಾರದ ಅವರ ಮನಸ್ಸಿಗೆ ‘ಇಂತಿ ನಮಸ್ಕಾರ’ ಎಂಬ ನುಡಿಗಟ್ಟು ಠಕ್ಕನೆ ಇಳಿಯಿತು; ‘ವಾಹ್! ಇಂತಿ ನಮಷ್ಕಾರ್’ ಎನ್ನುತ್ತಲೇ ಡಿ. ಆರ್. ನೆನೆದು ಅವರ ಕಣ್ಣು ತುಂಬಿ ಬಂತು. ಡಿ. ಆರ್. ಜೊತೆ ನಾನು ಕೆಲಸ ಮಾಡಿದ್ದೆನೆಂಬ ಒಂದೇ ಕಾರಣಕ್ಕೆ ಅವರು ನನಗೆ ಕೊಟ್ಟ ದೇಶಿ ಪಠ್ಯಗಳ ಪ್ರಾಜೆಕ್ಟಿನ ಆಹ್ವಾನ ಅಚ್ಚರಿ ಹುಟ್ಟಿಸುವಂತಿತ್ತು. ‘ಡಿ. ಆರ್.ಗೆ ಪ್ರಾಚೀನ ಕನ್ನಡ ಸಾಹಿತ್ಯ ಪಠ್ಯಗಳ ಜೊತೆಗಿದ್ದ ಆಳವಾದ ಸಂಬಂಧ, ಈ ಪ್ರಾಜೆಕ್ಟಿಗೆ ಬೇಕಾದ ಅರ್ಹತೆ ಎರಡೂ ನನಗಿಲ್ಲ’ ಎಂದೆ. ಅದೆಲ್ಲ ಇಲ್ಲಿ ಮುಖ್ಯವಲ್ಲ.
ನಿಜಕ್ಕೂ ಮುಖ್ಯವಾದ ವಿಷಯವೆಂದರೆ, ಕಳೆದ ಇಪ್ಪತ್ತೈದು ವರ್ಷಗಳಲ್ಲಿ ನಾನು ಕರ್ನಾಟಕದ ಹೊರಗಿನ ರಾಜ್ಯಗಳಲ್ಲಿ, ಸೆಮಿನಾರುಗಳಲ್ಲಿ ಡಿ.ಆರ್. ಹೆಸರು ತೆಗೆದಾಗಲೆಲ್ಲ ಹಲವರಲ್ಲಿ ಉಕ್ಕುವ ಅಸಲಿ ಗೌರವ. ನಾನು ಡಿ.ಆರ್. ಹೆಸರೆತ್ತಿದ ತಕ್ಷಣ ಹೆಮ್ಮೆಯಿಂದ ಮಾತಾಡಿರುವವರಲ್ಲಿ ನಿರ್ವಸಾಹತೀಕರಣ ಚಿಂತಕರಾದ ಅಶೀಶ್ ನಂದಿ, ಮರಾಠಿ ವಿಮರ್ಶಕ ಬಾಲಚಂದ್ರ ನೆಮಾಢೆ, ಪೊಲಿಟಿಕಲ್ ಥಿಯರಿಸ್ಟ್ ಯೋಗೆಂದ್ರ ಯಾದವ್, ಕವಿ ಉದಯನ್ ವಾಜಪೇಯಿ ಹೀಗೆ ಹೆಸರುಗಳನ್ನು ಹೇಳುತ್ತಾ ಹೋಗಬಹುದು. ಅವತ್ತು ಸೀತಾಂಶು ಈ ಪಟ್ಟಿಗೆ ಸೇರಿಕೊಂಡರು.
ಇದೆಲ್ಲ ನೆನಪಾದದ್ದು ಆಗಸ್ಟ್ ತಿಂಗಳಲ್ಲಿ ಡಿ. ಆರ್. ನಿರ್ಗಮನದ ೧೨ನೇ ತಾರೀಕು ಕಂಡಾಗ. ೧೯೯೮ ಆಗಸ್ಟ್ ೧೨ರ ಬೆಳಗಿನ ಜಾವ ಡಿ. ಆರ್. ನಾಗರಾಜ್ ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಯ ಒಳಗೆ ಹೋಗಿ, ಚಿಕಿತ್ಸೆ ಪಡೆಯುವ ಮೊದಲೇ ಕೊನೆಯುಸಿರೆಳೆದಿದ್ದರು. ಗಂಟೆ ಸುಮಾರು ೨.೩೦. ಆ ಬಗ್ಗೆ ಈಗಾಗಲೇ ‘ಇಂತಿ ನಮಸ್ಕಾರಗಳು’ ಪುಸ್ತಕದಲ್ಲಿ ಬರೆದಿರುವುದರಿಂದ ಇಲ್ಲಿ ಬರೆಯುವ ಅಗತ್ಯವಿಲ್ಲ. ಮೂರ್‍ನಾಲ್ಕು ವರ್ಷಗಳ ಕೆಳಗೆ ಡಿ.ಆರ್. ಕುರಿತು ಮತ್ತೊಂದು ಪುಸ್ತಕ ಬರೆಯುವ ಅವಕಾಶವನ್ನು ಅಂದಿನ ಸಾಹಿತ್ಯ ಅಕಾಡೆಮಿಯ ಪ್ರಾದೇಶಿಕ ಕಾರ್ಯದರ್ಶಿ ಮಹಾಲಿಂಗೇಶ್ವರ್ ಇದ್ದಕ್ಕಿದ್ದಂತೆ ಸೃಷ್ಟಿಸಿದರು. ಮತ್ತೆ ಡಿ. ಆರ್. ಪುಸ್ತಕಗಳನ್ನು ಓದುವ ಖುಷಿ, ರೋಮಾಂಚನ, ಬರೆವ ಸವಾಲು…
ಓದಿನ ಬಗ್ಗೆ ಪ್ರೀತಿಯಿರುವವರಿಗೆ ಉಪಯುಕ್ತವಾಗಬಹುದೆಂದು ಇಲ್ಲೇ ನನ್ನದೊಂದು ಮೆಥೆಡ್ ಹೇಳಬಹುದು:
ಒಬ್ಬ ಲೇಖಕ, ಲೇಖಕಿ ನನಗೆ ಇಷ್ಟವಾದರೆ, ಅವರು ನಿಜಕ್ಕೂ ದೊಡ್ಡವರೆಂದು ಮನದಟ್ಟಾದರೆ, ಅವರ ಎಲ್ಲ ಕೃತಿಗಳನ್ನೂ ಓದುವ ಆನಂದ, ಅವರ ಕೃತಿ ವಿಹಾರ… ಇದು ನನ್ನ ಪ್ರಿಯವಾದ ಕೆಲಸ. ಲಂಕೇಶ್, ತೇಜಸ್ವಿ, ಅಕ್ಕಮಹಾದೇವಿ, ಬಸವಣ್ಣ, ಅಲ್ಲಮ, ಲೋಹಿಯಾ, ಮಿಲನ್ ಕುಂದೇರ, ಕಾಫ್ಕಾ, ಮಾರ್ಕ್ವೆಜ್, ಟಾಲ್‌ಸ್ಟಾಯ್, ಶೇಕ್‌ಸ್ಪಿಯರ್, ಈಚೆಗೆ ಓರಾನ್ ಪಾಮುಕ್… ಹೀಗೆ ಒಬ್ಬ ಲೇಖಕ, ಲೇಖಕಿಯ ಎಲ್ಲವನ್ನೂ ಓದುವುದೆಂದರೆ ಒಂದು ಸಂವೇದನಾ ಲೋಕವನ್ನು ಹೀರಿಕೊಳ್ಳುವುದು ಎನ್ನುವುದು ನನ್ನ ನಿರಂತರ ಅನುಭವ.
ಆ ಕಾರಣದಿಂದಲೇ, ನನಗೆ ಪ್ರಿಯವಾದ ದೊಡ್ಡ ಲೇಖಕ ತೀರಿಕೊಂಡಾಗ ’ಅಯ್ಯೋ, ಈ ಲೇಖಕನ ಮುಂದಿನ ಪುಸ್ತಕ ಸಿಕ್ಕುವುದೇ ಇಲ್ಲವಲ್ಲ…’ ಎಂಬ ದುಗುಡ ಆವರಿಸುತ್ತದೆ. ನನ್ನ ಮೆಚ್ಚಿನ ಲೇಖಕರಲ್ಲೊಬ್ಬನಾದ ಮಾರ್ಕ್ವೆಜ್‌ನ ಕೊನೇ ಪುಸ್ತಕ ’ಮೆಮೊರೀಸ್ ಆಫ್ ಮೈ ಮೆಲಾಂಕಲಿ ಹೋರ್‍ಸ್’ (ನನ್ನ ಖಿನ್ನ ಸೂಳೆಯರ ನೆನಪುಗಳು) ಓದಿದ ಮೇಲೆ, ಇನ್ನು ಮಾರ್ಕ್ವೆಜ್‌ನ ಅಚ್ಚರಿಯ ಹೊಸ ಲೋಕ ಸಿಕ್ಕುವುದಿಲ್ಲವಲ್ಲ ಎಂಬ ವಿಷಣ್ಣಭಾವ ಆವರಿಸಿತ್ತು. ೨೦೨೦ರಲ್ಲಿ ಮಾರ್ಕ್ವೆಜ್‌ನ ಕೊನೆಯ ದಿನಗಳನ್ನು ಕುರಿತು ಅವನ ಮಗ ರೊಡ್ರಿಗೊ ಗಾರ್ಸಿಯಾ ‘ಎ ಫೇರ್ ವೆಲ್ ಟು ಗ್ಯಾಬೊ ಅಂಡ್ ಮರ್ಸಿಡಿಸ್: ’ದ ಪಬ್ಲಿಕ್, ದ ಪ್ರೈವೇಟ್, ದ ಸೀಕ್ರೆಟ್’ ಎಂಬ ಪುಸ್ತಕ ಪ್ರಕಟಿಸಿದ. ಈ ಬಗ್ಗೆ ಇದೇ ಅಂಕಣದಲ್ಲಿ ’ಮಾಂತ್ರಿಕ ಮಾರ್ಕ್ವೆಜ್‌ಗೆ ಮರೆವು ಬಂದಾಗ’ ಲೇಖನದಲ್ಲಿ ಬರೆದಿರುವೆ.
READ HERE
ಮಾರ್ಕ್ವೆಜ್ ಮರೆವು ಆವರಿಸುವ ಮುನ್ನ ಬರೆದು, ‘ಪ್ರಕಟಿಸುವುದು ಬೇಡ’ ಎಂದು ಬಿಸಾಕಿದ್ದ ಪುಟ್ಟ ಕಾದಂಬರಿಯೊಂದನ್ನು ಈಚೆಗೆ ಅವನ ಮಕ್ಕಳು, ಅನುವಾದಕರು, ಎಡಿಟರ್ ಸೇರಿ ಪ್ರಕಟಿಸಿಯೇ ಬಿಟ್ಟರು. ‘ಅಂಟಿಲ್ ಆಗಸ್ಟ್’ (ಆಗಸ್ಟ್ ತನಕ)ಎಂಬ ಈ ಕಾದಂಬರಿಯನ್ನು ಮೊನ್ನೆ ಚಿಟಿಕೆ ಹೊಡೆಯುವುದರಲ್ಲಿ ಕಿಂಡಲ್‌ನಲ್ಲಿ ಕೊಂಡು ಓದಲು ಶುರು ಮಾಡಿದೆ…ಆ ರಾತ್ರಿಯೇ ಓದಿ ಮುಗಿಸಬಹುದಾಗಿದ್ದ ಕಾದಂಬರಿಯನ್ನು ಜಿಪುಣತನದಿಂದ ಕಂತಿನಲ್ಲಿ ಓದತೊಡಗಿದೆ! ಮುಗಿದೇ ಬಿಡುತ್ತದಲ್ಲ ಎಂಬ ಭಯದಿಂದ ಇನ್ನೂ ಮುಗಿಸಿಲ್ಲ! ಕುಂದೇರನ ಕೊನೇ ಕಾದಂಬರಿ ‘ದ ಫೆಸ್ಟಿವಲ್ ಆಫ್ ಇನ್ಸಿಗ್ನಿಫಿಕೆನ್ಸ್’ ಓದುವಾಗಲೂ ಎಷ್ಟೋ ರಾತ್ರಿ ಹೀಗೇ ಆಗಿತ್ತು!
ಈ ಆಗಸ್ಟ್ ತಿಂಗಳಲ್ಲಿ ‘ಅಂಟಿಲ್ ಆಗಸ್ಟ್’ ಕಾದಂಬರಿ ಓದುತ್ತಿರುವಾಗ ಡಿ.ಆರ್. ಅವರ ಆಗಸ್ಟ್ ನಿರ್ಗಮನವೂ ನೆನಪಾಗಿದ್ದು ಆಕಸ್ಮಿಕವಿರಬಹುದು. ಡಿ. ಆರ್. ಬರವಣಿಗೆಯ ಶಕ್ತಿಯ ಬಗ್ಗೆ ಮೊನ್ನೆ ಗೆಳೆಯ- ವಿಮರ್ಶಕ ದಂಡಪ್ಪ ಮತ್ತೆ ಹೇಳಿದರು: ‘ಡಿ. ಆರ್. ಪುಸ್ತಕಗಳಿಗೆ ನಾವು ಯಾವಾಗ ಬೇಕಾದರೂ ಮರಳುತ್ತಿರಬಹುದು…ಡಿ. ಆರ್. ರೂಪಕಗಳ ಬೆನ್ನು ಹತ್ತಿದ್ದರಿಂದ ಅವರ ಬರವಣಿಗೆ ಇವತ್ತಿಗೂ ಫ್ರೆಶ್ಶಾಗಿರುತ್ತದೆ.’
ಡಿ.ಆರ್. ಅವರ ರೂಪಕಾನುಸಂಧಾನದ ಜೊತೆಗೆ ಥಿಯರಿಟಿಕಲ್ ರೀಡಿಂಗಿನ ಆಳವೂ ಸೇರಿರುವುದರಿಂದ ಆ ಬರಹಗಳ ಅರ್ಥಪೂರ್ಣತೆ, ಜೀವಂತಿಕೆ ಈತನಕ ಮುಕ್ಕಾಗಿಲ್ಲ. ‘ಡಿ ಆರ್. ಕನ್ನಡದ ಮೊದಲ ಆಧುನಿಕೋತ್ತರ ಲಿಟರರಿ ಥಿಯರಿಸ್ಟ್’ ಎಂದು ಡಿ. ಆರ್. ಕುರಿತ ಅಕಾಡೆಮಿ ಪುಸ್ತಕದಲ್ಲಿ ನಾನೇ ಬರೆದ ನೆನಪು.
ಡಿ.ಆರ್. ಬರೆದ ಕೊನೆಯ ಅಪೂರ್ಣ ಪುಸ್ತಕ ’ಅಲ್ಲಮಪ್ರಭು ಮತ್ತು ಶೈವಪ್ರತಿಭೆ’ಯ ಬಗ್ಗೆ ಈಚೆಗೆ ಗೆಳೆಯ-ಲೇಖಕ ಗುಂಡೂರ್ ನನ್ನನ್ನು ಕೆಣಕುತ್ತಿರುತ್ತಾರೆ; ಈ ಕೆಣಕಿನ ಫಲವಾಗಿ ಈ ಅಲ್ಲಮಯಾನವನ್ನು ತಿರುವಿ ಹಾಕುವಾಗಲೆಲ್ಲ ಡಿ, ಆರ್. ರೂಪಕಾನ್ವೇಷಣೆಯ ಒಂದು ಜೀವಮಾನದ ಪಯಣ ರೋಮಾಂಚನ ಹುಟ್ಟಿಸುತ್ತಿರುತ್ತದೆ. ಅಲ್ಲಮನ ಹೊಸ ಹೊಸ ಅರ್ಥಗಳ ಬೆಳಕು ಮಿಂಚುತ್ತಿರುತ್ತದೆ. ಈ ಪುಸ್ತಕದ ಅನುವಾದದ ಮಹತ್ವಾಕಾಂಕ್ಷೆಯ ಸೆಣಸಾಟದಲ್ಲಿರುವ ಗುಂಡೂರ್‌ಗೆ ಹೇಳಿದೆ: ‘ಈ ಕೆಲಸ ಮಾಡಿ ಮುಗಿಸುವ ಹೊತ್ತಿಗೆ ನಿಮ್ಮ ಓದು, ಬರವಣಿಗೆ, ಶ್ರದ್ಧೆ, ಕಾನ್ಸೆಂಟ್ರೇಶನ್, ಕ್ರಿಟಿಕಲ್ ಎಬಿಲಿಟಿ, ಸಂವೇದನೆ ಎಲ್ಲದರಲ್ಲೂ ಮಹತ್ತರವಾದ ಶಿಫ್ಟ್ ಆಗುತ್ತದೆ’.
ಗುಂಡೂರ್ ಒಳಗೆ ಆ ಪಲ್ಲಟ ಆದಂತಿದೆ. ಗುಂಡೂರ್‌ಗೆ ಆದದ್ದು ಶ್ರೀಧರ ಏಕಲವ್ಯ, ಚಾಂದ್ ಪಾಶಾ, ಶಿವವೆಂಕಟಯ್ಯ, ಮೋಹನ್ ಮಿರ್ಲೆ, ಸಂಗನಗೌಡ ಹಿರೇಗೌಡ ಥರದ ಹೊಸ ಸಂಶೋಧಕರಲ್ಲಿ ಯಾಕಾಗಲಾರದು? ಗಂಭೀರವಾಗಿ ಕಾವ್ಯ ಪ್ರವೇಶ ಮಾಡಲು ಹೊರಡುವವರಿಗೆ, ಹಾಗೂ ಯಾವುದೇ ಪ್ರಕಾರದ ಸಾಹಿತ್ಯ ಕೃತಿಗಳ ವಸ್ತುಗಳನ್ನು ಕುರಿತು ಸಂಶೋಧನೆ ಮಾಡುವವರಿಗೆ ನಾನು ಮೊದಲು ನಿಕಟವಾಗಿ ಓದಲು ಹೇಳುವ ಪುಸ್ತಕವೇ ಡಿ. ಆರ್. ಅವರ ‘ಶಕ್ತಿ ಶಾರದೆಯ ಮೇಳ.’
ಡಿ.ಆರ್. ಬರವಣಿಗೆ ‘ಕಷ್ಟ’ ಎಂದು ಓದದೆ ಗೊಣಗುವ, ಓದದೆ ಬಡವಾಗುವ ಮುಗ್ಧರಿದ್ದಾರೆ. ಬರವಣಿಗೆಯಿರಲಿ, ಪ್ರೀತಿಯಿರಲಿ… ಕಷ್ಟಪಡದೆ ಈ ಬದುಕಿನಲ್ಲಿ ಏನಾದರೂ ’ನನ್ನದು’ ಎಂಬುದು ದಕ್ಕುವುದುಂಟೆ!
ಕೊನೆ ಟಿಪ್ಪಣಿ
ಹತ್ತು ವರ್ಷಗಳ ಕೆಳಗೆ ಒಂಥರಾ ವಿದ್ವಾಂಸರೊಬ್ಬರು ಗಹಗಹಿಸಿ ನಗುತ್ತಾ ಲೇಖಕಿಯೊಬ್ಬರಿಗೆ ಹೇಳಿದರು: ’ಡಿ. ಆರ್.ಗೆ ಅಲ್ಲಮ ಅರ್ಥವೇ ಆಗಿಲ್ಲ.’
ಈ ಅಟ್ಬಹಾಸದ ಬಗ್ಗೆ ಯೋಚಿಸುತ್ತಿರುವಾಗ ಕೆಲವು ಕುತೂಹಲಕರ ಪ್ರಶ್ನೆಗಳು ಎದುರಾದವು:
೧. ಸರಿ! ಸದರಿ ವಿದ್ವಾಂಸರಿಗೆ ಅಲ್ಲಮ ‘ಅರ್ಥ’ವಾಗಿರಬಹುದೇ?
೨. ಈ ಅಲ್ಲಮ ನಿಜಕ್ಕೂ ಯಾರಿಗಾದರೂ ಪೂರಾ ‘ಅರ್ಥ’ ಆಗಿರಬಹುದೆ?
೩. ಅದೆಲ್ಲ ಇರಲಿ! ಸ್ವತಃ ಅಲ್ಲಮನಿಗೇ ಅಲ್ಲಮ ಅರ್ಥವಾಗಿರಬಹುದೆ?
ಹೀಗೆಂದುಕೊಳ್ಳುತ್ತಾ ಅಲ್ಲಮನ ವಚನಗಳಲ್ಲಿ ‘ಅರ್ಥ’ ಎಂಬ ಪದ ಎಲ್ಲಿ, ಹೇಗೆ ಬರುತ್ತದೆ ಎಂದುಕೊಂಡು, ನನ್ನ ಪ್ರಿಯ ಜಾಲತಾಣಗಳಲ್ಲೊಂದಾದ ವಚನಸಂಚಯ.ಕಾಂ ನೋಡಿದೆ: ‘ಅರ್ಥ’ ಎಂಬ ಪದವಿರುವ ಅಲ್ಲಮನ ಎಂಟು ವಚನಗಳು ಸಿಕ್ಕವು.
ಅವುಗಳಲ್ಲಿ, ‘ಸಾವನ್ನಕ್ಕರ ಶ್ರವವ ಮಾಡಿದಡೆ, ಇನ್ನು ಕಾದುವ ದಿನವಾವುದು? ಎಂದು ಶುರುವಾಗುವ ಅಲ್ಲಮನ ವಚನದ ಒಂದು ಸುಂದರ ಫಿಲಾಸಫಿಕಲ್ ಝಲಕ್:
‘ಅರ್ಥವುಳ್ಳನ್ನಕ್ಕರ ಅರಿವುತ್ತಿದ್ದಡೆ ನಿಜವನೆಯ್ದುವ ದಿನವಾವುದು?’
ಡಿ. ಆರ್. ನಾಗರಾಜ್ ಅಥವಾ ಮಾರ್ಕ್ವೆಜ್ ಅರ್ಥ ಹುಡುಕುತ್ತಿದ್ದರೋ? ನಿಜ ಹುಡುಕುತ್ತಿದ್ದರೋ? ಅದೆಲ್ಲ ಬರೆವವರ ಆದಿಮ ಹುಡುಕಾಟ ಎಂದಷ್ಟೇ ಹೇಳಬಲ್ಲೆ.
ಬ್ಲಾಗ್ ಫಾಲೋ ಮಾಡಲು ಒಪ್ಪಿ, ಕ್ಲಿಕ್ ಮಾಡಿ; ನೋಟಿಫಿಕೇಶನ್ ಪಡೆಯಿರಿ, ಶೇರ್ ಮಾಡಿ: FOLLOW
ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com
ಬಿಡುವಾದಾಗ ನೋಡಿ, ಶೇರ್ ಮಾಡಿ: https://www.youtube.com/@NatarajHuliyarYT
Comments
15 Comments
| Shamarao
ಸರ್ ಡಿ ಆರ್ ನೆನಪಿಗಾಗಿ🙏🏻.
| Govindaraj Hegde
೧೨ ಆಗಸ್ಟ್ ಮತ್ತು Until August ಓದಿ ಮನದುಂಬಿಕೊಂಡೆ
| ವಸಂತ ಲಕ್ಷ್ಮಿ
ಡಿ.ಆರ್. ಕುರಿತ ಲೇಖನ ಮನಸ್ಸಿಗೆ ತುಂಬ ಹತ್ತಿರವಾಯಿತು
| ಶಿವವೆಂಕಟಯ್ಯ ವಿ
ನಿಮ್ಮಿಂದ ಕಲಿತ ಅನೇಕ ಪಾಠಗಳಲ್ಲಿ ಕೃತಿಯ ನಿಕಟ ಓದು ಮೊದಲನೆಯದು.
| Rajaram
Brilliant
| VENKATESH TS VENKATESH TS VENKATESH TS
Alva Sir is a continuous journey for creative growth to find meaning in the constant search of life
| VENKATESH TS VENKATESH TS VENKATESH TS
Alva Sir is a continuous journey for creative growth to find meaning in the constant search of life
| Shamarao
ಸರ್ ಡಿ ಆರ್ ನೆನಪಿಗಾಗಿ🙏🏻.
| Maheah Harave
ಚೆನ್ನಾಗಿದೆ..ಧನ್ಯವಾದಗಳು
| Udaykumar Habbu
ಡಿ ಆರ್ ನಾಗರಾಜರ \"ಅಲ್ಲಮಪ್ರಭು ಮತ್ತು ಶೈವ ಪ್ರತಿಭೆ\" ವಿಮರ್ಶಾ ಚಿಂತನ ಬರಗಳ ಪುಸ್ತಕವನ್ನು ಗಾಂಧಿ ಬಜಾರ್\" ಪತ್ರಿಕೆಯಲ್ಲಿ ಪ್ರಕಟಿತಗೊಂಡಿತ್ತು. ೧೯೮೦ ರಲ್ಲಿ ಉಡುಪಿಯಲ್ಲಿ ಬಂಡಾಯ ಸಾಹಿತ್ಯ ಗೋಷ್ಠಿಯಲ್ಲಿ ಡಿ ಅರ್ ನಾಗರಾಜ್, ನಾಡೋಜ ಬರಗೂರು ರಾಮಚಂದ್ರಪ್ಪ ಅವರ ಜೊತೆ ವೇದಿಕೆ ಹಂಚಿಕೊಂಡಿದ್ದೆ. ಡಿ ಆರ್ ನಾಗರಾಜ್ ಅವರು ಬಂಡಾಯ ಸಾಹಿತ್ಯ ಚಳವಳಿಗೆ \"ಖಡ್ಗವಾಗಲಿ ಕಾವ್ಯ\" ಎಂಬ ಘೋಷ ವಾಕ್ಯವನ್ನು ರಚಿಸಿದ್ದರು. ಬಡವರಿಗೆ ತುಡಿವ ಪ್ರಾಣಮಿತ್ರ ಈ ಘೋಷವಾಕ್ಯವನ್ನು ಬರೆದವರು ಕಾಳೆಗೌಡ ನಾಗವಾರ ಇವರು
| Dr. Prabhakar
Nice writing
| Udayakumar Habbu
Good
| ಡಾ. ನಿರಂಜನ ಮೂರ್ತಿ ಬಿ ಎಂ
ದೈತ್ಯಪ್ರತಿಭೆಯ ಡಿ ಆರ್ ಮತ್ತು ಮಾರ್ಕ್ವೆಜ್ ಅವರುಗಳನ್ನು ಮತ್ತೆ ಸ್ಮರಿಸಿದ್ದು ತುಂಬಾ ಚೆನ್ನಾಗಿದೆ. ಮತ್ತೆ ಮತ್ತೆ ಸ್ಮರಿಸಬೇಕಾದಂತಹ ಬರಹಗಾರರವರು! \r\n\r\nಇಷ್ಟವಾದ ದೊಡ್ಡ ಲೇಖಕನ ಸಮಗ್ರ ಕೃತಿಗಳನ್ನು ನಿಕಟವಾಗಿ ಓದುವ ವಿಚಾರ ಅದ್ಭುತವಾಗಿದೆ. ಧನ್ಯವಾದಗಳು.
| ಶಿವಲಿಂಗಮೂರ್ತಿ
ನಿಮ್ಮ ಈ ಬರಹದಲ್ಲಿ ಮಾರ್ಕ್ವೆಜ್ ಮತ್ತು ಡಿ ಆರ್ ನಾಗರಾಜ್ ಜೊತೆಗೆ ಅಲ್ಲಮನ ಬಗ್ಗೆಯೂ ಪ್ರಸ್ತಾಪಿಸಿದ್ದೀರಿ. ಇದು ನನ್ನಲ್ಲಿ ಓದಿನ ಬೆದೆಯ ಕಿಚ್ಚನ್ನು ಹಚ್ಚುತ್ತದೆ.\r\nಮೊನ್ನೆ ತಾನೇ ಬಿಡುಗಡೆಯಾದ ಎಸ್ ಗಂಗಾಧರಯ್ಯನವರ ಫ್ರೇಗ್ರನ್ಸ್ ಆಫ್ ಗ್ವಾವ ಅನುವಾದ ಕೃತಿಯನ್ನು ಓದಿ ಮುಗಿಸಿದೆ. ವಿಶ್ವದ ಶ್ರೇಷ್ಠ ಲೇಖಕರಲ್ಲಿ ಒಬ್ಬನಾದ ಗ್ಯಾಬ್ರಿಯಲ್ ಗಾರ್ಸಿಯ ಮಾರ್ಕ್ವೆಜ್ ನೊಂದಿಗೆ ಪ್ಲಿನಿಯೋ ಅಪುಲೆಯೋ ಮೆಂಡೋಝ ನಡೆಸಿರುವ ಮಾತುಕತೆಯಿಂದ ಅನೇಕ ಮಹತ್ವದ ಸಂಗತಿಗಳು ತಿಳಿದು ಬರುತ್ತದೆ. ಈ ಕೃತಿಯು ಒಂದು ರೀತಿಯಲ್ಲಿ ಆತನ ಜೀವನ ಚರಿತ್ರೆಯೇ ಆಗಿದೆ. ಅದನ್ನು ಓದುತ್ತಿದ್ದರೆ ಲೇಖಕ ನಾಗಬೇಕೆಂದು ಬಯಸುವ ನನಗೆ ಕಮಟವೊಂದರಲ್ಲಿ ಕುಳಿತ ಅನುಭವವಾಗುತ್ತದೆ. ಕನ್ನಡ ಕಾವ್ಯ ತತ್ವ ಚಿಂತನೆಗೆ ಸಂಬಂಧಿಸಿದಂತೆ ಅನೇಕ ವಿಚಾರಗಳನ್ನು ಈ ಕೃತಿಯಿಂದ ಪಡೆಯಬಹುದು ಉದಾಹರಣೆಗೆ ಸ್ಫೂರ್ತಿ ಮುಂತಾದ ವಿಚಾರಗಳ ಬಗೆಗಿನ ಚರ್ಚೆಯನ್ನು ಗಮನಿಸಬಹುದು. ಕಾಫ್ಕ, ವರ್ಜಿನಿಯಾ ವೂಲ್ಫ್,, ಕಾಲ್ಡ್ ವೆಲ್, ವಿಲಿಯಂ ಫಾಕ್ನರ್, ಹೆಮಿಂಗ್ವೇ ಮುಂತಾದವರ ಒಡನಾಟವು ಪ್ರಭಾವವು ಈತನಿಗಿತ್ತು. ಸಮಾಜವಾದಿಯಾದ ಈತ ತನ್ನ ಹೃದಯದಲ್ಲಿ ಬಡವರ ಬಗ್ಗೆ ಅಪಾರವಾದ ಕಾರುಣ್ಯ ಹೊಂದಿದವನು. ಅಪುಲೆಯೋ ಕೇಳುವ ಅನೇಕ ಪ್ರಶ್ನೆಗಳಲ್ಲಿ ಒಂದೆರಡನ್ನು ನೋಡೋಣ.\r\nಅಪುಲೆಯೋ-ನೀನು ಯಾವ ತರದ ಸರ್ಕಾರವನ್ನು ನಿನ್ನ ದೇಶದಲ್ಲಿ ನೋಡ ಬಯಸುತ್ತೀಯಾ? \r\nಮಾರ್ಕ್ವೆಜ್-ಬಡವರ ಎದೆಯೊಳಗೆ ಖುಷಿಯನ್ನು ನೆಡುವಂತಹ ಯಾವುದೇ ಸರ್ಕಾರ\r\nಅಪುಲೆಯೋ -ನೀನು ಭೇಟಿ ಮಾಡಿರುವ ವ್ಯಕ್ತಿಗಳಲ್ಲಿ ಅತ್ಯಂತ ಕುತೂಹಲದ ವ್ಯಕ್ತಿ ಯಾರು? \r\nಮಾರ್ಕ್ವೆಜ್- ನನ್ನ ಹೆಂಡತಿ ಮರ್ಸೆಡೀಸ್.\r\nಈ ರೀತಿಯ ಅನೇಕ ಮಾತು ಕತೆಗಳು ನಮ್ಮ ಮನಕಲಕುತ್ತವೆ.\r\nಹೀಗೆ ಹೇಳುತ್ತಾ ಹೋದರೆ ಈ ಕೃತಿಯ ದೀರ್ಘ ವಿಮರ್ಶೆಯೇ ಆಗಿಬಿಡಬಹುದು.\r\nಯಾರೋ ಒಬ್ಬ ಮಹಾಶಯರಿಗೆ ಡಿ ಆರ್ ಎನ್ ಗೆ ಅಲ್ಲಮ ಅರ್ಥವೇ ಆಗಿಲ್ಲ ಎಂಬ ಮಾತನ್ನು ಇಲ್ಲಿ ಎತ್ತಿದ್ದೀರಿ. ಈ ರೀತಿಯ ಮಾತುಗಳು ಕನ್ನಡ ವಲಯದಲ್ಲಿ ಆಗಾಗ್ಗೆ ಕೇಳಿ ಬರುತ್ತಲೇ ಇರುತ್ತವೆ. ಅಲ್ಲಮ ಅರ್ಥ ಆಗೊಲ್ಲ ಅಡಿಗರು ಅರ್ಥ ಆಗಲ್ಲ ಡಿ ಆರ್ ಎನ್ ಅರ್ಥ ಆಗಲ್ಲ...\r\nಓದುಗ -ಓದುಗಿ ಈ ಎರಡೂ ಶಬ್ದಗಳನ್ನು ಸರಿಸುಮಾರಾಗಿ ಒಳಗೊಳ್ಳಬಹುದಾದ ಸಹೃದಯ ಎಂಬ ಶಬ್ದ ಕನ್ನಡ ಕಾವ್ಯ ವಲಯದಲ್ಲಿ ಬಳಕೆಯಲ್ಲಿದೆ. ಅಂದರೆ ಆ ಮಹಾಶಯರೊಬ್ಬರು ಎತ್ತಿದ ಪ್ರಶ್ನೆಗೆ ಇಲ್ಲಿ ಸ್ಪಂದಿಸುವುದಾದರೆ ಸಹೃದಯ ಎಂದರೆ ಬರಹಗಾರನ ಅಂತರಂಗದ ಸಮೀಪಕ್ಕೆ ಓದುಗನು ಸಮೀಪಿಸಲು ಯತ್ನಿಸುವುದು ಎಂದರ್ಥ ಮಾಡಿಕೊಳ್ಳಬಹುದು.ಅಂದರೆ ಲೇಖಕನಿಗೆ ಹೇಗೆ ಬರೆಯುವ ಸಾಮರ್ಥ್ಯ ಇರುತ್ತದೆಯೋ ಹಾಗೆ ಅವನ ಆ ಕೃತಿಯನ್ನು ಅರ್ಥ ಮಾಡಿಕೊಳ್ಳಲು ಸಹೃದಯನಿಗೂ ಅರ್ಹತೆಯೊಂದು ಬೇಕೇ ಬೇಕು. ಆ ಅರ್ಹತೆ ಇಲ್ಲದಿದ್ದಾಗ ಇಂತಹ ಪ್ರಶ್ನೆಗಳು ಉದ್ಭವ ಆಗುವುದು ಸಹಜ.\r\nಕೇವಲ 44 ವರ್ಷ ಬದುಕಿದ್ದ ಡಿ ಆರ್ ಎನ್ ಕನ್ನಡ ಸಾರಸ್ವತ ಲೋಕದ ಮಹಾನ್ ಮೇರು ಪರ್ವತ. ವಿಮರ್ಶೆ ವಲಯದಲ್ಲಿ ಅವರನ್ನು ಸರಿಗಟ್ಟುವವರು ಕನ್ನಡದಲ್ಲಿ ಇದುವರೆಗೆ ನಾನು ಕಂಡಂತೆ ಯಾರೂ ಇಲ್ಲ . ನನ್ನ ಗುರುಗಳ ಬಗ್ಗೆ ಈ ಮಾತನ್ನು ಗರ್ವದಿಂದಲೇ ಹೇಳುತ್ತೇನೆ. ಭಾರತೀಯ ಭಾಷೆಗಳ ಸಾಹಿತ್ಯ ತತ್ವ ಜ್ಞಾನ ಹಾಗೂ ಪಾಶ್ಚಾತ್ಯ ಸಾಹಿತ್ಯ ಮತ್ತು ತತ್ವಜ್ಞಾನಗಳ ಬಗ್ಗೆ ಇವರಿಗಿದ್ದ ಅರಿವು ನಮಗೆ ಬೆರಗನ್ನುಂಟು ಮಾಡುತ್ತದೆ. ಇವರ ವಿಮರ್ಶೆಯ ಗದ್ಯಕಾವ್ಯ ವೈಭವವನ್ನು ಅರಿಯಲು ಸಾಕಷ್ಟು ಸಿದ್ಧತೆಯಯೂ ಸಾಮರ್ಥ್ಯವು ಬೇಕು. ಇಲ್ಲದಿದ್ದರೆ ಡಿ ಆರ್ ಎನ್ ಯಾರಿಗೂ ಅರ್ಥವಾಗುವುದಿಲ್ಲ. \r\nಜಾತ್ಯತೀತ ತತ್ವವನ್ನೇ ತನ್ನ ಪ್ರಧಾನ ಧಾರೆ ಯಾಗಿಸಿಕೊಂಡಿರುವ ಸಿದ್ಧಪರಂಪರೆಯನ್ನು ಆಳವಾಗಿ ಬಲ್ಲ ಡಿ ಆರ್ ಎನ್ ಗೆ ಅಲ್ಲಮನನ್ನು ಅರ್ಥೈಸುವುದು ಸುಲಭವಾಗಿದೆ. ಚೌರಾಸಿ ಸಿದ್ದರಲ್ಲಿ ಒಬ್ಸನಾದ ಸರಹಪಾದನಂತವರನ್ನು ಕನ್ನಡದ ಅಲ್ಲಮನನ್ನು ಸೂಫಿಗಳನ್ನು ಸಂತರನ್ನು ಅರಿಯಬೇಕಾದ ತುರ್ತು ಇಂದಿನದು.\r\n\r\n\r\n\r\n
| Dr.Malathi
ನಿಮ್ಮ ಕಣ್ಣಿನಲ್ಲಿ ಮೂಡಿದ ಡಿ ಆರ್ ಚಿತ್ರ ಮನಸೆಳೆಯಿತು. ಸಾಹಿತ್ಯ ಅಕಾಡೆಮಿಯಿಂದ ನೀವು ಬರೆದ ಪುಸ್ತಕ ಓದಬೇಕು ಎನ್ನಿಸಿತು
Add Comment