ಡಿ. ಆರ್. ನಾಗರಾಜ್: ವಿದ್ಯಾರ್ಥಿ ದೆಸೆಯ ಟಿಪ್ಪಣಿಗಳು
by Nataraj Huliyar
ಲೇಖಕ ಮಿತ್ರರಾದ ಹರೀಶ್ ಗಂಗಾಧರ್, ರಾಜೇಂದ್ರ ಪ್ರಸಾದ್ ಕೆಲವು ವರ್ಷಗಳ ಕೆಳಗೆ ಡಿ. ಆರ್. ನಾಗರಾಜರ ಬರಹಗಳನ್ನು ಕುರಿತು ಚರ್ಚೆ ಏರ್ಪಡಿಸಿದ್ದರು. ಅವತ್ತು ಮಾತಾಡಲು ಬಂದಿದ್ದ ಹಿರಿಯ ಮಿತ್ರರಾದ ಅಗ್ರಹಾರ ಕೃಷ್ಣಮೂರ್ತಿ ಇದ್ದಕ್ಕಿದ್ದಂತೆ ಈ ಟಿಪ್ಪಣಿಗಳನ್ನು ನನಗೆ ಓದಲು ಕೊಟ್ಟರು. ಕನ್ನಡದ ಶ್ರೇಷ್ಠ ಸಂಸ್ಕೃತಿ ಚಿಂತಕ-ವಿಮರ್ಶಕರ ಸಾಲಿನಲ್ಲಿ ಮುಂಚೂಣಿ ಹೆಸರಾಗಿರುವ ಡಿ. ಆರ್. (೨೦ ಫೆಬ್ರವರಿ ೧೯೫೪-೧೨ ಆಗಸ್ಟ್ ೧೯೯೮) ನಮ್ಮೊಡನೆ ಇದ್ದಿದ್ದರೆ ಫೆಬ್ರವರಿ ೨೦ಕ್ಕೆ ಅವರಿಗೆ ಎಪ್ಪತ್ತೊಂದು ತುಂಬುತ್ತಿತ್ತು. ಡಿ. ಆರ್. ಹುಟ್ಟಿ ಬೆಳೆದ ದೊಡ್ಡಬಳ್ಳಾಪುರದ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿರುವ ಗೆಳೆಯ ಪ್ರಕಾಶ್ ಮಂಟೇದರ ಗೆಳೆಯ ಗೆಳತಿಯರು ಡಿ. ಆರ್. ಕೃತಿಗಳನ್ನು ಹೊಸ ತಲೆಮಾರಿಗೆ ಮತ್ತೆ ಓದುತ್ತಿರುವುದನ್ನು ಕೇಳಿ, ಡಿ. ಆರ್. ನಿರಂತರ ಸ್ಫೂರ್ತಿಯ ಸೆಲೆಯಾಗಿರುವುದನ್ನು ಕಂಡು, ನೆಮ್ಮದಿಯಾಯಿತು. ಡಿ.ಆರ್. ವಿದ್ಯಾರ್ಥಿ ದೆಸೆಯ ಟಿಪ್ಪಣಿಗಳು ಹೊಸ ತಲೆಮಾರುಗಳಲ್ಲಿ ಹೊಸ ಪ್ರೇರಣೆಗಳನ್ನು ಹುಟ್ಟಿಸಬಲ್ಲವು ಎನ್ನಿಸಿ ಬೇರೆಡೆ ಚರ್ಚಿಸಿದ್ದ ಟಿಪ್ಪಣಿಗಳಿಂದ ಕೆಲವನ್ನು ಇಲ್ಲಿ ಆಯ್ದು ಕೊಟ್ಟಿರುವೆ:
ಡಿ. ಆರ್. ನಾಗರಾಜ್ ೧೯೭೪ರಲ್ಲಿ ತಮ್ಮ ಇಪ್ಪತ್ತನೆಯ ವಯಸ್ಸಿನಲ್ಲಿ ಆ ವರ್ಷದ ತಮ್ಮ ಓದು, ಬರಹ, ಚಿಂತನೆ, ಕ್ರಿಯೆ, ತಲ್ಲಣಗಳನ್ನು ದಾಖಲಿಸಿರುವ ಟಿಪ್ಪಣಿಗಳಿವು. ಆಗ ಡಿ. ಆರ್. ಬೆಂಗಳೂರಿಗೆ ೪೦ ಕಿಲೋಮೀಟರ್ ದೂರವಿರುವ ದೊಡ್ಡಬಳ್ಳಾಪುರದಿಂದ ನಿತ್ಯ ರೈಲಿನಲ್ಲಿ ಬೆಂಗಳೂರಿಗೆ ಬಂದು ಹೋಗುತ್ತಿದ್ದರು; ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಎರಡನೇ ಎಂ.ಎ. ಓದುತ್ತಿದ್ದರು. ಹದಿಹರೆಯದಲ್ಲೇ ಉತ್ತಮ ಸಾಹಿತ್ಯ ಕೃತಿಗಳ ಸಂಗದಲ್ಲಿದ್ದ ಡಿ. ಆರ್. ನಿತ್ಯದ ರೈಲು ಪ್ರಯಾಣವನ್ನು ಗಂಭೀರ ಓದಿನ ಸಮಯವನ್ನಾಗಿಸಿಕೊಂಡರು. ಈ ಪಯಣದಲ್ಲಿ ಅಸಲಿ ಗ್ರಾಮೀಣ ಭಾರತವನ್ನು ಕಂಡ ಡಿ.ಆರ್. ಟಿಪ್ಪಣಿ: ‘ಇಲ್ಲಿ ಕಾಣುವ ಪ್ರತಿಯೊಬ್ಬರೂ ಇಂಡಿಯಾದ ಅಗಾಧ ದಾರಿದ್ರ‍್ಯದ ಅಸ್ಥಿಪಂಜರವಾಗಿ ಕಾಣುತ್ತಾರೆ’; ‘ಈ ದೇಶದ ರಾಜಕೀಯ ಬಹುಸಂಖ್ಯಾತ ಜನಸಮುದಾಯಕ್ಕೆ ತೀರಾ ಅಪ್ರಸ್ತುತ. ಆಳುವ ವರ್ಗ ಶಿಕ್ಷಣ ಪದ್ಧತಿಯ ಮೂಲಕ ವಿದ್ಯಾವಂತರನ್ನು ನಿಷ್ಕ್ರಿಯರನ್ನಾಗಿ ಮಾಡುತ್ತಿರುವುದೇ ಇಲ್ಲಿನ ಲಕ್ಷಣ.’
ಕತೆಗಾರ ಕರಿಗೌಡ ಬೀಚನಹಳ್ಳಿ ನೆನೆಯುವಂತೆ, ‘ಡಿ.ಆರ್. ಕೆಲವೊಮ್ಮೆ ಬೆಂಗಳೂರಿನ ಬಂಡಿಶೇಷಮ್ಮ ಹಾಸ್ಟೆಲಿನಲ್ಲಿ ಗೆಳೆಯನೊಬ್ಬನಿಗೆ ನಿಗದಿಯಾಗಿದ್ದ ರೂಮಿನಲ್ಲೋ, ಕಮ್ಯುನಿಸ್ಟರ ‘ಕೆಂಬಾವುಟ’ ಕಛೇರಿಯಲ್ಲೋ ಮಲಗುತ್ತಾ, ಓದುತ್ತಾ, ಬರೆಯುತ್ತಾ ಬೆಳೆದರು.’ ಡಿ. ಆರ್. ಟಿಪ್ಪಣಿಗಳು ಸೂಚಿಸುವಂತೆ ಆಗ ಅವರ ವ್ಯಕ್ತಿತ್ವದಲ್ಲಿ ಪರಿಶ್ರಮ, ಬೌದ್ಧಿಕ ಕಾಳಜಿ, ಸಾಮಾಜಿಕ ಜವಾಬ್ದಾರಿ, ದಕ್ಷತೆಯ ಹುಡುಕಾಟ ಎಲ್ಲವೂ ವಿಕಾಸಗೊಳ್ಳುತ್ತಿದ್ದವು. ಪಶ್ಚಿಮದ ಸಾಹಿತ್ಯ ವಿಮರ್ಶೆಯ ದೊಡ್ಡ ಪಾಠಗಳನ್ನು ಕಲಿಯುತ್ತಲೇ ವಿಮರ್ಶೆ, ಸಂಶೋಧನೆಗಳ ಜಾಡುಗಳ ಹುಡುಕಾಟ; ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಾರ್ಟಿ, ಎಂ.ಡಿ. ನಂಜುಂಡಸ್ವಾಮಿಯವರ ನೇತೃತ್ವದ ಸಮಾಜವಾದಿ ಯುವಜನ ಸಭಾಗಳಲ್ಲಿ ಕಲಿತ ತತ್ವಗಳನ್ನು ಸಮಾಜಕ್ಕೆ ಉಪಯುಕ್ತವಾಗಿಸುವ ಕಾತರ; ತನ್ನ ಬೌದ್ಧಿಕಮಟ್ಟ ಯಾವುದು ಎಂದು ಪರೀಕ್ಷಿಸಿಕೊಳ್ಳುವ ಡಿ. ಆರ್. ಪ್ರಾಮಾಣಿಕತೆ- ಇವೆಲ್ಲವೂ ಎಲ್ಲ ಕಾಲದ ವಿದ್ಯಾರ್ಥಿಗಳಿಗೂ, ಹಿರಿಯರಿಗೂ ಮಾದರಿಯಂತಿವೆ.
ಸಾಹಿತ್ಯ, ಸಮಾಜ, ಸಿದ್ಧಾಂತ, ವಿಮರ್ಶೆಗಳ ಬಗೆಗೆ ಖಚಿತ ನಿಲುವುಗಳುಳ್ಳ ಡಿ. ಆರ್. ಗೆ ಎಂ.ಎ. ವಿದ್ಯಾರ್ಥಿಯಾಗಿದ್ದಾಗಲೇ ವಿಮರ್ಶೆ ಹಾಗೂ ರಿಸರ್ಚ್ ಬಗ್ಗೆ ಅಪಾರ ಸ್ಪಷ್ಟತೆಯಿದ್ದಂತಿದೆ. ಬಸವಲಿಂಗಪ್ಪನವರು ಎತ್ತಿದ ‘ಬೂಸಾ’ ಚರ್ಚೆಯನ್ನು ಗ್ರಹಿಸದೆ ಕವಿ ಬೇಂದ್ರೆ ಉಡಾಫೆಯಿಂದ ಮಾತಾಡಿದಾಗ ಡಿ. ಆರ್. ಪ್ರತಿಕ್ರಿಯೆ: ‘ಅವರ ಕಾವ್ಯ ಸೃಷ್ಟಿಯ ಬಗ್ಗೆ ಅಪಾರ ಗೌರವವಿದೆ; ಆದರೆ ಅವರ ಕವಿತೆ ಮತ್ತು ಆಲೋಚನೆ ಎರಡೂ ಭಿನ್ನವಾದುದೇ? ಶೂದ್ರ ಸಮುದಾಯದ ಸಂಪರ್ಕವಿಲ್ಲದಿದ್ದ ವೈದಿಕ ಸಾಹಿತ್ಯ ಬೂಸಾವಲ್ಲದೆ ಮತ್ತೇನು?’
ಇಂಥ ಸ್ಪಷ್ಟ ವಿಮರ್ಶಾ ಗ್ರಹಿಕೆಗಳುಳ್ಳ ಡಿ. ಆರ್. ಟಿಪ್ಪಣಿಗಳನ್ನು ಗಮನಿಸಿ:
‘ಭೈರಪ್ಪ ಒಬ್ಬ ಜನಪ್ರಿಯ ಕಾದಂಬರಿಕಾರ’ ಎನ್ನುತ್ತಾ, ಡಿ. ಆರ್. ಜನಪ್ರಿಯ ಸಾಹಿತ್ಯ ಕುರಿತು ಮಾಡುವ ವಿಶ್ಲೇಷಣೆ: ೧. ಒಬ್ಬ ಲೇಖಕ ತೀರ ಸುಲಭವಾಗಿ ಜನಪ್ರಿಯನಾದ ಎಂದರೆ ಆತ ಹೊಸ ರುಚಿಗಳನ್ನು ಸೃಷ್ಟಿಸುತ್ತಿದ್ದಾನೆ ಎನ್ನುವುದಕ್ಕಿಂತ ಒಗ್ಗಿರುವ ರುಚಿಗೇ ಬರೆಯುತ್ತಿದ್ದಾನೆ. ೨. ಹೀಗೆ ಜನಪ್ರಿಯವಾಗುವ ಕೃತಿಗಳು ಆ ಜನಾಂಗದ ಮೇಲ್ಪದರದ ಅಭಿರುಚಿಯನ್ನು, ಆಲೋಚನಾ ಕ್ರಮವನ್ನು ಬಿಂಬಿಸುತ್ತವೆ; ಇವು ಸರಳ ಮತ್ತು ಮಾದಕವಾಗಿರುತ್ತವೆ.’
‘ಅಡಿಗರು ನಿಜಕ್ಕೂ ರಿಲಿಜಿಯಸ್ ಆಗಿದ್ದಾರೆಯೇ? ಸಾಮಾಜಿಕ ಪ್ರಜ್ಞೆ ಹೆಚ್ಚು ವ್ಯಕ್ತವಾಗುವುದು ಅವರ ಬೇರೆ ಬರಹಗಳಲ್ಲೇ ಅಲ್ಲವೆ? ಹಾಗಿದ್ದರೂ, ಕಾವ್ಯವನ್ನು ಸೃಷ್ಟಿಸುವ ಅಡಿಗ; ರಾಜಕೀಯದಲ್ಲಿ ಸಮುದಾಯ ವಿರೋಧಿ ಅಡಿಗ-ಇವರಿಬ್ಬರೂ ಬೇರೆಬೇರೆ ಏನಲ್ಲವಲ್ಲ?’; ‘ಅಡಿಗ ರಿವೈವಲಿಸ್ಟ್ ಮನೋಧರ್ಮದ ಕವಿ; ಕಳೆದುದರ ಬಗ್ಗೆ ಹಂಬಲವಿದೆ. ಹಾಗೆಯೇ ಸಮಕಾಲೀನ ಸ್ಥಿತಿಯ ಬಗ್ಗೆ ನಿಷ್ಠುರವಾದ ವ್ಯಂಗ್ಯವಿದೆ.’
ಅಡಿಗರ ‘ಶ್ರೀರಾಮನವಮಿಯ ದಿವಸ’ ಮತ್ತು ಬೇಂದ್ರೆಯವರ ‘ಜೋಗಿ’ ಪದ್ಯಗಳನ್ನು ಓದುತ್ತಾ ಡಿ.ಆರ್.ಗೆ ಹೀಗೆನ್ನಿಸುತ್ತದೆ: ‘ಬೇಂದ್ರೆ ತಮ್ಮ ಅನುಭವವನ್ನು ಭಾವತೀವ್ರತೆಯ ಮೂಲಕ ತಲುಪಲು ಬಯಸುತ್ತಾರೆ; ಆದರೆ ಅಡಿಗರು ಅನುಭವವನ್ನು ರಿಸರ್ಚ್ ಮತ್ತು ತರ್ಕದ ಮೂಲಕ ತಲುಪಲು ಬಯಸುತ್ತಾರೆ.’ ‘ಜೋಗಿ’ ಪದ್ಯ ಬರೀ ಮಣ್ಣಿನ ಪದಗಳಿಂದಲೇ, ಜಾನಪದ ಬಂಧದಿಂದಲೇ ‘ಅಮೂರ್ತ’ದೊಡನೆ ಸಂಬಂಧ ಸ್ಥಾಪಿಸುವ ರೀತಿಯನ್ನು, ಭಾಷೆಯ ‘ಒಳವಿನ್ಯಾಸ’ವನ್ನು ಡಿ. ಆರ್. ಗಮನಿಸುತ್ತಾರೆ.
‘ಆತ್ಮರತ ಪ್ರವೃತ್ತಿಯ ಅನಂತಮೂರ್ತಿ; ಸಮಾಜವನ್ನು ಭಾಷೆಯಲ್ಲಿ ಪುನರ‍್ರಚಿಸುವ ತೇಜಸ್ವಿ- ಇವರ ನಡುವಿನ ವ್ಯತ್ಯಾಸ ಮಹತ್ವದ್ದು.’ ‘[ಸಂಸ್ಕಾರದ] ಪ್ರಾಣೇಶಾಚಾರ್ಯನ ಯೋಚನೆಗಳೆಲ್ಲ ಅಸ್ತಿತ್ವವಾದದ ತದ್ರೂಪುಗಳು. ಅದಕ್ಕೆಂದೇ ಅವನು ಬ್ರಾಹ್ಮಣ ಅಗ್ರಹಾರದ ನಡುವೆ ಕಿತ್ತಿಟ್ಟ ಪಾಶ್ಚಾತ್ಯ ತತ್ವಶಾಸ್ತ್ರಜ್ಞನಾಗುತ್ತಾನೆ.’…‘ತೇಜಸ್ವಿಯವರ ‘ನಿಗೂಢ ಮನುಷ್ಯರು’ ಯಶಸ್ವೀ ಕತೆ ಎನಿಸಿದರೂ ಅದರ ಯಶಸ್ಸಿನ ಕಾರಣಗಳ ಬಗ್ಗೆ ಮಾತ್ರ ಅನುಮಾನ ಬರುತ್ತಿದೆ.’
‘[ಕುವೆಂಪು ಕಾದಂಬರಿಗಳು] ಅವರ ಚೈತನ್ಯವನ್ನು ಬಿಂಬಿಸುತ್ತವೆ. ಶೂದ್ರ ಜಗತ್ತಿನ ಸಮಸ್ತ ವ್ಯಾಪಾರಗಳು ಪ್ರಪ್ರಥಮ ಬಾರಿಗೆ ಎಲ್ಲ ವಿವರಗಳೊಂದಿಗೆ ಸಾಹಿತ್ಯದಲ್ಲಿ ದಾಖಲಾಗಿವೆ.’
ಆ ಕಾಲದಲ್ಲಿ ‘ಮಾರ್ಕ್ಸ್‌ವಾದ, ಲೋಹಿಯಾವಾದದ ಬಗೆಗೆ ತಾಕಲಾಟ’ದಲ್ಲಿದ್ದ ಡಿ. ಆರ್. ‘ಲೋಹಿಯಾರ ‘ಮಾರ್ಕ್ಸ್ ಗಾಂಧಿ ಸಮಾಜವಾದ’ ಪುಸ್ತಕ ಮತ್ತೆ ಲೋಹಿಯಾ ಕಂಬಕ್ಕೆ ನನ್ನ ಕಟ್ಟಿತು’ ಎಂದು ಬರೆಯುತ್ತಾರೆ. ಕಮ್ಯುನಿಸಂ ಕಡೆಗೆ ವಾಲುತ್ತಲೇ ಹೀಗೆಂದುಕೊಳ್ಳುತ್ತಾರೆ: ‘ಕಮ್ಯುನಿಸ್ಟನಾದರೆ ಜೀವನದ ಎಷ್ಟೋ ನಿಗೂಢ ಬಾಗಿಲುಗಳು ಶಾಶ್ವತವಾಗಿ ಮುಚ್ಚಿ ಹೋಗಿಬಿಡಬಹುದೇನೋ ಎಂಬ ಭಯ ನನ್ನನ್ನು ಕಮ್ಯುನಿಸ್ಟ್ ಆಗಲು ಬಿಟ್ಟುಕೊಟ್ಟಿಲ್ಲ.’
ಕತೆ, ಕಾದಂಬರಿ ಬರೆಯುವ ಕಾತರ ಡಿ. ಆರ್. ಅವರಲ್ಲಿ ಸುಳಿಯುತ್ತದೆ. ಮಿತ್ರ ವಾಸುದೇವಯ್ಯನ ಅನುಭವ ಕೇಳುತ್ತಿರುವಾಗ, ‘ನನ್ನಲ್ಲಿ ಸೃಷ್ಟಿಸುವ ತಾಖತ್ತಿದ್ದರೆ ಈತ ಮಹಾಕೃತಿಯೊಂದರ ಮೂಲದ್ರವ್ಯವಾದಾನು’ ಎನ್ನಿಸುತ್ತದೆ; ವಾಸುವಿನ ಮೂಲಕ ‘ಬರೇ ಅವನ ಕತೆಯಲ್ಲ- ಊರಿನ ಕತೆ, ಅದರ ನೋವು, ನಲಿವನ್ನು ಬಿಡಿಸಬೇಕೆಂಬ ಛಲ ಕೂಡ ಇದೆ. ಆದರೆ ಅದನ್ನು ಛಲ ಎನ್ನಲಾರೆ- ಅದಿಲ್ಲದಿದ್ದರೆ ಸಾಹಿತ್ಯ ಸೃಷ್ಟಿ ಸಾಧ್ಯವೇ ಇಲ್ಲ…[ಆ ಛಲ] ಬರುವ ತನಕ ಕಾಯುವುದೋ ಅಥವಾ ಕ್ರಿಯೆಯಲ್ಲಿಯೇ ರೂಢಿಸಿಕೊಳ್ಳುವುದೋ?’ ಎಂದುಕೊಳ್ಳುವ ಡಿ. ಆರ್. ಆಗ ಬರೆಯಲಿದ್ದ ಕತೆಗಾಗಿ ‘ಮೊದಲ ಭಾಗ- ಊರಿನಲ್ಲುಂಟಾದ ವಿಚಿತ್ರ ಚಲನೆಗೆ ಹಿನ್ನೆಲೆ’ ಎಂಬ ಟಿಪ್ಪಣಿ ಬರೆಯುತ್ತಾರೆ.
ಮುಂದೊಮ್ಮೆ, ‘ಕಥೆಯ ಮೊದಲ ಭಾಗ ಮುಗಿಯಿತು…ಯಾವುದೋ ಕಥೆಯ ದಟ್ಟ ಛಾಯೆ ಕಾಣುತ್ತಿದೆ; ಅದನ್ನು ಕತ್ತರಿಸಿ ನಾಳೆಯಿಂದ ಹೊಸದನ್ನು ಸೃಷ್ಟಿಸಬೇಕು’ ಎಂದುಕೊಳ್ಳುತ್ತಾರೆ. ಮಂದೆ, ‘ಆ ಕಥೆಯನ್ನು ಬರೆಯುವ ಪ್ರಯತ್ನ ಇಲ್ಲವೇ ಇಲ್ಲ. ಕಾರಣ ಮತ್ತೆ ಸಮಸ್ಯೆಗಳನ್ನು ಮುಂದು ಹಾಕುವ ಪ್ರವೃತ್ತಿ’ ಎಂಬ ಶರಾ ಇದೆ. ಮುಂದೊಮ್ಮೆ ಕತೆಯೊಂದರ ‘ಸ್ಥೂಲ ರೂಪುರೇಖೆಗಳನ್ನು- ಅಸ್ಥಿ ಪಂಜರದ ಕೆಲವು ಭಾಗಗಳನ್ನು ಬಿಡಿಸಿಟ್ಟಿದ್ದೇನೆ. ಆದರೆ ನನಗಿರುವ ಕೆಲವು ಮೂಲಭೂತ ಸಮಸ್ಯೆಗಳಿಂದಾಗಿ ಬರೆಯಲಾಗಿಲ್ಲ’ ಎಂದು ಬರೆಯುತ್ತಾರೆ. ‘ನಿಜವಾದ ಸೋಶಲಿಸ್ಟ್ ಕತೆಗಾರ ನಾನಾಗುತ್ತೇನೆಯೋ ಇಲ್ಲವೋ ನನಗಂತೂ ಅನುಮಾನ ಇದೆ’ ಎಂಬ ಸ್ವಪರೀಕ್ಷೆಯೂ ಇಲ್ಲಿದೆ.
ಲಾರೆನ್ಸ್, ಹೆಮಿಂಗ್ವೆ, ಕಾರಂತ ಥರದ ಕಾದಂಬರಿಕಾರರು ಇಪ್ಪತ್ತರ ಹರೆಯದ ಈ ಬುದ್ಧಿಜೀವಿಯನ್ನು ಕತೆಯ ದಿಕ್ಕಿಗೆ ಒಯ್ದರೆ, ಆಲ್ಡಸ್ ಹಕ್ಸ್ಲಿ, ಗುನ್ನರ್ ಮಿರ್‍ಡಾಲ್, ಲುಕಾಚ್ಸ್, ಸಾರ್ತರ್, ಕ್ರಿಸ್ಟಫರ್ ಕಾಡ್‌ವೆಲ್ ಥರದ ಚಿಂತಕರು ವಿಮರ್ಶೆ, ಸಿದ್ಧಾಂತಗಳೆಡೆಗೆ ಜಗ್ಗುತ್ತಿದ್ದರೇನೋ! ‘ಜಾರ್ಜ್ ಆರ್ವೆಲ್…ಭಾಷೆ ಮತ್ತು ರಾಜಕೀಯದ ಬಗ್ಗೆ ಹೇಳಿದ ಅಭಿಪ್ರಾಯಗಳು ಯಾಕೋ ಇತ್ತೀಚೆಗೆ ಬಹಳ ತಟ್ಟುತ್ತಿವೆ… ಸ್ಪಷ್ಟ, ನೇರ ಆಲೋಚನೆಗಿಂತ ನನ್ನ ಮನಸ್ಸು ಸಮಷ್ಟಿ ಮತ್ತು ಅಮೂರ್ತ ಆಲೋಚನೆಯ ಕಡೆಗೇ ಹೆಚ್ಚು ವಾಲಿದೆ’ ಎಂದು ಡಿ. ಆರ್. ಬರೆಯುತ್ತಾರೆ.
‘ಸ್ಫೂರ್ತಿಗಾಗಿ ಕಾಯುವುದು ಸೋಮಾರಿಗಳ ಕೆಲಸ’ ಎಂದುಕೊಳ್ಳುವ ಡಿ.ಆರ್.ಗೆ, ‘ಒಳ್ಳೆಯ ಮಾನಸಿಕ ಸ್ಥಿತಿ ಇಲ್ಲದಿದ್ದರೆ ಬರೆಯುವ ಗದ್ಯವೂ ಕಚಡಾ’ ಎಂಬುದು ಅರಿವಿಗೆ ಬರುತ್ತದೆ. ‘ವಾಸ್ತವವಾಗಿ ಮೊದಲಿನಿಂದ ಗಂಭೀರ ಅಭ್ಯಾಸಕ್ಕೆ ಹೆಚ್ಚು ಗಮನ ಕೊಟ್ಟಿದ್ದರೆ ಇನ್ನಷ್ಟು ಗಾಢ ವ್ಯಕ್ತಿತ್ವ ಇರುತ್ತಿತ್ತೇನೋ’ ಎನ್ನಿಸುತ್ತದೆ. ‘ಡೈರಿಯಲ್ಲಿ ಬರೆಯುವಾಗ ಭಾಷೆ ಸಲೀಸಾಗಿ, ಸಂಭ್ರಮದಿಂದ ಉಕ್ಕುತ್ತದೆ; ಪ್ರಕಟಣೆಗೆಂದು ಬರೆಯುವಾಗ ಏಕೋ ಕುಂಟುತ್ತದಲ್ಲ’ ಎಂದು ಡಿ. ಆರ್.ಗೆ ವಿಸ್ಮಯವಾಗುತ್ತದೆ. ತಮ್ಮ ಅನಿಸಿಕೆಗಳನ್ನು ಇಂಗ್ಲಿಷಿನಲ್ಲೂ ಬರೆಯುತ್ತಿದ್ದ ಅವರಿಗೆ ಒಂದು ಘಟ್ಟದಲ್ಲಿ ಇಂಗ್ಲಿಷಿನಲ್ಲಿ ಲೇಖನ ಬರೆಯಲಾರಂಭಿಸಿದಾಗ ಹೊಸ ಆತ್ಮವಿಶ್ವಾಸ ಹುಟ್ಟುತ್ತದೆ.
ಇಪ್ಪತ್ತನೆಯ ಶತಮಾನದ ಎಪ್ಪತ್ತರ ದಶಕದ ಕರ್ನಾಟಕದ ತೀವ್ರ ವೈಚಾರಿಕ ಮಂಥನದ ಕಾಲಘಟ್ಟದಲ್ಲಿ ದಾಖಲಾಗುತ್ತಿದ್ದ ಡಿ. ಆರ್. ಟಿಪ್ಪಣಿಗಳು ತಾರುಣ್ಯಕ್ಕೆ ಅಡಿಯಿಡುತ್ತಿರುವ ಕಡು ಜಾಣ ವಿದ್ಯಾರ್ಥಿಯೊಬ್ಬನ ಆಳದ ಹುಡುಕಾಟ, ಗೊಂದಲ, ತಲ್ಲಣ, ಸಾಮರ್ಥ್ಯ ಎಲ್ಲವನ್ನೂ ಸೂಚಿಸುತ್ತವೆ. ನಿಷ್ಠುರ ಸ್ವ-ಟೀಕೆಗಳು, ತಿದ್ದಿಕೊಳ್ಳುವ ಕಾತರಗಳೂ ಇಲ್ಲಿವೆ. ತಾರುಣ್ಯಕ್ಕೆ ಅಡಿಯಿಡುವ ಹೊತ್ತಿಗಾಗಲೇ ಡಿ.ಆರ್.ಗೆ ಇದ್ದ ಕನ್ನಡ ಭಾಷೆಯ ಮೇಲಿನ ಹಿಡಿತ; ಆಲೋಚನೆಗೆ ತಕ್ಕ ನುಡಿಗಟ್ಟು; ತಾತ್ವಿಕ ಪರಿಕಲ್ಪನೆಗಳ ಸ್ಪಷ್ಟತೆ; ನೋಟಕ್ರಮಗಳನ್ನು ರೂಪಿಸಿಕೊಳ್ಳುತ್ತಿದ್ದ ಕ್ರಮ; ಜಗತ್ತಿನ ಹಲವು ದಿಕ್ಕಿನ ಸಾಹಿತ್ಯ, ವಿಮರ್ಶೆ, ಸಿದ್ಧಾಂತಗಳನ್ನು ಗ್ರಹಿಸಲು ಇಂಗ್ಲಿಷ್ ಭಾಷೆಯನ್ನು ದಕ್ಷವಾಗಿ ಕಲಿಯಲೆತ್ನಿಸುತ್ತಿದ್ದ ರೀತಿ… ಇವೆಲ್ಲವೂ ಅವರು ಮುಂದೆ ಗಂಭೀರ ಪಿಎಚ್.ಡಿ. ಸಂಶೋಧಕರಾಗಲು ನೆರವಾಗಿವೆ. ಕನ್ನಡ ಕಾವ್ಯದ ಆಳವಾದ ಸಂಶೋಧನೆಯಿಂದ ರೂಪುಗೊಂಡ ಅವರ ಅನನ್ಯ ವಿಮರ್ಶಾ ಪುಸ್ತಕ ‘ಶಕ್ತಿ ಶಾರದೆಯ ಮೇಳ’ ದಲ್ಲಿ ಹಲವು ಶಿಸ್ತುಗಳು ಅವರ ಸಾಹಿತ್ಯ ವಿಮರ್ಶೆಗೆ ಒದಗಿ ಬಂದಿರುವುದರ ಹಿಂದಣ ಸಿದ್ಧತೆ, ಪರಿಶ್ರಮಗಳು ಅವರ ವಿದ್ಯಾರ್ಥಿ ದೆಸೆಯ ಟಿಪ್ಪಣಿಗಳಲ್ಲಿವೆ.
ತಾವು ತೊಡಗಬಯಸಿದ್ದ ವಿಭಿನ್ನ ಕ್ಷೇತ್ರಗಳ ಬಗ್ಗೆ ಸ್ಪಷ್ಟತೆ ಬೆಳೆಸಿಕೊಳ್ಳಲೆತ್ನಿಸುತ್ತಿದ್ದ ವಿದ್ಯಾರ್ಥಿ ಡಿ. ಆರ್. ಮುಂದಿನ ಎರಡು ದಶಕಗಳಲ್ಲಿ ಈ ಎಲ್ಲ ದಿಕ್ಕುಗಳಲ್ಲಿ ಕವಲಾಗಿ ಅಧ್ಯಯನ ಮಾಡಿದರು; ಅವನ್ನೆಲ್ಲ ಬೆಸೆದು ದೊಡ್ಡ ಚಿಂತಕರಾದರು. ಡಿ. ಆರ್. ಮುಂದೆ ರೂಪಿಸಿಕೊಂಡ ನಿರ್ವಸಾಹತೀಕರಣ ಥಿಯರಿ, ಜಾಗತೀಕರಣ ಕುರಿತ ಚಿಂತನೆಗಳನ್ನು ಬಿಟ್ಟರೆ ಅವರ ಬೌದ್ಧಿಕ ಜೀವನದ ಉಳಿದೆಲ್ಲ ಬಗೆಯ ವಿಮರ್ಶೆ, ಸಾಮಾಜಿಕ ವಿಶ್ಲೇಷಣೆಗಳ ಬೇರುಗಳೂ ಅವರ ಆರಂಭಿಕ ಟಿಪ್ಪಣಿಗಳಲ್ಲಿ ಕಾಣುತ್ತವೆ. ಇಪ್ಪತ್ತರ ವಯಸ್ಸಿಗೆ ಇಂಥ ಸಿದ್ಧತೆಯ ಹಾದಿಯಲ್ಲಿದ್ದ ಡಿ. ಆರ್. ನಲವತ್ತನೆಯ ವಯಸ್ಸಿಗಾಗಲೇ ಭಾರತದ ಪ್ರಖರ ಚಿಂತಕರಾಗಿ ವಿಕಾಸಗೊಂಡಿದ್ದರು.
ಡಿ. ಆರ್. ಅವರ ತಾರುಣ್ಯಾರಂಭದ ಬೌದ್ಧಿಕ ಪಯಣವನ್ನು ಕಂಡ ಕೆಲವು ಸೂಕ್ಷ್ಮಜೀವಿಗಳಿಗಾದರೂ, ತಾವಿನ್ನೂ ‘ಇಂಥ ದೊಡ್ಡ ಪಯಣವನ್ನು ಆರಂಭಿಸಿಯೇ ಇಲ್ಲವಲ್ಲ?’ ಎಂಬ ವಿಷಾದ ಮುತ್ತಬಹುದು! ಆದರೆ ಯಾರು ಯಾವ ಘಟ್ಟದಲ್ಲಾದರೂ ಇಂಥ ಬೌದ್ಧಿಕ ಬದುಕನ್ನು ಆರಂಭಿಸಲು ಡಿ. ಆರ್. ಕೃತಿಗಳು ನಮ್ಮನ್ನು ಪ್ರೇರೇಪಿಸಬಲ್ಲವು.
Comments
10 Comments
| ಮಹೇಶ್ ಹರವೆ
ಡಿಆರ್ ಕ್ರಮಿಸಿದ ಹಾದಿಯಷ್ಟೇ, ತೋರಿದ ದಾರಿಯೂ ಉನ್ನತವಾದುದು...
| Prakashmanteda
ನಿಜಕ್ಕೂ ನಾವು ಕಳೆದುಕೊಂಡಿರುವ ಬೌದ್ಧಿಕ ಕಾತುರ, ಆಸಕ್ತಿ, ಓದುವಿನ ಆಳದ ಪರಿಶೀಲನೆ ಮತ್ತೆ ಪ್ರಾಮಾಣಿಕತೆ ಇವುಗಳು ಮತ್ತೆ ಹುಟ್ಡುವಂತೆ ಈ ಲೇಖನ ತಣ್ಣಗೆ ಪ್ರೇರಣೆ ನೀಡುತ್ತದೆ. ಡಿ.ಆರ್ ಎನ್ ವಿಶಿಷ್ಟತೆಯಿಂದ ವಿಶ್ವಾತ್ಮಕವಾಗುವ ದಾರಿ ಸ್ವತಃ ಕಂಡುಕೊಂಡ ಪ್ರಖರ ಆರ್ಗಾನಿಕ್ ಚಿಂತಕ. ಬರೀ ಇಷ್ಟೇ ಅಲ್ಲ ಹಲವು ಮಜಲುಗಳ ಧಾರೆಗಳು ಸಂಗಮಿಸುವ ಸಹಯಾನ ತತ್ವಗಾರ. ಅವರೊಬ್ಬ ಎಲ್ಲವನ್ನೂ ಜೈವಿಕವಾಗಿ ಸಿಂಥಿಸೈಸ್ ಮಾಡುವ ಅಲ್ಲಮನಂತೆ. ಈ ದಿಸೆಯಲ್ಲಿ ಈ ಲೇಖನ ಮತ್ತಷ್ಟು ಓದುವ ಆಸೆ, ಆಸಕ್ತಿಗಳ ತೀವ್ರತೆ ಹುಟ್ಡಿಸುತ್ತದೆ.
| Dr. Kavyashree H
ಈಗಲಾದರೂ, ಇನ್ನಾದರೂ ಬೌದ್ಧಿಕ ಪಯಣವನ್ನು ಆರಂಭಿಸುವಂತೆ ಸೂಕ್ಷ್ಮಜೀವಿಗಳ ತಲೆಯ ಮೇಲೊಮ್ಮೆ ಮೊಟಕಿದಂತಿದೆ ನಿಮ್ಮ ಬರಹ. ಎಷ್ಟು ಮೊಗೆದರೂ ಬರಿದಾಗದ ಜ್ಞಾನಧಾರೆ - ಡಿ.ಆರ್. ನಾಗರಾಜ್, ಅವರ ಬೆಲೆಬಾಳುವ ಈ ಟಿಪ್ಪಣಿಗಳಿಗಾಗಿ ಧನ್ಯವಾದಗಳು ಸರ್.
| ಭೀಮೇಶ ಯರಡೋಣಿ
ಪಾಶ್ಚಾತ್ಯರಲ್ಲಿ ಬರಹಗಾರರು ಮಾಡಿಕೊಂಡಿರುವ ಟಿಪ್ಪಣಿಗಳೇ ಅವರ ಅಕಾಲಿಕ ಅಳಿವಿನ ನಂತರ ಅನ್ಯರಿಂದ ಕೃತಿಗಳಾಗಿ, ಸಾಹಿತ್ಯ ವಿಮರ್ಶೆಯ ಒಳನೋಟಗಳಾಗಿ ಓದುಗರಿಗೆ ದಕ್ಕಿವೆ. ಅಧುನಿಕ ಕನ್ನಡ ಮತ್ತು ಭಾರತೀಯ ಸಾಹಿತ್ಯದಲ್ಲಿ ಹಲವಾರು ಲೇಖಕರು ಅತ್ಯುತ್ತಮವಾದ ಟಿಪ್ಪಣಿಗಳನ್ನು ವೈಯಕ್ತಿಕವಾಗಿ ಮಾಡಿಕೊಂಡಿದ್ದರು ಸಹ ಅವರ ನಿಧನದ ನಂತರ ಅವು ಕೃತಿಗಳಾಗಿ ಪ್ರಕಟವಾಗಿರುವುದು ವಿರಳ. ಡಿ.ಆರ್. ಕುರಿತು ಸಂಶೋಧನೆ ಮಾಡಿದ್ದ, ಆಗಾಧ ಓದು ಮತ್ತು ಸೂಕ್ಷ್ಮಗ್ರಹಿಕೆಗಳ ಮೂಲಕ ವಿಮರ್ಶೆಯಲ್ಲಿ ಉತ್ಸಾಹ ಹೊಂದಿದ್ದ ಪ್ರಕಾಶ್ ಬಡವನಹಳ್ಳಿ ಅವರು ಮಾಡಿಕೊಂಡಿದ್ದ ಟಿಪ್ಪಣಿಗಳ (ನುಡಿ ಸಂಕಥನ- ಸಂ.ಸುಕನ್ಯಾ ಎಸ್.ಓ) ಜೊತೆಗೆ ಹಲವರ ಓದುಬರಹದ ವಿಧಾನ ಕ್ರಮಗಳು ನೆನೆಪಾದವು.
| Kallaaih
ವಂಡರ್ ಫುಲ್ ಬರಹ. ಧನ್ಯವಾದಗಳು
| ಡಾ. ನಿರಂಜನ ಮೂರ್ತಿ ಬಿ ಎಂ
ಅನನ್ಯ ಪ್ರತಿಭೆಯಿದ್ದ ಡಿ. ಆರ್. ಎನ್. ಅವರು ಕನ್ನಡ ಸಾಹಿತ್ಯ-ಸಂಸ್ಕೃತಿ ಲೋಕದಲ್ಲಿ ಬೆಳಗಿದ ವಿಶೇಷ ನಕ್ಷತ್ರವಾಗಿ ರೂಪುಗೊಂಡ ಬಗೆಯನ್ನು ವಾಸ್ತವದ ನೆಲೆಗಟ್ಟಿನಲ್ಲಿ ವಿವರಿಸಿರುವ ರೀತಿ ಮನಮುಟ್ಟುತ್ತದೆ. \'ಒಳ್ಳೆಯ ಮಾನಸಿಕ ಸ್ಥಿತಿ ಇಲ್ಲದಿದ್ದರೆ ಬರೆಯುವ ಗದ್ಯವೂ ಕಚಡಾ\' ಎಂಬ ಅವರ ಅರಿವು ಮತ್ತು \'ಸ್ಪೂರ್ತಿಗಾಗಿ ಕಾಯುವುದು ಸೋಮಾರಿಗಳ ಕೆಲಸ\' ಎಂಬ ಅವರ ಅನಿಸಿಕೆಗಳು ಕಟುಸತ್ಯದ ನುಡಿಗಳು! ಅದನ್ನು ತಿಳಿಸುವ ಮೂಲಕ ಸಾಹಿತ್ಯ-ವಿಮರ್ಶೆ-ಸಂಸ್ಕೃತಿ ಕ್ಷೇತ್ರದಲ್ಲಿ ಗಂಭೀರವಾಗಿ ತೊಡಗಿಸಿಕೊಳ್ಳುವವರಿಗೆ ಡಿ ಆರ್ ಎನ್ ಮಾರ್ಗ ತೋರಿದ ಹುಳಿಯಾರರಿಗೆ ನಮನಗಳು.
| Dr.Rajaram
Recreates inner journey of DRN beautifully. Thanks Nataraj
| ಡಾ. ವಿಜಯಾ
ಡಿ.ಆರ್. ಅವರನ್ನು, ಅವರ ತುಂಟತನವನ್ನೂ ವೈಯಕ್ತಿಕವಾಗಿ ಬಲ್ಲ ನನ್ನಂಥವರಿಗೆ ಈ ಲೇಖನ ಇನ್ನೊಂದು ಮುಖವನ್ನೇ ತೋರಿತು.
| ಅಝೀಮ್ ಪಾಶ
ನಟರಾಜ ಹುಳಿಯಾರ್ ಅವರ ಬಹುತೇಕ ಲೇಖನಗಳು ಸತ್ತಂತಿಹರನ್ನು ಬಡಿದೆಬ್ಬಿಸುವಂತಿರುತ್ತವೆ. ಓದುಗರ ವೈಚಾರಿಕತೆಯ ಕೋಶದ ಹೆಬ್ಬಾಗಿಲನ್ನು ದಾಟಿ ಗರ್ಭದ ಒಂದೊಂದು ಸುಳಿಯನ್ನು ಸ್ಪರ್ಶಿಸುತ್ತವೆ. ಹೊಸ ಲೇಖಕ ತನ್ನ\r\nಬರವಣಿಗೆಯನ್ನು ಹೇಗೆ ಮೊನಚುಗೊಳಿಸಬೇಕು ಎನ್ನುವ ಸೂಕ್ಷ್ಮ ಸಂದೇಶಗಳನ್ನು ನೀಡುತ್ತವೆ. ಬರವಣಿಗೆ ನಿಲ್ಲಿಸಿದವರ ಮತ್ತು\r\nಬರೆಯುವ ಶಕ್ತಿ ಇದ್ದು ಇನ್ನೂ ಬರೆಯದೇ ಇರುವವರ ಕೆಂಡದ ಮೇಲಿನ ಬೂದಿಯನ್ನು ಹಾರಿಸುತ್ತವೆ. ಇವರ ಚಲನಾಶೀಲ ಭಾಷೆ\r\nಓದುಗನ ಹೆಗಲಮೇಲೆ ಕೈಹಾಕಿ ಜೊತೆ ಜೊತೆಗೆ ಕರೆದುಕೊಂಡು ಹೋಗುತ್ತದೆ. ಓದುಗನ ತಾತ್ವಿಕ ಮತ್ತು ಸೈದ್ಯಾಂತಿಕತೆಯ ಸ್ಪಷ್ಟತೆಯನ್ನು ಒತ್ತಾಯಿಸುತ್ತವೆ. ಡೋಂಗಿ ಓದುಗನಿಗೆ ಇವರ ಸಾಹಿತ್ಯ-ವಿಮರ್ಶೆ ತಲುಪುವುದೇ ಇಲ್ಲ.\r\n\r\nಪ್ರಸ್ತುತದ ಡಿ. ಆರ್. ನಾಗರಾಜ: ವಿದ್ಯಾರ್ಥಿ ದೆಸೆಯ ಟಿಪ್ಪಣಿಗಳು ನನ್ನನ್ನು ಎಲ್ಲಾ ಆಯಾಮಗಳಿಂದಲೂ ಸ್ಪರ್ಶಿಸಿದೆ. ಉತ್ತಮ ಬರಹಗಾರನಾಗುವದ ಕ್ಕಿಂತ ಮೊದಲು, ಹೇಗೆ ಉತ್ತಮ ಓದುಗನಾಗಬೇಕು ಎನ್ನುವ ಪ್ರಾಕ್ಟಿಕಲ್ ರೀಡಿಂಗ್ ಜೊತೆಗೆ ವೈಚಾರಿಕ ಮತ್ತು ಚಿಂತನಾಕ್ರಮಗಳನ್ನು ಹೇಗೆ ಬಿತ್ತಬೇಕು ಎನ್ನುವ ಮಾದರಿ ಕೂರಿಗೆಯನ್ನು ಕೊಟ್ಟಿದೆ. ಇಂದಿನ ಯುವ ಪೀಳಿಗೆ\r\nಬಹು ಸಂಸ್ಕೃತಿಯ ಅಕ್ಷರ ಮಾಲೆಯನ್ನು ಧರಿಸಿ ಉತ್ತಮ ಬರಹಗಾರರಾಗಲೆಂದೇ ನಟರಾಜ್ ಹಗಲು ರಾತ್ರಿ ಮತ್ತು\r\nಪ್ರವಾಸದಲ್ಲಿದ್ದಾಗಲೂ ಬರೆಯುತ್ತಿರುವುದು ಯುವ ಪೀಳಿಗೆಯ ಮೇಲಿರುವ ಅವರ ಮಹಾಕಾಳಜಿಯಂದೇ ಭಾವಿಸಿದ್ದೇನೆ.ಇದು ನನ್ನ ಸಹಜವಾದ ಗ್ರಹಿಕೆಯಾಗಿದೆ.\r\n\r\nಒಂದು ವಿನಂತಿ: ಈ ಬ್ಲಾಗಿನಲ್ಲಿ ಅಭಿಪ್ರಾಯ ದಾಖಲಿಸುವ ಎಲ್ಲಾ ಓದುಗ ಬಳಗಕ್ಕೆ ನನ್ನ ಬೇಡಿಕೆಯೆಂದರೆ ನಿಮ್ಮದೇ ಆದ ಪೂರಕ ಟಿಪ್ಪಣಿಯೊಂದಿಗೆ, ಆ ಲೇಖನವನ್ನು ಗ್ರಹಿಸಿದ ಪರಿ, ಲೇಖನದ ಸಂದೇಶ, ಅಲ್ಲಿಯ ಒಳ ನೋಟಗಳು, ಚಿಂತನಾಕ್ರಮ, ಶೈಲಿ, ಶಕ್ತಿ ಮತ್ತು ಮಿತಿಗಳ ಬಗ್ಗೆ ತಮ್ಮ ಅಭಿಪ್ರಾಯವಾಗಿ ಮಂಡಿಸಿದರೆ, ನನ್ನಂತಹ ಓದುಗನಿಗೆ ವಿಭಿನ್ನವಾಗಿ ಗ್ರಹಿಸುವ ಶಕ್ತಿ ಹಿಗ್ಗುವದರೊಂದಿಗೆ ಒಂದು ಸ್ಥಾಪಿತ ಶಿಸ್ತನ್ನು ಉತ್ತೇಜಿಸಿದ ಓದುಗನ ಅಭಿಪ್ರಾಯಗಳು ಇನ್ನೂ ಮೌಲ್ಯಯುತವಾಗುತ್ತವೆ ಎನ್ನಬಹುದೆ?\r\n
| Nataraj Huliyar Replies
ಪ್ರಿಯ ಅಝೀಮ್\r\nನಿಮ್ಮ ಪ್ರೀತಿಯ ಸ್ಪಂದನಕ್ಕೆ ಕೃತಜ್ಞತೆಗಳು. ಈ ಅಂಕಣ ಒಂದಲ್ಲೊಂದು ವಸ್ತುವಿನ ಕುರಿತು ಇರುತ್ತದೆ. ಆ ವಸ್ತುಗಳನ್ನು ಓದುಗ ಓದುಗಿಯರು,ಲೇಖಕ, ಲೇಖಕಿಯರು ಬೆಳೆಸಿದರೆ ಬರಹದ ವಸ್ತು ಇನ್ನಷ್ಟು ವಿಸ್ತಾರವಾಗುತ್ತದೆ. ಅದನ್ನೇ ನಾನು ಆಗಾಗ್ಗೆ ಸಹಸ್ಪಂದನ, ಸಹ ಬರವಣಿಗೆ ಎನ್ನುತ್ತಿರುತ್ತೇನೆ.
Add Comment