ಮೂಕನಾಯಕ ಮಹಾನಾಯಕನಾದ ಕತೆ
by Nataraj Huliyar
ಮೊನ್ನೆ ಜನವರಿ ೩೧ರಂದು ‘ಮೂಕನಾಯಕ’ ಪತ್ರಿಕೆಯ ಜನ್ಮದಿನ ಎಂದು ಶ್ರೀಧರ ಏಕಲವ್ಯ ನೆನಪಿಸಿದಾಗ, ‘ಎ ಪಾರ್ಟ್ ಅಪಾರ್ಟ್: ದ ಲೈಫ್ ಅಂಡ್ ಥಾಟ್ ಆಫ್ ಬಿ. ಆರ್. ಅಂಬೇಡ್ಕರ್’ ಪುಸ್ತಕದಲ್ಲಿ ಗುರುತು ಹಾಕಿದ್ದ ಪುಟಗಳತ್ತ ಕಣ್ಣಾಡಿಸಿದೆ. ಅಶೋಕ್ ಗೋಪಾಲ್ ಬರೆದ ಈ ಸಮಗ್ರ ಜೀವನಚರಿತ್ರೆಯನ್ನು ಓದಬೇಕೆಂದು ಗುಂಡೂರ್, ಅರುಣ ಜೋಳದ ಕೂಡ್ಲಿಗಿ ಹೇಳಿದ್ದರು. ೧೯೨೦ರಲ್ಲಿ ಅಂಬೇಡ್ಕರ್ ಆರಂಭಿಸಿದ ‘ಮೂಕನಾಯಕ’ದ ಮೊದಲ ಸಂಚಿಕೆಯ ಮುಖಪುಟದಲ್ಲಿ ಕವಿ ತುಕಾರಾಮರ ‘ಅಭಂಗ್’ ಇತ್ತು. ‘ಭಂಗ’ವಾಗದ, ತಡೆಯಿಲ್ಲದ, ನಿರಂತರವಾಗಿ ಹರಿಯುವ ಕಾವ್ಯವನ್ನು ಮರಾಠಿ ‘ಅಭಂಗ್’ ಪ್ರತಿನಿಧಿಸುತ್ತದೆ. ‘ಮೂಕನಾಯಕ’ ಪತ್ರಿಕೆಯ ಧ್ಯೇಯವಾಕ್ಯವಾಗಿದ್ದ ತುಕಾರಾಮರ ಅಭಂಗ್‌ನ ಸರಳಾನುವಾದ:
ನಾನೇಕೆ ನಾಚಿಕೆ ಪಡಬೇಕು?
ನಾನು ಹಿಂಜರಿಕೆ ಬಿಟ್ಟು ಬಾಯಿ ತೆರೆದಿರುವೆ.
ಈ ಭುವಿಯಲ್ಲಿ ಮೂಕಪ್ರಾಣಿಗಳನ್ನು ಯಾರೂ ಗಮನಿಸುವುದಿಲ್ಲ
ಅತಿವಿನಯದಿಂದ ಯಾವ ಒಳಿತನ್ನೂ ಸಾಧಿಸಲು ಆಗುವುದಿಲ್ಲ
ಆ ಕಾಲಘಟ್ಟದಲ್ಲಿ ಆಡಬೇಕಾದ ಮಾತುಗಳನ್ನು ಆಡಲೇಬೇಕಾಗಿದ್ದ ಅಂಬೇಡ್ಕರ್ ಕವಿ ತುಕಾರಾಮರ ಸಾಲುಗಳನ್ನು ತಮ್ಮ ಪತ್ರಿಕೆಯ ಧ್ಯೇಯವಾಕ್ಯವಾಗಿ ಆರಿಸಿಕೊಂಡಿದ್ದು ಅರ್ಥಪೂರ್ಣವಾಗಿತ್ತು. ಆ ಕಾಲದಲ್ಲಷ್ಟೇ ಅಲ್ಲ, ಎಲ್ಲ ಕಾಲಕ್ಕೂ, ಎಲ್ಲರಿಗೂ ಪ್ರೇರಣೆ ನೀಡಬಲ್ಲ ಮಾತುಗಳಿವು. ಅಂಬೇಡ್ಕರ್ ಅವರ ವಿದ್ವತ್ತು ಹಾಗೂ ಅಸ್ಪೃಶ್ಯರ ಬಗೆಗಿನ ಅವರ ಕಾಳಜಿ ಕುರಿತು ಅಪಾರ ಗೌರವವಿದ್ದ ಕೊಲ್ಹಾಪುರದ ರಾಜ ಶಾಹು ಮಹಾರಾಜ್ ೧೯೧೯ರಲ್ಲಿ ಒಂದು ದಿನ ಅಂಬೇಡ್ಕರ್ ಅವರ ಮನೆಗೆ ಬಂದರು; ಪತ್ರಿಕೆಯೊಂದನ್ನು ಆರಂಭಿಸಲು ಅಂಬೇಡ್ಕರ್‌ಗೆ ೨೫೦೦ ರೂಪಾಯಿಗಳನ್ನು ಕೊಟ್ಟರು. ಆ ಕಾಲಕ್ಕೆ ಅದು ದೊಡ್ಡ ಮೊತ್ತ. ಆಗ ಅಂಬೇಡ್ಕರ್ ಕೆಲಸ ಮಾಡುತ್ತಿದ್ದ ಕಾಲೇಜನ್ನು ಸರ್ಕಾರ ನಡೆಸುತ್ತಿದ್ದುದರಿಂದ ಅವರ ನಂಬಿಕಸ್ಥ ಗೆಳೆಯ ಪಾಂಡುರಂಗ ಭಾಟ್ಕರ್ ‘ಮೂಕನಾಯಕ’ದ ಸಂಪಾದಕರಾದರು. ಹದಿನೈದು ದಿನಕ್ಕೊಮ್ಮೆ ಪ್ರಕಟವಾಗುತ್ತಿದ್ದ ಎಂಟು ಪುಟಗಳ ಈ ಟ್ಯಾಬ್ಲಾಯ್ಡ್‌ನ ವಾರ್ಷಿಕ ಚಂದಾ ೨ರೂ ೨೫ ಪೈಸೆ. ಐದನೇ ಸಂಚಿಕೆಯಲ್ಲಿ ಗೋಡ್ರೆಜ್ ಅಂಡ್ ಬಾಯ್ಸ್ ಜಾಹಿರಾತು ಸಿಕ್ಕಿತು; ಕೊಲ್ಹಾಪುರದಲ್ಲಿ ಫುಟ್‌ವೇರ್ ಅಂಗಡಿ ನಡೆಸುತ್ತಿದ್ದ ಕುಟುಂಬದ ದತ್ತೋಬಾ ಪವಾರ್ ಅವರ ಒಂದು ಜಾಹಿರಾತು. ಇಷ್ಟೇ ಈ ಪತ್ರಿಕೆಯ ಜಾಹಿರಾತು ಆದಾಯ. ಬಹುತೇಕ ಬರಹಗಳನ್ನು ಅಂಬೇಡ್ಕರ್ ಅವರೇ ಬರೆಯುತ್ತಿದ್ದರು.
ಮೂವತ್ತರ ಹರೆಯದ ಅಂಬೇಡ್ಕರ್ ತಮ್ಮ ಮುಂದಿನ ಮುಖ್ಯ ಗುರಿ ಭಾರತೀಯ ಸಮಾಜ ಹಾಗೂ ಭಾರತೀಯ ಮನಸ್ಸನ್ನು ಆಳುತ್ತಿದ್ದ ಜಾತಿಪದ್ಧತಿಯ ನಿರ್ಮೂಲನ ಎಂಬುದನ್ನು ಮೊದಲ ಮುಖಪುಟ ಬರಹದಲ್ಲೇ ಖಚಿತವಾಗಿ ಸೂಚಿಸಿದ್ದರು: ‘ಯುರೋಪಿಯನ್ ಒಬ್ಬನನ್ನು ‘ನೀನು ಯಾರು?’ ಎಂದು ಕೇಳಿದರೆ, ‘ನಾನು ಇಂಗ್ಲಿಷ್’, ‘ನಾನು ಜರ್ಮನ್’, ‘ನಾನು ಫ್ರೆಂಚ್’, ‘ನಾನು ಇಟ್ಯಾಲಿಯನ್’ ಈ ಥರದ ಉತ್ತರ ಸಾಕಾಗುತ್ತದೆ. ಆದರೆ ಹಿಂದೂಗಳ ರೀತಿಯೇ ಬೇರೆ. ‘ನಾನು ಹಿಂದೂ’ ಎಂದರೆ ಅವರಿಗೆ ಸಾಕಾಗುವುದಿಲ್ಲ. ಇಲ್ಲಿ ಒಬ್ಬ ವ್ಯಕ್ತಿ ಜಾತಿಯನ್ನು ಖಚಿತವಾಗಿ ಹೇಳಲೇಬೇಕು. ಅಂದರೆ, ಹಿಂದುವೊಬ್ಬ ತನ್ನ ಮಾನವ ಐಡೆಂಟಿಟಿ ಯಾವುದು ಎಂದು ಹೇಳಬೇಕೆಂದರೆ ಪ್ರತಿ ಹಂತದಲ್ಲೂ ಅವನು ತನ್ನ ಅಸಮಾನ ಸ್ಥಾನವನ್ನು ಹೇಳುತ್ತಲೇ ಇರಬೇಕಾಗುತ್ತದೆ.’ ಅಂಬೇಡ್ಕರ್ ಅವರ ಒಂದು ಪ್ರಖ್ಯಾತ ರೂಪಕಾತ್ಮಕ ಹೇಳಿಕೆ ಕೂಡ ಈ ಸಂಚಿಕೆಯಲ್ಲಿ ಪ್ರಕಟವಾಯಿತು: ‘ಹಿಂದೂ ಸಮಾಜವೆನ್ನುವುದು ಮೆಟ್ಟಿಲುಗಳಿಲ್ಲದ, ಪ್ರವೇಶದ್ವಾರವಿಲ್ಲದ ಹಲವು ಅಂತಸ್ತುಗಳ ಗೋಪುರ. ಆಯಾ ಅಂತಸ್ತಿನಲ್ಲಿರುವವರು ಅಲ್ಲೇ ಸಾಯುವರು.’
ನಂತರ, ೧೯೨೦ರ ಫೆಬ್ರವರಿ ೧೮ರ ಸಂಚಿಕೆಯಲ್ಲಿ ಬಾಲಗಂಗಾಧರ ತಿಲಕರ ‘ಸ್ವರಾಜ್ಯ ನನ್ನ ಆಜನ್ಮಸಿದ್ಧ ಹಕ್ಕು’ ಎಂಬ ಜನಪ್ರಿಯ ಘೋಷಣೆಯನ್ನು ಅಂಬೇಡ್ಕರ್ ದೊಡ್ಡ ಮಟ್ಟದಲ್ಲೇ ಎದುರಾದರು. ಮರಾಠಿ ಭಾಷೆಯಲ್ಲಿ ಮೊದಲು ಹೊರಹೊಮ್ಮಿದ್ದ ತಿಲಕರ ಘೋಷಣೆಯನ್ನು ವಿಗ್ರಹಭಂಜಕ ಅಂಬೇಡ್ಕರ್ ಮರಾಠಿಯಲ್ಲೇ ಮುಖಾಮುಖಿಯಾಗಿದ್ದರು: ‘ಸ್ವರಾಜ್ಯ ಯಾರ ಕೈಗೆ ಹೋಗುತ್ತದೆ ಹಾಗೂ ಸ್ವರಾಜ್ಯದ ಉದ್ದೇಶವೇನು ಎಂಬುದು ಗೊತ್ತಾಗುವವರೆಗೂ ನಾವು ಈ ಬೇಡಿಕೆಗೆ ದನಿಗೂಡಿಸುವುದಿಲ್ಲ’ ಎಂದು ಅಂಬೇಡ್ಕರ್ ಬರೆದರು.
ಅಷ್ಟೊತ್ತಿಗಾಗಲೇ ಅಂಬೇಡ್ಕರ್ ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಒಂದು ಘಟ್ಟದ ವಿದ್ಯಾಭ್ಯಾಸ ಮುಗಿಸಿ ಮರಳಿ ಭಾರತಕ್ಕೆ ಬಂದಿದ್ದರು; ತಮ್ಮ ಬರಹಗಳನ್ನು ಬಹುತೇಕ ಇಂಗ್ಲಿಷಿನಲ್ಲೇ ಬರೆಯುತ್ತಿದ್ದರು. ಅವರು ‘ಮೂಕನಾಯಕ’ದಲ್ಲಿ ಬರೆದ ಬರಹಗಳನ್ನು ಮೊದಲು ಇಂಗ್ಲಿಷಿನಲ್ಲಿ ಬರೆದು, ನಂತರ ಮರಾಠಿಗೆ ಅನುವಾದಿಸಿ ಕೊಡುತ್ತಿದ್ದರು ಎಂದು ಅಂಬೇಡ್ಕರ್ ಜೀವನಚರಿತ್ರಕಾರ ಖೈರ್ಮೋಡೆ ಹೇಳುತ್ತಾರೆ. ಮುಂದೆ ೧೯೨೭ರ ಹೊತ್ತಿಗೆ ಮರಾಠಿ ಸಾಹಿತ್ಯವನ್ನು ಆಳವಾಗಿ ಓದಿಕೊಂಡ ಅಂಬೇಡ್ಕರ್ ತಮ್ಮ ಮರಾಠಿ ಭಾಷೆಯನ್ನು ಹೊಸದಾಗಿ ಸಜ್ಜುಗೊಳಿಸಿಕೊಂಡರು; ಮರಾಠಿಯಲ್ಲೇ ಬರೆಯಲು ಶುರುಮಾಡಿದರು. ಇದು ಮರಾಠಿ ಭಾಷೆಯನ್ನಾಡುವ ಎಲ್ಲ ಜಾತಿ ಸಮುದಾಯಗಳನ್ನು ದೊಡ್ಡ ಮಟ್ಟದಲ್ಲಿ ತಲುಪಲು ಅವರಿಗೆ ನೆರವಾಯಿತು. ಜೀವಮಾನವೆಲ್ಲ ಕರ್ನಾಟಕದಲ್ಲಿದ್ದರೂ, ಕನ್ನಡದಲ್ಲಿ ಬರೆಯುವುದು ಕಷ್ಟ ಎನ್ನುವ ಇಂಗ್ಲಿಷ್ ಪರಪುಟ್ಟರು-ಪ್ಯಾರಾಸೈಟುಗಳು- ಅಂಬೇಡ್ಕರ್ ಇಂಗ್ಲಿಷಿನಂತೆ ಮರಾಠಿಯಲ್ಲೂ ದಕ್ಷವಾಗಿ ಬರೆಯತೊಡಗಿದ ಈ ಘಟ್ಟದಿಂದ ಮುಖ್ಯ ಪಾಠವೊಂದನ್ನು ಕಲಿಯುವ ಅಗತ್ಯವಿದೆ. ಹಾಗೆಯೇ, ಬರೆವ ಕಾತರವಿದ್ದರೂ ಬರವಣಿಗೆ ಆರಂಭಿಸಲು ಜೀವಮಾನವಿಡೀ ಹಿಂಜರಿಯುವವರಿಗೂ ಅಂಬೇಡ್ಕರ್ ಅವರ ಈ ಶಿಸ್ತುಬದ್ಧ ಸ್ವ-ತರಬೇತಿಯಲ್ಲಿ ಪಾಠಗಳಿವೆ.
ಲೇಖಕನೊಬ್ಬ ಒಂದು ಬೃಹತ್ ಸಮುದಾಯದ ಭಾಷೆಯನ್ನು ಮಾತಿನಲ್ಲೂ ಬರಹದಲ್ಲೂ ಬಳಸಲೇಬೇಕು ಎನ್ನುವ ಪ್ರಾಥಮಿಕ ಅರಿವು, ಜವಾಬ್ದಾರಿಗಳಿಂದ ಅಂಬೇಡ್ಕರ್ ತಮ್ಮನ್ನು ತಾವು ಮರಾಠಿ ಭಾಷೆಯ ಲೇಖಕನಾಗಿ ತಯಾರು ಮಾಡಿಕೊಂಡ ಈ ರೀತಿ ಅನನ್ಯವಾಗಿದೆ. ಸಮುದಾಯವನ್ನು ತಿದ್ದುವ, ಮುನ್ನಡೆಸುವ ಆಳದ ಜವಾಬ್ದಾರಿಯಿಂದ ಮೂವತ್ತರ ಹರೆಯದ ನಂತರ ಅಂಬೇಡ್ಕರ್ ಮೈಗೂಡಿಸಿಕೊಂಡ ಹೊಸ ಕಲಿಕೆ ಇದು. ಮೂಕ ಸಮುದಾಯಕ್ಕೆ ದನಿ ಕೊಡುವ ನಾಯಕನಾಗಲು ಹೊರಟ ಪತ್ರಿಕೆಯೊಂದರ ಅನುಭವದ ಮೂಲಕ ಮೂಕ ಸಮುದಾಯದ ಭಾಷೆಯ ಮೇಲೆ ಪ್ರಭುತ್ವ ಸಾಧಿಸಿದ ಅಂಬೇಡ್ಕರ್ ಅವರ ಮರಾಠಿ ಬರವಣಿಗೆಯ ಕಲಿಕೆ ಎಲ್ಲ ಕಾಲದ ಚಿಂತಕ-ನಾಯಕರಿಗೂ ಅಪೂರ್ವ ಮಾದರಿಯಾಗಿದೆ.
‘ಮೂಕನಾಯಕ’ ಶುರುವಾದ ಕೆಲವು ತಿಂಗಳ ನಂತರ ವಿದ್ಯಾಭ್ಯಾಸ ಮುಂದುವರಿಸಲು ಅಂಬೇಡ್ಕರ್ ಲಂಡನ್‌ಗೆ ಹೊರಟರು. ೧೯೨೩ರಲ್ಲಿ ಅವರು ಮರಳಿ ಬರುವ ಹೊತ್ತಿಗೆ ‘ಮೂಕನಾಯಕ’ ನಿಂತುಹೋಗಿತ್ತು. ಮಹಾಡ್ ಸತ್ಯಾಗ್ರಹದ ಹೊತ್ತಿಗೆ ಅವರ ಮತ್ತೊಂದು ಪತ್ರಿಕೆ ‘ಬಹಿಷ್ಕೃತ ಭಾರತ’ ಪ್ರಕಟವಾಗತೊಡಗಿತು. ನಂತರ ‘ಜನತಾ’, ‘ಪ್ರಬುದ್ಧ ಭಾರತ’ ಪತ್ರಿಕೆಗಳನ್ನು ಅಂಬೇಡ್ಕರ್ ಮುನ್ನಡೆಸಿದರು.
‘ಮೂಕನಾಯಕ’ ಪತ್ರಿಕೆಯಿಂದ ಶುರುವಾದ ಅಂಬೇಡ್ಕರ್ ಅವರ ಒಟ್ಟು ಪತ್ರಿಕೋದ್ಯಮದ ಐತಿಹಾಸಿಕ ಸಾಹಸ ಎಲ್ಲ ಕಾಲದ ಲೇಖಕ, ಲೇಖಕಿಯರಿಗೆ, ಪತ್ರಿಕೋದ್ಯಮಿಗಳಿಗೆ ಗಂಭೀರ ಪಾಠಗಳನ್ನು ಹೇಳಿಕೊಡಬಲ್ಲದು. ಈ ಪತ್ರಿಕೆಗಳು ರೂಪುಗೊಂಡ ಕಾಲ ಭಾರತದಲ್ಲಿ ಆಧುನಿಕ ಗದ್ಯ ರೂಪುಗೊಂಡ ಕಾಲ ಕೂಡ. ಪತ್ರಿಕೋದ್ಯಮ ಹಾಗೂ ಲಾಯರ್ ವೃತ್ತಿ ಎರಡನ್ನೂ ‘ನೋಬಲ್ ಪ್ರೊಫೆಶನ್’ ಎಂದು ಭಾರತ ನಂಬಿದ್ದ ಕಾಲ ಅದು. ಸ್ವಾತಂತ್ರ‍್ಯ ಚಳುವಳಿಯ ಕಾಲದಲ್ಲಿ ರೂಪುಗೊಂಡ ಭಾರತೀಯ ಪತ್ರಿಕೋದ್ಯಮವನ್ನು ಸ್ವಾತಂತ್ರ್ಯ ಚಳುವಳಿ ಹಾಗೂ ಸಮಾಜ ಸುಧಾರಣೆಯ ಚಳುವಳಿ ಇವೆರಡೂ ರೂಪಿಸಿದ ಕತೆ ಕೂಡ ಅನನ್ಯವಾಗಿದೆ. ಆಧುನಿಕ ಭಾರತದ ದಿಕ್ಕನ್ನು ಬದಲಿಸಿದ ಗಾಂಧಿ, ಅಂಬೇಡ್ಕರ್, ಲೋಹಿಯಾ ಮೂವರೂ ಹಲವು ಪತ್ರಿಕೆಗಳ ಸಂಪಾದಕರಾಗಿದ್ದರು. ಗಾಂಧಿ ಹಾಗೂ ಅಂಬೇಡ್ಕರ್ ಲಾಯರ್ ಕೂಡ ಆಗಿದ್ದರು. ಲೋಹಿಯಾ ತಮ್ಮ ಬಂಧನವಾದಾಗ ತನ್ನ ಪರವಾಗಿ ತಾನೇ ವಾದಿಸುತ್ತಿದ್ದರು. ಭಾರತದ ಚಿಂತಕ-ನಾಯಕರಲ್ಲಿ ಕಾನೂನಿನ ಜ್ಞಾನ ಮತ್ತು ಪತ್ರಿಕೋದ್ಯಮ ಎರಡೂ ಬೆರೆತ ಈ ಘಟ್ಟ ಭಾರತದಲ್ಲಿ ಎರಡು ಆದರ್ಶಗಳು ಬೆರೆತ ಅಪೂರ್ವ ಘಟ್ಟ ಕೂಡ. ಈ ಅಂಶಗಳು ನವಭಾರತ ನಿರ್ಮಾಣದಲ್ಲಿ ಪತ್ರಿಕೋದ್ಯಮ ಮಾಡಿದ ಕೆಲಸ ಎಷ್ಟು ಮಹತ್ವದ್ದು ಎಂಬುದನ್ನು ಇವತ್ತಿನ ಪತ್ರಿಕೋದ್ಯಮದ ಹೊಸಬರಿಗೆ ಮತ್ತೆ ಮತ್ತೆ ನೆನಪಿಸುತ್ತಿರಬೇಕಾಗುತ್ತದೆ. ಚರಿತ್ರೆಯ ಆ ಘಟ್ಟ ಇವತ್ತಿನ ಲಾಯರುಗಳಿಗೆ ಹಾಗೂ ಪತ್ರಿಕೋದ್ಯಮಿಗಳಿಗೆ ಮಾದರಿಗಳನ್ನು, ಮಾರ್ಗದರ್ಶನಗಳನ್ನು ನೀಡಬಲ್ಲದು.
ಇಂಥ ಚರಿತ್ರೆಯಿರುವ ಭಾರತದ ಪತ್ರಿಕೋದ್ಯಮದಲ್ಲಿ ಸ್ವಾತಂತ್ರ್ಯ ಚಳುವಳಿಯ ವಿವಿಧ ಎಳೆಗಳು ಬೇರೆ ಬೇರೆ ರೂಪದಲ್ಲಿ ಸದಾ ಇದ್ದೇ ಇರುತ್ತವೆ ಹಾಗೂ ಇರಲೇಬೇಕಾಗುತ್ತದೆ. ೧೯೭೦ರ ದಶಕದಿಂದ ಈಚೆಗೆ ಬಂದ ಕನ್ನಡದಲ್ಲಿ ಬಂದ ‘ಪಂಚಮ’, ‘ಸಂವಾದ’ ಮುಂತಾದ ಕಿರುಪತ್ರಿಕೆಗಳು ‘ಮೂಕನಾಯಕ’ ಪತ್ರಿಕೆಯು ದಲಿತ ದನಿ, ದಲಿತ ದೃಷ್ಟಿಕೋನವನ್ನು ಕೇಂದ್ರಕ್ಕೆ ತಂದ ರೀತಿಯನ್ನು ಬೇರೆ ಬೇರೆ ರೀತಿಯಲ್ಲಿ ಮುಂದುವರಿಸಿದವು. ನಂತರ ಕೆಲವು ದಿನಪತ್ರಿಕೆಗಳು, ವಾರಪತ್ರಿಕೆಗಳು ಕೂಡ ಮೂಕ ಸಮಾಜದ ದನಿಯನ್ನು ಬಿಂಬಿಸಲೆತ್ನಿಸಿವೆ. ದಲಿತ್ಸ್ ಮೀಡಿಯಾ ವಾಚ್ ಥರದ ಹತ್ತಾರು ದಲಿತ ಪರ ವೆಬ್ ಪೋರ್ಟಲ್ ಗಳು ಈ ಕೆಲಸ ಮಾಡುತ್ತಿವೆ. ಈಚಿನ ವರ್ಷಗಳ ‘ಅಂಬೇಡ್ಕರ್‌ವಾದ’ ಪತ್ರಿಕೆ ಕೂಡ ಈ ಕೆಲಸ ಮುಂದುವರಿಸಿದೆ. ಇವೆಲ್ಲದರ ಹಿಂದೆ ‘ಮೂಕನಾಯಕ’ದ ಪ್ರೇರಣೆ ಎಲ್ಲೋ ಒಳನದಿಯಂತೆ ಹರಿಯುತ್ತಿದೆಯೆಂದೇ ನನ್ನ ನಂಬಿಕೆ. ಅಂಬೇಡ್ಕರ್ ಅವರ ನೂರು ವರ್ಷಗಳ ಹಿಂದಿನ ‘ಮೂಕನಾಯಕ’ ತನಗರಿವಿಲ್ಲದೆಯೇ, ಮೌನವಾಗಿಯೇ ಪತ್ರಿಕೋದ್ಯಮದ ಮಹಾನಾಯಕನಾದ ಅಚ್ಚರಿಯ ಚರಿತ್ರೆ ಇದು. ಇದನ್ನು ಪತ್ರಿಕೋದ್ಯಮ ಹಾಗೂ ನವಮಾಧ್ಯಮಗಳ ಹೊಸ ತಲೆಮಾರಿನ ಹುಡುಗ, ಹುಡುಗಿಯರಾದರೂ ಗಂಭೀರವಾಗಿ ಅರಿಯಲೆತ್ನಿಸಬೇಕು.
Comments
8 Comments
| ಡಾ. ಸುಬ್ರಮಣ್ಯಸ್ವಾಮಿ
ಮಾತು ಕೊಟ್ಟ ಮೂಕನಾಯಕ ಬರಹ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ನಾನು ಕೂಡಾ ಅಂಬೇಡ್ಕರ್ ಜೀವನ ಚರಿತ್ರೆ ಓದಿಕೊಂಡು ಕಾಲೇಜು ದಿನಗಳಲ್ಲಿ ಪತ್ರಿಕೋದ್ಯಮ ಅಧ್ಯಯನ ಮಾಡಿದೆ, ಅದರ ವಿಭಿನ್ನ ಆಯಾಮಗಳು ಹಾಗೂ ಸಾಮಾಜಿಕ ಜೀವನದಲ್ಲಿ ಅದರ ಪಾತ್ರ ಮಹತ್ವದ್ದು ಎಂದು ಅರಿವಾಯಿತು .ನಟರಾಜ್ ಹುಳಿಯಾರ್ ಬಹುಶಃ ಕನ್ನಡ ಟೈಮ್ಸ್ ಲೋಕಾರ್ಪಣೆ ಮಾಡಿ ನಮ್ಮನ್ನೆಲ್ಲ ಹೆಚ್ಚು ಸಾಂಸ್ಕೃತಿಕವಾಗಿ ಸಾಹಿತ್ಯಿಕವಾಗಿ ಚರ್ಚಿಸಲು, ಆಲೋಚಿಸಲು ಪ್ರೇರೇಪಿಸಿದ್ದು ಮೂಕನಾಯಕ ದ ಮುಂದುವರಿಕೆಯೇ ಎನಿಸುತ್ತದೆ
| ಭೀಮೇಶ ಯರಡೋಣಿ
ಲೇಖಕನೊಬ್ಬ ತನಗೆ ಬೇಕಾದ ಭಾಷೆಯನ್ನು ರೂಪಿಸಿಕೊಳ್ಳುವ ಬಗೆ ಏಕಾಏಕಿ ಸಂಭವಿಸದೆ ಹಲವು ರೂಪಾಂತರಗಳಿಂದ ಕೂಡಿದ್ದಾಗಿರುತ್ತದೆ ಎಂಬುದಕ್ಕೆ ಅಂಬೇಡ್ಕರ್ ಮತ್ತು ಲಂಕೇಶ್ (ಇಂಗ್ಲಿಷ್ ನಿಂದ ಕನ್ನಡಕ್ಕೆ ಮರಳಿರುವ ಗೌರಿ ಲಂಕೇಶ್) ನೆನಪಾಗುತ್ತಾರೆ. ಪತ್ರಿಕೋದ್ಯಮಕ್ಕೆ ತಾತ್ವಿಕ ಸ್ಪಷ್ಟತೆಯೊಂದಿಗೆ ಸಾರ್ವಜನಿಕ ಅಖಾಡದಲ್ಲಿ ಮುನ್ನಡೆಯಲು ಬೇಕಾದ ಎದೆಗಾರಿಕೆಯು ಬಹುಮುಖ್ಯವಾದುದು. ಅದನ್ನು ಅಂಬೇಡ್ಕರ್ ಅವರು 30ರ ಹರೆಯದಲ್ಲಿಯೇ ಸಾಧಿಸಿದ್ದರು ಎಂಬುದು ನಮಗೆ ಸ್ಫೂರ್ತಿದಾಯಕವಾಗಿದೆ.
| Sadananda R
ಮೂಕನಾಯಕ ಆ ಕ್ಷಣದ ಉತ್ಸಾಹಕ್ಕೆ ಅವಕಾಶ ನೀಡುವ ಇಂದಿನ ಸಾಮಾಜಿಕ ಜಾಲತಾಣಗಳ ವಿರುದ್ಧ ದಿಕ್ಕಿನಲ್ಲಿ ನಿಲ್ಲುವ ವ್ಯವಸ್ಥೆಯಾಗಿದೆ. ಹೊಣೆಯರಿತ ವ್ಯಕ್ತಿತ್ವವೊಂದು ಸೃಜಿಸಿದ ಅರಿವಿನ ಮಾರ್ಗ ಅದು. ನಮಗಿಂದು ವಾಟ್ಸ್‌ಅಪ್ ಅನ್ನುವುದು ಉಚಿತವಷ್ಟೇ ಅಲ್ಲದೆ, ಏನು ಬೇಕಾದರೂ, ಹೇಗೆ ಬೇಕಾದರೂ ಹೇಳಬಹುದೆಂಬ ಹುಂಬತನಕ್ಕೆ ಅವಕಾಶ ನೀಡಿದೆ. ಮೂಕನಾಯಕನ ಲೇಖಕರಿಗೆ ನಾವು ಬರೆಯುವ ಒಂದೊಂದು ಪದವು ಸಮಾಜವನ್ನು ಪ್ರಭಾವಿಸುತ್ತದೆಂಬ ಅರಿವು ಇತ್ತು. ಹಾಗೆ ಇದೇ ಜಾಲತಾಣಗಳ ಮೂಲಕ ಕ್ಷಣಾರ್ಧದಲ್ಲಿ ಸಾವಿರಾರು ಜನರನ್ನು ಉಚಿತವಾಗಿ ತಲುಪುವ ಅವಕಾಶವೂ ಇದೆ. ಇದು ಮೂಕನಾಯಕ ರುವಾರಿಗಳಿಗೆ ದೊರೆಯದಿದ್ದ ಸೌಲಭ್ಯ... ನೀವು ಹೇಳುವಂತೆ \"ಮೌನವಾಗಿಯೇ ಪತ್ರಿಕೋದ್ಯಮದ ಮಹಾನಾಯಕನಾದ ಅಚ್ಚರಿಯ ಚರಿತ್ರೆ ಇದು\" - ಮೌನದ ಬೆಲೆಯನ್ನು ಅರಿತು ಸಂವಹನ ನಡೆಸುವ ತುರ್ತು ಇಂದಿನದು. ಸದಾನಂದ ಆರ್
| ಪ್ರಕಾಶ್ ಮಂಟೇದ
ಯುವಕ ಬಾಬಾ ಸಾಹೇಬರ ರಚನಾತ್ಮಕ ಪ್ರಶ್ನೆಗಳು, ಅವುಗಳನ್ನು ಪತ್ರಿಕೆಯ ಮೂಲಕ ಸಾರ್ವಜನಿಕಗೊಳಿಸುವ ಕಾರ್ಯಪ್ರವೃತ್ತಿ...ಅದರ ಜೊತೆಗೆ ತಾನು ಏನನ್ನು ಹಾಗೂ ಯಾವ ವಿಚಾರಗಳನ್ನು ಖಚಿತವಾಗಿ ಯಾರಿಗೆ ಹೇಗೆ ಸಾರ್ವಜನಿಕವಾಗಿ ರೂಪಿಸಬೇಕೆಂಬ ಅವರ ಉದ್ದೇಶಗಳು ಎಲ್ಲವನ್ನೂ ಇಂದಿನವರಾದ ನಾವು ಗಮನಿಸಬೇಕಾಗುತ್ತದೆ. ಬರೀ ಒಣ ವಿರೋಧದ ಧೋರಣೆಗಿಂತಲೂ ಬಾಬಾ ಸಾಹೇಬರ ಕಾರ್ಯಪ್ರವೃತ್ತಿಗಳು ಹಾಗೂ ಅವುಗಳನ್ನು ಅವರು ಮುಖ್ಯವಾಹಿನಿಗೆ ತರುತ್ತಿದ್ದ ಬಗೆ, ಇವು ಹೇಗೆ ಎಲ್ಲವೂ ಮೂಕ ಜನಾಂಗಗಳಿಗೆ ದನಿಯಾದವು ಎಂಬ ವಿಚಾರಗಳು ಈಗಿನ ನಿಜವಾದ ಸಾಮಾಜಿಕ ಹೋರಾಟಕ್ಕೂ ದಾರಿ ದೀಪವಾಗುತ್ತವೆ. ಈ ಬಗ್ಗೆ ಇನ್ನೂ ನಾವು ಓದುವ ಕಿಚ್ಚು, ಆಸಕ್ತಿಯನ್ನು ಈ ಲೇಖನ ನಮ್ಮಲ್ಲಿ ಹುಟ್ಟಾಕುತ್ತದೆ. ಓದುತ್ತಾ ಹೋದಂತೆಲ್ಲ ಏನೋ ಒಂತರದ ಒಳ ವೈಬ್ಸ್ ಮರ್ಮರ..ಜೈಭೀಮ್.
| Prof. Prabhakar
You have provided a very interesting episode and timeline of Mooknayak. You have rightly pointed out such eventful tabloids are a relentless source of inspiration as an unseen undercurrent to innumerable tabloids of present times. Congrats for picking up very interesting and inspiring issues for younger generation
| ಜಿ.ಎನ್.ಧನಂಜಯ ಮೂರ್ತಿ
ರಾಜಸ್ಥಾನದಲ್ಲಿ ದಲಿತನೊಬ್ಬ ಕುದುರೆ ಮೇಲೆ ದಿಬ್ಬಣ ಹೋಗಲು ಇನ್ನೂರು ಜನ ಪೋಲಿಸರನ್ನು ನೇಮಿಸಲಾಗಿತ್ತು. ಇದನ್ನು ಓದಿ ಮತ್ತೆ ಡಿಸ್ಟರ್ಬ್ ಆಗಿ ಅಂಬೇಡ್ಕರ್ ಅನ್ನು ನೆನಪಿಸಿಕೊಂಡೆ. ಅವರದೆ ರೂಪಕ \'ಕಿಟಕಿ ಬಾಗಿಲುಗಳಿಲ್ಲದ ಬಹುಮಹಡಿಗಳ ಕಟ್ಟಡ\" (ನಿಮ್ಮ ಬರಹದಲ್ಲಿಯೂ ಇದರ ಪ್ರಸ್ತಾಪ ಇರುವುದು ಕಾಕಾತಾಲೀಯವಲ್ಲ) ಪ್ರಬಂಧ ಬರೆಯುತ್ತಿದ್ದೇನೆ. ಈ ಬರಹ ಚೆನ್ನಾಗಿದೆ ಸರ್.
| K j suresh
Congrats
| K j suresh
Congrats
Add Comment