ಸವಿತಾ-ಅಂಬೇಡ್ಕರ್ ಆತ್ಮಸಂಗಾತ
by Nataraj Huliyar
’ಒಂದು ಆತ್ಮ ಇನ್ನೊಂದು ಆತ್ಮವನ್ನು ನೋಡಿತು. ಎರಡೂ ಆತ್ಮಗಳು ಒಂದು ಕಾಮನ್ ಐಡೆಂಟಿಟಿಯನ್ನು ಕಂಡುಕೊಂಡವು.’
ಡಾ. ಬಿ. ಆರ್. ಅಂಬೇಡ್ಕರ್ ಡಾಕ್ಟರ್ ಶಾರದಾ ಕಬೀರ್ ಗೆ ೧೯೪೮ರಲ್ಲಿ ಬರೆದ ಪತ್ರದಲ್ಲಿ ಹೇಳಿದ ಮಾತಿದು.
ಅಂಬೇಡ್ಕರ್-ಶಾರದಾ ಭೇಟಿ ಆಕಸ್ಮಿಕವಾಗಿತ್ತು. ಸಾವಿರಾರು ವರ್ಷಗಳ ದಲಿತ ದಮನದ ಭೀಕರ ಇತಿಹಾಸ ಚಕ್ರದ ಓಟದ ದಿಕ್ಕನ್ನು ತಮ್ಮ ಪುಟ್ಟ ಕೈಗಳ ಮೂಲಕ ಬೇರೆಡೆ ತಿರುಗಿಸಲು ಹೊರಟಿದ್ದ ಅಂಬೇಡ್ಕರರಿಗೆ ತಮ್ಮ ಆರೋಗ್ಯದ ಕಡೆಗೆ ಗಮನ ಕೊಡುವ ಲಕ್ಷುರಿಯಿರಲಿಲ್ಲ. ಓದಲು ಕೊಲಂಬಿಯಾ ತಲುಪಿದ ಕಾಲದಿಂದಲೂ ಹದಿನಾರು, ಹದಿನೆಂಟುಗಳ ಕಾಲ ಕೆಲಸ ಮಾಡುವುದು ಅವರ ಬದುಕಿನ ರೂಢಿಯಾಗಿಬಿಟ್ಟಿತ್ತು. ಹೊತ್ತುಹೊತ್ತಿನ ಊಟ, ನಿದ್ರೆ, ವಿರಾಮಗಳ ದಿನಚರಿ ಅವರ ಜೀವನದಲ್ಲಿ ಇರಲೇ ಇಲ್ಲ.
ತಮ್ಮ ಐವತ್ತೇಳನೆಯ ವಯಸ್ಸಿನಲ್ಲಿ ದೇಹ ಪೂರಾ ಹತೋಟಿ ತಪ್ಪಿಹೋಗುತ್ತಿದೆ ಎಂದು ಅಂಬೇಡ್ಕರ್‌ಗೆ ಅರಿವಾಗತೊಡಗಿತು. ಡಯಾಬಿಟಿಸ್, ನರಗಳ ಸಮಸ್ಯೆ, ಕೀಲು ನೋವು, ರಕ್ತದ ಅತಿ ಒತ್ತಡ…ಹೀಗೆ ಹಲವು ಕಷ್ಟಗಳ ನಡುವೆಯೂ ದೇಶದ ಹಿತ ನೋಡಿಕೊಳ್ಳುತ್ತಿದ್ದ ಅಂಬೇಡ್ಕರ್ ದೇಹವನ್ನು ನೋಡಿಕೊಳ್ಳುವವರು ಯಾರೂ ಇರಲಿಲ್ಲ. ಕೊನೆಗೂ ಅಂಬೇಡ್ಕರ್ ತಮ್ಮ ಮಿತ್ರ ಡಾ. ರಾವ್ ಸಲಹೆಯಂತೆ ಡಾ. ಮಾವ್ಲಂಕರ್ ಅವರನ್ನು ಕಾಣಲೇಬೇಕಾಯಿತು.
ಅಂಬೇಡ್ಕರ್ ಮಾವ್ಲಂಕರ್ ಆಸ್ಪತ್ರೆಗೆ ಭೇಟಿ ಕೊಡುವ ಮೊದಲು ಡಾ. ಶಾರದ ಕಬೀರ್ ಎಂಬ ಸಾರಸ್ವತ ಬ್ರಾಹ್ಮಣ ತರುಣಿಯನ್ನು ಭೇಟಿ ಮಾಡಿದ್ದು ಆಕಸ್ಮಿಕವಾಗಿತ್ತು. ಮುಂಬೈನ ಹೊರವಲಯದಲ್ಲಿ ನೆಲೆಸಿದ್ದ ಮೈಸೂರು ಕಡೆಯ ಡಾ. ರಾವ್ ಅಂಬೇಡ್ಕರ್ ಅವರ ಗೆಳೆಯರಾಗಿದ್ದರು; ರಾವ್ ಮನೆಗೆ ಅಂಬೇಡ್ಕರ್ ಒಮ್ಮೊಮ್ಮೆ ಭೇಟಿ ಕೊಡುತ್ತಿದ್ದರು. ರಾವ್ ಅವರ ತಂಗಿಯ ಗೆಳತಿಯಾಗಿದ್ದ ಶಾರದ ಅಷ್ಟೊತ್ತಿಗೆ ಎಂ.ಬಿ.ಬಿ.ಎಸ್. ಮುಗಿಸಿದ್ದರು. ಗೆಳತಿಯನ್ನು ಭೇಟಿ ಮಾಡಲು ಶಾರದ ಆಗಾಗ್ಗೆ ರಾವ್ ಮನೆಗೆ ಬರುತ್ತಿದ್ದರು.
೧೯೪೭ರ ಶುರುವಿನಲ್ಲಿ ಒಮ್ಮೆ ಅಂಬೇಡ್ಕರ್ ಡಾ. ರಾವ್ ಮನೆಗೆ ಬಂದರು. ಅವತ್ತು ಶಾರದ ಕೂಡ ಅಲ್ಲಿದ್ದರು. ವೈಸರಾಯ್ ಸಂಪುಟದಲ್ಲಿ ಮಂತ್ರಿಯಾಗಿದ್ದ ಅಂಬೇಡ್ಕರ್ ಹೆಸರನ್ನು ಶಾರದ ಕೇಳಿದ್ದರು. ಅಂಬೇಡ್ಕರ್ ವಿದೇಶದಲ್ಲಿ ಅಷ್ಟೆಲ್ಲ ಡಿಗ್ರಿಗಳನ್ನು ಪಡೆಯಲು ಪಟ್ಟ ಪರಿಶ್ರಮ, ಕಷ್ಟ, ಅವರು ಏರಿದ್ದ ಎತ್ತರ, ಬೆಲೆ ಕಟ್ಟಲಾಗದ ಬರಹಗಳು, ಅವರ ಹೋರಾಟ ಎಲ್ಲವನ್ನೂ ಡಾ. ರಾವ್ ಶಾರದಾಗೆ ಹೇಳಿದರು. ತಾನೊಬ್ಬ ಮಹಾನ್ ವ್ಯಕ್ತಿಯೆದುರು ಇರುವುದು ಶಾರದಾಗೆ ಅರಿವಾಯಿತು.
ಮೊದಲ ಭೇಟಿಯಲ್ಲೇ ಅಂಬೇಡ್ಕರ್ ಮಹಿಳೆಯರ ಪ್ರಗತಿಯ ಬಗ್ಗೆ, ಮಹಿಳೆಯರು ಗಂಡಸರಿಗೆ ಸಮಾನವಾಗಿ ಹೆಜ್ಜೆ ಹಾಕುವ ಬಗ್ಗೆ ಮಾತಾಡಿದಾಗಲಂತೂ ಶಾರದಾಗೆ ಅವರ ಬಗ್ಗೆ ಅಪಾರ ಗೌರವ ಹುಟ್ಟಿತು. ಇದಾದ ಮೇಲೆ, ರಾವ್ ಮನೆಯಲ್ಲಿ ನಡೆದ ಭೇಟಿಗಳಲ್ಲಿ ಅಂಬೇಡ್ಕರ್ ಓದಿನ ಆಳ, ಗ್ರಹಿಕೆ ಶಾರದಾಗೆ ಮನದಟ್ಟಾಗತೊಡಗಿತು.
ಕೆಲ ದಿನಗಳ ನಂತರ ಅಂಬೇಡ್ಕರ್ ಮಾವ್ಲಂಕರ್ ಅವರ ಆಸ್ಪತ್ರೆಗೆ ಬಂದಾಗ ಅಲ್ಲಿ ಜೂನಿಯರ್ ಡಾಕ್ಟರಾಗಿದ್ದ ಶಾರದಾಗೆ ಅಂಬೇಡ್ಕರ್ ಅವರನ್ನು ಕಂಡು ಅಚ್ಚರಿ-ಆನಂದ! ಮಾವ್ಲಂಕರ್ ಅಂಬೇಡ್ಕರ್ ಅವರ ಪೂರ್ಣ ತಪಾಸಣೆ ಮಾಡಿ, ಅವರ ಮುಂದಿನ ಚಿಕಿತ್ಸೆಯ ಬಗ್ಗೆ ಶಾರದಾಗೆ ಸೂಚನೆಗಳನ್ನು ಕೊಟ್ಟರು.
ಶಾರದಾ ಅಂಬೇಡ್ಕರ್ ಅವರಿಗೆ ಮಾತ್ರೆ ಚೀಟಿಗಳನ್ನು ಸಿದ್ಧಪಡಿಸುತ್ತಾ, ಮುಂದೆ ಅವರ ಜೀವನ ಶೈಲಿ ಹೇಗಿರಬೇಕು ಇತ್ಯಾದಿಗಳ ಬಗ್ಗೆ ಸೂಚನೆ ಕೊಡುತ್ತಾ, ’ನಾನು ಬಂದು ನಿಮ್ಮ ಹೆಂಡತಿಗೆ ಇದನ್ನೆಲ್ಲ ಹೇಳಿಕೊಡುತ್ತೇನೆ’ ಎಂದರು. ರಮಾಬಾಯಿ ತೀರಿಕೊಂಡಿದ್ದು ಶಾರದಾಗೆ ಗೊತ್ತಾದ ಮೇಲೆ ‘ನಿಮ್ಮ ಮನೆಗೇ ಬಂದು ಕೆಲವು ದಿನ ಇದ್ದು ನಿಮ್ಮ ಸಹಾಯಕರಿಗೆ ಇದನ್ನೆಲ್ಲ ಹೇಳಿಕೊಡುತ್ತೇನೆ’ ಎಂದರು.
ಅಂಬೇಡ್ಕರ್: ಅಯ್ಯೋ ಡಾಕ್ಟರ್! ಹಾಗೆಲ್ಲ ಮಾಡಿಬಿಟ್ಟೀರಿ. ನಾನು ಒಬ್ಬಂಟಿ. ಒಬ್ಬ ಹೆಂಗಸು ಬಂದು ನನ್ನ ಮನೆಯಲ್ಲಿದ್ದರೆ ಜನ ಏನೆಂದುಕೊಳ್ಳುತ್ತಾರೆ?
ಶಾರದ: ಅದರಲ್ಲೇನಿದೆ! ನೀವು ಮಿನಿಸ್ಟರ್. ನಿಮ್ಮ ಬಂಗಲೆಯಲ್ಲಿರುತ್ತೀರಿ. ಅಲ್ಲಿ ನಾನು ನಿಮ್ಮ ಗೆಸ್ಟ್ ಹೌಸಿನಲ್ಲಿದ್ದು ಇದನ್ನೆಲ್ಲ ನಿಮ್ಮ ಸಹಾಯಕರಿಗೆ ಹೇಳಿಕೊಟ್ಟು ಬರುತ್ತೇನೆ.
ಕೊನೆಗೂ ಅಂಬೇಡ್ಕರ್ ಅದಕ್ಕೆ ಒಪ್ಪಲಿಲ್ಲ. 'ಹಾಗಾದರೆ ನೀವು ಮದುವೆಯಾಗುವುದು ಒಳ್ಳೆಯದು’ ಎಂದು ಶಾರದ ಅಂಬೇಡ್ಕರ್ ಅವರನ್ನು ಬೀಳ್ಕೊಟ್ಟರು.
೧೯೪೭ರ ಡಿಸೆಂಬರ್ ತಿಂಗಳ ಒಂದು ದಿನ ಅಂಬೇಡ್ಕರ್ ತಮ್ಮ ಆಯ್ಕೆಯನ್ನು ಶಾರದಾಗೆ ಹೇಳಿಬಿಟ್ಟರು. ತಕ್ಷಣ ಏನು ಹೇಳಬೇಕೆಂಬುದು ಶಾರದಾಗೆ ಹೊಳೆಯಲಿಲ್ಲ. ಪತ್ರಗಳ ಅಡ್ಡಾಟ ಶುರುವಾಯಿತು. ಅಂಬೇಡ್ಕರ್ ತಾವು 'ಶಾರು’ ಎಂದು ಕರೆಯುತ್ತಿದ್ದ ಹುಡುಗಿಯನ್ನು ಸವಿತಾ ಎಂದರು; ಸವಿತಾರ ಪತ್ರಗಳಲ್ಲಿ ಅಂಬೇಡ್ಕರ್ 'ರಾಜ’ ಆದರು.
ಅಂಬೇಡ್ಕರ್ ಅವರ ಐವತ್ತೇಳನೇ ಹುಟ್ಟುಹಬ್ಬದ ಮಾರನೆಯ ದಿನ ೧೫ ಏಪ್ರಿಲ್ ೧೯೪೮ರಂದು ದೆಹಲಿಯಲ್ಲಿ ಸವಿತಾ- ಅಂಬೇಡ್ಕರ್ ಮದುವೆ ನಡೆಯಿತು. ನಂತರ ಸವಿತಾ ಡಾಕ್ಟರ್ ಕೆಲಸ ಬಿಟ್ಟಿದ್ದು; ಸದಾ ಹಿನ್ನೆಲೆಯಲ್ಲಿದ್ದು ಅಂಬೇಡ್ಕರ್ ಅವರನ್ನು ಅಪಾರ ಕಾಳಜಿಯಿಂದ ನೋಡಿಕೊಂಡಿದ್ದು; ಬೌದ್ಧ ಧರ್ಮವನ್ನು ಆಳವಾಗಿ ಓದಿ, ಪ್ರೀತಿಸಿದ್ದ ಸವಿತಾ ಬಾಬಾಸಾಹೇಬರ ಜೊತೆ ಬೌದ್ಧಧರ್ಮ ಸ್ವೀಕಾರ ಮಾಡಿದ್ದು…ಇದೆಲ್ಲ ಈಗ ಎಲ್ಲರಿಗೂ ಗೊತ್ತಿದೆ.
ಆದರೆ ಸವಿತಾ ಮನಸ್ಸಿನಲ್ಲಿ ಉಳಿದಿದ್ದ ಅಂಬೇಡ್ಕರ್ ವಿಶಿಷ್ಟ ಚಿತ್ರಗಳು ಅನೇಕರಿಗೆ ಗೊತ್ತಿರಲಿಕ್ಕಿಲ್ಲ. ಅಂಬೇಡ್ಕರ್ ಆರೋಗ್ಯದ ಅಸ್ಥಿರತೆ, ಸಂವಿಧಾನ ರಚನೆಯ ಕಾಲದಲ್ಲಿ ಕುಸಿಯುತ್ತಿದ್ದ ಅವರ ಆರೋಗ್ಯ ಡಾಕ್ಟರ್ ಸವಿತಾರನ್ನೂ ಕಂಗೆಡಿಸುತ್ತಿದ್ದವು. ಇದರ ಜೊತೆಗೆ, ಅಂಬೇಡ್ಕರ್ ಅವರ ಹಾಸ್ಯ ಪ್ರಜ್ಞೆಯನ್ನೂ ಸವಿತಾ ಸವಿಯುತ್ತಿದ್ದರು. ಅಂಬೇಡ್ಕರ್ ಕೆಲವರನ್ನು ಅಣಕ ಮಾಡುತ್ತಿದ್ದರೆ, ತಾನೂ ಉಳಿದವರೂ ಬಿದ್ದುಬಿದ್ದು ನಗುತ್ತಿದ್ದುದನ್ನು ಸವಿತಾ ನೆನೆಯುತ್ತಾರೆ. ಅಡುಗೆಯ ಬಗೆಗೆ ವಿಶೇಷ ತಿಳಿವಳಿಕೆಗಳಿದ್ದ ಅಂಬೇಡ್ಕರ್ ಒಂದು ದಿನ ಎಲ್ಲರಿಗೂ ಅಡಿಗೆ ಮಾಡಿ ಬಡಿಸಿದ ದಿನ ಮಸಾಲೆಯ ಬಗ್ಗೆ ಹೇಳಿದ್ದು ಕೂಡ ಸವಿತಾಗೆ ನೆನಪಿತ್ತು: 'ಮಸಾಲೇನ ಬೆಣ್ಣೆ ಥರ ಸಾಫ್ಟಾಗಿ ಅರೀಬೇಕು; ಅದು ಎಷ್ಟು ನುಣ್ಣಗಿರಬೇಕೂಂದ್ರೆ ಅದನ್ನ ಯಾರ ಕಣ್ಣಿಗಾದ್ರೂ ಇಟ್ರೂ ಅದು ಅವರಿಗೆ ಗೊತ್ತಾಗಬಾರದು!’
ಸವಿತಾ ಅಂಬೇಡ್ಕರ್ (೧೯೦೯-೨೦೦೩) ಬರೆದಿರುವ 'ಬಾಬಾಸಾಹೇಬ್: ಮೈ ಲೈಫ್ ವಿತ್ ಡಾ. ಅಂಬೇಡ್ಕರ್’ ಆತ್ಮಚರಿತ್ರೆಯಲ್ಲಿ ಸವಿತಾ ತಮ್ಮ ವೃತ್ತಿ ಬಿಟ್ಟು ಭಾರತದ ಮಹಾನ್ ವ್ಯಕ್ತಿಯೊಬ್ಬರ ನೆರಳಾಗಿ, ಅವರ ದೈಹಿಕ, ಮಾನಸಿಕ ಆರೋಗ್ಯ ಕಾಯುವ ಕಾಯಕಕ್ಕೆ ತಮ್ಮನ್ನು ತಾವು ಅರ್ಪಿಸಿಕೊಂಡ ತ್ಯಾಗದ ಚಿತ್ರ ನನ್ನೊಳಗೆ ಗಾಢವಾಗಿ ಉಳಿದುಬಿಟ್ಟಿದೆ. ಆದರೆ ಅಂಬೇಡ್ಕರ್ ತೀರಿಕೊಂಡ ನಂತರ ಸವಿತಾರ ಮೇಲೆ ಎರಗಿದ ಪೂರ್ವಗ್ರಹಗಳು ಹಾಗೂ ಆಪಾದನೆಗಳಿಂದಾಗಿ ಅವರ ಮೇಲೆ ಹೇರಲ್ಪಟ್ಟ ದಶಕಗಳ ಅಜ್ಞಾತವಾಸದ ಪಾಡು ಕಂಡು ಅಪಾರ ದುಗುಡ ಮುತ್ತುತ್ತದೆ.
ಸವಿತಾರ ಅಜ್ಞಾತವಾಸದ ಹಿನ್ನೆಲೆ ಇದು: ೧೯೫೬ರ ಡಿಸೆಂಬರ್ ೬ರ ಬೆಳಗ್ಗೆ ಸವಿತಾ ಎಂದಿನಂತೆ ಚಹಾದ ಟ್ರೇ ಹಿಡಿದು ಅಂಬೇಡ್ಕರ್ ಅವರ ರೀಡಿಂಗ್ ರೂಮಿಗೆ ಬಂದರು. ಅಷ್ಟೊತ್ತಿಗೆ ಅಂಬೇಡ್ಕರ್ ಕೊನೆಯ ಉಸಿರೆಳೆದಿದ್ದರು. ನಂತರದ ದಿನಗಳಲ್ಲಿ ಸವಿತಾ ಅಪಾರ ಅವಮಾನಕ್ಕೊಳಗಾದರು; ಅನುಮಾನಕ್ಕೊಳಗಾದರು. ದಶಕಗಳ ಕಾಲ ಎಣೆಯಿಲ್ಲದಷ್ಟು ನೋವನ್ನನುಭವಿಸಿದರು. ಅಜ್ಞಾತರಾಗಿ ಹೇಗೋ ಬದುಕಿದರು.
ಸವಿತಾ ಬಗೆಗಿನ ಕೆಲವರ ಪೂರ್ವಗ್ರಹ ಎಲ್ಲಿಯವರೆಗೆ ಹೋಗಿತ್ತೆಂದರೆ, ಅಂಬೇಡ್ಕರ್ ಅವರ ’ಬುದ್ಧ ಅಂಡ್ ಹಿಸ್ ಧಮ್ಮ’ ಪುಸ್ತಕದ ಮುನ್ನುಡಿಯಲ್ಲಿ ಸವಿತಾ ಬಗ್ಗೆ ಕೃತಜ್ಞತೆಯಿತ್ತು ಎಂಬ ಕಾರಣಕ್ಕಾಗಿ ಆ ಮುನ್ನುಡಿಯೇ ಬಹುಕಾಲ ಮಾಯವಾಯಿತು. ೧೯೫೬ರ ಡಿಸೆಂಬರ್ ೫-೬ರ ನಡುವಣ ರಾತ್ರಿ ತಿದ್ದಿರಬಹುದಾದ ಈ ಮುನ್ನುಡಿಯ ಕೊನೆಗೆ ಅಂಬೇಡ್ಕರ್ ಬರೆಯುತ್ತಾರೆ: ‘ಬುದ್ಧ ಅಂಡ್ ಹಿಸ್ ಧಮ್ಮ’ ಪುಸ್ತಕ ಬರೆಯಲು ಶುರು ಮಾಡಿದ ಕಾಲಕ್ಕೆ ನನ್ನ ಆರೋಗ್ಯ ಕೆಡತೊಡಗಿತ್ತು; ಸ್ಥಿತಿ ಈಗಲೂ ಹಾಗೇ ಇದೆ. ಕಳೆದ ಐದು ವರ್ಷಗಳಲ್ಲಿ ನನ್ನ ಆರೋಗ್ಯ ಹಲವು ಏರಿಳಿತಗಳನ್ನು ಕಂಡಿದೆ. ಎಷ್ಟೋ ಸಲ ನನ್ನ ಆರೋಗ್ಯ ಎಷ್ಟು ಹದಗೆಟ್ಟಿತೆಂದರೆ, ವೈದ್ಯರು ನನ್ನನ್ನು ‘ನಂದಿಹೋಗುತ್ತಿರುವ ಜ್ವಾಲೆ’ ಎಂದಿದ್ದೂ ಇದೆ. ಆದರೆ ಈ ನಂದಿಹೋಗುತ್ತಿರುವ ಜ್ವಾಲೆಗೆ ಮತ್ತೆ ಜೀವ ತುಂಬಿದ್ದು ನನ್ನ ಪತ್ನಿ ಮತ್ತು ಡಾ. ಮಲ್ವಂಕರ್ ಅವರ ವೈದ್ಯಕೀಯ ಕೌಶಲ್ಯ. ಈ ಪುಸ್ತಕವನ್ನು ಮುಗಿಸಲು ನೆರವಾದವರು ಅವರಿಬ್ಬರೇ.’
ಸವಿತಾ ಸುತ್ತ ಕೆಲವರು ಹಬ್ಬಿಸಿದ ಕೆಟ್ಟ ಪೂರ್ವಗ್ರಹ ಈ ಮುನ್ನುಡಿಯ ಸಾಲುಗಳನ್ನೇ ಕಣ್ಮರೆಯಾಗಿಸಿತ್ತು. ಒಂದೇ ಸಮಾಧಾನವೆಂದರೆ, ಅಂಬೇಡ್ಕರ್ ತೀರಿಕೊಂಡ ಎರಡು ಮೂರು ದಶಕಗಳ ನಂತರವಾದರೂ ಆವರೆಗೆ ಸವಿತಾರನ್ನು ಮೂದಲಿಸಿ ಅವಮಾನಿಸಿದ್ದ ಸಮುದಾಯದ ಮತ್ತೊಂದು ತಲೆಮಾರು ಅವರನ್ನು ಆದರಿಸತೊಡಗಿತು. ಸವಿತಾರ ಆತ್ಮಚರಿತ್ರೆಯನ್ನು ನಿರೂಪಿಸಲು ವಿಜಯರಾವ್ ಸುರ್ವಾಡೆ ಮುಂದಾದರು. ಅಂಬೇಡ್ಕರ್ ಅನುಯಾಯಿಗಳು ಅವರನ್ನು 'ಮಾಯಿ ಸಾಹೇಬ್’ ಎಂದು ಗೌರವಿಸತೊಡಗಿದರು. ಈ ಬದಲಾವಣೆ ಕಂಡಾಗ ಮನುಷ್ಯರ ಸುತ್ತ ಹಬ್ಬುವ ದುರುಳ ಪೂರ್ವಗ್ರಹಗಳು ಕೂಡ ಒಂದಲ್ಲ ಒಂದು ದಿನ ಚದುರಬಲ್ಲವು ಎಂಬ ಭರವಸೆ ಮೂಡುತ್ತದೆ.
೧೯೯೦ರಲ್ಲಿ ವಿ.ಪಿ. ಸಿಂಗ್ ಪ್ರಧಾನಿಯಾಗಿದ್ದ ಯನೈಟೆಡ್ ಫ್ರಂಟ್ ಕೇಂದ್ರ ಸರ್ಕಾರ ಅಂಬೇಡ್ಕರ್ ಅವರಿಗೆ ಭಾರತರತ್ನ ಪ್ರಶಸ್ತಿ ಘೋಷಿಸಿತು; ಅಂಬೇಡ್ಕರ್ ಪರವಾಗಿ ಸವಿತಾ ಭಾರತರತ್ನ ಪ್ರಶಸ್ತಿಯನ್ನು ಸ್ವೀಕರಿಸಿದರು. ೧೯೯೫ರಲ್ಲಿ ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾಲಯ ಬಾಬಾಸಾಹೇಬರ ಪುತ್ಥಳಿಯನ್ನು ಸ್ಥಾಪಿಸಿದಾಗ, ಮಾಯಿಸಾಹೇಬ್ ಪುತ್ಥಳಿಯನ್ನು ಅನಾವರಣಗೊಳಿಸಿದರು.
೨೯ ಮೇ ೨೦೦೩ರಂದು, ತೊಂಬತ್ತನಾಲ್ಕನೆಯ ವಯಸ್ಸಿನಲ್ಲಿ ಸವಿತಾ ಮುಂಬೈನಲ್ಲಿ ತೀರಿಕೊಂಡರು. ಅಂಬೇಡ್ಕರ್ ಸವಿತಾಗೆ ಬರೆದ ಪತ್ರಗಳು, ಅಂಬೇಡ್ಕರರಿಗೆ ಸವಿತಾ ಬರೆದ ಪತ್ರಗಳು ಇಂಡಿಯಾದ ಅಪೂರ್ವ ಸಂಬಂಧವೊಂದರ ಅನನ್ಯ ದಾಖಲೆಗಳಾಗಿವೆ. ಸವಿತಾ ಅಂಬೇಡ್ಕರ್ ಆತ್ಮಚರಿತ್ರೆ 'ಬಾಬಾಸಾಹೇಬ್: ಮೈ ಲೈಫ್ ವಿತ್ ಅಂಬೇಡ್ಕರ್’ ಪುಸ್ತಕವನ್ನು ಕಳೆದೊಂದು ವರ್ಷದಿಂದ ಆಗಾಗ ಓದಿ ಗುರುತು ಹಾಕಿದ್ದೆ. ೧೯೯೦ರಲ್ಲಿ ಪ್ರಕಟವಾದ 'ಡಾ. ಅಂಬೇಡ್ಕರಾಂಚ್ಯ ಸಹವಾಸಾತ್’ ಮರಾಠಿ ಆತ್ಮಚರಿತ್ರೆಯನ್ನು ನದೀಮ್ ಖಾನ್ ೨೦೨೨ರಲ್ಲಿ ಇಂಗ್ಲಿಷಿಗೆ ಅನುವಾದಿಸಿದ್ದಾರೆ. 'ಡಾ. ಅಂಬೇಡ್ಕರ್ ಕೆ ಸಂಪರ್ಕ್ ಮೆ’ ಎಂಬ ಹಿಂದಿ ಅನುವಾದವೂ ಬಂದಿದೆ. ಈ ಅಂಕಣ ಬರೆಯುತ್ತಿದ್ದಾಗ, ’ಡಾ. ಅಂಬೇಡ್ಕರ್ ಸಹವಾಸದಲ್ಲಿ’ ಎಂಬ ಕನ್ನಡ ಪುಸ್ತಕವೂ ಬಂದಿದೆಯೆಂದು ’ಅಂಬೇಡ್ಕರ್‌ವಾದ’ ಪತ್ರಿಕೆಯ ಸಂಪಾದಕ ರವಿಕುಮಾರ್ ಬಾಗಿ ಹೇಳಿದರು. ಅನಿಲ್ ಹೊಸಮನಿ ಅನುವಾದಿಸಿರುವ ಈ ಪುಸ್ತಕವನ್ನು ಲಡಾಯಿ ಪ್ರಕಾಶನ ಪ್ರಕಟಿಸಿದೆ.
ಸವಿತಾ ಹಾಗೂ ಅಂಬೇಡ್ಕರ್ ಅವರ ಈ ಅನನ್ಯ ಆತ್ಮಸಂಗಾತವನ್ನು ಅರಿತ ಓದುಗಿಯರ, ಓದುಗರ ಆತ್ಮಗಳೂ ಬೆಳಗಬಲ್ಲವು ಎಂದು ಗ್ಯಾರಂಟಿ ಕೊಡುವೆ.
Comments
15 Comments
| ಸದಾನಂದ ಆರ್
ಸರ್, ಸೂಕ್ಷ್ಮವಾದ ವಿಷಯವನ್ನು ಇನ್ನಷ್ಟು ಸೂಕ್ಷ್ಮವಾಗಿ ಮಂಡಿಸಿದ್ದೀರಿ. ಬಾಬಸಾಹೇಬ್ ಪುಸ್ತಕವನ್ನು ಮೊದಲು ಓದಿದಾಗ ಅಂಬೇಡ್ಕರ್ ಪ್ರೀತಿಯ ರಾಜ ಆಗಿ ಬರೆದ ಪ್ರೇಮ ಪತ್ರಗಳು ನನ್ನಲ್ಲಿ ಪುಳಕ ಉಂಟು ಮಾಡಿದವು. ಕಾರಣ ಅಂಬೇಡ್ಕರ್ ಅವರನ್ನು ನಾನು ಗ್ರಹಿಸಿದ್ದ ಮಿತಿಯಲ್ಲಿ ಅವರೊಬ್ಬ ಪ್ರೇಮಿಯಾಗಲು ಅವಕಾಶವಿರಲಿಲ್ಲ. ಹಾಗಾಗಿ ಸವಿತಾ ಅವರಿಗೆ ಬರೆದ ಪತ್ರಗಳು ಅಂಬೇಡ್ಕರ್ ಅವರ ಕುರಿತಾದ ನನ್ನ ಅರಿವನ್ನು ಇನ್ನಷ್ಟು ವಿಸ್ತರಿಸಿತು. ತನ್ನ ಪ್ರಖರ ಚಿಂತನೆಗಳಿಂದ ಜಗತ್ತನ್ನು ಎದ್ದು ಕೂರುವಂತೆ ಮಾಡಿದ್ದ ವಿಂದ್ವಾಸ/ಸಮಾಜ ಸುಧಾರಕ/ಸಂವಿಧಾನ ತಜ್ಞರಾದ ಅಂಬೇಡ್ಕರ್ ಅವರು ಬರೆದ ಆಪ್ತವಾದ ಪ್ರೇಮ ಪತ್ರಗಳು ಭಾವ-ಬುದ್ಧಿ ಎರಡನ್ನು ಸಮವಾಗಿ ಹೊಂದಿರುವುದನ್ನು ಗಮನಿಸಿದೆ. ಸವಿತಾ ಅಂಬೇಡ್ಕರ್ ಅವರ ಬಾಬಾಸಾಹೇಬ್ ಪುಸ್ತಕ ಮನುಷ್ಯ ಲೋಕದ ಸಾಧ್ಯತೆ ಮತ್ತು ಮಿತಿಗಳನ್ನು ಒಟ್ಟಿಗೆ ಪರಿಚಯಿಸುತ್ತದೆ. ಡಾ. ಶಾರದ ಕಬೀರ್ ಸವಿತಾ ಆಗಿ ಅಂಬೇಡ್ಕರ್ ಅವರ ಖಾಸಗಿ ಬದಕನ್ನು ಪ್ರವೇಶಿಸಿ ಅವರ ಸಾರ್ವಜನಿಕ ಜೀವನಕ್ಕೊಂದಿಷ್ಟು ಶಕ್ತಿ ತುಂಬಿದ ಕಾಲಘಟ್ಟ ಆಧುನಿಕ ಭಾರತದ ಇತಿಹಾಸದಲ್ಲಿ ಸೂಕ್ಷ್ಮವಾದ ಘಟ್ಟವಾಗಿದೆ. ತಮ್ಮ ಸುತ್ತಲ ಜಗತ್ತಿನ ಅರಿವು ಮೂಡಿದಾಗಿನಿಂದ ನಿರಂತರ ಹೋರಾಟದಲ್ಲಿ ತಮ್ಮ ಶರೀರವನ್ನು ದುಡಿಸಿಕೊಂಡಿದ್ದ ಅಂಬೇಡ್ಕರ್ ಅವರ ಕೊನೆಯ ಐದಾರು ವರ್ಷಗಳು ವೈದ್ಯ ಪತ್ನಿಯ ಸಾಂಗತ್ಯದಲ್ಲಿ ಕಳೆಯುವಂತಾಗಿದ್ದು ಅಂಬೇಡ್ಕರ್ ಅವರ ಆಯ್ಕೆಯೇ ಆಗಿತ್ತು. ಅಂಬೇಡ್ಕರ್ ಅವರಲ್ಲಿ ಸದಾ ಜೀವಂತವಾಗಿದ್ದ ಮಾನವೀಯತೆಯ ವೈಯಕ್ತಿಕ ಅಭಿವ್ಯಕ್ತಿ ಇದಾಗಿದೆ. ಹಾಗೆ ವೈದ್ಯರಾದ ಸವಿತಾ ಅವರು ತಮ್ಮ ಆಯ್ಕೆಯ ರಾಜ ನ ಬದುಕಿಗೆ ಪೂರ್ಣವಾಗಿ ಅರ್ಪಿಸಿಕೊಂಡು ಬದುಕಿದ್ದು ಅವರ ಬದ್ಧತೆಯ ಪ್ರತೀಕವಾಗುತ್ತದೆ. ಇದು ಮಾನವ ಸಹಜ ನಡೆಯೇ ಆಗಿದೆ. ಸವಿತಾ ಅವರು ಅಂಬೇಡ್ಕರ್ ನಿಧನದ ನಂತರ ಅನುಭವಿಸಿದ ಸ್ಥಿತಿ ಮನುಷ್ಯ ಸ್ವಭಾವದ ಕರಾಳತೆಯನ್ನು ಪರಿಚಯಿಸುತ್ತದೆ. ಇದು ಮನುಷ್ಯ ಸಹಜ ನಡೆಯೇ ಆಗಿದೆ. ಈ ಹಂತದಲ್ಲಿ ನಾನು ಮನುಷ್ಯರ ಸಣ್ಣತನದ ಕುರಿತು ಬೇಸರ ಮಾಡಿಕೊಂಡಿದ್ದೆ. ಆದರೆ ನಿಮ್ಮ ಲೇಖನ ಅದರ ಇನ್ನೊಂದು ಮುಖವನ್ನು ಪರಿಚಯಿಸಿತು: ಆದರೆ ಅಂತಿಮವಾಗಿ ಸವಿತಾ ಅವರಿಗೆ ದೊರೆಯಬೇಕಾದ ಮಾನ್ಯತೆ ದೊರೆಯುವುದು. ನೀವು ಹೇಳುವಂತೆ, "ಈ ಬದಲಾವಣೆ ಕಂಡಾಗ ಮನುಷ್ಯರ ಸುತ್ತ ಹಬ್ಬುವ ದುರುಳ ಪೂರ್ವಗ್ರಹಗಳು ಕೂಡ ಒಂದಲ್ಲ ಒಂದು ದಿನ ಚದುರಬಲ್ಲವು ಎಂಬ ಭರವಸೆ ಮೂಡುತ್ತದೆ." ಇದು ಇವತ್ತಿನ ಕಾಲಘಟ್ಟದಲ್ಲಿ ಮುಖ್ಯವಾದ ನಂಬಿಕೆಯಾಗಿದೆ. ಇಂದು ಪೂರ್ವಗ್ರಹಗಳೇ ಬದುಕಾಗಿ ಬಿಟ್ಟಿವೆ. ಒಂದಲ್ಲ ಒಂದು ದಿನ ಇವೂ ಇಲ್ಲವಾಗುತ್ತವೆ...ಅನ್ನುವ ಆಶಾವಾದವೇ ನಮಗಿರುವ ಭರವಸೆಯ ಬೆಳಕು... ವಂದನೆಗಳು ಸರ್ ಸದಾನಂದ ಆರ್
| ಸವಿತಾ ನಾಗಭೂಷಣ
ಆರ್ದ್ರ ಬರಹ.
| MADHU B N
ಸವಿತಾ ಅಂಬೇಡ್ಕರ್ ಅವರು ಅಂಬೇಡ್ಕರ್ ಅವರನ್ನು ಭೇಟಿಯಾದ ಹಿನ್ನೆಲೆ, ಮೈಸೂರು ಮೂಲದ ಡಾ. ರಾವ್ ಅದಕ್ಕೆ ಕಾರಣವಾಗುವುದು ಇದೆಲ್ಲಾ ನಾವು ತಿಳಿಯದೆ ಇದ್ದ ವಿಷಯಗಳು. ತಿಳಿಸಿಕೊಟ್ಟಿದ್ದಕ್ಕಾಗಿ ನಟರಾಜ್ ಅವರಿಗೆ ಧನ್ಯವಾದಗಳು.
| ಮಾಲತಿ ಪಟ್ಟಣಶೆಟ್ಟಿ
ಸವಿತ ಮತ್ತು ಡಾ ಅಂಬೇಡ್ಕರ್ ಸಂಗಾತದ ಕಥೆ ಒಂದು ದಂತಕಥೆ ಯಂತೆ ಕಂಡಿತು. ಸವಿತರ ಬಗೆಗೆ ಅವರ ನಿರ್ವಾ ಜ್ಯ ಪ್ರೀತಿ ಯ ಬಗೆಗೆ ತುಂಬ ಹೆಮ್ಮೆ ಅನ್ನಿಸಿತು..ತನಗಾಗಿ ಏನನ್ನೂ ಬಯಸದೆ ಹೊರಟು ನಿಂತ ಅಂಬೇಡ್ಕರರಿಗೆ ಮೊಗೆದು ಕೊಟ್ಟ ಆ ಕಳಕಳಿ, ಆ ಕಾಳಜಿ ನನ್ನ ದೃಷ್ಟಿ ಯಲ್ಲಿ ಸವಿತರನ್ನು ಶ್ರೇಷ್ಠ ಮಹಿಳೆ ಯನ್ನಾಗಿಸಿದೆ. ಅಂಬೇಡ್ಕರ್ ಮರಣದ ನಂತರ ಜನರ ಮೂದಲಿಕೆ ಗೆ ಮನಸ್ಸು ಕೆಂಡವಾಯ್ತು. ಬರೆದರೆ ಒಂದು ಒಳ್ಳೆಯ ನಾಟಕ ವಾಗಬಹುದು! ಥಾಂಕ್ಸ್ ನಟರಾಜ್.
| ಮಾಲತಿ
ಸವಿತಾರ ತ್ಯಾಗ ದೊಡ್ಡದು! ಬರೆದರೆ ಒಂದು ಒಳ್ಳೆಯ ನಾಟಕ ವಾಗಬಹುದು. ಇಲ್ಲಿ ಆಕೆಯೇ ಮೇರು ಪಾತ್ರ!! ಅಂಬೇಡ್ಕರ್ ಗತಿಸಿದ ನಂತರ ಜನ ಮೂದಲಿಸಿದ್ದು , ಅದನ್ನು ಸಹಿಸಿ ಭಾರತ ರತ್ನ ಪಡೆದ ಈ ನಾಯಕಿಯ ಕಣ್ಣಲ್ಲಿ ಮೂಡಿದ ಹೆಮ್ಮೆ ಯ ಆ ಕಣ್ಣೀರು... ಅದರ ಸಾರ್ಥಕ ಭಾವ ಗಳು
| Kavitha
Very insightful article
| Doreswamy
Yes sir. Undoubtedly, Savita herself embraced the role of Yashodara seeking refuge within. Jai Bheem!
| ದೇವಿಂದ್ರಪ್ಪ ಬಿ.ಕೆ.
ಅಂಬೇಡ್ಕರ್ ದಿನದ ಶುಭಾಶಯಗಳು. ಸವಿತಾ - ಅಂಬೇಡ್ಕರ್ ಆತ್ಮಸಂಗಾತ ಲೇಖನ ಓದಿದೆ. ಅಂಬೇಡ್ಕರ್ ಬಗೆಗಿನ ಗೌರವ ಇನ್ನೂ ಹೆಚ್ಚಾಯಿತು. ಕಾರಣ ಅವರಿಗೆ ತಮ್ಮ ಬದುಕಿಗಿಂತ ಈ ದೇಶದ ನನ್ನಂತ ಅನೇಕರ ಬದುಕು ಹಸನಾಗಲಿ ಎಂದು ಹಗಲಿರುಳು ತಮ್ಮ ಆರೋಗ್ಯವನ್ನು ಲೆಕ್ಕಿಸದೆ ದುಡಿದಿದ್ದಕ್ಕೆ. ಅವರು ಅಂದು ದುಡಿದ ಕಾರಣ ಇಂದು ನಾನು ನೆರಳಲ್ಲಿ ಕೂತು ಓದುತ್ತಿದ್ದೇನೆ, ವಿಚಾರ ಮಾಡುತ್ತಿದ್ದೇನೆ. ಆದರೂ ಪೂರ್ಣವಾಗಿ ಅಂಬೇಡ್ಕರ್ ಮತ್ತು ಅವರ ವಿಚಾರಗಳನ್ನು ಇನ್ನೂ ಹೆಚ್ಚು ಹೆಚ್ಚಾಗಿ ಅನುಸರಿಸಬೇಕಿದೆ. ಸಾಗುವ ದಾರಿ ದೂರ ಇದೆ. ಅಂಬೇಡ್ಕರ್ ಅವರು ತಮ್ಮ ಜೀವನದಲ್ಲಿ ಮೂವರು ಮಹಿಳೆಯರಿಗೆ ತುಂಬಾ ಪ್ರಾಮುಖ್ಯತೆ ಕೊಟ್ಟಿದ್ದರು. ಮೊದಲಿಗೆ ತಾಯಿ ಭೀಮಬಾಯಿ, ಹೆಂಡತಿ ರಮಾಬಾಯಿ, ಸಂಗಾತಿ ಸವಿತಾ. ಇವರೆಲ್ಲರೂ ಸೇರಿ ಭೀಮರಾವ್ ಆಗಿದ್ದವರನ್ನು ಅಂಬೇಡ್ಕರರನ್ನಾಗಿ ಮಾಡಿದರು. ಒಬ್ಬ ಪರಿಪೂರ್ಣ ಮನುಷ್ಯನನ್ನಾಗಿ ಮಾಡುವ ಶಕ್ತಿ ಹೆಣ್ಣಿಗೆ ಮಾತ್ರ ಇರುವುದು. ಅಂಬೇಡ್ಕರ್ ಆಗಿ ರೂಪುಗೊಂಡ ನಂತರದ ಅವರ ಬದುಕಿನ ಏಳು ಬೀಳುಗಳಿಗೆ ರಮಾಬಾಯಿ ಜೊತೆಯಾಗಿ ನಿಂತರು. ಸವಿತಾ ಅಂಬೇಡ್ಕರ್ ಬಾಬಾ ಸಾಹೇಬರ ಕೊನೆಯ ದಿನಗಳನ್ನು ಹತ್ತಿರದಿಂದ ಕಂಡವರು. ಕಂಡು ಧೈರ್ಯ ತುಂಬಿದವರು. ಅಷ್ಟೇ ನೊಂದವರು ಕೂಡ ಆಗಿದ್ದರು. ನಮ್ಮ ಸಮಾಜ ಎಲ್ಲ ಕೆಟ್ಟದಕ್ಕೂ ಮಹಿಳೆಯರನ್ನೇ ಗುರಿ ಮಾಡಿ ಆರೋಪ ಮಾಡುತ್ತದೆ. ಇದು ಸವಿತಾ ಅಂಬೇಡ್ಕರ್ ಅವರನ್ನು ಬಿಟ್ಟಿಲ್ಲ. ಆದರೆ ಕಾಲ ಬದಲಾದಂತೆ ಅವರಿಗೆ ಸಿಗುವ ಗೌರವ ಸಿಕ್ಕಿತು. ಅವರ ಪತ್ರಗಳ ಒಡನಾಟ, ಅವರ ಬರವಣಿಗೆಗಳು (ಬುದ್ಧ ಮತ್ತು ಆತನ ಧಮ್ಮ ಕೃತಿಯ ಮುನ್ನುಡಿಯಲ್ಲಿ ಸ್ನರಿಸಿದ್ದು) ನೋಡಿದಾಗ ಸವಿತಾ ಅವರ ಸಹಕಾರ ಅಂಬೇಡ್ಕರ್ ಅವರಿಗೆ ತುಂಬಾ ಅಗತ್ಯವಾಗಿತ್ತು.ಡಾಕ್ಟರ್ ಗಳು ಹೇಳಿದ ಹಾಗೆ ನಂದಿ ಹೋಗುತ್ತಿರುವ ಜ್ವಾಲೆಗೆ ಮತ್ತೆ ಜೀವ ತುಂಬಿದ್ದು ನನ್ನ ಪತ್ನಿ ಮತ್ತು ಡಾ. ಮಲ್ವಾಂಕರ್ ಅವರ ವೈದ್ಯಕೀಯ ಕೌಶಲ್ಯ ಎಂದು ಅಂಬೇಡ್ಕರ್ ಹೇಳುತ್ತಾರೆ. ಆದರೆ ಇದೆಲ್ಲದರ ನಡುವೆ ಅಂಬೇಡ್ಕರ್ ಅವರಿಗೆ ತಮ್ಮ ಮೊದಲ ಪತ್ನಿ ರಮಾಬಾಯಿ ಅಂಬೇಡ್ಕರ್ ಅವರ ಅಗಲಿಕೆಯ ನೋವು ತೀವ್ರವಾಗಿ ಕಾಡಿದೆಯೇ. ಅಥವಾ ತಮಗಿರುವ ಜವಾಬ್ದಾರಿ ನಡುವೆ ಅದು ಮರೆಯಾಯಿತೇ. ಯಾಕೆಂದರೆ ಅಂಬೇಡ್ಕರ್ ಅವರು ಅಷ್ಟೆಲ್ಲ ಒತ್ತಡದ ನಡುವೆ ತೀವ್ರವಾಗಿ ರಮಾಬಾಯಿ ಅವರನ್ನು ಪ್ರೀತಿಸುತ್ತಿದ್ದರು. ಇದಕ್ಕೆ ಉದಾಹರಣೆಯಾಗಿ ಅವರಿಗೆ ಬರೆದ ಪತ್ರಗಳನ್ನು ನೋಡಿದರೆ ತಿಳಿಯುತ್ತದೆ. ಸವಿತಾ ಅಂಬೇಡ್ಕರ್ ಅವರಿಗೆ ರಮಾಬಾಯಿಯ ಬಗೆಗಿರುವ ನಿಲುವು ಏನಾಗಿತ್ತು? ಕುತೂಹಲಕ್ಕಾಗಿ ಕೇಳಿದ್ದೇನೆ.
| ಧರ್ಮೇಂದ್ರ ಅರಸ್
ಪ್ರೇಮ ಶಿಲ್ಪಿಯೂ ಅಂಬೇಡ್ಕರ್...
| Nataraj Huliyar Replies
ಪ್ರಿಯ ದೇವಿಂದ್ರಪ್ಪ, ರಮಾಬಾಯಿ- ಅಂಬೇಡ್ಕರ್ ಸಂಬಂಧ ಅತ್ಯಂತ ಆತ್ಮೀಯವಾಗಿತ್ತು. ಸವಿತಾ ಅವರಿಗೆ ರಮಾಬಾಯಿಯವರ ಬಗ್ಗೆ ಗೌರವವಿತ್ತು ಎಂದು ವಿವರಗಳು ಸೂಚಿಸುತ್ತವೆ.
| DR. Savitha Ravishankar
ಲೇಖನ ಚನ್ನಾಗಿದೆ. ಬೆಳಕಿನ ರೀತಿಯಲ್ಲಿ ಆಗಮಿಸಿದ ಶಾರದ ಸವಿತಾ ಆದರು. ವಿದ್ಯಾಜಗತ್ತಿನ ರಾಜ ಅಂಬೇಡ್ಕರ್. ಆತ್ಮ ಆತ್ಮಗಳು ಆತ್ಮವನ್ನು ನಂಬದ ತತ್ವದೊಂದಿಗೆ ಹೆಜ್ಜೆ ಹಾಕಿದವು. ಕೃತಿಯನ್ನು ಓದಬೇಕೆಂಬ ಆಸಕ್ತಿ ಮೂಡಿಸಿದೆ. ಧನ್ಯವಾದಗಳು.
| Dr muthegowda
ಬಹಳ ಉತ್ತಮವಾದ ಮಾಹಿತಿ ನೀಡಿದ್ದೀರಿ ಸರ್. ಎಷ್ಟೋ ಬಾರಿ ನಮ್ಮ ಸುತ್ತಲಿರುವ ಆತ್ಮೀಯರೇ ಪೂರ್ವಗ್ರಹ ಪೀಡಿತರಾಗಿ ಮಾತಾಡುವಾಗ ಬಹಳ ನೋವಾಗುತ್ತೆ ಇನ್ನು ಅಂದಿಗೆ ಸವಿತಾರವರು ಅನುಭವಿಸಿರುವ ಯಾತನೆಯನ್ನು ಊಹಿಸಲು ಸಾಧ್ಯವಿಲ್ಲ
| Dr. Sanganagowda
ಅಕ್ಕಮಹಾದೇವಿ -ಚನ್ನಮಲ್ಲಿಕಾರ್ಜುನ; ಬಸವಣ್ಣ -ನೀಲಾಂಬಿಕೆ, ಮಹಾತ್ಮ ಗಾಂಧೀಜಿ - ಸರಳಾದೇವಿ, ಡಾ. ಅಂಬೇಡ್ಕರ್ - ಸವಿತಾ, ಸಾರ್ತ್ರೆ-ಸಿಮೊನ್ ದ ಬೊವಾ....... ಹೀಗೆ ಬೌದ್ಧಿಕ ದಾಂಪತ್ಯವನ್ನು ಬದುಕಿದ ಮಹಾನ ಚೇತನಗಳು ಮತ್ತಷ್ಟು ಬೆಳೆಯಲಿ.. ಒಳನೋಟಗಳುಳ್ಳ ಬರಹ.
| ಡಾ. ನಿರಂಜನ ಮೂರ್ತಿ ಬಿ ಎಂ
ಸವಿತಾ-ಅಂಬೇಡ್ಕರ್ ಅವರ ಆತ್ಮ ಸಾಂಗತ್ಯ ಅದ್ಭುತ. ಅಂಬೇಡ್ಕರ್ ಅವರಂತಹ ಮಹಾನಾಯಕನಿಗೆ ತಕ್ಕ ಸಂಗಾತಿ ಸವಿತಾ. ಅವರ ನಿಷ್ಠ, ಸಮರ್ಪಣ, ಮತ್ತು ತ್ಯಾಗಮಯ ಬದುಕು ಆದರ್ಶಮಯ. ತಮ್ಮೆಲ್ಲ ಹೋರಾಟದ ಕಷ್ಟಗಳ ಮಧ್ಯೆ, ಸವಿತಾರ ಸಾಂಗತ್ಯ ಅಂಬೇಡ್ಕರ್ ಅವರಿಗೆ ಸಮಾಧಾನಕರವಾಗಿರಲೇಬೇಕು. ಆ ಮಹಾ ಜೀವಕ್ಕೆ ಬದುಕಿನ ಕೊನೆಯ ಘಟ್ಟದಲ್ಲಿ ಸಿಕ್ಕ ಸಮಾಧಾನಕ್ಕೆ ಬೆಲೆಕಟ್ಟಲಾಗದು. ಅವರ ಅವಸಾನದ ನಂತರ, ಸವಿತಾರ ಬದುಕನ್ನು ಕಷ್ಟ-ನಿಷ್ಟೂರಗಳಿಗೆ ದೂಡಿದ ನಮ್ಮ ಸಮಾಜದ ರೀತಿ-ನೀತಿಗಳಿಗೆ ಏನು ಹೇಳಬೇಕು?!
| Vijaya
ನೋವಿನ ಹಲವು ಬಣ್ಣಗಳು. ಲೋಕದ ಸಮಸ್ತ ಹೆಣ್ಣುಗಳ ನೋವು. ಜೊತೆಗಿದ್ದರೂ ಜೊತೆ ಬಿಟ್ಟರೂ ಮಾತನಾಡುವ ಚಪಲದ ನಾಲಿಗೆಗಳು ಆಡುತ್ತಲೇ ಇರುತ್ತವೆ.ನೂರು ರೂಪಗಳಿರಬಹುದು,ಭಾವ ಒಂದೇ.ನೋವು,ಅಪಮಾನ,ಸಂಕಟ. ಬೇಕೆಂದಾಗ ಮುಗಿಯದ ಮುಗಿಸಲಾಗದ ಬದುಕು ಮುಳ್ಳಿನ ನೆರಳಲ್ಲೇ ಉಸಿರಾಡುವ ಅನಿವಾರ್ಯ. ನಿಮ್ಮ ಬರಹದ ಚಿತ್ರಕಶಕ್ತಿ ನರಳುವಿಕೆಗೆ ಮಾತುಕೊಡುತ್ತದೆ
Add Comment