ಕುವೆಂಪು ಕೃತಿಗಳ ದೋಣಿಯಲ್ಲಿ…

1

ನವಪದ ನಿರ್ಮಾಣ; ನವ ತತ್ವಗಳ ವಿಕಾಸ

 ‘ನೇಗಿಲಯೋಗಿ’ ಭಾವಗೀತೆಯಲ್ಲಿ ಕುವೆಂಪು ‘ಯೋಗಿ’ ಎಂಬ ಪದ ಹಾಗೂ ಪರಿಕಲ್ಪನೆಯ ಹಲವು ಹಳೆಯ ಚಿತ್ರಗಳನ್ನು ಏಕ್ ದಂ ಒಡೆದು ಹಾಕಿದ್ದಾರಲ್ಲ ಎಂದೊಮ್ಮೆ ಅಚ್ಚರಿಯಾಗಿತ್ತು.

‘ಯೋಗಿ’ ಎಂದ ತಕ್ಷಣ ನಿಮ್ಮ ಕಣ್ಣೆದುರು ಬರುವ ಚಿತ್ರಗಳನ್ನು ಚಣ ನೆನಪಿಸಿಕೊಳ್ಳಿ: ‘ಕಣ್ಣು ಮುಚ್ಚಿ ತಪಸ್ಸು ಮಾಡುವ ಜೀವಿ’, ‘ಗಡ್ಡ ಬಿಟ್ಟ ಆಧ್ಯಾತ್ಮಜೀವಿ’, ಒಂಥರಾ ‘ಆರಾಮ್ ಜೀವಿ’, ‘ನಿರ್ಲಿಪ್ತ ಸಾಧಕ…’, ‘ಮೂಗು ಹಿಡಿದು ಯೋಗಾಭ್ಯಾಸದಲ್ಲಿ ತೊಡಗಿರುವ ವ್ಯಕ್ತಿ’… ಇಂಥ ಹಲವು ಸಿದ್ಧ ಚಿತ್ರಗಳು ಮೂಡತೊಡಗುತ್ತವೆ! ಆದರೆ ಕುವೆಂಪು ‘ಉಳುವಾ ಯೋಗಿಯ ನೋಡಲ್ಲಿ…’ ಎಂದು ತೋರಿಸುತ್ತಿರುವ ಕಡೆ ನೋಡಿ:  ಯೋಗಿಯ ಸಿದ್ಧ ಅರ್ಥಗಳನ್ನು ಒಡೆದು, ಶ್ರಮಜೀವಿ ‘ನೇಗಿಲಯೋಗಿ’ ಮುನ್ನೆಲೆಗೆ ಬರತೊಡಗುತ್ತಾನೆ… ನಾವೆಂದೂ ಕಾಣದ ನೇಗಿಲಯೋಗಿಯ ಅಪೂರ್ವ ಮುಖಗಳು ಕಣ್ಣ ಮುಂದೆ ಬರತೊಡಗುತ್ತವೆ.  

ಈ ಬಗೆಯ ಓದಿನ ಗುಂಗಿನಲ್ಲಿದ್ದಾಗ ‘ಶೂದ್ರ ತಪಸ್ವಿ’ ನಾಟಕವೂ ನೆನಪಾಯಿತು: ಅಲ್ಲಿ ಕುವೆಂಪು ‘ತಪಸ್ವಿ’ ಎಂಬ ಪದದ ಹಳೆಯ ಬ್ರಾಹ್ಮಣೀಯ ಅರ್ಥ ಒಡೆದು ಹೊಸ ಶೂದ್ರ ವ್ಯಕ್ತಿತ್ವ ಸೃಷ್ಟಿಸಿದ್ದಾರೆ! ಹೀಗೆ ಕುವೆಂಪು ಲೋಕದಲ್ಲಿ ಸೃಷ್ಟಿಯಾಗುವ ನವಪದ ಪ್ರಯೋಗಗಳ ಜೊತೆಜೊತೆಗೇ ಸೃಷ್ಟಿಯಾಗುವ ಅವರ ಹೊಸ ತಾತ್ವಿಕ, ಸೈದ್ಧಾಂತಿಕ ಅರ್ಥಗಳನ್ನು ಗ್ರಹಿಸಿತೊಡಗಿದರೆ ಕುವೆಂಪು ಯಾಕೆ ಕನ್ನಡದ ಅತ್ಯಂತ ವಿಶಿಷ್ಟ ಫಿಲಾಸಫರ್ ಕೂಡ ಎಂಬುದು ಅರ್ಥವಾಗತೊಡಗುತ್ತದೆ.

ನನಗೆ ಈ ‘ನವಪದ ನಿರ್ಮಾಣ ಪ್ರತಿಭೆ’ಯ ಐಡಿಯಾ ಕೊಟ್ಟವರು ಈ ಅಂಕಣದಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುವ ಕೀರಂ ನಾಗರಾಜ್ ಅವರೇ! ಒಮ್ಮೆ ಕೀರಂ ಜಾಣ ವಿದ್ಯಾರ್ಥಿನಿಯೊಬ್ಬಳಿಗೆ ಕುವೆಂಪು ಕಾವ್ಯದಲ್ಲಿನ ನವ ಪದ ನಿರ್ಮಾಣ ಕುರಿತ  ಟಾಪಿಕ್ ಕೊಟ್ಟರು. ಆ ಸರಿಸುಮಾರಿನಲ್ಲಿ ಒಂದು ಮಧ್ಯಾಹ್ನ ಅವರು ಕುವೆಂಪು ಅವರ ನವಪದ ನಿರ್ಮಾಣ ಪ್ರತಿಭೆಯ ಬಗ್ಗೆ ನನ್ನೆದುರು ಮೈದುಂಬಿ ಮಾತಾಡಿದರು: ‘ಉದಾಹರಣೆಗೆ ನೋಡಿ ಸಾರ್! ‘ಪಕ್ಷಿ’ ಅಂತ ಒಂದು ಪದ ಇರುತ್ತೆ, ‘ಕಾಶಿ’ ಅಂತ ಇನ್ನೊಂದು ಪದ ಇರುತ್ತೆ. ಕುವೆಂಪು ಇಮ್ಯಾಜಿನೇಶನ್ ಈ ಎರಡನ್ನೂ ಸೇರಿಸಿ ‘ಪಕ್ಷಿಕಾಶಿ’ ಅಂತ ನವಪದ ಮಾಡಿಬಿಡುತ್ತೆ! ಪ್ರೇಮ ಅನ್ನೋ ಪದ, ಕಾಶ್ಮೀರ ಅನ್ನೋ ಪದ ಎರಡನ್ನೂ ಸೇರಿಸಿ ಕುವೆಂಪು ‘ಪ್ರೇಮಕಾಶ್ಮೀರ’ ಅನ್ನೋ ನವಪದ ಮಾಡಿಬಿಡ್ತಾರೆ… ಇವು ಕನ್ನಡದ ಹೊಸ ನುಡಿಗಟ್ಟುಗಳಾಗುತ್ತವೆ, ನವರೂಪಕಗಳಾಗುತ್ತವೆ…ಏನ್ ಸಾರ್!’

‘ಮಾತು ಮಾತು ಮಥಿಸಿ ಬಂದ ನಾದದ ನವನೀತ’ದಂತೆ ಕೀರಂ ಕಾಣಿಸಿದ ಕುವೆಂಪು ಕಾವ್ಯದ ನವಪದ ನಿರ್ಮಾಣ ಸಾಧ್ಯತೆಗಳನ್ನು ನೆನೆಯುತ್ತಾ ಮುಂದೆ ಕುವೆಂಪು ಸಾಹಿತ್ಯವನ್ನು ಬೇರೊಂದು ದಿಕ್ಕಿನಿಂದ ನೋಡತೊಡಗಿದೆ. ಆಗ ನವಪದ ನಿರ್ಮಾಣಗಳ ಹಿಂದಿರುವ ಕುವೆಂಪು ಅವರ ನವ ತಾತ್ವಿಕತೆ ಹೊಳೆಯತೊಡಗಿತು. 2020ರ ಸುಮಾರಿಗೆ ಕನ್ನಡ ವಿಶ್ವವಿದ್ಯಾಲಯ ಹೊರತಂದ ಕುವೆಂಪು ಸಮಗ್ರ ಸಾಹಿತ್ಯದ 12 ಸಂಪುಟಗಳನ್ನು ಒಟ್ಟಿಗೇ ನೋಡುತ್ತಾ ಬರೆದ ಟಿಪ್ಪಣಿಗಳನ್ನು ಇಲ್ಲಿ ಮತ್ತೆ ಕೊಡುತ್ತಿರುವೆ: ಈ ಸಂಪುಟಗಳನ್ನು ಹೀಗೆ ಒಟ್ಟಿಗೆ ತರಲು ಇಪ್ಪತ್ತು ವರ್ಷ ದುಡಿದವರು ಕೀರಂ ಪ್ರಿಯ ಶಿಷ್ಯ, ಗೆಳೆಯ ಕೆ.ಸಿ. ಶಿವಾರೆಡ್ಡಿ. ಪೂರ್ಣಚಂದ್ರ ತೇಜಸ್ವಿ ರೂಪಿಸಿದ ವಿನ್ಯಾಸ ಹಾಗೂ ರಕ್ಷಾಪುಟಗಳ ಐಡಿಯಾಗಳ ಸಮೇತ ಈ ಸಂಪುಟಗಳು ನಮ್ಮೆದುರಿಗಿವೆ. ನಾಡಿನೆಲ್ಲೆಡೆ ಕುವೆಂಪು, ಬೇಂದ್ರೆ ಮುಂತಾಗಿ ಎಲ್ಲ ದೊಡ್ಡ ಲೇಖಕರ ಗುಂಗನ್ನು ಹಬ್ಬಿಸುತ್ತಿದ್ದ ಕೀರಂ, ಶಿವಾರೆಡ್ಡಿಗೂ ಕುವೆಂಪು ಗುಂಗು ಹಿಡಿಸಿದ್ದರೆ ಅಚ್ಚರಿಯಲ್ಲ. ಹಾಗೆ ನೋಡಿದರೆ, ಬೇಂದ್ರೆ ಪಾರ್ಟಿಯಲ್ಲಿದ್ದ ನನ್ನನ್ನು ಕುವೆಂಪು ಕಡೆಗೂ ಮತ್ತೆ ಸೆಳೆದವರು ಈ ಗುರು-ಶಿಷ್ಯರೇ! 

2

ಭಾವಗೀತೆಯ ಕೇಂದ್ರದಿಂದ ಸಕಲ ದಿಕ್ಕುಗಳ ಕಡೆಗೆ

ಕುವೆಂಪು ಸಮಗ್ರ ಕಾವ್ಯ ಸಂಪುಟಗಳನ್ನು (ಸಂಪುಟ 1,2,3) ಇವತ್ತು ನೋಡುತ್ತಿದ್ದರೆ ಭಾವಗೀತೆಯ ಥರಥರದ ತೀವ್ರ ಧಾಟಿಗಳು ಕಾಣತೊಡಗುತ್ತವೆ. ‘ರೂಪಾಂತರಗೊಂಡ ಬಂಡೆಗಳು ನೀರೊಡೆದು ಕರಗುವ ಹಾಗೆ ಲಿರಿಕ್ ಪ್ರಕಾರ ನಾವು ನೋಡುವ ಎಲ್ಲವನ್ನೂ ಬದಲಿಸಿಬಿಡುತ್ತದೆ’ ಎಂದ ಇಂಗ್ಲಿಷ್ ರೊಮ್ಯಾಂಟಿಕ್ ಕಾವ್ಯ ಚಿಂತಕನೊಬ್ಬನ ಮಾತು ಕುವೆಂಪು ಭಾವಗೀತೆ ಓದುವಾಗಲೂ, ಕೇಳುವಾಗಲೂ ನಿಜವಾಗತೊಡಗುತ್ತದೆ. ‘ಬೇಸರದ ಸಂಜೆಯಿದು ಬೇಕೆನಗೆ ನಿನ್ನ ಜೊತೆ…’ ನಮ್ಮೆದೆಯ ಅಳಲಾಗತೊಡಗುತ್ತದೆ. ಕುವೆಂಪು ಕಾವ್ಯದಲ್ಲಿ ಪ್ರೇಮವೂ ಕೋಪವೂ ಶೋಕವೂ ಭಾವಗೀತೆಯಲ್ಲೇ ಸ್ಫೋಟಗೊಳ್ಳುತ್ತವೆ! ‘ನಿನ್ನೆಡೆಗೆ ಬರುವಾಗ ಸಿಂಗರದ ಹೊರೆಯೇಕೆ’ ಎಂಬ ಕೋಮಲ ರಮ್ಯತೆ; ‘ಬಡಬಗ್ಗರ ಜಠರಾಗ್ನಿಯು ಎದ್ದು/ ಗುಡಿಸಲುಗಳಿಗೇ ಬೆಂಕಿಯು ಬಿದ್ದು/ ಬಡವರ ಬೆಂಕಿಯ ನಾಲಗೆ ಚಾಚಿ/ ಶ್ರೀಮಂತರನಪ್ಪಿತು ನಾಚಿ’ ಎಂಬ ಕಮ್ಯುನಿಸ್ಟ್ ರೋಷ; ‘ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ’ ಎಂಬ ಸ್ವಾತಂತ್ರ್ಯ ಹೋರಾಟದ ಸ್ಪಿರಿಟ್, ‘ಕರಿಸಿದ್ಧ’ದ ಶೋಕ… ಹೀಗೆ ವಿಭಿನ್ನ ದನಿಗಳಿಗೆ ಕುವೆಂಪು ಭಾವಗೀತೆಗಳು ಬಾಯಾಗುತ್ತವೆ.

ಮುಂದೆ ನವ್ಯ ಸಾಹಿತ್ಯದ ಕಾಲದಲ್ಲಿ ಪರಿಚಿತವಾದ ಗದ್ಯ ಲಯವನ್ನೂ ಕುವೆಂಪು ಆಗ ಪದ್ಯಗಳಲ್ಲಿ ಪ್ರಯೋಗಿಸಿದ್ದರು: ‘ಕರಿಯ ತಲೆ, ಗಾಜುಗಣ್ಣು; ಬಾಯಲ್ಲಿ ಹೊಗೆ, ಮೂಗಿನಲ್ಲಿ ಕಿಡಿ, ರೈಲಿನೆಂಜಿಣ್ಣು! ಹರಿಯುತಿದೆ ಗಡಗಡನೆ ಸದ್ದು ಮಾಡಿ ದೊಡ್ಡದೊಂದೊನಕೆ ಹುಳು! ಹೊಟ್ಟೆಯೆಲ್ಲಾ ಗಾಡಿ!’ ಇವೆಲ್ಲದರ ಜೊತೆಗೆ, ಸಾನೆಟ್ ಚೌಕಟ್ಟಿನ ಶಿಸ್ತು, ಕಿಂದರಿಜೋಗಿಯ ಶಿಶು ಲಯ, ಪ್ರಾಸ, ನಾಟಕಗಳ ಕಾವ್ಯಮಯತೆ …ಎಲ್ಲವೂ ಮುಂದೆ ಬರಲಿದ್ದ ಅವರ ಮಹಾಕಾವ್ಯಕ್ಕೆ ಸಿದ್ಧತೆಗಳಂತಿದ್ದವು.

ಕಾಡಿನ ಸದ್ದುಗಳಿಗೆ ಕಿವಿಗೊಟ್ಟು ಸಹಜ ಕವಿಯಾದ ಕುವೆಂಪು, ಶೇಕ್‌ಸ್ಪಿಯರ್ ನಾಟಕ, ವರ್ಡ್ಸ್‌ವರ್ತ್, ಶೆಲ್ಲಿ, ಕೀಟ್ಸ್ ಕಾವ್ಯ; ರಾಘವಾಂಕ, ಹರಿಹರ, ಜನ್ನ ಎಲ್ಲರಿಂದಲೂ ಕಲಿಯುತ್ತಾ ಬರೆಯುತ್ತಿದ್ದರು. ಇದೆಲ್ಲದರ ನಡುವೆ ಮಹಾಕಾವ್ಯ ಬರವಣಿಗೆ ಕುವೆಂಪುವಿನ ಕನಸಿನಲ್ಲೂ ಕಾಡತೊಡಗಿತ್ತು: ‘ನಾನೊಂದು ಬೃಹತ್ ಗಾತ್ರದ ಎಪಿಕ್ ರಚಿಸಿದ್ದೇನೆ. ಅದು ಅಚ್ಚಾಗಿ ಬಂದಿದೆ! ಕೈಯಲ್ಲಿ ಹಿಡಿದಿದ್ದೇನೆ. ತೂಕವಾಗಿದೆ. ಎಷ್ಟು ಮನೋಹರವಾಗಿ ಮುದ್ರಿತವಾಗಿದೆ! ನುಣ್ಣನೆ ಕಾಗದ, ಮುದ್ದಾದ ಅಚ್ಚು! ಓದುತ್ತಿದ್ದೇನೆ!’

ಕನಸಿನಲ್ಲೂ ಕವಿ ಎಂದಿನಂತೆ ತನ್ನ ಕೃತಿಗೆ ತಾನೇ ಮಣಿಯುತ್ತಿದ್ದಾನೆ! ಕನಸೊಡೆಯುತ್ತದೆ! ಆಹಾ! ‘ಇನ್ನೆಲ್ಲಿಯ ನಿದ್ದೆ!’

ಮಹಾಕಾವ್ಯದ ಕನಸು ತಕ್ಷಣಕ್ಕೆ ಕೈಗೂಡದೆ ಕಾವ್ಯವನ್ನೇ ಕೇಂದ್ರ ಸಂವೇದನೆಯಾಗಿಸಿಕೊಂಡು ಮುಂದುವರಿದ ಕುವೆಂಪು ಕಾದಂಬರಿಯತ್ತ ಹೊರಳಿದ್ದು ಆಕಸ್ಮಿಕ. ‘ಕಾದಂಬರಿ ಎಂದರಂತೂ [ನನಗೆ] ಒಂದು ಬಗೆಯ ತಿರಸ್ಕಾರವಿತ್ತು’ ಎನ್ನುವ ಕುವೆಂಪು, ಟಾಲ್‌ಸ್ಟಾಯ್ ಬರೆದ ‘ರಿಸರಕ್ಷನ್’ ಕಾದಂಬರಿ ಓದಿ, ಫ್ರೆಂಚ್, ಇಂಗ್ಲಿಷ್, ರಷ್ಯನ್ ಭಾಷೆಯ ಕಾದಂಬರಿಗಳನ್ನು ವೇಗವಾಗಿ ಓದಲಾರಂಭಿಸುತ್ತಾರೆ. ಸಣ್ಣ ಕತೆ ಬರೆದಿದ್ದ ಕುವೆಂಪುವಿಗೆ ‘ವಾರ್ ಅಂಡ್ ಪೀಸ್’ ಥರದ ಬೃಹತ್ ಕಾದಂಬರಿ ಬರೆಯುವ ಆಸೆ; ಕಾದಂಬರಿ ಬರೆಯಬಲ್ಲೆನೆ ಎಂಬ ಅಳುಕು! ಈ ಅಳುಕು ಕಂಡ ಗುರು ಟಿ.ಎಸ್. ವೆಂಕಣ್ಣಯ್ಯ, ‘ಕಥನ, ಸಂವಾದ ಮತ್ತು ವರ್ಣನೆ ಈ ಮೂರು ಶಕ್ತಿಗಳು ನಿಮ್ಮಲ್ಲಿ ಇವೆ. ಬೃಹತ್ ಕಾದಂಬರಿಯನ್ನೇ ಬರೆಯಿರಿ’ ಎಂದು ಧೈರ್ಯ ತುಂಬಿದರು; ಕುವೆಂಪು ಕಾದಂಬರಿ ಶುರು ಮಾಡಿದರು. ಇಂಗ್ಲಿಷ್ ಕವಿಯಾಗಲು ಹೊರಟು ಕನ್ನಡದತ್ತ ಬಂದಿದ್ದ ಕುವೆಂಪು ಕನ್ನಡದಲ್ಲಿ ಆಗಲೇ ರೂಪುಗೊಂಡಿದ್ದ ಕಾದಂಬರಿ ಪ್ರಕಾರವನ್ನು ದೊಡ್ಡ ಕ್ಯಾನ್ವಾಸ್, ಸ್ಥಳೀಯ ಭಾಷಾ ವೈವಿಧ್ಯ, ನೆಲದ ಗಂಧ, ನವ ಆದರ್ಶಗಳ ಸಂಗಮವನ್ನಾಗಿಸಿದರು.

ಕಾದಂಬರಿ ಬರವಣಿಗೆಯ ನಡುವೆ ತತ್ವಶಾಸ್ತ್ರ, ಮನೋವಿಜ್ಞಾನ, ಆಧ್ಯಾತ್ಮ… ಎಲ್ಲವನ್ನೂ ಕುವೆಂಪು ಓದುತ್ತಿದ್ದರು. ಓದಿನ ಜೊತೆಗೇ ರೈತರ ಕಷ್ಟ, ದಲಿತರ ಯಾತನೆ, ಸುತ್ತಣ ನೋವು, ಸ್ವಾತಂತ್ರ್ಯ ಚಳುವಳಿ, ಗಾಂಧೀಜಿಯ ಬಗ್ಗೆ ಗೌರವ, ರಾಜಪ್ರಭುತ್ವದ ವಿರುದ್ಧ ಸಿಟ್ಟು…ಎಲ್ಲಕ್ಕೂ ಮಿಡಿಯುತ್ತಾ, ಜೊತೆಗೆ ಗುಪ್ತಪ್ರೇಮವೊದರಲ್ಲಿ ಅರಳುತ್ತಾ ಕುವೆಂಪು ಬರೆಯುತ್ತಿದ್ದರು. ತನ್ನವು ‘ಓದು ನಾಟಕಗಳು’ ಎಂದೊಮ್ಮೆ ಘೋಷಿಸಿದ ಕುವೆಂಪು, ತಮ್ಮ ‘ಯಮನ ಸೋಲು’ ನಾಟಕದಲ್ಲಿ ಸತ್ಯವಾನನಾಗಿಯೂ ನಟಿಸಿದರು! ತಮ್ಮ ಕವಿತೆಗಳನ್ನು ಗಟ್ಟಿಯಾಗಿ ಹಾಡಿದರು.

ಹೀಗೆ ಕುವೆಂಪುವಿನಲ್ಲಿ ಹಲವು ವ್ಯಕ್ತಿತ್ವಗಳು ಬೆರೆಯುತ್ತಿದ್ದವು; ಮುಖಾಮುಖಿಯಾಗುತ್ತಿದ್ದವು. ಗಾಂಧೀಜಿ ಜೈಲಿನಿಂದ ಬಿಡುಗಡೆಯಾದಾಗ ಹರೆಯದ ಕುವೆಂಪು ಭಾವುಕರಾಗಿ, ‘Sing, temples, sing…Ring, Churches, ring… Ye Mosques, your incense burn and pray for him...’ ಎಂದು ಕವಿತೆ ಬರೆದರು; ಮುಂದೊಮ್ಮೆ ‘ಗುಡಿ ಚರ್ಚು ಮಸಜೀದಿಗಳ ಬಿಟ್ಟು ಹೊರ ಬನ್ನಿ’ ಎಂಬ ದಿಟ್ಟ ಕರೆಯನ್ನೂ ನೀಡಿದರು. ಶೂದ್ರರನ್ನು ಪುರೋಹಿತಶಾಹಿಯ ದಾಸ್ಯದಿಂದ ಬಿಡಿಸಲು ವೈಚಾರಿಕ ಬರಹ, ಭಾಷಣಗಳ ಮೂಲಕ ಪ್ರಯತ್ನಿಸುತ್ತಿದ್ದ ಕುವೆಂಪು ತಮ್ಮ ಪೋಸ್ಟ್ ಕಾರ್ಡ್, ಪತ್ರಗಳ ಶುರುವಿನಲ್ಲಿ ‘ಓಂ ಶಾಂತಿಃ’ಗೆ ಬದಲಾಗಿ ‘ಓಂ ಕ್ರಾಂತಿಃ ಕ್ರಾಂತಿಃ ಕ್ರಾಂತಿಃ’ ಎಂದು ಬರೆಯುತ್ತಿದ್ದರು! ಅವರ ಕವಿತೆಗಳು ಸ್ವಾತಂತ್ಯ ಚಳುವಳಿ, ಸಾಮಾಜಿಕ ಚಳುವಳಿಗಳ ಭಾಗಗಳಾದವು.

3

ಪ್ರೇಮಿ,   ಹುಚ್ಚ, ಕವಿ ಮತ್ತು ಆಧ್ಯಾತ್ಮಜೀವಿ!

‘ಕವಿ, ಹುಚ್ಚ, ಪ್ರೇಮಿ ಕಲ್ಪನಾವಿಲಾಸದಿಂದ ತುಂಬಿ ತುಳುಕುತ್ತಿರುತ್ತಾರೆ’ ಎಂಬ ಶೇಕ್‌ಸ್ಪಿಯರನ ವರ್ಣನೆ ಬಲ್ಲ ಕುವೆಂಪುವಿಗೆ ಈ ಮೂರರ ಜೊತೆಗೆ ಆಧ್ಯಾತ್ಮವೂ ಸೇರಿಕೊಂಡಿತ್ತು! ಹರೆಯದಲ್ಲಿ ಮಲೇರಿಯಾ ಸೇರಿದಂತೆ ಹಲ ಬಗೆಯ ಕಾಯಿಲೆಗಳಿಗೆ ತುತ್ತಾಗಿದ್ದ ಕುವೆಂಪುವಿಗೆ ಒಮ್ಮೆ ತೀವ್ರ ಕಾಯಿಲೆಯೊಂದರ ಸ್ಥಿತಿಯಲ್ಲಿ ಉನ್ಮಾದ ಭುಗಿಲೆದ್ದಿತು. ಈ ಉನ್ಮಾದ, ‘ಪುಟ್ಟಪ್ಪ ತೀರಿಕೊಂಡಿದ್ದಾನೆ; ಈಗ ನಾನು ವಿವೇಕಾನಂದ’ ಎಂದು ಕುವೆಂಪುವೇ ನಂಬಿ ಹೇಳುವಲ್ಲಿಗೂ ಮುಟ್ಟಿತು! ಈ ಅನುಭವ ಕುರಿತು ಕುವೆಂಪು 1973ರಲ್ಲಿ ಬರೆಯುತ್ತಾರೆ: ‘ಈಗಲೂ ಕೂಡ ನನ್ನ ಕವಿಚೇತನದ ಭಾವಾನುಭವಗಳನ್ನೂ ಚಿಂತನಗಳನ್ನೂ ಮುಚ್ಚುಮರೆಯಿಲ್ಲದೆ ಲೋಕರಂಗದಲ್ಲಿ ಬಿಚ್ಚಿದೆನಾದರೆ ನಾನು ಅಂದಿಗಿಂತಲೂ ಹೆಚ್ಚಾಗಿ ಹುಚ್ಚನಾಗಿ ಕಾಣುವುದರಲ್ಲಿ ಸಂಶಯವಿಲ್ಲ!’

ಬರವಣಿಗೆಯ ಸ್ತರವನ್ನು ದಿವ್ಯಸ್ವಪ್ನದ ಸ್ಥಿತಿಯೆಂದು ನಂಬಿದ್ದ ಕುವೆಂಪುವಿನ ಬರವಣಿಗೆಯಲ್ಲಿ ಆದರ್ಶ ನಾಯಕರು, ನೆಲ ಮೀರಿದ ಪಾತ್ರಗಳು, ಪರವಶ ಸ್ಥಿತಿಗಳು ಮತ್ತೆಮತ್ತೆ ಬರುತ್ತಲೇ ಇರುತ್ತಿದ್ದವು. ಈ ಸ್ಥಿತಿಗಳನ್ನೆಲ್ಲ ಅಣಕಿಸುವಂತೆ ಕಟುವಾಸ್ತವದ ಚಿತ್ರಗಳು, ನಿತ್ಯದ ಸಂಕಟಗಳಲ್ಲಿ ಕುಸಿವ ಪಾತ್ರಗಳು ಕೂಡ ಅವರ ಕಾದಂಬರಿಗಳಲ್ಲಿ ಸೃಷ್ಟಿಯಾಗುತ್ತಿದ್ದವು. ಲೇಖಕ, ಲೇಖಕಿಯರು ತಾವು ಹೊಕ್ಕ ಸಾಹಿತ್ಯ ಪ್ರಕಾರ ಎಲ್ಲಿಗೆ ಒಯ್ಯುತ್ತದೋ ಅಲ್ಲಿಗೆ ಹೋಗಲು ಸಿದ್ಧರಿರಬೇಕು! ಹೀಗೆ ಕುವೆಂಪು ತಾವು ಹೊಕ್ಕ ಎಲ್ಲ ಸಾಹಿತ್ಯ ಪ್ರಕಾರಗಳೂ ತಮ್ಮನ್ನು ಹಲ ಬಗೆಯ ದಿಕ್ಕಿನಲ್ಲಿ ಒಯ್ಯಲು ಬಿಟ್ಟಿದ್ದರಿಂದ ಕೂಡ ಅವರ ಬರವಣಿಗೆಯಲ್ಲಿ ಇಷ್ಟೊಂದು ವೈವಿಧ್ಯವಿದೆ. ಆದರೆ ‘ನೆನಪಿನ ದೋಣಿಯಲ್ಲಿ’ ಆತ್ಮಕತೆಯ ಬರವಣಿಗೆಯ ಕಾಲಕ್ಕೆ ಲೇಖಕನ ಅತಿ ಆತ್ಮವಿಶ್ವಾಸದಿಂದಲೋ ಏನೋ ಈ ‘ಪ್ರಕಾರ ಪ್ರಜ್ಞೆ’ ಕೊಂಚ ಹಿನ್ನೆಲೆಗೆ ಸರಿದು ಬರವಣಿಗೆ ಅನಗತ್ಯವಾಗಿ ಹಿಗ್ಗಿಬಿಟ್ಟಿದೆ.

4

ವಿಭಿನ್ನ ಹೊಣೆಗಳು; ವಿವಿಧ ಪಾತ್ರಗಳು

ಇನ್ನು ಕುವೆಂಪು ಸೃಷ್ಟಿಸಿರುವ 11750 ಪುಟಗಳನ್ನುಳ್ಳ 12 ಸಂಪುಟಗಳ ಸುತ್ತ ಸಣ್ಣ ಕಣ್ಣೋಟ:

ಜಗತ್ತಿನ ಸಾಹಿತ್ಯ ಚರಿತ್ರೆಯಲ್ಲಿ ಮಹಾಕಾವ್ಯ, ಭಾವಗೀತೆ, ನಾಟಕ- ಈ ಮೂರು ಮೂಲ ಸಾಹಿತ್ಯ ಪ್ರಕಾರಗಳು ಎನ್ನುತ್ತಾರೆ. ಕುವೆಂಪು ಐವತ್ತು ವರ್ಷ ತಲುಪುವ ಹೊತ್ತಿಗೆ ಈ ಮೂರೂ ಮೂಲ ಪ್ರಕಾರಗಳಲ್ಲಿ ಎತ್ತರದ ಕೃತಿಗಳನ್ನು ಸೃಷ್ಟಿಸಿದ್ದರು; ಒಟ್ಟಾರೆ ಎಲ್ಲ ಆಧುನಿಕ ಸಾಹಿತ್ಯ ಪ್ರಕಾರಗಳನ್ನೂ ನಿರ್ವಹಿಸಿದರು. ಕಾದಂಬರಿ, ಕತೆ, ಗದ್ಯ, ಕಾವ್ಯ ಮೀಮಾಂಸೆ, ವಿಮರ್ಶೆ, ಜೀವನ ಚರಿತ್ರೆ, ಆತ್ಮಕತೆ, ಮಕ್ಕಳ ಸಾಹಿತ್ಯ, ಸರಳ ಕನ್ನಡದಲ್ಲಿ ‘ಜನಪ್ರಿಯ ವಾಲ್ಮೀಕಿ ರಾಮಾಯಣ’…ಹೀಗೆ ಕುವೆಂಪು ಅವರ 80 ಪುಸ್ತಕಗಳು ಈ ಹನ್ನೆರಡು ಸಂಪುಟಗಳಲ್ಲಿ ಹರಡಿವೆ. 

ಕುವೆಂಪು ಇಷ್ಟೊಂದು ಪುಟಗಳನ್ನು ಕೈಬರಹದಲ್ಲಿ ಬರೆದದ್ದು ಹೇಗೆ ಎಂಬ ಪ್ರಶ್ನೆ ಈ ಕಾಲದ ಹೊಸ ಓದುಗರಲ್ಲಿ ಸಹಜವಾಗಿಯೇ ಮೂಡಬಹುದು! ಕುವೆಂಪು ಕಾಲಕಾಲಕ್ಕೆ ತಮ್ಮ ವಿಭಿನ್ನ ಹೊಣೆಗಳು ಹಾಗೂ ಪಾತ್ರಗಳನ್ನು ವಿವರಿಸಿಕೊಂಡ ಕ್ರಮದಿಂದಾಗಿ ಕೂಡ ಅಷ್ಟೊಂದು ಪ್ರಕಾರಗಳಲ್ಲಿ ಬರೆಯಲೇಬೇಕಾಯಿತು. ತಾರುಣ್ಯದಲ್ಲಿ ಕನ್ನಡ ಅಧ್ಯಾಪಕರಾಗಿ ತಮ್ಮ ಕರ್ತವ್ಯ- ಗುರಿ ಏನೆಂಬುದನ್ನು ಸ್ಪಷ್ಟಪಡಿಸಿಕೊಂಡ ಕುವೆಂಪು ಪ್ರಾಚೀನ ಕೃತಿಗಳನ್ನು ಓದುವ ರೀತಿಗಳನ್ನು ಕಲಿಸಲು ವಿಮರ್ಶೆ, ಕಾವ್ಯಮೀಮಾಂಸೆ ಎಲ್ಲವನ್ನೂ ಬರೆಯಬೇಕಾಯಿತು. ಭಾರತೀಯ ಕಾವ್ಯ ಮೀಮಾಂಸೆ, ಪಶ್ಚಿಮದ ಕಾವ್ಯಮೀಮಾಂಸೆ ಎರಡರ ಕಡೆಗೂ ನೋಡಬೇಕಾಯಿತು.  ‘ತಪೋನಂದನ,’ ‘ರಸೋವೈಸಃ’, ‘ದ್ರೌಪದಿಯ ಶ್ರೀಮುಡಿ’ ಥರದ ವಿಮರ್ಶಾ ಕೃತಿಗಳು ಆ ಕಾಲದ ವಿಮರ್ಶೆಯ ಭಾಷೆ, ಪರಿಕಲ್ಪನೆ, ತೌಲನಿಕ ನೋಟ, ಸದಭಿರುಚಿಗಳನ್ನು ರೂಪಿಸಲೆತ್ನಿಸಿದವು. ಯಾವುದೇ ಕನ್ನಡ ಅಧ್ಯಾಪಕಿಯ, ಅಧ್ಯಾಪಕನ ಕೆಲಸ ಕ್ಲಾಸಿನೊಳಗೆ ಮುಗಿಯುವುದಿಲ್ಲ; ಕ್ಲಾಸಿನ ಹೊರಗೂ ಅವರು ಕನ್ನಡ ಸಾಹಿತ್ಯದ ಮೂಲಕ ಹೊಸ ಸಂವೇದನೆ, ವೈಚಾರಿಕ ಜಾಗೃತಿ, ವಿಮರ್ಶಾ ಪ್ರಜ್ಞೆ ಇವನ್ನೆಲ್ಲ ರೂಪಿಸಬೇಕು ತಾನೇ? ಈ ನಿಟ್ಟಿನಲ್ಲೂ ಕುವೆಂಪು ನಮಗೆ ದೊಡ್ಡ ಮಾಡೆಲ್. ತರಗತಿಗಳಲ್ಲಿ ಕನ್ನಡ ಬೋಧನೆಯ ಶ್ರೇಷ್ಠ ಮಾದರಿಯನ್ನೂ ಕುವೆಂಪು ತೋರಿಸಿದರು.

ಅದರ ಜೊತೆಗೆ, ಸಾಮಾನ್ಯ ಓದುಗರೂ ಪ್ರಾಚೀನ ಕೃತಿಗಳನ್ನು ಹೊಸ ನೆಲೆಯಲ್ಲಿ ಆಧುನಿಕ ಅರ್ಥಗಳ ಸಹಿತ ನೋಡಬೇಕೆಂಬ ತುಡಿತವೂ ಕುವೆಂಪುವಿಗಿತ್ತು. ತಮ್ಮನ್ನು ತುಳಿಯುತ್ತಿದ್ದ ಪುರೋಹಿತಶಾಹಿ ಹಾಗೂ ಫ್ಯೂಡಲ್ ಮೂಲಗಳನ್ನು ಆಗಷ್ಟೇ ಅರಿಯತೊಡಗಿದ್ದ ಶೂದ್ರ ಜನಾಂಗಕ್ಕೆ ಹೊಸ ಆತ್ಮವಿಶ್ವಾಸ ತುಂಬಲು ಶೂದ್ರ ತಪಸ್ವಿಯ ಅಥವಾ ಏಕಲವ್ಯನ ಕತೆಯನ್ನು ಆಧುನಿಕ ಪ್ರಜ್ಞೆಯ ಮೂಲಕ ನಾಟಕವಾಗಿಸಿ ಹೇಳಬೇಕು; ಈ ನಾಟಕಗಳನ್ನು ಶೂದ್ರ ಸಮುದಾಯದ ಬಿಡುಗಡೆಯ ದೊಡ್ಡ ಚಳುವಳಿಗಳ ಜೊತೆಗೆ ತಾತ್ವಿಕವಾಗಿ ಬೆಸೆಯಬೇಕು; ಜನರು ರಾಮಾಯಣವನ್ನು ಹಳೆಯ ರೀತಿಯಲ್ಲಿ ಓದಿ ಮನಸ್ಸನ್ನು ಕಗ್ಗಂಟಾಗಿಸಿಕೊಳ್ಳದೆ ಒಂದು ಬೃಹತ್ ಕಾದಂಬರಿಯಂತೆ ಮುಕ್ತವಾಗಿ ಓದಬೇಕು… ಈ ಥರದ ಹೊಣೆಗಳನ್ನು ಹೊತ್ತ  ಕುವೆಂಪು ಸಾಹಿತ್ಯಕೃತಿಗಳ ಜೊತೆಗೇ ವಿಚಾರ ಕ್ರಾಂತಿಗೆ ಆಹ್ವಾನ, ನಿರಂಕುಶಮತಿಗಳ ಸೃಷ್ಟಿ, ವಿಜ್ಞಾನಮತಿಯ ಬೆಳವಣಿಗೆ, ವಿಶ್ವ ಮಾನವ ವಿಕಾಸ…ಇವೆಲ್ಲದರಲ್ಲೂ ತೊಡಗಿದ್ದರು.

ಮಕ್ಕಳಿಗಾಗಿ, ತರುಣ, ತರುಣಿಯರಿಗಾಗಿ, ಪ್ರಬುದ್ಧರಿಗಾಗಿ, ಕೇಳುಗರಿಗಾಗಿ, ಪಾಠ ಹೇಳುವವರಿಗಾಗಿ… ಹೀಗೆ ಕುವೆಂಪು ಕಾಲಕಾಲಕ್ಕೆ ಬರೆದ ಬರವಣಿಗೆಗಳೆಲ್ಲ ಕನ್ನಡ ಪರಂಪರೆಯ ಭಾಗವಾಗಿವೆ. ಆದ್ದರಿಂದಲೇ ಒಮ್ಮೆ ಶುರುವಾದ ನಮ್ಮ ಕುವೆಂಪುಯಾನ ಕುವೆಂಪು ಪುಸ್ತಕಗಳಿಗೇ ನಿಲ್ಲುವುದಿಲ್ಲ. ಕುವೆಂಪು ಸಂವೇದನೆ ಕಾರಂತ, ಬೇಂದ್ರೆಯವರ ಕಡೆಗೂ ನಮ್ಮನ್ನು ಒಯ್ಯುತ್ತದೆ; ಕೆಲವು ವಿಚಾರಗಳಲ್ಲಿ ಕುವೆಂಪುವಿಗಿಂತ ಸೂಕ್ಷ್ಮವಾಗಿ, ಸಂಕೀರ್ಣವಾಗಿ, ಮೊನಚಾಗಿ, ಆಧುನಿಕವಾಗಿ, ನೇರವಾಗಿ ಬರೆಯುವ ಲಂಕೇಶ್, ತೇಜಸ್ವಿಯವರ ಕಡೆಗೆ ನಾವು ಚಲಿಸುತ್ತೇವೆ. ಕುವೆಂಪು ಕೈ ಚಾಚಿದ ಜಗತ್ತಿನ ದೊಡ್ಡ ಲೇಖಕರ ಕಡೆಗೂ ನೋಡುತ್ತೇವೆ. ಹೀಗೆ ಕುವೆಂಪು ಬರಹಗಳ ದೋಣಿ ನಮ್ಮನ್ನು ಜಗತ್ತಿನ ಅತ್ಯುತ್ತಮ ಸಾಹಿತ್ಯದ ಕಡೆಗೆ ಒಯ್ಯುತ್ತದೆ. ಅಕಸ್ಮಾತ್ ನಾವು ಕೇವಲ ಕುವೆಂಪು ಭಕ್ತರಾಗಿ ಕುವೆಂಪುವಿನಲ್ಲೇ ‘ಸ್ಟಕ್’ ಆದರೆ, ಈ ಕುವೆಂಪುಯಾನ ಅಪೂರ್ಣವಾಗುತ್ತದೆ!

ಈ ಕುವೆಂಪುಯಾನವನ್ನು ತರಗತಿಗಳಲ್ಲಿ ಮುಂದುವರಿಸಿದ ಸಾವಿರಾರು ಕನ್ನಡ ಟೀಚರುಗಳಂತೆ, ಕುವೆಂಪು ಅವರ ಕ್ರಾಂತಿಕಾರಿ ಸಂದೇಶಗಳನ್ನು ಪ್ರಖರ ಸಾಮಾಜಿಕ ಜವಾಬ್ದಾರಿಯ ಲೇಖಕ,ಲೇಖಕಿಯರು ಕೂಡ ತಮ್ಮ ಬರವಣಿಗೆಗಳಲ್ಲಿ ವಿಸ್ತರಿಸಿದ್ದಾರೆ. ಪ್ರಗತಿಪರ ಸಂಘಟನೆಗಳಿಗೆ ಕುವೆಂಪು ಸ್ಫೂರ್ತಿಯಾಗಿದ್ದಾರೆ. ಕರ್ನಾಟಕದ ದಲಿತ ಸಂಘಟನೆ, ರೈತ ಸಂಘಟನೆಗಳಲ್ಲಿ ಕುವೆಂಪು ಮರುದನಿ ಕೇಳುತ್ತದೆ. ರೈತನಾಯಕರಾದ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಕುವೆಂಪು ಕೃತಿ, ವ್ಯಕ್ತಿತ್ವಗಳ ವಿಶಿಷ್ಟ ವ್ಯಾಖ್ಯಾನಕಾರಲ್ಲೊಬ್ಬರಾಗಿದ್ದರು. ಕರ್ನಾಟಕದ ಬಹುಜನ ಸಮಾಜ ಪಕ್ಷ ಕುವೆಂಪುವನ್ನು ತನ್ನ ಸಾಂಸ್ಕೃತಿಕ ಐಕಾನ್‌ಗಳ ನಡುವೆ ಇರಿಸಿಕೊಂಡಿದೆ. ಕನ್ನಡ ಅಧ್ಯಯನ, ವಿಮರ್ಶೆ, ಸಿನಿಮಾ, ಟೆಲಿಧಾರಾವಾಹಿ, ರಂಗಭೂಮಿ, ಸಮೂಹಗಾನ… ಹೀಗೆ ಎಲ್ಲವೂ ಕುವೆಂಪುವನ್ನು ಮುಂದೊಯ್ಯುತ್ತಿವೆ.

ಈ ಕುವೆಂಪುಯಾನವನ್ನು ಈ ಕಾಲದ ಹೊಸ ಲೇಖಕ, ಲೇಖಕಿಯರು ಅರ್ಥಪೂರ್ಣವಾಗಿ ಮುನ್ನಡೆಸಿದಾಗ ಮಾತ್ರ ಕುವೆಂಪು ಮೂಲಕ ಕನ್ನಡದಲ್ಲಿ ಹಬ್ಬಿರುವ ಆಧುನಿಕ ವೈಚಾರಿಕತೆ, ಕಲಾಪ್ರಜ್ಞೆ, ಬರವಣಿಗೆಯ ಶಿಸ್ತು, ಸೌಂದರ್ಯ ತತ್ವಗಳು ಹೊಸ ಹೊಸ ಆಯಾಮಗಳನ್ನು ಪಡೆಯಬಲ್ಲವು. ಏಕಾಕಿತನ, ಖಾಲಿತನಗಳನ್ನು ಅನುಭವಿಸುವ ಯಾವುದೇ ಸೂಕ್ಷ್ಮ ವ್ಯಕ್ತಿಗಳಿಗೆ ಕುವೆಂಪು ಸಾಹಿತ್ಯ ಆತ್ಮೀಯ ಸಂಗಾತಿಯಾಗಬಲ್ಲದು; ಕುವೆಂಪು ಸಮಗ್ರ ಸಾಹಿತ್ಯದೊಡನೆ ಕನ್ನಡದ ಜಾಣ ಜಾಣೆಯರು ತಮ್ಮ ಜೀವಮಾನವಿಡೀ ಅರ್ಥಪೂರ್ಣವಾಗಿ ಬದುಕಬಹುದು ಎಂಬುದು ನನ್ನ ನಂಬಿಕೆ. ಹೀಗೆ ಕುವೆಂಪು ಕೃತಿಗಳ ದೋಣಿಯಲ್ಲಿ ನಡೆಯುತ್ತಲೇ ಇರಲಿ ನಮ್ಮ ‘ದೂರ ತೀರ ಯಾನ…’  

ಬ್ಲಾಗ್ ಫಾಲೋ ಮಾಡಲು ಒಪ್ಪಿ, ಕ್ಲಿಕ್ ಮಾಡಿ; ನೋಟಿಫಿಕೇಶನ್ ಪಡೆಯಿರಿ, ಶೇರ್ ಮಾಡಿ: FOLLOW
ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com 
ಬಿಡುವಾದಾಗ ನೋಡಿ, ಶೇರ್ ಮಾಡಿ:  YOUTUBE LINK

 

Share on:


Recent Posts

Latest Blogs



Kamakasturibana

YouTube



Comments

9 Comments



| Rajappa Dalavayi

ಕುವೆಂಪು ಚಿಂತನ ಯಾನ ಚನ್ನಾಗಿದೆ. ಅವರಿಲ್ಲದೆ ಹೊಸಗನ್ನಡವಿಲ್ಲ. ಒಳನೋಟದ ಲೇಖನ.

\r\n


| MANJUNATHA NETKAL

ಕುವೆಂಪು ಅವರ ಸಮಗ್ರ ಸಾಹಿತ್ಯದ ಕುರಿತಾದ ಈ ಬರಹ ಸಂಕ್ಷಿಪ್ತವಾದರೂ ಸಮ್ಯಕ್ ದರ್ಶನ ಮಾಡಿಸಿತು

\r\n


| CHINTAMANI KODLEKERE

ನಿಮ್ಮ ಬ್ಲಾಗ್ ಬರಹಗಳನ್ನು ಓದುತ್ತಿದ್ದೇನೆ. ಎಲ್ಲವೂ ಒಂದಕ್ಕಿಂತ ಒಂದು ಚೆನ್ನಾಗಿವೆ. ಈ ಸಲದ ಕುವೆಂಪು ಅವರು ಕುರಿತಾದ ಲೇಖನ ಅನೇಕ ಹೊಸ ವಿಷಯಗಳನ್ನು ನನಗೆ ತಿಳಿಸಿಕೊಟ್ಟಿತು. ನಿಮ್ಮ ಓದು ಮತ್ತು ನಿವೇದನೆ ಎರಡೂ  ಫ್ರೆಶ್ ಆಗಿವೆ. ದಯವಿಟ್ಟು ಬರಹ ಕಳಿಸುತ್ತಿರಿ. ಹೊಸ ವರ್ಷದ ಶುಭಾಶಯಗಳು. 

\r\n


| ಕುಸುಮ ಬಿ. ಎಂ

ಕುವೆಂಪು ಕೃತಿಗಳು ಎಂಬ ದೋಣಿಯಲ್ಲಿ ಕುಳಿತು ವಿಶ್ವ ಸಾಹಿತ್ಯ ಪರ್ಯಟನೆಗೆ ಹೊರಡಲು ಹಿಡಿದ ಚುಕ್ಕಾಣಿ. ಗುರುಗಳಿಗೆ ಶರಣು 

\r\n


| ಕೆ.ಪದ್ಮಾಕ್ಷಿ

ನವಪದ ನಿರ್ಮಾಣದ ಬಗ್ಗೆ ಬರೆದಿರುವುದು ತುಂಬಾ ಚೆನ್ನಾಗಿದೆ. ಶೇಕ್ಸ್ ಪಿಯರ್ ಸಹ ಹೀಗೆಯೇ ಇಂಗ್ಷಿಷ್ ಪದಕೋಶಕ್ಕೆ  ಎಷ್ಟು ಎಷ್ಟು ಪದಗಳನ್ನು ಸೇರಿಸಿದ್ದಾರಲ್ಲ. ಕುವೆಂಪು ಅವರು ನಿರ್ಮಾಣ ಮಾಡಿದ ಪದಗಳು ಎಷ್ಡು ಚೆನ್ನಾಗಿವೆಯಲ್ಲಾ ಅಂತ ಈ ಬರಹ ಓದಿದಾಗ ಅನಿಸಿತು

\r\n


| Dr. Vijaya

ಕುವೆಂಪು ಬಗ್ಗೆ ಎಷ್ಟು ಹೇಳಿದರೂ ಸಾಲದು.ಕರಿಸಿದ್ದ ಬೀದಿನಾಟಕ ಮಾಡಿ‌ ಅವರ ಮನೆಯಂಗಳದಲ್ಲಿ ಅವರೆದುರೇ ಪ್ರದರ್ಶಿಸಿದ ಸೌಭಾಗ್ಯ ನಮ್ಮದು.ಅವರ ಭೇಟಿಯಾದಾಗೆಲ್ಲ ಹರಟಿದ್ದೂ ಮಧುರ ನೆನಪು.ನಿಮ್ಮ ಬರಹ ಮನಸ್ಸನ್ನು ಅರಳಿಸುತ್ತದೆ. 

\r\n


| PROF. SHIVALINGAMURTHY

ವಿಶ್ವ ಸಾಹಿತ್ಯ ಪರಂಪರೆಯಲ್ಲಿ ಮಿಂದೆದ್ದ ಕುವೆಂಪು ಚೇತನ ಆಧುನಿಕ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಹರಿವ ಮಹಾತೊರೆ. ಈ ತೊರೆಯಲ್ಲಿ ಪಯಣಿಸುವ ನಮಗೆ ಹೊಸತರ ದರ್ಶನವೂ, ಸೋಜಿಗವೂ ಆಗದೆ ಇರದು.ಗಾಳಿ ಬೆಳಕಿನಷ್ಟು ಸಹಜ ಸುಂದರವಾದ ನಿಮ್ಮ ನುಡಿಗಳು ಮತ್ತೊಮ್ಮೆ ಆ ತೊರೆಯಲ್ಲಿ ಪಯಣಿಸುವಂತೆ ಪ್ರೇರೇಪಿಸುತ್ತವೆ.ಧನ್ಯವಾದಗಳು ಸಾರ್  

\r\n


| ಡ್ರಾ. ಈರಯ್ಯ ಹಂಪಾಪುರ

ಕುವೆಂಪು ಅವರ ಕೃತಿಗಳನ್ನು ಒಳಗೊಂಡ ಚಿಂತನೆ  ಬಹಳ ಚನ್ನಾಗಿ ಮಾಡಿರುವಿರಿ. ತಮ್ಮ ಬರಹಗಳನ್ನು ಓದುವುದು ಹೊಸ ಆಲೋಚನೆಗೆ ನಮ್ಮನ್ನು ತೆರೆದು ಕೊಳ್ಳು ವಂತೆ ಮಾಡುತ್ತದೆ. 

\r\n


| ರಾಮಚಂದ್ರ ನಾಯಕ

ನಿಮ್ಮ ಬ್ಲಾಗ್ ಗಳನ್ನು ಓದುವಾಗ ಹೊಸ ಸಾಧ್ಯತೆಗಳು ಮನಸ್ಸಿನಲ್ಲಿ ಮೂಡುತ್ತಿವೆ

\r\n




Add Comment