ಬಿಡುಗಡೆಯ ಬೇಡಿ

ವಿಮಲಾಗೆ ನಿಜಕ್ಕೂ ಸಿಟ್ಟು ಬಂದಿತ್ತು. ಅದು ಒಳ್ಳೆಯ ಸಾಹಿತ್ಯ ಅಧ್ಯಾಪಕಿಯ ನಿಸ್ವಾರ್ಥ ಕೋಪ. ಕಳೆದ ವಾರ ಈ ಅಂಕಣದಲ್ಲಿ ಪ್ರಕಟವಾದ ‘ಕೃತಿಯೊಂದು ಪಿಸು ನುಡಿವ ಮೋಹಕ ಪರಿ’ ಲೇಖನದಲ್ಲಿ ‘ಪುಸ್ತಕ ಬಿಡುಗಡೆಯ ದೇಶಾವರಿ ವೇದಿಕೆ’ ಎಂಬ ವರ್ಣನೆ ನೋಡಿದೇಟಿಗೇ ವಿಮಲಾಗೆ ಇಂಥದೊಂದು ದೇಶಾವರಿ ವೇದಿಕೆಯ ಪರಸಂಗದ ದಿನ ಸಿಟ್ಟು ಬಂದಿದ್ದು ನೆನಪಾಯಿತು; ಆ ಸಿಟ್ಟಿನ ಮೂಲ ಕುರಿತು ವಿಮಲಾ ಬರೆದ ಮಾತುಗಳು: 

‘ಸರ್, ಕೆಲ ವಾರಗಳ ಕೆಳಗೆ ಒಂದು ‘ಪುಸ್ತಕ ಬಿಡುಗಡೆಯ ದೇಶಾವರಿ ವೇದಿಕೆಯಲ್ಲಿ’ ಗಂಭೀರ ಲೇಖಕರೊಬ್ಬರು ಪುಸ್ತಕ ಬಿಡುಗಡೆ ಮಾಡಿ ಮಾತನಾಡುತ್ತಾ, ಕಾವ್ಯವನ್ನು ಯಾವ ಸಿದ್ಧತೆಯೂ ಇಲ್ಲದೆ ಸುಮ್ಮನೆ ಓದಬೇಕು ಎಂಬರ್ಥದಲ್ಲಿ ಹೇಳುತ್ತಾ, ‘ಯಾರೋ ಖಡ್ಗವಾಗಲಿ ಕಾವ್ಯ ಅಂದಿದ್ರು. ಕಾವ್ಯ ಖಡ್ಗಾನೋ ಗುರಾಣಿಯೋ  ಆಗಬೇಕಿಲ್ಲ’ ಅಂದ್ರು. ಶಾಕ್ ಆಯ್ತು. ಒಂದು ಕಾಲಕ್ಕೆ ಸಾಹಿತ್ಯದ ದಿಕ್ಕನ್ನು ಬದಲಿಸಿಕೊಳ್ಳಬೇಕಾದ ಅಗತ್ಯವನ್ನು ಶಕ್ತವಾಗಿ ಹಿಡಿದಿಟ್ಟ ಆ ಮಾತು ಸಾಹಿತ್ಯಕ ಚಳುವಳಿಗಳ ಅರಿವೇ ಇಲ್ಲದ ಗುಂಪಿನ ನಗುವಿಗೆ ಕಾರಣವಾಗಿದ್ದು ಬೇಜಾರಾಯ್ತು. ಹಾಗೆ ಮಾತಾಡಿದವರು ನನಗೆ ಪರಿಚಯವಿದ್ದಿದ್ದರೆ ಖಂಡಿತ ಪ್ರಶ್ನೆ ಮಾಡ್ತಿದ್ದೆ ಸರ್…’ 

ದೊಡ್ಡ ದೊಡ್ಡ ಮೇಷ್ಟ್ರು, ಮೇಡಂಗಳ ಅತ್ಯುತ್ತಮ ಸಾಹಿತ್ಯ ಪಾಠ ಕೇಳಿ ಬೆಳೆದಿರುವ, ಹಾಗೂ ಸಾಹಿತ್ಯದ ಟೀಚಿಂಗ್, ಓದು, ಸಂಶೋಧನೆ ಇವೆಲ್ಲ ಬದುಕಿಗೆ ಅತ್ಯಂತ ಮುಖ್ಯ ಎಂದು ನಂಬಿ ಪಾಠ ಮಾಡುವ ವಿಮಲಾಗೆ ಪುಸ್ತಕ ಬಿಡುಗಡೆಯ ಸನ್ನಿವೇಶದ ದೇಶಾವರಿ ಕುಹಕ ಕಂಡು ಸಿಟ್ಟು ಬಂದಿದ್ದು ಸಹಜವಾಗಿತ್ತು. ಇಂಥ ಪ್ರಾಮಾಣಿಕ ಸಿಟ್ಟು ಸಭೆಯಲ್ಲಿರುವ ಅಥವಾ ಸೋಷಿಯಲ್ ಮೀಡಿಯಾದಲ್ಲಿ ಲೈವ್ ನೋಡುತ್ತಿರುವ ಹಲವರಿಗೆ ಉಕ್ಕಿರಬಹುದು. ಸಾರ್ವಜನಿಕ ವೇದಿಕೆಗಳನ್ನು ಹಗುರಾಗಿ ತೆಗೆದುಕೊಂಡು ಬಾಯಿಗೆ ಬಂದದ್ದು ಹೇಳಬಾರದು ಎಂಬ ಎಚ್ಚರ ಇಂಥ ಪ್ರಾಮಾಣಿಕರ ಸಿಟ್ಟು ಕಂಡಾಗಲಾದರೂ ನಮ್ಮಲ್ಲಿ ಮೂಡಬೇಕು. 

ಪುಸ್ತಕ ಬಿಡುಗಡೆ ಸಂಸ್ಕೃತಿ’ ಎಂದೇ ಕರೆಯಬಹುದಾದ ಸಾಹಿತ್ಯ ಸಂಸ್ಕೃತಿಯೊಂದು ನಿರ್ಮಾಣವಾಗಿರುವ ಈ ಕಾಲದಲ್ಲಿ ಪುಸ್ತಕ ಬಿಡುಗಡೆಗಳು ಒಳ್ಳೆಯ ಸಾಂಸ್ಕೃತಿಕ ಸಂದರ್ಭಗಳಾಗಬೇಕು ಎಂಬ ಹಂಬಲ ಅನೇಕರಿಗಿರುತ್ತದೆ. ‘ವ್ಯಾಲ್ಯೂ ಅಡಿಶನ್’ ಎಂಬ ಮಾತನ್ನು ನೀವು ಕೇಳಿರಬಹುದು. ಒಂದು ಸಭೆಯಲ್ಲಿ ಕೂತು ಭಾಷಣ ಕೇಳಿದವರಿಗೆ ಅಥವಾ ಒಂದು ಬರಹ ಓದಿದವರಿಗೆ ಒಂದು ಮೌಲ್ಯ ಬಂದು ಸೇರಿಕೊಳ್ಳಬೇಕು, ಮೌಲ್ಯವರ್ಧನೆ ಆಗಬೇಕು ಎಂದು ಸೂಚಿಸುವ ಮಾತು ಇದು. ಹೀಗೆ ಒಂದು ಉತ್ತಮ ಐಡಿಯಾ ಹೀರಿಕೊಳ್ಳಲು ಸದಾ ಕಾತರರಾಗಿರುವ ಮುಕ್ತ ಪ್ರೇಕ್ಷಕ, ಪ್ರೇಕ್ಷಕಿಯರ ಬಗ್ಗೆ ನಮಗೆ ಅಪಾರ ಗೌರವವಿರಬೇಕಾಗುತ್ತದೆ. 

ಪುಸ್ತಕ ಬಿಡುಗಡೆಯೆನ್ನುವುದು ಗೆಳೆಯ, ಗೆಳತಿಯರ ವಲಯಗಳ ಸಾಲಿಡಾರಿಟಿ ಗುಂಪುಗಳ ಕಾರ್ಯಕ್ರಮದಂತಿರುವುದು ಸಹಜವೇ! ಆದರೆ ಎಷ್ಟೋ ಸಲ ಇಂಥ ಕಡೆ ದೇಶಾವರಿ ಮಾತೇ ವಿಜೃಂಭಿಸಿದಾಗ ಕಸಿವಿಸಿಯಾಗುತ್ತದೆ. ಜ್ಞಾನಪೀಠ ಪಡೆದ ಅನಂತಮೂರ್ತಿ, ಕಂಬಾರರಂಥ ಹಿರಿಯರು ಕೂಡ ಇಂಥ ದೇಶಾವರಿ ಸಂಸ್ಕೃತಿಗೆ ಸಾಕಷ್ಟು ಕಾಣಿಕೆ ಕೊಟ್ಟಿದ್ದಾರೆ. ಇಂತ ಸಭೆಯೊಂದರಲ್ಲಿ ಸ್ತ್ರೀವಾದಿ ಚಿಂತಕಿ ಆಶಾದೇವಿ ‘ಕುರಿತೋದದೆಯುಂ’ ಪುಸ್ತಕ ಕುರಿತು ಮಾತಾಡಿದ ಕಂಬಾರರನ್ನು ನೇರವಾಗಿ ಟೀಕಿಸಿದ್ದರು. ಸ್ವತಃ ನಾನೇ ಅನಂತಮೂರ್ತಿಯವರು ‘ಅಡಿಗರ ನಂತರದ ಮಹತ್ವದ ಕವಿ ವೆಂಕಟೇಶಮೂರ್ತಿ’ ಎಂದು ದೇಶಾವರಿಯಾಗಿ ಹೇಳಿದ್ದನ್ನು ಒಪ್ಪದೆ ಪ್ರತಿಕ್ರಿಯಿಸಿದ್ದು ನೆನಪಾಗುತ್ತದೆ. ಕೆಲವೊಮ್ಮೆ ಪುಸ್ತಕ ಬಿಡುಗಡೆ ಕಾರ್ಯಕ್ರಮಗಳು ದೊಡ್ಡವರ, ಚಿಕ್ಕವರ  ಬಿಡುಬೀಸುತನ, ಬೀಸುತನಗಳ ಜೊತೆಗೇ, ಸಾಹಿತ್ಯ ವಿಮರ್ಶೆಯ ಮಾನದಂಡಗಳಾಗಲೀ, ತಾತ್ವಿಕ, ಸಾಮಾಜಿಕ ವಿಚಾರಗಳ ಬಗೆಗಿನ ಸ್ಪಷ್ಟತೆಯಾಗಲೀ ಇಲ್ಲದೆ ಮಾತಾಡುವವರ ಹರಟೆಯ ವೇದಿಕೆಗಳೂ ಆಗಬಲ್ಲವು. ಈ ನಡುವೆ ಕೂಡ ಪುಸ್ತಕ ಬಿಡುಗಡೆಗೆ ಒಂದು ಗಂಭೀರ ವಿಚಾರ ಸಂಕಿರಣದ ಘನತೆ ತಂದುಕೊಟ್ಟ ಹತ್ತಾರು ಗಳಿಗೆಗಳು ನನ್ನ ಕಣ್ಣ ಮುಂದಿವೆ. ಮೊನ್ನೆ ತಾನೇ ಲೇಖಕಿ ಭಾರತಿದೇವಿ ಹತ್ತು ಹದಿನೈದು ನಿಮಿಷದಲ್ಲಿ ಹಿರೇಮಠ-ರೂಪ ಹಾಸನ ಅವರ ‘ಮಹಾಸಂಗ್ರಾಮಿ’ ಪುಸ್ತಕದ ಪೂರ್ಣ ಚಿತ್ರ ಕೊಟ್ಟಿದ್ದು ನೆನಪಾಗುತ್ತದೆ. ಅತ್ತಿತ್ತ ವಾಕಿಂಗ್ ಹೋಗದೆ, ಕೃತಿಯನ್ನೇ ಕೇಂದ್ರವಾಗಿಟ್ಟುಕೊಂಡು ಪೂರ್ಣ ಸಿದ್ಥತೆಯಿಂದ ಮಾತಾಡುವ ದಂಡಪ್ಪ, ನೆಲ್ಕುಂಟೆ ವೆಂಕಟೇಶ್ ಥರದವರ ಚೌಕಟ್ಟು ಕೂಡ ಉತ್ತಮ ಮಾದರಿಯಂತಿರುತ್ತದೆ. 

ಪುಸ್ತಕ ಬಿಡುಗಡೆಯ ಇನ್ನೊಂದು ಮುಖ ಕೂಡ ಹಲವರಿಗೆ ಗೊತ್ತಿರುತ್ತದೆ: ಸಾಮಾನ್ಯವಾಗಿ ಪ್ರತಿ ಪುಸ್ತಕ ಬಿಡುಗಡೆಯಲ್ಲೂ ಒಬ್ಬ ಶತ್ರುವನ್ನು, ಅದರಲ್ಲೂ ಪುಸ್ತಕ ಬರೆದವರ ಶತ್ರುತ್ವವನ್ನು, ಗಳಿಸಿಕೊಳ್ಳುವುದು ಕೆಲವರ ಸಾಮಾನ್ಯ ಅನುಭವ! ಸಾಮಾನ್ಯವಾಗಿ ಪುಸ್ತಕ ಬರೆದವರು ‘ಮದುಮಗ’ನಂತೆ ತಮ್ಮನ್ನು ತಾವೇ ಕೇಂದ್ರಬಿಂದು ಆಗಿಸಿಕೊಂಡಾಗಲಂತೂ ಒಂದೊಂದು ವಿಮರ್ಶೆಯ ಮಾತೂ ಕೂರಲಗಿನಂತೆ ಕಾಣುವುದು ಸಹಜ. ಪುಸ್ತಕದಲ್ಲಿ ನಿಜಕ್ಕೂ ದೋಷಗಳು ಕಂಡಾಗ ಕೊಂಚ ‘ಮೃದುವಾಗಿಯಾದರೂ’ (ಹಾಗೆಂದರೇನು!) ಹೇಳದಿರುವುದು ತಪ್ಪು ಎಂದು ನಂಬುವ ಪ್ರಾಮಾಣಿಕರು ಎಲ್ಲ ಕಾಲಕ್ಕೂ ಇರುತ್ತಾರೆ. ಆದರೆ ಹಲವು ಆತ್ಮಕೇಂದ್ರಿತ ಲೇಖಕ, ಲೇಖಕಿಯರು ಅಂಥ ಮಾತನ್ನು ಕೇಳಿಸಿಕೊಳ್ಳಲಾರದೆ ಮೆಚ್ಚುಗೆಯ ಮ್ಯೂಸಿಕ್ಕನ್ನೇ ಎದುರು ನೋಡುತ್ತಿರುತ್ತಾರೆ! ಬಿಡುಗಡೆಯ ನಂತರದ ಮದ್ಯಗೋಷ್ಠಿಗಳಲ್ಲಿ ಸ್ವಪ್ರಶಂಸೆ-ಪರನಿಂದೆಯ ವಾತಾವರಣ ಕೂಡ ಅವತ್ತಿನ ಪುಸ್ತಕ ಬಿಡುಗಡೆಯ ಸಹಜ ಭಾಗವಾಗಿರುತ್ತದೆ. ‘ಆ ವಿಮರ್ಶಕನಿಗೆ ನನ್ನ ಪದ್ಯಗಳೇ ಅರ್ಥವಾಗಿಲ್ಲ’ ಎಂಬ ಲೇಖಕಿಯ ರೇಗು; ‘ನಿಮ್ಮ ಭಾಷೇನೇ ಆ ಬಿಡುಗಡೆಕಾರನಿಗೆ ಅರ್ಥ ಆಗಿಲ್ಲ’ ಎಂಬ ಲೇಖಕನ ಅಭಿಮಾನಿಯ ಕೊರಗು- ಇವು ಕೂಡ ಬಿಡುಗಡೆಯ ನಂತರದ ಪರಿಚಿತ ದೃಶ್ಯಗಳೇ. ನನ್ನ ಅನುಭವವನ್ನೇ ಹೇಳುವುದಾದರೆ, ಎಷ್ಟೋ ಪುಸ್ತಕಗಳ ಬಿಡುಗಡೆಯ ನಂತರ, ಮದ್ಯಗೋಷ್ಠಿಯ ಮಾತಿರಲಿ, ‘ಹೊರಟೆಯಾ ಪಿಶಾಚಿ!’ ಎಂಬ ಬೀಳ್ಕೊಡುಗೆ ಕೂಡ ಪಡೆಯದ ಸಂದರ್ಭಗಳಿವೆ! ಪುಸ್ತಕ ಬಿಡುಗಡೆಯ ಬೇಡಿಕೆ ಬಂದ ತಕ್ಷಣ, ‘ಬಿಡುಗಡೆಯ ಬೇಡಿ… ಬೇಡ ಸ್ವಾಮಿ!’ ಎಂದು ಕೆಲವರು ಬೇಡಿಕೊಳ್ಳುವುದಕ್ಕೆ ಇದು ಕೂಡ ಕಾರಣವಿರಬಹುದು!

ಅದೇನೇ ಇರಲಿ, ಪುಸ್ತಕ ಬಿಡುಗಡೆ ಅರ್ಥಪೂರ್ಣವಾಗಿರಬೇಕೆಂಬ ಬಗ್ಗೆ ಯಾರದೂ ತಕರಾರು ಇರಲಿಕ್ಕಿಲ್ಲ. ಈ ನಿಟ್ಟಿನಲ್ಲಿ ಕೆಲವು ಬದಲಾವಣೆಗಳನ್ನು  ಮಾಡಿಕೊಳ್ಳಬಹುದು. ಅಂದು ಬಿಡುಗಡೆಯಾಗಲಿರುವ ಪುಸ್ತಕವನ್ನು ಸ್ವತಃ ಕೃತಿಕಾರರೇ ಐದುಹತ್ತು ನಿಮಿಷ ಆಕರ್ಷಕವಾಗಿ ಮಂಡಿಸಿದರೆ ಚೆನ್ನಾಗಿರಬಲ್ಲದು. ಒಬ್ಬಿಬ್ಬರಿಗಿಂತ ಹೆಚ್ಚಿನ ಭಾಷಣ ಅಗತ್ಯವಿಲ್ಲ. ಪ್ರಾಸ್ತಾವಿಕ ಮಾತುಗಾರರು 1947ನೇ ಇಸವಿಯಿಂದ ಶುರು ಮಾಡಬಾರದು! ಕಾಂಪಿಯರ್ ಗಳು ಭಾಷಣಕಾರರು ಹೇಳಿದ್ದರ ಸಾರಾಂಶ ಕೊಡುವುದನ್ನು ಕೈಬಿಟ್ಟು ಛಕ ಛಕ ಕಾರ್ಯಕ್ರಮ ನಡೆಸಬೇಕು! ಉತ್ತಮ ಸಿದ್ಧತೆ ಮಾಡಿಕೊಂಡಿರುವ ಗಂಭೀರ ಭಾಷಣಕಾರರು ಕೂಡ ಇಪ್ಪತ್ತು-ಇಪ್ಪತ್ತೈದು ನಿಮಿಷಗಳಲ್ಲಿ ಮುಗಿಸುವುದು ಹಿತಕರ! 

ಅದಕ್ಕಿಂತ ಮುಖ್ಯವಾಗಿ ನಾವೆಲ್ಲ ಯೋಚಿಸಲೇಬೇಕಾಗಿರುವುದು ಈ ಕಾಲದಲ್ಲಿ ಹಲ ಬಗೆಯ ಕಷ್ಟ ನಷ್ಟ, ಅವಮಾನ, ನಿಂದೆಗಳನ್ನು ಅನುಭವಿಸಿಯೂ ಪುಸ್ತಕ ಪ್ರಕಟಿಸುತ್ತಿರುವ ಅನೇಕ ಪ್ರಕಾಶಕರ ಯೋಗಕ್ಷೇಮದ ಬಗ್ಗೆ. ‘ಪುಸ್ತಕ ಬಿಡುಗಡೆಗಳಿಗೆ ತಪ್ಪದೆ ಹೋಗ್ತೀನಿ ಸಾರ್. ಯಾಕೇಂದ್ರೆ ಅವತ್ತೇ ಕಡಿಮೆ ಬೆಲೆಗೆ ಪುಸ್ತಕ ಸಿಗೋದು’ ಎನ್ನುವ ಹೋರಾಟಗಾರ ಶಿವಶಂಕರ್ ಥರದವರೇ ನಿಜವಾದ ಪುಸ್ತಕ ಪೋಷಕರು. ಎಂದೂ ಪುಸ್ತಕ ಬರೆಯದೆ, ಪುಸ್ತಕ ಬಿಡುಗಡೆಗಳಿಗೆ ಹೋಗಿ ಪುಸ್ತಕ ಕೊಂಡು ಮಾಯವಾಗುವವರನ್ನು ಕಂಡಾಗ ಅಪಾರ ಕೃತಜ್ಞತೆ ಹುಟ್ಟುತ್ತದೆ. ಇಂಥ ಅಪ್ಪಟ ಪುಸ್ತಕ ಪ್ರೇಮಿಗಳಿಗಾಗಿ ಪುಸ್ತಕ ಬಿಡುಗಡೆಯ ದಿನ ಆಕರ್ಷಕ ರಿಯಾಯತಿಯಲ್ಲಿ ಮಾರಾಟ ಮಾಡುವುದು ಒಳ್ಳೆಯದು. ಪುಸ್ತಕ ಬಿಡುಗಡೆಗಿಂತ ಮೊದಲೇ ಸಭಾಂಗಣದ ಹೊರಗೆ ಪುಸ್ತಕ ಮಾರಾಟಕ್ಕಿಟ್ಟರೆ ತಪ್ಪೇನಿಲ್ಲ.  ಪುಸ್ತಕದ ಬೆಲೆಯನ್ನಾಧರಿಸಿ ರೂ. 100, 150, 200… ಹೀಗೆ ರೌಂಡಾಫ್ ಮಾಡಿ ಮಾರುವುದು ಒಳ್ಳೆಯ ಮಾರ್ಕೆಟಿಂಗ್. ಅಷ್ಟಿಷ್ಟು ಕಾಸು ಕೂಡಿಟ್ಟುಕೊಂಡು ಬರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಉಚಿತವಾಗಿ ಕೂಡ ಪುಸ್ತಕ ಕೊಡುವ ಪಲ್ಲವ ವೆಂಕಟೇಶ್ ಥರದವರೂ ಇದ್ದಾರೆ; ಪ್ರಕಾಶಕರಿಗೆ ನೆರವಾಗಲು ಅಷ್ಟಿಷ್ಟು ಪುಸ್ತಕ ಮಾರಿಸಿಕೊಡುವ ಕಾಳಜಿ ತೋರುವ ಲೇಖಕ, ಲೇಖಕಿಯರೂ ಇದ್ದಾರೆ. ಅವರ ಸಂತತಿ ಹೆಚ್ಚಲಿ! 

ಇಷ್ಟಾಗಿಯೂ ಪುಸ್ತಕ ಬಿಡುಗಡೆ ಎನ್ನುವುದು ಆಯಾ ವಲಯಗಳ ಸಡಗರದ ಪುಟ್ಟ ಹಬ್ಬ! ಅವತ್ತು ಅಷ್ಟಿಷ್ಟು ಉತ್ಪ್ರೇಕ್ಷಾಲಂಕಾರವೂ ಓಕೇ ಎನ್ನುವುದೂ ನಿಜ. ಆದರೆ ಅಸಂಬದ್ಧವಾಗಿ, ಬೇಜವಾಬ್ದಾರಿಯಾಗಿ ಮಾತಾಡಿದರೆ ವಿಮಲಾ ಥರದ ಪ್ರಾಮಾಣಿಕ ಸಾಹಿತ್ಯಾಸಕ್ತರಿಗೆ ಕೋಪ ಬರುತ್ತದೆ ಎಂಬ ಎಚ್ಚರ ಎಲ್ಲರಿಗೂ ಇರಬೇಕಾಗುತ್ತದೆ. ಭಾಷಣಕಾರರ ಅತಿ ಮೆಚ್ಚುಗೆಯ ಮಾತು ಕೇಳಿ ಪುಸ್ತಕ ಕೊಂಡು ಓದುವವರಿಗೆ ಆ ಮಟ್ಟಕ್ಕೆ ಪುಸ್ತಕ ಇರದಿದ್ದರೆ ಭಾಷಣಕಾರರ ಬಗ್ಗೆ ಜಿಗುಪ್ಸೆ ಹುಟ್ಟುತ್ತದೆ! ಆದ್ದರಿಂದಲೇ ಸಾಹಿತ್ಯಸಂಸ್ಕೃತಿಯ ಬಗ್ಗೆ ಪ್ರೀತಿಯುಳ್ಳವರು ಇಂಥ ವೇದಿಕೆಗಳನ್ನು ದೇಶಾವರಿ ವೇದಿಕೆಗಳನ್ನಾಗಿಸದೆ, ತಮ್ಮೆಲ್ಲ ಕೆಲಸ ಬಿಟ್ಟು ಬರುವ ಪ್ರೇಕ್ಷಕ, ಪ್ರೇಕ್ಷಕಿಯರ ಬಗ್ಗೆ ಗೌರವ ಬೆಳೆಸಿಕೊಳ್ಳುವುದು ಕೂಡ ಮುಖ್ಯ. 

ಕೊನೆ ಟಿಪ್ಪಣಿ

ಪುಸ್ತಕ ಮಾರಾಟದ ಮಾತು ಬಂದಿದ್ದರಿಂದ ಈ ಹಿಂದೆ ನನ್ನ ‘ಗಾಳಿ ಬೆಳಕು’ ಪುಸ್ತಕದಲ್ಲಿ ಬರೆದ ಟಿಪ್ಪಣಿಯೊಂದರ ಭಾಗ: ಅರ್ಜೆಂಟೀನಾದ ದೊಡ್ಡ ಲೇಖಕ ಬೋರ್ಹೆಸ್ ಇಪ್ಪತ್ತೇಳು ವರ್ಷ ತಲುಪುವ ಹೊತ್ತಿಗಾಗಲೇ ಪ್ರಖ್ಯಾತನಾಗಿದ್ದ. ಅವನ ಕವನ ಸಂಕಲನವೊಂದಕ್ಕೆ ಹತ್ತಾರು ಪ್ರಶಸ್ತಿಗಳು ಬಂದಿದ್ದವು. ಆದರೆ ಆ ಸಂಕಲನದ ಇಪ್ಪತ್ತೇಳು ಪ್ರತಿಗಳು ಮಾತ್ರ ಖರ್ಚಾಗಿದ್ದವು. ಅದನ್ನು ನೆನಸಿಕೊಂಡ ಬೋರ್ಹೆಸ್ ನಗುತ್ತಾ ಹೇಳುತ್ತಾನೆ: ‘ನನ್ನ ಹೃದಯ ಎಷ್ಟೊಂದು ತುಂಬಿ ಬಂದಿತೆಂದರೆ, ನನ್ನ ಪುಸ್ತಕ ಕೊಂಡುಕೊಂಡ ಆ ಇಪ್ಪತ್ತೇಳು ಜನರನ್ನೂ ಹುಡುಕಿಕೊಂಡು ಹೋಗಿ ಕೃತಜ್ಞತೆ ಹೇಳಬೇಕೆನ್ನಿಸಿತು!’
ಕೆಲವು ತಿಂಗಳ ಕೆಳಗೆ ಬೆಂಗಳೂರಿನಲ್ಲಿ ಪುಸ್ತಕ ಬಿಡುಗಡೆಯ ಮುನ್ನ ಹಾಗೂ ಬಿಡುಗಡೆಯ ದಿನ ಬುದ್ಧಿಜೀವಿ ಕವಿ ಪ್ರಕಾಶ ಮಂಟೇದನ ‘ಕಾಮ ಕಸ್ತೂರಿ ಬನ’ ಕವನ ಸಂಕಲನ ನೂರೈವತ್ತು ಪ್ರತಿಗಳಷ್ಟು ಖರ್ಚಾಗಿದ್ದನ್ನು ಕಣ್ಣಾರೆ ಕಂಡೆ. ಈ ವಿಷಯದಲ್ಲಾದರೂ ಹೊಸ ಕನ್ನಡ ಕವಿಯೊಬ್ಬ ಅರ್ಜೆಂಟೀನಾದ ಬೋರ್ಹೆಸ್‌ಗೆ ಸೈಡ್ ಹೊಡೆದಂತಾಯಿತಲ್ಲವೆ! ಚಿಯರ್ಸ್! 

ಕುತೂಹಲವಿದ್ದರೆ ಗಮನಿಸಿ: https://www.youtube.com/watch?v=eLsaoGlvNOI
ಬಿಡುವಾದಾಗ ಭೇಟಿ ಕೊಡಿ, ಶೇರ್ ಮಾಡಿ: https://natarajhuliyar.com
 

Share on:


Recent Posts

Latest Blogs



Kamakasturibana

YouTube



Comments

8 Comments



| ಗಂಗಾಧರ ಬಿ.ಎಂ.

'ಬಿಡುಗಡೆಯ ಬೇಡಿ' -ಪುಸ್ತಕ ಬಿಡುಗಡೆ ಕಾರ್ಯಕ್ರಮಗಳ ಸ್ವರೂಪಗಳ ವಸ್ತುನಿಷ್ಠ ವಿಶ್ಲೇಷಣೆ ಜೊತೆಗೆ ಸುಧಾರಣೆಗೆ ಸಲಹೆ ನೀಡುತ್ತದೆ.ಇದು ಪುಸ್ತಕ ಸಂಸ್ಕೃತಿ ಚಿಂತನೆಯ ಭಾಗವೆನಿಸುತ್ತದೆ. ಇದು ಸಾಹಿತಿಗಳು, ಪ್ರಕಾಶಕರು, ಆಯೋಜಕರು ಪುಸ್ತಕ ಬಿಡುಗಡೆ ಕಾರ್ಯಕ್ರಮಗಳ ಬಗ್ಗೆ ಮರುಚಿಂತಿಸಲು ಪ್ರೇರೇಪಿಸುತ್ತದೆ. ಧನ್ಯವಾದಗಳು ಸರ್


| Mohan Habbu

 ಲೇಕನ ಸ್ವಾರಸ್ಯಕರವಾಗಿದೆ. ನಾನೊಂದು ಕೃತಿಯನ್ನು ರಚಿಸಿದರೆ ಅದನ್ನು ಓದುಗರಿಗೆ ಪರಿಚಯಿಸುವ ಕಾರ್ಯವನ್ನು 'ಬಿಡುಗಡೆ ಕಾರ್ಯಕ್ರಮ ಬಿಟ್ಟು ಬೇರೇ ಯಾವ ಬಗೆಯಲ್ಲಿ ಮಾಡಬೇಕು? ನನ್ನ ದೃಷ್ಟಿಯಲ್ಲಿ ಇಂಥ ಕಾರ್ಯಕ್ರಮ ಸಮಾನ ಮನಸ್ಕರ ಮಿಲನ ಸಂದರ್ಭ. ಅಲ್ಲಿ ಆಗಬೆಕಾದುದು ಕೃತಿಯ ವಸ್ತುನಿಷ್ಠ ವಿಮರ್ಶೆ; ಅಷ್ಟೆ.

-ಮೋಹನ ಹಬ್ಬು


| MOHAN MIRLE

ನಿಜ ಸರ್. ನಾನೂ ಸಾಕಷ್ಟು ಪುಸ್ತಕ ಬಿಡುಗಡೆ ಕಾರ್ಯಕ್ರಮಗಳಿಗೆ ಹೋಗಿದ್ದೇನೆ. ಕೃತಿನಿಷ್ಠ ವಿಮರ್ಶೆಗಿಂತ ಮುಖಸ್ತುತಿಯೇ ಹೆಚ್ಚು ಕಾಣುತ್ತವೆ. ಆದರೆ ನಿಜವಾದ ನಿಮ್ಮಂತಹ ಸಾಹಿತ್ಯ ವಿಮರ್ಶಕರು ಮಾತ್ರ ನಿಷ್ಠುರವಾಗಿಯೋ ಅಥವಾ ಹಿತವಾಗಿಯೋ ತಪ್ಪುಗಳನ್ನು, ಮಿತಿಗಳನ್ನು ಹೇಳದೆ ಇರರು. ಇದನ್ನೂ ಗಮನಿಸಿದ್ದೇನೆ. ಎಷ್ಟೋ ಪುಸ್ತಕ ಬಿಡುಗಡೆಯ ಸಮಾರಂಭಗಳು ನೀವು ಹೇಳಿದಂತೆ ವಿಚಾರ ಸಂಕಿರಣದ ಮಟ್ಟಕ್ಕೆ ನಡೆದಿದ್ದು, ಅಂತಹವಕ್ಕೂ ಸಾಕ್ಷಿಯಾಗಿದ್ದೇನೆ. ಯಾವುದೇ ಕಾರ್ಯಕ್ರಮಕ್ಕೆ ಬರುವ ಪ್ರೇಕ್ಷಕ ಸಹೃದಯರಿಗೆ ತಮ್ಮ ಅಮೂಲ್ಯ ಸಮಯ ಮತ್ತು ತಗುಲಿದ ವೆಚ್ಚದ ದೃಷ್ಟಿಯಿಂದಲಾದರೂ ನೀವು ಹೇಳಿರುವಂತೆ “ವ್ಯಾಲ್ಯೂ ಅಡಿಶನ್” ಆಗದಿದ್ದರೆ ಖಂಡಿತಾ ಅಂತಹ ಕಾರ್ಯಕ್ರಮಗಳು ಕ್ರಮೇಣ ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುತ್ತವೆ. ಇನ್ನು ಈ ಬಗ್ಗೆ ನಿಮ್ಮ ಬ್ಲಾಗ್ ಬರವಣಿಗೆಯ ಮೂಲಕ ಮುಕ್ತ ಚರ್ಚೆಗೆ ತಂದು ಈ ವಿಷಯದ ಗಮನ ಸೆಳೆದಿರುವುದು, ಮತ್ತು ಇಂತಹ ಪುಸ್ತಕ ಬಿಡುಗಡೆ ಕಾರ್ಯಕ್ರಮಗಳಿಗೆ ಒಂದು ಆದರ್ಶದ ಚೌಕಟ್ಟು ನೀಡಿರುವುದು. ಇಂದಿನ ಬ್ಲಾಗ್ ನ ವಿಶೇಷವಾಗಿದೆ.

ಧನ್ಯವಾದಗಳು ಸರ್.

ಮೋಹನ್ ಮಿರ್ಲೆ,


| Dr.Thyagaraj

Intersting. 


| ಉದಯಕುಮಾರ ಹಬ್ಬು

ಪುಸ್ತಕ ಬಿಡುಗಡೆಯ ಮುಖ್ಯ ಉದ್ದೇಶ ಆ ಪುಸ್ತಕವನ್ನು ಓದುಗರಿಗೆ ಆ ಪುಸ್ತಕವನ್ನು ಪ್ರಾಮಾಣಿಕವಾಗಿ ಪರಿಚಯಿಸಿ ಈ ಪುಸ್ತಕವನ್ನು ಯಾಕೆ ಖರೀದಿಸಬೇಕು ಎಂದು ಸಭಿಕರಿಗೆ ಮನವರಿಕೆ ಮಾಡುವ ಸಂದರ್ಭ. ಪುಸ್ತಕದ ಪರಿಚಯ ಓದುಗರನ್ನು ಪುಸ್ತಕ ಓದುವಂತೆ ಪರಿಚಯಿಸುವ ಮನವರಿಕೆ ಮಾಡುವ ಪ್ರಸಂಗ. ಆದರೆ ಇದರಿಂದ ಲೇಖಕನಿಗೆ ಪ್ರಚಾರ ಸಿಕ್ಕುತ್ತೆ.

ಈಗ ಪುಸ್ತಕದ ಬಿಡುಗಡೆಯ ಕಾರ್ಯಕ್ರಮ ಒಂದು ತುಂಬ ದೊಡ್ಡ ಖರ್ಚಿನ ಬಾಬತ್ತು ಅಲ್ಲವೆ? ಹಾಲಿನ ಬಾಡಿಗೆ, ಬಂದ  ಭಾಷಣಕಾರರಿಗೆ ಆತಿಥ್ಯ ಮತ್ತು ಸಂಭಾವನೆ, ಮೈಕ್ ಫೋಟೋಗ್ರಾಫರಿನೆ ಕೊಡುವ ಹಣ ಮತ್ತು ಕಾಫಿ ತಿಂಡಿಯ ಖರ್ಚು. ಕಾರ್ಯಕ್ರಮ ಮುಗಿಯುವವರೆಗೂ ಲೇಖಕನಿಗೆ ಈ ಬಗೆಯ ಹಲವಾರು ಟೆನ್ಶನ್ನುಗಳು.

ಬದಲಿಗೆ ಆನ್ಲೈನ್ ಕಾರ್ಯಕ್ರಮ ಖರ್ಚಿಲ್ಲದೆ  ಪುಸ್ತಕ ಬಿಡುಗಡೆ ಮಾಡಬಹುದು. ಆಗ ನೀವು ನಮೂದಿಸಿದ ಹಲವಾರು ಅಪಸವ್ಯಗಳ ನಿವಾರಣೆಯಾಗುತ್ತದೆ‌

ಇಲ್ಲಿ ತನ್ನ ಪುಸ್ತಕದ ಬಿಡುಗಡೆಗೆ ಲೇಖಕನೇ ಒದ್ದಾಡಬೇಕು. ನಾನು ಅಮೇರಿಕಾದ ಟೆಕ್ದಾಸ್ ನ ಸ್ಯಾನ್ ಅಂಟೋನಿಯೋಗೆ ಹೋದಾಗ ಅಲ್ಲಿ ಇಂತಹ ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ಮಾಡುವ ಸಂಸ್ಥೆಯೊಂದರ ಬಗ್ಗೆ ಕೇಳಿದೆ. Gemini Association. ಅಂತಹ ಸಂಸ್ಥೆಗಳು ಕನ್ನಡದಲ್ಲೂ ಇವೆ. ಉಡುಪಿಯ ಸುಹಾಸಂ ಎಂಬ ಸಂಸ್ಥೆ. ಶಾಂತರಾಮ ಐತಾಳ ಆ ಸಂಸ್ಥೆಯ ಅಧ್ಯಕ್ಷರು. ಕುಗೊ ಎಂಬ ಕನ್ನಡ ಹಾಸ್ಯ ಕೃತಿರಚನೆಕಾರ ಮತ್ತು ಪುಸ್ತಕ ಪರಿಚಾರಕ ಆ ಸಂಸ್ಥೆಯ ಕಾರ್ಯದರ್ಶಿ. 

ನನ್ನ ಹಲವಾರು ಕೃತಿಗಳನ್ನು ಇಂಥ ಸಂಸ್ಥೆಗಳ ಮೂಲಕ ನನ್ನ ಕೈಯಿಂದ ಹಣ ಖರ್ಚು ಮಾಡಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ, ತುಮುಕೂರಿನಲ್ಲಿ ನಾನು ಬೋಧಿಸಿದ ಕಾಲೇಜಿನಲ್ಲಿ ಮಾಡಿಸಿದ್ದೇನೆ‌

ನಮಸ್ಕಾರ


| ಡಿ.ಉಮಾಪತಿ

ಪುಸ್ತಕ ಬಿಡುಗಡೆಗೊಂದು ಕೈಪಿಡಿ....


| ಎಂ.ಜವರಾಜ್

ಲೇಖನ ಪ್ರಸ್ತುತಿ ಶುದ್ಧವಾಗಿದೆ. ಕವಿ, ವಿಮರ್ಶಕ, ಲೇಖಕ, ಪ್ರಕಾಶಕ,  ಬಿಡುಗಡೆ - ಈ ಒಟ್ಟು ಚಿತ್ರದ ವಿವರ ಚೆನ್ನಾಗಿ ಪರಿಚಯಿಸಿದ್ದೀರಿ. 


| prakashmanteda

ಬಿಡುಗಡೆ ಬೇಡಿ ಆಗದಂತೆ ನಮಗಿರಬೇಕಾದ ಎಚ್ಚರ ಮತ್ತು ಸೂಕ್ಷ್ಮತೆಗಳನ್ನು ಈ ಲೇಖನ ನಮ್ಮನ್ನು ಎಚ್ಚರಿಸುತ್ತದೆ. ಥ್ಯಾಂಕ್ಯೂ ಸರ್




Add Comment