ಪ್ರೇಮಿಯ ಸುಂದರ ಗೀಳಿನ ಹಾಗೆ!

ನಿಮಗೂ ಹೀಗಾಗಿರಬಹುದು: ಒಂದು ಒಳ್ಳೆಯ ವಸ್ತು ಅಥವಾ ಗುರಿಯನ್ನು ನೀವು ಬೆನ್ನು ಹತ್ತಿದರೆ, ಅಥವಾ ನಿಮ್ಮ ಅದೃಷ್ಟಕ್ಕೆ ಒಂದು ಮಹಾನ್ ವಸ್ತುವೋ, ಗುರಿಯೋ ನಿಮ್ಮ ಬೆನ್ನು ಹತ್ತಿದರೆ, ಅದರಿಂದ ಹೊರಬರಲು ಮನಸ್ಸು ಒಲ್ಲೆನೆನ್ನುತ್ತದೆ, ಮುಷ್ಕರ ಹೂಡುತ್ತದೆ!

ಹೀಗೆ ಒಬ್ಬ ಪ್ರೇಮಿಯ ಇಂಥ ಸುಂದರ ಗೀಳು-ಅಥವಾ ಲವ್ಲಿ ಅಬ್ಸೆಶನ್-ಇಲ್ಲದಿದ್ದರೆ ಯಾರೂ ಲೇಖಕಿ-ಲೇಖಕ-ಓದುಗಿ-ಓದುಗ-ಪತ್ರಕರ್ತೆ-ಟೀಚರ್-ವಿಜ್ಞಾನಿ… ಏನೂ ಆಗುವುದಿಲ್ಲ; ಇಲ್ಲಿ ’ಸುಂದರ ಗೀಳು’ ಅಥವಾ ’ಲವ್ಲಿ ಅಬ್ಸೆಶನ್’ ಬಣ್ಣನೆಗಳನ್ನು ಪಾಸಿಟಿವ್ ಅರ್ಥದಲ್ಲಿ ಬಳಸಿರುವೆ. ನಮಗೆ ಇಂಥ ಸುಂದರ ಗೀಳಿಲ್ಲದಿದ್ದರೆ ಮೇಲೆ ಹೇಳಿದ ಎಲ್ಲ ವಲಯಗಳಲ್ಲೂ ಸಾಧಾರಣವಾದ, ಕಳಪೆಯಾದ ಅಥವಾ ಉತ್ತಮವಾದ ಜೀತಗಾರರಾಗಬಹುದು, ಅಷ್ಟೆ! ನಮ್ಮ ಆಳದಲ್ಲಿ ಇಷ್ಟವಾಗದೆ, ನಮ್ಮ ಮನಸ್ಸಿಗೆ ಒಗ್ಗದೆ, ನಾವು ಮಾಡುವು ಕೆಲಸವೆಲ್ಲವೂ ಜೀತವೇ ಎಂಬರ್ಥದ ಮಾತುಗಳನ್ನು ಲಂಕೇಶರ ನೀಲು ಹೇಳಿದ ನೆನಪು. 
 ಬೆಳ್ಳಂಬೆಳಗಿಗೇ ಏಕ್‌ದಂ ಇಂಥ ಫಿಲಸಾಫಿಕಲ್ ಮೂಡಿನ ಮಾತುಗಳು ಹುಟ್ಟಲು ಕಾರಣವಿತ್ತು: ನಿನ್ನೆಮೊನ್ನೆಯ ತನಕ ರಾಮಮನೋಹರ ಲೋಹಿಯಾ (೨೩ ಮಾರ್ಚ್ ೧೯೧೦- ೧೨ ಅಕ್ಟೋಬರ್ ೧೯೬೭) ಹುಟ್ಟುಹಬ್ಬದ ಸುತ್ತ ಪತ್ರಿಕೆಗಳಿಗೆ ಲೋಹಿಯಾ ವ್ಯಕ್ತಿತ್ವ, ರಾಜಕಾರಣ ಕುರಿತು ಬರೆಯುತ್ತಿದ್ದವನಿಗೆ ಭಾನುವಾರದ ‘ಗಾಳಿ ಬೆಳಕು’ಅಂಕಣಕ್ಕೂ ಲೋಹಿಯಾ ಅವರೇ ಬಂದಿದ್ದು ಅಚ್ಚರಿಯಲ್ಲ. ಈ ಅಂಕಣದ ಓದುಗಿ-ಓದುಗ ವಲಯಕ್ಕೆ ಕೊಂಚ ಉಪಯುಕ್ತವಾಗಬಹುದಾದ ‘ಲೇಖಕ ಲೋಹಿಯಾ’, ‘ವಿಮರ್ಶಕ ಲೋಹಿಯಾ’, ‘ಸಂಸ್ಕೃತಿ ವಿಮರ್ಶಕ ಲೋಹಿಯಾ’… ಮುಂತಾದ ಲೋಹಿಯಾ ಮುಖಗಳ ಬಗ್ಗೆ ಕೆಲವು ಟಿಪ್ಪಣಿಗಳು: 

ವಿದ್ಯಾರ್ಥಿಯಾಗಿದ್ದಾಗ ಲೋಹಿಯಾ ಅಪಾರ ಬೌದ್ಧಿಕ ಚಡಪಡಿಕೆಯ ಹುಡುಗನಾಗಿದ್ದರು. ಮೇಷ್ಟರು ಪಾಠ ಮಾಡುತ್ತಿದ್ದ ಪುಸ್ತಕದಲ್ಲಿ ಏನಾದರೂ ಅಸಂಬದ್ಧವಾದದ್ದು ಕಂಡರೆ ತರ್ಕಬದ್ಧ ಪ್ರಶ್ನೆಗಳನ್ನು ಹಾಕುತ್ತಿದ್ದರು; ಬ್ರಿಟಿಷರ ಕಾಲದಲ್ಲಿ ಬರೆದ ಚರಿತ್ರೆಯ ಪುಸ್ತಕಗಳಲ್ಲಿ ಇಂಡಿಯಾದ ಬಗ್ಗೆ ಇರುವ ವಿವರಗಳನ್ನು ಪರೀಕ್ಷಕ ದೃಷ್ಟಿಯಿಂದ ನೋಡುತ್ತಿದ್ದರು. ಪರೀಕ್ಷೆಯಲ್ಲಂತೂ ಪಠ್ಯಗಳ ಬಗ್ಗೆ ಸ್ವತಂತ್ರವಾದ ವ್ಯಾಖ್ಯಾನವನ್ನೇ ಬರೆಯುತ್ತಿದ್ದರು; ತಮಗೆ ಇಷ್ಟವಾದ ಪ್ರಶ್ನೆಗಳಿಗಷ್ಟೇ ಉತ್ತರ ಬರೆಯಲು ಹೋಗಿ ಎಷ್ಟೋ ಪ್ರಶ್ನೆಗಳಿಗೆ ಉತ್ತರ ಬರೆಯಲು ಸಮಯ ಸಾಲದೆ ಎದ್ದು ಬರುತ್ತಿದ್ದರು...ಲೋಹಿಯಾಗೆ ಒಳ್ಳೆಯ ಅಂಕ ಬರುತ್ತಿರಲಿಲ್ಲ ಎಂದು ಬಿಡಿಸಿ ಹೇಳಬೇಕಾಗಿಲ್ಲ! 

ಆದರೆ ಮುಂದೆ ಪೂರ್ಣಚಂದ್ರ ತೇಜಸ್ವಿ ಗುರುತಿಸಿದಂತೆ ಇಂಡಿಯಾದ ‘ಅತ್ಯಂತ ಒರಿಜಿನಲ್ ಚಿಂತಕ’ರಾಗಿದ್ದ ಲೋಹಿಯಾ ಅಷ್ಟು ಮಹತ್ವದ  ಚಿಂತಕರಾಗಲಿದ್ದ ಸೂಚನೆಗಳು ಅವರ ವಿದ್ಯಾರ್ಥಿ ದೆಸೆಯಲ್ಲಿವೆ. 

ಲೇಖಕ ಮಿತ್ರ ಟಿ.ಎಸ್. ಗೊರವರ್ ಸಂಪಾದಿಸುವ ‘ಅಕ್ಷರ ಸಂಗಾತ’ಕ್ಕೆ  ‘ಲೋಹಿಯಾ ಬರವಣಿಗೆಯಲ್ಲಿ ಕೃತಿ ವಿಮರ್ಶೆಯ ಮಾದರಿಗಳು’ (ಸಂಚಿಕೆ: ಆಗಸ್ಟ್ 2022) ಎಂಬ ಲೇಖನ ಬರೆಯುತ್ತಿದ್ದಾಗ ನನಗೆ ಮತ್ತೆ ಮನದಟ್ಟಾದ ಅಂಶ ಇದು: ವಿಮರ್ಶೆಯ ಚಟುವಟಿಕೆ ಅಖಂಡವಾದದ್ದು; ಅದು ನಾವು ಪುಸ್ತಕ, ಸಂಸ್ಕೃತಿ, ವ್ಯಕ್ತಿಗಳು, ಸಮಾಜ, ಪತ್ರಿಕೋದ್ಯಮ, ರಾಜಕಾರಣ, ಲೋಕದ ವಿದ್ಯಮಾನಗಳು… ಎಲ್ಲವನ್ನೂ ನೋಡುವ ಬಗೆಯನ್ನು ಕಲಿಸುತ್ತದೆ; ಅಷ್ಟೇ ಅಲ್ಲ, ಕತೆ, ಕವಿತೆ, ನಾಟಕ ಏನು ಬರೆದರೂ ಈ ವಿಮರ್ಶಾ ಪ್ರಜ್ಞೆ ಹಿನ್ನೆಲೆಯಲ್ಲಿ ಕೆಲಸ ಮಾಡುತ್ತಿರುತ್ತದೆ. 

‘ಸೃಜನಶೀಲ ಬರವಣಿಗೆಯಲ್ಲಿ ಬಹುಪಾಲು ಇರುವುದು ವಿಮರ್ಶೆಯ ಶ್ರಮವೇ’ ಎಂಬ ಟಿ.ಎಸ್. ಎಲಿಯಟ್‌ನ ಪ್ರಖ್ಯಾತ ಮಾತನ್ನು ನೀವು ಕೇಳಿರಬಹುದು. ಈ ಅರ್ಥದಲ್ಲಿ ಲೋಹಿಯಾ ಗದ್ಯ ಸೃಜನಶೀಲ.  ಅವರ ‘ಕೃಷ್ಣ’, ‘ರಾಮ, ಕೃಷ್ಣ, ಶಿವ’, ‘ಸೌಂದರ್ಯ ಮತ್ತು ಮೈಬಣ್ಣ’, ‘ಯೋಗದಲ್ಲಿ ಒಂದು ಅಧ್ಯಾಯ’ಮೊದಲಾದವು ’ಸಾಂಸ್ಕೃತಿಕ ಲೇಖನಗಳು’ ಎಂದು ಕರೆಸಿಕೊಳ್ಳುವ ಸೃಜನಶೀಲ ಲೇಖನಗಳು; ಆದರೆ ‘ಜಾತಿಭೇದ, ಲಿಂಗಭೇದ’ ಥರದ ಸಮಾಜ ವಿಶ್ಲೇಷಣೆಯ ಭಾಷಣವೂ ಇಷ್ಟೇ ಸೃಜನಶೀಲ! 

ಹಾಗೆಯೇ ‘ದ್ರೌಪದಿ ಯಾ ಸಾವಿತ್ರಿ?’ (ದ್ರೌಪದಿಯೋ, ಸಾವಿತ್ರಿಯೋ?) ಎಂಬ ಸಂಸ್ಕೃತಿ ವಿಶ್ಲೇಷಣೆ ಕೂಡ. ಈ ಹಿಂದಿ ಲೇಖನದಲ್ಲಿ ಪುರಾಣ ಪಾತ್ರಗಳನ್ನು ಕುರಿತು ಮೈ ದುಂಬಿ ಬರೆಯುತ್ತಿರುವ ಲೋಹಿಯಾಗೆ ದ್ರೌಪದಿ-ಸತಿ ಸಾವಿತ್ರಿ ಈ ಇಬ್ಬರ ನಡುವೆ ಯಾರು ತಮ್ಮ ಪ್ರಿಯ ಪಾತ್ರ ಎಂಬ ಪ್ರಶ್ನೆ ಎದುರಾಗುತ್ತದೆ. ಬರೆಯುತ್ತಾ ಬರೆಯುತ್ತಾ ಲೋಹಿಯಾ ಮನಸ್ಸು ಕೊನೆಗೆ ಕಡುಜಾಣೆಯಾದ, ಮುಕ್ತ ಪ್ರೀತಿಯ ದ್ರೌಪದಿಯ ಕಡೆಗೆ ಒಲಿಯುತ್ತದೆ! 

ಹಾಗೆ ದ್ರೌಪದಿಯ ಕಡೆಗೆ ಲೋಹಿಯಾ ವಾಲುತ್ತಿದ್ದರೂ, ಸಾವಿತ್ರಿಯ ತೀವ್ರ ನಂಟಿನ ಪ್ರೀತಿಯನ್ನೂ, ಯಮನ ದವಡೆಯಿಂದ ಗಂಡನನ್ನು ಬಿಡಿಸಿಕೊಳ್ಳ ಹೊರಟ ಅವಳ ಪ್ರೀತಿಯ ಅದ್ಭುತ ರೂಪಕವನ್ನೂ ಅವರ ಮನಸ್ಸು ಮೆಚ್ಚಿಕೊಳ್ಳಲಾರಂಭಿಸುತ್ತದೆ. ಇಂಥ ಮೆಚ್ಚುಗೆಯ ನಡುವೆಯೇ ಅವರ ವಿಮರ್ಶಕ ಮನಸ್ಸು ಜಾಗೃತವಾಗುತ್ತದೆ. ಲೋಹಿಯಾ ಬರೆಯುತ್ತಾರೆ: ‘ಹಿಂದೂ ದಂತಕತೆಗಳಲ್ಲಿ ಸಾವಿತ್ರಿಯಂಥ ಪತಿವ್ರತೆಯ ಕತೆ -ಯಮನ ಕೈಗಳಿಂದ ಗಂಡನನ್ನು ಬಿಡಿಸಿಕೊಂಡು ಬಂದ ಹೆಣ್ಣಿನ ಕತೆ- ಇರುವ ಹಾಗೆ, ತನ್ನ ಹೆಂಡತಿ ಸತ್ತಾಗ ಆಕೆಯನ್ನು ಯಮನ ಕೈಯಿಂದ ಅನುರಾಗದಿಂದ ಬಿಡಿಸಿಕೊಂಡು ಬಂದ ಗಂಡನ ಒಂದು ಕತೆಯಾದರೂ ಇದ್ದರೆ ಹೇಳಿ ಎಂದು ನಾನು ಅನೇಕರನ್ನು ಕೇಳಿದ್ದೇನೆ.’ 

ಮನೋವಿಜ್ಞಾನಿ ಕಾರ್ಲ್ ಯೂಂಗ್ ಪ್ರಕಾರ, ಪುರಾಣಗಳು ಸಮುದಾಯ ಅಥವಾ ಸಮಷ್ಟಿಯ ಅಪ್ರಜ್ಞೆಯಿಂದ ಸೃಷ್ಟಿಯಾಗುತ್ತವೆ. ಆದರೆ ಸ್ತ್ರೀವಾದಿ ಚಿಂತನೆ ಈ ಪುರಾಣ ಕತೆಗಳನ್ನು ನೋಡುವ ಇನ್ನೊಂದು ಬಗೆಯನ್ನು ನಮಗೆ ತೋರಿಸುತ್ತದೆ: ಇಂಥ ಪಾತಿವ್ರತ್ಯದ ಕತೆಗಳನ್ನು ಸೃಷ್ಟಿಸಿದ್ದು ಇಡೀ ಸಮುದಾಯದ ಅಪ್ರಜ್ಞೆಯಲ್ಲ; ಬದಲಿಗೆ ’ಗಂಡು’ ಸಮುದಾಯದ ಅಪ್ರಜ್ಞೆ; ಹೀಗಾಗಿ ಗಂಡು ಸಮುದಾಯದ ಹಿತಾಸಕ್ತಿ ರಕ್ಷಿಸಿಕೊಳ್ಳುವ ದೃಷ್ಟಿಯಿಂದ ಈ ಥರದ ಕತೆಗಳು ಹುಟ್ಟಿರಬಹುದು; ಹೆಣ್ಣು ಪತಿವ್ರತೆಯಾಗಿದ್ದರೆ ಮಾತ್ರ ಗಂಡು ಸಾವಿನ ದವಡೆಗೆ ಸಿಕ್ಕರೂ ರಕ್ಷಿಸಿಕೊಳ್ಳಬಹುದು ಎಂಬುದನ್ನು ಒತ್ತಿ ಹೇಳಲು ಗಂಡು ಮನಸ್ಸು ಈ ಪುರಾಣ ಕತೆಗಳನ್ನು ಸೃಷ್ಟಿಸಿರಬಹುದು…

ಈ ರೀತಿಯ ಎಚ್ಚರದಿಂದ ಓದುವ ಹಲವು ಕ್ರಮಗಳನ್ನು ಇವತ್ತು ಸ್ತ್ರೀವಾದಿ ವಿಮರ್ಶೆ ನಮಗೆ ಹೇಳಿಕೊಟ್ಟಿದೆ. ಸ್ತ್ರೀವಾದಿ ವಿಮರ್ಶೆ ಕುರಿತು ಬರೆಯುತ್ತಿರುವಾಗ, ಲೋಹಿಯಾ ಸ್ತ್ರೀವಾದದ ಮುಂಚೂಣಿ ತತ್ವಜ್ಞಾನಿ ಸಿಮೊನ್ ದ ಬುವಾರನ್ನು ಪ್ರಸ್ತಾಪಿಸಿದ್ದು ನೆನಪಾಗುತ್ತದೆ: ೧೯೨೯-೩೩ರ ನಡುವೆ ಪಿಎಚ್. ಡಿ. ಸಂಶೋಧನೆ ಮಾಡಲು ಜರ್ಮನಿಗೆ ಹೋಗಿ ಬಂದಿದ್ದ ಲೋಹಿಯಾಗೆ ಐವತ್ತರ ದಶಕದ ಕೊನೆಯ ಹೊತ್ತಿಗೆ  ಸಿಮೊನ್ ದ ಬುವಾರ ಚಿಂತನೆಗಳ ಪರಿಚಯವಾದಂತಿದೆ. ಅದರ ಜೊತೆಗೇ, ಸಾವಿತ್ರಿ-ಸತ್ಯವಾನರ ಕತೆ ಕುರಿತ ಈ ಪ್ರಶ್ನೆ ಲೋಹಿಯಾಗೆ ಇಂಡಿಯಾದ ಜಾತಿಭೇದ, ಲಿಂಗಭೇದ ಹಾಗೂ ಸಾಂಪ್ರದಾಯಿಕ ಭಾರತದಲ್ಲಿ ಗಂಡಿನ ಯಜಮಾನಿಕೆಯ ಲೋಕದ ಬಗೆಗಿನ ತಿಳುವಳಿಕೆಯಿಂದ ಕೂಡ ಹುಟ್ಟಿದೆ.

ಮುಂದೊಮ್ಮೆ ಲೋಹಿಯಾ ತಮ್ಮ ಗೆಳತಿ ರಮಾ ಮಿತ್ರಾರನ್ನು ಓದಲು ಜರ್ಮನಿಗೆ ಕಳಿಸಿದಾಗ ಸಿಮೊನ್ ದ ಬುವಾರನ್ನು ಕಾಣಲು ಹೇಳುತ್ತಾರೆ. ರಮಾ ಮಿತ್ರಾಗೆ ಲೋಹಿಯಾ ಬರೆದ ಪತ್ರಗಳಲ್ಲಂತೂ ಮೈ-ಮನ-ಬುದ್ಧಿ-ಒಳನೋಟಗಳು ಬೆರೆತು ಹುಟ್ಟುವ ತೀವ್ರತೆ, ತೀಕ್ಷ್ಣತೆ, ಸೃಜನಶೀಲತೆಗಳು ಎಲ್ಲೆಡೆ ನಮ್ಮನ್ನು ತಾಕುತ್ತವೆ. ಬೆಚ್ಚಗಿನ ಮಾತುಗಳ ನಡುನಡುವೆಯೇ ಗೆಳತಿ ರಮಾ ಮಿತ್ರಾಗೆ ಪುಸ್ತಕ ವಿಮರ್ಶೆ ಬರೆಯುವುದನ್ನು ಕಲಿಸಲು ಲೋಹಿಯಾ ಬರೆದ ಮಾತುಗಳು:

‘ವಿಮರ್ಶೆ ಮಾಡುವಾಗ ನಿನ್ನ ಬುದ್ಧಿಯ ಓಟ ಮುಕ್ತವಾಗಿರಲಿ. ಮೊದಲ ಪ್ಯಾರಾದಲ್ಲಿ ಕೃತಿಯ ಮುಖ್ಯಾಂಶವಿರಲಿ; ಮುಂದಿನ ಅರ್ಧ ಪ್ಯಾರಾದಷ್ಟು ಕೃತಿ ನೀಡುವ ಹೊಸ ವಿಚಾರ ಕುರಿತು ಬರೆ. ನಂತರ ಕೃತಿಯಲ್ಲಿ ಬರುವ ವೈಶಿಷ್ಟ್ಯ, ವಿಚಿತ್ರಗಳನ್ನು ಕುರಿತು ಬರೆ. ಕೊನೆಯಲ್ಲಿ ನಿನ್ನ ಸರಿಯಾದ ತೀರ್ಮಾನವಿರಲಿ. ಕೃತಿ ಚೆನ್ನಾಗಿದೆ, ಚೆನ್ನಾಗಿಲ್ಲ ಎಂದು ಅಭಿಪ್ರಾಯ ಕೊಡದೆ, ಕೃತಿಯಲ್ಲಿ ನಿನ್ನನ್ನು ಮುಟ್ಟಿದ ಯಾವುದೇ ವಿಚಾರ ಯಾವ ದಿಕ್ಕಿನಲ್ಲಿ ಬೆಳೆಯಬಹುದಿತ್ತು ಎಂಬುದನ್ನು ಕುರಿತು ಹೇಳು.’ 

ಪುಸ್ತಕ ವಿಮರ್ಶೆಯ ಬಗ್ಗೆ ಲೋಹಿಯಾಗಿದ್ದ ಖಚಿತತೆ ಇತರ ಬಗೆಯ ವಿಮರ್ಶೆಯಲ್ಲೂ ಇತ್ತು. ಲೋಹಿಯಾರ ಅಖಂಡ ವಿಮರ್ಶೆಯಲ್ಲಿ ಸಾಮಾಜಿಕ- ಖಾಸಗಿ-ಸಾಂಸ್ಕೃತಿಕ ಎಲ್ಲವೂ ಬೆರೆಯುವುದು ಹೀಗೆ. ಹಾಗೆ ಬೆರೆತಾಗ ಮಾತ್ರ ನಮಗೆ ಪುಸ್ತಕದಂತೆಯೇ ನಮ್ಮ ಸುತ್ತಣದ ಎಲ್ಲವನ್ನೂ ಅಖಂಡವಾಗಿ, ಒಟ್ಟಾಗಿ, ಕ್ರಿಟಿಕಲ್ ಆಗಿ, ನೋಡುವ ನೋಟ ಬೆಳೆಯುತ್ತದೆ. ಇವೆಲ್ಲ ನನಗೆ ಕಾಲಕಾಲಕ್ಕೆ ಪರಿಚಯವಾಗಿರುವುದು ಲೋಹಿಯಾ ಬರಹಗಳಿಂದ. ನಂತರದ ದಿನಗಳಲ್ಲಿ ಸಿಕ್ಕಿದ ಲಂಕೇಶ್, ಡಿ. ಆರ್. ನಾಗರಾಜರ ಸಂಗ, ಬರಹ, ಮಾತುಗಳಿಂದ. 

ಅದಿರಲಿ. ಈ ಅಂಕಣಕಾರ ಮತ್ತೆ ಮತ್ತೆ ತನ್ನ ಸುಂದರ ಗೀಳಾದ ಲೋಹಿಯಾಗೆ ಮರಳುವುದರಿಂದ ಉಂಟಾದ ಒಂದು ಅರ್ಥಪೂರ್ಣ ಬೆಳವಣಿಗೆಯ ವಿವರಗಳು… ಬರುವ ವಾರಕ್ಕಿರಲಿ! 

ಕೊನೆ ಟಿಪ್ಪಣಿ
 ಗಾಂಧೀಜಿಯ ಬಗೆಗೆ ಬರೆಯುವಾಗ ಆಗಾಗ್ಗೆ ಉಲ್ಲೇಖಿಸಿರುವ ಈ ಲೋಹಿಯಾ ಒಳನೋಟವನ್ನು ಇಲ್ಲಿ ಮತ್ತೆ ಉಲ್ಲೇಖಿಸುವೆ. ಗಾಂಧೀಜಿಯ ಅನೇಕ ವಿಚಾರಗಳನ್ನು ವಿಮರ್ಶಾತ್ಮಕವಾಗಿ ನೋಡಿ, ನಂತರ ತಮ್ಮ ಕಾಲಕ್ಕೆ ತಕ್ಕಂತೆ ವಿವರಿಸುತ್ತಿದ್ದ ಲೋಹಿಯಾ ತಮ್ಮೊಳಗೆ ಇಳಿದಿದ್ದ ಗಾಂಧೀ ವ್ಯಕ್ತಿತ್ವವನ್ನು ಕಂಡುಕೊಳ್ಳುವ ಈ ಪರಿಯ ಸೊಬಗು ನೋಡಿ:

‘…ಹೆಣ್ಣು ಮತ್ತು ದೇವರು ಇವೆರಡೇ ಪ್ರಾಯಶಃ [ಗಂಡಿನ ]ಜೀವನದ ಉದ್ದೇಶಗಳು ಎಂದೊಮ್ಮೆ ಹೇಳಿದೆ. ನಾನು ದೇವರನ್ನು ಭೇಟಿಯಾಗಿಲ್ಲ; ಹೆಣ್ಣು ನನ್ನ ಕೈಗೆ ಎಟುಕಿಯೂ ಎಟುಕದಂತೆ ತಪ್ಪಿಸಿಕೊಳ್ಳುತ್ತಲೇ ಇದ್ದಾಳೆ. ಆದರೆ ದೇವರು ಹಾಗೂ ಹೆಣ್ಣು- ಈ ಎರಡರ ಹೊಳಹುಗಳನ್ನುಳ್ಳ ಒಬ್ಬ ಮನುಷ್ಯನನ್ನು ಸಂಧಿಸುವ ಅವಕಾಶ ನನಗೆ ಸಿಕ್ಕಿತು. ಅದರ ಜೊತೆಗೇ ಈ ಹೊಳಹಿನ ಹುಡುಕಾಟ ಹೊಸದಾಗಿ ಆರಂಭವಾಗಿದೆ…’

ಲೋಹಿಯಾರ ಜೀವನದುದ್ದಕ್ಕೂ ಸಮಾಜವಾದದ ಹಾಗೆ ಗಾಂಧೀಜಿ ಕೂಡ ಒಂದು ಸುಂದರ, ಅರ್ಥಪೂರ್ಣ ಗೀಳಿನಂತಿದ್ದರು ಎನ್ನಿಸುತ್ತದೆ! 

ಬ್ಲಾಗ್ ಫಾಲೋ ಮಾಡಲು ಒಪ್ಪಿ, ಕ್ಲಿಕ್ ಮಾಡಿ; ನೋಟಿಫಿಕೇಶನ್ ಪಡೆಯಿರಿ, ಶೇರ್ ಮಾಡಿ: FOLLOW
ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com 
ಬಿಡುವಾದಾಗ ನೋಡಿ, ಶೇರ್ ಮಾಡಿ: YouTube Channel Link

Share on:

Comments

13 Comments



| Gangadhara BM

'ಬುದ್ದಿ-ಭಾವಗಳ ವಿದ್ಯುದಾಲಿಂಗನ' ದಂತಿದೆ ಸರ್.

\r\n


| Hanamantappa

ರಾಮ ಮನೋಹರ ಲೋಹಿಯಾ ಕುರಿತ ಈ ಲೇಖನದಲ್ಲಿ ಹಲವಾರು ಮಾರ್ಗದರ್ಶಕ ಮಾತುಗಳಿವೆ ಮತ್ತು  ಆ ಮುಖಾಂತರ ಅನ್ಯ ಶಿಸ್ತುಗಳನ್ನು ಒಂದು ಲೇಖನದಲ್ಲಿ ಹೇಗೆ  ಬಳಸಬಹುದು ಎಂಬುದು ಸಹ ನಮಗೆ ದಿಕ್ಸೂಚಿಯಂತಿದೆ. ಅಭಿನಂದನೆಗಳು ಸರ್.

\r\n


| ಮಹಾಂತೇಶ ಪಾಟೀಲ

ಲೋಹಿಯಾ ಪುಸ್ತಕ ವಿಮರ್ಶೆ ಕುರಿತು ಹೇಳಿದ ಮಾತುಗಳು, ಯಾವ ವಿಮರ್ಶಾ ಮಾರ್ಗದರ್ಶಕರು ನೇರವಾಗಿ ಹೇಳಿಕೊಡುವುದಿಲ್ಲ. 

\r\n


| ಶಿವಲಿಂಗೇಗೌಡ ಡಿ.

ಲೋಹಿಯಾ ಅವರ ಚಿಂತನೆಗಳ ವಿಶಿಷ್ಟ ಒಳನೋಟಗಳನ್ನು  ಈ ಲೇಖನದ ಮೂಲಕ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್. ಈ ಲೇಖನ ಲೋಹಿಯಾರನ್ನು ಮತ್ತಷ್ಟು ಓದುವ ಸುಂದರ ಗೀಳಿಗೆ ಹಚ್ಚುವುದರಲ್ಲಿ ಎರಡು ಮಾತಿಲ್ಲ. ಪುಸ್ತಕ ವಿಮರ್ಶೆ, ಗಾಂಧಿಯವರನ್ನು ಕುರಿತ ಲೋಹಿಯಾ ಅವರ ಮಾತುಗಳು ಹೊಸ ದೃಷ್ಟಿಯನ್ನು ನೀಡಬಲ್ಲಂತ ಚಿಂತನೆಗಳು. ಧನ್ಯವಾದಗಳು ಸರ್. 

\r\n


| B A Mamatha

ಅರ್ಥಪೂರ್ಣವಾದ ಗೀಳಿನ ಕುರಿತು ಲೇಖನ ಓದುತ್ತಲೇ, ಈ ಬರಹದಿಂದ ಹೊರಬರಲೂ ಮನಸು ಒಲ್ಲೆ ಎಂದಿತ್ತು. 
\r\nಪುಸ್ತಕ ವಿಮರ್ಶೆಯ. ಬೇರೊಂದು ನೋಟದ ಬಗ್ಗೆಯೂ ಹೇಳಿದ್ದು ವಿಶೇಷವಾಗಿತ್ತು ಸರ್. 

\r\n\r\n

 ಆರಂಭದ ದಿನಗಳಲ್ಲಿ
\r\nಪುರಾಣಗಳನ್ನು ಓದುತ್ತಾ ಭಕ್ತಿಭಾವ ಸೃಷ್ಟಿಯಾಗುತ್ತಿದ್ದ ದಿನಗಳು ಮುಗಿದು , ವಿಮರ್ಶೆ ಆರಂಭವಾದಾಗ ಯಾವ ಪುರಾಣವನ್ನೂ ಸ್ತ್ರೀ ಬರೆದಿಲ್ಲ, ಇತಿಹಾಸ , ಪುರಾಣದ ಪಾತ್ರಗಳು ಸ್ತ್ರೀಯರಿಂದ ರಚಿತವಾಗಿದ್ದರೆ , ಪಡೆಯುತ್ತಿದ್ದ ಆಕಾರ, ತಿರುವುಗಳು  ಸಾಹಿತ್ಯಕ್ಕೆ ಎಷ್ಟೊಂದು ನಷ್ಟ ಮಾಡಿದವು.  ತೀವ್ರ ಕೊರತೆ ಅನಿಸತೊಡಗಿ ಕಸಿವಿಸಿ ಅನಿಸಿತ್ತು. 
\r\nಸ್ತ್ರೀ , ಮಾದರಿಯ ಪೌರಾಣಿಕ ಅಂಶಗಳು ಇಲ್ಲವೇ ಇಲ್ಲ ಅನ್ನುವುದು ನಷ್ಟ, ಕೊರತೆ _ ಅನ್ನುವ ಪದಗಳ ವ್ಯಾಪ್ತಿ ಮೀರಿದ್ದು

\r\n


| Dr.Prabhakar

Nice glimpses and insights into Lohia's thoughts. I am amazed at your narrative style and narrative skill!

\r\n


| ಮಮತಾ

 ಅರ್ಥಪೂರ್ಣವಾದ ಗೀಳಿನ ಕುರಿತು ಓದುತ್ತಲೇ ಈ ಬರಹದಿಂದಲೂ ಹೊರಬರಲು ಮನಸ್ಸು ಒಲ್ಲೆನೆಂದಿತ್ತು. ಪುಸ್ತಕ ವಿಮರ್ಶೆಯ ಮತ್ತೊಂದು ನೋಟ ಕೂಡ ವಿಶೇಷವಾಗಿದೆ

\r\n


| ಡಾ. ನಿರಂಜನ ಮೂರ್ತಿ ಬಿ ಎಂ

'ಪ್ರೇಮಿಯ ಸುಂದರ ಗೀಳಿನ ಹಾಗೆ' ಎಂಬೀ ಲೇಖನ ಓದುಗರಿಗೂ ಒಂದು ಸುಂದರ ಗೀಳಾದರೆ, ಅದುವೇ ಇದರ ಸುಂದರ ಯಶಸ್ಸು!

\r\n\r\n

ಸುಂದರ ಗೀಳುಗಳು ಮನುಷ್ಯನನ್ನು ಕಾಡತೊಡಗಿದಾಗ ಎಲ್ಲಾ ಕ್ಷೇತ್ರಗಳಲ್ಲಿಯೂ ಅದ್ಭುತ ಯಶಸ್ಸನ್ನು ಸಾಧಿಸಬಹುದೆನ್ನುವ ಲೇಖಕರ ಅಭಿಪ್ರಾಯವನ್ನು ಒಪ್ಪಲೇಬೇಕು. ಸೃಜನಶೀಲ, ಚಿಂತಕ, ಲೇಖಕ, ವಿಮರ್ಶಕ, ಸಂಸ್ಕೃತಿ-ಸಮಾಜ ವಿಶ್ಲೇಷಕ, ಮತ್ತು ತತ್ವನಿಷ್ಠ ರಾಜಕಾರಣಿ ರಾಮ ಮನೋಹರ ಲೋಹಿಯಾರ ಸಮಗ್ರ ವ್ಯಕ್ತಿಚಿತ್ರಣವನ್ನು ಕಟ್ಟಿಕೊಡುವ ಹುಳಿಯಾರರ ಪ್ರಯತ್ನ ಫಲಪ್ರದವಾಗಿದೆ. ವಿಮರ್ಶೆಯೆನ್ನುವುದು ಎಲ್ಲವನ್ನೂ ಪರೀಕ್ಷಕ ದೃಷ್ಟಿಯಿಂದ ಒಳಹೊಕ್ಕು ನೋಡಿ ಮಾಡುವ ಮೌಲ್ಯಮಾಪನ. ಸೃಹನಶೀಲತೆಯಲ್ಲಿಯೂ ವಿಮರ್ಶೆಯ ಶ್ರಮವಿರುತ್ತದೆಂಬುದು ಅಪರೂಪದ ಅರಿವು. ಲೋಹಿಯಾರನ್ನು ಆಧಾರವಾಗಿಟ್ಟುಕೊಂಡು ಎಲ್ಲವನ್ನೂ---ಸಂಸ್ಕೃತಿ, ಇತಿಹಾಸ, ಪುರಾಣ, ಸಾಹಿತ್ಯ, ಸಂಗೀತ, ಕಲೆ, ಸಮಾಜ, ರಾಜಕಾರಣ---ಹೇಗೆ ನೋಡಬೇಕು, ಪರೀಕ್ಷಿಸಬೇಕು, ಮತ್ತು ವಿಮರ್ಶಿಸಬೇಕು ಎಂಬುದನ್ನು ವಿವರಿಸುವ ಹುಳಿಯಾರರ ಪ್ರಯತ್ನ ಸ್ತುತ್ಯಾರ್ಹ.

\r\n\r\n

ಗಾಂಧೀಜಿಯನ್ನು ಸುಂದರ ಗೀಳಾಗಿಸಿಕೊಂಡಿದ್ದ ಲೋಹಿಯಾರನ್ನು ಸುಂದರ ಗೀಳಾಗಿಸಿಕೊಂಡಿರುವ ಲೇಖಕರೂ ಕೂಡ ಈ ಬ್ಲಾಗಿನೋದುಗರಿಗೊಂದು ಸುಂದರ ಗೀಳು! ಪ್ರಖರ ಚಿಂತನೆ, ತತ್ವ-ಸಿದ್ಧಾಂತ, ವಿಮರ್ಶೆಗಳ ಸಾಗರದಂತಿದ್ದ ಲೋಹಿಯಾರವರು ಬೌದ್ಧಿಕ ವಲಯಕ್ಕೆ ಮಾತ್ರ ಸೀಮಿತವಾಗಿದ್ದರು; ಗಾಂಧಿ-ನೆಹರು ಅವರ ಹಾಗೆ ಲೋಹಿಯಾರವರು ರಾಜಕಾರಣದಲ್ಲಿ ಮನೆಮಾತಾಗದಿರುವುದು ವಿಸ್ಮಯಕಾರಿ ಮತ್ತು ವಿಷಾದಮಯ!!

\r\n


| B L Raju

ಬರೀ ರಾಜಕಾರಣಿಯಾಗಿ ಕನ್ನಡ ಪ್ರಜ್ಞೆಗೆ ದಕ್ಕಿದ್ದ ಲೋಹಿಯಾರ ಇನ್ನೊಂದು ಮುಖವನ್ನು ಅಂದರೆ ಸಾಹಿತ್ಯ ವಿಮರ್ಶೆಯ ಕುರಿತು ಅವರಿಗಿದ್ದ ಖಚಿತ ಒಳನೋಟಗಳನ್ನು ಬಹಳ ಪರಿಣಾಮಕಾರಿಯಾಗಿ ದಾಖಲಿಸಿದ್ದೀರಿ ಸರ್

\r\n


| Shoodra Shrinivas

ನಾವೇನಾದರೂ ಮಾತಾಡಬೇಕಾದರೆ ಲೋಹಿಯಾ ಅವರ ಅಭಿಪ್ರಾಯ ಕೇಳುತ್ತಿದ್ದೆವು ಎಂದು. ಹಾಗೆಯೇ ನೀಲಂ ಸಂಜೀವ ರೆಡ್ಡಿಯರು ಲೋಹಿಯಾ ಅವರಿಗೆ ಅರ್ಪಿಸಿದ ಶ್ರದ್ಧಾಂಜಲಿ ಭಾಷಣ ಸ್ಮರಣೀಯವಾದದ್ದು. ಒಂದು ವೇಳೆ ನಾವೆಲ್ಲ ಲೋಹಿಯಾ ಓದಿಕೊಳ್ಳದಿದ್ದರೆ ಗಾಂಧೀಜಿಯವರೂ ಕೂಡ ಪರಕೀಯರಾಗಿಬಿಡುತ್ತಿದ್ದರೇನೋ ಅನ್ನಿಸುತ್ತದೆ. \r\n


| sanganagouda

ಒಂದು ಗಂಭೀರ ವಿಷಯವನ್ನು ಕಾಲಕ್ಕೆ ಬೇಕಾಗಿರುವುದನ್ನು. ಕಾಲದಿಂದ ಪ್ರಾರಂಭಿಸಿ ಭೂತಕ್ಕೆ ಹೋಗಿ, ಮತ್ತದನ್ನು ವರ್ತಮಾನಕ್ಕೆ ಸೂಕ್ಷ್ಮವಾಗಿ ಕನೆಕ್ಟ್ ಮಾಡಿ; ಮುಂದೆ ಮಾಡಬಹುದಾದ್ದನ್ನು ಹೇಳುತ್ತೀರಿ...ನಿಮ್ಮ ನೆರೆಟಿವ್ಸ್ ಹಾಗೆ ಸರ್. 

\r\n


| Shoodra Shrinivas

ನಾವೇನಾದರೂ ಮಾತಾಡಬೇಕಾದರೆ ಲೋಹಿಯಾ ಅವರ ಅಭಿಪ್ರಾಯ ಕೇಳುತ್ತಿದ್ದೆವು ಎಂದು ಮಧು ಲಿಮಯೆ ಹೇಳುತ್ತಿದ್ದರು. ನೀಲಂ ಸಂಜೀವ ರೆಡ್ಡಿಯರು ಲೋಹಿಯಾ ಅವರಿಗೆ ಅರ್ಪಿಸಿದ ಶ್ರದ್ಧಾಂಜಲಿ ಭಾಷಣ ಸ್ಮರಣೀಯವಾದದ್ದು. ಒಂದು ವೇಳೆ ನಾವೆಲ್ಲ ಲೋಹಿಯಾ ಓದಿಕೊಳ್ಳದಿದ್ದರೆ ಗಾಂಧೀಜಿಯವರೂ ಕೂಡ ಪರಕೀಯರಾಗಿಬಿಡುತ್ತಿದ್ದರೇನೋ ಅನ್ನಿಸುತ್ತದೆ. \\r\\n

\r\n


| ಪ್ರಕಾಶ್ ಮಂಟೇದ

ಸರ್ರ್ ಈ ನಿಮ್ಮ ಸುಂದರ ಗೀಳಿನ ಬಗ್ಗೆ ನನಗೂ ಆಗಾಗ್ಗೆ ಬರೀಬೇಕು ಅನ್ಸುತ್ತೆ. ಆದರೆ ಈ ಸಂಗತ ಅಸಂಗತ ಎರೆಡರ ನಡುವೆ ಹೊಯ್ದಾಡುವ ಈ ಮನಸ್ಸಿಗೆ ನೀನು ಇನ್ನೂ ಮಾಗುವ ಅಗತ್ಯವಿದೆ ಒಳ ಮಾತೆದ್ದು  ಈ ವಿಚಾರ ಅದೇಕೋ ಅಲ್ಲಿಗೆ ನಿಂತುಬಿಡುತ್ತದೆ. ಕಲ್ಪನಾಶಕ್ತಿ ಶಕ್ತಿ ಯ ಲಹರಿಗಳಿಂದಲೇ ಮನುಷ್ಯ ಬೆಳೆದು ಕಾಲ ದೇಶಕ್ಕೆ ಒಳಗಾಗಿರಬಹುದು.  ಆದರೆ ಇವೆ ಮನುಷ್ಯ ಲೋಕಕ್ಕೆ ಗಡಿಗಳಾದಾಗ ಮತ್ತೆ ಮನುಷ್ಯರು ಸೃಷ್ಟಿಗಾಗಿ ಅಥವಾ ತನ್ನ ಪರಿಧಿಯನ್ನು ಮೀರುವುದಕ್ಕಾಗಿ ಗೀಳುಗಳ ವ್ಯಸನ ಪ್ರವೃತ್ತಿಗಳಿಗೆ ಒಳಗಾಗಬೇಕಾಗುತ್ತದೇನೋ..... ಈ ಹಿನ್ನೆಲೆಯಲ್ಲಿ ಲೋಹಿಯಾ ಅವರನ್ನು ಓದುವಂತೆ ನಿಮ್ಮ ಬರಹ ಹೊಸ ಪ್ರೇರಣೆ ನೀಡುತ್ತದೆ. ಹಾಗೆಯೇ

\r\n\r\n

ಈ ಬಗ್ಗೆ ಮತ್ತಷ್ಟು ಓದುವ ಹಾಗೆ ನಿಮ್ಮ ಸುಂದರ ಗೀಳು ಎಂಬ ಪರಿಕಲ್ಪನೆ ನನ್ನಂಥವರಲ್ಲಿ ಉತ್ಸಾಹ ಮೂಡಿಸುತ್ತದೆ.

\r\n




Add Comment






Recent Posts

Latest Blogs



Kamakasturibana

YouTube